ಅಧ್ಯಾಯ ಐವತ್ತೇಳು

[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೊಂಬತ್ತನೇ ಕಂತು

ಈ ವಿಧದ ಅನೇಕ ದುಃಖಗಳ ಭಾರದಿಂದ ನಾನು ಕುಸಿದು ಬೀಳುವ ಸಂಭವ ತುಂಬಾ ಇದ್ದಿದ್ದರೂ ನನ್ನಿಂದಾಗಬೇಕಾಗಿದ್ದ ಕಾರ್ಯಗಳನ್ನು ನಿರ್ವಹಿಸಬೇಕೆಂಬ ಕರ್ತವ್ಯ ನಿಷ್ಠೆಯೇ ನನಗೆ ಶಕ್ತಿ ಕೊಟ್ಟು ನನ್ನಿಂದ ಕಾರ್ಯಗಳನ್ನು ಮಾಡಿಸುತ್ತಿತ್ತು. ಯಾರ್ಮತ್ತಿನ ಘಟನೆ ಬಹು ಘೋರತರದ್ದಾಗಿದ್ದುದರಿಂದ ಅದರ ವರ್ತಮಾನ ಜನರ ಮುಖಾಂತರವೂ ಪತ್ರಿಕೆಗಳ ಮುಖಾಂತರವೂ ಹರಡುವ ಸಂಭವವು ಬಹುವಾಗಿತ್ತು. ಈ ಯಾವ ವರ್ತಮಾನವೂ ಮಿ. ಪೆಗಟಿ ಮತ್ತು ಎಮಿಲಿಯವರಿಬ್ಬರಿಗೆ ತಿಳಿಯಬಾರದೆಂದೂ ಪ್ರವಾಸಿಗಳೆಲ್ಲರೂ ತಮ್ಮ ಪ್ರಾರಂಭದ ಉತ್ಸಾಹದಿಂದ ಮತ್ತು ನಿರ್ದಿಷ್ಟ ಗುರಿಯಿಂದ ಪ್ರಯಾಣಗೈಯ್ಯಬೇಕೆಂದೂ ನಾವು ಇಷ್ಟ ಪಡುತ್ತಿದ್ದೆವು. ಇದಕ್ಕಾಗಿಯೇ ನಾನು ಮಿ. ಮೈಕಾಬರರಿಗೆ ಮಾತ್ರ ಈ ವರ್ತಮಾನವನ್ನು ತಿಳಿಸಿ, ಅವರು ಮಿ. ಪೆಗಟಿ ಮತ್ತು ಎಮಿಲಿಯರಿಗೆ ಯಾವುದೇ ವಿಧದಲ್ಲಿ ಈ ವರ್ತಮಾನ ತಲಪದಂತೆ ನೋಡಿಕೊಳ್ಳಬೇಕೆಂದು ಹೇಳಿದೆನು. ಮಿ. ಮೈಕಾಬರರು ಈ ಜವಾಬ್ದಾರಿಯನ್ನು ಬಹು ಸಂತೋಷದಿಂದ ವಹಿಸಿಕೊಂಡು ಬಹು ದಕ್ಷತೆಯಿಂದ ನಿರ್ವಹಿಸಿದರು. ಮಿ. ಪೆಗಟಿ ಸ್ವಭಾವತಃ ಜನ ಸಂಪರ್ಕವನ್ನು ಬಯಸದವರಾಗಿದ್ದುದರಿಂದ ನಮ್ಮ ಈ ಕೆಲಸ ಹಗುರವಾಯಿತು. ಅಲ್ಲದೆ ಯಾರ್ಮತ್ತಿನ ಘಟನೆಗಳು ನಡೆದ ಒಂದೆರಡು ದಿನಗಳಲ್ಲೇ ಪ್ರವಾಸಿಗಳನ್ನು ಸಾಗಿಸುವ ಈ ಹಡಗು ಇಂಗ್ಲೆಂಡಿನಿಂದ ಹೊರಡುವುದಿದ್ದುದರಿಂದ ನಮ್ಮ ಕೆಲಸ ಮತ್ತಷ್ಟು ಸುಲಭವೂ ಆಯಿತು.

ಪ್ರವಾಸಿಗಳು ಹಡಗನ್ನೇರಬೇಕಾಗಿದ್ದ ದಿನದ ಹಿಂದಿನ ದಿನದ ಸಂಜೆಗೆ ಅತ್ತೆ, ಏಗ್ನೆಸ್, ಟ್ರೇಡಲ್ಸ್ ಮತ್ತು ನಾನು ನಮ್ಮ ಪ್ರವಾಸಿಗಳು ಇಳಿದುಕೊಂಡಿದ್ದ ಬಿಡಾರಕ್ಕೆ ಹೋದೆವು. ಸಮುದ್ರ ಏರಿದಾಗ ದೋಣಿ ಹತ್ತಲೂ ಅನಂತರ ದೋಣಿಯಿಂದ ಹಡಗನ್ನೇರಲೂ ಅನುಕೂಲವೆಂದು ಬಿಡಾರವನ್ನು ನಿಶ್ಚೈಸುವಾಗಲೇ ಬಂದರದ ಕಡೆಯ ಒಂದು ಮನೆಯನ್ನು ಚುನಾಯಿಸಿಕೊಂಡಿದ್ದರು. ಇವರಂತೆಯೇ ಇತರ ಅನೇಕ ಜನರು ಹಡಗು ಪ್ರಯಾಣಕ್ಕಾಗಿ ಅಂಥ ಬಿಡಾರವನ್ನು ಬಿಟ್ಟಿದ್ದರು.

ಮಿ. ಮೈಕಾಬರ್ ದಂಪತಿಗಳೂ ಅವರ ಮಕ್ಕಳೂ ಆಸ್ಟ್ರೇಲಿಯದಲ್ಲೇ ಬಹು ವರ್ಷಗಳ ಕಾಲ ಇದ್ದ ಕೃಷಿಕರಂತೆ ಉಡುಪನ್ನುಟ್ಟುಕೊಂಡಿದ್ದರು – ಒರಟು ಬಟ್ಟೆಯ ಅಂಗಿ-ಲಂಗಗಳನ್ನೂ ಹುಲ್ಲಿನ ಹೇಟನ್ನೂ ಅವರು ಧರಿಸಿದ್ದರು. ಎಲ್ಲರ ಶರ್ಟು ಕೈಗಳೂ ಮೇಲಕ್ಕೆ ಮಡಿಸಲ್ಪಟ್ಟಿದ್ದು, ಅಗತ್ಯ ಬಿದ್ದ ಕೂಡಲೇ ಕೃಷಿ ಕೆಲಸ ಕೈಕೊಳ್ಳಲೋ ಅಥವಾ ಕಾಡುಮೃಗ ಅಥವಾ ಕಾಡುಜನ ಮೊದಲಾದವರಿಂದ ಅತ್ಮರಕ್ಷಣೆ ಮಾಡಿಕೊಳ್ಳಲೋ ಅವರ ಕೈಗಳು ಬಿಡುವಾಗಿದ್ದುವು. ಎಲ್ಲರ ಕೈಯಲ್ಲೂ ನೀಳವಾದ ಒಂದೊಂದು ಕತ್ತಿಯಿತ್ತು.

ನಮ್ಮನ್ನು ಕಂಡು ಅವರೆಲ್ಲರಿಗೂ ಬಹಳ ಸಂತೋಷವಾಯಿತು. ನಮ್ಮನ್ನು ಬಹು ಆದರದಿಂದ ಸ್ವಾಗತಿಸಿದರು. ಅನುಕೂಲವಿದ್ದ ಆಸನಗಳನ್ನೆಲ್ಲ ನಮಗೆ ಒದಗಿಸಿದರು. ಮಿ. ಮೈಕಾಬರರು ಬಹು ಸಂತೋಷದಿಂದ “ಈ ಬೀಳ್ಕೊಡುವ ಸಮಾರಂಭದಲ್ಲಿ, ನಾವು ಇಂಗ್ಲೆಂಡಿನ ಪ್ರಖ್ಯಾತಿಪಟ್ಟ ಪಂಚ್ ಪಾನೀಯವನ್ನು ಸೇವಿಸಲೇಬೇಕು” ಎಂದನ್ನುತ್ತ, ಪಂಚನ್ನು ತಯಾರಿಸಲು ಉದ್ಯುಕ್ತರಾದರು. ಆಗ ಅತ್ತೆಯೂ ಏಗ್ನೆಸ್ಸಳೂ – ತಾವು ಹಿಂದೆಂದೂ ಪಂಚನ್ನು ಸೇವಿಸದಿದ್ದರೂ ಇಂದು ಇಂಥ ಸಂತೋಷದ ಸಂದರ್ಭದಲ್ಲಿ ಪಂಚನ್ನು ತಾವೂ ಸೇವಿಸುವರಾಗಿ ತಿಳಿಸಿ ಮಿ. ಮೈಕಾಬರರ ಉತ್ಸಾಹ, ಸಂತೋಷಗಳನ್ನು ಮತ್ತಷ್ಟು ಹೆಚ್ಚಿಸಿದರು.

ಅಲ್ಲಿ ನಮಗೆಲ್ಲರಿಗೂ ಬೇಕಾದಷ್ಟು ಗಾಜಿನ ಲೋಟಗಳೇ ಇದ್ದುವಾದರೂ ಮಿ. ಮೈಕಾಬರರ ಕುಟುಂಬವೆಲ್ಲ ಒಂದೊಂದು ಟಿನ್ ಡಬ್ಬಿಗಳನ್ನು ಪಂಚ್ ಕುಡಿಯಲೋಸ್ಕರ ಹಿಡಿದುಕೊಂಡು ಕುಳಿತಿದ್ದರು. ಮಿ. ಮೈಕಾಬರರು ತುಂಬಾ ಮಾತಾಡುತ್ತಾ ಅವರದೇ ವೈಶಿಷ್ಟ್ಯವಾಗಿದ್ದ ಕ್ರಮದಿಂದ, ಪಂಚನ್ನು ತಯಾರಿಸಿ ನಮಗೆಲ್ಲರಿಗೂ ಬಡಿಸಿ, ತಮ್ಮ ಟಿನ್ ಡಬ್ಬಿಯಲ್ಲಿ ಪಂಚನ್ನು ಹಾಕಿಕೊಂಡು ಅವರ ಎಂದಿನ ಕ್ರಮದ ಭಾಷಣವನ್ನು ಪ್ರಾರಂಭಿಸಿದರು –

“ಮಹನೀಯರೇ, ಇಂದು ನಾವು ನಮ್ಮ ಸ್ವಾತಂತ್ರ್ಯದ ಮಾತೃ ಭೂಮಿಯ ಸುಖ ಸಂತೋಷಗಳನ್ನು ತ್ಯಜಿಸಿ, ನವೀನ ಆಸ್ಟ್ರೇಲಿಯದ ಕಷ್ಟ ನಿಷ್ಠುರಗಳನ್ನು ಸಹಿಸಿ ನಮ್ಮ ಅಭ್ಯುದಯದ ಪ್ರಥಮ ಸೋಪಾನವನ್ನು ನಿರ್ಮಿಸಿರುವೆವು. ಟಿನ್ ಲೋಟಗಳಲ್ಲಿ ಪಂಚನ್ನು ಸೇವಿಸುವ ನಮ್ಮ ಪ್ರಥಮ ತ್ಯಾಗವನ್ನು ತಾವುಗಳು ಅವಲೋಕಿಸುತ್ತಿರಬಹುದು. ಮುಂದೆ ನಾವು ನಮ್ಮ ಈ ಕೈಗಳಿಂದ ವಿಶಾಲ ಕೃಷಿವಲಯಗಳನ್ನೇ ನಿರ್ಮಿಸಿ, ಕೃಷ್ಯುತ್ಪತ್ತಿಗಳನ್ನು ಬೆಳೆಸಿ, ಐಶ್ವರ್ಯವಂತರಾಗಿ ನಮ್ಮ ಅಭ್ಯುದಯವನ್ನು (ಜತೆಗೆ ಆಸ್ಟ್ರೇಲಿಯದ ಆರ್ಥಿಕ ಉತ್ಪತ್ತಿಯನ್ನು) ಸಾಧಿಸುವಾಗ ಸುಖ ಸಂತೋಷ ವಿಲಾಸಗಳು ತಾವಾಗಿಯೇ ನಮಗೆ ಲಭಿಸುವುವು. ಅಷ್ಟರವರೆಗೆ ಮೈಕಾಬರರ ಕುಟುಂಬವು ಈ ವಿಧದ ಕಷ್ಟಗಳನ್ನು ಸಂತೋಷದಿಂದ ಅನುಭವಿಸುವುದು” ಅಂದರು.

ಪತಿಯ ಭಾಷಣವನ್ನು ಕೇಳಿ ಮೆಚ್ಚಿದ ಪತ್ನಿ ಮಿಸೆಸ್ ಮೈಕಾಬರರು, ತಾನು ಪತಿಗಿಂತ ಕಡಿಮೆಯಾಗಬಾರದೆಂದು ತನ್ನ ಕಡೆಯ ಭಾಷಣವನ್ನು ಮಾಡಿದರು.

“ಮಿ. ಮೈಕಾಬರರ ಮಾತುಗಳು ಅಕ್ಷರಶಃ ನಿಜ. ಕಾಡು ಜನರು ಬರಲಿ, ಅಡವಿ, ಗಿರಿ ಪರ್ವತಗಳೇ ನಮ್ಮ ಪಥದಲ್ಲಿ ಎದುರು ಬರಲಿ – ನಾವು ನಮ್ಮ ಧ್ಯೇಯದ ಸಾಧನೆಯಲ್ಲಿ ಎಲ್ಲವನ್ನೂ ಎದುರಿಸಿ, ಜೈಸಿ, ಹೊಸ ಸಮಾಜ, ಹೊಸ ರಾಜ್ಯವನ್ನೇ ರಚಿಸುವೆವು. ಇಂಥ ಸಾಹಸೀ ಕುಟುಂಬವು ಇಂಗ್ಲೆಂಡನ್ನು ಬಿಟ್ಟು ಹೊರಡುವಾಗ ಇಂಗ್ಲೆಂಡಿನ ಮಹಾ ಜನರು ಮಿ. ಮೈಕಾಬರರಂಥ ವ್ಯಕ್ತಿಗಳ ಶಕ್ತಿಗಳನ್ನು ದೇಶ ಕಲ್ಯಾಣಕ್ಕಾಗಿ ಉಪಯೋಗಿಸಿಕೊಳ್ಳಬಲ್ಲ ಸಂದರ್ಭವನ್ನೇ ಕಳೆದುಕೊಳ್ಳುವರೆಂದು ಸ್ವಲ್ಪ ದುಃಖಿಸುತ್ತಿರಬಹುದು. ನಮ್ಮ ಕುಟುಂಬದವರು (ತವರು ಮನೆಯವರು) ಅವರಾಗಿಯೇ ನಮ್ಮನ್ನು ಈವರೆಗೆ ದೂರವಿಟ್ಟು ಕುಳಿತಿದ್ದ ದೂಷ್ಯವರ್ತನೆಗಾಗಿ ಪಶ್ಚಾತ್ತಾಪಪಡುತ್ತಾ ಬಂದು ನಮ್ಮ ಪ್ರವಾಸವನ್ನು ನಿಲ್ಲಿಸುವಂತೆ ಪ್ರಾರ್ಥಿಸಿಕೊಳ್ಳಲೂ ಬಹುದು. ಅವರಿಗೆ ಇಷ್ಟರಲ್ಲೇ ಜ್ಞಾನೋದಯವಾಗಿರಬೇಕೆಂಬುದರಲ್ಲಿ ಸಂಶಯವಿಲ್ಲ. ಆದರೆ ನಾವು ನಮ್ಮ ದೃಢ ಸಂಕಲ್ಪವನ್ನು ಎಂದೂ ಮುರಿಯಲೊಲ್ಲೆವು” ಎಂದು ಅವರು ಮಾತಾಡಿದರು.

ಆಗ ಅತ್ತೆ ಮತ್ತು ಏಗ್ನೆಸ್ಸರು –
“ನಿಮಗೆಲ್ಲರಿಗೂ ಶುಭವಾಗಲಿ, ನಿಮ್ಮ ಇಷ್ಟಾರ್ಥ ಪೂರ್ತಿಯಾಗಲಿ, ನಿಮ್ಮ ಅಭ್ಯುದಯವಾಗಲಿ” ಎಂದಂದು ಪಂಚನ್ನು ಸೇವಿಸಿದರು.

ಇಷ್ಟರಲ್ಲೇ ಹೊರಗೆ ಯಾರೋ ಬಂದು ಮಿ. ಮೈಕಾಬರರನ್ನು ಕರೆಯುತ್ತಿರುವುದಾಗಿ ತಿಳಿಯಿತು.
“ಅದು ನಮ್ಮ ಕುಟುಂಬದವರಾಗಿರಬೇಕು – ತಮ್ಮ ಅಲಕ್ಷ್ಯ ವರ್ತನೆಗಾಗಿ ಪಶ್ಚಾತ್ತಾಪಪಟ್ಟು ಕ್ಷಮಾಯಾಚನೆಗಾಗಿ ಬಂದು ಕಾಯುತ್ತಿರಬೇಕು. ಸ್ವಲ್ಪ ಸಮಾಧಾನ ತಂದುಕೊಂಡು ಮಾತಾಡಿ ಬನ್ನಿ” ಎಂದು ಮಿಸೆಸ್ ಮೈಕಾಬರಳು ಪತಿಗೆ ಹೇಳಿದಳು.

ಪತ್ನಿಯ ಮಾತನ್ನು ಮಿ. ಮೈಕಾಬರರು ವಿಶೇಷ ಮೆಚ್ಚಲಿಲ್ಲ. ಅವರು ಹೇಳಿದರು –
“ನನ್ನ ಈ ಪ್ರಾಯದವರೆಗೂ ಬರದಿದ್ದ ನೆಂಟರು ಈಗ ಬಂದರೆ ನನ್ನ ಪುರಸೊತ್ತನ್ನು ಕಾದು ನಿಂತಿರಬೇಕು. ಈವರೆಗೂ ಯಾವ ಉಪಕಾರಕ್ಕೂ ಬೀಳದಿದ್ದ ನೆಂಟರನ್ನು ನಾನೂ ಅಲಕ್ಷ್ಯ ಮಾಡಬಲ್ಲೆ.”

ಗಂಡನ ಮರ್ಜಿ ಹೆಂಡತಿಗೆ ಪೂರ್ಣ ಸರಿಯೆಂದು ತೋರಲಿಲ್ಲ. ಅವಳು ಪುನಃ ಅಂದಳು –
“ಹಾಗನ್ನಬಾರದು. ಸಂಪತ್ತು ಸಮೃದ್ಧಿಗಳಿಂದ ನಾವು ಮೆರೆಯುವಾಗಲೂ ನಮ್ಮ ಅಭ್ಯುದಯದ ಪರಿಣಾಮವಾಗಿ ಆಸ್ಟ್ರೇಲಿಯದಿಂದ ಹಣ ಹರಿದು ಇಂಗ್ಲೆಂಡಿಗೆ ಬರುವಾಗಲೂ ನಾವು ನಮ್ಮ ಮಾತೃಭೂಮಿಯಾದ ಇಂಗ್ಲೆಂಡನ್ನೂ ನಮ್ಮ ಮೂಲ ಪುರುಷರನ್ನೂ ಬಂಧುಗಳನ್ನೂ ಮರೆಯಬಾರದು. ತಿಳಿವಳಿಕೆಯಿಲ್ಲದ ಜನರ ಕಷ್ಟಗಳನ್ನು ನಾವು ಗಣನೆಗೆ ತರಬಾರದು.”

ಮಿ. ಮೈಕಾಬರರು ಸಮಾಧಾನಗೊಂಡರು.
“ಇಂಥ ಮಹಾ ಮುಹೂರ್ತದಲ್ಲಿ ಪತಿ-ಪತ್ನಿಯರ ಐಕ್ಯ ಮನೋಭಾವವು ಅತ್ಯಗತ್ಯ” ಎಂದಂದುಕೊಂಡು ಮಿ. ಮೈಕಾಬರರು ನೆಂಟರನ್ನು ಕರೆತರಲು ಹೊರಗೆ ಹೋದರು. ಇದೇ ಸಮಯದಲ್ಲಿ ಮಿಸೆಸ್ ಮೈಕಾಬರರು ಅವರ ತವರುಮನೆಯವರ ಗುಣ ವರ್ಣನೆಯನ್ನು ಮಾಡತೊಡಗಿದರು.

ಆದರೆ ಹೊರಗೆ ಹೋದ ಮಿ. ಮೈಕಾಬರರು ಒಳಗೆ ಬರದೆ ಒಂದು ಕೈಚೀಟು ಮಾತ್ರ ಬಂತು. ಮಿ. ಮೈಕಾಬರರೇ ಆ ಚೀಟನ್ನು ಬರೆದಿದ್ದರು. `ಹೀಪ್ ಮತ್ತು ಮೈಕಾಬರ್’ ಕೇಸಿನ ಡಿಕ್ರಿ ಹಣ ಸಂದಾಯವಾಗದಿದ್ದುದರಿಂದ ಅವರು ದಸ್ತಗಿರಿಯಾಗಿದ್ದರೆಂದು ತಿಳಿಸಿದ್ದರು. ಅವರು ಇನ್ನು ಜೈಲಿನಲ್ಲಿ ಉಳಿಯಬೇಕಾಗುವ ಸ್ವಲ್ಪ ಸಮಯದ ಉಪಯೋಗಕ್ಕಾಗಿ ಅವರ ಒಂದು ಟಿನ್ನು ಡಬ್ಬಿಯನ್ನೂ ತನ್ನ ಆತ್ಮಹತ್ಯೆ ಬಗ್ಗೆ ಒಂದು ಚೂರಿಯನ್ನೂ ಕಳುಹಿಸಬೇಕೆಂದು ಆ ಚೀಟಿಯಲ್ಲಿ ಬರೆದಿದ್ದರು. ಅಲ್ಲದೆ ಅವರು ಜೈಲಿಗೆ ಹೋದ ನಂತರ ಅವರ ಸಂಸಾರವನ್ನು ನಮ್ಮ ಕಡೆಯ ಅನಾಥಾಲಯದ ವೃತ್ತಿ ಶಿಕ್ಷಣದ ವಿಭಾಗಕ್ಕೆ ಸೇರಿಸಬೇಕೆಂದೂ ಬೇಡಿಕೊಂಡಿದ್ದರು.

ಚೂರಿ ಡಬ್ಬಿಗಳನ್ನು ಕಳುಹಿಸುವ ಬದಲು ನಾನೇ ಹೊರಗೆ ಹೋಗಿ ಅಮೀನರಿಗೆ ಡಿಕ್ರಿ ಪ್ರಕಾರದ ಹಣ ಕೊಟ್ಟು ಮಿ. ಮೈಕಾಬರರನ್ನು ಒಳಗೆ ಕರೆದುಕೊಂಡು ಬಂದೆನು. ಈ ಸಾಲದ ಕಾರಣವಾಗಿ ಮಿ. ಮೈಕಾಬರರಿಗೆ ಟ್ರೇಡಲ್ಸನಿಂದ ಅವರು ಪಡೆದಿದ್ದ ಸಾಲಗಳ ನೆನಪು ಬಂದು, ಅವರ ಜೇಬಿನಲ್ಲಿ ತಯಾರಿಸಿಟ್ಟುಕೊಂಡಿದ್ದ ಪ್ರೋನೋಟನ್ನು ತೆಗೆದು ಟ್ರೇಡಲ್ಸನಿಗೆ ಕೊಟ್ಟರು. ಸರಕಾರದ ಪ್ರೋನೋಟಿನಂತೆಯೇ ತಾನು ಪ್ರೋನೋಟು ಬರಕೊಟ್ಟ ಕೂಡಲೇ ಹಣವೇ ಸಂದಿದೆಯೆಂದು ನಿರ್ವಂಚನೆಯಿಂದ ನಂಬುವ ಮಿ. ಮೈಕಾಬರರು ಆ ನೋಟಿನಲ್ಲಿ ಅವರು ಟ್ರೇಡಲ್ಸನಿಂದ ಹಣ ಸಾಲ ತಂದಿದ್ದ ತಾರೀಕು, ಮೊಬಲಗು, ಅದರ ಬಡ್ಡಿಗಳನ್ನು ಶಾಲಾ ಮಕ್ಕಳು ಅವರ ಲೆಕ್ಕ ಪುಸ್ತಕದಲ್ಲಿ ಅಂಕೆ ಬರೆಯುವಂತೆ ಸಾಲಾಗಿ, ಕ್ರಮವಾಗಿ ಬರೆದಿದ್ದರು. ಈ ಪ್ರೋನೋಟನ್ನು ಟ್ರೇಡಲ್ಸನಿಗೆ ಕೊಟ್ಟ ಮೇಲಿನ ಅವರ ಮರ್ಜಿಯಂತೂ ಬಹು ಉತ್ಸಾಹಕರವಾಗಿತ್ತು. ನಾವು ಆ ದಿನ ರಾತ್ರಿಗೆ ನಮ್ಮ ಮನೆಗೆ ವಾಪಾಸು ಬಂದೆವು.

ಅನಂತರ ನಾವು ಒಮ್ಮೆ ಗ್ರೇವ್ಸ್ಎಂಡ್ ಎಂಬ ಬಂದರಕ್ಕೆ ಹೋಗಿ ಮಿ. ಪೆಗಟಿ, ಎಮಿಲಿ ಮೊದಲಾದವರನ್ನು ನೋಡಿ ಬರಬೇಕೆಂದು ನಿಶ್ಚೈಸಿದೆವು. ಗ್ರೇವ್ಸ್ಎಂಡಿನಲ್ಲಿ ಹಡಗು ಸ್ವಲ್ಪ ಹೊತ್ತು ನಿಂತಿರುವುದರಿಂದ ಪ್ರಯಾಣಿಕರನ್ನು ಬೀಳ್ಕೊಡುವವರು ಹಾಗೆ ಹೋಗುವ ಕ್ರಮವಿತ್ತು. ಹೀಗೆ ಲಂಡನ್ನಿನಿಂದ ಹೊರಟ ಹಡಗು ಇಂಗ್ಲೆಂಡನ್ನು ಪೂರ್ಣ ಬಿಟ್ಟು ಹೊರಡಲು ಎರಡು ಮೂರು ದಿನಗಳು ತಗಲುವ ಪದ್ಧತಿ ಇರುವುದರಿಂದ, ನಮಗೆ ಇದು ಬಹಳ ಅನುಕೂಲವಾಯಿತು.

ಮಿ. ಮೈಕಾಬರರನ್ನು ಭೇಟಿಯಾದ ಮೂರನೆ ದಿನ ನಾವು ಗ್ರೇವ್ಸ್ಎಂಡಿಗೆ ಹೋಗಿ ಆ ಹಡಗನ್ನು ಏರಿ ನಮ್ಮ ಕಡೆಯವರನ್ನೆಲ್ಲ ನೋಡಿ ಮಾತಾಡಿ ಬಂದೆವು. ಆದರೆ ಇಲ್ಲಿಗೆ ಬಾರ್ಕಿಸ್ ಪೆಗಟಿ ಮತ್ತು ನಾನು – ಇಬ್ಬರು ಮಾತ್ರ, ಹೋದೆವು. ಅಲ್ಲಿ ಮಿ. ಪೆಗಟಿಯನ್ನು ಕಂಡು ಮಾತಾಡಿದೆವು. ಅವರ ಜತೆಯಲ್ಲಿ ಎಮಿಲಿ, ಮಿಸೆಸ್ ಗಮ್ಮಿಜ್, ಮತ್ತು ಒಬ್ಬ ಹೆಂಗುಸು ಇದ್ದರು. ಈ ಮೂರನೇ ಹೆಂಗುಸು ಸ್ವಲ್ಪ ದೂರದಲ್ಲಿ ಕುಳಿತಿದ್ದುದರಿಂದ ನಾನು ವಿಚಾರಿಸಿ ತಿಳಿದಾಗ ಅವಳು ಮಾರ್ಥಾಳೆಂದು ತಿಳಿಯಿತು. ಮಾರ್ಥಾಳನ್ನು ಆಸ್ಟ್ರೇಲಿಯಕ್ಕೆ ತನ್ನ ಜತೆಯಲ್ಲಿ ಕರೆದುಕೊಂಡು ಹೋಗುವ ಖರ್ಚನ್ನೆಲ್ಲ ಮಿ. ಪೆಗಟಿಯೇ ಮಾಡಿದ್ದರಲ್ಲದೆ, ಅವಳಿಗೆ ಆಸ್ಟ್ರೇಲಿಯದಲ್ಲಿ ಒಂದು ವೃತ್ತಿಯನ್ನೂ ಒದಗಿಸಿಕೊಡುವರಾಗಿ ಹೇಳಿದರು. ಈ ವರ್ತಮಾನ ತಿಳಿದು ನನಗೆ ಮಿ. ಪೆಗಟಿಯ ಮೇಲೆ ಬಹು ಪೂಜ್ಯ ಭಾವವೇ ಉಂಟಾಯಿತು.

ಹೇಮನು ಹೇಳಿದ್ದ ಮಾತುಗಳನ್ನು ಮಿ. ಪೆಗಟಿಗೆ ನಾನು ತಿಳಿಸಿದಾಗ ಹೇಮನಿಗೆ ನಾನು ತಿಳಿಸಬೇಕೆಂದು ಮರುತ್ತರವನ್ನು ಅವರು ನನ್ನೊಡನೆ ಹೇಳಿದರು. ಹೇಮನ ಜೀವಂತ ಕಿವಿಗೇ ಆ ಮಾತುಗಳನ್ನು ನಾನು ಹೇಳುವೆನೆಂದು ನಂಬಿಕೊಂಡು ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಿದ್ದಾಗ ನನಗೆ ಆದ ದುಃಖ ಅಷ್ಟಿಷ್ಟಲ್ಲ. ಈ ಅನಿವಾರ್ಯವಾದ ಘಟನೆಯನ್ನು ಕುರಿತು ನಾನು ಯೋಚಿಸುತ್ತಿದ್ದಾಗಲೇ ನಾವು ಹಡಗನ್ನು ಬಿಟ್ಟು ಇಳಿಯಬೇಕಾದ ಸಂಕೇತದ ಘಂಟೆ ಕೇಳಿಸಿತು.

ಘಂಟೆಯ ಶಬ್ದ ಕೇಳಿದ ಕೂದಲೇ ನಾವು ಹಡಗಿನಿಂದಿಳಿದು ನಮ್ಮ ದೋಣಿಯನ್ನು ಸೇರಿದೆವು. ನಮ್ಮ ದೋಣಿಯನ್ನು ಹಡಗಿನಿಂದ ಸ್ವಲ್ಪ ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿಕೊಂಡು ಸದ್ಯವೇ ಚಲಿಸಲಿದ್ದ ಹಡಗವನ್ನು ನೋಡುತ್ತಾ ನಿಂತೆವು.

ನಮಗಿಂತ ಎತ್ತರದಲ್ಲಿ ನಿಂತಿದ್ದ ಮಿ. ಪೆಗಟಿ ಮತ್ತು ಎಮಿಲಿಯನ್ನು ನಾನು ನೋಡ ತೊಡಗಿದೆನು. ಎಮಿಲಿಯು ಮಿ. ಪೆಗಟಿಯವರ ಮೇಲೆ ಒರಗಿ ನಿಂತಿದ್ದಳು. ಮಿ. ಪೆಗಟಿ ಅವಳನ್ನು ಒಂದು ಕೈಯಿಂದ ಆಧರಿಸಿ ಹಿಡಿದಿದ್ದರು. ಅವರು ದೋಣಿಯಲ್ಲಿದ್ದ ನಮ್ಮನ್ನು ಕೈ ನೀಡಿ ಎಮಿಲಿಗೆ ತೋರಿಸಿದರು. ಎಮಿಲಿಯು ಅವಳ ಕೊನೆಯ ನಮಸ್ಕಾರವನ್ನು ನನಗಿತ್ತಳು.

ಸಂಜೆಯ ಸೂರ್ಯನ ಸುವರ್ಣ ಪ್ರಭೆ ಹಡಗಿನ ಧಕ್ಕೆಯನ್ನೂ ಧಕ್ಕೆಯ ಮೇಲಿದ್ದವರನ್ನೂ ಆವರಿಸಿ ಬಹು ಗಂಭೀರದ ದೈವಿಕ ಭಾವನೆಯನ್ನು ನಮ್ಮಲ್ಲಿ ಪ್ರಚೋದಿಸುತ್ತಿತ್ತು. ಸುಂದರೀಮಣಿ ಎಮಿಲಿ ಬಾಡಿದ ಪುಷ್ಪದಂತೆ, ತನ್ನ ದುಃಖದಿಂದ ಬಾಡಿ ಪ್ರೀತಿಯ ಮಾವನ ಮೇಲೆ ತನ್ನ ಸಮಸ್ತವನ್ನು ಅರ್ಪಿಸಿ ನಿಂತಿದ್ದಳು. ದೃಢವಾದ ಪಿತೃವಾತ್ಸಲ್ಯದಿಂದ ಪೂರಿತರಾಗಿದ್ದ ಮಿ. ಪೆಗಟಿ ತಮ್ಮ ಹೃದಯವೇ ಎಮಿಲಿಯೆಂಬಂತೆ ಅವಳಿಗೆ ಆಶ್ರಯವೂ ಶಕ್ತಿಯೂ ಆಗಿ ನಿಂತಿದ್ದರು. ಈ ವಿಧದ ಗಾಂಭೀರ್ಯದ ಭಾವನಾಮಯ ಸನ್ನಿವೇಶದಲ್ಲಿ ಅವರು ನಿಂತಿದ್ದಂತೆ ಹಡಗು ಚಲಿಸಿತು – ನಮ್ಮಿಂದ ದೂರ ಸರಿಯಿತು.

ನನ್ನ ಜೀವನ ಯಾತ್ರೆಯಲ್ಲಿ ಇಷ್ಟೊಂದು ದೂರ ಬಂದಿದ್ದ ನನ್ನ ಪ್ರಿಯ ಎಮಿಲಿಯನ್ನೂ ಪೂಜ್ಯ ಮಿ. ಪೆಗಟಿಯವರನ್ನು ಅಗಲುವಾಗ ನನಗೆ ಆದ ದುಃಖ ಬಹಳವಾಗಿತ್ತು. ನಮ್ಮ ದೋಣಿಯು ದಡವನ್ನು ಮುಟ್ಟುವಾಗ ರಾತ್ರಿಯ ಕತ್ತಲು ಕೆಂಟ್ಸ್ ಗುಡ್ಡೆಗಳನ್ನು ಆವರಿಸಿತ್ತು. ಅದೇ ಸಮಯದಲ್ಲಿ ದುಃಖದ ಅಂಧಕಾರ ನನ್ನ ಹೃದಯವನ್ನು ಆವರಿಸಿತ್ತು.