ಅಧ್ಯಾಯ ಅರವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತೆರಡನೇ ಕಂತು

ಆ ರಾತ್ರಿ ಊಟವಾದನಂತರ ಅತ್ತೆಯೂ ನಾನೂ ಸಾಧಾರಣ ನಡುರಾತ್ರಿಯವರೆಗೂ ಕುಳಿತು ಮಾತಾಡಿದೆವು. ನಾವು ಮಾತಾಡದಿದ್ದ ವಿಷಯವಿಲ್ಲವೆಂಬಷ್ಟರವರೆಗೂ ಮಾತಾಡಿದೆವು. ಆಸ್ಟ್ರೇಲಿಯಕ್ಕೆ ಹೋದವರನ್ನು ಕುರಿತು ಪ್ರಸ್ತಾಪ ಬಂತು. ಅವರಿಂದ ಬರುವ ಪತ್ರಗಳಲ್ಲೆಲ್ಲ ಅವರ ಅಭಿವೃದ್ಧಿಯನ್ನು ಕುರಿತಾಗಿ ವರ್ತಮಾನವಿರುತ್ತಿತ್ತು. ಆರೋಗ್ಯ, ಕೃಶಿ ಉದ್ಯಮ, ಎಲ್ಲದರಲ್ಲೂ ಅಲ್ಲಿನವರು ಸುಖವಾಗಿ, ಸಂತೋಷವಾಗಿ, ಅಭಿವೃದ್ಧಿ ಪಥದಲ್ಲೇ ಮುಂದುವರಿಯುತ್ತಿದ್ದರು. ಅತ್ತೆಯ ಅನೇಕ ಅನುಭವಗಳ ಕಾರಣವಾಗಿ, (ಹೆಂಗುಸರು ಮದುವೆಯಾಗುವುದು ತಪ್ಪೆನ್ನುತ್ತಿದ್ದವಳು) ತನ್ನ ಪೂರ್ವದ ಅಭಿಪ್ರಾಯವನ್ನು ತಿದ್ದಿಕೊಂಡು ಜೇನೆಟ್ಟಳಿಗೆ ಮದುವೆಗೆ ಒಪ್ಪಿಗೆ ಕೊಟ್ಟಿದ್ದಳು. ಜೇನೆಟ್ಟಳು ಒಬ್ಬ ಶ್ರೀಮಂತ ಹೆಂಡದಂಗಡಿ ಒಡೆಯನನ್ನು ಮದುವೆಯಾಗಿದ್ದಳು. ಅತ್ತೆ ಆ ಮದುವೆಗೆ ಸ್ವತಃ ಹೋಗಿ ವಧೂವರರನ್ನು ಆಶೀರ್ವದಿಸಿ ಒಳ್ಳೊಳ್ಳೇ ಉಡುಗೊರೆ ವಸ್ತುಗಳನ್ನು ಕೊಟ್ಟಿದ್ದಳು. ಮಿ. ಡಿಕ್ಕರು ಸಹ ತಮ್ಮ ಬರವಣಿಗೆಯಿಂದ ಒಳ್ಳೆ ಸಂಪಾದನೆ ಮಾಡುತ್ತಿದರು. ಈಗ ಅವರ ಬರವಣಿಗೆಯ ಮಧ್ಯೆ ಚಾರ್ಲ್ಸ್ ದೊರೆಯ ತಲೆ ಬರುತ್ತಿರಲಿಲ್ಲ. ಹೀಗೆ ಅನೇಕ ವಿಷಯಗಳನ್ನು ಮಾತಾಡುತ್ತಾ ನಾನು ಮಿ. ವಿಕ್ಫೀಲ್ಡರನ್ನು ಏಗ್ನೆಸ್ಸಳನ್ನೂ ನೋಡಿ ಬರಬೇಕೆಂದು ನಿಶ್ಚೈಸಿದೆನು.

ಏಗ್ನೆಸ್ಸಳನ್ನು ಕುರಿತಾಗಿ ಮಾತಾಡುವಾಗ, ನಾನು ಮೊದಲು ಕೇಂಟರ್ಬರಿಗೆ ಹೋಗಿ ಅನಂತರ ಡೋವರಿಗೆ ಬರುವುದಾಗಿ ತನ್ನ ಮನಸ್ಸಿನಲ್ಲಿ ಬಹಳವಾದ ಹಂಬಲವಿತ್ತೆಂದೂ ಕೇವಲ ನನ್ನ ಕರ್ತವ್ಯ ದೃಷ್ಟಿಯಿಂದ ಅತ್ತೆಯನ್ನು ಪ್ರಥಮವಾಗಿ ನೋಡಲು ಡೋವರಿಗೆ ಬಂದದ್ದಾಗಿಯೂ ಮರೆಮಾಚದೆ ಅತ್ತೆಗೆ ತಿಳಿಸಿದೆ. ಅತ್ತೆಗೆ ಸಂತೋಷವೇ ಆಗಿ ಅವಳು ನಗಾಡುತ್ತಾ – “ಈ ಮುದುಕಿಯನ್ನು ನೋಡುವುದು ಅಷ್ಟೊಂದು ಮುಖ್ಯವೆಂದು ನೀನು ಗ್ರಹಿಸುವ ಅಗತ್ಯವಿರಲಿಲ್ಲ. ಮಿ. ಮತ್ತು ಮಿಸ್ ವಿಕ್ಫೀಲ್ಡರನ್ನು ನೋಡಿಯೇ ಬರಬಹುದಿತ್ತು. ಅವರೆಲ್ಲ ಸೌಖ್ಯವಾಗಿದ್ದಾರೆ. ಏಗ್ನೆಸ್ಸಳಂತೂ ಅವಳ ನಿರಂತರ ಶಾಂತತೆಯಿಂದ ತಂದೆಗೆ ಸಹಾಯಕಳಿದ್ದುಕೊಂಡು ಮನೆಯನ್ನು ಚೆನ್ನಾಗಿ ನಡೆಸಿ ಬರುತ್ತಿದ್ದಾಳೆ” ಅಂದಳು. “ವಿದ್ಯಾರ್ಥಿನಿಯರು ಕೆಲವರಿಗೆ ಪಾಠ ಹೇಳಿ ಕೊಡುತ್ತಿದ್ದಾಳೆಂದು ಕೇಳಿದ್ದೇನೆ, ನಿಜವೋ?” ಎಂದು ನಾನು ವಿಚಾರಿಸಿದೆನು. “ಹೌದು. ಕೆಲವು ವಿದ್ಯಾರ್ಥಿನಿಯರಿಗೆ ತನ್ನ ಆತ್ಮಸಂತೋಷದಿಂದ ಪಾಠ ಹೇಳಿ ಕೊಡುತ್ತಿದ್ದಾಳೆ. ತನ್ನ ಜೀವನವು ಪರೋಪಕಾರಕ್ಕಾಗಿಯೇ ಮೀಸಲಾಗಿಟ್ಟಿರುವಂತೆ – ಈ ಚಿಕ್ಕಪ್ರಾಯದಲ್ಲೇ ಅವಳು ಈ ಕೆಲಸವನ್ನು ಮಾಡುತ್ತಿದ್ದಾಳೆ” ಎಂದು ಅತ್ತೆ ತಿಳಿಸಿದಳು. “ಅವಳನ್ನು ಮದುವೆಯಾಗುವ ಪ್ರಸ್ತಾಪ ಯಾರಿಂದಾದರೂ ಬಂದಿದೆಯೋ?” “ಪ್ರತ್ಯಕ್ಷ ಯಾರೂ ಬಂದಿರುವಂತೆ ತೋರುವುದಿಲ್ಲ. ಆದರೆ ಅವಳ ಕೈ ಹಿಡಿಯಲು ಬೇಕಾದಷ್ಟು ಜನರು, ಯೋಗ್ಯರೇ ಮುಂದೆ ಬರುವುದರಲ್ಲಿ ಸಂಶಯವಿಲ್ಲ.” “ಅವಳ ಮನಸ್ಸು ಇಂಥವರ ಮೇಲೆ ಎಂದೇನಾದರೂ …ಸಂದರ್ಭ ನಡೆದಿರಬಹುದೋ?” ಎಂದು ಕಷ್ಟದಿಂದ ಕೇಳಿದೆನು. “ನಾನು ಹೇಳಲಾರೆ – ನನ್ನ ಅಭಿಪ್ರಾಯ ಪ್ರಕಾರ ಅವಳ ಮನಸ್ಸೆಲ್ಲ ಒಂದು ಕಡೆಗೆ ಹರಿದಿದೆ. ಅನುಕೂಲ ಪರಿಸ್ಥಿತಿ ಸಿಕ್ಕದೆ ಅದಕ್ಕಿಂತ ಹೆಚ್ಚನ್ನು ಹೇಳಲಾರೆ” ಎಂದು ಅತ್ತೆ ಉತ್ತರವಿತ್ತಳು. ಅತ್ತೆ ಈ ಮಾತನ್ನಾಡುವಾಗ ನನ್ನನ್ನೇ ನೋಡುತ್ತಲೂ ನಾನು ಅದೇ ಮಾತನ್ನು ಪ್ರಕೃತ ಮುಂದರಿಸುವ ಅಗತ್ಯವಿಲ್ಲವೆಂದು ತೋರುತ್ತಲೂ ಕುಳಿತಳು.

ಮರುದಿನ ಬೆಳಗ್ಗೆ ನಾನು ಕುದುರೆಯನ್ನೇರಿ ಕೇಂಟರ್ಬರಿಗೆ ಹೋದೆನು. ಮಿ. ವಿಕ್ಫೀಲ್ಡರ ಮನೆಯನ್ನು ಸೇರಿದೆನು. ನನ್ನ ಬಾಲ್ಯದ ಪರಿಚಿತ ಮನೆಯಲ್ಲಿ ಬಹು ಸಂತೋಷದಿಂದ ಸ್ವಲ್ಪ ಕಾಲ ಕಳೆದೆನು. ಅಲ್ಲಿನ ಆಫೀಸು, ಕೋಣೆಗಳು, ಅಲಂಕಾರಗಳು ಎಲ್ಲವೂ ಪೂರ್ವದಂತೆಯೇ ಬಹು ಚೆನ್ನಾಗಿದ್ದುವು. ಉರೆಯನ ಸಂಪರ್ಕ ಬೆಳೆದು ಕೆಡತೊಡಗಿದ್ದ ಕಾಲದ ಒರಟುತನ ಅವ್ಯವಸ್ಥೆಗಳು ಈಗ ಅಲ್ಲಿರಲಿಲ್ಲ.

ನನ್ನನ್ನು ಕಂಡೊಡನೆ ಏಗ್ನೆಸ್ಸಳು ಬಂದು ಆಲಂಗಿಸಿದಳು. ನಮಗಿಬ್ಬರಿಗೂ ಆನಂದ ಬಾಷ್ಪವೇ ಬಂದು ಮಾತಾಡಲಾರದಿದ್ದಷ್ಟು ಹರ್ಷಪುಳಕಿತರಾಗಿ ಹೋದೆವು. ಅನಂತರ ಕುಳಿತು ಅವಳು ವಿಚಾರಿಸಿದ್ದಕ್ಕಾಗಿ ನನ್ನ ದೇಶಯಾಟನೆ ವೃತ್ತಾಂತವನ್ನೆಲ್ಲ ನಾನು ಸೂಕ್ಷ್ಮವಾಗಿ ಹೇಳಿದೆ. ಇನ್ನೊಬ್ಬರ ಸುಖದುಃಖವನ್ನು ಸಹಾನುಭೂತಿಯಿಂದ ವಿಚಾರಿಸಿ ಕೇಳುವುದೇ ಅವಳ ವೈಶಿಷ್ಟ್ಯವಾಗಿದ್ದ ಮೇಲಂತೂ ನನ್ನನ್ನು ಕುರಿತಾಗಿ ತುಂಬಾ ವಿಚಾರಿಸಿದಳು. ಅನಂತರ ನಾನು, ಸ್ವಲ್ಪ ಮಧ್ಯೆ ಪ್ರವೇಶಿಸಿ ಕೇಳಿದೆ – “ತಂಗೀ, ಏಗ್ನೆಸ್, ನೀನು ನನ್ನನ್ನು ಕುರಿತಾಗಿ ಇಷ್ಟೆಲ್ಲ ವಿಚಾರಿಸಿದೆ, ಮಾತಾಡಿದೆ, ನಿನ್ನ ಸಂಗತಿಯನ್ನು ನಾನೇಕೆ ಕೇಳಬಾರದು. ನೀನು ಹೇಗಿದ್ದೀಯಾ? ನಿನ್ನ ತಂದೆಯವರು ಹೇಗಿದ್ದಾರೆ. ಈ ಮಧ್ಯೆ ಬಂದಿದ್ದ ಕಷ್ಟವೆಲ್ಲ ಮುಗಿದು ನೀನು ಸಂತೋಷವಾಗಿದ್ದೀಯೇನು?” ಎಂದು ಕೇಳಿದೆ. ನಾನು ಅವಳನ್ನು ತಂಗೀ ಎಂದಂದಾಗ ಅವಳ ಮುಖ ಸ್ವಲ್ಪ ಕೆಂಪೇರಿತು. ಅನಂತರ ಮೆಲ್ಲಗೆ ಉತ್ತರವಿತ್ತಳು – “ತಂದೆಯವರ ಕಷ್ಟಗಳೆಲ್ಲ ಪರಿಹಾರವಾಗಿ ಈಗ ಅವರಿಗೆ ಈ ಮನೆಯೂ ಹಿತ್ತಲೂ ಉಳಿದಿವೆ. ಅವರು ಆರೋಗ್ಯವಾಗಿದ್ದಾರೆ. ನಾನು ಅವರ ಶುಶ್ರೂಷೆಯಲ್ಲೂ ನನ್ನ ಸಂತೋಷ ಮತ್ತೂ ಜೀವನ ಸಾರ್ಥಕ್ಯಕ್ಕಾಗಿ ಕೆಲವು ಬಾಲಕಿಯರಿಗೆ ಪಾಠ ಹೇಳಿಕೊಡುತ್ತಲೂ ಇದ್ದೇನೆ. ಹೀಗೆ ನಾವಿಬ್ಬರೂ ಕ್ಷೇಮದಲ್ಲಿದ್ದೇವೆ.”

ಮಿ. ವಿಕ್ಫೀಲ್ಡರು ಅವರ ಕೋಣೆಯಲ್ಲಿ ಯಾವುದೋ ಒಂದು ಅವಸರದ ಕೆಲಸದಲ್ಲಿದ್ದುದರಿಂದ, ಅವರೊಡನೆ ಅನಂತರ ಮಾತಾಡೋಣವೆಂದು, ನಾನು ಕೇಂಟರ್ಬರಿಯಲ್ಲೆಲ್ಲ ಸ್ವಲ್ಪ ತಿರುಗಾಡಿ ಬರುವೆನೆಂದಂದು ಹೊರಟೆನು. ಊಟಕ್ಕೆ ಮೊದಲೇ ಮನೆಗೆ ಬರುವುದಾಗಿ ತಿಳಿಸಿದ್ದುದರಿಂದ ನನಗೆ ವಿಶೇಷವಾಗಿ ಮನಸ್ಸಿದ್ದ ಕಡೆಗಳಲ್ಲಿ ಮಾತ್ರ ತಿರುಗಾಡಿದೆನು. ಕೇಂಟರ್ಬರಿಯಲ್ಲಿ ವಿಶೇಷ ಬದಲಾವಣೆಗಳೇನೂ ಆಗಿದ್ದಂತೆ ತೋರಲಿಲ್ಲ. ನನ್ನ ತಿರುಗಾಟದಲ್ಲಿ ಒಬ್ಬ ಪೋಲೀಸಿನವನನ್ನು ಕಂಡು ಗುರುತಿಸಿದ್ದೊಂದು ವಿಶೇಷವಾಗಿತ್ತು. ನಾನು ಶಾಲೆಗೆ ಹೋಗುತ್ತಿದ್ದಾಗ ಕುಸ್ತಿ ಮಾಡಿದ್ದ ಆ ಕಟುಕರವನೇ ಇಂದು ಆ ಪೋಲೀಸಿನವನಾಗಿದ್ದನೆಂದು ತಿಳಿದೆನು. ನಾನು ಊಟಕ್ಕೆ ಮೊದಲೇ ಮನೆಗೆ ಬಂದೆನು. ಹಿಂದೆ ನಾವು ಊಟ ಮಾಡುತ್ತಿದ್ದ ಕೋಣೆಯಲ್ಲೇ ಇಂದೂ ಊಟ ಮಾಡಿದೆವು. ಏಗ್ನೆಸ್ಸಳ ಶಿಷ್ಯೆಯರೂ ನಮ್ಮ ಜೊತೆಯಲ್ಲಿ ಊಟಕ್ಕಿದ್ದರು. ಮಿ. ವಿಕ್ಫೀಲ್ಡರು ವೈನ್ ಕುಡಿಯಲಿಲ್ಲ – ನಾನಂತೂ ಹೇಗೂ ಕುಡಿಯುವುದಿಲ್ಲವಷ್ಟೆ.

ನಮ್ಮ ಊಟಾನಂತರ ಏಗ್ನೆಸ್ಸಳ ಶಿಷ್ಯೆಯರು ಹೋದರು. ನಾವು ಮೂವರೂ ಮಹಡಿಯ ಮೇಲೆ ಹೋಗಿ ಆರಾಮವಾಗಿ ಕುಳಿತು ಮಾತಾಡತೊಡಗಿದೆವು. ಮಿ. ವಿಕ್ಫೀಲ್ಡರು ತಮ್ಮ ಜೀವಮಾನದ ಹಿಂದಿನ ಕೆಲವು ಕಥೆಗಳನ್ನು ಹೇಳಿದರು. ಇಂದಿನ ಕೆಲವು ಕಷ್ಟಗಳನ್ನೂ ಸುಖಗಳನ್ನೂ ಕುರಿತು ಮಾತಾಡಿದರು. ತಾನು ಉರೆಯನ ಕೈಯ್ಯಲ್ಲಿ ಸಿಕ್ಕಿಬಿದ್ದ ಕ್ರಮ ಪ್ರಸಂಗ, ಮೊದಲಾದುವನ್ನೆಲ್ಲ ಹೇಳಿದರು. ತನ್ನ ಆರೋಗ್ಯ ಕೆಡುತ್ತಾ ಬಂದು, ಆಸ್ತಿಪಾಸ್ತಿ, ಜೀವನ ಸ್ವಾತಂತ್ರ್ಯಗಳಲ್ಲೂ ಕೆಡುತ್ತ ಬಂದ ಸಂಗತಿಯನ್ನೂ ನಮ್ಮೆಲ್ಲರ ಸಹಾಯದಿಂದ ಉರೆಯನ ಕೈಯಿಂದ ತಪ್ಪಿ ಉದ್ಧಾರವಾದ ಸಂಗತಿಯನ್ನೂ ಹೇಳಿದರು. ತನ್ನ ಮಗಳನ್ನು ಕುರಿತು ಮಾತಾಡುವಾಗಲಂತೂ ಅವಳು ಮಗಳಾಗಿದ್ದರೂ ಮಾತೆಯೂ ಆಗಿದ್ದಾಳೆಂದೂ ಅವಳು ಬಾಲಕಿಯಾಗಿದ್ದರೂ ವೃದ್ಧೆಯೂ ಆಗಿದ್ದಾಳೆಂದೂ ತನ್ನ ಸುಖಸಂತೋಷಗಳನ್ನು ಬದಿಗೊತ್ತಿ ಅವರ ಸುಖಸಂತೋಷಕ್ಕಾಗಿ ಕಷ್ಟಪಟ್ಟಳೆಂದೂ ವಿವರಿಸಿ ವರ್ಣಿಸಿದರು. ಏಗ್ನೆಸ್ಸಳು ಸ್ವಲ್ಪ ಸ್ವಲ್ಪ ಮಾತಾಡುತ್ತಲೂ ಒಮ್ಮೊಮ್ಮೆ ಪಿಯಾನೊವನ್ನು ಬಾರಿಸುತ್ತಲೂ ಇದ್ದಳು. ಅಲ್ಲಿ ನಾವು ಮೂವರು ಕುಳಿತು ಕಳೆದ ಆ ಸಮಯ ಬಹು ಆನಂದಮಯವೇ ಆಗಿತ್ತು. ಮಿ. ವಿಕ್ಫೀಲ್ಡರು ಸ್ವಲ್ಪ ವಿಶ್ರಮಿಸಿಕೊಳ್ಳುವುದಕ್ಕಾಗಿ ತನ್ನ ಕೋಣೆಗೆ ಹೋದನಂತರ ಏಗ್ನೆಸ್ಸಳೂ ನಾನೂ ನಮ್ಮ ಹಿಂದಿನ ಕಾಲದ ಕೋಣೆಯಲ್ಲಿ ಕುಳಿತು ಸ್ವೇಚ್ಛೆಯಾಗಿ ಮಾತಾಡತೊಡಗಿದೆವು. ಏಗ್ನೆಸ್ಸಳು ಮಾತಾಡುತ್ತಾ ಪ್ರಶ್ನಿಸಿದಳು – “ಇನ್ನೂ ಪುನಃ ದೇಶಾಟನ ಮಾಡಬೇಕೆಂಬ ಲವಲವಿಕೆ ನಿನಗಿದೆಯೇ ಟ್ರಾಟೂಡ್?” “ನೀನೇನನ್ನುವೇ – ಕೇಳೋಣ. ಅನಂತರ ನನ್ನ ಅಭಿಪ್ರಾಯ.” “ನನ್ನನ್ನು ಕೇಳಿದರೆ ಬೇಡವೆನ್ನುವೆನು. ನಿನ್ನ ಹೆಸರು ಪ್ರಖ್ಯಾತಿಗೆ ಬಂದಿದೆ. ನಿನ್ನ ಅನುಭವ ಪ್ರಖ್ಯಾತಿಗಳಿಗೆ ಬೆಲೆಯಿದೆ. ಆದ್ದರಿಂದ ನೀನು ನಮ್ಮ ಊರಿನಲ್ಲೇ ಇರುವುದು ಒಳ್ಳೆಯದು, ದೇಶಾಟನ ಅನಗತ್ಯ” ಅಂದಳು ಏಗ್ನೆಸ್.

“ನಾನು – ನೀನು ಅನ್ನುವಂತೆ ಏನೆಲ್ಲ ಆಗಿರುವೆನೋ, ಆಗಿರಬಹುದೋ ಅವುಗಳೆಲ್ಲಾ ನಿನ್ನಿಂದಲೇ ನನ್ನಲ್ಲಿ ಉತ್ಪನ್ನವಾದವುಗಳು” ಎಂದು ನಾನು ಬಹು ಸ್ಫೂರ್ತಿಯಿಂದ ನುಡಿದೆನು. “ನನ್ನಿಂದಾ?” ಎಂದು ಆಶ್ಚರ್ಯ ಸೂಚಿಸಿ ಪ್ರಶ್ನಿಸಿದಳು. “ನಿನ್ನಿಂದಲೇ ಆದುದು, ಅದರಲ್ಲಿ ಸಂಶಯವಿಲ್ಲ. ನೀನು ನನ್ನ ಎಲ್ಲಾ ಯಶಸ್ಸಿಗೂ ಅಭ್ಯುದಯಕ್ಕೂ ಕಾರಣಳು. ಏಗ್ನೆಸ್ ನಾನು ನನ್ನ ಮನಸ್ಸಿನ ಚಿಂತೆಗಳನ್ನೂ ಹಂಬಲಗಳನ್ನೂ ನಿನಗೆ ತಿಳಿಸಬೇಕೆಂದೇ ಇಂದು ಬಂದಿರುವೆನು. ನಿನ್ನ ಉಪಕಾರಗಳನ್ನು ಸ್ಮರಿಸದಿರಲು ನನ್ನಿಂದ ಸಾಧ್ಯವಿಲ್ಲ. ದೈವ ಒಲುಮೆಯನ್ನು ಸಂಪಾದಿಸುವ ಧರ್ಮಮಾರ್ಗವನ್ನು ನೀನು ನನಗೆ ತೋರಿಸಿರುವೆ. ನನ್ನ ಸದ್ಗುಣಗಳೇನಿದ್ದರೂ ಅವೆಲ್ಲವನ್ನೂ ತೋರಿಸಿ ಬೆಳೆಸಿಕೊಟ್ಟವಳು ನೀನು. ನೀನು ನನ್ನ ಜೀವನಪಥದಲ್ಲಿ ಮಾರ್ಗದರ್ಶಕಳಾಗಿ ನಿಂತು ನಿನ್ನ ಅಲೌಕಿಕ ಶಕ್ತಿಗಳಿಂದ ನನ್ನ ಬಹಿವೃದ್ಧಿಯನ್ನು ಸಾಧಿಸಿಕೊಟ್ಟಿರುವೆ. ನನಗೆ ನೀನು ಶುಭದೇವತೆ, ಮಾರ್ಗದರ್ಶಕ ಜ್ಯೋತಿ” ಎಂದಂದೆನು ನಾನು.

ಏಗ್ನೆಸ್ಸಳು ಅಳತೊಡಗಿದಳು. ಅದು ದುಃಖದ ಅಳು ಅಲ್ಲವೆಂದು ನನಗೆ ಗೊತ್ತಿತ್ತು. ನಾನೂ ಆವೇಶಪರವಶನಾಗಿದ್ದೆ. ನನ್ನ ಮಾತುಗಳನ್ನು ಮುಂದರಿಸಿ ಹೇಳತೊಡಗಿದೆನು- “ನನ್ನ ಹೃದಯದಲ್ಲಿ ನೀನು ಸದಾ ಪ್ರತಿಷ್ಠಿತಳಾಗಿರುವೆ. ನನ್ನ ಹೃದಯದ ಆರಾಧ್ಯ ದೇವೆತೆಯೆ ನೀನು! ನನ್ನ ಅತ್ಯಂತವಾದ ಸಂತೋಷದ, ಅತ್ಯಂತವಾದ ದುಃಖದ, ಅತ್ಯಂತ ಗೂಢದ, ಗಹನದ ಆಲೋಚನೆಗಳಲ್ಲೆಲ್ಲ ನೀನು ಭಾಗಿಯಾಗಿದ್ದು, ನನ್ನ ಮನಸ್ಸಿನ ಶಾಂತಿ, ಧೈರ್ಯ, ಉತ್ಸಾಹಕ್ಕೆ ಸಹಾಯಕಳಾಗಿರುವೆ. ನಿನ್ನನ್ನು ನಾನು ಎಂದೆಂದೂ ಇದೆ ದೃಷ್ಟಿಯಿಂದ ಗ್ರಹಿಸಿ ಆರಾಧಿಸಲು ನನಗೆ ದಯಮಾಡಿ ಸಮ್ಮತಿಕೊಡು” ಎಂದು ಹೇಳುತ್ತ ಅವಳ ಸಮೀಪಕ್ಕೆ ಹೋಗಿ ಕುಳಿತೆನು. ಏಗ್ನೆಸ್ಸಳು ಸ್ವಲ್ಪ ಸ್ವಲ್ಪ ಅಳುತ್ತಲೇ ಇದ್ದಳು. ಇದನ್ನು `ಅಳು’ ಎಂದರೂ ತಪ್ಪಾಗಬಹುದು – ದುಃಖ ಸಂತೋಷಗಳ ಸಮ್ಮಿಶ್ರಣಾಭಾವದಿಂದ ಅವಳು ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳೆಂದರೆ ಸರಿಯಾಗಬಹುದು. ಅವಳನ್ನು ನೋಡುತ್ತಾ ಹೋದ ಹಾಗೆ ನನಗೆ ಮಾತಾಡಲು ಮತ್ತಷ್ಟು ಉತ್ಸಾಹ ತೋರಿತು. “ತಾಯಿಯಿಲ್ಲದಿದ್ದ ಮಗುವಾಗಿದ್ದ ನಿನ್ನನ್ನು ಇತರರು ಸಂರಕ್ಷಿಸುತ್ತಿದ್ದಾಗಲೇ ಬಂಧುಗಳೇ ಇಲ್ಲದಿದ್ದ ನನ್ನನ್ನು ನೀನು ಸಹೋದರಿಯಂತೆ ಸಾಕಿ, ಸಲಹಿ, ಸಂರಕ್ಷಣೆಯಿತ್ತೆ ಏಗ್ನೆಸ್. ನೀನೊಬ ಪುಣ್ಯದೇವಿಯೇ ಸರಿ. ನನ್ನ ಸರ್ವಶಕ್ತಿಗಳಿಗೆ ಸದಾ ಸ್ಫೂರ್ತಿ ಕೊಡಬಲ್ಲ ನೀನು ನಿನ್ನ ಕೃಪಾಹಸ್ತವನ್ನು ನನಗೆ ಸದಾ ಕೊಡುತ್ತಿರಬೇಕು ಏಗ್ನೆಸ್” ಎಂದು ಹೇಳಿದೆನು.

“ನನಗೆ ಅಷ್ಟೊಂದು – ಇಲ್ಲ ಸಲ್ಲದ, ಯೋಗ್ಯತೆಗಳನ್ನು ಕಲ್ಪಿಸಿ ಕೊಟ್ಟಿರುವಿಯಲ್ಲಾ ಟ್ರಾಟೂಡ್!” ಎಂದು ಸ್ವಲ್ಪ ವಿನೋದ ವ್ಯಂಗ್ಯದಿಂದ ಏಗ್ನೆಸ್ಸಳು ಕೇಳಿದಳು. “ಈ ಅಭಿಪ್ರಾಯವನ್ನು ನಾನು ಬಾಲ್ಯದಿಂದಲೂ ಇಟ್ಟುಕೊಂಡಿರುವೆನು, ಏಗ್ನೆಸ್. ಇಂದು ಅದನ್ನು ಮಾತ್ರ ನಿಸ್ಸಂಕೋಚವಾಗಿ ತಿಳಿಸಿರುವೆನು. ನಾನು ಈ ರೀತಿಯಾಗಿ ಅಭಿಪ್ರಾಯಪಡುವುದನ್ನು ಆಕ್ಷೇಪಿಸುತ್ತೀಯೇನು?” “ನಂದೇನಾಕ್ಷೇಪಣೆ! ನನ್ನನ್ನು ಕುರಿತಾಗಿ ನೀನು ಏನೇ ಗ್ರಹಿಸಿದರೂ ನನಗೆ ಸಂತೋಷವೇ!” ಎಂದು ಹೇಳುತ್ತಾ ಅವಳು ಕಣ್ಣೀರು ಒರೆಸಿಕೊಂಡಳು.

ನಾನು ಆ ರಾತ್ರಿಯೇ ಮನೆಗೆ ಬಂದೆನು. ರಾತ್ರಿಯ ಗಾಳಿ ತುಂಬಾ ಬೀಸಿ ಬರುತ್ತಿತ್ತು. ಬೀಸುತ್ತಿದ್ದ ಚಳಿಗಾಳಿಯಂತೆಯೇ – ದಾರಿಯುದ್ದಕ್ಕೂ – ನಾನಾ ವಿಧದ ಆಲೋಚನೆಗಳು ಎದ್ದು, ಬೀಸಿ, ನನ್ನನ್ನು ಬೆದರಿಸಿ ಮಾಯವಾಗುತ್ತಿದ್ದುವು. ನಾನು ನನ್ನ ಮನಸ್ಸಿನಲ್ಲಿದ್ದುದನ್ನೆಲ್ಲಾ ಪೂರ್ತಿಯಾಗಿ ಏಗ್ನೆಸ್ಸಳೊಂದಿಗೆ ಹೇಳಿಕೊಳ್ಳಲಿಲ್ಲವೆಂದು ಬೇಸರಿಸಿ, ನೊಂದುಕೊಂಡೆನು. ನಾನಾಗಿಯೇ ಅವಳಿಗೆ ಅಲೌಕಿಕ – ದೈವಿಕ – ಸ್ಥಾನವನ್ನು ನಿರ್ಮಿಸಿಟ್ಟಿರುವಾಗ ಅವಳನ್ನು ನಾನು ಈ ಲೋಕದಲ್ಲಿ ಹೇಗೆ ತಾನೆ ಪಡೆದು ಸುಖಿಸಬಹುದು, ಎಂದು ಹೆದರಿದೆ. ದೈವತ್ವವನ್ನೇ ಕಲ್ಪಿಸಿ ಪೂಜಿಸಿದವನಿಗೆ ಮನುಷ್ಯತ್ವದಿಂದ ಪಡೆದು ಅನುಭವಿಸುವ ಹಕ್ಕೇ ನನಗಿಲ್ಲವೆಂದೂ ಊಹಿಸಿದೆ. ಕೊನೆಗೆ ನಾನು ಅವಳನ್ನು ಎಷ್ಟೊಂದು ಪ್ರೀತಿಸುತ್ತಿರುವೆನೆಂಬುದನ್ನು ಪರಲೋಕದಲ್ಲೇ ಅವಳಿಗೆ ತಿಳಿಸುವೆನೆಂದು ನಿರ್ಧರಿಸಿಕೊಂಡೆನು.

 

(ಮುಂದುವರಿಯಲಿದೆ)