ಅಧ್ಯಾಯ ಅರವತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ಮೂರನೇ ಕಂತು

ನಾನು ಬರೆಯಲು ಪ್ರಾರಂಭಿಸಿದ್ದ ಕಾದಂಬರಿ ಕೆಲಸವು ಮುಗಿಯುವವರೆಗೂ ನಾನು ಅತ್ತೆಯ ಮನೆಯಲ್ಲೇ ಇದ್ದೆನು. ನಾನು ಅತ್ತೆಯ ಈ ಮನೆಗೆ ಪ್ರಥಮವಾಗಿ ಬಂದಾಗ ಸಮುದ್ರದ ಮೇಲಿನ ಚಂದ್ರನನ್ನು ನೋಡುತ್ತಾ ಮಲಗುತ್ತಿದ ಕೋಣೆಯಲ್ಲೇ ನನ್ನ ಈ ಕೆಲಸವನ್ನು ಮಾಡುತ್ತಿದ್ದೆನು. ಈ ಕಾದಂಬರಿ ಕೆಲಸ ಮಾಡಿ ಪೂರೈಸಲು ನನಗೆ ಸಾಧಾರಣ ಆರು ತಿಂಗಳ ಕಾಲ ಹಿಡಿಯಿತು.

ಯಾವ ಕೆಲಸವನ್ನೇ ಕೈಕೊಂಡರೂ ನನಗೆ ಮನಸ್ಸಿನ ಸ್ವಾಸ್ಥ್ಯವೇ ಇರುತ್ತಿರಲಿಲ್ಲ. ಹೀಗಾಗಿ ನಾನು ಆಗಿಂದಾಗ್ಗೆ ಲಂಡನ್ನಿಗೆ ಹೋಗಿ ಟ್ರೇಡಲ್ಸನ ಮನೆಯಲ್ಲಿ ಒಂದೆರಡು ದಿನ ಇದ್ದು ಬರುತ್ತಿದ್ದೆನು. ನನಗೆ ಬರುವ ಪತ್ರಗಳೆಲ್ಲಾ ಟ್ರೇಡಲ್ಸನ ಮುಖಾಂತರವೇ ಬರುವಂತೆ ನನ್ನ ವಿಳಾಸವನ್ನು ಪ್ರಕಟಿಸಿದ್ದೆನು. ಇದಕ್ಕಾಗಿಯೇ ನನ್ನ ಹೆಸರು, ವಿಳಾಸಗಳನ್ನೊಳಗೊಂಡು ಒಂದು ಬೋರ್ಡನ್ನು ಟ್ರೇಡಲ್ಸನ ಆಫೀಸು ಬೋರ್ಡು ಜತೆಯಲ್ಲೇ ತೂಗಾಡಿಸಿದ್ದೆನು. ನನಗೆ ಅನೇಕ ಕಡೆಗಳಿಂದ ಪತ್ರಗಳು ಬರುತ್ತಿದ್ದುವು. ಆಂಗ್ಲ ಭಾಷೆಯ ಪ್ರಚಾರದಲ್ಲಿದ್ದ ಎಲ್ಲಾ ದೇಶಗಳಿಂದಲೂ ಪತ್ರಗಳು ಬರುತ್ತಿದ್ದವು. ನನ್ನ ಪ್ರಶಂಸೆ, ಕಾದಂಬರಿಗಳನ್ನು ಕುರಿತು ವಿಮರ್ಶೆ, ಅಪೂರ್ವಕ್ಕೊಮ್ಮೆ ನಾನೊಬ್ಬ ವಕೀಲನೆಂದು ಕಾನೂನು ಕಾಯಿದೆಗಳಿಗೆ ಸಂಬಂಧಪಟ್ಟೂ ಆ ಪತ್ರಗಳಿರುತ್ತಿದ್ದುವು. ಬ್ರಿಟಿಷ್ ಚಕ್ರಾಧಿಪತ್ಯದ ವಿದೇಶಾಂಗದ ಕಾರ್ಯದರ್ಶಿ ಸಂಬಳ ಪಡೆದು ಕೆಲಸ ಮಾಡುತ್ತಿರುವ ಕ್ರಮದಲ್ಲಿ ನಾನು ಈ ಎಲ್ಲಾ ದೇಶ ವಿದೇಶಗಳ ಪತ್ರಗಳಿಗೆ – ಸಂಬಳ ಪಡೆಯದೆ, ಉತ್ತರವನ್ನು ಕಳುಹಿಸುವ ಕೆಲಸ ಮಾಡುತ್ತಿದ್ದೆನು. ನಾನು ಹಿಂದೆ ವಕಾಲತ್ತು ಪಾಸಾಗಿದ್ದುದರಿಂದ, ವಕೀಲ ವೃತ್ತಿಯನ್ನು ಕುರಿತಾಗಿ ಬರುತ್ತಿದ್ದ ಪತ್ರಗಳಲ್ಲಿ ಕೆಲವು ಆಶ್ಚರ್ಯತರದವೂ ಇರುತ್ತಿದ್ದುವು. ನಾನು ಸ್ವಲ್ಪ ಪ್ರತಿಫಲ ತೆಗೆದುಕೊಂಡು ಬೇರೆಯವರು ನನ್ನ ಹೆಸರಿನಲ್ಲಿ ವಕಾಲತ್ತು ವೃತ್ತಿಯನ್ನು ನಡೆಸಲು ಎಡೆಸಿಗುವಂತೆ ನಾನು ಮಾಡಬೇಕೆಂದು ಪ್ರಾರ್ಥಿಸಿಯೂ ಪತ್ರಗಳು ಬಂದಿವೆ. ಈ ವಿಧದ ಪರಭಾರೆಯು, ಸರಕಾರವನ್ನು ವಂಚಿಸಿ, ಗುಪ್ತವಾಗಿ ನಡೆಯುತ್ತಿದ್ದುದಾಗಿಯೂ ನಾನು ಕೇಳಿದ್ದೇನೆ. ಅಂಥ ಪತ್ರಗಳಿಗೆ ವಿಶೇಷ ಉತ್ತರ ಕೊಡದೆ – ವಕಾಲತು ವೃತ್ತಿಯಲ್ಲೇ ಅಡಗಿರುವ ಅನ್ಯಾಯದ ಜತೆಗೆ ಈ ಒಂದು ಹೊಸ ಅನ್ಯಾಯವನ್ನೂ ಸೇರಿಸಿ ಸಮಾಜ ದ್ರೋಹ ಮಾಡಬಾರದೆಂದು ಮಾತ್ರ ಉತ್ತರವಿತ್ತದ್ದುಂಟು.

ಹೀಗೆ ನಾನು ಟ್ರೇಡಲ್ಸನ ಮನೆಗೆ ಹೋಗಿ ಬರುತ್ತಿದ್ದುದರಿಂದ ಟ್ರೇಡಲ್ಸನ ಸಂಸಾರವು ಹೇಗೆ ಸಾಗುತ್ತಿತ್ತೆಂದೂ ತಿಳಿಯಲನುಕೂಲವಾಯಿತು. ಟ್ರೇಡಲ್ಸನೂ ಅವನ ಪತ್ನಿಯೂ ಸದಾ ಸಂತೃಪ್ತಿಯಿಂದಿರುತ್ತಿದ್ದು, ದುಃಖದ ಅರಿವೇ ಅವರಿಗಿರಲಿಲ್ಲವೆಂಬಷ್ಟರ ಸಂತೋಷದಲ್ಲಿರುತ್ತಿದ್ದರು. ಅವರಿಗೆ ಸಾಹಿತ್ಯ, ಸಾಮಾನು, ಮನೆ, ಇತ್ಯಾದಿಗಳು – ನಿಜವಾಗಿಯೂ ಸಾಕಷ್ಟು ಇಲ್ಲದೇ ಇದ್ದರೂ – ಇಲ್ಲವೆಂಬ ಕೊರತೆಯ ಅರಿವೆ ಅವರಿಗೆ ಇರಲಿಲ್ಲ. ತಮಗೆ ಬೇಕಾದ ಸಾಮಾನುಗಳನ್ನು ಅಂಗಡಿಗಳಲ್ಲಿ ನೋಡಿ, ಅವುಗಳಿಗೆ ಕ್ರಯಮಾಡಿ, ಅಷ್ಟಕ್ಕೆ ನಿಲ್ಲಿಸಿ, ತಾವು ಅವುಗಳನ್ನು ಪಡೆದಷ್ಟೇ ತೃಪ್ತಿ, ಸಂತೋಷದಿಂದಿರುತ್ತಿದ್ದರು. ತನ್ನ ಸಂಪಾದನೆ ಹೆಚ್ಚಿದಾಗ ಸೋಫಿಗೆ ಒಂದು ಚಿನ್ನದ ಸರವನ್ನು ಕೊಡುವುದಾಗಿ ಹೇಳಿ ಟ್ರೇಡಲ್ಸನು ಸೋಫಿಯನ್ನು ಕರೆದುಕೊಂಡು ಹೋಗಿ ಅಂಗಡಿಯಲ್ಲಿ ಚಿನ್ನದ ಸರ ತೋರಿಸಿ, ಕ್ರಯಮಾಡಿ, ಸಂತೋಷಪಡುವುದೂ ಹಾಗೆಯೇ ಗಂಡನ ಸಂಪಾದನೆ ಹೆಚ್ಚಿದಾಗ ತಾನು ಟ್ರೇಡಲ್ಸನಿಗೊಂದು ರಿಸ್ಟು ವಾಚ್ ಕೊಡುವುದಾಗಿ ಸೋಫಿಯು ಹೇಳಿ, ಅಂಗಡಿಯಲ್ಲಿ ವಾಚನ್ನು ನೋಡಿ ಸಂತೋಷಿಸುವುದೂ ಅವರ ಪದ್ಧತಿಯಾಗಿತ್ತು. ಇವರ ಮನೆಯಲ್ಲಿ ಸಾಕಷ್ಟು ಸ್ಥಳಾನುಕೂಲವಿರಲಿಲ್ಲ. ಆದರೆ ಅವರಿಗೆ ಅದನ್ನು ಕುರಿತು ದುಃಖವೂ ಇರಲಿಲ್ಲ. ಅವರು ಯಾರದರೂ ಕಟ್ಟಿಸುತ್ತಿದ್ದ ಹೊಸ ಮನೆಗಳಿದ್ದಲ್ಲಿಗೆ ಉದ್ದೇಶಪೂರ್ವಕವಾಗಿ ಹೋಗಿ ನೋಡಿ, ಅವುಗಳೊಳಗಣ ಕೋಣೆಗಳನ್ನು ತಾವು ಹೇಗೆಲ್ಲ ಉಪಯೋಗಿಸಬಹುದೆಂದು ತಂತಮ್ಮೊಳಗೆ ಮಾತಾಡಿ ಸಂತೋಷಪಟ್ಟುಕೊಳ್ಳುತ್ತಿದ್ದರು. ಅವರು ನಾಟಕಗಳಿಗೆ ಹೋದರೆ ಕೆಳತರಗತಿಯ ಆಸನಗಳಲ್ಲಿ ಕುಳಿತು ನೋಡಿ, ಮೇಲ್ತರಗತಿಯಲ್ಲಿ ತಾವು ಕುಳಿತು ನೋಡಿದ್ದಾಗಿಯೇ ಕಲ್ಪಿಸಿಕೊಂಡು ಸಂತೋಷಿಸುತ್ತಿದ್ದರು. ಅವರು ನಾಟಕಗಳಿಗೆ ಹೋದರೆ ಸ್ವಸ್ತಿವಾಚನದಿಂದ ಹಿಡಿದು ಮಂಗಳಪದ ಮುಗಿದು ಪರದೆಯು ಪೂರ್ಣ ಬೀಳುವವರೆಗೆ ನೋಡಿಯೇ ಅಲ್ಲಿಂದ ಹೊರಡುತ್ತಿದ್ದರು.

ಹೀಗೆ ನಾನು ಟ್ರೇಡಲ್ಸನ ಮನೆಗೆ ಹೋಗಿ ಬರುತ್ತಿದ್ದ ದಿನಗಳಲ್ಲಿ ಒಂದು ದಿನ ನನಗೆ ಮಿ. ಕ್ರೀಕಲರಿಂದ ಒಂದು ಪತ್ರ ಬಂತು. ಈ ಪತ್ರದ ಸಂಗತಿಯನ್ನು ಟ್ರೇಡಲ್ಸನೊಡನೆ ಪ್ರಸ್ತಾಪಿಸಿದಾಗ ಅವನು ವಿಚಾರಿಸಿದನು –

“ಯಾವ ಕ್ರೀಕಲ್?” “ನಮ್ಮ ಹಳೇ `ರೇಸ್ಕಲ್’ – ಸೆಲಂ ಶಾಲೆಯ ಮೇನೇಜರ್!” ಎಂದಂದೆ. ನಾನು ಕ್ರೀಕಲರನ್ನು ಎಂದೂ ಮರ್ಯಾದೆಯಿಂದ ಗ್ರಹಿಸಿದುದೇ ಇಲ್ಲ. “ಈಗಲೂ ಅವರು ಶಾಲಾ ಮೇನೇಜರರಾಗಿರುವರೇನು?” ಎಂದು ಟ್ರೇಡಲ್ಸನು ವಿಚಾರಿಸಿದನು. “ಇಲ್ಲ, ಈಗ ಅವನು ಜೈಲು ಮೇಜಿಸ್ಟ್ರೇಟರನಾಗಿದ್ದಾನೆ. ಯಾವ ಕುತಂತ್ರದಿಂದ ಅವನು ಆ ಪದವಿಗೆ ತಲುಪಿದನೆಂದು ನಾನರಿಯೆ.” “ಆಶ್ಚರ್ಯವೇ ಸರಿ” ಅಂದನು ಟ್ರೇಡಲ್ಸ್. “ಅಷ್ಟು ಮಾತ್ರವಲ್ಲ – ಅವನ ಸುಪರ್ದಿನಲ್ಲಿರುವ ಜೈಲಿನಲ್ಲಿ ಅವರದೊಂದು ನೂತನ `ಕ್ರೀಕಲ್ ಸಿಸ್ಟಂ’ನ್ನು (ಕ್ರಮವನ್ನು) ಜಾರಿಗೆ ತಂದಿರುತ್ತಾನಂತೆ. ಈ `ಸಿಸ್ಟಂ’ನಲ್ಲಿ ಕೈದಿಗಳು ಕ್ರಮೇಣವಾಗಿ ಸಮಾಜದಲ್ಲಿ ಪುನಃ ಮಿಳಿತವಾಗಿ, ಸಮಾಜದ ಗಣನೀಯ ವ್ಯಕ್ತಿಗಳೇ ಆಗುವಷ್ಟರ ತರಬೇತು ಕೊಡಲಾಗುವುದಂತೆ. ಇದಕ್ಕೆ ಬೇಕಾದ ಅನುಕೂಲಗಳನ್ನು ಸರಕಾರವು ಆ ಜೈಲು ಮೆಜಿಸ್ಟ್ರೇಟರಿಗೆ ಒದಗಿಸುತ್ತದೆ.” “ಕ್ರೀಕಲ್ ಸಿಸ್ಟಂ’ನ್ನು ಪತ್ರದಲ್ಲಿ ವಿವರಿಸಿರುವರೇನು?” ಎಂದು ಟ್ರೇಡಲ್ಸನು ಪ್ರಶ್ನಿಸಿದನು. “ಸ್ವಲ್ಪ ವಿವರವಾಗಿಯೇ ಬರೆದಿರುವರು. ಕ್ರೀಕಲ್ ಸಿಸ್ಟಂನ ರೂಪ ರೇಖೆಗಳು ಸಾಧಾರಣ ಈ ರೀತಿ ಇವೆ – “ಆಹಾರ ವಿಹಾರಾದಿ ಆನುಕೂಲ್ಯಗಳನ್ನು ಕೈದಿಗಳಿಗೆ ಸಮೃದ್ಧವಾಗಿ ಒದಗಿಸಿ, ವೈಯ್ಯಕ್ತಿಕ ಯೋಗ್ಯತೆಗೆ ತಕ್ಕಂಥ ವೃತ್ತಿಗಳನ್ನು ಕಲಿಸಿ, ಈ ಎಲ್ಲಾ ಸ್ಥಿತಿಯಲ್ಲೂ ಕೈದಿಗಳು ಒಬ್ಬರೊಂದಿಗೆ ಇನ್ನೊಬ್ಬರು ಸಂಪರ್ಕ ಬೆಳೆಸದಂತೆ ಅವರನ್ನು ಪ್ರತ್ಯಪ್ರತ್ಯೇಕ ಇಟ್ಟು, ಅವರ ಮನಸ್ಸಿನ ಸಂಸ್ಕಾರ, ಪರಿವರ್ತನೆಗಳಿಗಾಗಿ ಧರ್ಮಸಂಬಂಧವಾದ ಬೋಧನೆಗಳನ್ನು ಕೊಡುವರಂತೆ. ಈ ವಿಧದ ಏಕಾಂತ ಜೀವನ ಮತ್ತು ಧರ್ಮ ಬೋಧನೆಗಳಿಂದ ಕೈದಿಗಳು ಕ್ರಮೇಣವಾಗಿ ಪ್ರಾಪಂಚಿಕ ವಿಷಯಗಳನ್ನೆಲ್ಲಾ ಮರೆಯುತ್ತಾ ಬಂದು ಕೊನೆಗೆ ಅವರ ಮನಸ್ಸು ಕೇವಲ ಶೂನ್ಯ ಪರಿಸ್ಥಿತಿಗೆ ತಲಪುತ್ತದಂತೆ. ಈ ಶೂನ್ಯ ಸ್ಥಿತಿಯ ಮನಸ್ಸೇ ಮುಂದಿನ ಭಾವನೆ – ವಿಷಯಗಳನ್ನು ಒಳಗೊಳ್ಳತಕ್ಕದ್ದಿದೆ, ಅರ್ಥಾತ್ ಶುಭ್ರವಾದ ಪರದೆಯ ಮೇಲೆ ಚಿತ್ರವನ್ನು ಬರೆಯುವಂತೆ, ಈ ಶೂನ್ಯ ಪರಿಸ್ಥಿತಿಯ ಮನಸ್ಸಿನ ಮೇಲೆ ಉತ್ತಮ ಸಮಾಜಧರ್ಮ, ಭವ್ಯವಾದ ಮತಬೋಧೆ ಮೊದಲಾದುವುಗಳನ್ನು ಬೆಳೆಸಿ ಅವರನ್ನು ಪುನೀತರನ್ನಾಗಿ ಮಾಡುವರಂತೆ” ಎಂದು ನಾನು ತಿಳಿಸಿ, ಮಿ. ಕ್ರೀಕಲರು ಟ್ರೇಡಲ್ಸನೂ ಸಹ ನನ್ನ ಜತೆಯಲ್ಲಿ ಅವರ `ಸಿಸ್ಟಂ’ನ್ನು ಪರೀಕ್ಷಿಸಲು ಬರಬೇಕೆಂದು ಕೇಳಿಕೊಂಡ ವಿಷಯವನ್ನೂ ತಿಳಿಸಿದೆನು.

ನಾನು ಮಿ. ಕ್ರೀಕಲರಿಗೆ ಒಂದು ಪತ್ರವನ್ನು ಬರೆದು, ಇಂಥಾ ದಿನದಲ್ಲಿ ಟ್ರೇಡಲ್ಸನ ಸಮೇತವಾಗಿ ಬರುವೆನೆಂದು ತಿಳಿಸಿದೆನು ಮತ್ತು ಆ ಗೊತ್ತು ಮಾಡಿದ ದಿನ ನಾವಿಬ್ಬರೂ ಮಿ. ಕ್ರೀಕಲರ ಜೈಲಿಗೆ ಹೋದೆವು.

ಜೈಲಿನಲ್ಲಿ ಮಿ. ಕ್ರೀಕಲರ ಜತೆಗೆ ಇನ್ನೂ ನಾಲ್ಕು ಮಂದಿ ಜೈಲ್ ಮೆಜಿಸ್ಟ್ರೇಟರಿದ್ದರು. ಈ ಐವರ ಕಮಿಟಿಯಿಂದ ಆ ಜೈಲು ನಡೆಯುತ್ತಿತ್ತು. ನಾವು ಜೈಲು ಕಂಪೌಂಡಿಗೆ ತಲುಪಿದ ಕೂಡಲೇ ಮಿ. ಕ್ರೀಕಲರು ನಮ್ಮನ್ನು ಎದುರುಗೊಂಡು ಒಳಗೆ ಕರೆದುಕೊಂಡು ಹೋದರು. ಅವರ ಜತೆಯಲ್ಲಿ ಇತರ ನಾಲ್ವರು ಮೆಜಿಸ್ಟ್ರೇಟರೂ ಪೋಲೀಸಿನವರೂ ಇದ್ದರು. ಮಿ. ಕ್ರೀಕಲರು ನಮ್ಮೊಡನೆ ಮಾತಾಡುವಾಗ ಹಿಂದೆ ಅವರು ನಮ್ಮ ಸೆಲಂ ಶಾಲೆಯ ಮೇನೇಜರರಾಗಿದ್ದ ಕಾಲದಲ್ಲಿ ಅವರು ತಮ್ಮ ಕೆಳಗಿನವರೊಡನೆ ವರ್ತಿಸುತ್ತಿದ್ದಷ್ಟೇ ಸಲಿಗೆಯಿಂದ ನಮ್ಮೊಡನೆ ಇಂದು ವರ್ತಿಸುತ್ತಾ ಟ್ರೇಡಲ್ಸನಿಗೂ ನನಗೂ ಇಂದೇನಾದರೂ ಒಂದು ಗಣ್ಯ ಸ್ಥಾನ ಸಮಾಜದಲ್ಲಿ ಇದ್ದರೆ ಆ ಸ್ಥಾನಕ್ಕೆ ಮುಖ್ಯ ಕಾರಣರು ತಾವೇ ಎಂದು ಅವರ ಜತೆಯಲ್ಲೂ ಹಿಂದೆಯೂ ಇದ್ದವರಿಗೆಲ್ಲ ತಿಳಿಯುವಂತೆ ಮಾತಾಡುತ್ತಿದ್ದರು. ಲಂಚದಿಂದಲೂ ವಂಚನೆಯಿಂದಲೂ ಎಳೆ ಬಾಲಕರ ಮನಸ್ಸನ್ನು ಮುರಿದು, ಶಾಲೆಯ ನೆಪದಿಂದ ಸಮಾಜದಿಂದ ಹಣ ಸಂಪಾದಿಸಿ ಬದುಕುತ್ತಿದ್ದ ಮಿ. ಕ್ರೀಕಲರು ಅದೇ ಸಮಾಜದ ಅಜಾಗ್ರತೆ, ಆಲಸ್ಯದಿಂದ ಇಂದು ತಮ್ಮ ಯೋಗ್ಯತೆಗೆ ಮೀರಿದ ಅಧಿಕಾರವನ್ನು ಪಡೆದು ಅಪರಾಧಿಗಳ ಮೇಲೆ ತಮ್ಮ ಕ್ರೌರ್ಯ, ಶಿಸ್ತು, ಮೊದಲಾದ ಅಮಾನುಷ ಗುಣಗಳನ್ನು ಕಾರ್ಯರೂಪದಲ್ಲಿ ಪ್ರಯೋಗಿಸಿ, ತಮ್ಮ ಜೀವನವನ್ನು ಅರ್ಹತೆಗೆ ಮೀರಿದ ಘನಸ್ತಿಕೆಯಿಂದಲೂ ಸುಖದಿಂದಲೂ ಸಾಗಿಸುತ್ತಿದ್ದರು.

ಜೈಲು ಕಟ್ಟಡ ಬಹು ದೊಡ್ಡದೂ ಬಲವಾದದ್ದೂ ವಿಶಾಲವಾದದ್ದೂ ಆಗಿತ್ತು. ಅಲ್ಲಿನ ವ್ಯವಸ್ಥೆಗಳೆಲ್ಲ ಬಹು ಜನ ಪೋಲೀಸ್ ಪೇದೆ, ಗುಮಾಸ್ತರುಗಳಿಂದ ನಡೆಸಲಾಗುತ್ತಿದ್ದುವು. ಕೈದಿಗಳಿಗೆ ಕೊಡುತ್ತಿದ್ದ ಆಹಾರವೆಲ್ಲ ಉತ್ತಮತರದ್ದಾಗಿದ್ದು, ಕ್ಲುಪ್ತ ಕಾಲಗಳಲ್ಲಿ ಬೇಕಾದಷ್ಟು ಕೊಡುತ್ತಿದ್ದರು. ಅನೇಕ ಜನ ಕೈದಿಗಳಿಗೆ ಇಲ್ಲಿ ಯಾಂತ್ರಿಕ ಪರಿಷ್ಕಾರತೆಯಿಂದ ಆಹಾರ, ಮತ್ತು ಇತರ ಸೌಕರ್ಯಗಳನ್ನು ಒದಗಿಸುತ್ತಿದ್ದರು. ಪ್ರತಿ ಕೈದಿಯು ಒಬ್ಬಂಟಿಗನಾಗಿ, ಪ್ರತ್ಯಪ್ರತ್ಯೇಕ ಕೋಣೆಗಳಲ್ಲಿ ಇರಬೇಕಾದ ಒಂದು ವಿಷಯ ಹೊರತಾಗಿ ಇತರ ಎಲ್ಲಾ ಆನುಕೂಲ್ಯಗಳೂ ಸರ್ವಸಾಧಾರಣದ ಜನರಿಗೆ ಜೈಲಿನ ಹೊರಗಡೆ ದೊರಕುತ್ತಿರುವುದಕ್ಕಿಂತ ಹೆಚ್ಚಿನವೂ ಉತ್ತಮವೂ ಆಗಿ ದೊರಕುತ್ತಿದ್ದುವು. ಮನಸ್ಸು ಸ್ವಚ್ಛವಾಗಿ ಶೂನ್ಯತೆಗೆ ತಲಪುವ ವಿಧಾನವನ್ನು ಮಿ. ಕ್ರೀಕಲರು ಸ್ವತಃ ನಮಗಿಬ್ಬರಿಗೂ ವಿವರಿಸಿ ಹೇಳಿದರು.

ವೃದ್ಧರಿಗೂ ಬಾಲಕರಿಗೂ ಅನಾಥರಾಗಿರುವ ಸಂದರ್ಭಗಳಲ್ಲಿ ಜೀವನದ, ಅಥವಾ ವೃತ್ತಿಯನ್ನು ಕುರಿತಾದ ಏರ್ಪಾಡುಗಳನ್ನು ಮಾಡಬೇಕೆಂದು ಸರಕಾರದೊಡನೆ ಯಾರಾದರೂ ವಿನಂತಿಸಿಕೊಂಡರೆ, ಸರಕಾರದ ಬೊಕ್ಕಸದಲ್ಲಿ ಹಣವಿಲ್ಲವೆನ್ನುವ ಸರಕಾರವೇ ಈ ಜೈಲಿನ `ಸಿಸ್ಟಂ’ಗಳಿಗಾಗಿ ಎಷ್ಟೋ ಖರ್ಚು ಮಾಡಲು ತಯಾರಿರುವುದನ್ನು ನೋಡಿದರೆ ಅಶ್ಚರ್ಯವಾಗುವುದು ಈ `ಸಿಸ್ಟಂ’ನ ಮುಖ್ಯ ಫಲವೇನೆಂದರೆ ಅಪರಾಧಿಗಳಿಗೆ ಅವರ ಅರ್ಹತೆ ಮತ್ತು ಅಗತ್ಯಗಳಿಗೆ ಮೀರಿದ ಸುಖವೂ ಸರಕಾರಕ್ಕೆ ಅನಾವಶ್ಯಕವಾದ ಅಪಾರ ಹಣದ ಖರ್ಚೂ ಎಂದು ತಿಳಿಯಬಹುದು.

ಇಲ್ಲಿ ಮೇಜಿಸ್ಟ್ರೇಟರೆಲ್ಲ ಅಪರಾಧಿಗಳ (ಕೈದಿಗಳ) ಪೈಕಿ ನಂ. ಇಪ್ಪತ್ತೇಳನೇ ಮತ್ತು ನಂ. ಇಪ್ಪತ್ತೆಂಟನೇ ಕೈದಿಗಳು ಅತ್ಯಂತ ಉತ್ತಮರೆಂದು ಹೇಳುತ್ತಿದ್ದರು. ನಂ. ಇಪ್ಪತ್ತೇಳನ್ನು ಮಿ. ಕ್ರೀಕಲ್ ಹೊಗಳಿದೊಡನೆ ನಂ. ಇಪ್ಪತ್ತೆಂಟನ್ನು ಇನ್ನೊಬ್ಬ ಮೆಜಿಸ್ಟ್ರೇಟರು ಹೊಗಳುತ್ತಿದ್ದರು. ಇಪ್ಪತ್ತೇಳನೆಯವನು ಇಲ್ಲದಿರುತ್ತಿದರೆ ಇಪ್ಪತ್ತೆಂಟನೆಯವನು ಅಗ್ರ ಮನ್ನಣೆಯನ್ನು ಪಡೆಯುತ್ತಿದ್ದನೆಂಬುದರಲ್ಲಿ ಸಂಶಯವಿರಲಿಲ್ಲ. ಈ ಸಂಸ್ಕಾರ ಹೊಂದುತ್ತಿದ್ದ ಗಣನೀಯ ಕೈದಿಗಳನ್ನು ತೋರಿಸಲು ಮಿ. ಕ್ರೀಕಲ್ ನಮ್ಮನ್ನು ಅವರವರ ಕೋಣೆ ಜಗುಲಿಗೆ ಕರೆದುಕೊಂಡು ಹೋದರು.

ಒಂದು ಕೋಣೆಯ ಎದುರು ತಲುಪಿದೊಡನೆ ಮಿ. ಕ್ರೀಕಲರು – “ಇದು ನಂ. ಇಪ್ಪತ್ತೇಳನೆಯವನ ಕೋಣೆ” ಅಂದರು. ಮಿ. ಕ್ರೀಕಲರು ಬಾಗಿಲ ಸೆರೆಯಿಂದ ಒಳಗಿನ ಕೈದಿಯನ್ನು ನೋಡಿ, ಅನಂತರ ಈಚೆಗೆ ಬಂದು ನಾನು ಒಳಗೆ ನೋಡುವಂತೆ ಹೇಳಿ, ಅಲ್ಲಿ ನೆರೆದಿದ್ದವರೊಡನೆ ಅಂದರು – “ದೇವರ ಸ್ತೋತ್ರವನ್ನು ಪಾರಾಯಣ ಮಾಡುತ್ತಿದ್ದಾನೆ!” ಎಂದು.

ಐದಾರು ತಲೆಗಳೂ ಅದೇ ಬಾಗಿಲ ಸೆರೆಯಿಂದ ಒಳಗೆ ನೋಡಿ, ಒಳಗಿದ್ದವನ ದರ್ಶನ ಮಾಡಿಕೊಂಡು, ಬಹು ದೊಡ್ಡ ಯೋಗಿಯ ದರ್ಶನ ಮಾಡಿಕೊಂಡವರಂತೆ ಒಬ್ಬರನ್ನೊಬ್ಬರು ಗಂಭೀರವಾಗಿ ನೋಡಿಕೊಂಡರು. ಮಿ. ಕ್ರೀಕಲರು ಬಾಗಿಲು ತೆರೆಸಿ ಕೈದಿಯನ್ನು ಹೊರಗೆ ಬರ ಹೇಳಿದರು. ಆಗ ಬಹು ನಯ ಭಯಗಳಿಂದ, ತನ್ನ ಮೈ ಕೈ ಬಳುಕಿಸಿ, ಡೊಂಕಿಸಿಕೊಂಡು ಉರೆಯನೇ ನಮ್ಮೆದುರು ಬಂದು ನಿಂತನು. ಅವನು ಮೊದಲು ಮಿ. ಕ್ರೀಕಲರಿಗೆ ನಮಸ್ಕಾರ ಮಾಡಿ, ಅನಂತರ –

“ನಮಸ್ಕಾರ ಮಿ. ಕಾಪರ್ಫೀಲ್ಡ್, ನಮಸ್ಕಾರ ಮಿ. ಟ್ರೇಡಲ್ಸ್” ಎಂದಂದನು. ಬಂದಿದ್ದವರ ಹತ್ತಿರ ಅವನು ನಿಂತು ಮಾತಾಡಿದ ವಿನಯ, ವಿನೀತತೆಯನ್ನು ಕಂಡು ಅವನಿಗೆ ಕೊಟ್ಟಿದ್ದ ಅಗ್ರಸ್ಥಾನದ ಯೋಗ್ಯತೆಯನ್ನು ಅಲ್ಲಿದ್ದವರೆಲ್ಲ ಕೊಂಡಾಡಿದರು. “ಹೇಗಿದ್ದೀಯಾ ನಂ. ಇಪ್ಪತ್ತೇಳು?” ಎಂದು ಕೇಳಿದನು ಮಿ. ಕ್ರೀಕಲ್. “ಆರೋಗ್ಯವಾಗಿದ್ದೇನೆ, ಸರ್. ದೇಹಾರೋಗ್ಯಕ್ಕಿಂತಲೂ ನನ್ನ ಮಾನಸಿಕ ಆರೋಗ್ಯ ಹೆಚ್ಚಿದೆ, ಸರ್. ತುಂಬಾ ಪಶ್ಚಾತ್ತಾಪಡುತ್ತಾ ವಿನೀತನಾಗಿದ್ದೇನೆ, ಸರ್” ಎಂದನು ಉರೆಯ. “ನಿನ್ನೆಯ ಆಹಾರ ಚೆನ್ನಾಗಿತ್ತೇ, ಇಪ್ಪತೇಳು?” “ಮೊನ್ನೆಯದಕ್ಕಿಂತ ಚೆನ್ನಾಗಿತ್ತು, ಸರ್. ಮೊನ್ನೆ ಸರಿಯಾಗಿ ಬೆಂದಿರಲಿಲ್ಲ ಮಾತ್ರ. ಆದರೆ ಸರ್, ಈ ವಿಧದ ಅಸೌಕರ್ಯಗಳಿಂದ ನಮ್ಮ ಮನೋನಿಗ್ರಹ ಕಾರ್ಯವು ಸುಲಭವಾಗಿ ಆಗುತ್ತದೆ. ನಾವು ಈ ರೀತಿಯ ಸಂದರ್ಭಗಳನ್ನು ನಮ್ಮ ಉತ್ತಮ ಪ್ರಯೋಜನಕ್ಕಾಗಿ ಪರಿವರ್ತಿಸಿಕೊಳ್ಳುತ್ತೇವೆ, ಸರ್. ನನಗೆ ಎಲ್ಲವೂ ಸುಖವೆ – ವಿನಮ್ರ ಸ್ವಭಾವ, ಪಶ್ಚಾತ್ತಾಪಯುತ ಮನಸ್ಸು, ದೈವಭಕ್ತಿ – ಈ ಮೂರೂ ಲಭಿಸಿದವರಿಗೆ ಮತ್ತೇನು ತಾನೆ ಬೇಕು, ಸರ್” ಎಂದು ಹೇಳಿ ದೈವಿಕ ಒಲುಮೆಯನ್ನು ಪಡೆದಿದ್ದು, ಭೂಭಾಗದವರಲ್ಲಿ ವಿಶ್ವಾಸವಿಲ್ಲದಿದ್ದವನಂತೆ, ಅಂತರಿಕ್ಷವನ್ನೇ ನೋಡಿದನು.

ಇಷ್ಟು ಹೊತ್ತಿನಲ್ಲಿ ನಂ. ಇಪ್ಪತ್ತೆಂಟನ್ನು ಕರೆ ತಂದರು. ಅವನು ಒಂದು ಪುಸ್ತಕವನ್ನು ಓದುತ್ತಾ ಬಂದನು. ನಮ್ಮನ್ನು ಕಂಡ ಕೂಡಲೇ “ಸರ್ ನಮಸ್ಕಾರ” ಎಂದಂದನು. ನಂ. ಇಪ್ಪತ್ತೆಂಟನ್ನು ಕಂಡು ನನಗೆ ಪರಮಾಶ್ಚರ್ಯವಾಯಿತು. ಅವನು ನನ್ನ ಪೂರ್ವ ಪರಿಚಿತ – ಗಂಭೀರತೆಯ ಮೂರ್ತಿ ಲಿಟ್ಮರನೇ ಆಗಿದ್ದನು! ಅವನ ಗಂಭೀರತೆ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಅವನ ಪುಸ್ತಕ, ನಿಲುವು, ಸ್ವರ, ಮಾತು ಎಲ್ಲವೂ ಅವನ ವಿನಯ, ಗಾಂಭೀರ್ಯಗಳನ್ನು ಪೋಷಿಸುತ್ತಿದ್ದುವು.

“ನಿನ್ನೆ ಕೊಕ್ಕೋ ಹೇಗಿತ್ತು ನಂಬರ್ ಇಪ್ಪತ್ತೆಂಟು?” ಎಂದು ಇನ್ನೊಬ್ಬ ಮೆಜಿಸ್ಟ್ರೇಟನು ಕೇಳಿದನು. “ಸರ್, ಚೆನ್ನಾಗಿತ್ತು – ಸಾಧ್ಯವಿದ್ದಷ್ಟು ಚೆನ್ನಾಗಿತ್ತು. ಹಾಲಿಗೆ ನೀರು ಬೆರೆಸಿದ್ದರೆಂಬುದು ಮಾತ್ರ ಚಿಕ್ಕ ಕೊರತೆ ಸರ್. ನೀರು ಬೆರೆಸದ ಹಾಲು ಇಡೀ ಲಂಡನ್ನಿನಲ್ಲೇ ಸಿಕ್ಕದಿರುವಾಗ ಯಾರನ್ನೂ ದೂರಿ ಪ್ರಯೋಜನವಿಲ್ಲ. ಕೊಕ್ಕೋ ಚೆನ್ನಾಗಿತ್ತು, ಸರ್” ಎಂದನು ಲಿಟ್ಮರ್. “ಏನಾದರೂ ಹೇಳಿಕೊಳ್ಳುವುದು ಇದೆಯೇ ನಂ, ಇಪ್ಪತ್ತೆಂಟು?” “ವಿಶೇಷವೇನೂ ಇಲ್ಲ ಸರ್. ಆದರೆ ಇಲ್ಲಿಗೆ ಬಂದು ನನ್ನ ಮನಸ್ಸು ಪರಿಶುದ್ಧವಾಗಿ, ನನಗೆ ವಿವೇಕ ಬಂದಿರುವುದರಿಂದ, ಕೇವಲ ನನ್ನ ಕರ್ತವ್ಯ ದೃಷ್ಟಿಯಿಂದ, ತಮ್ಮ ಅಪ್ಪಣೆ ಪಡೆದು, ಎರಡು ಮಾತು ಹೇಳಬೇಕೂಂತ ಕಾಣುತ್ತದೆ, ಸರ್” ಅಂದನು ಲಿಟ್ಮರ್. “ಧಾರಾಳವಾಗಿ ಹೇಳು” ಅಂದನು ಮೆಜಿಸ್ಟ್ರೇಟ್. “ಇಲ್ಲಿ, ತಮ್ಮ ಜೊತೆಯಲ್ಲಿ – ನನ್ನೆದುರಿಗೆ, ನನಗೆ ಪರಿಚಯವಿರುವ ಇಬ್ಬರು ಯುವಕರಿದ್ದಾರೆ. ಇಂಥವರ ಸಹವಾಸವೇ ನನ್ನ ಇಂದಿನ ಸ್ಥಿತಿಗೆ ಕಾರಣ. ಯುವಕನೊಬ್ಬನು ಒಬ್ಬಳು ಹುಡುಗಿಯನ್ನು ಜಾರಿಸಿಕೊಂಡು ಹೋಗುವಾಗ ಅನ್ಯಾಯವನ್ನು ತಡೆದು ನ್ಯಾಯ ಕಾಪಾಡಲು ನಾನು ಪ್ರಯತ್ನಿಸಿದ ಪ್ರಸಂಗದಲ್ಲಿ ಆ ಯುವಕನು ಕುತಂತ್ರದಿಂದ ನನ್ನನ್ನು ಸಿಕ್ಕಿಸಿ ತಾನು ತಪ್ಪಿಸಿಕೊಂಡಿರುವನು. ಆದರೆ ಈ ಎಲ್ಲಾ ಯುವಕರನ್ನೂ ಆ ವ್ಯಭಿಚಾರೀ ಹುಡುಗಿಯನ್ನೂ ನಾನು ಕ್ಷಮಿಸುತ್ತೇನೆ, ಸರ್. ಅಲ್ಲದೆ, ಇನು ಮುಂದಾದರೂ ಈ ಯುವಕರು ಇಂಥ ದುರ್ವರ್ತನೆಯಲ್ಲಿ ಪ್ರವೇಶಿಸದಿರಲಿ ಎಂದು ಅವರ ಹಿತಕ್ಕಾಗಿ ಎಚ್ಚರಿಸುತ್ತೇನೆ” ಅಂದನು ಲಿಟ್ಮರ್.

ಲಿಟ್ಮರನ ಗುಣಗಳನ್ನು ಕೊಂಡಾಡುತ್ತಾ ಪೋಲಿಸಿನವರು ಅವನನ್ನು ಅವನ ಕೋಣೆಗೆ ಕರೆದುಕೊಂಡು ಹೋದರು. “ನಂಬರ್ ಇಪ್ಪತ್ತೇಳು ನೀನೇನಾದರೂ ಹೇಳುವುದಿದೆಯೇ?” ಎಂದು ಮಿ. ಕ್ರೀಕಲನು ಕೇಳಿದನು. ಉರೆಯ ಇವರ ಮೆಚ್ಚಿನ ಕೈದಿಯಾಗಿದ್ದುದರಿಂದ ಅವನ ತೇಜಸ್ಸನ್ನು ಪ್ರಕಟಿಸುವುದಕ್ಕಾಗಿ ಈ ಪ್ರಶ್ನೆ ಹಾಕಿರಬೇಕೆಂದು ನಾನು ಊಹಿಸಿದೆನು. ಉರೆಯ ಹೇಳತೊಡಗಿದನು – “ನನ್ನ ತಾಯಿಗೆ ಪತ್ರ ಬರೆಯಲು ಅನುಮತಿ ಬೇಕು, ಸರ್.” “ಆಗಬಹುದು.ಮತ್ತೇನಾದರೂ ಇದೆಯೇ?” “ಸ್ವಲ್ಪ ಮಾತ್ರ ಹೇಳುವುದಿದೆ. ನಿಮ್ಮ ಜೊತೆಯಲ್ಲಿರುವವರ ಪೈಕಿ ಮಿ. ಕಾಪರ್ಫೀಲ್ಡರನ್ನು ನಾನು ಚೆನ್ನಾಗಿ ಬಲ್ಲೆ. ನಾನು ಅವರೆಲ್ಲರ ಮಧ್ಯದಲ್ಲಿ ಬೆಳೆದುಬಂದಾಗ – ಅಹಂಕಾರಿಗಳ ಮಧ್ಯೆ ವಿನೀತನಾಗಿದ್ದೆ; ಹಿಂಸಾತ್ಮಕ ಕಾಠಿಣ್ಯದ ಎದುರು ಕಷ್ಟಸಹಿಷ್ಣುತೆಯನ್ನು ಅಭ್ಯಸಿಸಿದೆ. ಮಿ. ಕಾಪಫೀಲ್ಡರು ಒಮ್ಮೆ ನನ್ನ ಕೆನ್ನೆಗೆ ಹೊಡೆದಾಗ ಪೆಟ್ಟನ್ನು ಉಜ್ಜಿಕೊಂಡು ವಿನಮ್ರನಾಗಿ ತಲೆಬಗ್ಗಿಸಿ ನಿಂತೆ….” (ಈ ಸಂದರ್ಭವನ್ನು ಅವನು ಹೇಳುವಾಗ ಒಂದು ಬಹು ದೈವಿಕ ಸಂದರ್ಭಕ್ಕೆ ತನ್ನ ಸಂದರ್ಭವನ್ನು ಹೋಲಿಸಿಕೊಳ್ಳಲು ಪ್ರಯತ್ನಿಸಿದನು. ಅವನು ಅಲ್ಲಿ ಅಂದಿರುವ ಭ್ರಷ್ಟ ವಚನಗಳನ್ನು ನಾನಿಲ್ಲಿ ಬರೆಯಲಾರೆ!)

“ಈ ರೀತಿಯಲ್ಲಿ ನನ್ನ ಆದರ್ಶ ಜೀವನವನ್ನು ನೋಡಿಯೂ ಅವರು ಯಾರೂ ಪಶ್ಚಾತ್ತಾಪಪಟ್ಟದ್ದಾಗಲೀ ಉತ್ತಮರಾದದ್ದಾಗಲೀ ನಾನು ಕಾಣಲಿಲ್ಲ. ಇಲ್ಲಿನ ವಾತಾವರಣದಲ್ಲಿ ಮನಸ್ಸು ಪರಿಶುದ್ಧವಾಗುತ್ತಾ ಮೃಗವು ಮನುಷ್ಯನಾಗಿ, ಮನುಷ್ಯನು ದೇವತೆಯಾಗುತ್ತಾನೆ. ಅಗತ್ಯವಿರುವವರೆಲ್ಲರೂ ಇಲ್ಲಿಗೆ ಬರಲಿ, ಮುಖ್ಯವಾಗಿ ಮಿ. ಮತ್ತು ಮಿಸ್ ವಿಕ್ಫೀಲ್ಡರೂ ಆ ಸಮುದಾಯವೇ ಇಲ್ಲಿಗೆ ಬರಲಿ, ಉದ್ಧಾರವಾಗಲಿ!” ಅಂದನು ಉರೆಯ ಅನಂತರ ಅವನನ್ನು ಅವನ ಕೋಣೆಗೆ ಕರೆದುಕೊಂಡು ಹೋದರು. ನಾವು ಅಲ್ಲಿಂದ ಹೊರಟೆವು. ನಮ್ಮನ್ನು ಹೆಬ್ಬಾಗಿಲವರೆಗೆ ಕಳುಹಿಸಿಕೊಡುವ ಗೌರವಕ್ಕಾಗಿ ಒಬ್ಬ ಪೋಲಿಸ್ ಗಾರ್ಡನನ್ನು ನಮ್ಮ ಹಿಂದೆ ಕಳುಹಿಸಿದ್ದರು. ದಾರಿಯಲ್ಲಿ ನಂಬರ್ ಇಪ್ಪತ್ತೇಳೂ ಮತ್ತು ಇಪ್ಪತ್ತೆಂಟನೆಯವರ ಅಪರಾಧಗಳೇನೆಂದು ವಿಚಾರಿಸಿದೆವು.

“ನಂ ಇಪ್ಪತ್ತೇಳು ‘ಬೇಂಕ್ ಆಫ್ ಇಂಗ್ಲೆಂಡಿ’ನಿಂದ ಫೋರ್ಜರಿ ಮಾಡಿ ಹಣ ತೆಗೆದು ಕೆಲವು ಗೃಹಸ್ಥರನ್ನು ಆ ಕೇಸಿನಲ್ಲಿ ಸಿಕ್ಕಿಸಿ ಹಾಕುವುದರಲ್ಲಿದ್ದನು. ಇಷ್ಟು ಹೇಳಿ, ಹಿಂತಿರುಗಿ ನೋಡಿ, (ಜೈಲು ನೌಕರರು ಸರಕಾರದ ಗುಟ್ಟನ್ನು ಪ್ರಚಾರ ಮಾಡುವರೆಂದು ಮಿ. ಕ್ರೀಕಲ್ಲನು ತಿಳಿಯಬಾರದೆಂದು) ಹತ್ತಿರ ಯಾರೂ ಇಲ್ಲವೆಂದು ನಿಶ್ಚಯ ಮಾಡಿಕೊಂಡು ನಂ. ಇಪ್ಪತ್ತೆಂಟನೆಯವನ ಕಥೆ ಹೇಳಿದನು.

“ನಂ. ಇಪ್ಪತ್ತೆಂಟು ಮಾಡಿದ್ದು ದರೋಡೆ. ಅವನು ತನ್ನ ಎಳೆ ಪ್ರಾಯದ ಯಜಮಾನನ ಇನ್ನೂರೈವತ್ತು ಪೌಂಡು ಹಣ ಕದ್ದು, ವೇಷಪಲ್ಲಟ ಮಾಡಿಕೊಂಡು ಅಮೆರಿಕಕ್ಕೆ ಓಡುವುದರಲ್ಲಿದ್ದನು. ಪೋಲೀಸಿನವರಿಗೆ ಇವನು ಸಿಕ್ಕದೆ ಹುಡುಕುತ್ತಿದ್ದಾಗ, ಸೌತ್ ಹೇಂಪ್ಟನ್ನಿನ ಒಬ್ಬ ಕುಳ್ಳಿ ಹೆಂಗುಸು ಇವನನ್ನು ಬಹು ಚಮತ್ಕಾರದಿಂದ ಹಿಡಿದುಕೊಟ್ಟಳು.” “ಆ ಕುಳ್ಳಿ ಹೆಸರೇನು? ಮೌಚರ್ ಎಂದೇನು?” ಎಂದು ನಾನು ಕೇಳಿದೆ. “ಹೌದು, ಅವಳ ಹೆಸರು ಮೌಚರ್. ಅವನನ್ನು ಅವಳು ಹಿಡಿದ ಕ್ರಮವು ಬಹು ಚಮತ್ಕಾರವಾದದ್ದು. ಅವನ ಹತ್ತಿರ ಅವಳು ಕಾದಾಡಿದ್ದರೆ ಅವಳು ಸೋಲಲೇ ಬೇಕಾಗಿತ್ತು. ಅದಕ್ಕೆ ಅವಳು ಮಾಡಿದ ಉಪಾಯ ಇಷ್ಟೇ. ಅವನನ್ನು ಗುರುತಿಸಿದ ಕೂಡಲೇ ಅವಳು ಅವನ ಕಾಲಸೆರೆಯಲ್ಲಿ ನುಗ್ಗಿ, ಅವನನ್ನು ನೆಲಕ್ಕೆ ಮಗುಚಿದಳು. ಹಾಗೆ ಬಿದ್ದವನನ್ನು ತನ್ನ ಕೈಕಾಲು ಹಲ್ಲುಗಳಿಂದ ಹಿಡಿದು, ಪೋಲಿಸರೇ ಬಂದು “ಬಿಡು” ಎಂದಾಗಲೂ ಬಿಡದೆ ಹಿಡಿದಿದ್ದಳು. ಈ ಪ್ರಯತ್ನದಿಂದ ಅವಳಿಗೆ ತುಂಬಾ ಪೆಟ್ಟಾಗಿದ್ದರೂ ಅವರಿಬ್ಬರನ್ನೂ ಒಬ್ಬನೇ ಮನುಷ್ಯನನ್ನು ಹೊತ್ತಂತೆ ನಾವು ಪೋಲೀಸ್ ಸ್ಟೇಷನ್ನಿಗೆ ಹೊತ್ತುಕೊಂಡು ಹೋದಮೇಲೆ ಅವನನ್ನು ಬಿಟ್ಟಳು. ಕೊನೆಗೆ ಅವಳು ಕೋರ್ಟಿನಲ್ಲಿ ಸಾಕ್ಷಿಯನ್ನು ಸಹ ಒಂದು ಕುರ್ಚಿಯ ಮೇಲೆ ನಿಂತುಕೊಂಡು ಹೇಳಿ ಅವನಿಗೆ ಶಿಕ್ಷೆ ಮಾಡಿಸಿದಳು” ಎಂದನು ಗಾರ್ಡನು.

ಇಷ್ಟರಲ್ಲಿ ನಾವು ಹೆಬ್ಬಾಗಿಲಿಗೆ ಬಂದೆವು, ಗಾರ್ಡನು ಹಿಂದೆ ಹೋದನು. ನಾವು ಅಲ್ಲಿ ನೋಡಬೇಕಾದುದನ್ನೆಲ್ಲ ನೋಡಿದ್ದಾಯಿತು. ಆದರೆ, ಹೇಳಬೇಕೆಂದು ಮನಸ್ಸಿಗೆ ತೋರಿದ್ದನ್ನು ಆ ಬುದ್ಧಿಯಿಲ್ಲದಿದ್ದ ಮಹಾ ಘನವಂತ ಸ್ಥಾನದ ಮಿ. ಕ್ರೀಕಲನೊಡನೆ ಹೇಳಿದರೆ ಪ್ರಯೋಜನವಿಲ್ಲವೆಂದು ಸುಮ್ಮನೆ ಬಂದಿದ್ದೆವು. ಆ ಮೂರ್ಖ ಎಂದೂ ಉತ್ತಮನಾಗತಕ್ಕವನಲ್ಲ. ಈ ಜೈಲಿನ ಪರಿಸ್ಥಿತಿಗೆ ತಕ್ಕದಾಗಿ ನಟಿಸಿ ವಂಚಿಸಬಲ್ಲ ಮಹಾ ನಟನೇ ಅವನು. ಬುದ್ಧಿಯಿಲ್ಲದ ಮಿ. ಕ್ರೀಕಲನನ್ನು ವಂಚಿಸಿ, ಜೈಲಿನಲ್ಲಿ ಅಭ್ಯಾಸ ಮಾಡುವ ಇಂದಿನ ಹೊಸ ನಾಟಕೀಯ ವಂಚನೆಯನ್ನು ಈ ಕೈದಿಗಳು, ಜೈಲಿನಿಂದ ಬಿಡುಗಡೆ ಹೊಂದಿದಾಗ, ತಮ್ಮ ಪೂರ್ವ ವೃತ್ತಿಗಳನ್ನು ಅವಲಂಬಿಸಿ ಪ್ರಯೋಗಿಸಲಿದ್ದಾರೆ.

ನಾವು ನಡೆಯುತ್ತಾ ಸಾಗುತ್ತಿದ್ದಾಗ ನಾನಂದೆ, ಟ್ರೇಡಲ್ಸನೊಡನೆ – “ಆ ಮೂರ್ಖರನ್ನು ಅವರ ದಾರಿಯಲ್ಲೇ ಮುಂದರಿಸಲು ಬಿಟ್ಟಿದ್ದರೆ ಅವರ ಪಾಪವೇ ಅವರ ನಾಶವನ್ನು ಶೀಘ್ರದಲ್ಲೇ ತರುತ್ತಿತ್ತು” ಎಂದು. “ನನಗೂ ಹಾಗೆಯೇ ತೋರುತ್ತದೆ” ಎಂದುತ್ತರವಿತ್ತನು ಟ್ರೇಡಲ್ಸನು.

(ಮುಂದುವರಿಯಲಿದೆ)