ಅಧ್ಯಾಯ ಅರವತ್ತ್ಮೂರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತೈದನೇ ಕಂತು

ನನ್ನ ಕಾರ್ಯ ಬಹ್ವಂಶ ಮುಗಿದಿದೆ. ಆದರೆ ಈ ಒಂದು ವಿಷಯವನ್ನು ಹೇಳದಿರುವುದು ಸರಿಯಲ್ಲ. ನನ್ನ ಮನಸ್ಸಿನಲ್ಲಿ ಸದಾ ಎದ್ದು ಕಾಣುತ್ತಿದ್ದು, ಸದಾ ನನಗೆ ಸಂತೋಷ ಕೊಡುತ್ತಿದ್ದ ಈ ವಿಷಯವನ್ನು ತಿಳಿಸದೆ ಬಿಟ್ಟರೆ ನನ್ನ ವೃತ್ತಾಂತದ ಬಲೆಯೊಳಗಣ ಅಮೂಲ್ಯ ತಂತುವೊಂದನ್ನು ಜಡಕಾಗಿ ಬಿಟ್ಟಂತೆಯೇ ಸರಿ.

ಮದುವೆ ಕಳೆದು ಹತ್ತು ವರ್ಷಗಳ ಸುಖಸಂತೋಷಗಳ ಕಾಲವನ್ನು ಕಳೆದಿದ್ದೆನು. ಚಳಿಗಾಲದ ಒಂದು ರಾತ್ರಿ ನನ್ನನ್ನು ಕಂಡು ಮಾತಾಡುವುದಕ್ಕಾಗಿ ಅಪರಿಚಿತನೊಬ್ಬನು ಬಂದು ಹೊರಗೆ ಕಾದುನಿಂತಿರುವುದಾಗಿ ಕೆಲಸದವಳು ಬಂದು ತಿಳಿಸಿದಳು. ಏಗ್ನೆಸ್ಸಳು ನಾನೂ ಮಕ್ಕಳ ಜತೆ ಸೇರಿಕೊಂಡು, ಸುಖವಾಗಿ ಬೆಂಕಿಯ ಬುಡದಲ್ಲಿ ಮಾತಾಡುತ್ತಾ ಕುಳಿತಿದ್ದೆವು. ಬಂದವನನ್ನು ಒಳಗೆ ಕರೆತರಲು ಕೆಲಸದವಳ ಹತ್ತಿರ ಹೇಳಿ, ನಮ್ಮ ಮಾತು ನಿಲ್ಲಿಸಿ, ಅವನನ್ನು ನಿರೀಕ್ಷಿಸಿ ಬಾಗಿಲ ಕಡೆಗೆ ನೋಡುತ್ತಾ ಕುಳಿತೆವು.

ಪ್ರಾಯದಿಂದ ಮುಖವೆಲ್ಲಾ ಹಣ್ಣಾಗಿ ಕೆಂಪಗಾಗಿದ್ದ, ಬಿಳಿಯ ತಲೆ ಕೂದಲಿನ ಮುದುಕನೊಬ್ಬನು, ಕೈಯ್ಯಲ್ಲೊಂದು ದೊಣ್ಣೆ ಹಿಡಿದುಕೊಂಡು, ಒಳಗೆ ಬಂದನು. ಚೊಕ್ಕಟವಾಗಿದ್ದ ಒರಟು ಬಟ್ಟೆಯನ್ನುಟ್ಟು, ಅವನೊಬ್ಬ ಕೃಷಿಕನಂತೆ ತೋರುತ್ತಿದ್ದನು. ಅವನು ಮುದುಕನೂ ನಿರೋಗಿಯೂ ದೃಢಕಾಯನೂ ಧೈರ್ಯಸ್ಥನೂ ಆಗಿ ತೋರುತ್ತಿದ್ದನು. ಅವನನ್ನು ಪೂರ್ಣ ನೋಡುವುದರೊಳಗೆ ಅವನು ಮಿ. ಪೆಗಟಿಯೆಂದು ಗೊತ್ತಾಯಿತು. ಏಗ್ನೆಸ್ಸಳು ಮಾತ್ರ ಅವನನ್ನು ಸ್ವಲ್ಪ ನಿಧಾನವಾಗಿಯೇ ಗುರುತು ಹಚ್ಚಿದಳು. ಅವನಿಗೆ ಹಸ್ತಲಾಘವವನ್ನಿತ್ತು ಅಪ್ಪಿಕೊಂಡೆನು. ನಮಗೆಲ್ಲ ಸಂತೋಷದಿಂದ ಕಣ್ಣೀರೇ ಬಂತು. ಅವರನ್ನು ಸೋಫಾದ ಮೇಲೆ ಕುಳ್ಳಿರಿಸಿ ರಾತ್ರಿಯ ಊಟದ ಏರ್ಪಾಡನ್ನು ಮಾಡಿದೆವು. ನಮ್ಮ ಊಟ ಮುಗಿದ ಕೂಡಲೆ ಮಕ್ಕಳನ್ನು ಮಲಗಿಸಿದೆವು. ಮಿ. ಪೆಗಟಿ ನಮ್ಮೂರಲ್ಲಿ ಕೆಲವು ದಿನಗಳಾದರೂ ನಿಲ್ಲಬಹುದೆಂದು ಗೊತ್ತಿದ್ದರೂ ಅವರ ಊರಿನ ವರ್ತಮಾನವನ್ನು ಆಗಲೇ ತಿಳಿಯಬೇಕೆಂದು ನಾವು ಬಹುವಾದ ಕಾತುರತೆಯಲ್ಲಿದ್ದೆವು. ಹಾಗಾಗಿ ಮಕ್ಕಳನ್ನು ಮಲಗಿಸಿ ನಾವು ಮೂವರೂ ಬಹು ಸಮಯದವರೆಗೆ ಮಾತಾಡುತ್ತ ಕುಳಿತೆವು.

“ನಿಮ್ಮೂರಿನ ನಿಮ್ಮ ಮತ್ತು ಮಿ. ಮೈಕಾಬರರ ವರ್ತಮಾನವನ್ನೆಲ್ಲ ವಿವರವಾಗಿ ತಿಳಿಸಬೇಕು, ಮಿ. ಪೆಗಟಿ” ಎಂದು ನಾನು ಕೇಳಿಕೊಂಡೆನು.
“ನೀವು ಕೇಳುವ ಮೊದಲೇ ಹೇಳಬೇಕೆಂದಿದ್ದೇನೆ, ಮಾ. ಡೇವಿ. ಈಗ ತ್ರಾಣವಿದೆ. ಪ್ರಾಯ ಹೋದದ್ದು ವಿಶೇಷ ತಿಳಿಯುವುದಿಲ್ಲ. ಆದ್ದರಿಂದಲೇ ಈಗ ಬಂದು ನಿಮ್ಮೆಲ್ಲರ ಭೇಟಿ ಮಾಡಿ ಹೋಗಬೇಕೆಂದು ಇಲ್ಲಿಯವರೆಗೆ ಬಂದಿದ್ದೇನೆ” ಎಂದಂದರು ಮಿ.ಪೆಗಟಿ, ಮುಗುಳ್ನಗೆಯಾಡುತ್ತಾ.
“ನೀವು ಈ ಊರಿನಲ್ಲಿ ಎಷ್ಟು ದಿನಗಳು ಇದ್ದೀರಿ?” ಎಂದು ಏಗ್ನೆಸ್ ಕೇಳಿದಳು.
“ಕೆಲವು ದಿನಗಳು ಮಾತ್ರ.”
“ಈಗ ಹತ್ತು ವರ್ಷಗಳ ಕಾಲದ ವರದಿಯನ್ನು ಕೇಳಲು ನಾವು ತಯಾರಿದ್ದೇವೆ” ಎಂದು ನಾನು ಅಂದೆನು.
“ನಾನು ಸೀದಾ ನಿಮ್ಮ ಮನೆಗೆ ಬರಲಿಲ್ಲ. ಹೋಟೆಲಿನಲ್ಲಿ ಸ್ವಲ್ಪ ಪಾನೀಯವನ್ನು ತೆಗೆದುಕೊಂಡು ವಿಶ್ರಮಿಸಿಕೊಂಡು ಬಂದಿದ್ದೇನೆ. ಆದ್ದರಿಂದ, ಬೇಕಾದರೆ ಬೆಳಗಾಗುವವರೆಗೆ ನಾನು ಮಾತಾಡಲು ಸಿದ್ಧನೇ ಆಗಿದ್ದೇನೆ” ಎಂದು ಮಿ. ಪೆಗಟಿ ಉತ್ಸಾಹದಿಂದ ಹೇಳಿದರು.

ಹುರುಪು ಬರಲೆಂದು ಅವರಿಗೆ ಸ್ವಲ್ಪ ವೈನ್ ಕೊಟ್ಟೆ ಮತ್ತು ನಾನೂ ಸ್ವಲ್ಪ ಕುಡಿದೆ. ಅನಂತರ ಮಿ. ಪೆಗಟಿ ಹೇಳತೊಡಗಿದರು – “ಮುಖ್ಯವಾಗಿ ಮಾಸ್ಟರ್ ಡೇವಿ, ನಾವೆಲ್ಲರೂ ಅಭಿವೃದ್ಧಿ ಸ್ಥಿತಿಯಲ್ಲಿದ್ದೇವೆ. ಆರೋಗ್ಯವಾಗಿಯೂ ಇದ್ದೇವೆ. ನಮ್ಮ ಗದ್ದೆ, ತೋಟಗಳ ಉತ್ಪತ್ತಿ ಚೆನ್ನಾಗಿದೆ. ಮಿ. ಮೈಕಾಬರರ ಕುಟುಂಬವೂ ಇದೇ ರೀತಿಯಲ್ಲಿದೆ. “ಇನ್ನು ನಮ್ಮ ಮುಖ್ಯ ಸಂಗತಿ – ಎಮಿಲಿಯನ್ನು ಕುರಿತು ನೀವು ಕೇಳಲು ಅಪೇಕ್ಷಿಸಬಹುದು. ಅವಳಿಗಾಗಿಯೇ ನಾವು ಅತ್ತ ಕಡೆ ಹೋಗಿರುವುದರಿಂದ ಅವಳ ಕಥೆ ಹೇಳುತ್ತೇನೆ, ಕೇಳಿ. ಅವಳು ಮೊದಲಿನಂತೆಯೇ ಸುಂದರಿಯಾಗಿದ್ದಾಳೆ ಎಂಬುವುದರಲ್ಲಿ ಸಂಶಯವಿಲ್ಲ. ಆದರೆ, ಅವಳನ್ನು ನೋಡಿದರೆ ಸುಂದರಿಯಾದ ಒಬ್ಬ ಸ್ತ್ರೀಯಾಗಿ ಕಾಣುವ ಬದಲು ಗೌರವಾನ್ವಿತ ಒಬ್ಬ ಸನ್ಯಾಸಿನಿಯಾಗಿ ತೋರುವಳು. ಈಗವಳು ಸ್ವಲ್ಪ ಮುಂದಕ್ಕೆ ಬಗ್ಗಿ ನಡೆಯುತ್ತಾಳೆ. ತಲೆಕೂದಲು ಬಿಳಿದಾಗಿದೆ. ಅವಳನ್ನು ಮದುವೆಯಾಗಲು ತುಂಬಾ ಜನರು ಅಪೇಕ್ಷೆಪಟ್ಟರೂ ಅವಳು ಒಪ್ಪಲಿಲ್ಲ. ಅವಳ ಜೀವನವೂ ಒಬ್ಬ ಸನ್ಯಾಸಿನಿಯ ಜೀವನದಂತೆಯೇ ಸಾಗುತ್ತಿದೆ. ರೋಗಿಷ್ಟರ ಚಿಕಿತ್ಸೆ, ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡುವುದು, ಮದುವೆ –ಮಂಗಲೋತ್ಸವಗಳಲ್ಲಿ ಮರ್ಯಾದೆಯಿರುವಂಥಾ ಶೃಂಗಾರ ಕೆಲಸಗಳನ್ನು ಧರ್ಮಾರ್ಥವಾಗಿ ಮಾಡಿಕೊಡುವುದು, ಇತರ ಸಮಯಗಳಲ್ಲಿ ಓದುವುದೂ ದರ್ಜಿ ಕೆಲಸ ಮಾಡುವುದೂ – ಇವೇ ಅವಳ ದಿನನಿತ್ಯದ ಕಸಬು” ಅಂದರು.

“ಹೇಮನ ಮರಣವಾರ್ತೆ ಅವಳಿಗೆ ಗೊತ್ತಾಗಿದೆಯೇನು? ಎಂದು ಕೇಳಿದೆ. “ಆ ವರ್ತಮಾನವನ್ನು ಮಿ. ಮೈಕಾಬರರು ಈ ಊರನ್ನು ಬಿಟ್ಟು ಬಹಳ ದೂರ ಹೋದಮೇಲೆ ನನಗೆ ತಿಳಿಸಿದರು. ನಾನು ಮಾತ್ರ ಅವಳಿಗೆ ತಿಳಿಸದೇ ಬಹಳ ಸಮಯ ದಿನ ಕಳೆದೆ. ಕೊನೆಗೆ ಒಂದು ದಿನ ನಮ್ಮ ಮನೆಗೆ ಬಂದಿದ್ದವನೊಬ್ಬನ ಹತ್ತಿರವಿದ್ದ ಒಂದು ಹಳೇ ವರ್ತಮಾನ ಪತ್ರಿಕೆಯನ್ನು ಅವಳು ಕಂಡು – ಪತ್ರಿಕೆಯು ತಮ್ಮೂರಿನದಷ್ಟೆ, ಹಳತಾದರೇನು, ಎಂದು ಓದಿ, ಹೇಮನು ಮೃತಪಟ್ಟದ್ದು ತಿಳಿದುಕೊಂಡಳು” ಅಂದರು. “ಅವಳಿಗೆ ಬಹಳ ದುಃಖವಾಗಿರಬೇಕು, ಮಾಸ್ಟರ್ ಡೇವಿ. ಅವಳ ಮೃದು ಹೃದಯವು ಎಲ್ಲರ ದುಃಖದಲ್ಲೂ ಅನುಕಂಪಿಸುವಾಗ ಹೇಮನನ್ನು ಕುರಿತು ಖಂಡಿತವಾಗಿಯೂ ದುಃಖಿಸಿಯೇ ದುಃಖಿಸುವುದು. ಆದರೆ, ಆ ಮೊದಲೇ ಅವಳಿಗೆ ಮೇರೆ ಮೀರಿದ ದುಃಖದ ಅನುಭವವಿದ್ದುದರಿಂದ ಮತ್ತೂ ಈ ಘಟನೆಯು ಕಳೆದು ಅನೇಕ ದಿನಗಳನಂತರ ಅವಳಿಗೆ ಈ ವರ್ತಮಾನ ಸಿಕ್ಕಿದ್ದರಿಂದ ಅವಳ ಈ ದುಃಖವನ್ನು ಒಂದು ವಿಧದ ಸಮಾಧಾನದಿಂದ ಸಹಿಸಿ ಶಾಂತಳಾಗಿದ್ದಾಳೆ. ಆದರೆ ಈ ವರ್ತಮಾನ ತಿಳಿದ ಅನಂತರ ಅನೇಕ ದಿನಗಳವರೆಗೆ ಅವಳು ಜನರ ಎದುರು ಬರುತ್ತಲೇ ಇರಲಿಲ್ಲ.”

ಮತ್ತೂ ಮುಂದುವರಿಸುತ್ತಾ ಸ್ವಲ್ಪ ನಸು ನಗೆಯಾಡುತ್ತಲೇ ಇರುತ್ತಾ – “ಮಾಸ್ಟರ್ ಡೇವೀ ಮಿಸೆಸ್ ಗಮ್ಮಿಜ್ಜಳ ಕಥೆಯೇ ಬೇರೆ! ಅವಳು ಅಳುತ್ತಲೂ ಇಲ್ಲ, ಪರಚಿಕೊಳ್ಳುತ್ತಲೂ ಇಲ್ಲ. ಅವಳು ಮನೆ ಕೆಲಸದಲ್ಲಿ ನಿಪುಣಳು. ಅವಳ ಯೋಗ್ಯತೆ ಮತ್ತು ಗುಣಗಳನ್ನು ಕಂಡು ಆ ಊರಿನವನೊಬ್ಬನು ಅವಳನ್ನು ಮದುವೆಯಾಗಲು ಕೇಳಿಕೊಂಡನು. ಆದರೆ ಮಿಸೆಸ್ ಗಮ್ಮಿಜ್ಜಳಿಗೆ ಸಿಟ್ಟೇ ಬಂತು. ಆ ಸಿಟ್ಟಿನಿಂದ ತನ್ನ ಕೈಯಲ್ಲಿ ಇದ್ದ ನೀರಿನ ಬಾಲ್ದಿಯನ್ನು ಅವನ ತಲೆಗೆ ಕವುಚಿಬಿಟ್ಟಳು. ಕೊನೆಗೆ ನಾವು ಹೋಗಿ ಅವನನ್ನು ಬಿಡಿಸಬೇಕಾಯಿತು. ಜನರಿಲ್ಲದ ಆ ಊರಲ್ಲಿ ನೆಂಟಸ್ತನ ಬಯಸುವ ಸ್ವಾಭಾವಿಕ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವಷ್ಟೂ ಅವಳಿಗೆ ತಾಳ್ಮೆಯಿರಲಿಲ್ಲ” ಹೀಗೆ ಹೇಳಿ ಅವರು ಗಹಗಹಿಸಿ ನಗಾಡಿದರು. ಹತ್ತು ಮಿನಿಟುಗಳವರೆಗೆ ನಾವೆಲ್ಲರೂ ನಗಾಡುತ್ತಾ ನಮ್ಮ ಮಾತೇ ನಿಂತುಹೋಯಿತು. ಅನಂತರ ಮಿ. ಪೆಗಟಿ ಮಾತಾಡತೊಡಗಿದರು –

“ಕೇಳಿ ಮಾಸ್ಟರ್ ಡೇವಿ, ಪರಿಪೂರ್ಣ ಪಾಪಿಗಳೆಂದು ಪ್ರಪಂಚದಲ್ಲಿ ಯಾರೂ ಇಲ್ಲ. ಮಾರ್ಥಾಳು ನ್ಯಾಯವಾದ ಸಂಪಾದನೆ ಮಾಡಿ, ಮರ್ಯಾದೆಯಿಂದ ಬದುಕುತ್ತಿದ್ದಾಳೆ. ಒಬ್ಬನು ಅವಳನ್ನು ಮದುವೆಯಾಗಲು ಇಚ್ಛಿಸಿ, ಅವಳನ್ನೇ ಕೇಳಿದನು. ತನ್ನ ಚರಿತ್ರೆಯನ್ನೂ ಅವಗುಣಗಳನ್ನೂ ಅವಳೇ ಅವನಿಗೆ ತಿಳಿಸಿದಳು. ಇಷ್ಟು ಕೇಳಿಯೂ ಅವಳನ್ನು ಮದುವೆಯಾಗಲು ಅವನು ಹಟಹಿಡಿದುದರಿಂದ ಅವಳು ಅವನನ್ನು ಮದುವೆಯಾಗಿರುವಳು. ಈಗ ಆ ದಂಪತಿಗಳು ನ್ಯಾಯವಾದ ಮತ್ತೂ ಸುಖವಾದ ಜೀವನವನ್ನು ಸಾಗಿಸುತ್ತಿದ್ದಾರೆ” ಎಂದು ಮಿ. ಪೆಗಟಿ ಅಂದರು.

“ಮತ್ತೆ ಮಿ. ಮೈಕಾಬರರ ಕುಟುಂಬ!” ಎಂದು ನಾವಿಬ್ಬರೂ ಏಕಕಂಠದಿಂದ ಕೇಳಿದೆವು. “ಅದನ್ನು ಹೇಳದೇ ಉಂಟೇ! ಅವರ ಜೀವನಕ್ರಮವೇ ಬೇರೆ ವಿಧದ್ದು. ಅವರು ಆಶ್ಚರ್ಯಕರವಾದ ಅಭಿವೃದ್ಧಿ ಸ್ಥಿತಿಯಲ್ಲಿ ಇದ್ದಾರೆ. ಮಿ. ಮೈಕಾಬರರು ಇಲ್ಲಿಂದ ಹೋದ ಕೂಡಲೇ ಕೃಷಿ ಕೆಲಸವನ್ನು ಕೈಕೊಂಡರು. ಹಾರೆ ಪಿಕಾಸುಗಳನ್ನು ಹಿಡಿದು ದಿನಕ್ಕೆ ಎಂಟು ಹತ್ತು ಘಂಟೆ ಕೆಲಸ ಮಾಡುತ್ತಿದ್ದರು. ಅವರ ಕುಟುಂಬದವರೆಲ್ಲರೂ ಇದೇ ರೀತಿ ತುಂಬಾ ಕೆಲಸ ಮಾಡಿ, ಉತ್ಪತ್ತಿ ತೆಗೆದು, ಅವರ ಸಾಲದಲ್ಲಿ ಹೆಚ್ಚಿನ ಅಂಶವೆಲ್ಲ ಈಗ ಸಂದಾಯವಾಗಿದೆ. ಇದಕ್ಕಿಂತಲೂ ಹೆಚ್ಚಿನದು ಅವರ ವ್ಯಕ್ತಿತ್ವ. ಅವರ ಮಾತಿನ ವೈಖರಿ, ಮುಖದ ತೇಜಸ್ಸು, ದೇಹರಚನೆ ಎಲ್ಲವೂ ಅವರನ್ನು ಈಗ ಅತ್ಯುನ್ನತ ಪದವಿಗೆ ಏರಿಸಿದೆ. ನನ್ನ ಮಾತುಗಳಿಂದ ಅವರ ಈಗಿನ ಪರಿಸ್ಥಿತಿಯನ್ನು ತಿಳಿಯುವುದಕ್ಕಿಂತ ಈ ಪತ್ರಿಕೆಯನ್ನೋದಿ ತಿಳಿಯುವುದು ಉತ್ತಮ” ಎಂದು ಮಿ. ಪೆಗಟಿ ಹೇಳುತ್ತಾ ಅವರ ಜೇಬಿನಲ್ಲಿದ್ದ ಒಂದು ಪತ್ರಿಕೆಯನ್ನು ತೆಗೆದು ನನಗೆ ಕೊಟ್ಟರು. ಪತ್ರಿಕೆಯ ಒಂದು ಬಾತ್ಮಿಯು ಹೀಗಿತ್ತು.

“ಜನರು ಕಿಕ್ಕಿರಿದು ನೆರೆದಿದ್ದ ಇಲ್ಲಿನ ಮುಖ್ಯ ಹೋಟೆಲಿನ ವಿಶಾಲ ಹಾಲಿನಲ್ಲಿ ಪೋರ್ಟ್ ಮಿಡಲ್ಬೆಯ ಮಾನ್ಯ ಡಿಸ್ಟ್ರಿಕ್ಕು ಮೆಜಿಸ್ಟ್ರೇಟರೂ ಈ ಊರಿನ ಗಣನೀಯ ಗೃಹಸ್ಥರೂ ಆದರ್ಶ ಕೃಷಿಕರೂ ಆಗಿರುವ ಮಿ. ವಿಲ್ಕಿನ್ಸ್ ಮೈಕಾಬರ್ ಎಸ್ಕ್ವಯರ್ ಅವರುಗಳಿಗೆ ಮಾನಪತ್ರ ಒಪ್ಪಿಸುವ ಸಾರ್ವಜನಿಕ ಸಮಾರಂಭವೊಂದು ಏರ್ಪಡಿಸಲಾಗಿತ್ತು. ಮುಖ್ಯ ಪಂಕ್ತಿಯಲ್ಲೇ ನಲವತ್ತೇಳು ಜನರಿಗಿಂತ ಹೆಚ್ಚು ಗೌರವಾನ್ವಿತ ಗೃಹಸ್ಥರೂ ಹೋಟೆಲಿನ ಇತರ ಭಾಗಗಳಲ್ಲಿ ಅನೇಕಾನೇಕ ಇತರ ಆಮಂತ್ರಿತ ಗೃಹಸ್ಥರೂ ಏಕಕಾಲದಲ್ಲಿ ಭೋಜನಕ್ಕೆ ಮಂಡಿಸಿದ್ದರು. ಮಹಾ ಪಂಡಿತವರ್ಯರೂ ಮಹಾ ಗೌರವಾನ್ವಿತರೂ ಸುಪ್ರಷ್ಠಿತರೂ ಜನಪ್ರಿಯರೂ ಆಗಿರುವ ಮೆಜಿಸ್ಟ್ರೇಟರವರಿಗೆ ಮಾನಪತ್ರವನ್ನು ಒಪ್ಪಿಸಲು ಸಮಗ್ರ ಪೋರ್ಟು ಮಿಡಲ್ಬೆಯ ಶ್ರೀಮಂತರೂ ಜನಪ್ರಮುಖರೂ ಕುಲೀನ ಸ್ತ್ರೀ ಸಮುದಾಯವೂ ಶ್ರದ್ಧೆಯಿದ ಬಂದು ಕೂಡಿದ್ದರು. ಪೋರ್ಟ್ ಮಿಡಲ್ಬೆಯ ಸೆಲಂ ಶಾಲೆಯ ಡಾಕ್ಟರ್ ಮೆಲ್ರವರು ಅಗ್ರಾಸನವನ್ನು ಅಲಂಕರಿಸಿದ್ದರು. ಭೋಜನಾನಂತರ ಜನಸಂದಣಿಯು ರಾಷ್ಟ್ರಗೀತೆಯನ್ನು ಹಾಡಿತು. (ಇದರಲ್ಲಿ ಮಾನ್ಯ ಮೆಜಿಸ್ಟ್ರೇಟರ ಸುಪುತ್ರ ಕುಮಾರ ವಿಲ್ಕಿನ್ಸ್ ಮೈಕಾಬರರವರು ಅವರ ದೈವದತ್ತವಾದ ಕಂಠಸ್ವರದಿಂದ ಜನರನ್ನು ಬೆರಗುಗೊಳಿಸಿದರೆಂದು ತಿಳಿಸಲು ಸಂತೋಷಿಸುತ್ತೇನೆ.) ಅಧ್ಯಕ್ಷರ ಭಾಷಣದಲ್ಲಿ ಮಾನ್ಯ ಮೆಜಿಸ್ಟ್ರೇಟರನ್ನು ಕುರಿತು –

“ನಮ್ಮ ನಗರಕ್ಕೆ ಭೂಷಣಪ್ರಾಯರಾದ ಮಹಾತ್ಮರೇ ತಾವು ಸದಾ ನಮ್ಮ ಮಧ್ಯೆ ಇರುವ ಯೋಗ್ಯತೆಯು ನಮ್ಮದಾಗಲೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ! ಎಂದಾದರೂ ತಾವು ನಮ್ಮಿಂದ ಅಗಲುವ ಸಂದರ್ಭ ಬರುವುದಾದರೆ ಆ ಸಂದರ್ಭವು ತಮ್ಮ ಸಂಪತ್ತು ಮತ್ತೂ ಪ್ರತಿಷ್ಠೆಗಳ ಏರಿಕೆಗೆ ಮಾತ್ರ ಆಗಿರಲಿ! ಎಂದೂ ಸ್ವಾರ್ಥವನ್ನು ಬಯಸದ ತಮ್ಮ ಶಕ್ತಿಗಳು ಜನಹಿತಕ್ಕಾಗಿ ಈ ದೇಶದಲ್ಲಿ ವಿನಿಯೋಗವಾಗುವಂತೆ ದೇವರು ಅನುಗ್ರಹಿಸಲಿ!” ಎಂದು ಮೊದಲಾಗಿ ಪ್ರಶಂಸಿಸಿದರು.

“ಮಿ. ವಿಲ್ಕಿನ್ಸ್ ಮೈಕಾಬರರವರೂ ಅವರ ಪತ್ನಿ, ಪುತ್ರ, ಪುತ್ರಿಯರೂ ಜನಪ್ರಿಯರಾಗಿಯೂ ಆದರ್ಶ ಪ್ರಜೆಗಳಾಗಿಯೂ ಜನಮುಖಂಡರಾಗಿಯೂ ಈ ಪ್ರದೇಶದ ಅತ್ಯುನ್ನತ ಏಕೈಕ ಕುಟುಂಬವಾಗಿ, ಜನರಿಂದ ಗೌರವಿಸಲ್ಪಟ್ಟು ಈ ಕೂಟದಲ್ಲಿ ಸರ್ವತೋಮುಖವಾಗಿ ಮೆರೆದರು.” ಅದೇ ಪತ್ರಿಕೆಯಲ್ಲಿ ಮತ್ತೊಂದು ಪುಟದಲ್ಲಿ ನನ್ನ ಹೆಸರಿಗೆ ಅರ್ಪಿಸಲ್ಪಟ್ಟಿದ್ದ ಒಂದು ಮಾನಪತ್ರವು ಇತ್ತು. ಅದು ಹೀಗಿತ್ತು.

“ಪ್ರಖ್ಯಾತ ಸಾಹಿತಿ ಡೇವಿಡ್ ಕಾಪರ್ಫೀಲ್ಡ್ ಎಸ್ಕ್ವಯರ್ ಅವರುಗಳಿಗೆ –

“ಪ್ರಿಯ ಮಹನೀಯರೇ

“ಪ್ರಪಂಚದ ಜ್ಞಾನವಂತ ಮಹಾಜನರಿಗೆ ಚಿರಪರಿಚಯವುಳ್ಳ ತಮ್ಮ ಕಲಾಕೃತಿಗಳನ್ನು ಓದಿ ನೋಡುವ ಭಾಗ್ಯವು ನನ್ನದಾಗಿ ಕೆಲವು ವರ್ಷಗಳು ಕಳೆದಿವೆ. “‘ಭೋರ್ಗರೆಯುವ ಸಮುದ್ರಗಳ್ ಸಂಪರ್ಕ ವಿಚ್ಛೇದ ಗೈದಿಹವು’ ಎಂಬ ಮಹಾಕವಿ ಬರ್ನ್ಸನ ಮಾತುಗಳಂತೆ ನಾನು ತಮ್ಮಿಂದ ದೂರವಿರುವೆನಾದರೂ ನನ್ನ ಯೌವ್ವನಕಾಲದ ಸ್ನೇಹಿತರಾಗಿ, ಏಕಕುಟುಂಬಿಕರಂತೆ ಇದ್ದು ಬಾಳಿದ ತಮ್ಮನ್ನು ನಮ್ಮ ಅಭಿವೃದ್ಧಿ ಕಾಲದಲ್ಲಿ ಮರೆಯೆನು. “ಈ ನಗರದ ಮಹಾಜನರು ಅವರ ಜ್ಞಾನಸಂಪಾದನೆಗಾಗಿ, ಉಲ್ಲಾಸದಿಂದ, ಉತ್ಸಾಹದಿಂದ ತಮ್ಮ ಹೊಸ ಹೊಸ ಕಲಾಕೃತಿಗಳನ್ನು ನಿರೀಕ್ಷಿಸುತ್ತಿರುವರು. ತಮ್ಮ ದೇಶದ ಜನರಿಗೆ ತಾವು ಪರಿಚಯವಿರುವಷ್ಟೇ ಈ ದೇಶದವರಿಗೂ ತಮ್ಮ ಪರಿಚಯವಿರುವುದರಿಂದ, ದೇಶಕಾಲಾಬಾಧಿತವಾಗದೆ ತಮ್ಮ ಕಲಾಕೌಶಲ ಏರಲಿ! ತಮ್ಮ ಕೀರ್ತಿ ಪ್ರತಿಷ್ಠೆಗಳೇರಲಿ. ತಾವು ಜಗದ್ವಿಖ್ಯಾತರಾಗಿರಿ!

“ಭೂಗೋಳದ ಇತ್ತ ಕಡೆಯ ವಿಭಾಗದಿಂದ ತಮ್ಮ ಕಡೆಗೆ ಗೌರವದಿಂದ ನೋಡುತ್ತಿರುವ ಲಕ್ಷಾಂತರ ನಯನಗಳ ಪೈಕಿ, ಕಣ್ಣಿನಲ್ಲಿ ದೃಷ್ಟಿ, ದೇಹದಲ್ಲಿ ಜೀವ, ಇರುವವರೆಗೆ ನೋಡಿ ದಣಿಯದ ನಯನಗಳುಳ್ಳ ವಿಲ್ಕಿನ್ಸ್ ಮೈಕಾಬರ್, “ಮೆಜಿಸ್ಟ್ರೇಟ್” ಈ ಪತ್ರಿಕೆಯ ಒಂದು ಮೂಲೆಯಲ್ಲಿ ಪತ್ರಿಕೆಯ ಬಾತ್ಮಿದಾರರ ಹೆಸರುಗಳ ಪಟ್ಟಿಯಲ್ಲಿ ಮಿ. ಮೈಕಾಬರರ ಹೆಸರೂ ಇತ್ತು. ಆ ರಾತ್ರಿ ಮಿ. ಪೆಗಟಿ ನಮ್ಮ ಮನೆಯಲ್ಲೇ ಇದ್ದರು. ಮರುದಿನ ಬೆಳಗ್ಗೆ ಬೇರೆ ಕಡೆ ಕೆಲಸವಿದೆಯೆಂದು ಹೊರಟು ಹೋದರು. ಅವರು ಸಾಧಾರಣ ಒಂದು ತಿಂಗಳ ಕಾಲ ಈ ದೇಶದಲ್ಲಿದ್ದು ಹೋಗುವುದಾಗಿಯೂ ಸಮಯವಿದ್ದಾಗ ಈ ಮಧ್ಯೆ, ನನ್ನನ್ನು ನೋಡಲು ಬರುವರೆಂದೂ ತಿಳಿಸಿದ್ದರು.

ಒಂದು ದಿನ ಅವರು ನಮ್ಮ ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೇಮನ ಗೋರಿಯನ್ನು ನೋಡಲು ಯಾರ್ಮತ್ತಿಗೆ ಹೋದರು. ಹೇಮನ ಗೋರಿಯನ್ನು ನಾನೇ ಕಟ್ಟಿಸಿದ್ದು. ಅದರಲ್ಲಿ ಒಂದು ಚಂದದ ಕಲ್ಲಿನ ಮೇಲೆ ಕೆಲವು ಒಕ್ಕಣೆಗಳನ್ನು ಬರೆಸಿದ್ದೆನು. ಮಿ. ಪೆಗಟಿಯ ಅಪೇಕ್ಷೆಯ ಮೇರೆಗೆ ನಾನು ಆ ಒಕ್ಕಣೆಗಳನ್ನು ಒಂದು ಕಾಗದದಲ್ಲಿ ಬರೆದುಕೊಳ್ಳುತ್ತಿದ್ದಾಗ, ಮಿ. ಪೆಗಟಿ ಸಮಾಧಿಯಿಂದ ಸ್ವಲ್ಪ ಹುಲ್ಲನ್ನೂ ಮಣ್ಣನ್ನೂ ತೆಗೆದು ಸಂಗ್ರಹಿಸಿಕೊಂಡರು. “ಎಮಿಲಿಗಾಗಿ, ಮಾಸ್ಟರ್ ಡೇವಿ, ತರುತ್ತೇನೆಂದು ವಾಗ್ದಾನ ಮಾಡಿದ್ದೇನೆ” ಎಂದು ಅವರು ನನ್ನನ್ನು ನೋಡಿ ಹೇಳಿದರು.

(ಮುಂದುವರಿಯಲಿದೆ)