(ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು.)
ವಿಟ್ಲದಿಂದ ಮೂರ್ತಿ ದೇರಾಜೆ
[ಸಂಪಾದಕೀಯ: ೧೯೭೫ – ನಾನು ಮಂಗಳೂರಿನಲ್ಲಿ ಅಂಗಡಿ ತೆರೆದ ಹೊಸತು. ಸುಮಾರಿಗೆ ಆ ದಿನಗಳಲ್ಲೇ ಉಡುಪಿಯ ನಿಜಾರ್ಥದ ಸಾಂಸ್ಕೃತಿಕ ವಕ್ತಾರ – ಕುಶಿ ಹರಿದಾಸ ಭಟ್ಟರು, ತರುಣ ಬಿವಿ ಕಾರಂತರಿಗೆ ತಮ್ಮಲ್ಲಿ ಪ್ರಯೋಗ ರಂಗವನ್ನು ತೆರೆದಿಟ್ಟರು. ನನಗವನ್ನು ಅನುಭವಿಸುವ ಆಸೆಯಿತ್ತು, ಯೋಗ ಇರಲಿಲ್ಲ. ಆದರೆ ಅಲ್ಲೇ ಮುಂದೆ ಆನಂದ ಗಾಣಿಗರ ನಾಟಕರಂಗ ತಮ್ಮ ವಾರ್ಷಿಕ ನಾಟಕೋತ್ಸವಕ್ಕೆ ಕಾರಂತರ ನಾಟಕಗಳನ್ನು ಬೆಂಗಳೂರಿನಿಂದ ಕರೆಸುತ್ತಿದ್ದದ್ದನ್ನು ಹೋಗಿ, ನೋಡಿ ಬರುವಲ್ಲಿ ಬಹುಶಃ ನಾನೆಂದೂ ತಪ್ಪಿದ್ದಿಲ್ಲ.
***
ವೈಯಕ್ತಿಕವಾಗಿ ಬಿವಿ ಕಾರಂತರ ಬಗ್ಗೆ ನಾನು ಹೆಚ್ಚೇನೂ ತಿಳಿದುಕೊಂಡಿರಲಿಲ್ಲ. ಆದರೆ ಅವರು ಮೈಸೂರಿನಲ್ಲಿ ರಂಗಾಯಣ ಕಟ್ಟುತ್ತಿದ್ದ ಕಾಲಕ್ಕೆ ನನ್ನ ತಂದೆಗೆ (ಜಿಟಿನಾ) ನಿಕಟವಾಗಿದ್ದರು. ರಂಗಾಯಣ ಮೊದಲ ಬಾರಿಗೆ ತಿರುಗಾಟ ಹೊರಡಲು ಸಜ್ಜಾದಾಗ ಕಾರಂತರು ನನ್ನ ತಂದೆ ಮೂಲಕ ನನ್ನನ್ನು ಸಂಪರ್ಕಿಸಿದ್ದರು. “ನಮ್ಮ ಪೂರ್ವರಂಗ ಪ್ರಯೋಗಗಳಿಗೆ ಮಂಗಳೂರಿನಲ್ಲಿ ಅವಕಾಶ ಮಾಡಿಸುತ್ತೀರಾ?” ನಾನು ಭಂಡ ಧೈರ್ಯದಿಂದ ಒಪ್ಪಿಕೊಂಡಿದ್ದೆ. ಆರ್ಥಿಕವಾಗಿ ಮಂಗಳೂರು ಭಾರತೀಯ ವಿದ್ಯಾಭವನ – ಮುಖ್ಯವಾಗಿ ಜಯರಾಮ ಶೆಟ್ಟರು, ನನ್ನ ಮಹಾಬಲ. ಮತ್ತೆ ಸಂಘಟನಾತ್ಮಕವಾಗಿ ಸಹಕರಿಸಲು ಸ್ವತಃ ರಂಗಕರ್ಮಿಯೇ ಆದ ನಾ. ದಾಮೋದರ ಶೆಟ್ಟರಿದ್ದರು. ಅಲೋಶಿಯಸ್ ಕಾಲೇಜು ವಠಾರದಲ್ಲಿ ಮೂರು ದಿನಗಳ ಕಾಲ ನಡೆದ ಈ ಉತ್ಸವ ಸಾರ್ವಜನಿಕರ ನೆಲೆಯಲ್ಲಿ ಚೆನ್ನಾಗಿಯೇ ಇತ್ತು. ಆದರೆ ನನಗೆ ಅಂಗಡಿಯ ಸಮಯದ ಶಿಸ್ತಿನಲ್ಲಿ, ಕಾರಂತರೊಡನೆ ವಿಶೇಷ ಒಡನಾಟ ಸಾಧ್ಯವಾಗಲೇ ಇಲ್ಲ. ಉತ್ಸವದ ಕೊನೆಗೆ ನಾನು ತಂಡದ ಅಶಿಸ್ತಿನ ಕುರಿತು ಒಂದು ಕಟುಟೀಕಾ ಪತ್ರವನ್ನು ಕಾರಂತರಿಗೆ ವೈಯಕ್ತಿಕವಾಗಿ ಬರೆದಿದ್ದೆ. ನನ್ನ ನಿರೀಕ್ಷೆ ಮೀರಿ, ಕ್ಲಪ್ತ ಕಾಲದಲ್ಲಿ ಕಾರಂತರ ಉತ್ತರ ಬಂದಾಗ, ನಾನು ಸಂಕೋಚದಲ್ಲಿ ಮುದುಡಿಹೋದೆ. ದೊಡ್ಡ ಮನುಷ್ಯ, ಯಾವುದೇ ಸಮಜಾಯಿಷಿ ಕೊಡ ಹೋಗದೇ ತಪ್ಪುಗಳನ್ನು ಒಪ್ಪಿಕೊಂಡು, ಕ್ಷಮೆ ಯಾಚಿಸಿದ್ದರು!!
***
೧೯೯೯ರಲ್ಲಿ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ರಂಗಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ, ಮುಖ್ಯವಾಗಿ ಸಂಜೆ ಬಿವಿ ಕಾರಂತರೊಡನೆ ಸಂವಾದ ಇತ್ತು. ಅದಕ್ಕಾಗಿ ನಾನು ಬೆಳಗ್ಗೆ ಮಂಗಳೂರು ಬಿಟ್ಟಿದ್ದೆ. ದಾರಿಯಲ್ಲಿ – ಉಡುಪಿಯಲ್ಲಿ, ಕುಶಿಯವರನ್ನು ಭೇಟಿಯಾಗಿ, ಹಿಂದಿನ ದಿನವಷ್ಟೇ ಮುದ್ರಣಾಲಯದಿಂದ ಬಂದಿದ್ದ ನನ್ನ `ಪುಸ್ತಕ ಮಾರಾಟ ಹೋರಾಟ’ ಪ್ರತಿಯೊಂದನ್ನು ವಿಶ್ವಾಸಪೂರ್ವಕವಾಗಿ ಕೊಟ್ಟು ಮುಂದುವರಿದಿದ್ದೆ. ಕುಂದಾಪುರದಲ್ಲಿ ಸಂಜೆ ಸಭೆಗೂ ಮೊದಲೇ ಗಣ್ಯವ್ಯಕ್ತಿಗಳ ಕೊಠಡಿಯಿಂದ ನನಗೆ ಕುಶಿಯವರ ಬುಲಾವ್ ಬಂತು. ಕುಶಿಯವರು ಅಷ್ಟರಲ್ಲೇ ನನ್ನ ಪುಸ್ತಕವನ್ನು ಹೆಕ್ಕಿ ಹೆಕ್ಕಿ ಓದಿ ಒಂದು ಸುತ್ತು ಮುಗಿಸಿಬಿಟ್ಟಿದ್ದರು. ಪರಿಣಾಮವಾಗಿ ಅವರು ಅಲ್ಲಿದ್ದ ಬಿವಿ ಕಾರಂತಾದಿ ಗಣ್ಯರೆದುರು ನನ್ನನ್ನು ಪುಸ್ತಕದ ಉದಾಹರಣೆಗಳ ಸಹಿತ ವಾಚಾಮಗೋಚರ ಹೊಗಳಿಬಿಟ್ಟರು. ಆಗ ನನ್ನ ಸಂಕೋಚವನ್ನು ಇಮ್ಮಡಿಸುವಂತೆ ಬಿವಿ ಕಾರಂತರು ಗಟ್ಟಿಯಾಗಿ “ಅದು ಸರಿ, ಆದರೆ ಅಂಥ ಪುಸ್ತಕಕ್ಕೆ ಇಲ್ಲಿ ನಾನೂ ಒಬ್ಬ ಇದ್ದೇನೆ ಎಂದು ನೀವ್ಯಾಕೆ ಯೋಚಿಸಲಿಲ್ಲ?” ಎಂದೇ ಕೇಳಿದರು. ಕಾರಂತರ ಓದಿನ ದಾಹ, ತಿಳಿವಿನ ಹಂಬಲ, ಶೋಧದ ಹುಚ್ಚುಗಳೆಲ್ಲ ಅದು ಮೊದಲಾಗಿ ನನ್ನ ಅರಿವಿಗೆ ಬರತೊಡಗಿತು! ಆದರೆ ವಿಷಾದದ ಸಂಗತಿಯೆಂದರೆ, ಈ ಅರಿವಿನೊಡನೆ ಮತ್ತೆ ಅವರ ವಿಶೇಷ ಒಡನಾಟದ ಅವಕಾಶ ನನಗೆ ಒದಗಲೇ ಇಲ್ಲ.
ಬಿವಿ ಕಾರಂತರ ರಂಗ ಸಂಗೀತ, ಮುಖ್ಯವಾಗಿ `ಸತ್ತವರ ನೆರಳು’ ನಾಟಕಕ್ಕೆ ಅವರು ಅಳವಡಿಸಿದ ದಾಸರ ಪದಗಳ ಎಲ್.ಪಿ ರೆಕಾರ್ಡನ್ನು ಗೆಳೆಯ ಡಾ| ರಾಘವೇಂದ್ರ ಉರಾಳರು ನನಗೆ ಆ ಕಾಲದಲ್ಲೇ ಕೇಳಿಸಿದ್ದರು. ಅಲ್ಲಿಂದ ಮುಂದೆ ನನ್ನ ಸ್ನಾನದ ಮನೆಯ ಅಪಲಾಪಗಳಲ್ಲಿ `ಸತ್ತವರ ನೆರಳು’ ಸದಾ ಕಾಡುತ್ತಿತ್ತು. ಇದರ ಒಂದು ಸಣ್ಣ ಕಿಡಿಗೆ, `ಗೋಕುಲ ನಿರ್ಗಮನ’ದ ಅನುಕೂಲ ವಾಯು ಒದಗಿದ್ದಕ್ಕೇ ಇರಬೇಕು ನಮ್ಮ ಮಗ – ಅಭಯಸಿಂಹನೂ ರಂಗಸಂಗೀತದ ಹಿಂದೆ ಬಿದ್ದ. ಅವನಿಗೆ ಬೆಂಗಳೂರಿನಲ್ಲಿ ಚೆನ್ನಕೇಶ್ವರ `ಲೋಕಚರಿತ’ ಕಾಣಿಸಿತು. ಕಾರಂತ ಗರಡಿಯ ಒಂದು ಗಟ್ಟಿಯಾಳು ಈ ಚೆನ್ನಕೇಶವ. ಅವರ ಬಳಗದ ರಂಗಗೀತೆಗಳನ್ನು, ಹೆಚ್ಚು ಪ್ರಚಾರದಲ್ಲಿಲ್ಲದ ಆದರೆ ರಂಗದ ಕುರಿತ ಜ್ಞಾನನಿಧಿಯೇ ಆದ ಜೆ. ಶ್ರೀನಿವಾಸಮೂರ್ತಿಯವರ ನಿರೂಪಣೆಯೊಡನೆ ದಾಖಲೀಕರಣಗೊಳಿಸುವ ಸದವಕಾಶ ಅಭಯನಿಗೊದಗಿತು. (ನೋಡಿ, ಕೇಳಿ)
ಅನಂತರದ ದಿನಗಳಲ್ಲಿ ಬಿವಿ ಕಾರಂತರ ಆತ್ಮಕತೆಯ ಓದೂ ಸೇರಿದಂತೆ ಅವರ ಭೂಮವ್ಯಕ್ತಿತ್ವವು ನನ್ನೀ ಚಿಲ್ಲರೆ ನೆನಪುಗಳನ್ನು ನಿಧಾನಕ್ಕೆ ಅದುಮುತ್ತಲೇ ಇತ್ತು. ಆದರೆ ನಾಲ್ಕು ದಿನಗಳ ಹಿಂದೆ ಅಯಾಚಿತವಾಗಿ ನನ್ನ ಮಿಂಚಂಚೆ ಪೆಟ್ಟಿಗೆಯಲ್ಲಿ ಗೆಳೆಯ ದೇರಾಜೆ ಮೂರ್ತಿಯ ಈ ಲೇಖನ, (ಆರು ಚಿತ್ರಗಳ ಸಹಿತ) ಪ್ರಕಟಿಸುತ್ತೀರಾ ಪತ್ರ ಬಂದಾಗ ಎಲ್ಲ ಮುಖ ತೊಳೆದು ನಿಂತಂತಾಯ್ತು!
ದೇರಾಜೆ ಮೂರ್ತಿ ಪ್ರೊ| ಶಂಕರರ ಗಿಲಿಗಿಲಿ ಇಂದ್ರಜಾಲದ ಅವಿಭಾಜ್ಯ ಅಂಗ. ಅವರ ಪ್ರದರ್ಶನಗಳ ರಂಗಚಲನೆ ಮತ್ತು ಪ್ರಸ್ತುತಿಯಲ್ಲಿ, ಮುಖ್ಯವಾಗಿ ಹಿನ್ನೆಲೆ ಸಂಗೀತದಲ್ಲಿ ಮೂರ್ತಿಯ ಪರಿಣತಿಗೆ ನನಗೆ ತಿಳಿದಂತೆ, ಏನಿಲ್ಲವೆಂದರೂ ನಾಲ್ಕೂವರೆ ದಶಕಗಳ ಗಟ್ಟಿ ಅನುಭವವಿದೆ. ಸಾಲದ್ದಕ್ಕೆ ಈತ ತಂಡ ಕಟ್ಟಿಕೊಂಡು, ಲೋಕಚರಿತದಂತೆ ಕೇವಲ ರಂಗಗೀತೆಗಳನ್ನು ಊರೂರಿನಲ್ಲಿ ಪ್ರಸ್ತುತಪಡಿಸಿದ್ದೂ ನಾನು ಕೇಳಿದ್ದೇನೆ. ಹಾಗಾಗಿ “ಇಲ್ಲ” ಎನ್ನುವ ಯೋಚನೆಯೂ ಬರಲಿಲ್ಲ. ಇನ್ನು ದೇರಾಜೆ ಮೂರ್ತಿಯದೇ ಮಾತುಗಳಿಗೆ …ಅಶೋಕವರ್ಧನ]
ಸಂಗೀತ ಎನ್ನುವುದು ಬಹಳ ದೊಡ್ಡ ಸಂಗತಿ. ಸಂಗೀತ ಎಂದರೆ ಮನಸ್ಸನ್ನು ತೋಡಿಕೊಳ್ಳುವುದು. ಶಾಸ್ತ್ರೀಯ ಸಂಗೀತ, ಚಿತ್ರಗೀತೆ, ರಂಗ ಗೀತೆ, ಭಾವಗೀತೆ, ಜನಪದ ಗೀತೆ, ಯಕ್ಷಗಾನದ ಹಾಡು, ಪಾಶ್ಚಾತ್ಯ ಸಂಗೀತ ಹೀಗೆ… ಸಂಗೀತದ ಅನೇಕ ಪ್ರಕಾರಗಳಲ್ಲಿ ಕನಿಷ್ಟ ಯಾವುದಾದರೂ ಒಂದನ್ನಾದರೂ ಇಷ್ಟ ಪಡದವರು ಇರಲಾರರು. ಯಾವುದೋ ಒಂದು ಶ್ರೇಷ್ಟ, ಇನ್ನೊಂದು ಕನಿಷ್ಟ ಎಂದು ಹೇಳುವಂತೆಯೇ ಇಲ್ಲ. ಎಲ್ಲಾ ಪ್ರಕಾರಗಳಲ್ಲಿಯೂ ಮನಸ್ಸಿನೊಂದಿಗಿರುವ ಸಂಬಂಧವೇ ಮುಖ್ಯವಾಗುತ್ತದೆ. ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುತ್ತದೆ. ಆ ಉದ್ದೇಶ ಸಾರ್ಥಕವಾಗಬೇಕಾದರೆ ಮನಸ್ಸು ಅದರಲ್ಲೇ ಲೀನವಾಗಬೇಕಾಗುತ್ತದೆ. ಚಿತ್ರಗೀತೆಯಲ್ಲಿ ಬಿ.ಜಿ.ಎಮ್. (ಬ್ಯಾಕ್ ಗ್ರೌಂಡ್ ಮ್ಯೂಸಿಕ್) ಅಂದರೆ ಎರಡು ಚರಣಗಳ ನಡುವಿನ ಕಾಲೀ ಜಾಗದ ಅಥವಾ ಹಾಡಿನ ಹಿಂದೆ ಮುಂದೆ ಇರುವ ಸಂಗೀತ… ಅಂದರೆ …ಸಾಮಾನ್ಯವಾಗಿ ಹೇಳುವ ಗ್ಯಾಪ್ ಮ್ಯೂಸಿಕ್ ಹುಟ್ಟಿಕೊಂಡದ್ದು ಯಾಕೆ ಅಂದರೆ … ಆ ಕಾಲೀ ಜಾಗದ ಸಂದರ್ಭದಲ್ಲೂ ದೃಶ್ಯ ಇದ್ದೇ ಇರುವುದರಿಂದ. ಆದರೆ ಅದನ್ನೇ ಭಾವ ಗೀತೆಗಳಲ್ಲಿ ಬಳಸುವುದು ಎಷ್ಟು ಸರಿ!! ಯಕ್ಷಗಾನ ಆಟದಲ್ಲಿ ಹಾಡಿದಂತೆ, ತಾಳಮದ್ದಳೆ ಕೂಟದಲ್ಲಿ ಭಾಗವತರು ಹಾಡುವುದು ಸರಿಯಾದೀತೇ…
ರಾಷ್ಟ್ರ ಗೀತೆ, ನಾಡಗೀತೆಗಳಿಗೆ ಬಿ.ಜಿ.ಎಮ್. ಸೇರಿಸುವುದಂತೂ… ಶಿಖರಾಪರಾಧ ಅಂತ ಹಿಂದೊಮ್ಮೆ ಸಾಹಿತಿ ಜಯಂತ ಕಾಯ್ಕಿಣಿ ಪ್ರಜಾವಾಣಿಯಲ್ಲಿ ಬರೆದಿದ್ರು. ಹೀಗೆ ಯಾವುದೇ ಪ್ರಾಕಾರದ ಸಂಗೀತದ ಉದ್ದೇಶ ಮೊದಲು ಅರ್ಥವಾದರೆ … ಆ ಸಂಗೀತವನ್ನು ಅನುಭವಿಸುವುದಕ್ಕೂ ವಿಶ್ಲೇಷಿಸುವುದಕ್ಕೂ ಸಾದ್ಯವಾಗುತ್ತದೆ. ಅಂದರೆ….. ಹಿಂದೆ ಮುಂದೆ ಗೊತ್ತಿಲ್ಲದೇ … ಹೊಗಳುವುದು … ತೆಗಳುವುದು ಎರಡೂ ಅಪಕ್ವವಾದ ಮನಸ್ಥಿತಿ.
ನಾಟಕದ ಹಾಡುಗಳು ಅಂದರೆ ರಂಗ ಗೀತೆಗಳು ಬಹಳ ಹಿಂದಿನಿಂದಲೂ ರಸಿಕರ ಮನ ಸೂರೆಗೊಂಡವುಗಳೇ. ಹಿಂದೆಲ್ಲಾ ನಾಟಕ ಅಂದರೆ… ಹಾಡು ಅನಿವಾರ್ಯವೇ ಆಗಿತ್ತಂತೆ. ನಟರಿಗೆ ಹಾಡಲು ತಿಳಿದಿರಬೇಕಾದ್ದು ಕಡ್ಡಾಯವಾಗಿತ್ತಂತೆ. ಎಷ್ಟೋ ಸಾರಿ ದೊಡ್ಡ ದೊಡ್ಡ ಗಾಯಕರು ನಟರಾದ ಸಂದರ್ಭದಲ್ಲಿ ಪ್ರೇಕ್ಷಕರು ಹೆಚ್ಚು ಹೆಚ್ಚು ಹಾಡನ್ನೇ ಬಯಸಲು ಸುರು ಮಾಡಿ, ಕೆಲವೊಮ್ಮೆ ದೃಶ್ಯವೊಂದು ಸಂಗೀತ ಕಛೇರಿಯೇ ಆದ ಉದಾಹರಣೆಗಳಿವೆಯಂತೆ. ಖಳ ಪಾತ್ರವೊಂದು ಕರುಣಾಜನಕವಾಗಿ ಹಾಡುತ್ತಾ ಸಾಯುವ ದೃಶ್ಯ, ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಕಾರಣವಾಗಿ, ಒನ್ಸ್ ಮೋರ್ ನೊಂದಿಗೆ ಚಪ್ಪಾಳೆಯ ಸುರಿಮಳೆಯಾಗಿ, ಪಾತ್ರ ಎದ್ದು ನಿಂತು ಮತ್ತೊಮ್ಮೆ ಹಾಡಿ, ಪುನ ಸಾಯುವ ದೃಶ್ಯ …. ಇಂದು ಆಭಾಸವೆನಿಸಿದರೂ ಆ ಕಾಲದಲ್ಲಿ ಅದನ್ನು ಯಾರೂ ಪ್ರಶ್ನೆ ಮಾಡದೇ ಒಪ್ಪಿಕೊಂಡಿದ್ದರೇನೋ…!! ಇಂತಾದ್ದನ್ನೆಲ್ಲಾ ಟಿ.ಪಿ.ಕೈಲಾಸಂ ಅವರು ತನ್ನ ನಾಟಕಗಳಲ್ಲಿ ಲೇವಡಿ ಮಾಡಿದರೂ, ರಂಗ ಸಂಗೀತದ ಹೊಸ ದಾರಿ ಹುಡುಕಲು ಪ್ರಾಯಷಃ ಅವರಿಂದ ಸಾದ್ಯವಾದಂತೆ ಕಂಡುಬರುವುದಿಲ್ಲ…
ರಂಗ ಸಂಗೀತ ಎನ್ನುವುದು ಸಂಗೀತದಲ್ಲಿ ಪ್ರತ್ಯೇಕವಾದ ಪದ್ದತಿ ಎನ್ನುವುದನ್ನು ಮನದಟ್ಟು ಮಾಡಿಸಲು ಬಿ.ವಿ.ಕಾರಂತರೇ ಬರಬೇಕಾಯ್ತು. ಹರಿಕಥೆ, ಯಕ್ಷಗಾನದ ಹಾಡುಗಳು, ಸಾಂಪ್ರದಾಯಿಕ ಕಂಪೆನಿ ನಾಟಕ, ಸಂಗೀತಗಳಿಂದಲೇ ಅನುಭವ ಪಡೆದ ಬಿ.ವಿ.ಕಾರಂತರು, ರಂಗಗೀತೆಗಳಿಗೆ, ರಂಗ ಸಂಗೀತಕ್ಕೆ ಹೊಸ ಬಾಷ್ಯವನ್ನೇ ಬರೆದರು. ಬಿ.ವಿ.ಕಾರಂತರು ಸಂಯೋಜಿಸಿದ ರಂಗ ಗೀತೆಗಳನ್ನು ಕೇಳಿದ ಮೇಲೆಯೇ ಪ್ರಾಯಷಃ ವಿಚಾರವಂತರಿಗೂ, ಇಷ್ಟರವರೆಗೆ ತಪ್ಪಿದ್ದೆಲ್ಲಿ ಎನ್ನುವ ಅರಿವಾಯ್ತೋ ಏನೋ. ಕಾರಂತರು ಹೇಳ್ತಾರೆ ….ರಂಗಗೀತೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲ ಅಂತ. ಅಂದರೆ ಆಯಾ ದೃಶ್ಯಗಳ ಜೊತೆಗೆ ಮಾತ್ರ ಹಾಡಿಗೊಂದು ಸಂಬಂಧ. ರಂಗ ಗೀತೆ ಅಂದರೆ ಅದು ಬರೇ ಮಾಧುರ್ಯಕ್ಕಾಗಿ ಅಲ್ಲ ಅದು ಮಾತಾಗ್ಬೇಕು ಅಂತ. ಕಾರಂತರಿಗೆ ಸಂತೆಯ ಗಲಾಟೆಯಲ್ಲೂ ಸಂಗೀತ ಕಂಡಿತ್ತು.
ಸಂಗೀತ ಅಂದರೆ ಶಿಸ್ತಿಗೊಳಪಟ್ಟ ಸದ್ದು ಎನ್ನುವುದು ಕಾರಂತರ ಮಾತು. ಕ್ರೂರಿ ಎಂದೇ ಪ್ರಸಿದ್ದನಾದ ಮುಸಲೋನಿಯಂತವನನ್ನೂ ಸಂಗೀತದ ಮೂಲಕ ಕರಗಿಸಿದ ಓಂಕಾರನಾಥ ಠಾಕೂರರ ಶಿಷ್ಯತ್ವ ಪ್ರಾಯಷಃ ಕಾರಂತರ ದಾರಿಯನ್ನು ಇನ್ನಷ್ಟು ಗಟ್ಟಿಗೊಳಿಸಿರಬೇಕು. ಆದ್ದರಿಂದಲೇ ಕಾರಂತರು …ನಾಟಕದ ಹಾಡು ಮಾತಾಗಬೇಕು… ಎಂದರೂ ಅವರ ರಂಗಗೀತೆಗಳು ಬರೇ ಮಾತಾಗಿ ಉಳಿಯದೇ …ಭಾವಕ್ಕೆ ಮಿಡಿಯುವ ಗುಣವನ್ನು ಉಳಿಸಿಕೊಂಡದ್ದು.
ಆಧುನಿಕ ನಾಟಕಗಳ ಸಂದರ್ಭದಲ್ಲಿ …ಯಾಕೋ ಸಂಗೀತ ಅಂದರೆ ನಾಟಕದ ಹಾಡುಗಳಿಗೆ ಮಾತ್ರ ಅನ್ವಯಿಸಿ ಹೇಳುವ ಕ್ರಮವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ …ನಾಟಕ ಪ್ರದರ್ಶನಕ್ಕೆ ಸಂಬಂಧ ಪಟ್ಟಂತೆ ಸಂಗೀತ ಎಂದರೆ, ಹಾಡುಗಳು ಮಾತ್ರ ಅಲ್ಲ. ದ್ವನಿಗಳೂ ಸಂಗೀತವೆ. ನಿಶ್ಶಬ್ಧವೂ ಸಂಗೀತವೆ. ವಾದ್ಯಗಳು ಮಾತ್ರವಲ್ಲ, ಅವಾದ್ಯಗಳೂ ಸಂಗೀತವೆ. ನಾಟಕದ ಸಂಗೀತಕ್ಕೆ ಸಂಬಂಧ ಪಟ್ಟಂತೆ …ನಾಟಕ ನಿರ್ದೇಶಕನಿಗೆ ಲಯ- ಶ್ರುತಿಗಳ ಅರಿವು ಸ್ವಲ್ಪವಾದರೂ ಇರಲೇ ಬೇಕಾಗುತ್ತದೆ. ಆತನಿಗೆ ತನ್ನ ನಾಟಕಕ್ಕೆ ಏನು ಬೇಕು ಏನು ಬೇಡ ಎನ್ನುವ ತಿಳುವಳಿಕೆ ಇರಬೇಕಾದ್ದು ಅನಿವಾರ್ಯ.
ನಟರ ಚಲನೆಯಲ್ಲಿ, ಸಂಭಾಷಣೆಯಲ್ಲಿ ಲಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಿದ್ದರೆ ಮಾತ್ರ… ಬೇಕಾದಲ್ಲಿ ಬಾಹ್ಯಸಂಗೀತವನ್ನು ಸೇರಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಸಂಗೀತವು ನಾಟಕಕ್ಕಿಂತ ಬೇರೆ ಉಳಿದು ಬಿಡುತ್ತದೆ.
ಸಂಗೀತ ಹೀಗೆಯೇ ಇರಬೇಕೆಂದು ಹೇಳುವುದು ಕಷ್ಟ. ರಂಗ ಸಂಗೀತ ರೆಡಿಮೇಡ್ ಅಲ್ಲವೇ ಅಲ್ಲ, ರಂಗದಲ್ಲೇ ಹುಟ್ಟಿಕೊಳ್ಳುವಂತಾದ್ದು. ನಾಟಕದಲ್ಲಿ – ಸಂಗೀತ, ಅಂದರೆ …ಈ ಹಾಡು ಇತ್ಯಾದಿ ಬಾಹ್ಯ ಸಂಗೀತ ಇರಲೇಬೇಕೆಂಬ ಹಠ ಬೇಕಾಗಿಲ್ಲ.
ಇದ್ದರೂ ಶ್ರುತಿ-ಲಯ ಗಳನ್ನು ನಿರ್ಲಕ್ಷಿಸಬಾರದು. ಹಾಗೆಂದು ಶ್ರುತಿ, ರಾಗ, ಲಯ, ತಾಳ ಎನ್ನುತ್ತಾ, ಶಾಸ್ತ್ರೀಯ ಚೌಕಟ್ಟಿನಿಂದ ಹೊರಬರಲಾರದವರು ಹಾಡುವುದೂ, ಸಂಗೀತ ವಿನ್ಯಾಸ ಮಾಡುವುದು, ಸ್ವಲ್ಪ ಕಿರಿಕಿರಿ ಮತ್ತು ಅಪಾಯ ಕೂಡಾ.
‘ಮಕ್ಕಳ ನಾಟಕಕ್ಕೆ ಮಕ್ಕಳಿಂದಲೇ ಸಂಗೀತ ಮಾಡಿಸಬೇಕು’ ಎನ್ನುವ ಹಠ ಇದ್ದರೆ, ನಾಟಕ ಒಂದು ‘ಸಂತೆ’ಯಾಗದಂತೆ, ಕಲೆಯ ಚೌಕಟ್ಟನ್ನು ಮೀರದಂತೆ ನೋಡಿಕೊಳ್ಳಲೇ ಬೇಕು. ಇಲ್ಲವಾದಲ್ಲಿ ಪ್ರೇಕ್ಷಕರಿಗೆ ದೊಡ್ಡ ಹಿಂಸೆಯೇ ಸರಿ. ನಾಟಕ ಅಭ್ಯಾಸದ ಸಂದರ್ಭದಲ್ಲಿ, ಮಕ್ಕಳೇ, ತಮ್ಮ ಕೈಗೆ ಸಿಕ್ಕಿದ ಅವಾದ್ಯಗಳಿಂದ…. ಸಂಗೀತ ನೀಡುವಂತೆ ಪ್ರೇರೇಪಿಸಬಹುದು, ಮತ್ತು ಅದು ಒಳ್ಳೆಯದು ಕೂಡಾ. ಮಕ್ಕಳಿಗೆ …ಓ… ತಾನೂ ಸಂಗೀತ ನೀಡಬಲ್ಲೆ… ಎನ್ನುವ ವಿಶ್ವಾಸ ಮೂಡುತ್ತದೆ ಎನ್ನುತ್ತಾರೆ ಬಿ.ವಿ.ಕಾರಂತರು.
ನಾಟಕದ ನಿರ್ದೇಶಕರಿಗೆ, ಸಂಗೀತ ವಿನ್ಯಾಸಕಾರರಿಗೆ ಧ್ವನಿ ವರ್ಧಕವನ್ನು ಬಳಸಿಕೊಳ್ಳುವ ಕುಶಲತೆ ಇರಲೇ ಬೇಕು. ಇಲ್ಲವಾದರೆ ಕೋಮಲವಾಗಿರಬೇಕಾದ ಸಂಗೀತ ರೌದ್ರವಾಗುವ ಅಪಾಯ ಇದೆ. ನಾಟಕ ಸ್ವಲ್ಪ ಕಳಪೆಯಾದರೆ, ಸಂಗೀತದ ಮೂಲಕ ಮೇಲೆತ್ತಬಹುದು ಎನ್ನುವುದು ತಪ್ಪು ಕಲ್ಪನೆ. ನಾಟಕ ಮತ್ತು ರಂಗಸಂಗೀತವನ್ನು ಕೇವಲ ಒಂದು ವಾರ್ಷಿಕೋತ್ಸವದ ಮಟ್ಟದಲ್ಲಿಟ್ಟು ನೋಡಿದ್ದರಿಂದಲೇ ಇಂತಹ ಅಭಿಪ್ರಾಯ ಬೆಳೆದು ಬಂದಿರಬಹುದು. …ಬಿ.ವಿ.ಕಾರಂತರು ಸಂಗೀತದ ಮೂಲಕ ನಾಟಕವನ್ನು ಎತ್ತರಿಸಿದರು … ಅಂದರೆ… ಅಲ್ಲಿ ಸಂಗೀತ ನಾಟಕಕ್ಕಿಂತ ಬೇರೆಯಾಗಿ ಉಳಿಯದೇ ನಾಟಕದ ಭಾಗವೇ ಆಗಿರ್ತಾ ಇತ್ತು. ಯಾಕೆಂದರೆ ಬಿ.ವಿ.ಕಾರಂತರಿಗೆ ನಾಟಕವೂ ಸಂಗೀತವೂ ಒಂದೇ.
ರಂಗಸಂಗೀತದಲ್ಲಿ ಎಲ್ಲರೂ ಕಾರಂತರನ್ನೇ ಅನುಕರಿಸಬೇಕೆಂದು ಅರ್ಥವಲ್ಲ. ಆದರೆ … ಆ ಮಟ್ಟದ ಕಲಾಕೃತಿಯನ್ನು ಸಾಧಿಸ ಬೇಕಿದ್ದರೆ … ಬಿ.ವಿ.ಕಾರಂತರನ್ನು ಮತ್ತು … ಬಿ.ವಿ.ಕಾರಂತರಂತೆ ಧ್ಯಾನಿಸಬೇಕಾದ ಅನಿವಾರ್ಯತೆ ಇದೆ.
ಪೂರಕ ನೋಡುವಿಕೆ: ಬಿ.ವಿ ಕಾರಂತರ ಕುರಿತಾಗಿ ಪಿ.ಎನ್. ರಾಮ ಚಂದ್ರ ನಿರ್ದೇಶಿಸಿದ ಸಾಕ್ಷ್ಯಚಿತ್ರದ ತುಣುಕುಗಳು:
ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಲೇಖನ ಮುದ ನೀಡಿತು. ಹೀಗೆಯೇ ಉತ್ತರ ಕನ್ನಡದ ರಂಗ ಸಂಗೀತಕ್ಕು ಮರಾಠೀ ನೃತ್ಯಗೀತೆಯ ಗೆಳೆತನದಿಂದ ಮತ್ತೊಂದು ರಂಗು ಸೇರಿಕೊಂಡಿದೆ. ಅದನ್ನು ಸುಂದರವಾಗಿ ಹಾಡಬಲ್ಲ ನನ್ನ ಗುರುಬಂಧು ಪಂ| ಅಶೋಕ ಹುಗ್ಗಣ್ಣನವರ್ ಹೊನ್ನಾವರದಲ್ಲಿ ಸಂಗೀತ ಪ್ರಾಧ್ಯಾಪಕೆ ಎಲ್ಲರೂ ಭೇಟಿಯಾಗೋಣ. ಹಾಗೇ ನಾನು ಬರೆದ ಭೀಮಸೇನ ಜೋಶಿ ಪುಸ್ತಕ ಓದಿದ್ರಾ?