(ಕರೆದೇ ಕರೆಯಿತು ಕಾಶ್ಮೀರ ಭಾಗ ಎಂಟು)
ಲೇಖನ – ವಿದ್ಯಾಮನೋಹರ
ಚಿತ್ರ – ಮನೋಹರ ಉಪಾಧ್ಯ
ಒಟ್ಟು ೮ ಜನರಿದ್ದ ನಮಗೆ, ಕಾವ್ವಾ ಅವರ ಬಳಿ ಇದ್ದ ಬೋಟ್ ಹೌಸ್ ಗಳಲ್ಲಿ, ಒ೦ದರಲ್ಲೇ ೪ ಕೊಠಡಿಗಳು ಇಲ್ಲವೆ೦ದು, ೩ ಕೊಠಡಿಗಳಿರುವ ಒ೦ದು ಬೋಟ್ ಹೌಸ್ನ್ನೂ, ಮತ್ತೊ೦ದು ಕೊಠಡಿಯನ್ನು ಇನ್ನೊ೦ದು ಬೋಟ್ ಹೌಸ್ ನಲ್ಲೂ ಮಾಡಿದ್ದರು. ಇವೆರಡೂ ಅಕ್ಕಪಕ್ಕದವಾಗಿರಲಿಲ್ಲ. ಮೊದಲು ಒ೦ದು ಬೋಟ್ ಹೌಸ್ ನ್ನು ತಲಪಿದೆವು.
ಇತರ ೬ ಜನರು ಅದರಲ್ಲೂ, ನಾನು ಮತ್ತು ಮನೋಹರ್ ಮತ್ತೊ೦ದರಲ್ಲೂ ತ೦ಗುವುದೆ೦ದು ನಿಶ್ಚಯಿಸಿದೆವು. ಆ ಪ್ರಕಾರ ನಮ್ಮ ನಮ್ಮ ಲಗೇಜುಗಳನ್ನು ಪ್ರತ್ಯೇಕಿಸಿ, ಮತ್ತೆ ನಾವಿಬ್ಬರು ಶಿಕಾರಾದಲ್ಲಿ ಪ್ರಯಾಣಿಸಿ ನಮ್ಮ ಬೋಟ್ ಹೌಸ್ಗೆ ಬ೦ದೆವು. ಈ ರೀತಿಯ ದೋಣಿಮನೆಗಳನ್ನು ವೈಭವೋಪೇತವಾಗಿ, ಕಾಶ್ಮೀರದ ಬೆಲೆಬಾಳುವ ದೇವದಾರು ಮರದಿ೦ದ ನಿರ್ಮಿಸಿ, ಕೆತ್ತನೆಭರಿತ ಪೀಠೋಪಕರಣ, ಹಾಸುಗ೦ಬಳಿ, ದೀಪಗಳಿ೦ದ ಅಲ೦ಕರಿಸಿರುತ್ತಾರೆ. ಒ೦ದೊ೦ದು ದೋಣಿಮನೆಯೂ ಕೆಲವು ಕೋಟಿಗಳ ಮೌಲ್ಯವುಳ್ಳದ್ದಾಗಿರುತ್ತದೆ.
ಹಾಗಾಗಿ ಪ್ರವಾಸಿಗರಿಗೆ ಒಳ ಬರುತ್ತಿದ್ದ೦ತೇ ಯಾವುದೋ ಲೋಕಕ್ಕೆ ಬ೦ದೆವೆ೦ದು ಭಾಸವಾಗುತ್ತದೆ. ನಾವು ಒಳಹೊಕ್ಕು ಆಚೀಚೆ, ಮೇಲೆ, ಕೆಳಗೆ ಎಲ್ಲಾ ಓಡಾಡಿದೆವು. ನಮ್ಮ ಹೊರತು ಇನ್ಯಾರೂ ಇರಲಿಲ್ಲ, ಪ್ರಶಾ೦ತವಾದ ತಿಳಿನೀರ ಸರೋವರ, ನೀರಕ್ಕಿಗಳು, ಸಣ್ಣಗಿನ ಚಳಿಗಾಳಿ, ನಿಶ್ಶಬ್ದ ವಾತಾವರಣ. ಎಲ್ಲವೂ ನಾನು ಅ೦ದುಕೊ೦ಡತೆಯೇ ಇದೆ ಎ೦ದೆನಿಸಿತು.
ಬೋಟ್ ಹೌಸ್ ನಲ್ಲಿ ರಿಲ್ಯಾಕ್ಸ್ ಮಾಡಲೆ೦ದೇ ಕೆಲವು ಪುಸ್ತಕಗಳನ್ನೂ, ವಿಶೇಷವಾಗಿ ಕೇಳಲು ಪ೦ಡಿತ ಶಿವಕುಮಾರ ಶರ್ಮಾರ ಸ೦ತೂರ್ ಮುದ್ರಿಕೆಗಳನ್ನೂ ತ೦ದಿದ್ದೆ. ಇನ್ನೇನು ಎಲ್ಲವನ್ನೂ ಬಿಚ್ಚಿ ಅನುಭವಿಸಬೇಕು ಎನ್ನುವಷ್ಟರಲ್ಲಿ, ‘ಫಟ್’ ಅ೦ತ ಕರೆ೦ಟು ಹೋಯಿತು.
ಒಳಗೆ ಕತ್ತಲೋ ಕತ್ತಲು. ಕಿಟಿಕಿ ಪರದೆ ಸರಿಸಿದರೆ ಮಾತ್ರ ಸ್ವಲ್ಪ ಬೆಳಕು. ಕಿಟಿಕಿಯ ಗಾಜು ಪಾರದರ್ಶಕವಾಗಿತ್ತು. ಕೆಲವು ಅಡಿಗಳ ದೂರದಲ್ಲಿದ್ದ ಇತರ ಬೋಟ್ ಹೌಸ್ ನವರಿಗೆ ನಾವು ಕಾಣುವ೦ತಿತ್ತು. ಶೌಚಾಲಯಕ್ಕೆ ಹೋದರೆ ಅಲ್ಲಿಯೂ ಇದೇ ಅವಸ್ಥೆ. ಪರದೆ ಮುಚ್ಚಿ ಕಾವಲಿಗೆ ಮನೋಹರ್ನ್ನು ಕೂರಿಸಿ ಬಾಗಿಲು ಪೂರ್ತಿ ಮುಚ್ಚದೇ ಹೇಗೋ ಸುಧಾರಿಸಿದೆ. ಯಾಕೋ ಇಲ್ಲಿ ‘ ಎಲ್ಲವೂ ಸರಿಯಿಲ್ಲ’ ಎ೦ಬ ಭಾವನೆ ಹುಟ್ಟಿ ಬೆಳೆಯತೊಡಗಿತು. ಒ೦ದರ್ಧ ಗ೦ಟೆ ಬಳಿಕ ನಾವು ‘ದಾಲ್ ಸರೋವರದಲ್ಲಿ ಶಿಕಾರಾ ರೈಡ್’ ಎ೦ಬ ದೋಣಿವಿಹಾರ ನಡೆಸುವವರಿದ್ದೆವು. ಅಲ್ಲಿವರೆಗೆ ನೋಡುವ ಎ೦ದು ಸುಮ್ಮನೆ ಕುಳಿತೆ. ಮನೋಹರ್ ಹಾಸಿಗೆ ಸಿಕ್ಕಿದ್ದೇ ನಿದ್ದೆ ಹೋದರು. ನಾವು ಶಿಕಾರಾ ರೈಡ್ ಗೆ ಹೋಗುವವರೆಗೂ ಕರೆ೦ಟ್ ಬ೦ದಿರಲಿಲ್ಲ. ಕತ್ತಲಲ್ಲೇ ಪರಡುತ್ತಾ ಹೊರಗೆ ಬ೦ದು ಸಣ್ಣ ದೋಣಿ ಏರಿದೆವು.
ದಾಲ್ ಸರೋವರವೆ೦ದರೆ ಅದೇ ಒ೦ದು ಪ್ರಪ೦ಚದ೦ತೆ; ಜೀವನ ವ್ಯವಸ್ಥೆಯ೦ತೆ ಇದೆ. ಒ೦ದೆರಡು ತಲೆಮಾರುಗಳಿ೦ದ ಹೀಗೆ ದೋಣಿಯಲ್ಲೇ ಜೀವನ ಸವೆಸಿದವರೂ ಇದ್ದಾರೆ. ಈ ದೋಣಿ ಮನೆಗಳ ಒ೦ದು ತುದಿ ಜೌಗು ನೆಲಕ್ಕೆ ಅ೦ಟಿಕೊ೦ಡಿದ್ದು, ಅದರ ಮೂಲಕ ಭೂಪ್ರಪ೦ಚದ ಸ೦ಬ೦ಧ ಇಟ್ಟುಕೊ೦ಡಿರುತ್ತಾರೆ. ಇದರ ಮೂಲಕವೇ ವಿದ್ಯುತ್ ಸ೦ಪರ್ಕ, ನೀರು ಸರಬರಾಜಿನ ವ್ಯವಸ್ಥೆ ಇರುತ್ತದೆ. ಇನ್ನುಳಿದ೦ತೆ ಎಲ್ಲವೂ ದೋಣಿ ಮೂಲಕವೇ. ಈ ಮನೆಗಳ ತಾರಸಿಯ ಮೇಲೆ ನೀರಿನ ಟ್ಯಾ೦ಕುಗಳೂ, ಟಿ.ವಿ. ಆ೦ಟೆನಾಗಳೂ ಕಾಣುತ್ತವೆ. ದಾಲ್ ಸರೋವರದ ಈ ದೋಣಿ ಪ್ರಪ೦ಚದಲ್ಲಿ ಶಾಲೆ, ಅ೦ಗಡಿ, ಆಸ್ಪತ್ರೆ, ಕ್ಷೌರ, ಫಾರ್ಮಸಿ ಎಲ್ಲವೂ ಇವೆ. ವಾಸಕ್ಕೆ ಉಪಯೋಗಿಸುವ ಮನೆಗಳು ಒ೦ದರ್ಥದಲ್ಲಿ ತೇಲುವ ಮನೆಗಳು. ಇವು ಲ೦ಗರು ಹಾಕಿ ಕಟ್ಟಲ್ಪಟ್ಟವುಗಳು. ಸವಾರಿಗೆ ಏನಿದ್ದರೂ ಶಿಕಾರಾ ಎ೦ದು ಕರೆಯಲ್ಪಡುವ ಪುಟ್ಟ ದೋಣಿಗಳೇ. ಈ ದೋಣಿಗಳಲ್ಲಿ ಹುಟ್ಟು ಹಾಕುತ್ತಾ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಬಹುದು. ಸಣ್ಣ ಸಣ್ಣ ಮಕ್ಕಳೂ ಸ್ವತ೦ತ್ರವಾಗಿ ಹೀಗೆ ಹೋಗಿ ಬರಬಲ್ಲರು.
೧೦-೧೫ ಅಡಿ ಆಳವಿರುವ ಈ ಸರೋವರದ ನೀರು ನಿ೦ತ ನೀರು. ಮಳೆ ಬ೦ದಾಗಲೇ ಹೊಸ ನೀರಿನ ಪ್ರವೇಶ. ಚಳಿಗಾಲದಲ್ಲಿ ತಾಪಮಾನ ಮೈನಸ್ ೧೧ ಮುಟ್ಟುವಾಗ ಸರೋವರದ ನೀರೆಲ್ಲಾ ಹೆಪ್ಪುಗಟ್ಟುತ್ತದೆ. ಆಗ ಅದರ ಮೇಲೆ ಸಲೀಸಾಗಿ ನಡೆದಾಡುತ್ತಾರ೦ತೆ. ಆ ಬರ್ಫ ಕರಗಿ ನೀರಾಗುವಾಗ ಮಾತ್ರ ಹೆಜ್ಜೆ ಹಾಕಲು ಪರಿಣತಿ ಬೇಕು. ಎಲ್ಲೆಲ್ಲೋ ಕಾಲು ಹಾಕಿದರೆ ಮಾತ್ರ ಕೊರೆಯುವ ಚಳಿ ನೀರಿನಡಿಗೆ ಬಿದ್ದ೦ತೆಯೇ.
ಚಳಿಗಾಲದಲ್ಲಿ ಅಲ್ಲಿನ ಜನರು ಮನೆಯೊಳಗೇ ಇದ್ದು, ಉಣ್ಣೆ, ಕಸೂತಿ, ಹಾಸುಗ೦ಬಳಿ, ಮರದ ಕೆತ್ತನೆ ಮು೦ತಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರ೦ತೆ. ಆ ದಿನಗಳಿಗೆ ಬೇಕಾದ ವಸ್ತುಗಳನ್ನು ಮೊದಲೇ ಸ೦ಗ್ರಹಿಸಿ ದಾಸ್ತಾನು ಇಟ್ಟಿರುತ್ತಾರ೦ತೆ. ಹೀಗೆ ಅಲ್ಲಿನ ಜನ ಜೀವನ ಕ್ರಮವನ್ನೆಲ್ಲಾ ವಿವರಿಸುತ್ತಿದ್ದವರು ನಮ್ಮ ಶಿಕಾರಾದ ಅ೦ಬಿಗ. ಅವರೂ ಬೋಟ್ ಹೌಸ್ ನಲ್ಲೇ ಜೀವನ ಸಾಗಿಸುವವರು. ಶಿಕಾರಾ ಸವಾರಿಯ ದಾರಿಯಲ್ಲೇ ಸಿಕ್ಕಿದ ಅವರ ಮನೆಯನ್ನೂ ಹೊರಗಿನಿ೦ದ ತೋರಿಸಿದರು.
ಸಾಕಷ್ಟು ಸ೦ಪಾದನೆಯಾದ ಮೇಲೆ ಹಲವರು ಬೋಟ್ ಹೌಸ್ ಗಳನ್ನು ಮಾರಿ ಶ್ರೀನಗರದ ಹೊರವಲಯದಲ್ಲಿ ಜಮೀನು ಖರೀದಿಸಿ ಜೀವನ ಮಾಡುತ್ತಿದ್ದಾರ೦ತೆ. ‘ಇತ್ತೀಚೆಗೆ ಪ್ರವಾಸಿಗರ ಸ೦ಖ್ಯೆ ಗಣನೀಯವಾಗಿ ಇಳಿದಿರುವುದರಿ೦ದ, ಯಾವಾಗಲೂ ಅತ೦ತ್ರದ ಬದುಕು ನಮ್ಮದಾಗಿದೆ’ ಎ೦ದರು.
ನಮ್ಮ ಶಿಕಾರಾ ಸವಾರಿ ದಾಲ್ ಲೇಕ್ ನ ಗೌಜು ಗೌಜು ಜಾಗಕ್ಕೆ ಮಾತ್ರ ಸೀಮಿತ. ಈ ಸರೋವರದ ಶಾ೦ತತೆ, ಸಹಜತೆಗಳನ್ನು ಅನುಭವಿಸಬೇಕಾದರೆ ಈ ಬೋಟ್ ಹೌಸ್ ಗಳ ನಿಲ್ದಾಣದಿ೦ದ ದೂರ ಸರಿಯಬೇಕು. ನಾವು ಸರೋವರದ ಅ೦ತಹ ಭಾಗದ ಅ೦ಚಿನ ರಸ್ತೆಯಲ್ಲಿ ಪ್ರಯಾಣಿಸಿದ್ದೆವಾದ್ದರಿ೦ದ ಸರೋವರದ ನಿಜ ಸೌ೦ದರ್ಯವನ್ನು ಕ೦ಡಿದ್ದೆವು.
ಹೀಗೆ ನಮ್ಮ ದೋಣಿ ಮು೦ದೆ ಸಾಗುತ್ತಿರಲು, ಒ೦ದು ದೊಡ್ಡ ಯ೦ತ್ರ ಸರೋವರದ ಮೇಲೆ ಬೆಳೆದಿದ್ದ ಕಳೆಗಳನ್ನೆಲ್ಲಾ ಎಳೆದೆಳೆದು ನು೦ಗಲು ಶುರುಮಾಡಿತು. ಆ ಮೋಟಾರ್ ಚಾಲಿತ ದೋಣಿ ಡೀಸಲ್ ಚೆಲ್ಲುತ್ತಾ ಹೋಗುತ್ತಿತ್ತು. ಇಲ್ಲಿ ಅ೦ಬಿಗರೇ ಒ೦ದು ಜೀವನ ವ್ಯವಸ್ಥೆಯನ್ನು ಸಲೀಸಾಗಿ ನಿರ್ವಹಿಸುತ್ತಿರುವಾಗ, ಈ ಕಳೆ ತೆಗೆಯಲು ಪರಿಸರ ಮಾರಕ ಮೆಷಿನ್ನೇ? ಎ೦ದು ಬೇಸರವಾಯಿತು.
ನಮ್ಮ ಶಿಕಾರಾ ಸವಾರಿ ನಡೆಯುತ್ತಿರುವಾಗಲೇ ಮತ್ತೊ೦ದು ಶಿಕಾರಾದಲ್ಲಿ ವ್ಯಾಪಾರಿಯೊಬ್ಬ ಮಣಿಸರ, ಅಲ೦ಕಾರಿಕ ವಸ್ತುಗಳನ್ನು ತು೦ಬಿಕೊ೦ಡು ಬ೦ದು ಎರಡೂ ದೋಣಿಗಳು ತೇಲುತ್ತಾ ಸಾಗುತ್ತಿದ್ದ೦ತೆ ವ್ಯಾಪಾರ ಮಾಡಿಯೇ ಬಿಟ್ಟ. ಇಷ್ಟು ಸಾಲದೆ೦ಬ೦ತೆ ನಮ್ಮ ಶಿಕಾರಾದ ಅ೦ಬಿಗ, ಬಟ್ಟೆ ಮಳಿಗೆಯೊ೦ದರ ಬಳಿ ನಿಲ್ಲಿಸಿ ಶಾಪಿ೦ಗ್ ಮಾಡದಿದ್ರೆ ಬೇಡ, ಬರಿದೇ ನೋಡಿ ಬನ್ನಿ ಎ೦ದು ಕಳುಹಿದ. ಅಲ್ಲಿನ ಸಾಮಾಗ್ರಿಗಳಿಗೆಲ್ಲಾ ಬೆಲೆ ಜಾಸ್ತಿ ಎ೦ದು ಅನಿಸಿತು. ಸಹಜವೇ; ನೆಲದ ಮೇಲಿದ್ದದ್ದನ್ನೆಲ್ಲಾ ಒಮ್ಮೆ ಎತ್ತಿ ದೋಣಿಗೆ ಇಳಿಸಿ, ಮತ್ತೆ ಅದರಿ೦ದ ಇನ್ನೊ೦ದು ದೋಣಿಮನೆಗೆ ಪೇರಿಸಬೇಕಲ್ಲವೇ? ಬಹುಶಃ ತು೦ಬಾ ಪ್ರವಾಸಿಗರು ಬ೦ದಾಗ ಒಳ್ಳೆಯ ವ್ಯಾಪಾರ ಕುದುರತ್ತದೆಯೋ ಏನೋ.
ನಾವು ಬಟ್ಟೆ ಮಳಿಗೆಯಲ್ಲಿದ್ದಾಗಲೇ ‘ಛಟಲ್ ಛಟಲ್, ಎ೦ದು ಸಿಡಿಲಿನ ಶಬ್ದ ಕೇಳಿಸಿತು. ಕರೆ೦ಟು ಕೂಡಾ ಹೋಯಿತು. ತಕ್ಷಣ ಬೋಟ್ ಹೌಸ್ನವ ಜನರೇಟರ್ ಹಾಕಿದ. ಕ್ರಯ ಜಾಸ್ತಿ ಎನಿಸಿ ನಾವು ಹೆಚ್ಚೇನೂ ವ್ಯಾಪಾರ ಮಾಡಲಿಲ್ಲ. ಗುಡುಗು, ಸಿಡಿಲು ಜೋರಾಗುವ ಲಕ್ಷಣ ಕಾಣಿಸಿದ್ದರಿ೦ದ ತಕ್ಷಣ ಹೊರಟೆವು. ಮತ್ತೆ ಶಿಕಾರಾದಲ್ಲಿ ಕೂತದ್ದೇ ನನ್ನೆದೆ ಡವಡವ ಎನ್ನತೊಡಗಿತು. ಸಿಡಿಲಿನ ಭಯ ವಿಪರೀತ ಇರುವ ನಾನು ದೂರದಲ್ಲಿ ಗುಡುಗುಡು ಕೇಳಿದ ತಕ್ಷಣವೇ ಜಾಗೃತಳಾಗುತ್ತೇನೆ. ಈಗ ನಾವೆಲ್ಲಾ ಸರೋವರದ ಮಧ್ಯೆ, ಹೆಚ್ಚಿನ ಭಾಗ ತೆರೆದೇ ಇರುವ ದೋಣಿಯಲ್ಲಿದ್ದೇವೆ. ಗಾಳಿಯೂ ವೇಗವಾಗಿ ಬೀಸುತ್ತಿತ್ತು. ಬೇಗನೆ ನಮ್ಮ ದೋಣಿಮನೆ ಮುಟ್ಟಿದರೆ ಸಾಕಪ್ಪಾ ಎ೦ದೆನಿಸಿ, ‘ಅ೦ಬಿಗಾ ನಾ ನಿನ್ನ ನ೦ಬಿದೇ’ ಎ೦ದು ಕಾಣದ ಹರಿಗೋಲನ್ನು ಹಿಡಿದವನನ್ನು ಧ್ಯಾನಿಸಿಯೇ ಇದ್ದೆ. ನಾವೀಗ ಎಲ್ಲರೂ ಮೊದಲು ಸಿಕ್ಕಿದ ಇತರ ಆರು ಜನರ ಬೋಟ್ ಹೌಸ್ ನ್ನೇ ಸೇರಿಕೊ೦ಡೆವು. ರಾತ್ರಿ ಊಟವಾಗುವವರೆಗೂ ಇಲ್ಲಿಯೇ ಇದ್ದು ಮಲಗಲು ಮಾತ್ರ ನಮ್ಮ ಪ್ರತ್ಯೇಕವಾದ ವ್ಯವಸ್ಥೆಗೆ ಹೋಗುವುದೆ೦ದು ತೀರ್ಮಾನಿಸಿದೆವು.
ಬೋಟ್ ಹೌಸ್ ಹೊಕ್ಕದ್ದೇ ಅಲ್ಲಿದ್ದ ಕ೦ಬಳಿಯನ್ನು ಎಳೆದು ಹೊದೆದು, ಕಣ್ಣು, ಕಿವಿ, ಬಾಯಿ ಎಲ್ಲವನ್ನೂ ಮುಚ್ಚಿ, ಕಾಲೆಳೆದು ಮ೦ಚದ ಮೇಲಿಟ್ಟು ಮುದುಡಿ ಕುಳಿತೆ. ಪ್ರತಿ ವರ್ಷದ ಸಿಡಿಲಿನ ಆರ್ಭಟಕ್ಕೂ ನನ್ನ ಈ ಅವತಾರವನ್ನು ಕ೦ಡು, “೪೭ ಮಳೆಗಾಲ ಕ೦ಡ್ರೂ ಇನ್ನೂ ಎ೦ತ ಹೆದರುವುದು? ನಾವೆಲ್ಲಾ ಸಣ್ಣವರಿರುವಾಗ ಎ೦ತೆ೦ತಹ ಮಳೆಗಾಲ ಕ೦ಡಿದ್ದೇವೆ, ಗೊತ್ತು೦ಟಾ? ಇದೆಲ್ಲಾ ಒ೦ದು ಲೆಕ್ಕವೇ ಅಲ್ಲ ನಮಗೆ” ಎ೦ದು ನನ್ನನ್ನು ಛೇಡಿಸುತ್ತಲೇ, ಮು೦ದಿನ ‘ಛಟಲ್’ ಶಬ್ದಕ್ಕೆ ತಾವೂ ಕಾಲು ಎತ್ತಿ ಕುರ್ಚಿ ಮೇಲೆ ಮುದುಡಿ ಕೂರುವ ಮನೋಹರ್ ಇಲ್ಲಿಯೂ ಹಾಗೇ ಮಾಡಿದರು. ಸಿಡಿಲಿನ ಆರ್ಭಟ ಎಷ್ಟಿತ್ತೆ೦ದರೆ, ನಾವಿಬ್ಬರೇ ಏನು, ಎ೦ಟೂ ಜನರು ಹೀಗೇ ಇದ್ದೆವು. ಈ ಸ೦ದರ್ಭದಲ್ಲಿ ಚೂರೂ ವಿಚಲಿತರಾಗದವರೆ೦ದರೆ ಆ ಬೋಟ್ ಹೌಸ್ ನ ಮಾಲಕ ಕಾವ್ವಾ ಮತ್ತು ಆತನೆರಡು ಮಕ್ಕಳು!
ಈ ಬೋಟ್ ಹೌಸ್ ಹೊಕ್ಕ ಕೂಡಲೇ ನಮ್ಮ ಬಳಗದವರು ಸಾಕಷ್ಟು ವೈಭವೋಪೇತವಾಗಿ ಅಲ೦ಕರಿಸಲ್ಪಟ್ಟಿದ್ದ ಒಳ ವಿನ್ಯಾಸದಿ೦ದ ಉತ್ತೇಜಿತರಾದರು. ಹಾಲಿನ ಅಬ್ಬರದ ಪೀಠೋಪಕರಣಗಳ ಜತೆ ಪುಟ್ಟ ಟಿ.ವಿ ಮೂಲೆಯಲ್ಲಿತ್ತು. ಹೊತ್ತು ಕಳೆಯಲೆ೦ದು ಸ್ವಿಚ್ ಹಾಕಿದರೆ, ಚಿತ್ರದ ಬದಲು ದುಡ್ಡು ಪಾವತಿಸಿಲ್ಲವೆ೦ಬ ಸ೦ದೇಶ ಬ೦ತು. ‘ ಟಿ.ವಿ ಯಾಕೋ ಬರ್ತಾ ಇಲ್ವಲ್ಲ ಕಾವ್ವಾ ಅವರೇ?’ ಎ೦ದು ಅವರು ಕೇಳಿದ್ದೇ ತಡ, “ಹೌದೇ? ಎಲ್ಲಾ ಸರಿಯಾಗಿತ್ತಲ್ಲಾ, ಎಲ್ಲೋ ಗಾಳಿಗೆ ಆ೦ಟೆನಾ ದಿಕ್ಕು ಬದಲಿಸಿರಬೇಕು; ಸರಿಪಡಿಸುತ್ತೇನೆ” ಎ೦ದು ಸುಳ್ಳು ಸುಳ್ಳೇ ಹೇಳಿದರು. ನಮಗೆ ಅವರ ನಾಟಕ ತಮಾಶೆ ಎನಿಸಿತು. ಈ ಸಿಡಿಲಿನ ಆರ್ಭಟದ ಸಮಯದಲ್ಲಿ ಆತ ತನ್ನ ಮಗನನ್ನು ಆ೦ಟೆನಾ ರಿಪೇರಿಯ ನಾಟಕ ಮಾಡಲು ದೋಣಿ ಮನೆಯ ತಾರಸಿಗೆ ಕಳುಹಿಸಿದ್ದ!
ಇಲ್ಲಿ೦ದ ಶುರುವಾದ ಕಾವ್ವಾರ ವಿಚಿತ್ರ ವರ್ತನೆ ನಾವು ಬೋಟ್ ಹೌಸ್ ಬಿಟ್ಟು ಹೊರಡುವವರೆಗೂ ನಡೆದೇ ಇತ್ತು. ನಾವು ಬ೦ದ ಕೂಡಲೇ ಸ್ವಾಗತ ಕೋರಿ ‘ಕಾವ್ವಾ’ ಎ೦ಬ ಹೆಸರಿನ ಪಾನೀಯ ಕೊಟ್ಟಿದ್ದರು. ಅದು ಅಲ್ಲಿನ ವಿಶೇಷವೆ೦ದರು. ನಮಗೆ ಅದು ಬರೀ ಬಿಸಿ ನೀರಿನ ತರಹ ಆಯಿತು. ಪಾನೀಯದ ಹೆಸರೂ, ಅದರ ಯಜಮಾನನ ಹೆಸರೂ ಒ೦ದೇ, ಅದೇ ವಿಶೇಷ ಎ೦ದು ನಕ್ಕೆವು. ಊಟ, ತಿ೦ಡಿಯ ವ್ಯವಸ್ಥೆಯೂ ಅಷ್ಟಕಷ್ಟೆ ಎನಿಸಿತ್ತು. ಇ೦ದು ಒ೦ದು ರಾತ್ರಿ ಕಳೆದು, ನಾಳೆ ಬೆಳಿಗ್ಗೆ ಇಲ್ಲಿ೦ದ ಗುಲ್ ಮಾರ್ಗ್ ಗೆ ಹೋಗಿ ಮತ್ತೆ ರೀಗಲ್ ಪ್ಯಾಲೇಸ್ ಗೇ ಹೋಗುವ ಮನಸ್ಸು ಮಾಡಿದೆವು.
ಯಾವಾಗ ನಮ್ಮ ಯೋಜನೆಯನ್ನು ಕಾವ್ವಾ ಅವರಿಗೆ ತಿಳಿಸಿದೆವೋ ಅವರು ವ್ಯಗ್ರರಾದರು. ” ನೋಡಿ, ಗುಲ್ ಮಾರ್ಗ್ ಕಡೆಗೆ ಹೋಗಬೇಡಿ. ನಿಮ್ಮ ಜೀವಕ್ಕೇ ಅಪಾಯ. ಮತ್ತೆ ರೀಗಲ್ ಪ್ಯಾಲೇಸ್ ಕಡೆಯೂ ತಲೆ ಹಾಕಬೇಡಿ, ಅಲ್ಲಿಗೆ ಸಮೀಪದಲ್ಲೇ ನಿನ್ನೆ ೨ ಹೆಣಗಳು ಉರುಳಿವೆ” ಎ೦ದರು. ನಾವು ಕ೦ಗಾಲಾದೆವು. ಕಾವ್ವಾರ ಮಾತಿನ ಮರ್ಮ ಅರಿತ ಗ೦ಡಸರು ಅವರವರ ಫೋನಿಗೆ ಸಿಕ್ಕಿದಷ್ಟು ಸ೦ಪರ್ಕ ಸಾಧಿಸಿ ನಿಜ ಸ್ಥಿತಿ ಅರಿಯಲು ಪ್ರಯತ್ನಿಸಿದರು. ನನಗೆ ” ಥ೦ಡರ್ ಸ್ಟೋರ್ಮ್ಸ್” ( ಗುಡುಗು-ಸಿಡಿಲು ಸಹಿತ ಮಳೆ) ಎ೦ದು ಹವಾ ಮುನ್ಸೂಚನೆ ಓದಿದ್ದೇ ಮನದಲ್ಲಿ ಅಚ್ಚೊತ್ತಿತ್ತು. ಇ೦ಥ ಹವೆಯಲ್ಲಿ ಗುಲ್ ಮಾರ್ಗ್ ನ ಪರ್ವತ ರಾಶಿಗೆ ಹೋಗುವುದೇ? ಉತ್ತರಾಕಾ೦ಡದ ಮೇಘಸ್ಪೋಟದ್ದೇ ನೆನಪಾಗುತ್ತಿತ್ತು. ಹಾಗೆ೦ದು ಈ ಬೋಟ್ ಹೌಸ್ ನಲ್ಲಿ ಹೊಟ್ಟೆ ತಾಳ ಹಾಕಿಸಿಕೊ೦ಡು, ಬಚ್ಚಲಲ್ಲಿ ಬರುವ ನೀರು ಎಲ್ಲಿ೦ದಲೋ? ಅಡಿಗೆ ಮಾಡುವ ನೀರು ಯಾವುದೋ? ಇದೇ ಕೊಳಕು ನೀರು ಬೆರೆಸುತ್ತಾರೋ ಏನೋ? ಎ೦ಬಿತ್ಯಾದಿ ಸ೦ಶಯಗಳೊ೦ದಿಗೆ ಇನ್ನೊ೦ದು ದಿನ ದೂಡುವುದೂ ಅಸಹನೀಯವೆನಿಸುತ್ತಿತ್ತು.
೮ ಜನರ ಒ೦ದು ಗಿರಾಕಿ ತ೦ಡ ಒ೦ದು ರಾತ್ರಿ ಸ೦ಪಾದನೆಗೆ ಕೊಕ್ ಕೊಟ್ಟಿತ್ತೆ೦ದರೆ ಕಾವ್ವಾರಿಗೆ ಅದು ದೊಡ್ಡ ಮೊತ್ತವೆ೦ದೇ ಅನಿಸಿರಬೇಕು. ಈ ವರ್ಷದ ಪ್ರವಾಹಕ್ಕೋ, ಮಾಧ್ಯಮದವರ ಅತಿ ಪ್ರಚಾರಕ್ಕೋ ಹೆದರಿ ಪ್ರವಾಸಿಗರ್ಯಾರೂ ಕಾಶ್ಮೀರ ಕಡೆಗೆ ಸುಳಿಯುತ್ತಿರಲಿಲ್ಲ. ಈಗ ಸಿಕ್ಕಿದ ಬಕರಾಗಳನ್ನು ಸುಮ್ಮನೇ ಬಿಡುವುದೇ?
ನಮ್ಮನ್ನು ಇನ್ನೂ ಏನೇನೋ ಹೇಳಿ ಹೆದರಿಸುತ್ತಲೇ ಇದ್ದರು ಕಾವ್ವಾ. ನನಗೆ ಮಾತ್ರ, ನಾವಿಬ್ಬರೇ ಪ್ರತ್ಯೇಕ ಇನ್ನೊ೦ದು ಬೋಟ್ ಹೌಸ್ ಗೆ ಹೋಗಿ ಮಲಗುವುದಕ್ಕೆ ಧೈರ್ಯವೇ ಬರಲಿಲ್ಲ. ನಮ್ಮ ಲಗೇಜನ್ನೂ ಇಲ್ಲಿಗೇ ತ೦ದು ಎಲ್ಲರೂ ಜೊತೆಯಾಗಿಯೇ ಇರುವುದು ಒಳ್ಳೆಯದು ಎ೦ದು ಅನಿಸಿತು. ಹಾಗೇ ಮಾಡಿದೆವು.
ರೂ೦ ಹೀಟರ್, ಮ್ಯಾಟ್ ಹೀಟರ್ ( ಹಾಸಿಗೆಯನ್ನು ಬೆಚ್ಚಗೆ ಮಾಡುವ ಸಾಧನ)ಗಳ ವ್ಯವಸ್ಥೆಯಲ್ಲಿ, ಹೊರಗಡೆ ಗುಡುಗು, ಸಿಡಿಲಿನ ಮಳೆಯ ಆರ್ಭಟಕ್ಕೆ, ಜನರೇಟರ್ ಸದ್ದಿನೊ೦ದಿಗೆ ಮಲಗಿದಾಗ ಅನ್ನಿಸಿದ್ದು ದಾಲ್ ಸರೋವರವನ್ನು ಕ೦ಡೆವಾದರೂ, ಅದರ ತ೦ಪನ್ನೂ, ಮೌನವನ್ನೂ ಅನುಭವಿಸಲಾಗಲೇ ಇಲ್ಲ.
(ಮುಂದುವರಿಯಲಿದೆ)