ಶ್ಯಾಮಲಾ ಮಾಧವ, ಮುಂಬೈ

ಎಷ್ಟೊಂದು ಸರಳವೂ ಸಹಜವೂ ಆಗಿದ್ದ ದಿನಗಳವು! ಕಾಲ ಕಾಲಕ್ಕೆ ಮಳೆ, ಚಳಿ, ಸೆಕೆ ಎಂದು ನಿಯಮಿತವಾಗಿದ್ದ ಋತುಮಾನ. ಅಂತೆಯೇ ಆವರ್ತನ ಗೊಳ್ಳುತ್ತಿದ್ದ ಕಾಲಯಾನ; ಸಹಜವಾಗಿಯೇ ತೆರೆದು ಕೊಳ್ಳುತ್ತಿದ್ದ ದಿನಮಾನ; ಅವರವರ ವೃತ್ತಿಯಲ್ಲಿ ವ್ಯಸ್ತರಾಗಿಯೂ, ಬಿಡುವಾಗಿಯೂ ಇರುತ್ತಿದ್ದ ಜನರ ಸರಳ ಜೀವನ. ಈ ಸರಳತೆಯೆಂಬುದು ನಮ್ಮ ಬದುಕಿನಿಂದ ಹೇಗೆ ಮಾಯವಾಗಿ ಹೋಯಿತಲ್ಲ ?! ಸೂರ್ಯೋದಯದೊಂದಿಗೆ ಎಚ್ಚರಾಗಿ ಹಾಸಿಗೆ ಬಿಟ್ಟೇಳುತ್ತಿದ್ದ ಆ ಸರಳ, ಸುಂದರ ದಿನಗಳು! “ಅಮಾವಾಸ್ಯೆಯ ಕರಾಳರಾತ್ರಿಯ ನಟ್ಟಿರುಳಿನ ಗಾಢಾಂಧಕಾರ!” ಎಂದು ಪತ್ತೇದಾರ ಪುರುಷೋತ್ತಮನ ಸಾಹಸಗಳಲ್ಲಿ ಓದುತ್ತಿದ್ದಾಗ ರಾತ್ರಿಯನ್ನು ನೆನೆದು ಗದಗುಟ್ಟುತ್ತಿದ್ದ ಹೃದಯ! ಈಗೆಲ್ಲಿಯ ಸೂರ್ಯೋದಯ? ಎಲ್ಲಿಯ ಗಾಢಾಂಧಕಾರ? ವಿದ್ಯುತ್ – ಹೌದು, ಮೊದಲ ಕಲ್ಪ್ರಿಟ್ , ನಮ್ಮ ಬಾಳು ಬೆಳಗಲು ಬಂದ ವಿದ್ಯುತ್ ಎಂದೇ ಹೇಳಬೇಕು. ವಿದ್ಯುತ್ ಬೆಳಕಲ್ಲಿ, ವಿದ್ಯುತ್ ಸಲಕರಣೆಗಳ ಬಿಡಲಾಗದ ನಂಟಿನಲ್ಲಿ, ಅಂಟಿನಲ್ಲಿ, ರಾತ್ರಿಯೆಂಬುದಿರದ ದಿನಗಳಿವು. ಮಧ್ಯರಾತ್ರಿ ಕಳೆದು ಯಾವ ಕಾಲಕ್ಕೋ ಮಲಗಲು ಹೋದರೆ, ಮತ್ತೂ ದೀರ್ಘ ಸಮಯ ನಿದ್ದೆ ಬರದಿರಲು ಕಾರಣ, ಈ ಟಿ.ವಿ., ಲ್ಯಾಪ್‌ಟಾಪ್‌ನಂತಹ ವಿದ್ಯುತ್ ಉಪಕರಣಗಳಿಗೆ ರಾತ್ರಿಯೂ ಅಂಟಿಕೊಂಡಿರುವುದೇ ಆಗಿದೆ ಎಂದು ಎಚ್ಚರಿಸುವ ವೈದ್ಯರು!

ಅಯ್ಯೋ, ಈ ರೀತಿ ನನ್ನೀ ಲ್ಯಾಪ್‌ಟಾಪ್‌ನಲ್ಲಿ ವಿದ್ಯುತ್ ಬಗ್ಗೆ ಹಳಿಯುತ್ತಿರುವಾಗಲೇ ನಮ್ಮಲ್ಲಿ ಕರೆಂಟ್ ಹೋಗಿಬಿಡಬೇಕೇ? ಹಾಗೆ ಕರೆಂಟ್ ಅಡಿಗಡಿಗೆ ಮಾಯವಾಗಲು, ಇದೇನು ನಮ್ಮ ಕರ್ನಾಟಕವಲ್ಲ; ಇದು ನಮ್ಮ ಮುಂಬೈ. ಇಲ್ಲಿ ಕರೆಂಟ್ ಎಂದೂ ಹೋಗುವುದೆಂದಿಲ್ಲ. ಆದರೀಗ, ಇಲೆಕ್ಟ್ರಿಕ್ ಕಛೇರಿಯಿಂದ ಹಳೆಗಾಲದ ವಯರಿಂಗ್, ಮೀಟರ್ ಬೋರ್ಡ್‌ಗಳನ್ನು ಬದಲಿಸುವಂತೆ, ಇಲ್ಲವಾದರೆ, ಸಂಪೂರ್ಣ ಕರೆಂಟ್ ಕಡಿತಕ್ಕೆ ಬಾಧ್ಯರಾಗುವಂತೆ ನೋಟೀಸ್ ಬಂದ ಕಾರಣ, ಇಂದಿನ ಹಗಲು ಈ ಗುರುತರ ಕಾರ್ಯಾರಂಭ. ಸಂಜೆಯೊಳಗೆ ಸುಸ್ಥಿತಿಯ ಭರವಸೆ. ಪುಣ್ಯವಶಾತ್, ಇನ್ನೂ ಸೆಖೆ ಕಾಲಿರಿಸಿಲ್ಲವಾದ್ದರಿಂದ ಈ ಶಿಕ್ಷೆಯೀಗ ತುಸು ಸಹ್ಯ .

ಇಲೆಕ್ಟ್ರಿಸಿಟಿ ಇರದ ನಮ್ಮ ಬಾಲ್ಯಕಾಲದಲ್ಲಿ , ನಮ್ಮೂರಲ್ಲಿ ಸೆಖೆ ಎಂಬುದರ ಅನುಭವವೇ ಇರಲಿಲ್ಲ. ಆಗಿನ ಮಂಗಳೂರಲ್ಲಿ ತಡೆಯಲಾಗದ ಬಾಧೆಯೆಂದರೆ ಸೊಳ್ಳೆಗಳ ಕಾಟ! ನಾವು ಮಕ್ಕಳೆಲ್ಲರ ಕೈಗೂ ಆಗ ಮುಸ್ಸಂಜೆಯಲ್ಲಿ ಎಣ್ಣೆ ಹಚ್ಚಿದ ಅಲ್ಯೂಮೀನಿಯಮ್ ಬಟ್ಟಲುಗಳು. ಬಟ್ಟಲು ಬೀಸಿ ನಾವು ಸೊಳ್ಳೆಗಳನ್ನು ಹಿಡಿಯಬೇಕಾಗಿತ್ತು. ಯಾರ ಬಟ್ಟಲಲ್ಲಿ ಹೆಚ್ಚು ಸೊಳ್ಳೆಗಳು ಅಂಟಿಕೊಂಡಿವೆ ಎಂಬ ಪೈಪೋಟಿ ಬೇರೆ. ರಾತ್ರಿ ಮಲಗಲು ಹಾಸಿಗೆ, ಮಂಚಗಳಿಗೆ ಸೊಳ್ಳೆ ಪರದೆಗಳು. ನಗರದ ಓಣಿ, ಓಣಿಗಳಲ್ಲಿ ಎಲ್ಲಿ ನೋಡಿದರೂ ಆನೆಕಾಲು ಬಾಧಿತರು ! ನೀರು ನಿಲ್ಲುವಲ್ಲೆಲ್ಲ ಡಿ.ಡಿ.ಟಿ. ಸ್ಪ್ರೇ ಮಾಡಲು ಬರುವ ಸರಕಾರೀ ಆಳುಗಳು. ಈಗ ಮಂಗಳೂರು ಬೆಳೆದಿದೆ. ಗುಡ್ಡಗಳು, ಮರಗಿಡಗಳು, ಹಳೆಯ ಸುಂದರ ಮನೆಗಳನ್ನೆಲ್ಲ ಕೆಡವಿ, ಗಗನಚುಂಬಿ ಕಟ್ಟಡಗಳು ಎಲ್ಲೆಡೆ ಎದ್ದಿವೆ . ಅವನ್ನು ಕಾಣುವಾಗ ಹೃದಯ ಕುಸಿಯುತ್ತಿದೆ. ಮೊದಲೇ ಊರಲ್ಲಿ ಯಾವಾಗ ನೋಡಿದರೂ ಕರೆಂಟ್ ಕೈಕೊಡುತ್ತಿರುತ್ತದೆ. ಇಷ್ಟೊಂದು ಗಗನಚುಂಬಿಗಳ ಜನವಸತಿಗೆ ಬೇಕಾಗುವ ವಿದ್ಯುತ್, ನೀರು ಎಲ್ಲಿಂದ ಬಂದೀತು? ಇರುವ ಅಲ್ಪ ನೀರನ್ನೂ ಹೊತ್ತೊಯ್ದು ನಗರದ ಜೀವನದಿಯಾದ ನೇತ್ರಾವತಿಯನ್ನೇ ಬರಡಾಗಿಸುವ ಕಾಯಕಕ್ಕೆ ಜನಪ್ರತಿನಿಧಿಗಳು ಇಳಿದಿರುವಾಗ, ಮುಂದೆ ಗತಿಯೇನು?

ನಗರೀಕರಣದ ಈ ಬಿಸಿಯಲ್ಲಿ, ನನ್ನ ಮನಕ್ಕೆ ತೀವ್ರ ಆಘಾತವನ್ನಿತ್ತ ದೃಶ್ಯವೊಂದು ಕಳೆದ ಬಾರಿ ಊರಿಗೆ ಹೋದಾಗ ನನಗಾಗಿ ಕಾದಿತ್ತು. ಬಾಲ್ಯದ ಸುಂದರ ಸಂಜೆಗಳನ್ನು, ಸೂರ್ಯಾಸ್ತದ ವೀಕ್ಷಣೆಯಲ್ಲೂ ಲೈಬ್ರೆರಿಯಲ್ಲೂ ನಾನು ಕಳೆದಿದ್ದ ನನ್ನ ಪ್ರೀತಿಯ ಬಾವುಟ ಗುಡ್ಡೆ – ಲೈಟ್ ಹೌಸ್ ಹಿಲ್, ಇಂದಿನ ಠಾಗೋರ್ ಪಾರ್ಕ್ – ನಂಬಲಾಗದಂತಹ ಪರಿವರ್ತನೆಯನ್ನು ನನ್ನ ಕಣ್ಣೆದುರು ತೆರೆದಿತ್ತು. ಆ ಗುಡ್ಡದ ಮೇಲಿಂದ ಎದುರಿಗೆ ಕಾಣುವ, ಪಶ್ಚಿಮಾಂಬುಧಿಯಲ್ಲಿ ಸೂರ್ಯಾಸ್ತದ ರಮಣೀಯ ದೃಶ್ಯ, ಮಂಗಳೂರಿನ ಪಾರಂಪರಿಕ ಸಂಪತ್ತೇ ಆಗಿದ್ದು, ಆ ಭವ್ಯತೆಯನ್ನು ಮರೆಮಾಡುವಂತೆ ಗುಡ್ಡದಾಚೆ ಕೆಳಗಿನಿಂದ, ಗಗನಚುಂಬಿಯೊಂದು ಮೇಲೇರಿತ್ತು. ಇದು ಹೇಗಾದರೂ ಸಾಧ್ಯ, ಇಂತಹದೊಂದು ಅಕ್ರಮಕ್ಕೆ, ನಗರದ ಪಾರಂಪರಿಕ ನೋಟವನ್ನೇ ಬದಲಿಸುವ ಈ ವಿಕೃತಿಗೆ ಇಲ್ಲಿ ಅನುವಿತ್ತವರು ಯಾರೆಂಬ ಪ್ರಶ್ನೆ ಹೃದಯವನ್ನು ಕೊರೆಯಲಾರಂಭಿಸಿದ್ದು ಇಂದಿಗೂ ನಿಂತಿಲ್ಲ. ನಗರದ ಪಾರಂಪರಿಕ, ಪ್ರಾಕೃತಿಕ ಮಹತ್ವಗಳನ್ನುಳಿಸಿ ಕೊಳ್ಳುವ ನಗರ ಪ್ರಜ್ಞೆಯ ನಾಗರಿಕರೇ ಇಲ್ಲದಾದರೇ, ನನ್ನ ಮಂಗಳೂರಲ್ಲಿ, ಎಂಬ ತೀವ್ರ ನೋವು ಬಾಧಿಸುತ್ತಿದೆ.

ಡಬ್ಬಲ್ ಗುಡ್ಡೆ ಎಂದು ನಾವು ಕರೆಯುತ್ತಿದ್ದ, ಒಂದರ ಮೇಲೊಂದು ಟೋಪಿ ಮಗುಚಿ ಹಾಕಿದಂತಹ, ಮತ್ತೆ ಹ್ಯಾಟ್ ಹಿಲ್ ಎಂದು ಕರೆಯಲ್ಪಟ್ಟ ಲಾಲ್‌ಬಾಗ್ ಪ್ರದೇಶದ ಗುಡ್ಡವಂತೂ ಎಂದೋ ನೆಲಸಮವಾಗಿ ಬಹುಮಹಡಿಗಳನ್ನು ತನ್ನೊಡಲಲ್ಲಿ ಹೇರಿ ಕೊಂಡಿದೆ. ಎಕ್ಕೂರು ಗುಡ್ಡ ಅಂತರ್ಧಾನವಾಗಿದೆ. ಕಾವೂರು ಗುಡ್ಡ ಕರಗಿ ಕರಗಿ ನಿರ್ನಾಮದ ಹಂತ ತಲುಪಿದೆ. ಮಣ್ಣಗುಡ್ಡ ವಸತಿಸಮೂಹಗಳ ಇಮ್ಮಡಿ ಬೇಸ್ಮೆಂಟಿನ ತಳ ಸೇರಿದೆ. ಇಂತಹವು ಇನ್ನೆಷ್ಟೋ?! ಅಸಂಖ್ಯ, ಕಾಲೇಜ್‌ಗಳು, ಆಸ್ಪತ್ರೆಗಳು, ಮಾಲ್‌ಗಳು ನಗರ ತುಂಬಿವೆ. ಬಡತನವೆಂಬುದು ಜನಜೀವನದಿಂದ ಎಂದೋ ಮಾಯವಾಗಿ, ನಗರವಾಸಿಗಳಿಗೆ ಗೃಹ ಪರಿಚಾರಿಕೆಯರು ಸಿಗುವುದು ಬಹಳ ಕಷ್ಟವಾಗಿದೆ. ಜನರ ಜೀವನ ಮಟ್ಟ ಏರಿದೆ.

ಅವಿಭಕ್ತ ಕುಟುಂಬಗಳಿದ್ದ ಆ ದಿನಗಳಲ್ಲಿ ಬಂಧುತ್ವದ ಬೆಸುಗೆ ಎಷ್ಟು ಬಲವಾಗಿತ್ತು! ಅವರಲ್ಲಿಗೆ ಹೋಗುವುದು, ನಮ್ಮಲ್ಲಿಗೆ ಬರುವುದು , ಹೀಗೆ ಸಂವಹನ ಸಾಮಾನ್ಯವಾಗಿತ್ತು. ನವವಿವಾಹಿತರಿಗೆ, ಬಸುರಿ ಹೆಣ್ಮಕ್ಕಳಿಗೆ ಮನೆಮನೆಗಳಿಂದ ಕರೆ ಬಂದಂತೆ ಔತಣಕ್ಕೆ ಹೋಗುವುದೇ ಕೆಲಸ. ಇಂಥ ಔತಣದಲ್ಲಿ ನೆರೆಕರೆಯ ಜನರಿಗೂ ಪಾಲಿರುತ್ತಿತ್ತು. ಮದುವೆ, ಸೀಮಂತೋನಯನ, ನಾಮಕರಣ, ಮಾತ್ರವಲ್ಲ, ಉತ್ತರಕ್ರಿಯೆಗಳಲ್ಲೂ ಮನೆಯಲ್ಲೋ, ಹಾಲ್‌ನಲ್ಲೋ ಬಂಧು ಬಳಗವೇ ಜತೆಯಾಗಿ ತಯಾರಿಸುವ ಭೋಜನ! ರಾತೋರಾತ್ರಿ ಹಲವು ಕೈಗಳು ಜೊತೆಯಾಗಿ ತೆಂಗಿನಕಾಯಿ ಒಡೆಯುವ, ಹೆರೆಯುವ, ಮಸಾಲೆ ಅರೆಯುವ, ತರಕಾರಿ ಹೆಚ್ಚುವ, ದೊಡ್ಡ ದೊಡ್ಡ ಕೊಳದಪ್ಪಲೆಗಳಲ್ಲಿ ಅಟ್ಟು ಬೇಯಿಸುವ ಸಂಭ್ರಮ! ಚಾಪೆಯ ಮೇಲೆ ಸುರಿದು ಗುಡ್ಡೆ ಹಾಕುವ ಅನ್ನದ ರಾಶಿ! ಉರಿವ ಕೊಳ್ಳಿಗಳ ಮೇಲೆ ಕುದಿವ ಆ ಅಗಾಧ ಗಾತ್ರದ ಸಾರು, ಸಂಬಾರ್, ಪಾಯಸದ ಘಮ ಹಾಗೂ ರುಚಿಗೆ ಸಮನಾದುದಿಲ್ಲ! ಈಗ ಊರಿನಲ್ಲೂ ಮದುವೆ ಹೋಗಲಿ, ನಾಮಕರಣ, ಗೃಹ ಪ್ರವೇಶದಂತಹ ಕಾರ್ಯಕ್ಕೂ ಕೇಟರರ್‍ಸೇ ಗತಿ !

ನಾನು ಮುಂಬೈಗೆ ಬಂದ ಹೊಸದರಲ್ಲಿ, ವಾರ ವಾರವೂ ರಜಾದಿನಗಳಲ್ಲಿ ಬಾಂದ್ರಾ, ಸಾಂತಾಕ್ರೂಜ್, ಅಂಧೇರಿ, ಗೋರೆಗಾಂವ್, ವಸಾಯಿ, ಡೋಂಬಿವಿಲಿ, ನಾನಾ ಚೌಕ್, ಒಪೆರಾ ಹೌಸ್ ಎಂದು ಅಜ್ಜ, ಚಿಕ್ಕಮ್ಮ, ಅತ್ತೆ, ಚಿಕ್ಕಪ್ಪ, ಮಾವ, ಅಣ್ಣ ಎಂದು ಸಮೀಪ ಬಂಧುಗಳಲ್ಲಿಗೆ ಹೋಗುವುದಿತ್ತು. ಟಿ.ವಿ. ಎಂಬ ಮೂರ್ಖರ ಪೆಟ್ಟಿಗೆ ಆಗ ಒಂದೆರಡು ಮನೆಗಳಿಗೆ ಕಾಲಿರಿಸಿತ್ತಷ್ಟೆ, ದೂರವಾಣಿ ಸೌಲಭ್ಯವೂ ಎಲ್ಲೆಡೆ ಇರಲಿಲ್ಲ. ಟಿ.ವಿ. ಹಾಗೂ ದೂರವಾಣಿ ಮನೆಮನೆಗೆ ಎಂದು ಕಾಲಿರಿಸಿತೋ, ಅಂದಿನಿಂದಲೇ ಬಂಧುತ್ವದ ಬೆಸುಗೆ ಕ್ಷೀಣಿಸತೊಡಗಿತು. ಟಿ.ವಿ.ಯಲ್ಲಿ ದೂರದರ್ಶನ ಪ್ರಸಾರ ಮಾತ್ರ ಲಭ್ಯವಿದ್ದಷ್ಟು ಕಾಲ ಈ ಬಂಧುತ್ವದ ನಂಟು ಅಲ್ಪ ಸ್ವಲ್ಪ ಉಳಿದಿತ್ತು. ಎಂದಿಗೆ ಒಂದರ ಮೇಲೊಂದು ಚ್ಯಾನೆಲ್ಗಳು ಅಂಕುರಿಸಿ, ಬೀಡುಬಿಟ್ಟು, ಪೈಪೋಟಿ ಸಾಧಿಸ ತೊಡಗಿದವೋ `ಗೃಹಿಣೀ ಗೃಹಮುಚ್ಯತೇ’ ಎಂಬಂತೆ ಗೃಹಿಣಿಯರು ಈ ದೃಶ್ಯ ಮಾಧ್ಯಮಕ್ಕೆ ದಾಸರಾಗಿ ಮನೆಗೇ ಅಂಟಿ ಕೊಂಡರೋ, ಅಂದಿನಿಂದ ಈ ಪರಸ್ಪರ ಭೇಟಿಯ ಬಂಧುತ್ವದ ಕಾಯಕ ಕ್ಷೀಣಿಸುತ್ತಾ ಬಂದು, ಹೆಚ್ಚು ಕಡಿಮೆ ನಿಂತೇ ಹೋಯಿತು. ಉದ್ಯೋಗಸ್ಥರಾದ ಸ್ತ್ರೀಯರು, ಬದಲಾದ ರಜಾದಿನಗಳು, ದಿನ, ರಾತ್ರಿಯ ದುಡಿಮೆಯ ಬದಲಾದ ಅವಧಿಗಳು ಈ ಸ್ಥಿತಿಗೆ ಪೂರಕವಾದುವು. ಮನೆಗೆ ಆಹ್ವಾನಿಸಿ ಬಗೆ ಬಗೆ ಭಕ್ಷ್ಯ ಭೋಜ್ಯಗಳಿಂದ ಸತ್ಕರಿಸುವ ಪದ್ಧತಿಗೆ, ಸಮಯವೆಲ್ಲೆಂಬ ಪ್ರಶ್ನೆಯೇ ದೊಡ್ಡ ತಡೆಯಾಗಿ, ಅಗತ್ಯವಿದ್ದರೆ ಹೊಟೇಲ್ ಸತ್ಕಾರವೇ ಉತ್ತರವಾಯ್ತು. ಮನೆಯ ಪಾರಂಪರಿಕ ಅಡಿಗೆಯ ಸ್ಥಳದಲ್ಲಿ ಫಾಸ್ಟ್‌ಫುಡ್, ಚೈನೀಸ್, ಪಂಜಾಬಿ, ಕಾಂಟಿನೆಂಟಲ್ ಎಂದು ನಮ್ಮದ್ದಲ್ಲದ್ದೆಲ್ಲವೂ ನಮ್ಮದಾದುವು.

ಬೆಳಗಾಗ ಎದ್ದು, ಅಂಗಳ ಗುಡಿಸಿ, ಬಾವಿಯಿಂದ ನೀರೆಳೆದು ಹೊತ್ತು ತಂದು, ಕಟ್ಟಿಗೆ ಒಟ್ಟಿ ಒಲೆ ಉರಿಸಿ, ಕಡೆವ ಕಲ್ಲಿನಲ್ಲಿ ಅಕ್ಕಿ, ಮಸಾಲೆ ರುಬ್ಬಿ, ಮನೆ ಗುಡಿಸಿ, ಸಾರಿಸಿ, ಹಿತ್ತಿಲ ಒಗೆಯುವ ಕಲ್ಲಿನಲ್ಲಿ ಬಟ್ಟೆ ಒಗೆದು, ಹಿಂಡಿ ಹೊರಗೆ ಹಗ್ಗದಲ್ಲಿ ಹರವಿ, ಅಟ್ಟುದನ್ನು ಹಲವು ಬಟ್ಟಲುಗಳಿಗೆ ಬಡಿಸಿ, ತೊಳೆದು, ಹಗುರಾಗಿ ಉಸಿರೆಳೆದು ಕೊಳ್ಳುತ್ತಿದ್ದ ಆ ದಿನಗಳು ಹೊರಟೇ ಹೋದುವು. ಹೇರಿಕೊಂಡ ಆರಾಮದ ಬದುಕು ನಮ್ಮ ಆರೋಗ್ಯವನ್ನೂ ಹದಗೆಡಿಸಿತು. ಮೊನ್ನೆ ಮೊನ್ನೆ ಟಿ.ವಿ.ಯಲ್ಲಿ ಜಾಹೀರಾತೊಂದನ್ನು ನೋಡಿದೆ: “ತರಕಾರಿ ಕತ್ತರಿಸುತ್ತಾ ಕುಳಿತು ಇಲ್ಲದ ಸಮಯವನ್ನು ಕಳೆಯುವಿರೇಕೆ? ಸಿದ್ಧ ಕತ್ತರಿಸಿದ ತರಕಾರಿಗಳಿಗಾಗಿ ನಮಗೆ ಕರೆ ಮಾಡಿ!” ಈ ಆನ್‌ಲೈನ್ ಮಾರ್ಕೆಟಿಂಗ್ ಬಂದ ಮೇಲಂತೂ ನಮ್ಮ ಬಾಳು ನಿಂತ ನೀರಾಗಿದೆ. ತರಕಾರಿ, ಹಣ್ಣು ಹಂಪಲು, ದವಸ ಧಾನ್ಯ, ಇತರ ಅಡುಗೆ ಸಾಮಗ್ರಿಗಳು, ಬಟ್ಟೆ ಬರೆ, ಪಾದರಕ್ಷೆ, ಫರ್ನೀಚರ್, ಗೃಹೋಪಯೋಗಿ ವಸ್ತುಗಳು, ತಿಂಡಿ ತೀರ್ಥ, ಕೊನೆಗೆ ಸ್ಯಾನಿಟರಿ ನ್ಯಾಪ್‌ಕಿನ್ ಕೂಡಾ – ಏನು ಬೇಕಿದ್ದರೂ ಹೆಜ್ಜೆ ಸರಿಸ ಬೇಕಾಗಿಲ್ಲ. ಕೇವಲ ಒಂದು ಕರೆಗೆ ಎಲ್ಲವೂ ನಮ್ಮ ಕೈಯಲ್ಲಿ . ಚಟುವಟಿಕೆಯಿರದ ಜೀವಕ್ಕೆ ಮತ್ತೆ ಜಿಮ್, ಮಾರ್ನಿಂಗ್ ವಾಕ್‌ಗಳು !

ಪತ್ರಿಕೆ, ಪುಸ್ತಕಗಳು, ಮತ್ತು ನನ್ನ ಲ್ಯಾಪ್‌ಟಾಪ್ ಬಿಟ್ಟು ಹೊರಗಿಳಿಯಲು ಅಷ್ಟಾಗಿ ಮನಸ್ಸು ಮಾಡದ ನಾನೂ ಮೊನ್ನೆ ಒಂದು ಬೆಳಿಗ್ಗೆ, ಕಾಫಿ, ತಿಂಡಿಯ ಬಳಿಕ, ಹವೆಯಿನ್ನೂ ತಂಪಾಗಿದ್ದರಿಂದ ಕೆಳಗೆ ಸ್ವಲ್ಪ ಸುತ್ತಾಡಿ ಬರುವೆನೆಂದು ನಾಲ್ಕು ಮಹಡಿಯ ಮೆಟ್ಟಲುಗಳನ್ನಿಳಿದು ಹೊರಟೆ. ದೇಹದ ಎಲುಬುಗಳನ್ನು ಸುಸ್ಥಿತಿಯಲ್ಲಿಟ್ಟಿರಲು ವಿಟಮಿನ್ ಡಿ.೩. ಅಗತ್ಯವೆಂದೂ, ಬೆಳಗಿನ ಸೂರ್ಯನ ಬಿಸಿಲಿನಿಂದ ಅದನ್ನು ಪಡೆಯಲು ತಾರಸಿಗಾದರೂ ಹೋಗಬೇಕೆಂದೂ ವೈದ್ಯರ ಸಲಹೆ. ನಾಲ್ಕು ಮಹಡಿಗಳನ್ನು ಹತ್ತಿ ಇಳಿವ ಸಮಸ್ಯೆಗೆ ತಾರಸಿಯ ಬಿಸಿಲಿನ ಪರಿಹಾರ! ಅಂದು ತಂಪಾದ ಹವೆಯೇ ನನ್ನನ್ನು ಹೊರಡಿಸಿತ್ತು. ದಾರಿ ನಡೆದಂತೆ ತೆರೆದು ಕೊಂಡ ಪುಷ್ಯದ ಬೆಳಗು ಮನೋಹರವಾಗಿತ್ತು. ಮಂಜು ಮುಸುಕಿನಲ್ಲೇ ಸೂರ್ಯಕಿರಣಗಳು ಮರಗಳೆಡೆಯಿಂದ ತೂರಿ ಬಂದು ರಸ್ತೆಯಲ್ಲಿ ಚಿತ್ತಾರ ಮೆರೆದಿದ್ದುವು. ಅತ್ತಿ ಮರಗಳ ಕಾಂಡದಲ್ಲೆಲ್ಲ ಹಸಿರು ಅತ್ತಿಕಾಯಿಗಳು ಸೊಂಪಾಗಿ ತುಂಬಿಕೊಂಡು, ಕೆಲವು ಕೆಂಪೇರುತ್ತಾ ಬಂದಿದ್ದುವು. ಊರಲ್ಲಿ ನಮ್ಮಜ್ಜಿ ಭರಣಿ ತುಂಬಾ ಉಪ್ಪು ನೀರಲ್ಲಿ ತುಂಬಿಡುತ್ತಿದ್ದ ಅತ್ತಿಕಾಯಿಗಳು ನೆನಪಾದುವು. ನಮ್ಮ ಬಾವಿಕಟ್ಟೆಗೊರಗಿಕೊಂಡೇ ಬೆಳೆದಿದ್ದ ವಿಶಾಲ ಅತ್ತಿ ಮರ!

ಅದರ ಬುಡದ ತುಂಬ ಪೊಟರೆಗಳು. ಬಾಲ್ಯದಲ್ಲೋದಿದ ಕಥೆಯಲ್ಲಿ ಸುಮತಿ ಮರದ ಪೊಟರೆಯಲ್ಲಿ ಅವಿತು ಕುಳಿತು ಸುವರ್ಣ ದ್ವೀಪಕ್ಕೆ ಹಾರಿದುದನ್ನು ನೆನೆಯುತ್ತಾ ನಾನು ಆ ಮರದ ಬೊಡ್ಡೆಯ ಮೇಲೆ ಕುಳಿತಿರುತ್ತಿದ್ದೆ. ಆ ಪೊಟರೆಗಳಲ್ಲಿ ಹಾವುಗಳು ಬಂದು ಕುಳಿತಿರುತ್ತಿದ್ದ ಕಾರಣ, ಮತ್ತೆ ಆ ಅತ್ತಿ ಮರವನ್ನು ಕಡಿಯಲಾಯ್ತು. ಅತ್ತಿ ಕಾಯಿಗಳ ಭರಣಿಯೊಡನೆ, ಬೇಯಿಸಿ ಉಪ್ಪು ನೀರಲ್ಲಿ ಹಾಕಿಟ್ಟ ಮಾವಿನ ಕಾಯಿಗಳ , ಮಿಡಿ ಸೌತೆಯ, ಹಲಸಿನ ದಿಂಡುಗಳ ಭರಣಿಯೂ ನೆನಪಾಯ್ತು. ಆ ಚಿತ್ರ ಮನದಲ್ಲಿ ಮೂಡುವಾಗಲೇ ಕಣ್ಣೆದುರು, ಬಾಲಾಜಿ ಮಂದಿರದ ಹಿಂಬದಿಯ ಇಕ್ಕಟ್ಟಾದ ಸ್ಥಳದಲ್ಲಿ ಒತ್ತಾಗಿದ್ದ ಮಾವು, ಹಲಸಿನ ಮರಗಳು ಕಣ್ಣಿಗೆ ಬಿದ್ದುವು. ಅರೆ! ಇಷ್ಟು ವರ್ಷ ಇಲ್ಲಿದ್ದೂ, ಈ ಮರಗಳನ್ನು ನಾನು ಗಮನಿಸಿರಲಿಲ್ಲವಲ್ಲಾ, ಎಂದು ಅಚ್ಚರಿಯಾಯ್ತು. ಎಂದಾದರೂ ಹಲಸಿನೆಲೆಗಳನ್ನು ಕೇಳಿ ಪಡೆದು ಕೊಟ್ಟಿಗೆ ಮಾಡಿ ನೆರೆಯ ಗುಜರಾಥಿಗಳಿಗೆ ತಿನಿಸಬಹುದೆಂಬ ಆಶೆಯೂ ಮನದಲ್ಲಿ ಮೂಡಿತು. ಮತ್ತೆರಡು ಹೆಜ್ಜೆ ಹೋಗುವಷ್ಟರಲ್ಲಿ , ಎದ್ದು ನಿಂತ ಹೊಸ ಕಟ್ಟಡವೊಂದರ ಬಗಲಲ್ಲೇ ಆ ಎತ್ತರಕ್ಕೆ ಸರಿದೂಗುವ ತಾಳೆ ಮರ ! ಅಜ್ಜಿ ಮನೆಯಲ್ಲಿದ್ದ ಆ ಮಹಾಗಾತ್ರದ ತಾಳೆ ಮರ ನೆನಪಾಯ್ತು. ಬಯಾ ಪಕ್ಷಿಯ ಹೂಜಿಯಾಕಾರದ ಅಸಂಖ್ಯ ಗೂಡುಗಳಿದ್ದ ಆ ಮರ! ಅದರಿಂದ ಉದುರುತ್ತಿದ್ದ ಗೂಡುಗಳು; ಹಣ್ಣಾಗಿ, ಕೆಂಪಾಗಿ ಉದುರುತ್ತಿದ್ದ ತಾಳೆ ಹಣ್ಣುಗಳು. ಆ ಮರದಿಂದ ಈರೋಳುಗಳನ್ನು ಇಳಿಸುವುದಂತೂ ಅಸಾಧ್ಯವಿತ್ತು. ಕಾರಣ, ಯಾರಿಗೂ ಏರಲಾಗದಂತೆ ಅಷ್ಟೊಂದು ಅಗಲವಿತ್ತು, ಆ ಮರ! ಈಗ ಯೋಚಿಸುವಾಗ ಆ ಮಹಾವೃಕ್ಷಕ್ಕೆ ಎಷ್ಟೋ ನೂರಾರು ವರ್ಷ ಪ್ರಾಯವಾಗಿದ್ದಿರಬಹುದು, ಎಂದನಿಸುತ್ತದೆ. ಏನೋ ಕಾರಣದಿಂದ ಆ ಮರವನ್ನೂ ಕಡಿಯಲಾಗಿತ್ತು. ನನ್ನ ಹೆಜ್ಜೆ ಸಾಗಿದಂತೆ, ನಾಗಸಂಪಿಗೆಯ ಸಾಲು ಮರಗಳೂ ಎದುರಾದುವು. ನನ್ನೂರಲ್ಲಿ ಹೆಚ್ಚು ಕಡಿಮೆ ಮಾಯವೇ ಆಗಿರುವ, ಸುವಾಸನೆ ಬೀರುವ, ಕಮಲ ದಳಗಳ ನಡುವೆ ನಾಗನ ಹೆಡೆಯಿರಿಸಿದಂತಹ ಗುಲಾಬಿ ಕೆಂಪಿನ ಸುಂದರ ಹೂ ಗುಚ್ಛಗಳನ್ನು ಕಾಂಡದಲ್ಲಿ ಹೊತ್ತ ನಾಗಸಂಪಿಗೆ ಮರಗಳು, ನನ್ನೀ ರಸ್ತೆಯಲ್ಲಿ ಬೇಕಾದಷ್ಟು! ವೃಕ್ಷ ಸಂಪತ್ತಿನ ಮಟ್ಟಿಗೆ ನನ್ನ ಮುಂಬೈ ನನಗೀಗ ನನ್ನೂರು ಮಂಗಳೂರಿಗಿಂತ ಪ್ರಿಯವಾಗಿದೆ. ದಿನವೂ ಬೆಳಗಿನಲ್ಲಿ ಹೊರಗಿಳಿದು ಈ ವೃಕ್ಷಲೋಕದ ಸೊಬಗನ್ನೂ, ಕಂಪನ್ನೂ, ತಂಪನ್ನೂ ಆಸ್ವಾದಿಸದೆ, ಸುಮ್ಮನೆ ಗೋಡೆಗಳೊಳಗೇ ಇರುವೆನಲ್ಲಾ ಎಂದು ನನ್ನನ್ನೇ ನಾನು ಹಳಿದುಕೊಂಡೆ.

ಖಾವುಗಲ್ಲಿಯೆಂದೇ ಹೆಸರಾದ ನಮ್ಮೀ ರಸ್ತೆಯಲ್ಲಿ ಸಂಜೆಯ ಹೊತ್ತು ಅದೆಷ್ಟು ತಿಂಡಿಯ ಗಾಡಿಗಳು ! ತಳವೂರಲು ಸಾಧ್ಯವಿರುವಲ್ಲೆಲ್ಲ ನಿಂತು, ದೋಸೆ, ಪಾವ್‌ಭಾಜಿ, ರಗಡಾ ಪ್ಯಾಟೀಸ್, ಶೇವ್‌ಪುರಿ, ಬಟಾಟಾಪುರಿ, ಪಾನಿಪುರಿ, ದಾಭೇಲಿ, ಸ್ಯಾಂಡ್‌ವಿಚ್, ಕುಲ್ಫಿ, ಗೋಲಾ ಎಂದು ತೆರೆದು ಕೊಳ್ಳುವ ಈ ಖಾವುಪ್ರಿಯರ ಲೋಕದಿಂದಾಗಿ, ವಾಹನ ದಟ್ಟಣೆಯ ಈ ರಸ್ತೆಯಲ್ಲಿ ಸಂಜೆ ಹೊರಗಿಳಿದರೆ ನಮ್ಮ ಕೈಕಾಲುಗಳನ್ನು ಸುರಕ್ಷಿತವಾಗಿರಿಸುವಲ್ಲೇ ಗಮನವಲ್ಲದೆ, ಅತ್ತಿತ್ತ ಪ್ರಕೃತಿ ದರ್ಶನಕ್ಕೆ ಅನುವೆಲ್ಲಿ? ನಮ್ಮ ಖಾವುಗಲ್ಲಿಯೇ ಮುಂದಕ್ಕೆ ಬಾಜಿಗಲ್ಲಿಯೂ ಆಗಿದ್ದು, ಅಲ್ಲೂ ಗಾಡಿಗಳಲ್ಲೂ, ರಸ್ತೆಯ ಮೇಲೂ ಹರವಿ ಗುಡ್ಡೆ ಹಾಕಿರುವ ತರಕಾರಿಗಳೆದುರು, ಕಷ್ಟದಿಂದಲೇ ಕುಕ್ಕರಗಾಲಲ್ಲಿ ಕುಳಿತು, ಹೊರಲಾಗದ ಭಾರದ ಚೀಲಗಳನ್ನು ಮತ್ತೂ ತುಂಬಿಸಿ ಕೊಳ್ಳುತ್ತಾ ಚೌಕಾಸಿ ಮಾಡುವ, ವಾಹನಗಳಿಗೆ ಕ್ಯಾರೇ ಅನ್ನದ ಗ್ರಾಹಕರ ದಟ್ಟಣೆಯನ್ನು ಶಪಿಸುತ್ತಾ ಆಮೆವೇಗದಲ್ಲಿ ಸಾಗುವ ವಾಹನಗಳು!

ನಗರ ನೈರ್ಮಲ್ಯದ ಕೊರತೆಯನ್ನು ಹೊರತು ಪಡಿಸಿದರೆ, ಮುಂಬೈ ಎಲ್ಲರಿಗೂ ಅಭಿವೃದ್ದಿಯ ಹಾದಿಯನ್ನು ತೋರುತ್ತದೆ. ಹಳ್ಳಿ, ಹಳ್ಳಿಗಳಿಂದ ಜೀವನೋಪಾಯಕ್ಕಾಗಿ ಬಂದು, ಮುಂಬೈಯಲ್ಲಿ ಝೋಪಡಿಗಳನ್ನು ಕಟ್ಟಿ ಕೊಂಡು ವಾಸಿಸುವ ಜನರ ನೈರ್ಮಲ್ಯ ಪರಿಸ್ಥಿತಿಯನ್ನು ಕಾಣುವಾಗ, ಇವರೇಕೆ ಹೀಗೆ ಇಲ್ಲಿರಬೇಕೆಂಬ ಪ್ರಶ್ನೆ ಕಾಡುತ್ತದೆ. ಝೋಪಡಿಯ ಸುತ್ತ ಮುತ್ತ ಹಾಗಿದ್ದರೆ, ಆ ಝೋಪಡಿಗಳೊಳಗೆ ಇಣುಕಿ ನೋಡಿದರೆ, ವ್ಯವಸ್ಥಿತವಾಗಿ ಜೋಡಿಸಿಟ್ಟ, ಲಕಲಕ ಹೊಳೆವ ಸ್ಟೀಲ್ ಪಾತ್ರೆಗಳು, ಹೊನ್ನ ಕಲಶದಂತಹ ಹಿತ್ತಾಳೆ ಕೊಡಪಾನಗಳು , ಪ್ಲಾಸ್ಟಿಕ್, ಟಿನ್ ಡ್ರಮ್‌ಗಳು , ಟಿ.ವಿ , ಮಿಕ್ಸರ್ ಮೊದಲಾದ ಆಧುನಿಕ ಪರಿಕರಗಳು ; ಮೇಲೆ ಡಿಶ್ ಆಂಟೆನ್ನಾಗಳು! ನೋಡ ನೋಡುತ್ತಿರುವಂತೇ ಆ ಝೋಪಡಿಗಳು ಸಿಮೆಂಟ್, ಟಿನ್ ಶೀಟ್, ಉಪ್ಪರಿಗೆ ಏರಿಸಿ ಕೊಂಡು ಸುಸ್ಥಿತಿಯತ್ತ ಸಾಗುತ್ತವೆ. ಆ ಉಪ್ಪರಿಗೆಗಳಲ್ಲಿ ವಾಣಿಜ್ಯ, ವಹಿವಾಟು ಸಂಕೀರ್ಣಗಳೇಳುತ್ತವೆ.. ಮತ್ತಲ್ಲಿ ಸರಕಾರದ ವತಿಯಿಂದ ಈ ಜನರಿಗಾಗಿ ಬಹು ಮಹಡಿ ವಸತಿ ಕಟ್ಟಡಗಳೂ ಏಳುತ್ತವೆ.

ನಮ್ಮ ಮನೆಗೆಲಸದ ಸಹಾಯಕಿ ಮಾಯಾ, ಮತ್ತವಳ ಕುಟುಂಬ ಇಂತಹುದೇ ವ್ಯವಸ್ಥೆಯಿಂದ ಬಂದವರು . ಅವರ ಝೋಪಡಾ ಪಟ್ಟಿ ಏಳು ಮಹಡಿಯ ಕಟ್ಟಡವಾಗಿ ಮಾರ್ಪಟ್ಟಿದೆ. ಊರು ಮಹಾಡ್‌ನಲ್ಲಿ ಅವರಿಗೆ ಸಾಕಷ್ಟು ಗದ್ದೆ, ಹೊಲಗಳಿವೆ. ಬೆಳೆಯೂ ಬರುತ್ತಿದೆ. ಮುಂಬೈಯ ಎಲ್ಲ ಮರಾಠೀ ಮನೆ ನೌಕರರಂತೆ ಅವರೂ ಮೇ ತಿಂಗಳಲ್ಲಿ ಕೃಷಿಗಾಗಿಯೇ, ನೆಪಕ್ಕೆ ಮದುವೆಗಳ ಹೆಸರಲ್ಲಿ ಹತ್ತು ದಿನಕ್ಕೆಂದು ಊರಿಗೆ ಹೋಗುವವರು. ಮತ್ತೆ ತಿಂಗಳೊಂದು ಕಳೆದೇ ಬರುವವರು. ಬರುವಾಗ, ನನ್ನ ಸಿಟ್ಟನ್ನು ತಣಿಸಲೆಂದು, ತಮ್ಮ ಹಿತ್ತಿಲ ಅಲ್ಫಾನ್ಸೋ ಮಾವಿನ ಹಣ್ಣುಗಳನ್ನು, ತಮ್ಮ ಹೊಲದ ಭಾಸ್‌ಮತಿ ಅಕ್ಕಿಯನ್ನು, ಅಕ್ಕಿ ಹುಡಿಯನ್ನು, ರಾಗಿ, ನವಣೆಯನ್ನು ತಂದೊಪ್ಪಿಸುವವರು. ಪ್ರೀತಿಯ ಕಾಣಿಕೆ ಕೈಯಲ್ಲಿಟ್ಟ ಮೇಲೆ ಜರೆಯುವುದೆಂತು ?

ಮೆಲ್ಲ ಮೆಲ್ಲನೆ ಮಾಯಾಳಲ್ಲಿ ಕಾಲಿರಿಸಿದ ಬದಲಾವಣೆ ನನ್ನ ಗಮನಕ್ಕೆ ಬಂದುದು ತೀರ ಇತ್ತೀಚೆಗೆ. ಐದು ವರ್ಷಗಳ ಹಿಂದಿನ ಚಿತ್ರ ಬೇರೆಯೇ ಇತ್ತು. ಮರಾಠೀ ಶ್ರಮಿಕ ವರ್ಗದ ಹೆಚ್ಚಿನ ಮನೆಗಳಂತೆಯೇ ಮನೆಯಲ್ಲಿ ನಿರುದ್ಯೋಗಿಯಾಗಿ ಕುಡಿಯುತ್ತಾ ಬಿದ್ದಿರುವ ಪತಿ ಮಹಾರಾಯ! ಹಿತಮಿತವಾದ ಒಳ್ಳೆಯ ನಡೆನುಡಿಯ, ಚೆಲುವೆಯರೂ ಆದ ಮೂವರು ಹೆಣ್ಮಕ್ಕಳು. ಸೌಮ್ಯರೇ ಆದ ಗಂಡು ಮಕ್ಕಳಿಬ್ಬರು. ಮಕ್ಕಳನ್ನು ಮನೆಗೆಲಸಕ್ಕೆ ಜೊತೆಗೆ ತರಕೂಡದು; ಅವರು ಶಾಲೆಗೆ ಹೋಗಲಿ, ಎಂದರೆ, ಶಾಲೆಗೆ ಹೋಗಿಯೇ ಇಲ್ಲಿಗೆ ಬರುತ್ತಾರೆ. “ಮನೆಯಲ್ಲಿರಲು ಅವರಿಗೆ ಒಳ್ಳೆಯದಾಗುವುದಿಲ್ಲ” ಎನ್ನುವ ಮಾಯಾಳ ಕಣ್ಗಳಲ್ಲಿ ಹೇಳದೆಯೇ ಒಪ್ಪಿಸುವ ನೋವಿನ ಕಥೆಗಳು !

ಈ ಮಾಯಾಳ ಮಕ್ಕಳು ವಂದನಾ, ಸ್ವಾತಿ, ರೂಪಾಲಿಯರನ್ನು, ನಮ್ಮ ಮನೆಗೆ ಬರುವ ಬಂಧುಗಳು, ನಮ್ಮ ನೆರೆ ಮನೆಯ ಗುಜರಾತಿ ಮಕ್ಕಳೆಂದೇ ಅಂದುಕೊಳ್ಳುವುದಿತ್ತು. ತೆಳ್ಳಗೆ ಬೆಳ್ಳಗಿದ್ದು, ಮರ್ಯಾದಾನ್ವಿತ ನಡವಳಿಕೆಯ, ಮೌನವಾಗಿ ಕೆಲಸ ಮಾಡಿ ಹೋಗುವ ಹುಡುಗಿಯರು. ಯಾವುದಕ್ಕೂ ದೇಹಿ ಎಂದವರಲ್ಲ. ಮಾಯಾ ಮಾತ್ರ, ತಾಪತ್ರಯವೆಂದು ಆಗೀಗ ಸಹಾಯ ಕೇಳುವುದಿತ್ತು. ಅಭಿಮಾನಧನರಾದ ಮಕ್ಕಳಿಂದ ಕೇಳಿಸುವಲ್ಲಿ ಅವಳೆಂದೂ ಸಫಲಳಾಗಲಿಲ್ಲ. ಯಾವಾಗ ನೋಡಿದರೂ ಅವಳ ಮನೆ ತುಂಬ ಊರಿಂದ ಬರುವ ನೆಂಟರು. ತಿಂಗಳುಗಟ್ಟಲೆ ಅವರಲ್ಲೇ ತಳವೂರುವವರು. ತಂಗಿಯ ಮಗಳು, ಮೈದುನನ ಮಗಳು, ನಾದಿನಿಯ ಮಗಳೆಂದು ಅವಳು ಅವರನ್ನೂ ಜೊತೆಗೆ ಕರೆತರುವವಳು. ನೋಡಿ ನೋಡಿ ಬೇಸತ್ತು, ನಾನೇ ಮತ್ತೆ, ” ಏ ಲೋಗ್ ಗಯೇ ನಹ್ಞೀ ಕ್ಯಾ, ಅಭೀ ತಕ್? ” ಎಂದು ಕೇಳಿದರೆ ಏನಾದರೊಂದು ಉತ್ತರ ಸಿದ್ಧವಿರುತ್ತಿತ್ತು. ಒತ್ತರೆ, ಸತ್ತರೆಗೆ ಮಾಯಾ ಮಕ್ಕಳು ಹೇಳಿ ಮಾಡಿಸಿದವರು. ಕ್ಷೀಣಕಾಯದ ಹುಡುಗಿಯರು, ಎಲ್ಲಿಗೂ ಹತ್ತಿ ಏನು ಬೇಕಾದರೂ ಕೆಳಗಿಳಿಸಿ ಕೊಡುವವರು. ಕಪಾಟಿನ ಹ್ಯಾಂಡ್‌ಲ್ ಮೇಲೆ ಕಾಲಿಟ್ಟು ಅಟ್ಟಕ್ಕೇರಬಲ್ಲರು. ದೀಪಾವಳಿಯಲ್ಲಿ ಇಡಿಯ ಮನೆಯನ್ನೇ ತಿಕ್ಕಿ, ತೊಳೆದು ಹೊಳಪಿಸುವವರು.

ಮಗಳ ಮದುವೆಯಲ್ಲಾದ ಸಾಲ ತೀರಿಸಲು ಮನೆಯನ್ನೇ ಅಡವಿಡ ಬೇಕಾಗಿದೆ, ಎಂದು, ” ಪಗಾರ್ ಮೇ ಕಾಟ್ ಲೋ, ಅಮ್ಮಾ”, ಎಂದು ಸಂಬಳದಿಂದ ಕತ್ತರಿಸುವ ಒಪ್ಪಂದದೊಡನೆ ಆಗೀಗ ಮುಂಗಡ ಹಣ ಕೇಳಿ ಪಡೆಯುತ್ತಿದ್ದ ಮಾಯಾಳ ಬದುಕಿನಲ್ಲಿ ಕುಡುಕ ಪತಿಯ ತೀವ್ರ ಅಸೌಖ್ಯ, ಮರಣದ ಸಂಕಷ್ಟ ಒದಗಿ ಬಂತು. ಮಗಳು ಸ್ವಾತಿಯ ಒಂದೇ ವರ್ಷದ ದಾಂಪತ್ಯ ವೈಧವ್ಯದಲ್ಲಿ ಕೊನೆಗೊಂಡು ಎಳೆಗೂಸಿನೊಂದಿಗೆ ಅವಳು ಮತ್ತೆ ಮನೆ ಸೇರುವಂತಾಯ್ತು. ಈ ಮಾಯಾನ ಸಂಕಷ್ಟ ಮುಗಿವಂತೆಯೇ ಇಲ್ಲ; ಅವಳು ಹಣ ಕೇಳುವುದನ್ನೂ ಬಿಡುವಂತಿಲ್ಲ, ಎಂದು ನಾನಂದುಕೊಳ್ಳುತ್ತಿದ್ದೆ. ಇತ್ತೀಚೆಗೆ ನನ್ನ ಆರೋಗ್ಯವೂ ಬಿಗಡಾಯಿಸಿ, ನನ್ನ ಲ್ಯಾಪ್‌ಟಾಪ್, ಬರವಣಿಗೆ, ಫೇಸ್‌ಬುಕ್ ಎಂದು ಹೆಚ್ಚಿದ ಇಂಟರ್ನೆಟ್ ಬಂಧವೇ ಇದಕ್ಕೆ ಕಾರಣ ಎಂಬ ಆಪಾದನೆ ಹೊರಟು, ಚಿಕಿತ್ಸೆ ನಡೆದಿತ್ತು. ಒಂದಿನ ಮಾಯಾ, ” ಅಮ್ಮಾ, ಆಪ್ ಮೇರೇ ಸಾಥ್ ಪ್ರಾರ್ಥನಾ ಮೇ ಚಲೋ ; ದೇಖೊ, ಆಪ್‌ಕೋ ಅಚ್ಛಾ ಹೋ ಜಾಯೆಗಾ. . ಮುಝೇ ಕಿತ್‌ನಾ ತಕ್‌ಲೀಫ್ ಥಾ;. ಪ್ರಾರ್ಥನಾ ಮೇ ಜಾನೇ ಲಗೀ ತೋ ಏಕ್‌ದಮ್ ಶಾಂತಿ ಮಿಲ್ ಗಯೀ. ಆಪ್ ಚಲೋ ಮೇರೇ ಸಾಥ್; ಮೈ ಆಪ್‌ಕೋ ಲೇಕೇ ಜಾವೂಂಗೀ “. ಎಂದಳು.

“ಕೈಸೀ ಪ್ರಾರ್ಥನಾ? ಕಿಸ್‌ಕೀ ಪ್ರಾರ್ಥನಾ?” ಎಂದರೆ, “ಐಸೀ ಕುಛ್ ನಹ್ಞೀ ; ಮೂರ್ತಿ ಕುಛ್ ನಹ್ಞೀ ; ಬಸ್, ಬೈಠ್‌ಕೇ ಧ್ಯಾನ್ ಕರ್‌ನೇಕಾ” ಎಂದಳು. ನಾನು ಮತ್ತೆ ಕೇಳ ಹೋಗಲಿಲ್ಲ.

ಮತ್ತೆರಡು ಬಾರಿ ನಾನು ವಿಶ್ರಾಂತಿಯಲ್ಲಿರ ಬೇಕಾದಾಗ, ಪುನಃ ಮಾಯಾಳ ಆಹ್ವಾನ ಬಂದಿತ್ತು. ನಾನು ನಕ್ಕು ಸುಮ್ಮನಾಗುತ್ತಿದ್ದೆ. ಒಂದಿನ ರೂಪಾಲಿ ನಗುನಗುತ್ತಾ ಒಳ ಬಂದಳು. ಧೂಳು ಝಾಡಿಸುತ್ತಾ ನನ್ನ ಮುಖ ನೋಡಿ ನಕ್ಕಳು. ಮತ್ತೆ, ಈ ಅಮ್ಮನ ಕಣ್ಣಿಗೆ ತಾನಾಗಿ ಏನೂ ಬೀಳಲಿಕ್ಕಿಲ್ಲ, ಎಂದು ಕೊಂಡಳೇನೋ, ಬಳಿ ಬಂದು, ” ಅಮ್ಮಾ,, ಏ ದೇಖೋ, ನಯಾ ಲಿಯಾ; ಅಚ್ಛಾ ಹೇ ಕ್ಯಾ ? ” ಎಂದು ಕತ್ತಿನ ಹೊಸ ಚಿನ್ನದ ಸರವನ್ನು ತೋರಿದಳು. ” ಅರೇ, ಯೇ ಕ್ಯಾ? ಭಗವಾನ್ ಬದಲ್ ಗಯೇ ಕ್ಯಾ? ” ಎಂದು ಸರದ ಪದಕವನ್ನು ಕೈಯಲ್ಲಿ ಹಿಡಿದು ಕೌತುಕದಿಂದ ಕೇಳಿದರೆ, “ನಹ್ಞೀ, ಅಮ್ಮಾ , ಉಧರ್ ದೂಸರಾ ಕೋಯೀ ಅಚ್ಛಾ ವಾಲಾ ನಹ್ಞೀ ಥಾ ” ಎಂದುತ್ತರಿಸಿದಳು, ರೂಪಾಲಿ. ನಮ್ಮ ಕೆಳಗಿನ ಅಂತಸ್ತಿನಲ್ಲಿ ಭಟ್‌ಜೀ ಮನೆಯಲ್ಲಿ ಹೆಣ್ಮಕ್ಕಳಿಬ್ಬರು ಎರಡು ತಿಂಗಳ ಅಂತರದಲ್ಲಿ ಹೆತ್ತಾಗ, ಸಹಾಯಕ್ಕೆಂದು ನಾಲ್ಕು ತಿಂಗಳು ದಿನವಿಡೀ ಅಲ್ಲಿ ದುಡಿದ ಸಂಬಳದಿಂದ ಕೊಂಡುದಾಗಿ ನುಡಿದಳು. ಒಳಗೆ ಪಾತ್ರೆ ತೊಳೆಯುತ್ತಿದ್ದ ಮಾಯಾ, ” ದೇಖಾ, ಅಮ್ಮಾ? ಅಚ್ಛಾ ಹೇ ಕ್ಯಾ?” ಎಂದು ಕೇಳಿದಳು. ” ಹ್ಞಾ , ಅಚ್ಛಾ ಹೆ”, ಅಂದೆ. ಮಾಯಾಳ ಮುಖದಲ್ಲಿ ತೃಪ್ತಿ, ಶಾಂತಿಯ ನಗು.

ಮಾಯಾಳ ಜೀವನದಲ್ಲಿ ಒಳ್ಳೆಯ ದಿನಗಳು ಬಂದಿರಬೇಕು. ಇತ್ತೀಚೆಗೆ ಮುಂಗಡ ಹಣ ಕೇಳುತ್ತಿಲ್ಲ; ಸದಾ ಶಾಂತಳೂ, ಪ್ರಸನ್ನ ಚಿತ್ತಳೂ ಆಗಿರುತ್ತಾಳೆ. ಇರಲಿ, ನಿಂತ ನೀರಾಗದೆ ಚಲಿಸುವುದೇ ಜೀವನವಲ್ಲವೇ? ಆ ನೀರ ಸೆಲೆಯಲ್ಲಿ ಕೆಡುಕೆಲ್ಲ ಕಳೆಯಲಿ, ಒಳಿತು ಮೂಡಿ ಬರಲಿ, ಎಂದೇ ಅಂದುಕೊಂಡೆ. ಅದು ಹೊಸವರ್ಷದ ಪೂರ್ವಸಂಧ್ಯೆ. ಕೆಲಸ ಮುಗಿದು ಹೊರಡುವಾಗ,”ಅಮ್ಮಾ, ಕಲ್ ಹಮ್ ನಹ್ಞೀ ಆಯೇಂಗೇ; ಆಜ್ ಪ್ರಾರ್ಥನಾ ಮೇ ಜಾನಾ ಹೆ; ಫಿರ್ ಕಲ್ ಘೂಮ್‌ನೇ ಜಾಯೇಂಗೇ”, ಎಂದಳು, ಮಾಯಾ. ಸರಿ, ಅಪರೂಪಕ್ಕೊಂದು ರಜೆ ಮಾಡುತ್ತಿದ್ದಾರೆ; ಹೋಗಲಿ, ಒಂದು ದಿನ ಹೊರಗೆ ತಿರುಗಾಡಲಿ. ಅವರಿಗೂ ಹೊಸ ವರ್ಷಾರಂಭ ಒಳ್ಳೆಯದಾಗಲಿ, ಎಂದಂದುಕೊಂಡೆ. ಹೊರಡುತ್ತಾ ರೂಪಾಲಿ ನುಡಿದಳು, ” ಅಮ್ಮಾ, ಕಲ್ ನಹ್ಞೀ ಮಿಲೇಂಗೇ; ಇಸ್‌ಲಿಯೇ ಆಜ್ ಹೀ – ಹ್ಯಾಪಿ ನ್ಯೂ ಇಯರ್ !” ಎಂದಳು. “ಹ್ಯಾಪಿ ಹ್ಯಾಪಿ ನ್ಯೂ ಇಯರ್, ರೂಪಾಲೀ,” ಅಂದೆ.

ವರ್ಷಾಂತ್ಯದ ಸೂರ್ಯ ಕೆಂಪಿನುಂಡೆಯಾಗಿ , ಹೊನ್ನಿನೋಕುಳಿ ಎರಚಿ, ಸಾಗರ ಸೇರಲು ನಡೆದಿದ್ದ. ನನ್ನೆದುರಿನ ಅಶ್ವತ್ಥ ವೃಕ್ಷದ ಅಸಂಖ್ಯ ಗಿಳಿಗಳು ಆ ಅಸ್ತಮಾನವನ್ನು ಸಾರಲೋ ಎಂಬಂತೆ ಅಸಾಧ್ಯ ಕಲರವ ನಡೆಸುತ್ತಾ ಮರಳಿ ಮರವನ್ನಾಶ್ರಯಿಸುವ ಹವಣಿಕೆಯಲ್ಲಿದ್ದುವು. ಕಾಲಗರ್ಭದಿಂದ ಮತ್ತೊಂದು ವರ್ಷದುದಯ ಸನ್ನಿಹಿತವಾಗಿತ್ತು. ಕಳೆದ ಕಾಲದ ಹಾದಿ ಹಿಡಿದು ನೋಡಿದರೆ, ಕಾತರ ಹುಟ್ಟಿಸುವ, ಅಂತೆಯೇ ಕೌತುಕವೆನಿಸುವ ಪರಿವರ್ತನೆಯ ಎಷ್ಟೊಂದು ಚಿತ್ರಗಳು ! ಬದಲಾದ ಅದೆಷ್ಟೊಂದು ಬಣ್ಣಗಳು!