(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ, ಇದರ ಎರಡನೆಯ ಭಾಗ)

ರೋಹಿಣಿಯವರ ಹುಟ್ಟು ನೆಲ ಕಾಣೆಮಾರು, ಅಲ್ಲಿನ ಕೃಷಿ ಮತ್ತು ಕೂಡುಕುಟುಂಬದ ನೆನಪುಗಳನ್ನಷ್ಟೇ ಹೊತ್ತು ಮಂಗಳೂರಿನ ನಗರ ಜೀವನಕ್ಕೆ ಬಂದು ಬಿದ್ದಿದೆ ಕೇವಲ ಅವರ ಅಪ್ಪ ಅಮ್ಮನ ಸಂಸಾರ. ಅಪ್ಪನ ಶೋಕೀ ಜೀವನದ ವಿವರ ಮತ್ತು ದೇಹಾಂತ್ಯದ ಕಾರಣವನ್ನು ಚುಟುಕಾಗಿ ಹಿಂದಿನ ಅಧ್ಯಾಯದಲ್ಲೇ ರೋಹಿಣಿಯವರು ಹೇಳಿದ್ದಾರೆ. ಹಾಗಾಗಿ ಅವರು ನಿರೀಕ್ಷೆಯಂತೇ `ಬೆಳಕಿನ ದಾರಿ ದೂರ’ ಎಂದೇ ಎರಡನೇ ಭಾಗಕ್ಕಿಳಿದಿದ್ದಾರೆ. ಓದಿ, ಕೇಳಿ ರೋಹಿಣಿಯವರ ಮಾತುಗಳಲ್ಲೇ…]

ಬೇರು ಸಹಿತ ಕಿತ್ತ ಮರವನ್ನು ನೋವಾಗದಂತೆ ಎಚ್ಚರದಿಂದ ಬೇರೆಡೆಯಲ್ಲಿ ನೆಟ್ಟರೆ ಅದು ಮತ್ತೆ ಚಿಗುರಿಕೊಳ್ಳುತ್ತದೆ. ನೆಟ್ಟಲ್ಲೇ ಬೇರು ಬಿಡುತ್ತದೆ. ಕೃಷಿಯನ್ನು ಧಿಕ್ಕರಿಸಿ ಏನೇನೋ ಕನಸುಗಳನ್ನು ಹೊತ್ತು ಮಂಗಳೂರಿಗೆ ಬಂದ ನನ್ನಪ್ಪನ ಸ್ಥಿತಿ ಹಾಗಾಗಲಿಲ್ಲ. ದೈಹಿಕವಾಗಿ ಮಾನಸಿಕವಾಗಿ ಆಘಾತಕ್ಕೊಳಗಾಗಿ ಕುಸಿದು ಕೂತರು. ಅಸ್ತಮಾ ಪದೇ ಪದೇ ಅವರನ್ನು ದುರ್ಬಲಗೊಳಿಸಿತು. ಅದೂ ಅಲ್ಲದೆ ಸೋದರಳಿಯನ ನೆರವಿನಿಂದ ಹೊಟೇಲು ಪ್ರಾರಂಭಿಸುವ ಮಾತಿಗೆ ಅಳಿಯನೂ ಉತ್ತೇಜನ ನೀಡಲಿಲ್ಲ. ಯಾಕೆಂದರೆ ಈ ಸೋದರಳಿಯ ಆಗಲೇ ಕಲ್ಲು ಕೋರೆಯ ಉದ್ಯಮಿಯಾಗಿ ತನ್ನದೇ ವ್ಯವಹಾರದಲ್ಲಿ ವ್ಯಸ್ತರಾಗಿದ್ದರು. ಸಾಹುಕಾರ್ ಚಂದಪ್ಪನೆಂದೇ ಅವರು ಪ್ರಸಿದ್ಧರಾಗಿದ್ದರು. ಅದೂ ಅಲ್ಲದೇ ನನ್ನನ್ನೂ ನನ್ನ ತಾಯಿಯನ್ನು ಗೋಪಾಲಣ್ಣನ ಜೊತೆಗೆ ಮಂಜೇಶ್ವರಕ್ಕೆ ಅಜ್ಜಿ ಮನೆಗೆ ಕಳಿಸಿ ಬಿಟ್ಟಿದ್ದರು. ಅಮ್ಮನ ಕುಟುಂಬದ ಜೊತೆಗೆ ಅಪ್ಪನ ಸಂಬಂಧ ನಾನು ಹುಟ್ಟುವ ಮೊದಲೇ ಬಿರುಕುಬಿಟ್ಟಿತ್ತು. ಆದುದರಿಂದ ಈ ಸೋತ ಸ್ಥಿತಿಯಲ್ಲಿ ಮಗಳನ್ನು ಹೆಂಡತಿಯನ್ನು ತವರಿಗೆ ಅಟ್ಟುವುದು ಅವರಿಗೆ ದೊಡ್ಡ ಅವಮಾನವಾಗಿ ಕಾಡಿತು. ಆದರೂ ನಿರ್ವಾಹವಿಲ್ಲದೆ ಗೋಪಾಲಣ್ಣ ನಮ್ಮನ್ನು ಮಂಜೇಶ್ವರಕ್ಕೆ ಬಿಟ್ಟು ಬಂದರು. ನಾನು ಎರಡನೇ ತರಗತಿಗೆ ಅಲ್ಲಿ ಗುಡ್ಡಂಕೇರಿ ಶಾಲೆಗೆ ದಾಖಲಾದೆ.

ಒಂದು ವರ್ಷದವರೆಗೂ ನಾವು ಅಪ್ಪನೂ ತಮ್ಮದೇ ರೀತಿಯಲ್ಲಿ ಜೈಲು ವಾಸದ ನಿರ್ಬಂಧಕ್ಕೊಳಗಾಗುವುದು ಅನಿವಾರ್ಯವಾಯಿತು. ಈಗಿನಂತೆ ಸಂಪರ್ಕ ಸಾಧನಗಳಿಲ್ಲದ ಆ ಕಾಲದಲ್ಲಿ ನಮ್ಮ ಅಸಹಾಯಕತೆಯನ್ನು ವಿವರಿಸಲು ಪದಗಳಿಲ್ಲ. ಆದರೂ ಅಪ್ಪ ಗೋಪಾಲಣ್ಣನನ್ನು ಮಧ್ಯದಲ್ಲೊಮ್ಮೆ ಮಂಜೇಶ್ವರಕ್ಕೆ ಕಳಿಸಿ ಕಷ್ಟ ಸುಖ ವಿಚಾರಿಸುವ ವ್ಯವಸ್ಥೆ ಮಾಡಿದ್ದರು. ಈ ಗೋಪಾಲಣ್ಣ ನಮ್ಮ ಮನೆ ಮಗನಾದುದು ಒಂದು ಯೋಗಾಯೋಗ. ಅದೊಂದು ದಿನ ಸಂಜೆಯ ಹೊತ್ತಿನಲ್ಲಿ ಕಾಣೆಮಾರಿನ ಮನೆಯಂಗಳದಲ್ಲಿ ಹರಿದ ಅಂಗಿ ಚಡ್ಡಿ ಹಾಕಿದ ಸುಮಾರು ಏಳೆಂಟು ವರ್ಷದ ಹುಡುಗನೊಬ್ಬ ಪ್ರತ್ಯಕ್ಷನಾದ. ಯಾರು ಏನು? ಎಂದು ಕೇಳಿದರೆ ಉತ್ತರಿಸದೆ ಬರಿಯ ಕಣ್ಣೀರು ಹಾಕುವ ಆತನನ್ನು ಸಮಾಧಾನ ಪಡಿಸಿ ಅಪ್ಪ ಅಮ್ಮ ಒಳಗೆ ಕರೆದು ಊಟ ಹಾಕಿದರು. ನಾಳೆ ಮಾತಾಡೋಣ ಈಗ ಮಲಗು ಎಂದು ಮನೆಮಂದಿ ಎಲ್ಲರೂ ಸಂತೈಸಿದರು. ಗೋಪಾಲಣ್ಣನ ತಾಯಿ ಕಂಡಜ್ಜನ ದೂರದ ಸಂಬಂಧಿ. ಅವರು ಯಾವಾಗಲೂ ಕಾಣೆಮಾರಿನ ಕೃಷಿ ಸಂಪತ್ತಿನ ಬಗ್ಗೆ ಮನೆಯಲ್ಲಿ ಮಾತಾಡುತ್ತಿದ್ದರಂತೆ. ವಿಟ್ಲದಾಚೆ ಒಂದು ಹಳ್ಳಿಯಲ್ಲಿದ್ದ ಗೋಪಾಲಣ್ಣನ ತಾಯಿ ಗಂಡ ಸತ್ತ ಮೇಲೆ ಸ್ವಜಾತಿಯವನನ್ನು ಕೂಡಿಕೆ ಮಾಡಿಕೊಂಡರು. ಆ ಮಲತಂದೆಯ ವರ್ತನೆ ಸರಿಕಾಣದೆ ಆಗಾಗ ಮನೆಯಲ್ಲಿ ಜಗಳಗಳಾಗುತ್ತಿದ್ದವು. ಮೂವರು ಗಂಡು ಮಕ್ಕಳಲ್ಲಿ ಹಿರಿಯವನೇ ಗೋಪಾಲಣ್ಣ. ಒಂದು ದಿನ ಜಗಳವಾಗಿ ಮುಂಜಾನೆ ಮನೆ ಬಿಟ್ಟ ಗೋಪಾಲಣ್ಣ ನಡೆದುಕೊಂಡೇ ಅಷ್ಟು ದೂರ ಕ್ರಮಿಸಿ ಕಾಣೆಮಾರಿನ ಅಂಗಳದಲ್ಲಿ ಕಾಣಿಸಿಕೊಂಡಿದ್ದರು.

ಜೀವನವೆಂಬುವುದು ಕೌತುಕಗಳ ಸರಮಾಲೆ ಎಂಬುವುದು ಇದಕ್ಕೆ ಅಲ್ಲವೇ? ಹಾಗೆ ಬಂದು ನೆಲೆಯಾದ ಗೋಪಾಲಣ್ಣ ಮನೆಯ ಒಳ ಹೊರಗಿನ ಎಲ್ಲಾ ಕೆಲಸದಲ್ಲಿ ನೆರವಾದರು. ಕೃಷಿ ಕೆಲಸದಲ್ಲಿ ಶ್ರದ್ದೆಯಿಂದ ತೊಡಗಿಸಿಕೊಂಡರು. ಮುಂದೆ ಕೃಷಿಯಲ್ಲಿ ಅಪ್ಪನ ಪ್ರಯೋಗಗಳಿಗೆ ಗಟ್ಟಿಯಾದ ಸಾಥ್ ನೀಡಿ ಅದು ಕೊನೆ ಮುಟ್ಟುವಂತೆ ಉಸ್ತುವಾರಿ ಮಾಡಿದವರು ಈ ಗೋಪಾಲಣ್ಣ. ನಾನು ಮಗುವಾಗಿರುವಾಗ ತೊಟ್ಟಿಲು ತೂಗಿ ಲಾಲಿ ಹಾಡಿದವರು, ನನ್ನನ್ನು ಬೆನ್ನ ಮೇಲೆ ಹೊತ್ತು ತಿರುಗಾಡಿಸಿದವರು ಈ ಗೋಪಾಲಣ್ಣ. ಅಪ್ಪನಿಗೂ ಅಮ್ಮನಿಗೂ ಸಕಲ ಕ್ಲೇಷ ಪರಿಹಾರಕನಾಗಿ ಜೊತೆಗಿದ್ದವರು. ಅಪ್ಪ ಕೃಷಿ ಬಿಟ್ಟು ಮಂಗಳೂರಿನ ಬಿಕರ್ನಕಟ್ಟೆಗೆ ಬಂದಾಗ ನಮ್ಮ ಜೊತೆಯಲ್ಲೇ ಎತ್ತಿನ ಗಾಡಿಯೇರಿ ಬಂದವರವರು. ಬಹುಶ: ಗೋಪಾಲಣ್ಣ ಜೊತೆಗಿದ್ದಾರೆಂಬ ಧೈರ್ಯವೇ ಅಪ್ಪನಿಗೆ ನಮ್ಮ ಅಗಲಿಕೆಯ ನೋವನ್ನು ಮರೆಯಲು ಸಾದ್ಯವಾಯಿತು.

ನನ್ನ ಜೀವನದ ಮೊದಲ ವಲಸೆ ಪ್ರಾರಂಭವಾದದ್ದು ಬಂಗ್ರ ಮಂಜೇಶ್ವರದ ಗೋಳಿದಡಿಯ ಅಜ್ಜಿ ಮನೆಗೆ. ಅದು ಒಂದು ರೀತಿಯಲ್ಲಿ ನನ್ನನ್ನು ಅಂತರ್ಮುಖಿಯನ್ನಾಗಿಸಿತು. ಆ ಕಾಲದಲ್ಲಿಯೇ ಹಂಗಿನ ಬದುಕು ಯಾವ ಮನುಷ್ಯನನ್ನು ಉದ್ಧಾರವಾಗಲು ಬಿಟ್ಟಿಲ್ಲ. ಅದರ ಒಳಿತು ಕೆಡುಕುಗಳೆರಡೂ ನನಗೆ ಪಾಠ ಕಲಿಸಿದವು. ಒಂದು ಗುಡ್ಡಕ್ಕೆ ಇನ್ನೊಂದು ಗುಡ್ಡದ ಅಗತ್ಯ ಇಲ್ಲದಿರಬಹುದು. ಆದರೆ ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯನ ನೆರವು ಬೇಕೇ ಬೇಕು. ಯಾರ ಸಹಾಯವು ಇಲ್ಲದೆ ಬದುಕಬಲ್ಲೆನೆಂಬ ಮನುಷ್ಯ ಬಹುಶ: ಈವರೆಗೆ ಹುಟ್ಟಿಲ್ಲವೆಂದೇ ಭಾವಿಸಿದ್ದೇನೆ.

ಅಮ್ಮನಿಗೂ ತವರು ಮನೆ ಹಂಗಿನ ಮನೆಯಾಗಲು ಕಾರಣವಿದೆ. ಅದು ನಾನು ಹುಟ್ಟುವುದಕ್ಕಿಂತಲೂ ಮೊದಲಿನ ಕತೆ. ಅಮ್ಮ ಹೆತ್ತ ಮೊದಲ ಮೂವರು ಮಕ್ಕಳೂ ಹುಟ್ಟಿ ಸತ್ತವು. ಮೂರನೇ ಹೆರಿಗೆಗೆ ತವರು ಮನೆಗೆ ಬಂದಾಗ ಮೋನಪ್ಪಜ್ಜ ಅಮ್ಮನಿಗೆ ಎರಡನೇ ಮದುವೆಗೆ ಗಂಡು ಹುಡುಕಿದರಂತೆ. ಅಳಿಯನ ಕಲ್ಯಾಣ ಗುಣಗಳು ಅವರಲ್ಲಿ ರೋಷ ಉಕ್ಕಿಸುವಂತಿತ್ತು. ಮಕ್ಕಳು ಬದುಕದಿರಲು ಅಳಿಯನ ಯಾವುದೋ ದೋಷವೇ ಕಾರಣ. ಅಂತಹವನ ಜೊತೆ ಮಗಳು ಕ್ಷೇಮವಾಗಿ ಬಾಳುವೆ ಮಾಡಲಾರಳು ಎಂದು ಯೋಚಿಸಿ ಅಳಿಯನಿಗೂ ಹೇಳದೆ ಮಗಳ ಅನುಮತಿಯನ್ನೂ ಪಡೆಯದೇ ಗಂಡು ಹುಡುಕಿದ್ದರಂತೆ. ಅದು ಹೇಗೋ ಅಪ್ಪನಿಗೆ ಸುದ್ದಿ ಮುಟ್ಟಿತು. ಅವರು ಎತ್ತಿನಗಾಡಿಯೇರಿ ಗೋಳಿದಡಿಯ ಮನೆಯ ಮುಂದೆ ಬಂದು ನಿಂತರು. ಅಜ್ಜ ಅವರನ್ನು ಸ್ವಾಗತಿಸಲೂ ಇಲ್ಲ, ದಬ್ಬಲೂ ಇಲ್ಲ. ಪರಿಸ್ಥಿತಿಯನ್ನು ಊಹಿಸಿದ ಅಪ್ಪ ನಾನು ನನ್ನ ಹೆಂಡತಿಯಲ್ಲಿ ಕೊನೆಯದಾಗಿ ಒಂದು ಮಾತು ಹೇಳಿ ಹೋಗಲು ಬಂದೆ ಎಲ್ಲಿದ್ದಾಳೆ ಒಮ್ಮೆ ಕರೆಸಿ ಎಂದಾಗ, “ಹೆಂಡತಿಯನ್ನು ಸರಿಯಾಗಿ ಬಾಳಿಸಲಾಗದ ನಿನಗೆ ಅದೊಂದು ಬಾಕಿ ಉಳಿದಿದೆ. ದೇವಕೀ, ಇಕಾ, ನಿನ್ನ ಗಂಡನಿಗೆ ನಿನ್ನಲ್ಲಿ ಏನೋ ಮಾತಾಡಬೇಕಂತೆ. ಏನೆಂದು ಕೇಳು” ಎಂದು ಕರೆದರು. ಅಮ್ಮ ಹೆದರಿ ಹೆದರಿ ಚಾವಡಿಗೆ ಬಂದರು. ಅಪ್ಪ “ಬಾ, ಅಲ್ಲಿ ಹಿತ್ತಲಿಗೆ ಹೋಗೋಣ ಇಲ್ಲಿ ನಿನ್ನಪ್ಪನ ಮುಂದೆ ಹೇಳುವ ವಿಷಯವಲ್ಲ ಅದು” ಎಂದು ಹಿತ್ತಲಿಗೆ ಸಾಗಿದರು. ಅಲ್ಲಿ ಅಪ್ಪ ಏನು ಮೋಡಿ ಮಂತ್ರ ಮಾಡಿದರೋ ತಿಳಿಯದು. ಅಮ್ಮ ಉಟ್ಟ ಬಟ್ಟೆಯಲ್ಲಿಯೇ ಮನೆಯ ಮುಂದೆ ನಿಂತ ಎತ್ತಿನ ಗಾಡಿಗೇರಿಯೇ ಬಿಟ್ಟರು. ಅಜ್ಜ ಅಜ್ಜಿ ಬೈಯುವ ಮಾತಿಗೆ ಕೆಪ್ಪಾಗಿ ಕಲ್ಲಾಗಿ ಕೂತರು. ಅಜ್ಜನ ಬೈಗಳನ್ನು ಕೇಳಿ ಒಂದು ಹೆಜ್ಜೆ ಮುಂದೆ ಬಂದ ಅಪ್ಪ “ನನ್ನ ಹೆಂಡತಿಯನ್ನು ಯಾರಾದರೂ ಅಪಹರಿಸಿಕೊಂಡು ಹೋದರೆ ಏನು ಮಾಡುತ್ತೇನೋ ಅದನ್ನೇ ಮಾಡಿಯೇನು ಕೈ ಕಾಲು ಕತ್ತರಿಸಿಯೇನು, ಇದು ನಿಮಗೆ ಕೊಡುವ ಎಚ್ಚರಿಕೆ” ಎಂದು ಸಾರಿ ಹೇಳಿ ಪಾದಗಳನ್ನು ನೆಲಕ್ಕೆ ಬಡಿದು ರಪರಪ ಹೆಜ್ಜೆ ಹಾಕಿ ಗಾಡಿಯಲ್ಲಿ ಕೂತು ತುಂಬೆಯತ್ತ ಮುಖ ಮಾಡಿದರು.

ಅಂದಿನಿಂದ ಅಮ್ಮನಿಗೆ ತವರಿನ ಸಂಬಂಧದ ಕೊಂಡಿ ಸಡಿಲವಾಗಿತ್ತು. ಆ ಮೇಲೆ ಏಳೆಂಟು ವರ್ಷಗಳವರೆಗೂ ತವರಿನಲ್ಲಿ ಏನು ನಡೆಯಿತು ಎಂಬ ವರ್ತಮಾನವೇ ಅಮ್ಮನಿಗೆ ಮುಟ್ಟಲಿಲ್ಲ. ಅವರ ಅಪ್ಪ ತೀರಿ ಹೋದ ಸುದ್ದಿಯೂ ಯಾರಿಂದಲೋ ತಲುಪಿತು. ಅಮ್ಮನ ತಂಗಿ ಚಿಕ್ಕಮ್ಮ ಆತ್ಮಹತ್ಯೆ ಮಾಡಿಕೊಂಡು ಸತ್ತ ಸುದ್ದಿಯೂ ಎಷ್ಟೋ ತಿಂಗಳುಗಳ ಬಳಿಕ ಮುಟ್ಟಿತು. ಆರು ಮಂದಿ ಸೋದರರು ಮೂರು ಮಂದಿ ಸೋದರಿಯರ ತುಂಬು ಕುಟುಂಬದಲ್ಲಿ ಬೆಳೆದ ಅಮ್ಮನನ್ನು ಹೀಗೆ ದೂರ ಮಾಡಲು ನನ್ನ ತಂದೆಯ ಉದ್ಧಟತನ ಮಾತ್ರವಲ್ಲ ಅವರ ದೀನಾವಸ್ಥೆಯೂ ಕಾರಣವಾಯ್ತು. ಸೋತು ಕೈ ಖಾಲಿಯಾದ ಸ್ಥಿತಿಯಲ್ಲಿ ಎಂದೂ ಬಂಧುಗಳ ಆಶ್ರಯ ಅರಸಿ ಹೋಗಬಾರದು ಎಂಬ ಸತ್ಯವು ಅರಿವಾಗಿ ನನ್ನಮ್ಮ ಕುಗ್ಗಿ ಹೋದಳು. ಸ್ವಾಭಿಮಾನವನ್ನು ಮೂಟೆಕಟ್ಟಿ ಅಟ್ಟದಲ್ಲಿಟ್ಟು ಒಂದು ವರ್ಷವನ್ನು ಹೇಗಾದರೂ ಕಷ್ಟವೋ ಸುಖವೋ ಬಂದುದನ್ನು ಎದುರಿಸಿಯೇ ಸಿದ್ಧ ಎಂದು ಮನಸ್ಸು ಗಟ್ಟಿ ಮಾಡಿಕೊಂಡಳು.

ಮೋನಪ್ಪಜ್ಜನ ಬಗ್ಗೆ ಅಮ್ಮನ ನೆನಪಿನಿಂದ ಹೇಳಿದ ಮಾತುಗಳು ಒಂದು ಕಾದಂಬರಿಯ ಕಥಾನಕದಂತಿದೆ. ಅದರ ಮೂಲ ಸತ್ಯಾ ಸತ್ಯತೆಗಳನ್ನು ಅಮ್ಮನೂ ಖಚಿತಪಡಿಸಿಕೊಂಡಿಲ್ಲ. ವಿವರಗಳನ್ನು ಅಜ್ಜನಲ್ಲಿ ಕೇಳಿ ಸಂದೇಹ ಪರಿಹರಿಸಿಕೊಳ್ಳುವಷ್ಟು ಸಲಿಗೆಯೂ ಅಮ್ಮನಿಗೆ ಇರಲಿಲ್ಲ. ಮೋನಪ್ಪಜ್ಜನ ಅಪ್ಪ ಯಾರದೋ ಸೇನೆಯಲ್ಲಿ ಕೆಲಸಕ್ಕಿದ್ದರಂತೆ. ಮದುವೆಯಾಗಿ ತಿಂಗಳೊಳಗೇ ಕರೆ ಬಂದು ಹೊರಟು ಹೋದರಂತೆ. ಕೆಲವು ತಿಂಗಳುಗಳ ಬಳಿಕ ಒಂದು ದಿನ ರಾತ್ರಿ ಬಂದು ತಂಗಿದ್ದು ಬೆಳಿಗ್ಗೆ ಬೆಳಕು ಮೂಡುವ ಮೊದಲೇ ಹೊರಟು ಹೋಗಿದ್ದರಂತೆ. ತಾನು ಮನೆಗೆ ಬಂದ ಬಗ್ಗೆ ಯಾರಿಗೂ ಹೊರಗಿನವರಿಗೆ ಹೇಳಬಾರದೆಂದು ತಾಕೀತು ಮಾಡಿದ್ದರಂತೆ. ಅವರ ಜೊತೆಯಲ್ಲಿ ಬಂದ ಇನ್ನೊಬ್ಬ ಸೈನಿಕ ಊರ ದೇವಸ್ಥಾನದ ಬಳಿಯ ಕಟ್ಟೆಯಲ್ಲಿ ಮಲಗಿದ್ದರಂತೆ. ಅವರು ಬಂದ ಕುದುರೆಯನ್ನೂ ಅಲ್ಲೇ ಮರಕ್ಕೆ ಕಟ್ಟಿದ್ದರಂತೆ. ಇದೆಲ್ಲಾ ಎಷ್ಪೋ ಸಮಯದ ಬಳಿಕ ಗೊತ್ತಾದ ಸಂಗತಿ. ಹಾಗೆ ಒಂದು ರಾತ್ರಿ ಗಂಡ ಬಂದು ಹೋದುದೇ ಮೋನಪ್ಪಜ್ಜನ ಜನನಕ್ಕೆ ಕಾರಣವಾಯಿತು. ಆದರೆ ಏನನ್ನಾದರೂ ಅಡಗಿಸಬಹುದು ಗರ್ಭವನ್ನು ಅಡಗಿಸುವುದು ಸಾಧ್ಯವೇ? ಆ ಮುತ್ತಜ್ಜಿಯನ್ನು ಮನೆ ಮಂದಿಯೇನೋ ನಂಬಿದರು. ಆದರೆ ಊರವರು? ಎಲುಬಿಲ್ಲದ ನಾಲಗೆಗೆ ಸರಿ ತಪ್ಪುಗಳ ವಿಮರ್ಶೆ ಮಾಡುವ ಶಕ್ತಿಯಿದೆಯೇ? ಒಂದು ದಿನ ಗಂಡ ಬಂದು ನಾನೇ ಈ ಮಗುವಿನ ತಂದೆ ಎಂದು ಸಮಾಜಕ್ಕೆ ರುಜುವಾತು ಪಡಿಸುತ್ತಾನೆಂದು ಕಾತರದಿಂದ ಕಾದರು. ಆ ಕಾಲ ಬರಲೇ ಇಲ್ಲ. ಮಗುವಿಗೆ ವರ್ಷ ತುಂಬುವುದರೊಳಗೆ ಮುತ್ತಜ್ಜ ಸತ್ತ ವರ್ತಮಾನ ಬಂತಂತೆ. ಈ ಸುದ್ದಿ ಕೇಳಿ ಮುತ್ತಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ. ಅಲ್ಲಿಗೆ ಮೋನಪ್ಪಜ್ಜ ಅಮ್ಮ, ಅಪ್ಪ ಇಬ್ಬರನ್ನೂ ಕಳಕೊಂಡ ತಬ್ಬಲಿಯಾದರು. ಅವರ ಸೋದರ ಮಾವಂದಿರು ಅವರನ್ನು ಬಹಳ ಪ್ರೀತಿಯಿಂದ ಸಾಕಿ ಕನ್ನಡ ಮಲೆಯಾಳ, ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಸ್ವಲ್ಪ ಮಟ್ಟಿನ ತಿಳುವಳಿಕೆ ಮೂಡುವಷ್ಟು ಶಿಕ್ಷಣ ಕೊಡಿಸಿದರಂತೆ. ಸೋದರ ಮಾವಂದಿರು ವೈದ್ಯ ವೃತ್ತಿಯಲ್ಲಿ ಪರಿಣತರಾದವರು. ಮೋನಪ್ಪಜ್ಜನನ್ನು ಬ್ರಿಟಿಷ್ ಸರಕಾರದ ಕಂದಾಯ ಇಲಾಖೆಯಲ್ಲಿ ಶ್ಯಾನುಭೋಗರಾಗಿ ಕೆಲಸ ಸಿಗುವಂತೆ ಪ್ರಯತ್ನಿಸಿದರು. ಪ್ರೋತ್ಸಾಹಿಸಿದರು. ಮುತ್ತಜ್ಜ ಸತ್ತದ್ದು ಯಾವ ಯುದ್ಧದಲ್ಲಿ ಎಂಬ ಪ್ರಶ್ನೆ ನನ್ನಲ್ಲಿ ಹಾಗೆಯೇ ಉಳಿಯಿತು. ಮುತ್ತಜ್ಜನ ಕಾಲ ೧೯ನೇ ಶತಮಾನದ ಪೂರ್ವಾರ್ಧವಾದುದರಿಂದ ಕಲ್ಯಾಣಪ್ಪನ ಕಾಟಕಾಯಿಯಲ್ಲಿ (ದಂಗೆ) ಇವರು ಸೇರಿಕೊಂಡಿರಬಹುದೇ? ಯಾರಲ್ಲೂ ಹೇಳಬೇಡವೆನ್ನಲು ಬ್ರಿಟಿಷ್ ಪೋಲೀಸರ ಭಯವಿತ್ತೇ? ತಿಳಿಯದು. ಈ ವಿವರಗಳಾವುವೂ ಅಮ್ಮನಿಗೆ ತಿಳಿದಿಲ್ಲ. ನನ್ನ ಊಹೆಯಷ್ಟೇ. ಅದು ನಿಜವಾಗಿದ್ದರೆ ಬ್ರಿಟಿಷರ ವಿರುದ್ಧ ದಂಗೆಯೆದ್ದವನ ಮಗನೇ ಅವರ ಕೈಕೆಳಗೆ ಸೇವೆ ಸಲ್ಲಿಸುವಂತಹ ಯೋಗ ದಕ್ಕಿದ್ದು ವಿಚಿತ್ರವಲ್ಲವೇ?

ಮೋನಪ್ಪಜ್ಜ ಕಷ್ಟಗಳಿಗೆ ಕುಗ್ಗಿದವರಲ್ಲ. ಸುಖಕ್ಕೆ ಹಿಗ್ಗಿದವರಲ್ಲ. ತನ್ನ ದಿಟ್ಟ ನಿಲುವುಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದರು. ಸೋತರೂ ಮಹಾ ವಿಜಯದತ್ತ ಸಾಗಬೇಕು ತನ್ನ ಕುಟುಂಬವನ್ನು ನೇರ ರಾಜ ಮಾರ್ಗದಲ್ಲಿ ಮುನ್ನಡೆಸಬೇಕೆಂಬ ಹಂಬಲ ಉಳ್ಳವರು. ಅವರು ಬಾಳಿದ ರೀತಿಯೇ ನಮಗೆ ಪಾಠ. ಅಪ್ಪಿ ಚಿಕ್ಕಮ್ಮ ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಿದೆನಲ್ಲಾ. ತನ್ನ ಮಕ್ಕಳು ವಕ್ರ ದಾರಿಯಲ್ಲಿ ಸಾಗುತ್ತಿದ್ದಾರೆಂದು ಅನಿಸಿದ ಕೂಡಲೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ದಾರಿಯ ಸಾಧಕ ಬಾಧಕಗಳ ಬಗ್ಗೆ ಮಾತಾಡಿ ಮೆಲು ಮಾತಿನಿಂದ ಸಾಂತ್ವನವೀಯುವ ಹೆತ್ತವರಿರುತ್ತಿದ್ದರೆ ಎಷ್ಟೋ ದುರಂತಗಳು ತಪ್ಪುತ್ತಿದ್ದವು. ಆದರೆ ನನ್ನ ಅಜ್ಜನ ಕಾಲವೇ ಹಾಗಿತ್ತು. ದಂಡಂ ದಶಗುಣಂ ಎಂಬುದರಲ್ಲಿ ವಿಶ್ವಾಸವಿದ್ದ ನನ್ನಜ್ಜ ಚಿಕ್ಕಮ್ಮನ ವಿಷಯದಲ್ಲಿ ಮಾಡಿದ್ದೂ ಇದನ್ನೇ ಸೋದರ ಮಾವಂದಿರ ಗೆಳೆಯನೊಬ್ಬ ಯಾವಾಗಲೂ ಮನೆಗೆ ಬರುತ್ತಿದ್ದ. ಚಿಕ್ಕಮ್ಮನಿಗೆ ಓದುವ ಚಟವಿತ್ತು. ಅದನ್ನು ಅರಿತ ಅವನು ಪತ್ರಿಕೆ ಪುಸ್ತಕಗಳನ್ನು ಓದಲೆಂದು ತಂದು ಕೊಡುತ್ತಿದ್ದ. ವಿದ್ಯಾವಂತನೂ, ಸರಕಾರಿ ಉದ್ಯೋಗಿಯೂ ಆದ ಅವನನ್ನು ಮನೆಯಲ್ಲಿ ಎಲ್ಲರೂ ಪ್ರೀತಿಸುತ್ತಿದ್ದರು. ಪುಸ್ತಕದ ನಂಟು ಅವರನ್ನು ಪ್ರೇಮ ಪಾಶದಲ್ಲಿ ಬಂಧಿಸಿತು. ಅವನೇ ಮೇಲೆ ಬಿದ್ದು ಪ್ರೀತಿಸಿದನೋ, ಚಿಕ್ಕಮ್ಮನೇ ಅವನ ಆಕರ್ಷಣೆಗೊಳಗಾದಳೋ ತಿಳಿಯದು. ಇಂತಹ ವಿಷಯಗಳು ಬೇಗ ಪ್ರಚಾರವಾಗುತ್ತವೆ. ಚಿಕ್ಕಮ್ಮನಿಗೆ ನೆಂಟಸ್ತಿಕೆ ಬಂದಾಗ ಆಕೆ ನಿರಾಕರಿಸಿ ತಾನು ಅವನನ್ನೇ ಮದುವೆಯಾಗುವುದೆಂದು ಖಡಾ ಖಂಡಿತವಾಗಿ ಹೇಳಿದಳಂತೆ. ಆ ಮಾತು ಬಾಂಬ್ ಸಿಡಿದಂತೆ ಅನಾಹುತ ಸೃಷ್ಟಿಸಿತು. ಅಜ್ಜಿ ಬೇರೆ ಅಜ್ಜ ಬೇರೆ ‘ಟ್ರೀಟ್‌ಮೆಂಟ್’ ಕೊಟ್ಟರಂತೆ. ಮತ್ತೆರಡು ದಿನಗಳಲ್ಲಿ ಚಿಕ್ಕಮ್ಮನ ಹೆಣ ಕೊಟ್ಟಿಗೆಯಲ್ಲಿ ನೇತಾಡಿತು. ಆ ಹುಡುಗ ಸ್ವಜಾತಿಯವನೇ ಆದರೂ ಅಜ್ಜನ ತಿರಸ್ಕಾರಕ್ಕೆ ಕಾರಣವೇನೆಂದರೆ ಅವನಿಗೆ ಮದುವೆಯಾಗಿ ಮಕ್ಕಳಿದ್ದರು. ಬಹುಶ: ಅವನು ವಿಧುರನಾಗಿರುತ್ತಿದ್ದರೆ ಅಜ್ಜ ಅವರ ಮದುವೆಗೆ ಸಮ್ಮತಿಸುತ್ತಿದ್ದರೆ? – ತಿಳಿಯದು.

ಗಂಡ ಬದುಕಿರುವಾಗಲೇ ನನ್ನಮ್ಮನಿಗೆ ಎರಡನೇ ಮದುವೆ ಮಾಡಲು ಪ್ರಯತ್ನಿಸಿದ ಅಜ್ಜ ಚಿಕ್ಕಮ್ಮನ ಮಟ್ಟಿಗೆ ಇಷ್ಟು ನಿಷ್ಕರುಣಿಯಾಗಿ ಯಾಕೆ ವರ್ತಿಸಿದರು? ಆ ಕಾಲದಲ್ಲಿ ಎರಡು ಮೂರು ಮದುವೆಯಾಗುವುದು ಗಂಡಸರಿಗೆ ಪ್ರತಿಷ್ಠೆಯ ವಿಷಯವಾಗಿತ್ತು ಗಂಡಸಿಗೆ ಎಷ್ಟು ಮದುವೆಯಾದರೂ ಮೊದಲ ಮದುವೆಯಷ್ಟೇ ಸಂಭ್ರಮದ ಸಂಗತಿಯಾಗಿತ್ತು. ಆದರೆ ಹೆಣ್ಣಿಗೆ ಆಗುವ ಮದುವೆ ಕೂಡಿಕೆ ಮಾತ್ರ, ಕೆಲವೇ ಮಂದಿ ಹಿರಿಯರ ಮುಂದೆ ಆಗುವ ಒಪ್ಪಂದ ಮಾತ್ರವಾಗಿತ್ತು. ಚಿಕ್ಕಮ್ಮನ ಮದುವೆಯನ್ನು ವಿರೋಧಿಸಿ ಅವರ ಪ್ರಾಣಕ್ಕೆ ಎರವಾದರು. ಅಜ್ಜ, ಸಲೀಸಾಗಿ ನನ್ನಮ್ಮನ ಕೂಡಿಕೆಗೆ ಸಿದ್ದತೆ ಮಾಡಿದ್ದರು. ಅವರಿಗೆ ಚಿಕ್ಕಮ್ಮ ಎರಡನೇ ಪತ್ನಿಯಾಗಿ ಹೋಗುವುದು ಇಷ್ಟವಿರಲಿಲ್ಲವೆಂದೇ ಭಾವಿಸುತ್ತೇನೆ. ಅಮ್ಮನ ಕೂಡಿಕೆಗೂ ವಿಧುರನೊಬ್ಬನನ್ನು ಮಾತಾಡಿಟ್ಟಿದ್ದರಂತೆ. ಚಿಕ್ಕಮ್ಮ ಪ್ರಾಣತ್ಯಾಗ ಮಾಡಿದ ಮೇಲೆ ಅಜ್ಜ ಮಾನಸಿಕವಾಗಿ ದುರ್ಬಲಗೊಂಡಿದ್ದರಂತೆ. ಎರಡನೇ ಪತ್ನಿಯಾಗಿ ನರಕ ಅನುಭವಿಸುವುದಕ್ಕಿಂತ ಹೀಗೆ ಸತ್ತದ್ದೇ ಒಳ್ಳೆದಾಯಿತೆಂದು ಅಜ್ಜಿ ಅವರನ್ನು ಸಾಂತ್ವನ ಮಾಡುತ್ತಿದ್ದರಂತೆ. ಜೀವನದ ಬಲೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬೆರಡು ಎಳೆಗಳೂ ಇರುತ್ತವೆ ಎಂಬ ಮಾತು ಸುಳ್ಳಲ್ಲ. ಅಲ್ಲವೇ ?

[ಎರಡನೆಯ ಭಾಗ ಮುಗಿಯಿತು. ಬಿ.ಎಂ ರೋಹಿಣಿಯವರ ಆತ್ಮಕಥಾನಕ ಮುಂದುವರಿಯಲಿದೆ.]

(ಮುಂದುವರಿಯಲಿದೆ)