ಅಮೃತಸರ ಸುತ್ತ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನಾಲ್ಕು)
ಲೇಖನ – ವಿದ್ಯಾಮನೋಹರ
ಚಿತ್ರ – ಮನೋಹರ ಉಪಾಧ್ಯ

ವೈಷ್ಣೋದೇವಿಯ ದರ್ಶನದ ಬಳಿಕ ರಘುನಾಥನ ನೋಡಲು ಹೋಗುವುದು ಎಂದು ನಿಶ್ಚಯಿಸಿ, ಕಾತ್ರಾದ ಹೋಟೆಲ್ಲನ್ನು ಬಿಟ್ಟು ಜಮ್ಮುವಿನೆಡೆಗೆ ಹೊರಟೆವು. ಮತ್ತೆ ೪೯ ಕಿ.ಮೀಗಳ ರಸ್ತೆ ಪ್ರಯಾಣ, ಈ ಪ್ರಯಾಣದಲ್ಲೂ ಬೆಟ್ಟಗುಡ್ಡಗಳು, ವಿವಿಧ ಜಾತಿಯ ಮರಗಳು, ಮೇಯುತ್ತಿರುವ ಪಶುಸಂಕುಲಗಳು ಕಾಣಸಿಕ್ಕವು.

ಬೆಟ್ಟಗಳ ಕಲ್ಲು ಸಂದಿಗಳ ಎಡೆಯಲ್ಲಿ ಮೇಯುತ್ತಿದ್ದ, ಮಕಮಲ್ಲಿನ ಕೂದಲ ರಾಶಿಯ ಪಾಶ್ಮಿನಾ ಆಡುಗಳನ್ನು ಕಂಡೆ. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಕೆಲವು ಸುರಂಗಗಳಿದ್ದು, ಗುಡ್ಡ ಕೊರೆದು ರಸ್ತೆ ಮಾಡಿದ್ದಾರೆ. ಒಂದೆರಡು ತುಂಬಾ ಉದ್ದವೂ ಇದ್ದು, ದಾಟಲು ಒಂದು ನಿಮಿಷವೇ ಬೇಕಾಯ್ತೋ ಏನೊ. ಹೀಗೆ ಬರುತ್ತಿರುವಾಗ ಟೋಲ್ ಬಳಿ ನಮ್ಮ ಗಾಡಿ ನಿಂತಿತು. ರಸ್ತೆಯಲ್ಲಿ ಒಬ್ಬಾತ ಏನೋ ಬಿಳಿಯ ವಸ್ತು ತಟ್ಟೆಯಲ್ಲಿಟ್ಟು ಮಾರುತ್ತಿದ್ದುದು ಕಂಡೆ. ನೋಡಿದರೆ ದೊಡ್ಡ ದೊಡ್ಡ ಕೊಬ್ಬರಿ ತುಂಡುಗಳು. ನಮ್ಮಲ್ಲಿ ಬಚ್ಚಂಗಾಯಿ( ಕಲ್ಲಂಗಡಿ) ತುಂಡುಗಳನ್ನು ಇಟ್ಟು ಮಾರುವಂತೆ ಮಾರುತ್ತಿದ್ದ. ನಮಗೆ ಮಾಮೂಲಿಯಾದರೂ ಅಲ್ಲಿಗೆ ಕೊಬ್ಬರಿ ಅಪರೂಪದ್ದೇ ತಾನೇ?

ಜಮ್ಮು ಪೇಟೆಯ ಹೃದಯ ಭಾಗದಲ್ಲಿರುವ ರಘುನಾಥ ಮಂದಿರ ಸಮುಚ್ಚಯ, ಎರಡೆರಡು ಬಾರಿ ಉಗ್ರ ದಾಳಿಗೆ ಸಿಲುಕಿದ್ದರಿಂದ, ಬಿಗಿ ಬಂದೋಬಸ್ತು ಇತ್ತು. ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ಯುವಂತಿರಲಿಲ್ಲ. ವಿಶಾಲ ಪ್ರಾಂಗಣದಲ್ಲಿ ಹರಡಿದ್ದ ದೇವಸ್ಥಾನಗಳು, ಸಹಸ್ರ ಸಹಸ್ರ ಸಾಲಿಗ್ರಾಮಗಳು ಇರುವ ಗುಡಿಗಳು, ಏಳೂವರೆ ಅಡಿ ಎತ್ತರದ ಸ್ಪಟಿಕ ಲಿಂಗ ಹೀಗೆಲ್ಲಾ ವಿಶೇಷತೆಗಳಿದ್ದವು. ದೇವಸ್ಥಾನದ ಒಳಹೊಕ್ಕು, ಸಾಲಿನಲ್ಲಿ ನಿಂತು ದರ್ಶನ ಮಾಡಿ ವಾಪಾಸು ಬರುವುದಷ್ಟೇ ಉದ್ದೇಶವಿಟ್ಟುಕೊಂಡಿದ್ದ ನಮ್ಮನ್ನು `ಇಮೋಶನಲ್ ಬ್ಲಾಕ್ ಮೇಲ್’ ಮಾಡಿ ಸುಲಿಗೆ ಮಾಡುವ ಅರ್ಚಕ ಗಡಣಗಳಿಂದ ರಕ್ಷಿಸಿಕೊಳ್ಳಲು ರಘುನಾಥನಿಗೇ ಮೊರೆಯಿಡಬೇಕಾಯಿತು! ಒಂದು ಕಡೆ, ಶಿವಲಿಂಗಕ್ಕೆ ಅಭಿಷೇಕ ಮಾಡಲು ಸೋಮಾರಿ ಅರ್ಚಕ ಪ್ಲಾಸ್ಟಿಕ್ ತೊಟ್ಟೆ ಹಾಲಿಗೆ ತೂತು ಮಾಡಿ ಕುಳಿತಲ್ಲೇ ಕಾರಂಜಿಯಂತೆ ಹಾರಿಸುತ್ತಿದ್ದ! ಈ ಮಾಡ್ರನ್ ಪೂಜಾ ವಿಧಿ-ವಿಧಾನಗಳು ಪ್ರಕೃತಿ ಆರಾಧಕರಾದ ನಮಗೆ ಕಿರಿಕಿರಿ ಉಂಟು ಮಾಡಿದವು.

ಜಮ್ಮು ಪೇಟೆಯಂತೂ ಶಾಪಿಂಗ್ ವೀರರಿಗೆ ಆಡುಂಬೊಲ. ಪ್ರಕ್ಷುಬ್ಧ ಕಣಿವೆಗಿಂತ, ವ್ಯಾಪಾರ, ವಹಿವಾಟಿಗೆ ಅಭಿವೃದ್ಧಿ ಹೊಂದಿದ ಜಮ್ಮುವೇ ಸೂಕ್ತವಾದ್ದರಿಂದ, ಧಾರಾಳವಾಗಿ ಅಂಗಡಿ, ಮಳಿಗೆಗಳಿದ್ದವು. ಪೈಪೋಟಿ ದರದಲ್ಲಿ ಮಾರಾಟವೂ ಇತ್ತು.

ಆದರೆ ನಾವು ಅಂದೇ ಹೊರಟು, ೨೬೦ ಕಿ.ಮಿಗಳ ಅಮೃತಸರವನ್ನು ತಲಪಬೇಕಿತ್ತು. ಹೀಗಾಗಿ ಆಚೀಚೆ ನೋಡದೆ, ವ್ಯಾನನ್ನೇರಿದೆವು. ನಮ್ಮ ವ್ಯಾನಿನ ಚಾಲಕ ಸಣ್ಣ ಪ್ರಾಯದ ಸಿಕ್ಖ್ ಹುಡುಗ. ಜಮ್ಮುವಿನಿಂದ ಪಠಾಣ್ ಕೋಟ್, ಗುರುದಾಸ್ ಪುರ್ ಗಳನ್ನು ದಾಟಿ ಅಮೃತಸರಕ್ಕೆ ಬರುವ ಹೆದ್ದಾರಿ ಕೂಡಾ ತುಂಬಾ ಅಗಲವೂ, ನೇರವೂ ಇತ್ತು. ಪೇಟೆ ದಾಟಿ ಹೆದ್ದಾರಿಗೆ ಬಂದದ್ದೇ ಹುಡುಗ ಆಕ್ಸಲರೇಟರ್ ನಿಂದ ಕಾಲು ತೆಗೆಯಲೇ ಇಲ್ಲ. ಸ್ಪೀಡೋಮೀಟರ್ ನ ಮುಳ್ಳು ಮೇಲ ಮೇಲಕ್ಕೆ ಹೋದಂತೆಲ್ಲಾ ನಮ್ಮ ಹೃದಯವೂ ಮೇಲ ಮೇಲಕ್ಕೆ ಬಂದಂತೆನಿಸುತ್ತಿತ್ತು. ಸುಮ್ಮನಿರಲಾಗದೇ, ” ಭಯ್ಯಾ, ಸ್ವಲ್ಪ ನಿಧಾನಕ್ಕೆ ಹೋದರಾಗದೇ?” ಎಂದು ಕೇಳುತ್ತಿದ್ದೆವು. ಆಗ ಅವ ಒಮ್ಮೆ ಕಾಲು ತೆಗೆದಂತೆ ಮಾಡಿ, ಮತ್ತೆ ಇನ್ನೂ ಹೆಚ್ಚು ಒತ್ತುತ್ತಿದ್ದ. ಹೀಗೆ ಕೆಲವು ಸಲ ಪುನರಾವರ್ತನೆ ಆಯಿತು. ತಡೆಯಲಾಗದೇ, “ನಿನ್ನ ವ್ಯಾನಿನ ಮಾಲಕನ ನಂಬ್ರ ಕೊಡು” ಎಂದೆವು. “ನಂಬರ್ ನಿಮ್ಮ ಬಳಿಯೇ ಇದೆಯಲ್ಲಾ, ಇದರ ಮಾಲಕ ನಾನೇ. ಡ್ರೈವರ್ ರಜೆಯಲ್ಲಿ ಹೋಗಿದ್ದರಿಂದ ನಾನೇ ಬರಬೇಕಾಯಿತು. ನಾಳೆಯಿಂದ ಆತ ಬರುತ್ತಾನೆ” ಎಂದ. “ಹಾಗಾದ್ರೆ ನಮಗೆ ಹೆದರಿಕೆ ಆಗುತ್ತಿದೆಯಲ್ಲಾ, ಏನು ಮಾಡುವುದು?” ಎಂದೆವು. “ಏನೂ ಯೋಚಿಸಬೇಡಿ, ಈ ರಸ್ತೆ ನನಗೆ ಚಿರಪರಿಚಿತ. ಕಣ್ಣುಮುಚ್ಚಿ ಬೇಕಾದ್ರೂ ಓಡಿಸಬಲ್ಲೆ” ಎಂದ. ” ಅಯ್ಯೋ ಮಾರಾಯ, ಸದ್ಯ ಹಾಗೆಲ್ಲಾ ಏನೂ ಮಾಡಬೇಡ, ನಾವೇ ಏನಾದ್ರೂ ವ್ಯವಸ್ಥೆ ಮಾಡಿಕೊಳ್ತೇವೆ” ಎಂದೆವು. ನಮ್ಮ ಗಮನವನ್ನು ಬೇರೆಡೆಗೆ ಹರಿಸಲು ಎಲ್ಲರೂ ಸೇರಿ ಅಂತ್ಯಾಕ್ಷರಿ ಆ(ಹಾ)ಡುವುದೆಂದು ನಿರ್ಧರಿಸಿದೆವು. ಎಲ್ಲರೂ ಅಂದರೆ ನಾವು ಹೆಂಗಸರು ಎಂದು ಬೇರೆ ಹೇಳಬೇಕಿಲ್ಲವಷ್ಟೇ? ಮೊದಮೊದಲು ಕಾನೂನು ಪ್ರಕಾರ ಸಾಗುತ್ತಿದ್ದ ಅಂತ್ಯಾಕ್ಷರಿ, ಮುಂದುವರಿದಂತೆ, ಒಂದಿಬ್ಬರಿಗೆ ಮಾತ್ರ ಸೇರಿದ ಸೊತ್ತು ಎಂಬಂತಾಯಿತು. ಸುಶ್ರಾವ್ಯ ಕಂಠದ ನನ್ನ ಗೆಳತಿ ತನ್ನ ಭಂಡಾರದಲ್ಲಿದ್ದ ಹಾಡುಗಳನ್ನೆಲ್ಲಾ ಹೇಳಿಯಾಯಿತು. ಅಲ್ಲಿ ಇಲ್ಲಿ ದನಿಗೂಡಿಸುತ್ತಿದ್ದವರ ಸ್ವರವೂ ನಿಧಾನಕ್ಕೆ ಉಡುಗುತ್ತಾ ಬಂತು. ಚಪ್ಪಾಳೆ ತಟ್ಟಿ ತಾಳ ಹಾಕುತ್ತಾ ನಾವೂ ಇದ್ದೇವೆ ಎಂಬಂತಿದ್ದ ಗಂಡಸರೆಲ್ಲಾ ತಾಳಬಿಟ್ಟು, ಗೊರಕೆಯ ಶ್ರುತಿ ಹಿಡಿದಿದ್ದರು. ಇನ್ನೆಂತ ಅಂತ್ಯಾಕ್ಷರಿ ಎಂದು ಅವಳೂ ಹಾಡು ನಿಲ್ಲಿಸಿದಳು. ಅಷ್ಟರಲ್ಲಿ `ಓನರ್ ಕಮ್ ಡ್ರೈವರ್’ ಹುಡುಗ, “ನೀವು ಹಾಡಿದುದು ಕನ್ನಡ ಗೀತೆಗಳೇ? ಎಷ್ಟು ಸುಂದರವಾಗಿದೆ ನಿಮ್ಮ ಸ್ವರ, ನಿಮ್ಮ ಭಾಷೆ!” ಎಂದ. ಅವನ ಪ್ರತಿಕ್ರಿಯೆಗೆ ಚುರುಕುಗೊಂಡ ನಾವು, “ನಿಮಗೆ ಅರ್ಥವಾಯಿತೇ?” ಎಂದು ಕೇಳಿದೆವು. ” ಇಲ್ಲ, ಆದರೆ ಕೇಳಲು ತುಂಬಾ ಖುಷಿಯಾಯಿತು, ಅದಕ್ಕೇ ನನ್ನ ಟೇಪ್ ರೆಕಾರ್ಡರ್ ಆಫ್ ಮಾಡಿ ನಿಮ್ಮ ಹಾಡುಗಳನ್ನೇ ಕೇಳುತ್ತಿದ್ದೆ” ಎಂದ. ” ಎಲಾ! ಈ ಒರಟು ಹುಡುಗನಲ್ಲೂ ಇಷ್ಟೊಂದು ನಾದಪ್ರಜ್ನೆಯೇ?!” ಎಂದು ಮಾತಾಡಿಕೊಂಡು, ಖುಷಿಪಟ್ಟೆವು. ಈಗ, `ಪರವಾಗಿಲ್ಲ ಹುಡುಗ, ವೇಗ ಸ್ವಲ್ಪ ಹೆಚ್ಚೇ ಆದರೂ ನಾಜೂಕಾಗಿ ಓಡಿಸುತ್ತಿದ್ದಾನೆ’ ಎಂದು ಅನಿಸತೊಡಗಿತು.

ಸುಮಾರು ಎರಡು ಗಂಟೆಗಳ ಪ್ರಯಾಣದಲ್ಲಿ ನಾವು ಪಂಜಾಬ ರಾಜ್ಯದ ಗಡಿಭಾಗಕ್ಕೆ ಬಂದಿದ್ದೆವು. ಇದನ್ನು ಅರಿಯಲು ಎನೂ ಕಷ್ಟವಾಗಲಿಲ್ಲ. ಇಷ್ಟು ದಿನ ತೆಪ್ಪಗಿದ್ದ ನಮ್ಮ ಪ್ರೀಪೇಯ್ಡ್ ಫೋನುಗಳು ಈಗ ಅರಚಲು ಶುರುಮಾಡಿದ್ದವು. ತರತರದ ಟೋನುಗಳು, ಮೆಸೇಜ್ ಗಳು, ಮಿಸ್ಡ್ ಕಾಲ್ ಅಲರ್ಟ್ ಗಳು, ವಾಟ್ಸ್ ಆಪ್, ಫೇಸ್ ಬುಕ್ ಸಂದೇಶಗಳು ಬರಲಾರಂಭಿಸಿದವು. ಇಷ್ಟಾದ ಮೇಲೆ ಕೇಳಬೇಕೆ? ಎಲ್ಲರೂ ಅವರವರ ಮೊಬೈಲ್ ಲೋಕದಲ್ಲಿ ಮುಳುಗಿ, ಹೊರಗಿದ್ದನ್ನು ಮರೆತೆವು.

ರಾತ್ರಿಯ ೮ ಗಂಟೆಗೆ ವ್ಯಾನ್ ನಿಂತಾಗ, ” ಯಾಕೆ?” ಎಂದು ಡ್ರೈವರ್ ಹುಡುಗನನ್ನು ನೋಡಿದೆವು. ನಾವು ಸಂಜೆ ೫ ಗಂಟೆಗೆ ಸಲ್ಲಿಸಿದ್ದ ಚಹಾ ಬೇಡಿಕೆಯ ಪೂರೈಕೆಗೆ ಆತ ಈಗ ಮನಸ್ಸು ಮಾಡಿದ್ದ! ಆತನಂದಂತೆಯೇ ರಸ್ತೆ ಬದಿ ಅಂಗಡಿಯ ಚಹಾ `ಸೂಪರ್’ ಆಗಿತ್ತು. ಜತೆಗೇ ಪಕ್ಕದಂಗಡಿಯ ಎಣ್ಣೆತಿಂಡಿಗಳು ಮನೋಹರ್ ಗೆ ಇನ್ನಿಲ್ಲದ ಆಸೆ ಹುಟ್ಟಿಸಿದವು. ಆ ಕ್ಷಣವೇ `ಆಸೆಯೇ ದುಃಖಕ್ಕೆ ಮೂಲ’ ಎನ್ನುವುದನ್ನು ಮರೆತ ಅವರು, ಪಕೋಡಾಗಳ ಮೇಲೆ ಅಂಗಡಿಯಾತ ಹಸಿ ತರಕಾರಿಗಳನ್ನು ಉದುರಿಸುವಾಗ `ಬೇಡ’ ವೆನ್ನಲು ಮರೆತರು.

ರಾತ್ರಿ ೧೦.೩೦ ರ ಹೊತ್ತಿಗೆ ಅಮೃತಸರದ ಹೋಟೆಲ್ಲಿಗೆ ನಮ್ಮನ್ನು ಮುಟ್ಟಿಸಿದ ಹುಡುಗ, ನಾವು ವ್ಯಾನಿಂದ ಇಳಿಯುವಾಗ, ಮನೆಯಲ್ಲಿ ತನಗೂ ಒಬ್ಬ ಮಗನಿದ್ದು, ಆ ಪೋರ ತಂದೆಯ ಮುಖ ನೋಡದೆ ಮಲಗುವುದಿಲ್ಲವೆಂದು ಅವನ ಅಮ್ಮನ ಬಳಿ ಹಠ ಮಾಡುತ್ತಾನೆಂದ. ಪರಿಸ್ಥಿತಿ ಅರ್ಥ ಮಾಡಿಕೊಂಡ ನಾವು, “ಹಾಗಾದ್ರೆ ಬೇಗ ಹೋಗಿ, ಸಾಧ್ಯವಾದರೆ ಮಂಗಳಾರತಿ ತಪ್ಪಿಸಿಕೊಳ್ಳಿ” ಎಂದು ಬೀಳ್ಕೊಟ್ಟೆವು. ಅವ ಆಕ್ಸಲರೇಟರನ್ನು ಹಾಗೆ ಒತ್ತುತ್ತಿದ್ದುದು ಯಾಕೆ? ಎಂದು ಗೊತ್ತಾಯಿತು.

ಹೋಟೆಲ್ಲು ವಾತಾಯನ ಸಮಸ್ಯೆ, ನೀರಿನ ಅವ್ಯವಸ್ಥೆಯೇ ಮೊದಲಾದ ತೊಂದರೆ ಕೊಟ್ಟಿತು.
ಅಲ್ಲಿ ಕೇವಲ ಒಂದು ರಾತ್ರಿ ಕಳೆದು, ಬೆಳಗ್ಗೆ ಗೋಲ್ಡನ್ ಟೆಂಪಲ್ ಗೆ ಹೋಗಲು ತಯಾರಾದೆವು. ಇಷ್ಟೂ ದಿನ ನಾವು ಹೋದ ಪೂಜಾ ಕೇಂದ್ರಗಳಲೆಲ್ಲಾ ನಿರ್ಬಂಧಗಳೇ ಹೆಚ್ಚಿದ್ದದರಿಂದ, ಇಲ್ಲೂ ಯಾವ್ಯಾವ ವಸ್ತುಗಳನ್ನು ಒಯ್ಯಬಹುದು, ಯಾವ್ಯಾವುಗಳನ್ನು ಒಯ್ಯಕೂಡದು ಎಂದೆಲ್ಲಾ ವಿಚಾರಿಸಹತ್ತಿದೆವು. “ನೀವು ಏನೂ ತಲೆಬಿಸಿಮಾಡಬೇಡಿ, ಸುಮ್ಮನೆ ಹೀಗೇ ಹೋಗಿ, ತಲೆ ಮೇಲಿನ ಕ್ಯಾಪ್ ಮಾತ್ರ ತೆಗೆಯಿರಿ, ಬದಲಾಗಿ ಶಾಲಿನಿಂದ ತಲೆ ಕೂದಲು ಕಾಣದಂತೆ ಮುಚ್ಚಿಕೊಳ್ಳಿ” ಎಂದ ರಜೆ ಮುಗಿಸಿ ಬಂದ, ನಿಜ ಡ್ರೈವರ್.

ಹರಮಂದಿರ್ ಸಾಹಿಬ್ (ಸ್ವರ್ಣಮಂದಿರ) ದ ಆವರಣ ಪ್ರವೇಶಿಸಿ, ಚಪ್ಪಲಿಗಳನ್ನು ಸ್ಟ್ಯಾಂಡಿನಲ್ಲಿಟ್ಟು, ಕಾಲು ತೊಳೆಯುವ ಜಾಗಕ್ಕೆ ಹೋದೆವು. ಅಷ್ಟರಲ್ಲೇ ತಲೆ ಮೇಲೆ ಬಟ್ಟೆಹಾಕಿಕೊಳ್ಳಬೇಕೆಂಬ ಸೂಚನಾ ಫಲಕಗಳು ಕಂಡವು. ಈ ಮಂದಿರದ ವಿಸ್ತಾರ ತುಂಬಾ ದೊಡ್ಡದು. ಹಲವಾರು ಕಟ್ಟಡಗಳಿವೆ. ಪೂರಾ ನೋಡಲು ಒಂದು ದಿನ ಸಾಕಾಗದು. ಸಿಖ್ಖರ ಧಾರ್ಮಿಕ, ರಾಜಕೀಯ ಘಟನೆಗಳಿಗೆ ಸಂಬಂಧಿಸಿದ ತುಂಬಾ ವಸ್ತು, ವಿಷಯಗಳಿವೆ. ಲೈಬ್ರೆರಿ ಇದೆ, ಮ್ಯೂಸಿಯ್ಂ ಇದೆ, ನಿತ್ಯ ೧ ಲಕ್ಷ ಜನರಿಗೆ ಆಹಾರ ತಯಾರಾಗುವ ಅಡಿಗೆ ಮನೆಯಿದೆ. ನಮ್ಮದು, ಈ ಗುರುದ್ವಾರದಲ್ಲಿ ಸಿಖ್ಖರ ಪವಿತ್ರ ಗ್ರಂಥ ಸಾಹೇಬ ಪೂಜೆಗೊಳ್ಳುವ ಜಾಗಕ್ಕಷ್ಟೆ ಭೇಟಿ ನೀಡಿ ಬರುವ ಉದ್ದೇಶವಾಗಿತ್ತು.

ಮಂದಿರದ ಒಳ ಆವರಣ ಪ್ರವೇಶಿಸುತ್ತಲೇ, `ಅಮರತ್ವದ ಮಕರಂದ’ ಎಂಬ ಅರ್ಥದ ಅಮೃತ ಸರೋವರ ಕಾಣಸಿಗುತ್ತದೆ. ಈ ಊರಿಗೆ ಅಮೃತಸರವೆಂಬ ಹೆಸರು ಬಂದದ್ದು ಹೀಗೆ. ಅರಂಭದಲ್ಲಿ ಪವಿತ್ರ ಕೆರೆ ಎಂದು ಗುರುತಿಸಲ್ಪಟ್ಟಿದ್ದ ಇದು ಈಗ ರಾವಿ ನದಿ ನೀರಿನಿಂದ ಒಂದು ದೊಡ್ಡ ಸರೋವರವಾಗಿದೆ. ತಿಳಿಹಸಿರು ನೀರಿನಲ್ಲಿ ಬಣ್ಣಬಣ್ಣದ ಮೀನುಗಳಿದ್ದು ತಂಪುತಂಪು ಭಾವನೆ ಬರುತ್ತದೆ. ಈ ನೀರಿನಲ್ಲಿ ಮಂದಿರದ ಪ್ರತಿಫಲನ ಉಂಟಾಗಿ ಇಡೀ ವಾತಾವರಣಕ್ಕೆ ಒಂದು ವಿಶೇಷ ಮೆರುಗು. ಈಗ ಈ ಮಂದಿರದ ಕಟ್ಟಡ, ನೆಲವೆಲ್ಲಾ ಮಾರ್ಬಲ್ ನಿಂದ ಮಾಡಲ್ಪಟ್ಟಿದೆ. ಮುಖ್ಯ ದೇಗುಲದ ಮೇಲ್ಭಾಗ ಚಿನ್ನದ ಹೊದಿಕೆಯನ್ನು ಹೊಂದಿ ಸ್ವರ್ಣಮಂದಿರವಾಗಿದೆ.

ಗ್ರಂಥಸಾಹೇಬ ಪೂಜಿಸಲ್ಪಡುವ ಜಾಗ ತಲಪಲು ಸರತಿ ಸಾಲಿನಲ್ಲಿ ಸುಮಾರು ಒಂದೂವರೆ ಗಂಟೆ ನಿಲ್ಲಬೇಕಾಯಿತು. ಹೀಗೆ ನಾವು ನಿಂತಿದ್ದಾಗ, ಅಲ್ಲಲ್ಲಿ ಟಿ.ವಿ ಪರದೆಗಳನ್ನು ಹಾಕಿದ್ದು, ಅದರಲ್ಲಿ ಸಂತರ, ಭಾತೃತ್ವ, ವಿಶ್ವಪ್ರೇಮ ಇತ್ಯಾದಿಗಳಿಗೆ ಸಂಬಂಧಿಸಿದ ಸಂದೇಶಗಳು ಬರುತ್ತಿದ್ದವು. ಅಷ್ಟೇ ಅಲ್ಲ, ಒಂದು ಕಡೆ ಸಿಖ್ಖರ ಭಜನೆಯಾದ ಗುರ್ಬಾನಿಯನ್ನು ಕಲಾವಿದರು ಹಾಡುತ್ತಿದ್ದು, ಅದರ ಅರ್ಥವನ್ನೂ ಈ ಪರದೆಗಳಲ್ಲಿ ತೋರಿಸುತ್ತಿದ್ದರು. ಗ್ರಂಥಸಾಹೇಬವಿದ್ದ ಪವಿತ್ರ ಜಾಗದಲ್ಲಿ ಫೋಟೋ ತೆಗೆಯುವುದು ನಿಷಿದ್ಧ. ಗ್ರಂಥವನ್ನು ಅಲಂಕಾರದಿಂದಲೂ, ಪೂಜಾಸಾಮಾಗ್ರಿಗಳಿಂದಲೂ ಮುಚ್ಚಿದ್ದರು. ಭಕ್ತ ವೃಂದದವರು ಪವಿತ್ರ ಗ್ರಂಥವನ್ನಿಟ್ಟ ಆವರಣದೊಳಗೆ ಯಥಾನುಶಕ್ತಿ ಕಾಣಿಕೆ ಎಂದು ದೊಡ್ಡದೊಡ್ಡ ನೋಟುಗಳನ್ನೇ ಹಾಕುತ್ತಿದ್ದರು. ಶ್ರೀಮಂತ ರಾಜ್ಯ ಪಂಜಾಬ್ ಎಂದು ಯಾರಿಗಾದರೂ ಅನಿಸುತ್ತಿತ್ತು.

ಅಲ್ಲಿಂದ ಹೊರಬಂದು, ಗೋಧಿ, ತುಪ್ಪಗಳಿಂದ ತಯಾರಾದ ಪ್ರಸಾದವನ್ನು ಸ್ವೀಕರಿಸಿ, ಸ್ವಲ್ಪ ಹೊತ್ತು ಗುರ್ಬಾನಿಯನ್ನು ಕೇಳುತ್ತಾ ಕೂತು ಆನಂದಿಸಿದೆವು, ಒಂದು ಗರುಡಗಂಬದಂತಹ ಎತ್ತರದ ಕಂಬಕ್ಕೆ ಏನೋ ಬಟ್ಟೆ ಸುತ್ತುವ ಕೆಲಸವನ್ನೂ, ಸ್ವಯಂ ಸೇವಕರು ಅಲ್ಲಲ್ಲಿ ನಿಂತು ಭಕ್ತರನ್ನು ನಿರ್ದೇಶಿಸುವುದೇ ಮುಂತಾದ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುವುದನ್ನೂ ನೋಡಿದೆವು.

ಸ್ವರ್ಣಮಂದಿರದಿಂದ ಅಂಗಡಿಗಳ ಸಾಲಿನ ಉದ್ದಕ್ಕೂ ಹತ್ತು ಹೆಜ್ಜೆ ಹಾಕಿದರೆ ಸಿಗುತ್ತದೆ, ಸ್ವಾತಂತ್ಯ್ರ ಸೇನಾನಿಗಳ ಬಲಿದಾನದ ಮಂದಿರ ಜಲಿಯನ್ ವಾಲಾಬಾಗ್.

ಅಂದು ಬ್ರಿಟಿಷರ ಗುಂಡುಗಳಿಗೆ ಒಂದೂವರೆ ಸಾವಿರಕ್ಕೂ ಮಿಕ್ಕಿ ಜನ ಹತರಾಗಿ, ರಕ್ತದ ಕೋಡಿ ಹರಿದು ಕೆಂಪು ಕೆಂಪಾಗಿದ್ದ ಜಾಗ ಇಂದು ಸುಂದರ ಹೂತೋಟದ ಹಸಿರಿನಿಂದ ನಳನಳಿಸುತ್ತಿದೆ. ಅಂದು ಬ್ರಿಟಿಷರ ಕಾಲಿನ ಒದೆತ ತಿಂದು ಹೋರಾಡಿದ ಪಂಜಾಬಿಗರು ಇಂದು ಬ್ರಿಟನ್ನಿನ ಪ್ರಧಾನಿ ಕಾಲೂರಿ ಕ್ಷಮೆ ಕೇಳುವಂತೆ ಮಾಡಿದ್ದಾರೆ ಎಂದೆಲ್ಲಾ ಡೇವಿಡ್ ಕ್ಯಾಮೆರೂನ್ ರು ಇಲ್ಲಿಗೆ ಭೇಟಿ ನೀಡಿ ನಡೆದುಕೊಂಡ ರೀತಿ, ಹಿನ್ನಲೆ, ಕಾರಣಗಳು, ಪಂಜಾಬಿಗರು ಈಗ ಬ್ರಿಟನ್ನಿನಲ್ಲಿ ರಾಜಕೀಯ, ಆರ್ಥಿಕವಾಗಿ ಪ್ರಬಲರಾಗಿರುವುದೇ ಮುಂತಾದವುಗಳನ್ನು ಚರ್ಚಿಸುತ್ತಾ ಸಾಗಿದೆವು. ಸ್ವಾತಂತ್ರ್ಯ ಯೋಧರಿಗಾಗಿ ನಿರ್ಮಿಸಲಾದ ಸ್ಮಾರಕ, ಮ್ಯೂಸಿಯಂ, ಗುಂಡು ಬಿದ್ದ ಜಾಗಗಳು, ಗುಂಡಿನಿಂದ ತಪ್ಪಿಸಿಕೊಳ್ಳಲು ಓಡುವಾಗ ಎಷ್ಟೋ ಜನರು ಬಿದ್ದ ಬಾವಿ, ಕಿರಿದಾದ ಗೇಟಿನಿಂದಾಗಿ ಹೆಚ್ಚಾದ ಸಾವಿನ ಸಂಖ್ಯೆ… ಹೀಗೆ ಕೇಳಿದ್ದನ್ನು, ಓದಿದ್ದನ್ನು, ತಿಳಿದದ್ದನ್ನೂ ಹಂಚಿಕೊಂಡೆವು.

ನಮಗೆ, ಇಲ್ಲಿ ಬ್ರಿಟಿಷರ ದಮನ ನೀತಿಯ ವಿರುದ್ಧ ಹುಟ್ಟಿದ ಕೆಚ್ಚು, ಮುಂದಿನ ವಾಘಾ ಬಾರ್ಡರ್ ನ ಸೇನೆಯ ಕವಾಯತು ನೋಡಲು ಹೊಸ ಹುಮ್ಮಸ್ಸನ್ನು ಕೊಟ್ಟಿತು. ಬೇಗಬೇಗನೆ ಊಟ ಮುಗಿಸಿ, ೩೦ ಕಿ.ಮೀ ದೂರದ ವಾಘಾ ಬಾರ್ಡರ್ ಗೆ ಬೇಗನೆ ಹೋಗಿ ಸರಿಯಾದ ಜಾಗ ನೋಡಿ ಕೂರುವ ಪ್ಲಾನ್ ಹಾಕಿದೆವು.

ಇಲ್ಲೆಲ್ಲಾ ರಸ್ತೆಗಳು ಉತ್ತಮವಾಗಿವೆ. ಹೆಚ್ಚಿನ ಕಡೆ ಚತುಷ್ಪಥವಾಗಿದ್ದು, ನೇರವಾಗಿದೆ. ಬಿಸಿಲಿನ ಝಳ ಮಾತ್ರ ಜೋರೇ ಇತ್ತು. ರಸ್ತೆಯ ಎರಡೂ ಕಡೆ ತೆನೆತುಂಬಿದ್ದ ಗೋಧಿಗದ್ದೆಗಳು ಚಿನ್ನದಂತೆ ಹೊಳೆಯುತ್ತಿದ್ದವು.

ಈ ಚೆಲುವನ್ನೆಲ್ಲಾ ಕಣ್ತುಂಬಾ ಆನಂದಿಸುತ್ತಾ ಸಾಗಿದೆವು. ಮನೋಹರ್ ಗೆ ಹಿಂದಿನ ದಿನದ ಸಲಾಡ್ ಮಿಶ್ರಿತ ಪಕೋಡಾ ತನ್ನ ಪ್ರತಾಪ ತೋರಿಸಲು ಶುರುಮಾಡಿತ್ತು. ಸುಸ್ತಾಗಿದ್ದ ಅವರು ವ್ಯಾನಿನಲ್ಲೇ ನಿದ್ದೆ ಹೋದರು.

ದೇಶ ವಿಭಜನೆಯ ಸಂದರ್ಭದಲ್ಲಿ ಅಕ್ಷರಶಃ ವಿಭಜನೆಯಾದ್ದು ಪಂಜಾಬ್ ಪ್ರಾಂತ್ಯ, ಹಾಗಾಗಿ ಈಗ ಅದು, ಭಾರತದ ಪಂಜಾಬ್ ಹಾಗೂ ಪಾಕಿಸ್ತಾನದ ಪಂಜಾಬ್ ಎಂದಾಗಿದೆ. ಭಾರತದ ಪಂಜಾಬಕ್ಕೆ ಅಟ್ಟಾರಿ ಎಂಬುದು ಕೊನೆಯ ಹಳ್ಳಿಯಾದರೆ ಪಾಕಿಸ್ತಾನಕ್ಕೆ ವಾಘಾ. ಹಾಗಾಗಿ ಈ ಗಡಿಯನ್ನು ವಾಘಾ ಬಾರ್ಡರ್ ಎಂದೂ, ಅಟ್ಟಾರಿ ಬಾರ್ಡರ್ ಎಂದೂ ಕರೆಯುತ್ತಾರೆ. ಕೆಲಸಮಯದ ಹಿಂದೆ ಪಾಕಿಸ್ತಾನದ ವಾಘಾ ಜಾಗದಲ್ಲಿ ಬಾಂಬ್ ಸ್ಪೋಟಿಸಿದ್ದು ನೆನಪಾಗುತ್ತಿತ್ತು.

ಅಟ್ಟಾರಿ ಹಳ್ಳಿ ತಲಪುತ್ತಲೇ ನಮ್ಮ ವ್ಯಾನನ್ನು ಯಾರೋ ನಿಲ್ಲಿಸಲು ಹೇಳಿದರು. ಅವರು ಮಾಮೂಲಿ ಉಡುಪಿನಲ್ಲಿದ್ದರು. ನಮ್ಮ ಚಾಲಕನಿಗೆ ತಿಳಿದಿದ್ದರಿಂದಲೋ ಏನೋ ಆತ ನಿಲ್ಲಿಸಿದ. ಆಜಾನುಬಾಹು ವ್ಯಕ್ತಿ ವ್ಯಾನಿನ ಬಾಗಿಲು ತೆಗೆದು ಒಳಬಂದರು. ಚಾಲಕನಲ್ಲಿ `ಸುಮ್ಮನಿರು’ ಎಂಬಂತೆ ಸನ್ನೆ ಮಾಡಿದರು. ಶುದ್ಧ ಹಿಂದಿಯಲ್ಲಿ “ನೀವೆಲ್ಲಾ ಎಲ್ಲಿಂದ ಬರುತ್ತಿದ್ದೀರಿ?” ಎಂದು ಕೇಳಿದರು. ನಾವು ಮಣ್ಣಿನ ಮಕ್ಕಳಲ್ಲವೇ? ಮಂಗಳೂರು, ಉಡುಪಿ, ಕುಂದಾಪ್ರ ಎಂದೆಲ್ಲಾ ಹೇಳತೊಡಗಿದೆವು. ಆತ ತಡೆದು, ” ಸದ್ಯ, ಇಲ್ಲಿಗೆ ಬರುವ ಮುಂಚೆ ಎಲ್ಲಿಗೆಲ್ಲಾ ಹೋಗಿ ಬಂದಿರಿ?’ ಎಂದರು. ನಮಗೆ ಆತನ್ಯಾರೆಂದೂ ಗೊತ್ತಿರಲಿಲ್ಲ. ಏನೋ ತಮಾಶೆ ಎನಿಸಿತು. ನಮ್ಮ ಪ್ರವಾಸದ ವಿವರಗಳನ್ನೆಲ್ಲಾ ಏನೇನೋ ಹೇಳಿದೆವು. ಅಂತೂ ಕಾಶ್ಮೀರ ಎಂಬ ಶಬ್ದ ಕೇಳಿದ ಕೂಡಲೇ ಆವರು, ” ಅಲ್ಲಿ ಏನೇನು ನೋಡಿದ್ರಿ?”ಎಂದು ಕೇಳಿದರು, ಹೇಳಿದೆವು. ಆತ ಇದ್ದಕಿದ್ದಂತೆ “ಯಾರಾದರೂ ಉಗ್ರನನ್ನು ಕಂಡಿರಾ?” ಎಂದು ಕೇಳಿದರು. ನನ್ನ ಸ್ನೇಹಿತೆಗೆ ಮತ್ತೂ ಮೋಜೆನಿಸಿ, “ಈಗ ನಿಮ್ಮನ್ನೇ ಭೇಟಿಯಾಗುತ್ತಿದ್ದೇವೆ; ಇಲ್ಲಿವರೆಗೆ ಇಲ್ಲ” ಎಂದಳು. ತಕ್ಷಣ ಅವರು ಗಂಭೀರವದನರಾಗಿ, “ನೀವು ಹೇಳುವುದು ಒಂದರ್ಥದಲ್ಲಿ ಸರಿ, ಅವರೂ ಕೊಲ್ಲುತ್ತಾರೆ, ನಾವೂ ಕೊಲ್ಲುತ್ತೇವೆ. ಆದರೆ ನಮ್ಮಿಬ್ಬರ ಉದ್ದೇಶ ಮಾತ್ರ ಬೇರೆಬೇರೆ” ಎಂದರು. ಇಷ್ಟು ಹೇಳುವಾಗ ನಮಗೆ ಆವರು ನಮ್ಮ ದೇಶದ ಕಾವಲು ಪಡೆಯವರೆಂದು ಅರ್ಥವಾಯಿತು. “ಕ್ಷಮಿಸಿ, ನೀವು ಯಾರೆಂದು ತಿಳಿಯದೇ ಕುಶಾಲು ಮಾತಾಡಿದೆವು” ಎಂದೆವು. ಆತ “ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಮುಂದೆಯೂ ಹಲವಾರು ಭದ್ರತಾ ನಿಯಮಗಳೂ, ತಪಾಸಣೆಗಳೂ ಇವೆ, ಸಹಕರಿಸಿ” ಎಂದು ಬೀಳ್ಕೊಟ್ಟರು. ಇಡೀ ಘಟನೆಯನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುವಾಗ, ಆವರು ಎಷ್ಟು ಚುರುಕು ಮತ್ತು ಕುಶಾಗ್ರಮತಿಯಾಗಿದ್ದರು ಎಂದು ಅರ್ಥವಾಗುತ್ತದೆ. ಪಟಪಟನೆ ಸಂಭಾಷಣೆ ಮುಂದುವರಿಸುತ್ತಾ ನಮ್ಮೆಲ್ಲರ ಹಾವಭಾವ, ಚಲನವಲನ, ವಸ್ತುಗಳು, ಸೀಟುಗಳು ಎಲ್ಲವನ್ನೂ ಪರಿಶೀಲಿಸಿದ್ದರು. ಒಬ್ಬರು ಉತ್ತರಕೊಟ್ಟರೆ, ಪೂರಕ ಪ್ರಶ್ನೆಯನ್ನು ಇನ್ನೊಬ್ಬರಿಗೆ ಕೇಳುತ್ತಿದ್ದರು! ಪಾಕಿಸ್ತಾನ ಇಷ್ಟು ಹತ್ತಿರವೆಂದ ಮೇಲೆ ತಪಾಸಣೆಗಳು ಜೋರೇ ಇರಬೇಕಲ್ಲವೇ? ನಮ್ಮ ಸುರಕ್ಷತೆಗೆ ಎಷ್ಟೊಂದು ಯುಕ್ತಿಗಳು, ತಂತ್ರಗಳು, ಕಷ್ಟಗಳು, ತ್ಯಾಗಗಳು ಎಂದು ಮನದುಂಬಿ ಬಂತು!!

ಈ ಭಾವಾವೇಶದಲ್ಲೇ, ಧ್ವಜ ಇಳಿಸುವ ಸಲುವಾಗಿ ಗಡಿ ರಕ್ಷಣಾ ಪಡೆ ಸೈನಿಕರು ನಡೆಸುವ ಕವಾಯತು ಜಾಗಕ್ಕೆ, ಸುಡುಬಿಸಿಲಿನಲ್ಲಿ ೧ಕಿ.ಮೀ ದೂರ ನಡೆದು, ಹಲವು ತಪಾಸಣಾ ಕೇಂದ್ರಗಳನ್ನು ದಾಟಿಬಂದು ಗ್ಯಾಲರಿಯಲ್ಲಿ ಕುಳಿತುಕೊಂಡೆವು. ಸುಡುಬಿಸಿಲಿಗೆ ತಲೆಯೂ. ಅಡಿಯೂ ಕಾದ ಕಾವಲಿಯಂತಾಗುತ್ತಿತ್ತು. ಕಾರ್ಯಕ್ರಮ ಶುರುವಾಗಲು ಇನ್ನೂ ೨ ಗಂಟೆ ಕಾಯಬೇಕಿತ್ತು. ಆಗಲೇ ಜನಸಂದಣಿ ದಟ್ಟವಾಗತೊಡಗಿತು. ಇನ್ನೇನು ಕಾರ್ಯಕ್ರಮ ಶುರುವಾಗಬೇಕೆನ್ನುವಾಗ, ಸೂಜಿ ಮೊನೆಯಷ್ಟೂ ಜಾಗ ಉಳಿಯಲಿಲ್ಲ. ನಮ್ಮ ನಂತರ ಬಂದ ಶಕ್ತಿವಂತರು ಎಲ್ಲರನ್ನೂ ದೂಡಿ, ನಮಗೆ ಅಡ್ಡವಾಗಿ ನಿಂತೇಬಿಟ್ಟರು. ಭಾರತ-ಪಾಕಿಸ್ತಾನಗಳ ಯೋಧರ ತೋರಿಕೆಯ ಕಾದಾಟದ ಕವಾಯತು ನೋಡಲು ಬಂದುನಿಂತ ಜನರಲ್ಲಿ ಮಾತ್ರ, ನಿಜ ಕಾದಾಟ ಶುರುವಾಯಿತು.

ಸೂರ್ಯಾಸ್ತದ ಬಳಿಕ ಧ್ವಜ ಹಾರಾಟ ನಮ್ಮಲ್ಲಿ ನಿಷಿದ್ಧವಾದ್ದರಿಂದ, ಭಾರತ-ಪಾಕಿಸ್ತಾನಗಳ ಮಧ್ಯೆ ರಸ್ತೆ ಹಾದುಹೋಗುವ ಈ ಗಡಿಯಲ್ಲಿ, ಎರಡೂ ದೇಶಗಳ ನಡುವಿನ ಸೌಹಾರ್ದತೆಯಿಂದ ಈ ಕವಾಯತಿನ ಸೃಷ್ಟಿಯಾಯಿತಂತೆ. ಎರಡೂ ಕಡೆಯ ಸೈನಿಕರು ಅಚ್ಚುಕಟ್ಟಾದ ಹೊಂದಾಣಿಕೆಯಿಂದ ಅವರವರ ಧ್ವಜವನ್ನು ಸಮನಾದ ವೇಗದಲ್ಲಿ ಇಳಿಸುತ್ತಾರೆ. ಪರಸ್ಪರ ವೈರಿ ರಾಷ್ಟಗಳೆಂದು ಪರಿಗಣಿಸಲ್ಪಟ್ಟರೂ, ನಾಟಕೀಯವಾದ ಕಾದಾಟದ ಹೆಜ್ಜೆಗಾರಿಕೆಯಿದ್ದರೂ ಇದನ್ನು ನೋಡಲೆಂದೇ ವಿಶ್ವದೆಲ್ಲೆಡೆಗಳಿಂದ ಪ್ರವಾಸಿಗರು ಬರುತ್ತಾರೆ. ಈ ಇಡೀ ಕವಾಯತು ಯೂ ಟ್ಯೂಬ್ ಗಳಲ್ಲಿ ಧಾರಾಳವಾಗಿ ಲಭ್ಯ. ಮಾತ್ರವಲ್ಲ, ಅದರಲ್ಲಿ ನೋಡುವುದೇ ಅನುಕೂಲ ಕೂಡ. ಜನರ ಕಾಲ್ತುಳಿತಕ್ಕೆ, ಕೈ ತುಳಿತಕ್ಕೆ ಸಿಕ್ಕಿ ನಲುಗುತ್ತಿದ್ದ ನಾನೂ, ನನ್ನ ಸ್ನೇಹಿತೆಯೂ ಪರಸ್ಪರ ಗಟ್ಟಿಯಾಗಿ ಹಿಡಕೊಂಡು ಹೇಗೋ ಸಂಭಾಳಿಸಿಕೊಂಡೆವು.

ಕವಾಯತು ಆರಂಭವಾಗುವ ಮೊದಲು ಇಡೀ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಿದ್ದ ಯೋಧ ಸಭಿಕರಲ್ಲೇ ಕೆಲವು ಹುಡುಗಿಯರಿಗೆ ಭಾರತದ ಧ್ವಜ ಹಿಡಿದು ಓಡುವ ಅವಕಾಶ ಕೊಟ್ಟ. ಆ ಮಕ್ಕಳ ಹೆತ್ತವರು ತಮ್ಮ ಕ್ಯಾಮರಾಗಳಲ್ಲಿ ಆ ದೃಶ್ಯವನ್ನು ಸೆರೆಹಿಡಿದು ಸಂಭ್ರಮಿಸಿದರು. ಅಂತೂ, ಸಂಜೆ ೫.೩೦ ರ ಹೊತ್ತಿಗೆ ಗೇಟ್ ತೆಗೆದು ನಮಗೆ ಪಾಕಿಗಳನ್ನೂ, ಅವರಿಗೆ ನಮ್ಮನ್ನೂ ಕಾಣುವ ಭಾಗ್ಯ ಬಂತು. ನಮ್ಮ ಕಡೆ ಫೋಟೋದಲ್ಲಿ ಗಾಂಧಿ ಇದ್ದರೆ, ಅವರ ಕಡೆ ಜಿನ್ನಾ ಇದ್ದರು.

ಕವಾಯತಿನ ಮೊದಲ ಭಾಗದಲ್ಲಿ ನಮ್ಮ ಕಡೆಯಿಂದ ಮಹಿಳಾ ಸೈನಿಕರು ವೇಗವಾಗಿ ನಡೆದು. ಕಾಲುಗಳನ್ನು ಎತ್ತಿಎತ್ತಿ ಹಾಕುತ್ತಾ ವೀರಾವೇಶದಿಂದ ಪರಾಕ್ರಮದ ಪಥಸಂಚಲನ ಸುರು ಮಾಡಿದ್ದೇ, ಪ್ರೇಕ್ಷಕರಲ್ಲೂ ವಿಶೇಷ ಸಂಚಲನ ಮೂಡಿತು. ಇದಕ್ಕೆ ಪ್ರತಿಯಾಗಿ ಪಾಕ್ ಕಡೆಯಿಂದ ಯಾರೂ ಬರಲಿಲ್ಲ. ನನಗೆ ಭೀಷ್ಮಾಚಾರ್ಯರ ನೆನಪಾಯಿತು. ಪಾಕಿಗಳು ಈ ನಿಯಮವನ್ನು ಯುದ್ಧಭೂಮಿಯಲ್ಲೂ ಮಾಡಿದ್ದಾದರೆ, ನಾವು ಗೆದ್ದಂತೆಯೇ ಎಂದು ಅಂದುಕೊಂಡೆ. ಮುಂದೆ ಇನ್ನೂ ಕೆಲವು ಸುತ್ತುಗಳಾದವು. ಎರಡೂ ಕಡೆ ಯೋಧರು ಕಾಲು ಎತ್ತಿ ಎತ್ತಿ ಹಾಕಿ, ಹೋ ಎಂದು ಕಿರುಚಿ ತಮ್ಮ ಪರಾಕ್ರಮ ಪ್ರದರ್ಶಿಸುತ್ತಿದ್ದರು. ಆಗ, ಪ್ರೇಕ್ಷಕರ ದೇಶಭಕ್ತಿ ಪರಾಕಾಷ್ಠೆ ಮುಟ್ಟಿ, ನಮ್ಮ ಸ್ವರ ಪಾಕಿಸ್ತಾನಿಗಳಿಗೆ ಅವರ ಸ್ವರ ನಮಗೆ ಮುಟ್ಟುತ್ತಿತ್ತು. ಆಗಿಂದಾಗ್ಗೆ ಮೈಕ್ ಹಿಡಿದ ಯೋಧರು `ಹೋ……’ ಎಂದು ದೀರ್ಘವಾದ ಪಂಥಾಹ್ವಾನದ ಕೂಗು ಕೂಗುತ್ತಿದ್ದರು. ನನಗಂತೂ ನಮ್ಮೂರ ಯಕ್ಷಗಾನದ ಜೋಡಾಟದ್ದೇ ನೆನಪಾಗುತ್ತಿತ್ತು.

ಸೂರ್ಯಾಸ್ತವಾಗುವುದರೊಳಗೆ ಎರಡೂ ಕಡೆಯವರು ಅವರವರ ಗೇಟು ತೆಗೆದು, ಅದರ ಮೇಲೆ ಹಾರಾಡುತ್ತಿರುವ ಧ್ವಜ ಇಳಿಸಿ, ಅವರವರ ಪಾಳೆಯದ ಕಡೆ ಹೋಗುತ್ತಾ ಮತ್ತೆ ಗೇಟ್ ಹಾಕುವುದು – ಇಷ್ಟು ನಡೆಯಬೇಕು. ಒಟ್ಟು ಕಾರ್ಯಕ್ರಮ ಸುಮಾರು ೪೫ ನಿಮಿಷಗಳದ್ದು. ಇನ್ನೇನು ಕಾರ್ಯಕ್ರಮ ಮುಗಿಯಿತೆನ್ನುವಾಗ, ಅದನ್ನು ನಿರ್ವಹಿಸುತ್ತಿದ್ದ ಯೋಧ, “ದಯವಿಟ್ಟು, ಕಸ, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡಬೇಡಿ, ಒಯ್ದು ತೊಟ್ಟಿಗಳಲ್ಲಿ ಹಾಕಿರಿ” ಎಂದು ಪರಿಪರಿಯಾಗಿ ವಿನಂತಿಸಿಕೊಂಡ. ಈಗ ದೇಶಭಕ್ತಿ ಜರ್ರನೆ ಇಳಿದಿತ್ತೋ ಏನೊ, ಯಾರೂ ಸ್ಪಂದಿಸಲಿಲ್ಲ. ನಮಗೆ ತುಂಬಾ ಖೇದವೆನಿಸಿತು. “ಕಲ್ಲು ನಾಗರವ ಕಂಡರೆ ಹಾಲೆರೆವರಯ್ಯಾ , ನಿಜ ನಾಗರವ ….” ಎಂಬುದು ನೆನಪಾಗುತ್ತಿತ್ತು.

ಸುಸ್ತಾಗಿದ್ದ ಮನೋಹರ್ ಈ ಜೋಡಾಟ ನೋಡಲು ಬರಲಿಲ್ಲ, ವ್ಯಾನಲ್ಲೇ ಮಲಗಿ ನಮ್ಮೆಲ್ಲಾ ವ್ಯಾನಿಟಿ ಬ್ಯಾಗುಗಳನ್ನು ಕಾವಲು ಕಾದರು. ಫೋನು, ಕ್ಯಾಮೆರಾ ಬಿಟ್ಟು, ಬೇರೇನನ್ನೂ ಒಯ್ಯಕೂಡದು ಎಂದು ಹೇಳಿದ್ದರಿಂದ ಹಾಗೇ ಮಾಡಿದ್ದೆವು.

ಅಂದು ರಾತ್ರಿಯ ತಂಗುವಿಕೆ ೨೭೦ ಕಿ.ಮೀ ದೂರದ ಚಂಡೀಗಢದಲ್ಲಿ. ದಾರಿಯಲ್ಲಿ, ಜಾನಪದ ಮ್ಯೂಸಿಯಂ ನಂತೆ ವಿನ್ಯಾಸಗೊಂಡಿದ್ದ `ಹವೇಲಿ’ ಎಂಬ ಹೆಸರಿನ ರೆಸ್ಟೋರೆಂಟಿನಲ್ಲಿ ರುಚಿರುಚಿಯಾದ ಪಂಜಾಬಿ ಊಟ ಮಾಡಿ, ೧೧ ಗಂಟೆಗೆ ಚಂಡೀಗಢ ತಲಪಿದೆವು.

(ಮುಂದುವರಿಯಲಿದೆ)