(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು)
ಲೇಖನ – ವಿದ್ಯಾಮನೋಹರ
ಚಿತ್ರ – ಮನೋಹರ ಉಪಾಧ್ಯ
ನಮ್ಮ ಪ್ರವಾಸ ಮುಗಿಸಿ ವಾಪಾಸು ಬರಲು ವಿಮಾನವೇರುವುದು ಚಂಡೀಗಢದಲ್ಲಿ ಎಂದು ಅದನ್ನೂ ಬಾಲಂಗೋಚಿಯಾಗಿ ಸೇರಿಸಿಕೊಂಡಿದ್ದೆವು. ಅಲ್ಲಿನ ರಾಕ್ ಗಾರ್ಡನ್, ರೋಸ್ ಗಾರ್ಡನ್, ನಗರ ಪ್ರದಕ್ಷಿಣೆ, ಸರೋವರ ವಿಹಾರ ಮುಂತಾದವುಗಳು ಅರ್ಧ ದಿನದಲ್ಲಿ ಮುಗಿದು ಹೋಗಬಹುದಾದ್ದರಿಂದ, ಚಂಡೀಗಢಕ್ಕೆ ೯೦ ಕಿ.ಮೀ ದೂರದಲ್ಲಿರುವ ಹರ್ಯಾಣ ರಾಜ್ಯದ ಕುರುಕ್ಷೇತ್ರವನ್ನೂ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೆವು. ಚಂಡಿ ದೇವಿಯ ಕೋಟೆ ಎಂಬ ಶಬ್ದಾರ್ಥದ ಚಂಡೀಗಢದಲ್ಲಿ ಚಂಡಿ ಮಂದಿರವಿರುವುದು ನಗರದಿಂದಾಚೆ ೧೫ ಕಿ.ಮೀ ದೂರದಲ್ಲಿ. ಹಲವು ವಿದೇಶೀಯರ ಯೋಜನೆಯಲ್ಲಿ ರೂಪುಗೊಂಡ ಈ ನಗರ ನೇರ, ಅಗಲ ರಸ್ತೆಗಳು, ಉತ್ತಮವಾದ ಸಂಪರ್ಕ ವ್ಯವಸ್ಥೆಗೂ, ಸ್ವಚ್ಚತೆ, ಶುದ್ಧ ಗಾಳಿ ದೊರಕುವ ಹಸಿರಿಗೂ ಪ್ರಸಿದ್ಧ. ಇಲ್ಲಿನ ಜನ ತುಂಬಾ ಶ್ರೀಮಂತರು. ವ್ಯಾಪಾರ ವಹಿವಾಟುಗಳಿಗೆ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿದ್ದೂ, ಪಂಜಾಬಕ್ಕೂ, ಹರ್ಯಾಣಕ್ಕೂ ಇದುವೇ ರಾಜಧಾನಿ!
ವಿಶಿಷ್ಟವಾದ ರಾಕ್ ಗಾರ್ಡನ್ ಇಲ್ಲಿಯ ವಿಶೇಷ ವೀಕ್ಷಣಾ ತಾಣ. ಮೊದಲಿಗೆ ರಾಕ್ ಗಾರ್ಡನ್ ಗೇ ಭೇಟಿ ಇತ್ತೆವು. ಇತ್ತೀಚೆಗೆ ನಿಧನರಾದ ನೇಕ್ ಚಾಂದ್ ಎಂಬವರು, ಚಂಡೀಗಢ ನಗರ ನಿರ್ಮಾಣ ಕಾಲದಲ್ಲಿ ಲಭ್ಯವಾದ ಬೇಡವಾದ ವಸ್ತುಗಳಿಂದ, ಈ ಗಾರ್ಡನನ್ನು ರೂಪಿಸಿದರಂತೆ. ವಿವಿಧ ಆಕಾರದ ಕಲ್ಲುಗಳು, ಟೈಲ್ಸ್ ಗಳು, ಸ್ವಿಚ್ ಗಳು, ಪಿಂಗಾಣಿ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ ಸೃಜನಶೀಲತೆಗೆ ಒಂದು ಅದ್ಭುತ ಉದಾಹರಣೆಯಂತೆ ಮಾಡಿದ್ದಾರೆ. ಅಲ್ಲಿನ ಬೋರ್ಡ್ ಗಳು ಇದನ್ನು `ಕಸದಿಂದ ರಸ’ ಎಂಬರ್ಥದಲ್ಲಿ ಬಿಂಬಿಸಿದರೂ, ನಮಗೆ `ಎಷ್ಟು ಚೆನ್ನಾಗಿದೆ ಈ ಸ್ವಿಚ್, ಯಾಕಪ್ಪಾ ಎಸೆದರೋ?’ ಎಂದು ಅನಿಸುತ್ತಿತ್ತು. ಎಲ್ಲವನ್ನೂ ವಿಶದವಾಗಿ ನೋಡಲು ಅರ್ಧ ದಿನವೇ ಬೇಕು. ನಾವು ಒಂದೂವರೆ ಗಂಟೆಯಲ್ಲಿ ಇದನ್ನು ಪೂರೈಸಿ, ಇನ್ನುಳಿದ ಜಾಗಗಳನ್ನು `ಸಮಯವಿದ್ದರೆ ನೋಡುವಾ’ ಎಂದು ಮುಂದಕ್ಕೆ ನೂಕಿ, ಕುರುಕ್ಷೇತ್ರಕ್ಕೆ ದೌಡಾಯಿಸಿದೆವು.
ಹರ್ಯಾಣಾ ರಾಜ್ಯವೂ ಫಲವತ್ತಾದ ಗದ್ದೆಗಳಿಂದ, ಸಮೃದ್ಧ ಜಲಸಂಪತ್ತಿನಿಂದ ನಳನಳಿಸುತ್ತಿತ್ತು. ದಾರಿಯುದ್ದಕ್ಕೂ ಜನ ಕೃಷಿಕಾರ್ಯದಲ್ಲಿ ನಿರತರಾಗಿರುವ ದೃಶ್ಯಗಳೇ ಕಾಣುತ್ತಿದ್ದವು. ಅಲ್ಲೊಂದು, ಇಲ್ಲೊಂದು ಡಾಭಾಗಳು.
ಧರ್ಮಕ್ಷೇತ್ರೇ… ಕುರುಕ್ಷೇತ್ರೇ…
ಈಗಿನ ಕುರುಕ್ಷೇತ್ರ ಒಂದು ಪುಟ್ಟ ಊರು. ಇಲ್ಲಿನ ಎಂಜಿನಿಯರಿಂಗ್ ಕಾಲೇಜು ಹೆಸರುವಾಸಿ. ಊರು ಪ್ರವೇಶಿಸುವಾಗಲೇ ಸ್ವಾಗತ ಗೋಪುರ, ಮುಂದೆ ಅರ್ಜುನನ ಪ್ರತಿಮೆ ಕಾಣಸಿಗುತ್ತದೆ. ನಮ್ಮ `ಟೂರ್ ಆಪರೇಟರ್’ ಒಬ್ಬ ಗೈಡ್ ನ್ನು ಗೊತ್ತುಪಡಿಸಿದ್ದರು. ಎಂತದ್ದೋ ಶರ್ಮಾ ಎಂಬ ನಾಮಾಂಕಿತ ಅವರು ಹಲವು ಭಾಷಾ ಪ್ರವೀಣ, ನಿರರ್ಗಳವಾಗಿ ಕುರುಕ್ಷೇತ್ರದ ಮಹಿಮೆಯನ್ನು ಕೊಂಡಾಡಿದರು. ನಮಗಾದರೋ ಅದೊಂದು ಯುದ್ಧಭೂಮಿ ಎಂದಷ್ಟೇ ತಲೆಯಲ್ಲಿದ್ದುದು. ಹಾಗಲ್ಲಾ. ಕುರುಕ್ಷೇತ್ರದಲ್ಲಿ ಮಡಿದವರು ನೇರವಾಗಿ ಸ್ವರ್ಗಕ್ಕೇ ಹೋದದ್ದರಿಂದ, ಇದೊಂದು ಪುಣ್ಯಭೂಮಿ, ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟರೇ ಅದೆಷ್ಟೋ ಪುಣ್ಯ, ಇಲ್ಲಿನ ಧೂಳನ್ನು ತಲೆಮೇಲೆ ಹಾಕಿಕೊಂಡರೆ ಅದಿನ್ನೆಷ್ಟೋ ಪುಣ್ಯ ಮುಂದುವರಿಸಿ, ಇಲ್ಲಿಗೆ ಬಂದು ದಾನ ಕೊಟ್ಟಿರಾದರೆ ಕೇಳುವುದೇ ಬೇಡ, ಅಷ್ಟು ಕೋಟಿ ಕೋಟಿ ಪುಣ್ಯವೆಂದರು. ಅಂತೂ ನಮಗೆ ಅವರ ಮಾತಿನ ಮರ್ಮ ಅರ್ಥವಾಯಿತು. ಪರ್ಸ್ ಗಳನ್ನು ಬಿಗಿಯಾಗಿ ಹಿಡಿದುಕೊಂಡೆವು.
ಕುರುಕ್ಷೇತ್ರದಲ್ಲಿ ಅವರು ನಮ್ಮನ್ನು ಮೊದಲಿಗೆ ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸಿದ ಸ್ಥಳ ಎಂದು ಗುರುತಿಸಲ್ಪಡುವ `ಜ್ಯೋತಿಸಾರ್’ ಎಂಬ ಜಾಗಕ್ಕೆ ಕರಕೊಂಡು ಹೋದರು. ಒಂದು ಆಲದ ಮರವನ್ನು ತೋರಿಸಿ, ಈ ವೃಕ್ಷ ಆಗಲೂ ಇತ್ತು, ಉಪದೇಶವನ್ನು ಕೇಳಿಸಿಕೊಂಡ ಪವಿತ್ರ ಮರವೆಂದರು. “ಅಷ್ಟು ಹಳೆಯ ಮರ ಯಾಕೆ ಇಷ್ಟು ಸಣ್ಣದಿದೆ?” ಎಂಬ ನಮ್ಮ ಪ್ರಶ್ನೆಗೆ ಘಸ್ನಿ ಮೊಹಮ್ಮದ್ ನನ್ನು ದೂರಿದರು. “ಅವ ಕಡಿದು ಹಾಕಿದ್ದರಿಂದ ಅದು ಮತ್ತೆ ಬೆಳೆಯಬೇಕಷ್ಟೆ” ಎಂದರು. ಅಲ್ಲಿಂದ, ಬ್ರಹ್ಮ ಸರೋವರ ಎಂಬ ಒಂದು ಅತ್ಯಂತ ವಿಶಾಲ ಮಾನವ ನಿರ್ಮಿತ ಸರೋವರಕ್ಕೆ ಭೇಟಿ ಕೊಟ್ಟೆವು. “ಇದುವೇ ವೈಶಂಪಾಯನವಾ?” ಎಂದು ಕೇಳಿದಾಗ, ವೈಶಂಪಾಯನ ಅಲ್ಲಿಂದ ಎಷ್ಟೋ ಕಿ.ಮೀ ದೂರದ ಹಳ್ಳಿಯಲ್ಲಿದೆ ಎಂದರು. ಈ ಸರೋವರದ ತಟದಲ್ಲಿ ಒಂದು ದೇವಾಲಯವಿದೆ. ಇದರ ಹಿನ್ನಲೆಯಲ್ಲಿ ಗೀತೋಪದೇಶದ, ತುಂಬಾ ಸುಂದರವಾದ ಬೃಹತ್ ಕಂಚಿನ ವಿಗ್ರಹವಿದೆ.
ಮುಂದೆ, ನಮ್ಮನ್ನು ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿದ್ದ ಜಾಗಕ್ಕೆ ಕರಕೊಂಡು ಹೋದರು. ಅಲ್ಲಿ ಅರ್ಜುನ ಬಾಣದಿಂದ ಗಂಗೆಯನ್ನು ಹರಿಸಿದ ಜಾಗ `ಬಾಣ್ ಗಂಗಾ/ ಭೀಷ್ಮಕುಂಡ’ವೆಂಬ ಕೊಳವನ್ನು ತೋರಿಸಿದರು. ಈ ಜಾಗದಲ್ಲಿ ಈಗ ಒಬ್ಬ ವೃದ್ಧರು ಆಶ್ರಮ ಕಟ್ಟಿಕೊಂಡು ಸಮಾಜಸೇವೆಯಲ್ಲಿ ನಿರತರಾಗಿದ್ದಾರೆಂದು ಅವರನ್ನು ಪರಿಚಯಿಸಿದರು. ಆಶ್ರಮಕ್ಕೆ ಯಥಾನುಶಕ್ತಿ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದರು. ಪುಣ್ಯದ ಆಸೆ ಯಾರಿಗಿರುವುದಿಲ್ಲ?
ಇಷ್ಟು ಹೊತ್ತಿಗಾಗಲೇ ನಮಗೆ ಇಲ್ಲಿ ಎಲ್ಲವೂ ನೇರ, ಪಾರದರ್ಶಕವಾಗಿಲ್ಲವೆಂದು ಅನಿಸತೊಡಗಿತು. ಆದರೂ ಆ ಜಾಗ, ಪ್ರಕೃತಿ, ಪರಿಸರ, ತುಂಬಾ ಸುಂದರವೂ, ಖುಶಿಯ ಅನುಭವವನ್ನೂ ಕೊಟ್ಟಿತು. ಅದನ್ನೆಲ್ಲಾ ಅನುಭವಿಸುತ್ತಿರಬೇಕಾದರೆ, ಇದ್ದಕ್ಕಿದ್ದಂತೆ, ಒಂದಾದಮೇಲೊಂದರಂತೆ ಮೊಬೈಲ್ ಗಳು ರಿಂಗಣಿಸಿದವು. “ಎಲ್ಲಿದ್ದೀರಿ? ಹೇಗಿದ್ದೀರಿ? ಕ್ಷೇಮ ತಾನೇ? `ನೇಪಾಳದಲ್ಲಿ ತೀವ್ರ ಭೂಕಂಪನದಿಂದ ಅಪಾರ ಸಾವು-ನೋವು; ಉತ್ತರ ಭಾರತದಲ್ಲೂ…’ ಅಂತ ನ್ಯೂಸ್ ಬರ್ತಾ ಇದೆ”. ಅಂದು ಕುರುಕ್ಷೇತ್ರ ಹೇಗಿತ್ತೋ, ಇಂದು ನೇಪಾಳ ಹಾಗೇ ಆಗಿರಬಹುದು” ಎಂದು ಬೇಸರವಾಯಿತು.
`ಸದ್ಯ! ನಮ್ಮ ಪುಣ್ಯ! ಏನೂ ಅನುಭವಕ್ಕೆ ಬಾರದೇ ಸುರಕ್ಷಿತವಾಗಿದ್ದೇವಲ್ಲಾ, ನಾವು ಚಂಡಿಗಢದಲ್ಲಿದ್ದಾಗಲೇ ಭೂಮಿ ಗಡಗಡ ನಡುಗಿರಬೇಕು’ ಎಂದು ಅಂದುಕೊಂಡೆವು. ಇನ್ನು ನಮ್ಮ ವಾಪಾಸು ಪ್ರಯಾಣ ಹೇಗೋ? ಎಲ್ಲವೂ ಸುಗಮವಾಗುವುದೇ? ವಿಮಾನಗಳ ಹಾರಾಟ ವ್ಯತ್ಯಯವಾದರೆ… ವಾಪಾಸು ಹೋಗಲು ನಾವು ೩ ವಿಮಾನಗಳನ್ನು ಬದಲಿಸಿ ಮಂಗಳೂರು ತಲಪಬೇಕಿತ್ತು.
ಈ ಚಿಂತೆಯಲ್ಲೇ ಚಂಡೀಗಢಕ್ಕೆ ವಾಪಾಸಾದ ನಾವು ಅಲ್ಲಿನ ವಾತಾವರಣ ಸರಿಯಾಗಿಯೇ ಇದ್ದುದನ್ನು ನೋಡಿ ಸಮಾಧಾನಗೊಂಡೆವು. ಬಾಕಿ ಉಳಿದ ಜಾಗಗಳಲ್ಲಿ, ಸುಕನಾ ಲೇಕ್ ನ್ನೂ ನೋಡಿಬಂದೆವು.
ಹೋಟೆಲ್ಲಿಗೆ ಬಂದು, ನಾಳಿನ ಪ್ರಯಾಣದ ತಯಾರಿಯನ್ನು ಅವರವರ ಇಚ್ಛಾನುಸಾರ ಮಾಡಲು ಶುರುಮಾಡಿದೆವು. ನಮ್ಮಲ್ಲಿ ಹೆಚ್ಚಿಗೆ ತಂದಿದ್ದ ಬ್ಯಾಗ್ ಇದ್ದದ್ದರಿಂದ ಮತ್ತೆ ಬ್ಯಾಗ್ ಖರೀದಿಗೆಂದು ಅಂಗಡಿ ಸುತ್ತುವ ತಲೆಬಿಸಿ ಇರಲಿಲ್ಲ. ನನ್ನ ಸ್ನೇಹಿತೆಯರೆಲ್ಲಾ ಈ ಉದ್ದೇಶಕ್ಕಾಗಿ ಹೋದರು. `ಪಕೋಡಾಕ್ಕೆ ಪೋದ ಬಾಯಿರುಚಿಯ ಪಾನ್ ನಿಂದ ಪಡೆದೇನು’ ಎಂದು ಮನೋಹರ್ ಬೀಡಾಬೇಟೆಗೆ ಹೊರಟರು.
ಮಾರನೆ ದಿನವಿಡೀ ವಿಮಾನ ನಿಲ್ದಾಣ, ವಿಮಾನ ಹೀಗೆ ಹವಾನಿಯಂತ್ರಕದಲ್ಲೇ ಇರಬೇಕಾದ್ದರಿಂದ ಜೋರಾಗಿ ಉಸಿರೆತ್ತುವಂತಿರಲಿಲ್ಲ. ಎತ್ತಿದರೆ, ನಮ್ಮ ಉಸಿರು ಪಕ್ಕದವರಿಗೆ, ಅವರದ್ದು ನಮಗೆ! ಹಾಗಾಗಿ, ಇಂದೇ ಸಾಕಷ್ಟು ದೀರ್ಘ ಉಸಿರಾಟ ಮಾಡಿ ಗಾಳಿಚೀಲಗಳನ್ನೆಲ್ಲಾ ತುಂಬಿಸಿಕೊಳ್ಳುವ ಎಂದು ರೂಂನ ಒತ್ತಕ್ಕಿರುವ ಬಾಲ್ಕನಿಯಲ್ಲಿ ಸಂಜೆಯ ತಂಗಾಳಿ, ಸೂರ್ಯಾಸ್ತದ ಚೆಲುವು ಹೀರುತ್ತಾ, ಚಹಾ ಜತೆ ಏಕಾಂತದ ಸವಿಯನ್ನು ಹೆಚ್ಚಿಸಿಕೊಂಡೆ.
ನಗರದೆಲ್ಲೆಡೆ ನೀಟಾಗಿ ಬೆಳೆಸಿರುವ ಮರಗಳು, ಗಾರ್ಡನ್ ಗಳು ಚಂಡೀಗಢವನ್ನು ಮಾಲಿನ್ಯರಹಿತ ನಗರವನ್ನಾಗಿ ಮಾಡಿದ್ದವು. ` ನಗರವೆಂದರೆ ಹೀಗಿರಬೇಕಪ್ಪಾ! ಎಷ್ಟು ಕ್ಲೀನ್, ಎಷ್ಟು ವ್ಯವಸ್ಥಿತ, ಎಷ್ಟು ಚೆಂದ!” ಎಂದು ಮನಸ್ಸಿನಲ್ಲೇ ಅಂದುಕೊಂಡೆ.
“ಇದೆಂತ ಊರು ಮಾರಾಯ್ತೀ. ಒಂದು ಗೂಡಂಗಡಿ, ಬೀಡಾ ಅಂಗಡಿ ಇಲ್ಲ! ಎಷ್ಟು ಸುತ್ತಿದೆ ಗೊತ್ತಾ? ಸೆಕ್ಟರ್ ನಿಂದ ಸೆಕ್ಟರ್ ಗೆ ಅಲೆದದ್ದೇ ಬಂತು!” ಗೊಣಗುತ್ತಲೇ ಒಳಬಂದರು ಹ್ಯಾಪಮೋರೆಯಲ್ಲಿ ಮನೋಹರ್. “ಮತ್ತೆ, ನೀವು ಹೀಗೆ ಎಂಕುವಿನ ಹಾಗೆ ಹೋದರೆ ಸಿಗಲು, ಗೂಡಂಗಡಿ, ಬೀಡಾ ಅಂಗಡಿ ಅಂತ ಸಿಕ್ಕಸಿಕ್ಕಲೆಲ್ಲಾ ಇರಲು, ಇದೆಂತ ಹಂಪಣ್ಣನ ಕಟ್ಟೆ ಹಂಪನಕಟ್ಟೆಯಾಗಿ ಬೆಳೆದ ಮಂಗಳೂರಾ? ಅಲ್ಲ, ಗೆದ್ದಲಹಳ್ಳಿ, ನಾಗಶೆಟ್ಟಿಹಳ್ಳಿ ಮಧ್ಯೆ ಬೆಳೆದ ಬೆಂಗಳೂರಿನ ಸಂಜಯನಗರವಾ? ಅಲ್ಲಿಯಾದರೆ, ನೀವು ಒಂದು ಸುತ್ತು ಹೊಡೆದರೆ ವೀಳ್ಯದೆಲೆ, ಬಾಳೆಲೆ, ಕೆಸುವಿನ ಎಲೆ ಅಂತ ಎಲ್ಲವೂ ಸಿಕ್ಕೀತು. ಸ್ವಾತಂತ್ರ್ಯಾನಂತರ ರಚಿತವಾದ ಬಹಳ ವ್ಯವಸ್ಥಿತ ನಗರ – ಚಂಡಿ ಇಲ್ಲದ – ಚಂಡೀಗಢ. ಸ್ವೀಡಿಶ್, ಫ್ರೆಂಚ್, ಅಮೆರಿಕನ್ ಅಂತ ವಿದೇಶೀ ತಜ್ಞರು ರೂಪಿಸಿದ ನಗರ. ಈ ನಗರ ನಿರ್ಮಾಣಕ್ಕಾಗಿ ಆಗ, ಪವಧ್ ಭಾಷೆಯನ್ನಾಡುವ ೫೦ ಹಳ್ಳಿಗಳನ್ನು ತೆರವು ಮಾಡಿ, ಆ ಜಾಗದಲ್ಲಿ ನೀಟಾಗಿ ಗೆರೆ ಎಳೆದು ಸೆಕ್ಟರುಗಳನ್ನು ನಿರ್ಮಿಸಿದ್ದಾರೆ. ನೀವು ಸ್ಮಾರ್ಟಾಗಿ, ಸ್ಟೈಲಾಗಿ `ಪಾನ್ ಶಾಪ್’ ಅಂತ ಗೂಗಲ್ ಮ್ಯಾಪ್ ನಲ್ಲಿ ಆ ಸೆಕ್ಟರನ್ನು ಹುಡುಕಿ, ಅಲ್ಲಿಗೆ ಹೋಗಲು ಟ್ಯಾಕ್ಸಿ ಹೇಗೆ ಸಿಗುವುದೆಂದು ಮತ್ತೆ ಗೂಗಲಿಸಿ, ದುಡ್ಡು ಖರ್ಚು ಮಾಡಿ, ಆ ಪಾನ್ ವಾಲೇ ಅಂಗಡಿಯ ಒಳ ವಿನ್ಯಾಸವನ್ನು ಬೆರಗಿನಿಂದ ನೋಡಿ, ಮೆನು ಕಾರ್ಡಿನ ನೂರಾರು ಪಾನ್ ಗಳಲ್ಲಿ ನಿಮ್ಮ ಸರಳ ಸುಂದರ ಬೀಡಾ ಎಂಬುದು ಇರದೇ, ಹೋದದ್ದಕ್ಕೆ ಅಂತ ಏನೋ ತಿಂದು, ೪ ರೂ. ಬೀಡಾಕ್ಕೆ ೪೦೦ ರೂ. ಖರ್ಚು ಮಾಡಿ, ತಲೆಸುತ್ತು ಬಂದು… ಮತ್ತೆ ಗೋಲಿ ಸೋಡಾ ಬೇಕೆಂದು ಅನಿಸಿದರೆ… ಎಲ್ಲಾ ಪುನರಾವರ್ತನೆ. ಶ್ರೀಮಂತರಿಂದ, ಶ್ರೀಮಂತರಿಗಾಗಿ , ಶ್ರೀಮಂತವಾಗಲು ಬೇಕು ಇಂತಹ ಸುಂದರ ನಗರ” ಎಂದೆ.
“ಛೆ! ಛೆ! ಅದಕ್ಕೇ ಇದು ಮೊನೊಕಲ್ಚರ್ ಆಗಿರುವುದು. ಎಲ್ಲೆಲ್ಲೂ ಬ್ರಾಂಡೆಡ್ ವಸ್ತುಗಳದ್ದೇ ಸಾಲುಸಾಲು ಅಂಗಡಿಗಳು. ಕಾರು, ಕಾರು, ಕಾರು.. ಬಾರು ಬಾರು ,ಬಾರು… ದುಡ್ಡಿನದ್ದೇ ಕಾರುಬಾರು. ಒಂದು ಭಾಷೆ ಅಳಿದರೆ ಅದರ ಜತೆಗೇ ಸಂಬಂಧಿಸಿದ ಜೀವನ ಪದ್ಧತಿ, ಚಿಕಿತ್ಸಾ ಪದ್ಧತಿ, ಪಾಕಕಲೆ, ಲಲಿತ ಕಲೆ, ಪರಂಪರೆ.. ಒಟ್ಟಾರೆ ಸಂಸ್ಕೃತಿಯೇ ಅಳಿದಂತೆ. ಇನ್ನು ೫೦ ಹಳ್ಳಿಗಳೇ ಅಳಿದರೆ…?! ಎಲ್ಲರೂ ಕೂಡಿ ಬಾಳಲು ಸಂಸ್ಕೃತಿ, ಅಳಿದರದು ವಿಕೃತಿ” ಎಂದು ಭಾಷಣವನ್ನೇ ಬಿಗಿದರು ದೇಸೀ ಸೊಗಡಿಗಾಗಿ ಹಪಹಪಿಸುವ ಮನೋಹರ್.
“ನಿಮ್ಮ ಈ ಸ್ಥಿತಿಗೆ ` ಬೀಡಾ ಬೇಡಿದವಗೆ ಬ್ರ್ಯಾಂಡೆಡ್ ಬಡಿಸಿದಂತೆ’ ಅಂತ ನನ್ನದೊಂದು ಹೊಸ ಗಾದೆ” ಎಂದೆ.
“ಹಾಗಾದ್ರೆ ನೀವು ಹೋದದ್ದು ಎಂಕು ಪಣಂಬೂರಾ?”
“ಹೋದದ್ದಕ್ಕೆ ಅಂತ ಒಂದು ಕಡೆ ಲೇಸರ್ ಶೋ ಇತ್ತು, ನೋಡಿ ಬಂದೆ.”
ಮಾರನೆ ದಿನ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೂತು ಕಾಯುತ್ತಿದ್ದಾಗಲೂ ಒಳಗೇ ಹಕ್ಕಿಗಳು ಹಾರುತ್ತಿದ್ದುದನ್ನು ಕಂಡೆ. ಪಾರಿವಾಳವೊಂದು ಕಾಳು ಕಡ್ಡಿಗಳನ್ನು ಆರಿಸಿ ತಿನ್ನುವುದನ್ನು ಬಿಟ್ಟು, ಪ್ರಯಾಣಿಕರು ಕೊಡುವ ಬಿಸ್ಕೆಟ್, ಸಮೋಸಾಗಳನ್ನು ಮೆದ್ದು ಬೊಜ್ಜು ಬೆಳೆಸಿಕೊಂಡಿತ್ತು. ಹೊರಗಡೆ ಹಾರಾಡುತ್ತಿರಬೇಕಾದ ಈ ಹಕ್ಕಿಗಳು ಜನರಿಂದ ತುಂಬಿ ಗೌಜುಗೌಜಾಗಿರುವ ಜಾಗದಲ್ಲಿ ಯಾಕಿವೆ? ಎಂದುಕೊಂಡೆ. ಅವಾದರೂ ಏನು ಮಾಡಿಯಾವು? ಅವರ ಹಾರಾಟದ ಜಾಗದಲ್ಲಿ ನಮ್ಮ `ಯಂತ್ರಹಕ್ಕಿ’ಗಳು ಹಾರಾಡುತ್ತಿರುವಾಗ? ಹೀಗೆ ಅದಲು ಬದಲಾಗುವುದರಲ್ಲೇ ಅಭಿವೃದ್ಧಿಯ ಅರ್ಥವೋ? `ಅರ್ಥ’ದ ಅಭಿವೃದ್ಧಿಯೋ? ಎಂಬಿತ್ಯಾದಿ ಅರ್ಥ-ಅನರ್ಥಗಳ ವಿಚಾರಧಾರೆಯಿಂದ ತಲೆಕೊಡಕಿ, ವಿಮಾನ ಹೊರಡುವ ಸಮಯವಾಗಲು, ಪ್ರಯಾಣದ ಘೋಷಣೆಗಳ ಕಡೆ ಗಮನ ಹರಿಸಿದೆ.
ಮತ್ತೆ ನಮ್ಮ ಗಾವ್ಂ
ಹೀಗೆ, ಜಮ್ಮು ಮತ್ತಿತರ ತಾಣಗಳನ್ನೂ ನೋಡಿ, ಮ೦ಗಳೂರಿಗೆ ವಾಪಾಸು ಬ೦ದು, ಗ೦ಟು ಮೂಟೆಗಳನ್ನೆಲ್ಲಾ ಬಿಚ್ಚಿದೆವು. ಆಪ್ತರಿಗೆ ಪ್ರವಾಸದ ವಿವರಗಳನ್ನೆಲ್ಲಾ ಒಪ್ಪಿಸುವ ಮೊದಲು ಖರೀದಿಸಿದ ವಸ್ತುಗಳ ಅ೦ದ ಚೆ೦ದವನ್ನೆಲ್ಲ ವರ್ಣಿಸತೊಡಗಿದೆವು. ಪೆಹಲ್ ಗಾ೦ನಲ್ಲಿ ಖರೀದಿಸಿದ್ದ ೨೦೦ ರೂಪಾಯಿಗಳ ಉಣ್ಣೆಯ ಶಾಲನ್ನು ತೋರಿಸುತ್ತಾ, “ನೋಡಿ, ಇದು ಎರಡೂವರೆ ಮೀಟರ್ ಉದ್ದವಿದೆ. ಮತ್ತೆ ನೇಯಿಗೆ ಹೇಗೆ ಹಾಕಿದ್ದಾರೆ೦ದರೆ, ಇದರ ಒ೦ದು ಬದಿಯನ್ನು ಕೆನೆಬಣ್ಣದ ಶಾಲಿನ೦ತೆ, ಇನ್ನೊ೦ದು ಬದಿಯನ್ನು ಕಪ್ಪು ಬಣ್ಣದ೦ತೆ ಅ೦ದರೆ ಡಬ್ಬಲ್ ಸೈಡೆಡ್ ಆಗಿ ಉಪಯೋಗಿಸಬಹುದು” ಎ೦ದೆ. ” ಆ ೨೦೦ ರೂಪಾಯಿಗಳಿಗೆ ಇಷ್ಟು ನೂಲು, ಬಟ್ಟೆ, ಅಲ೦ಕಾರ ಸಿಕ್ಕಿತಾದರೆ ಮತ್ತೆ ಅವರ ಮಜೂರಿ?” ಎ೦ದರು. ಆಗ ಗುಲ್ ಮಾರ್ಗ್ ನ ಗೈಡ್ “ಮ್ಯಾಡ೦, ಕಾಶ್ಮೀರವೆ೦ದರೆ, ಕ್ಯಾಶ್ ಪ್ಲಸ್ ಮೋರ್, ನಿಮ್ಮ ದುಡ್ಡಿಗೆ ಇನ್ನೂ ಸಿಗುತ್ತದೆ, ಹೆಚ್ಚು ಸಿಗುತ್ತದೆ ಎ೦ದರ್ಥ” ಎ೦ದದ್ದು ನೆನಪಾಯಿತು.
ಕ್ಯಾಶ್ ಪ್ಲಸ್ ಮೋರ್ ನ ಅರ್ಥದ ಆಳ ನಿಧಾನಕ್ಕೆ ಸ್ಪಷ್ಟವಾಗತೊಡಗಿತು…
“ಹಾಗಾದ್ರೆ ಓದುಗರೇ, ಕ್ಯಾ ಆಪ್ ಖುಶ್ ಹೇ?”
“—-”
“ಮತ್ತೆ ಕೊಡಿರಲ್ಲಾ, ನಮ್ಮ ಭಕ್ಷೀಸು?”
(ಕರೆದೇ ಕರೆಯಿತು ಕಾಶ್ಮೀರ ಮುಗಿಯಿತು)
ಈ ಎಲ್ಲಾ ಕಂತುಗಳನ್ನು ಓದಿದ ಮೇಲೆ ನಮ್ಮನ್ನು ಕರೆದೇ ಕರೆಯಿತು ಕಾಶ್ಮೀರ. ಚೆನ್ನಾಗಿತ್ತು ಲೇಖನ ಸರಣಿ.
ಕುರುಕ್ಷೇತ್ರ ಮತ್ತು ಚಂಡಿಗಢ ರಾಕ್ ಗಾರ್ಡನ್ ನನ್ನ ಹಿಂದಿನ ಪಯಣದ ನೆನಪನ್ನು ಮತ್ತೆ ಜಾಗೃತಗೊಳಿಸಿತು. ಸುಂದರ ವರ್ಣನೆ ಚೆನ್ನಾಗಿ ಮೂಡಿಬಂತು.