“ಎತ್ತಿನಹೊಳೆ ಯೋಜನೆಯ ಇಂದಿನ ಸ್ಥಿತಿ ನೋಡಲು ನಾಳೆ ಬೆಳಿಗ್ಗೆ ಕೆಲವು ಚೆನ್ನೈಗೆಳೆಯರು ಬರುತ್ತಿದ್ದಾರೆ. ನೀವೂ ಬಂದಿದ್ದರೆ ಚೆನ್ನಾಗಿತ್ತು” ಹಾಸನದ ವಕೀಲ, ಹೊಂಗಡಳ್ಳದ ಮೂಲವಾಸಿ ಕಿಶೋರ್ ಕುಮಾರ್ ಚರವಾಣಿಸಿದರು. ತಾತ್ತ್ವಿಕ ಹೋರಾಟವನ್ನಷ್ಟೇ ನೆಚ್ಚುವ ನಿರೇನ್ ಜೈನ್ ಮತ್ತು ಎಚ್. ಸುಂದರ ರಾವ್ ಸೇರಿದಂತೆ ಮೂವರೂ ಹೋಗುವುದೆಂದು ಕಾರು ಹೊರಡಿಸಿದ್ದೆ. ಸುಂದರರಾಯರಿಗೆ ಅನ್ಯ ಕಾರ್ಯ ಒತ್ತಡ ಬಂದುದರಿಂದ ನಾವಿಬ್ಬರೇ ಹೋಗಬೇಕಾಯ್ತು. ಸಕಲೇಶಪುರದ ಐಬಿಯನ್ನು ನಾವು ಬೆಳಿಗ್ಗೆ ಸಕಾಲಕ್ಕೇ ತಲಪಿದ್ದೆವು. ಎತ್ತಿನಹೊಳೆ ಯೋಜನೆಯಲ್ಲಿ ಎತ್ತಂಗಡಿಯ ಬೆದರಿಕೆಯಿದ್ದ ಕೆಲವು ಕೃಷಿಕರು, ಕೆಲವು ಮಾಧ್ಯಮ ಪ್ರತಿನಿಧಿಗಳೂ ಹಾಜರಿದ್ದರು. ಚೆನ್ನೈಗೆಳೆಯರು ರಾತ್ರಿ ಯಾನದಲ್ಲಿ ಬೆಂಗಳೂರು, ಮೊದಲ ಬಸ್ಸಿನಲ್ಲಿ ಹಾಸನವಾಗಿ ಸಕಲೇಶಪುರಕ್ಕೆ ಬಂದು ತಲಪುವಾಗ ಗಂಟೆ ಹನ್ನೊಂದೇ ಆಗಿತ್ತು.

ಮೊದಲು ರೈಲ್ವೇ ನಿಲ್ದಾಣ ಹಾಯ್ದ ಮೇಲೆ ಸಿಗುವ ದಡಬಡ ದಾರಿಯ ಪಕ್ಕದಲ್ಲೇ ವಿಸ್ತಾರ ಗದ್ದೆಗಳು – ಬಹುತೇಕ ಹಡ್ಲು ಬಿದ್ದವಕ್ಕೆ, ಹೋದೆವು. ಅವಕ್ಕೆ ದೂರದಂಚು ಕಟ್ಟಿದಂತೆ ದಟ್ಟ ಕಾಡು. ಗದ್ದೆಗಳು ಹಡ್ಲು ಬೀಳಲು ಕಾರಣವೇನಿರಬಹುದು – ಕೃಷಿ ಆರ್ಥಿಕತೆಯ ಸೋಲೇ? ಪೇಟೆಯ ಒತ್ತಡವೇ? `ಅಭಿವೃದ್ಧಿ’ಯ ಆಮಿಶವೇ? ನಮಗೆ ಜೊತೆಗೊಟ್ಟ ಕೃಷಿಕರಲ್ಲೇ ಸ್ಪಷ್ಟ ಉತ್ತರವಿರಲಿಲ್ಲ. ಸದ್ಯ ಅದರ ತುಂಬಾ ಭಾರೀ ಉಕ್ಕಿನ ಕೊಳವೆಗಳು ಹರಡಿ ಬಿದ್ದಿದ್ದುವು. ಬಂದು ಬೀಳುವ ಕಬ್ಬಿಣದ ಕೊಳವೆಗಳಿಗೆ ತಂತಿಬಲೆ ಸುತ್ತಿ, ಕಾಂಕ್ರೀಟ್ ಲೇಪ ಹಾಕುವ ಪುಟ್ಟ ಕಾರ್ಯಾಗಾರವೂ ಅಲ್ಲೇ ಇತ್ತು. ಇಂಥದ್ದೇ ಇನ್ನೊಂದು ವ್ಯವಸ್ಥೆಯನ್ನು ನಾನು ಎರಡು ವಾರದ ಹಿಂದೆ ಮಂಜರಾಬಾದಿನಿಂದ ಬಿಸಿಲೆಯತ್ತ ಹೋಗುವ ದಾರಿಯ ಪಕ್ಕದ ಗುಡ್ಡೆಯಲ್ಲೂ ಕಂಡಿದ್ದೆ. ಕೃಷಿಕರು ತಿಳಿಸಿದಂತೆ, ಎತ್ತಿನಹೊಳೆ ವಲಯದಲ್ಲಿ ಒಟ್ಟು ನಾಲ್ಕು ಕಡೆ ಇಂಥ ಕಾರ್ಯಾಗಾರಗಳೇ ಇವೆಯಂತೆ. ಮುಂದುವರಿದು ಮತ್ತೆಷ್ಟೋ ಸಾರ್ವಜನಿಕ ಸ್ಥಳಗಳಲ್ಲಿ, ಅಂದರೆ ಕೊಳವೆ ಸಾಲು ಸಾಗಬೇಕಾದ ಜಾಡಿನಲ್ಲಿ ಪರಿಷ್ಕೃತ ಕೊಳವೆಗಳನ್ನು ಹಂಚಿ ಹಾಕಿದ್ದೂ ಆಗಿದೆಯಂತೆ. ಕೆಲವೆಡೆ ಹೂಳಲೂ ಶುರು ಮಾಡಿದ್ದರು! ಆದರೆ ಅಲ್ಲೂ ಮುಂದೆ ದಿನದುದ್ದಕ್ಕೆ ನಾವು ಕಂಡ ಇತರ ಜಾಗಗಳಲ್ಲೂ ನಮಗೆ ತಿಳಿಯದ ಕಾರಣಕ್ಕೆ ಕೆಲಸ ನಡೆದಿರಲಿಲ್ಲ, ಕಾರ್ಮಿಕರೂ ವಿಶೇಷ ಇರಲಿಲ್ಲ.

ದೈತ್ಯ ಕೊಳವೆಗಳನ್ನು ಹೂಳಿರುವ ಕೆಲವು ಸ್ಥಳಗಳನ್ನು ಕಂಡೆವು. ಇಲ್ಲಿ ಕಾಮಗಾರಿ ವಹಿಸಿಕೊಂಡವರು ಎರಡು ತೆರನ ದುರ್ಬುದ್ಧಿ ಪ್ರದರ್ಶಿಸಿದ್ದಾರೆ. ಸರ್ಕಾರೀ ಜಾಗಗಳಲ್ಲಿ ಯದ್ವಾತದ್ವಾ ನೆಲಬಗೆದು ಕೊಳವೆ ಸಾಲು ಹೂತಿದ್ದಾರೆ. ಸರಕಾರ ಈ ಪರಿಸರ ವಿರೋಧೀ ಕೆಲಸದಲ್ಲಿ ಷಾಮೀಲಾಗಿರುವುದರಿಂದಲೇ ಕಂತ್ರಾಟುದಾರನಿಗೆ ಅನುಮತಿ, ಸಾರ್ವಜನಿಕ ಭದ್ರತೆಯಂಥ ಔಪಚಾರಿಕತೆಗಳೆಲ್ಲ ಅವಗಣಿಸಲಾಗಿದೆ. ಮತ್ತೆ ಹಾಕಿದಷ್ಟೂ ಕೊಳವೆಗಳಿಗೆ ತಾರ್ಕಿಕ ಕೊನೆ, ಮೊದಲು ಕಾಣುತ್ತಿಲ್ಲ. ಎಲ್ಲೂ ಅಲ್ಲದಂತೆ, ಅಂದರೆ ಒಂದೋ ಖಾಸಗಿ ಕೃಷಿತ ಭೂಮಿಯ ಅಂಚಿನಲ್ಲಿ ತೊಡಗಿವೆ, ಇಲ್ಲವೇ ಸಾರ್ವಜನಿಕ ರಸ್ತೆಯೋ ರಚನೆಯೋ ಬಂದಲ್ಲಿ ಬಾಯ್ಕಳೆದು ನಿಂತಿವೆ. ಇಲ್ಲೆಲ್ಲ ಸ್ಪಷ್ಟವಾಗಿ ಕಾಣುವುದು ಎರಡೇ ಸಾಧ್ಯತೆಗಳು. ಒಂದು, ಕೃಷಿಕರನ್ನು ಪರೋಕ್ಷವಾಗಿ ಬೆದರಿಸುವ ಕ್ರಮ. (ನಗರಗಳಲ್ಲಿ ಭಾರೀ ಕಟ್ಟೋಣಗಳ ಕುಳಗಳು ಸಣ್ಣಂಗಳದ ಪುಟ್ಟ ಹಳೆಮನೆ ಸುತ್ತ ಸ್ವಂತ ರಚನೆಯ ಕ್ರಿಯೆಯ ಭಾಗವಾಗಿಯೇ ಭಾರೀ ನೆಲಗೆಲಸ, ನಿರಂತರ ಗದ್ದಲ, ದೂಳು ಎಬ್ಬಿಸಿ ಹೈರಾಣಗೊಳಿಸಿದಂತೇ ಇದೆ.) ಇಲ್ಲೇ ಬೇರೊಂದೆಡೆ ರಾತೋ ರಾತ್ರಿ ಜೇಸಿಬೀ ಚಲಾಯಿಸಿ ಖಾಸಗಿ ಮತ್ತು ಅನುಮತಿಯಿಲ್ಲದ ಭೂಮಿಗಳಲ್ಲಿ ದಾರಿ ಕಡಿದು ನ್ಯಾಯಾಲಯದಲ್ಲಿ ಸಿಕ್ಕಿಬಿದ್ದ ಕತೆಯ ನೆಲವನ್ನು ಇಲ್ಲೇ ನಾವು ಹಿಂದಿನ ಸಲ ಕಂಡದ್ದು ನೆನಪಾಗದಿರಲಿಲ್ಲ.

ಇನ್ನೊಂದು, ನ್ಯಾಯಾಲಯದಲ್ಲಿ ವಿರೋಧೀ ತೀರ್ಮಾನಗಳು ಬರುವ ಕಾಲಕ್ಕೆ, ಇಲ್ಲಿ ತೊಡಗಿಸಿದ ಸಾರ್ವಜನಿಕ ಹಣದ ಮೊತ್ತ ಮುಂದೆ ಮಾಡಿ ಅನುಕಂಪ ಗಳಿಸುವ ಜಾಣತನ. (ಕಳೆದ ವಾರವಷ್ಟೇ ನಿರಾವರಿ ಸಚಿವ ಪಾಟೀಲ್ ಎತ್ತಿನಹೊಳೆಗಾದ ವಿನಿಯೋಗವನ್ನು ಎಷ್ಟೋ ಕೋಟಿಗಳಲ್ಲಿ ಸಾರ್ವಜನಿಕಕ್ಕೆ ಲೆಕ್ಕ ಕೊಟ್ಟಿದ್ದಾರೆ. ಇನ್ನೂ ದೊಡ್ಡ ತಮಾಷೆಯೆಂದರೆ ೨೦೧೮ರಲ್ಲಿ ಯೋಜನೆ ಪೂರ್ಣಗೊಳ್ಳುತ್ತದೆಂದೂ ಘೋಷಿಸಿದ್ದಾರೆ!) ನೆನಪಿರಲಿ – ಕುದುರೆಮುಖ ಗಣಿಗಾರಿಕಾ ಉದ್ದಿಮೆ ಈ ಕುತಂತ್ರವನ್ನು ಈಗಲೂ ನಡೆಸುತ್ತಲೇ ಇದೆ! ಭೂಪರಭಾರೆಯ ಮೂಲ ಅವಧಿ, ವಿಸ್ತೃತ ಅವಧಿ, ನಿಗದಿತ ಸ್ಥಳದಲ್ಲಿನ ಸಂಪನ್ಮೂಲ, ಕೊನೆಗೆ ಪ್ರಶ್ನಾತೀತವಾಗಿ ಜಾಗಬಿಟ್ಟು ನಡೆಯಲು ಅತ್ಯುನ್ನತ ನ್ಯಾಯಾಲಯ ಕೊಟ್ಟ ಅವಧಿ ಮುಗಿದ ಮೇಲೂ ಅದು ಸುಮ್ಮನುಳಿದಿಲ್ಲ. “ಇಷ್ಟು ದೊಡ್ಡ ಸಾರ್ವಜನಿಕ ಹೂಡಿಕೆಯನ್ನು ಸದ್ಬಳಕೆ ಮಾಡುವ ಉದ್ದೇಶದಲ್ಲಿ ನಮಗೆ ಮರುಜೀವ ಕೊಡಿ!”

ಕಂತ್ರಾಟುದಾರರು ಕೃಷಿಕರನ್ನು ಒಲಿಸಿಕೊಳ್ಳುವಲ್ಲಿ ಇಲ್ಲಿ ಹೊಸ ತರದ ಜಾಣತನ ಪ್ರಯೋಗಿಸುತ್ತಿರುವುದನ್ನು ಕೇಳಿದೆ. ಸರಕಾರದ ಭೂಸ್ವಾಧೀನಾದಿ ಔಪಚಾರಿಕತೆಗಳನ್ನು ಇವರು ಕಾದೇ ಇಲ್ಲ. ತಮ್ಮ ಮುಖ್ಯ ಕೆಲಸಗಳಾದ ಅಣೆಕಟ್ಟು ನಿರ್ಮಾಣ ಅಥವಾ ಕೊಳವೆ ಸಾಲು ಸಾಗಬೇಕಾದ ಜಾಡಿನಲ್ಲಿನ ಖಾಸಗಿ ಭೂಮಿಯನ್ನು ಸುಲಭದಲ್ಲಿ ಕೊಡುವವರಿದ್ದಲ್ಲಿ ಸರಕಾರೀ ಭೂದರದ ಎರಡು ಪಟ್ಟು ಹಣಕೊಟ್ಟೇ ಖರೀದಿಸುತ್ತಿದ್ದಾರೆ! ಇದು ಕಂತ್ರಾಟುದಾರನಿಗೇನೂ ಮುಳುಗಂಟು ಅಲ್ಲ. ಮೊದಲು ಕಂತ್ರಾಟುದಾರನಿಗೆ ಕಾಮಗಾರಿ ನಡೆಸಲು ಅವಿರೋಧ ನೆಲ ಸಿಗುತ್ತದೆ. ಯೋಜನೆ ಪೂರೈಸಿದ ಕಾಲಕ್ಕೆ ಕ್ರಮದಂತೆ ಸರಕಾರದ ಭೂಸ್ವಾಧೀನದ ಪರಿಹಾರ ಧನ ಹೆಚ್ಚು ಲಾಭಕರವಾಗಿಯೇ ಸಿಕ್ಕುವುದು ಖಾತ್ರಿ. ಕಂತ್ರಾಟುದಾರ ಹಾಗೂ ಸರಕಾರದ ಅಪವಿತ್ರ ಮೈತ್ರಿಗೆ ಇದಕ್ಕಿಂತ ದೊಡ್ಡ ನಿದರ್ಶನ ಬೇರೆ ಸಿಗದು.

ಗ್ರಾಮ ಪಂಚಾಯತ್ ಅನುಮತಿಯಿಲ್ಲದ ಸ್ಥಳದಲ್ಲಿ ದಿಢೀರನೆ ನೆಲಕೊರೆಯುವ ಯಂತ್ರ ಸ್ಥಾಪಿಸಿ, ಮಣ್ಣ ಪರೀಕ್ಷೆಗಿಳಿದದ್ದು ಇನ್ನೊಂದು ಕತೆ. ಇದನ್ನು ಅಂದೇ ಜಾಗೃತ ಕೃಷಿಕರು ಫೋಟೋ ತೆಗೆದು, ಚರವಾಣಿಯ ಸೌಲಭ್ಯದಲ್ಲಿ (ವಾಟ್ಸಾಪ್) ಜನಪರ ಆಂದೋಳನಗಳ ಒಲವುಳ್ಳ ಪತ್ರಿಕಾ ಪ್ರತಿನಿಧಿಗೆ ಕಳಿಸಿದರಂತೆ. ಅದು ಮಾರಣೇ ದಿನವೇ ಪತ್ರಿಕೆಯೊಂದರ ಮುಖ್ಯ ಸುದ್ದಿಯಾಯ್ತು. ಆಗ ಪೊಲಿಸ್ ಅನಿವಾರ್ಯವಾಗಿ ಕ್ರಿಯಾಶೀಲರಾಗಬೇಕಾಯ್ತು. ಅಕ್ರಮ ಚಟುವಟಿಕೆ ತೊಡಗಿದಷ್ಟೇ ಚುರುಕಾಗಿ ಸ್ಥಗಿತಗೊಂಡು, ಎಲ್ಲ ಲಾರಿಯೇರಿ ಓಡಿದ ಕತೆ ನಿಜಕ್ಕೂ ರೋಚಕವಾಗಿತ್ತು.

ಮಳೆಗಾಲದಲ್ಲಿ ತಮ್ಮ ಗದ್ದೆ ತೋಟಗಳಿಗೆ ನುಗ್ಗುವ ಭಾರೀ ಪ್ರವಾಹವನ್ನಷ್ಟೇ ಬರಗಾಲದಲ್ಲಿರುವ ಮಂದಿಗೆ ಕೊಡಲು ಒಯ್ತಾರೆಂದು ಇನ್ನೂ ಈ ವಲಯದ ಬಹುತೇಕ ರೈತಾಪಿ ಜನ ನಂಬಿದೆ. ಗದ್ದೆಯ ರಕ್ಷಣೆ ಮತ್ತು ಪರೋಪಕಾರಗಳ ನೀತಿ ಪಾಠದಲ್ಲಿ, ಖಾಯಂ ಅಣೆಕಟ್ಟೆಯ ರಚನೆ ಮತ್ತು ಮುಳುಗಡೆಗಳ ವಿವರಗಳನ್ನು ಬಿತ್ತರಿಸದೇ ಇರುವುದು ಬಲು ದೊಡ್ಡ ಜನದ್ರೋಹವೇ ಸರಿ. ನಾಶವಾಗುವ ಮರಗಳ ಲೆಕ್ಕವನ್ನು ಅರಣ್ಯ, ರೆವಿನ್ಯೂ ಮತ್ತಿದರೊಳಗೆ ಖಾಸಗಿಯದ್ದು ಪ್ರತ್ಯೇಕಿಸಿ ಅನುಕೂಲದ ಲೆಕ್ಕವನ್ನು ಮಾತ್ರ ಪೂರ್ಣ ಚಿತ್ರ ಎಂಬಂತೆ ಬಿಂಬಿಸಿ ಹೇಳುವಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಪಳಗಿದ್ದಾರೆ. ಅಷ್ಟೇ ಕುಟಿಲವಾಗಿ ನೀರು ಸಂಗ್ರಹದ ಮಾತಾಡುವಾಗ, ಸಾಗಣೆಯ ದಾರಿಯುದ್ದದ ಮರನಷ್ಟದ ಲೆಕ್ಕ ಮರೆಸುತ್ತಾರೆ. ಇವೆರಡನ್ನು ಮೀರಿ ಈಗಾಗಲೇ ಅದೆಷ್ಟೋ ಮರಗಳು `ಕೆಲಸದ ದಾರಿ’ಯ ನೆಪದಲ್ಲಿ ಬುಡಮೇಲಾಗಿ, ಹೊಸದಾರಿಯ ಮಣ್ಣಡಿಯಲ್ಲಿ ಸಮಾಧಿಯಾದವು ಕೇವಲ ಜನಪದ ಸ್ಮರಣೆಯಲ್ಲಿ ಮಾತ್ರ ಉಳಿದಿವೆ. ನದಿಪಾತ್ರೆ ರಕ್ಷಣೆ, ಅರಣ್ಯ, ರೈಲ್ವೇ, ರಸ್ತೆ ಎಂದಿತ್ಯಾದಿ ಸಮದರ್ಶಿಸಬೇಕಾದ ಇಲಾಖೆಗಳು ಎತ್ತಿನಹೊಳೆ ಯೋಜನಾ ವಲಯದಲ್ಲಿ ಇದ್ದೂ ಸತ್ತಂತೆಯೇ – ಹರ ಕೊಲ್ಲಲ್ಲ್ ಪರ ಕಾಯ್ವನೇ?

ಎತ್ತಿನಹೊಳೆ ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿನ ಭೌಗೋಳಿಕ ರಚನೆಗಳು ಮೇಲ್ಮೈ ತೋರಿಕೆಗೆ ಯಾವುದೇ ದಿಕ್ಕಿಗಿದ್ದರೂ ಆಂತರಿಕವಾಗಿ ಪಶ್ಚಿಮವನ್ನೇ ಲಕ್ಷ್ಯವಾಗಿರಿಸಿಕೊಂಡಿದೆ. ಇದರಲ್ಲಿ ಹರಿಯುವ ನೀರಿನೊಡನೆ ಸ್ಪಷ್ಟ ಮುಖಕೊಟ್ಟ ಕೆಲವೇ ತೊರೆಗಳನ್ನು ಆರೇಳು ಮುಖಗಳಲ್ಲಿ ಅಣೆಕಟ್ಟಿನಿಂದ ಅಡ್ಡಗಟ್ಟಿ, ಪೂರ್ವಕ್ಕೆ ಸಾಗಿಸುವುದು ಯೋಜನೆಯ ಉದ್ದೇಶ. ಸಹಜವಾಗಿ ಇದಕ್ಕೆ ಕೊಳವೆಯ ಸಹಾಯ ಅವಶ್ಯ. ಆದರೂ ಅಡ್ಡಲಾಗುವ ಅಸಂಖ್ಯ ತೊರೆಗಳು ಅದರಲ್ಲೂ ಮುಖ್ಯವಾಗಿ ಹೇಮಾವತಿ ನದಿಯನ್ನು ಈ ಕೊಳವೆ ಸಾಲು ಹೇಗೆ ಉತ್ತರಿಸಬೇಕು ಎನ್ನುವ ಕುರಿತು ಇನ್ನೂ ತೀರ್ಮಾನವೇ ಆಗಿಲ್ಲ! ಅಂದರೆ ನದಿಪಾತ್ರೆಯನ್ನು ಅಡ್ಡ ಸೀಳಿ ಕೊಳವೆ ಸಾಲನ್ನು ಭೂಗತವಾಗಿಸುತ್ತಾರೋ? ನದಿಯ ಪ್ರವಾಹದ ಗರಿಷ್ಠ ಮಿತಿಯನ್ನೂ ಮೀರುವಂತೆ ಕುಂದಗಳ ಸಾಲನ್ನು ನಿಲ್ಲಿಸಿ ಮೇಲೆ ಹಾಯಿಸುತ್ತಾರೋ? ಗಮನಿಸಿ, ಏನು ಮಾಡಿದರೂ ಮತ್ತಷ್ಟು ಪ್ರಾಕೃತಿಕ ಅಸ್ಥಿರತೆ ತರುವುದಂತೂ ನಿಶ್ಚಯ.

ಮಂಜರಾಬಾದಿನಿಂದ ತುಸು ಕೆಳಗೆ, ಹೆದ್ದಾರಿಯ ಒತ್ತಿನ ಆಳ ಕಣಿವೆಯಲ್ಲಿ, ಪೇಟೆಯ ಚರಂಡಿಯಷ್ಟೇ ನೀರಿರುವ ತೊರೆಯೊಂದು ಹರಿದಿದೆ. ಅದಕ್ಕೆ ಅಡ್ಡಲಾಗಿ ಇಪ್ಪತ್ತಡಿಗೂ ಮಿಕ್ಕ ಎತ್ತರದ ಕಾಂಕ್ರೀಟ್ ಗೋಡೆಯೊಂದನ್ನು `ಎತ್ತಿನಹೊಳೆ ಯೋಜನೆಯ ಒಂದು ಅಣೆಕಟ್ಟು’ ಎಂದೇ ನಿಲ್ಲಿಸಿದ್ದಾರೆ.

ತಮಾಷೆಯೆಂದರೆ ಇದು ಎರಡು ದಂಡೆಗಳನ್ನು ಇನ್ನೂ ಭದ್ರವಾಗಿ ಸಂಪರ್ಕಿಸಿಯೇ ಇಲ್ಲ. ಅಂದರೆ ಯೋಜನೆಗೆ ಅನುಮತಿ, ಭೂ ಸ್ವಾಧೀನದ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕುವ ಮುನ್ನ ಅವಸರದಲ್ಲಿ ಈ ರಚನೆಯಾಗಿದೆ. (ಯಾಕೆ ಈ ಆತುರ? ಯೋಜನೆಗಳು ಔಚಿತ್ಯ ಮತ್ತು ಸಾರ್ವಜನಿಕ ಉಪಯುಕ್ತತೆಯಿಂದ ರೂಪುಗೊಳ್ಳಬೇಕು. ಹೀಗೆ ಅವಸರದಲ್ಲಿ ಚೆಲ್ಲುವ ಹಣ ಸಫಲವಾಗುವುದುಂಟೇ?) ಇಂದು ಅದರ ಎರಡೂ ದಂಡೆಗಳ ಕಾಫೀ ಕೃಷಿ ಅಬಾಧಿತವಾಗಿ ಕಾಯಿಕಟ್ಟಿ ಕುಯ್ಲಿನ ದಿನ ಎಣಿಸುತ್ತಿವೆ. ಮುಂದೆ ಔಪಚಾರಿಕತೆಗಳು ಎಲ್ಲ ಪೂರೈಸಿದ ಮೇಲೆ ಈ ಮೋಟುಗೋಡೆ ಎರಡು ದಂಡೆಗಳೊಡನೆ ಸಾಧಿಸುವ ಸಂಬಂಧ ಎಷ್ಟು ದೃಢವಾಗುಳಿದೀತು?

ಒಂದೆಡೆ ಗುಡ್ಡೆಯ ಎರಡು ಏಣುಗಳ ನಡುವೆ, ಸುಮಾರು ನೂರು ಮೀಟರ್ ಉದ್ದಕ್ಕೆ ಹತ್ತೆಂಟು ಕೊಳವೆಗಳನ್ನು ಪರಸ್ಪರ ಬೆಸೆದು ಅರೆಬರೆ ಮಣ್ಣಿನಲ್ಲಿ ಹುಗಿದಿದ್ದಾರೆ. ಏಣಿನ ಪುಟ್ಟ ಕಣಿವೆ ಮಳೆಗಾಲದ ಹರಿವಿನಲ್ಲಿ ಕೊರಕಲು ಬಿದ್ದು, ಕೊಳವೆಸಾಲಿನ ತಳಗಟ್ಟೆ ಜಗ್ಗಿ ಕೊಳವೆಗಳ ಬೆಸುಗೆ ಬಿರಿದಿದೆ. ನೂರು ಮೀಟರಿನೊಳಗೇ ಪುಟ್ಟ ಕಣಿವೆ ಹಾಯುವಲ್ಲೇ ಕಾಣುವ ಈ ದಕ್ಷತೆ ಕೋಲಾರ, ಚಿಕ್ಕಬಳ್ಳಾಪುರದ ದೂರವನ್ನು ಸಾಧಿಸುವುದು ನಿಜವೇ?

“ಮಳೆಗಾಲದಲ್ಲೇ ಮಳೆ ದೂರಾದ ದಿನ ಪಾದ ಮುಳುಗಿಸುವಷ್ಟೇ ನೀರಿದೆ. ಇನ್ನು ಹನ್ನೆರಡಡಿ ವ್ಯಾಸದ ಕೊಳವೆ ಯಾಕೆ?” ಯೋಜನಾ ವಿರೋಧಿಗಳ ಈ ಮಾತು ನಿಜವೆಂದೇ ನಂಬಿದ್ದೆ. ಆದರೆ ಅಲ್ಲೊಂದೆಡೆ ಉರಿಬಿಸಿಲಿನಲ್ಲೂ ಸಾಕಷ್ಟು ವಿಸ್ತಾರ ಹೊಳೆಪಾತ್ರೆಯಲ್ಲಿ ಮೊಣಕಾಲಾಳದ ನೀರು ರಭಸದಿಂದ ಹರಿಯುತ್ತಿದ್ದುದು ನಮ್ಮನ್ನು ಅಪ್ರತಿಭಗೊಳಿಸಿತು. ಆಗ ಸ್ಥಳಿಯರೇ ಸ್ಪಷ್ಟ ಪಡಿಸಿದರು “ಇಲ್ಲ ಇಲ್ಲ, ಅದು ತುಸು ಮೇಲ್ದಂಡೆಯಲ್ಲಿರುವ ಕಿರು ವಿದ್ಯುದಾಗರದ ನಿಯಂತ್ರಿತ ಹರಿವು.” ಒಮ್ಮೆಗೆ ಮನಸ್ಸೇನೋ ತಿಳಿಯಾಯ್ತು, ಆದರೆ ಮುಂದುವರಿದು ಯೋಚಿಸಿದಾಗ ಹೀಗೆ ಸರಕಾರ ತನ್ನ ಹೊಸ ಸುಳ್ಳಿಗಾಗಿ ಅವಧಿ ಮುಗಿಯದ ಹಳೆ ಸಾಧನೆಯನ್ನು ಮೆಟ್ಟುವುದು ಸರಿಯೇ? ಪ್ರವಾಹ ಏಕಕಾಲಕ್ಕೆ ನಿಯಂತ್ರಿತ ವಿದ್ಯುತ್ತಿಗಾಗಿ ತಡೆದು ನಿಲ್ಲುವ, ದೂರದೂರಿನ ದಾಹಕ್ಕಾಗಿ ಹರಿದು ಹೋಗುವ ಸಾಧ್ಯತೆ ಶುದ್ಧ ವಿರೋಧಾಭಾಸ ಮತ್ತು ಅಪ್ರಾಯೋಗಿಕವೇ ಸರಿ.

ಕಿರು ಜಲವಿದ್ಯುತ್ ಯೋಜನೆಗಳೆಲ್ಲ ಮಳೆಗಾಲದ ಹೆಚ್ಚಿನ ಹರಿವನ್ನೇ ನೆಚ್ಚಿ ಬಂದಂಥವು. ಆ ನೀರೇ ನದಿ ತಿರುವಿನ ಯೋಜನೆಗೆ ಸಿಕ್ಕಿ ಸಹಜಪಾತ್ರೆ ದೂರವಾದರೆ ಕೊಳವೆಯೊಳಗೆ ನೀರು ಪಂಪ್ ಮಾಡಲು ವಿದ್ಯುತ್ ಶಕ್ತಿ ಎಲ್ಲಿದೆ? ಮೊದಲೇ “ವಿದ್ಯುಚ್ಛಕ್ತಿ ಬರ ಅನುಭವಿಸುತ್ತಿರುವ ರಾಜ್ಯದಲ್ಲಿ ಎತ್ತಿನ ಹೊಳೆಯ ಪಂಪುಗಳಿಗೆ ವಿದ್ಯುತ್ ಎಲ್ಲಿಂದ” ಎನ್ನುವ ಪ್ರಶ್ನೆಗೆ ಸರಕಾರ ಸಮರ್ಪಕವಾಗಿ ಉತ್ತರಿಸಿಲ್ಲ. ಈಗ ಇರುವ ಅಲ್ಪಾವಕಾಶಗಳನ್ನೂ ಕಳೆದುಕೊಂಡು ಹೆಚ್ಚಿನ ವಿದ್ಯುತ್-ಬರ ಕಾಣುವುದು ಸಾಧುವೇ?

ಬಂಟ್ವಾಳದ ಬಳಿಯ ನೇತ್ರಾವತಿಯಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯಕ್ಕೆ ನೀರೊಯ್ಯುವಲ್ಲಿ ಹಾಕಿದ ಭಾರೀ ಗಾತ್ರದ ಕೊಳವೆಗಳನ್ನು ಹಿಂದೆ ಗೆಳೆಯ ಸುಂದರರಾವ್ ಪ್ರಶ್ನಿಸಿದ್ದರು. ವಾಸ್ತವದಲ್ಲಿ ಇಲಾಖೆ ತನಗೆ ಪ್ರದಾನವಾದ ನೀರಿನ ಮೊತ್ತವನ್ನು ಮೀರಿ, ಅಂದರೆ ನದಿಯಲ್ಲಿ ಅನ್ಯ ಬಳಕೆಗೆಂದೇ ಲೆಕ್ಕ ಪತ್ರದಲ್ಲುಳಿಸಿದ ನೀರನ್ನು ಕದ್ದು ಸಾಗಿಸುವ ಹುನ್ನಾರ ಅಲ್ಲಿ ಹುದುಗಿತ್ತು. ಈಗ ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಕಲಾಪಗಳು – ಮುಖ್ಯವಾಗಿ ಅಗಾಧ ಗಾತ್ರದ ಕೊಳವೆಗಳು, ಇಂಥದ್ದೇ ವಂಚನೆಯ ಸಂಚಿನವು.

“ಒಮ್ಮೆ ಎತ್ತಿನಹೊಳೆ ಜ್ಯಾರಿಗೆ ಬರಬೇಕು. ಅನಂತರ, ವಾಸ್ತವದಂತೆ ಅಲ್ಲಿನ ನೀರಿನ ಕೊರತೆಯನ್ನು ಮುಂದೆ ಮಾಡಿ, ಮುಂದಿನ ಹಂತವಾಗಿ ಕುಮಾರಧಾರೆ ಮತ್ತು ಇತರ ಪಶ್ಚಿಮವಾಹಿನಿ ಜಲಮೂಲಗಳನ್ನು ಕೇಳಿದರಾಯ್ತು” ಎಂಬ ಮುಂದಾಲೋಚನೆಯೇ ಕೊಳವೆಯ ಗಾತ್ರ ನಿರ್ಧರಿಸಿದರಬೇಕು! ವಿಲ್ಯಂ ಟೆಲ್ಲನ ಕತೆ ನೆನಪಿಸಿಕೊಳ್ಳಿ. ರಾಜ ತನ್ನ ಸಮಕ್ಷಮದಲ್ಲೇ ಪರಿಣತ ಬಿಲ್ಗಾರ ಟೆಲ್ಲನಿಗೆ ಶಿಕ್ಷೆ ಹೇರಿದನಂತೆ. ಬಾಣವೊಂದರ ಪ್ರಯೋಗದಿಂದ ಸ್ವಂತ ಮಗನ ತಲೆಯ ಮೇಲಿನ ಸೇಬು ಸೀಳಬೇಕು. ಟೆಲ್ ಮುಂದಾಗಿ ಎರಡು ಬಾಣ ಸಂಗ್ರಹಿಸಿಕೊಂಡನಂತೆ. ಉತ್ತರ ಸರಳ – ಭಾವ ಪರವಶತೆಯಲ್ಲಿ ಮೊದಲ ಬಾಣ ಗುರಿ ತಪ್ಪಿದರೆ, ಎರಡನೇ ಬಾಣ ನಿಶ್ಚಿತ ಗುರಿ ಸೇರುತ್ತದೆ; ರಾಜನ ಕತ್ತಿಗೆ! ಇಲ್ಲೂ ಹಾಗೇ. ಎತ್ತಿನಹೊಳೆಯಲ್ಲಿ ಸೋತದ್ದನ್ನು ಕುಮಾರಧಾರೆ ಮತ್ತಿತರ ಹೊಳೆಗಳಲ್ಲಿ ತುಂಬಿಕೊಳ್ಳುವ ಕಪಟ. ಇದು ತಂತ್ರಜ್ಞರ, ಅಧಿಕಾರಿಗಳ ಮಟ್ಟದ ವಂಚನೆಯಾದರೆ ಜನಪ್ರತಿನಿಧಿಗಳ ಮತ್ತು ದಿನದಿನಕ್ಕೆ ಏರುತ್ತಿರುವ `ವಿರೋಧೀ ಅಲೆ’ಯಲ್ಲಿ ಮೀಯುತ್ತಿರುವ ಎಷ್ಟೋ `ಹೋರಾಟಗಾರರ’ ಹುನ್ನಾರಗಳೂ ಕಣ್ಣಲ್ಲಿ ಎಣ್ಣೆ ಹಾಕಿ ನೋಡುವಂಥವೇ.

ಎತ್ತಿನಹೊಳೆ ಯೋಜನೆಯ ಹುಟ್ಟು ಬೆಳವಣಿಗೆ ರಾಕ್ಷಸ ಸದೃಶವಾದದ್ದು. ಯಡ್ಯೂರಪ್ಪನವರ ಅರಸೊತ್ತಿಗೆಯ ಕಾಲವದು. ಗುಂಡ್ಯ ೨೦೦ ಮೆಗಾವಾಟ್ ವಿದ್ಯುತ್ ಯೋಜನೆಯನ್ನು `ಕ್ರಮವತ್ತಾಗಿ’ ಭೂಮಿಗಿಳಿಸುವ ಸಾಹಸ ನಡೆಸಿದರು. ಆದರೆ ಮೊದಲು ಅದರಲ್ಲಿ ಎಲ್ಲಿಗೋ ತಯಾರಿಸಿದ ಪರಿಸರ ವರದಿಯನ್ನು ತನ್ನದೆಂಬಂತೆ ಅಂಟಿಸಿಕೊಂಡದ್ದನ್ನು ಪರಿಣತರು ಗೇಲಿ ಮಾಡಿದರು. ಪ್ರತಿಯಾಗಿ ಪರಿಸರದ ಜನಾಭಿಪ್ರಾಯ ಸಂಗ್ರಹವೆನ್ನುವ ನಾಟಕವನ್ನು ತಮಗೆ ಬೇಕೆನ್ನುವಂತೆ ತಿರುಚಿಕೊಂಡರು. ಸಿಡಿದೆದ್ದ ಜನಾಂದೋಲವನ್ನು ಪೋಲಿಸ್ ಬಲದಲ್ಲಿ ಹತ್ತಿಕ್ಕಿ, ಯೋಜನೆಗೆ ಅಡಿಪಾಯವನ್ನು ಸ್ವತಃ ಯಡ್ಯೂರಪ್ಪನವರೇ ಹಾಕಿದರು. ಆದರೆ ಅವರ ದುರದೃಷ್ಟಕ್ಕೆ ಬಂದ ಕೇಂದ್ರ ಸರಕಾರದ ಚಬುಕೇಟಿಗೆ ಇವರು ರಾತ್ರಿ ಹಗಲಾಗುವುದರೊಳಗೆ ಎಲ್ಲ ಹಿಂದೆಗೆದು, ಸ್ವಂತ ಬೂಟು ನೆಕ್ಕುವ ಸ್ಥಿತಿಗಿಳಿದರು. ಆಗ ಅವಸರದಲ್ಲಿ, ಕೇಂದ್ರ ಸರಕಾರದ ಅಧಿಕಾರದ ವ್ಯಾಪ್ತಿಗೆ ಬರದ, ಕುಡಿ-ನೀರಿನ ಯೋಜನೆಯ ಹೆಸರಿನಲ್ಲಿ ಹೊಸೆದ ಯೋಜನೆ ಎತ್ತಿನಹೊಳೆ ನದಿ ತಿರುವು. ಅದನ್ನು ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಕಾಂಗ್ರೆಸ್ಸಿನ ವಿರುದ್ಧದ ಭಾಜಪದ ಯುದ್ಧ ತಂತ್ರ – ಕೋಲಾರ, ಚಿಕ್ಕಬಳ್ಳಾಪುರದವರಿಗೆ ಕುಡಿ-ನೀರಿನ ಮಂತ್ರ! ಮುಂದೆ ಚುನಾವಣಾ ಕಾಲ ಬಂತು. ಪ್ರಾಮಾಣಿಕ ಜನಪರ ಕೆಲಸದ ಮೂಲಕ ಸ್ವಯಾರ್ಜನೆಯ ಸ್ವಂತ ಕ್ಷೇತ್ರವೆಂದು ಹೇಳಿಕೊಳ್ಳುವಲ್ಲಿ ಎಂದೂ ಯಶಸ್ವಿಯಾಗದ ಮೊಯ್ಲಿಯವರಿಗೆ ಚಿಕ್ಕಬಳ್ಳಾಪುರ ಸಿಕ್ಕಾಗ ಅನಿವಾರ್ಯವಾಗಿ ನೆಚ್ಚಿದ ತಾರಕ ಮಂತ್ರವೂ ಎತ್ತಿನಹೊಳೆ. ಇನ್ನೊಂದು ಮುಖದಲ್ಲಿ `ಪಕ್ಷದ ಸೊತ್ತು’ ಎಂಬಂತೆ ಜಗದೀಶ ಶೆಟ್ಟರೂ ಸದಾನಂದ ಗೌಡರೂ ಎತ್ತಿನಹೊಳೆಯನ್ನು ಎತ್ತಿ ಕುಣಿಯುತ್ತಲೇ ಇದ್ದರು! ಮುಂದುವರಿದ ಸ್ಥಿತಿಯಲ್ಲಿ ಕೇಂದ್ರ, ರಾಜ್ಯಗಳ ಪಕ್ಷ ಅದಲು ಬದಲಾದವು. ಜತೆಗೇ ಚುನಾವಣಾ ಹೊಂದಾಣಿಕೆ ಮತ್ತು ಆಯ್ಕೆಗೊಂಡ ಜನಪ್ರತಿನಿಧಿಗಳ ಸ್ಥಾನಗೌರವಗಳು, ವೈಯಕ್ತಿಕ ನೆಲೆಯಲ್ಲಿ ಸಂಕೀರ್ಣ ಲೆಕ್ಕಾಚಾರಗಳನ್ನೇ ಹೇರಿದುವು; ಸರಳ ಮಾತುಗಳ ಬದಲು ಒಗಟುಗಳು ಹೆಚ್ಚಿದುವು. ಜಿಲ್ಲೆಯೊಳಗಿನ ಸಾರ್ವಜನಿಕ ಕಲಾಪಗಳಲ್ಲೆಲ್ಲ ಯಾವುದೇ ಜನಪ್ರತಿನಿಧಿ ನೇರ ಸಮಸ್ಯೆಯನ್ನು ಉತ್ತರಿಸುವುದೇ ಇಲ್ಲ, ತತ್ಕಾಲೀನ ಮುಖವುಳಿಸಿಕೊಳ್ಳಲು ತಿಣುಕಾಡುವುದೇ ಹೆಚ್ಚು!

ಇಂದಿನ ಭಾಜಪ ಜನಪ್ರತಿನಿಧಿಗಳು ಮೊದಲು ಪಕ್ಷನಿಷ್ಠೆಯಿಂದಾಗಿ ಯೋಜನಾ ವಿರೋಧಿಗಳೊಡನೆ ಗುರುತಿಸಿಕೊಳ್ಳಲು ಹೆದರಿದ್ದರು. ಸಂಸತ್ಸದಸ್ಯ ನಳಿನ್ ಕುಮಾರ್ ಕಟೀಲ್, ಇನ್ನೂ “ಎತ್ತಿನಹೊಳೆ ನೇತ್ರಾವತಿಯಲ್ಲ” ಎಂಬ ಮಹಾಸುಳ್ಳಿಗೆ ಅಂಟಿಕೊಂಡೇ ಇರುವ ಕೇಂದ್ರ ಸಚಿವ ಸದಾನಂದ ಗೌಡರನ್ನು ಎದುರು ಹಾಕಿಕೊಳ್ಳಲು ಬಯಸಲಿಲ್ಲ. ಹಾಗೆ ಬಂದ ಅವರ ಹೇಳಿಕೆ ನಿಜಕ್ಕೂ ದೊಡ್ಡ ನಗೆಹನಿ! ಉಪ್ಪಿನಂಗಡಿಯಲ್ಲಿ ದಿನೇಶ ಹೊಳ್ಳ, ನಿರಂಜನ ರೈ ಬಳಗ ದೊಡ್ಡ ಮಟ್ಟದಲ್ಲಿ ಹೆದ್ದಾರಿ ಬಂದ್ ಘೋಷಿಸಿದ ಕಾಲದಲ್ಲಿ ನಳಿನ್ ಹೇಳಿದ್ದೇನು – “ನಾನು ವ್ಯಕ್ತಿಯಾಗಿ ನಿಮ್ಮೊಂದಿಗಿದ್ದೇನೆ”! ಜನಪ್ರತಿನಿಧಿತ್ವದ ಹೊಣೆಯನ್ನೇ ನಿರಾಕರಿಸುವುದಕ್ಕಿಂತ ಅವರು ಸದಸ್ಯತನಕ್ಕೆ ರಾಜೀನಾಮೆ ಕೊಡುವ ಮಾತಾಡಿದ್ದರೆ ತೂಕ ಹೆಚ್ಚುತ್ತಿತ್ತು.

ಮುಂದುವರಿದ ಸ್ಥಿತಿಯಲ್ಲಿ ಭಾಜಪ ತನ್ನ ಸಂಸತ್ಸದಸ್ಯ ನಳಿನ್ ಕುಮಾರ್ ಕಟೀಲ್ ಪರವಾಗಿ ಎನ್ನುವಂತೆ, ಮೂರ್ನಾಲ್ಕು ದಿನಗಳ ನಡಿಗೆ ಹಮ್ಮಿಕೊಂಡಿತು. ಈ `ಸರ್ಕಸ್ಸಿನ’ ಆರಂಭ ನೋಡಲು ನಾನು ನಾಗುರಿಗೆ ಹೋಗಿದ್ದೆ. `ಬರಗಾಲ ಎಲ್ಲರೂ ಪ್ರೀತಿಸುತ್ತಾರೆ’ ಬರೆದ ಸಾಯಿನಾಥ್ ಮತ್ತೆ ನೆನಪಿಗೆ ಬಂದರು. ಪುಡಾರಿಗಳು (ಸರ್ವಸಂಗ ಪರಿತ್ಯಾಗೀ ಬಹುತೇಕ ಕಾವೀಧಾರಿಗಳೂ!) ಬರ ಎಂದಲ್ಲ, ಯಾವುದೇ ಗೊಂದಲ ಉತ್ತುಂಗಕ್ಕೇರುವುದನ್ನೇ ಬಯಸುತ್ತಾರೆ ಎನ್ನುವುದಕ್ಕೆ ಈ ನಡಿಗೆ ಸ್ಪಷ್ಟ ನಿದರ್ಶನವಾಗಿದೆ. ಎತ್ತಿನಹೊಳೆಯ ಹೆಸರು ಹೇಳಿ ಯೋಜನೆಗೆ ಪ್ರೇರಣೆ ಕೊಟ್ಟ ಯಡ್ಯೂರಪ್ಪ, ಚಾಲನೆ ಕೊಟ್ಟ ಸದಾನಂದ ಗೌಡರನ್ನು ಭಾಜಪ ಹೊರಗೆ ಹಾಕಿಲ್ಲ. ಇತ್ತ ಯೋಜನೆಯ ತಾಂತ್ರಿಕ ಪೊಳ್ಳಿನ ಅರಿವೂ ಇಲ್ಲದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭಾಜಪ ಎತ್ತಿನಹೊಳೆ ಹೋರಾಟವನ್ನೂ ನಡೆಸುತ್ತದೆ! ವಾಸ್ತವದಲ್ಲಿ ಇಲ್ಲಿ ನಡೆದದ್ದು ಕೇವಲ ಪ್ರಾದೇಶಿಕ ಮತದಾರರನ್ನು ಓಲೈಸುವ ಕಸರತ್ತು. ಹೆಜ್ಜೆ ಹೆಜ್ಜೆಗೆ ವೈವಿಧ್ಯಮಯ ಬ್ಯಾನರ್, ಹೋರ್ಡಿಂಗ್, ನಾಸಿಕ್ ಬ್ಯಾಂಡ್, ಚಂಡೆ ಮೇಳ, ಘೋಷಣೆಗಳಿಗೆ ಮೈಕ್‌ಯುಕ್ತವಾದ ವಾಹನವೂ ಸೇರಿದಂತೆ ಅಸಂಖ್ಯ ವಾಹನಗಳ ಬೆಂಬಲದಲ್ಲಿ ಮೆರೆದದ್ದು ಭಾಜಪ ಒಂದೇ. “ಪಕ್ಷಾತೀತವಾಗಿ ಜಾತ್ಯಾತೀತವಾಗಿ” ಎಂಬೆಲ್ಲಾ ಘೋಷಣೆಗಳೊಡನೆಯೇ ಭಾಗಿಗಳೆಲ್ಲರೂ ಧರಿಸಿದ್ದು ಕೇಸರಿ ಟೊಪ್ಪಿ!

ಜಿಲ್ಲೆಯೊಳಗೆ ಕಾಂಗ್ರೆಸ್ ಪಕ್ಷಕ್ಕೂ ಇದೇ ರೀತಿಯ ಇಬ್ಬಂದಿ. ಜಿಲ್ಲೆಯ ಹೊರಗೆ ಈ ಹೊಳೆಯನ್ನು ಹೆಸರಿಸಿಯೇ ಮತ ಬಾಚಿದಾತ ಸ್ವಪಕ್ಷೀಯ ವೀರಪ್ಪ ಮೊಯ್ಲಿ ಎಂಬ ದಾಕ್ಷಿಣ್ಯ. ಯು.ಟಿ. ಖಾದರ್ಗೆ ಶಾಸಕತನ ಇಲ್ಲಿನದೇ ಆದರೂ ಎತ್ತಿನಹೊಳೆ ಯೋಜನೆಯ ಫಲಾನುಭವಿ ಜಿಲ್ಲೆ – ಕೋಲಾರ, ಉಸ್ತುವಾರಿ ವ್ಯಾಪ್ತಿಯದು. ಅಲ್ಲದೆ ಮತ್ತೋರ್ವ ಪ್ರತಿನಿಧಿ ರಮಾನಾಥ ರೈಯೊಡನೆ ಸರಕಾರದ ಪ್ರತಿನಿಧಿತ್ವವನ್ನೂ ಅಲ್ಲಗಳೆಯಲಾಗದ ಮಂತ್ರಿಪದ. ಇವೆಲ್ಲಕ್ಕೂ ಮುಖ್ಯವಾಗಿ, ಬದಲಿದ ಪರಿಸ್ಥಿತಿಯಲ್ಲಿ ರಾಜ್ಯಾಡಳಿತ ಕಾಂಗ್ರೆಸ್ಸಿಗೆ ಒದಗಿದ್ದು. ಮೂಲ ಯೋಜನೆ ಭಾಜಪದ್ದಾದರೇನು, ಯೋಜನೆ `ಫಲಕಾರೀ’ ಎಂಬುದನ್ನು ಅವರೂ ಅರಿತವರೇ. ಜತೆಗೇ ಇದಕ್ಕೆ ದಕ ಜಿಲ್ಲೆಯೊಂದನ್ನುಳಿದು ಇನ್ನೆಲ್ಲೂ ವಿರೋಧ ಬಾರದೆಂಬ ಹುಂಬತನ. ಎರಡೂ ಪಕ್ಷಗಳ ಈ ಒಳಸುಳಿಗಳು ಯಾವ ನೆಲೆಯಲ್ಲೂ ಯೋಜನೆಯ ನಿಜ-ಮೌಲ್ಯಾಧಾರಿತವಲ್ಲ ಎನ್ನುವುದು ಮಂಗಳೂರಿನಲ್ಲಿ ದಿನೇಶಹೊಳ್ಳರ ಬಳಗದವರು ಏರ್ಪಡಿಸಿದ ಸಾರ್ವಜನಿಕ ವಿಚಾರಣೆಯಲ್ಲಿ ಸ್ಫುಟವಾಯ್ತು.

ದಿನೇಶ ಹೊಳ್ಳರ ಬಳಗ ಜಿಲ್ಲೆಯ ಹದಿಮೂರು ಜನಪ್ರತಿನಿಧಿಗಳಿಗೆ ಸಾಕಷ್ಟು ಮುಂಚಿತವಾಗಿ ಎತ್ತಿನಹೊಳೆ ಯೋಜನೆಯ ಕುರಿತು ಹತ್ತು ಮುದ್ರಿತ ಪ್ರಶೆಗಳನ್ನು ಕಳಿಸಿಕೊಟ್ಟಿತು. ಹಾಗೇ ನಿಗದಿತ ದಿನದಂದು ಸಾರ್ವಜನಿಕರೆದುರು ಅವಕ್ಕೆ ಖಚಿತ ಉತ್ತರವನ್ನು ನೀಡಲು ಸೂಚಿಸಿ ಎಲ್ಲವನ್ನೂ ಸಾರ್ವಜನಿಕಗೊಳಿಸಿತ್ತು. ನಿಗದಿತ ದಿನದಂದು ಹದಿಮೂರೂ ಪ್ರತಿನಿಧಿಗಳು ಮಂಗಳೂರಿನ ಸಮೀಪವೇ ಇದ್ದರೂ ತಪ್ಪಿಸಿದವರೇ ಹೆಚ್ಚು. ಬಂದವರಾದರೂ ಒಂದೂವರೆ ಎರಡು ಗಂಟೆ ವಿಳಂಬಿಸಿಯೇ ಹಾಜರಾದರು. ಅವರಲ್ಲಿ ಮೊದಲು ಬಂದ ಮೂವರು ಭಾಜಪದವರು. ಅವರಿಗೆ ಆಗಲೇ ರಸ್ತೆತಡೆ ಚಳವಳಿಯಲ್ಲಿ ಭಾಗಿಯಾದ ಮತ್ತು ಸ್ವತಂತ್ರವಾಗಿ ಪಾದಯಾತ್ರೆ ನಡೆಸಿದ ಕಳ್ಳಧೈರ್ಯ ಸೇರಿತ್ತು. ಆದರೂ ಅಂಗಾರ ಬಾಯಿ ಬಿಡಲೇ ಇಲ್ಲ. ನಳಿನ್ ಕುಮಾರ್ ಜಾಣತನದಲ್ಲಿ ಇಬ್ಬರ ವಕಾಲತನ್ನೂ ಗಣೇಶ್ ಕರ್ಣಿಕ್ ಅವರಿಗೆ ವಹಿಸಿಬಿಟ್ಟರು. ಕರ್ಣಿಕ್ ಆದರೂ ಪ್ರತಿನಿಧಿಯಾಗಿ ತಾನು/ತಾವು ನಡೆಸುವ ಕಾರ್ಯಾಚರಣೆಯನ್ನು ತೇಲಿಸಿ, ಎತ್ತಿನಹೊಳೆ ಯೋಜನೆ ವಿರೋಧಿಗಳಿಗೆ ಪೂರ್ಣ ಬೆಂಬಲ ಘೋಷಿಸಿ ಜಾರಿಕೊಂಡರು. ಮತ್ತೂ ತಡವಾಗಿ ಬಂದವರು ಯು.ಟಿ. ಖಾದರ್ ಮತ್ತು ಮೊಯ್ದಿನ್ ಬಾವ. ಇಲ್ಲಿ ಮೊಯ್ದಿನ್ ಕೂಡಾ ನಳಿನ್ ಕುಮಾರ್ ಜಾಣತನವನ್ನೇ ಪ್ರದರ್ಶಿಸಿ ಖಾದರರಿಗೆ ವಕಾಲತ್ತು ಕೊಟ್ಟರು. ಖಾದರ್ ಹೇಳಿದ್ದೇನು “ನಾವು ಹೆಡ್ಡರು. ನಮಗೆ ತಾಂತ್ರಿಕ ವಿಚಾರ ಅರ್ಥವಾಗುವುದಿಲ್ಲ! ಹಾಗಾಗಿ….” (ಮತಯಾಚನೆಯ ಸಮಯದಲ್ಲಿ ಈ ಪ್ರಾಮಾಣಿಕತೆ ಬಂದೀತೇ?) ಪ್ರಶ್ನೆಗಳಿಗೆ ಅಧೀನ ಅಧಿಕಾರಿಗಳಿಂದ ಬರವಣಿಗೆಯಲ್ಲಿ ಉತ್ತರವನ್ನು ಬರೆಸಿಕೊಂಡೇ ತಂದಿದ್ದರು. ಆದರೆ `ಪಾಟೀ ಸವಾಲು’ಗಳಲ್ಲಿ ಅದು ತನ್ನ ಉತ್ತರವೆಂದೋ ಸರಕಾರದ ನಿಲುವೆಂದೋ ಸಮರ್ಥಿಸಿಕೊಳ್ಳುವಲ್ಲಿ ಸೋತರು.

ಸಾರ್ವಜನಿಕರನ್ನು ಈ ವಿಚಾರದಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಬಹಿರಂಗ ವಿರೋಧಗಳು, ಅಂದರೆ – ಉಪನ್ಯಾಸ, ಲೇಖನ, ಘೋಷಣೆಗಳು, ಕರಪತ್ರಗಳು, ರಸ್ತೆ ತಡೆಯಾದಿ ಚಳವಳಿಗಳು ಸರಿ. ಆದರೆ ಎಲ್ಲವನ್ನೂ ಜನಪರ ಸರಕಾರ ಪ್ರಜಾಸತ್ತಾತ್ಮಕ ಎಂಬ ತೋರಿಕೆಯಲ್ಲೇ ಜ್ಯಾರಿಗೊಳಿಸುತ್ತಿರುವಾಗ ನ್ಯಾಯಿಕ ಹೋರಾಟ ಒಂದೇ ನಿಜ ಮೋಕ್ಷದಾಯಿ. ಇಂದು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವ ವಿಚಾರಪರರು ಇದನ್ನು ಮರೆಯಕೂಡದು. ಈ ವಿಚಾರಪರತೆಯಲ್ಲಿ ಯೋಜನೆಯ ಫಲಾನುಭವಿಗಳೆಂದೇ ನಾಮಾಂಕಿತವಾದ ಜಿಲ್ಲೆಯವರೂ ಸಾಕಷ್ಟಿದ್ದಾರೆ. ಹಸುರು ನ್ಯಾಯಾಧಿಕರಣದೆದುರು ಎತ್ತಿನಹೊಳೆ ಯೋಜನೆಯ ಅವೈಜ್ಞಾನಿಕತೆಯನ್ನು ಮಂಡಿಸಿ ಅಲ್ಪ ಯಶಸ್ಸನ್ನಾದರೂ ಮೊದಲಿಗೆ ಗಳಿಸಿದ ಯತೀಶ್ ತುಮಕೂರಿನವರು. ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ನಮ್ಮ ಚಳವಳಿಗಳು ರೂಪುಗೊಳ್ಳಬೇಕು. ಎಲ್ಲ ಹಾಗಾಗುತ್ತಿಲ್ಲ ಎನ್ನುವುದನ್ನೂ ವಿಷಾದಪೂರ್ವಕವಾಗಿ ನಾನಿಲ್ಲಿ ಹೇಳಲೇಬೇಕು.

ನೇತ್ರಾವತಿ ದಕ ಜಿಲ್ಲೆಯದು, ಸ್ವತಂತ್ರ ತುಳುನಾಡು, ಗಾಳಿ ನೀರು ಮಣ್ಣು ಮುಂತಾದ ಪ್ರಾಕೃತಿಕ ಕೊಡುಗೆಗಳನ್ನು ಭಾವನಾತ್ಮಕ ನೆಲೆಯಲ್ಲಿ ಗುರುತಿಸುವುದರಲ್ಲಿ ತಪ್ಪಿಲ್ಲ. ಆದರೆ ಅವನ್ನು ಆರಾಧ್ಯ ಮಟ್ಟಕ್ಕೇರಿಸುವುದು ಅಥವಾ ಅನ್ಯ ಸಾಮಾಜಿಕ ಬಣಗಳೊಡನೆ ಹೋರಾಟದ ವಸ್ತುವಾಗಿಸುವುದು ತಪ್ಪೇ ತಪ್ಪು. ಆ ಲೆಕ್ಕದಲ್ಲಿ ಎಷ್ಟು ಸಾಂಕೇತಿಕವೆಂದೇ ನಡೆಸಿದರೂ ರಸ್ತೆ ತಡೆ, ಬಂದ್, ಬೊಬ್ಬೆ ಸಹಿತವಾದ ಮೆರವಣಿಗೆ ಮುಂತಾದವುಗಳು ಎಂದೂ ಅಶಾಂತಿಗೆ ದಾರಿಯಾಗಬಲ್ಲವು. ಹಾಗಾಗಿ ಅವನ್ನು ನಾನು ಎಂದೂ ಒಪ್ಪಿದವನಲ್ಲ. ನೆಲಕ್ಕೊಂದು ಮೂರ್ತಿರೂಪ ಕೊಟ್ಟು (ಉದಾ: ಕನ್ನಡ ಭುವನೇಶ್ವರಿ), ನೀರಿಗೊಂದು ದೇವತ್ವ ಕಲ್ಪಿಸಿ (ಉದಾ: ಗಂಗಾಪೂಜೆ) ವಿಧಿ ನಿಷೇಧಗಳನ್ನು ಹೇರುವುದನ್ನೂ ನಾನು ಒಪ್ಪಿದವನಲ್ಲ. ನಮಗೆ ಬೇಕಾದದ್ದು ಪಾರಿಸರಿಕ ಪ್ರಜ್ಞೆ, ಜಲಜಾಗೃತಿ. ಇಂದು ಊರೂರಿನ ಕೊಳಚೆಗಳನ್ನೆಲ್ಲ ಕೆರೆ ನದಿ ಸಮುದ್ರಕ್ಕೆ ಬಿಟ್ಟು ಪರ್ವ ಕಾಲಗಳಲ್ಲಿ ಅದೇ ನೀರಿಗೆ ಮಾಡುವ ಅಭಿಷೇಕ, ಆರತಿ, ಬಾಗಿನಗಳೆಲ್ಲಾ ಗೌರವ ಅಥವಾ ಶುದ್ಧೀಕರಣ ಕ್ರಿಯೆ ಎನ್ನುವುದು ಅಪ್ರಾಮಾಣಿಕತೆ. ಖಾಲಿ ಜಾಗ ಕಂಡಲ್ಲೆಲ್ಲಾ ಕೊಳೆಯದ್ದು, ವಿಷ ಎಂದಿತ್ಯಾದಿ ಯೋಚಿಸದೇ ಕಸ ತುಂಬುವ ನಾಗರಿಕತೆ ವಾಸ್ತು, ಭೂಮಿಪೂಜೆ ಎಂದೆಲ್ಲಾ ಹಾರಾಡುವುದು ಶುದ್ಧಾಂಗ ಢೋಂಗಿ. ಒಟ್ಟು ಸಾಮಾಜಿಕ ಹಿತದ ಫಲಿತಾಂಶವನ್ನು ಮೀರಿದ ಪ್ರತಿಭಟನೆಗಳು ಮನೋವಿಕಾರಗಳು. ಈ ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಪುರಭವನದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆ, ಉಳ್ಳಾಲಕ್ಕೆ ಹಮ್ಮಿಕೊಂಡ ಸೈಕಲ್ ಅಭಿಯಾನಗಳಲ್ಲಿ ನಾನು ಭಾಗಿಯಾಗಿದ್ದೆ.

ಬಂದ್ ರಸ್ತೆ ತಡೆಗಳಿಗೆ ವಿರೋಧವನ್ನೇ ಹೇಳಿದ್ದೆ. ಎತ್ತಿನಹೊಳೆಗೆ ಮೋಟಾರ್ ಸೈಕಲ್ ರ್ಯಾಲೀ ಎಂದಾಗ “ಇದು ಜಲಜಾಗೃತಿಯನ್ನು ಹಾರೈಸಬೇಕಾದವರು ವಾಯುಮಾಲಿನ್ಯ ಮತ್ತು ಮಿತಿಯುಳ್ಳ ಪ್ರಾಕೃತಿಕ ಸಂಪತ್ತಿನ (ಪೆಟ್ರೋಲ್) ಅವಹೇಳನ ಮಾಡಬಾರದು ಎಂದೇ ಹೇಳಿದ್ದೆ. ಹಸಿರು ನ್ಯಾಯಾಧಿಕರಣ ಅಥವಾ ಸುಪ್ರೀಂ ಕೋರ್ಟಿನಲ್ಲೋ ನಾಳೆ ಎತ್ತಿನಹೊಳೆ ಯೋಜನೆ ಸೋಲುವುದು ನಿಶ್ಚಯ. ಪ್ರಜಾಸತ್ತೆಯ ಮತದ ಬಲವನ್ನು ಹಣ, ಹೆಂಡ, ಸೀರೆ ಮುಂತಾದವುಗಳ ಮಾನಕದಲ್ಲಿ ಅಳೆಯುವ ತಪ್ಪು ಈಗಲೂ ನಡೆದಿದೆ. ಹಾಗೇ ನಾಳೆ ಎತ್ತಿನಹೊಳೆಯ ಪಾರಿಸರಿಕ ಜಯವನ್ನು ಕಳೆದ ದುಡಿಮೆಯ ದಿನಗಳ, ನಷ್ಟಿಸಿದ ಸಾರ್ವಜನಿಕ ಸೊತ್ತುಗಳ, ವೃಥಾಗಳಿಸಿದ ಸಾವು ನೋವುಗಳ, ಹೊಡೆದ ಬೊಬ್ಬೆಗಳ ಬಲಕ್ಕೆ ಆರೋಪಿಸುವಂತಾಗದಿರಲಿ ಎಂದೇ ಹಾರೈಸುತ್ತೇನೆ.