(ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ)

ಅಶೋಕವರ್ಧನ: ಕಳೆದ ವಾರದ ಕಥನದಲ್ಲಿ ಗಿರೀಶ್ ಪಾಲಡ್ಕ ತಂಡ ಕೊಲ್ಕೊತ್ತಾದಿಂದ ಡಾರ್ಜಿಲಿಂಗ್ ಸೇರಿದ್ದನ್ನು ನೀವು ಓದಿದ್ದೀರಿ/ ಕೇಳಿದ್ದೀರಿ. ಜತೆಗೇ ಗಿರೀಶರಿಂದಲೂ ಸುಮಾರು ಒಂದೂವರೆ ದಶಕದ ಹಿಂದೆ ನಾನೂ ಡಾರ್ಜಿಲಿಂಗಿಗೆ ಕೊಟ್ಟ ಪ್ರಥಮ ಭೇಟಿ ಮತ್ತು ಪಲಾಯನದ ಕಥನವೂ ನಿಮ್ಮ ಅನುಭವಕೋಶಕ್ಕೆ ಸೇರಿದ್ದಾಗಿದೆ. ಮುಂದುವರಿದು ೧೯೯೦ರ ದಶಕದಲ್ಲಿ ನಾನೊಂದು ಮೋಟಾರ್ ಸೈಕಲ್ ತಂಡ ಕಟ್ಟಿ ಭಾರತ ಸುತ್ತುವುದರ ಭಾಗವಾಗಿ ಕೊಲ್ಕೊತ್ತಾದಿಂದಲೇ ಹೊರಟದ್ದನ್ನೂ ಹೇಳಿದ್ದೇನೆ. ಅದರಲ್ಲಿ ರಾತೋರಾತ್ರಿ ಕೊಲ್ಕತ್ತಾ – ಸಿಲಿಗುರಿ ಪಯಣಿಸಿದ ಗಿರೀಶರ ಬಳಗಕ್ಕಿಂತ ವಿರಾಮದಲ್ಲಿ ನಾವೂ ಸಿಲಿಗುರಿ ತಲಪಿದ್ದು, ಮಹಾನಂದ ವನಧಾಮದಲ್ಲಿ ತಂಗಿದ್ದನ್ನೂ ಹಿಂದಿನ ಅಧ್ಯಾಯದಲ್ಲೇ ಹೇಳಿದ್ದಾಗಿದೆ. ಅಲ್ಲಿಂದ ಮರು ಬೆಳಿಗ್ಗೆ…

ಬೆಳಿಗ್ಗೆ ವನಸಂಚಾರದ ಭ್ರಮೆ ಮೊದಲು ಪೂರೈಸಿಕೊಂಡೆವು. ಫಲಿತಾಂಶ ಹಿಂದೆ ಹೇಳಿದ್ದೇ – ನಿರಾಶೆ. ಅಲ್ಲಿಂದ ಡಾರ್ಜಿಲಿಂಗ್ ಪೇಟೆ ಸುಮಾರು ಎಂಬತ್ತು ಕಿಮೀಯ ಬಹುತೇಕ ಕಟ್ಟೇರು ದಾರಿ. ಸಾಲದ್ದಕ್ಕೆ ನಾವು ಕೊಲ್ಕೊತ್ತ ಬಿಟ್ಟಂದಿನಿಂದ ಮಳೆ ಪ್ರತಿ ಸಂಜೆ ಬರುತ್ತಿತ್ತು. ಬೆಟ್ಟ ಸಮೀಪಿಸಿದ್ದಕ್ಕೋ ಏನೋ ಅಲ್ಲಿ ಅಂದಂತು ಬೆಳಿಗ್ಗೆಯೇ ವಾತಾರಾವಣ ವ್ಯಗ್ರನಾಗಿದ್ದ – ಮೋಡ ಮೋಡವೇ ಇತ್ತು. ನಮ್ಮೆಲ್ಲ ಗಂಟು ಮೂಟೆಗಳನ್ನು ಪ್ಲ್ಯಾಸ್ಟಿಕ್ ಹಾಳೆಗಳಿಂದ ಸುತ್ತಿಯೇ ಬೈಕಿಗೇರಿಸಿ, ಬಿಗಿದಿದ್ದೆವು. ನಾವೂ ಉಣ್ಣೆಯಂಗಿ, ಮಂಗನತೊಪ್ಪಿಗಳ ಮೇಲೆ ಮಳೆಕೋಟು, ಪ್ಯಾಂಟು ಏರಿಸಿಯೇ ಎಂಟೂಮುಕ್ಕಾಲರ ಹೊತ್ತಿಗೆ ಘಾಟಿಗಿಳಿದೆವು.

ತೋರಿಕೆಗೆ ಕಾಡು, ವನ್ಯ ಎಂಬ ಭಾವ ಬಂದರೂ ಜನವಸತಿಯ ಕುರುಹುಗಳು ಉದ್ದಕ್ಕೂ ಧಾರಾಳ ಇತ್ತು. ಇತರ ವಾಹನ ಸಂಚಾರ ಧಾರಾಳವೇ ಇದ್ದರೂ ಎಲ್ಲ ಮುಚ್ಚಿದ ದೇಹದವೇ; ದ್ವಿಚಕ್ರಗಳು ತೀರಾ ವಿರಳ. ನಾವುಳಿದಿದ್ದ ವನಧಾಮದ ಎದುರೇ ಪುಟ್ಟ ನಿಲ್ದಾಣಸಹಿತ ಸಪುರಹಳಿಯ ರೈಲ್ವೇ ಜಾಡು ಹರಿದಿತ್ತು. ಅದು ನಮ್ಮ ದಾರಿಗೆ ಪಕ್ಕದಲ್ಲೇ ಜತೆಗೊಡುತ್ತಿತ್ತು. ಹಲವೆಡೆಗಳಲ್ಲಿ ದಾರಿಯ ಮೇಲೇ ಹಳಿ ಹಾಸಿದ್ದೂ ಇತ್ತು. ಅಂತಲ್ಲೆಲ್ಲ ನಾವು, ಮುಖ್ಯವಾಗಿ ದ್ವಿಚಕ್ರಿಗಳು, ಬಹಳ ಜಾಗ್ರತೆಯಿಂದಿರಬೇಕಾಗುತ್ತಿತ್ತು. ಸಮರೇಖೆಯಲ್ಲಿ ಓಡುತ್ತ ಹಳಿಗಳನ್ನು ದಾಟುವುದೆಂದರೆ ಬಹುತೇಕ ಚಕ್ರ ಜಾರಿಬೀಳುವುದೆಂದೇ ಅರ್ಥ! ಒಂದೆಡೆ ಕಿಶೋರ್ ಬೈಕ್ ಜಾರಿ ಮಗುಚಿದರೂ ನಿಧಾನಿಯಾಗಿಯೇ ಇದ್ದುದರಿಂದ ಯಾರಿಗೇನೂ ಅಪಾಯವಾಗಲಿಲ್ಲ.

ಸಾರ್ವಜನಿಕ ರೈಲು ಆ ದಿನಗಳಲ್ಲಿ ದಿನಕ್ಕೆ ಒಂದೇ ಬಾರಿ (ಎದುರುಬದುರಿನ ಪ್ರಯಾಣ) ಇದ್ದಿರಬೇಕೆಂದು ನನ್ನ ನೆನಪು. ನಡುವೆ ಎಲ್ಲೋ ಒಂದು ಕಡೆ ಮಾತ್ರ ನಮಗೆ ರೈಲಿನ ದರ್ಶನ ಲಾಭವಾಗಿತ್ತು. ಆದರೆ ಎರಡು ಡಬ್ಬಿಯ ಮತ್ತು ಬಲು ನಿಧಾನೀ ಪುಟ್ಟ ಚುಕುಪುಕುವನ್ನು ಪೂರ್ಣ ಮನಸ್ಸಿನಲ್ಲಿ ನಿಂತು ನೋಡಲು, ಅದರ ಪೂರ್ಣ ಬಳುಕು ಓಟದ ಚಂದವನ್ನು ಕಣ್ಣು ಹಾಗೂ ಕ್ಯಾಮರಾದಲ್ಲಿ ತುಂಬಿಕೊಳ್ಳಲು ಚಿರಿಪಿರಿ ಮಳೆ ಬಿಡಲಿಲ್ಲ. ಅಂದು ಈಗಿನಂತೆ ಬಹು ಸಾಮರ್ಥ್ಯದ ಡಿಜಿಟಲ್ ಕ್ಯಾಮರಾಗಳಿರಲಿಲ್ಲ. ನನ್ನಲ್ಲಿದ್ದ ಸಾಮಾನ್ಯ ಕ್ಯಾಮರಾದಲ್ಲಿ ಪ್ರತಿ ಕ್ಲಿಕ್ ಎಂದರೂ ರೀಲು, ಸಂಸ್ಕರಣ ಮತ್ತು ಮುದ್ರಣದ ವೆಚ್ಚಗಳ ಲೆಕ್ಕ ಕಾಡುತ್ತಿತ್ತು. ಮತ್ತೆ ಮಳೆಯಲ್ಲಿ ಕ್ಯಾಮರಾವನ್ನು ಪ್ಲ್ಯಾಸ್ಟಿಕ್ ಆವರಣದಿಂದ ಹೊರತೆಗೆಯುವ ಯೋಚನೆಯೂ ನಿಷಿದ್ಧವೇ ಇತ್ತು!

ನಮ್ಮ ಮೊದಲ ಭಾರತಯಾನದಿಂದಲೇ ನಾವು ಪ್ರವಾಸದಲ್ಲಿ ಊಟ ಪಾನೀಯಗಳಿಗೆಲ್ಲ ಆರಾಮವಾಗಿ ದಾರಿ ಬದಿಯ ಡಾಬಾಗಳನ್ನೇ ನೆಚ್ಚಿಕೊಂಡಿದ್ದೆವು. ಥಳಕಿಲ್ಲ, ಕೊಳಕು ಜಾಸ್ತಿ ಎಂದರೂ ಅಲ್ಲಲ್ಲೇ ಕೈಪಂಪ್ ಹಾಕಿದ ಪುಟ್ಟ ತೂತಬಾವಿಯ ನೀರು, ಕಣ್ಣೆದುರೇ ಒಲೆಯಿಂದ ನಮ್ಮ ತಟ್ಟೆ ಲೋಟಗಳನ್ನು ಸೇರುತ್ತಿದ್ದ ಆಹಾರ ವಸ್ತುಗಳು ನಮಗೆಂದೂ ಆರೋಗ್ಯಕ್ಕೆ ಮೋಸ ಮಾಡಲಿಲ್ಲ. ಹಾಗೇ ಡಾರ್ಜಿಲಿಂಗಿನ ಏರುದಾರಿಯಲ್ಲಿ ಚಳಿ, ಮಳೆಯೂ ಏರುತ್ತಿದ್ದಂತೆ ಹಸಿವಲ್ಲದಿದ್ದರೂ ನಾವು ದೇಹಕ್ಕೆ ಬಿಸಿಯೂಡಲು ಹಳ್ಳೀ ಚಾದುಕಾನುಗಳನ್ನು ಮೂರು ನಾಲ್ಕು ಕಡೆ ಬಳಸಿಕೊಂಡೆವು. ಅಲ್ಲೆಲ್ಲ ನಮ್ಮ ರೂಢಿಯ ಇಡ್ಲಿ, ದೋಸೆಗಳನ್ನು ವಿಚಾರಿಸುವ ತಪ್ಪು ಮಾಡುತ್ತಿರಲಿಲ್ಲ. (ಈಚೆಗೆ ಕಾಶ್ಮೀರಕ್ಕೆ ಹೋದಾಗ ಗಮನಿಸಿದ್ದು: ದಕ್ಷಿಣ ಭಾರತದ ಗಿರಾಕಿಗಳನ್ನು ತಣಿಸಲು ಹಲವೆಡೆಗಳಲ್ಲಿ ಇಡ್ಲಿ ದೋಸೆಗಳೂ ಪೂರೈಕೆಯಾಗುತ್ತಿವೆ!) ಖಾಲೀ ಹೊಟ್ಟೆಗೆ ತಟ್ಟೆ ತುಂಬ ಜಿಲೇಬಿ, ಗರಿಗರಿ ಪಕೋಡವನ್ನು ನಾವು ಸಹಜವಾಗಿ ಆಸ್ವಾದಿಸುತ್ತಿದ್ದೆವು. ಡಾರ್ಜಿಲಿಂಗ್ ಪೇಟೆ ಸಮೀಪಿಸುತ್ತಿದ್ದಂತೆ ಮಳೆ, ಗಾಳಿ ಭರ್ಜರಿಯೇ ಹೊಡೆಯಿತು. ಸಾಮಾನ್ಯ ಪಾದರಕ್ಷೆ, ಕೈಗವುಸು ಇಲ್ಲದ ಸ್ಥಿತಿಯಲ್ಲಿ ಸವಾರರಿಬ್ಬರಿಗೂ ಕೈ ಪಾದಗಳು ಮರಗಟ್ಟಿದ ಅನುಭವದೊಡನೆ ಹೊಟ್ಟೆ ನಡುಕವೇ ಬರುತ್ತಿತ್ತು. ಒಂದೆರಡು ಡಾಬಾಗಳಲ್ಲಿ ಔಪಚಾರಿಕ ಮೇಜು ಕುರ್ಚಿ ಬಿಟ್ಟು, ಅವರ ಸೌದೇ ಒಲೆಗಳಿಗೇ ನುಗ್ಗುವಂತೆ ಕುಳಿತು ಚಾ ಕುಡಿದು ಸುಧಾರಿಸಿಕೊಳ್ಳಬೇಕಾಯ್ತು. ಅಪರಾಹ್ನ ಒಂದು ಮುಕ್ಕಾಲರ ಹೊತ್ತಿಗೆ ನಾವು ಡಾರ್ಜಿಲಿಂಗ್ ಸೇರಿದ್ದೆವು. ಆದರೆ ವಾತಾವರಣದ ತೀವ್ರತೆಯೋ ನಮ್ಮ ತಯಾರಿಯ ಕೊರತೆಯೋ ಗಾಢ ಪ್ರಭಾವಿಸಿದ್ದರಿಂದ ಸಂಭ್ರಮ, ಮುಂದಿನ ಕಾರ್ಯಯೋಜನೆಗಳೆಲ್ಲ ಬೆಟ್ಟ ಹತ್ತಿತ್ತು! ಹೆಚ್ಚು ಚೌಕಾಸಿಗಿಳಿಯದೆ ತುರ್ತಾಗಿ ಸಿಕ್ಕ ಹೋಟೆಲ್ ಕೋಣೆ ಹಿಡಿದೆವು. ಮತ್ತಷ್ಟೇ ಚುರುಕಾಗಿ ಒಣ ಬಟ್ಟೆಗಳಿಗೆ ಬದಲಿ, ಹಾಸುಗೆಯ ಮೂರು ಪದರದ ರಗ್ಗುಗಳ ನಡುವೆ ಕನಿಷ್ಠ ಅರ್ಧ ಗಂಟೆಯಾದರೂ ಹುಗಿದುಹೋದೆವು. ಉಪಾಧ್ಯರ ಉಷ್ಣಮಾಪಕ ೧೭ ಡಿಗ್ರಿ ತೋರಿದರೂ ನಮ್ಮ ನೀರಿನ ಸಂಪರ್ಕ, ಸವಾರಿಯ ಬೀಸುಗಳೆಲ್ಲ ಸೇರಿ ಶೂನ್ಯವನ್ನೇ ಸಾಧಿಸಿದ್ದೆವೆಂಬ ಭಾವ ನಮ್ಮಲ್ಲಿತ್ತು.

ಡಾರ್ಜಿಲಿಂಗ್ ಪ್ರತ್ಯೇಕ ರಾಜ್ಯದ ಸ್ಥಾನವನ್ನು ಕೇಳುತ್ತಿದ್ದ ಕಾಲವದು. ನಾವು ತಲಪಿದಂದು ಅದರ ಲೆಕ್ಕದಲ್ಲಿ ಬಂದ್ ಆಚರಣೆಯಲ್ಲಿದ್ದದ್ದು ನಮ್ಮ ಜಡಕ್ಕೆ ಅನುಕೂಲವೇ ಆಯ್ತು. ಸಂಜೆ ಸಣ್ಣದಾಗಿ ಬಂದಾದ ಪೇಟೆಯೊಳಗಿನ ಒಂದಷ್ಟು ದಾರಿಗಳನ್ನು ನಡೆದು ನೋಡಿದ್ದಷ್ಟೇ ಲಾಭ. ಹೋಟೆಲಿನವನು ಸೂಚಿಸಿದಂತೆ, ಮರುದಿನ ಬೆಳಿಗ್ಗೆ ಸ್ಥಳೀಯ ಹುಲಿಗುಡ್ಡೆ (ಟೈಗರ್ ಹಿಲ್) ನೆತ್ತಿಯಿಂದ ಸುದೂರದ ಚಿನ್ನದ ಬೆಟ್ಟದ (ಕಾಂಚನಗಂಗಾ) ನೆತ್ತಿಯ ಮೇಲೆ ಉದಯ ಭಾಸ್ಕರನ ಕಿರಣಲೀಲೆಯನ್ನು ನೋಡುವುದಿತ್ತು. ಅದಕ್ಕೆ ಅಲ್ಲಿನ ಜೀಪ್ ಚಾಲಕರ ಬಳಗ ಸಂಜೆಯೇ ಹೋಟೆಲ್ ಸುತ್ತಿ ಗಿರಾಕಿ ಗಟ್ಟಿ ಮಾಡಿಕೊಂಡಿದ್ದರು. ಅವರು ಬೆಳಿಗ್ಗೆ ಮೂರೂವರೆಗೇ ತಯಾರಿರಬೇಕೆಂದು ಖಡಕ್ಕಾಗಿ ಹೇಳಿದ್ದ ನೆಪ ಬೇರೆ ಸಿಕ್ಕು ನಾವು ಬೇಗ ಹಾಸುಗೆ ಸೇರಿದ್ದೆವು. ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ನಮ್ಮ ಆ ಸುಖನಿದ್ರೆ ಮುಗಿಯುವುದರೊಳಗೆ ಐದೇ ವರ್ಷಗಳ ಹಿಂದಿನ ಗಿರೀಶರ ಬೆಳಗ್ಗಿನ ಅನುಭವವೇನಾಯ್ತೆಂದು ಕೇಳಿಬಿಡೋಣ.

ಗಿರೀಶ್ ಪಾಲಡ್ಕ: ಮರುದಿನ ನಮ್ಮ ಕಿರು ಪ್ರವಾಸ. ಮುಂಜಾನೆ ನಾಲ್ಕರ ಒಳಗೆ ನಾವು ಸಿದ್ಧರಾಗಬೇಕಿತ್ತು. ಹಾಗೇ ಏಜನ್ಸಿಯ ಬಳಿ ಹೋದಾಗ ನಮಗೊಬ್ಬ ಡ್ರೈವರ್ ಆಗಲೇ ಅಲ್ಲಿ ಕಾಯುತ್ತಾ ಇದ್ದ. ಮೊದಲ ತಾಣ `ಟೈಗರ್ ಹಿಲ್’. ಇನ್ನೂ ಕತ್ತಲಿತ್ತು. ಚಳಿ ಸ್ವಲ್ಪ ಜಾಸ್ತಿ ಇತ್ತು. ಈ ವಿಷಯದಲ್ಲಿ ಲಾಜ್‌ನವ ಮೊದಲೇ ನಮ್ಮನ್ನು ಎಚ್ಚರಿಸಿದ್ದ. ಉಪಯೋಗಿಸಿಕೊಳ್ಳಿರೆಂದು ಅವನಲ್ಲಿದ್ದ ಕೋಟ್‌ಗಳನ್ನೂ ನಮಗೆ ಕೊಟ್ಟಿದ್ದ. ಆಗಲೇ ಟ್ರಾಫಿಕ್‌ನ ರಗಳೆ ಶುರುವಾಗಿತ್ತು. ನಮ್ಮ ಗಾಡಿ ಅದೆಲ್ಲೆಲ್ಲೋ ಸುತ್ತಿ ಯಾವುದೋ ಒಂದು ಗುಡ್ಡದ ಬಳಿ ಹೋಗಿ ನಿಂತಿತು. ಗಾಡಿಯಿಂದ ಇಳಿದಾಗಲೆ ನಮಗೆ ತಿಳಿದದ್ದು ಗಿರಿಧಾಮಗಳ ವೈಶಿಷ್ಟ್ಯ. ಅಲ್ಲಿ ಕೊಲ್ಕತ್ತದಲ್ಲಿ ವಿಪರೀತ ಸೆಕೆ. ಇಲ್ಲಿ ಡಾರ್ಜಿಲಿಂಗ್‍ನಲ್ಲಿ ನಡುಗಿಸುವ ಚಳಿ! ಅದರ ಲಾಭ ಅಲ್ಲಿನ ಸಣ್ಣ ವ್ಯಾಪಾರಿಗಳಿಗೆ. ಟೋಪಿ, ಕೈಗವಸುಗಳು ಇತ್ಯಾದಿ ವ್ಯಾಪಾರ ಜೋರಾಗಿತ್ತು. ಚಳಿ ಸಹಿಸಲಾಗದೆ ನಾವೂ ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾಯಿತು!

ಟೈಗರ್ ಹಿಲ್ ನಲ್ಲಿ ಹುಲಿಗಳೇನೂ ಇರಲಿಲ್ಲ. ಆದರೆ ಪ್ರಾಕೃತಿಕವಾಗಿ ನಿಜಕ್ಕೂ ಸುಂದರ ತಾಣ! ಸುತ್ತಲು ಸೂಚಿಪರ್ಣ ಮರಗಳ ಕಾಡು. ಖುಷಿ ಕೊಡುವಂತಹ ನಯನ ಮನೋಹರ ತಾಣ. ಇಲ್ಲಿನ ಪ್ರವಾಸೀ ಆಕರ್ಷಣೆ ಬರೇ ಗುಡ್ಡ ಅಥವಾ ಕಾಡು ಮಾತ್ರವಲ್ಲ. ಜತೆಗೆ ಇಲ್ಲಿನ ಸೂರ್ಯೋದಯ ಕೂಡಾ. ಅದೇನು ವಿಶೇಷ ಅಂತೀರಾ? ಹಿಮಾಲಯ ಶ್ರೇಣಿಯ ಕಾಂಗ್‍ಚೆನ್ ಜುಂಗಾ ಟೈಗರ್ ಹಿಲ್‍ನಿಂದ ಹೆಚ್ಚು ಕಡಿಮೆ ೬೦ ಕಿ. ಮೀ. ದೂರ (ಕಾಗೆ ಹಾರಿದಂತೆ). ಬೆಳಗ್ಗಿನ ಎಳೆ ಬಿಸಿಲು ದೂರದಲ್ಲಿ ಕಾಣುವ ಕಾಂಗ್‍ಚೆನ್ ಜುಂಗಾ ಹಿಮಪರ್ವತಗಳ ಮೇಲೆ ಬಿದ್ದಾಗ ಹಿಮದ ಮೇಲ್ಮೈ ಅದನ್ನು ಪ್ರತಿಫಲಿಸುತ್ತದೆ.

ಬಿಸಿಲಿನ ಪ್ರಖರತೆ ಹೆಚ್ಚಿಲ್ಲದ ಕಾರಣ ಈ ದೃಶ್ಯ ತುಂಬಾ ರಮಣೀಯವಾಗಿ ಗೋಚರಿಸುತ್ತದೆ. ಹೊಳಪಿನ ಬಿಳಿಹತ್ತಿ ಗುಡ್ಡೆ ಹಾಕಿದಂತೆ, ಬೆಳ್ಳಿಮೋಡಗಳು ಒಂದೆಡೆ ದಟ್ಟವಾಗಿ ಕಲೆತಂತೆ ಕಾಣುವ ಮನಮೋಹಕ ದೃಶ್ಯ ಬಿಸಿಲು ಜಾಸ್ತಿಯಾದಂತೆ ಮರೆಯಾಗುತ್ತದೆ. ಇದನ್ನು ವೀಕ್ಷಿಸಲು ಅಟ್ಟಣಿಗೆ ಮಾದರಿಯ ರಚನೆಯ ಜತೆಗೆ ಒಂದು ವೀಕ್ಷಣಾ ಗೋಪುರವೂ ಇದೆ. ಆದರೂ ಜಾಗ ಕಿರಿದಾಗಿರುವುದರಿಂದ ಪ್ರವಾಸಿ ಋತುಗಳಲ್ಲಿ ವಿಪರಿತ ಜನದಟ್ಟಣೆ ಇರುತ್ತದೆ.

ಅದಕ್ಕಾಗಿ ಕೆಲ ಚಾಲಕರು ಎರಡೂವರೆ ಗಂಟೆಗೇ ಜನರನ್ನು ತಂದು ಬಿಡುವುದೂ ಇದೆಯಂತೆ! ಗಾಡಿಯ ಚಾಲಕ ಹೇಳಿದಂತೆ ಈ ವೀಕ್ಷಣಾವಕಾಶ ಕೂಡಾ ಅದೃಷ್ಟವನ್ನವಲಂಬಿಸಿರುತ್ತದೆ. ಕೆಲವೊಮ್ಮೆ ಪ್ರಕೃತಿ ಅವಕೃಪೆ ತೋರಿದರೆ ಮಂಜು ಅಥವಾ ಮೋಡ ಮುಸುಕಿ ಏನೇನೂ ಕಾಣಿಸುವುದಿಲ್ಲ.

ಚುಮುಚುಮು ಚಳಿಗೆ ಮದ್ದೆಂಬಂತೆ ಹತ್ತಾರು ಮಂದಿ ಕಾಫಿ ಮಾರಾಟ ನಿರತರಾಗಿದ್ದರು. ದೊಡ್ಡ ಪ್ಲಾಸ್ಕ್ ಹಿಡಿದು ಕಾಫಿ ಮಾರುತ್ತಿದ್ದ ಓರ್ವ ನೇಪಾಳಿ ಚೆಲುವೆಯ ಬಳಿ ಫೋಟೋ ತೆಗೆಯಬಹುದೇ ಎಂದು ಕೇಳಿದೆವು. ಮೊದಲು ಕಾಫಿ ತೆಗೆದುಕೊಳ್ಳಿ ಆಮೇಲೆ ಎಷ್ಟಾದರೂ ಫೋಟೋ ತೆಗೆಯಿರಿ ಎಂದಳು. ಕಾಫಿ ಕೊಂಡಾದ ನಂತರ ನಮ್ಮ ಜತೆ ಫೋಟೋ ತೆಗೆಸಿ ಕೊಂಡಳು. ಕೊಂಡ ಕಾಫಿಗೆ ದುಡ್ಡು ಕೊಡ ಬೇಕಲ್ಲವೇ? ಆಗಲೂ ಪೋಟೋ ತೆಗೆಯುತ್ತಿದ್ದ ನಮ್ಮನ್ನು ನೋಡಿ ” ಪೈಸಾ ದೇನೇ ಕಾ ಫೋಟೋ ಮತ್ ನಿಕಲೋ (ದುಡ್ಡು ಕೊಡುವ ಫೋಟೋ ತೆಗೀ ಬೇಡಪ್ಪಾ)” ಎಂದು ಅರೆ ಕೋಪದಿಂದ ಹೇಳಿದಾಗ ನಮಗೆ ನಗು ತಡೆಯಲಾಗಲಿಲ್ಲ!

ಅಶೋಕವರ್ಧನ: ನೆನಪಿರಲಿ, ಆ ಕಾಲದಲ್ಲಿ ಸಾಮಾನ್ಯರಲ್ಲಿ ಚರವಾಣಿಯ ಕಲ್ಪನೆಯೂ ಇರಲಿಲ್ಲ. ಆದರೆ ಹೋಟೆಲಿನವ ಸಕಾಲದಲ್ಲಿ ನಮ್ಮನ್ನೆಚ್ಚರಿಸಿದ್ದ. ಹಾಗೇ ಜೀಪೂ ಸರಿಸಮಯಕ್ಕೇ ಬಂದಿತ್ತು. ಪೂರ್ಣ ಮಲಗಿದ್ದ ಪೇಟೆ ಮಂಜಿನಲ್ಲಿ ಮುಳುಗಿ ತಟಕಿಕ್ಕುತ್ತಿತ್ತು. ಬೆಚ್ಚನೆ ಹೋಟೆಲೊಳಗಿಂದ ಹೊರಬಿದ್ದ ನಮಗೆ ಒಮ್ಮೆಗೆ ಚಳಿ ಮೂಳೆಯನ್ನೇ ಕೊರೆಯುವಂತನ್ನಿಸಿತ್ತು. ಆದರೆ ಮುಚ್ಚಿದ ಜೀಪಿನೊಳಗೆ ಆರೆಂಟು ಮಂದಿಯೊಡನೆ ಬಿಗಿದು ಕುಳಿತದ್ದರಿಂದ ತತ್ಕಾಲೀನವಾಗಿ ಬಚಾವಾದೆವು. ಗಿರೀಶರಂದಂತೇ ಅಂಕಾಡೊಂಕಿನ ದಾರಿಯಲ್ಲಿ ಎಲ್ಲೆಲ್ಲೋ ಏರಿಳಿದು, ಸುತ್ತಿ ಸುಳಿದು, ಬಿಸಿ ಕಾಫಿಯ ಥರ್ಮಸ್ ಫ್ಲಾಸ್ಕ್ ಹೊತ್ತ ಒಂದಿಬ್ಬರು ತರುಣಿಯರನ್ನೂ ಸೇರಿಸಿಕೊಂಡು ಟೈಗರ್ ಹಿಲ್ಲಿನಲ್ಲಿ ಇಳಿಸಿದರು.

ಎಲ್ಲೆಲ್ಲೂ ಜನವೋ ಜನ. ಹಸ್ತ ಮುಖ ತೀಡಿಕೊಳ್ಳುತ್ತ ಆ ದಿಣ್ಣೆ, ಈ ಅಟ್ಟಳಿಗೆ ಎಂದೋಡಾಡುತ್ತಿದ್ದರು. ಕಾಫಿ ಮಾರುವುದೇನು, ಕುಡಿದು ಲೋಟ ತೂರುವುದೇನು. ಹರಟುವ ಗದ್ದಲದೊಡನೆ ಬಾಯಿಯಲ್ಲಿ ಹಬೆಯಾಡಿಸುತ್ತಾರೋ ಸಿಗರೇಟಿನ ಹೊಗೆಬಿಡುತ್ತಾರೋ ಎಂದೇ ಅರ್ಥವಾಗದ ಸ್ಥಿತಿ. ಇದ್ಯಾವುದರ ಲೆಕ್ಕವೂ ಇಡದ ಸೂರ್ಯ ಅಂದೂ ಸಕಾಲಕ್ಕೇ ಎದ್ದಿದ್ದ. ಆದರೆ ಬಲು ದೂರದ ದೃಶ್ಯ, ಮಂಜಿನ ತೆರೆಮರೆಯಾಟವೆಲ್ಲ ಸೇರಿ ಮಸಕು, ಮಂಕು. ಕೊನೆಯಲ್ಲಿ ಪುಳಿನ ತೀರದ ಕರಾವಳಿ ಬಿಟ್ಟು ಬಂದ ನಾವು ಇಲ್ಲೂ ಪಲ್ಲವಿಸಿದ್ದು ಎಂಥಾ ಮರುಳಯ್ಯಾ ಇದು ಎಂಥಾ ಮರುಳೋ! ಇರಲಿ, ಗಿರೀಶ್ ಮುಂದೇನು ಮಾಡಿದರೆಂದು ಕೇಳಿ ಬರೋಣ.

ಗಿರೀಶ್ ಪಾಲಡ್ಕ: ಆ ನಂತರದ ಬಹುತೇಕ ತಾಣಗಳು – ಎಲ್ಲೆಡೆ ಇರುವಂತೆ ಇರುವ ಅನೇಕ ಪ್ರವಾಸಿ ಸ್ಥಳಗಳು. ಬುದ್ಧ ದೇವಾಲಯ (ಮೊನಾಸ್ಟರಿ), ಪಗೋಡಾ, ಪ್ರಾಣಿ ಸಂಗ್ರಹಾಲಯ, ವಸ್ತು ಸಂಗ್ರಹಾಲಯ ಇತ್ಯಾದಿ. ಇವುಗಳ ಬಗ್ಗೆ ಹೆಚ್ಚು ಬರೆಯುವ ಅಗತ್ಯವಿಲ್ಲವೆನಿಸುತ್ತದೆ.

ಆಕರ್ಷಕವಾಗಿಯೇ ಕಟ್ಟಲ್ಪಟ್ಟಿರುವ `ಜಪಾನೀ ಬುದ್ಧ ದೇವಾಲಯ’ದಲ್ಲಿ ತಾಳಬದ್ಧವಾಗಿ ಡೊಳ್ಳಿನ ಸ್ವರ ಕೇಳಿ ಬರುತ್ತಿತ್ತು. ಒಂದು ಸಮೂಹದ ಡೊಳ್ಳುವಾದನವೆಂದು ಕೊಂಡಿದ್ದೆವು. ನಮಗೆ ಸಮೀಪ ಹೋಗಿ ನೋಡಿದಾಗ ಓರ್ವ ಪುಟ್ಟ (ಹೆಚ್ಚು ಕಡಿಮೆ ೧೦- ೧೨ ವರ್ಷ) ಬಾಲಕ ಒಂದೇ ಲಯದಲ್ಲಿ ತನ್ಮಯನಾಗಿ ಡೊಳ್ಳು ಬಾರಿಸುತ್ತಿದ್ದ. ಡಾರ್ಜಿಲಿಂಗ್‌ ನ ನೆನಪು ಬಂದಾಗಲೆಲ್ಲಾ ಆ ಡೊಳ್ಳಿನ ಇಂಪು ಕೂಡಾ ನೆನಪಿಗೆ ಬರುತ್ತದೆ. ವಾರ್ ಮೆಮೋರಿಯಲ್ ಎನ್ನುವ ಜಾಗದ ಪಕ್ಕದಲ್ಲಿರುವ ಉದ್ಯಾನವೊಂದರಲ್ಲಿ ನೇಪಾಳಿ ಉಡುಪುಗಳನ್ನು ಇತರರಿಗೆ ತೊಡಿಸಿ ಚಿತ್ರ ತೆಗೆಯುತ್ತಿದ್ದರು (ಇದು ಕೂಡಾ ಮಾಮೂಲು ದಂಧೆಯೇ). ನಾವೇನು ಕಡಿಮೆ! ನಾವೂ ತೆಗೆಸಿಕೊಂಡೆವು. ಚಿತ್ರ ನೋಡಿದಾಗ ಮಾತ್ರ ನನಗೆ ನಮ್ಮೂರಿನ ನವರಾತ್ರಿ ವೇಷಗಳ ನೆನಪಾಯಿತು!

ಆಟಿಕೆ ರೈಲಿನಲ್ಲಿ (Toy Train – narrow gauge) ನಲ್ಲಿ ಪ್ರಯಾಣಿಸುವ ವಿಶೇಷ ಆಸಕ್ತಿ ನಮಗಿರಲಿಲ್ಲ. ರೋಪ್‌ವೇ ನಲ್ಲಿ ಪ್ರಯಾಣಿಸುವ ಅಪಾರ ಆಸೆ ಹೊತ್ತಿದ್ದ ನಮಗೆ ಅದು ದುರಸ್ತಿಯಲ್ಲಿದೆ ಎನ್ನುವುದನ್ನು ಕೇಳಿ ನಿರಾಸೆಯಾಯಿತು. ಪದ್ಮಜಾ ನಾಯ್ಡು ಮೃಗಾಲಯದ ಮೂಲೆಯಲ್ಲಿ ಕೊಂಚ ವಿಶಾಲ ಜಾಗದಲ್ಲಿರುವ ಚಾರಣ ಹಾಗೂ ಪರ್ವತಾರೋಹಣ ತರಬೇತಿ ನೀಡುವ ಹಿಮಾಲಯ ಪರ್ವತಾರೋಹಣ ಸಂಸ್ಥೆ (ಹಿಮಾಲಯನ್ ಮೌಂಟೆನೀಯರಿಂಗ್ ಇನ್‌ಸ್ಟಿಟ್ಯೂಟ್ – ಹೆಚ್. ಎಮ್. ಐ – ಸೇನೆಯ ನಿಯಂತ್ರಣದಲ್ಲಿದೆ) ವ್ಯವಸ್ಥಿತವಾಗಿದೆ. ಅಲ್ಲಿಗೆ ಕಾರ್ಯಸಂಬಂಧ ತೆರಳುವ ಅವಕಾಶ ಮತ್ತೊಮ್ಮೆ ನನಗೆ ದೊರಕಿತ್ತು. ಮುಂದೆ ಇನ್ನೊಮ್ಮೆ ಅದರ ಬಗ್ಗೆ ತಿಳಿಸುತ್ತೇನೆ.

ವಾಪಾಸು ಬರುವಾಗ ಒಂದು ದಿನ ಹೆಚ್ಚು ನಿಲ್ಲೋಣ ಎನ್ನುವ ಮಾತು ಬಂದರೂ ಅದನ್ನು ಕೈಬಿಡಬೇಕಾಯಿತು. ನಾವು ಭಾನುವಾರವೇ ಕೋಲ್ಕತ್ತ ಸೇರಿ, ಪ್ರಾಂಶುಪಾಲರ ಮಾತನ್ನು ಉಳಿಸಿಕೊಳ್ಳುವುದೂ ನಮಗೆ ಅಷ್ಟೇ ಮುಖ್ಯವಾಗಿತ್ತು. ಹಾಗಾಗಿ ಶನಿವಾರ ರಾತ್ರಿಯೇ ಹೊರಟು ಭಾನುವಾರ ಮಧ್ಯಾಹ್ನಕ್ಕೆ ಮೊದಲು ಕೊಲ್ಕತ್ತದಲ್ಲಿದ್ದೆವು. ಸ್ವಾರಸ್ಯಕರ ಸಂಗತಿಯೆಂದರೆ ವಾಪಾಸು ಬರುವಾಗ ಎಚ್ಚರ ತಪ್ಪದಿರಲು ಚಾಲಕ ವಿಜಯ್ ತನ್ನ “ಡ್ರೈವಾನುಭವ”ಗಳನ್ನು ಹೇಳಲಿಲ್ಲ. ಬದಲಾಗಿ ಪ್ರೇಮಾನುಭವಗಳನ್ನು ಹೇಳಿಕೊಂಡ!

ಅಶೋಕವರ್ಧನ: ಪರ್ವತಾರೋಹಣವನ್ನು ಪ್ರಧಾನ ಹವ್ಯಾಸವಾಗಿಸಿಕೊಂಡ ನನಗೆ ಡಾರ್ಜಿಲಿಂಗಿನ ಪ್ರಧಾನ ಆಕರ್ಷಣೆ ಎಚ್.ಎಂ. ಐ (ಹಿಂದುಸ್ತಾನ್ ಮೌಂಟೇನೇರಿಂಗ್ ಇನ್ಸ್‍ಟಿಟ್ಯೂಟ್).

ಅದರಲ್ಲಿ ಖುದ್ದು ಎವರೆಸ್ಟ್ ವೀರ ತೇನ್ಸಿಂಗರಿಂದ (೧೯೧೪-೧೯೮೬) ಪರ್ವತಾರೋಹಣದ ಪಾಠ ಕಲಿತವರು ನನ್ನ ಪರ್ವತಾರೋಹಣದ ಗುರು – ಮೈಸೂರಿನ ವಿ.ಗೋವಿಂದರಾಜ್.

ಪೂರ್ವ ಸಿದ್ಧತೆಯಲ್ಲಿ ಯಾವುದಕ್ಕೂ ಇರಲಿ ಎಂದು ಗೋವಿಂದರಾಜರಿಂದ ಒಂದು ಪರಿಚಯದ ಪತ್ರವನ್ನೂ ಬರೆಸಿಟ್ಟುಕೊಂಡಿದ್ದೆ. ದಕ ವಲಯದಲ್ಲಿ ೧೯೭೫ರಿಂದೀಚೆಗೆ, ಅಂದರೆ ಸುಮಾರು ಹದಿನೈದು ವರ್ಷಗಳ ಅವಧಿಯಲ್ಲಿನ ನನ್ನ ಪರ್ವತಾರೋಹಣ ಸಾಧನೆಯ ಸೂಕ್ಷ್ಮಚಿತ್ರಣವನ್ನೂ ಇಂಗ್ಲಿಷಿನಲ್ಲಿ ಸಜ್ಜುಗೊಳಿಸಿಕೊಂಡಿದ್ದೆ. ನನ್ನಲ್ಲಿ ಯಾವುದೇ ಬೇಡಿಕೆಯಿರಲಿಲ್ಲ. ಕೇವಲ ಸಮಾನಾಸಕ್ತಿಯ ವಿಚಾರದ ಕುರಿತು ನಾಲ್ಕು ಉಭಯ ಕುಶಲೋಪರಿ ನಡೆಸುವ ಉತ್ಸಾಹ ಮಾತ್ರ ಇತ್ತು. ಆದರೆ ಅಲ್ಲಿ ಪ್ರಕೃತಿಪರ ಚಟುವಟಿಕೆಗಳೆಲ್ಲ ಸಂಸ್ಥೀಕರಣದ ಬಿಸಿಯಲ್ಲಿ ಸತ್ತೇ ಹೋದಂತಿತ್ತು. ಸೇನೆಯಲ್ಲಿ ಸೇವಾ ಹಿರಿತನದವರ್ಯಾರೋ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ ಆಗಮನ ಮತ್ತು ಸಾರ್ವಜನಿಕ ಭೇಟಿಯ ಅವಧಿಗಳು ನಮ್ಮ ಅನುಕೂಲಕ್ಕಿರಲಿಲ್ಲ. ಕರ್ನಾಟಕದಿಂದ ಬೈಕೇರಿ ಬಂದಿದ್ದಾರೆ, ಪರ್ವತಾರೋಹಿಗಳು, ಸಂಸ್ಥೆಯದೇ ಹಿರಿಯ ವಿದ್ಯಾರ್ಥಿಯ ಶಿಷ್ಯ ಬಳಗ ಇತ್ಯಾದಿ ಅಲ್ಲಿದ್ದ ಇತರರ ಕುತೂಹಲವನ್ನೂ ಕೆರಳಿಸಲಿಲ್ಲ.

ಮನುಷ್ಯರ ಬಗೆಗಿನ ನಿರಾಶೆಯಲ್ಲಿ ನಾವು ಪದ್ಮಜಾ ನಾಯ್ಡು ಪ್ರಾಣಿಸಂಗ್ರಹಾಲಯದತ್ತ ಹೋದೆವು. ಅದು, ಮತ್ತದರ ವಿಸ್ತರಣೆಯಂತಿದ್ದ ಆದರೆ ಸಾಮಾನ್ಯ ಮೃಗಾಲಗಳಲ್ಲಿ ಕಾಣಸಿಗದ ಹಿಮಚಿರತೆ ಮತ್ತು ಹಿಮತ್ಓಳಗಳ ಬಂಧೀಖಾನೆಗಳನ್ನೂ ನೋಡಿದೆವು.

ಹಿಂದೆಲ್ಲ ಸರ್ಕಸ್ ಕಂಪೆನಿಗಳು ಹುಲಿ ಸಿಂಹಗಳನ್ನು ಟಯರ್ ಗಾಡಿಗಳಲ್ಲಿಟ್ಟು ತರುವಂತೆಯೇ ಇತ್ತು; ಕಿಷ್ಕಿಂಧೆ, ಕೊಳಕು. ಉಳಿದಂತೆ ಸಾಮಾನ್ಯ ಆರಾಧನಾ ಕೇಂದ್ರಗಳನ್ನು ಅಥವಾ ಪೇಟೆಯನ್ನೋ ವಿರಾಮದಲ್ಲಿ ಸುತ್ತುವ ಉಮೇದು ನಮ್ಮ ಪ್ರವಾಸ ಯೋಜನೆಯಲ್ಲೇ ಇರಲಿಲ್ಲ. ಹವಾಮಾನದಲ್ಲಿ ಚಳಿ ಇದ್ದರೂ ಮಂದ ಬಿಸಿಲು ಬಮಗೆ ಪ್ರಶಸ್ತವಾಗಿತ್ತು. ಹಿಮಾಲಯದೆತ್ತರಗಳಲ್ಲಿ ಅದು ಎಂದೂ ಬದಲಾಗುವ ಸಾಧ್ಯತೆಯಿದ್ದುದರಿಂದ ಕೂಡಲೇ (ಹನ್ನೆರಡು ಗಂಟೆಯ ಸುಮಾರಿಗೆ) ಗಿರಿಪಟ್ಟಣವನ್ನು ಬಿಡುವ ಯೋಚನೆ ಮಾಡಿದೆವು.

ನನ್ನ ಮೊದಲ ಡಾರ್ಜಿಲಿಂಗ್ ಭೇಟಿಯಲ್ಲಿ ಜೀಪುಗಳು ಇಳಿದಾರಿಗೆ ಬಳಸಿದ ಕರ್ಸಿಯಾಂಗ್/ಮಿರಿಕ್ ದಾರಿಯನ್ನೇ ನಾವು ಅನುಸರಿಸುವುದಿತ್ತು. ಇದು ಸಿಲಿಗುರಿ ತಲಪುವಲ್ಲಿ ಸುಮಾರು ಹದಿನೈದು ಕಿಮೀ ಉಳಿತಾಯ ಮಾಡುತ್ತಿತ್ತು. ನಾವು ಆ ರಾತ್ರಿಗೆ ಮತ್ತೆ ಆಚಿನ ಬಳಸು ದಾರಿಯಲ್ಲಿದ್ದ ಮಹಾನಂದ ವನಧಾಮದ ಅತಿಥಿಗೃಹವನ್ನೇ ಬಳಸುವ ಯೋಚನೆಗೂ ಇದು ಸಹಕಾರಿಯಾಗಿತ್ತು. ಸಿಲಿಗುರಿಗೂ ಹತ್ತೋ ಹದಿನೈದೋ ಕಿಮೀ ಮೊದಲೇ ಸಿಗುವ ಒಂದು ಅಮುಖ್ಯ ಎಡಗವಲು ಮಹಾನಂದಕ್ಕೇ ಒಳದಾರಿ ಎಂದೂ ಮಾಹಿತಿ ಸಂಗ್ರಹಿಸಿದ್ದೆವು. ಇದರಿಂದ ಸಿಲಿಗುರಿಗೆ ಹೋಗಿ, ಹಿಂಬರುವ ಸುಮಾರು ಮೂವತ್ತು ಕಿಮೀ ಓಟದ ಉಳಿತಾಯವೂ ಆಗುವುದಿತ್ತು.

ಇಳುಕಲು ತೀವ್ರ ಮತ್ತು ದಾರಿ ತುಸು ಹರಕು. ಮಳೆಯ ಲಕ್ಷಣಗಳೇನೂ ಇರಲಿಲ್ಲವಾದರೂ ಚಳಿ ಬಿಟ್ಟಿರಲಿಲ್ಲ. ಹಾಗಾಗಿ ನಾವು ಹಿಂದಿನ ದಿನದ್ದೇ ದಿರುಸಿನ ಬಂದೋಬಸ್ತು ಮಾಡಿಕೊಂಡಿದ್ದೆವು. ಮಿರಿಕ್ ಹಳ್ಳಿಯ ಡಾಬಾವೊಂದರಲ್ಲಿ ಊಟದ ಪರ್ಯಾಯ ವ್ಯವಸ್ಥೆಯನ್ನು ಮುಗಿಸಿಕೊಂಡು ಮುಂದುವರಿದೆವು. ದೀರ್ಘ ಸವಾರಿಗಳಲ್ಲಿ ನಮ್ಮೆರಡೂ ಬೈಕುಗಳು ಲಹರಿಯ ಮೇಲೆ ಒಂದೆರಡು ಕಿಮೀ ಹಿಂದೆ ಮುಂದಾಗುವುದಿತ್ತು. ಸಂಶಯಾಸ್ಪದ ಕವಲು ಮತ್ತು ಬಹುಕಾಲ ಹಿಂದಿನವರು ಕಾಣದಿದ್ದರೆ ಮಾತ್ರ ಒಬ್ಬರನ್ನೊಬ್ಬರು ಕಾದು, ಜತೆಯಾಗಿ ಮುಂದುವರಿಯುತ್ತಿದ್ದೆವು. ಹಾಗಾಗಿ ಮುಂದಿದ್ದ ನಾನು ಘಟ್ಟ ಪ್ರದೇಶ ಮುಗಿಯುತ್ತಿದ್ದಂತೆ ಒಂದೆಡೆ ಸಹಜವಾಗಿ ನಿಲ್ಲಿಸಿದೆ. ಬಿಸಿಲು, ಸೆಕೆ ಏರಿತ್ತು. ನಾವು ಇನ್ನೊಂದು ಬೈಕ್ ಬರುವುದರೊಳಗೆ ಮಳೆಕೋಟು, ಮಂಗನಟೊಪ್ಪಿ ಎಲ್ಲ ಕಳಚಿದ್ದೇನೋ ಆಯ್ತು. ಆದರೆ ಅದನ್ನಿಡಲು ಹಿಂದೆ ಕ್ಯಾರಿಯರ್ ಮೇಲೆ ಕಟ್ಟಿದ್ದ ದೊಡ್ಡ ಬೆನ್ನಚೀಲ ಎಂದು ನೋಡುವಾಗಲೇ ಗೊತ್ತು – ಚೀಲ ಎಲ್ಲೋ ಬಿದ್ದು ಹೋಗಿತ್ತು. ಬಿಗಿದು ಕಟ್ಟಿದ್ದ ಹಗ್ಗ ಮಾತ್ರ ನೇಲುತ್ತಿತ್ತು. ಮಿರಿಕ್ಕಿನಲ್ಲಿ ಊಟ ಮಾಡಿ ಹೊರಡುವಾಗಲೂ ಚೀಲ ಇದ್ದ ನೆನಪು ದೇವಕಿಗೆ ಸರಿಯಾಗಿಯೇ ಇತ್ತು. ಅಂದರೆ ನಮ್ಮಿಂದ ಮೂರ್ನಾಲ್ಕು ಮಿನಿಟು ಹಿಂದಿದ್ದ ಕಿಶೋರ್ ಬೈಕಿನವರು ದಾರಿಯಲ್ಲದು ಬಿದ್ದಿರುವುದನ್ನು ಕಂಡಿರಬಹುದು, ತಂದಾರು ಎಂದು ಆಶಿಸಿದೆವು. ಅವರೇನೋ ಸರಿಯಾಗಿಯೇ ಬಂದರು, ಚೀಲ ಸಿಗಲಿಲ್ಲ. ಅಂದರೆ ಸುಮಾರು ಹದಿನೈದು ಕಿಮೀ ಹಿಂದಿನ ಮಿರಿಕ್ಕಿನೊಳಗೆ ಎಲ್ಲೋ ದಾರಿ ಬದಿಗೆ ಉರುಳಿ ಸೇರಿಕೊಂಡಿರಬಹುದು ಎಂದು ತರ್ಕಿಸಿದೆವು. ನಮ್ಮ ಸ್ವೆಟ್ಟರ್ ಕೋಟುಗಳನ್ನೆಲ್ಲ ಕಿಶೋರ್ ಜೋಡಿ ಬಳಿ ಕೊಟ್ಟು, ಈಗ ಬರ್ತೇವೆ ಎಂದು ನಾವಿಬ್ಬರು ಚೀಲ ಹುಡುಕಿ ಹಿಂದೆ ಹೋದೆವು. ನಿಧಾನಕ್ಕೆ ಬೈಕೋಡಿಸುತ್ತ ಇಬ್ಬರೂ ರಸ್ತೆಯ ಎರಡೂ ಬದಿಗಳನ್ನು ಕಣ್ಣೋಟದಲ್ಲೇ ಜಾಲಾಡಿದೆವು. ಸಿಕ್ಕ ಜನ, ಹಳ್ಳಿಯಂಗಡಿಗಳಲ್ಲಿ ವಿಚಾರಿಸಿದೆವು. ನಿಷ್ಪ್ರಯೋಜಕವಾಗಿ ಮಿರಿಕ್ಕಿನಲ್ಲಿ ನಾವು ಊಟಕ್ಕೆ ನಿಂತ ಹೋಟೆಲನ್ನೇ ತಲಪಿದೆವು. ಸುಮಾರು ಮೂವತ್ತೈದು ದಿನಗಳ ಮಹಾಯಾನದ ಮೊದಲನೇ ಪಾದದಲ್ಲೇ ಆದ ಮಹಾನಷ್ಟದ ಲೆಕ್ಕಾಚಾರ, ಬದಲಿ ವ್ಯವಸ್ಥೆಗಳನ್ನು ನಿರಾಶೆಯಲ್ಲೇ ಚರ್ಚಿಸುತ್ತ ಮತ್ತೆ ಸಿಲಿಗುರಿಯತ್ತ ಹೊರಟೆವು. ನಾಲ್ಕೈದು ಕಿಮೀ ಸಾಗಿ ಒಂದು ಹಳ್ಳಿ ದಾಟುವಾಗ ಒಬ್ಬ ಹೆಂಗಸು ನಮ್ಮನ್ನು ಕೂಗಿ ಕರೆದಳು. ಬಾಡಿಹೋಗಿದ್ದ ಆಶಾಲತೆಗೆ ಅಮೃತವರ್ಷವಾದಂತೆ ಆಕೆಯಲ್ಲಿತ್ತು ನಮ್ಮ ಚೀಲದ ಸುದ್ದಿ. ಗಂಟೆ ಮೊದಲು ನಮ್ಮ ಬೈಕ್ ದಾಟುವಾಗ ಹಗ್ಗ ಕಳಚಿ ಉರುಳಿದ ಚೀಲ ಈಕೆಯ ಗಂಡನಿಗೇ ಸಿಕ್ಕಿತ್ತಂತೆ. ಆ ಮುಗ್ಧ ಹಳ್ಳಿಗ ಅದನ್ನು ವಿಲೇವಾರಿ ಮಾಡುವ ಕುರಿತು ಚಿಂತಿಸುವಾಗ ಹಳ್ಳಿಯ ಚಾಲಾಕೀ ಜೀಪ್ ಚಾಲಕನೊಬ್ಬ ನೆರವಿಗೆ ಬಂದನಂತೆ. ಆತ ಬಾಡಿಗೆಗೋಡಿಸುತ್ತಿದ್ದ ಜೀಪನ್ನು ಮಿರಿಕ್ಕಿನ ಯಜಮಾನನ ಕೊಟ್ಟಿಗೆಗೆ ತುಂಬಿ ಬರುವಾಗ, ಚೀಲವನ್ನು ಅಲ್ಲೇ ಪೊಲಿಸ್ ಠಾಣೆಗೆ ಒಪ್ಪಿಸುತ್ತೇನೆ ಎಂದು ಒಯ್ದಿದ್ದ. ನನ್ನ ಬೈಕ್ ಮತ್ತೆ ಮಿರಿಕ್ಕಭಿಮುಖವಾಯ್ತು. ಈಗ ದೇವಕಿ ಹಳ್ಳಿಯ ಆ ಹೆಂಗಸಿನ ಮನೆಯಲ್ಲೇ ಉಳಿದುಕೊಂಡಳು, ಆಕೆಯ ಗಂಡ ನನ್ನ ಬೆಂಬಲಕ್ಕಿದ್ದ. ಈತ ದಾರಿಯಲ್ಲಿ ಎದುರಾದ ಬಸ್ ನಿಲ್ಲಿಸಿದಾಗ ಹಳ್ಳಿಗೆ ವಾಪಾಸಾಗುತ್ತಿದ್ದ ಜೀಪ್ ಚಾಲಕನೂ ಸಿಕ್ಕಿದ. ಮತ್ತೆ ಇವನನ್ನು ಬಸ್ಸಿಗೆ ಬಿಟ್ಟು ಚಾಲಕನನ್ನೇ ಜತೆ ಮಾಡಿಕೊಂಡು ಮಿರಿಕ್ ಠಾಣೆಗೇ ಹೋಯ್ತು ನಮ್ಮ ಸವಾರಿ. ಒಂದೆರಡು ಗಂಟೆ ವ್ಯರ್ಥವಾದರೂ, ಇನಾಮು ಎಂದು ಮುನ್ನೂರು ರೂಪಾಯಿ ಕೈ ಬಿಟ್ಟರೂ ಎಲ್ಲ ಸುಕ್ಷೇಮವಾಗಿ ಹಿಂದೆ ಪಡೆದಿದ್ದೆ. ಅಂದ ಹಾಗೇ ಇನಾಮ್ ಅಲ್ಲ, ಪೋಲಿಸರಿಗೆ ಲಂಚ ಎಂದು ತಪ್ಪು ತಿಳಿದೀರಿ. ಹಾಗಿಲ್ಲ, ದುಡ್ಡು ಹೊಡೆದದ್ದು ಜೀಪ್ ಚಾಲಕ!

ದೇವಕಿಯನ್ನು ಕೂಡಿಕೊಳ್ಳುವ ಹೊತ್ತಿಗೆ ಸಂಜೆಯಾಗಿತ್ತು. ಶೀತ ಮಾರುತನ ದಾಳಿಗೆ ನಮ್ಮಲ್ಲಿ ರಕ್ಷಣಾ ಸಾಮಗ್ರಿ ಇಲ್ಲದೇ ಬಳಲಿದೆವು. ಗದಗುಟ್ಟುತ್ತ ಹೇಗೋ ಗೆಳೆಯರನ್ನು ಹಿಂದುಳಿಸಿದ ಜಾಗಕ್ಕೆ ಬಂದರೆ ಯಾರೂ ಇಲ್ಲ. ಅವರು ಸಮೀಪದ ಹಳ್ಳಿ ಮನೆಯಲ್ಲಿ ಸುದ್ದಿ ಬಿಟ್ಟು ಸಿಲಿಗುರಿಗೆ ಹೋಗಿಬಿಟ್ಟಿದ್ದರು. ನೆನಪಿರಲಿ, ಆ ದಿನಗಳಲ್ಲಿ ಚರವಾಣಿ ಇರಲಿಲ್ಲ. ಅಲ್ಲದೆ ಸಿಲಿಗುರಿಯಲ್ಲಿ ನಾವೆಲ್ಲ ನೆಚ್ಚಬಹುದಾದ ಒಂದು ವಿಳಾಸ ಅಥವಾ ದೂರವಾಣಿ ಸಂಖ್ಯೆಯೂ ನಮ್ಮಲ್ಲಿರಲಿಲ್ಲ. ಮತ್ತೆ ಹೆಚ್ಚು ನಿಂತು ಯೋಚಿಸಲು ಮುಸುಕುತ್ತಿದ್ದ ಕತ್ತಲೆ ಏರುತ್ತಿದ್ದ ಚಳಿ ಬಿಡಲಿಲ್ಲ. ಅದೃಷ್ಟಕ್ಕೆ ಮಹಾನಂದ ವನಧಾಮಕ್ಕೆ ಒಳದಾರಿ, ಅಲ್ಲಿನ ಅತಿಥಿಗೃಹದ ಅವಕಾಶವೂ ಸುಲಭವಾಗಿಯೇ ಸಿಕ್ಕಿ ರಾತ್ರಿಗಂತೂ ಆತಂಕ ಇಲ್ಲವಾಯ್ತು.

ಆ ದಿನಗಳಲ್ಲಿ ಉಪಗ್ರಹಾಧಾರಿತ ವಾಸ್ತವಿಕ ಭೂ ನಕ್ಷೆಯೂ ಇರಲಿಲ್ಲ. ನಾನು ಪ್ರವಾಸ ಪೂರ್ವದಲ್ಲಿ ವಾರಗಟ್ಟಳೆ ಸಿಕ್ಕ ಭೂಪಟ, ಪ್ರವಾಸ ಕಥನ ಮತ್ತು ಪತ್ರವ್ಯವಾಹಾರಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನು ಕೈಯಾರೆ ಒಂದು ನಕ್ಷೆಗೆ ಅಳವಡಿಸಿದ್ದೆ.

ಅದರಲ್ಲಿ ದಿನಾಂಕ ಮತ್ತು ಅಂದಾಜು ಅಂತರ ಸಹಿತ ದಾರಿ, ಊರು ಮತ್ತು ಪ್ರಾದೇಶಿಕವಾಗಿ ಪೂರ್ವ ನಿಗದಿತ ಸಂಪರ್ಕಗಳೇನಾದರೂ ಇದ್ದರೆ ದೂರವಾಣಿ ಸಂಖ್ಯೆ ಸಹಿತ ವಿಳಾಸವೂ ದಾಖಲಾಗಿತ್ತು. ಅದರ ಸ್ಪಷ್ಟ ಛಾಯಪ್ರತಿ ನಮ್ಮ ನಾಲ್ವರ ಖಾಸಾಚೀಲಗಳಲ್ಲಿಟ್ಟುಕೊಂಡಿದ್ದೆವು. ಅದನ್ನು ಮರುದಿನ ಬೆಳಿಗ್ಗೆ ಇತ್ತ ನಾವೂ ಅತ್ತ ಸಿಲಿಗುರಿಯಲ್ಲಿ ಸಿಕ್ಕ ಯಾವುದೋ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದ ಇನ್ನೊಂದು ಬೈಕಿನವರೂ ಸರಿಯಾಗಿಯೇ ಉಪಯೋಗಿಸಿದೆವು. ನಮ್ಮ ಮುಂದಿನ ಅಧಿಕೃತ ಭೇಟಿಯ ಸ್ಥಳ ಜಲ್ದಪಾರಾ ವನಧಾಮವೆಂದಿತ್ತು. ಅದರ ದೂರವಾಣಿಯನ್ನು ನಾವಿಬ್ಬರೂ ನಂನಮ್ಮ ನೆಲೆಯಿಂದ ಸಂಪರ್ಕಿಸಿ, ಸಿಲಿಗುರಿಯ ಪೋಲಿಸ್ ಠಾಣೆಯೊಂದರಲ್ಲಿ ಪುನರ್ಮಿಲನ ಕಂಡೆವು. ಹೀಗೆ ನನ್ನ ಎರಡನೇ ಭೇಟಿಗೂ ತಂಡದ ಏಕತೆಗೂ ತುಸು Dodjingಏ (ತಪ್ಪಿಸುವಿಕೆ) ಮಾಡಿದ ಡಾರ್ಜಿಲಿಂಗ್, ಗೆಳೆಯ ಗಿರೀಶ್ ಪಾಲಡ್ಕರಿಗೆ ಮಾತ್ರ ಎರಡನೇ ಭೇಟಿಯಲ್ಲಿ ಒಲಿದಿತ್ತು, ಡಾರ್ಲಿಂಗೇ ಆಗಿತ್ತು. ಅದರ ವಿವರಗಳನ್ನು ಕೇಳಲು/ ಓದಲು ಮುಂದಿನ ವಾರದವರೆಗೆ ಕಾಯುವಿರಲ್ಲಾ?

(ಮುಂದುವರಿಯಲಿದೆ)