ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿನಾಲ್ಕು

ನಾಳೆ ಎಂದೂ ನಿನ್ನೆಯಷ್ಟು ಒಳ್ಳೆಯದಾಗಿರದು ಎನ್ನುತ್ತಾರೆ. ಕಾಫಿಕಾಡ್ ಶಾಲೆಯಲ್ಲಿ ಐದು ವರ್ಷ ಪೂರೈಸುತ್ತಿರುವಾಗಲೇ ಮಂಗಳೂರಲ್ಲಿ ಕನ್ನಡ ಸಂಘದವರು ಕನ್ನಡ ಪಂಡಿತ್ ಪರೀಕ್ಷೆಗೆ ಕುಳಿತುಕೊಳ್ಳುವವರಿಗಾಗಿ ತರಗತಿಯನ್ನು ನಡೆಸುತ್ತಿದ್ದಾರೆಂದು ತಿಳಿಯಿತು. ಹಿಂದಿ ಪ್ರವೀಣ ಪರೀಕ್ಷೆ ಮುಗಿಸಿದ ನನಗೆ ಕನ್ನಡ ಪಂಡಿತೆಯಾಗುವ ಕನಸು ಗರಿಗೆದರಿತು. ಆ ತರಗತಿ ವಾರದಲ್ಲಿ ಒಂದು ದಿನ ಆದಿತ್ಯವಾರ ಮಾತ್ರ. ನನ್ನ ಮನಸ್ಸಿನಲ್ಲಿ ಒಂದು ದುರಾಸೆ ಮೂಡಿತು. ನನಗೆ ಹತ್ತಿರವಿರುವ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡರೆ ಹೇಗೆ? ಸರಿ, ಅರ್ಜಿ ಗುಜರಾಯಿಸಿದೆ. ೬೮ರ ಫೆಬ್ರವರಿ ಮೂರನೇ ವಾರದಲ್ಲಿ ಕದ್ರಿ ಶಾಲೆಗೆ ನನಗೆ ವರ್ಗಾವಣೆ ಆಯಿತು. ಪ್ರತಿಯೊಂದು ಬದಲಾವಣೆಯೂ ಕೆಲವು ಕೆಡುಕುಗಳನ್ನು ತನ್ನೊಂದಿಗೇ ತರುತ್ತದಂತೆ. ನಾನು ಅಲ್ಲಿಗೆ ನುಗ್ಗಬೇಕಾದರೆ ಅಲ್ಲಿಂದ ಹಿಂದಿ ಟೀಚರನ್ನು ದಬ್ಬಲೇಬೇಕಲ್ಲಾ. ನನ್ನೊಬ್ಬಳ ಸ್ವಾರ್ಥ ಮುನ್ಸಿಪಲ್ ಶಾಲೆಯ ಅನೇಕರನ್ನು ಅಲ್ಲೋಲ ಕಲ್ಲೋಲ ಮಾಡಿತು. ಶಾಂತವಾದ ಕೊಳಕ್ಕೆ ಕಲ್ಲೆಸೆದಂತಾಯಿತು. ಪ್ರತಿಯೊಬ್ಬರಿಗೂ ಅವರದೇ ಆದ ಕಷ್ಟಗಳು ಸಮಸ್ಯೆಗಳು ಇವೆ. ಕದ್ರಿ ಶಾಲೆಯಲ್ಲಿದ್ದ ಹಿಂದಿ ಶಿಕ್ಷಕಿ ಬಾಳಿನಲ್ಲಿ ತುಂಬಾ ನೊಂದವರು. ಅಸ್ವಸ್ಥನಾದ ತಮ್ಮನ ಆರೈಕೆಯಲ್ಲಿ ನೋವು ನುಂಗಿ ಬದುಕು ಸವೆಸುತ್ತಿದ್ದವರು. ಅದು ತಿಳಿದ ನಂತರ ನನಗೆ ಯಾಕೆ ಈ ವರ್ಗಾವಣೆಯ ದುಷ್ಟ ಯೋಚನೆ ಬಂತು ಎಂದು ಪರಿತಪಿಸಿದೆ. ಈ ತಪ್ಪಿಗೆ ಶಿಕ್ಷೆಯಾಗಿ ವಿಪತ್ತುಗಳು ಸಾಲು ಸಾಲಾಗಿ ಕಾದು ನಿಂತದ್ದು ನನಗೆ ಆಗ ತಿಳಿಯಲೇ ಇಲ್ಲ. ಆ ಶಾಲೆಯಲ್ಲಿ ನಾನು ಬೇಡದ ಅತಿಥಿಯಾದೆ.

ಅದೇ ವರ್ಷ ಜೂನ್ ತಿಂಗಳೋ ಜುಲೈಯಲ್ಲೋ ಇರಬೇಕು, ಶಾಲಾ ತಪಾಸಣಾಧಿಕಾರಿ ಶ್ರೀಧರ್ ಎಂಬವರು ತಪಾಸಣೆಗಾಗಿ ಪ್ರತೀ ವರ್ಗಕ್ಕೂ ಬಂದರು. ನನ್ನ ಹಿಂದಿ ತರಗತಿಗೆ ಬಂದು ಮಕ್ಕಳಲ್ಲಿ ನನ್ನಲ್ಲಿ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ಆ ವರ್ಷ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಹಿಂದಿಯಲ್ಲಿ ಮಕ್ಕಳ ಫಲಿತಾಂಶವನ್ನು ವಿಚಾರಿಸಿ ಮುಖ್ಯೋಪಾಧ್ಯಾಯಿನಿಯವರಿಂದ ತರಿಸಿ ನೋಡಿದರು. ಹಿಂದಿ ಫಲಿತಾಂಶ ತೀರಾ ಕಳಪೆಯೆಂದು ಮಕ್ಕಳ ಮುಂದೆಯೇ ನನ್ನನ್ನು ನಿಂದಿಸಿದ್ದಲ್ಲದೆ `ನಿಮ್ಮ ಇಂಕ್ರಿಮೆಂಟ್ ಕಟ್ ಮಾಡಿಸುತ್ತೇನೆ’ ಎಂದು ತಾಕೀತು ಮಾಡಿದರು. ಹತ್ತಿರದಲ್ಲಿ ಮುಖ್ಯೋಪಾಧ್ಯಾಯಿನಿ ಇದ್ದರೂ ಸಮಜಾಯಿಸಿ ನೀಡುವ ಗೋಜಿಗೆ ಹೋಗಲಿಲ್ಲ. ಫೆಬ್ರವರಿಯಲ್ಲಿ ಬಂದ ನಾನು ಮಾರ್ಚ್ ತಿಂಗಳಲ್ಲಿ ನಡೆದ ಫಲಿತಾಂಶಕ್ಕೆ ಹೇಗೆ ಹೊಣೆ ಎಂದು ನನಗೆ ತಿಳಿಯಲಿಲ್ಲ. ನಾಲಗೆ ಸತ್ತಂತೆ ನಾನು ಸಹಿಸಿದೆ. ಸಮಯ ಮತ್ತು ಪರಿಸರಗಳು ಮನುಷ್ಯನನ್ನು ಸಬಲನನ್ನಾಗಿಯೂ ನಿರ್ಬಲನನ್ನಾಗಿಯೂ ಮಾಡುತ್ತವೆ. ಅಶಕ್ತರು ಶಕ್ತಿಗಾಗಿಯಾದರೂ ತಾಳ್ಮೆ ವಹಿಸಲೇಬೇಕಲ್ಲ. ಸುಮ್ಮನಿದ್ದು ಸಹಿಸುವವರ ಮೇಲೆಯೇ ಸವಾರಿ ಮಾಡುವುದೂ ಈ ಲೋಕದ ನಡವಳಿಕೆ. ಅದೇ ವರ್ಷ ಕೊನೆಯ ಡಿಸೆಂಬರ್‌ನಲ್ಲಿ ನನಗೆ ಬಂದರಿನ ಶಾಲೆಗೆ ವರ್ಗಾವಣೆ ಆಯಿತು.

ಅಲ್ಲಿಯ ರಜಾ ನಿಯಮಗಳು ಬೇರೆ ಶಾಲೆಗಳಂತೆ ಅಲ್ಲ. ಆದಿತ್ಯವಾರ ಇಡೀ ದಿನ ಶಾಲೆ. ಶುಕ್ರವಾರ ರಜೆ. ಮಕ್ಕಳೆಲ್ಲಾ ಮುಸ್ಲಿಮರು. ಆದರೆ ಶಿಕ್ಷಕರು ಬೇರೆ ಮತದವರೂ ಇದ್ದರು. ನನಗಂತೂ ಬೆಂಕಿಯಿಂದ ಎತ್ತಿ ಬಾಣಲೆಗೆ ಹಾಕಿದಂತಾಯಿತು. ಪಂಡಿತೆಯಾಗುವ ಕನಸುಗಳನ್ನು ಗುಂಡಿಯಲ್ಲಿ ಹೂಳಬೇಕಾಯಿತು. ಕಸಾಯಿ ಗಲ್ಲಿಯಲ್ಲಿ ಸುತ್ತಿ ಆ ಶಾಲೆಯ ಮೆಟ್ಟಲೇರುವಾಗ ನಾನು ನಾನಾಗಿರಲಿಲ್ಲ. ಒಂದು ಪ್ರೇತ ಕಳೆ ಹೊತ್ತ ಕೊರಡಾಗಿದ್ದೆ. ಮುಖ್ಯೋಪಾಧ್ಯಾಯರಾದ ಬಿ.ಎಸ್. ಮಹಮದ್ ಕುಮಾರ್‌ರವರ ಮುಂದೆ ನಿಂತಾಗ ನಾನು ಎಷ್ಟು ನಿಗ್ರಹಿಸಿದರೂ ಕಣ್ಣು ತುಳುಕಿತು. ಅವರು ತಾಳ್ಮೆಯಿಂದ ನನ್ನ ಪೂರ್ವಾಪರಗಳನ್ನೆಲ್ಲಾ ವಿಚಾರಿಸಿದರು. ಸಾಹಿತ್ಯಪ್ರೇಮಿಯೂ ಕತೆಗಾರರೂ ಆಗಿದ್ದ ಅವರು ಕನ್ನಡ ಕ್ಲಾಸ್ ತಪ್ಪಿಸಬೇಡಿ. ರಜೆ ಮಾಡಿ ಹೋಗಿ ಪುನಃ ವರ್ಗಾವಣೆಗೆ ಒಂದು ಅರ್ಜಿ ಹಾಕಿ ಎಂದು ಸಲಹೆ ಕೊಟ್ಟರು.

ಆ ಶಾಲೆ ನನಗೆ ಈವರೆಗೆ ಅಪರಿಚಿತವಾದ ಒಂದು ಸಮುದಾಯವನ್ನು ಹತ್ತಿರದಿಂದ ಅರಿಯುವ ಅವಕಾಶ ನೀಡಿತು. ತೀರಾ ಕೆಳವರ್ಗದ ಬಡ ಮುಸ್ಲಿಂ ಮಕ್ಕಳೇ ಹೆಚ್ಚಿರುವ ಈ ಶಾಲೆಯಲ್ಲಿ ಮಕ್ಕಳು ತಪ್ಪದೆ ಶಾಲೆಗೆ ಬರುವುದೆಂದೇ ಇಲ್ಲ. ಶಾಲೆಗೆ ಹೊತ್ತಿಗೆ ಸರಿಯಾಗಿ ಬರುವ ಕ್ರಮವೂ ಇಲ್ಲ. ೪೦-೪೫ ವರ್ಷಗಳ ಹಿಂದೆ ಮುಸ್ಲಿಂ ಜನಾಂಗದವರಿಗೆ ಅದರಲ್ಲೂ ಬಡವರಿಗೆ ಶಾಲೆ ಒಂದು ಲಕ್ಷುರಿಯ ವಸ್ತುವಾಗಿ ಹೊರೆಯಾಗಿ ಕಂಡಿತ್ತು. ಬೆಳಿಗ್ಗೆ ಎದ್ದು ಏನೇನೋ ಕೂಲಿ ಕೆಲಸ ಮಾಡಿ ಬರುವ ಮಕ್ಕಳೂ ಇದ್ದರು. (ಆಡುಗಳಿಗೆ ಎಲ್ಲೆಲ್ಲಿಂದ ಹಲಸಿನ ಎಲೆ ತಂದು ಮಾರಾಟ ಮಾಡುವುದು) ಅಮ್ಮ ಹೋದಲ್ಲಿಗೆಲ್ಲಾ ಜೊತೆಯಲ್ಲಿ ಹೋಗಬೇಕಾದುದರಿಂದ (ಒಂಟಿಯಾಗಿ ಹೆಂಗಸರು ಎಲ್ಲೂ ಹೋಗುತ್ತಿರಲಿಲ್ಲ) ಮಕ್ಕಳು ಶಾಲೆಗೆ ಗೈರುಹಾಜರಾಗುವುದು ಸಾಮಾನ್ಯ. ಹೆತ್ತವರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದು ಇರಲೇ ಇಲ್ಲ. ಆದರೂ ಈ ಮಕ್ಕಳಷ್ಟು ವ್ಯವಹಾರಜ್ಞಾನ, ಚುರುಕು ಬುದ್ಧಿ ಬೇರೆ ಶಾಲೆಯ ಮಕ್ಕಳಲ್ಲಿ ಕಡಿಮೆ. ಇಂಗ್ಲಿಷ್ ಅಕ್ಷರ, ಕನ್ನಡ ಅಕ್ಷರ ತಲೆ ಸೀಳಿದರೂ ಜೋಡಿಸಿ ಬರೆಯಲಸಾಧ್ಯವಾದ ಮಗು ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದ ಜಾಣ. ಇಂತಹ ಮಕ್ಕಳ ಸಂಖ್ಯೆಯೇ ಹೆಚ್ಚು. ಉಚ್ಚಾರ ದೋಷಗಳನ್ನು ತಿದ್ದುವುದು ಕಷ್ಟವೇ ಸರಿ. ಯಾವ ಮನೆಯಲ್ಲಿ ವಿದ್ಯೆಯು ಪ್ರವೇಶಿಸಲಿಲ್ಲವೋ ಆ ಮನೆಯಿಂದ ಬರುವ ಮಕ್ಕಳಲ್ಲಿ (ದಲಿತ ವರ್ಗದವರಲ್ಲೂ) ಈ ರೀತಿಯ ಉಚ್ಚಾರ ದೋಷಗಳು ಸಾಮಾನ್ಯ. ಶಿಕ್ಷಣಕ್ಕೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಾ ಬಂದಂತೆ ಈ ದೋಷಗಳು ಕಡಿಮೆಯಾಗುತ್ತಾ ಬಂದುದನ್ನು ನಾನು ಗಮನಿಸಿದ್ದೇನೆ. ಶಿಕ್ಷಿತ ಕುಟುಂಬದಲ್ಲಿ ಬೆಳೆದ ದಲಿತ ಮಕ್ಕಳು ಯಾವ ರೀತಿಯಲ್ಲೂ ಮೇಲ್ವರ್ಗದವರಿಗಿಂತ ಹಿಂದೆ ಉಳಿದಿಲ್ಲ. ನಾನು ಕಣ್ಣು ತುಂಬಿಕೊಂಡು ಆ ಶಾಲೆಗೆ ಪ್ರವೇಶಿಸಿದರೂ ಆ ಮಕ್ಕಳು ನನ್ನ ಹೃದಯವನ್ನೇ ತುಂಬಿ ಬಿಟ್ಟರು. ಅಸಾಧ್ಯ ತುಂಟರಾದ ಮೀರ್ ಮತ್ತು ಆಲಿಯಂತಹ ಮಕ್ಕಳು ಈಗಲೂ ನನ್ನ ಕಣ್ಣ ಮುಂದಿದ್ದಾರೆ. ಎಷ್ಟು ತುಂಟರೋ ಅಷ್ಟೇ ಜಾಣರಾಗಿದ್ದ ಅವರ ಕೆಲವು ಪ್ರಶ್ನೆಗಳಿಗೆ ಉತ್ತರ ತಕ್ಷಣ ನನಗೆ ಹೊಳೆಯುತ್ತಿರಲಿಲ್ಲ. ಕೇಳಿ ಹೇಳುತ್ತೇನೆ ಎಂದು ಸಮಾಧಾನಪಡಿಸಿ ಮರುದಿನ ಹೇಳಲಾಗದೆ ಪೇಚಾಡಿದ್ದುಂಟು. ವಿದ್ಯೆ ಕಲಿತ ಗರ್ವ, ನಾನೇ ಸರ್ವಜ್ಞೆ ಎಂಬ ಹಮ್ಮನ್ನು ಇಲ್ಲಿನ ಮಕ್ಕಳು ಇಳಿಸಿಯೇ ಬಿಟ್ಟರು. ಹಾಗೆ ನೋಡಿದರೆ ಇಡೀ ನನ್ನ ವೃತ್ತಿಜೀವನದುದ್ದಕ್ಕೂ ಮಕ್ಕಳಿಗೆ ನಾನು ಕಲಿಸಿದ್ದಕ್ಕಿಂತ ಅವರಿಂದ ನಾನು ಕಲಿತುದೇ ಹೆಚ್ಚು. ಸೋಮೇಶ್ವರ ಶತಕದಲ್ಲಿ ಹೇಳಿದಂತೆ `ಕೆಲವಂ ಬಲ್ಲವರಿಂದ, ಕೆಲವಂ ಶಾಸ್ತ್ರಗಳನೋದುತ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತ, ಕೆಲವಂ ಸಜ್ಜನ ಸಂಗದಿಂದ `ಕಲಿಯುತ್ತ’ ಬೆಳೆಯುವುದೇ ಶಿಕ್ಷಕ ವೃತ್ತಿಗೆ ಗೌರವವನ್ನು ತಂದುಕೊಡುವ ದಾರಿ. ಪುಸ್ತಕದ ಓದಿಗಿಂತ ಜೀವನಾನುಭವಗಳು ಕಲಿಸುವ ಪಾಠ ಮಹತ್ತರವಾದದ್ದು. ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಹೇಗೆ ನಮ್ಮನ್ನು ಬಿಗಿದುಕೊಳ್ಳುತ್ತೇನೋ ಹಾಗೆ ನಮ್ಮ ಅನುಭವಗಳು ಮಾಗುತ್ತವೆ. ಇಲ್ಲಿ ಇನ್ನೂ ಒಂದು ಮಾತಿಗೆ. ನಾವು ಮಾಡಿದ ತಪ್ಪುಗಳಿಗೆ ಅನುಭವವೆನ್ನುತ್ತೇವೆಯೇ? ಪ್ರಾಯಶಃ ನನ್ನ ಮಟ್ಟಿಗಂತೂ ಅದೇ ಜೀವನಾನುಭವವಾಗಿಬಿಟ್ಟಿದೆ.

ನದಿಯ ತೀರದುದ್ದಕ್ಕೂ ನಡೆದರೆ ಸಮುದ್ರ ಸಿಕ್ಕಿಯೇ ಸಿಗುತ್ತದೆ ಎಂಬ ವಿಶ್ವಾಸವಿಟ್ಟುಕೊಂಡು ವರ್ಗಾವಣೆಗೆ ಅರ್ಜಿ ಹಿಡಿದುಕೊಂಡು ನಾನು ನನ್ನ ಸಹೋದ್ಯೋಗಿ ಮಿತ್ರೆ ಕುಸುಮಾ ಅವರೊಂದಿಗೆ ನಗರಪಾಲಿಕೆಯ ಕಮಿಶನರನ್ನು ಕಾಣಲು ಹೋದೆ. ಅರ್ಜಿಯನ್ನು ಕೈಯಲ್ಲಿ ಹಿಡಿದು ನಾನೂ ನನ್ನ ಹಿಂದೆ ಕುಸುಮಾ ಟೀಚರ್ ಕಮಿಶನರ್ ನಂಜಯ್ಯನವರ ಛೇಂಬರಿಗೆ ಹೋದೆವು. ಕತ್ತೆತ್ತಿ ನಮ್ಮನ್ನೂ, ಕತ್ತು ತಗ್ಗಿಸಿ ಅರ್ಜಿಯನ್ನೂ ನೋಡಿದ ಅವರು `ಯಾರಿಗೆ ಟ್ರಾನ್ಸ್‌ಫರ್ ಬೇಕಾಗಿದೆ?’ ಎಂದು ಗಂಭೀರವಾಗಿಯೇ ಕೇಳಿದರು. `ನನಗೆ’ ಎಂದ ತಕ್ಷಣ `ಮತ್ತೆ ನೀವೇಕೆ ಒಳಗೆ ಬಂದದ್ದು, ನಡೆಯಿರಿ ಹೊರಗೆ’ ಎಂದು ಕುಸುಮ ಟೀಚರಿಗೆ ಆಜ್ಞಾಪಿಸಿದರು. ಕುಸುಮ ಹೊರ ಹೋದೊಡನೆಯೇ ನನಗೆ ಕುಳಿತುಕೊಳ್ಳಲು ಕುರ್ಚಿ ತೋರಿಸಿದರು. `ಏನು ಹೇಳಿ’ ಎಂದೊಡನೆ ನಾನು ನನ್ನ ಪ್ರವರ ಹೇಳಲು ಪ್ರಾರಂಭಿಸಿದೆ. ತಕ್ಷಣ ನನ್ನ ಮಾತನ್ನು ತುಂಡರಿಸಿ “ಅಲ್ಲಾ, ನಗರದೊಳಗೆ ಮೂರು ನಾಲ್ಕು ಮೈಲಿಗಳೊಳಗಿನ ಶಾಲೆಗಳಿಗೆ ವರ್ಗ ಮಾಡಿದರೆ ಹೀಗೆ ಓಡಿ ಬರುತ್ತೀರಲ್ಲಾ? ನಾನು ನಾಲ್ಕು ನೂರು ಮೈಲು ದೂರದಿಂದ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದೇನೆ. ನಾನೇನು ಮಾಡಬೇಕು?” ಎಂದರು. ಅವರು ಬಂದುದಕ್ಕೂ ನನ್ನ ವರ್ಗಾವಣೆಗೂ ಏನು ಸಂಬಂಧ? ದಿಙ್ಮೂಢಳಾದೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಧೈರ್ಯವನ್ನು ಒಟ್ಟು ಸೇರಿಸಿ, “ಸಾರ್, ನನಗೆ ಎಲ್ಲಿ ಬೇಕಾದರೂ ವರ್ಗಾವಣೆ ಮಾಡಿ. ಆದಿತ್ಯವಾರ ರಜೆ ಇರುವ ಶಾಲೆಗೆ ಮಾತ್ರ ಕಳಿಸಿ ಎಂದಷ್ಟೇ ಕೇಳುತ್ತಿದ್ದೇನೆ.” ಮೇಜಿನ ಮೇಲಿದ್ದ ಅರ್ಜಿಯನ್ನು ಬದಿಗೆ ಸರಿಸಿ, “ಇಲ್ಲ, ಸಾಧ್ಯವಿಲ್ಲ. ಸದ್ಯಕ್ಕಂತೂ ಸಾಧ್ಯವಿಲ್ಲ. ನನಗೆ ಬೇರೆ ಕೆಲಸವಿದೆ. ಹಾಗೆ ಅಗತ್ಯವಿದ್ದರೆ ನನ್ನ ಬಂಗಲೆಗೆ ಬನ್ನಿ. ಅಲ್ಲಿ ಮಾತಾಡೋಣ. ಈಗ ಪುರುಸೊತ್ತಿಲ್ಲ. ಇನ್ನು ನೀವು ಹೋಗಬಹುದು” ಎಂದು ಬಾಗಿಲು ತೋರಿಸಿದರು. ಹಗಲು ಎಷ್ಟೋ ಉಜ್ವಲವಾಗಿದ್ದರೂ ನಂತರದ ಅಂಧಕಾರವನ್ನು ತಪ್ಪಿಸಲು ಸಾಧ್ಯವಿಲ್ಲವಲ್ಲಾ. ನನ್ನ ಸುತ್ತಲೂ ಕತ್ತಲು ಕವಿಯಿತು. ಕುಸುಮಕ್ಕ ಎಲ್ಲಾ ಕೇಳಿಸಿಕೊಂಡಿದ್ದರು. ಆದರೂ ವಿಷಯ ಹೇಳಿ ಅತ್ತೇ ಬಿಟ್ಟೆ. ಅವರೇನೋ ಸಾಂತ್ವನ ನೀಡಿದರು. ಮುಂದೇನು ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಂತಿತು.

ಬಡವರು, ಪ್ರಭಾವೀ ವ್ಯಕ್ತಿಗಳ ಆಶೀರ್ವಾದವಿಲ್ಲದವರು ಸೇವೆಯಲ್ಲಿ ಸ್ವತಂತ್ರವಾಗಿ, ಸುಖವಾಗಿ ಇರುವುದು ಬಹುಮಟ್ಟಿಗೆ ಅಸಾಧ್ಯವೆಂಬುದು ಅಂದೂ ಇಂದೂ ನಿತ್ಯ ಸತ್ಯವಾಗಿದೆ. ಎಂಟನೆಯ ತರಗತಿಯಲ್ಲಿ ಓದುತ್ತಿರುವ ತಮ್ಮ, ಕಾಯಿಲೆಯಲ್ಲಿ ನರಳುತ್ತಿದ್ದ ತಂದೆ, ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ನನ್ನ ಅಮ್ಮ ಬಿಟ್ಟು ಬೇರಾರೂ ನನ್ನ ಬಂಧುಗಳೆಂದು ಬೆಂಬಲಿಗರಿಲ್ಲ. ಕುಸುಮಕ್ಕ ನನ್ನ ಕೈ ಬಿಡಲಿಲ್ಲ. ಅಂದಿನ ನಗರಸಭೆಯ ಚೇರ್‌ಮ್ಯಾನ್ ವಾಮನ ಕೊಡಿಯಾಲಬೈಲ್ ಅವರ ಮನೆಗೆ ಕರೆದೊಯ್ದು ವಿಷಯ ತಿಳಿಸಿದೆವು. ಕಮಿಷನರ್‌ನ ಭ್ರಷ್ಟಾಚಾರಗಳ ಬಗ್ಗೆ ಅವರ ಜಾತಕದ ಬಗ್ಗೆ ಗೊತ್ತಿದ್ದ ಅವರು ನಮ್ಮನ್ನು ಸಂತೈಸಿ ಮಾತನಾಡಿದರು. ಅವರ ಸರಳತನವನ್ನು ಕಂಡು ಇಷ್ಟು ದೊಡ್ಡ ಹುದ್ದೆಯಲ್ಲಿರುವವರೂ ಹೀಗೆ ಇರಬಲ್ಲರೇ ಎಂದು ಆಶ್ಚರ್ಯವಾಯಿತು. ಒಂದು ಸಣ್ಣ ಔಷಧಿಯ ಅಂಗಡಿಯಿದ್ದು ವೈದ್ಯ ವೃತ್ತಿಯಲ್ಲಿದ್ದ ಅವರು ನಿಜವಾದ ಅರ್ಥದಲ್ಲಿ ಜನಸೇವಕರೇ ಆಗಿದ್ದರು. ಭರವಸೆ ಕೊಟ್ಟು ಹರಸಿದರು. ಆದರೆ ತಿಂಗಳು ಉರುಳಿದರೂ ಏನೂ ಆಗಲಿಲ್ಲ. ಕಷ್ಟಕಾಲದಲ್ಲಿ ನಮ್ಮ ಜೊತೆ ಯಾರು ಬರುತ್ತಾರೆ. ಕತ್ತಲೆಯಲ್ಲಿ ನೆರಳೂ ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆಯಲ್ಲವೇ? ಬುದ್ಧಿ ತಿಳಿದಂದಿನಿಂದಲೂ ಕಷ್ಟಗಳೇ ನನ್ನ ವಿದ್ಯಾಗುರು. ಪರಿಶ್ರಮದಿಂದ ದೇಹಬಲ ಹೆಚ್ಚಿದಂತೆ ಆಪತ್ತುಗಳಿಂದ ಮನೋಬಲ ಹೆಚ್ಚುತ್ತದೆ ಎನ್ನುವುದು ಸುಳ್ಳಲ್ಲ. ಗುರಿಯ ಕಡೆಗೆ ಓಡುವವರಿಗೆ ಒಂದೇ ದಾರಿ. ಗುರಿಯನ್ನು ಬೆನ್ನು ಹತ್ತುವವರಿಗೆ ನೂರು ದಾರಿಗಳಿರುತ್ತವೆ ಎನ್ನುತ್ತಾರೆ. ನನಗಂತೂ ಬೆನ್ನು ಹತ್ತಿ ಗುರಿ ಸಾಧಿಸಲೂ ಕೂಡಾ ಛೇರ್‌ಮ್ಯಾನ್ ಒಬ್ಬರ ಮೂಲಕದ ದಾರಿ ಬಿಟ್ಟರೆ ಬೇರೆಲ್ಲಾ ದಾರಿಗಳು ಮುಚ್ಚಿದ್ದವು.

ಮುಂದಿನ ನಗರಸಭೆಯ ಅಧಿವೇಶನದ ಅಜೆಂಡಾದಲ್ಲೇ ನನ್ನ ವರ್ಗಾವಣೆಯ ಮಾತನ್ನು ಎತ್ತಿದ ಛೇರ್‌ಮ್ಯಾನ್ ವಾಮನ ಕೊಡಿಯಾಲ್‌ಬೈಲ್ ಅವರು ಕೌನ್ಸಿಲರ್‌ಗಳ ಸಹಮತದೊಂದಿಗೆ ನನ್ನ ವರ್ಗಾವಣೆಯನ್ನು ಮಣ್ಣಗುಡ್ಡೆ ಶಾಲೆಗೆ ಮಾಡಿಸಿಯೇ ಬಿಟ್ಟರು. ಬಡವರಿಗೆ ದೇವರೇ ದಿಕ್ಕು ಎನ್ನುತ್ತಾರೆ. ನನಗೆ ವಾಮನ್ ಅವರೇ ದೇವರಂತೆ ಕಂಡರು. ಅವರ ದೊಡ್ಡತನಕ್ಕೆ ನನ್ನ ಸಾವಿರ ಸಾವಿರ ಪ್ರಣಾಮಗಳು. ಅವರು ಈ ಲೋಕವನ್ನು ಬಿಟ್ಟರೂ ಕಾಲದ ಮಣ್ಣಲ್ಲಿ ಅವರ ಹೆಜ್ಜೆಗುರುತುಗಳು ಶಾಶ್ವತವಾಗಿ ಉಳಿದಿರುತ್ತವೆ. ಓರ್ವ ಕಮ್ಯುನಿಸ್ಟ್ ಚಿಂತಕರಾಗಿದ್ದ ಅವರು ನನ್ನಂತಹ ಅಸಹಾಯಕರ ಅಳಲನ್ನು ಅರಿತಿದ್ದು ಸ್ಪಂದಿಸಿದ್ದು ಸಹಜವೇ ಆಗಿತ್ತು.

ವರ್ಗಾವಣೆ ಏನೋ ಆಗಿ ಆದೇಶ ಪತ್ರ ಪಡೆದು ಮಣ್ಣಗುಡ್ಡೆ ಶಾಲೆಗೆ ಹೋದರೆ ಅಲ್ಲಿಯ ಹೆಡ್ಮಾಸ್ಟರು ಶಿವರಾಯರು ನನಗೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕಲು ಬಿಡಲೇ ಇಲ್ಲ. ಯಾಕೆಂದರೆ ಅಲ್ಲಿಂದ ವರ್ಗವಾಗಿ ಹೋದ ಶ್ಯಾಮ್ ಮಾಸ್ಟರನ್ನು ಮರಳಿ ಅಲ್ಲಿಗೇ ಕರೆಸಲಾಗುವುದೆಂದೂ ನೀವು ಬಂದಲ್ಲಿಗೇ ಹಿಂದೆ ಹೋಗಬೇಕೆಂದೂ ಹೇಳಲಾಯಿತು. ಈ ಶಿವರಾಯರು ಕಾಪಿಕಾಡು ಶಾಲೆಯಲ್ಲಿ ನನಗೆ ಹೆಡ್ಮಾಸ್ಟರ್ ಆಗಿದ್ದವರು. ನಾನಲ್ಲಿ ಮೊತ್ತಮೊದಲು ವೃತ್ತಿಗೆ ಸೇರಿಕೊಂಡ ಕೆಲವೇ ತಿಂಗಳಲ್ಲಿ ಅವರಿಗೆ ಮಣ್ಣಗುಡ್ಡೆ ಶಾಲೆಗೆ ವರ್ಗವಾಗಿತ್ತು. ನನ್ನ ಬಗ್ಗೆ ಬಹಳ ಮಮತೆಯಿಂದ ಗೌರವದಿಂದ ಮಾತಾಡಿಸುತ್ತಿದ್ದ ಅವರು ಮಣ್ಣಗುಡ್ಡೆ ಶಾಲೆಗೆ ನಾನು ಬಂದಾಗ ಯಾಕೆ ನಿಷ್ಠುರಿಯಾದರೋ ಗೊತ್ತಿಲ್ಲ. ಬೆಚ್ಚಗಿರಬೇಕಾದರೆ ಹೊಗೆಯನ್ನೂ ಸಹಿಸಬೇಕಲ್ಲಾ! ಈ ಹಗೆಯ ಕಾರಣ ಮಾತ್ರ ತಿಳಿಯಲಿಲ್ಲ. ಸಂತೆಯೊಳಗೆ ಮನೆಯ ಮಾಡಿ ಶಬ್ದಕ್ಕೆ ನಾಚಬಾರದು ಎಂಬ ಅಕ್ಕನ ಮಾತು ನೆನಪಾಯಿತು. ಮರುದಿನವೂ ನಾನು ಹಾಜರಿ ಪುಸ್ತಕದಲ್ಲಿ ಸಹಿ ಮಾಡುವುದು ಬೇಡ ಎಂಬ ಅಪ್ಪಣೆಯಾಯಿತು. ಸಂಜೆ ಶಾಲೆ ಬಿಟ್ಟ ಮೇಲೆ ಹೆಡ್ಮಾಸ್ಟರ ಬುಲಾವ್ ಬಂತು. ಸಹಿ ಹಾಕಲು ಹೇಳಿದರು. ಶ್ಯಾಮ್ ಮಾಸ್ಟರನ್ನು ಹಿಂದಕ್ಕೆ ಕರೆಸುವ ಪ್ರಯತ್ನ ವಿಫಲವಾಯಿತೆಂದು ಕಾಣುತ್ತದೆ.

ಇಲ್ಲಿಯೂ ನಾನು ಬೇಡದ ಅತಿಥಿಯಾಗಿ ಕಾಲ ಕಳೆಯಬೇಕಾಯಿತು. ಮರು ವಾರದಲ್ಲಿ ಒಂದು ದಿನ ಮಣ್ಣಗುಡ್ಡೆ ಶಾಲೆಗೆ ಕಮಿಶನರ್ ನಂಜಯ್ಯ ಅನಿರೀಕ್ಷಿತ ಭೇಟಿ ಕೊಟ್ಟರು. ತರಗತಿಯಲ್ಲಿ ಪಾಠ ಮಾಡುತ್ತಿದ್ದ ನನ್ನನ್ನು ಆಫೀಸ್ ಕೋಣೆಗೆ ಬರಬೇಕೆಂದು ಕರೆ ಬಂತು. ಹೆಡ್ಮಾಸ್ಟರ ಕುರ್ಚಿಯಲ್ಲಿ ಅಸೀನರಾದ ಅವರು ನ್ನನ್ನು ಕಂಡು ಏನು ಹೇಗಿದ್ದೀರಿ? ಎಂದು ಭಾರೀ ಪರಿಚಿತರಂತೆ ಸಲುಗೆಯಿಂದ ಮಾತನಾಡಿಸಿದಾಗ ನನಗೆ ದಿಗಿಲು. ಗಂಟಲೊಣಗಿ ಬಾಯಿಂದ ಮಾತೇ ಹೊರಡಲಿಲ್ಲ. ಮೈಯಲ್ಲಿ ರಕ್ತವೇ ಇಲ್ಲದವರಂತೆ ಇದ್ದೀರಲ್ಲಾ, ನೀವು ಸರಿಯಾಗಿ ಆಹಾರ ಸೇವಿಸುವುದಿಲ್ಲವೇನು? ಎಂದು ಕೇಳಿದರು. ಆಗ ಹೆಡ್ಮಾಸ್ಟರರ ಮುಖದಲ್ಲಾದ ಪರಿವರ್ತನೆ, ಈ ಮನುಷ್ಯನ ಮಾತು, ವರ್ತನೆ ಕಂಡು ಭೂಮಿ ಬಾಯಿ ಬಿಡಬಾರದೇ ಎಂಬಷ್ಟು ಕುಗ್ಗಿ ಹೋದೆ. ಸಿಟ್ಟು ಕುದಿಯುತ್ತಿದ್ದರೂ ಬಡವನ ಸಿಟ್ಟು ದವಡೆಗೆ ಮೂಲವೆಂಬ ಸಹನೆಯನ್ನು ಬಾಚಿ ಮನಸ್ಸಿಗೆ ಮೆತ್ತಿಕೊಂಡೆ. ನಾನು ಕ್ಲಾಸಿಗೆ ಹೋಗುತ್ತೇನೆ ಎಂದು ಕೋಣೆಯಿಂದ ಹೊರನಡೆದೆ. ಕ್ಲಾಸಿಗೆ ಹೋದರೂ ಮಕ್ಕಳಾಗಲೀ ಪುಸ್ತಕದ ಅಕ್ಷರವಾಗಲೀ ಕಾಣಲಾರದಷ್ಟು ಮೆದುಳು ಸ್ತಬ್ಧವಾಗಿತ್ತು. ಯಾಕೆ ಹಾಗೆ ಪ್ರಶ್ನಿಸಿದ? ಅವನ ಪ್ರಶ್ನೆಯಿಂದ ಹೆಡ್ಮಾಸ್ಟರು ಏನು ಯೋಚಿಸಿರಬಹುದು? ಈ ಎಲ್ಲಾ ತಳಮಳ ಕಾಡಿ ಚಿತ್ತಸ್ವಾಸ್ಥ್ಯವನ್ನೇ ಕೆಡಿಸಿಬಿಟ್ಟಿತು. ನನ್ನ ಊಹೆ ಸುಳ್ಳಾಗಲಿಲ್ಲ. ಸಂಜೆ ಹೆಡ್ಮಾಸ್ಟರರೇ ಕೇಳಿದರು, ನಿಮಗೆ ಕಮಿಶನರ್ ತುಂಬಾ ಪರಿಚಯದವರಾ? ಎಂದರು. ಏನುತ್ತರ ಕೊಡುವುದು? ಸತ್ಯ ಹೇಳಿದರೆ ನಂಬಲಾರರು. ಹೌದು, ಆಫೀಸಿಗೆ ಅವರನ್ನು ಕಾಣಲು ಹೋಗಿದ್ದೆ ಎಂದಷ್ಟೇ ಹೇಳಿದೆ. ಪುಣ್ಯಕ್ಕೆ ಹೇಗೆ? ಎಂದು ನನಗೆ ಮರುಪ್ರಶ್ನೆ ಮಾಡಲಿಲ್ಲ. ನಾನು ಲಂಚ ಕೊಟ್ಟೋ ಅಥವಾ ಯಾವುದೋ ರೀತಿಯ ಪ್ರಭಾವ ಬೀರಿಯೋ ಆ ಶಾಲೆಗೆ ಬಂದಿದ್ದೇನೆಂದು ಅವರ ಮುಖಭಾವದಿಂದ ನಾನು ಊಹಿಸಿದೆ. ಸತ್ಯವನ್ನಾಗಲೀ ಸೂರ್ಯಕಿರಣವನ್ನಾಗಲೀ ಮುಷ್ಠಿಯಿಂದ ಹಿಡಿದು ಅಮುಕುವುದು ಸಾಧ್ಯವೇ?

ನಾಲ್ಕೇ ತಿಂಗಳಲ್ಲಿ ನನಗೆ ಪಾಂಡೇಶ್ವರ ಶಾಲೆಗೆ ವರ್ಗಾವಣೆ. ನಾನು ಆ ಶಾಲೆಗೆ ಸೇರಿದ ಕೆಲವೇ ದಿನಗಳಲ್ಲಿ ಅಮೇರಿಕದ ವ್ಯೋಮಯಾನಿಗಳು ಚಂದ್ರನಲ್ಲಿ ಕಾಲೂರಿದರು. ಅವರು ಭೂಮಿಗೆ ಮರಳುವವರೆಗಾದರೂ ಆ ಶಾಲೆಯಲ್ಲಿ ಇರುತ್ತೇನೋ ಇಲ್ಲವೋ ಎಂಬ ಸಂದೇಹವಿತ್ತು. ನಾನು ಯಾವ್ಯಾವ ಶಾಲೆಗಳಿಗೆ ವರ್ಗಾವಣೆಯಾಗಿ ಹೋದೆನೋ ಆ ಸ್ಥಾನದಲ್ಲಿದ್ದವರೆಲ್ಲಾ ಮತ್ತೆ ಅಲ್ಲಿಗೇ ಮರಳುವ ಶತ ಪ್ರಯತ್ನ ಮಾಡುತ್ತಿದ್ದರು. ಎಲ್ಲಾ ಶಾಲೆಯಲ್ಲೂ ನಾನೊಬ್ಬ ಅನಪೇಕ್ಷಿತ ಅತಿಥಿ. ನಾನು ಹೋಗುವ ಮೊದಲೇ ನನ್ನ ಎಲ್ಲಾ ವಿವರಗಳೂ ತಿಳಿದಂತೆ ಅಲ್ಲಿಯ ಹೆಡ್ಮಾಸ್ಟರು ವರ್ತಿಸುತ್ತಿದ್ದರು. ಇಂತಹ ಮಾನಸಿಕ ಹಿಂಸೆ ಯಾವ ಪಾಪಿಗೂ ಬೇಡ ಎಂಬಂತಾಯಿತು. ಜೀವನ ಸೌಂದರ್ಯಪೂರ್ಣವಾದುದೆಂದು ನಾನು ನಿದ್ದೆಯಲ್ಲಿ ಕನಸು ಕಂಡಿದ್ದೆ. ಆದರೆ ಎಚ್ಚರವಾದಾಗ ಅದು ಕೇವಲ ಕರ್ತವ್ಯಪೂರ್ಣವಾದುದೆಂದು ಅರಿವಾಯಿತು. ಆದರೆ ನನ್ನ ಕರ್ತವ್ಯವೆಂದೂ ಸುಗಮವಾಗಲೇ ಇಲ್ಲ. ಆಗಾಗ ಇಂತಹ ಕಿರುಗುಟ್ಟುವಿಕೆ, ಅಪಸ್ವರಗಳು ಏಳುತ್ತಲೇ ಇದ್ದವು. ಅದಕ್ಕೆ ವಿಶ್ವಾಸ, ಪ್ರೀತಿಯ ಕೀಲೆಣ್ಣೆಯನ್ನು ಸುರಿಯುತ್ತಲೇ ಇರಬೇಕಲ್ಲವೇ? ಕುಸುಮಕ್ಕನಂತಹ ಒಬ್ಬಿಬ್ಬರು ಪ್ರತೀ ಶಾಲೆಯಲ್ಲೂ ಸಿಗುತ್ತಿದ್ದುದರಿಂದ ಬದುಕು ಸಹ್ಯವಾಯಿತು.

ನನ್ನ ಊಹೆಯಂತೆ ಪಾಂಡೇಶ್ವರ ಶಾಲೆಯಿಂದ ಎರಡೇ ತಿಂಗಳೊಳಗೆ ಮತ್ತೆ ಕದ್ರಿ ಶಾಲೆಗೆ ನನ್ನ ವರ್ಗಾವಣೆಯಾಯಿತು. ಒಂದು ವರ್ಷದೊಳಗೆ ನಾಲ್ಕು ಶಾಲೆಗಳನ್ನು ಸುತ್ತಿದ ನನಗೆ ಮಕ್ಕಳ ಪ್ರೀತಿಯನ್ನು ಗಳಿಸುವುದಾಗಲೀ ನನ್ನ ವೃತ್ತಿಗೆ ನ್ಯಾಯ ಸಲ್ಲಿಸುವುದಾಗಲೀ ಸಾಧ್ಯವಾಗಲೇ ಇಲ್ಲ. ಮಾನಸಿಕವಾಗಿ ತೀರಾ ಹತಾಶಳಾದ ಆ ದಿನಗಳಲ್ಲಿ ನನ್ನ ಮಾನಸಿಕ ಸ್ಥಿರತೆಯನ್ನು ಕಾಪಾಡಿದ್ದು ಸಾಹಿತ್ಯದ ಓದು. ಆ ಸಮಯದಲ್ಲಿ ನಾನು ಮೌನಕ್ಕೆ ಶರಣಾಗಿದ್ದೆ. ಮಾತಿನ ಬಡತನ ನನ್ನ ಮಾನಸಿಕ ದಾರಿದ್ರ್ಯದ ಸಂಕೇತವೇ ಆಯಿತು. ಕದ್ರಿ ಶಾಲೆಯಿಂದ ಯಾವ ಹೊತ್ತಿಗೆ ಹೊರದಬ್ಬಲ್ಪಡುತ್ತೇನೋ ಎಂಬ ಆತಂಕ ಇದ್ದೇ ಇತ್ತು. ಕೆಲಸ ಬಿಟ್ಟು ಬಿಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಯಾಕೆಂದರೆ ಅದು ನನ್ನ ಮತ್ತು ನನ್ನ ಕುಟುಂಬದ ತುತ್ತಿನ ಪ್ರಶ್ನೆಯಾಗಿತ್ತು. ಈ ಮಾನಸಿಕ ಹಿಂಸೆಯಿಂದ ಮುಕ್ತಿ ಪಡೆಯಲು ಕೆಲಸಕ್ಕೆ ರಾಜೀನಾಮೆ ಕೊಡಲೇ ಎಂದು ಅನಿಸಿದ್ದುಂಟು. ಈ ಶಿಕ್ಷಕಿಯ ಕೆಲಸಕ್ಕಿಂತ ಬೀದಿ ಗುಡಿಸುವುದೇ ಉತ್ತಮವೆಂದು ಅನಿಸಿದ್ದುಂಟು. ಕೆಲಸ ಕಳಕೊಂಡರೂ ಬೀಡಿ ಕಟ್ಟುವ ಕಾಯಕದಲ್ಲಿ ಬದುಕಬಲ್ಲೆ ಎಂಬ ವಿಶ್ವಾಸವಿತ್ತು. ಸುಯೋಗವೆಂಬಂತೆ ೭೦ರ ಜೂನ್ ತಿಂಗಳಲ್ಲಿ ನಾನು ವಿದ್ಯೆ ಕಲಿತ ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಒಂದು ಹುದ್ದೆ ಇದೆ ಎಂಬ ವರ್ತಮಾನ ಸಿಕ್ಕಿತು.

ಮುಖ್ಯೋಪಾಧ್ಯಾಯಿನಿಯವರನ್ನು ಕಂಡು ಮಾತಾಡಿದಾಗ ಖಾಯಂ ಹುದ್ದೆ. ಏನೂ ಭಯಬೇಡ. ನೀನು ಪಂಡಿತ್ ಪರೀಕ್ಷೆ ಹೇಗೂ ಕಟ್ಟಿದ್ದೀಯಲ್ಲಾ. ಮುಂದಿನ ವರ್ಷ ಕನ್ನಡ ಮಾಸ್ಟರು ನಿವೃತ್ತರಾಗುತ್ತಾರೆ. ನೀನೇ ಆ ಸ್ಥಾನ ತುಂಬಬಹುದು ಎಂದು ಆಶ್ವಾಸನೆ ಕೊಟ್ಟರು. ಕದ್ರಿ ಶಾಲೆಯಿಂದ ಬಿಡುಗಡೆಯ ಪತ್ರ ಪಡೆದು ಅದೇ ದಿನ ಕುಲಶೇಖರದ ಶಾಲೆಗೆ ಸೇರಿದೆ. ೬೩ರಲ್ಲಿ ಮೊದಲು ಕೆಲಸಕ್ಕೆ ಸೇರಿದಾಗ ಉಂಟಾದ ಸಂತೋಷ ಹೆಚ್ಚೋ ಈಗಿನ ಸಂತೋಷ ಹೆಚ್ಚೋ ಎಂದು ತೂಗಿ ನೋಡಿದೆ. ಪ್ರಾಯಶಃ ಎರಡೂ ಸಮಾನವೆಂದು ಅನಿಸುತ್ತದೆ. ನಾನು ಕದ್ರಿ ಶಾಲೆಯಿಂದ ಮುಕ್ತಿ ಪಡೆದಾಗಲೇ ಮುನ್ಸಿಪಲ್ ಶಾಲೆಗಳನ್ನೆಲ್ಲಾ ಸರಕಾರ ವಹಿಸಿಕೊಂಡಿತ್ತು. ಸರಕಾರೀ ಶಾಲೆ ಬಿಟ್ಟು ಖಾಸಗಿ ಶಾಲೆ ಸೇರಿದ್ದು ಮೂರ್ಖತನವೆಂದು ನನ್ನನ್ನು ಗದರಿಸಿದವರಿದ್ದರು. ನನಗೆಂದೂ ಹಾಗೆ ಅನಿಸಲಿಲ್ಲ. ನಾನು ಕಲಿತ ಶಾಲೆ, ನನಗೆ ಕಲಿಸಿದ ಶಿಕ್ಷಕರೂ ಇದ್ದರು. ಮರಳಿ ತಾಯಿ ಮಡಿಲಿಗೆ ಬಂದಷ್ಟು ಸಂತೋಷವಾಗಿತ್ತು.

ಸಮಯ ಮತ್ತು ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ. ಕೊಯ್ಯುವವರಿಗೆ ಅಂಜಿ ಹೂ ತಡ ಮಾಡಿ ಅರಳುವುದಿಲ್ಲ. ಕಾಲವನ್ನು ಹೆಡೆಮುರಿ ಕಟ್ಟಿ ಕೈಯಲ್ಲಿ ಹಿಡಿದು ಖಾಸಗಿ ಶಾಲೆಗೆ ಕಾಲಿಟ್ಟೆ. ಆಗಿನ ಉದ್ವೇಗ ಎಷ್ಟಿತ್ತೆಂದರೆ ಸರಕಾರೀ ಶಾಲೆಯಿಂದ ರಿಲೀವ್ ಆಗಿ ಹೋಗುವಾಗ ನನ್ನ ಸೇವಾಪುಸ್ತಕ ಇತ್ಯಾದಿಗಳನ್ನು ಮರಳಿ ಒಯ್ಯಬೇಕೆಂಬ ಎಚ್ಚರ ಕೂಡಾ ಇರಲಿಲ್ಲ.

(ಮುಂದುವರಿಯಲಿದೆ)