`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ
ಅಧ್ಯಾಯ ಮೂರು

[ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಸಮಾಜೋಪಯುಕ್ತ ಕಾರ್ಯ ನಿರ್ವಹಿಸುತ್ತ ಸುಸ್ಥಿತಿಯಲ್ಲಿರುವ ಯಾವುದೇ ಸಂಸ್ಥೆಯನ್ನು ಹಾಳುಗೆಡಿಸುವುದು ಹೇಗೆ? ಸುಲಭೋಪಾಯಗಳು: ಅದರ (ಧೃತ)ರಾಷ್ಟ್ರೀಕರಣ, ಆಂತರಿಕ ಇಲ್ಲವೇ ಬಾಹ್ಯ ಆಧಾರ ಸ್ತಂಭಗಳ ಪುಡಾರೀಕರಣ, ಕೃತಕ ಸಮೃದ್ಧಿಯ ಇಲ್ಲವೇ ಕೊರತೆಯ ಸೃಷ್ಟಿ, ಇತ್ಯಾದಿ. ಪುಸ್ತಕ ಪ್ರಪಂಚ ಕುರಿತು ಹೇಳುವುದಾದರೆ ಲೇಖಕ – ಪ್ರಕಾಶಕ – ಮಾರಾಟಗಾರ – ಗ್ರಾಹಕ ಅಖಂಡ ಧಾರೆಯನ್ನು ಒಂದೊಂದು ಹಂತದಲ್ಲಿಯೂ ಕತ್ತರಿಸುವುದು. ಸಗಟು ಖರೀದಿ, ಗ್ರಂಥಾಲಯ ಪೂರೈಕೆ, ಕರಿಹಲಗೆ ಯೋಜನೆ, ಸಹಾಯಧನ ಒಂದೊಂದೂ ಮಾಡುವುದೇನು? ಪುರಂದರದಾಸರ ಅಮರ ಪಂಕ್ತಿಗಳಲ್ಲಿ
ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು, ಕೊಂಬು ಕೊಳಲು ಧ್ವನಿ ಸ್ವರಗಳಿದ್ದು, ತುಂಬುರು ನಾರದರ ಗಾನ ಕೇಳುವ ಹರಿ, ನಂಬಲಾರ ಈ ಡಂಭಕರ ಕೂಗಾಟ – ತಾಳಮೇಲಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ!]

[ಲೇಖಕನ ೨೦೧೬ರ ಮುನ್ನುಡಿ: ಪ್ರಸ್ತುತ ಲೇಖನ ಸುಮಾರು ಇಪ್ಪತ್ತು ವರ್ಷಗಳ ಹಿಂದಿನದು. ಆದರೆ ಇಂದು ತಂತ್ರಜ್ಞಾನದ ಹುಚ್ಚು ವೇಗದಲ್ಲಿ, ಅದನ್ನು ಸ್ವಾಂಗೀಕರಿಸುವ ಸಮಾಜದ ಭ್ರಮೆಯಲ್ಲಿ ಭಾಷೆ, ಸಂವಹನ, ಪುಸ್ತಕ, ಓದುವ ಮತ್ತು ಗ್ರಹಿಸುವ ಕ್ರಿಯೆ ಮುಂತಾದವೆಲ್ಲ ತೀರಾ ಬದಲಾಗಿವೆ, ಬದಲಾಗುತ್ತಲೇ ಇವೆ. ಸಹಜವಾಗಿ ಶಿಕ್ಷಣ, ಪ್ರಕಾಶನ, ಗ್ರಂಥಾಲಯ, ಮಾರಾಟ ಮಳಿಗೆಗಳೆಲ್ಲ ತೀವ್ರ ಬದಲಾವಣೆಯನ್ನೇ ಕಂಡಿವೆ. ಸಮಾಜಮುಖಿಯಾಗಿ ಬೆಳೆದು ಬಂದಿದ್ದ ಪ್ರಕಾಶನ, ವಿತರಣೆ ತೀರಾ ದಿಕ್ಚ್ಯುತಿಗೊಂಡ ಸ್ಥಿತಿಯಲ್ಲಿವೆ; ಬಹುತೇಕ ಅವನತಮುಖಿಗಳಾಗಿವೆ, ಕೆಲವು ಮುಚ್ಚಿಯೂ ಹೋಗಿವೆ. ಹಾಗಾಗಿ ಈ ಲೇಖನವನ್ನು ಐತಿಹಾಸಿಕ ದಾಖಲೆಯಾಗಿಯೂ ಎಷ್ಟೋ ವರ್ತಮಾನದ ದುರ್ಗತಿಗಳಿಗೆ ಭವಿಷತ್ವಾಣಿಯಂತೆಯೂ ಪರಿಗಣಿಸಿ, ಹಾಗೇ ಮರುಮುದ್ರಿಸುತ್ತಿದ್ದೇನೆ. ಅಲ್ಪ ಸ್ವಲ್ಪ ಭಾಷಾ ಪರಿಷ್ಕರಣೆ ಮಾಡಿದ್ದರೂ ವಿಚಾರ ಪರಿಷ್ಕರಣೆ ಮಾಡಿಲ್ಲ. ಪ್ರಬಂಧ ರಚನಾ ಕಾಲದಲ್ಲಿ ನಿವೃತ್ತಿಯ ಯಾವುದೇ ವಿಚಾರವಿರದ ನಾನೇ ಇಂದು ಪುಸ್ತಕ ಪ್ರಕಾಶನವನ್ನು ನಿಲ್ಲಿಸಿ ಐದು ವರ್ಷ, ಮಾರಾಟಗಾರನ ವೃತ್ತಿ ಕಳಚಿಕೊಂಡು ನಾಲ್ಕು ವರ್ಷಗಳೇ ಕಳೆದಿವೆ. ನನ್ನ ನಿವೃತ್ತಿಯಾದರೂ ಪರೋಕ್ಷವಾಗಿ ಪುಸ್ತಕೋದ್ಯಮದ ಅತಂತ್ರ ಸ್ಥಿತಿಗೇ ಹಿಡಿದ ಕನ್ನಡಿ ಎನ್ನುವುದನ್ನು ನನ್ನ ಈ ಜಾಲತಾಣದ ಓದುಗರೆಲ್ಲಾ ತಿಳಿದವರೇ ಇದ್ದೀರಿ. (ಇಲ್ಲದವರು ಇಲ್ಲಿ ಚಿಟಿಕೆ ಹೊಡೆದು ಓದಬಹುದು: ಅತ್ರಿ ಪುಸ್ತಕ ಪ್ರಕಾಶನವನ್ನು ಮುಚ್ಚಿದೆ ಮತ್ತು ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ) ಹಾಗಾಗಿ ನನ್ನ ಮುಮ್ಮಾತಿನ ವಿಸ್ತರಣೆಗಿಳಿಯದೆ, ಯಥಾವತ್ತು ಪ್ರಬಂಧವನ್ನೇ ಓದಿ ಅಥವಾ ಕೇಳಿ]

ಲೇಖಕ, ಮುದ್ರಕ ಮತ್ತು ಓದುಗನನ್ನು ಹಣದ ವಹಿವಾಟಿನಲ್ಲಿ ಒಗ್ಗೂಡಿಸುವಾತ ಪ್ರಕಾಶಕ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವೈಯಕ್ತಿಕ ನೆಲೆಯಲ್ಲೇ ಉಳಿಯುವ ಬರವಣಿಗೆಯನ್ನು ಸಾರ್ವಜನಿಕಕ್ಕೆ ನಿಲುಕುವಂತೆ ಪ್ರಸಾರ ಮಾಡುವಾತ ಪ್ರಕಾಶಕ. ಪುಸ್ತಕದ ರೂಪಣೆಯಲ್ಲಿ ಮತ್ತು ಪ್ರಸರಣದಲ್ಲಿ ಪ್ರಕಾಶಕನು ಕೇಂದ್ರವಾದರೆ ಲೇಖಕ, ಮುದ್ರಕ, ಮಾರಾಟಗಾರ, ಗ್ರಂಥಾಲಯ ಇತ್ಯಾದಿ ಈ ಕೇಂದ್ರದ ಅಂಗಗಳು. ಆದರೆ ಇವೂ ಏಕಕಾಲಕ್ಕೆ ಪ್ರಕಾಶನವನ್ನು ಕೂಡ ಕೈಗೊಂಡ ನಿದರ್ಶನಗಳು ಸಾಕಷ್ಟಿವೆ.

ಹೊಸ ಲೇಖಕರು ಹೆಚ್ಚಾಗಿ ಸ್ವಯಂ ಪ್ರಕಾಶಕರಾಗುವುದಿದೆ. ಆದರೆ ಅಂಥವರಲ್ಲಿ ಕಹಿ ಉಂಡವರೇ ಹೆಚ್ಚು. ಲೇಖಕನೇ ಪ್ರಕಾಶಕನೂ ಆಗಿ ಉಳಿದು, ಬೆಳೆದದ್ದಕ್ಕೆ ಮೂರು ದೊಡ್ಡ ಹೆಸರುಗಳು ಮಾಸ್ತಿ, ಕಾರಂತ ಮತ್ತು ಕುವೆಂಪು. ಹಾಗೆಯೇ ಲೇಖಕನೇ ಪ್ರಕಾಶಕನಾಗಿ ಸೋತದ್ದಕ್ಕೆ ಒಂದು ದೊಡ್ಡ ಹೆಸರು ಎಸ್.ವಿ. ಪರಮೇಶ್ವರ ಭಟ್ಟ. ಹಾಗೇ ಮುದ್ರಕ ಪ್ರಕಾಶಕನ ನೆಲೆಯಲ್ಲಿ ಯಶಸ್ಸಿಗೆ ಲಿಪಿ ಪ್ರಕಾಶನವನ್ನೂ ಸೋಲಿಗೆ ಬಾಪ್ಕೋ ಪ್ರಕಾಶನವನ್ನೂ ಹೆಸರಿಸಬಹುದು.

ಪುಸ್ತಕ ಪ್ರಸರಣದಲ್ಲಿ ಮಾರಾಟಗಾರನಿಗೆ ಬಲು ದೊಡ್ಡ ಪಾತ್ರವಿದೆ. ಬೇರೆ ಬೇರೆ ಊರುಗಳಿಂದ, ವಿವಿಧ ಪ್ರಕಾಶಕರಿಂದ ಸಣ್ಣ ಸಂಖ್ಯೆಯಲ್ಲಿ ಪುಸ್ತಕಗಳನ್ನು ಕೊಂಡು, ಪ್ರದರ್ಶಿಸಿ, ಮಾರುವುದು ಈತನ ಧರ್ಮ. ಈತನಿಗೆ ಕೊಳ್ಳುಗನ ಅಥವಾ ಓದುಗನ ಒಲವು ಸದಾ ತಿಳಿಯುತ್ತಿರುತ್ತದೆ. ಸಾಲದ್ದಕ್ಕೆ ಹಲವು ಕಿರು ಪ್ರಕಾಶಕರು ಮಾರಾಟಗಾರನಿಗೆ ಹಣ ಹೂಡುವ ಅಥವಾ ತೆಗೆಯುವ ಜವಾಬ್ದಾರಿ ಇಲ್ಲದಂತೆ ತಮ್ಮ ಪ್ರಕಟಣೆಗಳನ್ನು ವಿತರಣೆಗೆ ವಹಿಸಿಕೊಡುವುದೂ ಉಂಟು. ಈ ಅನುಭವಗಳಿಂದ ಬಲಿತ ಮಾರಾಟಗಾರ ಪ್ರಕಾಶನದತ್ತ ತಿರುಗುವುದು ಸಹಜವೇ ಇರುತ್ತದೆ. ಇಂದು ದೊಡ್ಡ ಪುಸ್ತಕ ಮಳಿಗೆಗಳೆಲ್ಲ ವಿವಿಧ ಮಟ್ಟದ ಪ್ರಕಾಶನ ಸಂಸ್ಥೆಗಳೂ ಆಗಿವೆ. ನವಕರ್ನಾಟಕ, ಗೀತಾ ಬುಕ್ ಹೌಸ್ ಉದಾಹರಿಸಬಹುದಾದ ದೊಡ್ಡ ಹೆಸರುಗಳು. ಹಾಗೆಯೇ ಬಿಡಿ ಮಾರಾಟದ ಸೌಲಭ್ಯಗಳನ್ನು ಗುರುತಿಸಿ ಈಚೆಗೆ ಕೆಲವು ಶುದ್ಧಾಂಗ ಪ್ರಕಾಶಕರೂ ಬಿಡಿ ಮಾರಾಟಕ್ಕಿಳಿದುದನ್ನು ನೋಡಬಹುದು. ಐಬಿಎಚ್ ಪ್ರಕಾಶನ ಇದಕ್ಕೆ ಒಂದು ಉದಾಹರಣೆ.

ಪುಸ್ತಕೋದ್ಯಮದ ಮೊದಲ ದಿನಗಳಲ್ಲಿ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಹೆಚ್ಚಾಗಿ ಪ್ರಕಾಶನದಲ್ಲಿ ತೊಡಗಿಸಿಕೊಂಡದ್ದನ್ನು ಕೇಳುತ್ತೇವೆ. ಅವರಿಗೆ ಸಂಸ್ಕೃತಿ, ಸಾಹಿತ್ಯ, ಭಾಷೆ ಮುಂತಾದ ಮೌಲ್ಯಗಳನ್ನು ಪೋಷಿಸಿ ಪ್ರಚುರಿಸುವುದು ಕರ್ತವ್ಯವಾಗಿ ತೋರಿತ್ತು. ಹಾಗೆಯೇ ವ್ಯಾವಹಾರಿಕ ಸ್ವಾವಲಂಬನೆ ಅನಿವಾರ್ಯವೂ ಇತ್ತು. ಸಹಜವಾಗಿ ಗುಣ ಮತ್ತು ಹಣದ ಸಮತೋಲನ ಅವರು ಸಾಧಿಸಿದ್ದರು. ಕೆಲವು ಉದಾಹರಣೆಗಳು ಈ ಮಾತನ್ನು ಸ್ಪಷ್ಟಗೊಳಿಸಬಹುದು. ಡಿವಿಕೆ ಮೂರ್ತಿಯವರು ಲೇಖಕರನ್ನು ಗುರುತಿಸಿ, ಬರೆಯಿಸಿ, ಪ್ರಕಟಿಸಿ ಅಲ್ಲಿಗೇ ಬಿಡಲಿಲ್ಲ. ಖುದ್ದು ಊರೂರಿಗೆ ಮನೆಮನೆಗೆ ಪುಸ್ತಕ ಒಯ್ದು ಮಾರಿಯೂ ಮುಗಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ವಿವಿಧೆಡೆಗಳಲ್ಲಿ ಜನೋಪಯೋಗೀ ಭಾಷಣಗಳನ್ನು ಏರ್ಪಡಿಸುತ್ತಿತ್ತು. ಅನಂತರ ಅದನ್ನು ಮುದ್ರಿಸಿ ಪ್ರಚಾರ ಪುಸ್ತಕ ಮಾಲೆ ಎಂಬ ಸುಲಭ ಬೆಲೆಯ ಪುಸ್ತಕ ಸರಣಿಯಾಗಿಸಿತು. ಅದನ್ನು ವ್ಯಾಪಕವಾಗಿ ಮಾರಿಯೂ ಮುಗಿಸಿತು. ಇದನ್ನು ಮತ್ತಿನ ಎಲ್ಲ ವಿಶ್ವವಿದ್ಯಾನಿಲಯಗಳೂ ಹಲವು ಖಾಸಗಿ ಪ್ರಕಾಶಕರೂ ಅನುಸರಿಸಲೇ ಬೇಕಾದ ಆದರ್ಶವಾಗಿ ಗಣಿಸಿದರು. ಜನಪದರಲ್ಲಿ ಹಲವು ರೀತಿಯ ಅಭಿವ್ಯಕ್ತಿಯನ್ನು ಕಂಡ ಕನ್ನಡ ಮಹಾಕಾವ್ಯಗಳು – ಗದುಗಿನ ಭಾರತ, ಜೈಮಿನಿ ಭಾರತ ಇತ್ಯಾದಿ ಇವನ್ನು ಅಂದಿನ ಸರಕಾರ ಸುಲಭ ಬೆಲೆಯ ಆವೃತ್ತಿಯಾಗಿ ಪ್ರಕಟಿಸಿದ್ದಂತೂ ಚರಿತ್ರಾರ್ಹವೇ ಆಗಿದೆ.

ಆಧುನಿಕ ವಿದ್ಯಾಸವಲತ್ತುಗಳು ವಿಸ್ತರಿಸಿದಂತೆ, ಮುದ್ರಣ ಕ್ರಾಂತಿ ಬಲಿತಂತೆ ಪುಸ್ತಕ ಪ್ರಕಾಶನ ವಿತರಣೆ ಸ್ಪಷ್ಟ ಉದ್ಯಮ ಸ್ವರೂಪವನ್ನು ಪಡೆಯುತ್ತ ಬಂತು. ಆದರೆ ಹಣದ ವಹಿವಾಟು ಏರಿದಂತೆಲ್ಲ ಪ್ರಕಟಣೆಗಳ ಗುಣಮಟ್ಟ ಕುಸಿಯತೊಡಗಿತು. ಮೊದಲಿಗರ ಅಂತಃಪ್ರೇರಣೆಗಳು ತರುವಾಯದ ಹಿಂಬಾಲಕರಿಗೆ ಕೇವಲ ಘೋಷಣಾ ವಾಕ್ಯಗಳಾದುವು. ಅವರ ಆದರ್ಶಗಳು ಇವರಿಗೆ ಕೇವಲ ಪೂಜನೀಯವಾದುವು. ಇದಕ್ಕೆ ಎರಡು ಉದಾಹರಣೆಗಳು: ‘ಜ್ಞಾನಕ್ಕೆ ಸಮದಂಡಿಯಾದ್ದಿನ್ನೊಂದಿಲ್ಲ’ (ನಹಿ ಜ್ಞಾನೇನ ಸದೃಶಂ’ ಎಂದು ತರಹೇವಾರಿ ಗಾತ್ರಗಳಲ್ಲಿ, ನಮೂನೆಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಜಾಹೀರುಪಡಿಸುತ್ತದೆ. ಆದರೆ ಇದರ ಪ್ರಸಾರಾಂಗಕ್ಕೆ ಸುಮಾರು ಮೂರು ತಿಂಗಳ ಹಿಂದೆ ಸೇರಿದ ನನ್ನ ಬೇಡಿಕೆಗೆ ಈ ತನಕ ಕೇವಲ ಆಶ್ವಾಸನೆ ಮಾತ್ರ ಬಂದಿದೆ; ಪುಸ್ತಕ ಕಳಿಸುವ ಕೆಲಸ ಆಗಿಲ್ಲ. ಫಲಿತಾಂಶ? ನನ್ನ ಗಿರಾಕಿಗಳ ಎದುರು ನಾನೊಬ್ಬ ಅದ್ಭುತ ಕತೆಗಾರ ಎಂಬ ಕು-ಬಿರುದು ಗಳಿಸಿರುವುದು.

ಸರಕಾರ ತೀನಂಶ್ರೀಗೆ ಮರಣೋತ್ತರ ಪ್ರಶಸ್ತಿ ಕೊಟ್ಟಿತು. ಆಗಲೇ ಅವರ `ಭಾರತೀಯ ಕಾವ್ಯಮೀಮಾಂಸೆ’ಯ ಎರಡು ನಮೂನೆಯ ಮುದ್ರಣಗಳು ಮಾರುಕಟ್ಟೆಯಲ್ಲಿದ್ದುವು. ಅವೆರಡೂ ಸರಕಾರಿ ಆವೃತ್ತಿಗಳೇ. ಆದರೂ ಮತ್ತೆ ಅದೇ ಪುಸ್ತಕ ಅತ್ಯುತ್ತಮ ಕಾಗದದಲ್ಲಿ ಮತ್ತು ಮುದ್ರಣದಲ್ಲಿ ಮುದ್ದಾಗಿ ಹೊರಬಿದ್ದು, ಅತಿ ಕಡಿಮೆ ಬೆಲೆಯಲ್ಲೂ ಕನ್ನಡ ಸಾರಸ್ವತ ಪ್ರಪಂಚವನ್ನು ತಣಿಸಿತು. ಆದರೆ ಅದರ ಪುಟಪುಟದಲ್ಲಿ ಹತ್ತಿಪ್ಪತ್ತು ತಪ್ಪು ಕಂಡವರು ಮಾತ್ರ ಗೊಣಗಿಕೊಂಡರು “ಸರಕಾರದ ಗೌರವ ಇಷ್ಟೇ ಸರಿ!”

ಈಚೆಗೆ ಸರಕಾರಗಳು ತಮ್ಮ ಆಡಳಿತ ವೈಫಲ್ಯವನ್ನು ಪಕ್ಷ ರಾಜಕೀಯದ ಗೊಂದಲಗಳನ್ನು ಮರೆಮಾಚಲು ಸಾಮಾನ್ಯರ ಭಾವನೆಗಳೊಡನೆ ಚಕ್ಕಂದವಾಡುವುದು ಹೆಚ್ಚಿದೆ. ಹೀಗಾಗಿ ಇಂದು ಭಾಷೆ, ಸಾಹಿತ್ಯ, ಸಂಸ್ಕೃತಿಗಳಷ್ಟು ಪುಡಾರೀಕೃತ ವ್ಯವಸ್ಥೆ ಇನ್ನೊಂದಿಲ್ಲ. ಇದು ಪುಸ್ತಕ ಪ್ರಕಾಶನ ಮತ್ತು ಪ್ರಸರಣವನ್ನು ಭೀಕರ ಪ್ರಪಾತದ ಅಂಚಿಗೆ ನೂಕುತ್ತಿದೆ. ಬರವಣಿಗೆ ಕಮ್ಮಟದಿಂದ ತೊಡಗಿ ಮುದ್ರಣ, ಪ್ರಕಾಶನ, ಖರೀದಿ ಎಲ್ಲ ಹಾಯ್ದು ಓದುವುದು ಹೇಗೆ ಮತ್ತು ಯಾವುದನ್ನು ಓದಬೇಕು ಎಂಬಲ್ಲಿಯವರೆಗೂ ಸರಕಾರದ ನಿರ್ದೇಶನ ಮತ್ತು ಸಾರ್ವಜನಿಕ ಹಣ ಅನಿವಾರ್ಯವಾಗುತ್ತಿದೆ; ಅಪವ್ಯಯವೇ ಪ್ರಧಾನವಾಗಿದೆ. ಪುತ್ತೂರಿನ ಮೂಲೆಯಿಂದ ನಡೆಯುತ್ತಿದ್ದ ಶಿವರಾಮ ಕಾರಂತರಂಥ ಏಕವ್ಯಕ್ತಿ ಉದ್ಯಮಗಳು, ಧಾರವಾಡದಿಂದ ತೊಡಗಿದ ಹಲವು ಪುಸ್ತಕ ಕ್ರಾಂತಿಗಳು, ಕನ್ನಡ ಸಾರಸ್ವತ ಲೋಕದ ರಾಜಧಾನಿಯೇ ಆಗಿದ್ದ ಮೈಸೂರಿನ ಹಲವು ಪ್ರಕಾಶನ ಸಂಸ್ಥೆಗಳು ಎಲ್ಲ ಅನಾಥವಾದಂತೆ ಇಂದು ಬೆಂಗಳೂರು ಅಭಿಮುಖವಾಗಿವೆ. ಅಂದರೆ ಜನರನ್ನು ಮುಟ್ಟುವ ಪ್ರಯತ್ನದಿಂದ ವಿಮುಖವಾಗುವ ವಾತಾವರಣ ದಟ್ಟವಾಗಿದೆ. ಇದಕ್ಕೆ ಉದಾಹರಣೆಯಾಗಿ ಶಿವರಾಮ ಕಾರಂತರ ವಿಭಿನ್ನ ಕಾಲಘಟ್ಟಗಳ ಮೂರು ಮುನ್ನುಡಿ ತುಣುಕುಗಳನ್ನೇ ನೋಡಿ.

೧೯೫೯: ಕನ್ನಡ ನಾಡು ತನಗೆ ಬೇಕಾದ ಸೇವೆಯನ್ನು ನನ್ನಂಥವನಿಂದ ಮಾಡಿಸಿಕೊಳ್ಳಲು ಅಶಕ್ತವಾದರೆ ಅದಕ್ಕೆ ಜನಗಳ ಜಡತೆ ತಾತ್ಸಾರ ಕಾರಣ.

೧೯೭೯: ಈ ಪ್ರಕಟಣೆಯಿಂದ ಮಕ್ಕಳಿಗೆ ಪ್ರಯೋಜನವಿದೆಯೆಂಬ ಭಾವನೆ ಹಿರಿಯರಲ್ಲಿ ಮೂಡಿ ಅವನ್ನು ಕೊಳ್ಳುವ ಸಾಹಸಕ್ಕೆ ಅವರು ಮುಂದಾಗಬೇಕು.

೧೯೯೦: ಈ ಪ್ರಕಾಶಕರು ಕನ್ನಡ ಭಕ್ತಿಯ ಮಹಾಪೂರದ ಲಾಭ ಪಡೆಯುವರಾದರೆ ಕನ್ನಡ ಲೇಖಕರಿಗೆ ಒಂದಿಷ್ಟು ನೆಮ್ಮದಿ ದೊರೆತೀತು.

ಇಂದು ಖಾಸಗಿಯಾಗಲೀ ಸರಕಾರಿಯಾಗಲೀ ಪ್ರಕಾಶನದ ಮಾತು ಬಂದಲ್ಲಿ ಎಲ್ಲರೂ ಒಕ್ಕೊರಲಿನಿಂದ ಸಹಾಯಧನ, ಅನುದಾನಕ್ಕೆ ಮೊರೆ ಇಡುತ್ತಾರೆ. ಪ್ರಸರಣದ ಮಾತು ಬಂದಾಗೆಲ್ಲ ಪಠ್ಯ ಪುಸ್ತಕ ಆಯ್ಕೆ, ಸಗಟು ಖರೀದಿಗಳನ್ನು ನಂಬುತ್ತಾರೆ. ಯೋಗ್ಯತೆಯನ್ನು ಸರಕಾರೀ ಪ್ರಣೀತ ಪ್ರಶಸ್ತಿಯಲ್ಲಿ ಹುಡುಕುತ್ತಾರೆ. ಪುಸ್ತಕೋದ್ಯಮವೆಂದರೆ ಸರಕಾರೀ ಪುಸ್ತಕೋದ್ಯಮವೇ ಆಗಿದೆ. ಹಿಂದೆ ಒಂದು ಪರಿಷತ್ತು, ಒಂದು ಪ್ರಸಾರಾಂಗ, ಒಂದು ಸವಲತ್ತು, ಒಂದು ಸಮ್ಮೇಳನ ಎಂದೆಲ್ಲ ತೊಡಗಿದ ಸರಕಾರೀ ಯಂತ್ರಕ್ಕೆ ಇಂದು ಮುಖಗಳೆಷ್ಟು ಅಸಂಖ್ಯ ನೋಡಿ. ಮೈಸೂರು, ಕರ್ನಾಟಕ, ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಕುವೆಂಪು, ಕನ್ನಡ, ಕೃಷಿ ಮುಂತಾದ ವಿಶ್ವವಿದ್ಯಾಲಯಗಳು ಒಂದು ಕಡೆ. ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲಿ ಬುಕ್ ಟ್ರಸ್ಟ್, ಕೇಂದ್ರ ಪ್ರಕಟಣಾ ವಿಭಾಗಗಳೂ ಹಿರಿ ಮೊತ್ತವನ್ನು ಕನ್ನಡಕ್ಕೆ ಹಾಕಿರುವುದನ್ನು ಮರೆಯಬಾರದು. ಇನ್ನು ರಾಜ್ಯದ್ದೇ ಸಾಹಿತ್ಯ, ಜಾನಪದ, ನಾಟಕ, ಪತ್ರಿಕಾ, ಲಲಿತಕಲೆ, ಸಾಹಸ, ಉರ್ದು, ತುಳು, ಕೊಡವ, ಕೊಂಕಣಿ, ಅರೆ ಇತ್ಯಾದಿ ಅಕಾಡೆಮಿಗಳ ಸಾಲು. ಇವಕ್ಕೆ ವಿಷಯ, ಕೆಲವಕ್ಕೆ ಭಾಷೆಗಳ ಮಿತಿಯಿದ್ದರೂ ಎಲ್ಲವೂ ಪುಸ್ತಕ ಲೋಕಕ್ಕೆ ಕಪ್ಪ ಸಲ್ಲಿಸುವುದನ್ನಂತೂ ಅನಿವಾರ್ಯ ಕರ್ಮ ಎನ್ನುವಂತೇ ನಡೆಸುತ್ತವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ, ಅಭಿವೃದ್ಧಿ ಪ್ರಾಧಿಕಾರ, ಸರಕಾರಿ ಮುದ್ರಣಾಲಯ, ಪ್ರವಾಸೋದ್ಯಮ, ಅರಣ್ಯ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ, ವಯಸ್ಕರ ಶಿಕ್ಷಣ, ಸಾಕ್ಷರತಾ, ವಾರ್ತಾಪ್ರಚಾರ ಮುಂತಾದ ಇಲಾಖೆಗಳೂ ಪವಿತ್ರ ಕರ್ತವ್ಯವೆಂಬಂತೆ ಪುಸ್ತಕೋದ್ಯಮದಲ್ಲಿ ತೊಡಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನಂಥ ಹಲವು ನೂರು ಸಂಘ ಸಂಸ್ಥೆಗಳು ತೋರಿಕೆಗೆ ಸ್ವತಂತ್ರವೆಂದು ಹೇಳಿಕೊಂಡರೂ ಚಟುವಟಿಕೆಗೆ ಸರಕಾರೀ ನೆರವನ್ನೇ ಕಾದಿರುವುದು ಏನೂ ಗುಟ್ಟಲ್ಲ.

ಹೀಗೆಯೇ ಪುಸ್ತಕ ಪ್ರಸರಣದಲ್ಲೂ ಸರಕಾರೀ ಪ್ರಭಾವ ಸರ್ವವ್ಯಾಪಿ ಆಗಿರುವುದನ್ನು ಸ್ವಲ್ಪ ಪರಿಚಯಿಸಿಕೊಳ್ಳೋಣ. ಇದನ್ನೇ ಸರಳವಾಗಿ ಸಗಟು ಖರೀದಿ ಅಥವಾ ಬಲ್ಕ್ ಪರ್ಚೇಸ್ ಎನ್ನುತ್ತಾರೆ. ಸಗಟುಖರೀದಿಯ ಪ್ರಮುಖ ಆರ್ಥಿಕ ಚಿಂತನೆ ಇಷ್ಟು: ಮಧ್ಯವರ್ತಿ ಅಥವಾ ಮಾರಾಟಗಾರರನ್ನು ನಿವಾರಿಸಿ ಪುಸ್ತಕದ ಬೆಲೆ ಇಳಿಸಬಹುದು. ಅಲ್ಲದಿದ್ದರೂ ಗ್ರಂಥಾಲಯಗಳ ಶಾಖೋಪಶಾಖೆಗಳ ಬಿಡಿ ಅಗತ್ಯವನ್ನು ಒಂದೇ ಗಂಟಿನಲ್ಲಿ ಕೊಳ್ಳುವುದರಿಂದ ಗರಿಷ್ಠ ರಿಯಾಯಿತಿ ಮೂಲಕವಾದರೂ ಹಣ ಉಳಿಸಬಹುದು.

ಇದು ಭಾರೀ ಅಕ್ರಮ. ಇದರಿಂದ ಪುಸ್ತಕ ಕ್ರಾಂತಿಯೇ ತೊಡಗಿರುವುದಂತೂ ನಿಜ. ಆದರೆ ಎಲ್ಲವನ್ನೂ ಆವರಿಸಿ ಅನೈಜ ಮತ್ತು ಗುಣಕನಿಷ್ಠ ಏಕರೂಪಕ್ಕೆ ತರುವುದೇ ಕ್ರಾಂತಿಯ ಮಿತಿ ಎನ್ನುವುದನ್ನೂ ಮರೆಯಕೂಡದು. ಕ್ರಾಂತಿಯ ಸೋಲಿನ ಬೀಜವೂ ಅದರ ಜೊತೆಯಲ್ಲೇ ಇದೆ; ಉಗ್ರಗಾಮಿಗಳ ಕತ್ತಿನ ಸಯನೈಡ್ ಪದಕದಂತೆ! ರಾಜ್ಯಾದ್ಯಂತ ಮಾರಾಟಗಾಗರಿಗೆ, ಅಷ್ಟೇ ಏಕೆ ಓದುಗರಿಗೂ ಅಪರಿಚಿತವಾಗುಳಿದ ನೂರಾರು ಪ್ರಕಾಶಕರು, ಲೇಖಕರು ಮತ್ತು ಪುಸ್ತಕಗಳು ಈ ಕ್ರಾಂತಿಯಲ್ಲಿ `ಫಲಾನುಭವಿ’ಗಳಾಗಿದ್ದಾರೆ. ಸಗಟು ಖರೀದಿಯ ಉಗ್ರ ಕಾವಿನಲ್ಲಿ ನಾನು ಮೊದಲೇ ಹೇಳಿದ ಸಾಂಪ್ರದಾಯಿಕ ಪ್ರಕಾಶಕರು ನಿಸ್ತೇಜರಾಗಿದ್ದಾರೆ ಎಂದರೆ ತಪ್ಪಲ್ಲ. ಇದಕ್ಕೆ ಎರಡು ಕಿರು ನಿದರ್ಶನಗಳು.

೧. ನನ್ನ ನಾಲ್ಕು ಮಿತ್ರರು ಕೇವಲ ಸ್ವಂತ ಖುಶಿಗಾಗಿ ಊರಿಗೆ ಬಂದ ಸಾಹಿತಿ, ಕಲಾವಿದರೊಡನೆ ಮೂರು ನಾಲ್ಕು ಸಣ್ಣಪುಟ್ಟ ಕಾರ್ಯಕ್ರಮ ನಡೆಸಿದರು. ಮುಂದೆ ಪರಿಸರದ ಒತ್ತಡಗಳಿಗೆ ಮಣಿದು ಬಳಗ ಔಪಚಾರಿಕ ಸ್ವರೂಪ ಪಡೆಯಿತು. ಈಗ ಇವರ ಖಾಸಗೀ ಖುಶಿ ಸಂಸ್ಕೃತಿ ಇಲಾಖೆಯನ್ನೋ ಅಕಾಡೆಮಿಯನ್ನೋ ಪೋಷಣೆಗೆ ಕಾಯುವುದರಲ್ಲಿ ಕಳೆದು ಹೋಗಿದೆ. ಎಷ್ಟೇ ಸುಂದರ ಕಲಾಪ ನಡೆದರೂ ಈ ಬಳಗ ಅದನ್ನು ಅನುಭವಿಸದೇ ಆದಾಯ ವೆಚ್ಚಗಳನ್ನು ಸರಕಾರಕ್ಕೊಪ್ಪಿಸುವ ಗೋಟಾಳೆಯಲ್ಲಿ ಮೂಗುಮಟ್ಟ ಮುಳುಗುತ್ತಾರೆ!

೨. ನನ್ನೊಬ್ಬ ಆತ್ಮೀಯ ಗೆಳೆಯ ಸರಕಾರೀ ಇಲಾಖೆಯೊಂದರ ಮುಖ್ಯಸ್ಥ. ಆತ ನಾನು ಗೆಳೆತನದಲ್ಲಿ ಕೊಟ್ಟೊಂದು ನನ್ನದೇ ಕೃತಿ, ನನ್ನದೇ ಪ್ರಕಟಣೆ, ತನ್ನ ಇಲಾಖೆಗೆ ಐನೂರು ಪ್ರತಿ ಕೊಳ್ಳುವ ಒಲವು ತೋರಿದ. ನಾನು ವಿಷಯಾಂತರಿಸಲು “ಪ್ರತಿಗಳು ಅಷ್ಟಿಲ್ಲ” ಎಂದೆ. ಆತ ಮರುಮುದ್ರಣಕ್ಕೆ ಮುಂಗಡ ಮತ್ತು ಪ್ರತಿ ಕೊಳ್ಳುವ ಬಗ್ಗೆ ಲಿಖಿತ ಆಶ್ವಾಸನೆ ಕೊಡುವುದಾಗಿಯೂ ಒತ್ತಾಯಿಸಿದ. ಸ್ನೇಹವನ್ನು ವ್ಯವಹಾರಕ್ಕಿಳಿಸುವಲ್ಲಿ ಮೊದಲೇ ನನಗಿದ್ದ ಉದಾಸೀನವನ್ನು ಗಟ್ಟಿ ಮಾಡಿ, ನಾನು ತಿರಸ್ಕರಿಸಿದೆ. ಸಮಷ್ಟಿ ಹಿತವನ್ನುಳಿದು ವ್ಯಷ್ಟಿ ಹಿತವಿಲ್ಲ ಅಲ್ಲವೇ?

ಪುಸ್ತಕ ಅಂದರೇನು? ಅಚ್ಚು, ರಟ್ಟು ಕಂಡ ಬರವಣಿಗೆಗಳೆಲ್ಲ ಪುಸ್ತಕಗಳು ಆಗಬೇಕಿಲ್ಲ. ನೆನಪಿರಲಿ, ನಾನು ಸೀಮಿತ ಉದ್ದೇಶಗಳ ಪುಸ್ತಕಗಳು, ಉದಾಹರಣೆಗೆ ಶಾಲಾಕಾಲೇಜುಗಳ ಪಠ್ಯ, ಗೈಡು ಇತ್ಯಾದಿಗಳನ್ನು ಬಿಟ್ಟೇ ಮಾತಾಡುತ್ತಿದ್ದೇನೆ. ಪ್ರತ್ಯಕ್ಷ ಉಪಯುಕ್ತತೆ ಅಥವಾ ವಿಶೇಷ ಪ್ರಭಾವಗಳಿಲ್ಲದೆ ವಿದ್ಯಾವಂತ ಓದುಗರನ್ನು ತಲಪಬಲ್ಲವಷ್ಟೇ ಪುಸ್ತಕಗಳು. ಇದು ಕತೆ, ಕವನ. ಕಾದಂಬರಿ, ವಿಜ್ಞಾನ, ಭಕ್ತಿ, ಜೀವನಚಿತ್ರ, ವೈಚಾರಿಕ, ಪ್ರವಾಸ ಇತ್ಯಾದಿ ಜ್ಞಾನ, ಅನುಭವಗಳ ಯಾವುದೇ ಶಾಖೆಯದಿರಬಹುದು. ಅವುಗಳಲ್ಲಿ ಗುಣಮಟ್ಟ ಎನ್ನುವುದು ಸಾಪೇಕ್ಷ. ಎಲ್ಲ ಪುಸ್ತಕಗಳೂ ವಿಚಾರಪರ ಓದುಗನಿಗೇ ಮೀಸಲಾದರೆ ನನ್ನಂಥವರು ದಿವಾಳಿಯಾಗುವುದು ಖಂಡಿತ.

ಪುಸ್ತಕಗಳು ಒಂದು ಕಾಲಮಿತಿಯಲ್ಲಿ ಮಾರಿ ಮುಗಿಯುವ ಅಂದಾಜಿನಲ್ಲಿ ಪ್ರತಿಗಳ ಸಂಖ್ಯೆ, ಮಾರುಬೆಲೆ ನಿಗದಿಗೊಂಡು ಪ್ರಕಟವಾಗುತ್ತವೆ. ಬೆಲೆ ನಿಗದಿಯಲ್ಲಿ ಲೇಖಕ, ಮುದ್ರಕ, ಮಾರಾಟಗಾರ ಮತ್ತು ಪ್ರಕಾಶಕ ಇವರ ನ್ಯಾಯಯುತವಾದ ಆದಾಯ ಸೇರಿರುತ್ತದೆ. ಈ ಸೂತ್ರವನ್ನು ತಿಳಿಯದವರು ಪ್ರಸರಣ ಕ್ರಿಯೆಯಲ್ಲಿ ಹಿಂಸಕರು. ಅವರು ಒಂದೋ ಕೃತಿಯ ಗುಣವನ್ನು ಉತ್ಪ್ರೇಕ್ಷಿಸುತ್ತಾರೆ ಅಥವಾ ಮಾರಾಟಗಾರರಿಂದ ಉಚಿತ ಸೇವೆಯನ್ನು ನಿರೀಕ್ಷಿಸುತ್ತಾರೆ. ಅಂಥವರು ಪ್ರಭಾವಿಗಳಾಗಿದ್ದರೆ ಪುಸ್ತಕ ವಹಿವಾಟು ಯಶಸ್ಸು ಕಾಣಬಹುದು. ಆದರೆ ವಾಸ್ತವದಲ್ಲಿ ಅವರ ಪ್ರಕಾಶನ ಅವಸಾನ ಹೊಂದುವುದು ನಿಶ್ಚಿತ. ಬೆಲೆ ನಿಗದಿಯ ಸೂತ್ರ ತಿಳಿದೂ ಕಡಿಮೆ ಬೆಲೆಗೆ ಮಾರುವವರು ಉದಾತ್ತ ಧ್ಯೇಯವಾದಿಗಳು. ಹೆಚ್ಚಿನ ಬೆಲೆಗೆ ಮಾರುವವರು ಪ್ರತ್ಯಕ್ಷ ದರೋಡೆಕೋರರು. ಇದಕ್ಕೆ ಒಂದೆರಡು ಕಿರು ನಿದರ್ಶನಗಳು.

ಭಾರತ ದರ್ಶನ ಪ್ರಕಾಶನ ೩೨ ಭಾಗಗಳಲ್ಲಿ ಮಹಾಭಾರತ, ೧೧ ಭಾಗಗಳಲ್ಲಿ ರಾಮಾಯಣ ಪ್ರಕಟಿಸಿ ಈಗ ಹತ್ತು ಭಾಗಗಳ ಭಾಗವತ ಅನುವಾದ, ಪ್ರಕಾಶನ, ಪ್ರಸರಣದಲ್ಲಿ ನಿರತವಾಗಿದೆ. ಇದು ಅಷ್ಟೂ ಸಂಪುಟಗಳನ್ನು ಇನ್ನು ಯಾರಿಗೂ ಕೊಡಲಾಗದಷ್ಟು ಸುಲಭ ಬೆಲೆಯಲ್ಲಿ ಅಂದರೆ ೬೦೦ ಪುಟಗಳ ಗಟ್ಟಿ ರಟ್ಟಿನ ಒಂದೊಂದು ಪ್ರತಿಯನ್ನು ಕೇವಲ ರೂಪಾಯಿ ೨೪ರಂತೆ (೧೯೯೮ರಲ್ಲಿ ತಲಾ ಮೂವತ್ತರಂತೆ) ಕೊಡುತ್ತಿದೆ. ಇದರಲ್ಲಿ ಅನುವಾದಕರಿಂದ ತೊಡಗಿ ವಿತರಕರವರೆಗಿನ ಸೇವಾ ಮನೋಭಾವ ಗಮನಾರ್ಹವಾಗಿದೆ. ಮಂಗಳೂರಿನ ರಾಜರತ್ನಂ ಸಂಸ್ಮರಣ ಸಮಿತಿ ೧೨ ಕಿರುಹೊತ್ತಗೆಗಳನ್ನು ಪ್ರಕಟಿಸಿತು. ಬೆಂಗಳೂರಿನ ಬಿಬಿಡಿ ಪವರ್ ಪ್ರೆಸ್, ರಾಜರತ್ನಂ ಮೇಲಿನ ತಮ್ಮ ಗೌರವ ಸೂಚಿಸಲು ಅಷ್ಟನ್ನೂ ಸಮಿತಿಗೆ ಉಚಿತವಾಗಿ ಮುದ್ರಿಸಿ ಕೊಟ್ಟಿತು. ಹೀಗೆ ಆ ಪುಸ್ತಕಗಳಿಗೆ ಸುಲಭ ಬೆಲೆ ಬಂತು. `ವಿಶ್ವಕೋಶ’ದಂಥ ಸುಲಭ ಬೆಲೆಯ ಪುಸ್ತಕಗಳಿಗೆ ಸಹಜವಾಗಿ ವ್ಯಾಪಾರಿ ವಟ್ಟಾ ಬಲು ಕಡಿಮೆ ದರದಲ್ಲಿರುತ್ತದೆ. ಅವನ್ನು ಕಟ್ಟಿಸಿ, ಲಾರಿ ತುಂಬಿಸಿ, ಸಾಗಿಸಿ, ಬ್ಯಾಂಕ್ ವೆಚ್ಚ ಭರಿಸಿ, ದಾಸ್ತಾನಿಟ್ಟು ಮಾರುವಲ್ಲಿ ಖರ್ಚು ಆದಾಯವನ್ನು ಸದಾ ಮೀರುತ್ತದೆ. ಇಂಥವು ವ್ಯಾಪಾರಿಗಳ ಔದಾರ್ಯದಲ್ಲಿ ಪ್ರಸರಣ ಪಡೆಯುತ್ತವೆ.

ಬೆಲೆ ನಿಗದಿಯ ನಿಯಮ ತಿಳಿದೂ ವಿನಾ ಕಾರಣ ಮೀರುವ ಧೂರ್ತತನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತೊಡಗಿ ಎಷ್ಟೂ ಸಂಸ್ಥೆಗಳನ್ನು ಎಷ್ಟೂ ವ್ಯಕ್ತಿಗಳನ್ನು ಪ್ರಕಾಶನ ರಂಗದಲ್ಲಿ ಪುರಾವೆ ಸಹಿತ ಹೆಸರಿಸಬಹುದು. ಆದರೆ ಅದಕ್ಕಿದು ಸಂದರ್ಭವಲ್ಲ ಎಂದೇ ವಿಷಯಾಂತರಿಸುತ್ತೇನೆ.

ನಾನು ಬಲು ಸಣ್ಣ ಪ್ರಕಾಶಕ; ನಿಜದಲ್ಲಿ ಪುಸ್ತಕ ಮಾರಾಟಗಾರ. ಪ್ರಕಾಶಕ ಮತ್ತು ಓದುಗನ ನಡುವಣ ಅನಿವಾರ್ಯ ಕೊಂಡಿ. ಹಾಗಾಗಿ ನನ್ನ ಪ್ರಕಟಣೆಗಳ ವಿತರಣೆ ಬಿಡಿ ಮಾರಾಟದಲ್ಲೂ ಇತರ ಪ್ರಕಾಶಕ-ಮಾರಾಟಗಾರರ ದಾಕ್ಷಿಣ್ಯದಲ್ಲೂ ಸಾಕಷ್ಟು ಸುಲಭವಾಗಿಯೇ ನಡೆದಿದೆ. ಆದರೆ ಪ್ರಕಾಶನವೇ ವಿರಳವಾಗಿದ್ದ ಕಾಲದಲ್ಲಿ, ಬಿಡಿ ಮಾರಾಟಗಾರರು ಕಡಿಮೆ ಇದ್ದ ಕಾಲದಲ್ಲಿ, ಪುಸ್ತಕವೇ ಜ್ಞಾನದ ಮೂರ್ತ ಸ್ವರೂಪ ಎಂದೂ ನಂಬಿದ್ದ ದಿನಗಳಲ್ಲಿ ಪ್ರಸರಣ ತ್ರಾಸದಾಯಕವಾಗಿತ್ತು. ಶಕ್ತ ಗ್ರಂಥಾಲಯಗಳಿರಲಿಲ್ಲ. ಆಗ ಪ್ರಕಾಶಕರೇ ಪುಸ್ತಕ ಹೊತ್ತು ಊರೂರು ಅಲೆದ ಅಥವಾ ಓದುಗರೇ ಪ್ರಕಾಶಕರನ್ನರಸಿಕೊಂಡು ಹೋಗಿ ಮುತ್ತಿದ ರೋಮಾಂಚಕ ಕತೆಗಳನ್ನು ಕೇಳುತ್ತೇವೆ. ಇಂದು ವಿದ್ಯಾವಂತಿಕೆಯ ಹೆಚ್ಚಳಕ್ಕೆ ಮುದ್ರಣ ಕ್ರಾಂತಿ ಸೇರಿ ಪ್ರಕಟಣೆಗಳಲ್ಲಿ ವೈವಿಧ್ಯ ವೈಪುಲ್ಯ ಬಂದಿದೆ. ಹಾಗಾಗಿ ಕರ್ನಾಟಕದ ವಿಸ್ತಾರದಲ್ಲಿ ಮಧ್ಯವರ್ತಿಗಳನ್ನು ನೆಚ್ಚುವುದು ಅನಿವಾರ್ಯವಾಗಿದೆ. ಭಾರತದ ಇಂಗ್ಲಿಷ್ ಪ್ರಕಾಶಕರು, ವಿತರಕರು ಜಾಹೀರಾತು, ಕರಪತ್ರ ಪತ್ರಿಕಾ ಸುದ್ದಿ ಮಾಡುವರಲ್ಲದೆ ಪ್ರತಿನಿಧಿಗಳನ್ನು ನಿಯತವಾಗಿ ಕಳಿಸಿ ವಿತರಣ ಸಾಧ್ಯತೆಗಳನ್ನು ಸದಾ ವಿಸ್ತರಿಸಲು, ಬಲಪಡಿಸಲು ಪ್ರಯತ್ನಿಸುತ್ತಿರುತ್ತಾರೆ. ಈಚಿನ ದಿನಗಳಲ್ಲಿ ಹಲವು ಕನ್ನಡ ಪ್ರಕಾಶಕರೂ ಸೀಮಿತವಾಗಿ ಇದನ್ನು ರೂಢಿಸಿದ್ದನ್ನು ಕಾಣುತ್ತೇವೆ. ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಥಮವಾಗಿ ಪೂರ್ಣ ಕಾಲಿಕ ಪ್ರವಾಸೀ ಪ್ರತಿನಿಧಿಯನ್ನೇ ಇಟ್ಟು ಕನ್ನಡ ನಾಡಿನ ಮೂಲೆ ಮೂಲೆಯ ಮಾರುಕಟ್ಟೆಯನ್ನು ರೂಢಿಸಿದ ಖ್ಯಾತಿ ಸಮಾಜ ಪುಸ್ತಕಾಲಯಕ್ಕೆ ಮಾತ್ರ ಸಲ್ಲುತ್ತದೆ.

ಸರಕಾರಿ ಪ್ರಕಟಣಾಂಗಗಳು ಪುಸ್ತಕ ಪ್ರಸಾರವನ್ನು ಸದಾ ಅವಗಣನೆ ಮಾಡಿವೆ. `ಮಾರು ಇಲ್ಲವೆ ಮಡಿ’ ಆದೇಶವನ್ನು ಇವರಿಗೆ ವಿಧಿಸಿದವರೇ ಇಲ್ಲ. ತೀರ ಈಚಿನವರೆಗೆ (ಅಂದರೆ ನಾಗೇಶ್ ನಿರ್ದೇಶಕರಾಗುವವರೆಗೆ) ಕರ್ನಾಟಕ ವಿಶ್ವವಿದ್ಯಾನಿಲಯದ ದೈನಂದಿನ ವಹಿವಾಟು ಸರಾಸರಿಯಲ್ಲಿ ಒಂದೂವರೆ ಸಾವಿರಕ್ಕೂ ಕೆಳಗೆ ಬಿದ್ದಿತ್ತಂತೆ. ಗುದಾಮಿನಲ್ಲಿ ಶೀರ್ಷಿಕೆಗಳು ನೂರಾರು. ಮೂಲ ಬೆಲೆಯ ಲೆಕ್ಕ ತೆಗೆದರೂ ಕೋಟಿ ಮೀರುವ ಸಂಪತ್ತು. ಇಂಥ ಪ್ರಕರಣಗಳು ಹೆಚ್ಚಿದಂತೆ ಉಚಿತ ವಿತರಣೆ, ದರ ಕಡಿತದ ಮಾರಾಟ, ಮರು ಅಥವಾ ಹೊಸ ಮುದ್ರಣದಲ್ಲಿ ಆಯ್ಕೆ ಮತ್ತು ನಿಧಾನ ಅನಿವಾರ್ಯವಾಗುತ್ತವೆ. ಆದರೆ ಹಾಗೆ ಆದಲ್ಲೂ ಗುಣ ಗೆದ್ದದ್ದು ಕಡಿಮೆ, ವಶೀಲಿ ಚಾಲ್ತಿ ಪಡೆದದ್ದೇ ಹೆಚ್ಚು.

ಪುಸ್ತಕ ಪ್ರಸರಣದಲ್ಲಿ ಗ್ರಂಥಾಲಯಗಳು ಅವಶ್ಯ ಸಂಗಾತಿಗಳು. ಖಾಸಗಿ ಗ್ರಂಥಾಲಯಗಳು ಸುಲಭದ ಆದಾಯವನ್ನಷ್ಟೇ ಉದ್ದೇಶಿಸಿರುವುದರಿಂದ ಸಮರ್ಥ ಪ್ರಸರಣ ಮಾಧ್ಯಮಗಳಾಗುವುದಿಲ್ಲ. ಹಾಗಾಗಿ ಪ್ರಸರಣದ ಬಗ್ಗೆ ಠಕ್ಕು ಮಾಡುವವರಿಗೆ ಸರಕಾರೀ ಗ್ರಂಥಾಲಯ ಜಾಲ ಬಲಪಡಿಸುವ ಮಾತುಗಳು ಸಹಜವಾದುವು. ವಸ್ತುಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ. ಕಟ್ಟಡ ಇದ್ದಲ್ಲಿ ಸಿಬ್ಬಂದಿ ಇಲ್ಲ. ಸಿಬ್ಬಂದಿ ಇದ್ದಲ್ಲಿ ಪುಸ್ತಕಗಳಿಲ್ಲ. ಪುಸ್ತಕ ಇದ್ದಲ್ಲಿ ಕಪಾಟು ಇಲ್ಲ, ಎಲ್ಲ ಇದ್ದರೂ ಕನಿಷ್ಠ ವಿಂಗಡಿಸಿ, ಜೋಪಾನ ಮಾಡಿ, ವಿತರಿಸುವ ಪುಸ್ತಕ ಪ್ರೀತಿಯೇ ಇಲ್ಲ!

‘ವಸಾಹತುಶಾಹಿ’ ಎಂದ ಕೂಡಲೇ ಮೊದಲು ನಾವು ಬ್ರಿಟಿಶರನ್ನು ಈಚೆಗೆ ಜಪಾನ್ ಅಥವಾ ಅಮೇರಿಕನ್ನರ ಕುರಿತು ಯೋಚಿಸುತ್ತೇವೆ. ಕನ್ನಡ ಗ್ರಂಥಾಲಯ ಜಾಲದಲ್ಲೂ ವಸಾಹತುಶಾಹಿ ಧೋರಣೆ ನಡೆದಿದೆ ಗೊತ್ತೇ! ಉಡುಪಿಯ `ಪ್ರಶ್ನಮಾರ್ಗ’, ಪಾಣಾಜೆಯ `ಅಜ್ಜಿಮದ್ದು’, ಮಂಗಳೂರಿನದ್ದೇ ಪ್ರವಾಸೀ ಕೈಪಿಡಿ ಬೇಕೆಂದಾದರೆ ದಕ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಕಾಣಸಿಗುವುದು ಕಷ್ಟ. ಯಾಕೆಂದರೆ, ಈ ಗ್ರಂಥಾಲಯಗಳ ಕೊಳ್ಳುವ ಶಕ್ತಿ ಎಲ್ಲ ಬೆಂಗಳೂರಿನಲ್ಲೇ ಸೋರಿ ಹೋಗುತ್ತದೆ. ಅಪರೂಪಕ್ಕೆ ಜಿಲ್ಲೆಗೆ ಹಣ ಹರಿದರೆ ಗ್ರಂಥಾಲಯದ ಸಿಬ್ಬಂದಿಗಳಿಗೆ ಸ್ಥಳೀಯ ಮಳಿಗೆಗಳಿಗೆ ಭೇಟಿ ಕೊಟ್ಟು ಆಯ್ಕೆ ಮಾಡುವುದು ತಿಳಿದೇ ಇಲ್ಲ. ಇಂಥ ಸಂದರ್ಭಗಳಲ್ಲೇ ನನಗೊಂದೆರಡು ಬಾರಿ ಜಿಲ್ಲಾ ಗ್ರಂಥಪಾಲರ ಸುತ್ತೋಲೆ ಬಂದದ್ದಿದೆ. ಇಂಥ ದಿನ ಇಷ್ಟರಿಂದ ಇಷ್ಟರವರೆಗೆ ಕೇಂದ್ರ ಗ್ರಂಥಾಲಯದಲ್ಲಿ ಆಯ್ಕೆ ಸಮಿತಿ ಸೇರುವುದಿದೆ. ನಿಮ್ಮ ಪುಸ್ತಕಗಳ ಸಹಿತ ಪ್ರತಿನಿಧಿ ಕಳಿಸಿ. ನಾನು ಮರುಪತ್ರ ಬರೆದದ್ದಿದೆ – `ಸ್ವಾಮಿ, ನಿತ್ಯ ಸುಮಾರು ಹತ್ತು ಗಂಟೆಗಳ ಕಾಲ ಎಲ್ಲ ಆಯ್ಕೆ ಸಮಿತಿಗಳಿಗೂ ವ್ಯಕ್ತಿಗಳಿಗೂ ಒದಗುವಂತೆ ನಾನಿಲ್ಲಿ ಪುಸ್ತಕಗಳನ್ನು ಪ್ರದರ್ಶಿಸಿದ್ದೇನೆ. ನಿಮ್ಮ ಸಮಿತಿ ಪಾದ ಇಲ್ಲಿಯವರೆಗೆ ಬೆಳೆಸುವ ಕೃಪೆಗೈಯಬೇಕು.’ ಸಮಿತಿ ಬರುವುದಿರಲಿ, ಒಂದು ಉತ್ತರ, ಕನಿಷ್ಠ ಗ್ರಂಥಪಾಲರ ಪ್ರತಿನಿಧಿಯೂ ನನ್ನತ್ತ ಸುಳಿದದ್ದಿಲ್ಲ. ಮಂಗಳೂರಿನ ಸಮಿತಿ ಎದುರು ಬೆಂಗಳೂರು, ಹುಬ್ಬಳ್ಳಿ, ಮೈಸೂರುಗಳಿಂದ ಬಂದವರು ಪುಸ್ತಕ ಪ್ರದರ್ಶಿಸಿ ಆದೇಶ ಪಡೆದು ಮತ್ತೆ ಒದಗಿಸಿ ಹೋದರು.

ವಿಶ್ವ ಕನ್ನಡ ಸಮ್ಮೇಳನಾನಂತರ ಸುಲಭ ಬೆಲೆಯ ಪುಸ್ತಕಗಳನ್ನು ನಿರಂತರ ತರುವ ಇಲಾಖೆಯೇ ನಮ್ಮಲ್ಲಿ ಬಂದಿದೆ. ಇದರ ವ್ಯವಸ್ಥೆಯಲ್ಲಿ ಮಾರಾಟಗಾರನಿಗೆ ಸ್ಥಾನವೇ ಇಲ್ಲ. ನಾನು ನೇರ ಪತ್ರಗಳ ಮೂಲಕ, ಲೇಖನಗಳ ಮೂಲಕ ಇವರ ಗಮನ ಸೆಳೆದೆ. ಇವರು ಜಗ್ಗಲೇ ಇಲ್ಲ. ಬದಲು ತಮ್ಮ ಜಿಲ್ಲಾ ಶಾಖೆಗಳ ಮೂಲಕ ವಿತರಣೆಯನ್ನು ಸಮರ್ಪಕವಾಗಿ ನಡೆಸುತ್ತೇವೆ ಎಂದರು. ಕಲಿಯುಗವಲ್ಲವೇ, ಹಾಗಾಗಿ ಅವರ ಮಾತು ನಂಬಿ, ಇಲಾಖೆಯ ಮಂಗಳೂರು ಶಾಖೆಗೆ ಪುಸ್ತಕ ಆರಿಸ ಹೋಗಿ, ಸೋತು ಬರುವವರ ಶಾಪ ಇವರಿಗೆ ನಾಟುವುದೇ ಇಲ್ಲ! ಬಿಡುಗಡೆ ಮತ್ತು ಪ್ರಚಾರದ ವೈಭವಕ್ಕೆ ಕನಿಷ್ಠ ರೂಪಾಯಿ ೫೦,೦೦೦ ಆದರೂ ಹುಡಿ ಹಾರಿಸಿದ `ರತ್ನಕೋಶ’ (ಮರುಮುದ್ರಣದ ಆವೃತ್ತಿ!) ಇಂದಿನವರೆಗೂ ಅಧಿಕೃತವಾಗಿ ಮಂಗಳೂರಿನಲ್ಲಿ ವಿತರಣೆಯೇ ಆಗಿಲ್ಲ.

ಪ್ರಸರಣ ಕೊರತೆಗಳನ್ನು ನಿವಾರಿಸಲು ಪುಸ್ತಕ ಪ್ರಾಧಿಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿತ್ತು. ಪ್ರಾಧಿಕಾರದ ವತಿಯಿಂದ ಕನ್ನಡ ಮಳಿಗೆ ಇಡುವ ಯುವಕರಿಗೆ ಸಾಲ ಸೌಲಭ್ಯ ಮತ್ತು ಪುಸ್ತಕ ಮೇಳ ಸದ್ಯ ಉಲ್ಲೇಖನೀಯ ಕಾರ್ಯಕ್ರಮಗಳು. ಇವರಿಂದ ಸಹಾಯಧನ ಪಡೆಯುವ ಮಳಿಗೆಗಳು ಕನ್ನಡ ಪುಸ್ತಕಗಳನ್ನು ಮಾತ್ರ ವ್ಯವಹರಿಸಬೇಕು ಎನ್ನುತ್ತದೆ ಪ್ರಾಧಿಕಾರದ ಶಾಸನ. ಹೊಟ್ಟೆಬಟ್ಟೆಯ ವ್ಯವಸ್ಥೆ ಮಾಡಿ, ಅನಂತರ ಆದರ್ಶಗಳ ಮಾತಾಡಬೇಕು ಎಂಬ ವಿವೇಕವಾಣಿ (ವಿವೇಕಾನಂದ ವಾಣಿಯೂ ಹೌದು) ಪ್ರಾಧಿಕಾರಕ್ಕೆ ಹೊಳೆದೇ ಇಲ್ಲ. ಪ್ರಾಧಿಕಾರದ ಸಾಲ ಸೌಲಭ್ಯದಲ್ಲಿ ತೆರೆಯುವ ಹೊಸ ಮಳಿಗೆ ಶಾಸನ ವಿಧಿಸಿದ ಪುಸ್ತಕಗಳನ್ನಷ್ಟೇ ಇಟ್ಟುಕೊಂಡರೆ, ಆ ಊರಿನಲ್ಲಿ ಈಗಾಗಲೇ ಇರುವ ಇತರ ಮಳಿಗೆಗಳ ವೈವಿಧ್ಯ ವೈಖರಿಗಳ ಮೀರಲು ಇದು ಸಾಕೇ?

ಪುಸ್ತಕ ಮೇಳ: ಪ್ರಾಧಿಕಾರ ಉಚಿತ ಮಳಿಗೆಯೊಡನೆ ಸಹಾಯಕ ಭತ್ತೆಯನ್ನೂ ಕೊಡುವುದಾಗಿಯೇ ಹೇಳಿತ್ತು. ಆದರೆ ಮೇಳದ ಉದ್ದಕ್ಕೂ (ಹತ್ತು ದಿನ) ಮಳಿಗೆಯ ಹಾಜರಿ ಕಡ್ಡಾಯ ಮಾಡಲೆಂದೇ ಕೊನೆಯಲ್ಲಿ ಪೂರ್ಣ ಮರಳಿಕೆಯ ಭರವಸೆಯೊಡನೆ ಎಲ್ಲರಿಂದಲೂ ಇಡುಗಂಟು ಪಡೆಯುತ್ತದೆ. ಹಾಗೆ ಮಂಗಳೂರಿಗೆ ಬಂದವರು ಇಡುಗಂಟಿನ ಆಸೆಗಾಗಿ ಹತ್ತು ದಿನ ಅತ್ತುಕೊಂಡು ಕಳೆದದ್ದು ಕಂಡಿದ್ದೇನೆ. ಭತ್ತೆ ಇರುವ ಸಹಾಯಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಬೇನಾಮಿ ಮಳಿಗೆಗಳು ನಡೆದದ್ದೂ ನೋಡಿದ್ದೇನೆ. ಇದು ಮುಂದಿನ ಮೇಳಗಳು ನಡೆದರೆ ಅವು ಅನುಸರಿಸುವ ದಿಕ್ಕನ್ನು ಸೂಚಿಸುವುದಿಲ್ಲವೇ?

ಹಲವು ವೃತ್ತಿಗಳ ಸಂಗಮ ಉದ್ಯಮ. ವೃತ್ತಿಗಳು ಸ್ಪರ್ಧಾತ್ಮಕವಾದಷ್ಟೂ ಉದ್ಯಮ ಯಶಸ್ವೀ ಆಗುತ್ತದೆ. ಇಲ್ಲಿ ಸ್ಪರ್ಧೆಯ ಭರದಲ್ಲಿ ಸಮಾಜ ದ್ರೋಹ ನಡೆಯದಂತೆ ಸರಕಾರ ನಿಗಾ ವಹಿಸಿದರೆ ಸಾಕು. ಆದರೆ ಅದನ್ನು ಬಿಟ್ಟು ಸರಕಾರವೇ ಪುಸ್ತಕೋದ್ಯಮದಲ್ಲಿ ತೊಡಗಿಕೊಂಡಿದೆ. ಪುಸ್ತಕ ಪ್ರಕಾಶನ, ಮಳಿಗೆಗಳು, ಖರೀದಿ, ವಿತರಣೆ ಮುಂತಾದ ಪ್ರತ್ಯಕ್ಷ ಕ್ರಿಯೆಗಳು ಹೆಚ್ಚುತ್ತಲೇ ಇವೆ. ರೋಗಕ್ಕೆ ಮದ್ದಾಗಬೇಕಾದವರು ಸ್ವತಃ ರೋಗಗ್ರಸ್ತರಾಗುವ ವಿಪರ್ಯಾಸ ಇದು.

ಕರ್ನಾಟಕದ ವಿವಿಧ ವಲಯಗಳ ಆಚಾರ ವಿಚಾರಗಳ ಸೂಕ್ಷ್ಮವರಿತು ವೃತ್ತಿ ರೂಢಿಸಿದ ನೂರಾರು ಪ್ರಕಾಶಕರಿದ್ದಾರೆ. ನನ್ನೂರಿನದ್ದೇ ಉದಾಹರಣೆ ಕೊಡುವುದಾದರೆ ಸರ್ವಿಸ್ ಬಸ್ ನಿಲ್ದಾಣದ ವೆಂಕಟ್ರಾವ್ ಅಥವಾ ನಿತ್ಯಾನಂದ ಗ್ರಂಥಾಲಯ ನೋಡಿ. ಮಾಸಲು ಕಾಗದ, ಅಗ್ಗದ ಮುದ್ರಣಗಳ ಹಂತವನ್ನು ಮೀರಿ ಈ ಪ್ರಕಾಶನ ಆಫ್ ಸೆಟ್ ಮುದ್ರಣ, ವರ್ಣಮಯ ಪ್ರಕಟಣೆಗಳ ಎತ್ತರವನ್ನು ಸಾಧಿಸಿದೆ. ಹಾಗೆಂದು ತಮ್ಮ ಮಾರುಕಟ್ಟೆಯ ವ್ಯಾಪ್ತಿ ಮೀರುವ ಗಾತ್ರ, ಬೆಲೆ, ವ್ಯಾಪಾರ ತಂತ್ರಗಳನ್ನು ಇದೆಂದೂ ಅನುಸರಿಸಿದ್ದಿಲ್ಲ. ಈ ವಲಯದ ದೇವ ದೈವಗಳ ಜಾತ್ರೆಯಲ್ಲಿ ಕನಿಷ್ಠ ಒಂದು ಗೋಣಿಯಾದರೂ ಹಾಸಿ, ವೆಂಕಟ್ರಾಯರ ಪ್ರಕಟಣೆಗಳನ್ನು ಯಾರೋ ಮಾರುವುದನ್ನು ಕಂಡಿದ್ದೇನೆ. ಸಮ್ಮೇಳನಗಳ ಎತ್ತರದಲ್ಲೂ ಇವರ ಮಳಿಗೆ ಇಲ್ಲದಿಲ್ಲ. ಇವರ ಹಲವು ಪ್ರಕಟಣೆಗಳು ಹತ್ತು ಹದಿನೈದು ಮರುಮುದ್ರಣ ಕಂಡಿವೆ. ಆದರೂ ಇವರು ರಿಯಾಯಿತಿ ದರದ ಕಾಗದ, ಸಹಾಯಧನ, ಪ್ರಶಸ್ತಿ ಇತ್ಯಾದಿ ಕೊರಗು ಕಟ್ಟಿಕೊಂಡವರೇ ಅಲ್ಲ. ಸಗಟುಕೊಳ್ಳುವಿಕೆ, ಗ್ರಂಥಾಲಯ ಖರೀದಿ ಇತ್ಯಾದಿ ಹಿರಿ ಮೊತ್ತದ ವ್ಯಾಪಾರ ನಂಬಿ ಕುಳಿತದ್ದೂ ಇಲ್ಲ.

ವೆಂಕಟ್ರಾಯರಂಥ ನೆಲಕಚ್ಚಿ ನಿಂತ ಅಪ್ಪಟ ಪ್ರಕಾಶಕರು ಮತ್ತು ವಿತರಕರು, ಆ ತೆರನಾಗಿ ಪ್ರಕಟಿಸದಿರಲಾಗದ, ಮಾರದಿರಲಾಗದ ಯಾವುದೇ ಸೋಗಲಾಡಿತನದ ಅಗತ್ಯವಿಲ್ಲದೇ ಮನೆ ಮನ ಸೇರುವ ಪುಸ್ತಕೋದ್ಯಮ ಅಧ್ಯಯನಯೋಗ್ಯ. ವೆಂಕಟ್ರಾಯರ ಸರಿ ಎದುರು ಕೊನೆಯಲ್ಲಿದ್ದಾರೆ, ಮೈಸೂರಿನ ಡಿವಿಕೆ ಮೂರ್ತಿಯಂಥ ಪ್ರಕಾಶನ ದೈತ್ಯ. ತ್ರಿವೇಣಿ ವಾಣಿಯರಂಥ ಸಾರ್ವಜನಿಕ ಬೇಡಿಕೆಯ ಕೃತಿಗಳಿಂದ ಹಿಡಿದು, ವಿದ್ವತ್ ವಲಯದ ಯಾವುದೇ ಪ್ರಕಾರಗಳ, ಯಾವುದೇ ಗಾತ್ರದ ಹೊತ್ತಗೆಗಳವರೆಗೂ ಪ್ರಕಾಶನ, ವಿತರಣೆಯ ಅಪೂರ್ವ ಯಶಸ್ಸನ್ನು ಸಾಧಿಸಿದ ಡಿವಿಕೆ ಪ್ರಕಾಶನ ಕೇವಲ ಅಧ್ಯಯನಕ್ಕಲ್ಲ ಅನುಸರಣೀಯವೂ ಹೌದು. ಸ್ವಾವಲಂಬನೆಯನ್ನೇ ಮರೆತು ಬೆಳೆದಿರುವ ಪ್ರಕಾಶನ ಉದ್ದಿಮೆ ಅರ್ಥಾತ್ ಸರಕಾರೀ ಕೃಪಾಪೋಷಿತ ಪುಸ್ತಕ ಪ್ರಪಂಚ ಅದೆಷ್ಟೇ ಬೃಹತ್ತಿರಲಿ, ಆಶಯಗಳು ಎಷ್ಟೇ ಉದಾತ್ತವಿರಲಿ ಕುಸಿಯುವುದು ಶತಃ ಸಿದ್ಧ!

ಅಟ್ಟಪಾಕದ ರುಚಿಯ ಸಟ್ಟುಗವು ಬಲ್ಲುದೇ?
ಶ್ರೇಷ್ಠರುಗಳೆಂದುಯೆನಬೇಡ. ಅರಿವಿನ
ಬಟ್ಟೆ ಬೇರೆಂದ ಪರಮಾರ್ಥ

 

(ಮುಂದುವರಿಯಲಿದೆ)