(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ)
ಅಧ್ಯಾಯ ಹದಿನಾರು

 

ಆಪತ್ಕಾಲದಲ್ಲಿ ನೆರವಾಗುವವರು ನಿಜವಾದ ಮಿತ್ರರು ಎಂದು ಹೇಳುತ್ತಾರೆ. ಆಪತ್ತುಗಳು ಬರುವ ಮೊದಲೇ ರಕ್ಷಣೆ ನೀಡುವವರು ಆಪತ್ತುಗಳು ಬಾರದಂತೆ ಭದ್ರತೆ ನೀಡುವವರು ಯಾರು? ತಾಯಿಗೆ ಮಾತ್ರ ಈ ಶಕ್ತಿ ಇರುತ್ತದೆ. ದೇವರು ಎಲ್ಲಾ ಕಡೆ ಇರುವುದು ಸಾಧ್ಯವಿಲ್ಲವೆಂದು ಅವನು ತಾಯಂದಿರನ್ನು ಭೂಲೋಕದಲ್ಲಿ ಸೃಷ್ಟಿಸಿದ ಎಂಬ ಮಾತಿದೆ. ಹೆತ್ತವಳು ಮಾತ್ರ ತಾಯಿಯೆಂದು ತಿಳಿಯಬೇಕಾಗಿಲ್ಲ. ತಾಯಿ ಹೃದಯದ ಮಮತೆ ಗಂಡಸರಲ್ಲೂ ಇದೆ. ಅಂತಹವರು ಸಂಪರ್ಕಕ್ಕೆ ಬಂದಾಗ ಗುರುತಿಸುವ ಕಣ್ಣು ನಮಗಿರಬೇಕು ಅಷ್ಟೇ. ಈ ಲಕ್ಷ್ಮೀ ಟೀಚರು ತನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಮಾತೃಹೃದಯದಿಂದ ಅಪ್ಪಿಕೊಂಡವರು. ಅತ್ಯಂತ ಮಡಿವಂತ ಬ್ರಾಹ್ಮಣ ಮನೆತನದ ಹೆಣ್ಣುಮಗಳೊಬ್ಬಳು ತಾನು ಹುಟ್ಟಿದ ಪರಿಸರದ ಎಲ್ಲಾ ನಂಬಿಕೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಯಾವುದೇ ಘರ್ಷಣೆಗೆ ಆಸ್ಪದವಿಲ್ಲದಂತೆ ಕಳಚಿಕೊಂಡದ್ದು ವಿಶೇಷ. ಹೊಟ್ಟೆಯ ಹಸಿವಿಗೆ ಜಾತಿ, ಮತ, ಪಂಥಗಳ ಭೇದವಿಲ್ಲವೆಂಬುದನ್ನು ದೃಢವಾಗಿ ನಂಬಿದ ಅವರು ಶಿಕ್ಷಕ ವೃತ್ತಿಗೆ ಸೇರಿದಾಗಲೇ ತನಗಿರುವುದು ಮಾನವ ಧರ್ಮವೊಂದೇ, ತಾನು ಪಾಲಿಸಬೇಕಾದುದು ಮಾನವೀಯತೆಯನ್ನು ಮಾತ್ರವೆಂದು ನಂಬಿದರು. ಅದರಂತೆ ಬಾಳಿದರು. (ಚಿತ್ರದಲ್ಲಿ: ನನ್ನ ತಮ್ಮನ ಮದುವೆ ಸಂದರ್ಭದಲ್ಲಿ ಲಕ್ಷ್ಮೀ ಟೀಚರ್)ಮಾತೃಭಾಷೆ ತಮಿಳಾದರೂ ಕ್ರಿಶ್ಚನ್ ಕೊಂಕಣಿ, ಗೌಡ ಸಾರಸ್ವತರ ಕೊಂಕಣಿಯನ್ನು ಅಷ್ಟೇ ಸುಲಲಿತವಾಗಿ ಮಾತಾಡಬಲ್ಲ ಅವರ ಜಾಣ್ಮೆ ವಿಶೇಷ. ಮಲೆಯಾಳ, ಕನ್ನಡ, ಹಿಂದಿ, ಇಂಗ್ಲಿಷ್, ತುಳು ಅಲ್ಲದೆ ತೆಲುಗನ್ನೂ ಅರ್ಥ ಮಾಡಿಕೊಳ್ಳಬಲ್ಲ ಪ್ರಾವೀಣ್ಯತೆ ಗಳಿಸಿದ ಅವರು ತನ್ನನ್ನು `ಸಾಡೇಸಾತ್’ ಎಂದು ಲೇವಡಿ ಮಾಡಿಕೊಳ್ಳುತ್ತಿದ್ದರು. ಸಾಡೇ ಸಾತ್ ಎಂದರೆ ಅರೆಹುಚ್ಚನೆಂಬ ಅರ್ಥವೂ ಇದೆ. ಏಳೂವರೆ ಶನಿ ಹಿಡಿದವನು ತಲೆ ಕೆಟ್ಟವನಂತಿರುತ್ತಾನೆಂಬ ನಂಬಿಕೆ ಇದೆ.ಹಾಗೆ ತನಗೆ ಏಳೂವರೆ ಭಾಷೆಗಳಲ್ಲಿ ಸಂವಹನ ಸಾಧ್ಯವಾದದ್ದು ಈ ಸಾಡೇ ಸಾತ್ ಬುದ್ಧಿಯಿಂದಲೇ ಎಂಬುದು ಅವರ ವಾದ.

ಪಾಕಶಾಸ್ತ್ರ ಪ್ರವೀಣೆಯಾದ ಇವರು ತನ್ನ ಮನೆಗೆ ಬಂದವರನ್ನು ಸತ್ಕರಿಸುವ ರೀತಿಯೇ ಅನನ್ಯ. ಕಸೂತಿ ಕಲೆಯಲ್ಲಿ ಅವರು ಎಂತಹ ಪ್ರವೀಣೆಯೆಂಬುದಕ್ಕೆ ಅವರು ಮಾಡಿತ ಕುಶಲ ಕಲೆಗಳು, ಕಸೂತಿಯ ಬಟ್ಟೆಗಳು ಸಾಕ್ಷಿ ಹೇಳುತ್ತಿದ್ದವು. ಹೊರನೋಟಕ್ಕೆ ಶುದ್ಧ ಸಂಪ್ರದಾಯವಾದಿಯಂತೆ ಕಾಣುವ ಅವರ ಆಂತರ್ಯದಲ್ಲಿ ವಿಶ್ವಮಾನವ ಪ್ರಜ್ಞೆ ಸದಾ ಜಾಗೃತವಾಗಿರುತ್ತಿತ್ತು.

ನಮ್ಮ ಬಿಡಾರ ಹೊಸ ಬಾಡಿಗೆ ಮನೆಗೆ ಬಂದ ಮೇಲೆ ಮನಸ್ಸಿಗೆ ಮಾತ್ರವಲ್ಲ ಮನೆಗೂ ಹತ್ತಿರವಾದೆವು. ನನ್ನ ತಂದೆ ತೀರಿದ ಮೇಲಂತೂ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದವರವರು. ನನಗೊಂದು ಸಣ್ಣ ಶಸ್ತ್ರಚಿಕಿತ್ಸೆ ಕಂಕನಾಡಿ ಆಸ್ಪತ್ರೆಯಲ್ಲಿ ಮಾಡಬೇಕಾಯಿತು. ಆಗ ಹಗಲು ರಾತ್ರಿ ಜೊತೆಗಿದ್ದು ಶುಶ್ರೂಷೆ ಮಾಡಿದರು. ಉಡುಪಿಯ ಚಂದ್ರಕಲಾ ಭಕ್ತರ ನರ್ಸಿಂಗ್ ಹೋಮಿನಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಗಾಗಿ ನಾನು ಎಡ್ಮಿಟ್ ಆದಾಗಲೂ ನನ್ನ ಜೊತೆ ಇದ್ದು ಕಾಪಾಡಿದವರು ಇದೇ ಲಕ್ಷ್ಮೀ ಟೀಚರು. ನನ್ನ ಮನೆಗೆ ಅಗತ್ಯವಾದ ಪರಿಕರಗಳೇನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಮರುದಿನ ಮನೆಗೆ ಮುಟ್ಟಿಸುವ ಅವರ ಉದಾರತೆಗೆ ನಾನು ಬೆರಗಾಗಿದ್ದೇನೆ. ಹಾಗೆಂದು ಅವರೇನೂ ಆರ್ಥಿಕವಾಗಿ ಗಟ್ಟಿಗರಲ್ಲ. ಆದರೆ `ಸ್ವಂತಕ್ಕೆ ಸ್ವಲ್ಪ, ಲೋಕಕ್ಕೆ ಸರ್ವಸ್ವ’ ಎನ್ನುತ್ತಾರಲ್ಲ, ಅಂತಹ ಸ್ವಭಾವದವರು. ಅವರಿಂದ ಕೃತಾರ್ಥರಾದವರ ಸಂಖ್ಯೆಯನ್ನು ಲೆಕ್ಕ ಇಡಲು ಸಾಧ್ಯವಿಲ್ಲ.

ಚಂದದ ಒಂದು ಸೀರೆ ಕೊಳ್ಳಲು ತಾಕತ್ತಿಲ್ಲದ ನಾನು ಕರ್ಕೇರಾರ ಚಂದ್ರಾ ಕ್ಲೋತ್ ಸ್ಟೋರಿನಿಂದ ವರ್ಷಕ್ಕೆರಡು ಸೀರೆ ಸಾಲ ಕೊಂಡು ಉಡುತ್ತಿದ್ದ ಕಾಲದಲ್ಲಿ ಎಷ್ಟೊಂದು ಸೀರೆಗಳನ್ನು ತಂದು ನನಗೆ ಉಡಿಸಿ ಸಂತೋಷಪಟ್ಟವರವರು. ಅವರ ಅಭಿಮಾನೀ ಬಳಗದವರು, ಬಂಧುಗಳು, ಮಿತ್ರರು, ಶಿಷ್ಯರು ಕೊಡುವ ನೀಲಿ ಸೀರೆಗಳು ವೈವಿಧ್ಯಮಯವಾಗಿದ್ದುವು. ಬಣ್ಣ ಮಾತ್ರ ನೀಲಿಯಾಗಿರುತ್ತಿದ್ದುವು. ಅವುಗಳಲ್ಲಿ ಹೆಚ್ಚಿನವು ನನ್ನ ಮನೆಗೇ ತಂದು ಕೊಡುತ್ತಿದ್ದ ಟೀಚರು ತನಗೆ ಸ್ವಂತಕ್ಕೆಂದು ಎಂದೂ ಸೀರೆ ಕೊಂಡದ್ದನ್ನು ನಾನು ಕಂಡಿಲ್ಲ. “ಮಾಡದಿರು ಬಾಳನ್ನು ಬೇಳೆಯಂತೆ, ಕೂಡಿರಲಿ ಬಾಳು ಇಡಿಗಾಳಿನಂತೆ” ಎಂಬ ಕವಿವಾಣಿ ಇವರ ಜೀವನತತ್ವ. ಅವರ ಬಳಿಗೆ ಬಂದು ಕೂತು ಅವರೊಂದಿಗೆ ನಾಲ್ಕು ಮಾತನಾಡಿದರೆ ನಮ್ಮ ಮನಸ್ಸಿನ ಕ್ಲೇಶಗಳೆಲ್ಲಾ ಮಾಯವಾದಂತಹ ಅನುಭವವಾಗುತ್ತಿತ್ತು. ನಮ್ಮ ಲೀಲಾವತಿ ಟೀಚರು ಮನೆಯಲ್ಲಿ ಯಾವುದೇ ರೀತಿಯ ಮಾನಸಿಕ ಬೇಗೆ ಉಂಟಾದ ಕೂಡಲೇ ಬಂದು ಇವರ ಸಮ್ಮುಖದಲ್ಲಿ ಕೂತು ಮನಸ್ಸು ತಂಪು ಮಾಡಿಕೊಳ್ಳುತ್ತಿದ್ದರು. ಅವರಲ್ಲಿಗೆ ಬಂದರೆ ಮನಸ್ಸು ಮಾತ್ರವಲ್ಲ ಹೊಟ್ಟೆಯನ್ನೂ ತಂಪು ಮಾಡಿಕೊಳ್ಳದೆ ಹೋಗಲು ಬಿಡುತ್ತಿರಲಿಲ್ಲ. ಗಂಭೀರವಾದ ಸಾಹಿತ್ಯಾಧ್ಯಯನದಲ್ಲಿ ನಿರತೆಯಾಗಿದ್ದರೂ ಬರವಣಿಗೆಯಲ್ಲಿ ಆಸಕ್ತಿ ತೋರಿದವರಲ್ಲ. ಯಾವ ಒಳ್ಳೆಯ ಓದು ಬರವಣಿಗೆ ಇದ್ದರೂ ಮೂಲತಃ ಮಾನವ ಕೇವಲ ಮನುಷ್ಯರೇ. ಓದು ಬರಹಗಳು ಎಲ್ಲಾ ಮನುಷ್ಯರನ್ನು ಸಹೃದಯವಂತರನ್ನಾಗಿ ಮಾಡಲು ಸಾಧ್ಯವಿಲ್ಲವೆಂಬುದನ್ನು ಉದಾಹರಣೆ ಸಹಿತ ವಿವರಿಸುವ ಚಿಂತನಾಶೈಲಿಗೆ ನಾನು ಬೆರಗಾಗಿ ಕಿವಿಯಾಗುತ್ತಿದ್ದೆ. ಸಂತನೊಳಗೊಬ್ಬ ದುಷ್ಟನೂ ಕಳ್ಳನೊಳಗೊಬ್ಬ ಸಂತನೂ ಇರಲು ಸಾಧ್ಯ ಎಂಬ ಸತ್ಯವನ್ನು ಮರೆಯಬಾರದು ಎಂದು ಯಾವಾಗಲೂ ಹೇಳುತ್ತಿದ್ದರು.

ಈ ಮನೆಗೆ ಬರುವವರೆಗೂ ನಾವು ಯಾರಲ್ಲೂ ಸಾಲ ಮಾಡದೆ ಚಾಪೆ ಇದ್ದಷ್ಟೇ ಕಾಲು ಚಾಚುವುದನ್ನು ರೂಢಿ ಮಾಡಿಕೊಂಡಿದ್ದೆವು. ಇಲ್ಲಿಗೆ ಬಂದ ಮೇಲೆ ನಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆಯಾಯಿತು. ಇರುವಷ್ಟು ಕಾಲ ಆರೋಗ್ಯದಿಂದ ಬದುಕಬೇಕಾದರೆ ಈ ಎಲ್ಲಾ ಸೌಕರ್ಯಗಳು ಬೇಕೇ ಬೇಕು ಎಂದು ಗ್ಯಾಸ್ ಸೌಕರ್ಯ, ಫ್ಯಾನು ಇತ್ಯಾದಿಗಳೆಲ್ಲವನ್ನು ಮಾಡಿಸಿಕೊಟ್ಟವರವರು. ನನ್ನ ತಮ್ಮನ ಶಿಕ್ಷಣಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ನಾನು ಕೇಳದೇ ಕೊಟ್ಟವರವರು. ತನ್ನ ಮನೆಯಲ್ಲಿ ಮಾಡಿದ ತಿಂಡಿ ತಿನಸುಗಳಿಂದ ಹಿಡಿದು ಉತ್ತಮ ಆಹಾರ ವಸ್ತುಗಳು, ಹಣ್ಣು ಹಂಪಲುಗಳು ನನ್ನ ಮನೆಗೆ ಬಂದು ಬೀಳತೊಡಗಿತು. ಆಗೆಲ್ಲಾ ನನ್ನ ಮನಸ್ಸು ಈ ಸೌಭಾಗ್ಯವನ್ನು ಕಂಡು ಆಶ್ಚರ್ಯಪಡುತ್ತಿದ್ದುದುಂಟು. `ಲಕ್ಷ್ಮಿ ಕಾಲು ಮುರಿದು ನನ್ನ ಮನೆಯಲ್ಲೇ ಬಿದ್ದಿದ್ದಾಳೆ’ ಎಂಬಷ್ಟು ನೆಮ್ಮದಿಯ ಬದುಕು ಕಾಣುವಂತಾಯಿತು. ತೀರಿಸುವ ಸಾಲವನ್ನು ಹೊರಬಹುದು. ತೀರಿಸಲಾರದ ಋಣಭಾರವನ್ನು ಈ ಜನ್ಮದಲ್ಲಂತೂ ಕೆಳಗಿಳಿಸಲಾರೆ. ಅಂತಹ ಹೊರೆಯನ್ನು ಅವರು ಮಮತೆಯಿಂದಲೇ ಹೊರಿಸಿದರು. ಈ ಪ್ರೀತಿಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು, ತೀರಿಸಲಾಗದು.

ನನ್ನ ಏಳಿಗೆಯ ಪ್ರತಿ ಕ್ಷಣಗಳನ್ನು ಕಂಡು ಸಂಭ್ರಮಿಸಿದ ಲಕ್ಷ್ಮೀ ಟೀಚರು ನನ್ನ ಕತೆಗಳು ಪತ್ರಿಕೆಯಲ್ಲಿ ಪ್ರಕಟವಾದಾಗ, ಆಕಾಶವಾಣಿಯಲ್ಲಿ ನನ್ನ ಸ್ವರ ಕೇಳಿದಾಗ ಹಿರಿ ಹಿರಿ ಹಿಗ್ಗಿದರು. ಪುಸ್ತಕಗಳು ಪ್ರಕಟಗೊಂಡಾಗ ನನ್ನ ಅಪ್ಪ ಎಷ್ಟು ಸಂತಸಪಡುತ್ತಿದ್ದರೋ ಅದಕ್ಕಿಂತ ಒಂದು ಪಟ್ಟು ಹೆಚ್ಚೇ ಸಂತಸಪಟ್ಟವರು ಈ ಲಕ್ಷ್ಮೀ ಟೀಚರು. “ರೋಹಿಣೀ, ನೀನು ಯಾರನ್ನಾದರೂ ಪ್ರೀತಿಸಿದ್ದಿಯಾ, ಅಥವಾ ಯಾರನ್ನಾದರೂ ಮದುವೆಯಾಗುವ ಮನಸ್ಸಿದೆಯೇ ಹೇಳು. ನಾನು ಮುಂದೆ ನಿಂತು ಮದುವೆ ಮಾಡಿಸುತ್ತೇನೆ”. ಹೆತ್ತ ತಂದೆ ಕೇಳಬೇಕಾಗಿದ್ದ ಈ ಮಾತನ್ನು ಲಕ್ಷ್ಮೀ ಟೀಚರು ಹೇಳಿದಾಗ ನಾನು ಮೂಕಳಂತೆ ಅವರ ಮುಖವನ್ನೇ ದಿಟ್ಟಿಸಿ ನೋಡಿದ್ದೆ. ನನ್ನ ತಾಯಿಯ ಕಡೆಯ ಬಂಧುಗಳಾಗಲೀ, ತಂದೆ ಕಡೆಯ ಬಂಧುಗಳಾಗಲೀ, ನನ್ನ ಮದುವೆಯ ಬಗ್ಗೆ ಯೋಚನೆಯೇ ಮಾಡಿರದ ಕಾಲದಲ್ಲಿ ಈ ಟೀಚರ ಪ್ರಶ್ನೆ ಕೇಳಿ ನಾನು ಬೆರಗಾದೆ. ನನ್ನ ಜೀವನದ ಪ್ರಗತಿಯ ಪ್ರತೀ ಹೆಜ್ಜೆ-ಹೆಜ್ಜೆಯಲ್ಲೂ ಅವರ ಬ್ಯಾಂಕ್ ಎಕೌಂಟು ನನ್ನ ಎಕೌಂಟ್‌ಗೆ ವರ್ಗಾವಣೆಯಾಗುತ್ತಿತ್ತು. ಪುಸ್ತಕ ಪ್ರಕಟಣೆಗೆ, ತಮ್ಮನ ಮದುವೆಗೆ, ಕುಡುಪಿನಲ್ಲಿ ಜಾಗ ಖರೀದಿಗೆ, ಮನೆ ಕಟ್ಟುವುದಕ್ಕೆ ಹೀಗೆ ಹೀಗೆ ಲಕ್ಷ್ಮೀ ನನ್ನ ಮನೆಯಲ್ಲೇ ಬಿದ್ದಿರುವಂತಾದುದು ಎಂತಹ ಸೌಭಾಗ್ಯವಲ್ಲವೇ? ಕೋಟಿಗೊಬ್ಬರೂ ಇಲ್ಲದ ಇಂತಹ ಲಕ್ಷ್ಮೀ ಟೀಚರು ತನ್ನ ಮಮತೆಯ ಸಾಗರದಲ್ಲಿ ನನ್ನನ್ನು ಕ್ಷೇಮವಾಗಿ ದಡ ಮುಟ್ಟಿಸಿದರು.

ಕಣ್ಣಿನ ದೃಷ್ಟಿದೋಷವೊಂದು (ಸೋಡಾಗ್ಲಾಸು ಕನ್ನಡಕವಿತ್ತು) ಬಿಟ್ಟರೆ ಬೇರೆ ಎಲ್ಲಾ ವಿಷಯಗಳಲ್ಲಿ ಅತ್ಯಂತ ಆರೋಗ್ಯವಂತರಾಗಿದ್ದ ಅವರಿಗೆ ನಿವೃತ್ತರಾದ ಏಳೆಂಟು ವರ್ಷಗಳಲ್ಲಿ ಕಾಣಿಸಿಕೊಂಡ ಕಾಯಿಲೆ ಮಾತ್ರ ಅವರ ಹಿತೈಷಿಗಳನ್ನೆಲ್ಲಾ ಕಂಗಾಲಾಗುವಂತೆ ಮಾಡಿತು. ತನ್ನ ದೇಹದಲ್ಲಾಗುವ ಪರಿವರ್ತನೆಯ ಬಗ್ಗೆ ಕಿಂಚಿತ್ತೂ ಗಮನ ನೀಡದೆ ಸದಾ ಪರರ ಬಗ್ಗೆಯೇ ಚಿಂತಿಸಿದ ಅವರಿಗೆ ಇಂತಹ ಕಾಯಿಲೆ ಯಾಕೆ ಬಂತಪ್ಪಾ ಎಂದು ನಾವು ಪರಿತಪಿಸುವಂತಾಯಿತು. ಅವರ ಓವರಿಯಲ್ಲಿ ಗಡ್ಡೆ ಬೆಳೆದು ಕ್ಯಾನ್ಸರ್‌ಗೆ ಪರಿವರ್ತನೆಯಾಗಿತ್ತು. ನೋವಿಲ್ಲ, ತೊಂದರೆಯಿಲ್ಲ ಎಂಬ ಕಾರಣಕ್ಕೆ ಅದೊಂದು ಕ್ಷುಲ್ಲಕ ವಿಷಯವೆಂದು ನಿರ್ಲಕ್ಷಿಸಿದ ಅವರನ್ನು ಒಂದು ವರ್ಷದ ಕಾಲ ನೋವಿನಿಂದ ನರಳುವಂತೆ ಮಾಡಿತು. ಅವರ ಜೀವಿತಾವಧಿಯಲ್ಲಿ ಒಂದು ಸಣ್ಣ ಜೀವಿಗೂ ನೋವು ನೀಡಿರಲಾರರು. ಅಂತಹವರು ಕಿಮೋತೆರಪಿಯ ಕಾಲದಲ್ಲಿ ನೋವು ಅನುಭವಿಸುವಾಗ ನನ್ನ ಮನಸ್ಸು ರೋದಿಸುತ್ತಿತ್ತು. ಸಂತೋಷವನ್ನು ಭರಪೂರ ಹಂಚಬಹುದು. ಆದರೆ ನೋವನ್ನು? ಅವರ ಹತ್ತಿರ ಕುಳಿತು ಸಾಂತ್ವನವೀಯಬಹುದೇ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ. ಅವರ ಕೊನೆಗಾಲದಲ್ಲಿ ರಾತ್ರಿ ಹಗಲು ಅವರ ಜೊತೆಗಿದ್ದವರು ಅವರ ನಿಡುಗಾಲದ ಗೆಳತಿ ಆಲಿಸ್ ನೊರೊನ್ನಾ ಅವರು. ಲಕ್ಷ್ಮೀ ಟೀಚರ ತಮ್ಮ ಮತ್ತು ತಮ್ಮನ ಹೆಂಡತಿ ರಾಧಕ್ಕ ಸಾಕಷ್ಟು ಕಾಳಜಿಯಿಂದ ಆರೈಕೆ ಮಾಡಿದರೂ ಈ ನೊರೊನ್ನ ಟೀಚರು ಮಾಡಿದ ಸೇವೆ ಅನನ್ಯ.

ಮನುಷ್ಯ ತನ್ನ ಕೊನೆಗಾಲದಲ್ಲಿ ನೆಮ್ಮದಿಯಿಂದ ಸಾಯುವುದೂ ಒಂದು ಸೌಭಾಗ್ಯವೇ ಸರಿ. ತುಂಬಾ ನೋವಿನಿಂದ ನರಳುತ್ತಿರುವಾಗ ನಾನು ಸಾಂತ್ವನ ಮಾಡಿದಾಗ ಅವರು ಹೇಳಿದ್ದು ನೆನಪಾಗುತ್ತದೆ “ನಾನು ಮರಣವನ್ನು ಆಪೇಕ್ಷಿಸಿದಾಗಲೂ ಅದು ಸಿಗಲಿಲ್ಲವಲ್ಲಾ. ಅದಕ್ಕೆ ನನಗೆ ದುಃಖವಾಗುತ್ತದೆಯೇ ಹೊರತು ಮರಣ ನನಗೆ ಎಂದೂ ಭಯಪಡುವ ದುಃಖದ ಸಂಗತಿಯಾಗಿಲ್ಲ. ನನ್ನ ನೋವಿಗಿಂತಲೂ ನನ್ನ ಆರೈಕೆ ಮಾಡುವವರ ಕಷ್ಟ, ತೊಂದರೆಗಳನ್ನು ಕಂಡು ನಾನಾಗಿಯೇ ಮರಣವನ್ನು ಎಂದೋ ಅಪೇಕ್ಷಿಸಿದೆ. ಆದರೇನು ಮಾಡುವುದು? ಆ ಯಮನಿಗೂ ನನ್ನ ಮೇಲೆ ಕರುಣೆಯಿಲ್ಲ” ಎಂದಾಗ ಹೌದಲ್ಲಾ, ನೋವಿನಿಂದ ಮುಕ್ತಿ ಸಿಗುವುದೇ ಮರಣವೆಂದಾದರೆ ಆ ಮರಣವನ್ನು ಎಲ್ಲರೂ ಸ್ವಾಗತಿಸೋಣ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ತನ್ನ ದೇಹದ ಆರೋಗ್ಯದ ಬಗ್ಗೆ ಅತೀವ ಆತ್ಮವಿಶ್ವಾಸವೇ ಅವರನ್ನು ಈ ನೋವು ಅನುಭವಿಸುವಂತೆ ಮಾಡಿತೇ? ಅಥವಾ ಅತೀವ ನಿರ್ಲಕ್ಷ್ಯವೇ ಅವರನ್ನು ಈ ಕಾಯಿಲೆಗೀಡು ಮಾಡಿತೇ? ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅವರು ನೋವು ಅನುಭವಿಸುತ್ತಿರಲಿಲ್ಲ ಮಾತ್ರವಲ್ಲ ಇನ್ನು ಕೆಲವು ವರ್ಷ ಬದುಕುತ್ತಿದ್ದರೋ ಏನೋ ಎಂದು ನನ್ನ ಭಾವನೆ. ಯಾರು ಪರರಿಗಾಗಿ ಬದುಕುವರೋ ಅವರ ಬದುಕೇ ಧನ್ಯವೆಂದು ಹೇಳುತ್ತಾರೆ. ಇಂತಹ ಮಾತುಗಳನ್ನೇನಾದರೂ ಲಕ್ಷ್ಮೀ ಟೀಚರ ಮುಂದೆ ಹೇಳಿದರೆ ಅವರು ತಕ್ಷಣ ಅದನ್ನು ಖಂಡಿಸಿ ಇವೆಲ್ಲಾ ಗಂಟಲ ಮೇಲಿನ ಮಾತುಗಳು. ಕೇಳಲಿಕ್ಕೆ ಚಂದವೇ ಹೊರತು ಆಚರಣೆಗಲ್ಲ. ಈ ಪ್ರಪಂಚದಲ್ಲಿ ತಮ್ಮ ಸುಖವನ್ನು ಕಡೆಗಣಿಸಿ ಯಾವ ಪ್ರಾಣಿಯೂ ಬದುಕುವುದಿಲ್ಲ, ತಿಳಿದುಕೋ. ಮೊದಲು ತಾನು ಮತ್ತೆ ಎಲ್ಲವೂ. ನಾನು ನೆಮ್ಮದಿಯಿಂದಿದ್ದರೆ ಮಾತ್ರ ಇತರರ ನೆಮ್ಮದಿಗೆ ಪ್ರಯತ್ನಿಸಬಹುದು ಎನ್ನುತ್ತಿದ್ದರು. ಅವರು ಯಾವ ದೇವರನ್ನೂ ಸ್ತುತಿಸಲಿಲ್ಲ. ಸ್ತುತಿಸುವವರನ್ನು ಖಂಡಿಸಲಿಲ್ಲ. ದೇವರು ಭಜನೆಯಲ್ಲಿಲ್ಲ, ಪೂಜೆಯಲ್ಲಿಲ್ಲ, ಮಂತ್ರಗಳಲ್ಲಿಲ್ಲ. ನಮ್ಮ ಅಂತಃಸಾಕ್ಷಿಯಾದ ಪ್ರಜ್ಞೆಯನ್ನೇ ಬೇಕಾದರೆ ದೇವರೆಂದು ಕರೆಯಬಹುದೇನೋ? ಇಷ್ಟಕ್ಕೂ ದೇವರ ಹಂಗಿಲ್ಲದೆ ಬದುಕುವ ಕೋಟ್ಯಾಂತರ ಜೀವಿಗಳಿವೆ. ದೇವರನ್ನು ಸೃಷ್ಟಿಸಿದ ನಾವೇ ಅವನನ್ನು ದೇವಾಲಯದೊಳಗೆ ಬಂಧಿಸಿ ಆಯಾ ಧರ್ಮದ ಪಂಥದ ಆವರಣದೊಳಗೆ ಬಂಧಿತರಾಗಿದ್ದೇವೆ. ನಾವು ದೇವರ ತಂಟೆಗೆ ಹೋಗದಿದ್ದರೆ ಅವನೂ ತಮ್ಮ ತಂಟೆಗೆ ಬರಲಾರ ಎಂಬ ಸತ್ಯವನ್ನು ಲಕ್ಷ್ಮೀ ಟೀಚರ ಒಡನಾಟದಲ್ಲಿ ನಾನು ಅರಿತೆ. ನನ್ನ ದೇಹ, ಮನಸ್ಸು, ಬುದ್ಧಿ ಎಲ್ಲವೂ ಆರೋಗ್ಯದಲ್ಲಿರುವಂತೆ ಕಾಪಾಡಿದ ಅವರ ಪ್ರೀತಿಗೆ ಶಿರಬಾಗುತ್ತೇನೆ.

(ಮುಂದುವರಿಯಲಿದೆ)