(ಚಕ್ರೇಶ್ವರ ಪರೀಕ್ಷಿತ ೯)

ಪೀಠಿಕೆ: ಬಡವರ ವಾಹನವಾಗಿ ಹುಟ್ಟಿ, ಬಹುಮುಖೀ ಬೆಳವಣಿಗೆಗಳನ್ನು ಕಂಡ ಯಂತ್ರ ಸೈಕಲ್. ಮುಂದುವರಿದಂತೆ ಶ್ರಮರಹಿತ ಸುಖದ ಬೆಂಬತ್ತಿ ಅದೇ ಸೈಕಲ್ ತತ್ತ್ವಕ್ಕೆ ಸ್ವಯಂಚಲೀ ಯಂತ್ರ ಸೇರಿಸುತ್ತ ನಾಗರಿಕತೆ ಬಹು ದೂರವೇ ಬಂದಿದೆ. ಆದರೆ ಜತೆಗೇ ಸ್ವಯಂಚಲೀ ಯಂತ್ರದ ಇಂಧನ, ಹಲವು ಮುಖಗಳ ಪರಿಸರ ದೂಷಣೆ ಏರುತ್ತ ಹೋಯ್ತು. ಎಲ್ಲಕ್ಕೂ ಮುಖ್ಯವಾಗಿ `ಶ್ರಮರಹಿತ’ ಎನ್ನುವುದು `ವ್ಯಾಯಾಮರಹಿತ’ ಎಂಬ ಕಾಯಿಲೆ ಮೂಲ ಸ್ಥಿತಿಗೆ ಕಾರಣವಾದಾಗ ಮತ್ತೆ ಸರಳ ಸೈಕಲ್ಲಿಗೇ ಮರಳುವಂತಾಯ್ತು. ಚಕ್ರದ ಸುತ್ತು ಪೂರ್ಣಗೊಂಡಂತೆ ಇಂದು ಸೈಕಲ್ ಎಂದರೆ ಸರಳತೆ, ಪರಿಸರ, ಆರೋಗ್ಯಗಳ ಅಭಿಯಾನ. ನಾನು ಅನುಕೂಲವಿದ್ದಂತೆ ಹೆಚ್ಚುಕಡಿಮೆ ನಿತ್ಯ ಮತ್ತು ಅಂಥ ವಿಶೇಷವೇನೂ ಇಲ್ಲದಂತೆ ಪರಿಚಿತ ವಲಯಗಳಲ್ಲೇ ಮಾಡುವ ಸೈಕಲ್ ಓಡಾಟಗಳನ್ನು ಸೈಕಲ್ ಸರ್ಕೀಟೆಂದು ಹೆಸರಿಸಿ ಫೇಸ್ ಬುಕ್ಕಿನಲ್ಲಿ ಅಂದಂದೇ ದಾಖಲಿಸುತ್ತಾ ಬಂದಿದ್ದೇನೆ. ನನ್ನ ಜಾಲತಾಣದಲ್ಲಿ ಬರುವ ಸೈಕಲ್ ಸಾಹಸಗಳು (ಬಿಳಿಗಿರಿ ರಂಗನಬೆಟ್ಟ, ನೀಲಗಿರಿ, ಕುದುರೆಮುಖ, ಬಿಸಿಲೆ ಘಾಟಿ, ಬೆಂಗಳೂರು ಯಾನವೇ ಮೊದಲಾಗಿ ೧೪ ವಿಭಿನ್ನ ಕಂತುಗಳಿವೆ) ಹೆಚ್ಚಾಗಿ ಪ್ರವಾಸ ಕಥನದ ಶೈಲಿಯವಾದರೆ, ಸರ್ಕೀಟಿನ ಟಿಪ್ಪಣಿಗಳು ಹೆಚ್ಚು ಪ್ರಾದೇಶಿಕ, ಸಾಮಯಿಕ ಹಾಗೂ ಚಿಕಿತ್ಸಕವಾಗಿರುವಂತೆ ನೋಡಿಕೊಂಡಿದ್ದೇನೆ. ಇವು ಪತ್ರಿಕೆಗಳಲ್ಲಿ ವಾಚಕರವಾಣಿ, ದೂರುಗಂಟೆಯಂತೆ ಮೂಡುವ ಅನುಭವಗಳು.

ಅವುಗಳ ಸಾಮಯಿಕತೆಯನ್ನು ಸಾರ್ವಕಾಲಿಕತೆಗೆ ಪರಿಷ್ಕರಿಸಿ, ಪ್ರಾದೇಶಿಕವನ್ನು ಸಾರ್ವದೇಶಿಕಕ್ಕೆ ವಿಸ್ತರಿಸಿ ನಾನೀಗಾಗಲೇ ಎಂಟಕ್ಕೂ ಮಿಕ್ಕ ಸಂಕಲನಗಳನ್ನು ಇಲ್ಲೇ ಕೊಟ್ಟಿದ್ದೇನೆ. ಈಗ ಅದನ್ನು ಮುಂದುವರಿಸುತ್ತ, ಟಿಪ್ಪಣಿಗಳಲ್ಲಿ ಸ್ಪಷ್ಟ ಸಾರ್ವಜನಿಕ, ಸೇವಾತ್ಮಕ ಚಟುವಟಿಕೆಗಳನ್ನು ಬೆಂಬಲಿಸಿಯೇ ನಡೆಸಿದ ಕೆಲವು ಸರ್ಕೀಟುಗಳನ್ನು, ಅಂದರೆ `ಅಭಿಯಾನ’ಗಳನ್ನು (ರ್‍ಯಾಲೀ) ಪ್ರತ್ಯೇಕಿಸಿ ಪ್ರಸ್ತುತಪಡಿಸುತ್ತಿದ್ದೇನೆ. ಅಂದರೆ ಇಲ್ಲಿನ ಒಂದು ಲೇಖನದ ಕಟ್ಟಿಗೊಳಗಾದ ಪ್ರತಿ ಖಂಡವೂ ಸ್ವತಂತ್ರ ತುಣುಕುಗಳು. ಹಾಗಾಗಿ ನಿಮ್ಮ ಗ್ರಹಿಕೆ, ಪ್ರತಿಕ್ರಿಯೆ ಆ ನಿಟ್ಟಿನಲ್ಲೇ ಬಂದರೆ ಚಂದ.

೧. ನೇತ್ರಾವತಿಗೆ ಹೊಸ ಅಣೆಕಟ್ಟು: (೨೦-೧-೨೦೧೫) “ಮಂಗಳೂರಿನ ಜಲಸಮೃದ್ಧಿಯನ್ನು ನಾಲ್ಕೇ ತಿಂಗಳಲ್ಲಿ ಸಾಧಿಸುತ್ತೇವೆ” ಇಂದಿನ ಪತ್ರಿಕೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ – ಜಿ.ಸಿ. ಚಂದ್ರಶೇಖರ್ ಹೇಳಿಕೆ. ತಪಾಸಣೆಗೆ ನನ್ನ ಸೈಕಲ್ ಸರ್ಕೀಟನ್ನು ಬೆಳಗ್ಗೆಯೇ ತುಂಬೆಯತ್ತ ಹೊರಡಿಸಿದೆ.

ಅತ್ತ ಜೋಡುಮಾರ್ಗದಿಂದ ಸುಂದರರಾಯರೂ ಸೈಕಲ್ಲೇರಿ ಬಂದು ರಾಮಲ್ ಕಟ್ಟೆಯ ಬಳಿ ಸಿಕ್ಕರು. ಮೊದಲು ಹೆದ್ದಾರಿಯ ಉತ್ತರ ಮಗ್ಗುಲಿನಲ್ಲಿರುವ ಪುಟ್ಟ ಗುಡ್ಡೆಯನ್ನೇರಿದೆವು. ಹಾಳುಬಿದ್ದ ಡಾಮರುದಾರಿ, ತೀವ್ರ ಏರು (ಗೇರ್ ಒಂದು ಗುಣಿಸು ಒಂದು) ನಮಗೊಳ್ಳೆಯ ಪರೀಕ್ಷೆ. ನೆತ್ತಿಯಲ್ಲಿ ನೆಲದ ಮೇಲೇ ಕುಳಿತಿದ್ದ ಭಾರೀ ತೊಟ್ಟಿಗೆ ಬ್ರಿಟಿಷ್ ಯುಗದ ಜಲಕವಾಟ ನೋಡಿ ಆಶ್ಚರ್ಯವಾಯ್ತು.

ಆದರೆ ನಿರ್ವಹಣೆ `ನಮ್ಮದೇ’ ಎನ್ನಲು ಅಲ್ಲಿ ಕಾಣುತ್ತಿದ್ದ ನೀರಸೋರಿಕೆ ಸಾಕ್ಷಿ ಹೇಳಿತು. ತುಸು ಆಚೆಗಿದ್ದ ಇಲಾಖಾ ಬಂಗ್ಲೆ, ಮೆಟ್ಟಿಲ ಸಾಲು, ಬೀದಿದೀಪ, ಒಟ್ಟಾರೆ ವಠಾರವೂ ನಿರ್ವಹಣಾ ಬೇಜವಾಬ್ದಾರಿಯನ್ನೇ ಅನುಮೋದಿಸಿದುವು.

ಅಲ್ಲೇ ಪಕ್ಕದ ಇನ್ನೊಂದು ದಿಣ್ಣೆಯ ಮೇಲಿದ್ದ ಜುಮಾದಿ ಸ್ಥಾನ ನಮ್ಮನ್ನು ಆಕರ್ಷಿಸಿತು. ಅಲ್ಲಿನ ವಿಹಂಗಮ ನೋಟದಲ್ಲಿ ನೇತ್ರಾವತಿ ಕಣಿವೆಯನ್ನು ಕಣ್ತುಂಬಿಕೊಂಡೆವು. ಪುಟ್ಟ ಗುಡಿಯ ಸುತ್ತ ನಡೆಸಿದ್ದ ಭಾರೀ ಮಣ್ಣಿನ ಕೆಲಸ, ಬರಲಿರುವ ವೈಭವದ ಬಗ್ಗೆ ನಮ್ಮನ್ನು ನಿಜಕ್ಕೂ ಕಳವಳಕ್ಕೀಡುಮಾಡಿತು.

ಹಾಗೇ ಆ ಗುಡಿಗೆ, ಹಿಂದೆಲ್ಲ ಅನೌಪಚಾರಿಕವಾಗಿ ಅನ್ಯರ ಸ್ಥಳಗಳ ಮೂಲಕ ಜಾಡು ಬಳಕೆಯಲ್ಲಿದ್ದಿರಬಹುದು. ಬಹುಶಃ ಅದು ಹಕ್ಕಾಗುವ ಹೆದರಿಕೆಗೆ ಅಲ್ಲಿ ಹೊಸದಾಗಿ ಪಾಗಾರ ಕಟ್ಟಿಸಿದಂತಿತ್ತು. ಇದು ಪ್ರತ್ಯೇಕ ಸಾಮಾಜಿಕ ಅಶಾಂತಿಯ ಕತೆಯನ್ನು ಬಿತ್ತರಿಸುವುದಿರಬಹುದು. ಆದರೆ ಅದು ನಮ್ಮ ತುತ್ತಲ್ಲವೆಂದುಕೊಂಡು, ನೇರ ನೇತ್ರಾವತಿ ದಂಡೆಗೆ ಹೋದೆವು. ಸೈಕಲ್ಲನ್ನು ಮರವೊಂದಕ್ಕೆ ಒರಗಿಸಿಟ್ಟು ನದೀಪಾತ್ರೆಗಿಳಿದೆವು.

ಹಳೆ ಅಣೆಕಟ್ಟೆಯಲ್ಲಿ ನೀರು ಮೇರೆವರಿದಿತ್ತು. ಅದರಿಂದ ತುಸು ಕೆಳಗೆ ಎರಡು ದಡ ಸೇರಿಸಿ ತತ್ಕಾಲೀನ ಕೆಮ್ಮಣ್ಣು ದಾರಿ ಮಾಡಿದ್ದರು. ನಡೆಯುತ್ತಾ ಸುಂದರರಾಯರ ತಲೆಬಿಸಿಯೂ ಮೇರೆವರಿಯಿತು, “ಅಲ್ಲ ಮಾರಾಯ್ರೇ ಇದರ ಬಹುತೇಕ ಮಣ್ಣು ಪ್ರತಿ ಮಳೆಗಾಲದಲ್ಲೂ ಕೊಚ್ಚಿ ಹೋಗುತ್ತದೆ. (ಹೆಚ್ಚಿನೆಲ್ಲಾ ಕೃಷಿಕರಾದರೋ ಪ್ರತಿ ವರ್ಷವೂ ಮಳೆಗಾಲಕ್ಕೆ ಮುನ್ನ ನೀರಾವರಿಗೆ ಅವರೇ ಕಟ್ಟಿಕೊಂಡ ಕಟ್ಟವನ್ನು ಬಿಚ್ಚಿ, ಕಲ್ಲು ಮಣ್ಣನ್ನು ಮುಂದಿನ ಋತುವಿಗೆ ಕಾದಿರಿಸಿಕೊಳ್ಳುತ್ತಾರೆ) ಅದು ಕೆಳಪಾತ್ರೆಗೆ ಅನಾವಶ್ಯಕವಾಗಿ ತುಂಬುವ ಹೂಳು, ಮಳೆಗಾಲ ಕಳೆದದ್ದೇ ಮತ್ತೆ ಇನ್ನೆಲ್ಲೋ ಹೊಸದೇ ಗುಡ್ಡೆ ತಿಂದು ಪುನಾರಚಿಸುವ ದಾರಿಯ ಬಗ್ಗೆ ಕನಿಷ್ಠ ಪರಿಸರ ಇಲಾಖೆ, ನದಿಪಾತ್ರೆ ನಿರ್ವಹಣಾ ಪ್ರಾಧಿಕಾರಗಳಿಗಾದರೂ ಜಾಗೃತಿ ಬೇಡವೇ?”

ಈಚೆ ದಂಡೆಯಿಂದ ಹೊರಟ ಕುಂದಗಳ ಸಾಲೇನೋ ಪೂರ್ಣ ಎತ್ತರ ಸಾಧಿಸಿದಂತೆ ಕಾಣುತ್ತವೆ. ಆಚೆ ದಂಡೆಯವು ಬಲು ನಿಧಾನದಲ್ಲೇ ಇವೆ. ಇನ್ನು ಇವೆರಡರ ನಡುವೆ ಏಳಲೇಬೇಕಾದ ಇನ್ನಷ್ಟು ಕುಂದಗಳು ಅಡಿಪಾಯವನ್ನೇ ಕಂಡಂತಿಲ್ಲ! ಇಷ್ಟೆಲ್ಲಾ ವರ್ಷಗಳಲ್ಲಿ ಸಾಧ್ಯವಾಗದ ಕೆಲಸ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ಮಾತಾಡುವುದು ಜವಾಬ್ದಾರಿಯುತ ಅಧಿಕಾರಿ ನಡೆಸುವ ಸಾರ್ವಜನಿಕ ವಂಚನೆಯೇ ಸರಿ.

ಮಣ್ಣದಾರಿಯಡಿಯಲ್ಲಿ ಕೂರಿಸಿದ ಎರಡು ಭಾರೀ ಸಿಮೆಂಟ್ ಕೊಳವೆ ಒಂದು ಮಿತಿಯಲ್ಲಿ ನೀರನ್ನು ಕೆಳಪಾತ್ರೆಗೆ ಬಿಡುತ್ತಿತ್ತು. ಆಯಕಟ್ಟಿನ ಜಾಗದಲ್ಲಿ ಮತ್ತೂ ಹೆಚ್ಚಿನ ನೀರು ಮಣ್ಣದಂಡೆಯನ್ನು ಕೊರೆಯದೆ, ಮುಂದುವರಿಯಲು ಸುಮಾರು ನೂರು ಮೀಟರ್ ಉದ್ದಕ್ಕೆ ದಾರಿಯಷ್ಟೇ ಅಗಲಕ್ಕೆ ಪಕ್ಕಾ ಕಾಂಕ್ರೀಟನ್ನೇ (ತತ್ಕಾಲೀನ) ಸುರಿದಿದ್ದರು. ವರ್ಷಂಪ್ರತಿ ತತ್ಕಾಲೀನ ಮಣ್ಣ ದಾರಿಯನ್ನೇ ಖಾಲೀ ಮಾಡಿಕೊಡದ ಬೇಜವಾಬ್ದಾರಿಗಳು ಅಣೆಕಟ್ಟೆ ಪೂರ್ಣಗೊಂಡ ಕಾಲಕ್ಕೆ ಈ ಕಾಂಕ್ರೀಟ್ ಗಡ್ಡೆಯನ್ನು ಏನು ಮಾಡಿಯಾರೆಂದು ನಿಮ್ಮ ಊಹೆಗೇ ಬಿಡುತ್ತೇನೆ. ವಾಹನಗಳಂತೆ ನಾವೂ ಅಲ್ಲಿ ಮೊಣಕಾಲಾಳದ ನೀರಿನಲ್ಲಿ ದಾಟಿದೆವು. ಎದುರು ದಂಡೆಯಲ್ಲಿ ನೇತ್ರಾವತಿ ಕೃಪಾಪೋಷಿತ (ಖಾಸಗಿ) ಸಮೃದ್ಧ ಅಡಿಕೆ, ತೆಂಗಿನ ತೋಟವಿತ್ತು. ದಂಡೆಯ ನೆಲದೆತ್ತರವನ್ನೂ ಮೀರುವ ಹೊಸ ಅಣೆಕಟ್ಟೆಗೆ (ಹಳೆಯದರ ಮೂರು ಪಟ್ಟು ಎತ್ತರ ಕಾಣುತ್ತದೆ) ನೀರು ತುಂಬಿದರೆ ಆ ತೋಟದಂತೇ ಬಹುದೂರ ಮತ್ತು ವಿಸ್ತಾರಕ್ಕೆ ಮುಳುಗಡೆಯಾಗುವ ಕೃಷಿ, ಜನವಸತಿ ಇವುಗಳ ಲೆಕ್ಕವೂ ಎಲ್ಲರಿಗೆ ತೃಪ್ತಿಕರವಾಗಿ ಜೂನಿನೊಳಗೇ ಮುಗಿಯುವುದುಂಟೇ?

ಹೀಗೆ ಕೇಳುವ ದಿಟ್ಟತನ, ಮತ್ತದನ್ನು ಛಲ ಬಿಡದೆ ಬೆಂಬತ್ತುವ ಧೋರಣೆ ಯಾವ ಸಮೂಹ ಮಾಧ್ಯಮದಲ್ಲೂ ಪತ್ರಕರ್ತನಲ್ಲೂ ನಾನು ಕಂಡಿಲ್ಲ. ಅಷ್ಟೇ ಏಕೆ, ನೇತ್ರಾವತಿ ತಿರುವಿನಿಂದ ಹಿಡಿದು ಹಿಂದಿನೆಲ್ಲಾ ನದಿ `ಅಭಿವೃದ್ಧಿ ಕಾರ್ಯ’ಗಳ ಕಾಲದಲ್ಲಿ ಯಾವುದೇ ಸಮೂಹ ಮಾಧ್ಯಮ (ಮುದ್ರಣ ಮತ್ತು ವಿದ್ಯುನ್ಮಾನ) ವಸ್ತುನಿಷ್ಠವಾಗಿ ಪ್ರಶ್ನಿಸಿದ್ದು ಕಡಿಮೆ. ಅವು ಹೊರಗಿನವರ ವಿಶೇಷ ಲೇಖನಗಳನ್ನು, ಅಭಿಪ್ರಾಯಗಳನ್ನು ಪ್ರಕಟಿಸಿದರೂ “ಲೇಖಕರ ಅಭಿಪ್ರಾಯಗಳಿಗೆ ನಾವು ಜವಾಬ್ದಾರರಲ್ಲ” ಎಂಬರ್ಥದ ನಾಚಿಗೆಗೇಡು ಷರಾ ಸೇರಿಯೇ ಇರುತ್ತದೆ. ಸವಕಲು ಜಾಡಿನಲ್ಲಿ ನಡೆದು, ಹಳೆ ಅಣೆಕಟ್ಟೆಗಿಳಿದು, ಅದರ ಮೇಲೆ ನಡೆದು ಸೈಕಲ್ಲಿಗೂ ಕ್ರಮವಾಗಿ ನಂನಮ್ಮನೆಗೂ ಮರಳಿದೆವು.

೨. ಮಾಯದಂಥಾ ನೆರೆಬಂತಣ್ಣಾ, ತುಂಬೇಯ ಕಟ್ಟೆಗೇ…: (೬-೬-೨೦೧೫) ಎರಡು ವಾರದ ಹಿಂದೆ ತುಂಬೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಅಣೆಕಟ್ಟೆಯ ಕೆಲಸಕ್ಕೆಂದು ಮಣ್ಣು ತುಂಬಿ ಮಾಡಿದ್ದ ಕಚ್ಚಾದಾರಿ, ಟನ್ನುಗಟ್ಟಲೆ ಕಬ್ಬಿಣವೇ ಮೊದಲಾದ ನಿರ್ಮಾಣ ಸಾಮಗ್ರಿಗಳು ಕೊಚ್ಚಿ ಹೋದವಂತೆ. ಆಗ ಸಂಬಂಧಿಸಿದ ಅಧಿಕಾರಿಗಳು ಮೇಲಿನ ಪದ್ಯ ಹಾಡಿ ಅಲವತ್ತುಕೊಂಡರಂತೆ, “ಈ ಮಳೆಗಾಲದ ಕೊನೆಯೊಳಗೆ ಅಣೆಕಟ್ಟು ಮುಗಿಸಿಕೊಡುತ್ತಿದ್ದೆವೂಊಊ. ಹೀಗಾಯ್ತಲ್ಲಾಆಆ.” ಆದರೆ ಇಂಥವೇ ನೆಪ ನೂರು ಹೂಡಿ, ಈಗಾಗಲೇ ವರ್ಷಾನುಗಟ್ಟಳೆ ತೂಕಡಿಸಿದವರಿಗೆ ಈಗ ಹಾಸಿಗೆ ಹಾಕಿಕೊಟ್ಟಂತಾಯ್ತೆಂದು ನಾನು ಮನಃ ಕಷಾಯ ಮಾಡಿಕೊಂಡೇ ಇಂದು ಸೈಕಲ್ ತುಳಿದೆ. ನಂತೂರು, ಪಡೀಲು, ಫರಂಗಿಪೇಟೆಗಾಗಿ ರಾಮಲ್ ಕಟ್ಟೆಯವರೆಗೆ ಹೆದ್ದಾರಿ. ಅಲ್ಲಿ ಸುಂಕದ ಕಟ್ಟೆಯ ಎತ್ತರಕ್ಕೇರದ ಎಡದ ಹಳೇ ದಾರಿ ಹಿಡಿದು, ಹೆದ್ದಾರಿಯ ಅಡಿಯಿಂದ ನುಸುಳುವವರೆಗೆ ಒಂದೇ ಉಸಿರು ಎನ್ನುತ್ತಾರಲ್ಲ ಹಾಗೆ! ಆದರೆ ನೇರ ಅಣೆಕಟ್ಟಿನ ನಿವೇಶನಕ್ಕೊಯ್ಯುವ ಕೊನೆಯ ಸುಮಾರು ಐನೂರು ಮೀಟರ್ ಮರಳು ಗೊಸರಿನ ಅಪೂರ್ವ ಮಿಶ್ರಣ. ಸವಾರಿ ಹೋದರೆ ಪಲ್ಟಿಸುವ ಹೆದರಿಕೆ, ಇಳಿದು ನೂಕೋಣವೆಂದರೆ ಮರ್ಯಾದೆ ಪ್ರಶ್ನೆ – “ಹೊತ್ತದ್ದು ಮೀಸೆಯಲ್ಲವೇ?”

ಮೊದಲು ಕಂಡದ್ದು ಅಸಂಗತವೇ – ಹೊಸ ಅಣೆಕಟ್ಟೆಯಿಂದ ಸುಮಾರು ನೂರಿನ್ನೂರು ಮೀಟರ್ ಕೆಳ ಪಾತ್ರೆಯಲ್ಲಿ, ನದಿ ಮಧ್ಯದಲ್ಲೇ ನಿಂತೊಂದು ದೋಣಿ, ಮೋಟಾರ್ ಮತ್ತು ಕೊಳವೆ ಸಾಲು ಹಾಕಿ, ಬಹುಶಃ ಡ್ರೆಜ್ಜಿಂಗ್ ತಂತ್ರದಲ್ಲಿ ದಂಡೆಗೆ ಮರಳು ಹಾಯಿಸಿದ್ದಂತ್ತಿತ್ತು. ಅಲ್ಲಿ ಬುಲ್ಡೋಜರ್ ಮರಳನ್ನು ಒಟ್ಟು ಮಾಡುವ ಮತ್ತು ವಿಲೇವಾರಿ ಮಾಡುವ ಕೆಲಸ ನಡೆಸಿದಂತೆಯೂ ಇತ್ತು. ಇದು ಸರಿಯೇ? ತಪ್ಪೇ? ( – ನನಗ್ಗೊತ್ತಿಲ್ಲ.)

ಅಣೆಕಟ್ಟಿನ ಸ್ಥಳದಲ್ಲಿ ಮತ್ತೆ ಹೊಸದಾಗಿ ಮಣ್ಣು ತುಂಬಿ ಕಚ್ಚಾ ದಾರಿ ಅರ್ಧ ನದಿಯವರೆಗೂ ಹರಿದಿದೆ. ಆ ಕೊನೆಯಲ್ಲಿ ಮೂರು ಕುಂದಗಳ ಕೆಳ ಪಾತ್ರೆಯಲ್ಲಿ, ಅಣೆಕಟ್ಟು ತುಂಬಿದ ಕಾಲಕ್ಕೆ ಕವಾಟ ತೆರೆದಾಗ ಧುಮುಕುವ ನೀರಿನ ಹೊಡೆತ ತಡೆಯುವ ಇಳಿಜಾರಿನ ರಚನೆಯಾಗುತ್ತಿತ್ತು. ರೆಡಿಮಿಕ್ಸಿನ ಲಾರಿಗಳು ಸಾಲು ಹಿಡಿದು ಬಂದು ಹೂರಣ ಕಕ್ಕುತ್ತಿದ್ದುವು. ಕೆಲಸದ ಜಾಗ ನೀರು ಮುಕ್ತವಾಗಲು ಎರಡೆರಡು ಭಾರೀ ಪಂಪುಗಳು ಕಾರ್ಯನಿರತವಾಗಿದ್ದುವು.

ಬಹುಶಃ ಅಂಥದ್ದೇ ರಚನೆ ಇನ್ನೂ ಆಚೆಗೂ ನಡೆಸಲು ಜಾಗ ಹೊಂದಿಸಲು ಭಾರೀ ಬುಲ್ಡೋಜರ್ ಒಂದು ಕೆಲಸ ನಡೆಸಿತ್ತು. ಹಾಗೇ ಮೊನ್ನೆ ಪ್ರವಾಹದಿಂದ ಕೆಳ ಪಾತ್ರೆಯಲ್ಲಿ ರಾಶಿಬಿದ್ದ ಕಲ್ಲು, ಮರಳಿನ ಅವ್ಯವಸ್ಥೆಯನ್ನು ಇನ್ನೊಂದೇ ಬುಲ್ಡೋಜರ್ ನೇರ್ಪುಗೊಳಿಸುತ್ತಿದ್ದಂತಿತ್ತು. ಹಳೆ ಅಣೆಕಟ್ಟೆಯ ಎಲ್ಲಾ ಕಿಂಡಿ ಹಲಿಗೆಗಳನ್ನು ತೆರೆದಿಟ್ಟಿದ್ದರಿಂದ ತಿಳಿನೀರು (ಆಶ್ಚರ್ಯಕರವಾಗಿ ಇನ್ನೂ ಕೆಂಪು ನೀರು ಬಂದಿಲ್ಲ!) ಬಲು ರಭಸದಿಂದ ಹರಿದಿತ್ತು.

ಮೊನ್ನೆ ಜನವರಿಯಲ್ಲಿ ಸುಂದರರಾಯರೊಡನೆ ನಾನು ನೋಡಿದಾಗ ಬಾಕಿಯಿದ್ದ ಕುಂದಗಳೇನೋ ಮೇಲೆ ಬಂದಿವೆ. ಆದರೆ ಪರಸ್ಪರ ಸಂಪರ್ಕ ತೊಲೆಗಳ ಲೆಕ್ಕದಲ್ಲಿ ಮೂರರ ಕೆಲಸ ನಡೆದಿರುವುದನ್ನು ಬಿಟ್ಟರೂ ಪೂರ್ಣ ಎರಡರದ್ದು ತೊಡಗಿಯೇ ಇಲ್ಲ. ಅಲ್ಲದೆ ಈಗ ನಡೆದಿರುವ ಅಲೆ ಮಗುಚುವ ರಚನೆ ಎಲ್ಲ ಕುಂದಗಳ ಅರ್ಥಾತ್ ಕವಾಟಗಳ ಎದುರೂ ಆಗಬೇಕೆಂದಿದ್ದರೆ, ಮಳೆ ಹತ್ತು ದಿನವಲ್ಲ ತಿಂಗಳೆರಡು ಬರದಿದ್ದರೂ ಕೆಲಸ ಪೂರೈಸುವುದು ಸುಳ್ಳೇ ಸುಳ್ಳು. ಅತ್ತ ಕುಂದಾಪುರದ ಬಳಿ, ಐದಾರು ವರ್ಷದ ಲಕ್ಷ್ಯ ಇಟ್ಟು ತೊಡಗಿದ ವರಾಹಿ ನದಿಜೋಡಣೆ ಯೋಜನೆ ಸುಮಾರು ಮೂವತ್ತೈದು ವರ್ಷಗಳ ಮೇಲೆ – ಮೊನ್ನೆ ಮೊನ್ನೆ, ಉದ್ಘಾಟನೆಯ ಶಾಸ್ತ್ರ ಕಂಡಿತೆಂದರೆ (ಅದೂ ಪರ್ಯಾಪ್ತ ಎಂಬ ನಂಬಿಕೆ ಯಾರಿಗೂ ಇಲ್ಲ!) ತುಂಬೆ ಹೊಸ ಅಣೆಕಟ್ಟೆಗೆ ಇನ್ನೊಂದೆರಡು ವರ್ಷ ಧಾರಾಳ ವಿಳಂಬಾವಕಾಶ ಕೊಡಲೇ ಬೇಕು, ಪಾಪ!

ಆಕಾಶದಲ್ಲಿ ಮಳೆಯ ಬೆದರಿಕೆಗಳೇನಿಲ್ಲದಿದ್ದರೂ ಕತ್ತಲ ಸೂಚನೆಗಳು ಧಾರಾಳ ಇದ್ದುವು. ಹಿಂದಿರುಗುವ ದಾರಿಯಲ್ಲಿ ಪೆಡಲ್ ಎಷ್ಟು ಚುರುಕಾದರೂ ಮನೆ ಮುಟ್ಟುವಾಗ ಗಂಟೆ ಏಳೂವರೆ!

೩. ನೇತ್ರಾವತಿ ಉಳಿಸಿ: ಅಪಸ್ವರ ನಿರಂತರ: (೨೮-೭-೨೦೧೫) ಮುಸುಕಿನ ಗುಮ್ಮನಂತೆ ಮಳೆ ನಿನ್ನೆ ಸಂಜೆ ನನ್ನನ್ನು ಹೆದರಿಸಿದ್ದಕ್ಕೆ ಇಂದು ಬೆಳಿಗ್ಗೆಯೇ ಸೈಕಲ್ ತೆಗೆದೆ. ನಂತೂರು, ಪಡೀಲ್ ದಾರಿಯಾಗಿ ತುಂಬೆ ರಾಮಲ್ ಕಟ್ಟೆಯವರೆಗೆ ಶ್ರುತಿ ತಪ್ಪದೆ, ವೈವಿಧ್ಯಮಯ ಸಂಚಾರದಲ್ಲಿ ಆಲಾಪಿಸಿ, ತುಸು ವಿರಮಿಸಿದೆ. ಚುರುಗುಟ್ಟುವ ಬಿಸಿಲಿಗೆ ಮೋಡ ಬೆಳ್ಳಿಹಾಳೆಯಾಗಿ ಪ್ರತಿಫಲಿಸಿದ್ದಕ್ಕೋ ಮಳೆಗಾಲದ ನಡುವಣ ಬಿಸಿಲಾಗಿ ವಾತಾರಾವಣನಲ್ಲಿ ತೇವಾಂಶ ಹೆಚ್ಚಿದ್ದಕ್ಕೋ ಉರಿ ಸೆಕೆ. ಸೈಕಲ್ಲಿನ ನೀರಂಡೆ ಕಳಚಿ ಎರಡು ಮುಕ್ಕಳಿ ಬಾಯಿಗೆ ಹಾಕುತ್ತ, ಕಟ್ಟೆಯ ನೆರಳಿಗೆ ಹೋದೆ. ಅಲ್ಲಿದ್ದ ಸ್ವಯಂ ಸೇವಕ ತಮ್ಮ ಸಾರ್ವಜನಿಕ ನಲ್ಲಿಯಿಂದ ನೀರು ತುಂಬಿಸಿಕೊಳ್ಳುತ್ತೇನೋ ಎಂದು ತಿಳಿದು “ನೇತ್ರಾವತಿ ನೀರು ಒಳ್ಳೇದಿಲ್ಲ, ಕಲಂಕು” ಎಂದ. ನೇತ್ರಾವತಿ ಒಳ್ಳೇದಿರುವುದು ಹೇಗೆ ಎಂದು ಸಾಹಿತ್ಯ ಹೊಳೆದ ಕೂಡಲೇ ಸುಂದರರಾಯರಿಗೆ ಕರೆ ಮಾಡಿದೆ. ಅವರೋ ತಿಂಗಳೆರಡರ ಹಿಂದೆ ಕಾಲು ತುಸು ಜಖಂ ಆದದ್ದನ್ನು ಇನ್ನೂ ಮುದ್ದು ಮಾಡುತ್ತಲೇ ಇದ್ದರು. “ಹೋಗಲಿ, ಸ್ಕೂಟರಿನಲ್ಲಾದರೂ…” ನಾನು ಹೇಳಿದ್ದೇ ಸಾಕಾಯ್ತು. ಸ್ಕೂಟರ್ ಹಿಡಿದು ಹತ್ತೇ ಮಿನಿಟಿನಲ್ಲಿ ಜೋಡುಮಾರ್ಗದಿಂದ ಬಂದೇ ಬಿಟ್ಟರು.

ಹೆದ್ದಾರಿಯಡಿಯಲ್ಲಿ ನುಸುಳಿದರೆ ಆಚೆಗೆ ಸಿಗುವ ನೇತ್ರಾವತಿ ಪಾತ್ರೆ, ನಿಖರವಾಗಿ ಹೇಳುವುದಾದರೆ ಮಂಗಳೂರ ಕುಡಿನೀರ ಅಣೆಕಟ್ಟೆ ನಮ್ಮ ಪಲ್ಲವಿ. ಅದರ ಹೊಸ ಚರಣ ಅನಾವರಣಗೊಂಡಿತು. ಮಳೆಗಾಲದ ನಡುವಣ ಅನಿಶ್ಚಿತ ಬಿಸಿಲನ್ನು ನಂಬಿ ಕೆಲಸ ಏನೂ ನಡೆದಿರಲಿಲ್ಲ. ಮುಕ್ತವಿದ್ದ ಹಳೆಯ (ತಗ್ಗು) ಕಟ್ಟೆಯ ಅಡಿಯಲ್ಲಿ ಮಾಸಲು ಕೆನ್ನೀರು ಹರಿದಿತ್ತು. ವರ್ಷಾನುಗಟ್ಟಳೆಯಿಂದ ನಿರ್ಮಾಣದಲ್ಲೇ ಇರುವ ಹೊಸ ಕಟ್ಟೆಯ ಭಾರೀ ಕುಂದ ಸಾಲು ಮತ್ತು ಅವನ್ನು ಮೇಲೆ ಪರಸ್ಪರ ಸಂಪರ್ಕಿಸುವ ಎರಡು ತೊಲೆಗಳ ಸಾಲೂ ಒರಟೊರಟಾಗಿ ಪೂರ್ಣಗೊಂಡಂತಿತ್ತು. ನಾವು ಅದರ ಮೇಲೆ ಸುಮಾರು ಅರ್ಧದವರೆಗೆ ನಡೆದು ನೋಡಿ ಬಂದೆವು.

ಕಾಮಗಾರಿಯ ಅಂಗವಾಗಿ ಎರಡೂ ದಂಡೆಯನ್ನು ಸಂಪರ್ಕಿಸಿದ್ದ ಮಣ್ಣದಾರಿ ಮಾತ್ರ ಮತ್ತೆ ಪೂರ್ಣ ತೊಳೆದು ಹೋಗಿತ್ತು. ಕೆಲವು ಸಮಯದ ಹಿಂದೆ, ಪಾಣೆಮಂಗಳೂರು ಸೇತುವೆ ದುರಸ್ತಿ ಕಾಲದಲ್ಲೇ ರಾಯರು ಪತ್ರ-ಪ್ರಶ್ನೆ ಕಳಿಸಿದ್ದರು. “ಪ್ರತಿ ಸಲವೂ ಗುಡ್ಡೆಗೆ ಗುಡ್ಡೆಯನ್ನೇ ಕಿತ್ತು ಹೊಳೆ ಪಾತ್ರೆಯಲ್ಲಿ ತತ್ಕಾಲೀನ ದಾರಿಗಾಗಿ ಮಣ್ಣು ತುಂಬುತ್ತೀರಿ. ಮಳೆಗೂ ಮೊದಲು ಅದನ್ನು ಹಿಂದೆಗೆಯದೆ ಪ್ರವಾಹದಲ್ಲಿ ತೊಳೆದು ಕಳೆಯುವುದು ಎಷ್ಟು ಸರಿ?” ಇದಕ್ಕೆ ಹಲವು ನೆನಪಿನೋಲೆಗಳನ್ನು ಅವರು ಕಳಿಸಿದರೂ ಇದುವರೆಗೆ ಉತ್ತರ ಬಂದೇ ಇಲ್ಲದಿರುವುದು ನೆನಪಿಗೆ ಬಂತು. ಮಳೆಗಾಲದ ಬರೋಣವನ್ನು ಎಚ್ಚರಿಸುವ ನೆರೆಯಲ್ಲಿ ಕೊಚ್ಚಿ ಹೋಗಿದ್ದ ಕಬ್ಬಿಣ ಸರಳಿನ ಭಾರೀ ಕಂತೆ ಅಕರಾಳವಿಕರಾಳಕ್ಕೆ ತಿರುಚಿಕೊಂಡ ರಾಶಿಯಾಗಿ ಸಿಕ್ಕಿದ್ದನ್ನು ಎಳೆದು ದಂಡೆಯಲ್ಲಿ ರಾಶಿ ಹಾಕಿದ್ದರು. ಬಾಕಿಯಿರುವ ಕೆಲಸಗಳ ರಾಶಿ ಅಂದಾಜಿಸಿದರೆ ಅದೇನೂ ದೊಡ್ಡದಲ್ಲ! ಅಣೆಕಟ್ಟಿನ ಕಾಮಗಾರಿ ಚಿರಾಯುವಾಗುವ ಅಪಾಯವೇ ಹೆಚ್ಚು.

ಯೋಜನೆಯ ಭೂಮಿಪೂಜೆ ನಡೆದ ಕಾಲದಲ್ಲಿ ಹಾಕಿದ ಅಲಂಕಾರಿಕ ಕಲ್ಲಿನಲ್ಲಿ, ಅಕ್ಷರಗಳನ್ನು ಕೊರೆದಿಲ್ಲ, ಅಂಟಿಸಿದ್ದಾರೆ! ಇಂದು ಅದನ್ನು ಹುಲ್ಲು ಮುಚ್ಚಿದೆ, ಕಸ ಹೂಳುತ್ತಿದೆ, ಬರೆಹ ಅರ್ಥಪೂರ್ಣವಾಗಿ ಮುಕ್ಕಾಗಿದೆ. ಸಂದ ಮತ್ತು ಬರಲಿರುವ ಆಶ್ವಾಸನೆಗಳ ಸರದಾರರೂ ಹೀಗೇ – ಪಕ್ಷ ರಾಜಕೀಯದ ಆವರಣ, ಮತ-ಪೆಟ್ಟಿಗೆಗಳಿಗಾಗಿ ಸುಳ್ಳಿನ ಗುಡ್ಡೆ ಹಾಕಿ, ಸಾರ್ವಜನಿಕ ಮನದಲ್ಲೇನೂ ಕೊರೆದು ನಿಲ್ಲದಂತಾಗಿಸುತ್ತಾರೆ. ನೇತ್ರಾವತಿಯಲ್ಲಿ ಹರಿದ ನೀರ ಲೆಕ್ಕ ಇಟ್ಟವರುಂಟೇ? (ನೇತ್ರಾವತಿ ತಿರುಗಿಸುವವರ ಸಂಕಿಗಳನ್ನು ನಂಬಬೇಡಿ – ಶಾಸಕರೇ ವಿಧಿಸಿದ ಎಚ್ಚರಿಕೆ!) ಅಣೆಕಟ್ಟು ಇದೇ ಬೇಸಗೆಗೆ ಪೂರ್ಣಗೊಳ್ಳುವುದು ಸುಳ್ಳೇ ಸುಳ್ಳು ಎಂಬ ನಿರಾಶೆಯೊಡನೆ ರಾಯರು ಅತ್ತ, ನಾನು ಇತ್ತ. ಇಂದಿನ ಸೈಕಲ್ ಸರ್ಕೀಟ್ ಯೋಜನೆ ಎರಡು ಗಂಟೆಯದಿತ್ತು. ಮನೆ ಸೇರಿದಾಗ “ಅಣೆಕಟ್ಟಿನ ಉಪದ್ವ್ಯಾಪದಲ್ಲಿ ಮೂರು ಗಂಟೆಯೊಳಗಾದರೂ ಮುಗಿಸಿದಿರಲ್ಲ” ದೇವಕಿ ಮಂಗಳ ಹಾಡಿದಳು!

೪. ತುಂಬೆಯ ಹೊಸ ಅಣೆ-CUT : (೧೮-೧೨-೨೦೧೫) ನೇತ್ರಾವತಿ ಬೆಂಗಳೂರಿಗೆ ಹರಿಯುವ ಮಾತಿರಲಿ, ಮಂಗಳೂರಿಗಾದರೂ ಸಕಾಲಕ್ಕೆ ಒದಗಿಯಾಳೋ ಎಂದು ನೋಡುವ ಉದ್ದೇಶಕ್ಕೇ ಇಂದು ಸಂಜೆ ಸೈಕಲ್ ಏರಿದ್ದೆ. ನೇತ್ರಾವತಿ ಎಂದೊಡನೆ ಮೈ ನಿಮಿರುವ ಸುಂದರ ರಾಯರಿಗೂ ತಿಳಿಸಿದ್ದೆ. ನಾನು ಬಿಟ್ಟ ಬಾಣದಂತೆ ತುಂಬೆಯಾಚಿನ ಹೊಸ ಸುಂಕದ ಕಟ್ಟೆ ಸೇರುವಾಗ ರಾಯರು ಕಾದಿದ್ದರು. ಇಬ್ಬರೂ ಅಣೆಕಟ್ಟೆಯ ದಾರಿ ಹಿಡಿದೆವು.

ಬಿರು ಮಳೆಗಾಲದಲ್ಲಿ ಕೆಲಸದ ನೆಪ ಹೂಡಿ ಲಾರಿಗಟ್ಟಳೆ ಮಣ್ಣು, ಟನ್ನುಗಟ್ಟಳೆ ಕಬ್ಬಿಣ, ಸಿಮೆಂಟು ಮುಂತಾದವನ್ನು ಬೊಳ್ಳದಲ್ಲಿ (ಪ್ರವಾಹದಲ್ಲಿ) ಮುಳುಗಿಸಿಬಿಟ್ಟ ಮಂದಿ, ಈಗ ವಾತಾವರಣ ಹಸನಾಗಿರುವಾಗ ಪೂರ್ಣ ನಾಪತ್ತೆ! ಪ್ರಾಶಸ್ತ್ಯಗಳ ಪಲ್ಲಟದಲ್ಲಿ, ದಂಡೆಯಲ್ಲಿ ಬರಲಿರುವ ಹೊಸ ಕಟ್ಟೆಗೊಂದು ಹೊಸ ವೀಕ್ಷಣಾ ಕೊಠಡಿ ತುರ್ತಾಗಿ ನಿಲ್ಲುತ್ತಿರುವುದು ಕಾಣಿಸಿತು. ಹಳೆ ಕಟ್ಟೆಯ ಕಿಂಡಿಗಳಿಗಿನ್ನೂ ಹಲಗೆಗಳನ್ನು ಇಳಿಸಿಲ್ಲ. ಹೊಸ ಕಟ್ಟೆಯ ಅಪೂರ್ಣ ಕಾಮಗಾರಿ ಹಾಳುಸುರಿಯುತ್ತಿದೆ, ಸರಳುಗಳೆಲ್ಲ ಮಣ್ಣು ತಿನ್ನುತ್ತಿವೆ. ಕೆಲಸ `ಪ್ರಗತಿಯಲ್ಲಿದೆ’ ಎಂದು ಸುಳ್ಳು ಹೇಳುವ ಬೋರ್ಡನ್ನು ಪ್ರಕೃತಿಯೇ ನಾಚಿ, ತನ್ನ ಬಳ್ಳಿಗೈಗಳಿಂದ ಮುಚ್ಚಲು ಪ್ರಯತ್ನ ನಡೆಸಿದೆ.

ನೇತ್ರಾವತಿಯಲ್ಲಿ ನೀರು ಹರಿಯುತ್ತಲೇ ಇದೆ! ಅಣೆಕಟ್ಟಿನ ಕೆಲಸ ಹೀಗೆ ನಿಲ್ಲುತ್ತ, ಕುಂಟುತ್ತ ಮುಂದುವರಿದು ಎಂದಾದರೂ ಮುಗಿಯುವ ಹೊತ್ತಿಗೆ, ಕಳಪೆ ಕಾಮಗಾರಿಯಿಂದ ನರಳುತ್ತ ಮತ್ತೆ ರಿಪೇರಿ ಸರಣಿಗೆ ಸಮಯ ಕೇಳುವ ಸ್ಥಿತಿ ಬಂದರೆ ಆಶ್ಚರ್ಯವಿಲ್ಲ.

ಅಣೆಕಟ್ಟಿನ ಸ್ಥಳದಿಂದ ತುಸು ಕೆಳದಂಡೆಯಲ್ಲಿ ಬಂಟ್ವಾಳದ ಬಂಟರ ಭವನದ ಭಾರೀ ಕಟ್ಟಡ ಮೇಲೇಳುತ್ತಿರುವುದು ಕಾಣುತ್ತದೆ. ಹೀಗೇ ಇನ್ನೇನೋ ಕಾಮಗಾರಿ ನದಿಯ ಮೇಲ್ದಂಡೆಯಲ್ಲೂ ನಡೆದಿರುವಂತಿದೆ. ಸಹಜವಾಗಿ ಆ ವಲಯಗಳಲ್ಲಿ ಸಾಕಷ್ಟು ಕೆಮ್ಮಣ್ಣು ನದಿ ಪಾತ್ರೆಗೆ ಜಾರಿರುವುದನ್ನು ಕಾಣುತ್ತೇವೆ. ಇದು ಮತ್ತು ಇಂಥವು ಮುಂದೆ ಅಲ್ಲಲ್ಲಿಗೇ ಬಲಗೊಂಡು ನದಿಪಾತ್ರೆಯನ್ನು ಆಕ್ರಮಿಸದಂತೆ ನೋಡಿಕೊಳ್ಳಲು ಕರ್ನಾಟಕದಲ್ಲಿ ಕಾನೂನೂ ಸರಕಾರದಲ್ಲಿ ಪ್ರತ್ಯೇಕ ಇಲಾಖೆಯೂ ಇದೆ. ಅದು ಕಛೇರಿ ಶೃಂಗಾರ ಮಾಡುವುದನ್ನು ಬಿಟ್ಟು, ಇಲ್ಲಿ ತುಸು ನಿಗಾವಹಿಸುತ್ತದೆ ಎಂದು ಆಶಿಸುತ್ತೇವೆ. ಅದಕ್ಕೂ ಮಿಗಿಲಾಗಿ ಬಂಟರ ಸಂಘ ಮತ್ತು ಇತರ ನಿರ್ಮಾಪಕರು ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ಪ್ರಜೆಗಳೇ ಆಗಿರುತ್ತಾರೆ ಎಂದು ಭಾವಿಸುತ್ತೇವೆ. ದುರಾಸೆಗೆ ಮನಮಾಡದೆ ಸ್ವಯಂನಿಯಂತ್ರಣ ತಂದುಕೊಳ್ಳುತ್ತಾರೆ ಎಂದೂ ಆಶಿಸುತ್ತಾ ಸ್ಥಳ ಬಿಟ್ಟೆವು.

ಬಂದಷ್ಟೇ ಏಕಮನಸ್ಕತೆಯಿಂದ ರಾಯರು ಜೋಡುಮಾರ್ಗದತ್ತ ನಾನು ಮಂಗಳೂರಿನತ್ತ ಸೈಕಲ್ಲೇರಿದೆವು. ಅತ್ತಣಿಂದ ಬರುವಾಗ ಅರ್ಕುಳವಲಯದಲ್ಲಿ ಯಾವುದೋ ಮತೀಯ ಸಂಭ್ರಮಕ್ಕೆ ಹಸುರು ಧ್ವಜ ಪತಾಕೆಗಳು ದಾರಿಯನ್ನಲಂಕರಿಸಿದ್ದುವು. ಹಿಂತೆರಳುವ ಸಮಯದಲ್ಲಿ ಪಶ್ಚಿಮ ದಿಗಂತ ಸಮೀಪಿಸಿದವನ ಅರುಣರಾಗದಲ್ಲಿ ಅದೇ ಧ್ವಜಪತಾಕೆಗಳು ಮುಳುಗಿ ವರ್ಣಾಂತರಗೊಂಡಂತೆ ಕಾಣಿಸಿತು. ಹೌದಲ್ಲಾ ನಾವು ಮನದಲ್ಲಿ ನೆನೆಯುತ್ತಿದ್ದ ನೇತ್ರಾವತಿ ನದಿ, ಎಲ್ಲ ಮತಗಳ ಎಲ್ಲ ಜನಗಳ ಜವಾಬ್ದಾರಿಯಲ್ಲಷ್ಟೇ ಸ್ವಸ್ಥವಾಗಿ ಉಳಿದು ನಮ್ಮನ್ನು ಉಳಿಸಬಲ್ಲುದು. ಬೆಳಕಿನ ಕುಡಿ ಉಳಿದಂತೆ, ಮತ್ತೆ ಫರಂಗಿಪೇಟೆ, ಪಡೀಲು ಎಂದು ತುಳಿಯುತ್ತ ಮನೆ ಸೇರಿದೆ.

೫. ಸುಂದರ ಚೌಕಟ್ಟಿನಲ್ಲಿ ಕೊಳೆತ ಕಿತ್ತಳೆ! : (೧೮-೧-೨೦೧೫) ಪಂಪ್ವೆಲ್ಲಿನಿಂದ ತೊಕ್ಕೊಟ್ಟು, ಕೋಟೆಕಾರು, ಸಂಕೊಳಿಕೆಯವರೆಗೂ ಚತುಷ್ಪಥದ ಕೆಲಸ ಮತ್ತೆ ಬಿರುಸಿನಿಂದ ನಡೆದಿದೆ. ಅದನ್ನು ನೋಡುತ್ತ ಒಮ್ಮೆಗೆ ನನ್ನ ಪಕ್ಕದಲ್ಲೇ ಆನೆಗಾಲಿನ ದಪ್ಪದ ಟಯರಿನ ಮೋಟಾರ್ ಬೈಕೇರಿದ ತರುಣರಿಬ್ಬರು ಝೂಂಮೆಂದು ಹಾದು ಹೋದರು. ಅವರಿಗೆ ನನ್ನಲ್ಲಿ ಏನು ಕಾಣಿಸಿತೋ ಗೊತ್ತಿಲ್ಲ, ಅಷ್ಟೇ ಚುರುಕಾಗಿ ನಿಧಾನಿಸಿದರು. ನಾನು ಸಮೀಪಿಸಿದಾಗ, ಇಬ್ಬರೂ ಹೆಬ್ಬೆರಳೆತ್ತಿ ವಿಜಯ ಸಂಕೇತ ಕೊಟ್ಟರು. ಎಷ್ಟಿದ್ದರೂ ಇದು `ಲೈವ್’ ತಾನೇ? (ಫೇಸ್ ಬುಕ್ಕಿನ ಬಹುತೇಕ ಇಂಥ `ಲೈಕ್’ಗಳಿಗೆ ಜೀವವಿಲ್ಲ!) ನಾನು ಗಟ್ಟಿಯಾಗಿಯೇ “ಥ್ಯಾಂಕ್ಸ್” ಹೇಳಿದೆ. ಅವರಲ್ಲಿ ಹೆಲ್ಮೆಟ್ ಇರಲೇ ಇಲ್ಲ. ಸಣ್ಣ ಕೊಂಕು ನಗೆಯೊಡನೆ ಸವಾರ ನನ್ನ ಹೆಲ್ಮೆಟ್ ತೋರಿಸಿ, “ಹೆಲ್ಮೆಟ್ ಯಾಕೆ?” ಮೊನ್ನೆಯಷ್ಟೇ ಇಂಥದ್ದೇ ನುಣ್ಣನೆ ದಾರಿಯಲ್ಲಿ ಇಂಥದ್ದೇ ಭಾರೀ ಬೈಕೇರಿ (೨೦೦ ಸಿಸಿ), ಹೀಗೇ ಹೆಲ್ಮೆಟ್ಟಿಲ್ಲದೆ, ಭರ್ಜರಿ ವೇಗದಲ್ಲಿ ಪ್ರಾಣ ಕಳೆದುಕೊಂಡ ತರುಣನೊಬ್ಬನ ಚಿತ್ರ ಕಣ್ಮುಂದೆ ಬಂತು. ನಾನು ಪೆಡಲ್ ತುಳಿಯುತ್ತಲೇ ಗಟ್ಟಿ ಧ್ವನಿಯಲ್ಲುತ್ತರಿಸಿದೆ “ಒಳಗೆ ನನ್ನ ತಲೆಯಿದೆಯಲ್ಲಾ!”

ಸಂಕೊಲಿಕೆಯಲ್ಲಿ ಹೆದ್ದಾರಿ ಬಿಟ್ಟು ಎಡಕ್ಕೆ ಹೊರಳಿದೆ – ಕೋಮಳೆ ತೋಡಿನ ದಂಡೆಯ ಹರಕು ಡಾಮರುದಾರಿ. ಆದರೆ ನೂರಡಿಯಂತರದಲ್ಲೇ ಇನ್ನೆಲ್ಲಿಂದಲೋ ಕಂತುಗಳಲ್ಲಿ ಹರಿದು ಬಂದ ನುಣ್ಣನೆ ಕಾಂಕ್ರಿಟೀಕರಣ ನನ್ನನ್ನು ಸಮಾಧಾನಿಸಿತು. ಆದರೆ ಅಂಚಿನ ಪೊದರ ಮರೆ ತಪ್ಪಿದ್ದಕ್ಕೋ ಏನೋ ತೋಡಿನಲ್ಲಿನ ನಾಗರಿಕ ಕೊಳೆ, ಕಸ ಸ್ಪಷ್ಟವಾಯ್ತು. ಅಗ್ಗದ ಜನಪ್ರಿಯತೆಯ ಸಾಧನವಾಗಿ ಮಾರ್ಗವೇನೋ ಒಂದೆರಡು ತಿಂಗಳಲ್ಲೇ ಪೂರ್ಣ `ಸುಂದರ’ವಾಗಬಹುದು. ಹಾಗೇ ಪಕ್ಕದ ತೋಡಿನ ಸ್ಥಿತಿ ಸಹಜವಾಗಬಹುದೇ? ನಮ್ಮ ಸೌಂದರ್ಯದ ವ್ಯಾಖ್ಯೆ ಎಷ್ಟು ಪೊಳ್ಳು.

ಕಲ್ಲಾಪಿನ ಬಳಿ ದಿಗಂತದಲ್ಲಿ ಮುಳುಗು ಸೂರ್ಯನ ಮೋಹಕ ಕೆಂಪು ಆಕರ್ಷಿಸಿತು. ಸೈಕಲ್ಲಿಳಿದು, ಚಿತ್ರಕ್ಕೆ ಚೌಕಟ್ಟು ಆಯುವಾಗ, ಕೊಳೆತ ಕಿತ್ತಳೆ ಕಂಪು ವಿಕರ್ಷಿಸಿತು. ಮಾಮೂಲೀ ನೂರೆಂಟು ಕೊಳೆ ತುಂಬಿಕೊಂಡ ಗಂಟುಗಳೊಡನೆ ಐವತ್ತಕ್ಕೂ ಮಿಕ್ಕು ಕೊಳೆತ ಕಿತ್ತಳೆ ಹಣ್ಣುಗಳ ರಾಶಿಯೂ ಅಲ್ಲಿತ್ತು. ಹೀಗೆ ಗಮನ ಸೆಳೆದ ಮುನ್ನೆಲೆಯನ್ನೂ ಸೇರಿಸಿಯೆ ಚಿತ್ರ ತೆಗೆದೆ. ವನ್ಯಜೀವಿಗಳ ಚಿತ್ರಗ್ರಹಣದ ಚೌಕಟ್ಟಿನಲ್ಲಿ, ಅವುಗಳ `ಪರಿಸರ’ ಪ್ರತಿನಿಧಿಸುವ ಗಿಡ, ನೆಲ, ನೀರನ್ನೋ ಸೇರಿಸುವುದು ಹೆಚ್ಚಿನ ಗುಣಾತ್ಮಕವೆಂದೇ ಹೇಳುತ್ತಾರೆ. ಹಾಗೇ ಸುಂದರ ಪ್ರಾಕೃತಿಕ ಸನ್ನಿವೇಶಗಳನ್ನು ಗ್ರಹಿಸುವಾಗ ಅಲ್ಲಿನ `ಪರಿಸರ’ ಪ್ರತಿನಿಧಿಸುವ ಕೊಳಕು ಸೇರಿಸುವುದು ಪ್ರತಿಭಟನಾತ್ಮಕ ಅಗತ್ಯ!

೬. ಸ್ವಚ್ಛ ಭಾರತಕ್ಕೆ ಉಳ್ಳಾಲದ ಕಿರುಕಾಣಿಕೆ: (೭-೬-೨೦೧೫)

ನಾಯಿ ಕಾಗೆಗಳಿಗೆ ತಿಂದು ಮುಗಿಯಲಿಲ್ಲ, ರಿಕ್ಷಾ, ಟೆಂಪೋಗಳಿಗೆ ಹೊತ್ತು ಮುಗಿಯಲಿಲ್ಲ, ಕೊನೆಗೆ ಬಂದ ಲಾರಿಯೂ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿಯ ಈ ಸಮೃದ್ಧಿಗೆ ಮನಸೋತು ಅಲ್ಲೇ ಬಿಡಾರ ಹೂಡಿದೆ. ಅವನ್ನು ತಂದ ಜನವಾದರೂ ಇರಬೇಕಲ್ಲಾಂದ್ರೆ, ಅವೆರಡರ ಸಿಬ್ಬಂದಿ ಪಕ್ಕದಲ್ಲೇ ಇರುವ ಸಾರ್ವಜನಿಕ ಶೌಚಾಲಯ `ಸೌಕರ್ಯ’ಕ್ಕೆ ಹೋದವರು ಯಕ್ಷಪ್ರಶ್ನೆ ಉತ್ತರಿಸಲಾಗದೆ ಕಳೆದು ಹೋಗಿದ್ದಾರೆ. ಪ್ರಶ್ನೆ ಸರಳ – ಸ್ವಚ್ಛ ಭಾರತ ಅಂದರೇನು?

೭. ಸಂಚಿ ಜ್ಞಾನ ಸರಣಿಯ ನೆಪದಲ್ಲಿ: (೧೫-೨-೨೦೧೫) ಸಂಚಿ ಜ್ಞಾನಸರಣಿಯ ಮೊದಲ ಭಾಷಣ ಕೇಳಲು ನಾನು ಬೆಂಗಳೂರಿನಲ್ಲಿದ್ದೆ. ಅದಕ್ಕೆ ಉಲ್ಲಾಸಕಾರಂತ ಮತ್ತು ಶೇಖರ ದತ್ತಾತ್ರಿ ನಿರ್ವಿವಾದವಾಗಿ ಉತ್ತಮ ಆಯ್ಕೆ. ಹಾಗೇ ಕೇಳುಗರೂ ಗಣ್ಯರಿರಬೇಕಲ್ಲಾಂತ ನಾನು ಅಭಯನನ್ನು ವಿಚಾರಿಕೊಳ್ಳುತ್ತಿದ್ದೆ. ಆಗ ಸಹಜವಾಗಿ ಬಂದ ಒಂದು ಹೆಸರು ನಾಗೇಶ ಹೆಗಡೆ. “ಹೌದು ಕರೆದಿದ್ದೆವು, ಆದ್ರೆ ಇಂದು ಅವರ ಮನೆದೇ ಏನೋ ಕಾರ್ಯಕ್ರಮವಿದೆಯಂತೆ” ಎಂದ ಅಭಯ. ವೈವಿಧ್ಯಮಯ ವೈಜ್ಞಾನಿಕ ಮನೋಧರ್ಮದ ವಿಚಾರಗಳನ್ನು ಮೂಲದಲ್ಲಿ ಸ್ವಾಂಗೀಕರಿಸಿಕೊಂಡು ಮತ್ತೆ ಜನಪ್ರಿಯವಾಗಿ ಪ್ರಸರಿಸುವವರಲ್ಲಿ ದೊಡ್ಡ ಹೆಸರು ನಾಗೇಶ ಹೆಗಡೆ. ಅವರಿಗಿಲ್ಲದ ಬಿಡುವು ನನಗಿತ್ತು. ನಾನೇ ಒಂದು ಗಳಿಗೆ ಅವರನ್ಯಾಕೆ ನೋಡಬಾರದು ಎಂದು ಅಭಯನ ಸೈಕಲ್ಲೇರಿಯೇ ಬಿಟ್ಟೆ.

ನನ್ನಲ್ಲೆರಡು ಮಾರ್ಗಸೂಚಿಗಳಿದ್ದುವು ಮೊದಲನೇದು ಬೆಂ-ಮೈಸೂರು ದಾರಿಯಲ್ಲಿ ಕುಂಬಳಗೋಡಿನ ಸಮೀಪವೆಲ್ಲೋ ಅವರ ಮನೆ. ಇನ್ನೊಂದು ಅವರ ಚರವಾಣಿ ಸಂಖ್ಯೆ. ಚರವಾಣಿಯನ್ನು ಅನಿವಾರ್ಯತೆಯಲ್ಲಷ್ಟೇ ಬಳಸುವ ವಿವೇಚನೆ ನನ್ನದು. ಚನ್ನಸಂದ್ರದಿಂದ ವಿಷ್ಣುವರ್ಧನ ರಸ್ತೆಯುದ್ದಕ್ಕೆ ಹೋಗಿ ಕೆಂಗೇರಿಯಲ್ಲಿ ಮೈಸೂರು ದಾರಿ ಸೇರಿದೆ. ದೊಡ್ಡಾಲಕ್ಕಿದ್ದ ಬಲಗವಲು ಬಿಟ್ಟು, ಎಡಪಕ್ಕಕ್ಕೆ ಸಿಕ್ಕ ಡೆಕಾತ್ಲಾನ್ – ಕ್ರೀಡಾಸಾಮಗ್ರಿಗಳ ಭಾರೀ ಮಳಿಗೆ ಕಳೆದು, ಕುಂಬಳಗೋಡೇನೋ ಸೇರಿದೆ. ಮತ್ತೆ “ನೀವು ಬಲ್ಲಿರಾ ನೀವು ಬಲ್ಲಿರಾ” ಪಲ್ಲವಿಯೊಡನೆ – ಪೇಪರುಗಳಿಗೆ ಬರೀತಾರೆಂತ ಪೇಪರ್ ಅಂಗಡಿ, ಸಾವಯವ ಕೃಷಿಕಾಂತ ತರಕಾರಿ ಕಟ್ಟೆ, ಜನಪ್ರಿಯ ಎನ್ನುವ ಲೆಕ್ಕದಲ್ಲಿ ರಿಕ್ಷಾ ಸ್ಟ್ಯಾಂಡ್‍ಗಳಲ್ಲೆಲ್ಲ ವಿಚಾರಿಸಿದೆ. ಅವರಿವರಲ್ಲಿ `ಮನೆಯಂಗಳ ಕಾಡು ಮಾಡಿಕೊಂಡವ’ರ ವಿಳಾಸಪತ್ತೆಗೆ ತಿಣುಕಿದೆ, ಕೆರೆಕುಂಟೆಯ ಅರೆನೀರಲ್ಲಿ ವಿಕಾರವಾಗುಳಿದ ವಿಸರ್ಜಿತ ಚೌತಿವಿನಾಯಕರಿಗೆ ಪ್ರಾಕೃತಿಕ ನ್ಯಾಯ ಕೊಡುವವರ ಮನೆಯ ದಾರಿ ಕೇಳಿದೆ. ನಿರಭಿಮಾನಿ ನಗರ – ಎಂಜಿರೋಡಿನ ಪ್ರಜಾವಾಣಿ ವಿಳಾಸ ಹೇಳಿತು, ಯಾವುದೋ ಸಸ್ಯವಾಟಿಯ ದಿಕ್ಕು ತೋರಿತು, ಕುಂಬಾರಕಟ್ಟೆಗೆ ಕೈಕಂಬವಾಯ್ತು! ತನ್ನ ಚರವಾಣಿಯ ಓತಪ್ರೋತ ಸಂಘಾತ, ಅಲ್ಲಲ್ಲ ಸಂವಾದ ನಿಲ್ಲಿಸಿದ ಕರುಣಾಳು ಒಬ್ಬ, “ಅಯ್ಯೋ, ಅವರ ಮೊಬೈಲ್ ನಂಬರ್ ಇದ್ಯಾ? ಮತ್ ಕೊಡಿ ಇಲ್ಲಿ, ನಾನು ಕಾಲ್ ಮಾಡಿ ದಾರಿ ತಿಳಿದು ಹೇಳ್ತೇನೆ” ಎಂದಾಗ ನನ್ನ ಸಂಯಮಕ್ಕೆ ನಾಚಿಗೆಯಾಯ್ತು. ದಾರಿ ಹೋಕನಿಗೆ ಅದು ಜಿಪುಣತನಾಂತ ಕಾಣಬಾರದಲ್ಲಾ ಅಂದುಕೊಂಡು ನಾನೇ ನಾಗೇಶರಿಗೆ ಕಾಲ್ (/ಟ) ಕೊಟ್ಟು ಸ್ಪಷ್ಟಪಡಿಸಿಕೊಂಡೆ. ನಾನು ಆರೇಳು ಕಿಮೀನಷ್ಟು ಮುಂದೆ ಹೋಗಿಬಿಟ್ಟಿದ್ದೆ! ಮತ್ತೆ ಬೆಂಗಳೂರತ್ತ ಪೆಡಲುತ್ತಾ ಡೆಕತ್ಲಾನ್ ಕಳೆದು, ಎಡಕ್ಕೆ ತಿರುಗಿದೆ. ಆಗಷ್ಟೇ ಜಲ್ಲಿ ಹಾಸಿ, ರೋಲರ್ ಓಡಿಸದ ಕಚ್ಚಾ ದಾರಿಗಾಗಿ, ಶಿರಡಿ ಸಾಯಿಮಂದಿರದ ಪಕ್ಕಕ್ಕಾಗಿ T ಸಂಧಿ ಸೇರಿದೆ. ಎಡಕ್ಕೆ ಹೊರಳಿ (ಬಲಕ್ಕೆ ಬೆಂಗಳೂರು) ಅರಣ್ಯ ಇಲಾಖೆಯ ಕುರುಚಲು ಬಾಣೆ ಕಳೆದು, ಸೂಳಿಕೆರೆ ದಂಡೆಗುಂಟ ಸಾಗಿ ಶ್ರೀಶನೀಶ್ವರ ಮಂದಿರ ಸಮೀಪಿಸಿದಾಗ ನನಗೆ ಮೋಕ್ಷವೊದಗಿತ್ತು. ಹತ್ತಿರದಲ್ಲೇ ಇದ್ದ ನಾಗೇಶ ಹೆಗಡೆಯವರ ಮನೆಯಲ್ಲಿ ರಂಗಗೀತೆಗಳ ಮಳೆ ಸುರಿದಿತ್ತು.

ಖ್ಯಾತ ರಂಗಕರ್ಮಿ ಚನ್ನಕೇಶವರ ಬಳಗ `ಲೋಕಚರಿತ’ ತನ್ನ ರಜಾದಿನಗಳ ಸ್ನೇಹಕೂಟವನ್ನು ಅಂದು ನಾಗೇಶಹೆಗಡೆಯವರ ಮನೆಯಲ್ಲಿ ಕಳೆಯಲು ಯೋಜಿಸಿತ್ತು. ಸುಮಾರು ಮೂವತ್ತು ಮಂದಿಯ ಆ ಬಳಗ – ರಂಗಕರ್ಮಿ, ಛಾಯಾಚಿತ್ರಕಾರ, ವಿಡಿಯೋ ಪ್ರವೀಣರೇ ಮುಂತಾದ ಯುವ ಕಲಾವಿದರದು. ಇವರು ನಗರ ಪ್ರಜ್ಞೆಗೆ ವಿಭಿನ್ನವಾದ್ದನ್ನು ಅರಸಿ ರಜಾದಿನಗಳಲ್ಲಿ ಕೂಟ ನಡೆಸುತ್ತಿದ್ದದ್ದು ನಿಜಕ್ಕೂ ಚೇತೋಹಾರಿಯಾಗಿತ್ತು. ಯಾವುದೇ ಔಪಚಾರಿಕತೆಗಳಿಲ್ಲದೆ ಮೊದಲು ರಂಗಗೀತೆಗಳ ಪ್ರವಾಹ. ಬೆನ್ನಿಗೆ ಚೆನ್ನಕೇಶವರಿಂದ ಅಂದಿನ ಆಶಯದ ಕುರಿತ ನಾಲ್ಕು ಮಾತು: ಭಾರೀ ನಗರಗಳ ಸಹಜ ಗೊಂದಲಗಳೊಡನೆಯೂ ಎಲ್ಲೆಲ್ಲಿನ ಜನ ಮುಂಬೈ, ಕೊಲ್ಕತ್ತಾಗಳೊಡನೆ ತಮ್ಮನ್ನು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಾರೆ. ಪಾರಿಸರಿಕವಾಗಿ ಅವನ್ನು ಮೀರಿದ ಸೌಂದರ್ಯ ಬೆಂಗಳೂರಿಗಿದೆ. ಆದರೆ ಇಲ್ಲಿ ಜನ ನಗರವನ್ನು ಅಸಹನೆಯ ತಾಣವಾಗಿ ಕಾಣುತ್ತಾ ತಮ್ಮ ಚಹರೆಗಳನ್ನು ಹುಟ್ಟೂರುಗಳೊಡನೆ ಗುರುತಿಸುವ ವಿಪರ್ಯಾಸವಿದೆ. `ನಮ್ಮ ಬೆಂಗಳೂರು’ ಬರಿಯ ಘೋಷಣೆಯಾಗದೆ, ಅಭಿಮಾನದ ಮಾತಾಗುವ ಬಯಕೆಯನ್ನು ಚೆನ್ನಕೇಶವ ತೋಡಿಕೊಂಡರು. ನನ್ನ ಆಕಸ್ಮಿಕ ಬರೋಣವನ್ನು ಅವರು ಇಷ್ಟದ ಸೇರೋಣವಾಗಿಸಿಕೊಳ್ಳಲು ಉತ್ಸಾಹ ತೋರಿದರು. ಆದರೆ ನಾನು ಸೈಕಲ್ ಚಕ್ರಕ್ಕೆ ಕಾಲಚಕ್ರವನ್ನೂ ಕಟ್ಟಿಕೊಂಡದ್ದನ್ನು ತಿಳಿಸಿ, ಬೇಗನೆ ಮರಳುವ ದಾರಿ ಹುಡುಕಿಕೊಂಡೆ.

ನಾಗೇಶ ಹೆಗಡೆ ದಂಪತಿ ಪ್ರೀತಿಪೂರ್ವಕವಾಗಿ ಅವರ ಅಂಗಳ ಸುತ್ತಿಸಿದರು. ನಾನೆಷ್ಟು ನಿರಾಕರಿಸಿದರೂ ಕೇಳದೆ ಒಂದಷ್ಟು ಮಿಡಿಸೌತೆಗಳನ್ನು ಅವರ ತೋಟದ ಬಳ್ಳಿಯಿಂದಲೇ ಕೊಯ್ದು ಕೊಟ್ಟರು, ಪಪ್ಪಾಯಿ ತಿನ್ನಿಸಿದರು. ಅವರು ವಾರದ ಹಿಂದೆ ಉತ್ಸಾಹದಲ್ಲೇ ಹೊಸ ಸೈಕಲ್ ಕೊಂಡರೂ ಬಳಸುವಲ್ಲಿ ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡರು. ಇದು ನನ್ನಲ್ಲಿನ `ಪ್ರಚಾರಕ’ನಿಗೆ ಮಾಡಿದ ಸಮ್ಮಾನವೇ ಆಯ್ತು!

ಆಶ್ಚರ್ಯಕರವಾಗಿ ಸಾಕಷ್ಟು ಸ್ವಚ್ಛವಾಗಿಯೇ ಕಾಣುತ್ತಿದ್ದ ಸೂಳೀಕೆರೆ ಎಡಕ್ಕೆ ಬಿಟ್ಟು, ಕುಂಬಳಗೋಡಿನ ಕವಲು ನಿರಾಕರಿಸಿ, ನೇರ ಕೆಂಗೇರಿಗೇ ಹೋದೆ. `ಅ(ಭಯ)ರ(ಶ್ಮಿಯರ)ಮನೆ’ಗೆ ಸರ್ಕೀಟ್ ಮುಗಿಸಿ, ನನ್ನ ಜ್ಞಾನ ಸರಪಣಿಗೊಂದು ಹೊಸ ಗೊಣಸು ಸೇರಿಸಿಕೊಂಡೆ.

೮. ಗುಜ್ಜರಕೆರೆ ಅಭಿವೃದ್ಧಿ!!: (೨೫-೨-೨೦೧೫) ಸೈಕಲ್ ಸರ್ಕೀಟಿಗಿಂದು `ಯುದ್ಧ ಮುಗಿದ ಮೇಲೆ ಹೆಣ ಹೆಕ್ಕುವ’ ದುರ್ಭರ ಪ್ರಸಂಗ.

ಮೊನ್ನೆ ಪತ್ರಿಕೆಗಳಲ್ಲಿ `ಒಂದು ಕೋಟಿಯ ಗುಜ್ಜರಕೆರೆ ಅಭಿವೃದ್ಧಿ’ ಉದ್ಘಾಟನಾ ಸಮಾರಂಭದಲ್ಲಿ ಪ್ರಜಾಪ್ರತಿನಿಧಿಗಳು ಹುಡಿ ಹಾರಿಸಿದ ಮಾತುಗಳನ್ನು ನೋಡಿದ್ದೆ. ಪುಡಾರಿಗಳ ಒದರಾಟ, ಅದರ ಪೂರ್ವಾಪರ ಪ್ರಶ್ನಿಸುವ ತಾಕತ್ ಇಲ್ಲದ ಮಾಧ್ಯಮಗಳ ವರದ್ಯಾಟ ಯಾವುದೇ ಟೀವೀ ಮೆಗಾ ಸೀರಿಯಲ್ಲಿಗೆ ಕಡಿಮೆಯಿಲ್ಲ; ಸಿಹಿಯುಳಿಯದ ಜಗಿಯಂಟು. ಮಾರ್ಗನ್ಸ್ ಗೇಟ್ ಪ್ರದಕ್ಷಿಣೆ ಹಾಕಿ, ಗುಜ್ಜರಕೆರೆ ದಂಡೆಗೇ ಹೋದೆ. ಮೂರ್ನಾಲ್ಕು ದಿನಗಳು ಕಳೆದ ಮೇಲಾದರೂ ನಿಜಕಾರ್ಯ ಏನು ಶುರುವಾಗಿದೆ ಎಂದು ತಿಳಿಯುವ ಕುತೂಹಲ ನನ್ನದು. ಸುಮಾರು ಎಂಟಡಿ ಗುಣಿಸು ಹದಿನೈದು ಅಡಿಯ ವಿನೈಲ್ ಪೋಸ್ಟರ್ ಬಿಟ್ಟು ಸ್ಥಿತಿ ಏನೂ ಬದಲಾಗಿರಲಿಲ್ಲ. ಸಮಾರಂಭದ ಹೊಸ ಕಸ ಹಳೆ ರಾಶಿಯೊಡನೆ ರಾಜಿ ಮಾಡಿಕೊಳ್ಳುತ್ತಿತ್ತು! ನಾಲ್ಕಾರು ತಿಂಗಳ ಹಿಂದೆ ಹೀಗೇ ಇದರ `ದಂಡೆ ರಚನೆ ಹಾಗೂ ಜಲಶುದ್ಧಿ’ ಪೂರೈಸಿದ್ದರ ಲೋಕಾರ್ಪಣೆಯಾಗಿತ್ತು. ಅದು ಎಷ್ಟು ಕಾಲದ ಹಿಂದಿನ ಯೋಜನೆ ಮತ್ತು ಎಷ್ಟು ಸಮರ್ಪಕವಾಗಿತ್ತು ಎಂಬುದನ್ನು ಯಾರೂ ಕೇಳಿರಲಿಲ್ಲ. ಹಾಗೇ ಈಗಿನದ್ದೂ ಎಂದು ಮತ್ತು ಹೇಗೆ ಪೂರೈಸೀತು ಎಂದು ಹೇಳುವುದೂ ಅಸಾಧ್ಯ. ಯಾಕೆಂದರೆ ಅಲ್ಲಿ ನಿಜ ಕೆಲಸ ಇನ್ನೂ ತೊಡಗಿಯೇ ಇಲ್ಲ!

ಹಾಗೇ ಮುಳಿಹಿತ್ಲಿನ `ನೇತ್ರಾವತಿ ಕೊರಗಜ್ಜ ಕಟ್ಟೆ’ ಸೇರಿದಂತೆ ಕೆಲವು ನದಿ ಕಿನಾರೆಗಳಲ್ಲಿ ಹಣಿಕುತ್ತಾ ಹೊಯ್ಗೆ ಬಝಾರಿನ ಮಹಾಮೈಸೂರು ಕಂಪೆನಿ ಹಾದು `ತ್ರಿವೇಣೀ’ ಸಂಗಮವನ್ನೇ (ನೇತ್ರಾವತಿ, ಫಲ್ಗುಣಿ ನದಿಗಳು ಮತ್ತು ಅರಬೀ ಸಮುದ್ರ!) ಸೇರಿಕೊಂಡೆ. ಅಪೂರ್ಣಗೊಂಡ ದಕ್ಕೆಯಂಚಿನಲ್ಲಿ ಕೆಲವು ಮೀನುಗಾರಿಕಾ ದೋಣಿಗಳು ಬಹುಶಃ ಬೆಳಗ್ಗಿನ ಕೆಲಸದ ಪರಾಮರ್ಶೆ, ನಾಳಿನ ಕೆಲಸದ ಸಿದ್ಧತೆಗಳಲ್ಲಿದ್ದಂತಿದ್ದವು. ದಕ್ಕೆ ನಿರ್ಮಾಣದ ಆವಶ್ಯಕತೆ, ಅಪೂರ್ಣತೆ, ಮತ್ತು ಅವ್ಯವಸ್ಥೆ ಅಲ್ಲಿ ಏಕಕಾಲಕ್ಕೆ ಢಾಳಾಗಿ ಕಾಣುತ್ತಿತ್ತು. ಅಲ್ಲಿನ ಕಾಮಗಾರಿ ಸ್ಥಗಿತಗೊಂಡ ಲಕ್ಷಣಗಳು ಸಾಕಷ್ಟು ಹಳತಾಗಿತ್ತು. ಮತ್ತದು ಸದ್ಯದಲ್ಲೇ ಮುಂದುವರಿಯುವ ಸೂಚನೆ ಕೊಡುವ ಯಾವುದೇ ಸಾಮಗ್ರಿ, ಯಂತ್ರ ವಿಶೇಷವೂ ಅಲ್ಲಿರಲಿಲ್ಲ. ಸ್ವಲ್ಪ ಆಚೆಗೆ ಎಮ್ಮೆಕೆರೆಯತ್ತಣಿಂದ ಒಂದು ಬೃಹತ್ ಚರಂಡಿ ಬಂದು ಹೊಳೆಗೆ ತನ್ನ ಪಾಪರಾಶಿಯನ್ನು ನಿವೇದಿಸುತ್ತಿತ್ತು. ಕೆಲವೇ ದಶಕಗಳ ಹಿಂದೆ, ಆ ತೋಡಿಗೊಂದು ಚಂದದ ಹೆಸರು ಮತ್ತು ಅದರ ನೀರಿನ, ಅಲ್ಲ ತೀರ್ಥದ ಪುಣ್ಯವಿಶೇಷಗಳನ್ನು ಹಾಡುವ ಸ್ಥಳಪುರಾಣಿಕರಿದ್ದಿರಬೇಕು. ಇಂದು ಅಂಥವರುಳಿದಿದ್ದರೆ ನಾಲಗೆ ಕತ್ತರಿಸಿಕೊಳ್ಳುವುದು ಖಾತ್ರಿ.

ಬೆಂಗಳೂರಿನ ಕುಖ್ಯಾತ ವೃಷಭಾವತಿಗೆ ಇಂದಿದು ತಂಗಿ! ಅದರ ಅಡ್ಡಕ್ಕೆ ಮಾಡಿರುವ ಸೇತುವೆ, ಅದು ಇತ್ತ ನೆಲ ಸಂಪರ್ಕಿಸುವಲ್ಲಿ ಹಾಕಿದ ಕಬ್ಬಿಣದ ಸರಳುಗಳು ಮುಕ್ಕು ತುಕ್ಕು ಬಂದು ಪೂರ್ಣ ನಿರುಪಯುಕ್ತವೇ ಆಗಿವೆ. ಬಹುಶಃ ಗುಜ್ಜರಕೆರೆಯ ಹಾಗೇ ಇದೂ ಇನ್ನೊಂದು ಮೆಗಾಸೀರಿಯಲ್ಲೇ ಸರಿ. ಅಲ್ಲಿ ಹಳೆ ಕಸದ ಮೇಲೆ ಹೊಸ ಒಂದು ಕೋಟಿ ಎರಚಿದಂತೆ ಇಲ್ಲಿಗೂ ಹೊಸ ಯೋಜನೆಯನ್ನು `ತಜ್ಞ’ರು ಹೊಸೆಯುತ್ತಿರಬೇಕು. (ಇಲ್ಲಿ ಜುಜುಬಿ ಒಂದೆರಡು ಕೋಟಿ ಸಾಕಾಗಲಾರದು) ಮಾಧ್ಯಮಮಿತ್ರರು ಇಂದಿಗೂ ಮೀರಿದ ಉತ್ಸಾಹದಲ್ಲಿ, ಅದನ್ನೂ ವಿಮರ್ಶೆ ಮಾಡದೇ ಬರಮಾಡಿಕೊಳ್ಳಲು ಜಾಹೀರಾತು ಪುಟಗಳನ್ನು ಕಾಯ್ದಿರಿಸಿರಬೇಕು.

ಗೂಡ್ಸ್ ಶೆಡ್ಡಿನ ಪಶ್ಚಿಮ ಅಂಚಿನ ಕಚ್ಚಾದಾರಿಯಲ್ಲಿ ಚಕ್ರ ಬೆಳೆಸಿ, ಹಳೆ ಬಂದರ್ ಕಟ್ಟೆಗಳ ಉದ್ದವನ್ನು ಸವಾರಿಯಲ್ಲೇ ಅಳೆದು, ಕಣ್ಣು ಸಹಿಸದಷ್ಟು ಕೊಳೆ, ಮೂಗು ಭರಿಸದಷ್ಟು ವಾಸನೆ ತುಂಬಿದ ಮೇಲೆ ಮನೆಯತ್ತ ಮನ ಮಾಡಿದೆ. ರಥಬೀದಿ, ಡೊಂಗರಕೇರಿಗಾಗಿ ಮನೆ ಸೇರಿದರೂ `ಗುಜ್ಜರಕೆರೆ, ಗೊಜ್ಜೆಯ ಹೊರೆ’ ಎಂಬ ಮನಃಕಷಾಯ ಕುದಿಯುತ್ತಲೇ ಇದೆ.

೯. ವಿಶ್ವ ತಂಬಾಕುರಹಿತ ದಿನ: (೩೧-೫-೨೦೧೫) ಜ್ಯೋತಿ ಸೈಕಲ್ಸ್, ಕದ್ರಿ ಇದನ್ನು ಧೂಮಪಾನದಲ್ಲಿ ಉಸಿರು ಹಾಳು ಮಾಡಿಕೊಳ್ಳುವವರಿಗೆ ಸ್ವಸ್ಥ ಉಸಿರಾಟ ಪ್ರಚೋದಿಸುವ, ಸ್ಪಷ್ಟ ವ್ಯಾಯಾಮ ಕೊಡುವ “ಸೈಕಲ್ಲಿಗೆ ಸೈ ಎನ್ನಿ” ಎಂದೇ ಆಚರಿಸಿದರು. ಸಾರ್ವಜನಿಕ ಉತ್ಸಾಹಿಗಳಿಗೆ ಎರಡು ವರ್ಗಗಳಲ್ಲಿ – ಮೂವತ್ತೈದು ಹಾಗೂ ಎಪ್ಪತ್ತು ಕಿಮೀ, ಸೈಕಲ್ ಅಭಿಯಾನ ಹೊರಡಲು ಕರೆಯಿತ್ತಿದ್ದರು. ನಾನು ಎಪ್ಪತ್ತರದ್ದನ್ನೇ ಆರಿಸಿಕೊಂಡಿದ್ದೆ. ಬೆಳಿಗ್ಗೆ ಐದೂ ನಲ್ವತ್ತರ ಸುಮಾರಿಗೆ ಮಹಾನಗರ ಪಾಲಿಕೆಯ ಕಚೇರಿ ಎದುರಿನಿಂದ ತೊಡಗಿ ಬಿಜೈ ದಾರಿಯಾಗಿ ಕದ್ರಿಗುಡ್ಡೆ ಏರಿದೆವು.

ಯೆಯ್ಯಾಡಿ ಬೊಂದೆಲ್ ಹಾಯ್ದು ಕಾವೂರು ವೃತ್ತದದಲ್ಲಿ ಪುನಃಸಂಘಟನೆ ಮಾಡಿಕೊಂಡೆವು. ಮುಂದುವರಿದು ಮಳವೂರು, ಕರಂಬಾರು ದಾಟಿದ ಮೇಲೆ ಬಜ್ಪೆ ಗುಡ್ಡೆಯನ್ನು ಸಣ್ಣ ಮಾಡಿದೆವು. ಅಲ್ಲಿಗೆ ವ್ಯವಸ್ಥಾಪಕರು ಎಲ್ಲರಿಗೂ ಉಚಿತವಾಗಿ ಪೂರೈಸುವಂತೆ ಬಾಳೆಹಣ್ಣು, ಮಾವಿನರಸ ಹಾಗೂ ಕುಡಿನೀರನ್ನು ಕಾರಿನಲ್ಲಿ ಕಳಿಸಿಕೊಟ್ಟಿದ್ದರು. ಬಜ್ಪೆ, ಪೆರ್ಮುದೆ ಪೇಟೆಗಳನ್ನು ದಾಟಿ ಕಟೀಲಿನತ್ತ ಮುಂದುವರಿದೆವು.

ಹುಣ್ಸೆಕಟ್ಟೆಯಲ್ಲಿ ಎಡ ಕವಲು. ಮತ್ತೆ ದೇಲಂತಬೆಟ್ಟು, ಶಿಬರೂರು, ಕಿಲೆಂಜೂರು, ಸೂರಿಂಜೆಗಳ ವಿಪರೀತ ಏರಿಳಿತಗಳ ದಾರಿಯನ್ನು ಹಗುರ ಮಾಡಿ ಕಾಟಿಪಳ್ಳದಲ್ಲಿ ಉಸಿರು ಹೆಕ್ಕಲು ಸಣ್ಣ ವಿರಾಮ. ಮುಂದೆ ಹೊಸಬೆಟ್ಟು, ಹೆದ್ದಾರಿಯಲ್ಲಿ ಮಂಗಳೂರಿನತ್ತ.

ಕೂಳೂರು ಸೇತುವೆಯ ಬಳಿ ತಣ್ಣೀರುಬಾವಿಯತ್ತಣಿಂದ ಬರುತ್ತಿದ್ದ ನಮ್ಮದೇ ಅಭಿಯಾನದ ಎರಡನೇ ವರ್ಗದ (ಮೂವತ್ತೈದು ಕಿಮೀ. ಅವರು ಸುಮಾರು ಬೆಳಗ್ಗೆ ಏಳೂವರೆಗೆ ಸುಮಾರಿಗೆ ಕದ್ರಿಯಿಂದಲೇ ತೊಡಗಿ, ತಣ್ಣೀರುಬಾವಿ, ಬೆಂಗ್ರೆ ಸುತ್ತು ಮುಗಿಸಿ ಮರಳುತ್ತಿದ್ದರು.) ಸವಾರರ ವಾಹಿನಿಗೆ ಸಂಗಮಿಸಿ, ಕದ್ರಿಯ ಜ್ಯೋತಿ ಸೈಕಲ್ಸ್ ಮಳಿಗೆ ಸೇರಿದೆವು. ಹಿರಿದಂತರದ ಬಳಗ (ನಮ್ಮದು) ಸುಮಾರು ಮೂವತ್ತೈದೇ ಸವಾರರನ್ನು ಕಂಡರೆ, ಕಿರಿದಂತರದಲ್ಲಿ ನೂರಕ್ಕೂ ಮಿಕ್ಕು ಉತ್ಸಾಹಿಗಳು ಸೇರಿದ್ದರಂತೆ. ಸಂಯೋಜಕರು ಎಲ್ಲರಿಗೂ ಉಪಾಹಾರ ಮತ್ತು ಕಿರುಕಾಣಿಕೆ ಕೊಟ್ಟದ್ದಲ್ಲದೆ, ಖ್ಯಾತ ಸೈಕಲ್ ಕಂಪೆನಿಯೊಂದರ ಪರಿಣತರಿಬ್ಬರನ್ನು ಕರೆಸಿ ಮುಕ್ತ ಸಂವಾದ ಅವಕಾಶವನ್ನೂ ಕಲ್ಪಿಸಿದ್ದರು.

ಮಂಗಳೂರು ಸೈಕಲ್ ಕ್ಲಬ್ಬಿನ (ಎಂಎಸಿಸಿ) ಅನಿಲ್ ಶೇಟ್ ಮತ್ತು ಗೆಳೆಯರು ಅಭಿಯಾನದ ದಾರಿಯನ್ನು ನಿಗದಿಸಿದ್ದಲ್ಲದೆ ಉದ್ದಕ್ಕೂ ಸಮರ್ಥವಾಗಿ ಉಸ್ತುವಾರಿಯನ್ನೂ ನಡೆಸಿ ಯಶಸ್ಸು ಕಾಣಿಸಿದರು. ಎಂಎಸಿಸಿ ಕಠಿಣ ವ್ರತದಂತೆ ನಿತ್ಯ ವೈಯಕ್ತಿಕ ಸಾಮರ್ಥ್ಯವನ್ನು ಹೊಳಪುಗೊಳಿಸಿಕೊಳ್ಳುತ್ತದೆ. ಆದರೆ ಇಲ್ಲಿ ಅಭಿಯಾನ ದೊಡ್ಡದು, ತಂಡ ಒಂದಾಗಿ ನಡೆಯಬೇಕು ಎನ್ನುವುದನ್ನು ಮನಗಂಡು ಹಿರಿಯ ಸವಾರರು ಎಲ್ಲರಿಗೂ ಕೊಟ್ಟ ಉತ್ತೇಜನ, ಪಟ್ಟ ಶ್ರಮ ಅಭಿನಂದನೀಯ.

೧೦. ದಾಖಲೆಗಳು ಮತ್ತು ದಾಖಲೀಕರಣ : (೨-೯-೨೦೧೫) ನಿನ್ನೆ ಅಂದರೆ ಸೆಪ್ಟೆಂಬರ್ ಒಂದರಿಂದ ತೊಡಗಿದಂತೆ, ಮೂವತ್ತು ದಿನಗಳಲ್ಲಿ ದಿನಕ್ಕೊಮ್ಮೆ ದೀರ್ಘ ಸೈಕಲ್ ಓಡಿಸುವುದರೊಡನೆ ಮಾಸಾಂತ್ಯದಲ್ಲಿ ಗರಿಷ್ಠ ಕಿಮೀ ಸಾಧನೆ, ಗರಿಷ್ಠ ಔನ್ನತ್ಯ ಸಾಧನೆಯ ದಾಖಲೆ ಸ್ಥಾಪಿಸುವವರನ್ನು ಪುರಸ್ಕರಿಸುವುದು ಜ್ಯೋತಿ ಸೈಕಲ್ಲಿನವರ ಉದ್ದೇಶ. ವಿಶ್ವಮಟ್ಟದಲ್ಲೋ ಭಾರತ ಮಟ್ಟದಲ್ಲೋ ಗಿನ್ನೆಸ್, ಲಿಮ್ಕಾ ಇಂಥ ಅಂಕಿ ಸಂಕಿಗಳನ್ನು ಕಾಪಿಟ್ಟು ಜಗಜ್ಜಾಹೀರುಗೊಳಿಸುವುದು ನಮಗೆ ತಿಳಿದೇ ಇದೆ. ಆದರೆ ದಾಖಲೆಯ ಹಿಂದಿನ ಪ್ರಯತ್ನ, ಸಾಧನೆಯ ವಿವರಗಳನ್ನು ಸಾಕ್ಷಿ ಸಮೇತ ಹಿಡಿದಿಟ್ಟು ಮುಂದೆ ಅನುಸರಿಸುವವರಿಗೆ ಅಥವಾ ಉತ್ತಮಿಸುವವರಿಗೆ ಅಡಿಪಾಯ ಮತ್ತು ಪ್ರೇರಣೆ ಒದಗಿಸುವ ಕೆಲಸ ದಾಖಲೀಕರಣದಿಂದಷ್ಟೇ ಸಾಧ್ಯ. ಹಾಗೆ ಯೋಚಿಸುವಾಗ…..

ನೀನಾಸಂ, ಹೆಗ್ಗೋಡು ಕಳೆದ ಸುಮಾರು ಮೂರು ದಶಕಗಳಿಂದ ನಾಟಕರಂಗದಲ್ಲಿ ತನ್ನ ವಾರ್ಷಿಕ `ತಿರುಗಾಟ’ಗಳಿಂದ ಇಂಥದ್ದೇ ಒಂದು ದಾಖಲೆಯನ್ನು ಮಾಡಿದೆ, ಉತ್ತಮಿಸುತ್ತಲೂ ಇದೆ. ಮಂಗಳೂರಿಗೂ ಬರುತ್ತಿದ್ದ ಅವುಗಳ ಕೇವಲ ವೀಕ್ಷಣೆ ಮಾತ್ರದಿಂದ ರಂಗಕಲೆಗೆ ಪ್ರೇರಣೆ ಪಡೆದವನು ನಮ್ಮ ಮಗ ಅಭಯಸಿಂಹ (ಕಲಿಕೆ ಮತ್ತು ವೃತ್ತಿಯಲ್ಲಿ ಸಿನಿಮಾ ನಿರ್ದೇಶಕ). ಅವನಿಗೆ ಈ ನಾಟಕ ಪ್ರಯೋಗಗಳ ದಾಖಲೀಕರಣದ ಕೊರತೆ ಬಹುವಾಗಿ ಕಾಡಿತು. ಅವನು ಹೆಗ್ಗೋಡಿನ ರಂಗಕರ್ಮಿಗಳನ್ನು ಮುಖ್ಯವಾಗಿ ಉದ್ದೇಶಿಸಿ, ಅಲ್ಲೊಂದು ಕಿರುಚಿತ್ರ ನಿರ್ಮಾಣದ ಕಮ್ಮಟ ನಡೆಸಿದ್ದ. ಆಗ ನೀನಾಸಂನ ವರಿಷ್ಠ ಕೆವಿ ಅಕ್ಷರರಿಗೂ `ತಿರುಗಾಟ’ದ ದಾಖಲೀಕರಣದ ಆವಶ್ಯಕತೆ ಮನಗಾಣಿಸಿದ. ಆದರೆ ಇದರ ಹೆಚ್ಚುವರಿ ಹಣಕಾಸಿನ ಹೊರೆ ಹೊರುವಲ್ಲಿ ಅಕ್ಷರ ಅಸಹಾಯಕತೆ ತೋಡಿಕೊಂಡರು. ಆಗ ಅಭಯ ತನ್ನ ಗೆಳೆಯರೊಡನೆ ಕಟ್ಟಿಕೊಂಡ ಸಂಚಿ ಪ್ರತಿಷ್ಠಾನದ (web:sanchifoundation.org) ನೆಲೆಯಿಂದ ಸಾರ್ವಜನಿಕ ದೇಣಿಗೆಗಳನ್ನು ಆಹ್ವಾನಿಸಿದ. ಅದನ್ನು ಮನ್ನಿಸಿ ಬಂದ ದೇಣಿಗೆಗಳಲ್ಲಿ ನಮ್ಮ ಜೋಡುಮಾರ್ಗದ ಗೆಳೆಯರಾದ ಸುಂದರರಾಯರು ಮತ್ತು ಮಹಾಬಲೇಶ್ವರ ಹೆಬ್ಬಾರರ ಪಾಲೂ ಗಣನೀಯವಾಗಿಯೇ ಇದೆ. ಆ ಪಾವತಿಯ ರಸೀದಿ ತಲಪಿಸುವ ಕೆಲಸ ನನ್ನಲ್ಲಿ ಬಾಕಿಯಿತ್ತು. ಹೀಗೆ ದಾಖಲೀಕರಣ ಮತ್ತು ದಾಖಲೆ ಕಲಾಪಗಳನ್ನು ಒಗ್ಗೂಡಿಸಿ ನಿನ್ನೆ ಸಂಜೆ ನಾನು ಸೈಕಲ್ಲೇರಿದೆ. ನೆನಪಿರಲಿ, ನಾನು “ಆಟಕ್ಕಿದ್ದೇನೆ, ಲೆಕ್ಕಕ್ಕಿಲ್ಲ” ಎಂಬ ಹುದ್ದರಿ; ಸ್ಪರ್ಧಿಯಲ್ಲ!

ಸುಂದರರಾಯರು ಅತ್ತಣಿಂದ ಸುಮಾರು ಅರ್ಧ ಗಂಟೆ ತಡವಾಗಿ ಸೈಕಲ್ಲೇರಿಯೇ ಹೊರಟರು. ನಾನು ಎಂದಿನಂತೆ ಜ್ಯೋತಿ, ಕಂಕನಾಡಿ, ಪಡೀಲಿಗಾಗಿ ಜೋಡುಮಾರ್ಗದತ್ತ ಏಕಧ್ಯಾನದಲ್ಲಿ ಸೈಕಲ್ ಮೆಟ್ಟಿದೆ. ಕಣ್ಣೂರಿನಲ್ಲಿ ಎರಡು ವಾರದ ಹಿಂದೆ ಜಲನಾಳೋದ್ಧರಣ ನಡೆಸಿದ ರಾಶಿ ರಾಶಿ ಮಣ್ಣು ಹೆದ್ದಾರಿ ಅಂಚಿನಲ್ಲಿ ಬಿದ್ದೇ ಇತ್ತು. ಬಹುಶಃ ಈ ಮಣ್ಣಗುಡ್ಡೆಯಿಂದ ಹೊಸ ಅನಾಹುತ ಆಗುವವರೆಗೆ ಜಿಲ್ಲಾಡಳಿತದ ಮಹಾನಿದ್ರೆ ಮುಗಿಯುವುದಿಲ್ಲ!

ಅಡ್ಯಾರ್, ಫರಂಗಿಪೇಟೆ, ಪೊಳಲಿದ್ವಾರ ಕಳೆದು ತುಂಬೆ ಶಾಲೆಯ ಇಳಿಜಾರಿನಲ್ಲಿ ಬೀಸುಗಾಳಿಯ ಸಂತೋಷ `ತೆಗೆ’ಯುವಾಗ ಎದುರಿನಿಂದ ರಾಯರು ಸಿಕ್ಕರು. ಶಾಲಾ ಬಸ್‍ ನಿಲ್ದಾಣದಲ್ಲಿ ನಮ್ಮದು ಹತ್ತು ಮಿನಿಟಿನ ಬೈಠಕ್. ನೀನಾಸಂ ದಾಖಲೀಕರಣದ ಅವರಿಬ್ಬರ ದೇಣಿಗೆಯ ರಸೀದಿ ಕೊಟ್ಟೆ. ಹಿಂದಿನ ದಿನವಷ್ಟೇ ಅವರು ಮಂಚಿಗೆ ಹೋಗಿ ನೋಡಿ ಮೋಹಿತರಾದ `ಮೋಹ ಮೇನಕೆ’ (ಮಂಟಪ ಪ್ರಭಾಕರ ಉಪಾಧ್ಯ ಬಳಗದ ಹೊಸ ಪ್ರಯೋಗ – ನೋಡಿ: ಇಲ್ಲೇ ನನ್ನ ೧೯-೬-೨೦೧೫ರ ಸಚಿತ್ರ ವಿಮರ್ಶೆ.), ಎತ್ತಿನ ಹೊಳೆ ಬಗ್ಗೆ ತಡವಾಗಿಯಾದರೂ ಪಕ್ಷ ನಿಷ್ಠೆ ಮೀರಿ ಸಣ್ಣ ಧ್ವನಿ ತೆಗೆದ ಎರಡು ಜನಪ್ರತಿನಿಧಿಗಳು, ಕುದುರೆಮುಖ ಗಣಿಗಾರಿಕಾ ಯೋಜನೆಯ ಸಂಸ್ಥೆ ಅನಧಿಕೃತವಾಗಿ `ಮಾರಿಕೊಂಡ’ ಜಾಗವನ್ನು ಮೂಡಬಿದ್ರೆಯ ಮೋಹನಾಳ್ವರು `ವಹಿಸಿಕೊಂಡ’ ವಿಚಿತ್ರ (ನೋಡಿ: ಸೈಕಲ್ ಸರ್ಕೀಟ್ ೧೩೩) ಮುಂತಾದ ಮಾತುಗಳನ್ನಾಡುತ್ತಿದ್ದಂತೆ ಕಾಲಪಾಲ (ಸೂರ್ಯ!) ಎಚ್ಚರಿಸಿದ. ಸಭೆ ಬರ್ಖಾಸ್ತು ಮಾಡಿ ರಾಯರು ಜೋಡುಮಾರ್ಗದತ್ತ, ನಾನು ಮಂಗಳೂರತ್ತ ಮುಖ ಮಾಡಿದೆವು. ನನ್ನದು ಮೊತ್ತದಲ್ಲಿ ಸುಮಾರು ಇಪ್ಪತ್ತೆಂಟು ಕಿಮೀ ಸವಾರಿಯಾದರೆ ರಾಯರದು ಹದಿನಾಲ್ಕು.

೧೧. `ಐ ರೈಡ್ ವಿತ್ ಇಂಡಿಯಾ’: (೬-೯-೨೦೧೫) ಈ ಘೋಷಣೆಯೊಡನೆ ಇಂದು ದೇಶದ ಉದ್ದಗಲಕ್ಕೆ ಬೆಳಿಗ್ಗೆ ನೂರಾರು ಕೇಂದ್ರಗಳಲ್ಲಿ ಸಾವಿರಾರು ಸೈಕಲ್ವಾಲಾರು ದಾರಿಗಿಳಿಯಲು ಕರೆ ಕೊಟ್ಟವರು ಸೈಕ್ಲಿಂಗ್ ಇಂಡಿಯಾ. ಅದನ್ನು ಸ್ಥಳೀಯವಾಗಿ (ಮಂಗಳೂರು) ನಡೆಸಿಕೊಟ್ಟವರು ಜ್ಯೋತಿ ಸೈಕಲ್ಸ್. ಇಲ್ಲಿ ಸೈಕಲ್ಲಿನ ಸರಳತೆ, ಆರೋಗ್ಯಪರತೆಯನ್ನು ದೇಶಭಕ್ತಿಯೊಡನೆ ಸಂಯೋಜಿಸಿದ್ದರು. ನಿನ್ನೆಯ ಮೊಸರು ಕುಡಿಕೆ ಉಳಿಕೆಗಳನ್ನು ಸ್ವಚ್ಛಗೊಳಿಸುವಂತೆಯೋ ಸೈಕಲ್ ಹಬ್ಬದ ಸಂಭ್ರಮಕ್ಕೋ ಮಳೆ ಐದು ಗಂಟೆಗೇ ಸುರಿದು ದಾರಿ ತೊಳೆದು, ಹವೆ ತಂಪು ಮಾಡಿತ್ತು. ಮಂಗಳೂರಿನ ವಾರ್ಷಿಕ ಮಹಾ ಸೈಕಲ್ ಉತ್ಸವ ಎನ್ನುವಂತೇ ಕಳೆದ ಏಳೆಂಟು ವರ್ಷಗಳಿಂದ ಡಿಸೆಂಬರಿನಲ್ಲಿ ಆರೆಕ್ಸ್ ಲೈಫ್ ನಡೆಸುತ್ತಿರುವ ಮಹಾಯಾನದ ಲೆಕ್ಕ ತೆಗೆದರೂ ಕನಿಷ್ಠ ಎರಡೂವರೆ ಸಾವಿರ ಸೈಕಲ್ಲಿಗರಿರುವ ನಗರವಿದು. (ನೋಡಿ: ಸೈಕಲ್ಪ್ರವಾಹಕ್ಕೀಡಾಯ್ತು ಮಂಗಳೂರು) ಆದರೆ ಇಂದು ಬಂದವರು ಹತ್ತಕ್ಕೂ ಒಂದು ಕಡಿಮೆ.

ಮಳೆಯ ನೆಪದಲ್ಲಿ ನಿಗದಿತ ವೇಳೆಯನ್ನು ಕಾಲು ಗಂಟೆ ಮುಂದೂಡಿ, ಆರೂಮುಕ್ಕಾಲಕ್ಕೆ ಕದ್ರಿ ಜ್ಯೋತಿ ಸೈಕಲ್ಲಿನ ಮಳಿಗೆಯಿಂದ ಹೊರಟೆವು. ಬೆಂದೂರು, ಕಂಕನಾಡಿ, ಮಾರ್ನಮಿ ಕಟ್ಟ, ಮಂಗಳಾದೇವಿ, ನೆಹರೂ ಮೈದಾನ, ಹಂಪನಕಟ್ಟ, ಕೊಡಿಯಾಲಬೈಲಿಗಾಗಿ ಮಹಾನಗರಪಾಲಿಕೆ ಕಛೇರಿ ಎದುರು ಮುಗಿಸಿದೆವು.

ಜ್ಯೋತಿ ಸೈಕಲ್ಲಿನವರ ಮೂವತ್ತು ದಿನಗಳ ಸ್ಪರ್ಧೆ – `ಟ್ರೆಕ್ ಮಂಗಳೂರು ಛಾಲೆಂಜ್’ನ ಆರನೇ ದಿನದ, ಅದೂ ಆದಿತ್ಯವಾರದ, ಮತ್ತೂ ತಂಪು ಹವೆಯ ಅವಕಾಶ ವ್ಯರ್ಥವಾಗದಂತೆ ಕೆಲವರು ಕೂಳೂರು, ತಣ್ಣೀರುಬಾವಿಗೆ ಲೆಕ್ಕ ಮುಂದುವರಿಸಿದರು. ಚಕ್ರಭಾರಿಗಳು ಉಡುಪಿ, ಕುಂದಾಪುರವನ್ನೇ ಲಕ್ಷ್ಯವನ್ನಾಗಿ ಚರ್ಚಿಸುತ್ತ ಮಿಂಚಿ ಮರೆಯಾದರು. ನಾನು ಥಣ್ಣಗೆ ಮನೆ ಸೇರಿದೆ.

೧೨. ಸೈಕಲ್ ಸುದ್ಧಿ, ನಗರ ಶುದ್ಧಿ! : (೩೧-೧೦-೨೦೧೫) ಜ್ಯೋತಿ ಸೈಕಲ್ಸಿನವರ `ಉಚಿತ ಸೇವಾ ಶಿಬಿರ’ದ ಮೊದಲ ಅಭ್ಯರ್ಥಿಯಾಗಿ ಇಂದು ನನ್ನ ಸೈಕಲ್ ಹಾಜರಿತ್ತು (ಸೀಟಿನ ಮೇಲೆ ನಾನೂ ಇದ್ದೆ!). ಚೆನ್ನೈ ಟಿಸಿಐ ಕಂಪೆನಿಯ ಸೆಂತಿಲ್ ಕುಮಾರ್ ಮತ್ತು ದಿಲ್ಲಿಬಾಬು ಸಜ್ಜಾಗಿ ಬಂದಿದ್ದರು. ನಿನ್ನೆಯೇ ಆರೇಳು ಜನ ಮುಂದಾಗಿಯೇ ಸೈಕಲ್ ಬಿಟ್ಟು ಹೋಗಿದ್ದರು. ಇಂದಿನ ಲೆಕ್ಕದಲ್ಲಿ ನಾನೇ ಮೊದಲಿಗ. ಅನಿಲ್ ಶಾಸ್ತ್ರಿ, ಹರೇಕೃಷ್ಣ ಮಹೇಶ್ವರಿ, ಅನಿಲ್ ಶೇಟ್ ರಾಯ್ಕರ್ – ಮಂಗಳೂರು ಸೈಕಲ್ಲಿಗರ ಸಂಘದ ಗೆಳೆಯರು ಬಂದು ಸೈಕಲ್ಲುಗಳನ್ನು ಬಿಟ್ಟು ಹೋದರು. ಎದುರಂಗಳದಲ್ಲಿ ತತ್ಕಾಲೀನ ಚಪ್ಪರ, ಡೀಸೆಲ್ ಎಂದೆಲ್ಲಾ ಸಜ್ಜುಗೊಳ್ಳುತ್ತಿದ್ದಂತೆ ಸುತ್ತ ಕಣ್ಣಾಡಿಸಿದೆ.

ನಮಗೆಲ್ಲ ಸೈಕಲ್ಲಿನಲ್ಲೇ ಬೆಂಗಳೂರು ಕಾಣಿಸಿದ ಕಾವೂರು ಪ್ರಸನ್ನ (ನೋಡಿ: ಬೆಂಗಳೂರಿಗೊಂದು ಸೈಕಲ್ ಮಹಾಯಾನ) ಬಂದಿದ್ದ. ಆತ ಸದ್ಯದ ಉತ್ತರೋತ್ತರ ಭಾರತದ ಮೋಟಾರ್ ಸೈಕಲ್ ಮಹಾಯಾನದ ಅವಸರದಲ್ಲಿ ವಿಶೇಷ ಟ್ಯಾಂಕ್ ಚೀಲ, ಮೊಣಕಾಲು ರಕ್ಷಕಗಳನ್ನು ತುರ್ತಾಗಿ ಖರೀದಿಸಿ ಓಡಿದ. ಇನ್ಯಾರೋ ಟೀಚರ್ರುಗಳು ಶಾಲೆಗೆ ಜಾರುಬಂಡೆ, ಉಯ್ಯಾಲೆ ಕ್ರಯ ಮಾಡಲು ಇಲ್ಲಿಗೆ ಬಂದಿದ್ದರು. ವ್ಯಾಯಾಮಕ್ಕಾಗಿ ಸ್ಥಗಿತ ಸೈಕಲ್ ಕೂಡಾ ಇಲ್ಲಿ ಸಿಗುವುದು ನನಗೆ ತಿಳಿದಿತ್ತು. ಇನ್ನೇನೆಲ್ಲಾ ಸಿಗುತ್ತಪ್ಪಾಂತ ಕ್ಯಾಮರಾ ಕಣ್ಣರಳಿಸಿದೆ. ಚಿಣ್ಣರ ತ್ರಿಚಕ್ರಿ, ಮೇಲೇರಿದಂತೆ ದ್ವಿಚಕ್ರಿಯಾದರೂ ಕಲಿಕೆ ಸಹಾಯಕ ಉಪಚಕ್ರಿ ಬಹುವಿಧಗಳಲ್ಲಿ ಮೆರೆದಿದ್ದುವು. ಆ ಬಣ್ಣ, ಅಲಂಕಾರಗಳ ಲೋಕ ಕಳಚಿಕೊಂಡರೆ ಮತ್ತೆ ಆಕಾಶವೇ ಮಿತಿ ಎನ್ನುವಂತೆ ದೊಡ್ಡವರ ಸೈಕಲ್ಲುಗಳ ಮಾದರಿಗಳು ವಿರಾಜಿಸಿದ್ದುವು. ಯಜಮಾನ ಗಣೇಶ್ ನಾಯಕ್ ದೀರ್ಘ ಪ್ರವಾಸೀ ಸೈಕಲ್ ಒಂದನ್ನು ತೋರಿಸಿದರು. ಓಟದ ಸೈಕಲ್ಲಿನ ನೋಟ, ಆದರೆ ಉಕ್ಕಿನ ಚೌಕಟ್ಟಿನಲ್ಲಿ ಸವಾರನಲ್ಲದೆ ಹೇರಿನ ಭಾರವನ್ನೂ ಹೊರುವ ದೃಢತೆ. ಹಿಂಚಕ್ರದ ಗುಂಭದೊಳಗೆ ಇಪ್ಪತ್ತು ಗೇರು ಮತ್ತು ಬಿರಿಯಡಗಿದ್ದರೆ, ಮುಂಚಕ್ರದ ಗುಂಭದೊಳಗೆ ಯಾವುದೇ ವಿಶೇಷ ಶ್ರಮ ಕೇಳದ ವಿದ್ಯುಜ್ಜನಕ. ಹಾಗೇ ಕಣ್ಣಾಡಿಸುತ್ತ ನಡೆದರೆ ಆನೆ ಸೊಂಡಿಲ ಗಾತ್ರದ ಚಕ್ರ ಹೊಂದಿದ `ಬೆಟ್ಟದಾಡಿ’ನಿಂದ ತೊಡಗಿ, ಬಳುಕು ಬಳ್ಳಿಯಂತೇ ತೋರುವ ಚಿರತೆಯೋಟದವರೆಗೂ ಸೈಕಲ್ಲುಗಳು; ಬೆಲೆಯಲ್ಲಿ ಎರಡೂವರೆ ಲಕ್ಷವೂ ಗಡಿಯಲ್ಲ!! ಇನ್ನು ಸವಲತ್ತು/ ರಕ್ಷಕಗಳನ್ನು ಎಣಿಸುತ್ತ ಹೋದರೆ ಹಿಂಚಿತ್ರ ಕೊಡುವ ಕನ್ನಡಿ, ಪ್ರತಿಫಲಕ, ಅಂಟುಚಿತ್ರ, ದೀಪ, ಗಂಟೆ, ನೀರ ಕ್ಯಾನು, ಬೀಗ, ಕೀಲೆಣ್ಣೆ, ಮಾರ್ಜಕ, ಹಲವು ನಮೂನೆಯ ಮಾಪಕಗಳು ಇತ್ಯಾದಿ ದೊಡ್ಡ ಪಟ್ಟಿ ಬಿಚ್ಚಿಕೊಳ್ಳುತ್ತದೆ. ಬರಿಯ ಸವಾರನ ರಕ್ಷಣೆಯ ಸಂಗತಿ ಹಿಡಿದರೆ ತಲೆ, ಗಂಟು, ಸೊಂಟ, ಹಸ್ತ, ಪಾದಕ್ಕೆಲ್ಲ ತೊಡವುಗಳಿವೆ. ಚಡ್ಡಿ ಬನಿಯನ್ನುಗಳ ಸೌಕರ್ಯ ಕೇಳಿದರೆ ಬೆವರು ಸುರಿಯಲೂ ಇಲ್ಲ, ಅಂಡು ಉರಿಯುವುದೂ ಇಲ್ಲ!

ಎಲ ಎಲಾ ಸರಳ ಸವಾರಿಗೆಂದು ಸೈಕಲ್ ಹಿಡಿದ ನಾನು ಇದೆಲ್ಲಿ ಕಳೆದು ಹೋದೆ ಎನ್ನುವಾಗ, ತಜ್ಞರು ನನ್ನ ಸೈಕಲ್ ಅಂಗಛೇದ ಮಾಡಿ, ಶುದ್ಧಿ ನಡೆಸಿದ್ದರು. ಕಚ್ಚುಗಾಲಿ, ಸರಪಳಿ, ಗೇರುಗಳ ನಡುವೆ ದೂಳಿನ ಕಣವೂ ಉಳಿಯದಂತೆ ಡೀಸೆಲ್ ಹಾಕಿ, ಬ್ರಷ್ ಚಲಾಯಿಸಿ, ಅಂತಿಮವಾಗಿ ಎಲ್ಲಕ್ಕೂ ಬಟ್ಟೆಯ ಉಪಚಾರ ಕೊಟ್ಟು ನವಚೇತನ ತುಂಬಿ ಬಿಟ್ಟರು. “ಒಮ್ಮೆಗೆ ಸೈಕಲ್ಲಿನ ಕೊಳೆ ಏನೋ ಕಳೆದರು. ಆದರೆ ಮತ್ತೆ ಮತ್ತೆ ಹತ್ತಿಕೊಳ್ಳುವ ಊರ ಕೊಳೆಗೇ…” ಎನ್ನುವಾಗ ಅಲ್ಲೇ ಬಂದಿದ್ದ ವಿಜಯವಾಣಿಯ ಪ್ರತಿನಿಧಿ ವಾಗ್ಳೆ ದಾರಿ ತೋರಿದರು.

ನವೆಂಬರ್ ಎಂಟು ಆದಿತ್ಯವಾರದಂದು ವಿಜಯವಾಣಿ, ಜ್ಯೋತಿ ಸೈಕಲ್ಸಿನ ಸಹಯೋಗದಲ್ಲಿ ಮಂಗಳೂರಿನ ಸ್ವಚ್ಛತೆ ಮತ್ತು ಸುರಕ್ಷಿತತೆಯ ಜಾಗೃತಿಗಾಗಿ ಕೇವಲ ಹನ್ನೆರಡೇ ಕಿಮೀ ಓಟದ ಮಹಾ ಸೈಕಲ್ ಸಮ್ಮೇಳನ ನಡೆಸುತ್ತಿದ್ದಾರೆ. ಹತ್ತರ ಪ್ರಾಯದಿಂದ ಹತ್ತತ್ತರ ಪ್ರಾಯದವರೆಗೂ ವಯೋಲಿಂಗ ಬೇಧವಿಲ್ಲದೆ ಸಾರ್ವಜನಿಕರ ಬೆಂಬಲ ಕೋರಿದ್ದಾರೆ. ಈ ಉಚಿತ ಅಭಿಯಾನಕ್ಕೆ ಜ್ಯೋತಿಯಲ್ಲೇ ಅಥವಾ ವಿಜಯವಾಣಿಯ ಕಚೇರಿಯಲ್ಲೂ ನಾಮ ನೊಂದಾಯಿಸಿದವರಿಗೆ ಕೊನೆಯಲ್ಲಿ ಉಪಾಹಾರದ ಆಕರ್ಷಣೆಯನ್ನೂ ಸೇರಿಸಿದ್ದಾರೆ. ಇಂದು ನಾಳೆಯ ಸೈಕಲ್ ಶುದ್ಧಿಗೂ ಮುಂದಿನವಾರದ ಊರ ಶುದ್ಧಿಯಲ್ಲೂ ನಾನಿದ್ದೇನೆ. ನೀವು? ನಿಮ್ಮ ಅಕ್ಕಪಕ್ಕದವರು? ಗೆಳೆಯರು?

೧೩.ಎ. ವಿಜಯವಾಣಿಯ ಸೈಕಲ್ ವಾಹಿನಿ: (೮-೧೧-೨೦೧೫)

ಸ್ವಚ್ಛ ಮತ್ತು ಸ್ವಸ್ಥ ಮಂಗಳೂರಿಗಾಗಿ ಇಂದು ಬೆಳಿಗ್ಗೆಯೇ ವಿಜಯವಾಣಿ ಪತ್ರಿಕೆ ಸಾರ್ವಜನಿಕರಿಗೆ ಒಂದು ಸಣ್ಣ ಸೈಕಲ್ ಅಭಿಯಾನ ಹೊರಡಿಸಿತ್ತು. ಆರೂವರೆಯ ಸುಮಾರಿಗೆ ಮಂಗಳಾ ಕ್ರೀಡಾಂಗಣದ ಎದುರಿನಲ್ಲಿ ಜನಪ್ರತಿನಿಧಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತಿನ ಹೊರೆ ಹೇರದೆ, ಅಭಿಯಾನಕ್ಕೆ ಧ್ವಜ ಚಾಲನೆ ನೀಡಿದರು. ಬಹುತೇಕ ಭಾಗಿಗಳಿಗೆ ವಿಜಯವಾಣಿ ಹಾಗೂ ಸಂದರ್ಭದ ಮಹತ್ವ ಸಾರುವ ಬನಿಯನ್ನು ವಿತರಿಸಿದ್ದರಿಂದ, ಹರ್ಷದ ಹಳದಿ ಹೊಳೆಯೇ ಹರಿದಂತೆ ಅಭಿಯಾನ ಮಣ್ಣಗುಡ್ಡೆ, ಕುದ್ರೋಳಿ, ರಥಬೀದಿ, ಗಣಪತಿ ಪಪೂ ಕಾಲೇಜು, ವಿವಿ ಕಾಲೇಜು, ರೈಲ್ವೇ ನಿಲ್ದಾಣ, ಅತ್ತಾವರ, ಗೋರಿಗುಡ್ಡಕ್ಕಾಗಿ ಜೆಪ್ಪು ಸೆಮಿನರಿಯಲ್ಲಿ ಒಮ್ಮೆ ವಿಶ್ರಮಿಸಿತು.

ಸಂಘಟಕರು ಉಚಿತವಾಗಿ ನೀರು, ಚಾಕೊಲೇಟ್ ಹಾಲು ವಿತರಣೆ ನಡೆಸಿದ್ದರು. ಇಲ್ಲಿ ಕೊನೆಯಲ್ಲಿ, ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯೂ ಇತ್ತು, ಇನ್ನೂ ಅದನ್ನು ಅರಿವಿಗೆ ತಂದುಕೊಳ್ಳದ ಮೂಢಮತಿಗಳಿಗಾಗಿ ಮೈಕಿನಲ್ಲಿ ಸ್ವಯಂ ಸೇವಕರೂ ಧಾರಾಳ ಹೇಳುತ್ತಲೂ ಇದ್ದರು.

ಸುಮಾರು ಹದಿನೈದು ಮಿನಿಟಿನ ವಿಶ್ರಾಂತಿ ಮುಗಿಸಿ ಮುಂದುವರಿದ ಅಭಿಯಾನ ಕಂಕನಾಡಿ, ಬಲ್ಮಠ ವೃತ್ತ, ಸಂತ ಏಗ್ನೆಸ್ ಕಾಲೇಜು, ಕದ್ರಿ ಮಾರುಕಟ್ಟೆ, ಮಲ್ಲಿಕಟ್ಟೆ, ಬಂಟರ ಹಾಸ್ಟೆಲ್, ಪೀವಿಯೆಸ್, ಮಹಾತ್ಮಗಾಂಧಿ ರಸ್ತೆಗಾಗಿ ಲೇಡಿಹಿಲ್ ವೃತ್ತ ಹಾದು ಒಟ್ಟಾರೆ ಸುಮಾರು ಹನ್ನೆರಡು ಕಿಮೀ ಕ್ರಮಿಸಿ, ಮಂಗಳ ಕ್ರೀಡಾಂಗಣದಲ್ಲಿ ಮಂಗಳ ಹಾಡಿತು.

ಅಲ್ಲಿ ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆ, ಭಾಗಿ ಸಂಖ್ಯೆಯನ್ನೇ ಅದೃಷ್ಟ ಚೀಟಿಯಾಗಿ ಪರಿಗಣಿಸಿ ನಡೆಸಿದ ಲಾಟರಿಯಲ್ಲಿ ಸ್ಮರಣಿಕೆಗಳ ಹಾಗೂ ಎರಡು ಸೈಕಲ್ಲುಗಳ ಬಹುಮಾನವನ್ನೂ ಭಾಗಿಗಳಿಗೆ ವಿತರಿಸಿದರು.

ಒಂದು ಸಾವಿರಕ್ಕೂ ಮಿಕ್ಕು, ಬಹುತೇಕ ಬಾಲರೇ ಇದ್ದ ಅಭಿಯಾನವನ್ನು ನಿರಪಾಯ ಹಾಗೂ ಶಿಸ್ತುಬದ್ಧವಾಗಿಸುವಲ್ಲಿ ಮಂಗಳೂರು ಸೈಕಲ್ಲಿಗರ ಸಂಘದ ಅನೇಕ ಸದಸ್ಯರು ಸ್ವತಃ ಸೈಕಲ್ಲೇರಿ ಜೊತೆಗೊಟ್ಟು ಶ್ರಮಿಸಿ ಸಂತೋಷಿಸಿದರು.

ಅಭಿಯಾನದ ಉದ್ದೇಶವನ್ನು ಪ್ರಸರಿಸುವಲ್ಲಿ ಘೋಷಣಾ ವಾಹನ, ರಕ್ಷಣೆಗಾಗಿ ಪೋಲಿಸ್ ಇಲಾಖೆ, ಸ್ವಚ್ಛತೆಗಾಗಿ ಸ್ಥಳೀಯ ಆಡಳಿತಗಳೆಲ್ಲ ಜತೆಗೊಟ್ಟದ್ದು ಸಮರ್ಪಕವಾಗಿಯೇ ಇತ್ತು. ಆದರೆ ಘೋಷಣೆಗಳು ಕೇಳದಂತೆ, ಭಾಗಿಗಳ ಸಹಜ ಹರ್ಷೋದ್ಗಾರಗಳು ಅಡಗುವಂತೆ ಭಾರೀ ಡ್ರಂ ಮೇಳ ಜತೆಗೊಟ್ಟದ್ದು ಸರಿಯಲ್ಲ. ಇದು ಅನಾವಶ್ಯಕ ಶಬ್ದ ಮಾಲಿನ್ಯವನ್ನು ಮಾಡುತ್ತದೆ ಎನ್ನುವುದನ್ನು ಸಂಘಟಕರು ಗಮನಿಸಿ, ಮುಂದಿನ ಅಭಿಯಾನಗಳಿಗೆ ನಿವಾರಿಸುವುದು ಉತ್ತಮ. ಅಭಿಯಾನ ಭಾಗಿಗಳಲ್ಲಿ ತುಂಬಿದ ಹುರುಪನ್ನು ಕೊನೆಯ ಸಭೆ ತುಸು ಇಳಿಸಿತು. ನೆರೆದಿದ್ದ ಭಾಗಿ-ಬಾಲರನ್ನು ಅದೃಷ್ಟಚೀಟಿಯ ಆಕರ್ಷಣೆ ಹಿಡಿದಿಟ್ಟರೆ, ಹೊರಗೆ ಕಾದಿದ್ದ ಹಿರಿಯರು ಮಕ್ಕಳ ಸ್ವಸ್ಥ ಮರಳಿಕೆಯನ್ನಷ್ಟೇ ಗಮನದಲ್ಲಿಟ್ಟಿದ್ದರು. ಅಂಥಲ್ಲಿ ಅದೆಷ್ಟು ದೊಡ್ಡ ವ್ಯಕ್ತಿಗಳಾದರೂ ವೇದಿಕೆಯಲ್ಲಿ ಸೇರಬಾರದು. (ಮೈಕ್ ಒಮ್ಮೆ ನನ್ನನ್ನೂ ವೇದಿಕೆಗೆ ಆಹ್ವಾನಿಸಿತ್ತು. ಅದೃಷ್ಟವಶಾತ್ ನನ್ನ ಸುತ್ತ ಯಾರೂ ಪರಿಚಿತರಿಲ್ಲವಾದ್ದರಿಂದ ನಾನು ತಪ್ಪಿಸಿಕೊಂಡೆ) ಹಾಗೊಮ್ಮೆ ಸಂಘಟಕರ ಒತ್ತಡಕ್ಕೆ ವೇದಿಕೆಯ ಮೇಲೆ ಬಂದರೂ ಅವರು ಅಭಿಯಾನದ ಪೂರಕ ಚಟುವಟಿಕೆಗಳಿಗೆ (ಚೀಟಿ ಎತ್ತುವುದು, ಬಹುಮಾನ ವಿತರಿಸುವುದು) ಮಾತ್ರ ಸೀಮಿತಗೊಳ್ಳಬೇಕು. ಭಾಷಣ ಮಾಡಲೇಬಾರದು.

ಇಂದಿನ ಶಿಕ್ಷಣ `ಅವ್ಯವಸ್ಥೆಯಲ್ಲಿ’ ಕನ್ನಡ ಮೂಲೆಪಾಲಾಗಿರುವುದು ನಿಜ. ಆದರೆ ಇನ್ನೂ ನಮ್ಮಲ್ಲಿ ಸಂವಹನ ಕನ್ನಡಕ್ಕೆ ದೂರವಾದ ಮಕ್ಕಳ ಸಂಖ್ಯೆ ದೊಡ್ಡದಿಲ್ಲ. ಮತ್ತೊಂದು ಗಮನಿಸಬೇಕಾದ ಅಂಶ, ಇಡಿಯ ಅಭಿಯಾನ ನಡೆಸಿದ್ದೇ – ವಿಜಯವಾಣಿ, ಒಂದು ಕನ್ನಡದ ಪತ್ರಿಕೆ. ಸಹಜವಾಗಿ ವೇದಿಕೆಯೇನೋ ಕನ್ನಡದಲ್ಲೇ ಸಜ್ಜುಗೊಂಡಿತ್ತು. ಆದರೆ ಮುಖ್ಯ ನಿರ್ವಹಣೆ ಮಾತ್ರ ಇಂಗ್ಲಿಷಿನಲ್ಲಿ ನಡೆದದ್ದು ಸರಿಯಲ್ಲ.

೧೩.ಬಿ. ಜೊನಾಥನ್ ಮತ್ತು ಸೈಕಲ್: (೨೮-೧೧-೨೦೧೫) ನಿನ್ನೆ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಇಬ್ಬರು ಹುಡುಗರು ಸಿಕ್ಕಿದ್ದರು. ಒಬ್ಬ “ಅಂಕಲ್, ಸೈಕಲ್ಗೆಷ್ಟು?”
ನಾನು “ನಿನ್ನಂದಾಜು ಹೇಳು, ನಾನು ಸರಿಮಾಡ್ತೇನೆ.”
“ಟ್ವೆಂಟಿ ತೌಸಂಡಾ?”
“ಅಲ್ಲ, ಮತ್ತೆ ಆರು ಹೆಚ್ಚು…”
ಹುಡುಗ ರಪಕ್ಕ ಪ್ರತಿಕ್ರಿಯಿಸಿದ, “ಅಷ್ಟಕ್ಕೆ ಒಂದ್ ಗಾಡಿನೇ (ಮೋಟಾರ್ ಸೈಕಲ್) ತೆಗೀಬಹುದಿತ್ತಲ್ಲ ಅಂಕಲ್.”

ಅದನ್ನೇ ಯೋಚಿಸುತ್ತಾ ಇಂದು ಸೈಕಲ್ಲೇರಿದೆ. ಬಿಜೈ, ಕುಂಟಿಕಾನ, ಕೊಟ್ಟಾರ, ಕೂಳೂರು, ಪಣಂಬೂರು ವೃತ್ತದಲ್ಲಿ ಎಡ ಹೊರಳಿದೆ. ನೇರ ಕಡಲಕಿನಾರೆಯ ಮೀನುಗಾರಿಕಾ ದಾರಿ ಸೇರುವ ಅಂದಾಜು. ಆದರೆ ಪಣಂಬೂರು ರೈಲ್ವೇ ನಿಲ್ದಾಣದ ಸಮಸೇತಿನ ಗೇಟಿಕ್ಕಿ, ಕಿಲೋಮೀಟರ್ ಉದ್ದಕ್ಕೆ ಕಲ್ಲಿದ್ದಲು ಸಾಗಣೆಯ ಭಾರೀ ಬಕೆಟ್ಟುಗಳ ಮೆರವಣಿಗೆ ನಡೆದಿತ್ತು. ಅನಿವಾರ್ಯ ಐದು ಮಿನಿಟು ನಿಂತಾಗ ನನ್ನ ಯೋಚನಾ ಸರಣಿಯಲ್ಲಿ ಇಣುಕಿದಾತ ಜೊನಾಥನ್!

ಎರಡು ವಾರದ ಹಿಂದೆ ಸೈಕಲ್ ಸನ್ಮಿತ್ರ ಅನಿಲ್ ಶೇಟ್ ಚರವಾಣಿಯಲ್ಲಿ ಕಿರುಸಂದೇಶ ಕಳಿಸಿದರು “ಇಲ್ಲೊಬ್ಬ ಜೊನಾಥನ್, ಬೋಸ್ಟನ್ ವಿವಿ ನಿಲಯದ ಸಂಶೋಧನಾ ಪ್ರಾಧ್ಯಾಪಕ. ಭಾರತದಲ್ಲಿ ಸೈಕಲ್ ಸಂಸ್ಕೃತಿಯ ಅಧ್ಯಯನ ಅವರಾಸಕ್ತಿ. ನಮ್ಮೊಡನೆ ಅವರ ಭೇಟಿಗೆ ಬನ್ನಿ.” ಎಂಪೈರ್ ಮಾಲಿನ ಕಾಫಿಡೇ ಮೇಜಿನೆದುರು ಸುಮಾರು ಒಂದೆರಡು ಗಂಟೆಗಳುದ್ದಕ್ಕೆ ನಾವಾರೇಳು ಮಂದಿ, ತರುಣ ಪ್ರೊಫೆಸರಿಗೆ ಒದಗಿದೆವು. ಪರ್ವತಾರೋಹಿಯಾದ ನಾನು ಸೈಕಲ್ ಆಯ್ದುಕೊಂಡ ಬಗ್ಗೆ ಅವರು ವಿಚಾರಿಸಿದರು. “ಮನುಷ್ಯ ಮಿತಿಯಲ್ಲಿ ಗರಿಷ್ಠ ಅಂತರ ಸಾಧಿಸಲು ಅತ್ಯಂತ ಸುಲಭ ಹಾಗೂ ಸರಳ ಯಂತ್ರ ಸೈಕಲ್” ಎಂದೇ ನನ್ನ ಭಾವನೆಯನ್ನು ವಿಸ್ತರಿಸಿದ್ದೆ. ಇಂದಿಲ್ಲಿ ನಡೆದು ಪೂರೈಸದ ದೂರವನ್ನು ಮುಟ್ಟಿಸಿದ್ದು ಸೈಕಲ್. ಮುಚ್ಚಿದ ಗೇಟಿನೆದುರು ಕಳೆದ ಸಮಯವನ್ನು ನನಗೆ ಕತ್ತಲೆಗೆ ಮುನ್ನ ಹೊಂದಿಸಿಕೊಡುವ ಸಾಧನ ಸೈಕಲ್. ವಿಶ್ಲೇಷಣೆಗಳಿಗೆ ಅಷ್ಟಾಗಿ ತಲೆ ಕೊಡದವರು, “ಮಂಗಳೂರಿನಿಂದ ಪುಡಿಗಾಸಿನ ಟಿಕೆಟ್ ದರದಲ್ಲಿ ಪಣಂಬೂರು ವೃತ್ತಕ್ಕೆ ಎಷ್ಟೂ ಬಸ್ಸು ಸಿಗುತ್ತವೆ” ಅನ್ನಬಹುದು. ಹಾಗೇ ಈ ಒಳದಾರಿಗಳ ಸುತ್ತಾಟಕ್ಕೆ ಕನಿಷ್ಠ ವೆಚ್ಚದ ಸೌಕರ್ಯ “ವಟವೃಕ್ಷವಿಲ್ಲವೇ” ಎಂದು ಉದ್ಗರಿಸಿಯಾರು. ಆದರೆ ಸೈಕಲ್ ಸವಾರನಿಗೆ ಆ ಎಲ್ಲ ವೆಚ್ಚವೂ ನಿವ್ವಳ ಉಳಿತಾಯ. ಮತ್ತೆ ಸೈಕಲ್ ಸವಾರಿಯಿಂದ ಗಳಿಸಿದ ಅನುಭವ, ಆರೋಗ್ಯಭಾಗ್ಯ ಹೆಚ್ಚುವರಿ ಲಾಭ (ಬೋನಸ್) ಎಂದವರಿಗೆ ಹೇಳುವವರು ಯಾರು!

ಗೇಟು ಮುಕ್ತಿಯೊಡನೆ ಮುಂದುವರಿದಾಗ “ಮನೆಗೆಲಸದವರಿಗೆ ಕನಿಷ್ಠ ವೇತನ ಹತ್ತು ಸಾವಿರ” ಇಂದಿನ ಪತ್ರಿಕಾ ವರದಿ ಒಮ್ಮೆಗೆ ನೆನಪಿಗೆ ಬಂತು. ಆದರಿಲ್ಲಿ ಭೂತಾಯಿ ತನ್ನ ನಾಲ್ಕು ದಿನದ ಕೂಸು – ಮನುಷ್ಯ, ಮಾಡುತ್ತಿರುವ ಹೇಸಿಗೆಯನ್ನು ಪೂರ್ಣ ಉಚಿತವಾಗಿಯೇ ತೊಳೆಯುತ್ತಾಳೆ. ಆದರೆ ಮನುಷ್ಯ ಕಾಲಮಾನದಲ್ಲಿ ಹೇಳುವುದಿದ್ದರೆ ಇದು ಹಲವು ಶತಮಾನಗಳ ಹೊರೆ. ಕೆಲಸ ಮುಗಿದದ್ದನ್ನು ನೋಡಲು `ಮಗು’ ಉಳಿದಿರುತ್ತದೋ ಸಂಶಯವಿದೆ. ನಾನು ಹೊಸದಾಗಿ ಹೇಳಬೇಕೇ? ಕಡಲ ಕಿನಾರೆಯ ದಾರಿಯಲ್ಲೇ ನಾನು ಹೊಸಬೆಟ್ಟಿನ ಗಡಿಯವರೆಗೂ ಪೆಡಲಿದೆ. ನಿರಂತರ ಮಗುಚುವ ಕಡಲ ಅಲೆಗಳು ವೈವಿಧ್ಯಮಯ ಕಸದ ಕುಪ್ಪೆಗಳನ್ನು ಹಿಂಚುಮುಂಚು ಕುಣಿಸಿ ಒಯ್ಯುತ್ತಿತ್ತು, ದುರ್ನಾತದ ಅಲೆಗಳನ್ನು ಸೋಲಿಸಲು ಹೆಣಗುತ್ತಲೇ ಇತ್ತು. ಆ ಕೊನೆಯಲ್ಲಿ ನಾನು ಮತ್ತೆ ಹೆದ್ದಾರಿಗೇ ಹೊರಳಿದೆ.

ಸಂಜೆಯ ವಾಹನ ಸಮ್ಮರ್ದದ ಎಡೆಯಲ್ಲೂ ಉಡುಪಿ-ಮಂಗಳೂರು ಎಕ್ಸ್ಪ್ರೆಸ್ಸುಗಳು ಕಿವಿ ಕತ್ತರಿಸಿ, ದಾರಿ ಕದಿಯುತ್ತಿದ್ದವು. ಮಿನಿಟಿಗೊಮ್ಮೆ ನನ್ನನ್ನು ಹಿಂದಿಕ್ಕಿ ಧಾವಿಸಿದರೂ ಮತ್ತೆ ನೂರು ಮೀಟರಿನಲ್ಲಿ ನನ್ನದೇ ದಾರಿ ಅಡ್ಡಗಟ್ಟಿ ಗಿರಾಕಿ ಮಾಡುತ್ತಲೇ ಕಾಡುತ್ತಿದ್ದವು ಸಿಟಿ ಬಸ್ಸುಗಳು. ಆದರೂ ಹೊಸಬೆಟ್ಟಿನ ಕೊನೆಯಲ್ಲಿ ಸಿಕ್ಕ ಸಿಟಿ ಬಸ್ಸನ್ನು ಕೊಟ್ಟಾರದ ಕೊನೆಯಲ್ಲಿ ನಾನು ಹಿಂದಿಕ್ಕಿದ ಗರ್ವದಲ್ಲೇ ಮಲೆತು ಕುಂಟಿಕಾನದತ್ತ ಮುಂದುವರಿದೆ. ಜೊತೆಗೇ ಬಸ್ ಟಿಕೆಟ್ಟಿನ ಮೇಲೆ ಉಳಿಸಿದ ವೆಚ್ಚದ ಲೆಕ್ಕವೂ ತಲೆಗೆ ಮರಳಿ ಬಂತು. ಆಗ ಅಷ್ಟೇ ಸಹಜವಾಗಿ ಹಿಂದೆಲ್ಲೋ ಕೇಳಿದ ನಗೆಹನಿಯೂ ನೆನಪಾಯ್ತು.

ಜುಗ್ಗನ ಮಗ ಏದುಸಿರು ಬಿಡುತ್ತ ಮನೆಗೋಡಿ ಬಂದನಂತೆ. “ಅಪ್ಪಾ ಸಿಟಿ ಬಸ್ಸಿನ ಹಿಂದೋಡಿ ಬಂದೆ. ಟಿಕೆಟ್ ಛಾರ್ಜ್ ಉಳಿಸಿದೆ!” ಜುಗ್ಗ ಗೊಣಗಿದನಂತೆ “ರಿಕ್ಷಾನೋ ಕಾರೋ ಹಿಂಬಾಲಿಸಬೇಕು ಮಗಾ. ಉಳಿತಾಯ ಹೆಚ್ಚುತ್ತದೆ!” ಅಷ್ಟೇ ಸಹಜವಾಗಿ, ಮೊದಲು ಉಲ್ಲೇಖಿಸಿದ ಶಾಲಾಬಾಲಕನ ನೆನಪು ಮರುಕಳಿಸಿತು. ಕಾಲ್ಪನಿಕ ಸುಖದ ಬೆನ್ನು ಹತ್ತಿದರೆ ಮನುಷ್ಯಮಿತಿಗಳೆಲ್ಲ ಯಂತ್ರ ಪಾರಮ್ಯದಲ್ಲಿ ಕಳೆದುಹೋಗುವುದು ಖಂಡಿತ. ಸೂರ್ಯನಿನ್ನೂ ತೆಂಗಿನ ತೋಳುಗಳಲ್ಲಿ, ಮೋಡದ ಹಾಸುಗೆಯಲ್ಲಿ ಆಡುತ್ತಿದ್ದಂತೆ ನಾನು ಮನೆ ಸೇರಿಕೊಂಡೆ.

೧೪. ಜಾಣನಗರಿಯಲ್ಲಿ ಸೈಕಲ್ಲಿಗೆ ಪಾಲು ಕೊಡಿ!: (೨೯-೧೧-೨೦೧೫) ಬೆಳಿಗ್ಗೆ ಆರೂವರೆಯಿಂದ ಸುಮಾರು ಎಂಟೂವರೆಯವರೆಗೊಂದು ಸೈಕಲ್ ಅಭಿಯಾನದಲ್ಲಿ ಭಾಗಿಯಾದೆ. ಮಂಗಳೂರು ಜಾಣನಗರಿಯಾಗುವಾಗ ಸೈಕಲ್ ಸವಾರಿಗೆ ಓಣಿ, ಸೌಕರ್ಯ ಮರೆಯಬೇಡಿ ಎಂಬುದು ಸುಮಾರು ಮೂವತ್ತೈದು ಮಂದಿ ಸವಾರರ ಅಭಿಯಾನದ ಒಕ್ಕೊರಲ ಧ್ವನಿ. ಸೈಕಲ್ ಅಭಿಯಾನಕ್ಕೆ ಧ್ವಜ ಬೀಸಲು ಜಿಲ್ಲಾ ಪೋಲಿಸ್ ವರಿಷ್ಠರೇ ಬಂದಿದ್ದರು. ಇಂದಿನ ಸೈಕಲ್ ಅಭಿಯಾನದ ಧ್ವನಿಯನ್ನು ಪ್ರತಿನಿಧಿಯೋರ್ವರು ನಾಳೆಯೇ ಮನವಿ ಪತ್ರದ ಮೂಲಕ ಜಿಲ್ಲಾ ವರಿಷ್ಠರಿಗೆ ಮುಟ್ಟಿಸುವ ಮಾತೂ ಬಂತು. ಅಭಿಯಾನ ಮಹಾನಗರಪಾಲಿಕೆಯ ಕಛೇರಿ ಎದುರಿನಿಂದ ಕೂಳೂರು, ತಣ್ಣೀರುಬಾವಿ ತಂಗುದಾಣದವರೆಗೆ ವಿರಾಮದಲ್ಲಿ ಪೆಡಲಿ ಮರಳಿತು.

`ಸ್ಮಾರ್ಟ್ ಸಿಟಿ’ – ಪೂರ್ಣ ವ್ಯಾಖ್ಯಾನಕ್ಕಿನ್ನೂ ಒಳಗಾಗದ ಒಂದು ರಮ್ಯ ಕಲ್ಪನೆ ಮಾತ್ರ. ಎರಡು ತಿಂಗಳ ಹಿಂದೆ ಈ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಸಭೆಗೆ ನನ್ನ ಮಾವ, ಹಿರಿಯ ವಕೀಲ – ಎ.ಪಿ. ಗೌರೀಶಂಕರ, ಜವಾಬ್ದಾರಿಯುತ ನಾಗರಿಕನಾಗಿಯೇ ಹೋಗಿದ್ದರು. ಈ ವಲಯದ ಭೂದಾಖಲೆಗಳನ್ನು ಅತಿಯಾಗಿ ಗೊಂದಲಿಸಿರುವ ಮೂಲಗೇಣಿ ಹಕ್ಕನ್ನು ರದ್ದುಪಡಿಸುವ ಕಾರ್ಯಾಚರಣೆಯಲ್ಲಿ ಪೂರ್ಣ ತಾತ್ತ್ವಿಕ ನಾಯಕತ್ವವನ್ನು ಗೌರೀಶಂಕರ ವಹಿಸಿ, ಯಶಸ್ಸು ಕಾಣಿಸಿದ್ದಾರೆ. “ಇನ್ನೂ ಬಾಕಿಯಿರುವ ಅದರ ಅನುಷ್ಠಾನವನ್ನು ಗಮನದಲ್ಲಿಟ್ಟುಕೊಂಡು ಜಾಣನಗರಿ ರೂಪುಗೊಳ್ಳಬೇಕು” ಎಂಬ ಇವರ ಸಲಹೆ ಅಲ್ಲಿ ಕಿವುಡು ಕಿವಿಗಳ ಮೇಲೇ ಬಿತ್ತಂತೆ. ಇನ್ನು ಸೈಕಲ್ ಓಣಿ ಕೊಡಿ ಎಂಬ ನಮ್ಮ ಮನವಿ ನಿರ್ಧಾರಗಳ ಮೆಟ್ಟಿಲು ಏರಬಲ್ಲುದೋ ಜಾರಿ ಕಸದಬುಟ್ಟಿಯಲ್ಲಿ ವಿಶ್ರಮಿಸುತ್ತದೋ ಕಾಲವೇ ಹೇಳಬೇಕು.

ನವಮಂಗಳೂರು, ಎಮ್ಮಾರ್ಪೀಯೆಲ್, ಜೀಯೆಮ್ಮೇಯಾರ್ ಮುಂತಾದ `ಭುವಿಯ ಸ್ವರ್ಗ’ಗಳ ಕನಸಿಗಾಗಿ ಅತಂತ್ರವಾಗಿ ಒತ್ತರಿಸಲ್ಪಟ್ಟವರ ನೆಲೆ ತಣ್ಣೀರುಬಾವಿ, ಬೆಂಗ್ರೆ. ಅವರನ್ನು ಇದ್ದಲ್ಲೂ ಸ್ಥಿರವಾಗಲು ಬಿಡದೇ (ಅಪಶಬ್ದಿನೀ ಕೋಶಕ್ಕೆ ಕೊಡುಗೆಗಳನ್ನು ಗಮನಿಸಿ) ಪ್ರಸವೋದ್ಯಮ (ಪ್ರವಾಸೋದ್ಯಮ), ಗುಳಿಚೆಂಡಾಟ (ಗಾಲ್ಫ್), ಕುಟ್ಟಿದೊಣ್ಣೆ ಮೈದಾನ (ಕ್ರುಕೆಟ್, ಅಲ್ಲಲ್ಲ ಕ್ರಿಕೆಟ್ ಸ್ಟೇಡಿಯಂ), ಟ್ರೀಪೋರ್ಕ್ (ಟ್ರೀ ಪಾರ್ಕ್), ಸೇನಾನೆಲೆ ಎಂದು ದಿನಕ್ಕೊಂದು ಹೆಸರಿನಲ್ಲಿ ಎತ್ತಂಗಡಿಯ ಕರಿನೆರಳು ಕಾಡುತ್ತಲೇ ಇದೆ. ಅಲ್ಲಿಗೆ `ಜಾಣನಗರಿ’ಯ ಹಕ್ಕೊತ್ತಾಯದ ಸೈಕಲ್ ಅಭಿಯಾನ ಹೋದದ್ದೇ ದೊಡ್ಡ ವಿರೋಧಾಭಾಸ. ಕನಿಷ್ಠ ಅಭಿಯಾನ ಭಾಗಿಗಳ ತಿಳುವಳಿಕೆಯನ್ನಾದರೂ ಹೆಚ್ಚಿಸುವ ಕ್ರಮವಾಗಿ ನಾನು ಬೆಂಗ್ರೆ ಸುತ್ತು ಮುಗಿಸುವ ಸೂಚನೆ ಕೊಟ್ಟೆ. ಸಂಘಟಕರು ಸ್ವೀಕರಿಸದೆ ಲೆಕ್ಕದ ಸೈಕಲ್ ಅಭಿಯಾನ ಮುಗಿಸಿದ್ದರು. ಮಾಧ್ಯಮದ ಮಿತ್ರ ವೇಣುವಿನೋದ್ ಒಬ್ಬರು ಇದನ್ನು ಗ್ರಹಿಸಿ, ಕನಿಷ್ಠ ಕುದ್ರು, ಜೀಯೆಮ್ಮೇಯಾರ್ ನೆಲೆಗಳನ್ನಾದರೂ ನನ್ನ ಜೊತೆ ಬಂದು ನೋಡಿದರು.

ಇವೂ ಒಂದು ಕಾಲದಲ್ಲಿ ಸಾರ್ವಜನಿಕಕ್ಕರ್ಪಿಸಿದ ಭವ್ಯ ಕನಸುಗಳು, ಇಂದು ಯಾರ್ಯಾರದೋ ಖಾಸಾ ಆಸ್ತಿಗಳು! ನಂಬಲರ್ಹವಾದ ವದಂತಿಗಳ ಪ್ರಕಾರ ಜಾಣನಗರಿಯ ಸವಲತ್ತುಗಳೂ ಹೀಗೇ ನಗರದ `ಹೆಚ್ಚು ಸಮಾನ’ರ ವಲಯದೊಳಗೇ ಲೀನವಾಗುವುದನ್ನು ಮುನ್ಸಾರುತ್ತಿವೆ. ಘನಘೋರ ತಪಸ್ಸಿನಲ್ಲಿ ಯಶಸ್ವಿಯಾದ ಕುಂಭಕರ್ಣ ವರಪಡೆಯುವಲ್ಲಿ ಅಜೇಯತ್ವ ಕೇಳಿದ್ದ. ಒಂದಕ್ಕೊಂದು ಉಚಿತವಾಗಿ ಮಹಾನಿದ್ರೆಯನ್ನೂ ಪಡೆದದ್ದು, ಜೀವಕ್ಕೆ ಎರವಾದದ್ದು ಓದಿ ಮರೆಯುವ ಪುರಾಣವಲ್ಲ. ಕೂಳೂರಿನಲ್ಲಿ ವೇಣು ಎಡಕ್ಕೆ ನಾನು ಬಲಕ್ಕೆ ಹೊರಳಿ ನಂನಮ್ಮ ಮನೆ ಸೇರುವುದರೊಂದಿಗೆ ದಿನದ ಸೈಕಲ್ ಸರ್ಕೀಟೂ ಮುಗಿದಿತ್ತು.

೧೫. ನಿಶಾಚರಿ ಸೈಕಲ್: (೨೦-೧೨-೨೦೧೫) ಇಂದು ನಾಳೆಗಳ ನಡುವಣ ಸೇತಾಗುವ ಉಮೇದಿನಲ್ಲಿ ನಿನ್ನೆ ರಾತ್ರಿ ಹನ್ನೊಂದೂವರೆಗೆ ಸೈಕಲ್ಲೇರಿದೆ.

ನಾನೇರಿಸಿದ ಮುಕ್ಕಾಲು ಪ್ಯಾಂಟಿಗೆ ಸಂವಾದಿಯಾಗಿ ಆಗಸದಲ್ಲಿ ಚಂದ್ರನೂ ಕಾಲು ಕಳೆದುಕೊಂಡೇ (ದಶಮಿ) ಕಾಣಿಸಿದ್ದ! ವ್ಯವಸ್ಥೆಯಿಲ್ಲದ ಟ್ಯೂಬು, ನಿಯಾನು, ಸೋಡಿಯಮ್ಮು, ಕರೆಕಂಬ, ಇತ್ತಲೆಯ ನಡುಗಂಬಗಳೆಂದು ನೂರೆಂಟು ಸಾರ್ವಜನಿಕ ದೀಪಗಳು, ಮನೆ ಮಳಿಗೆಗಳ ವೈಭವದ ಹೆಸರಿಗೊಂದು, ಗೇಟಿಗೆರಡು, ಗೋಡೆಗೆಂಟು, ಗಿಡದ ಗಂಟುಗಂಟಿಗೂ ಕಟ್ಟಿದ ದೀಪದ ನೆಂಟೆಲ್ಲ ವ್ಯರ್ಥ ರಸ್ತೆಗೆ ಚೆಲ್ಲಾಡಿದ್ದರೂ ನನ್ನ ಬಂದೋಬಸ್ತಿಗೆ ಎದುರು ಏಕಧಾರೆಯ ಬಿಳಿ, ಸೀಟಿನಡಿಗೆ ಪುಕುಪುಕೆನ್ನುತ್ತಿದ್ದ ಕೆಂಪು ದೀಪ ಹಚ್ಚಿಕೊಂಡಿದ್ದೆ. ನಾನು ಮಂಗಳೂರು ಮಹಾನಗರ ಪಾಲಿಕೆಯ ಕಛೇರಿಯೆದುರು ತಲಪುವಾಗ ದೀಪಾವಳಿ! ಮಂಜುಗವಿದ ರಸ್ತೆಗಿರುವ ಭರ್ಜರಿ ನಾಲ್ಕು ದೀಪ ಎದುರು, ತಾನು ವಿಶಿಷ್ಟವೆಂದು ಇತರ ವಾಹನಗಳಿಗೆ ಕುಣಿಕುಣಿದು ಹೇಳುವ ನಾಲ್ಕು ಕೆಂದೀಪಗಳನ್ನು ಎರಡು ಪಕ್ಕಗಳಲ್ಲಿ ಹೊತ್ತ ಗಣೇಶ್ ನಾಯಕರ ಕಪ್ಪು ಕಾರು, ನಿಶಾಸಂಚಾರಕ್ಕೆ ಮುಂದಾಳಾಗಿ ಸಜ್ಜುಗೊಂಡಿತ್ತು. ಹಿಂಬಾಲಿಸಲು ತರತರದ ದೀಪ ಜಾಹೀರುಪಡಿಸುವ ವಿವಿಧ ವಿನ್ಯಾಸ, ಗಾತ್ರಗಳ ಸುಮಾರು ಎಪ್ಪತ್ತು ಸೈಕಲ್ಲುಗಳ ಜಮಾವಣೆ ನಡೆದಿತ್ತು. ಹನ್ನೆರಡರ ಪೋರನಿಂದ ಅರವತ್ತು ಮೀರಿದ ಮರುಳನವರೆಗೆ ಲಿಂಗಬೇಧವಿಲ್ಲದ ಸವಾರರ ಸಂಭ್ರಮವೂ ಭರತದ ಸಮುದ್ರದಂತೆ “ಹೊರಡು” ನಿಶಾನಿ ಮೀರಲು ಹೊಂಚಿತ್ತು.

ನಿನ್ನೆಯ ಲೆಕ್ಕಕ್ಕಾದರೆ ರಾತ್ರಿ ಸುಮಾರು ಹನ್ನೆರಡು ಗಂಟೆ ಹತ್ತು ಮಿನಿಟಿಗೆ, ಇಂದಿನ ಲೆಕ್ಕಕ್ಕಾದರೆ ಬೇಏಏಳಗ್ಗೆ ಹತ್ತು ಮಿನಿಟಿಗೆ ಸರ್ಕೀಟ್ ಹೊರಟಿತು. ಆರಂಭದಲ್ಲಿ ಲೇಡಿ ಹಿಲ್ ವೃತ್ತವಾಗಿ ಉಡುಪಿಮುಖಿ. ಕೊಟ್ಟಾರದಲ್ಲಿ ಹೆದ್ದಾರಿ, ಕೂಳೂರು ಸಂಕ ಕಳೆದದ್ದೇ ಹಿಮ್ಮುರಿ ತಿರುವು – ಮತ್ತೆ ಲೇಡಿ ಹಿಲ್. ವೇಗಿ ನಿಧಾನಿಗಳ ಸಮನ್ವಯಕ್ಕೆ ಮಿನಿಟೈದು ವಿಶ್ರಾಂತಿ.

ಮಣ್ಣಗುಡ್ಡೆ, ಗುದಾಮು ರಸ್ತೆ, ಮಹಾತ್ಮಾಗಾಂಧಿ ರಸ್ತೆ, ಪಿವಿಯೆಸ್ ಮೂರ್ದಾರಿ ಸಂಧಿ, ಕುದ್ಮಲ್ ದಾರಿ, ಬಂಟರ ಹಾಸ್ಟೆಲ್, ಮಲ್ಲಿಕಟ್ಟೆ, ನಂತೂರು, ಪದವು, ಕದ್ರಿ ಉದ್ಯಾನ, ಆಕಾಶವಾಣಿ, ಗುಡ್ಡೆಯಿಳಿದು ಬಿಜೈವೃತ್ತ ಸೇರುವಾಗ ತಂಡದ ತರತಮ ಮತ್ತೆ ಅಪರಾತಪರವಾಗಿತ್ತು. ಮಟ್ಟಗೋಲು ಎಳೆಯಲು ಮತ್ತೆ ಹತ್ತು ಮಿನಿಟಿನ ವಿರಾಮ. ಭಾರತೀ ನಗರ, ಪಿಂಟೋದಾರಿ, ಪಶುವೈದ್ಯಾಲಯ, ಜೈಲಿಗಾಗಿ ಮತ್ತೆ ಪೀವಿಯೆಸ್ ಮೂರ್ದಾರಿ ಸಂಧಿ. ಈಗ ಬಲ ಹೊರಳಿ ಕಾರ್ನಾಡು ದಾರಿಯಲ್ಲಿ ನಗರದ ಹೃದಯ – ಹಂಪನಕಟ್ಟ.

ಹಗಲು ಸರಳ ಬೇಲಿಯಲ್ಲಿ ಪಾದಚಾರಿಗಳನ್ನಷ್ಟೇ ಅಡ್ಡ ಹಾಯಲೊಪ್ಪುವ ವೃತ್ತನಿಯಮವನ್ನು ಧಿಕ್ಕರಿಸಿ ನುಸುಳಿ, ಫಳ್ನೀರು ದಾರಿಯಲ್ಲಿ ಕಂಕನಾಡಿ ವೃತ್ತ ಕಳೆಯುವಾಗ ಮತ್ತೆ ಉದ್ಭವಿಸಿತ್ತು ತಂಡದ ಅಸ್ಥಿರತೆ. ಗಟ್ಟಿ ಮಾಡಲು ಮುಲ್ಲರ್ ಆಸ್ಪತ್ರೆ ಎದುರು ಮರುಗುಂಪನ (ರೀಗ್ರೂಪ್)! ಜೆಪ್ಪು ಮಾರ್ನಮಿ ಕಟ್ಟೆ ಕಳೆದು, ಅತ್ತಾವರದ ಗಲ್ಲಿ ಹಿಡಿದು, ರೈಲ್ವೇ ನಿಲ್ದಾಣದೆದುರು ಬಲ ಹೊರಳಿ ಮತ್ತೆ ಹಾಗೂ ಕೊನೆಯದಾಗಿ ಹಂಪನಕಟ್ಟದ ಆಸ್ಪತ್ರೆಯ ಎದುರು ತಂಡ ಒಂದು ಮಾಡುವ ಚಿಕಿತ್ಸೆ! ಕಾಯಿಲೆ ಗುಣವಾದಂತೆ ಎಲ್ಲ ಸೈಕಲ್ಲುಗಳೂ ಮತ್ತೆ ಕಾರ್ನಾಡು ದಾರಿಯಲ್ಲಿ ಶಾಂತವಾಗಿ ನವಭಾರತ ವೃತ್ತದವರೆಗೆ ಉರುಳಿ, ಪ್ರಕಾಶ್ ಪ್ರಿಂಟರ್ಸ್ ವಠಾರದಲ್ಲಿ ಮುಕ್ತಾಯದ ಹಾಡು ಹೇಳಿದವು.

ಉದಯೋನ್ಮುಖ ಸಿನಿ-ನಟಿಯೊಬ್ಬಳ ಹಾರೈಕೆಯೊಡನೆ ತೊಡಗಿದ್ದ ನಿಶಾಸಂಚಾರ, ತಂಡದ ಬಹುಕ್ರಿಯಾಶೀಲ ಸದಸ್ಯ ಡೋನಿಯವರ `ವರ್ಷದಲ್ಲಿ ಹತ್ತು ಸಾವಿರ ಕಿಮೀ ಸಾಧನೆ’ಯ ಸಂಭ್ರಮಕ್ಕೆ ಕೇಕು ಕತ್ತರಿಸುವುದರೊಂದಿಗೆ ಮುಗಿದಿತ್ತು. ಸೈಕಲ್ ಕ್ರೀಡೆ ನಿಸ್ಸಂದೇಹವಾಗಿ ಆರೋಗ್ಯಪೂರ್ಣ. ಅದನ್ನು ಉತ್ತೇಜಿಸುವಲ್ಲಿ ಜ್ಯೋತಿ ಸೈಕಲ್ಸಿಗೆ ವ್ಯಾವಹಾರಿಕ ಸ್ವಾರ್ಥವೇನೂ ಇಲ್ಲ. ಅದನ್ನು ಸ್ಪಷ್ಟಪಡಿಸುವಂತೆ ಜ್ಯೋತಿಯ ಮಾಲಿಕ ಗಣೇಶ್ ನಾಯಕ್ ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದರು. ಪೋಲಿಸ್ ಅನುಮತಿ, ಪ್ರಥಮೋಪಚಾರಗಳ ಸಹಿತವಾದ ಬೆಂಗಾವಲಿನ ವಾಹನ, ವೃತ್ತಿಪರ ಚಿತ್ರಗ್ರಹಣ ಮತ್ತು ಅಂತಿಮವಾಗಿ ಹಿತಮಿತದ ತಿಂಡಿ ತೀರ್ಥ ಎಲ್ಲರಿಗೂ ಉಚಿತ!

ಕಾಸರಗೋಡು ಮೂಲದ, ಆದರೆ ಮಂಗಳೂರಿನಲ್ಲೆ (ಥೆರೆಸಾ ಪ್ರೌಢಶಾಲೆ?) ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಅಮೋಘ ವಿಕ್ರಮ್ ಇದರಲ್ಲಿ ಭಾಗಿಯಾಗುವ ಉತ್ಸಾಹಕ್ಕೆ ನಿನ್ನೆ ಬೆಳಿಗ್ಗೆ ಏಕಾಂಗಿಯಾಗಿ ಕಾಸರಗೋಡಿನಿಂದ ಸೈಕಲ್ಲೇರಿ ಬಂದಿದ್ದ. ಎಂಟೂವರೆಗೆ ಕಾಸರಗೋಡು ಬಿಟ್ಟವನು ಹನ್ನೊಂದು ಗಂಟೆಯ ಸುಮಾರಿಗೆ ಮಂಗಳೂರು ತಲಪಿದ್ದನಂತೆ. ಮಂಗಳೂರ ಅಮ್ಮನ ಬಿಡಾರದಲ್ಲಿ (ಅಪ್ಪ ಕೇರಳದಲ್ಲೆಲ್ಲೋ ಬ್ಯಾಂಕಿಗ) ವಿರಮಿಸಿ, ಉತ್ಸಾಹದಲ್ಲಿ ಕುಂದಿಲ್ಲದೆ ಈತ ಮತ್ತೊಂದೆರಡು ಸಮಾನವಯಸ್ಕ ಗೆಳೆಯರೊಡನೆ ಕತ್ತಲೋಟವನ್ನು ಪೂರ್ಣಗೊಳಿಸಿದ್ದು ಅಮೋಘ ವಿಕ್ರಮವೇ ಸರಿ!

ಅಮೋಘನ ಗೆಳೆಯನೋರ್ವ ತನ್ನ ಸೈಕಲ್ಲಿಗೆ ಹಿಂದುಮುಂದಿನ ದೀಪ, ಪ್ರತಿಫಲಕಗಳಿಲ್ಲದೇ ತಲೆಗೆ ಶಿರಸ್ತ್ರಾಣವನ್ನೂ ಏರಿಸದೆ ಸವಾರಿಯಲ್ಲಿ ಭಾಗಿಯಾಗಿದ್ದ. ಆತ ಹೆಚ್ಚುವರಿಯಾಗಿ ಬಾಲಕತನದ (ತಪ್ಪಲ್ಲ) ಎಲ್ಲ ಚಪಲಗಳನ್ನು ತೋರಿದರೂ ಅದೃಷ್ಟಕ್ಕೆ ನಿರಪಾಯವಾಗಿ ಸವಾರಿ ಪೂರ್ಣಗೊಳಿಸಿದ. ಮುಂದಾದರೂ ಅವನ ಉತ್ಸಾಹಕ್ಕೆ ಹಿರಿಯರು (ತಂದೆ, ತಾಯಿ, ನಿಶಾಸಂಚಾರದ ಸಂಘಟಕರು) ಅವಶ್ಯ ವಿವೇಚನೆಯ ಕವಚ ಹಾಕುತ್ತಾರಾಗಿ ಹಾರೈಸುತ್ತೇನೆ.

ಒಬ್ಬ ಬೆನ್ನುಚೀಲದೊಳಗೆ ಏನೋ ಯಂತ್ರ ವಿಶೇಷವಿಟ್ಟುಕೊಂಡು, ಅಭಿಯಾನದುದ್ದಕ್ಕೂ “ಢಗ್ಗು ಢಗ್ಗು” ಸಂಘೀತ ಪ್ರಸಾರ ಮಾಡುತ್ತಲೇ ಇದ್ದ. ಎಲ್ಲರೂ ಮಲಗಿರುವ ಹೊತ್ತು, ನಿಶಾಶಾಂತಿ ಇದ್ದಂತೇ ನೋಡುವ ಗಮ್ಮತ್ತು ನಮ್ಮದಾಗಬೇಕೇ ಹೊರತು ಕೆಡಿಸುವುದು ಅಲ್ಲ. ನಮ್ಮ ಯಾನದ ಅವೇಳೆಯಲ್ಲಿ, ಅದರಲ್ಲೂ ಮುಖ್ಯವಾಗಿ ಆಸ್ಪತ್ರೆಯಂಥ ವಿಶಿಷ್ಟ ವಲಯ ಹಾಯುವಾಗ ಕಂಡ ಇತರ ವಾಹನಗಳ ಅನಾಗರಿಕ ವರ್ತನೆ ನಮಗೆ ಅವಶ್ಯ ಪಾಠವಾಗಬೇಕು. [ಉದಾ: ೧. ಲೇಡಿ ಹಿಲ್ ವೃತ್ತದ ಬಳಿ ನಾವು ಮರುಗುಂಪಾಗುತ್ತಿದ್ದಾಗ ಯಾರೋ ಒಬ್ಬ ಕನಿಷ್ಠ ನಾಲ್ಕು ಬಾರಿಯಾದರೂ ತನ್ನ ಸೈಲೆನ್ಸರ್ ಕಿತ್ತ ಮೋಟಾರ್ ಸೈಕಲ್ಲನ್ನು ಮಿತಿಮೀರಿದ ವೇಗದಲ್ಲಿ ಕಿವಿ ಹರಿಯುವ ಶಬ್ದದಲ್ಲಿ ಓಡಿಸಿದ್ದ. ೨. ರೈಲ್ವೇ ನಿಲ್ದಾಣದಿಂದ ಹಂಪನ್ಕಟ್ಟಾದೆಡೆಗೆ ಸೈಕಲ್ಲುಗಳು ಶಿಸ್ತಿನಲ್ಲೇ ಏರುತ್ತಿದ್ದಾಗ ಕಾರೊಂದು ಅನಾವಶ್ಯಕ ಭಾರೀ ಹಾರ್ನು ಮಾಡುತ್ತಲೇ ಸರಿದು ಹೋಯ್ತು.]

ಸೈಕಲ್ ಸಮತೋಲನವಿದ್ದವರೆಲ್ಲ ಸವಾರರಲ್ಲ. ಎಲ್ಲ ದಾರಿ, ವೇಗ, ಋತುಗಳಂತೆ ಹೊತ್ತುಗಳದ್ದೂ ಮಾಡು, ಮಾಣ್‍ಗಳ (ಡೂಸ್ ಮತ್ತು ಡೂನಾಟ್ಸ್) ಅರಿವು ಬೆಳೆಸಿಕೊಳ್ಳುವಲ್ಲಿ, ತನಗೂ ಇತರರಿಗೂ ಹಾನಿ ತಾರದ ಯಾನ-ಸಾಮರ್ಥ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಈ ಸೈಕಲ್ ನಿಶಾಸಂಚಾರ ಒಳ್ಳೆಯ ಪ್ರಯತ್ನ. ವಿವೇಚನೆಗಳ ಬಲದಲ್ಲಿ ಇದು ಇನ್ನಷ್ಟು ನಡೆಯಲಿ ಎಂದು ಶುಭ ಹಾರೈಸುತ್ತ, ನಾನು ಮತ್ತೆ ಮನೆ ಸೇರುವಾಗ ಇಂದಿನ ಬೆಳಗ್ಗೆ ಮೂರು ಗಂಟೆಯೇ ಆಗಿತ್ತು.

೧೬. ಸೈಕಲ್ಲೂ ಹೃದಯ ಬಡಿತವೂ: (೨೬-೧೨-೨೦೧೫) ತಾಜ್ ಸೈಕಲ್ಸಿನ ಮಾಲಿಕ ಮುಬೀನ್ ಇಂದು ಹೃದಯ ಬಡಿತದ ಅಥವಾ ನಾಡೀಮಿಡಿತದ ನಿಯಂತ್ರಣದೊಂದಿಗೆ (ಸೈಕಲ್ ಚಾಲನೆಯಲ್ಲಿ) ವ್ಯಕ್ತಿಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕುರಿತು ಕಿರು ಕಮ್ಮಟ ಆಯೋಜಿಸಿದ್ದರು. ಬೆಳಿಗ್ಗೆ ಏಳು ಗಂಟೆಗೇ ಸೈಕಲ್ಲೇರಿ ಪಂಪ್ವೆಲ್ ಬಳಿಯ ಅವರ ಮಾರಾಟ ಮಳಿಗೆಗೆ ಹೋದೆ. ಇದಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬಂದವರು ಗೆಳೆಯ ಸಿ.ಆರ್ ಸಂದೀಪ್. ಮೈಸೂರು ಮೂಲದ ಸಂದೀಪ್ ಮೊದಲು ಇಲ್ಲೇ ಇದ್ದರು. ಸದ್ಯ ಬೆಂಗಳೂರಿನ ಉದ್ಯೋಗಿ. ಈತ ನಾವೆಲ್ಲ ಊಹಿಸಲೂ ಹೆದರುವ ಟ್ರಯಾತ್ಲಾನ್ನಿನ ಭಯಂಕರ ಹುರಿಯಾಳು! (ಟ್ರಯಾತ್ಲಾನಿಗೆ ಸಂದೀಪ್ ಭಾಗವಹಿಸಿದ ಒಂದು ಉದಾ: ಮೈಸೂರಿನ ತೊಣ್ಣೂರು ಕೆರೆಯಲ್ಲಿ ಒಂದೂವರೆ ಕಿಮೀ ಈಜಿ, ಅದೇ ಬಟ್ಟೆ, ಮೈ ಮತ್ತು ಉಸಿರಿನಲ್ಲಿ (ವಿಶ್ರಾಂತಿ ಇಲ್ಲ), ಇಪ್ಪತ್ತೋ ಮೂವತ್ತೋ ಕಿಮೀ ಸೈಕಲ್ ತುಳಿದು, ಮತ್ತದೇ ಉಸಿರಿನಲ್ಲಿ ಎಂಟೋ ಹತ್ತೋ ಕಿಮೀ ಓಡಿ ಗುರಿ ಮುಟ್ಟಿದವರಲ್ಲಿ ಈತ ಮೂರನೆಯವ. ಒಂದನೆಯವ ಯಾಕಲ್ಲಾ ಎನ್ನುವುದಕ್ಕೆ ನಾನು ವಿಚಾರಿಸಿದಾಗಷ್ಟೇ ತಿಳಿದ ಸತ್ಯಗಳು ೧. ಕೆರೆಯಿಂದ ಮೇಲೆದ್ದು ಬಂದಾಗ ಗೆಳೆಯನಿಂದ ಎರವಲು ತಂದಿಟ್ಟ ಸೈಕಲ್ ಗುರುತಿಸುವಲ್ಲಿ ವಿಳಂಬವಾದದ್ದು ಮತ್ತು ೨. ಕೊನೇ ಹಂತದಲ್ಲಿ ಇನ್ನೊಬ್ಬ ಸ್ಪರ್ಧಿಗೆ ಸಹಾಯ ಮಾಡಲು ನಿಂತದ್ದು!] ಸಂದೀಪ್ ಈ ಕಮ್ಮಟಕ್ಕೋಸ್ಕರ ತನ್ನಂತೆಯೇ ಮೂರು ಮುಖದೋಟದಲ್ಲಿ (ಐರನ್ ಮ್ಯಾನ್ ಪದವಿಗೆ) ಸ್ಪರ್ಧಾಮಟ್ಟದ ತಯಾರಿಯಲ್ಲಿರುವ ತರುಣ ಪ್ರಜ್ವಲ್‍ನನ್ನು ಜತೆ ಮಾಡಿಕೊಂಡು ನಿನ್ನೆ ಸೈಕಲ್ಲೇರಿ ಮೈಸೂರು ಬಿಟ್ಟಿದ್ದರು. ಹುಣಸೂರು ಕುಶಾಲನಗರಗಳಲ್ಲಿ ಮಿಂಚಿ, ಮಡಿಕೇರಿಯ ಎತ್ತರಕ್ಕೇರಿ, ಸಂಪಾಜೆಯ ಕೊಳ್ಳಕ್ಕೆ ಜಾರಿ, ಸುಳ್ಯ, ಪುತ್ತೂರಿಗಾಗಿ ೨೧೩ ಕಿಮೀನ್ನು ಒಂಬತ್ತು ಗಂಟೆ ಮೂವತ್ತೈದು ಮಿನಿಟಿನಲ್ಲಿ ಕ್ರಮಿಸಿದ್ದರು. ಅಂದರೆ ಸರಾಸರಿಯಲ್ಲಿ ಗಂಟೆಗೆ ೨೨.೨ ಕಿಮೀ ವೇಗ. ಆಗ ಸವಾರ ಅಲ್ಲ, ಒಂದು ಸೈಕಲ್ ಸೋಲೊಪ್ಪಿಕೊಂಡಿತಂತೆ. ಕಡ್ಡಿ ಕಡಿದು ಸವಾರಿ ಅಸಾಧ್ಯವಾದ್ದಕ್ಕೆ ಮಾಣಿಯಿಂದ ಅನಿವಾರ್ಯವಾಗಿ ಕಾರಿಗೇರಿಸಿ ಮಂಗಳೂರಿಸಿದ್ದರು. ಇಷ್ಟಾದರೂ ಇಬ್ಬರೂ ಇಂದು ಬೆಳಗ್ಗಿನ ವಿಚಾರವಿನಿಮಯಕ್ಕೆ ಇಲ್ಲೇ ಸ್ವಂತ ಮನೆಯಿಂದ ಎದ್ದು ಬಂದವರಷ್ಟು ಲವಲವಿಕೆಯಿಂದಿದ್ದರು. “ಏನಿದರ ಗುಟ್ಟು?” ಎಂದು ಕೇಳಿದರೆ ಸಂದೀಪ್ ಹೇಳಿಯಾರು “ನಾಡೀ ಮಿಡಿತದ ನಿಯಂತ್ರಣ!”

ಇಂದು ದಪ್ಪ ವಾಚಿನಂತೆ ಮಣಿಗಂಟಿಗೆ ಕಟ್ಟಿಕೊಳ್ಳಲು ಹಲವು ಮಾದರಿಯ ನಾಡೀ ಮಿಡಿತ ಮಾಪಕಗಳು ಲಭ್ಯ. ಇದು ಪರಿಣತ ವೈದ್ಯರು ನಮ್ಮ ಮಣಿಗಂಟಿನ ಬಳಿಯ ರಕ್ತನಾಳವನ್ನು ಬೆರಳಿನಲ್ಲಿ ಒತ್ತಿ ಹಿಡಿದು, ನಾಡಿಮಿಡಿತವನ್ನು ಗ್ರಹಿಸಿದ ಕ್ರಮದಲ್ಲೇ ಯಾಂತ್ರಿಕ ನಿಖರತೆಯೊಡನೆ ಲೆಕ್ಕ ಕೊಡುತ್ತದೆ. ಮತ್ತು ಯಂತ್ರ ಸಾಧ್ಯತೆಯಲ್ಲಿ ಇನ್ನೂ ಕೆಲವು ವಿಶ್ಲೇಷಣೆ, ಎಚ್ಚರಿಕೆ ಕೊಡುತ್ತದೆ. ಸೈಕಲ್ ತುಳಿತದ ವಿವಿಧ ಭಂಗಿ, ಅದಕ್ಕೆ ಸಹಕರಿಸುವ ವಿವಿಧ ಸಲಕರಣೆಗಳ ಮೂಲದಲ್ಲಿ ಎಂದೂ ಕೆಡಬಾರದ ಹೃದಯದ ಲಯ – ಲಬ್ ಮತ್ತು ಡಬ್. ಸೈಕಲ್ ಮೆಟ್ಟುವ ತೀವ್ರತೆಯಲ್ಲಿ ನಾಡಿಯ ದ್ರುತಗತಿ ಜೀವಕ್ಕೆ ಮುಳುವಾಗದಂತೆ ನೋಡಿಕೊಳ್ಳುವುದೇ ನಾಡಿ-ನಿಯಂತ್ರಣ. ಇದರಲ್ಲಿ ೧೮೦ ಒಂದು ಮಾಯಾ ಸಂಖ್ಯೆ. ಅದರಿಂದ ವ್ಯಕ್ತಿಯ ಪ್ರಾಯದ ಸಂಖ್ಯೆಯನ್ನು ಕಳೆದುಳಿಯುವ ಸಂಖ್ಯೆ ಆಯಾ ವ್ಯಕ್ತಿಯ ಆರೋಗ್ಯಕರ ನಾಡೀ ಮಿಡಿತದ ಗರಿಷ್ಠ ಮಿತಿ. ಹದವರಿತ ನಾಡೀಮಿಡಿತದಲ್ಲಿ ದೇಹದಲ್ಲಿ ಬೊಜ್ಜಿನ ರೂಪದಲ್ಲಿ ಸಂಕ್ರಹವಾದ ಕೊಬ್ಬು ಕರಗಿ ಶಕ್ತಿಯಾಗುತ್ತದೆ. ಹದ ಮೀರಿದವರಲ್ಲಿ, ದೇಹ ಅಂದಂದು ಪಡೆದ ಪೋಷಣೆಯನ್ನೇ `ಉರಿಸಿ’ ಶಕ್ತಿ ಕಂಡುಕೊಳ್ಳುತ್ತದೆ. ಅಂಥವರು ಸೈಕಲ್ ಬಿಟ್ಟು ಬೊಜ್ಜು ಕಳೆಯುತ್ತೇನೆ ಎಂದುಕೊಂಡರೂ ಡುಮ್ಮರಾಗಿಯೇ ಮುಂದುವರಿಯುತ್ತಾರೆ. ಅಂಥವರಲ್ಲಿ ತತ್ಕಾಲೀನ ಪೋಷಣೆ ಹಿಂಗಿದಾಗ ಜೀವಹಾನಿ, ಶಾಶ್ವತ ಊನತೆಗಳೂ ಸಂಭವಿಸಬಹುದು. ಏನಲ್ಲದಿದ್ದರೂ ವಿಪರೀತ ಬಳಲಿಕೆ, ಮಾಂಸಖಂಡಗಳ ಪೆಡಸುತನ ಅನಿವಾರ್ಯ. ಇಲ್ಲಿ ವ್ಯವಸ್ಥಿತ ಆಹಾರ ಪಾಠ ಹಾಗೂ ನೀರಿನ ಸೇವನೆಯ ಅಂಶವನ್ನು ಸಂದೀಪ್ ಮತ್ತು ಪ್ರಜ್ವಲ್ ಒತ್ತಿ ಹೇಳಲು ಮರೆಯಲಿಲ್ಲ. ಇದು ತೀವ್ರ ಸ್ಪರ್ಧಾವಲಯ ಹೊರಗಿನವರು, ಅಂದರೆ ಆರೋಗ್ಯಕ್ಕಾಗಿ ಸಹಜ ಸವಾರಿ ಹೋಗುವವರು ಉತ್ತೇಜನಕಾರಿ ಪೇಯ, ಆಹಾರ, ಲವಣಗಳನ್ನು ಸ್ವೀಕರಿಸುವುದನ್ನು ನಿರಾಕರಿಸುತ್ತದೆ.

ಉಳಿದಂತೆ ಒಂದು ಸೈಕಲ್ ಸವಾರಿ ಕಾರ್ಯಕ್ರಮದಲ್ಲಿ (ಸ್ಪರ್ಧೆ ಇರಬಹುದು, ದೂರ ಗಮನವಿರಬಹುದು) ವಿವಿಧ ವಲಯಗಳನ್ನು ಕಲ್ಪಿಸಿಕೊಂಡು ಹೃದಯ ಬಡಿತವನ್ನು ಹೇಗೆ ನಿಯಂತ್ರಿಸಬಹುದೆಂದು ಅಂಕಿಸಂಕಿ ಸಹಿತ ವಿವರಿಸಿದರು. ಸ್ಪರ್ಧಾ ಓಟಗಳ ಕುರಿತ ನನ್ನ ಆಸಕ್ತಿ, ತಿಳುವಳಿಕೆ ಕಡಿಮೆಯಾದ್ದರಿಂದ ಅವೆಲ್ಲವನ್ನು ಅರ್ಥೈಸಿಕೊಳ್ಳುವ ಕಷ್ಟ ನಾನು ಪಡಲಿಲ್ಲ. ಆದರೆ ಕೊನೆಯಲ್ಲಿ ಎಲ್ಲಕ್ಕೂ ಮುಖ್ಯವಾಗಿ ವ್ಯಕ್ತಿ ವೈಶಿಷ್ಟ್ಯವನ್ನು (ಮನುಷ್ಯ ಯಂತ್ರಗಳಂತೆ ಏಕಕ್ಷಮತೆಯವನಲ್ಲ) ಸಾರಿ, ಯಂತ್ರ ಸಾಧನವಿಲ್ಲದೆಯೂ ಪ್ರತಿಯೊಬ್ಬರು ತಮ್ಮದೇ ಲಯ ಸಾಧಿಸುವಂತೆ ಹೇಳಿದ್ದು ನನಗೆ ಹೆಚ್ಚು ಅರ್ಥವಾಯ್ತು! ಬಹುಶಃ ಪರ್ವತಾರೋಹಣದ ಹಿನ್ನೆಲೆಯಲ್ಲಿ ಸೈಕಲ್ ತುಳಿಯುವಲ್ಲಿ ನಾನು ಸಾಧಿಸಿದ್ದಾದರೂ ಇದನ್ನೇ ಎಂದು ಭಾವಿಸಿ ಸಂತೋಷದೊಡನೆ ಮರಳಿದೆ.

೧೭. ಹಳೆ ಹೊಸ ಸೈಕಲ್ ಸವಾರರ ಭಾವವಿನಿಮಯ: (೩-೧-೨೦೧೬) ಮಂಗಳೂರು ಬೈಸಿಕಲ್ ಕ್ಲಬ್ (ಎಂ.ಬಿ.ಎ) ಇಂದು, ವೃತ್ತಿಪರ ಅನಿವಾರ್ಯತೆಯಲ್ಲಿ ಸಾಂಪ್ರದಾಯಿಕ ಸೈಕಲ್ಲುಗಳನ್ನು ಬಳಸುತ್ತ ಬಂದಿರುವ ಸುಮಾರು ಹದಿನೆಂಟು ಮಂದಿ ಹಿರಿಯರನ್ನು ಗುರುತಿಸಿ, ಸಾಂಕೇತಿಕವಾಗಿ ಸಮ್ಮಾನಿಸಿತು. ಅಂಚೆ, ಹಾಲು, ಪತ್ರಿಕೆ ವಿತರಣೆಯಿಂದ ತೊಡಗಿ ಸಾಮಾನ್ಯ ಓಡಾಟಕ್ಕೂ ಮೂರು ದಶಕಗಳಿಗೂ ಮಿಕ್ಕು ಸೈಕಲ್ ಬಳಸುತ್ತಿರುವವರು ಇಲ್ಲಿದ್ದರು. ಎಂಬತ್ತಮೂರು, ತೊಂಬತ್ತರ ಪ್ರಾಯದಲ್ಲಿದ್ದು, ಸವಾರಿಗಲ್ಲದಿದ್ದರೂ ಊರೇಗೋಲಿನಂತಾದರೂ ಸೈಕಲ್ ಹಿಡಿದ ಹಿರಿಯರೂ ಸಮ್ಮಾನಿತರಲ್ಲಿದ್ದರು. ಜ್ಯೋತಿ ಸೈಕಲ್ಸಿನ ಮಾಲಿಕ ಗಣೇಶ್ ನಾಯಕ್ ನೇತೃತ್ವದ ಅನೌಪಚಾರಿಕ ಕೂಟ – ಎಂ.ಬಿ.ಎದವರು, ಅಂದರೆ ಹೊಸ ಮಾದರಿಯ ಸೈಕಲ್ಲುಗಳನ್ನು ಆರೋಗ್ಯಕ್ಕಾಗಿ, ಕ್ರೀಡೆಗಾಗಿ ಮಾತ್ರ ಬಳಸುತ್ತಿರುವ ಮೂವತ್ತಕ್ಕೂ ಮಿಕ್ಕು ಸದಸ್ಯರು ಹಾಜರಿದ್ದು, ಪರಸ್ಪರ ಭಾವವಿನಿಮಯಕ್ಕೆ ಸಾಕ್ಷಿಯಾದರು.

೧೮. `ಎಣ್ಣೆ ಕಡಿಮೆ ಬಳಸಿ’: (೨೬-೧-೨೦೧೫) ಇದನ್ನು ಪ್ರಚಾರ ಮಾಡಲು ಎಣ್ಣೇ ಕಂಪೆನಿಯವರೇ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ., ಇದರ ಮಂಗಳೂರು ವಿಭಾಗ ಮತ್ತು ಸರ್ವೋ ಎಣ್ಣೆಗಳ ವಲಯ ವಿತರಕ – ರಾಮನಾಥ್ ಎಂಟರ್‍ಪ್ರೈಸೆಸ್) ಇಂದೊಂದು ಸೈಕಲ್ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಮಂಸೈಸಂ (ಎಂಸಿಸಿ = ಮಂಗಳೂರು ಸೈಕಲ್ ಕ್ಲಬ್) ಸದಸ್ಯರೇ ಮುಖ್ಯವಾಗಿ ಸುಮಾರು ಇಪತ್ತೈದು ಮಂದಿ ಕೊಟ್ಟಾರದಿಂದ ತಣ್ಣೀರುಬಾವಿ, ಪಣಂಬೂರುಗಳಿಗೆ ಹೋಗಿ ಬಂದೆವು.

೧೯. ಇಂಧನ ಉಳಿಸಿ: ಸೈಕಲ್ ಅಭಿಯಾನದ ಘೋಷಣೆ (೨೩-೧-೨೦೧೬): ಭಾರತ ಸರಕಾರ ಇಂಧನ ಉಳಿಸಿ ಪಾಕ್ಷಿಕ ಅಭಿಯಾನ ೨೦೧೬ (ಜನವರಿ ೧೬ ರಿಂದ ೩೧), ಘೋಷಿಸಿದೆ. ಇದಕ್ಕೆ ಪೂರಕವಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಮಂಗಳೂರು ವಿಭಾಗ ಗಣರಾಜ್ಯೋತ್ಸವದ ದಿನದಂದು ಸೈಕಲ್ ಅಭಿಯಾನವನ್ನು ಘೋಷಿಸಿತು. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಕಳೆದ ವರ್ಷ ಇದೇ ಹೆಸರಿನಲ್ಲಿ ಬೆಂಗಳೂರಿಗೇ ಸೈಕಲ್ ಮಹಾಭಿಯಾನವನ್ನು ನಡೆಸಿದ್ದು ನಿಮಗೆಲ್ಲ ತಿಳಿದೇ ಇದೆ. (ಇಲ್ಲದವರು ಅವಶ್ಯ ಇಲ್ಲಿ ಚಿಟಿಕೆ ಹೊಡೆದು ಅನುಭವಿಸಿ) ಅದರಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡ ಮಂಗಳೂರು ಸೈಕಲ್ಲಿಗರ ಸಂಘ (ಎಂ.ಎ.ಸಿ.ಸಿ) ಈ ಬಾರಿಯೂ ಸೈಕಲ್ಲಿಗರನ್ನು ಮುನ್ನಡೆಸಿತು.

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಈಗಾಗಲೆ ತನ್ನ ಆಡ್ ಆನ್ (Adon) ಎಂಬ ಮಧ್ಯವರ್ತಿಯನ್ನು (Additive) ಪೆಟ್ರೊಲ್ ಅಥವಾ ಡೀಸೆಲ್ ಉಳಿತಾಯಕ್ಕೆ, ಪರೋಕ್ಷವಾಗಿ ಪರಿಸರ ರಕ್ಷಣೆಗೆ ದಾರಿಯಾಗಿ ಕೊಟ್ಟಿದೆ. ಹಾಗೇ ಇವರದೇ ಇನ್ನೊಂದು ಉತ್ಪನ್ನವಾದ `ಎಕ್ಸ್ಟ್ರಾ ಪ್ರೀಮಿಯಂ ಪೆಟ್ರೋಲ್’ (Xtra premium petrol) ಮೂಲಕ ಎಲ್ಲ ವಾಹನಗಳ ಆರೋಗ್ಯವನ್ನೂ ವೃದ್ಧಿಸುತ್ತಾರೆ, ಪರಿಸರ ದೂಷಣೆಯನ್ನು ಕಡಿಮೆ ಮಾಡುತ್ತಿದ್ದಾರೆ. ಇವರದೇ ಸರ್ವೋ ಕೀಲೆಣ್ಣೆ (Servo Lubricant) ಯಂತ್ರಗಳ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸರ್ವೋತ್ತಮವೆಂದು ಈಗಾಗಲೇ ತಿಳಿದದ್ದೇ ಆಗಿದೆ.

೨೦. ಇಂಧನ ಉಳಿಸಿ ಸೈಕಲ್ ಅಭಿಯಾನದ ನೆರಳಿನಲ್ಲಿ…: (೨೪-೧-೨೦೧೬) ಬರಲಿರುವ ಮಣಿಪಾಲ ಸೈಕಲ್ ಅಭಿಯಾನವನ್ನು ನೆನೆಸಿಕೊಂಡು, ಮೂರು ದಿನದ ಸೈಕಲ್ ಜಡ ಕಳೆದು ಇಂದು ಸಂಜೆ ಸೈಕಲ್ಲೇರಿದೆ. ಅದೇ ಕಂಕನಾಡಿ, ಮಹಾಕಾಳಿಪಡ್ಪು, ಹೆದ್ದಾರಿಗಾಗಿ ತೊಕ್ಕೊಟ್ಟು. ಹೆದ್ದಾರಿಯ ಕೆಲಸ ಇಲ್ಲಿನ ಪೇಟೆಯನ್ನು ತೀವ್ರವಾಗಿ ಅಲ್ಲೋಲಕಲ್ಲೋಲಗೊಳಿಸಿದೆ. ನನ್ನ ಅಂಗಡಿಯಿದ್ದ ಕಾಲದ ನೆರೆಹೊರೆಯ ಗೆಳೆಯರಾದ ಮಹಮ್ಮದರ ಮೋನಾ ಎಂಟರ್‍ಪ್ರೈಸಸ್ಸಿನ ತೊಕ್ಕೋಟು ಶಾಖೆಯ ಅಂಗಳದವರೆಗೂ ಮಹಾಯಂತ್ರಗಳು ಗುಡುಗುಡಿಸಿದ್ದವು. ಅಲ್ಲೇ ತುಸು ಮುಂದೆ, ಈ ಅಗಲೀಕರಣದ ವ್ಯಾಪ್ತಿಯೊಳಗೇ ಬರುವ ಭಾರೀ ಅರಳಿಕಟ್ಟೆ ಮತ್ತದರ ದೇವಪರಿವಾರ, ಹೆಚ್ಚಿನ ಭಕ್ತ (ಸಾರ್ವಜನಿಕರು) ಕಲ್ಯಾಣಕ್ಕಾಗಿ ಸ್ಥಳ ತ್ಯಾಗ ಮಾಡುವುದೋ? ಗೊತ್ತಿಲ್ಲ.

ಪೇಟೆ ಕಳೆದದ್ದೇ ಬಲಕ್ಕೆ ಹೊರಳಿ ಉಳ್ಳಾಲದತ್ತ ಮುಂದುವರಿದೆ. ಮುಂದೆ ಸಯ್ಯದ್ ಮದನಿ ದರ್ಗಾದ ಎದುರಿನ ದಾರಿ ಹಿಡಿದು ನೇತ್ರಾವತಿ ದಂಡೆಯತ್ತ ಮುಂದುವರಿದೆ. ಇದ್ದಕ್ಕಿದ್ದಂತೆ ಒಬ್ಬ ತರುಣ ಬಾಯಿಯಲ್ಲಿ “ಗರ್ ಗರ್ ಗರ್” ಎಂದು ಬೊಬ್ಬೆ ಹಾಕುತ್ತಾ ತನ್ನ ಸಾಮಾನ್ಯ ಲಟಾರಿ ಸೈಕಲ್ಲೇರಿ ಬಹುವೇಗದಿಂದ ನನ್ನ ಬೆನ್ನು ಹಿಡಿದ. ಅವನ ಮಾನಸಿಕ ಸ್ಥಿತಿ (ಹುಚ್ಚ) ತಿಳಿಯದೇ ನಾನು ವೇಗ ಕಡಿಮೆ ಮಾಡಿ ಅವನಿಗೆ ದಾರಿ ಕೊಟ್ಟೆ. ನನ್ನನ್ನು ದಾಟಿದ ಮೇಲೆ ಅವನ ಬೊಬ್ಬೆ ಲಾರಿ ಹಾರ್ನಿನ ಪರ್ಯಾಯ ಸದ್ದು (ಮಕ್ಕಳು ಮಾಡಿದ ಹಾಗೇ) ಕಡಿಮೆ ಮಾಡಿ ನನ್ನ ಚಲನೆಗೆ ಅಡ್ಡಿ ಮಾಡತೊಡಗಿದ. ಮುಂದುವರಿದು ತುಳುವಿನಲ್ಲಿ “ಏನು ನಿನ್ನದು ಭಾರೀ ಎಕ್ಸ್‍ಪ್ರೆಸ್ ಗಾಡಿಯಾ? ಬ್ಯಾವಾರ್ಸೀ…” ಎಂದೇ ಮುಕ್ತಗಳು ಬರುವಾಗ ನನಗೆ ವಸ್ತುಸ್ಥಿತಿ ತಿಳಿದು ನಗೆ ಬಂತು. ಆದರೆ ಆತ ಪೂರ್ಣ ಅಡ್ಡಗಟ್ಟಿ ನಿಲ್ಲಿಸಿ, ಕೈ ಮುಂದೆ ಮಾಡಿ ವಿಚಾರಿಸಿಕೊಳ್ಳುವ ಉತ್ಸಾಹ ತೋರಿದಾಗ ನಾನು ಮೌನವಾಗಿ ಓಟದ ದಿಕ್ಕು ತಪ್ಪಿಸಿ, ಪಕ್ಕದ ದಾರಿಗೆ ನುಗ್ಗಿ ನೇತ್ರಾವತಿಯ ಅಳಿವೆ ಬಾಗಿಲಿನತ್ತ ಮುಂದುವರಿದೆ. ಎಷ್ಟಿದ್ದರೂ ಆತನದು ಹುಚ್ಚಾದ್ದರಿಂದ ನನ್ನನ್ನು ಹಿಂಬಾಲಿಸುವ ದೌಷ್ಟ್ಯ ಇರಲಿಲ್ಲ, ಪಾಪ.

ಬಹು ದಿನಗಳಿಂದಲೂ ನಡೆಯುತ್ತಿರುವ ಅಳಿವೆ ಬಾಗಿಲಿನ ಮರುರೂಪಣೆ ಇನ್ನೂ ನಡೆದೇ ಇತ್ತು. ಮಾರಿ ಹಲಗೆಗಳು, ರಕ್ಕಸ ಎತ್ತುಗಗಳು ಮರಳು ತೋಡಿ, ಭಾರೀ ಕಲ್ಲಚೂರು ಹೇರುತ್ತಾ ಸಮುದ್ರದತ್ತ ಸಾರಿದ್ದವು. ಅದರ ಮೇಲೋ ಪರ್ಯಾಯವಾಗಿಯೋ ಹೇರಲಿದ್ದ ಟೆಟ್ರಾಪೋಡ್‍ಗಳನ್ನು ಅಲ್ಲೇ ಒತ್ತಟ್ಟಿಗೆ ಅಚ್ಚು ಹಾಕುತ್ತಲೂ ಇದ್ದರು. ಇವೆಲ್ಲ ಮಳೆಗಾಲದ ಕಡಲ ಅಬ್ಬರದಲ್ಲಿ ಎಷ್ಟು ಶಾಶ್ವತ ಅಥವಾ ಗೊತ್ತಿದ್ದೂ ನೀರಿನಲ್ಲಿ ಹೋಮ ಮಾಡಿ `ಪುಣ್ಯ ಸಂಪಾದಿಸುವ’ ಜಾಣ್ಮೆಯೋ ಕಾಲವೇ ನಿರ್ಧರಿಸುತ್ತದೆ! ಉಳಿದ ಮರಳು ಹಾಸಿನಲ್ಲಿ ಒಣಗಲು ಹಾಕಿದ್ದ ಎಂಥದ್ದೋ ಸಮುದ್ರ ಜೀವಿಯ ಅವಶೇಷ ಹೆಕ್ಕಲು ರಾಶಿಗಟ್ಟಲೆ ಕೊಕ್ಕರೆಗಳು, ಅವುಗಳನ್ನು ಗಸ್ತು ಹಾಕುತ್ತಾ ಹದ್ದುಗಳೂ ಹಾರಾಟ ನಡೆಸಿದ್ದುವು

ಮರಳುವಾಗ ಮುಖ್ಯ ದಾರಿಯಲ್ಲೇ ಉಳ್ಳಾಲದ ಅಬ್ಬಕ್ಕ ವೃತ್ತಕ್ಕಾಗಿ ಸೋಮೇಶ್ವರದತ್ತ ಮುಂದುವರಿದೆ. ಮುಕ್ಕಚೇರಿ ಕಳೆದ ಮೇಲೆ ಎಡ ಕವಲಿನಲ್ಲಿ ಹೊರಳಿ, ರೈಲ್ವೇ ಹಳಿಯನ್ನು ಸೇರಿ ಅದರ ಗುಂಟ ಪೆರ್ಮನ್ನೂರು/ತೊಕ್ಕೊಟು ಸೇರಿದೆ. ಹೆದ್ದಾರಿಯ ಗದ್ದಲ, ದೂಳುಹೊಗೆಯನ್ನು ನಿತ್ಯ ನಿರ್ಲಿಪ್ತಿಯಲ್ಲಿ ರಂಗಾಗಿಸುತ್ತ, ಕಿವಿ ಮುಚ್ಚಿ ಉಸಿರು ಕಳೆದುಕೊಂಡವರಿಗೆ (ಚಿತ್ರ ವೀಕ್ಷಕರಂತೆ) ಕಾವ್ಯವೇ ಎಂಬ ಭಾವ ಹುಟ್ಟಿಸುತ್ತಾ ಸೂರ್ಯ ತನ್ನ ಬಿಡಾರ ಸೇರುತ್ತಿದ್ದಂತೆ ನಾನೂ ನನ್ನ ಬಿಡಾರ ಸೇರಿಕೊಂಡೆ.

೨೧. ನಾಳಿನ ಪೆಟ್ರೋಲ್ ಉಳಿಸಿ ಸಿದ್ಧತೆಯಲ್ಲಿ…: (೨೫-೧-೨೦೧೬) ಇಂದು ಅಭ್ಯಾಸದ ಸವಾರಿ. ಅದು ಕಾಗದದ ಮೇಲೆ ಇಟ್ಟ ಪೆನ್ನೆತ್ತದೆ ಏಕರೇಖಾ ಚಿತ್ರದಂತೆ ಅಥವಾ ಒಂದುಸುರಿನ ಹಾಡಿನಂತೆ (ಬ್ರೆತ್ಲೆಸ್ ಸಾಂಗು!) ಅವಿರತ ಸಾಗಬೇಕು ಎಂದೇ ಯೋಚಿಸಿದ್ದೆ. ಕಣ್ಗಾಪು ಕಟ್ಟಿದ ಕುದುರೆಯಂತೆ – ಬಿಜೈ, ಕುಂಟಿಕಾನ, ಕೊಟ್ಟಾರ, ಕೂಳೂರು, ತಣ್ಣೀರುಬಾವಿ, ಅರಣ್ಯ ಮತ್ತು ಪೊಲಿಸ್ ಇಲಾಖೆಗಳ ಸೋಮಾರಿ ಭವನಗಳನ್ನು ದಾಟಿ, ಮುಖ್ಯ ದಾರಿ ಬಿಟ್ಟು ಬಲಕ್ಕೆ, ಅಂದರೆ ಪಶ್ಚಿಮಕ್ಕೆ ಅಥವಾ ಕಡಲಮುಖಿಯಾಗಿ, ಬಳಸು ದಾರಿಯಲ್ಲಿ ಎಂದಿನ ನಾಲ್ಕೆಂಟು ಪುಟ್ಟ ಸೈಕಲ್ ಸವಾರರ ಸ್ಪರ್ಧೆಯಲ್ಲಿ `ಸೋತು’, ಮತ್ತೆ ಮುಖ್ಯದಾರಿ ಸೇರಿ, ಕ್ರೀಡಾಂಗಣದ ಅವಶೇಷಕ್ಕೂ ಮೊದಲ ಎಡಗವಲು ಹಿಡಿದು, ಅಂದರೆ ಪೂರ್ವಕ್ಕೆ ಅಥವಾ ಫಲ್ಗುಣಿ ನದಿಮುಖಿಯಾಗಿ, ಶಾಲಾ ದಾರಿಯಲ್ಲಿ ಅಳಿವೆ ಮುಖಿಯಾಗಿ, ಬೆಂಗ್ರೆ ದಕ್ಕೆಗೆ ಹಾರುನೋಟವಷ್ಟೇ ಹಾಕಿ, ಅಳಿವೆ ಬಾಯಿಯಲ್ಲಿ ಕಡಲಕೊರೆತ ತಡೆಯಲು ಮಾಡಿದ ಕಲ್ಲ ಗೋಡೆಯ ನೆರಳಿನಲ್ಲೇ ದಾರಿ ತಿರುಗಿದಂತೆ ಹಿಮ್ಮುರಿ ತಿರುವು ತೆಗೆದು,

ಮತ್ತೆ ತಣ್ಣೀರುಬಾವಿ ಮುಖಿಯಾಗಿ ಹೋಗುತ್ತಿದ್ದಂತೇ ಅಲ್ಲಿ ಕಡಲಂಚಿನತ್ತ ಸಾರುತ್ತಿದ್ದ ಹೊಸ ಕಾಂಕ್ರೀಟ್ ರಸ್ತೆಯೊಂದು ಆಕರ್ಷಕವಾಗಿ ಕಾಣಿಸಿದ್ದಕ್ಕೆ (ಅಬ್ಬಾ!) ಸೋತು ನಿಂತೆ.

ತಿಂಗಳ ಹಿಂದೆಯಷ್ಟೇ ಮತ್ತೊಂದಷ್ಟು ಮನೆಗಳಿಗೆ ಅನುಕೂಲ ಮಾಡಿಕೊಡುವಂತೆ ದಾರಿಯನ್ನು ರೂಪಿಸಿದ್ದರು. ಕಡಲ ಮುಖಿಯಾಗಿ ಬಳುಕುತ್ತ ಇಲ್ಲಿ ಬಿಟ್ಟದ್ದು ಮುಂದಲ್ಲಿ ಮತ್ತೆ ಮುಖ್ಯ ದಾರಿಯನ್ನು ಸೇರಿತ್ತು. ಅದರ ಚಂದವನ್ನು ಉದ್ದಕ್ಕೆ ವಿಡಿಯೋಗ್ರಹಣ ನಡೆಸಿ ಮತ್ತೆ ಹಿಂದಿನ ಕ್ರಮದಲ್ಲೇ ಪೆಡಲುತ್ತಾ ಕಡಲಮುಖಿ ಕವಲಿನ ಬಳಸಾಟ ಮಾಡಿ, ಅಲ್ಲಿನ ಪೋರ ಪಟಾಲಮ್ಮಿನ ಉತ್ಸಾಹದ ಸ್ಪರ್ಧೆಯಲ್ಲಿ ಮತ್ತೆ `ಸೋತು’, ಅರಣ್ಯ ಇಲಾಖೆಯ ಸೋಮಾರಿ ಭವನ ದಾಟುವಾಗ ಯಾವುದೋ ಖಾಸಗಿ ಕಾರು ಕಾಣಿಸಿದ್ದಕ್ಕೆ ಸುಮ್ಮನೆ ಒಳ ಹೋದೆ. ಜಗುಲಿಯಲ್ಲಿ ವಿರಮಿಸಿದ್ದ `ತರಬೇತಿನ’ ಅವಧಿ, ಖಾಯಮಾತಿಗಳ ಹಂಗಿಲ್ಲದ ನಾಯಮ್ಮ ಒಮ್ಮೆ ನನ್ನನ್ನು ಗುರಾಯಿಸಿದರೂ ಮತ್ತೆ ಮರಿಗಳ ಡೂಟಿಯಲ್ಲೇ ಮುಂದುವರಿದಳು. ಕಾರು ಇಲಾಖೆಯ ಬೆಂಗಳೂರು ವಲಯದ ಯಾರೋ ಅಧಿಕಾರಿಯದು. ಆತನ ಮಗಳು, ಮೊಮ್ಮಗನ ಮೊಕ್ಕಾಂ (ಬಂದು ಮೂರು ದಿನ ಕಳೆದಿತ್ತು!) ಹಾಗೂ ವಿಹಾರಕ್ಕಷ್ಟೇ ಅಲ್ಲಿಗೆ ಬಂದಿತ್ತು; ಅಧಿಕಾರಿ ಇರಲಿಲ್ಲ. ಇಂದು ವಿಶ್ವೇಶ್ವರಯ್ಯ ನಮಗೆ ಆರಾಧನೆಗಷ್ಟೇ ಬೇಕು, ಆದರ್ಶಕ್ಕಲ್ಲ.

ವಾಪಾಸು ದಾರಿಯಲ್ಲಿ ಮತ್ತೆ ಏಕಗೀಟಿನ ಚಿತ್ರ ಅಥವಾ ಒಂದುಸುರಿನ ಹಾಡು ಹಾಳಾದ ಕೋಪಕ್ಕೆ ಮತ್ತೆ ಎಲ್ಲೂ ತಳುವದೆ, ಬಂದ ದಾರಿಯಲ್ಲೇ ಶ್ವಾಸೋಛ್ವಾಸದ ಲಯಕ್ಕೆ ಪೆಡಲಾವರ್ತವನ್ನು ಹೊಂದಿಸಿ, ಏರಿರಲಿ ಜಾರಿರಲಿ ಏಕವೇಗ ಸಾಧಿಸಿ ಮನೆ ಸೇರಿದೆ. ನನ್ನ ಕ್ಯಾಮರಾದಲ್ಲಿ ಇಣುಕುರೇಖೆಗಳನ್ನು ಮೂಡಿಸಿದ ಸೂರ್ಯ ನಾನವನ ನಿತ್ಯನೂತನ ಸಂಧ್ಯಾ ಕಲಾವೈಭವಕ್ಕೆ ಕಣ್ಣಾಗದೇ ಓಡಿದ ವಿಷಾದ ಹೊತ್ತು ಅಸ್ತಂಗತನಾದ.

೨೨. ಪೆಟ್ರೋಲ್ ಉಳಿಸಿ ಸೈಕಲ್ ಅಭಿಯಾನ – ೨೦೧೬: (೨೬-೧-೨೦೧೬) ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ (ಐಓಸಿಎಲ್) ಒಂದು ಉತ್ಪನ್ನವಾದ ಸರ್ವೋ ಕೀಲೆಣ್ಣೆ. ಇದರ ಸಗಟು ವಿತರಕ – ತರುಣ ಗೆಳೆಯ ಕಾವೂರು ಪ್ರಸನ್ನ, ಕಳೆದ ವರ್ಷದಂತೇ ಈ ಬಾರಿಯೂ ಸ್ವತಃ ಸೈಕಲ್ ತುಳಿಯುತ್ತ, ಕಲಾಪಗಳ ಸಮರ್ಥ ಸಂಯೋಜನೆಯನ್ನೂ ನಡೆಸಿದ್ದ. ವೈವಿಧ್ಯಮಯ ವೃತ್ತಿ, ಲಿಂಗ ಹಾಗೂ ವಯೋ ಹಿನ್ನೆಲೆಯ, ಆದರೆ ಪರಿಸರ ಕಾಳಜಿಯಲ್ಲಿ ಏಕಾಭಿಪ್ರಾಯವಿಟ್ಟು ಉತ್ಸಾಹದಲ್ಲಿ ಬಂದಿದ್ದ ಸುಮಾರು ಇಪ್ಪತ್ತೈದೂ ಸೈಕಲ್ ಸವಾರರಿಗೆ ಐಓಸಿಎಲ್, ತನ್ನ ಪೆಟ್ರೋಲ್ ವಿತರಣೆಯಲ್ಲಿನ ಪರಿಸರ ಕಾಳಜಿಯನ್ನು ಎತ್ತಿ ಹೇಳುವ (ಪ್ರೀಮಿಯಂ ಪೆಟ್ರೋಲ್ ಮತ್ತು ಅಡಾನ್) ಘೋಷಣೆಯುಳ್ಳ ಸವಾರಿ ಅಂಗಿಗಳನ್ನೂ ಗಟ್ಟಿ ಉಪಾಹಾರವನ್ನೂ ಕೊಟ್ಟು ಗೌರವ ಪ್ರತಿನಿಧಿಗಳನ್ನಾಗಿ ಹೆಸರಿಸಿತು. ಎಂಟು ಗಂಟೆಯ ಸುಮಾರಿಗೆ ಕೊಟ್ಟಾರದ ಬಳಿಯ ಐಓಸಿಎಲ್ ಕಛೇರಿಯ ಎದುರು ಅಭಿಯಾನಕ್ಕೆ ಆರಂಭದ ನಿಶಾನಿಯನ್ನು ಸ್ವತಃ ವಿಭಾಗೀಯ ವರಿಷ್ಠ ನವೀನ್ ತೋರಿಸಿದರು.

ಮಂಗಳೂರು – ಮಣಿಪಾಲ – ಮಂಗಳೂರು, ದಿನದ ಕೊನೆಗೆ ಸುಮಾರು ನೂರಿಪ್ಪತ್ತು ಕಿಮೀ ನಮ್ಮ ಲಕ್ಷ್ಯ. ಹೆದ್ದಾರಿಗುಂಟ ಕೂಳೂರು, ಸುರತ್ಕಲ್ಲು ಕಳೆದು ಮುಕ್ಕದ ಬಳಿಯ ಐಓಸಿಎಲ್ ಪೆಟ್ರೊಲ್ ಬಂಕಿನಲ್ಲಿ ಮೊದಲ ವಿಶ್ರಾಂತಿ.

ಕೆಂಪಂಗಿ ಧರಿಸಿದ ಸವಾರರೆಲ್ಲ ಮೊದಲ ಸುತ್ತಿನ ಬಿಸಿಗೆ ಕೆಂಪುಕೆಂಪಾಗಿದ್ದರು. ಆದರೆ ಅಭಿಯಾನದ ಮುಂಚೂಣಿಯನ್ನು ಸದಾ ಕಾದುಕೊಂಡಿದ್ದ ಕಾರು ಧಾರಾಳ ಕಿತ್ತಳೆ ಹಣ್ಣುಗಳನ್ನೂ ಶುದ್ಧ ನೀರನ್ನೂ ಅಗತ್ಯವಿದ್ದವರಿಗೆ ಎಲೆಕ್ಟ್ರೋಲೈಟ್ ಪುಡಿಕೆಗಳನ್ನೂ ಒದಗಿಸಿ ತಣಿಸಿತು. ಹಾಗೇ ಇನ್ನೊಂದು ಖಾಲೀ ವ್ಯಾನು ಅಭಿಯಾನದ ಕೊನೆಯನ್ನು ಕಾಯುತ್ತಿದ್ದುದನ್ನೂ ಸ್ಮರಿಸಬೇಕು. ಇದು ಅಭಿಯಾನದ ಆಕಸ್ಮಿಕಗಳಿಗೆ ತುರ್ತು ಸ್ಪಂದನ ಒದಗಿಸಲೆಂದೇ ಸಜ್ಜುಗೊಂಡಿತ್ತು. ಆಶಯಗಳು ಎಷ್ಟು ಉದಾತ್ತವಿದ್ದರೂ ಸಾರ್ವಜನಿಕ ಮಾರ್ಗಕ್ರಮಣದಲ್ಲಿ ಆಕಸ್ಮಿಕಗಳನ್ನು ನಿರ್ಲಕ್ಷಿಸುವಂತಿಲ್ಲವಲ್ಲ. (ಅದೃಷ್ಟವಶಾತ್ ಆಕಸ್ಮಿಕಗಳು ಯಾವವೂ ನಮ್ಮನ್ನು ಕಾಡಲಿಲ್ಲ.)

ಗಣರಾಜ್ಯೋತ್ಸವ ಸರಕಾರೀ ರಜೆಯಾದರೂ ವಾರದ ನಡುವೆ (ಮಂಗಳವಾರ) ಬಂದಿದ್ದುದರಿಂದ ಅಭಿಯಾನದಲ್ಲಿದ್ದ ಕೆಲವು ಸ್ವೋದ್ಯೋಗಿಗಳು ಸಮಯ ಮಿತಿಯನ್ನು ನೋಡಿಕೊಂಡು ಮೂಲ್ಕಿಯಿಂದ, ಮನಸ್ಸಿಲ್ಲದ ಮನಸ್ಸಿನಿಂದ ಮಂಗಳೂರಿಗೆ ಮರಳಿದರು. (ಹಾಗೇ ಮುಂದೆ ಕಾಪು, ಉಡುಪಿಗಳಲ್ಲಿ ಕೆಲವು ಸ್ಥಳೀಯ ಉತ್ಸಾಹಿಗಳು ಸೇರಿಕೊಳ್ಳುವುದೂ ಕಳಚಿಕೊಳ್ಳುವುದೂ ನಡೆದಿತ್ತು.)

ಎರಡನೇ ವಿಶ್ರಾಂತಿ – ಕಾಪು ಪೆಟ್ರೋಲ್ ಬಂಕಿನಲ್ಲಿ. ಮೂರನೇ ಮತ್ತು ಕೊನೆಯ ಸುತ್ತಿನ ಸವಾರಿ ನೇರ ಉಡುಪಿಯ ಇಂದ್ರಾಳಿಯ ಪೆಟ್ರೋಲ್ ಬಂಕಿಗೆ. ಹತ್ತೂವರೆ ಗಂಟೆಯ ಸುಮಾರಿಗೆ ತೊಡಗಿದ ಇದರಲ್ಲಿ ಹೆದ್ದಾರಿಯ ಸಾರ್ವಜನಿಕ ವಾಹನ ದಟ್ಟಣೆ ಮತ್ತು ಬಿಸಿಲಿನ ಪೆಟ್ಟು ಗರಿಷ್ಠವಿತ್ತು.

ಬೆಂಬಲದ ವ್ಯಾನು ಕೊಡುತ್ತಿದ್ದ ಕಿತ್ತಳೆ, ನೀರನ್ನು ಬಳಸಿದ್ದಕ್ಕೆ ಲೆಕ್ಕವಿಲ್ಲ. ಅನುಭವೀ ಸವಾರರು ತಂತಮ್ಮ ಮಿತಿಯಲ್ಲಿ ಬಿಸಿಲ ಝಳ ದಿಟ್ಟಿ ಕುಕ್ಕದಂತೆ, ಚರ್ಮ ಸುಡದಂತೆ, ಬೆವರಧಾರೆಯಿಂದ ಇರಿಸುಮುರಿಸು ಉಂಟಾಗದಂತೆ ಬಗೆತರದಲ್ಲಿ ಸಜ್ಜಾಗಿಯೇ ಇದ್ದರು. ಇಂದು ರಾಜ್ಯಮಟ್ಟದಲ್ಲಿ ಯಂತ್ರಚಾಲಿತ ದ್ವಿಚಕ್ರ ವಾಹನಗಳ ಸಹವಾರರಿಗೆ ಶಿರಸ್ತ್ರಾಣ ಬೇಕು/ ಬೇಡಗಳ ಹೊಯ್ದಾಟ ಭಾರೀ ಕೇಳುತ್ತಿದ್ದೇವೆ. ಆದರೆ ಇಲ್ಲಿ ಎಲ್ಲರೂ ಸ್ವ-ಇಚ್ಛೆಯಿಂದ ಧರಿಸಿದ ವಿಶೇಷ ರೂಪಿನ ಶಿರಸ್ತ್ರಾಣ, ಹೊಗೆ-ದೂಳು ಉಸಿರು ಕೆಡಿಸದಂತೆ ಕೆಲವರು ಏರಿಸಿದ ಮುಖಬಟ್ಟೆಗಳು ಸಾರ್ವಜನಿಕರಿಗೆ ವೇಷ ಕಟ್ಟಿದಂತೇ ಕಾಣಿಸಿದ್ದರೆ ಆಶ್ಚರ್ಯವಿಲ್ಲ! ನಿತ್ಯಕ್ಕೆ ಸರಾಸರಿಯಲ್ಲಿ ಮೂವತ್ತು ನಲ್ವತ್ತು ಕಿಮೀ ಪೆಡಲೊತ್ತಿ ಪಳಗಿದವರೇ ಎಲ್ಲ. ವಾರಾಂತ್ಯಗಳಲ್ಲಂತೂ ಎಂಎಸಿಸಿ ಸದಸ್ಯರಿಗೆ ನೂರಿನ್ನೂರು ಕಿಮೀ ಅಂತರಗಳೂ ಲೆಕ್ಕಕ್ಕಿಲ್ಲ, ಆಗುಂಬೆ ಚಾರ್ಮಾಡಿ ಘಾಟಿಗಳ ಎತ್ತರವೂ ಮನೆಯ ಹಿತ್ತಲ ದಿಬ್ಬದ ಹಾಗೆ. ಹಾಗಾಗಿ ನಿಗದಿತ ವೇಳೆ – ಮಧ್ಯಾಹ್ನದ ಊಟದ ಸಮಯಕ್ಕೆ, ತುಂಬ ಮೊದಲೇ ನಾವು ಇಂದ್ರಾಳಿ ತಲಪಿದ್ದೆವು. ಹಾಗೆಂದು ಬರಿದೇ ವಿಶ್ರಮಿಸುವ ಛಾತಿ ತಂಡದ್ದಲ್ಲ. ನಿಜದಲ್ಲಿ ನಾವು ಮುಟ್ಟಿದ್ದು ಮಣಿಪಾಲದ ತಪ್ಪಲು. ಅದರ ಎತ್ತರ ನಮಗೊಂದು ಸವಾಲಲ್ಲ ಎನ್ನುವಂತೆ ಉಸಿರು ಹೆಕ್ಕಲೂ ಇಂದ್ರಾಳಿಯಲ್ಲಿ ನಿಲ್ಲದೆ ಮಣಿಪಾಲದ ಎತ್ತರವನ್ನೂ ಸಾಧಿಸಿದೆವು. ಮುಂದುವರಿದು ಅದೇನೋ `ಎಂಡ್ ಪಾಯಿಂಟ್’ ಎಂದು ಜಪಿಸುತ್ತ ಪಾತಾಳ ದಾರಿ ಹಿಡಿದೆವು.

ಅಲ್ಲಿ ಪೊದರ ಮರೆಯಲ್ಲಿ ಸಿಕ್ಕ ಸ್ವರ್ಣಾನದಿಯ ದೃಶ್ಯ (ಝಲಕ್ ಮಾತ್ರ, ಜಳಕದ ಅವಕಾಶ ಸಿಗಲಿಲ್ಲ!), ವಿನಾಯಕ ದೇವಳದ ಸಾನ್ನಿಧ್ಯ ಕುಶಿ ಕೊಟ್ಟರೂ ಮತ್ತೆ ಮೇಲೇರುವ ಸಂಕಟ ಸ್ವಲ್ಪ ಹೆಚ್ಚೇ ಕಾಡಿದ್ದು ಸುಳ್ಳಲ್ಲ!

ಇಂದ್ರಾಳಿಯ ಐಓಸಿಎಲ್ ಪೆಟ್ರೊಲ್ ಬಂಕಿನ ಮಾಲಿಕ ಲಕ್ಷೀಕಾಂತ್, ಪಾಯಸ ಸಹಿತ ಒಳ್ಳೆಯ ಊಟದ ವ್ಯವಸ್ಥೆ ಮಾಡಿದ್ದರು. ಅನಂತರ ಅಲ್ಲಿನ ಮಿದು ಹುಲ್ಲ ಹಾಸಿನ ಮೇಲೆ, ಶಾಮಿಯಾನದ ನೆರಳಿನಲ್ಲಿ, ತೀಡುವ ಗಾಳಿಗೆ ಮೈಚಾಚಿ ಬಿದ್ದುಕೊಳ್ಳುವ ಬಯಕೆ ಕೆಲವರಿಗಾದರೂ ಬಂದಿದ್ದರೆ ತಪ್ಪಲ್ಲ. ಆದರೆ ತಮ್ಮ ಚರವಾಣಿಗೆ `ಸರ್ವಾ’ ತಂತ್ರಾಂಶ ಹೇರಿ, ದಿನದ ಸೈಕಲ್ ಸವಾರಿಯಲ್ಲಿ ಹೆಚ್ಚುಗಾರಿಕೆ ಸಾಧಿಸಲು ಸದಾ ತುಡಿಯುವ ಮನಸ್ಸುಗಳನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಆಗಲೇ “ಸುಮಾರು ಅರವತ್ತೈದು ಕಿಮೀ ಮಾತ್ರ ಆಯ್ತು. ಇನ್ನು ನೇರ ಮರಳಿದರೆ ಕೇವಲ ನೂರಿಪ್ಪತ್ತೈದು” ಎಂದು ಕೊರಗುತ್ತಿದ್ದ ಕೆಲವರು, ಮುಂದುವರಿದು ತಣ್ಣೀರಬಾವಿಗೋ ಮತ್ತೆಲ್ಲಿಗೋ ಸುತ್ತಿ ನೂರೈವತ್ತು ದಾಖಲಿಸುವ ಅಂದಾಜಿನಲ್ಲಿದ್ದರು. ಎರಡು ಗಂಟೆಯಂದಾಜಿಗೆ ನಾವು ಮತ್ತೆ ದಾರಿಗಿಳಿದಿದ್ದೆವು.

ಕಿರಣ ಕೂರ್ಗಣೆಗಳಲ್ಲಿ ಸೂರ್ಯ ತಿವಿದರೂ ವಾಯುದೇವನ ನಿರಂತರ ನೇವರಿಕೆ ನಮ್ಮನ್ನು ಚುರುಕಾಗಿಟ್ಟಿತ್ತು. ಹೆದ್ದಾರಿ ಪರಿಷ್ಕರಣೆಯ ತಡಬಡಗಳೂ ನಮ್ಮನ್ನು ತಡೆಯಲಿಲ್ಲ. ಹೆಚ್ಚು ಕಡಿಮೆ ಒಂದೂ ಕಾಲು ಗಂಟೆ ಅವಧಿಯಲ್ಲಿ ಎಲ್ಲೂ ವಿಶ್ರಮಿಸದೆ ಪಡುಬಿದ್ರೆ ಸೇರಿದ್ದೆವು. ಪ್ರಸನ್ನ ಕಾಲಮಿತಿಯಲ್ಲಿ ಧಾರಾಳಿಯಾಗಿ, ಅಭಿಯಾನದ ಸಮಾಪ್ತಿಯನ್ನು ಪುಟ್ಟ ಉಪಾಹಾರದೊಡನೆ ಪಣಂಬೂರಿನಲ್ಲಿ ಐದು ಗಂಟೆಗೆ ಸಜ್ಜುಗೊಳಿಸಿದ್ದ. ಹಾಗಾಗಿ ಪಡುಬಿದ್ರೆಯ ವಿಶ್ರಾಂತಿಯನ್ನು ತುಸು ಲಂಬಿಸಿ, ಮುಂದೆ ನಿಧಾನಗತಿಯಲ್ಲೇ ಸಾಗಿ ಸಮಯಕ್ಕೆ ಸರಿಯಾಗಿ ಪಣಂಬೂರು ಸೇರಿಕೊಂಡೆವು. ಪಣಂಬೂರಿನ ಐಓಸಿಎಲ್ ಪೆಟ್ರೋಲ್ ಬಂಕಿನಲ್ಲಿ ಕಾದಿದ್ದ ಲಘೂಪಹಾರಕ್ಕೆ ನ್ಯಾಯ ಸಲ್ಲಿಸಿ, ಅಭಿಯಾನದ ಯಶಸ್ವೀ ಮುಕ್ತಾಯವನ್ನು ಸಾರಿದೆವು.

ಮಂಗಳೂರಿನ ಹೊಸ ತಲೆಮಾರಿನ ಸೈಕಲ್ ಸವಾರಿ ಜಾಗೃತಿಗೆ ಪ್ರಾಯ ತುಂಬ ಕಿರಿದು (ಮೂರ್ನಾಲ್ಕು ವರ್ಷ, ಅಷ್ಟೆ). ಇಲ್ಲಿ ಯಾವುದೇ ಔಪಚಾರಿಕ ಬಂಧನಗಳಿಲ್ಲದೆ (ಅರ್ಜಿ, ಶುಲ್ಕ, ನೋಂದಣಿ, ಪದಾಧಿಕಾರದ ಗೋಜಲು ಏನೂ ಇಲ್ಲ) ಎರಡು ಸೈಕಲ್ ಸಂಘಗಳು ಚುರುಕಾಗಿಯೇ ಕಾರ್ಯ ನಿರತವಾಗಿವೆ. ನಾನೂ ಸೇರಿದಂತೆ ಹಲವರು ಕಾಲಾನುಕೂಲ, ರುಚಿ ನೋಡಿಕೊಂಡು ಎರಡರಲ್ಲೂ ಭಾಗೀದಾರಿಕೆ, ಪ್ರೀತಿ ಗೌರವಗಳನ್ನೂ ಗಳಿಸಿದ್ದೇವೆ. ಇಲ್ಲಿ ಐಓಸಿಎಲ್ಲಿನಂಥ ಒಂದು ಖಾಸಗಿ ಸಂಸ್ಥೆ ಸಾರ್ವಜನಿಕ ನೆಲೆಯಲ್ಲಿ, ಅದೂ ಒಂದು ಉದಾತ್ತ ಉದ್ದೇಶಕ್ಕಾಗಿ ಪೂರ್ಣ ಉಚಿತ ಅಭಿಯಾನ ಹೊರಡಿಸಿದಾಗ ಎಲ್ಲರೂ ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದರೆ ಸವಾರರ ಸಂಖ್ಯೆ ಕಡಿಮೆಯಲ್ಲಿ ಅರ್ಧ ಶತಕ ದಾಟುತ್ತಿತ್ತು. ಅದು ಆಗದಂತೆ ಇನ್ನೊಂದು ಬಳಗ ಅದೇ ದಿನ ಬೇರೊಂದು ಕಲಾಪ ವ್ಯವಸ್ಥೆ ಮಾಡಿಕೊಂಡದ್ದು, ಅದರ ಗೆಳೆಯರು ಬೆಳಿಗ್ಗೆ ಪಣಂಬೂರು ಬಳಿ ಅಭಿಯಾನದ ಎದುರು ದಿಕ್ಕಿನಿಂದ ಬಂದು ನಮಗೆ ಕೇವಲ ಶುಭ ಹಾರೈಸಿದ್ದು ಖಂಡಿತವಾಗಿಯೂ ಸರಿಯಲ್ಲ.

೨೩. ಇನ್ನೂರರ ಗಡಿ ದಾಟಿದೋಟ: (೮-೨-೨೦೧೬) ಈ ತಿಂಗಳ ಕೊನೇ ಆದಿತ್ಯವಾರಕ್ಕೆ (೨೮-೨-೧೬) ಮಂಗಳೂರು ಸೈಕಲ್ಲಿಗರ ಸಂಘ (ಎಂ.ಎ.ಸಿ.ಸಿ) ಇನ್ನೂರು ಕಿಮೀಗಳ ಅರ್ಹತಾ ಪತ್ರ ನೀಡುವ ಬ್ರೆವೆಟ್ ಘೋಷಿಸಿತ್ತು. ಆ ಕುರಿತು ಇದೇ ೧೩ರ ಸಂಜೆ ಕಂಕನಾಡಿಯ ತಾಜ್ ಸೈಕಲ್ ವಠಾರದಲ್ಲಿ ವಿಚಾರ ವಿನಿಮಯಕ್ಕೂ ಕರೆ ಬಂದಿತ್ತು. ನಾನಿನ್ನೂ ಯೋಚನೆಯ ಹಂತದಲ್ಲೇ ಇದ್ದಾಗ ಮಂಗಳೂರು ಬೈಸಿಕಲ್ಲಿಗರ ಸಂಘ (ಎಂ.ಬಿ.ಸಿ) ನಿನ್ನೆಗೇ (೭-೨-೧೬) ಅನೌಪಚಾರಿಕ ಇನ್ನೂರು ಕಿಮೀ ಸವಾರಿಯನ್ನೇ ಘೋಷಿಸಿಕೊಂಡಿತ್ತು. ಸ್ಪರ್ಧಾತ್ಮಕ ಅಥವಾ ಔಪಚಾರಿಕ ಬಿಗಿತಗಳಿಲ್ಲದ ಕೂಟಕ್ರೀಡೆಯಾಗಿ ಸೈಕಲ್ ಸವಾರಿ ಅನುಭವಿಸುವ ಉತ್ಸಾಹದಲ್ಲಿ, ನಾನು ಬ್ರೆವೆಟ್ ಬಿಟ್ಟುಹಾಕಿ, ಎಂಬೀಸಿಯೊಡನೆ ಸೇರಿಕೊಂಡೆ.

ನಾಲ್ಕು ಗಂಟೆಗೆ ಹೊರಡಬೇಕಿದ್ದ ಸವಾರಿ `ಅವರಿವರನ್ನು’ ಕಾದು ಸುಮಾರು ಅರ್ಧ ಗಂಟೆ ತಡವಾಗಿಯೇ ಲೇಡೀಹಿಲ್ ವೃತ್ತ ಬಿಟ್ಟಿತು. ಕೊಟ್ಟಾರ, ಸುರತ್ಕಲ್ಲುಗಳಲ್ಲಿ ಸೇರಿಕೊಳ್ಳುವವರನ್ನೂ ಸೇರಿಸಿ ತಲೆಲೆಕ್ಕ ಸುಮಾರು ಮೂವತ್ತನ್ನು ಮುಟ್ಟಿತ್ತು. ಲಕ್ಷ್ಯ – ಉಡುಪಿ, ಕುಂದಾಪುರ ಮತ್ತು ವಾಪಾಸು ಮಂಗಳೂರು. ಗೂಗಲ್ ನಕ್ಷೆ ಹೇಳುವಂತೆ ಇದು ಸುಮಾರು ೯೬ ಕಿಮೀಗಳ ಅಂತರವಾದುದರಿಂದ ಪಡುಬಿದ್ರೆಯಲ್ಲಿ ೧೬ ಕಿಮೀಗಳ ಬಳಸುದಾರಿಯನ್ನೂ ನಮ್ಮ ಕಲಾಪ ಒಳಗೊಂಡಿತ್ತು. ಮುಕ್ಕ, ಪಡುಬಿದ್ರೆಗಳಲ್ಲಿ ತಂಡ ಕಿರುವಿಶ್ರಾಂತಿಯೊಡನೆ ಮರುಸಂಘಟಿತಗೊಂಡು, ಉಡುಪಿಯ ಹೊರವಲಯದ ಕಲ್ಯಾಣಪುರದಲ್ಲಿ ಬೆಳಗ್ಗಿನ ತಿಂಡಿಗೆ ನಿಲ್ಲಬೇಕು. ಮತ್ತೆ ಸಾಲಿಗ್ರಾಮದ ಕಿರುವಿಶ್ರಾಂತಿಯೊಡನೆ ಕುಂದಾಪುರ ಎಂದು ಹೋಗುವ ದಾರಿಯನ್ನು ಹೆಸರಿನಲ್ಲೂ ನಾಯಕತ್ವ ಹೊಂದಿದ ತಂಡದ ನಾಯಕ – ಗಣೇಶ್ ನಾಯಕ್, ವಿಷದಪಡಿಸಿದ್ದರು. ಬೆಂಗಾವಲಿಗೆಂದು ನಿಯುಕ್ತವಾದ ಕಾರು ಸಣ್ಣಪುಟ್ಟ ದುರಸ್ತಿ ಕೆಲಸಕ್ಕೂ ಬಾಳೆಹಣ್ಣು, ಖರ್ಜೂರ, ನೀರು ಮುಂತಾದ ಪೂರಕ ಆವಶ್ಯಕತೆಗಳಿಗೂ ಸಜ್ಜಾಗಿತ್ತು.

ಅಮವಾಸ್ಯೆಯ ಮುನ್ನಾ ದಿನದ ಕತ್ತಲೆ, ಸಣ್ಣ ಚಳಿಯೂ ಇತ್ತು. ಹಿಂಚುಮುಂಚಿನ ದೀಪಗಳನ್ನು ಬೆಳಗುತ್ತ, ಹೆದ್ದಾರಿಯ ವಿಸ್ತಾರದೊಡನೆ, ವಿರಳ ಏಕ ಮುಖ ಸಂಚಾರದ ಅನೂಕೂಲದೊಡನೆ ನಮ್ಮ ಆರಂಭ ಚುರುಕಾಗಿಯೇ ಇತ್ತು. ಮುಕ್ಕದ ವಿಶ್ರಾಂತಿ ಕಳೆದು, ಪಡುಬಿದ್ರೆ. ಅಲ್ಲಿ ಯೋಜನೆಯಂತೇ ಕಾರ್ಕಳ ದಾರಿ ಅನುಸರಿಸಿ, ಸುಮಾರು ಬೆಳ್ಮಣ್ಣಿನವರೆಗೆ (೮ ಕಿಮೀ) ಹೋಗಿ ಮರಳಿದೆವು.

ಆ ಅವಧಿಯಲ್ಲೇ ದಿನದ ಮುಂಬೆಳಕು ಹಾಗೂ ತೆಳು ಮಂಜು ಆವರಿಸಿ ನಮ್ಮ ಸವಾರಿಗೆ `ಅದ್ಭುತ’ದ ಸ್ಪರ್ಷ ನೀಡಿತು. ಆದರೆ ಇದು ವೈಯಕ್ತಿಕವಾಗಿ ನನಗೆ ಅಪಾಯವನ್ನೇ ತರಬಹುದಾಗಿದ್ದುದನ್ನು ಹೇಳದಿರಲಾರೆ.

ವಿಸ್ತಾರ, ನುಣ್ಣನೆ ದಾರಿ ಅತಿವೇಗದ ಸವಾರಿಯ ಆಮಿಷ ಒಡ್ಡದಂತೆ ಅಲ್ಲಲ್ಲಿ ದಡಬಡ ದಿಣ್ಣೆಗಳನ್ನು ರಚಿಸಿದ್ದರು. ಇವಕ್ಕೇನೋ ಬೋರ್ಡಿನ ಮುನ್ಸೂಚನೆ ಮತ್ತು ಸ್ಥಳೀಯವಾಗಿ ಬಿಳಿ ಬಣ್ಣ ಬಳೆದಿದ್ದದ್ದು ಸರಿಯಾಗಿಯೇ ಇತ್ತು. ಆದರೆ ಅಡ್ವೆ ಕಳೆದು ಮುಂದಿನ ಸಣ್ಣ ಪೇಟೆ ಪರಿಸರದಲ್ಲಿ ಯಾವ ಮುನ್ಸೂಚನೆಯಿಲ್ಲದ ಕಬ್ಬಿಣದ ತಡೆಬೇಲಿಗಳನ್ನು ದಾರಿಗಟ್ಟ ಇಟ್ಟಿದ್ದರು. ದೊಡ್ಡ ವಾಹನಗಳು ಅಂಥಲ್ಲಿ ವೇಗವನ್ನು ತೀವ್ರ ಇಳಿಸಿ, ಅಂಕಾಡೊಂಕು ಚಲಿಸಿ ಮುಂದುವರಿಯುತ್ತವೆ. ನನ್ನ ದುರದೃಷ್ಟಕ್ಕೆ ಇಲ್ಲಿನ ಬೇಲಿಗೆ ಬೆಳಕು ಪ್ರತಿಫಲಿಸುವ ಬಿಲ್ಲೆಗಳಿರಲಿಲ್ಲ. ಸಾಲದ್ದಕ್ಕೆ ವಾತಾವರಣದ ಮಂಜಿನ ಮುಸುಕು, ಕನ್ನಡಕಕ್ಕೂ ಕಟ್ಟಿದ ಮಂಜು, ಹೆಚ್ಚುವರಿಯಾಗಿ ಎದುರಿನಿಂದ ನನ್ನ ಕಣ್ಣು ಕೋರೈಸಿ ದಾಟಿದ ದೊಡ್ಡ ವಾಹನವೊಂದರ ಬೆಳಕು ಸೇರಿ ಒಮ್ಮೆಗೇ ನಾನು ದಾರಿ ಕಾಣದಾದೆ. ಆಕೂಡಲೇ ನಾನು ಪೂರ್ಣ ಬ್ರೇಕ್ ಹಾಕಿದ್ದೂ ಸೈಕಲ್ಲಿನ ಎದುರಿನ ಚಕ್ರ ಒಂದು ತಡೆ ಬೇಲಿಯೊಳಗೆ ನುಗ್ಗಿ ನಿಂತದ್ದೂ ಒಟ್ಟೊಟ್ಟಿಗೇ ಆಗಿತ್ತು! ಅದೃಷ್ಟಕ್ಕೆ ಸೈಕಲ್ಲಿಗಾಗಲೀ ನನಗಾಗಲೀ ಯಾವುದೇ ಜಖಂ ಆಗಲಿಲ್ಲ.

ಕಟಪಾಡಿಯ ಬಳಿ ಒಬ್ಬ ಸವಾರ ಸ್ನಾಯು ಸೆಳೆತಕ್ಕೆ ತುತ್ತಾದ. ಅವನಿಗೆ ಮಸಾಜಿನ ಚಿಕಿತ್ಸೆ ಕೊಟ್ಟು, ಸೈಕಲ್ ಸಮೇತ ಅವನನ್ನು ಕಾರಿನಲ್ಲಿ ಕೂರಿಸಿ ಮುಂದುವರಿಯುವಲ್ಲಿ ಅನಿವಾರ್ಯವಾಗಿ ತಂಡಕ್ಕೆ ಮತ್ತೊಂದೇ ಕಿರು ವಿಶ್ರಾಂತಿ ಸಿಕ್ಕಿತ್ತು. ಮುಂದೆ ಎಂಟೂವರೆಯಿಂದ ಒಂಬತ್ತರವರೆಗೂ ಸದಸ್ಯರೆಲ್ಲ ಒಂದೇ ದಾರಿಯಲ್ಲಿ ಸಾಗಿದ್ದರೂ ವೈಯಕ್ತಿಕ ಮಿತಿಗಳಲ್ಲಿ ಚದುರಿದಂತೆ ಕಲ್ಯಾಣಪುರದ ಹೋಟೆಲು ಸೇರಿದ್ದೆವು. ಅಲ್ಲಿನ ಉಪಾಹಾರ ಸಾಮಾನ್ಯ. ಹಾಗಾಗಿ ಮಧ್ಯಾಹ್ನದ ಊಟಕ್ಕೆ ಅಲ್ಲಿನದೇ ಬೇರೊಂದು ಹೋಟೆಲನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು. ಅವರಾದರೂ “ಆದಿತ್ಯವಾರ ಅಪರಾಹ್ನ ಎರಡು ಗಂಟೆಯವರೆಗೆ ಮಾತ್ರ” ಎನ್ನುವುದನ್ನು ಒತ್ತಿ ಹೇಳಿ ಬೀಳ್ಕೊಂಡರು. ಯೋಜನೆಯ ಅಂತಿಮ ಹಂತ – ಸಾಲಿಗ್ರಾಮದಲ್ಲಿ ಕಿರು ವಿಶ್ರಾಂತಿ, ಕುಂದಾಪುರ ಮತ್ತೆ ವಾಪಾಸು ಕಲ್ಯಾಣಪುರ ಎಂದೇ ಹೊರಟೆವು.

ಸಾಲಿಗ್ರಾಮದಲ್ಲೊಂದು ಕಿರು ವಿಶ್ರಾಂತಿ ಎಂದದ್ದೇ ನಾನು ಆ ಊರಿನ ಗೆಳೆಯ ಪಿ.ವಿ. ಉಪಾಧ್ಯರಿಗೆ ಚರವಾಣಿಸಿ ಸುದ್ದಿ ಮುಟ್ಟಿಸಿದೆ. ಬಹಳ ಹಿಂದೆಯೇ ಮಡಚುವ ಸೈಕಲ್ಲೊಂದನ್ನು ವಿದೇಶದಿಂದಲೇ ತರಿಸಿ ಸಾಕಷ್ಟು ಸವಾರಿ ನಡೆಸಿದವರು ಇವರು. ಕನಿಷ್ಠ ಅರ್ಧ ಗಂಟೆಯ ಬಿಡುವನ್ನೇ ಸಜ್ಜುಗೊಳ್ಳುವ ಸೂಚನೆಯಾಗಿ ಸ್ವೀಕರಿಸಿ ಉಪಾಧ್ಯರೂ ನಮ್ಮ ತಂಡ ಸೇರಿಕೊಂಡರು!

ತಂಡದ ಹಿರಿಯ ಸದಸ್ಯರಲ್ಲಿ ಬೆಳ್ಮಣ್ಣು ಮೂಲದ, ಪಾಂಡೇಶ್ವರ ವಾಸಿಯಾದ ಮಹಮದ್ (೫೪ ವರ್ಷ) ವಿಶಿಷ್ಟ ಗಣ್ಯರು. ಮೆರಥಾನ್ ಓಟಗಾರ, ಮೈಸೂರು ಟ್ರಯತ್ಲಾನ್ (ಒಂದೂವರೆ ಕಿಮೀ ಈಜು, ಇಪ್ಪತ್ತೋ ಇಪ್ಪತ್ನಾಲ್ಕೋ ಕಿಮೀ ಸೈಕಲ್ ಸವಾರಿ ಮತ್ತು ಹತ್ತು ಕಿಮೀಗೂ ಮಿಕ್ಕ ಓಟವನ್ನು ಒಂದೇ ಸರಣಿಯಲ್ಲಿ ಪೂರೈಸಬೇಕು) ಸ್ಪರ್ಧೆಯಲ್ಲಿ ಹತ್ತನೇ ಸ್ಥಾನಸಂಪನ್ನರಿವರು. ಮೈಸೂರಿನಲ್ಲಿ ಸೈಕಲ್ ಸವಾರಿಯಲ್ಲೇ ತಾನು `ಬಡವಾದೆ’ ಎಂದನ್ನಿಸಿದ್ದಕ್ಕೆ ಇವರು ಅದನ್ನೇ ತುಸು ಗಂಭೀರವಾಗಿಯೇ ಎತ್ತಿಕೊಂಡಿದ್ದರು. ಆದರೆ ಸಾಧನೆಯನ್ನು ಸಲಕರಣೆಯ ಸೌಲಭ್ಯಕ್ಕೊಪ್ಪಿಸದೇ ತನ್ನ ಶಕ್ತಿಗೇ ಮೀಸಲಿಟ್ಟದ್ದು ಅಸಾಮಾನ್ಯ; ಇವರದ್ದು ಹೆಚ್ಚುವರಿ ಗೇರ್ ಇಲ್ಲದ ಸಾಮಾನ್ಯ ಸೈಕಲ್! ನಮ್ಮ ಸವಾರಿಯ ಮಂಗಳೂರು – ಮುಕ್ಕ ಓಟದಲ್ಲಿ, ನಮ್ಮೊಳಗಿನ ಪ್ರಥಮ ಪರಿಚಯದಲ್ಲೂ ಇವರು ಉತ್ಸಾಹಕ್ಕೆ ಕಡಿವಾಣ ಹಾಕಿ ನನಗೆ ಜತೆಗೊಟ್ಟಿದ್ದರು. ಉಳಿದಂತೆ ತಂಡದ ಶಿಸ್ತು ಕಡಿಯದೇ ಸದಾ ಮುಂದಾಳೇ ಆಗಿದ್ದರು ಮಹಮ್ಮದ್. ದಾರಿಯಲ್ಲಿ ಇವರಿಗೆ ಲೋಕಾಭಿರಾಮವಾಗಿ ಕುಂದಾಪುರ ಕೋಡಿಯ ಬಂಧುಗಳಿಂದ ದೂರವಾಣಿ ಕರೆ ಬಂದದ್ದಿರಬೇಕು. ಆಗ ತಾನು ಹೀಗೊಂದು ಪರಿಸರ ಅಭಿಯಾನದ ಭಾಗವಾಗಿ ಕುಂದಾಪುರಕ್ಕೆ ಬರುತ್ತಿದ್ದೇನೆ ಎಂದು ಸುದ್ದಿ ಮುಟ್ಟಿಸಿದರು. ಕೂಡಲೇ ಅಲ್ಲಿನ ಪುಣ್ಯಾತ್ಮರು, ಇಡಿಯ ತಂಡವನ್ನು ತಮ್ಮ ಕೋಡಿ ಕಿನಾರೆಯ ಗೆಳೆಯರ ಬಳಗದ ಕಿರು ಆತಿಥ್ಯ ಸ್ವೀಕಾರಕ್ಕೆ ಸಿಕ್ಕಿಸಿ ಹಾಕಿದರು.

ಕೋಟೇಶ್ವರ ಕಳೆದು, ಕುಂದಾಪುರಕ್ಕೂ ಮೊದಲು ಸಿಗುವ ಎಡಗವಲಿನಲ್ಲಿ ಎರಡು – ಮೂರು ಕಿಮೀ ಅಂತರ ಕೋಡಿಗೆ. ಅದೊಂದು ವಿಶೇಷವಲ್ಲದಂತೆ ನಮ್ಮ ತಂಡ ಆ ಕಡಲ ಕಿನಾರೆಗೆ ಚುರುಕಾಗಿಯೇ ಪೆಡಲಿತ್ತು. ಆದರೆ ಅಲ್ಲಿ ನಮಗೆ ದೊಡ್ಡ ಸ್ವಾಗತ ಬ್ಯಾನರ್ ಹಿಡಿದು ಸೇರಿದ್ದ ಜನ ಮತ್ತವರ ಆತ್ಮೀಯತೆ ತೀರಾ ಸಂತೋಷದಾಯಕ ಅಚ್ಚರಿ. ಕೆಲವೇ ಗಂಟೆಗಳ ಅವಧಿಯಲ್ಲಿ ಕೋಡಿ ಕಿನಾರೆಯ ಗೆಳೆಯರ ಬಳಗ ನಮಗೆ ಅನೌಪಚಾರಿಕವಾಗಿಯೇ ಊರಿನ ಹಿರಿಯ ಪೋಲಿಸ್ ಅಧಿಕಾರಿಯ ನೇತೃತ್ವದಲ್ಲಿ ನೀಡಿದ ಸತ್ಕಾರ ಯಾರನ್ನೂ ಮೂಕರನ್ನಾಗಿಸುವಂತಿತ್ತು. ಕುಡಿಯುವ ನೀರು ಕೊಟ್ಟರು, ಮೈಕ್ ಶಾಮಿಯಾನ, ಕುರ್ಚಿಗಳ ಹಂಗಿಲ್ಲದೆ ಸೂರ್ಯ ಸಾಕ್ಷಿಯಾಗಿ ಚುರುಕಿನ ನಾಲ್ಕೇ ಮಾತಾಡಿಸಿದರು. ತಮ್ಮ ವಠಾರಕ್ಕೆ ಕರೆದೊಯ್ದು ಬೊಂಡ, ಬಾಳೇಹಣ್ಣು, ಕಿತ್ತಳೆ, ಗೇರುಬೀಜ, ಬಾದಾಮಿ, ಖರ್ಜೂರ ಮತ್ತು ಮೊಟ್ಟೆ ಧಾರಾಳ ಕೊಟ್ಟರು. ಏತನ್ಮಧ್ಯೆ ಇವರಿಗೆಲ್ಲ ಹಿರಿತನದ ಜತೆಗೊಟ್ಟವರೊಬ್ಬರು ಇಡೀ ತಂಡವನ್ನು ಅವರ ಮಸೀದಿಗೂ ಒತ್ತಾಯಪೂರ್ವಕವಾಗಿ ಕರೆದೊಯ್ದಿದ್ದರು.

ಕೋಡಿ ಕಿನಾರೆಯ ಆ ಪ್ರಾರ್ಥನಾ ಮಂದಿರ ತೀರಾ ವಿರಳದ ಪೈಕಿ – ಪರಿಸರಪ್ರೇಮದ್ದು! ಇಸ್ಲಾಂ ಜತೆಗಿರುವ ಹಸಿರು ಇಲ್ಲಿ ಕೇವಲ ಬಣ್ಣವಲ್ಲ, ಪರಿಸರದ ಉಸಿರು. (ಆ ಹಿರಿಯರೂ ಊರಿನವರೂ ಹೇಳುವಂತೆ ಹಸಿರು–ಸ್ನೇಹೀ ಮಸೀದಿ ಜಗತ್ತಿನಲಿದೊಂದೇ) ವಠಾರದ ಒಂದು ಹಳೆಯ ಮರವನ್ನೂ ಒಳಗೊಂಡು ಆ ಕಟ್ಟಡ ಎದ್ದಿದೆ. ಕಟ್ಟಡದ ನೆತ್ತಿಯಲ್ಲಿ ವಾಯು ಗಿರಣಿ ಮತ್ತು ಸೌರಫಲಕಗಳನ್ನು ಹೂಡಿದ್ದಾರೆ. ಅಲ್ಲಿನ ವಿದ್ಯುಚ್ಛಕ್ತಿ ಮಸೀದಿಯನ್ನು ಸ್ವಾಯತ್ತವನ್ನಾಗಿಸಿದೆ ಮತ್ತು ಸರಕಾರೀ ಕೊರತೆಗೂ ಆಂಶಿಕ ಪೂರೈಕೆದಾರರನ್ನಾಗಿಸಿದೆ. ಅಲ್ಲಿ ನಮಗೆಲ್ಲ ಸಂಸ್ಕರಿಸಿದ ಹಸಿ ದ್ರಾಕ್ಷಿಯ ತಿರುಳನ್ನೇ ಕೊಟ್ಟು ಸಮ್ಮಾನಿಸಿದರು. ಪರಿಸರದ ಸಮನ್ವಯ, ಸಾಮಾಜಿಕ ಸಮನ್ವಯದ ಒಟ್ಟಾರೆ ಕೋಡಿ ಕಿನಾರೆಯ ಗೆಳೆಯರ ಬಳಗ ನಿಜಕ್ಕೂ ನಮ್ಮ ಸಾಹಸಯಾತ್ರೆಯನ್ನು ಅವಿಸ್ಮರಣೀಯವನ್ನಾಗಿಸಿತು.

ಕೋಡಿಯ ಕಡಲ ತಡಿಯ ದಾರಿಯಲ್ಲೇ ಮತ್ತೆ ಕೋಟೇಶ್ವರದಲ್ಲಿ ಹೆದ್ದಾರಿಯನ್ನು ಸಂಧಿಸಿದೆವು. ಕೋಡಿ ಸಮ್ಮಾನದಲ್ಲಿ ಕಳೆದ ಸಮಯವನ್ನು ಕಲ್ಯಾಣಪುರದ ಹೋಟೆಲಿನ ಕೆಲಸದ ಅವಧಿಗೆ ಹೊಂದಿಸುವ ಸಂಕಟ ನಮ್ಮದು. ರಣಗುಡುವ ಬಿಸಿಲಿನಲ್ಲಿ ಬೋಳು ಬೆಂಗಾಡಿನಂಥ ಹೆದ್ದಾರಿಯಲ್ಲಿ ಕಲ್ಯಾಣಪುರದ ಜಪ ನಮ್ಮದು. ಹೆದ್ದಾರಿಯ ಬಹುಭಾಗ ಸಪಾಟು, ನಯವೇ ಇದ್ದರೂ ಒಟ್ಟಾರೆ ಹೆದ್ದಾರಿಯ ಕೆಲಸ ಇನ್ನೂ ನಡೆಯುತ್ತಲೇ ಇದೆ. ಹಾಗಾಗಿ ದೂಳು, ಹೊಗೆಯೊಡನೆ ಅಲ್ಲಿಲ್ಲಿ ಓಣಿ ಬದಲಿಸುತ್ತ ವಾಹನ ಸಂಚಾರದ ಅವ್ಯವಸ್ಥೆಯ ಕುರಿತೂ ಹೆಚ್ಚಿನ ಗಮನವಿಡುತ್ತಲೇ ಸಾಗಿದೆವು. ಒಂದೊಂದು ಲಾರಿ, ಬಸ್ ನಮ್ಮ ಪಕ್ಕದಲ್ಲಿ ಹಾದು ಹೋಗುವಾಗ ಅದರ ಗಾಳಿಯ ಒತ್ತಡ ನಮ್ಮ ತುಳಿತವನ್ನು ಹಗುರ ಮಾಡಿದ ಭಾವನೆ ಸುಳಿಯುತ್ತಿತ್ತು. ಅದಕ್ಕೂ ಮಿಗಿಲಾಗಿ ಅವುಗಳ ಕ್ಷಣಿಕ ನೆರಳು ಹೊಸ ಹುರುಪನ್ನೇ ಕೊಡುತ್ತಿತ್ತು! ಈ ಭಾಗದ ಸವಾರಿಯಲ್ಲಿ ಮತ್ತೆ ಎರಡೋ ಮೂರೋ ಮಂದಿ ಬಳಲಿಕೆ, ಸ್ನಾಯು ಸೆಳೆತಗಳ ಸುಳಿಯಲ್ಲಿ ನಿವೃತ್ತರಾದದ್ದು ವಿಶೇಷವೇನಲ್ಲ.

ಊಟಾನಂತರ ವಿಶ್ರಾಂತಿಯನ್ನು ತುಸು ದೀರ್ಘವಾಗಿಯೇ ತೆಗೆದುಕೊಂಡೆವು. ಸೂರ್ಯ ತುಸು ಇಳಿದ ಮೇಲೆ, ಅಂದರೆ ಮೂರೂವರೆ ಗಂಟೆಯ ಸುಮಾರಿಗೆ ಕಲ್ಯಾಣಪುರ ಬಿಟ್ಟೆವು. ಬಳಲಿಕೆ, ನೀರು ಕುಡಿಯುವ ನೆಪಗಳಲ್ಲಿ ವೈಯಕ್ತಿಕ ಸಣ್ಣ ನಿಲುಗಡೆಗಳನ್ನು ಅನುಭವಿಸುತ್ತ ಇಡಿಯ ತಂಡ ಕೊನೆಯದಾಗಿ ಒಟ್ಟಾದದ್ದು ಪಡುಬಿದ್ರೆಯನಂತರದ ಡಾಬಾದಲ್ಲಿ. ಮುಂದೆ ಎಲ್ಲ ಅವರವರ ಅನುಕೂಲದ ಸಮಯದಲ್ಲಿ ಎನ್ನುವಂತೆ ಮೂಲ್ಕಿ, ಸುರತ್ಕಲ್ಲುಗಳನ್ನು ಕಳೆದು ಅವರವರ ಬೀಡು ಸೇರಿಕೊಂಡೆವು. ಬೆಳಿಗ್ಗೆ ಸೂರ್ಯನಿಗೆ ಸ್ವಾಗತ ಹೇಳಿದ ನಾವು ಯಶಸ್ವೀ ದಿನ ಕೊಟ್ಟದ್ದಕ್ಕೆ ವಂದನೆಯೊಡನೆ ಆತನನ್ನು ಬೀಳ್ಕೊಟ್ಟೇ ಮನೆ ಸೇರಿದ್ದೆವು.

ನನ್ನನ್ನುಳಿದು ಬಹುತೇಕ ಎಲ್ಲರಲ್ಲೂ ಇದ್ದ ಸ್ಟ್ರಾವಾವೇ ಮೊದಲಾಗಿ ಹಲವು ನಮೂನೆಯ ಮಾಪಕಗಳು ದಿನದ ಕೊನೆಯಲ್ಲಿ ಇನ್ನೂರು ಕಿಮೀ ಮೇಲಿನ ಲೆಕ್ಕವನ್ನೇ ಕೊಡುತ್ತಿದ್ದುವು. ಹಾಗೂ ಕೊರತೆ ಕಂಡವರು ತುಸು ಹೆಚ್ಚೇ ಅಡ್ಡಾಡಿ ಇನ್ನೂರು ಕಿಮೀ ಲೆಕ್ಕಭರ್ತಿ ಮಾಡಿದ್ದು ಸಣ್ಣಮಾತೇನಲ್ಲ. ಸೋಲು ಗೆಲವುಗಳ ಬಾಧೆಯಿಲ್ಲದೆ, ಮುಂದೆ ಹಿಂದೆ ಎನ್ನುವ ಬೇಧವಿಲ್ಲದೆ, ಎಲ್ಲ ಒಂದೇ ಎನ್ನುವ ಭಾವದೊಡನೆ ತಂಡ ಉತ್ತರಿಸಿದ ಇನ್ನೂರರ ಗಡಿ ನಾಳೆ ಮುನ್ನೂರನ್ನೂ ಮೀರಿದರೆ ಆಶ್ಚರ್ಯವಿಲ್ಲ. ಕೂಟದ ಸಂಘಟನಾ ನಾಯಕ ಗಣೇಶ್ ಆದರೂ ಆತ ಎಲ್ಲರ ಆತ್ಮಾಭಿಮಾನಕ್ಕೆ ಒಂದೊಂದು ಪ್ರಾಮುಖ್ಯವನ್ನು ಕೊಡುವ ಕಲೆಯಿಂದ ತಂಡ ನಡೆಸಿದ ಪರಿ ಮೆಚ್ಚುವಂತದ್ದೇ. ಅದು ಸುಳ್ಳಲ್ಲ ಎನ್ನುವುದಕ್ಕೆ ನನ್ನ ಗ್ರಹಿಕೆಯ ಮಿತಿಯ ಸಣ್ಣ ಪಟ್ಟಿ ನೋಡಿ – ಕಿಶನ್ ಅಧಿಕೃತ ವಕ್ತಾರ, ವೇಣು ಸಮೂಹಮಾಧ್ಯಮದ ಪ್ರತಿನಿಧಿ, ಡಾನಿ ದಶಸಹಸ್ರ ಕಿಮೀ ಅಂತರ ಮೀರಿದ ಸರದಾರ, ಮಹಮ್ಮದರದು ಗೇರಿಲ್ಲದ ಸೈಕಲ್ ಸವಾರಿ, ಭವೇಶ್ ಪತಿ ಪತ್ನಿಯರ ಜೋಡಿ, ನಿತ್ಯ ತೀರಾ ಸಣ್ಣಾಳು, ನಾನು ಪ್ರಾಯದಲ್ಲಿ ಹಿರಿಯ, ಇನ್ನೊಬ್ಬ ಕೇವಲ ಒಂಬತ್ತನೇ ತರಗತಿ ವಿದ್ಯಾರ್ಥಿ, ಮತ್ತೊಬ್ಬ ಅಪಘಾತದಿಂದ ಎರಡೂ ಕಾಲು ಮರುಜೋಡಣೆಗೊಂಡು ಚೇತರಿಸಿದವ, ಇತ್ಯಾದಿ ಇತ್ಯಾದಿ. ಆದರೆ ದಿನದ ಉದ್ದಕ್ಕೂ ಸಮಯದ ಅಶಿಸ್ತು, ಮುನ್ಸೂಚನೆಗಳ ಅಸ್ಪಷ್ಟತೆ, ಅನುಸರಿಸುವಲ್ಲಿನ ಗೊಂದಲ ತಂಡವನ್ನು ಕಾಡಿತ್ತು. ದೀರ್ಘ ಕಾಲೀನ ನಡಾವಳಿಯಲ್ಲಿ `ಅನೌಪಚಾರಿಕತೆ’ ಎನ್ನುವುದು ಅಶಿಸ್ತು ಅಥವಾ ಅವ್ಯವಸ್ಥೆಗೆ ಬದಲಿ ಪದವಾಗದಂತೆ ನೋಡಿಕೊಳ್ಳುವುದು ಅವಶ್ಯ. ಈ ನಿಟ್ಟಿನಲ್ಲಿ ಭಾಗಿಗಳ ವಿವರಗಳು, ಮಾರ್ಗಸೂಚನೆ, ತಂಡದ ಒಕ್ಕಟ್ಟು ಮತ್ತು ಮರುರೂಪಣೆ, ಎಲ್ಲಕ್ಕೂ ಮುಖ್ಯವಾಗಿ ಬೆಂಗಾವಲಿನ ಬಲದ ಜವಾಬ್ದಾರಿಗಳೆಲ್ಲ ಇನ್ನೊಂದು ಇಂಥ ಯಾತ್ರೆಗೆ ಮೊದಲು ಅವಶ್ಯ ವಿಮರ್ಶಿಸಿಕೊಳ್ಳಲೇಬೇಕು. ಕ್ಷೇಮವಾಗಿ ಮುಗಿದದ್ದರಿಂದ ಎಲ್ಲ ದಕ್ಷವೂ ಆಗಿತ್ತೆಂಬ ಭ್ರಮೆಗೆ ಸಂಘ ಒಳಗಾಗದಿರಲಿ. ಮತ್ತೊಮ್ಮೆ ನನ್ನ ನಾನು ಸಮರ್ಥಿಸಿಕೊಳ್ಳಲು ಅವಕಾಶ ಒದಗಿಸಿದ ಎಲ್ಲರ ಪ್ರೀತಿಗೆ ಕೃತಜ್ಞತೆಯೊಡನೆ ಕೂಟಕ್ಕೆ ಶುಭ ಹಾರೈಸುತ್ತೇನೆ.

(ಅನಿರ್ದಿಷ್ಟವಾಗಿ ಮುಂದುವರಿಯಲಿದೆ)