(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ)
ಅಧ್ಯಾಯ ಹದಿನೆಂಟು

ಲಕ್ಷ್ಮೀ ಟೀಚರಿಗೆ ನಾನು ಸಾಕುಮಗಳಂತೆ ಆಗಿದ್ದೆ. ಅಪ್ಪ ತೀರಿದ ಮೇಲೆ ನನ್ನ ಮದುವೆಯ ಬಗ್ಗೆ ಆಗಾಗ ಅಮ್ಮನಲ್ಲಿ ಮಾತನಾಡತೊಡಗಿದಾಗ ಅಮ್ಮನಿಗೆ ಅವರು ನಮ್ಮ ಪಾಲಿನ ದೇವರಾಗಿಯೇ ಕಂಡಿದ್ದರು. ಅಪ್ಪನಲ್ಲಿ ಮಗಳ ಮದುವೆಯ ಬಗ್ಗೆ ವಾದಿಸಿ ಒಪ್ಪಿಸುವುದು ಅಮ್ಮನಿಗೆ ಸಾಧ್ಯವಿರಲಿಲ್ಲ. ಈಗ ಮುಂದೆ ನಿಂತು ತಾನೇ ಮಾಡಬೇಕು. ಮಗ ದೊಡ್ಡವನಾಗಿದ್ದಾನೆ. ಅವನ ಸಹಾಯದಿಂದಲಾದರೂ ಮಗಳಿಗೊಂದು ಗಂಡು ಹುಡುಕಬೇಕೆಂಬ ಛಲ ಅಮ್ಮನಲ್ಲಿ ಮೂಡಿತ್ತು. ಅದೇ ಸಮಯದಲ್ಲಿ ಲಕ್ಷ್ಮೀ ಟೀಚರು ಹಸಿರು ಪತಾಕೆ ಹಾರಿಸಿದ್ದು ಕಂಡು ಇನ್ನೇನು ಮಗಳಿಗೆ ಮದುವೆ ಮಾಡಿಯೇ ಸಿದ್ಧ ಎಂಬ ನಿರ್ಧಾರ ಮಾಡಿಬಿಟ್ಟಿದ್ದರು.

ಅಮ್ಮ ತಾನು ಮದುವೆಯೆಂಬ ವ್ಯವಸ್ಥೆಯಿಂದ ದೀರ್ಘಕಾಲ ನೋವು, ಹಿಂಸೆ ಅನುಭವಿಸಿದರೂ “ನೀನು ಮದುವೆಯಾಗಲೇಬೇಕು” ಎಂದು ಬಯಸುತ್ತಾರಲ್ಲಾ ಇದೇ ಈ ಜಗತ್ತಿನ ವಿಸ್ಮಯ. ಎಲ್ಲಾ ತಾಯಂದಿರೂ ಹೀಗೆಯೇ ಅಲ್ಲವೇ? ಮೋಹದ ಪಂಜರದಲ್ಲಿ ಸಿಕ್ಕಿಸಿ ಎಲ್ಲರನ್ನೂ ಪಳಗಿಸುತ್ತದೆ ಈ ಮದುವೆಯೆಂಬ ವ್ಯವಸ್ಥೆ. ನನ್ನಮ್ಮನ ಬಗ್ಗೆಯೇ ಅಪ್ಪ ಹೇಳಿದ ಮಾತು ನೆನಪಾಗುತ್ತದೆ. “ಮಗಳೇ, ನಿನ್ನಮ್ಮ ಹೀಗಿರಲಿಲ್ಲ. ಸರ್ಕಸ್ಸಿನ ಹುಲಿಯನ್ನು ಪಳಗಿಸಿದಂತೆ ನಾನು ಪಳಗಿಸಿದ್ದೇನೆ” ಎಂದಿದ್ದರು. ಪಿತೃಪ್ರಧಾನ ವ್ಯವಸ್ಥೆಯ ಅಪ್ಪಟ ಮಾದರಿಯಾಗಿದ್ದರು ನನ್ನಪ್ಪ. ಹೆಂಡತಿಯನ್ನೂ ಮಗಳನ್ನೂ ತನಗೆ ಬೇಕಾದಂತೆ ಪಳಗಿಸಿ ಒಂದು ಚೌಕಟ್ಟಿನೊಳಗೆ ಅವರು ಬಂಧಿಸಿಬಿಟ್ಟಿದ್ದರು. ಆದುದರಿಂದಲೋ ಏನೋ `ಗುಡ್‌ಗರ್ಲ್ ಸಿಂಡ್ರೋಮ್’ನಿಂದ ನಾನು ನರಳುತ್ತಿದ್ದೆ. ಇದರಲ್ಲಿ ಅಪ್ಪನ ಸ್ವಾರ್ಥವಿರುವುದು ನಿಜವಾದರೂ ಅವರ ದೈನೇಸಿ ಸ್ಥಿತಿಯಲ್ಲಿ ಹೀಗೆ ಮಾಡದೆ ಬೇರೆ ದಾರಿಯೇ ಇರಲಿಲ್ಲ. ಮಕ್ಕಳು ತಮ್ಮನ್ನು ಕಾಪಾಡಬೇಕು ಎನ್ನುವುದು ಎಲ್ಲಾ ಹೆತ್ತವರ ಮನದಾಳದ ಬಯಕೆಯೂ ಹೌದು. ಹೆತ್ತವರನ್ನು ಅವರ ಕಷ್ಟಕಾಲದಲ್ಲಿ ರಕ್ಷಿಸುವುದು ಮಕ್ಕಳ ಕರ್ತವ್ಯವೂ ಧರ್ಮವೂ ಹೌದು. ಆದರೆ ಆಗ ನಾನು ಮದುವೆಯ ಬಗ್ಗೆ ಯೋಚನೆ ಮಾಡಲಾರದಷ್ಟು ಬೇರೆ ವಿಷಯಗಳಲ್ಲಿ ತಲ್ಲೀನಳಾಗಿದ್ದೆ. ಬಾಲ್ಯದಿಂದಲೂ ನನಗೊಂದು ಹಠವಿತ್ತು. ಸೆಗಣಿಯ ಹುಳುಗಳಂತೆ ಅನಾಮಧೇಯರಾಗಿ ಬಂಧುಗಳಿಂದ ತಿರಸ್ಕೃತರಾಗಿ ನಾವು ಬದುಕುತ್ತಿದ್ದೆವು. ಸಮಾಜದಲ್ಲಿ ಮನುಷ್ಯರೆಂದು ಕರೆಸಿಕೊಳ್ಳುವಂತಹ ಸ್ಥಿತಿ ಬರಬೇಕು ಎಂಬುದು ನನ್ನ ಪ್ರಯತ್ನವಾಗಿತ್ತು. ನನ್ನ ಓದು, ಅಧ್ಯಯನ, ಸಾಹಿತ್ಯ ಕಲೆಗಳ ಮೇಲಿನ ಆಸಕ್ತಿಗಳು ಮದುವೆಯ ನೆನಪೇ ಇಲ್ಲದಂತೆ ನನ್ನನ್ನು ಬೆಳೆಸಿತ್ತು. ನನ್ನ ಸರಳ ಜೀವನಶೈಲಿಯಿಂದಾಗಿ ನಾನು ಸಂನ್ಯಾಸಿಯೆಂಬ ಬಿರುದು (ಬೈಗುಳವಾಗಿಯೂ) ಪಡೆದಿದ್ದೆ. ಯಾವ ವರನೂ ಬಂದು ಹೆತ್ತವರಲ್ಲಿ ಮದುವೆಯ ಬೇಡಿಕೆ ಇಡಲಿಲ್ಲವಾದುದರಿಂದ ನನ್ನ ಪ್ರಪಂಚದಲ್ಲಿ ನಾನು ನಿಶ್ಚಿಂತಳಾಗಿದ್ದೆ.

ಮದುವೆಯ ವಯಸ್ಸು ಅಂದರೆ ಹದಿಹರೆಯ. ಅದು ದಾಟಿದ ಕೂಡಲೇ ಮದುವೆಯ ಬಗ್ಗೆ ನಮಗಿಂತ ಹೆಚ್ಚು ಆಸಕ್ತಿ ಉಳಿದವರಿಗೆ ಅಂದರೆ ನಮ್ಮ ಸುತ್ತಮುತ್ತಲಿನವರಿಗೆ ಇರುತ್ತದೆ. ನನ್ನ ಸಹೋದ್ಯೋಗಿ ಪುರುಷರಿಗೆಲ್ಲಾ ನಾನೊಂದು ವಿಚಿತ್ರ ವಸ್ತುವಿನಂತೆ ಕಾಣುತ್ತಿದ್ದೆನೋ ಏನೋ? ಕೂಟದಲ್ಲಿ ಮಾತನಾಡುವಾಗ ವಿಷಯ ಸುತ್ತಿ ಸುತ್ತಿ ಕೊನೆಗೆ ಮದುವೆಯ ಬಗ್ಗೆ ಅದರಲ್ಲೂ ಕಾಮದ ಕೇಂದ್ರಕ್ಕೆ ಬಂದು ನಿಲ್ಲುತ್ತಿದ್ದುದು ನನ್ನಲ್ಲಿ ಸೋಜಿಗವನ್ನುಂಟುಮಾಡುತ್ತಿತ್ತು. ಮದುವೆಯ ವಯಸ್ಸು ದಾಟಿದ ಹೆಣ್ಣುಗಳೆಂದರೆ `ವಾರೀಸುದಾರರಿಲ್ಲದ ಗದ್ದೆ’ಗಳೆಂದೇ ಭಾವಿಸುವ ಸಮಾಜದ ಮನಸ್ಥಿತಿ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಿದ್ದವು. “ಏನು? ಮದುವೆಯಾಗುವುದಿಲ್ಲವಾ? ಏಕೆ?” ಈ ಪ್ರಶ್ನೆಗಳು ಮೊದ ಮೊದಲು ಮುಜುಗರ ಹುಟ್ಟಿಸುತ್ತಿದ್ದುವು. ಕೇಳಿ ಕೇಳಿ ಚಿಟ್ಟು ಹಿಡಿದ ಮೇಲೆ “ಆಗುತ್ತೇನೆ, ಮಾಡುತ್ತೀರಾ?” ಎಂದು ಪ್ರಶ್ನೆ ಕೇಳಿದವರ ಮುಖಕ್ಕೆ ಎಸೆದ ಮೇಲೆ ಸ್ವಲ್ಪ ಕಡಿಮೆಯಾದವು. ಮದುವೆ ಪ್ರಾಯದ ಗಂಡು ಮಕ್ಕಳಿಗೂ ಈ ಪ್ರಶ್ನೆ ಕೇಳುವುದು, ಛೇಡಿಸುವುದು ಸಾಮಾನ್ಯ ಸಂಗತಿ. ಒಂದು ಸಣ್ಣ ವ್ಯತ್ಯಾಸವೆಂದರೆ ಗಂಡು ಹುಡುಗ ಮದುವೆ ಆಗುತ್ತಾನೆ.

ಹುಡುಗಿಗೆ ಮದುವೆ ಮಾಡುತ್ತಾರೆ ಅಷ್ಟೆ. ನಮ್ಮಂತಹ ಕೆಳ ಮಧ್ಯಮ ವರ್ಗದ ಸಮಾಜದಲ್ಲಿ ಮದುವೆ ಆಗದವಳನ್ನು ಎಲ್ಲರೂ ಪ್ರಶ್ನಿಸುವವರೇ. ಮದುವೆ ಆಗದೆ ಮುಕ್ತಿಯೇ ಇಲ್ಲ ಎಂಬಷ್ಟು ಒತ್ತಡಗಳಿರುತ್ತವೆ. ಅದೂ ನಾನು ಸಾಮಾನ್ಯ ಪ್ರೈಮರಿ ಶಾಲಾ ಟೀಚರಾಗಿರುವಾಗ ಯಾರಾದರೊಬ್ಬ ಗಂಡುಸನ್ನು ನನಗೆ ಗಂಟು ಹಾಕುವುದಕ್ಕೆ ಪ್ರಯತ್ನಿಸಿದವರೂ ಇದ್ದರು. ಮದುವೆ ಅನಿವಾರ್ಯವಲ್ಲವೆಂದು ಮನಸ್ಸು ಹೇಳುತ್ತಿತ್ತು. ನನ್ನ ಕಣ್ಣ ಮುಂದೆ ಅವಿವಾಹಿತೆಯರಾಗಿ ಬದುಕಿದ ಹಲವರು ಮಾದರಿಗಳಾಗಿದ್ದರು. ಅಲ್ಲದೆ ನಾನು ಕಲಿತದ್ದು ಉದ್ಯೋಗ ಕೈಗೊಂಡದ್ದು ಸಂನ್ಯಾಸಿನಿಯರ ಶಾಲೆಗಳಲ್ಲಿಯೇ. ಆದುದರಿಂದ ಆಧ್ಯಾತ್ಮದ ಸೆಳೆತವು ವಿವಾಹದ ಆಕರ್ಷಣೆಯನ್ನು ತಗ್ಗಿಸಬಹುದೇ ಎಂದು ಯೋಚಿಸಿದ್ದುಂಟು. ಹಲವು ವರ್ಷಗಳ ಕಾಲ ಅದೇ ಭ್ರಮೆಯಲ್ಲಿ ಬದುಕಿದ್ದುಂಟು. ಗಂಡು ಹೆಣ್ಣಿನ ದೇಹದೊಳಗೆ ನಿಸರ್ಗಸಹಜವಾಗಿ ಉಂಟಾಗುವ ಕೆಮಿಸ್ಟ್ರಿ ಇದೆಯಲ್ಲಾ ಅದನ್ನು ಯಾವ ಅಧ್ಯಾತ್ಮವೂ ತಡೆಯಲಾರದು ಎಂದು ಅರ್ಥವಾಗತೊಡಗಿತು. ಸನ್ಯಾಸದ ಮುಖವಾಡದ ಹಿಂದೆಯೂ ನಿಸರ್ಗದತ್ತವಾದ ಬಯಕೆಗಳಿರುವುದು ಸಾಧ್ಯವೆಂಬುದನ್ನು ನನ್ನ ಜೀವನಾನುಭವಗಳು ಕಲಿಸಿದವು. ಕಾಮಕ್ಕೆ ಕಣ್ಣಿಲ್ಲವೆಂಬುದನ್ನು ನನ್ನ ಬಾಲ್ಯದ ನೆರೆಕರೆಯಲ್ಲಿರುವ ಕೆಲವು ಕುಟುಂಬಗಳ ಜೀವನಶೈಲಿಯಿಂದ ಕಂಡಿದ್ದೆ. ಇವರಿಗೆಲ್ಲಾ ನಾಚಿಕೆಯೆಂಬ ಪದದ ಅರ್ಥವೇ ಗೊತ್ತಿಲ್ಲವೇನೋ ಎಂದು ಭಾವಿಸಿದ್ದೆ. ಮುಂದೆ ಮನಸ್ಸು ಪಕ್ವವಾದಂತೆಲ್ಲಾ ಲೈಂಗಿಕ ಕಾಮವು ಮನುಷ್ಯನಲ್ಲಿರುವ ಅಪೂರ್ವವಾದ ಶಕ್ತಿ. ಅದರ ಬಗ್ಗೆ ನಾಚಿಕೆಪಡುವ ಅಗತ್ಯವೇನೂ ಇಲ್ಲ ಎಂದು ಅರ್ಥವಾಯಿತು. ಯಾವಾಗ ತಾಂತ್ರಿಕರ ಉಪಾಸನೆಯ ಬಗ್ಗೆ ಪುಸ್ತಕ ಓದಿದೆನೋ ಅಂದು ನನ್ನ ತಲೆ ಚಿಂದಿ ಚಿತ್ರಾನ್ನವಾಯಿತು.

ಹೆಣ್ಣು ಮಾಯೆ, ನರಕಕ್ಕೆ ದಾರಿ ಎಂದ ದಾರ್ಶನಿಕರ ತತ್ವಕ್ಕೆ ತೀರಾ ವಿರುದ್ಧವಾದ ಈ ಸಿದ್ಧಾಂತಗಳನ್ನು ಹೇಗೆ ಸ್ವೀಕರಿಸುವುದೆಂದು ತಿಳಿಯದೆ ತಿಂಗಳುಗಟ್ಟಲೆ ಒದ್ದಾಡಿದ್ದುಂಟು. ಕೂಚುಭಟ್ಟನು ಮರುಳಾದದ್ದು ಇಂತಹ ಪುಸ್ತಕಗಳನ್ನು ಓದಿದ ಮೇಲೆಯೇ ಇರಬೇಕು ಎಂಬ ಸಂಶಯ ಮೂಡಿತು. ಈ ವಿಶ್ವದಲ್ಲಿದ್ದ ಎಲ್ಲಾ ವಿಷಯಗಳು ಅರ್ಥವಾಗಲೇಬೇಕೆಂಬ ಹಠ ಒಳ್ಳೆಯದಲ್ಲ. ನನಗೆ ಗೊತ್ತಿರದ ಎಷ್ಟೋ ವಿಷಯಗಳು ಇರಬಹುದು. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಕ್ಷೇಮವೆಂದು ನಿರ್ಧರಿಸಿದೆ. ಆಚಾರ್ಯ ರಜನೀಶರು ಬರೆದ ಪುಸ್ತಕಗಳನ್ನು ಓದಿದ ಮೇಲೆ ಮನಸ್ಸು ಮತ್ತು ಮೈಗಿರುವ ಸಂಬಂಧಗಳು ಸತ್ಯವಿರಬಹುದು ಎಂದು ಅನಿಸಿತು. ಗುರು ಸಿಗ್ಮಂಡ್ ಫ್ರಾಯ್ಡ್ ಮತ್ತು ಅವನ ಶಿಷ್ಯ ಯಾಂಗ್ ಸ್ವಲ್ಪ ಭಿನ್ನ ಭಿನ್ನವಾಗಿ ಕಾಮದ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರೂ ಮೂಲ ಬೇರು ಒಂದೇ ಎಂಬುದನ್ನು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳತೊಡಗಿದೆ. ಒಟ್ಟಾರೆಯಾಗಿ ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದೇ ನನಗೆ ಕುತೂಹಲದ ವಿಷಯವಾಯಿತು.

ಈ ಓದುವ ಹುಚ್ಚು ಎಷ್ಟು ಜೋರಾಯಿತು ಅಂದರೆ ಗಣಿತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬಿಟ್ಟು ಉಳಿದ ಎಲ್ಲಾ ಪುಸ್ತಕಗಳನ್ನು ಲೈಬ್ರೆರಿಯಿಂದ ತಂದು ಓದತೊಡಗಿದೆ. ಮುಖಲಕ್ಷಣ, ಅಂಗೈರೇಖೆಗಳ ಲಕ್ಷಣ ಪುಸ್ತಕಗಳನ್ನು ಓದಿ ಕಂಡ ಕಂಡವರನ್ನೆಲ್ಲಾ ಕುತೂಹಲದಿಂದ ನೋಡತೊಡಗಿದೆ. ಹೀಗೆ ನೋಡುತ್ತಾ ಹೋದಂತೆಲ್ಲಾ ಪುಸ್ತಕದಲ್ಲಿ ಹೇಳಿದ ಲಕ್ಷಣಗಳು ಯಾವುದೂ ತಾಳೆಯಾಗದೆ ಗೊಂದಲಕ್ಕೊಳಗಾದೆ. ಸದ್ಗುಣಗಳುಳ್ಳವರೆಂದು ಪುಸ್ತಕದಲ್ಲಿ ಹೇಳಿದ ಎಲ್ಲಾ ಲಕ್ಷಣಗಳಿದ್ದರೂ ದುರ್ಗುಣಗಳ ಮೊತ್ತವೇ ಆದ ಮನುಷ್ಯರನ್ನು ಕಂಡು ದಂಗಾದೆ. ಹಾಗೆಯೇ ಕೆಟ್ಟ ಲಕ್ಷಣಗಳೆಂದು ಹೇಳಿದವರಲ್ಲಿ ಸದ್ಗುಣಗಳನ್ನು ಕಂಡೆ. ರೇಖಾಶಾಸ್ತ್ರವೂ ಹಾಗೆಯೇ. ಧನರೇಖೆ ಇದ್ದ ಬಾಬಣ್ಣ ತುತ್ತು ಅನ್ನಕ್ಕೆ ಪರದಾಡುತ್ತಿದ್ದರು. ವಿದ್ಯಾರೇಖೆ ದೀರ್ಘವಾಗಿದ್ದ ತುಕುರಕ್ಕ ಅನಕ್ಷರಸ್ಥೆಯಾಗಿದ್ದರು. ಇಂತಹ ಕೆಲವು ವೈರುಧ್ಯಗಳನ್ನು ಕಂಡ ಮೇಲೆ ಆ ಪುಸ್ತಕ ಬರೆದವನ ಜಾಣತನಕ್ಕೆ ಶಿರಬಾಗಿದೆ. ಯಾಕೆಂದರೆ ಎಂತಹ ವೈರುದ್ಧ್ಯಗಳಿದ್ದರೂ ಕೂಡಾ ಅಡ್ಡಗೋಡೆಯಲ್ಲಿ ದೀಪವಿಟ್ಟಂತಹ ಹಲವು ಸಂಗತಿಗಳು ಆ ಕೃತಿಗಳಲ್ಲಿದ್ದುವು. ನನ್ನ ಬಾಲ್ಯದಲ್ಲಿ ಕೈಲಕ್ಷಣ, ಗಿಳಿಲಕ್ಷಣ, ಮುಖಲಕ್ಷಣ ಹೇಳುವವರು, ಭವಿಷ್ಯ ಹೇಳುವ ಬುಡುಬುಡಿಕೆಯವರು, ಕುರುಕುರು ಮಾಮನವರು ಇಂತಹ ಪುಸ್ತಕಗಳನ್ನು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರಂತಹ ಅನೇಕರ ಬದುಕಿಗೆ ಅನ್ನದ ದಾರಿ ತೋರಿಸಿದ ಗೌರವವಂತೂ ಈ ಪುಸ್ತಕಗಳಿಗಿವೆ.

ಭವಿಷ್ಯದ ಬಗ್ಗೆ ಯೋಚಿಸದ ಮನುಷ್ಯರಿದ್ದಾರೆಯೇ? ಯಥಾರ್ಥವಾಗಿ ಭವಿಷ್ಯ ಎನ್ನುವುದು ಇನ್ನೊಂದು ಬಾಗಿಲಿಂದ ಬರುವ ಭೂತಕಾಲವೇ ಎಂಬುದು ನಮಗೆ ತಿಳಿದಿರುವುದಿಲ್ಲ. ದ.ರಾ. ಬೇಂದ್ರೆಯವರು ಹೇಳಿದ ಹಾಗೆ `ನಾಳೆ ಎಂಬುದು ನಿನ್ನಿನ ಮನಸು, ಮುಂದೆ ಎಂಬುದು ಇಂದಿನ ಕನಸು’. ಹೌದು, ನನ್ನ ನಾಳೆಗಳ ಬಗ್ಗೆ ನಾನೇ ನಿರ್ಧಾರ ಕೈಗೊಳ್ಳಬೇಕಲ್ಲವೇ? ಇತರರು ನನ್ನ ಮೇಲೆ ಅಧಿಕಾರ ಚಲಾಯಿಸುವಂತಹ ಅವಕಾಶವನ್ನೇ ನೀಡದೆ, ನನ್ನ ಓದು, ನನ್ನ ಅಧ್ಯಾಪನ, ನನ್ನ ಕುಟುಂಬದ ಕಾಳಜಿ ಈ ಮೂರು ವಿಷಯಗಳನ್ನೇ ಕೇಂದ್ರವಾಗಿಟ್ಟುಕೊಂಡು ತನ್ಮಯತೆಯಿಂದ ಬದುಕತೊಡಗಿದೆ. ಹೀಗಿದ್ದರೂ ಅತೃಪ್ತಿಯ ಬೀಜವೊಂದು ಗುಂಗಿಹುಳದಂತೆ ನನ್ನ ತಲೆಯನ್ನು ಕೊರೆಯುತ್ತಾ ಇತ್ತು. ಇದೇ ನನ್ನನ್ನು ಏನಾದರೂ ಹೊಸತನ್ನು ಕಟ್ಟಬೇಕು, ಹೊಸತನ್ನು ನೀಡಬೇಕು. ಹೊಸತನ್ನು ಹೇಳಬೇಕು ಎಂಬ ತುಡಿತವನ್ನು ಹುಟ್ಟಿಸುತ್ತಿತ್ತು. ಶಾಲೆಯ ಮಕ್ಕಳಿಗೆ ಹಾಡು, ಕವನ, ಕತೆ, ನಾಟಕ ಇತ್ಯಾದಿಗಳ ರೂಪದಲ್ಲಿ ನನ್ನಲ್ಲಿ ಈ ಹೊಸತು ಸೃಷ್ಟಿಯಾಗುತ್ತಿತ್ತು. ವೃತ್ತಿಗೆ ಸೇರಿದ ಮೊದ ಮೊದಲು ನಾನು ಬರೆದ ಹಾಡು ಎಂದು ಹೇಳಲು ನಾಚಿಕೆಯಾಗಿ ಯಾರ್‍ಯಾರೋ ಬರೆದದ್ದು ಎಂದು ಸುಳ್ಳು ಹೇಳುತ್ತಿದ್ದೆ. ಯಾಕೆಂದರೆ ನನಗಿಂತ ಹಿರಿಯರು ಅದರ ಲೋಪದೋಷಗಳನ್ನೇನಾದರೂ ಹೇಳಿದರೆ ತಿದ್ದಿಕೊಳ್ಳಬಹುದಲ್ವಾ, ನಾನೇ ಬರೆದದ್ದೆಂದರೆ ಅದರ ದೋಷಗಳನ್ನು ಹೇಳದಿರುವ ಸಂಭವವಿದೆ. ಅದಕ್ಕಿಂತಲೂ ಹೆಚ್ಚು ನೇರ ನೇರ ಟೀಕೆ ಮಾಡುವವರನ್ನು ಎದುರಿಸಲಾರದ ಮುಖ ಹೇಡಿತನವೂ ನನ್ನಲ್ಲಿತ್ತು ಎಂಬುದು ಸತ್ಯಕ್ಕೆ ಹತ್ತಿರವಾಗಿದೆ.

ಗ್ರೀಕ್ ತತ್ವಜ್ಞಾನಿ ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆ ಇನ್ನೂ ವಿಚಿತ್ರ. ದೃಢಕಾಯರು, ಧೀರರು, ಸುಂದರ ಪುರುಷರು, ಧೀಮಂತರು, ಪ್ರತಿಭಾವಂತರು ಮಾತ್ರ ಮಕ್ಕಳನ್ನು ಹುಟ್ಟಿಸಬೇಕು. ಮಕ್ಕಳಿಗೆ ತಂದೆ ಯಾರೆಂಬುದು ಅಗತ್ಯವಿಲ್ಲ. ಹೆರುವ ತಾಯಿ ಮಾತ್ರ ಸತ್ಯ. ಆ ಎಲ್ಲಾ ಮಕ್ಕಳು ಗುಂಪಿನಲ್ಲಿ ಬೆಳೆಯಬೇಕು. ದುರ್ಬಲರು ಮಕ್ಕಳನ್ನು ಹುಟ್ಟಿಸಿದರೆ ಮುಂದಿನ ಪೀಳಿಗೆ ಬಲಹೀನವಾಗುತ್ತದೆಂದು ಅವನ ವಾದ. ಇಲ್ಲಿ ಗಂಡ ಹೆಂಡತಿ ಎಂಬ ಬಂಧವಿಲ್ಲ. ಹೆಣ್ಣು ಕಾಮಕ್ಕೆ ಹೆರಿಗೆಗೆ ಮಾತ್ರ ಉಪಯುಕ್ತ. ಹೀಗಿತ್ತು ಅವನ ಆದರ್ಶ ರಾಜ್ಯದ ಕಲ್ಪನೆ. ಇಂತಹ ಸಮಾಜವನ್ನು ನಾಗರಿಕ ಸಮಾಜ ಊಹಿಸುವುದು ಸಾಧ್ಯವಿಲ್ಲ. ಮನುಷ್ಯನಲ್ಲಿ ಇರುವ ಕಾಮವನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸದಿದ್ದರೆ ಅದಕ್ಕೆ ಅವಕಾಶ ಸಿಗದಿದ್ದರೆ ಅದು ವಿಕೃತ ಕಾಮವಾಗಿಯೋ ಮಾನಸಿಕ ಕ್ಲೇಶವಾಗಿಯೋ ಬದಲಾಗುವ ಸಾಧ್ಯತೆಗಳಿವೆ. ಕಾಮನೆಗಳಿಗೆ ಕಟ್ಟೆ ಕಟ್ಟುವ ಕಾಳಜಿ ಮದುವೆಯೆಂಬ ವ್ಯವಸ್ಥೆಗಿದ್ದುದು ನಿಜ. ಅದಕ್ಕಾಗಿ ವಿಧಿಸಿದ ನೀತಿ ನಿಯಮ, ವಿಧಿ ನಿಷೇಧಗಳು ಸಮಾಜದಲ್ಲಿ ಸ್ವಲ್ಪ ಮಟ್ಟಿನ ನಿಯಂತ್ರಣವೇನೋ ಇತ್ತು. ಆದರೆ ನಿಯಮಗಳಿರುವುದೇ ಮುರಿಯಲಿಕ್ಕೆ ಎಂದು ದೃಢವಾಗಿ ನಂಬಿದ್ದ ಮಾನವನಿಂದಾಗಿ ಉಂಟಾದ ಎಡವಟ್ಟುಗಳು ಹಲವಾರು ರಮ್ಯ ಕಥಾನಕಗಳಾಗಿಯೋ, ಸ್ತ್ರೀಯ ಶೋಷಣೆಯಾಗಿಯೋ, ದೌರ್ಜನ್ಯವಾಗಿಯೋ ಪರಿವರ್ತಿತವಾದ ಘಟನೆಗಳೆಷ್ಟಿಲ್ಲ? ಗಂಡು ಹೆಣ್ಣಿನ ಪ್ರೇಮ ಕಾಮಕ್ಕೆ ಸಂಬಂಧಿಸಿಯೇ ಪ್ರಪಂಚದಲ್ಲಿ ಎಷ್ಟೊಂದು ಮಹಾಕಾವ್ಯಗಳು ಸೃಷ್ಟಿಯಾಗಿಲ್ಲ? ಪ್ರೇಮ, ಕಾಮದ ವಸ್ತುವಿಲ್ಲದೆ ಕಥೆ, ಕಾದಂಬರಿಗಳು ಹುಟ್ಟುವುದಾದರೂ ಹೇಗೆ? ಆದುದರಿಂದಲೇ ಕಾಮಕ್ಕೆ ಕೊಲ್ಲುವ ಶಕ್ತಿಯೂ ಇದೆ. ಪೊರೆಯುವ ಶಕ್ತಿಯೂ ಇದೆ. ಯಾವುದೇ ಗುರುವಿನ ಕೃಪೆಯಿಲ್ಲದೆ ಮನುಷ್ಯನಲ್ಲಿ ತಾನಾಗಿ ಅರಳುವ ವಿದ್ಯೆಯೇ ಈ ಕಾಮನೆ. ಈ ಕಾಮನೆಗಳು ಕೀಳಾಗಿ ಅಭಿವ್ಯಕ್ತಿಗೊಳ್ಳಲು ದೇಹದೊಳಗಿನ ಹಾರ್ಮೋನುಗಳ ಪಾತ್ರವೆಷ್ಟೋ ಅಷ್ಟೇ ಅವನ ಪರಿಸರ ಮತ್ತು ಸಂಸ್ಕಾರವೂ ಕಾರಣ. ಮದುವೆಯೆಂಬ ಚೌಕಟ್ಟು ಅದಕ್ಕೆ ಒಂದು ಪಾವಿತ್ರ್ಯದ ಕಿರೀಟವಿಟ್ಟು ಗೌರವಿಸಿದೆ ಅಷ್ಟೆ.

ವಿವಾಹವೆಂಬ ವ್ಯವಸ್ಥೆಯು ಒಂದು ಸಿನಿಮಾ ಥಿಯೇಟರ್‌ನಂತೆ ಎನ್ನುತ್ತಾರೆ. ಒಳಗಿದ್ದವರಿಗೆ ಹೊರಗೆ ಬರುವ ಕಾತರ, ಹೊರಗಿದ್ದವರಿಗೆ ಒಳಗೆ ಹೋಗುವ ಆತುರ. ಮದುವೆಯಾಗಿ ನಾನು ಸಂಪೂರ್ಣ ಸುಖಿ ಎಂದು ಹೇಳಿದ ದಂಪತಿಗಳು ೧೦% ಇರಬಹುದೇನೋ. ಹೆಚ್ಚಿನವರಲ್ಲಿ ಕಟ್ಟಿಕೊಂಡ ಕಾರಣಕ್ಕಾಗಿ ಮಕ್ಕಳ ಹಿತಚಿಂತನೆಯಿಂದ ಹೇಗೋ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂಬುದು ತಿಳಿಯಿತು. ಒಳ್ಳೆಯ ಗಂಡ, ಒಳ್ಳೆಯ ಹೆಂಡತಿ ಸಿಗುವುದೂ ಕೂಟ ಲಾಟರಿಯ ಹಾಗೆ. ಅದೃಷ್ಟ ಇದ್ದರೆ ಸುಖ ಇಲ್ಲವಾದರೆ ಗೋತಾ. ಮನುಷ್ಯನ ಕಾಮತೃಷೆಯನ್ನು ತಣಿಸಲು ಸಮಾಜ ನೀಡಿದ ಪರ್ಮಿಟ್ಟು ಈ ಮದುವೆ. ಸಮಾಜದ ರಚನೆಯ ಒಂದು ತುದಿಯಲ್ಲಿ ವಿವಾಹದ ವ್ಯವಸ್ಥೆಯಿದ್ದರೆ ಇನ್ನೊಂದು ತುದಿಯಲ್ಲಿ ವೇಶ್ಯಾವಾಟಿಕೆ ಇರುವುದೂ ಕೂಡಾ ಸೋಜಿಗದ ಸಂಗತಿಯಾಗಿದೆ. ಅನಾದಿ ಕಾಲದಲ್ಲಿ ಮದುವೆ ಎಂಬ ವ್ಯವಸ್ಥೆ ಇರಲಿಲ್ಲ. ಪುರಾಣದ ಒಂದು ಕತೆಯಿದೆ. ಋಷಿಯೊಬ್ಬ ಯಜ್ಞ ಮಾಡುತ್ತಿದ್ದಾಗ ಅವನ ಪಕ್ಕದಲ್ಲಿ ಹೆಂಡತಿ ಕುಳಿತುಕೊಂಡಿದ್ದಳು. ಅಲ್ಲಿಗೆ ಬಂದ ಇನ್ನೊಬ್ಬ ಋಷಿ ಯಜ್ಞಕ್ಕೆ ಕೂತ ಹೆಂಡತಿಯನ್ನು ಎಳೆದುಕೊಂಡು ಹೋದನಂತೆ. ಆಗ ಯಜ್ಞಕ್ಕೆ ಕೂತ ಋಷಿಯ ಮಕ್ಕಳು ಅವನನ್ನು ತಡೆದರು. ತಮ್ಮ ತಾಯಿಯನ್ನು ತಂದೆಯ ಎದುರಿಗೇ ಇನ್ನೊಬ್ಬ ಋಷಿ ಎಳೆದುಕೊಂಡು ಹೋಗುವುದನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆದರೆ ಯಜ್ಞಕ್ಕೆ ಕೂತ ಋಷಿಯು ಮಕ್ಕಳನ್ನು ತಡೆದು, ಹೋಗಲಿ ಬಿಡಿ, ಅವನಿಗೆ ಎರಡು ಮಕ್ಕಳು ಬೇಕಾಗಿರಬಹುದು ಎಂದು ನಿರಾಳವಾಗಿ ಹೇಳಿದನಂತೆ. ತಂದೆಯ ಮಾತನ್ನು ಕೇಳಿ ಕೆರಳಿದ ಮಗನೊಬ್ಬ ಒಬ್ಬ ಪುರುಷನಿಗೆ ಒಬ್ಬಳೇ ಮಡದಿಯೆಂಬ ವ್ಯವಸ್ಥೆಯನ್ನು ಸಮಾಜದಲ್ಲಿ ರೂಢಿಗೊಳಿಸಿದನೆಂಬ ಕತೆಯಿದೆ. ಈ ಕತೆ ನಿಜವೋ ಸುಳ್ಳೋ ಎಂಬುದು ಮುಖ್ಯವಲ್ಲ. ಬಹಳ ಹಿಂದೆ ಮನುಷ್ಯ ಪ್ರಾಣಿಗಳಂತೆ ಬದುಕುತ್ತಿದ್ದ ಎಂಬುದು ಸತ್ಯ. ಸಂತಾನದ ಭದ್ರತೆ ಮತ್ತು ಕುಟುಂಬದ ಪೋಷಣೆಗಾಗಿ ಮದುವೆಯೆಂಬ ವ್ಯವಸ್ಥೆಯು ರೂಢಿಯಾಯಿತು.

ಆಧುನಿಕ ಕಾಲದಲ್ಲಿ ‘ಲಿವ್ ಟುಗೆದರ್’ ಎಂಬ ವ್ಯವಸ್ಥೆಯು ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವುದು ನಿಜವಾದರೂ ಅದು ಮದುವೆಯೆಂಬ ವ್ಯವಸ್ಥೆಗೆ ಪರ್ಯಾಯವಾಗಲಾರದು. ಮದುವೆ ವ್ಯವಸ್ಥೆಯ ಅಡಿಪಾಯವು ಅದುರುತ್ತಿರುವ ಲಕ್ಷಣಗಳೆಷ್ಟೇ ಇದ್ದರೂ, ಸಂತಾನ ಸುರಕ್ಷೆಗೆ ಇದಕ್ಕಿಂತ ಶ್ರೇಷ್ಠವಾದ ಬೇರೆ ವ್ಯವಸ್ಥೆಗಳಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.

(ಮುಂದುವರಿಯಲಿದೆ)