ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂದು

ಕಹಿಯನ್ನುಂಡವನಿಗೆ ಸಿಹಿಯ ಮಹತ್ವ ಗೊತ್ತಿದೆ. ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಮಹತ್ವ ತಿಳಿದಿದೆ. ಕಪ್ಪು ಇರುವುದರಿಂದಲೇ ಬಿಳುಪಿಗೆ ಗೌರವವಿದೆ. ಬದುಕಿನಲ್ಲಿ ಇವೆರಡನ್ನೂ ಚೆನ್ನಾಗಿ ಬಲ್ಲವನು ಸಮದರ್ಶಿಯಾಗಿರುತ್ತಾನೆ ಅಲ್ಲವೇ? ನನ್ನ ತಮ್ಮ ಪದವಿ ಕೊನೆಯ ವರ್ಷದಲ್ಲಿರುವಾಗಲೇ ಆರೋಗ್ಯ ಕೆಟ್ಟಿತು ಎಂದು ಹೇಳಿದೆನಲ್ಲಾ. ತಲೆ ತಿರುಗುತ್ತದೆ ಎಂದು ಅವನು ಹೇಳುತ್ತಿದ್ದಾಗ ನಾವು ಅದು ಪಿತ್ತ ಪ್ರಕೋಪವೆಂದೇ ತಿಳಿದಿದ್ದೆವು. ಯಾಕೆಂದರೆ ಅವನು ನಿದ್ದೆಗೆಟ್ಟು ಅಂಕ, ಆಯನಗಳಿಗೆ ಗೆಳೆಯರ ಜೊತೆಗೆ ಹೋದರೆ ಮಧ್ಯರಾತ್ರಿಯೋ ಬೆಳಗಿನ ಜಾವವೋ ಬರುತ್ತಿದ್ದ. ಇನ್ನು ಸಂಬಂಧಿಕರ ಮನೆಯಲ್ಲಿ ಮದುವೆ, ನಿಶ್ಚಿತಾರ್ಥ, ಸೀಮಂತ, ಬೊಜ್ಜ ಮುಂತಾದ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಅಡುಗೆ ಕೆಲಸಕ್ಕೆ ಸಲಕರಣೆ ಪೂರೈಸುವಲ್ಲಿಂದ ತೊಡಗಿ ಮರುದಿನ ಪಾತ್ರೆ ತೊಳೆದು ಮರಳಿಸುವವರೆಗೂ ಅವನದೇ ಮೇಲ್ವಿಚಾರಣೆ ಇರುತ್ತಿತ್ತು. ನಿದ್ದೆಗೆಟ್ಟು ಮಾಡುವ ಈ ಸಮಾಜಸೇವೆಯಿಂದಾಗಿಯೇ ಹೀಗೆ ತಲೆ ತಿರುಗುತ್ತದೆಂದು ನಾವು ಮೊದಮೊದಲು ಊಹಿಸಿದ್ದೆವು. ಇ.ಎಸ್.ಐ.ಯ ಡಾಕ್ಟರು ಹುಸೇನ್ ಕುಂಞಿಯವರು ಡಾ. ಭಾಷಾ ಎಂಬವರಿಗೆ ಚೀಟಿ ಕೊಟ್ಟು ಪರೀಕ್ಷೆ ಮಾಡಿಸಿದಾಗ ಇದು ಬರಿಯ ಪಿತ್ತ ಪ್ರಕೋಪದ ತಲೆ ತಿರುಗುವ ಕಾಯಿಲೆಯಲ್ಲ. ಎಪಿಲೆಪ್ಸಿಯ ಒಂದು ರೂಪವೆಂದು ತಿಳಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನ ಪ್ರಪಂಚವೇ ತಲೆ ಕೆಳಗಾದಂತಾಯಿತು. ಡಾ. ಕೆ.ಆರ್. ಶೆಟ್ಟಿಯವರನ್ನು ಕನ್ಸಲ್ಟ್ ಮಾಡಿದ ಮೇಲೆ ಈ ಕಾಯಿಲೆಯ ಹಿನ್ನೆಲೆ ಮತ್ತು ಶುಶ್ರೂಷೆಗಳ ಬಗ್ಗೆ ನನ್ನನ್ನು ಕರೆಸಿ ಕೂರಿಸಿ ಡಾಕ್ಟರು ವಿವರಿಸಿದರು. ಅವನಿಗೆ ಕೆಲವು ಮುನ್ನೆಚ್ಚರಿಕೆಗಳನ್ನು ಅವರು ತಿಳಿಸಿದರು. ಔಷಧಿಯನ್ನು ತಪ್ಪದೇ ಸೇವಿಸುವ ಕರ್ತವ್ಯವನ್ನು ಪಾಲಿಸಲು ಹೇಳಿದರು. ತಾನು ನಡೆದದ್ದೇ ದಾರಿ ಎಂಬಂತೆ ಬಾಲ್ಯದಿಂದಲೂ ವರ್ತಿಸುತ್ತಿದ್ದ ತಮ್ಮನನ್ನು ಈ ಕಾಯಿಲೆಯ ನೆಪದಿಂದಲಾದರೂ ನಮ್ಮ ಮಾತಿನಂತೆ ನಡೆದಾನು ಎಂಬ ನಿರೀಕ್ಷೆ ಸುಳ್ಳಾಯಿತು. ತನಗೊಂದು ಕಾಯಿಲೆ ಇದೆಯೆಂದೇ ನೆನಪಿಲ್ಲದ ಅವನನ್ನು ನಿಯಂತ್ರಿಸುವುದಕ್ಕಾಗಿ ನಾನು ಮತ್ತು ಅಮ್ಮ ವಹಿಸಿದ ಕಾಳಜಿಯಿಂದಾಗಿ ಬೈಸಿಕೊಂಡದ್ದೇ ಹೆಚ್ಚು. ಅದೇ ಸಮಯದಲ್ಲಿ ಅವನಿಗೆ ವಿಲೇಜ್ ಎಕೌಂಟೆಂಟ್ ಆಗಿ ಪಡುಬಿದ್ರಿಯ ಪಾದೆಬೆಟ್ಟು ಗ್ರಾಮದಲ್ಲಿ ಉದ್ಯೋಗ ಲಭಿಸಿತು. ಜೀವನ ಕತ್ತಲೆ ಬೆಳಕಿನಾಟ ಎನ್ನುವುದೇ ಇದಕ್ಕೇ ಅಲ್ಲವೇ? ಅವನ ಭವಿಷ್ಯಕ್ಕೊಂದು ಭದ್ರತೆ ಲಭಿಸಿತಲ್ಲಾ ಎಂಬ ಸಂತೋಷದಿಂದ ಮೈಮರೆಯುವಂತಾಯಿತು. ಇದೂ ಕೂಡಾ ನನ್ನ ಜೀವನದಲ್ಲಿ ನಡೆದ ಪವಾಡವೆಂದೇ ತಿಳಿದಿದ್ದೇನೆ.

ಕೆಲಸಕ್ಕೆ ಸೇರಿ ಏಳೆಂಟು ತಿಂಗಳಾಗಿರಬಹುದು. ಒಂದು ದಿನ ಸಂಜೆ ಎಂದಿನಂತೆ ಅಮ್ಮ ಮಗನ ಬರವಿಗಾಗಿ ಮನೆಯ ಮೆಟ್ಟಲಲ್ಲಿ ಕುಳಿತು ಕಾಯುತ್ತಿದ್ದರು. ಅಂದು ಕರೆಂಟು ಹೋಗಿತ್ತು. ಸಾಮಾನ್ಯವಾಗಿ ಏಳು ಗಂಟೆಗೆಲ್ಲಾ ಮನೆಗೆ ಬಂದು ಬಳಿಕ ಅವನ ಇತರ ಕೆಲಸಗಳಿಗೆ ಗೆಳೆಯರ ಮನೆಗೆ ಹೋಗುವುದೋ ಪದವು ಯುವಕ ಸಂಘದಲ್ಲಿ ಗೆಳೆಯರ ಕೂಟದಲ್ಲಿ ಬೆರೆಯುವುದೋ ಅಥವಾ ಗೆಳೆಯರೇ ನಮ್ಮ ಮನೆಗೆ ಬಂದು ಪಟ್ಟಾಂಗ ಹೊಡೆಯುವುದೋ ನಿತ್ಯ ವರ್ತಮಾನವಾಗಿತ್ತು. ಅಂದು ಗಂಟೆ ಎಂಟು ಕಳೆಯಿತು. ತಮ್ಮನ ಪತ್ತೆಯಿಲ್ಲ. ಒಮ್ಮೆ ಗಡಿಯಾರವನ್ನು ನೋಡುವುದು, ಇನ್ನೊಮ್ಮೆ ರಸ್ತೆಗೆ ಇಣುಕುವುದು ಹೀಗೆ ಅಮ್ಮ ಕಾತರದಿಂದ ಚಡಪಡಿಸುತ್ತಿದ್ದರು. ಸುಮಾರು ಎಂಟೂವರೆಯ ಹೊತ್ತಿಗೆ ಗೇಟು ತೆರೆದ ಸದ್ದಾಯಿತು. “ರೋಹಿತಾಶ್ವನ ಮನೆ ಇದೇ ಏನು?” ಎಂದು ಗಂಡುಧ್ವನಿಯೊಂದು ಕತ್ತಲೆಯಲ್ಲಿ ಗೇಟಿನ ಬಳಿ ನಿಂತು ಕೇಳಿದಾಗ, ನಮ್ಮ ಮನೆಯ ಮಾಲೀಕರಾದ ಕಲ್ಯಾಣಿಯಕ್ಕ ಬೊಗಳುವ ನಾಯಿಯನ್ನು ಸುಮ್ಮನಾಗಿರಿಸಲು ಅದನ್ನು ಗೂಡಿನೊಳಗೆ ತಳ್ಳಿದರು. ಕತ್ತಲೆಯಲ್ಲಿ ಮುಖ ಕಾಣುತ್ತಿರಲಿಲ್ಲವಾದುದರಿಂದ ಅಮ್ಮನೂ ಕಲ್ಯಾಣಿಯಕ್ಕನೂ ಗೇಟಿನ ಬಳಿ ನಿಂತವರ ಬಳಿಗೆ ಹೋಗಿ ವಿಚಾರಿಸಿದಾಗ ರೋಹಿತನತ್ರ ಸ್ವಲ್ಪ ಮಾತಾಡಲಿಕ್ಕಿತ್ತು ಎಂದರು. ಅಮ್ಮ ಅವರನ್ನು “ಮನೆಗೆ ಬನ್ನಿ. ರೋಹಿತ ಈಗ ಬರುತ್ತಾನೆ” ಎಂದಾಗ ಇಬ್ಬರು ಗಂಡಸರೂ ನಮ್ಮ ಮನೆಯೊಳಗೆ ಬಂದು ಕೂತರು. ಇಬ್ಬರು ಗಂಡಸರೂ ನಮಗೆ ಅಪರಿಚಿತರು. ಮನೆ ಹುಡುಕಿಕೊಂಡು ಬಂದಿದ್ದರು. ಇದು ರೋಹಿತನ ಬ್ಯಾಗಲ್ಲವಾ ಎಂದು ಕೈಯಲ್ಲಿದ್ದ ಬ್ಯಾಗನ್ನು ತೋರಿಸಿದರು. ನಾನು, `ಹೌದು’ ಎಂದೆ. ಬ್ಯಾಗಿನ ಹೊರಗೆ ಅವನ ವಿಳಾಸ ಬರೆದ ಚೀಟಿಯಿಂದಾಗಿ ಈ ಅಪರಿಚಿತ ಗಂಡಸರ ಮೂಲಕ ಅದು ಕ್ಷೇಮವಾಗಿ ಮನೆಗೆ ತಲುಪಿತ್ತು. ಬ್ಯಾಗು ಬಂದಿದೆ, ಬ್ಯಾಗಿನ ಯಜಮಾನ ಇಲ್ಲ ಎಂದಾಗುವಾಗ ನಮಗೆ ಗಾಬರಿ ಶುರುವಾಯಿತು. “ನಿಮಗೆ ಈ ಬ್ಯಾಗು ಎಲ್ಲಿ ಸಿಕ್ಕಿತು?” ಎಂದು ಕೇಳಿದೆ. ಅವರು ಹೇಳಿದ ಸಂಗತಿ ಕೇಳಿ ಅಮ್ಮ ಮತ್ತು ನಾನು ನಿಂತ ನೆಲವೇ ನಡುಗುವಂತೆ ಭಾಸವಾಯಿತು. ಉಡುಪಿ ಎಕ್ಸ್‌ಪ್ರೆಸ್ ಬಸ್ಸಿನ ಹಿಂದೆ ಬೈಕಿನಲ್ಲಿ ಬರುತ್ತಿದ್ದ ಈ ಗಂಡಸರಿಗೆ ಮುಲ್ಕಿಯ ಸಮೀಪದಲ್ಲಿ ಒಂದು ಬ್ಯಾಗ್ ಹೊರಗೆ ರಸ್ತೆಗೆ ಬಿದ್ದದ್ದು ಗೋಚರಿಸಿತು. ಬೈಕ್ ನಿಲ್ಲಿಸಿ ಬ್ಯಾಗನ್ನು ಎತ್ತಿಕೊಂಡರು. ವಿಳಾಸ ನೋಡಿದರು. ಒಳಗೆ ಸರಕಾರೀ ದಾಖಲೆಗಳು, ನೋಟೀಸುಗಳು, ಆದೇಶಗಳು, ಜಾಗದ ನಕ್ಷೆಗಳು, ಬೀಗದ ಕೈ ಗೊಂಚಲುಗಳು ಇರುವುದನ್ನು ಗಮನಿಸಿದಾಗ ಈ ಬ್ಯಾಗಿನ ಒಡೆಯ ಸರಕಾರೀ ನೌಕರನಾಗಿರಬೇಕೆಂದು ಖಾತ್ರಿಯಾಯಿತು. ಬಸ್ಸನ್ನು ಹಿಂಬಾಲಿಸಿ ಹೋಗುವುದಕ್ಕಿಂತ ನೇರ ಈ ಬ್ಯಾಗಿನ ಒಡೆಯನ ಮನೆಗೇ ಹೋಗುವುದೆಂದು ನಿರ್ಧರಿಸಿ ಸೀದಾ ಮನೆಗೆ ಬಂದರು. ಈಗಿನಂತೆ ಸಂಪರ್ಕ ಸಾಧನಗಳಿಲ್ಲದ ಆ ಕಾಲದಲ್ಲಿ ನಮ್ಮ ಅವಸ್ಥೆಯನ್ನು ಏನೆಂದು ವರ್ಣಿಸುವುದು. ಹೊತ್ತಿಗೆ ಸರಿಯಾಗಿ ಮಗ ಬರಲಿಲ್ಲ, ಅವನ ಬ್ಯಾಗು ಮಾತ್ರ ಬಂದಿದೆ ಎಂದು ತಿಳಿದ ಅಮ್ಮನ ಕಣ್ಣುಗಳು ತುಂಬಿ ಬರುತ್ತಿದ್ದುವು. ಕಲ್ಯಾಣಿ ಅಕ್ಕ ಸಾಂತ್ವನಗೊಳಿಸುತ್ತಿದ್ದರು. ನಾನು ಮಾತೇ ಬಾರದೆ ಮೂಕಳಾಗಿದ್ದೆ. ಎಂತಹ ಆಪತ್ತುಗಳನ್ನು ಎದುರಿಸಲು ಸಿದ್ಧವಾಗುವಂತೆ ಮನಸ್ಸನ್ನು ಗಟ್ಟಿಗೊಳಿಸಿದೆ. ಒಂದರ್ಧ ಗಂಟೆ ಕಳೆಯುವಷ್ಟರಲ್ಲಿ ಗೇಟು ಸದ್ದಾಯಿತು. ತಮ್ಮ ದಾಪುಗಾಲು ಹಾಕುತ್ತಾ ಬಂದ. ಬಂದು ಮನೆ ಮುಟ್ಟುವುದೂ ಕರೆಂಟು ಬರುವುದೂ ಸರಿಯಾಯಿತು. ಇದೂ ನನ್ನ ದೃಷ್ಟಿಯಲ್ಲಿ ಪವಾಡವೇ ಆಗಿತ್ತು. ನಿಜವಾಗಿ ನಡೆದದ್ದೇನೆಂದರೆ ಹಿಂಬದಿಯ ಸೈಡ್ ಸೀಟಿನಲ್ಲಿ ಕೂತ ತಮ್ಮನಿಗೆ ತಲೆ ತಿರುಗಿತು. ತನ್ನ ಬ್ಯಾಗ್ ಜಾರಿ ಕೆಳಗೆ ಬಿದ್ದದ್ದು ಗೊತ್ತೇ ಆಗಲಿಲ್ಲ. ಆ ಕಾಯಿಲೆ ಅವನನ್ನು ಅಟ್ಯಾಕ್ ಮಾಡಿದರೆ ಒಂದು ಹತ್ತು ನಿಮಿಷದವರೆಗೆ ಅವನಿಗೆ ತಾನು ಎಲ್ಲಿದ್ದೇನೆ, ಏನು ಮಾಡುತ್ತೇನೆ ಎಂಬುದೊಂದೂ ಗೊತ್ತಾಗುತ್ತಿರಲಿಲ್ಲ. ಅವನ ಕಣ್ಣು ತೆರೆದೇ ಇದ್ದರೂ ಕಾಣಿಸುವುದಿಲ್ಲ. ಕಿವಿ ಕೇಳಿಸುವುದಿಲ್ಲ. ಇದು ಒಂದು ರೀತಿಯ ವಿಸ್ಮೃತಿ. ೧೦-೧೫ ನಿಮಿಷ ಕಳೆದ ಬಳಿಕ ಮೊದಲಿನ ಸ್ಥಿತಿಗೆ ಬರುತ್ತಿದ್ದ. ಆ ಅಟ್ಯಾಕ್ ಆದ ಕ್ಷಣದಲ್ಲಿ ಅವನನ್ನು ಹೊಡೆದರೂ, ದೂಡಿದರೂ, ಬೈದರೂ ಅವನಿಗೆ ಗೊತ್ತಾಗುತ್ತಿರಲಿಲ್ಲ. ಇಂತಹ ವಿಚಿತ್ರ ರೀತಿಯ ಕಾಯಿಲೆ ಇದು. ಮನೆಗೆ ಬಂದ ಈ ಅಪರಿಚಿತ ಗಂಡಸರಲ್ಲಿ ಅವನ ಕಾಯಿಲೆಯ ವಿಷಯ ಹೇಳಲಿಲ್ಲ. ನಿದ್ದೆ ಬಂತು, ಕೈ ಜಾರಿತು ಎಂದ. ಆದರೆ ಈ ಬ್ಯಾಗನ್ನು ಕಳಕೊಳ್ಳುತ್ತಿದ್ದರೆ ತಮ್ಮ ತನ್ನ ಕೆಲಸವನ್ನೂ ಕಳಕೊಳ್ಳುತ್ತಿದ್ದ. ಯಾರಾದರೂ ಅನಕ್ಷರಸ್ಥರಿಗೆ, ದಾರಿಹೋಕರಿಗೆ ಈ ಬ್ಯಾಗು ಸಿಗುತ್ತಿದ್ದರೆ ಅದರ ಹಣವನ್ನು ತೆಗೆದುಕೊಂಡು ಒಳಗಿದ್ದ ಕಾಗದಪತ್ರಗಳನ್ನು ಬಿಸಾಡಿ ಹೋಗುತ್ತಿದ್ದರು. ಹೀಗಾಗದೆ ಈ ಅಪರಿಚಿತ ಗಂಡಸರು ಮನೆಯವರೆಗೆ ಹುಡುಕಿಕೊಂಡು ಬಂದು ಬ್ಯಾಗನ್ನು ಮರಳಿಸಿದ್ದು ನಮ್ಮ ಮಟ್ಟಿಗಂತೂ ಅವರು ಪ್ರತ್ಯಕ್ಷ ದೇವರಂತೆ ಕಂಡಿದ್ದರು. ಆ ಕಾಲದಲ್ಲೂ ಹೀಗೂ ಉಂಟೇ? ಎಂದು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುವಂತಹ ಈ ಪ್ರಸಂಗದಿಂದಾಗಿ ತಮ್ಮ ತನ್ನ ವೃತ್ತಿಜೀವನದುದ್ದಕ್ಕೂ ಪ್ರಾಮಾಣಿಕ ರೀತಿಯಲ್ಲಿ ಜನಸೇವೆ ಮಾಡುವ ಪ್ರತಿಜ್ಞೆ ಮಾಡಿದನು. ಆ ಅಪರಿಚಿತ ಗಂಡಸರ ವಿಳಾಸವನ್ನು ಪಡೆದುಕೊಂಡು ತಮ್ಮನು ವಾರದ ಬಳಿಕ ಅವರ ಮನೆಗೆ ಹೋಗಿ ಪ್ರೀತಿಯ ಉಡುಗೊರೆಗಳನ್ನು ನೀಡಿ ಕೃತಜ್ಞತೆಯನ್ನು ಅರ್ಪಿಸಿದ. ಇಂತಹ ಮಹನೀಯರು ಕಡಿಮೆ ಸಂಖ್ಯೆಯಲ್ಲಾದರೂ ಇರುವುದರಿಂದಲೇ ಈ ಭೂಮಿಯ ಮೇಲಿನ ನಮ್ಮ ಬದುಕು ಸಹ್ಯವಾಗಿದೆ ಅಲ್ಲವೇ?

ತನ್ನ ವೃತ್ತಿಯ ಬಗ್ಗೆ ಪ್ರೀತಿಯೂ, ಆತ್ಮವಿಶ್ವಾಸವೂ ಮೂಡಿದ ಬಳಿಕ ಅವನಿಗೆ ಸಮಸ್ಯೆ, ಸವಾಲುಗಳನ್ನೆದುರಿಸುವ ಧೈರ್ಯವೂ ಹೆಚ್ಚಾಯಿತು. ಪಾದೆಬೆಟ್ಟಿನಲ್ಲಿರುವಾಗಲೇ ರಾಜಕೀಯ ಪ್ರೇರಿತರಾಗಿ ಕೆಲವರು ಅವನ ಬಗ್ಗೆ ತಳ್ಳಿ ಅರ್ಜಿ ಹಾಕಿ ಆರೋಪ ಹೊರಿಸಿದ್ದರು. ಅದ್ಯಾವುದಕ್ಕೂ ಬೆದರದೆ ಕಾನೂನಿಗನುಸಾರವಾಗಿ ಕೆಲಸ ಮಾಡಿದ ಹೆಮ್ಮೆ ಅವನದು. ಆದರೂ ಅವನನ್ನು ಕಂದಾಯ ಇಲಾಖೆ ದೂರದ ಕುಂದಾಪುರದ ತಲ್ಲೂರಿಗೆ ವರ್ಗಾವಣೆ ಮಾಡಿತು. ಈಗ ದಿನಾ ಮನೆಗೆ ಬರುವುದು ಅಸಾಧ್ಯವಾದುದರಿಂದ ಅಲ್ಲೇ ಮನೆ ಮಾಡಿದ. ಈ ಹೊತ್ತಿಗಾಗಲೇ ಅವನಿಗೆ ಮದುವೆ ಮಾಡಿಸಲು ನಾನು ಮುಂದಾದೆ. ಬಂಧುಗಳು ಪ್ರಯತ್ನಿಸಿದರು. ನಮಗೆ ಪರಿಚಿತ ಕುಟುಂಬದವರೂ ಸಮೀಪದಲ್ಲೇ ವಾಸವಾಗಿರುವವರೂ ಆದ ಮನೆತನದ ಹುಡುಗಿ ಲಲಿತಾಳೊಂದಿಗೆ ತಮ್ಮನ ವಿವಾಹ ನಿಶ್ಚಯವಾಯಿತು. ತಮ್ಮನ ಕಾಯಿಲೆಯ ಬಗ್ಗೆ ಮೊದಲೇ ಅವಳಿಗೆ ಹೇಳಿ ಅವಳನ್ನು ಒಪ್ಪಿಸಲಾಗಿತ್ತು. ಆಕೆಯೂ ಅವಳ ಕುಟುಂಬದ ಹಿರಿಮಗಳು. ತಂದೆ ತೀರಿದ ಬಳಿಕ ತಂಗಿಯಂದಿರ, ತಮ್ಮನ ಭವಿಷ್ಯವನ್ನು ರೂಪಿಸುವ ಹೊಣೆ ಅವಳ ಮೇಲಿತ್ತು. ನನ್ನಂತೆಯೇ ಜೀವನದಲ್ಲಿ ಕಷ್ಟ, ಹಿಂಸೆಗಳನ್ನು, ಅವಮಾನಗಳನ್ನು ಸಹಿಸುತ್ತಾ ಒಂದಿಷ್ಟು ಶಿಕ್ಷಣವನ್ನು ಪಡೆದು ಆಕೆ ಶಿಕ್ಷಕಿಯಾಗಿ ಕೆಲಸದಲ್ಲಿದ್ದಳು. ಕುಡುಕ ಅಣ್ಣನಿಂದಾಗಿ ಬಹಳಷ್ಟು ಹಿಂಸೆ ಅನುಭವಿಸಿದ ಅವಳ ಕುಟುಂಬಕ್ಕೆ ಇವಳೇ ಆಧಾರಸ್ತಂಭವಾಗಿದ್ದಳು. ನಾವು ಹೇಗೆ ಮದುವೆಗೆ ಸಾಲ ಪಡೆದೆವೋ ಹಾಗೆ ಅವಳೂ ಸಾಲ ಮಾಡಿ ಹಣ ಪಡೆದು ಮದುವೆಯಾದಳು. ತಾನು ಸೇರಿದ ಮನೆ ಮತ್ತು ತಾನು ಹುಟ್ಟಿದ ಮನೆ ಎರಡನ್ನೂ ಬೆಳಗಿಸುವ ಹೊಣೆ ಅವಳ ಮೇಲಿತ್ತು.

ಎಲ್ಲಾ ಹೆಣ್ಣುಮಕ್ಕಳೂ ತನ್ನ ಗಂಡನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹಾಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ನಮ್ಮ ಮನೆಯ ಸೊಸೆಯಾಗಿ ಪ್ರವೇಶಿಸಿದ ಆಕೆಗೆ ಒಂದು ವರ್ಷದೊಳಗೇ ಭ್ರಮ ನಿರಸನವಾಯಿತು. ಅವಳಿಗೆ ತಮ್ಮನ ಕಾಯಿಲೆಯ ಕಲ್ಪನೆ ಇರಲಿಲ್ಲ. ಡಾಕ್ಟರುಗಳನ್ನು ಭೇಟಿ ಮಾಡಿಸಿ ಗಂಡ ಹೆಂಡತಿ ಇಬ್ಬರಿಗೂ ಆಪ್ತ ಸಮಾಲೋಚನೆ ಮಾಡಿಸಿದ ಮೇಲೆ ಅವಳು ಗಂಡನನ್ನು ಒಪ್ಪಿಕೊಂಡಳು. ತಮ್ಮನ ಹಠಮಾರಿ ಗುಣಗಳಿಂದಾಗಿ ಕ್ರಮೇಣ ಘರ್ಷಣೆಗಳು ಉಂಟಾಗತೊಡಗಿದುವು. ಗಂಡ ಹೆಂಡಿರಲ್ಲಿ ಘರ್ಷಣೆ ಇದ್ದರೇನೇ ಸಂಬಂಧ ಗಟ್ಟಿಗೊಳ್ಳುತ್ತದೆಂಬುದು ಎಲ್ಲರೂ ಬಲ್ಲ ಸತ್ಯ. ಜಗಳವನ್ನೇ ಮಾಡದ ಪತಿ ಪತ್ನಿ ಲೋಕದಲ್ಲಿರಲು ಸಾಧ್ಯವಿಲ್ಲವಲ್ಲವೇ? ಮದುವೆಯೆಂಬುದು ಗಂಡು ಹೆಣ್ಣುಗಳ ಕೊರಳಿಗೆ ಜೀರು ಕುಣಿಕೆ ಹಾಕಿ ಕಟ್ಟಿದ ಹಗ್ಗದಂತೆ. ಯಾರು ಜಗ್ಗಿದರೂ ಇಬ್ಬರೂ ನೋವು ಅನುಭವಿಸುತ್ತಾರೆ. ಮತ್ತು ಅದರಿಂದ ಬಿಡಿಸಿಕೊಂಡು ಓಡಿ ಹೋಗಲು ಸಾಧ್ಯವಿಲ್ಲ. ಹಾಗಾಗಿ ಪರಸ್ಪರರು ನೋವು ಅನುಭವಿಸುತ್ತಾ ಆ ನೋವಿನಲ್ಲೇ ಸುಖವಿದೆಯೆಂದು ಭಾವಿಸುತ್ತಾ ಬಾಳುವುದೇ ಮದುವೆ ಎಂಬ ವ್ಯವಸ್ಥೆ ಹೂಡಿದ ತಂತ್ರ. ಇಬ್ಬರು ಗಂಡುಮಕ್ಕಳಾದ ಮೇಲಂತೂ ಆ ಮಕ್ಕಳಿಗಾಗಿ ಗಂಡ ಹೆಂಡಿರಿಬ್ಬರೂ ತಮ್ಮ ಅಹಂಗಳ ಕೋಟೆಯನ್ನು ಕೆಡವಲೇ ಬೇಕಾಯಿತು. ಹೀಗೆ ನಮ್ಮ ಬದುಕಿನ ಬಂಡಿಯ ಚಕ್ರ ಒಮ್ಮೊಮ್ಮೆ ಕಿರುಗುಟ್ಟಿದರೂ ಆಗಾಗ ಪ್ರೀತಿಯ ಕೀಲೆಣ್ಣೆ ಸುರಿಯುತ್ತಾ ನಿಧಾನವಾಗಿ ಮುಂದೆ ಸಾಗುತ್ತಿತ್ತು.

(ಮುಂದುವರಿಯಲಿದೆ)