ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯ’ಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸು – ನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ ಜವಾಬ್ದಾರಿಯ ಕಟ್ಟುಪಾಡಿನಲ್ಲಿ ಎಲ್ಲ ಗೊಂದಲ. ಕಳೆದು, ಕೂಡಿಸಿ, ಉಂಟೂ ಇಲ್ಲಾ ಮಾಡಿ ಅಂತೂ ಶನಿವಾರ ಬೆಳಿಗ್ಗೆ ಐದೂವರೆಗೆ ಮಂಗಳೂರಿನ ನಂತೂರು ವೃತ್ತದಿಂದ ಹೊರಟವರು ಐದು ಮಂದಿ – ವೇಣುವಿನೋದ್, ಅನಿಲ್ ಶೇಟ್, ಸಮರ್ಥ ರೈ, ಚಿನ್ಮಯ ದೇಲಂಪಾಡಿ ಮತ್ತು ನಾನು.

ಮಂಜೂ ಇಲ್ಲದ ಸೆಕೆಯ ದಿನಗಳು. ಸೂರ್ಯ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಇಳಿಯುವ ಮುನ್ನ ನಾವು ಸಾಕಷ್ಟು ದಾರಿ ಗಳಿಸುವವರಂತೆ ಬಿರುಸಾಗಿಯೇ ಪೆಡಲಿದೆವು. ಮಾರ್ಗ ಚತುಷ್ಪಥವಾದದ್ದು ಸೈಕಲ್ ದೃಷ್ಟಿಯಲ್ಲಿ ಸಮಸ್ಯೆಗಳನ್ನು ನಾಲ್ಮಡಿಯಾಗಿಸಿತ್ತು. ರಸ್ತೆ ವಿಭಾಜಕಗಳಲ್ಲಿ ಮರೆ ಸಸ್ಯಗಳು ಇನ್ನೂ ವ್ಯವಸ್ಥಿತವಾಗಿಲ್ಲ. ಹಾಗಾಗಿ ಇನ್ನೊಂದೇ ಓಣಿಯಲ್ಲಿದ್ದೂ ನಮಗೆದುರಾಗುತ್ತಿದ್ದ ಮಹಾರಕ್ಕಸರ (ವಾಹನಗಳ) ಬಿರುಗಣ್ಣ ಕೆಕ್ಕರನೋಟಕ್ಕೆ ನಾವು ತೂರಾಡಿಹೋಗುವುದಿತ್ತು. ನಮ್ಮ ಬೆಂಬದಿಯಿಂದಲೇ ಬರುವ ವಾಹನಗಳಾದರೂ ನಾವು ಪೂರ್ಣ ನೆಚ್ಚುವಂತದ್ದೇನಲ್ಲ. ನಾನು ಇಲ್ಲೇನೋ ಸೈಕಲ್ಲಿಗನಾದರೂ ನನ್ನ ಬಹುಪಯಣವೆಲ್ಲ ಬೈಕು, ಕಾರು, ಬಸ್ಸುಗಳಲ್ಲೇ ಆಗಿರುವ ಅನುಭವದಲ್ಲಿ ಹೇಳುತ್ತೇನೆ – ನಮ್ಮ ಸಾರ್ವಜನಿಕ ಬೆಳಕಿನ ವ್ಯವಸ್ಥೆ ಎಂದೂ ಶಿಸ್ತಿನದ್ದಲ್ಲ. ಸರಕಾರೀ ಅನುದಾನಗಳ ವಿಚಿತ್ರದಲ್ಲಿ ಸತ್ತು ನೂರು ವರ್ಷವಾದ ಬುರುಡೆ ದೀಪಗಳಿಂದ ಅತ್ಯಾಧುನಿಕ ಎಲ್ಲೀಡಿವರೆಗೂ ಕತ್ತಲೆ, ಮಿಣುಕು, ಅತಿ ಬೆಳಕು ಅವ್ಯವಸ್ಥಿತವಾಗಿ ದಾರಿಗೆ, ಊರಿಗೆ ಚೆಲ್ಲುತ್ತಲೇ ಇರುತ್ತದೆ. ಸಾಲದ್ದಕ್ಕೆ ಹಾದಿಬದಿಯ ಅಂಗಡಿ, ಮನೆ ಮತ್ತು ಜಾತ್ರೆಗಳ ವ್ಯರ್ಥ ಬೆಳಕಿನ ಪ್ರವಾಹ. ಇವುಗಳ ನಡುವೆ ವಾಹನ ಚಾಲಕರು, ತಂತಮ್ಮ ಬೆಳಕೋಲುಗಳಿಗೆ ದಿಟ್ಟಿನೆಟ್ಟು ತುಸು ಉದಾಸವಾಗಿಯೇ ವೇಗವರ್ಧಕವನ್ನು ಹಿಂಸಿಸುತ್ತಾರೆ. ಆಗ ಕೆಲವೊಮ್ಮೆ ಚಾಲಕರಿಗೆ ಭ್ರಮೆಗಳು ಮಿಂಚಿ ಹೋಗುವುದಿದೆ. ಹಾಗೆ ಭ್ರಮೆಯ ಭಾಗವಾಗಿ ನಮ್ಮ ಅಸ್ತಿತ್ವ ಸೇರಿಹೋಗುವುದು ಇಬ್ಬರಿಗೂ ಹಿತವಲ್ಲ. ಇದಕ್ಕೇ ನಾವು ಮಾರ್ಗದಂಚಿನ ಬಿಳಿರೇಖೆಯನ್ನು ಲಕ್ಷ್ಮಣರೇಖೆಯ ನಿಷ್ಠೆಯಲ್ಲಿ ಕಾಯ್ದುಕೊಳ್ಳುತ್ತೇವೆ.

ನಮ್ಮನ್ನು ಅಪಾಯ ಬೆನ್ನು ಹಿಡಿಯಬಹುದಾದ ಇನ್ನೊಂದೇ ಪರಿ ನೋಡಿ. ಹೆಚ್ಚು ವೇಗದ ಮೋಟಾರ್ ಚಾಲಕರಿಗೆ ಆಗೀಗ ತುಸು ನಿಧಾನೀ ಸಹದಿಕ್ಕಿನ ವಾಹನಗಳು ಸಿಕ್ಕುತ್ತಿರುತ್ತವೆ. ಚತುಷ್ಪಥ ಕೊಡುವ ಸ್ವಾತಂತ್ರ್ಯದಲ್ಲಿ ವೇಗಿ ಎದುರಿನ ವಾಹನವನ್ನು ಯಾವುದೇ ಮಗ್ಗುಲಿನಿಂದಲೂ ಹಿಂದಿಕ್ಕುತ್ತಿರುತ್ತಾನೆ. ಅವೇಳೆಯಲ್ಲಿ ಜನಜಾನುವಾರುಗಳ ನಿರೀಕ್ಷೆಯಿಲ್ಲದೇ ಹೀಗೆ ಒಮ್ಮೆಗೇ ಎಡ ಅಂಚಿಗೇ ನುಗ್ಗುವ ವಾಹನಗಳಿಗೆ ನಾವು ಪೂರ್ಣ ಅನಿರೀಕ್ಷಿತ ಅಡ್ಡಿಯಾಗಿಬಿಡಬಹುದು. ಇದರ ನಿವಾರಣೆಗೇ ನಮ್ಮ ಸೈಕಲ್ಲುಗಳಿಗೆ ಹಿಂದೆ ಕೆಂದೀಪದ ರಕ್ಷೆಯಿತ್ತು. ಎದುರು ದಿಗಂತದಲ್ಲಿ ನಮ್ಮ ಕೆಂದೀಪದ ಪ್ರತಿಫಲನವೋ ಎಂಬಂತೆ ಅರುಣರಾಗ ಪಸರಿಸುತ್ತಿದ್ದಂತೆ ನಾವು ನಿರಾಯಾಸವಾಗಿ ಜೋಡು ಮಾರ್ಗ ತಲಪಿದ್ದೆವು. ಹೋಟೆಲಿನಲ್ಲಿ ಮೊದಲ ಸುತ್ತಿನ ಕಾಫಿಂಡಿ.

ಟೆನ್ನಿಸ್ ಭಾಷೆಯಲ್ಲಿ ಹೇಳುವುದಿದ್ದರೆ ನಮ್ಮ ಮೂಲತಂಡದಲ್ಲಿ ಚಿನ್ಮಯ ದೇಲಂಪಾಡಿ, ಸೀಡೆಡ್ ಪ್ಲೇಯರ್! ಕುದುರೆಮುಖ ಸಾಹಸಯಾನದಲ್ಲಿ ಯಾವ ಸ್ಪರ್ಧೆಯಿರದಿದ್ದರೂ ಆತ ಸರ್ವೋತ್ತಮನಾಗಿ ಕಾಣಿಸಿದ್ದ. ಆತನ ಎಂಸಿಎಫ್ ವೃತ್ತಿ (ಪರಿಸರ ತಂತ್ರಜ್ಞ) ವಾರಕ್ಕೆ ಐದು ದಿನದ್ದು, ಶನಿವಾರ ಆದಿತ್ಯವಾರಗಳ ರಜೆಯದ್ದು. ಗುರುವಾರದವರೆಗೂ ಸಾಹಸಯಾನದಲ್ಲಿ ಅವನ ಭಾಗೀದಾರಿಕೆ ನಿಶ್ಚಿತವಿತ್ತು. ದುರದೃಷ್ಟಕ್ಕೆ ಕಡೇ ಗಳಿಗೆಯಲ್ಲಿ ಎಂಬಂತೆ, ಈ ಶನಿವಾರ ಆತನಿಗೆ ಕಾರ್ಖಾನೆಯಲ್ಲಿ ವಿಶೇಷ ಕರ್ತವ್ಯದ ಹೊಣೆ ಬಿತ್ತು. ಹಾಗಾಗಿ ಮೊದಲೇ ತಿಳಿಸಿದ್ದಂತೆ, ಚಿನ್ಮಯ ನಮ್ಮೊಡನೆ ಕಾಫಿಂಡಿ ಮುಗಿಸಿ, ಮನಸ್ಸಿಲ್ಲದ ಮನಸ್ಸಿನಿಂದ ವಾಪಾಸು ಹೋದ.

ಉದಯರವಿ ಸಾಕ್ಷಿಯಾಗಿ ಬಂಟ್ವಾಳ ಪರ್ಯಾಯ ದಾರಿ ಹಿಡಿದು, ಬೆಳ್ತಂಗಡಿಯತ್ತ ಮುಂದುವರಿದೆವು. ಸರೀ ಒಂದು ವರ್ಷದ ಹಿಂದೆ (ಮಾರ್ಚ್ ೧೩-೧೪, ೨೦೧೫) ನಡೆದ ಬೆಂಗಳೂರಿಗೊಂದು ಸೈಕಲ್ ಮಹಾಯಾನದ ಅನಂತರ ನಾನು ಈ ದಾರಿಗೆ ಬಂದಿರಲಿಲ್ಲ. ಆ ಲೆಕ್ಕದಲ್ಲಿ ಈ ಸಾಹಸಯಾನ ಯೋಚಿಸದೇ ಘಟಿಸುತ್ತಿದ್ದ ವರ್ಷಾಂತಿಕ ಸಂಭ್ರಮ!

ಆಗ ರಿಪೇರಿಗಾಗಿ ಶಿರಾಡಿ ಘಾಟಿ ಮುಚ್ಚಿದ್ದರಿಂದ ನಮಗೀ ದಾರಿ ಅನಿವಾರ್ಯವಾಗಿತ್ತು. ಸಹಜವಾಗಿ ವಾಹನ ದಟ್ಟಣೆಯೂ ಹೆಚ್ಚಿತ್ತು. ಈ ಬಾರಿ ಇದೇ ನಮ್ಮ ಆಯ್ಕೆ. ಶಿರಾಡಿ ಮುಕ್ತವಿರುವುದರಿಂದ ಇಲ್ಲಿ ವಾಹನ ಸಂಚಾರವೂ ವಿರಳವಿತ್ತು. ಅಂದು ಮಹಾಯಾನಕ್ಕೆ ಸಂಘಟನಾ ನಾಯಕತ್ವ ಕಾವೂರು ಪ್ರಸನ್ನನದು. ಆದರೆ ತಾತ್ತ್ವಿಕ ನಾಯಕತ್ವವನ್ನು ಮಂಗಳೂರು ಸೈಕಲ್ಲಿಗರ ಸಂಘದ (ಎಂ.ಎ.ಸಿ.ಸಿ) ಪರವಾಗಿ ಇದೇ ಅನಿಲ್ ಶೇಟ್ ವಹಿಸಿದ್ದರು.

ಪ್ರಸ್ತುತ ತಂಡದ ವೇಣು ಅಥವಾ ಸಮರ್ಥ ಅಂದು ನಮ್ಮೊಡನಿರಲಿಲ್ಲ. ಆದರೆ ತಮಾಷೆ ಎಂದರೆ ಅನಿಲರಿಗೆ ದಾರಿಯ ಆಪ್ತ ಪರಿಚಯದ ಕುರಿತು ಅಂದೂ ಇಂದೂ ವಿಶೇಷ ಆಸಕ್ತಿ ಇಲ್ಲ. ಹೊಸ ತಲೆಮಾರಿನ ಬಹುತೇಕ ಸೈಕಲ್ಲಿಗರಂತೆ ಇವರೂ ಸೈಕಲ್ಲೋಡಿಸಿದ ಅಂತರ ಮತ್ತು ಆ ನಡುವೆ ಗಳಿಸಿದ ಔನ್ನತ್ಯದ ಅಂಕಿಸಂಕಿಗಳಲ್ಲಿ ಕಳೆದುಹೋಗುತ್ತಾರೆ. ಅನಿಲ್ ವಿದ್ಯಾ ಕಲಿಕೆಯಲ್ಲಿ ವಿದ್ಯುನ್ಮಾನ ತಂತ್ರಜ್ಞ ಅರ್ಥಾತ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್. ಆದರೆ ಇಂದು ಕೇವಲ ಮೂವತ್ತೇಳರ ಹರಯದಲ್ಲೇ ಸ್ವತಂತ್ರ ಕಟ್ಟಡಗಳ ನಿರ್ಮಾತೃವಾಗಿ ವೃತ್ತಿರಂಗದಲ್ಲಿ ಗಟ್ಟಿಗ. ಬಹುಶಃ ಅಂಕಿಸಂಕಿಗಳ ಪ್ರೀತಿ, ಪ್ರಾವೀಣ್ಯವೇ ಇವರ ಯಶಸ್ಸಿನ ಗುಟ್ಟಿರಬಹುದೋ ಏನೋ! ದಿನ ದಿನ ಮೂವತ್ತು ನಲ್ವತ್ತು, ವಾರಾಂತ್ಯದಲ್ಲಿ ನೂರಿನ್ನೂರು ಕಿಮೀಗಳನ್ನು ತನ್ನ ದಾಖಲೆ ಕಡತದಲ್ಲಿ ಗುಡ್ಡೆ ಹಾಕುತ್ತ ಬಂದ ಅನಿಲರಿಗೆ ದಾರಿಗಳ ಪ್ರಾದೇಶಿಕ ಮೂರಿ ಹತ್ತುವುದು ಕಡಿಮೆ. ಸಹಜವಾಗಿ ಮಿನಿಟಿಗಿಷ್ಟು ಪೆಡಲಾವರ್ತ, ಇಷ್ಟು ನಾಡೀಮಿಡಿತ ಎಂದುಕೊಳ್ಳುತ್ತಾ ಪೆಡಲೊತ್ತಿದ್ದೇ ಒತ್ತಿದ್ದು. ಬಳ್ಳಿಯಷ್ಟು ಸಪುರದ ಟಯರಿನ, ಹತ್ತಿಯಷ್ಟು ಹಗುರದ (ಒಂಬತ್ತೇ ಕಿಲೋ ತೂಕ. ಅದೇ ನನ್ನ ಸೈಕಲ್ ಹದಿನೈದು ಕಿಲೋ), ನುಣ್ಣನೆ ದಾರಿಗಳ ಅತಿವ್ಯಾಮೋಹೀ ಸೈಕಲ್ ಕ್ಷಣಾರ್ಧದಲ್ಲಿ ಕಣ್ಮರೆಯಾಯ್ತು.

ಪುತ್ತೂರು ಮೂಲದ, ಬೆಂಗಳೂರು ಬಾಲ್ಯದ, ಇನ್ನೊಂದೇ ವಿದ್ಯುನ್ಮಾನ ತಂತ್ರಜ್ಞ ತರುಣ – ಸಮರ್ಥ ರೈ. ಇವರು ವೃತ್ತಿಯ ಹದ ಕಂಡದ್ದು ಮಾರಾಟ ರಂಗದಲ್ಲಿ. ಅದೇನೋ ವಿದೇಶೀ ಕಂಪೆನಿಯ ಕಾರು ಲಾರಿಗಳ ಟಯರಿಗೆ ಈತ ಮಂಗಳೂರು ಕೇಂದ್ರಿತ ಎಂಟು ಜಿಲ್ಲೆಗಳಿಗೆ ವಸಿತ ಪ್ರತಿನಿಧಿ, ಅಂದರೆ ರೆಸಿಡೆಂಟ್ ರೆಪ್ರೆಸೆಂಟೆಟಿವ್. ಆರಡಿ ಮೀರಿದ ದೃಢಕಾಯದ ಸಮರ್ಥರಿಗೆ ಸಾಹಸರಂಗದ ಒಲವು ಸಹಜವಾದದ್ದೇ. ಹಿಮಾಲಯಕ್ಕೆ ಹೋಗಿ ಗಂಗಾಝರಿಯ ತೆಪ್ಪದೋಟ ಮತ್ತು ಕಾಲಿಗೆ ಹಗ್ಗ ಕಟ್ಟಿ ಕೊಳ್ಳ ಧುಮುಕಾಟದಲ್ಲಿ (ಬಂಗೀ ಜಂಪಿಂಗ್) ಅಂಕಿತ ನಾಮವನ್ನು ಅನ್ವರ್ಥವಾಗಿಸಿಕೊಂಡೇ ಬಂದವರು ಸಮರ್ಥ. ಈಜು, ಓಟ ಮತ್ತು ಸೈಕಲ್ ಸವಾರಿಯೆಂಬ ಮೂರುಮುಖದ, ಅರ್ಥಾತ್ ಟ್ರಯತ್ಲಾನ್ ಸಾಧನೆಯ ಕಳದಲ್ಲಿ ಪಳಗುತ್ತಿರುವ ಹುದ್ದರಿ ಈ ಹಸನ್ಮುಖೀ ರೈ. ಇಲ್ಲಿ ಯಾವ ಒತ್ತಡಗಳಿಲ್ಲದೇ ಸಾಮಾನ್ಯ ರಸ್ತೆ ಸವೆಸುವ ಸೈಕಲ್ ಚಲಾವಣೆ ಎಂದ ಮೇಲೆ ಕೇಳಬೇಕೇ. ಅನಿಲ್‍ಗೆ ಸಮಜೋಡಿಯಾಗಿ ಸಮರ್ಥ ರೈಯೂ ಮಾಯ.

ಕುದುರೆಮುಖದ ಮಹಾಯಾನದಲ್ಲೇ ಕಂಡುಕೊಂಡಂತೆ ವೇಣು ಮತ್ತು ನಾನು ಯಾವ ಕೀಳರಿಮೆಯಿಲ್ಲದೆ, ನಮ್ಮ ಲಯಗಾರಿಕೆಯಲ್ಲಿ ಯೋಗ್ಯ ಹಿಂದಾಳುಗಳಾಗಿ ಚಕ್ರಾವರ್ತನವನ್ನು ನಿರಂತರವಾಗಿಸಿದೆವು. ಬಂಟ್ವಾಳ ಪೇಟೆಯ ಹೊರಗೆ ಹಿಂದೆಲ್ಲ ನೇತ್ರಾವತಿ ಪಾತ್ರೆಗೇ ಕಚ್ಚಾದಾರಿ ರೂಢಿಸಿ ಲಾರಿ, ಜೀಪು ತೊಳೆಯುವವರನ್ನು ಕಾಣಬಹುದಿತ್ತು. ಈಗ ದಂಡೆಯಲ್ಲಿ ಸಣ್ಣ ಕೊಳೆಗೇರಿ ಕಾಣಿಸಿದರೂ ನದಿ ಪಾತ್ರೆಯಲ್ಲೇನೋ ಭಾರೀ ಪಂಪ್ ಬಾವಿ ನಿರ್ಮಾಣ ನಡೆದಂತಿತ್ತು. ಮತ್ತೆ ಮರವೆಗೆ ಸಂದಂತಿದ್ದ ಅರಣ್ಯ ಇಲಾಖೆಯ ತನಿಖಾ ಠಾಣೆ ಸೊರಗಿತ್ತು; ಕಾಡುಳಿಯದ ಮೇಲೆ ಠಾಣೆ ಯಾಕೆಂದಿರಬಹುದೇ? ಮಳೆಗಾಲದ ಹೊಳೆ, ಚಳಿಗಾಲದ ಕಂಬಳದ ಕಳ – ಮಣಿಹಳ್ಳ ನನಗೆ ಮಾತ್ರ ಹಾಜರಿಯೊಪ್ಪಿಸಿ ಹಿಂದೆ ಸರಿಯಿತು. ಎರಡನೇ ಸುತ್ತಿನ ಉಪಾಹಾರಕ್ಕೆ ಬೆಳ್ತಂಗಡಿ ಎಂದೇ ಮಾತಾಡಿಕೊಂಡಿದ್ದೆವು. ಆದರೂ ಆಶ್ಚರ್ಯಕರವಾಗಿ ವಗ್ಗದ ಏರಿಕೆಯ ಕೊನೆಯಲ್ಲೊಮ್ಮೆ ಅನಿಲ್, ಸಮರ್ಥ ನಮ್ಮನ್ನು ಕಾದಿದ್ದರು, ಕಾರಿಂಜದ ಕವಲಿನವರೆಗೆ ಜತೆಗೊಟ್ಟರು.

ಸೈಕಲ್ ಯಾನದ ಸ್ವಾರಸ್ಯ ಕಥನವೆಂದರೆ ಮಿನಿಟು ಮಿನಿಟುಗಳ ಪೆಡಲಾವರ್ತ, ಗಳಿಸಿದ ಔನ್ನತ್ಯದ ಲೆಕ್ಕ, ಉಪಗ್ರಹಾಧಾರಿತ ಗೀಟು, ನಾಲ್ಕು ಸ್ವಂತೀ ಮತ್ತು ತಿಂದದ್ದು ಬಿಟ್ಟದ್ದನ್ನೆಲ್ಲ ಗುಡ್ಡೆ ಹಾಕುವುದಲ್ಲ. ಅದು ಸವಾರಿಯ ಶ್ರಮ, ಕಾರಣವಾದ ಪರಿಸರದ ವೈವಿಧ್ಯಕ್ಕೆ ಮನೋಭೂಮಿಕೆಯಲ್ಲಿ ಮೂಡುವ ಚಿತ್ರವಾಗಬೇಕು. ಒಂದೆರಡು ಉದಾಹರಣೆ ನೋಡಿ. ಗೆಳೆಯ ಸಂದೀಪ ಸಾಧಿಸಿದ್ದ ತೊಣ್ಣೂರ ಕೆರೆಯೀಜು, ಮೇಲುಕೋಟೆ ದಾರಿಯ ಸವಾರಿ, ಮೈಸೂರಿನತ್ತಣ ಓಟ ನನಗಿಲ್ಲಿ ಕಾಣುತ್ತಿತ್ತು. ಕಾರಿಂಜದವರೆಗೆ ಸೈಕಲ್, ಅದರ ಕೆರೆಯಲ್ಲಿ ಈಜು, ವಗ್ಗದ ಕಾಡಿನಲ್ಲಿ ಓಟ – ಹೀಗೊಂದು ಟ್ರಯತ್ಲಾನ್ ರೂಪುಗೊಳ್ಳಬಹುದೇ?

ಬಂಬಿಲ ಎಂಬ ದಾರಿಬದಿಯ ಹಳ್ಳಿ ಇಂಗ್ಲಿಷ್ ಕಾಗುಣಿತದಲ್ಲಿ “ಬಾಂಬ್ ಇಲ್ಲ” ಎಂಬ ಅರ್ಥ ಸ್ಫುರಿಸಿದರೆ ಭಯೋತ್ಪಾದನಾ ನಿಗ್ರಹ ದಳ ಜಾಗೃತವಾಗದೇ? ಪುಂಜಾಲಕಟ್ಟೆ ಎಂಬ ಸ್ಥಳನಾಮವನ್ನು ಅಪಾರ್ಥಿನಿಗಿಳಿಸಿದರೆ ಏನೆಲ್ಲಾ ಅರ್ಥೈಸಬಹುದು? ಆರೆಂಟು ಕಿಮೀ ವಿಸ್ತರಿಸಿದ ಪುಂಜಾಲಕಟ್ಟೆ ಮಡಂತ್ಯಾರಿನ ಮೇಲೆ ಅಕ್ರಮ ಒತ್ತುವರಿ ನಡೆಸಿದೆಯೇ? ಭರ್ಜರಿ ಮಸೀದಿ ಕಾಣುವಲ್ಲಿಗೆ `ಅರಮನೆ’ ಬೋರ್ಡು ಹಚ್ಚಿದ್ದಾದರೂ ಒಪ್ಪಬಹುದು, ಗಜಿಬಿಜಿ ಪೇಟೆಯನ್ನು ಗುರುವಾಯನ ಕೆರೆಯೊಳಗಿಳಿಸುವುದು ಸರಿಯೇ? ಎಂದಿತ್ಯಾದಿ. ಸೈಕಲ್ ಚಕ್ರ ಉರುಳಿದಂತೆ ವಿಚಾರಗಳ ಸುರುಳಿ ಅರೆವಿರಾಮ ಹಾಕುತ್ತ, ಬಿಚ್ಚುತ್ತ ಸಾಗಿತ್ತು. ಪೂರ್ಣ ವಿರಾಮ ಹಾಕಿದಂತೆ ಬೆಳ್ತಂಗಡಿ ತಲಪಿದ್ದೆವು.

ನಾನೂ ವೇಣೂ ಬೆಳ್ತಂಗಡಿಯ ಖ್ಯಾತ ಹೋಟೆಲುಗಳತ್ತ ಹಾರು ನೋಟ ಹಾಕುತ್ತ ನೇತ್ರಾವತಿ ಸಂಕದವರೆಗೂ ಹೋದೆವು – ಮುಂದಾಳುಗಳ ಪತ್ತೆ ಇಲ್ಲ. ಇತ್ತ ಕೊಳೆ ತುಂಬಿದ ಸಣ್ಣ ಮರಳ ದಿಬ್ಬ, ಅತ್ತ ಗುಳಿಬಿದ್ದ ಕಲ್ಲ ಹಾಸಿನ ನೇತ್ರಾವತಿ ಪಾತ್ರೆಯಲ್ಲಿ ಜೀವದ್ರವ ತೀರಾ ಬಳಲಿತ್ತು. ಗಡಿ ಕಲ್ಲಿನಂತೇ ತೋರುವ ಗಡಾಯಿಕಲ್ಲು ಮೋಡದ ಮಬ್ಬಿನಲ್ಲಿ ಕಾಣಿಸಿದರೆ ದಿಗಂತವನ್ನೇ ರೇಖಿಸುವ ಕುದುರೆಮುಖ ಶ್ರೇಣಿ ಪೂರ್ಣ ಮಂಜಿನ ಮರೆಯಲ್ಲಿತ್ತು. ತಿನ್ನುವಲ್ಲಾದರೂ ಒಗ್ಗಟ್ಟು ಬೇಡವೇ ಎಂದು ಅನಿಲರಿಗೆ ಚರವಾಣಿಸಿದೆ – “ಸ್ವಿಚ್ ಆಫ್ ಮಾಡಿದ್ದಾರೆ” ಸಂದೇಶ ಸಿಕ್ಕಿತು. ಹೆಚ್ಚು ನಿಂತು ಮಾಡುವುದೇನು, ಉಜಿರೆಯಲ್ಲಿ ಸಿಕ್ಕಾರು ಎಂದು ನಾನೂ ವೇಣೂ ಮತ್ತೆ ಸೀಟಿಗೇರಿದೆವು.

ಉಜಿರೆಯಲ್ಲಿ ಶಿವರಾತ್ರಿ ನೆಪದ ಮಂಜುನಾಥನ ಭಕ್ತರ ಉಬ್ಬರ ಇನ್ನೂ ಇಳಿದಂತಿರಲಿಲ್ಲ. ನಿತ್ಯ ಜಾತ್ರೆಯ ಊರಿನಲ್ಲಿ ನಮ್ಮ ಎರಡು ಸೈಕಲ್ಲಿಗರನ್ನು ಹುಡುಕುವುದೆಲ್ಲಿ? ಈ ಬಾರಿ ವೇಣು ಸಮರ್ಥರ ಚರವಾಣಿ ಸಂಪರ್ಕ ಸಾಧಿಸಿದರು. ಪುಣ್ಯಾತ್ಮರಿಬ್ಬರೂ ಘಟ್ಟದ ತಪ್ಪಲಿಗೆ, ಅಂದರೆ ಚಾರ್ಮಾಡಿ ಹಳ್ಳಿಗೇ ಲೆಕ್ಕ ಮುಗಿಸುವ ಉತ್ಸಾಹದಲ್ಲಿದ್ದರು. ಪೂರ್ವ ಯೋಜನೆಯ ಬೆಳ್ತಂಗಡಿ ಕಳೆದು, ಒಳ್ಳೇ ಹೋಟೆಲಿದ್ದ (ಹೆಬ್ಬಾರರ ಹೋಟೆಲ್) ಉಜಿರೆಯನ್ನೂ ಹಿಂಬಿಟ್ಟು ದೂರದಲ್ಲಿದ್ದರು. ಆಗ ನನಗೆ ಆಧುನಿಕ ಶಿಕ್ಷಣದ ಕುರಿತ ಚಾಟೂಕ್ತಿಯೊಂದು ನೆನಪಾಯ್ತು – ಅಂಕಿಸಂಕಿಗಳ ಸಾಧನೆಯಲ್ಲಿ ಕಳೆದು ಹೋದ ಜ್ಞಾನದ ಅರಿವಾಗಲಿಲ್ಲ! ವಿವರಣೆಗೆ ಎರಡು ಉದಾಹರಣೆ ನೋಡಿ – ವೀರಾಧಿವೀರರೊಬ್ಬರು ಒಂದೇ ದಿನದಲ್ಲಿ ನಾನೂರು ಕಿಮೀ ದಾಖಲೆಗಾಗಿ ಮಂಗಳೂರು-ಕುಂದಾಪುರಗಳ ನಡುವೆ ಎರಡು ಬಾರಿ ಸೈಕಲ್ ಸವಾರಿ ಹೋಗಿ ಬಂದರು! ಮತ್ತೊಬ್ಬರು, ಮಳವೂರ ಸಂಕದಿಂದ ಬಜ್ಪೆ ವಿಮಾನ ನಿಲ್ದಾಣದ ಎತ್ತರಕ್ಕೆ ದಿನದಲ್ಲೇ ಹತ್ತೆಂಟು ಬಾರಿ ಏರಿಳಿದು ಔನ್ನತ್ಯ ಗಳಿಕೆಯ ದಾಖಲೆಯನ್ನು ಅಸಾಧ್ಯ ಎತ್ತರಕ್ಕೇರಿಸಿ ಇಟ್ಟರು! ಬಹುಶಃ ಈ ಗೆಳೆಯರೂ ನಾವಲ್ಲದಿದ್ದರೆ ಇಷ್ಟರಲ್ಲೇ ಚಾರ್ಮಾಡೀ ಘಾಟಿಯನ್ನೂ ಏರಿ ಮುಗಿಸುತ್ತಿದ್ದರೋ ಏನೋ ಎಂದಾಶ್ಚರ್ಯಪಡುತ್ತ ನಾವೂ ಅತ್ತ ಹೊರಟೆವು.

೧೯೮೦ರಲ್ಲಿ ಆರೋಹಣ ಪರ್ವತಾರೋಹಿಗಳು ಸಾಹಸಿಗಳು ಹೆಸರಿನಲ್ಲಿ ಅವಿಭಜಿತ ದಕ ಜಿಲ್ಲೆಯೊಳಗೆ ಪರ್ವತಾರೋಹಣ ಸಪ್ತಾಹವನ್ನು ನಡೆಸಿದ್ದೆವು. ಸಂತ ಅಲೋಶಿಯಸ್ ಕಾಲೇಜ್, ವಿವೇಕಾನಂದ ಕಾಲೇಜ್, ಮಹಾವೀರ ಕಾಲೇಜ್, ವಿಜಯಾ ಕಾಲೇಜ್, ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜ್, ಭಂಡಾರ್ಕರ್ಸ್ ಕಾಲೇಜ್ ಎಂದು ಮೊದಲ ಆರು ದಿನ ಪ್ರದರ್ಶನ, ಭಾಷಣ ನಡೆಸಿದ್ದೆವು. ಮಂಗಳೂರಿನಿಂದ ತೊಡಗಿ ಪುತ್ತೂರು, ಮೂಡಬಿದ್ರೆ, ಮೂಲ್ಕಿ, ಉಡುಪಿ, ಕುಂದಾಪುರ ಎಂದು ಸುತ್ತಿ ಕೊನೆಯಲ್ಲಿ ಇದೇ ಉಜಿರೆಗೆ ಬಂದಿದೆವು. ಉದ್ದಕ್ಕೂ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆಯುವ ಸಮಾರೋಪ ಸಭೆ ಹಾಗೂ ಹಿಂಬಾಲಿಸುವ `ನೀವೇ ಭಾಗವಹಿಸಿ’ ಕಲಾಪಕ್ಕೆ ಎಲ್ಲರಿಗೆ ಮುಕ್ತ ಆಮಂತ್ರಣವನ್ನೂ ಕೊಡುತ್ತ ಬಂದಿದ್ದೆವು. ಹಾಗೆ ಉಜಿರೆಯಲ್ಲಿ ಸೇರಿದ್ದ ಸುಮಾರು ತೊಂಬತ್ತೆರಡು ಮಂದಿಯೊಡನೆ, ರಾತ್ರಿ ಚಾರಣದಲ್ಲಿ ಇದೇ ಚಾರ್ಮಾಡಿ ಮಾರ್ಗದಲ್ಲಿ ಸುಮಾರು ಹದಿನಾಲ್ಕು ಕಿಮೀ ನಡೆದದ್ದು ಒಂದು ಸುಂದರ ನೆನಪು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಶಂಪಾ ದೈತೋಟ ಅನೌಪಚಾರಿಕವಾಗಿ ತಂಡದೊಡನೇ ಹೆಜ್ಜೆ ಹಾಕಿದ್ದರು.

ನಿಡಿಗಲ್ಲು ಸೇತುವೆ ಕಳೆದು ಸಿಗುವ ಮುಂಡಾಜೆ ಕವಲಿನಲ್ಲಿ ಅವರು ಸ್ವಂತ ಮನೆಯತ್ತ ತಿರುಗುವಾಗ ಶುಭಾಶಯ ಕೋರಿದ ಸ್ಥಳ ಇಂದು ಸೈಕಲ್ಲಿನಲ್ಲಿ ದಾಟುವಾಗ ನಿನ್ನೆ ಕಂಡಷ್ಟು ಕಣ್ಣಿಗೆ ಕಟ್ಟುತ್ತಿತ್ತು. ಸೋಮಂತಡ್ಕದ ಎಡಗವಲು ಆ ದಿನಗಳಲ್ಲಿ ನಮಗೆ ದಿಡುಪೆ, ಆನಡ್ಕ ಅಬ್ಬಿ, ಬಂಡಾಜೆ ಅಬ್ಬಿ, ಬಲ್ಲಾಳರಾಯನ ದುರ್ಗಾದಿ ಅಸಂಖ್ಯ ಪ್ರಾಕೃತಿಕ ತಾಣಗಳ ಆರಂಭ ನೆಲೆಯನ್ನೇ ಕಾಣಿಸುತ್ತಿತ್ತು. ಹಾಗೇ ಕಕ್ಕಿಂಜೆಯ ಬಲಗವಲು ನಮಗೆ ಅಮೆದಿಕ್ಕೆಲ್ಲಿನ ಆರಂಭ ನೆಲೆ. ಚಾರ್ಮಾಡಿ ಹಳ್ಳಿಯವರೆಗೂ ಹೀಗೆ ದಾರಿಯ ಇಕ್ಕೆಲಗಳಲ್ಲಿ ನನ್ನ ನೆನಪುಗಳು ಪುಟ್ಟ ದೊಡ್ಡ ವರ್ಣರಂಜಿತ ದೀಪ ಮಾಲೆ. ಹಾದಿ ಬದಿಯ ಮರಗಳ ಸಂದಿನಲ್ಲಿ, ನೇರ ಸುದೂರದಲ್ಲಿ ಕಂಡೂ ಕಾಣದಂತೆ ಪ್ರತ್ಯಕ್ಷವಾಗುವ ಏರಿಕಲ್ಲಿಗೆ, ಭಾಗವತ ಮತ್ತು ಚಂಡೆಯವರ ನಡುವೆ, ತೆರೆಯ ಮರೆಯಿಟ್ಟುಕೊಂಡೇ ರಂಗಕ್ಕಿಳಿದ ಬಣ್ಣದ ವೇಷದ್ದೇ ಗತ್ತು.

ಮುಂದುವರಿದಂತೇ ಆ ದೈತ್ಯ (ಶಿಖರ) ಪುಟ್ಟ ಗುಡ್ಡೆಯ ಮರೆಯನ್ನು ಕಿತ್ತೆಸೆದು ಕಣ್ತುಂಬುತ್ತಿದ್ದಂತೇ ಚಾರ್ಮಾಡೀ ಹಳ್ಳಿ ಬಂದಿತ್ತು. ಬಿಸಿಯುಕ್ಕಿಸುವ ಒಂದೆರಡು ತೀವ್ರ ಏರು, ಅಂಕಾಡೊಂಕಿನ ಉಯ್ಯಾಲೆಯೋಟದಲ್ಲಿ ತಣಿಸಿದ ಇಳಿಜಾರು, ಬೆದರಿಸಿದ ಲಾರಿ, ವಿಜಯ ಸಂಕೇತವಾಗಿ ಹೆಬ್ಬೆರಳು ಚಿಮ್ಮುತ್ತಿದ್ದ ಅಸಂಖ್ಯರು, ಅಲ್ಲಲ್ಲಿ ನಮ್ಮ ಮನೋಸರಸಿಯಲ್ಲೆಬ್ಬಿಸುತ್ತಿದ್ದ ಉಲ್ಲೋಲಗಳು ಇಂದಿಗೂ ನಿಲ್ಲದ ತರಂಗಗಳು.

ಬೆಂಗಳೂರು ಮಹಾಯಾನದಂದು ನಾವು ಚಾರ್ಮಾಡಿ ಹಳ್ಳಿಯಿಂದ ಬಸ್ಸನ್ನಾಶ್ರಯಿಸಿದ್ದೆವು. ಈಗ ಹಾಗಲ್ಲ, ಸುಮಾರು ಇಪ್ಪತ್ಮೂರು ಕಿಮೀ ಅಂತರದ, ಸುಮಾರು ಒಂಬೈನೂರು ಮೀಟರ್ ಔನ್ನತ್ಯದ ಕೊಟ್ಟಿಗೆಹಾರದವರೆಗೆ ನಮ್ಮದೇ ತುಳಿದಾರಿ. ನಾಗರಿಕ ಹಸುತೃಷೆಗಳಿಗೆ ನೆಲೆಗಾಣಿಸದ ಕಗ್ಗಾಡು, ಕುತ್ತೇರು ಎಂಬ ಎಚ್ಚರದಲ್ಲಿ ಹೋಟೆಲೊಂದರಲ್ಲಿ ಹೊಟ್ಟೆ ಗಟ್ಟಿ ಮತ್ತು ನೀರಂಡೆಗಳನ್ನು ಭರ್ತಿ ಮಾಡಿಕೊಂಡೆವು. ನಮಗೆ ಕೊಟ್ಟಿಗೆಹಾರವನ್ನು ಊಟಕ್ಕೂ ಬಹಳ ಮುಂಚೆ ತಲಪುವ ನಿರೀಕ್ಷೆಯಿತ್ತು. ಹಾಗೇ ಆದ ಪಕ್ಷದಲ್ಲಿ, ಲಘೂಪಹಾರವಷ್ಟೇ ಮಾಡಿ ಚುರುಕಾಗಿ ಮುಂದುವರಿಯುವ ಮಾತೂ ಆಡಿಕೊಂಡೆವು. ಮತ್ತೆ ರಾತ್ರಿ ವಾಸಕ್ಕೆ – ಟಸ್ಕ್ ಅಂಡ್ ಡಾನ್, ಮೂಡಿಗೆರೆ ಮತ್ತು ಸಕಲೇಶಪುರಗಳ ನಡುವಿನ ಒಂದು ಖಾಸಗಿ ವನಧಾಮ ನಿಶ್ಚೈಸಿಕೊಂಡಿದ್ದೆವು. ಅದರ ಮಾಲಿಕ, ಮಿತ್ರ – ವಿಕ್ರಮ್ ಗೌಡ, ಅವರಿಗೆ ಚರವಾಣಿಸಿ, ನಮ್ಮ ತೃಪ್ತಿಕರ ಪ್ರಗತಿ ಹಾಗೂ ಸಂಜೆಗೇ ತಲಪುವ ಸೂಚನೆಯನ್ನೂ ಕೊಟ್ಟದ್ದಾಯ್ತು.

ಹತ್ತೂವರೆಯ ಸುಮಾರಿಗೆ ನಿಜ ಘಟ್ಟ ಏರತೊಡಗಿದೆವು. ಚಾರ್ಮಾಡಿ ಹಳ್ಳಿಯ ಮೂರ್ನಾಲ್ಕು ಮನುಷ್ಯ ರಚನೆಗಳನ್ನು ಕಳೆದದ್ದೇ ದಾರಿಯ ಇಕ್ಕೆಲಗಳು ಮರ, ಹಸಿರು ಇಲ್ಲದ ಬಾಣೆ. ಕಾಡುಕಲ್ಲೆದ್ದು ದೂಳು ಕಸ ಹಾರಾಡುವ, ರಣಬಿಸಿಲಿಗೆ ಹಬೆಯಾಡುವ ಡಾಮರು ವಾಸನೆಯ ಪರಿಸರ. ಅಸಂಖ್ಯ ವಾಹನಗಳು ತಂಗಿ ಹೋದ, ಯಥಾನುಶಕ್ತಿ ಕೀಲೆಣ್ಣೆ ಹಾಳಮೂಳ ಚೆಲ್ಲಿಹೋದ, ನೀರಸ ಬೀಡು. ಒಮ್ಮೆ ಪಾರಾದರೆ ಸಾಕೆಂದು ಅವಸರಿಸುವ ನೇರ ಏರುದಾರಿ. ನಾವು ಸಾಧಿಸಬೇಕಿದ್ದ ಔನ್ನತ್ಯದ ಸೂಚಿಯಾಗಿ ಏರಿಕಲ್ಲು ಅಲ್ಲಿಂದಲೂ ಕಾಣುತ್ತಿತ್ತು. ಅದು ನಮ್ಮ ಸಾಧನಾಪಥದ Charmಗಳ ಮುಡಿ. ಎಂಟು-ಹತ್ತು ಹಿಮ್ಮುರಿ ತಿರುವು ಸೇರಿದಂತೆ ನೂರೆಂಟು ಬಲಿಬಂದು ಸಿದ್ಧಿಸಬೇಕಾದ ಲಕ್ಷ್ಯ. ವ್ಯತಿರಿಕ್ತವಾದದ್ದು ಇದು ಚಾರ್ಮಾಡಿ ಹಳ್ಳಿ, Charmಗಳ ಅಡಿ ಅಥವಾ Charm ಮಡಿ!

ಉಸ್ಸು, ಬುಸ್ಸು ಸೇಕುತ್ತ ಒಂದು ಗುಣಿಸು ಮೂರರಿಂದ ತೊಡಗಿ ಒಂದರವರೆಗೂ ಗೇರೇರಿಸಿ ಪೆಡಲ್ ತುಳಿದೆವು. ಹ್ಯಾಂಡಲ್ ಹಿಂದಕ್ಕೆಳೆಯುವಂತೆ ಜಗ್ಗಿ, ಶಕ್ತಿಯೆಲ್ಲ ಪಾದಕ್ಕಿಳಿಸಿದಂತೆ ಸುತ್ತಿನ ನಿರಂತರತೆ ಕಾಯ್ದುಕೊಂಡೆವು. ಏರುದಾರಿಯ ತಿರುವುಗಳಲ್ಲಿ ಒಳಮೂಲೆಗಳು ತುಸು ಹೆಚ್ಚೇ ಕಡಿದಾಗುತ್ತವೆ. ಈ ಓರೆ ಚತುಷ್ಚಕ್ರಿಗಳಿಗೆ ಅವಶ್ಯವಾದರೆ ನಮ್ಮ ಓಟಕ್ಕೆ ಹೊರೆಯೇ ಆಗುತ್ತದೆ. ಹಾಗೆಂದು ದಾರಿಯ ಅಗಲವನ್ನೆಲ್ಲಾ ನಾವು ಬೇಕಾಬಿಟ್ಟಿ ವ್ಯಾಪಿಸಿ, ನಮ್ಮದೇ ಒಳಜಾಡುಗಳನ್ನು ರೂಪಿಸುವಂತಿಲ್ಲ. ಅನ್ಯ ವಾಹನಗಳು ಮಿನಿಟಿಗೊಂದಾದರೂ ಹಾದು ಹೋಗುತ್ತಲೇ ಇತ್ತು. ಅಂತದ್ದರಲ್ಲೂ ಕೆಲವು ತೀವ್ರ ಎಡ ತಿರುವುಗಳಲ್ಲಿ ನಾನು ಎಚ್ಚರಿಕೆಯಲ್ಲೇ ದಾರಿಯ ಬಲ ಅಂಚನ್ನು ಬಳಸಿದ್ದುಂಟು. ಹಾಗೇ ತೀವ್ರ ಬಲತಿರುವುಗಳಲ್ಲಿ ಎದುರಿನಿಂದ ಬರುವ ಭಾರೀ ವಾಹನಗಳ ಕುರಿತೂ ಎಚ್ಚರ ಕಾಯ್ದುಕೊಳ್ಳುತ್ತಿದ್ದೆ. ಆ ವಾಹನಗಳು ಕೆಲವೊಮ್ಮೆ ವೇಗ ಅಥವಾ ಇಳಿಜಾರಿನ ತುಯ್ತ ಸಂಭಾಳಿಸಲಾಗದೇ ನಮ್ಮ ಅಂಚಿಗೇ ನುಗ್ಗುವುದಿದೆ. ಇನ್ನೂ ಕೆಲವೊಮ್ಮೆ ಎದುರಿನಿಂದ ಘನವಾಹನವೇನೂ ಇಲ್ಲವೆಂಬ ಕಣ್ಣಂದಾಜಿನಲ್ಲಿ ನಮಗೆ ಅಪಾಯವಾಗುವಂತೆ ದೊಡ್ಡಸುತ್ತು ತೆಗೆಯುವುದೂ ಇದೆ.

ಬೆಟ್ಟಗುಡ್ಡಗಳನ್ನು ಓರೆಯಲ್ಲೇರುವುದು ಸುಲಭ ಕ್ರಮ. ಅದನ್ನೇ ಸೈಕಲ್ ಸರಳತೆಗೆ ಅಳವಡಿಸುವಾಗ ಸಿಕ್ಕ ಸಣ್ಣ ಅವಕಾಶದಲ್ಲೂ ನಮಗೆ ನೇರ ಸಾಗುವುದಕ್ಕಿಂತ ಹಾವಿನ ಜಾಡುಮೂಡಿಸುವ ಚಪಲ ಬರುವುದಿದೆ. ಇನ್ನು ಸುಸ್ತಾದರಂತೂ ಯೋಚಿಸದೆಯೂ ನಾವು ಕೆಲವೊಮ್ಮೆ ಬಳುಕಾಡುವುದುಂಟು. ಆದರೆ ಇಂಥಲ್ಲೆಲ್ಲ ನಮ್ಮ ಹಿಂದಿನಿಂದ ಬರುವ ವಾಹನಗಳ ಕುರಿತ ಎಚ್ಚರ ಎಷ್ಟಿದ್ದರೂ ಸಾಲದು. ಸಮತೋಲನ ಕಾಯುವ ಸೈಕಲ್ಲುಗಳ ಸಹಜ ಓಲಾಟಕ್ಕೇ ಹೆದರಿ ಹಾರ್ನಿನ ಗದ್ದಲ ಮಾಡುವ, ನಿಧಾನಿಸಿ ದೊಡ್ಡ ದಾರಿ ಕೊಟ್ಟು ಸಾಗುವ ವಾಹನಗಳೂ ಇದ್ದಾವೆ. ಒಟ್ಟಾರೆ ದ್ವಿಚಕ್ರಿಗಳನ್ನು ಲೆಕ್ಕಕ್ಕೇ ಇಟ್ಟುಕೊಳ್ಳದೇ ಬಲು ಸಮೀಪದಿಂದಲೇ ಹಾದು ಹೋಗುವವೂ ಇದ್ದಾವೆ. ಇಂಥವರ ಬಗ್ಗೆ ಹೆಚ್ಚಿನೆಚ್ಚರದಲ್ಲೇ ಗೆಳೆಯ ಬಿ.ಎಸ್ ಸದಾಶಿವ ರಾವ್ ತಮ್ಮ ಸೈಕಲ್ಲಿನ ಬಲ ಹ್ಯಾಂಡಲ್ಲಿಗೆ ಹಿನ್ನೋಟ-ಕನ್ನಡಿ (ರೇರ್ ವ್ಯೂ ಮಿರರ್) ಸಿಕ್ಕಿಸಿಕೊಂಡಿದ್ದಾರೆ! ಆದರೆ ನನಗೆ ಶ್ರಮ ಸಂಸ್ಕೃತಿಯ ಭಾಗವಾದ ಸೈಕಲ್ಲಿಗೆ ಅಮಿತ ಸಲಕರಣೆಗಳ ಹೇರು ಹಾಕುವುದು ಹಿಡಿಸುವುದಿಲ್ಲ. ಹಾಗಾಗಿ ನಾನು ವಾಹನಗಳ ಸದ್ದಿನೊಡನೇ ರಸ್ತೆಯ ಎಡ ಅಂಚಿನ ನಿಷ್ಠೆ ಗಟ್ಟಿ ಮಾಡುತ್ತೇನೆ.

ಆ ಕ್ಷಣದಲ್ಲಿ ಒಮ್ಮೆಲೆ ಕಲ್ಲು, ಹೊಂಡ ಕಾಣಿಸಿ ಬಳುಕುವುದು ಅನಿವಾರ್ಯವಾದರೂ ಎಡ ಮಗ್ಗುಲನ್ನೇ ಆಯ್ದುಕೊಳ್ಳುತ್ತೇನೆ. ನಾನು ಕಾರು ತೆಗೆದುಕೊಳ್ಳುವ ಮುನ್ನ ವಾಹನ ಚಾಲನಾ ಸಂಸ್ಥೆಯೊಂದಕ್ಕೆ ಸೇರಿದ್ದೆ. ಅಲ್ಲಿನ ಶಿಕ್ಷಕ ಯಂತ್ರವನ್ನು ಚಾಲೂ ಮಾಡುವಲ್ಲಿಂದ ತೊಡಗಿ ಕ್ಲಚ್ಚು, ಗೇರು, ಸ್ಟಿಯರಿಂಗು, ಹಾರ್ನು, ಬ್ರೇಕು ಎಂದೆಲ್ಲಾ ತೋರಿಕೊಟ್ಟರು, ಮೈದಾನದಲ್ಲೇ ನಮ್ಮಿಂದ ಮಾಡಿಸಿಬಿಟ್ಟರು. “ಅಲ್ಲಿಗೆ ನೀವು ಯಂತ್ರದ ನಿರ್ವಾಹಕ ಅರ್ಥಾತ್ ಮೋಟಾರ್ ಆಪರೇಟರ್ ಮಾತ್ರ. ಇದಕ್ಕೆ ಕಾಲರ್ಧ ಗಂಟೆಯ ಅಭ್ಯಾಸ ಸಾಕು. ಆದರೆ ನಿಜ ಚಾಲಕ ಅಥವಾ ಡ್ರೈವರ್ ಆಗುವುದು ಯಂತ್ರ ಚಾಲನೆಗೆ ಪರಿಸರ ಹಾಗೂ ಪರಿಸ್ಥಿತಿಯನ್ನು ಹೊಂದಿಸಿದಾಗ ಮಾತ್ರ” ಎಂದದ್ದು ಸೈಕಲ್ಲಿಗೂ ಅನ್ವಯವಾಗುತ್ತದೆ!

ಘಟ್ಟ ಇಳಿಯುವ ಗಿರಾಕಿಯನ್ನು ಮೊದಲು ಹಿಡಿಯುವ ಉತ್ಸಾಹದಲ್ಲಿ ಒಂದೆರಡು ಜೋಪಡಿ ಅಂಗಡಿಗಳು ಚಾರ್ಮಾಡಿ ಪೇಟೆಯಿಂದಲೂ ಕಿರಿದಂತರದಲ್ಲೇ ಸಿಕ್ಕವು. ಅನಂತರ ಬಲಕ್ಕೆ ಬೆಟ್ಟ, ಎಡಕ್ಕೆ ಕೊಳ್ಳ ನೋಡುತ್ತ ಸಾಗಿದೆವು. ಮರ ಪೊದರಿನ ದಟ್ಟಣೆ ದಾರಿ ಬದಿಗೆ ವಿಶೇಷ ಕಾಣದಿದ್ದರೂ ನಮ್ಮ ಅರಿವಿಗೆ ಬರುತ್ತಿತ್ತು. ಸ್ವಲ್ಪದರಲ್ಲೇ ಎಡಕ್ಕೆ ಸರಕಾರೀ ಕೊಕ್ಕೋ ಕೃಷಿಕ್ಷೇತ್ರದ ಮುಕ್ಕಾದ ಬೋರ್ಡೂ, ಕಚ್ಚಾ ದಾರಿಯೂ ಕಾಣಿಸಿತು. ಅದರೊಡನೆ ನನ್ನ ಮನದಂಗಳದಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದಿನ ಅರೆವಿಫಲ ಸಾಹಸಯಾನದ ನೆನಪೊಂದು ಸುಳಿದು ಹೋಯ್ತು.

ಅಂದು ಇದೇ ಚಾರ್ಮಾಡಿ ಶ್ರೇಣಿಯ ಕೊಡೆಕಲ್ಲು ಶಿಖರಕ್ಕೇರಿದ್ದೆವು. ಮತ್ತೆ ಬಿದಿರುತಳದ ಒತ್ತಿನಿಂದ ಹಿಮ್ಮೈ ಕೊಳ್ಳದ ದುರ್ಗದಹೊಳೆ ಪಾತ್ರೆಗಿಳಿದು, ಆಯಕಟ್ಟಿನ ಜಾಗ ಹುಡುಕಿ ಬಲ್ಲಾಳರಾಯನದುರ್ಗದ ನೇರಮೈಗೆ ಲಗ್ಗೆ ಹಾಕುವ ಸಾಹಸ. ಎರಡು ದಿನಗಳ ಕಲಾಪಕ್ಕೆ ಸಾಕಷ್ಟು ಹೊರೆಯನ್ನೂ ಹೊತ್ತಿದ್ದೆವು. ಆದರೆ ಆಚೆ ಇಳಿಯುವ ಭರಾಟೆಯಲ್ಲಿ ಮಿತ್ರ ದೇವುಹನೆಹಳ್ಳಿ ಪಾದವನ್ನು ತೀವ್ರ ಉಳುಕಿಸಿಕೊಂಡದ್ದರಿಂದ ಎಲ್ಲ ರದ್ದುಪಡಿಸಿದ್ದೆವು. ಕತ್ತಲಲ್ಲೇ ಪರಡುತ್ತ ದುರ್ಗದ ಹಳ್ಳದ ಪಾತ್ರೆಗಿಳಿದು, ಅದೃಷ್ಟಕ್ಕೆ ಸಿಕ್ಕ ಬಂಡೆ ಹಾಸಿನಲ್ಲಿ ಶಿಬಿರ ಹೂಡಿದ್ದೆವು. ದೇವು ಕಾಲಿನ ನೆಪ, ಪರಿಸರದ ಚಂದ ಸೇರಿಸಿ ನಾವು ಮರುದಿನವನ್ನೆಲ್ಲ ಅಲ್ಲೇ ಕಳೆದಿದ್ದೆವು. ಮೂರನೇ ದಿನ ನಿಧಾನಕ್ಕೆ ಹಳ್ಳವನ್ನೇ ಅನುಸರಿಸಿ ಬಯಲಾದದ್ದೇ ಈ ಕೊಕ್ಕೋ ಅಭಿವೃದ್ಧಿ ಕ್ಷೇತ್ರದಲ್ಲಿ. ಕೃಷಿಯ ಲೆಕ್ಕದಲ್ಲಿ ಅಂದೇ ಹಾಳು ಸುರಿಯುತ್ತಿದ್ದ ಕ್ಷೇತ್ರ ಈಗ ಹೇಗಿರಬಹುದೋ!

ತಲೆ ಕೆಳಗೆ ಹಾಕಿ, ಞರಕ್ ಞರಕ್ ಚಕ್ರದ ತಾಳಕ್ಕೆ ಬುಸುಬುಸು ಉಸಿರಿನ ಲಯಸಾಧಿಸುತ್ತಲೇ ಸಾಗಿದ್ದೆ. ಅನಿಲ್, ಸಮರ್ಥ ಕಣ್ಮರೆಯಾಗಿದ್ದರು. ನಾನು ಮತ್ತು ವೇಣು ಜತೆ ಕಡಿದುಕೊಳ್ಳಲಿಲ್ಲ. ತುಸುವೇ ಏರಿದ ಉಸಿರಾಟದಲ್ಲಿ, ಅಂದರೆ ಮೂಗಿನ ಉಸಿರಾಟದಲ್ಲೇ ಸೈಕಲ್ ಚಲಾಯಿಸುವುದು ಸಾಮಾನ್ಯವಾಗಿ ನಮ್ಮೆಲ್ಲರ ಆಶಯ. ಆದರೆ ಚಾರ್ಮಾಡಿಯ ಏರಿನಲ್ಲಿ ತತ್ತ್ವಗಳು “ಉಪದೇಶಕ್ಕೆ ಮಾತ್ರ” ಎಂದುಕೊಳ್ಳುತ್ತ ಬಾಯಲ್ಲೇ ಬುಸುಗುಡುತ್ತಿದ್ದೆವು. ಹೆಚ್ಚೇನು ಆಗಾಗ ನಿಟ್ಟುಸಿರೂ ಬಿಟ್ಟು ಹೃದಯ ಹಗುರ ಮಾಡಿಕೊಳ್ಳುತ್ತಿದ್ದೆವು. ಸಹಜವಾಗಿ ಶ್ರಮ, ಬೆವರು ಹರಿಯುವ ಪರಿಗಳನ್ನು ಮೀರಿ ಬಾಯಿ ಒಣಗುವುದಕ್ಕೂ ನೀರು ಚಪ್ಪರಿಸುತ್ತಲೇ ಇರಬೇಕಾಗುತ್ತಿತ್ತು. ನಮ್ಮ ಸೈಕಲ್ಲುಗಳ ಸೀಟಿನ ಕೆಳಗಿನ ಎರಡೂ ಲಂಬ ಕೊಳವೆಗಳಲ್ಲಿ ಕ್ಲಿಪ್ಪಿನ ವ್ಯವಸ್ಥೆಯಿದೆ. ಹೆಚ್ಚಿನ ಕ್ರಯಕ್ಕೆ ಅದರಲ್ಲಿ ತೊಡರಿಸುವ ಪುಟ್ಟ ನೀರ ಅಂಡೆಗಳೂ ಸೈಕಲ್ ಮಳಿಗೆಗಳಲ್ಲೇ ಸಿಗುತ್ತವೆ. ಆದರೆ ನಾನು ಹೊರಗಿನಿಂದ, ತುಸು ದೊಡ್ಡದನ್ನೇ ಕೊಂಡು, ಕ್ಲಿಪ್ಪಿದ್ದಂತೆ ಪ್ರತ್ಯೇಕ ಲಾಡಿಯಲ್ಲೂ ಕಟ್ಟುತ್ತೇನೆ. ಹಾಗಾಗಿ ಉಳಿದವರು ಸವಾರಿಯಲ್ಲೇ ನೀರು ಕುಡಿದರೆ ನಾನು ಮಾತ್ರ ಸೈಕಲ್ಲಿಳಿದೇ ಬಳಸಬೇಕಾಗುತ್ತಿತ್ತು. ಇದು ನನಗೆ ಸುಸ್ತಿನಲ್ಲಿ ವಿಶ್ರಾಂತಿಯ ನೆಪ, ಲಹರಿಯ ಓಟದಲ್ಲಿ ವಿಳಂಬಕ್ಕೆ ಕಾರಣವೂ ಆಗುತ್ತಿತ್ತು.

ಆಕಸ್ಮಿಕಗಳು ನಾವು ಬಯಸಿಯೋ ಹೇಳಿಯೋ ಬರುವುದಿಲ್ಲ ಎಂಬ ಅರಿವು ತಂಡದ ಎಲ್ಲ ಸದಸ್ಯರಲ್ಲೂ ಸದಾ ಇರಬೇಕು. ಹಿಂದೆಲ್ಲೋ ಸೈಕಲ್ ಇಳಿಯುವಾಗ ತುಸು ಎಡವಟ್ಟಾಗಿ ವೇಣು ಸಣ್ಣದಾಗಿ ಬಿದ್ದಿದ್ದರಂತೆ. ಆಗ ನಾವು ಯಾರೂ ಅವರ ಸಹಾಯಕ್ಕೆ ಒದಗುವುದಾಗಿರಲಿಲ್ಲ. ನೇರ ಘಟ್ಟ ಏರುವಾಗ ನಾನು ಈ ಅರಿವನ್ನು ಮರೆಯಲಿಲ್ಲ. ನನ್ನ ಬೆನ್ನಚೀಲದಲ್ಲಿ ದಾಹಕ್ಕೂ ಲಘು ತಿನಿಸಿನಂತೆಯೂ ಒದಗುವ ಜಂಬುನೇರಳೆ ಹಣ್ಣು ಸಾಕಷ್ಟು ಹೊತ್ತಿದ್ದೆ. ವೇಣು ಬಳಿ ಹಾಗೇ ಬೆಲ್ಲದ ಚೂರು, ಖರ್ಜೂರ, ಬಾಳೆ ಹಣ್ಣಿತ್ತು. ಇವುಗಳನ್ನು ನಮ್ಮೊಳಗೆ ಹಂಚಿಕೊಂಡು ಚಪ್ಪರಿಸುವ, ಕೊಲ್ಲಿ ಇಣುಕುವ, ಚಿತ್ರ ಹಿಡಿಯುವ, ಹಿಮ್ಮುರಿ ತಿರುವಿನಲ್ಲಿ ಭಾರೀ ಹೊರೆಯ ವಾಹನಗಳ ಮುಖಾಮುಖಿಯ ನಿರ್ವಹಣೆಯ ಚಂದ ನೋಡುವ ಅನೇಕ ನೆಪಗಳಲ್ಲಿ ನಾವು ಪರಸ್ಪರ ಕಣ್ಣಳವಿಯಲ್ಲೇ ಇಟ್ಟುಕೊಂಡಿದ್ದೆವು.

ಹಳ್ಳಿಯಿಂದ ಸುಮಾರು ಐದಾರು ಕಿಮೀ ಅಂತರದಲ್ಲಿ ಮತ್ತೊಂದೇ ಸರಕಾರೀ ಯೋಜನೆಯ ಗೋರಿ ಕಾಣಿಸಿತು – ಔಷಧೀ ಸಸ್ಯಗಳ ಸಂರಕ್ಷಣ ಕೇಂದ್ರ. ಸಹಜ ಅರಣ್ಯದ ರಕ್ಷಣೆ ಪ್ರಧಾನವಾಗಿ ನಿರ್ವಹಣೆಯ ಹೊಣೆಹೊರಬೇಕಾದ ಇಲಾಖೆ ಮತ್ತೆ ಇಲ್ಲಿ ನಿರ್ಮಾತೃವಿನ ಆವುಟ ಕಾಣಿಸಿತ್ತು. ಪ್ರಾಕೃತಿಕ ದುರ್ಗಮತೆಯನ್ನು ಹಾಳುಮಾಡಿ ಮೋಟುಗೋಡೆ, ಕುಂದ ನಿಲ್ಲಿಸಿ, ಪರಿಸರಕ್ಕೆ ಏನೂ ಹೊಂದದ ಭಾರೀ ಬೋರ್ಡು ಹೇರಿದ್ದರು. ವಲಯದೊಳಗೆ ಹೋಗುವಂತೆ ಕಡಿದಿದ್ದ ಕಚ್ಚಾದಾರಿ ಮತ್ತಾ ಕೊನೆಯಲ್ಲಿರಬಹುದಾದ ಇನ್ನೊಂದಷ್ಟು ವ್ಯರ್ಥ ರಚನೆಗಳ ಗುಟ್ಟು ಸುಲಭದಲ್ಲಿ ರಟ್ಟಾಗದಂತೆ ಭರ್ಜರಿ ಗೇಟು, ಲಾಕೂ ಹಾಕಿದ್ದರು. ಕ್ರಿಸ್ತಪೂರ್ವದಲ್ಲೆಲ್ಲೋ ಇದು ಉದ್ಘಾಟನಾ ಕಲಾಪ ಕಂಡಮೇಲೆ ಬಳಕೆಗೆ ಬಂದಿಲ್ಲ ಎನ್ನುವಂತೆ ಅವೆಲ್ಲ ತುಕ್ಕೂ ಮುಕ್ಕೂ ಹಿಡಿದಿತ್ತು, ಒಳಗಿನ ದಾರಿ ಮುಚ್ಚಿಯೇ ಹೋಗಿತ್ತು. ಅಪ್ರಜ್ಞೆಯಲ್ಲೇ ಈ ಅವಸ್ಥೆಯನ್ನು ಎತ್ತಿ ತೋರುವಂತೆ, ಗೇಟಿನೆದುರು ಒಬ್ಬ ರಿಕ್ಷಾವಾಲ ತನ್ನ ತತ್ಕಾಲೀನ ಹಣ್ಣಿನ ಮಳಿಗೆ ನಡೆಸಿದ್ದ. ಅನಿಲ್, ಸಮರ್ಥ ಕೂಡಾ ಅಲ್ಲಿ ನಿಂತಿದ್ದರು. ನಾವೆಲ್ಲ ಒಟ್ಟುಗೂಡಿ ಸೌತೇ ಕಾಯಿ ಚಪ್ಪರಿಸಿ, ತುಸು ವಿಶ್ರಾಂತಿ ಪಡೆದೆವು.

ಭಗವತಿ ಘಾಟಿ ಯೋಜನಾಬದ್ಧವಾಗಿಯೇ ರೂಪುಗೊಂಡದ್ದರಿಂದ ಏರು ಏಕರೂಪದ್ದಿದೆ. ಚಾರ್ಮಾಡಿ ಸೇರಿದಂತೆ ನಮ್ಮ ವಲಯದ ಉಳಿದ ಘಾಟಿಗಳು ಹಾಗಲ್ಲ. ಹಣ್ಣಿನ ರಿಕ್ಷಾವಾಲ “ನೀವು ಬಂದದ್ದು ಸ್ವಲ್ಪ, ಕೊಟ್ಟಿಗೆ ಹಾರಕ್ಕೆ ದಾರಿ ಇನ್ನೂ ದೀರ್ಘ ಮತ್ತು ಏರು ತುಂಬಾ ದೊಡ್ಡದು” ಎಂದೇ ಹೆದರಿಸಿದ. ಆದರೆ ವಾಸ್ತವ ಹಾಗಿಲ್ಲ ಎನ್ನುವುದು ನಮಗೆ ತಿಳಿದಿತ್ತು. ದೀರ್ಘ ಹೌದು, ಪೂರ್ಣ ಏರು ಅಲ್ಲ, ಎಂಬ ಅರಿವಿನೊಡನೆ ಮತ್ತೆ ಮಾರ್ಗಕ್ಕಿಳಿದೆವು. ಅಲ್ಲಿ ನಮ್ಮನ್ನು ಕಳಚಿಕೊಂಡ ಅನಿಲ್ ಮತ್ತು ಸಮರ್ಥ ಮತ್ತೆ ನಮಗೆ ಸಿಕ್ಕಿದ್ದು ಕೊಟ್ಟಿಗೆಹಾರದಲ್ಲೇ. ನಾವಿಬ್ಬರು ರಸ್ತೆಯ ಎಡ ಅಂಚಿಗೆ ಬದ್ಧರಾಗಿ, ನೆಲನೋಟಕರಾಗಿ, ಕಾಲ ಮತ್ತು ಅಂತರಗಳ ಚಿಂತೆ ಹಚ್ಚಿಕೊಳ್ಳದೆ, ಪೆಡಲಾವರ್ತ ಜಾರಿಯಿಟ್ಟೆವು. ಓಡಾಡುವ ವಾಹನಗಳಿಂದ ನಮಗೆ ಉತ್ತೇಜನಕಾರೀ ಉದ್ಗಾರಗಳೂ ಸನ್ನೆಗಳೂ ಯಥೇಚ್ಛ ಸಿಗುತ್ತಿದ್ದವು. ಮಹಾಮುಂಡಾಸಿನಂತೆ ಹುಲ್ಲಹೊರೆ ಹೊತ್ತ ಲಾರಿಗಳು ಬಂದಾಗಷ್ಟೇ ನಾವು ವಿಶೇಷ ಜಾಗ್ರತೆ ವಹಿಸಿದ್ದು ಬಿಟ್ಟರೆ, ಯಾರೂ ಯಾವುದೂ ನಮಗೆ ಆತಂಕಕಾರಿಯಾಗಲಿಲ್ಲ.

ಕಿಲೋ ಕಲ್ಲುಗಳಲ್ಲಿ ನಾನೂರು ಕಿಮೀ ದೂರಕ್ಕೂ ಮಿಕ್ಕ ಯಾವುದೋ ಅಲ್ಪಖ್ಯಾತ (ಪರರಾಜ್ಯದ್ದು) ಊರಿನ ಹೆಸರಷ್ಟೇ ತೋರುತ್ತಿತ್ತು. ನಮ್ಮ ಮಾರ್ಗಗಳಿಕೆಯ ಸಂತೋಷಕ್ಕೆ ಅದು ಪೂರಕವಾಗಿರಲಿಲ್ಲ. ಬೇಡ, ಹಿಮ್ಮುರಿ ತಿರುವುಗಳನ್ನಾದರೂ ಲೆಕ್ಕವಿಟ್ಟು ಸಾಧನೆಯ ಮುಡಿ ಶೃಂಗರಿಸಬೇಕು ಅಂದುಕೊಂಡೆ. ಆದರೆ ಚಕ್ರದ ಪ್ರತಿ ಉರುಳೂ ಗಣನೀಯವಾಗಿತ್ತು. ಎದ್ದ ಕಲ್ಲು, ಬಿದ್ದ ಗುಳಿ, ಹಾಕಿದ ತೇಪೆ, ಅಂಚಿನ ಗುಂಡಿ, ಮುರಿದ ಅಂಚುಗಟ್ಟೆ, ಕಾಡುದುರಿದ ಕಡ್ಡಿ ಕಸ, ನಮ್ಮ ನಿಧಾನವನ್ನು ಇಕ್ಕೆಲಗಳಲ್ಲಿ ನಿಂತು ನೋಡುತ್ತ ಹಿಂದೆ ಜಾರುತ್ತಿದ್ದ ಮರಗಿಡ ಬಳ್ಳಿಗಳೆಲ್ಲಾ ನಾನು ತೆರೆದ ಖಾತೆಗೆ ನುಗ್ಗಿ ಲೆಕ್ಕ ಕಲಸಿಹೋಯ್ತು. ಎಲ್ಲೋ ಒಂದೆಡೆ ಸಣ್ಣ ಹಾವು – ವೇಣು ಗುರುತಿಸಿದಂತೆ ಪಗೇಲ, ವಾಹನದಡಿಗೆ ಸಿಕ್ಕಿ ಆಂಶಿಕವಾಗಿ ಚಟ್ನಿಯಾಗಿತ್ತು. ಇನ್ನೊಂದೆಡೆ ಆಗತಾನೇ ಎಂಬಂತೆ ಸಾಕಷ್ಟು ದೊಡ್ಡ ಒಣ ಕೊಂಬೆಯೊಂದು ದಾರಿಗೆ ಅಡ್ಡ ಬಿದ್ದಿತ್ತು. ಅದನ್ನು ಮಾತ್ರ ನಾನು ಸೈಕಲ್ಲಿಳಿದು ಕರೆಗೆ ನೂಕಿ ಮುಂದುವರಿದೆ.

೧೯೮೦ರ ಪರ್ವತಾರೋಹಣ ಸಪ್ತಾಹದ ನಿಶಾಚಾರಣ ನಾನು ಹಿಂದೆ ಹೇಳಿದ್ದು ನೆನಪಿದೆಯಲ್ಲ. ಅದರ ಖಾಯಂ ಪ್ರಾಕೃತಿಕ ಸ್ಮರಣಿಕೆ – ಏರಿಕಲ್ಲು, ತಪ್ಪಲಿನ ಹಳ್ಳಿಯಲ್ಲಿ ನಮಗೆ ಪೂರ್ಣ ದರ್ಶನ ಕೊಟ್ಟದ್ದು, ಈಗ ಅಲ್ಲಲ್ಲಿ ಮರಗಿಡಗಳ ಸಂದಿನಲ್ಲಿ ನಮ್ಮನ್ನು ಇಣುಕಿ ನೋಡುತ್ತ ಸಮೀಪಿಸುತ್ತಲೇ ಇತ್ತು. ಆ ಒಂದೊಂದೂ ನೋಟ ಮತ್ತೆ ಸಿಕ್ಕದು ಎಂಬ ಅಳುಕು, ಅಲ್ಲದಿದ್ದರೂ ಡಿಜಿಟಲ್ ಕ್ಯಾಮರಾದ ಬಲದಲ್ಲಿ ಆಯ್ಕೆ ಹೆಚ್ಚಿರಲಿ ಎಂಬ ಭಾವ ಸೇರಿ ಇಬ್ಬರೂ ಚಿತ್ರಗ್ರಹಣ ನಡೆಸಿದ್ದಕ್ಕೆ ಲೆಕ್ಕವಿಲ್ಲ. ಇನ್ನೂ ಒಂದಿತ್ತು – ಶಾಲಾದಿನಗಳಲ್ಲಿ ಮನೆಯವರ ನಿರೀಕ್ಷೆಯಂತೆ ನಾನು ಗಂಭೀರ ಓದಿಗೆ ಕೂರುವ ಸಮಯ. ಬಾಲ ಮನಸ್ಸು `ಬಿಡುಗಡೆ’ ಬಯಸಿ, ಗಳಿಗೆಗೊಮ್ಮೆ ನೀರು, ಉಚ್ಚೆ ಎಂದು ಓಡಾಡುತ್ತಿದ್ದದ್ದನ್ನು ನೆನಪಿಸುವಂತೆಯೂ ಇತ್ತು. ದೃಶ್ಯ ವೀಕ್ಷಣೆಯ ಅವಕಾಶ ಪೆಡಲೊತ್ತುವುದರಿಂದ ಕೊಡುತ್ತಿದ್ದ ಬಿಡುಗಡೆ ಸಣ್ಣದೇನಲ್ಲ!

ಹಿಂದೆ ಏರಿಕಲ್ಲನ್ನು ನಾವು ಏಳನೇ ಹಿಮ್ಮುರಿ ತಿರುವು ಕಳೆದ ಮೇಲೆ ಸಿಕ್ಕ ಕೂಪಿನ ದಾರಿಯ ಅವಶೇಷ ಅನುಸರಿಸಿ ಏರಿದ್ದೆವು. ಆ ಸ್ಥಳದಿಂದ ತುಸು ಮುಂದೆ ಬಲಕ್ಕೆ ಯೇಣೆಪೋಯಾದವರ ಕೂಪಿನ ವಲಯಕ್ಕೆ ಹೋಗುವ ಕಚ್ಚಾ ದಾರಿಯೊಂದಿತ್ತು. ಕೂಪು ನಿಂತಾಗ ಅವರೇ ಆ ವಲಯದಲ್ಲೇ ಭಾರೀ ಕಗ್ಗಲ್ಲಿನ ಗಣಿಗಾರಿಕೆ ನಡೆಸಿದ್ದೂ ಕಂಡಿದ್ದೆ. ಅಲ್ಲಿ ತೆಗೆದ ಕಲ್ಲನ್ನು ಸುಂದರ ಹಾಸುಗಲ್ಲನ್ನಾಗಿಸುವ ಉದ್ಯಮವನ್ನೂ ಯೇಣೆಪೋಯಾದವರು ಆ ಕಾಲದಲ್ಲಿ ಜೋಡುಮಾರ್ಗದಲ್ಲಿ ತೆರೆದಿದ್ದರು. ಅದೇನು ಕಾರಣವೋ ಈಗ ಕಲ್ಲಿನ ಕಾರ್ಖಾನೆ ನಿಸ್ತೇಜಗೊಂಡಿದೆ. ಅದಲ್ಲದಿದ್ದರೂ ಆ ದಾರಿ ಬಾಂಜಾರಮಲೆ ಎಂಬ ಮಲೆಕುಡಿಯರ ಹಳ್ಳಿಗೂ ಬಳಕೆಯಾಗುತ್ತಿತ್ತು. ಅಲ್ಲಿನವರು ಕಾಡತೊರೆಗೆ ಸ್ವತಂತ್ರ ಜಲವಿದ್ಯುತ್ ಘಟಕ ಹಾಕಿ, ಶಕ್ತಿಮೂಲದಲ್ಲಿ ಸ್ವತಂತ್ರರೂ ಇದ್ದರು. ಆ ದಾರಿ ಈಗಲೂ ಅದೇ ಕಚ್ಚಾರೂಪದಲ್ಲೇ ಕಾಣಿಸಿತು! ಆದರೆ ನನಗಿನ್ನೂ ಬಾಂಜಾರಮಲೆ ನೋಡಲಾಗಿಲ್ಲ ಎಂಬ ಕೊರಗುಳಿಸಿಕೊಂಡೇ ಸೈಕಲ್ ಮುಂದೊತ್ತಿದೆ.

ನಮ್ಮ ನೀರಬಲವನ್ನು ಏರಿಕೆಯ ಶ್ರಮ ಮತ್ತು ಬಿಸಿಲಿನ ಪೆಟ್ಟು ಎಂದೋ ಸೋಲಿಸಿತ್ತು. ಕೇವಲ ತುರ್ತುಪರಿಸ್ಥಿತಿಗೆ ಸ್ವಲ್ಪ ಉಳಿಸಿಕೊಂಡೇ ಶ್ರೇಣಿಯ ತೆರೆಮೈ ಎತ್ತರಕ್ಕೆ ಬಂದಾಗ ನಮ್ಮ ಸಂಭ್ರಮಕ್ಕೆ ಮಾರ್ಗದಂಚಿನಲ್ಲಿ ಝರಿ ಕಾಣಿಸಿತು. ಇದು ಅಪ್ಪಟ ಗಿರಿಕನ್ನೆ. ನಮ್ಮ ನಾಗರಿಕ ಪರಿವೇಷಗಳನ್ನು ಮರೆತು, ಇದ್ದಂತೆಯೇ ಆಕೆಯನ್ನು ತಲೆಗೇರಿಸಿಕೊಂಡು ಗಂಗಾಧರ, ಒಳಗಿಳಿಸಿಕೊಂಡು ಅಗಸ್ತ್ಯರೇ ಆದೆವು. ನಮ್ಮ ನೀರದಾಸ್ತಾನೂ ಪೂರ್ಣಬಲಗೊಂಡ ಮೇಲೆ ಒದ್ದೆಬಟ್ಟೆಯಲ್ಲೆ ಸೇತುಗಟ್ಟೆಯಲ್ಲಿ ಸಣ್ಣ ವಿಶ್ರಾಂತಿಗೆ ಕುಳಿತಾಗ ನಿಧಾನಕ್ಕೆ ನಮ್ಮ ಪರಿಸರಜ್ಞಾನ ಮರುಕಳಿಸಿತು. ಕಟ್ಟೆಯ ಮೇಲೆ ದಪ್ಪ ‘ಬೆಳ್ಳೀ’ (ಅಲ್ಯೂಮಿನಿಯಂ ಫಾಯಿಲ್ ಎಂದೇನೋ ಹೇಳ್ತಾರಲ್ಲ, ಅದು) ಲಕೋಟೆಯಲ್ಲಿ ಯಾರೋ ಏನೋ ತಿನಿಸು ಮಿಗಿಸಿ, ಚೆಲ್ಲಾಡಿಬಿಟ್ಟಿದ್ದರು. ಝರಿಯ ಬುಡದಲ್ಲಂತೂ ಚಿರಂಜೀವಿ ಒಡಕು ಕುಪ್ಪಿ, ಸರ್ವಂತರ್ಯಾಮಿಯೂ ಬಹುರೂಪಿಯೂ ಆದ ಪ್ಲ್ಯಾಸ್ಟಿಕ್ ಕಸ, ಕೊಳಕು ಧಾರಾಳ ಇತ್ತು. ಔಷಧೀವನದ ಗೇಟಿನಲ್ಲಿದ್ದ ಹಣ್ಣಿನವ ನಮಗೆ ಸೌತೇಕಾಯಿ ಹೋಳುಗಳನ್ನು ಸಾಮಾನ್ಯ ಕಾಗದದಲ್ಲಿಟ್ಟು ಕೊಟ್ಟಾಗ ಹೇಳಿದ್ದು ನೆನಪಾಯ್ತು. ಅವನ ದಾರಿಯ ಎದುರು ಮಗ್ಗುಲಿನಲ್ಲಿ, ಬಹುಶಃ ಅರಣ್ಯ ಇಲಾಖೆಯೇ ಸ್ವಲ್ಪ ವಿಸ್ತಾರ ತಟ್ಟು ಮಾಡಿದ್ದರು. ಅಲ್ಲಿ ಬಳಸಿ ಎಸೆದ ಕಾಗದದ ತಟ್ಟೆ ಹಾಗೂ ಪ್ಲ್ಯಾಸ್ಟಿಕ್ ಲೋಟಗಳ ದೊಡ್ಡ ರಾಶಿ ಬಿದ್ದಿತ್ತು. ನಾವು ಆತನನ್ನೇ ಅಪರಾಧಿ ಮಾಡಲಿದ್ದೆವು. ಆಗ ಆತ “ಅಯ್ಯೋ ಅದು ನನ್ನದಲ್ಲ. ವರ್ಷಂಪ್ರತಿಯಂತೆ, ಮೊನ್ನೆಯೂ ಧರ್ಮಸ್ಥಳದ ಶಿವರಾತ್ರಿಗೆಂದು ನಡೆದೇ ಬರುವ ಸಾವಿರಾರು ಭಕ್ತರ ಕಥೆಯಿದು. ಇವರು ಉದ್ದಕ್ಕೂ ಚೂರುಪಾರು ಹಾಳಮೂಳ ಎಸೆಯುವುದುಂಟು. ಇಲ್ಲಿ ಊಟಕ್ಕೇ ಕುಳಿತಿದ್ದರು. ಆದರೆ ಘಾಟಿಯುದ್ದಕ್ಕೆ ಅಲ್ಲಲ್ಲಿ ಮೂಗಿಗಷ್ಟೇ ಹೊಡೆಯುವ ದುರ್ನಾತ – ಬಹುತೇಕ ಕೊಳೆತ ಕೋಳಿಯದು. ಅದು ಲಾರಿ ವ್ಯಾನುಗಳಲ್ಲಿ ದೊಡ್ಡಸಂಖ್ಯೆಯಲ್ಲಿ ಕೋಳಿ ಸಾಗಿಸುವವರ ಕಿತಾಪತಿ. ಡೆಲಿವ್ರಿ ಕೊಟ್ಟು ಮರಳುವಾಗ ಸಾಗಣೆಯಲ್ಲಿ ಸತ್ತವನ್ನು ಇಲ್ಲಿ, ದಿನಕ್ಕೊಂದೆಡೆ, ಫಕ್ಕನೆ ಕಣ್ಣಿಗೆ ಕಾಣದ ಕಾಡಮರೆಯಲ್ಲಿ ಎಸೆದು ಹೋಗುತ್ತಾರೆ.” ಎಷ್ಟೇ ಸ್ವಯಂ ಸೇವಕರು, ಸಂಸ್ಥೆಗಳು ಸ್ವಚ್ಛನಾಡಿಗಾಗಿ ಪ್ರಾಮಾಣಿಕವಾಗಿಯೇ ದುಡಿದರೂ ದಾಸರು ಹೇಳಿದಂತೆ “ಒಳಗೆ ಮೀಯದವರ” ಸಂಖ್ಯೆ ಬಲು ದೊದ್ದದೇ ಉಳಿಯುವುದು ನಮ್ಮ ದೇಶದ ದುರಂತವೇ ಸರಿ.

ಎಡಕ್ಕೆ ಗೋಡೆಯಂತೆ ಬಲು ಎತ್ತರಕ್ಕೆ ಬೆಟ್ಟ, ನೆತ್ತಿಯಲ್ಲಿ ಕಿರೀಟವಿಟ್ಟಂತೆ ಕೊಡೆಕಲ್ಲು. ಬಲಕ್ಕೆ ಮೋಟು ರಕ್ಷಣಾಗೋಡೆಯಾಚೆ ಆಳದ ಕೊಳ್ಳ. ಬೆಳಿಗ್ಗೆ ಉಜಿರೆಯಲ್ಲಿ ನಮಗೆ ಆಕಸ್ಮಿಕವಾಗಿಯೇ ಖ್ಯಾತ ಚಾರಣಿಗ, ನೇತ್ರಾವತಿ ಉಳಿಸಿ ಹೋರಾಟದ ಮುಂಚೂಣಿಯ ಉತ್ಸಾಹಿ ದಿನೇಶಹೊಳ್ಳ ಕಾಣಸಿಕ್ಕಿದ್ದರು. ಅವರು ಸ್ಥಳೀಯ ನೆಹರು ಯುವಕ ಮಂಡಳದ ಒಂದಷ್ಟು ಮಂದಿಯನ್ನು ಇದೇ ಕೊಡೆಕಲ್ಲಿನ ಚಾರಣ, ಝರಿತೊರೆಗಳ ಒಡನಾಟ, ಬಿದಿರುತಳದ ಶಿಬಿರವಾಸಕ್ಕೆ ಒಯ್ಯುವ ಮಾತಾಡಿದ್ದರು. ಅಲ್ಲಿಂದಿಲ್ಲಿಗೆ ನಾವು ಕಾಲಬಲದಲ್ಲೇ ಬರುವುದರೊಳಗೆ, ಅವರು ಯಾವುದೋ ವಾಹನ ಹಿಡಿದು, ಇಲ್ಲೆಲ್ಲೋ ಬಂದಿಳಿದು, ಘಟ್ಟದ ಅಗಾಧತೆಯಲ್ಲಿ ಲೀನವಾಗಿದ್ದಿರಬೇಕು.

ನಾವು ಆ ಎತ್ತರ ಮುಟ್ಟಿದಾಗ, ಅವರನ್ನು ಮತ್ತೆ ಭೇಟಿಯಾಗುವ ಸಣ್ಣ ನಿರೀಕ್ಷೆಯಿಟ್ಟುಕೊಂಡಿದ್ದೆವು. ಆದರೆ ಅಲ್ಲಿಂದ ತೊಡಗಿ ದಾರಿ ಸಾಗಿದಂತೆ ಅಣ್ಣಪ್ಪನಗುಡಿ, ಅದರ ನೆತ್ತಿಯ ಜೇನುಕಲ್ಲು, ಒಂದು ಕಿಮೀ ಮುಂದಿನ ಬಿದಿರುತಳಿಗರ ಬಸ್ ನಿಲ್ದಾಣ, ಅಲೇಖಾನ್ ಝರಿಯ ತಟ ಮತ್ತೆ ಕೊನೆಯ ಸಾಧ್ಯತೆಯಾಗಿ ಮಲಯಮಾರುತದ ಕವಲು ಕಟ್ಟೆಯವರೆಗೂ ನಮಗೆ ಚಾರಣಿಗರು ಯಾರೂ ಸಿಗಲಿಲ್ಲ. ಆದರೆ ಶಿಖರ ಸಾಲಿನಲ್ಲೆಲ್ಲಿಂದಲೋ ಅವರು ನಮ್ಮನ್ನು ಗುರುತಿಸಿದ್ದಕ್ಕೆ, ಎರಡು ದಿನ ಕಳೆದು ಮಂಗಳೂರಿನಲ್ಲಿ ಸಾಕ್ಷಿ ಕೊಟ್ಟಿದ್ದರು.

ಮೊದಲ ಝರಿಯನಂತರ ಮತ್ತೂ ಕೆಲವು ನೈಜ ನೀರಿನಾಸರೆಗಳಿದ್ದವು. ಆದರೆ ರಸ್ತೆ ಬಹುತೇಕ ಸಪಾಟೂ ಇಳಿಜಾರಿನದ್ದೂ ಇದ್ದುದರಿಂದ ನನಗೆ ಅಷ್ಟಾಗಿ ನಿಲ್ಲಬೇಕಾಗುತ್ತಿರಲಿಲ್ಲ. ಆದರೆ ವೇಣು ತುಸು ಹೆಚ್ಚೇ ಬಳಲಿದ್ದಕ್ಕೆ, ಸ್ನಾಯು ಸೆಳೆತದ ಭಯಕ್ಕೆ ಆಗಾಗ ನಿಲ್ಲುತ್ತಲೇ ಸಾಗಿದ್ದರು. ನಾನು ಜೊತೆ ಬಿಡಲಿಲ್ಲ. ನಮ್ಮೆಲ್ಲ ಲಘುತಿನಿಸು, ಧಾರಾಳ ನೀರು ಚಪ್ಪರಿಸುತ್ತ ಕೊಟ್ಟಿಗೆಹಾರದ ವಲಯವನ್ನು ಸೇರುವಾಗ ಗಂಟೆ ಅಪರಾಹ್ನ ಎರಡು ಕಳೆದಿತ್ತು. ಅಲ್ಲಿಂದ ಪೇಟೆಯ ಕೇಂದ್ರಕ್ಕಿದ್ದ ಸುಮಾರು ಒಂದೂವರೆ ಕಿಮೀ ಉದ್ದದ ಇಳಿಜಾರು, ಆ ಎತ್ತರಕ್ಕೆ ಸಹಜವಾಗಿ ನಮಗೆ ಸಿಕ್ಕ ಬೆನ್ನುಗಾಳಿ (ಪಶ್ಚಿಮದ ಗಾಳಿ) ನಮ್ಮ ಸಾಧನೆಗೆ ಪ್ರಕೃತಿಯ ಶಹಬ್ಬಾಸ್ಗಿರಿ ಎಂದೇ ಸಂತೋಷಿಸಿದೆವು.

ಯೋಜನಾ ಹಂತದಲ್ಲಿ ನಾನು ಕಂಡುಕೊಂಡಂತೆ ನಮಗೆ ಮತ್ತೂ ಸುಮಾರು ಐವತ್ತು ಕಿಮೀ ದಾರಿ ಬಾಕಿಯಿತ್ತು. ಅದರಲ್ಲಿ ಬಹ್ವಂಶ ವಿಶೇಷ ಏರಿಳಿತಗಳಿಲ್ಲದ, ನುಣ್ಣನೆ ಡಾಮರಿನದ್ದೇ. ಆದರೆ ನಮಗಿದ್ದ ಭಯ ಕೊನೆಯ ಸುಮಾರು ಹತ್ತು ಕಿಮೀ. ಅದು ತೋಟಗಾಡಿನ ಮೂಲೆಗೋಡುವ ವಿಪರೀತ ಏರಿಳಿತಗಳ ಕಚ್ಚಾ ಮಾರ್ಗ, ಕಾಡಾನೆಯ ಮುಖಾಮುಖಿ ಬೋನಸ್! ನಮಗಿಂತ ಸುಮಾರು ಒಂದು ಗಂಟೆ ಮೊದಲೇ ಕೊಟ್ಟಿಗೆಹಾರ ಮುಟ್ಟಿದ್ದ ಅನಿಲ್, ಸಮರ್ಥ್ ಊಟ ಮುಗಿಸಿದ್ದರು. ಕತ್ತಲೆಗಿಂತ ಮೊದಲು ವಾಸಸ್ಥಾನ ಸೇರುವ ಆತುರದಲ್ಲೇ ನಾವಿಬ್ಬರು ಊಟ ಮುಗಿಸಿದ್ದೇ ಎಲ್ಲ ದಾರಿಗಿಳಿದೆವು.

ಅನಿಲ್ ಸ್ವಲ್ಪ ಮರೆಗುಳಿ. ಜೋಡುಮಾರ್ಗದ ಹೋಟೆಲಿನಲ್ಲಿ, ಘಾಟೀಮಾರ್ಗದ ಹಣ್ಣಿನವನಲ್ಲಿ ಹೀಗೇ ಸಣ್ಣ ಚೀಲವೋ ಕೈಗವುಸೋ ಮರೆತು, ನಾಲ್ಕು ಸುತ್ತು ಸೈಕಲ್ ತುಳಿದಮೇಲೆ ನೆನಪಾಗಿ ಹಿಂದೆ ಹೋದದ್ದನ್ನು ಕಂಡಿದ್ದೆ. ಕೊಟ್ಟಿಗೆಹಾರದಲ್ಲೂ ಅದೇ ಆಯ್ತು! ಮುಂದಾಗಿಯೇ ಹೊರಟವರು ಅರ್ಧ ಕಿಮೀ ಕಳೆಯುವುದರೊಳಗೆ “ಬೆನ್ನಚೀಲ ಹೋಟೆಲಿನಲ್ಲೇ ಬಿಟ್ಟೆ” ಎನ್ನುತ್ತ ಹಿಂಧಾವಿಸುವುದು ಕಂಡೆ. ಅವರ ಜತೆ ಬಿಡದ ಸಮರ್ಥ್ ಅಲ್ಲೇ ಕಾದು ನಿಂತರು.

ಊಟವಾದ ಮೇಲೆ ಚೇತರಿಸಿಕೊಂಡಂತೆ ಕಾಣುತ್ತಿದ್ದ ವೇಣು ಮತ್ತು ನಾನು ಸುಲಭವಾಗಿ ಸಿಕ್ಕ ಮುಂದಾಳ್ತನ ಹೆಚ್ಚು ದೂರಕ್ಕೆ ಉಳಿಸಿಕೊಳ್ಳುವಂತೆ ತುಸು ಹೆಚ್ಚೇ ಪೆಡಲಿದೆವು. ಇಳಿಜಾರೂ ಬೆಂಬಲಿಸುವ ಗಾಳಿಯೂ ಇತ್ತು. ಇಕ್ಕೆಲದ ಸುವಿಸ್ತಾರ ಗದ್ದೆಗಳಲ್ಲಿ ಕೊಯ್ಲು ಮುಗಿದಿತ್ತು. ಉದುರಿದ ಹುಲ್ಲು, ಎಡೆ ಹಸಿರು ಮೇಯುವ ಅಸಂಖ್ಯ ಜಾನುವಾರು, ಕಿವಿಮಾತಾಡುವ ಬೆಳ್ಳಕ್ಕಿಗಳ ನೋಟ ಆಸ್ವಾದಿಸುತ್ತ ವೇಗದಲ್ಲೇ ಬಣಕಲ್ ಹಿಂದಿಕ್ಕಿದೆವು.

ಮತ್ತೆ ಕಾಫಿ ತೋಟಗಳು ಬಂದರೂ ಸೈಕಲ್ಲೋಟದ ಪರಿಯಲ್ಲೇನೂ ಬದಲು ಮಾಡಬೇಕಿಲ್ಲ ಅಂದುಕೊಳ್ಳುತ್ತಿದ್ದಂತೆ ಅನಿಲ್ ಸಮರ್ಥ್ ಜೋಡಿ ನನ್ನನ್ನು ಹಿಂದಿಕ್ಕಿದವು. ತಿರುಗಿ ನೋಡಿದೆ, ನನ್ನ ಬೆನ್ನಿಗೇ ಇದ್ದ ವೇಣು ಕಾಣಿಸಲಿಲ್ಲ. ಇಲ್ಲೇ ಬರುತ್ತಿರಬಹುದೆಂದು ನನ್ನ ಲಯಗಾರಿಕೆ ಮುಂದುವರಿಸಿದೆ. ಹಾಗೇ ನಮ್ಮ ಮುಖ್ಯ ಕವಲುತಾಣ – ಹ್ಯಾಂಡ್ ಪೋಸ್ಟ್, ಅಂದರೆ ಮೂಡಿಗೆರೆಗೂ ಎರಡು ಕಿಮೀ ಮೊದಲೇ ಸಿಗುವ ಕೈಕಂಬವನ್ನೇ ತಲಪಿಬಿಟ್ಟೆವು.

ಅಲ್ಲಿ ಮೂವರೂ ವೇಣುಗೆ ಕಾದು ನಿಂತೆವು. ವೇಣುಗೆ ನೋವು, ಬಳಲಿಕೆ ಹೆಚ್ಚಿದ್ದರಿಂದ ನಮ್ಮ ನಿರೀಕ್ಷೆಗೂ ತಡವಾಗಿಯೇ ಸೇರಿಕೊಂಡರು. ಮತ್ತು ಕೂಡಲೇ ಸಿಕ್ಕುವ ಬಸ್ಸು ಹಿಡಿದು ಮಂಗಳೂರಿಗೆ ಮರಳುವ ಮಾತೂ ಆಡಿದರು. ಆದರೆ ಕಠಿಣ ದಾರಿಯ ಸ್ಥಿತಿ ಮುಗಿದದ್ದನ್ನು ಸೂಚಿಸಿ, ರಾತ್ರಿವಾಸಕ್ಕೆ ಆಯ್ದುಕೊಂಡ ವನಧಾಮದ ಆಮಿಷ ಮರುಜಪಿಸಿ, ಈಗಲೂ ನಮ್ಮ ದಿಕ್ಕಿನಲ್ಲೇ ಹೋಗುವ ವಾಹನ ಸೌಕರ್ಯವೇನಾದರೂ ಸಿಕ್ಕರೆ ಬಳಸಿಕೊಳ್ಳುವ ಸಲಹೆ ಸಹಿತ ಒತ್ತಾಯಿಸಿದೆವು. ವೇಣು ಆಗಲೇ ಹಿಂದೆ ಸಿಕ್ಕ ಮೆಡಿಕಲ್ ಮಳಿಗೆಯೊಂದರಲ್ಲಿ ಕೊಂಡ ನೋವುನಿವಾರಕ ಲೇಪ, ಅಂಟುಪಟ್ಟಿಗಳೂ ಧೈರ್ಯ ಕೊಟ್ಟದ್ದಕ್ಕೆ ಒಪ್ಪಿದರು. ವಾಹನ ಸೌಕರ್ಯವೇನೂ ಸಿಗಲಿಲ್ಲ. ದಾರಿ ತುಂಬ ಸೌಮ್ಯವಿದ್ದುದರಿಂದ ಹಿಂಬಾಲಿಸಿದರು. ನಾವು ಬೇಲೂರು ಮಾರ್ಗಾನುಯಾಯಿಗಳಾದೆವು.

ಬೆಂಗಳೂರು ಮಹಾಯಾನದಲ್ಲಿ ನಮ್ಮನ್ನು ಚಾರ್ಮಾಡಿ ಹಳ್ಳಿಯಿಂದ ಹೊತ್ತು ತಂದ ಲಾರಿ ಮತ್ತೆ ಸವಾರಿಗಿಳಿಸಿದ್ದು ಇಲ್ಲೇ ಎಲ್ಲೋ. ಅಂದಿನಂತೆಯೇ ಇಂದೂ ಕಾಫೀ ಹೂವಿನ ಸುವಾಸನೆ ಬೀಸುಗಾಳಿಯನ್ನಾಳಿತ್ತು. ಅದರೆ ಎಲ್ಲಾ ಕಳಗಳ ಹಸಿರಂಗಿ ಬಿಳಿ ಮೇಲುದ, ಅಂದರೆ ಹೂವು, ಅರಳಿಸಿರಲಿಲ್ಲ. ವಿಚಾರಿಸಿದಾಗ ತಿಳಿಯಿತು, ಸಕಾಲಕ್ಕೆ ಬಾರದ ಮಳೆಗೆ ಅನುಕೂಲಸ್ಥರು ಕೃತಕ ಮಳೆ ಅರ್ಥಾತ್ ಸ್ಪ್ರಿಂಕ್ಲರ್ ಪರಿಣಾಮ! ಮುಂದೆ ಸಹಜ ಮಳೆ ತಡವಾಗಿ ಬಂದಾಗ ಈ ವ್ಯತ್ಯಾಸ ಇನ್ನೇನು ಕಷ್ಟ ತರುತ್ತದೋ, ತಿಳಿದಿಲ್ಲ.

ನಮ್ಮ ಪಾಡಿಗೆ ದಾರಿಯಂತೂ ತುಂಬ ಅನುಕೂಲವೇ ಇತ್ತು. ಪೂರ್ವಂದಾಜನ್ನು ಹಗುರಗೊಳಿಸುವಂತೆ ಸುಮಾರು ಹತ್ತೇ ಕಿಮೀಗೆ ಮುಂದಿನ ಬಲಗವಲುತಾಣ – ಜನ್ನಾಪುರ ಸಿಕ್ಕಿತ್ತು. ಈಗ ಕಿಲೋ ಕಲ್ಲುಗಳ ಲಕ್ಷ್ಯ ಸಕಲೇಶಪುರದ್ದಿತ್ತು. ಮುಂದೆ ಸುಮಾರು ಎಂಟೇ ಕಿಮೀಗೆ ಹಾನುಬಾಳು. ಅಲ್ಲಿ ಮತ್ತೆ ನಮ್ಮ ಆಯ್ಕೆ ಬಲದ್ದು, ಈಗ ಲಕ್ಷ್ಯ – ಅಗಣಿ. ಈ ದಾರಿ ಸುಸ್ಥಿತಿಯಲ್ಲಿರಲಿಲ್ಲ ಮತ್ತು ಮುಂದಿನ ಗುಡ್ಡ ಕಾಡಿನ ದಾರಿಗೂ ಪೀಠಿಕೆಯನ್ನೇ ಹಾಕಿತ್ತು. ಎರಡೇ ಕಿಮೀಯಲ್ಲಿ ನಾವು ಉದ್ದಕ್ಕೂ ಹೆದರಿದ್ದ ನಿಜವಾದ ಕಚ್ಚಾ ಮಾರ್ಗ ಎಡಗವಲಾಗಿ ಬಂತು.

ಅದರಲ್ಲಿ ಸೈಕಲ್ ಸವಾರಿ ಇರಲಿ, ಸರಿಯಾಗಿ ನೂಕಿಕೊಂಡು ನಡೆಯಲೂ ಕಷ್ಟವಾಗುವ ಸ್ಥಿತಿಯಿತ್ತು. ಆದರೆ ನಮ್ಮ ಅದೃಷ್ಟಕ್ಕೆ ಅಲ್ಲಿಗೆ ಅದೇ ಕ್ಷಣಕ್ಕೆ ನಮ್ಮ ವನಧಾಮದ್ದೇ ಜೀಪು ಅನ್ಯಕಾರ್ಯ ನಿಮಿತ್ತ ಹೊರಹೋಗಿದ್ದದ್ದು ಬಂತು. ಅದರ ಚಾಲಕ – ಅನಿಲ್, ವನಧಾಮದ ಸಹಾಯಕ ನಿರ್ವಾಹಕ ನಮ್ಮ ನಿರೀಕ್ಷೆಯಲ್ಲೇ ಇದ್ದವರು ಸೈಕಲ್ ನೋಡಿದ್ದೇ ನಮ್ಮನ್ನು ಗುರುತಿಸಿದರು. ಮೊದಲು ನಾವು ದಾಕ್ಷಿಣ್ಯದಲ್ಲೇ ವೇಣು ಮತ್ತವರ ಸೈಕಲ್ ಮಾತ್ರ ತುಂಬಿ ಬಿಟ್ಟೆವು. ಆದರೆ ಒಂದೇ ದಿಣ್ಣೆ ಕಳೆದಲ್ಲಿ ಅನಿಲ್, ಜೀಪು ನಿಲ್ಲಿಸಿ, ನಮ್ಮನ್ನೆಲ್ಲ ಒತ್ತಾಯಿಸಿಯೇ ಜೀಪಿಗೇ ಏರಿಸಿಕೊಂಡರು. ಜೀಪಿನ ಹಿಂದಿನೆರಡೂ ಸೀಟು ಮಡಚಿ, ನಾಲ್ಕೂ ಸೈಕಲ್ಲುಗಳ ಎದುರು ಚಕ್ರ ಕಳಚಿ ಜೀಪಿಗೆ ತುಂಬಿ, ಹಗ್ಗ ಕಟ್ಟಿದೆವು. ಮತ್ತೆ ಚಾಲಕ ಅನಿಲ್ಲರ ಅಪಾರ ಸಹನೆಯಲ್ಲಿ ನಾವು ನಾಲ್ವರು ಎದುರು ಸೀಟಿಗೆ ಅಂಟಿಕೊಂಡೆವು. ಕಾಲನ ಸಾಕ್ಷೀದಾರ ಸೂರ್ಯ ನಮ್ಮ ಅವಸ್ಥೆಯನ್ನು ಕಂಡು ನಾಚಿ, ಮೊದಲು ಮರದ ಮರೆಗೋಡಿ, ಅನಂತರ ಮೋಡದ ಮುಸುಕೆಳೆದು ಅಂತರ್ಧಾನನಾದ. ಜೀಪಲ್ಲವಾದರೆ ಆ ಎಂಟು ಕಿಮೀಯಲ್ಲಿ ಬಹುತೇಕ ಸೈಕಲ್ ನೂಕುತ್ತ, ಅಸಂಖ್ಯ ನಿರ್ಜನ ಕವಲುಗಳಲ್ಲಿ ಸರಿದಾರಿ ಗುರುತಿಸುತ್ತ, ಆನೆ ಭಯವನ್ನು ಹತ್ತಿಕ್ಕುತ್ತ ವನಧಾಮ ತಲಪಲು ಮತ್ತೆರಡು ಗಂಟೆಯೂ ಸಾಲದಾಗುತ್ತಿತ್ತು!

ಎತ್ತಿನಹೊಳೆ ತಿರುವಿನ ಮೊದಲ ವರದಿ ಬಂದ ಕಾಲದಲ್ಲೇ ನಾವೊಂದಷ್ಟು ಜನ ಜೀಪೇರಿ ಬಂದು ಈ ವಲಯದಲ್ಲಿ ತನಿಖಾ ಓಡಾಟ ನಡೆಸಿದ್ದೆವು. (ನೋಡಿ: ಎತ್ತಿನಹೊಳೆಮತ್ತು ಸಂಶೋಧನೆ) ಅದರ ಕೊನೆಯಲ್ಲಿ ನಾವು ನಕ್ಷೆಯ ಒಂದು ಪ್ರಮುಖ ತೊರೆಯರಸಿಕೊಂಡು ಅಗಣಿ ಮೂಲೆಯ ಈ ಟಸ್ಕ್ ಅಂಡ್ ಡಾನ್ ವನಧಾಮ ತಲಪಿದ್ದೆವು.

ಆಗ ನಮ್ಮ ಅದೃಷ್ಟಕ್ಕೆ ಅದರ ಯಜಮಾನ ವಿಕ್ರಮ ಗೌಡ ಅಲ್ಲೇ ಇದ್ದರು. ವಿಕ್ರಮ್ ಸ್ವತಃ ಸಾಹಸಿ ಮತ್ತು ವನ್ಯಪ್ರೇಮಿಯೂ ಆದ್ದರಿಂದ ಟಸ್ಕ್ ಅಂಡ್ ಡಾನನ್ನು ಕೇವಲ ವಾಣಿಜ್ಯ ವಹಿವಾಟಾಗಿ ಕಂಡವರಲ್ಲ. ಅದರಲ್ಲಿ ವನ್ಯ ಸಂರಕ್ಷಣೆಯ ಅಂಶಗಳನ್ನು ಸ್ಪಷ್ಟವಾಗಿಯೇ ಸಾರಿ, ಅನುಸರಿಸುವ ಛಲವಂತ. ಸಾಲದ್ದಕ್ಕೆ ಅವರ ಯಾವ್ಯಾವುದೋ ಪುಸ್ತಕ ಅಗತ್ಯಗಳಿಗಾಗಿ ಮಂಗಳೂರಿನ ದೂರದ ನನ್ನಂಗಡಿಗೆ ಬಂದವರು. ಅಲ್ಲದೆ ಅಂದು ನನ್ನ ಗುರುತು ಹಿಡಿದೇ ವಿಶ್ವಾಸದಿಂದ ನಡೆಸಿಕೊಂಡಿದ್ದರು. ಆಗ ನಮ್ಮ ಜತೆಯಲ್ಲಿ ನಿರೇನ್ ಜೈನ್ ಕೂಡಾ ಇದ್ದರು. ವಿಕ್ರಮ್ ಅವರನ್ನು ಅದೇ ಮೊದಲ ಭೇಟಿಯಾಗುತ್ತಿದ್ದರೂ ಅವರ ವನ್ಯಕಾರ್ಯಗಳ ಕುರಿತು ಚೆನ್ನಾಗಿಯೇ ತಿಳಿದುಕೊಂಡಿದ್ದರು. (ವಿಕ್ರಂ ಕುರಿತು ನೋಡಿ: ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ) ಅಂದು ಅವರು ಖುದ್ದು ಮಾರ್ಗದರ್ಶಿಯಾಗಿ ನಮ್ಮನ್ನು ನಡೆಸಿ, ಆ ವಲಯದ ಅತ್ಯುನ್ನತ ಶಿಖರ – ಮೂರ್ಕಣ್ಣ ಬೆಟ್ಟ ತೋರಿಸಿದ್ದರು.

ಬೆಟ್ಟದ ನಡುವಿನಿಂದ ಉದ್ಭವಿಸುವ ಎತ್ತಿನಹೊಳೆಯನ್ನು ನೇರ ತಪ್ಪಲಿನ ನೋಟವಾಗಿಯೂ ಕಾಣಿಸಿದ್ದರು. ಅದು ಪ್ರಸ್ತುತ ವಿಹಾರಧಾಮದ ಕೆಳ ಅಂಚಿನಲ್ಲಿ ಕಲ್ಲ ಪಾತ್ರೆಯಲ್ಲಿ ಮನೋಹರ ಝರಿಯಾಗಿ ಬರುವಲ್ಲಂತೂ ಪ್ರಾಕೃತಿಕ ಶುದ್ಧ, ಶೀತವನ್ನು ಅನುಭವಿಸಿ ಧನ್ಯರೇ ಆಗಿದ್ದೆವು. ನಮ್ಮ ಸೈಕಲ್ ಮಹಾಯಾನ ಯೋಜಿಸುವಾಗ ರಾತ್ರಿವಾಸಕ್ಕೆ ವೇಣು ಸಕಲೇಶಪುರದ ಯಾವುದೋ ಒಂದು ಹೋಟೆಲ್ಲನ್ನಷ್ಟೇ ಯೋಚಿಸಿದ್ದರು.

ಆದರೆ ನಾನು ಟಸ್ಕ್ ಅಂಡ್ ಡಾನ್ ಸೂಚಿಸಿ, ವಿಕ್ರಮರನ್ನು ಸಂಪರ್ಕಿಸಿದ್ದೆ. ಅವರು ಗೆಳೆಯನಾಗಿ ಹಾರ್ದಿಕ ಸ್ವಾಗತವನ್ನೇ ಹೇಳಿದ್ದರು. ನಾನು ನಿರಾಕರಿಸದಿದ್ದರೆ ಹಾದಿತೋರಲು ಹಾನುಬಾಳಿನಲ್ಲಿ ಹುಡುಗನನ್ನು ನಿಲ್ಲಿಸುವುದಾಗಿಯೂ ಹೇಳಿದ್ದರು. ಪರಿಸ್ಥಿತಿಯ ಆಕಸ್ಮಿಕದಲ್ಲಿ ನಾವು ವಿಕ್ರಂರ ಪ್ರತಿನಿಧಿಯೇನು, ಜೀಪೂ ಬಳಸಿ ವನಧಾಮ ಸೇರಿದ್ದಾಗಿತ್ತು!

ಇವಕ್ಕೂ ದೊಡ್ಡ ಆಶ್ಚರ್ಯ ಮರುದಿನ ಬೆಳಿಗ್ಗೆ, ಅಂದರೆ ಅವರೆಲ್ಲಾ ಸುಖ ಸೌಕರ್ಯಗಳನ್ನು ನಾವು ಗರಿಷ್ಠ ಪಡೆದು ವಿದಾಯ ಹೇಳುವ ಸಮಯಕ್ಕೆ ಆಗಿತ್ತು. ನಾವು ಸಹಜವಾಗಿ ವನಧಾಮದ ಬಿಲ್ಲು ಪಾವತಿಸಲು ಎಷ್ಟೆಂದು ವಿಚಾರಿಸಿದೆವು. ನಮಗೆ ಎರಡನೇ ಮಾತಿಗೆ ಅವಕಾಶವಿಲ್ಲದಂತೆ ನಿರ್ವಹಣಾ ಸಹಾಯಕ ಅನಿಲ್ ಹೇಳಿದರು “ಏನೂ ಇಲ್ಲ!” ಮುಂದೆ ಮಂಗಳೂರಿಗೆ ಬಂದ ಮೇಲೆ ವಿಕ್ರಮ ಗೌಡರಿಗೆ ಮೊದಲು ದೂರವಾಣಿ ಕರೆಮಾಡಿ, ಕನಿಷ್ಠ ನಮ್ಮ ಖರ್ಚನ್ನಾದರೂ ತೆಗೆದುಕೊಳ್ಳಬೇಕಿತ್ತು ಎಂದು ತೋಡಿಕೊಂಡೆ. ನನಗೆ ಸಂಕೋಚಕ್ಕೂ ಅವಕಾಶ ಕೊಡದಂತೆ ವಿಕ್ರಮ್ ಹಣ ನಿರಾಕರಿಸಿ, ಶುದ್ಧ ಗೆಳೆತನದ ಮಾತಾಡಿ ಮುಗಿಸಿಬಿಟ್ಟರು! ಟಸ್ಕ್ ಅಂಡ್ ಡಾನಿನ ಮುಖ್ಯ ನಿರ್ವಾಹಕರಾದ ಪ್ರೇಮನಾಥ ರೈಗಳಿಗೆ ದೂರವಾಣಿಸಿ ಕೃತಜ್ಞತೆ ಹೇಳಿದಾಗ, ಅವರು ಟಸ್ಕ್ ಅಂಡ್ ಡಾನಿನ ಪರಿಸರಪ್ರೇಮದ ಕೊಡುಗೆ ಎಂದೇ ಸೂಚಿಸಿ ನನ್ನನ್ನು ನಿರುತ್ತರನನ್ನಾಗಿಸಿಬಿಟ್ಟರು. (ನೋಡಿ: ಎತ್ತಿನಹೊಳೆ ಮತ್ತು ಸುಂದರರಾಯರು. )

ಜೀಪಿಳಿಯುತ್ತಿದ್ದಂತೆ ಟಸ್ಕ್ ಅಂಡ್ ಡಾನಿನ ನಿರ್ವಹಣಾ ಮುಖ್ಯಸ್ಥ ಪ್ರೇಮನಾಥ ರೈಗಳು ನಮ್ಮಲ್ಲಿ ಯಾರನ್ನೂ ಮೊದಲು ನೋಡಿರದಿದ್ದರೂ ಬಹಳ ಹಳೆಯ ಪರಿಚಯಸ್ಥರಂತೇ ಸ್ವಾಗತಿಸಿದರು. ಅಷ್ಟೇ ಅಲ್ಲ, ಮುಕ್ತವಾಗಿ ಓಡಾಡಿಕೊಂಡಿದ್ದ ಅಲ್ಲಿನ ಆಳೆತ್ತರದ ಕಾವಲುಗಾರ – ನಾಯಿ, ಅಚ್ಚ ಬಿಳುಪಿನ ಬಾತುಕೋಳಿಗಳ ಜೋಡಿ, ಎಮೂ ಜೋಡಿ, ಇಡಿಯ ಪರಿಸರ ನಮ್ಮನ್ನು ಪ್ರೀತಿಯಿಂದ ಆವರಿಸಿಕೊಂಡುಬಿಟ್ಟಿತು. ಸೈಕಲ್ಲಿಳಿಸಿ ಜೋಡಿಸುವುದರೊಳಗೆ ಬಿಸಿಬಿಸಿ ಪೋಡಿ, ಚಾ ನಮ್ಮನ್ನೇ ಕಾದಿತ್ತು.

ಗೋಲಾಕಾರದ ಊಟದ ಮನೆಯಿಂದಾಚಿನ ಪುಟ್ಟ ಉದ್ಯಾನದ ಕೊನೆಯಲ್ಲಿ ಕಲ್ಲುಕಟ್ಟಿ ಸಣ್ಣ ಶಿಬಿರಾಗ್ನಿ ಕೊಂಡ ರಚಿಸಿದ್ದರು. ಬೀಸುಗಾಳಿಯೊಡನೆ ಹಿತವಾಗಿಯೇ ಇದ್ದ ವಾತಾವರಣ ಕತ್ತಲಿನೊಡನೆ ತುಸು ಚಳಿ ಸೇರಿಸಿಕೊಂಡಾಗ ಅಲ್ಲಿ ಸಣ್ಣ ಶಿಬಿರಾಗ್ನಿಯೇ ಎಬ್ಬಿಸಿದ್ದರು. ಕೊಂಡದಿಂದ ಕಿರಣರೇಖೆಗಳು ವಿಸ್ತರಿಸಿದಂತೆ ನಾಲ್ಕೈದು ಚೊಕ್ಕ ಕಲ್ಲ ಹಾಸಿನ ನಡೆಮಡಿ ಕೊಟ್ಟು ವಾಸದ ಮನೆಗಳನ್ನು ರಚಿಸಿದ್ದರು. ಆ ಒಂದು ಪಥದ ಕೊನೆಯ ಜೋಡಿ ಕೋಣೆಗಳ ವ್ಯವಸ್ಥೆ ನಮಗೇ ಮೀಸಲು.

ತಲಾ ಮೂರು ಹಾಸುಗೆಗಳ ಆ ಎರಡು ಕೋಣೆಗಳು ನಮ್ಮೆಲ್ಲ ಸರಳ ಅಗತ್ಯಗಳನ್ನು ಸುಂದರವಾಗಿ ಪೂರೈಸಿದುವು. ಅಂದು ಮೂರೋ ನಾಲ್ಕೋ ಜನರ ಇನ್ನೊಂದು ತಂಡ ಮಾತ್ರ ಅಲ್ಲಿತ್ತು. ನಾವು ಸ್ನಾನ, ಶಿಬಿರಾಗ್ನಿಯ ಒತ್ತಿನ ಕಿರು ಆತ್ಮೀಯ ಮಾತುಕತೆ ಮುಗಿಸುವುದರೊಳಗೆ, ನಮ್ಮ ವಿಶ್ರಾಂತಿಯ ತುರ್ತನ್ನು ಪ್ರೇಮನಾಥ ರೈಗಳೇ ಕಂಡು ಬೇಗದ ಊಟವನ್ನೂ ಕೊಟ್ಟರು. ಗುಲಾಬ್ ಜಾಮೂನು ಸಹಿತ ರುಚಿಕಟ್ಟಾದ ಊಟ ನಮ್ಮ ಸೌಭಾಗ್ಯಕ್ಕೆ ಇಟ್ಟ ಕಳಶ. ಆಮೇಲೆ ಕೇಳಬೇಕೇ, ಗಂಟೆ ಇನ್ನೂ ಒಂಬತ್ತೂವರೆ ಎನ್ನುವುದನ್ನೂ ನೋಡದೆ ನಾವು ಸುಪ್ಪತ್ತಿಗೆ ಹೆಟ್ಟಿ, ಗಡದ್ದು ನಿದ್ರೆಗೆ ಜಾರಿದ್ದೆವು.

ಪ್ರೇಮನಾಥ ರೈಗಳು ಮರು ಬೆಳಿಗ್ಗೆ ಸ್ವಂತ ಕಾರ್ಯದ ಮೇಲೆ ಬೇಗನೆ ಒಬ್ಬರೇ ಕಾರೇರಿ ಮಂಗಳೂರಿಸುವವರಿದ್ದರು. ಅವರು ನಮ್ಮ ಸ್ಥಿತಿ ತಿಳಿದ ಮೇಲೆ, ಹಿಂದಿನ ರಾತ್ರಿಯೇ ವೇಣುವನ್ನು ಸೈಕಲ್ ಸಹಿತ ಮಂಗಳೂರು ಮುಟ್ಟಿಸುವ ಕೆಲಸವನ್ನು ಸಂತೋಷದಿಂದಲೇ ವಹಿಸಿಕೊಂಡರು. ಬೆಳಿಗ್ಗೆ ಕರೆದೊಯ್ದರು. ವನಧಾಮದ ಮಾರ್ಗದರ್ಶಿ ಉದಯ, ಉಳಿದ ನಮ್ಮೂವರನ್ನು ನಮ್ಮದೇ ಬಯಕೆಯಂತೆ ಚಾರಣಕ್ಕೆಂದು ಹಿತ್ತಲಿನ ಬೆಟ್ಟ ಏರಿಸಿದ. ನಾನು ಎಲ್ಲ ಹೊರ ಆವರಣದ ಚಟುವಟಿಕೆಗಳಿಗೂ ಒಂದೇ ಪಾದರಕ್ಷೆ – ಫೋಮಿನ ಸ್ಯಾಂಡಲ್ಸ್, ಬಳಸುವವ. ಆದರೆ ಸೈಕಲ್ ಸವಾರಿಯನ್ನು ಮಾತ್ರ ಲಕ್ಷಿಸಿ ಬಂದಿದ್ದ ಮಿತ್ರರಿಬ್ಬರಿಗೆ ಇಲ್ಲಿ ಸಣ್ಣ ಸಮಸ್ಯೆಯಾಯ್ತು. ಅವರು ಸೈಕಲ್ಮೆಟ್ಟುವ ವಿಶೇಷ ಬೂಟು – ಕ್ಲೀಟ್ಸ್ ಹಾಕಿ ಬಂದವರು. ಸೈಕಲ್ಲಿನಲ್ಲಿ ಹೊರೆ ಕಡಿಮೆಯಾಗಬೇಕೆಂದು ಅನ್ಯ ಪಾದರಕ್ಷೆಗಳನ್ನೂ ತಂದಿರಲಿಲ್ಲ.

ಸಮರ್ಥ್ ಮೆರಥಾನ್, ಅದರಲ್ಲೂ ಬರಿಗಾಲಿನ ಓಟಗಾರ. ಬರಿಗಾಲಿನಲ್ಲೇ ನಡೆದುಬಿಟ್ಟರು. ಅನಿಲ್ ಶೇಟ್ ಮಾತ್ರ ಪೇಟೆ ಬಿಟ್ಟು ನಡೆದೇ ತಿಳಿಯದವರು. ಹಾಗಾಗಿ ಕ್ಲೀಟ್ಸನ್ನೇ ಹಾಕಿ ಭಾರೀ ಕಷ್ಟದ ನಡಿಗೆ ಮಾಡಿದರು. ಸ್ವಾಭಾವಿಕವಾಗಿ ನಮ್ಮದು ಕಿರು ಚಾರಣವಾಯ್ತು. ಆ ವಲಯದ ಗಿರಿರಾಜ – ಮೂರ್ಕಣ್ಣ ಬೆಟ್ಟ. ಅದರ ಒತ್ತಿನ ಬೆಟ್ಟದ ಕುತ್ತಕೊಡಿ ಸೇರುವಾಗ ಎಂದೋ ಎದ್ದಿರಬೇಕಾಗಿದ್ದ ಸೂರ್ಯ ಇನ್ನೂ ಜಿಬರುಗಣ್ಣು ತಿಕ್ಕುತ್ತಿದ್ದ. ಆತ ಫಕ್ಕನೆ ಮುಖ ತೊಳೆದು ಬರುವುದರೊಳಗೆ ನಾವು ಕಣಿವೆಯ ಮರಗಳ ಮರೆಯಲ್ಲಿ ಅವಿಶ್ರಾಂತ ಹರಿದಿದ್ದ ಎತ್ತಿನಹೊಳೆಯ ಕುಶಲ ವಿಚಾರಿಸಲು ಜಾರಿದ್ದೆವು.

ಝರಿನೀರಿಗೇ ಬಾಯೊಡ್ಡಿ ಕುಡಿದು, ಉಬುರು ಹಣ್ಣಿನ ಹುಳಿಯನ್ನು ಸವಿದೆವು. ಕೊನೆಯದಾಗಿ ಝರಿನೀರಿಗೆ ಕೊಳಾಯಿ ಒಡ್ಡಿ, ವನಧಾಮ ಅರ್ಥಪೂರ್ಣ ವಿದ್ಯುತ್ ಸ್ವಾಯತ್ತೆ ಸಾಧಿಸಿರುವುದನ್ನು ಕಂಡು ಮೆಚ್ಚಿದೆವು. ಅಷ್ಟರಲ್ಲಿ ಉಪಾಹಾರ ಸಿದ್ಧವಾಗಿತ್ತು. ನಮ್ಮದಿನ್ನೇನಿದ್ದರೂ “ತಿಂಡಿ ತಿನ್ನು, ಸೈಕಲ್ ಹೊಡಿ” ಎಂದು ಹೇಳಿಕೊಂಡು ಶೆಡ್ಡಿನ ಒಳಗಿನ ಸೈಕಲ್ಲುಗಳನ್ನು ಹೊರ ತೆಗೆದೆವು. ಅಲ್ಲಿ ತಂಡದ ದುರದೃಷ್ಟ ಮತ್ತೆ ವಕ್ಕರಿಸಿತ್ತು. ಸಮರ್ಥರ ಸೈಕಲ್ಲಿನ ಡಿರೇಲರ್ (ಸರಪಳಿಯನ್ನು ವಿವಿಧ ಕಚ್ಚುಗಾಲಿಗಳಿಗೆ ತೊಡಗಿಸುವ ಭಾಗ) ವಿನಾಕಾರಣ ಮುರಿದು ಬಿತ್ತು. ಇದಕ್ಕೆ ರಿಪೇರಿ, ಪರ್ಯಾಯ ವ್ಯವಸ್ಥೆಗೆ ನಮಗಿದ್ದ ಹತ್ತಿರದೂರು ಮಂಗಳೂರೇ. ಸಮರ್ಥರ ದುಃಖಕ್ಕೆ ಪಾರವಿರಲಿಲ್ಲ. ವನಧಾಮದ ಅನಿಲ್ ಸಮರ್ಥರನ್ನು ಸೈಕಲ್ ಸಮೇತ ಜೀಪಿನಲ್ಲಿ ಸಕಲೇಶಪುರ ಮುಟ್ಟಿಸುವ ಧೈರ್ಯ ಕೊಟ್ಟು ಎಲ್ಲರನ್ನು ಸಮಾಧಾನಿಸಿದರು.

ಸಾಹಸಯಾನದ ಉತ್ತರಾರ್ಧವನ್ನು ಯಶಸ್ವಿಯಾಗಿಸಲು ಹೊರಟ ನಮಗೆ ಅನಿಲ್ ಶಿರಾಡಿ ಹೆದ್ದಾರಿ ಸೇರಲು ಸುಲಭದ ದಾರಿಯೊಂದನ್ನು ಹೇಳಿಕೊಟ್ಟರು. ಅದು ಹಿಂದಿನ ಸಂಜೆ ನಾವು ಜೀಪೇರಿ ಬಂದಿದ್ದ ಎಂಟು ಕಿಮೀ ಕಚ್ಚಾದಾರಿಯನ್ನು ಎರಡೇ ಕಿಮೀಗಿಳಿಸುತ್ತಿತ್ತು. ಅಲ್ಲದೆ, ಡಾಮರು ದಾರಿಯಲ್ಲೂ ಸಕಲೇಶಪುರದ ಬಳಸಂಬಟ್ಟೆಯನ್ನು ಮೂವತ್ತಕ್ಕೂ ಮಿಕ್ಕು ಕಿಮೀಗಳಿಂದ ಉಳಿಸುವಂತಿತ್ತು. ಎಂಟೂವರೆ ಗಂಟೆಗೆ ನಾವಿಬ್ಬರು ಹೊರಟೆವು.

ಹಿಂದಿನ ದಿನ ನಾವು ಬಂದಿಳಿದ ದಾರಿಯ ಮುಂದುವರಿಕೆಯೇ ಹೊಸದಾರಿ. ಇದು ಆರೈಕೆ ಮತ್ತು ಬಳಕೆಯಲ್ಲಿ ಇನ್ನಷ್ಟು ಅವಗಣಿತವಾದ್ದರಿಂದ ಮಳೆಗಾಲದಲ್ಲಿ ರಸ್ತೆ ಚರಂಡಿ ಬಿದ್ದಿತ್ತು. ಉಳಿಗಾಲದಲ್ಲಿ ಗೋಪಾಲರು ಹಳ್ಳಿಯ ಜಾನುವಾರುಗಳನ್ನು ಬೆಟ್ಟದಲ್ಲಿ ಮೇಯಿಸಲು ಇದೇ ದಾರಿಯಲ್ಲಿ ಓಡಾಡಿಸುತ್ತಾರೆ. ಸಹಜವಾಗಿ ಏರಿಳಿತಗಳಲ್ಲಿ ಕಲ್ಲುಕಿತ್ತು, ದೂಳೆದ್ದಿತ್ತು. ಉಳಿದಂತೆ ನಡುಗಡ್ಡೆಯಲ್ಲಿ ಮೊಣಕಾಲೆತ್ತರಕ್ಕೆ ಹುಲ್ಲು ಬೆಳೆದು, ಇಕ್ಕೆಲಗಳಿಂದ ಮುಳ್ಳ ಪೊದರುಗಳು ಒತ್ತಿ ಸೈಕಲ್ ನೂಕಿ ನಡೆಯುವುದನ್ನೂ ಕರಕಷ್ಟ ಮಾಡಿತ್ತು.

ಆದರೆ ಅತ್ಯಲ್ಪ ಅಂತರದಲ್ಲೇ ನಮ್ಮನ್ನು ಸಕಲೇಶಪುರದಿಂದ ಕಾಡುಮನೆ ಚಾ ತೋಟದತ್ತ ಸಾಗುತ್ತಿದ್ದ ಒಳ್ಳೆಯ ಕಾಂಕ್ರೀಟ್ ದಾರಿ ಸ್ವಾಗತಿಸಿತು. ಕಾಡ್ಮನೆಯ ಕಾಂಕ್ರೀಟ್ ಮಾರ್ಗ ನಾನು ಹಿಂದೆ ಕಂಡದ್ದೇ. ಇದು ನುಣ್ಣಗಿದ್ದರೂ ಏರಿಳಿತ ತೀವ್ರವೇ ಇತ್ತು. ಇದರಲ್ಲೊಂದೆಡೆ ದಾರಿಯ ಪಕ್ಕದಲ್ಲೇ ಉದ್ದಕ್ಕೆ ಎತ್ತಿನಹೊಳೆ ಯೋಜನೆಯ ಅಂಗವಾಗಿ ಭಾರೀ ಕೊಳವೆಗಳನ್ನು ಅಳವಡಿಸುತ್ತಿದ್ದರು. ಎಂದೂ ಬಾರದ ನೀರಿಗೆ ಎಷ್ಟೊಂದು ಪರಿಸರ ಮತ್ತು ಹಣ ಹಾಳು ಎಂದು ವಿಷಾದಿಸುತ್ತ ಮುಂದುವರಿದೆವು. ಕಾಡುಮನೆಗಿಂತಲೂ ಎರಡು ಕಿಮೀ ಮೊದಲು ನಾವು ಮಾರೇನಹಳ್ಳಿಯತ್ತ ಸಾಗುವ ಎಡಗವಲಿಗಿಳಿದೆವು. ಇದು ಮೊದಲ ಎರಡು ಮೂರು ಕಿಮೀ ಹಳೆಗಾಲದ ಒರಟು ಡಾಮರುದಾರಿ. ಮುಂದೆ ‘ಪ್ರಧಾನಮಂತ್ರಿ ಗ್ರಾಮಸಡಕ್’ ಯೋಜನೆಯಲ್ಲಿ ಅಗಲೀಕರಣ ಮತ್ತು ಉತ್ತಮ ಡಾಮರು ಕಾಣತೊಡಗಿತ್ತು. ಹಿಮ್ಮುರಿ ತಿರುವು ಮತ್ತು ಪೇಟೆಯಂಥ ಆಯಕಟ್ಟಿನ ಜಾಗಗಳಲ್ಲಿ ಕಾಂಕ್ರೀಟ್ ಹಾಸಿನ ನಿರೀಕ್ಷೆ ಮಾತ್ರ ಇತ್ತು. ಅದರಲ್ಲೂ ಕೊನೆಯ ಒಂದೆರಡು ಕಿಮೀಗಳಲ್ಲಿ ಇನ್ನೂ ಕೆಲಸವಿನ್ನೂ ಪ್ರಗತಿಪಥದಲ್ಲೇ ಇದ್ದುದರಿಂದ ನಮ್ಮ ಸವಾರಿಯನ್ನು ಸಂಕಷ್ಟಪಥದಲ್ಲೇ ಮುಗಿಸಬೇಕಾಯ್ತು. ಮಾರನ ಹಳ್ಳಿಯಲ್ಲಿ ನಾವು ಶಿರಾಡೀ ಘಾಟೀ ದಾರಿಯನ್ನು ಸೇರಿದೆವು. ಸುಮಾರು ಇಪ್ಪತ್ತು ಕಿಮೀ ಉದ್ದದ ಈ ಮಾರ್ಗಕ್ರಮಣ ನಮ್ಮ ಎರಡು ಗಂಟೆಯನ್ನೇ ತೆಗೆದರೂ ಉಳಿಸಿದ್ದು ಅಪಾರ ಎಂಬ ತೃಪ್ತಿಯಲ್ಲೇ ನಾವು ಮಂಗಳೂರುಮುಖಿಗಳಾದೆವು.

ಮಾರನಹಳ್ಳಿಯಿಂದ ಮಂಗಳೂರಿನತ್ತ ಪಯಣವೆಂದರೆ ನವೀಕೃತ ಹೆದ್ದಾರಿಯ ನುಣ್ಣಗಿನ ಓಟ, ನೀರು ಹಸಿರಿನ ಸಮೃದ್ಧ ಪರಿಸರ, ಶಿಖರ ಕಣಿವೆಗಳ ವಿಸ್ತಾರ ನೋಟ, ಇಳಿಜಾರಿನ ಆನಂದ. ಅದುವರೆಗೆ ಕಾಡು, ಕಚ್ಚಾದಾರಿಗಳಲ್ಲಿ ಅಳುತ್ತಿದ್ದ ಅನಿಲ್ ಶೇಟರ ರೋಡಿಯೋ (ಸಪುರ ಮತ್ತು ಹೆದ್ದಾರಿಗಳಲ್ಲಿ ವೇಗಸಾಧನೆಗೇ ರೂಪಿತ ಚಕ್ರದ ಸೈಕಲ್) ಇಲ್ಲಿ ರಸ್ತೆಯನ್ನೇ ಆಳತೊಡಗಿತ್ತು.

ಅನಿಲ್ ಶೇಟ್ ಭಾರೀ ಹೊರೆಹೊತ್ತ ಲಾರಿಗಳನ್ನೂ ನಗಣ್ಯಮಾಡಿ ಹಿಂದಿಕ್ಕುತ್ತಾ ಕಣ್ಮರೆಯೇ ಆಗಿಹೋದರು! ನಾನೂ ದಿಂಬಂ ಘಾಟಿಯನ್ನು ನೆನೆಸಿಕೊಳ್ಳುತ್ತ (ನೋಡಿ: ನೀಲಗಿರಿಗೆ ಸೈಕಲ್ ಸವಾರಿ) ಒಮ್ಮೆ ಒಂದು ಲಾರಿಯನ್ನೇನೋ ಹಿಂದಿಕ್ಕಿದ್ದೆ. ಆದರೆ ಎಲ್ಲ ವೇಗವಾದರೆ ಬಿರಿ ನಿಯಂತ್ರಣ ಹಾಗೂ ಚಕ್ರ ಓಡುವ ಪಥದ ಅಂದಾಜುಗಳಷ್ಟೇ ಅನುಭವವಾಗುತ್ತದೆ. ಅದರಲ್ಲೂ ಯಾಂತ್ರಿಕತೆ ಅಥವಾ ಬಳಲಿಕೆ ಕಾಡಿದರೆ, ಸಣ್ಣ ನಿರ್ವಹಣೆಯಲ್ಲಿ ಸೋತು ಭಾರೀ ಅಪಘಾತಕ್ಕೂ ಪಕ್ಕಾಗಬಹುದು. ದೊಡ್ಡ ವಾಹನಗಳಿಂದ ಕಳಚಿಬಿದ್ದ ಸಣ್ಣಪುಟ್ಟ ಬಿಡಿಭಾಗಗಳು, ತೀವ್ರ ತಿರುವುಗಳಲ್ಲಿ ಕಾಂಕ್ರೀಟ್ ಹಾಸಿನಮೇಲಿನ ತೆಳು ದೂಳಿನ ಪದರ, ಸೈಕಲ್ಲನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತಿರುವುಗಳಲ್ಲಿ ಎದುರಾಗುವ ವಾಹನಗಳನ್ನೆಲ್ಲ ಎಂದೂ ಉಪೇಕ್ಷಿಸುವಂತಿಲ್ಲ. ಹಾಗಾಗಿ ಇಳಿಯುವಲ್ಲೂ ನಾನು ಬೇಗನೆ ನನ್ನದೇ ಲಯ ಮತ್ತು ಮುಖ್ಯವಾಗಿ ಖಯಾಲಿಯನ್ನು ಉಳಿಸಿಕೊಂಡೆ.

ಒಂದೆಡೆ ಗುಂಡ್ಯಹೊಳೆಯ ಪಾತ್ರೆಯಲ್ಲಿ ಯಾವುದೋ ಸಿನಿಮಾದ ಚಿತ್ರೀಕರಣ ನಡೆಯುವುದನ್ನೂ ದಾರಿಬದಿಯ ಗುಂಪಿನೊಡನೆ ಮಿನಿಟೆರಡು ನಿಂತು ನೋಡಿಯೇ ಮುಂದುವರಿದೆ. ಅಂಥದ್ದರಲ್ಲೂ ಹನ್ನೊಂದು ಗಂಟೆಯ ಸುಮಾರಿಗೇ ಗುಂಡ್ಯ ತಲಪಿದ್ದೆ. ಅನಿಲ್ ಶೇಟ್ ಅಲ್ಲಿ ನನ್ನನ್ನು ಕಾದಿದ್ದರು. ಗುಂಡ್ಯದಲ್ಲಿ ನಾವು ಒಟ್ಟಿಗೆ ಚಾ ಸೇವಿಸಿದ್ದಷ್ಟೇ ಬಂತು. ಮತ್ತೆ ಅನಿಲ್ ನನಗೆ ಸಿಕ್ಕಿದ್ದು ಉಪ್ಪಿನಂಗಡಿಯಲ್ಲೇ!

ಗುಂಡ್ಯದಿಂದ ಮುಂದೆ ಇಳಿಜಾರಿನೊಡನೆ ದಾರಿಯಲ್ಲಿ ಕೆಲವು ಸಪಾಟು ಮತ್ತು ಏರಿನ ಅಂಶಗಳೂ ಸಿಗುತ್ತವೆ. ಹಾಗೇ ಹೆದ್ದಾರಿಯ ಪರಿಷ್ಕರಣದ ಕೆಲಸವೂ ಇತ್ತ ಹೆಚ್ಚು ನಡೆದಿಲ್ಲ ಎನ್ನುವುದನ್ನೂ ಗಮನಿಸಬೇಕು. ಈ ವಲಯದಲ್ಲಿ ಊರು, ಜನಗಳ ಸಂಪರ್ಕ ಹೆಚ್ಚುವುದರೊಡನೆ ಕಾಡಿನ ಮುಚ್ಚಿಗೆ ಕಡಿಮೆಯಾಗಿ ಬಿಸಿಲಿನ ಹೊಡೆತ ಹೆಚ್ಚಿತ್ತು. ಸಹಜವಾಗಿ ದಾಹವೂ ಹೆಚ್ಚಿತ್ತು. ಘಾಟಿಯುದ್ದಕ್ಕೆ ಸಿಗುತ್ತಿದ್ದ ಝರಿ ತೊರೆಗಳು ಎಷ್ಟು ಆಕರ್ಷಣೀಯವಾಗಿ ಕಾಣಿಸಿದರೂ ನಾನು ಮತ್ಸ್ಯ ಸಮೀಕ್ಷೆಯ ನೆನಪಿನಲ್ಲಿ ಆ ನೀರ ಮೂಲಗಳನ್ನು ಬಳಸಲೇ ಇಲ್ಲ.

ಅನಿಲ್ ಏನು ಮಾಡುತ್ತಾರೋ ಎಂಬ ಸಣ್ಣ ಆತಂಕ ನನ್ನಲ್ಲೇ ಉಳಿದುಹೋಯ್ತು. ಶಿರಾಡಿ ಘಾಟಿಯ ಬಹುಭಾಗದಲ್ಲಿ ಚರವಾಣಿ ಸಂಪರ್ಕ ಸಿಗುವುದು ಕಷ್ಟ. ಹಾಗೂ ಸಿಕ್ಕಲ್ಲಿ ನಾನು ಪ್ರಯತ್ನ ಮಾಡಿದಾಗ ಅನಿಲ್ “ಸ್ವಿಚ್ಡ್ ಆಫ್”! ಅವರು ಹಿಂದಿನ ದಿನವೇ ಹೇಳಿದ್ದಂತೆ “ರೈಡಿಂಗಿನಲ್ಲಿ ಅವರ ಚರವಾಣಿ ಏರೋಪ್ಲೇನ್ ಮೋಡಿನಲ್ಲಿ” ಇದ್ದಿರಬೇಕು! ಮಾಮೂಲಿನ ಸವಾರಿಗಳಲ್ಲಿ ಇದು ಸರಿಯಿರಬಹುದು. ಆದರೆ ಕಷ್ಟಕ್ಕೋ ಸುಖಕ್ಕೋ ಇಬ್ಬರೇ ಇರುವಾಗ, ಪರಸ್ಪರ ಅಂತರ ಮತ್ತು ಸ್ಥಳೀಯ ಪರಿಸ್ಥಿತಿಗಳು ವಿಶಿಷ್ಟವಿರುವಾಗ, ಇರುವ ಏಕೈಕ ಸಂಪರ್ಕ ಮಾಧ್ಯಮವನ್ನು ತಪ್ಪಿಸಿಡುವುದು ಸರಿಯಲ್ಲ ಎಂದೇ ನನ್ನ ಭಾವನೆ.

ನಾನು ಕ್ರಯಕೊಟ್ಟು ಬಾಟಲಿನೀರು ಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಮೊದಲನೆಯದಾಗಿ ನನಗೆ ಬಾಟಲಿ ಮಾಡುವ ವಿವಿಧ ಕಂಪೆನಿಗಳ ಬಗ್ಗೆಯೇ ವಿಶ್ವಾಸವಿಲ್ಲ. ರೈಲು ಬಸ್ಸುಗಳಲ್ಲಿ ಬಳಸಿ ಬಿಸಾಡಿದ ಪರ್ಲ್ಪೆಟ್ ಬಾಟಲುಗಳನ್ನು ಅಲ್ಲೇ ನಲ್ಲಿ ನೀರು ತುಂಬಿ `ಸೀಲು’, ಡೀಲು ಮಾಡುತ್ತಿರುವುದು ಇಂದು ಹಳೇ ದಂಧೆಯೇ ಆಗಿದೆ! ಮತ್ತೆ ಪ್ಲ್ಯಾಸ್ಟಿಕ್ ಬಾಟಲಿಯ ವಿಷಕಾರೀ ಅಂಶ ನೀರಿನಲ್ಲಿ ಸೇರುವುದು ಸಣ್ಣ ಸಂಗತಿಯೇನಲ್ಲ. ಇನ್ನದರ ಸಾಗಣೆ, ಬಿಸಿಲಿನಲ್ಲಿಟ್ಟ ಸ್ಥಿತಿ, ಹಳೆತನಗಳು ವಿಷಾಂಶವನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಕೊನೆಯದಾಗಿ ಇವನ್ನು ನಿರಕಾರಿಸುವುದರಲ್ಲಿ ಪರಿಸರ ಕಾಳಜಿಯೂ ಮಹತ್ತ್ವದ ಪಾಲುಪಡೆಯಬೇಕು. ಕೋಕಾಕೋಲ, ಪೆಪ್ಸಿಕೋಲಾಗಳಂಥ ಉದ್ಯಮಗಳು ನೆಲೆಸಿದಲ್ಲಿ ಪ್ರಾದೇಶಿಕ ನೀರಿನ ನೈಜ ಸ್ಥಿತಿಯನ್ನು ಕೆಡಿಸುತ್ತವೆ ಎನ್ನುವುದು ಇಂದು ವಿಚಾರವಂತರಿಗೆಲ್ಲ ತಿಳಿದೇ ಇದೆ. ಬಾಟಲಿ ನೀರಿನ ಉದ್ಯಮಗಳು ಅವುಗಳಿಂದ ಭಿನ್ನವಲ್ಲ!

ಹಾಗಾಗಿ ನಾನು ಸಾಧ್ಯವಿದ್ದಲ್ಲೆಲ್ಲ ಹೋಟೆಲುಗಳು ಕುಡಿಯಲು ಕೊಡುವ ಸಾಮಾನ್ಯ ನೀರನ್ನೇ ಹೆಚ್ಚು ನಂಬುತ್ತೇನೆ. ಸಹಜವಾಗಿ ಗುಂಡ್ಯದ ಚಾಂಗಡಿಯಲ್ಲಿ ನನ್ನ ನೀರಂಡೆಯನ್ನು ಮರುಪೂರಣ ಮಾಡಿಕೊಂಡಿದ್ದೆ. ಆಕೆ ಬಾವಿಯ ನೀರೆಂದೇ ನೀಡಿದ್ದು ನಿಜವೇ ಇರಬಹುದು. ಆದರೆ ಮುಂದೆಲ್ಲೋ ಕುಡಿಯಲು ನೋಡಿದಾಗ ಆಕೆ ನೀರಿನ ಜಗ್ಗು ತೊಳೆದ ಸಾಬೂನಿನ ಪರಿಮಳ ಧಾರಾಳ ಸಿಕ್ಕಿ, ಕುಡಿಯದಾದೆ! ಈ ಅನಿವಾರ್ಯತೆಯಲ್ಲಿ ನಾನು ದಾರಿಬದಿಯ ಬೊಂಡದಡ್ಡೆ, ಬಚ್ಚಂಗಾಯಿಗಟ್ಟೆ ಬಳಸಿಕೊಂಡೆ. ನಾನು ಉಪ್ಪಿನಂಗಡಿ ಸೇರುವಾಗ ಅನಿಲ್ ಶೇಟ್ ಊಟ ಮುಗಿಸಿ ಕಾದಿದ್ದರು.

ಟಸ್ಕ್ ಅಂಡ್ ಡಾನಿನ ದಾರಿಯ ಕಲ್ಲಿನ ಪೆಟ್ಟೋ ಶಿರಾಡಿ ಇಳಿದಾರಿಯ ರಭಸದ ಆಘಾತವೋ ಅನಿಲರ ಒಂದು ಟಯರನ್ನು ದುರ್ಬಲಗೊಳಿಸಿತ್ತು. ಅದರಲ್ಲಿ ಮೂಡಿದ ಸಣ್ಣ ಗುಳ್ಳೆ ಎಂದೂ ಸ್ಫೋಟಿಸಬಹುದಿತ್ತು. ಅವರ ಆತಂಕ ನೋಡಿ, “ನಾವು ಜತೆಯಾಗಿ ಹೋಗೋಣ. ಅಸಾಧ್ಯವಾದರೆ ಕನಿಷ್ಠ ಕಲ್ಲಡ್ಕದಲ್ಲಿ ರಿಂಜಿಂ ಕಾಫಿ ನೆಪದಲ್ಲಾದರೂ ಒಮ್ಮೆ ಪರಸ್ಪರ ಧೈರ್ಯ ತಂದುಕೊಳ್ಳೋಣ” ಎಂದು ಸೂಚಿಸಿದೆ. ಹಾಗೇ ಉಪ್ಪಿನಂಗಡಿ ಸಂಕದಲ್ಲಿ ಮುಂದೆ ಹೋದ ಅನಿಲ್ ಮತ್ತೆ ನನಗೆ ಸಿಕ್ಕಿದ್ದು ಕಲ್ಲಡ್ಕದಲ್ಲೇ. ಅಲ್ಲಿನ ಕಾಫಿಯಾದಮೇಲಂತೂ ನನಗವರು ಸಿಗಲೇ ಇಲ್ಲ!

ಅಗಲೀಕರಣ ಮತ್ತು ಚತುಷ್ಪಥೀಕರಣದಲ್ಲಿ ಮರುಭೂಮಿಯಾದ ಹೆದ್ದಾರಿಯ ಏಕತಾನತೆ, ತಲೆತೂತಾಗುವ ಬಿಸಿಲು ಮತ್ತು ಎರಡು ದಿನದ ಶ್ರಮ ಯಾರನ್ನೂ ಕಾಡುವಂತದ್ದೇ. ಹಿಂದಿನ ದಿನ ಮಂಗಳೂರು ಬಿಡುವಾಗ ತಂಡ ಪಂಚಪಾಂಡವರದ್ದು. ಜೋಡುಮಾರ್ಗದಲ್ಲಿ ಚಿನ್ಮಯ ಬಿಟ್ಟಾಗ ನಾವು ದಶರಥಪುತ್ರರರಿಗೆ ಸಾಟಿ. ಕೊಟ್ಟಿಗೆಹಾರದಲ್ಲಿ ವೇಣು ಹಿಂದೆ ಹೋಗುವ ಮಾತಾಡಿದಾಗ ನೆನಪಿಗೆ ಬಂದದ್ದು ಮೂರೂವರೆ ವಜ್ರ. ವೇಣು ರಾತ್ರಿಯ ವಿಶ್ರಾಂತಿಯನಂತರ ಚೇತರಿಸಿ ಮತ್ತೆ ಚತುರ್ಬಲರಾಗುತ್ತೇವೆ ಎಂದು ಆಶಿಸಿದ್ದೆ. ವೇಣು ರೈಗಳ ಕಾರನ್ನು ದೈವಾನುಗ್ರಹವೆಂದೇ ಅಪ್ಪಿಕೊಂಡರು. ಖಚಿತವಿದ್ದ ತ್ರಿಮೂರ್ತಿತನಕ್ಕೆ ಸಮರ್ಥರ ಸೈಕಲ್ ಅಸಾಮರ್ಥ್ಯ ಕೈಕೊಟ್ಟಿತ್ತು. ಕೊನೇ ಗಳಿಗೆಯಲ್ಲಿ ತಂಡ ಎರಡಕ್ಕೇ ಇಳಿದಾಗ ನನಗೆ ಹೊಳೆದದ್ದು ಬಾಲಪಾಠದ ಗೀತೆ “ಕತ್ತೆಯು ಹೇಳಿತು ಓ ಗೆಳೆಯಾ ನೀ ನನಗಿದ್ದರೆ ನಾ ನಿನಗೆ”. ಆದರೆ ವೇಗ ಸಮಯಗಳ ಹಂಗಿಲ್ಲದೆ, ಉಪ್ಪಿನಂಗಡಿ, ಕಲ್ಲಡ್ಕಗಳಲ್ಲಿ ಮರುಪೂರಣಗೊಂಡ ನೀರಂಡೆಯನ್ನು ಖಾಲೀ ಮಾಡುತ್ತ, ಬೊಂಡ ಕುಡಿಯುತ್ತ, ಅಲ್ಲಲ್ಲಿ ನಿಲ್ಲುತ್ತ ಸಂಜೆ ಆರಕ್ಕೆ ಮನೆ ಮುಟ್ಟುವಾಗ ನಾನು ಒಂಟಿ. ನೆನಪಾದದ್ದು ಮಹಾಕವಿ ಅಡಿಗರ ಮಾತುಗಳು “ನಿನಗೆ ನೀನೇ ಗೆಳೆಯಾ ನೀನೇ”