(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಆರು)
[ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ಪಾರ್ಕಿನ್ಸನ್ ಮಂಡಿಸಿರುವ ನಾಲ್ಕನೆಯ ನಿಯಮ: “ಪ್ರತಿಯೊಂದು ರಾಷ್ಟ್ರೀಕೃತ ವ್ಯವಸ್ಥಾಪನೆಯೂ ಸ್ವವಿನಾಶಕ ಬೀಜಗಳನ್ನು ಹೊತ್ತೇ ಜನಿಸುತ್ತದೆ” ಪುಸ್ತಕ ಪ್ರಪಂಚಕ್ಕೆ ಬಲು ಚೆನ್ನಾಗಿ ಅನ್ವಯವಾಗುತ್ತದೆ. ಸರಕಾರೀ ಕೃಪೆ ಎಂಬ ಭಸ್ಮಾಸುರ ಹಸ್ತಾಶೀರ್ವಾದ ವಿವಿಧ ಮೂಲಗಳಿಂದ (ಅಕಾಡೆಮಿ, ವಿಶ್ವವಿದ್ಯಾಲಯ, ಪರಿಷತ್ತು, ಪ್ರಾಧಿಕಾರ ಇತ್ಯಾದಿ) ವಿವಿಧ ರೂಪತಳೆದು (ಸಗಟು ಖರೀದಿ, ಗ್ರಂಥಾಲಯ ಖರೀದಿ ಇತ್ಯಾದಿ) ವಿವಿಧ ಶ್ರಾಯಗಳಲ್ಲಿ (ವಸಂತೋತ್ಸವ, ವರ್ಷ ಹರ್ಷ, ಶರದೇಂದು ದರ್ಶನ, ಹೈಮವತೀ ರಾಗಾಲಾಪನೆ ಇತ್ಯಾದಿ) “ಸಂಭವಾಮಿ ಯುಗೇ ಯುಗೇ” ಆಗುತ್ತಿರುವ ದಿನಗಳಂದು ಮೂರಲ್ಲ, ಕೇವಲ ಒಂದು ಪ್ರಶ್ನೆಗಾದರೂ ಉತ್ತರ ಕೊಡಬಲ್ಲ ಧರ್ಮರಾಯನನ್ನು ಎಲ್ಲಿಂದ ತರೋಣ? “ಧೃತರಾಷ್ಟ್ರೀಕರಣದ ಅಂಧತ್ವ ನಿವಾರಣೆ ಹೇಗೆ?]
[ಹೊಸ ದಿಗಂತ, ಯುಗಾದಿ ವಿಶೇಷಾಂಕ ೧೯೯೬, ಇವರ ಮೂರು ಪ್ರಶ್ನೆಗಳಿಗೆ ನನ್ನ ಉತ್ತರ]
೧. ಕನ್ನಡ ಪುಸ್ತಕ ಪ್ರಕಾಶನ ಲಾಭದಾಯಕವೇ?
ಪುಸ್ತಕೋದ್ಯಮದ ಒಂದಂಗ ಪ್ರಕಾಶನ. ಬರಿಯ ಪ್ರಕಾಶನದ ಲಾಭವೇ ಉದ್ಯಮದ ಉತ್ಕರ್ಷೆ ಅಲ್ಲ. ಆದರೆ ಪುಸ್ತಕೋದ್ಯಮದ ಇತರ ಅಂಗಗಳಿಗಿಂತ, ಅಂದರೆ ಲೇಖನ, ಮುದ್ರಣ, ಮಾರಾಟ, ಓದು ಇತ್ಯಾದಿಗಳಿಗಿಂತ ಹೆಚ್ಚು ಹಣ ವಹಿವಾಟಿನ ಆಸ್ಪದ ಇಲ್ಲಿರುವುದರಿಂದ ಇದು ಹೆಚ್ಚು ಸಂಘಟಿತವಾಗಿದೆ. ಸಹಜವಾಗಿ ಇಂದು ಎಷ್ಟೋ ಜನ ಸಾಹಿತ್ಯ ಬಿಡಿ, ಭಾಷೆಯೂ ಇಲ್ಲದವರು, ಪ್ರಕಾಶನರಂಗದ ನಡೆ ನಿರ್ದೇಶಿಸುತ್ತಿದ್ದಾರೆ. ಹಾಗಾಗಿ ಕನ್ನಡ ಪುಸ್ತಕೋದ್ಯಮ ಎಂದರೆ ಪ್ರಕಾಶನ ಮಾತ್ರ ಎಂಬ ಅಪಕಲ್ಪನೆ ವ್ಯಾಪಕವಾಗಿದೆ. ಇದು ಒಟ್ಟಾರೆ ಪುಸ್ತಕ ಪರಿಸರವನ್ನು ನಿರ್ಮಿಸಬೇಕಾಗಿದ್ದ ಸರಕಾರವನ್ನು ಕೇವಲ ಪ್ರಕಾಶನ-ಪೋಷಕ ಸ್ಥಾನಕ್ಕೆ ತಳ್ಳಿಬಿಟ್ಟಿದೆ. ನೇಪಥ್ಯದಲ್ಲಿ ನಿಂತು ವಿವೇಚನೆ, ನಿಯಂತ್ರಣಗಳ ಸೂತ್ರಧಾರನಾಗಬೇಕಿದ್ದ ಸರಕಾರ ಉದ್ಯಮದ ಜಂಝಡದಲ್ಲಿ ಬಿಡಿಸಿಕೊಳ್ಳಲಾಗದಷ್ಟು ಸಿಲುಕಿಕೊಂಡಿದೆ. ಅಥವಾ ಇದೇ ಸಹಜ ಎಂದು ಭ್ರಮಿಸುವಷ್ಟು ಆಳಕ್ಕೆ ಮುಳುಗಿ ಹೋಗಿದೆ.
ಕನ್ನಡ ಲಿಪಿಯಲ್ಲಿರುವ ಯಾವುದೇ ಪುಸ್ತಕವನ್ನು ಸರಕಾರ ಕೊಳ್ಳಬೇಕು. ಅದೂ ದೊಡ್ಡ ಸಂಖ್ಯೆಯಲ್ಲಿ ಕೊಳ್ಳಬೇಕು. ಹಣ ಸರಕಾರ ಕೊಡುವುದಾದರೂ ನಿರ್ಧಾರ ಮಾರುವವರದು ಎನ್ನುವುದು ಇಂದಿನ ಪ್ರಕಾಶನರಂಗದ ಸ್ಥಿತಿ. ಇಂದು ಸಮ್ಮಾನ, ಪುರಸ್ಕಾರವೂ ವ್ಯವಹಾರದ ಅದಕ್ಕೂ ಮಿಗಿಲಾಗಿ ಹಕ್ಕಿನ ವಹಿವಾಟು ಆಗಿವೆ. ನೀಳ್ಗತೆಯಷ್ಟೂ ಉದ್ದವಿಲ್ಲದ ಕತೆಯನ್ನು ಕಾದಂಬರಿ ಎನ್ನಿಸುತ್ತಾರೆ. ಹೊಸತೇನನ್ನೂ ಕೊಡಲಾಗದ ಸಂಕಟಕ್ಕೆ (ಸೃಜನಶೀಲತೆಯ ಬರ?) ಹಳೆ ಸಂಕಲನವನ್ನೇ ಆಚೀಚೆ ಮಾಡಿ ಶೀರ್ಷಿಕೆ ಬದಲು ಮಾಡಿ ಒಳ ನೂಕುತ್ತಾರೆ. ಪ್ರಕಟಣ ಇತಿಹಾಸವನ್ನೇ ಕೆಡಿಸುತ್ತಾರೆ. ಕೆಲವೊಮ್ಮೆ ಬರದದ್ದೆಲ್ಲವನ್ನೂ ಒಟ್ಟು ಮಾಡಿ ಸಮಗ್ರ ಎನ್ನುವುದುಂಟು; ಕೆಲವನ್ನೇ ಹೆಕ್ಕಿ ತೆಗೆದು ಆಯ್ದ ಬರಹ ಎನ್ನುವುದೂ ಉಂಟು. ಪ್ರಶಸ್ತಿ, ಸಗಟು ಬೇಡಿಕೆ, ಪಠ್ಯ ಯೋಗ ಇವಕ್ಕೆ ಕಟ್ಟಿಟ್ಟ ಬುತ್ತಿ. ಕೊಳಕೋ ಒಣಕಲೋ ತರಕಾರಿ ಹಿಡಿದು ನಿಂತ ಕೃಷಿಕ, ಕಳಪೆ ಮಾಲು ಹಿಡಿದು ನಿಂತ ಉದ್ಯಮಿಗಳು ಇಂಥದ್ದೇ ಹಕ್ಕೊತ್ತಾಯ ಮಂಡಿಸಿ ಜಯಿಸುವುದು ಸಾಧ್ಯವಾದರೆ ರಾಜ್ಯ ಬುದ್ಧಿಮತ್ತೆಯಲ್ಲೂ ಖಜಾನೆಯಲ್ಲೂ ದಿವಾಳಿಯಾಗುವ ದಿನ ದೂರ ಇರಲಾರದು!
ಪ್ರಕಾಶನದ ಇನ್ನೊಂದು ಮುಖ ಕೂಡುಬಾಳ್ವೆಯದು. ತಾನು ದೊಡ್ಡ ಉದ್ದೇಶ ಒಂದರಲ್ಲಿ ಪಾಲು ಬಂಡವಾಳದಾರ ಎಂಬ ಅರಿವಿನೊಡನೆ ಪುಸ್ತಕ ಪ್ರಕಟಿಸುವವರ ಕ್ರಮ ಗಮನಿಸಿ. ಇವರು ನಿಜ ಪುಸ್ತಕೋದ್ಯಮಿಗಳು. ಇವರಲ್ಲಿ ವ್ಯಕ್ತಿಗಳು ಹೆಚ್ಚು; ದೀಪ್ತ ಅಧಿಕಾರಿಗಳು ಇಲ್ಲದಿಲ್ಲ. ಇವರು ಲೇಖಕ, ಮುದ್ರಕ, ಮಾರಾಟಗಾರ ಮತ್ತು ಓದುಗರನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರದಲ್ಲಿ ಒಂದುಗೂಡಿಸುತ್ತಾರೆ. ಇಂಥ ಪ್ರಕಾಶಕ, ಓದುಗನ ಅಗತ್ಯಗಳನ್ನು ಪೂರೈಸುವುದರೊಂದಿಗೆ ಹೆಚ್ಚಿನ ಕುತೂಹಲ ಹುಟ್ಟಿಸಿ, ಅವರನ್ನು ಬೆಳೆಸುವ ಶಿಕ್ಷಕ. ಈತ ಲೇಖಕನಿಗೆ ರಾಯಧನ ಕೊಡುವುದರೊಂದಿಗೆ ಬರವಣಿಗೆಯ ಹೊಸ ಸುಳುಹುಗಳನ್ನೂ ನೀಡಬಲ್ಲ ವಿಚಾರವಂತ. ಮುದ್ರಕನಿಗೆ ವೃತ್ತಿಭದ್ರತೆ ಕಲ್ಪಿಸುವುದರೊಂದಿಗೆ ಪುಸ್ತಕ ಕಲೆಯಲ್ಲಿ ಮುಂದಿನ ಹೆಜ್ಜೆ ತೋರಿಸಬಲ್ಲ ತಂತ್ರಜ್ಞ. ಮಾರಾಟಗಾರನಿಗೆ ಗೌರವಪೂರ್ಣ ಆದಾಯ ಕೊಡುವುದಲ್ಲದೆ, ನೆಚ್ಚಲೂ ಸಿಗುವ ಆಧಾರಪುರುಷ. ಇಷ್ಟಾಗಿಯೂ ಹೆಚ್ಚಿನ ಓದುಗರಿಗೆ ಈ ಪ್ರಕಾಶಕನೆಂಬಾತ ಅಜ್ಞಾತ! ಇಂಥ ಗುಣಗಳು ವಾಸ್ತವವಾಗಿರುವುದು ಸಾಧ್ಯ ಎನ್ನುವುದಕ್ಕೆ ಒಂದು ಹೆಸರು ಮೈಸೂರಿನ ಡಿವಿಕೆ ಮೂರ್ತಿ. (ಇಂದು – ೨೦೧೬, ಡಿವಿಕೆ ನಮ್ಮೊಡನಿಲ್ಲ ಮತ್ತು ಅವರ ಪ್ರಕಾಶನ ತೀರಾ ಅವನತಿಯಲ್ಲಿದೆ)
ಅಕ್ಷರ ಜ್ಞಾನದ ಅನುಚಿತ ವ್ಯಾಮೋಹ ಇಂದು ಎಂಥ ಪುಸ್ತಕಕ್ಕೂ ಮಾರುಕಟ್ಟೆ ದೊರೆಯುವ ಪರಿಸರವನ್ನು ಕಲ್ಪಿಸಿದೆ. ಇಲ್ಲಿ ರದ್ದಿ ಮಾರುವವನಿಗೂ ಬುದ್ಧಿ ಮಾರುವವನಿಗೂ ಸಮಾನ ಅವಕಾಶಗಳು. ವ್ಯತ್ಯಾಸ ಇಷ್ಟೇ – ಬುದ್ಧಿಯವನು ಆತ್ಮ ಸಂಯಮ ಹೇರಿಕೊಳ್ಳುತ್ತಾನೆ. ರದ್ದಿಯವನು ಲಜ್ಜೆಗೇಡಿತನದಿಂದ ಅವಕಾಶಗಳು ಇಲ್ಲದಿದ್ದರೆ ಅವನ್ನು ಕಲ್ಪಿಸಿ, ಬಾಚಿಕೊಂಡು ಮುಂದಾಳಾಗಿ ತೋರಿಸಿಕೊಳ್ಳುತ್ತಾನೆ.
ಪೂರಕ ಪ್ರಸಂಗ: ಭಾರತೀಯ ಕಾವ್ಯಮೀಮಾಂಸೆ – ತೀನಂಶ್ರೀ ಅವರ ಮೇರು ಕೃತಿ. ಇದರ ಮೂಲ ಪ್ರಕಾಶಕರು ಮೈಸೂರು ವಿಶ್ವವಿದ್ಯಾನಿಲಯ. ಇದು ಸಾಹಿತ್ಯಾಸಕ್ತರಿಗೂ ವಿದ್ಯಾರ್ಥಿಗಳಿಗೂ ಸದಾ ಬೇಕಾದ ಪುಸ್ತಕ. ಹಾಗಾಗಿ ವಿವಿನಿಲಯ ಮರುಮುದ್ರಣ ಮಾಡುತ್ತಲೇ ಇತ್ತು. ಕರ್ನಾಟಕ ಸರಕಾರ ವಿಶ್ವ ಕನ್ನಡ ಸಮ್ಮೇಳನದ ಹೆಸರಿನಲ್ಲಿ ನೂರಾರು ಪುಸ್ತಕಗಳ ಸುಲಭಬೆಲೆಯ ಆವೃತ್ತಿ ಪ್ರಕಟಿಸಿತು. ಆ ಪಟ್ಟಿಗೆ ಗೌರವ ತರುವಲ್ಲಿ ಭಾರತೀಯ ಕಾವ್ಯಮೀಮಾಂಸೆ ಒಂದು ಅನಿವಾರ್ಯ ಕೃತಿಯಾಯ್ತು. ಮುಂದೆ ಪಂಪ ಪ್ರಶಸ್ತಿ ಸ್ಥಾಪನೆಯಾಯ್ತು. ತೀನಂಶ್ರೀ ಅವರಿಗೆ ಅದು ಮರಣೋತ್ತರ ಗೌರವವಾಗಿ ಸಂದಿತು. ಈಗ ಪ್ರದರ್ಶನದ ಸರದಿ; ಸಹಜವಾಗಿ ಭಾರತೀಯ ಕಾವ್ಯ ಮೀಮಾಂಸೆ ಅತ್ಯುತ್ತಮ ಕಾಗದದ ಮೇಲೆ, ಅತಿ ಮುದ್ದಿನ ಮುದ್ರಣದಲ್ಲೇನೋ ಬಂತು. ಆದರೆ ಪುಸ್ತಕದ ಥಳಕು ಮರೆತು ನೋಡಿದವರಿಗೆ ಕಂಡದ್ದು ಪೂರಾ ಹುಳುಕು. ಆಚಾರ್ಯಕೃತಿಯಲ್ಲಿ ಪುಟಕ್ಕೆ ಹತ್ತೆಂಟು ಮುದ್ರಣ ದೋಷ. ಮುಂದುವರಿದು ಕನ್ನಡ ಪುಸ್ತಕ ಪ್ರಾಧಿಕಾರ ಅಮಲಿಗೆ ಬಂತು. ಇವರು ಸ್ವಂತದ ಪ್ರಚಾರ ಲಾಭಕ್ಕೆ ಆರಿಸಿದ್ದು ಮತ್ತೆ ಭಾರತೀಯ ಕಾವ್ಯಮೀಮಾಂಸೆಯನ್ನೇ! ಏಕಕಾಲಕ್ಕೆ ಒಂದೇ ಪುಸ್ತಕಕ್ಕೆ ಹಲವು ಆವೃತ್ತಿ, ಮರುಮುದ್ರಣಯೋಗ ದೊರೆಯುತ್ತಿರುವ ಕನ್ನಡ ಸಂದರ್ಭದಲ್ಲಿ ಪ್ರಕಾಶನ ನಷ್ಟ ಎಂದವರುಂಟೇ?!
೨. ಕನ್ನಡಿಗರಲ್ಲಿ ಓದುವ ಪ್ರವೃತ್ತಿ ಬೆಳೆದಿದೆಯೇ?
ಮಾನವ ಆಡುಭಾಷೆಯಿಂದ ಸಾಕ್ಷರತೆಗೆ ಬೆಳೆದು, ಮಾಗಿ, ಮತ್ತಿಂದು ಸಂಪರ್ಕ ಸಾಧನಗಳಿಂದ ಭಾಷೆಯನ್ನೇ ಕಳೆದುಕೊಳ್ಳುವ ಸ್ಥಿತಿಯನ್ನು ತಲಪಿದ್ದಾನೆ. ದೇಶಾಂತರಗಳಲ್ಲಿ ಪುಟಗಟ್ಟಳೆ ಕಾಗದದಲ್ಲಿ ತೋಡಿಕೊಳ್ಳಬೇಕಾಗಿದ್ದ ಭಾವನೆಗಳು ಇಂದು ದೂರವಾಣಿಯಲ್ಲಿ ಇಂಗಿಹೋಗಿವೆ. ಎರಡು ಹೊದಿಕೆಗಳ ನಡುವೆ ಲಕ್ಷಗಟ್ಟಳೆ ಅಕ್ಷರಗಳ ಮೇಳದಲ್ಲಿ ಅರಳಬೇಕಾದ ಭಾವಚಿತ್ರಗಳು ಅರೆಕ್ಷಣದಲ್ಲಿ ಟೀವಿ ಪರದೆಯ ಮೇಲೆ ವಾಸ್ತವಚಿತ್ರಗಳಾಗಿ ನಮ್ಮನ್ನು ಮೂಕವಾಗಿಸುತ್ತಿವೆ. ಕನಸು, ಕಲ್ಪನೆಗಳೆಲ್ಲವನ್ನೂ ಗಣಕ ಆವರಿಸುತ್ತಿದೆ. ಭಾಷೆ, ಸಂಸ್ಕೃತಿಗಳ ಸಾಹಚರ್ಯದಿಂದ ತೊಡಗಿದ ಸಂಪರ್ಕ ಮಾಧ್ಯಮಗಳು ಇಂದು ಮುಂಚೂಣಿಗೆ ಬಂದಿವೆ. ಅಕ್ಷರ, ಭಾಷೆ ವಾಸ್ತವದಲ್ಲಿ ಹಿಂಬಾಲಕರು ಮಾತ್ರ. ಕನ್ನಡ ಇದಕ್ಕೆ ಹೊರತಲ್ಲ. ಕ್ಯಾಸೆಟ್ಟಿನ ಗೀತೆಗೆ ಮರುಳಾಗಿ ಸಾಹಿತ್ಯ ಕೇಳಿ ಬರುತ್ತಾರೆ (ಉದಾ: “ಕುರಿಗಳು ಸಾರ್ ಇಂಗ್ಲಿಷಿನಲ್ಲಿಲ್ವಾ” ಎಂದು ಕೇಳುವವರೇ ಹೆಚ್ಚು!). ಟಿ.ವಿ ಧಾರಾವಾಹಿಯ ಮೋಹದಿಂದ ಕಾದಂಬರಿಯತ್ತ ಇಣುಕುತ್ತಾರೆ. (ಹಿಂದಿ ಧಾರಾವಾಹಿ ಚಂದ್ರಕಾಂತ ಇಷ್ಟಪಟ್ಟವರಷ್ಟೇ ಕನ್ನಡಾನುವಾದಿತ ಕಾದಂಬರಿ ಕೊಂಡರು) ಪ್ರಬಂಧ ಸ್ಪರ್ಧೆ ಮಾಡಿ, ಭಾಗಿಗಳಿಲ್ಲ. ಸೌನ್ಡ್ ಅಂಡ್ ವಿಶನ್ ಸಹಿತ ಕ್ವಿಜ್ ಕಾಂಟೆಸ್ಟ್ ನಡೆಸಿ, ಬಾಲವಾಡಿಯ ಮಕ್ಕಳೂ ಮುತ್ತುತ್ತಾರೆ! ಇಂಥವಕ್ಕೆ ಪೂರಕವಾಗಿ ವೈವಿಧ್ಯಮಯ ಪುಸ್ತಕಗಳೂ ಚೀಟಿ ಸಂಗ್ರಹಗಳೂ ಅರ್ಥಾತ್ ಕ್ವಿಜ್ ಕಾರ್ಡ್ಸೂ ಇಂದು ಧಾರಾಳ ಬರುತ್ತಿವೆ.
ಇನ್ನು ಬೇಕೋ ಬೇಡವೋ ವಿದ್ಯಾ ಸಂಸ್ಥೆಗಳು ಹಳ್ಳಿ, ಗಲ್ಲಿಗಳನ್ನೂ ತಲಪುತ್ತಿವೆ. ಸಾಕ್ಷರತಾ ಆಂದೋಲನ ಹುಚ್ಚು ಹೊಳೆಯಂತೆ ಹರಿದಿದೆ. ಸಹಜವಾಗಿ ಕನ್ನಡ ಪುಸ್ತಕ ವಹಿವಾಟೇನೋ ಏರುಮುಖದಲ್ಲಿದೆ; ಓದುವ ಪ್ರವೃತ್ತಿ ಮಾತ್ರ ಸಂಶಯಾಸ್ಪದ!
ಪೂರಕ ಪ್ರಸಂಗ: ಓರ್ವ ಖ್ಯಾತ ಸಾಹಿತಿಯ ಕೃತಿಗಳ ಅಧ್ಯಯನ ಶಿಬಿರದಲ್ಲಿ ಒಬ್ಬ ಖ್ಯಾತ ಪಂಡಿತ ಪ್ರಬಂಧಕಾರ. ಸಾಹಿತಿಯ ಆತ್ಮೀಯ ಪರಿಚಿತ ಮತ್ತು ಆತನ ಸಮಗ್ರ ಕೃತಿಗಳನ್ನು ಓದಿಕೊಂಡವರಿರಬೇಕೆಂಬ ನಂಬಿಕೆಯೆ ಯೋಗ್ಯತೆಯ ಮಾನದಂಡ. ಪ್ರಬಂಧದ ವಿಷಯ ಪ್ರವಾಸ ಸಾಹಿತ್ಯ. ಅದರ ಕತೆ ಬಿಡಿ, ಹಿಂಬಾಲಿಸಿದ ಪ್ರಶ್ನೋತ್ತರಗಳ ತುಣುಕು ನೋಡಿ.
ಪ್ರಶ್ನೆ ೧. ಸಾಹಿತಿಯ ವಿದೇಶೀ ಪ್ರವಾಸ ಕಥನಗಳ ಬಗ್ಗೆ ಮಾತ್ರ ಹೇಳಿದ್ದೀರಲ್ಲಾ ಸ್ವದೇಶೀ?
ಉತ್ತರ – ಹಾಂ, ಹೌದೌದು ಇದೆ (ಎಂದರೂ ಸೂಕ್ಷ್ಮ ವಿವರಣೆ ಬಿಡಿ, ಹೆಸರಿಸುವಷ್ಟೂ ತಿಳಿದಂತಿರಲಿಲ್ಲ)
ಪ್ರಶ್ನೆ ೨. ಇವರು ನೋಡಿದ ಸ್ಥಳಗಳನ್ನೇ ಹೆಚ್ಚು ಕಡಿಮೆ ಜೊತೆಯಲ್ಲೇ ನೋಡಿ, ಕಥಿಸಿಯೂ ಇರುವ ಇನ್ನೊಬ್ಬ ಸಾಹಿತಿಯ ಕೃತಿಗಳೊಡನೆ ತುಲನಾತ್ಮಕ ಅಧ್ಯಯನ ಹೇಗೆ?
ಉತ್ತರ – ಒಳ್ಳೆಯ ಪ್ರಶ್ನೆ! (ಮುಂದೆ ವಿವರಣೆ ಏನೂ ಇರಲಿಲ್ಲ)
ಪ್ರಶ್ನೆ ೩. ಕನ್ನಡದ ಆಧುನಿಕ ಪ್ರವಾಸ ಸಾಹಿತ್ಯದಲ್ಲಿ ಇದರ ಮಹತ್ತ್ವ ಏನು?
ಉತ್ತರ – ಈ ವಿಚಾರದಲ್ಲಿ ನನ್ನ ಶಿಷ್ಯನ ಸಂಪ್ರಬಂಧ ನೋಡಿ.
ಕೇಳದುಳಿದ ಪ್ರಶ್ನೆ ೪. ಖುದ್ದು ಪಂಡಿತನ ಓದುವಣಿಗೆಯೇ ಕೃತಿಯಲ್ಲಿ ಊರಿ ನಿಲ್ಲದಿದ್ದರೆ ಪಾಮರರ ಓದಿನ ಪ್ರವೃತ್ತಿಯನ್ನು ನಿರ್ದೇಶಿಸುವವರು ಯಾರು?
೩. ಕನ್ನಡ ಪುಸ್ತಕಗಳ ಗುಣಮಟ್ಟ ಕಳಪೆ ಎಂಬ ಅಪಸ್ವರ ಸರಿಯೇ?
ಇಂಗ್ಲಿಷಿನಲ್ಲಿ ಸಿಂಪಿಗರೂಪಿತ ನಾಗರಿಕತೆ ಎಂಬ ವ್ಯಂಗ್ಯೋಕ್ತಿ ಇದೆ. (Tailor made gentleman) ಇದು ಪುಸ್ತಕಗಳ ಗುಣಮಟ್ಟದಲ್ಲಿ ಇಂದು ನಿಜವಾಗಿದೆ. ಒಳ್ಳೆ ಕಾಗದ, ಮುದ್ದಾದ ಮುದ್ರಣ, ಪ್ರಕೃತಿಯನ್ನೂ ನಾಚಿಸುವ ವರ್ಣ ವೈವಿಧ್ಯ ಹೊಳಪಿನ ಮುಖಪುಟ ಇತ್ಯಾದಿ ಇಂದು ಬಹುತೇಕ ಪುಸ್ತಕಗಳ ಗುಣಮಟ್ಟವನ್ನು ನಿರ್ಧರಿಸಿಬಿಡುತ್ತವೆ. ಉದಾಹರಣೆಗೆ ದ್ರಾಬೆ ಹಸುರಿನ ಮುಖಪುಟ ಹೊತ್ತ ಕನ್ನಡ ವಿಶ್ವಕೋಶದ ಹದಿನಾಲ್ಕು ಸಂಪುಟಗಳನ್ನು ತೆಗೆದುಕೊಳ್ಳಿ. ಇವು ತಲಾ ಸಾವಿರ ಪುಟಗಳಲ್ಲಿ ನಿಖರ ಮಾಹಿತಿ, ಅಗತ್ಯದ ಒಳ್ಳೆಯ ಚಿತ್ರ ಹೊತ್ತೂ ತಲಾ ರೂಪಾಯಿ ನಲ್ವತ್ತರ ಕಡಿಮೆ ಬೆಲೆಯವು. ಇನ್ನೊಂದಿದೆ, ವರ್ಣಚಿತ್ರ ವೈಭವದೊಡನೆ ಲಕಲಕಿಸುವ ಮುಖಪುಟದ ಏಕ ಸಂಪುಟ ವಿಶ್ವಕೋಶ – ಕಿರಿಯರ ಕರ್ನಾಟಕ. ಇದರ ಪುಟ ಸಂಖ್ಯೆ ಏಳ್ನೂರು ಮೀರಿಲ್ಲ, ಅಪಾರ ಮಾಹಿತಿ ದೋಷದ, ಸಾಲದ್ದಕೆ ಬೆಲೆ ರೂ ನಾನೂರು. ಆದರೂ ಮಾರುಕಟ್ಟೆಯಲ್ಲಿ ಕಿರಿಯರ ಕರ್ನಾಟಕದೆದುರು ವಿಶ್ವಕೋಶ ಸೋತಿದೆ! ಕಾಗದ, ಮುದ್ರಣ ಮತ್ತು ರಟ್ಟು ಕಟ್ಟುವ ಕಲೆಗಳ ತಂತ್ರಕ್ಕೆ ಭಾಷಾ ಬಂಧನವೇನೂ ಇಲ್ಲ. ಆ ಲೆಕ್ಕದಲ್ಲಿ, ಅಂದರೆ ಬರಿಯ ನೋಟದಿಂದಲೇ ಅಳೆಯುವುದಾದಲ್ಲಿ ಇಂದು ಕನ್ನಡ ಪುಸ್ತಕಗಳು ವಿಶ್ವದ ಯಾವುದೇ ಪುಸ್ತಕಗಳಿಗೂ ಕಡಿಮೆ ಇಲ್ಲ!
ಅದು ಬಿಟ್ಟು ಹೂರಣ ಅರ್ಥಾತ್ ವಿಷಯದತ್ತ ಬನ್ನಿ. ಸಾಮಾನ್ಯರು ಓದುವ ಎಲ್ಲ ಪ್ರಕಾರಗಳನ್ನು ಒಟ್ಟುಸಾಹಿತ್ಯ ಎಂದು ಪರಿಗಣಿಸಿದರೆ ಇದರಲ್ಲಿ ಎರಡು ವಿಧ. ಮೊದಲನೆಯದು ಜನಪ್ರಿಯ ಸಾಹಿತ್ಯ – ಮಹಿಳಾ ಮತ್ತು ಪತ್ತೇದಾರಿ ಕಾದಂಬರಿಗಳು, ಜ್ಯೋತಿಷ್ಯ, ಭಕ್ತಿ ಇತ್ಯಾದಿ ಮಾರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಪ್ರಕಾರ. ಈಚೆಗೆ ಕನ್ನಡದ ಅತಿ ಬೇಡಿಕೆಯ ಲೇಖಕ ಯಾರೆಂಬ ಪ್ರಶ್ನೆಗೆ ಯಂಡಮೂರಿ ವೀರೇಂದ್ರನಾಥ್ ಎಂದರೆ ನಗಬೇಕೋ ಅಳಬೇಕೋ ಎಂದು ತಿಳಿಯದ ಸ್ಥಿತಿಯಾಗಿದೆ. ಈತನೆಲ್ಲ ಕನ್ನಡ ಕೃತಿಗಳೂ ಅ ಬಹುತೇಕ ಮೂಲ ತೆಲುಗಿನಿಂದ ಯಾರ್ಯಾರೋ ಅನುವಾದಿಸಿದವು ಮಾತ್ರ. ಸಾಮಾನ್ಯರ ಆರೋಗ್ಯ, ಪೂಜಾ ಪುಸ್ತಕಗಳು ಬೇಡಿಕೆಯ ಶಿಖರದಲ್ಲಿವೆ. ಜನಪ್ರಿಯ ಸಾಹಿತ್ಯಕ್ಕೆ ಶಿಷ್ಟ ವಿಮರ್ಶೆ, ದೊಡ್ಡ ಜಾಹೀರಾತುಗಳ ಆಸರೆ ಬೇಕಿಲ್ಲ, ವಿರೋಧಗಳೂ ತಟ್ಟುವುದಿಲ್ಲ. ಇಲ್ಲಿ ಗುಣಮಟ್ಟದ ಪ್ರಶ್ನೆ ಬರುವುದಿಲ್ಲ, ಕನಿಷ್ಠ ಉಪಯುಕ್ತತೆಯೊಂದೇ ಲಕ್ಷ್ಯ. ಮೂಗು ಉದುರಿಹೋದರೂ ಶೀತ ನಿಲ್ಲಲಿಲ್ಲವೇ ಎನ್ನುವುದು ಇಲ್ಲಿನ ತರ್ಕ.
ಎರಡನೆಯದು ವಿದ್ವತ್ ಸಾಹಿತ್ಯ. ಇದು ಬಿಡುಗಡೆಯ ನಾಟಕ, ವಿಮರ್ಶಾಗೋಷ್ಠಿ, ಸಾಹಿತ್ಯಾಂಕಣಗಳ `ಜಾಹೀರಾತಿನ’ ಬಲದಲ್ಲಿ ಸಾಗುತ್ತದೆ. ಬಹುಮಾನ, ಪ್ರಶಸ್ತಿಗಳು ಸಂದರಂತೂ ಇವು ಪರಿಪೂರ್ಣತೆಯನ್ನೇ ಮುಟ್ಟಿದ ಭ್ರಮೆ ಸರ್ವವ್ಯಾಪಿಯಾಗುತ್ತದೆ. ಆದರೆ ಓಣಿಗೊಂದು `ಪ್ರಶಸ್ತಿ’ ಇದೆ, ಗಲ್ಲಿಯಲ್ಲೇ `ವಿಶ್ವ’ ಇರಬಹುದು! ಅಂಥವನ್ನು ಪ್ರತಿನಿಧಿಸುವ `ಗೌರವ’ಗಳೆಲ್ಲ ವಿಭಿನ್ನ ದರಗಳಲ್ಲಿ ಬಿಕರಿಗಿರುವ ಪರಿ ತಿಳಿದವರಿಗೆ ಮಾತ್ರ ಸಿನಿಕತನ ಖಾತ್ರಿ. ಎರೆ ಕಟ್ಟಬೇಕು – ಅರ್ಜಿ ನಮೂನೆ ಭರ್ತಿ ಮಾಡಿ, ಪ್ರಮಾಣಪತ್ರಗಳ ಮೂಲಕ “ಬಾ ಹುಲಿ ಬಾ” ಎನ್ನಬೇಕು. ಹಸ್ತಕರ ಮೂಲಕ ಅಟ್ಟಳಿಗೆ ಕಟ್ಟಿಸಿ, ಮರೆಯಲ್ಲಿ ಕೂರಬೇಕು. ಅಲ್ಲಿ ಸಮ್ಮಾನ, ಇಲ್ಲಿ ಮುಖ್ಯ ಅತಿಥಿ, ಮತ್ತೆ ಯಾರದೋ ಅಭಿನಂದನ ಭಾಷಣಕಾರ ಎಂದಿತ್ಯಾದಿ ಸಂಪರ್ಕಗಳನ್ನು ಬಲಪಡಿಸಿ ಲಾಬಿ ಮಾಡಬೇಕು. ಅಂಥದ್ದರಲ್ಲೂ ಗುರಿ ಹುಸಿಯಾಗಿ, ಹುಲಿ ತಪ್ಪಿಸಿಕೊಂಡರೆ ಹುಯ್ಯಲುಗಾರರನ್ನು ಸಂಘಟಿಸಿ ಇನ್ನೊಂದು ಪ್ರಯತ್ನಕ್ಕೆ ಹುಲಿ ಒಡ್ಡಿಕೊಳ್ಳುವಂತೆ ಮಾಡಬೇಕು, ಪ್ರಶಸ್ತಿ ಹೊಡೆಯಲೇ ಬೇಕು. ಇಂದು ಬಹುತೇಕ ವಿದ್ವತ್ ಸಾಹಿತ್ಯ ಕಾಲಮಹಿಮೆಯಲ್ಲಿ ಅಥವಾ ಅತಿಮುದ್ದಿನಲ್ಲಿ ಆಳ ಕಳೆದುಕೊಂಡಿದೆ. ಅಲ್ಪಬುದ್ಧಿಗಳನ್ನು ಕೆರಳಿಸುವ ವಿಷಯ, ಪ್ರಾಮಾಣಿಕತೆಗಿಂತ ಚಮತ್ಕಾರಿಕ ನಿರೂಪಣೆ ಇವುಗಳನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವುದಲ್ಲದೆ ಓದುಗರನ್ನೂ ಮಾಡುತ್ತದೆ. ಇಲ್ಲವಾದರೆ, ಅಂದರೆ ಎಲ್ಲ ಘನಗಂಭೀರ ಸಾಹಿತ್ಯವೇ ಆದರೆ ಕೇವಲ ನಿವೃತ್ತ ಜೀವನಕ್ಕೋ ಪುತ್ರಪೌತ್ರರಿಗೋ ಕಾಯುವ ಗ್ರಂಥ ಭಂಡಾರಿಗಳನ್ನಷ್ಟೇ ಕಾಯಬೇಕಾದೀತು.
ಇಂದು ಬಹುತೇಕ ಲೇಖಕರಿಗೆ ಪತ್ರಿಕಾಲಯಗಳನ್ನು ಬಾಚಿಕೊಳ್ಳುವ, ಮಿತಿಮೀರಿದ್ದರ ಬಗ್ಗೆಯೂ ಗೀಚಿಕೊಳ್ಳುವ ಮುದ್ರಿತವೆಲ್ಲವನ್ನೂ ಸಂಕಲಿಸಿ ತರುವ, ಪ್ರಕಟಿಸಿದ್ದೆಲ್ಲವನ್ನೂ ವಿತರಿಸಿ ಮುಗಿಸುವ ಮತ್ತು ಸಮ್ಮಾನ ದಕ್ಕಿಸಿಕೊಳ್ಳುವ ವಿಚಿತ್ರ ಜಾಡ್ಯ ಹಿಡಿದಿದೆ. ಇಂಥ ಅಂಕಣ ತುಂಬುವ ಕಂಕಣ ಕಟ್ಟಿದವರು ಮುಟ್ಟಿದ ಪುಸ್ತಕ ವರದಿಗಳೇ ವಿದ್ವತ್ ಸಾಹಿತ್ಯ ಸೂಚಿಗಳಾಗಿವೆ. (ಇದಕ್ಕೊಂದು ಹೇಳಲೇಬೇಕಾದ ಉದಾಹರಣೆಯನ್ನು ಕೊನೆಯಲ್ಲಿ ಲಗತ್ತಿಸಿದ್ದೇನೆ) ಹಾಗಾದರೆ ಕನ್ನಡ ಪುಸ್ತಕಗಳ ಗುಣಮಟ್ಟದ ಬಗ್ಗೆ ಅಪಸ್ವರ ತೆಗೆಯುವವರು ಯಾರು?
ಪೂರಕ ಪ್ರಸಂಗ: ಅಂತಾರಾಷ್ಟ್ರೀಯ ಬರಹಗಾರರ ಕೂಟದ ಕ್ರಿಯಾಶೀಲ ಸದಸ್ಯನೊಬ್ಬ ತನ್ನ ಹೆಸರಿನಲ್ಲೊಂದು ಪ್ರವಾಸ ಕಥನ ಪ್ರಕಟಿಸಿದ. ಬೇರೆಬೇರೆಯವರ ಪತ್ರಿಕಾ ಲೇಖನಗಳು, ಒಂದೆರಡು ಇತರ ಪುಸ್ತಕಗಳ ಇಡಿ ಇಡೀ ಅಧ್ಯಾಯಗಳೂ ಯಥಾವತ್ತು (ತಾರೀಕು, ವ್ಯಕ್ತಿನಾಮಗಳು ಮಾತ್ರ ಇವರವು) ಸೇರಿ ಪುಸ್ತಕವಾಗಿತ್ತು. ಇದಕ್ಕೆ ಕನ್ನಡ ಬಾರದ ಪ್ರಚಾರಪ್ರಿಯ ಪಂಡಿತರೊಬ್ಬರಿಂದ ಪೂರ್ಣ ಶಿಫಾರಸಿನ ಮುನ್ನುಡಿ. ಪುಸ್ತಕ ಬಿಡುಗಡೆಗೆ ಒಪ್ಪಿಕೊಂಡ ವೈದ್ಯ ಮಹಾಶಯರೊಬ್ಬರಿಂದಂತೂ ಪ್ರಶಂಸೆಗಳ ಸುರಿಮಳೆ. ಓದಲು ಬಾರದ ಇವರ ಸಂಘ ಮತ್ತು ಸಮಾಜಬಾಂಧವರಿಂದ ಪತ್ರಿಕಾ ಜಾಹೀರಾತುಗಳ ಅಭಿನಂದನೆಗಳು ಬೇರೆ. ಆದರೂ ದುರದೃಷ್ಟವಶಾತ್ ಸ್ವಲ್ಪ ಸಮಯದಲ್ಲೇ ಕೃತಿ ಚೌರ್ಯದ ಗುಟ್ಟು ರಟ್ಟಾಯಿತು. ಆ ಲೇಖಕ ಮತ್ತು ಆತನ `ಅಂತಾರಾಷ್ಟ್ರೀಯ’ ಸಂಘ, ಗುಟ್ಟು ರಟ್ಟು ಮಾಡಿದ ಒಬ್ಬ ಮೂಲ ಲೇಖಕನ ಕಾಲು ಕಟ್ಟಿಕೊಂಡಿತು. ಲೇಖಕ, ಪುಸ್ತಕ ಭೂಗತವಾಯ್ತು!
[ಅನುಬಂಧ: ನನ್ನ ಈ `ಪುಸ್ತಕ ಮಾರಾಟ ಹೋರಾಟ’ ಮುದ್ರಣದಲ್ಲಿದ್ದ ಕಾಲ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಹಾಮಾ ನಾಯಕರಿಗೆ ಮುದ್ರಕ – ಶಕ್ತಿ ಎಲೆಕ್ಟ್ರಿಕ್ ಪ್ರೆಸ್ಸಿನೊಡನೆ ಗೆಳೆತನವಿತ್ತು. ಆ ಪರಿಚಯ ಮತ್ತು ನನ್ನ ತಂದೆಯ ಕುರಿತು ಅವರಿಗಿದ್ದ ಯಜಮಾನಿಕೆಯ ಧೋರಣೆಯಲ್ಲಿ (ಅಂದು ನನ್ನ ತಂದೆ ಕೆಲಸ ಮಾಡುತ್ತಿದ್ದ ಕನ್ನಡ ವಿಶ್ವಕೋಶ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿತ್ತು.) ಈ ಪುಸ್ತಕದ ಮೊದಲ ಪ್ರತಿಯನ್ನು ಹಾಮಾನಾ ಪ್ರೆಸ್ಸಿನಿಂದಲೇ ಒಯ್ದು, ಹಿಂದಿನಿಂದ ನನ್ನ ತಂದೆಗೆ ತಿಳಿಸಿದ್ದರು. (ಗಮನಿಸಿ, ಹಣ ಕೊಟ್ಟು ಕೊಂಡದ್ದಲ್ಲ, ನಾನು ಗೌರವಪೂರ್ವಕವಾಗಿ ಅರ್ಪಿಸಿದ್ದೂ ಅಲ್ಲ!) ಆ ಕಾಲದಲ್ಲಿ ಹಾಮಾನಾ ಸುಧಾ ವಾರಪತ್ರಿಕೆಯಲ್ಲಿ ಒಂದು ಅಂಕಣ ತುಂಬುತ್ತಿದ್ದರು. ಸಹಜವಾಗಿ ವಾರ-ಹತ್ತು ದಿನದಲ್ಲೇ ಅಯಾಚಿತವಾಗಿ ನನ್ನ ಪುಸ್ತಕದ ಕುರಿತು ಅವರ ಒಂದು ಲೇಖನವೇನೋ ಬಂತು. ಆದರೆ ಆ ಲೇಖನದಲ್ಲಿ ಹಾಮಾನಾ ಪುಸ್ತಕದ ಎಲ್ಲ ಪುಟಗಳನ್ನು ಮಗುಚಿ ನೋಡಿದ್ದು, ಕನಿಷ್ಠ ಪರಿವಿಡಿಯನ್ನಾದರೂ ಪೂರ್ಣ ಓದಿದ ಕುರುಹೇ ಇರಲಿಲ್ಲ. ಅವರು ಪುಸ್ತಕವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಅಥವಾ ಸಾಹಿತ್ಯ-ರಾಜಕಾರಣದಲ್ಲಿ ನುರಿತ ಬಲದಲ್ಲಿ ಬುದ್ಧಿಪೂರ್ವಕವಾಗಿ ಪುಸ್ತಕವನ್ನು ಅವಗಣಿಸಿದ್ದರು ಎನ್ನುವುದು ಎದ್ದು ಕಾಣುತ್ತಿತ್ತು. ನೂರರವತ್ತು ಪುಟಗಳ ಪುಸ್ತಕದಲ್ಲಿ ನಾನು ಸುಮಾರು ಇಪ್ಪತ್ತು ಪುಟಗಳಲ್ಲಷ್ಟೇ ಪುಸ್ತಕೋದ್ಯಮದ ಕೆಲವು ಲಘು ಆಖ್ಯಾನಗಳನ್ನು ದಾಖಲಿಸಿದ್ದೇನೆ. ಉಳಿದ ಎಲ್ಲ ವಿಷಯಗಳೂ – ಚಿತ್ರದಲ್ಲಿ ನೀವೇ ಕಾಣುವಂತೆ, ಕನ್ನಡ ಪುಸ್ತಕೋದ್ಯಮದ ಹೋರಾಟದ ಲೇಖನಗಳೇ ಮತ್ತು ಹಾಮಾನಾರಿಗೆ ಬಾಧ್ಯತೆಯ ಸಂಬಂಧಗಳು ಇದ್ದವೇ ಆಗಿದ್ದುವು. ಕನ್ನಡದ ಕಟ್ಟಾಳು ಹಾಮಾನಾ ಲಘುಪ್ರಕರಣಗಳಲ್ಲಿ ಒಂದು ಹಾಸ್ಯದ ತುಣುಕನ್ನು ಯಥಾವತ್ತು ಉದ್ಧರಿಸಿ, ಇದೊಂದು ಹಾಸ್ಯ ಪುಸ್ತಕವೆಂಬಂತೇ ಷರಾ ಬರೆದಿದ್ದರು!]
(ಅನಿಯತವಾಗಿ ಮುಂದುವರಿಯಲಿದೆ)
Bold and beautiful
Correct –hundred times correct But the situation has no solution Government and University publication-distribution systems are so slow outdated and out of tune that it is hard to expect anything,unless a visionary comes to the helm.
also–the sarakari system often gives rise to the demand for privatisation–attha dari ittha puli. You may very well know real –whole sale (HOLE SALE) JUNK SUPPLY SYSTEM scandals , which have many ugly faces
probably the book trade will get a real reform hen printed books become less relevant in the face of E books!!!
Of course this has its own problems