(ಚಕ್ರೇಶ್ವರ ಪರೀಕ್ಷಿತ – ೧೦)

೧. ಕಾಗೆಯೂ ಹೂಜಿಯೂ – ಬೀದಿ ನಾಟಕ

ಎತ್ತಿನಹೊಳೆ ಪಂಪ್ ಹೊಡಿಯುವವರ ಮುಖಕ್ಕೆ ಇಂದಿನ ನೇತ್ರಾವತಿಯ ನಾಲ್ಕು ಚಿತ್ರ ಹಿಡಿಯಲು ಸೈಕಲ್ಲೇರಿ ಬೆಳಗ್ಗೇ ಹೊರಟೆ. (ನೋಡಿ: ಎತ್ತಿನಹೊಳೆಯಲ್ಲಿ ಸುಳ್ಳಿನ ಪ್ರವಾಹ) ಪುತ್ತೂರು ದಾರಿಯಲ್ಲಿ ಅವಿರತ ಪೆಡಲೊತ್ತಿ ತುಂಬೆಯ ಬಿಯೆ-ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ಬಲಕ್ಕೆ ಹೊರಳಿ ನದಿಪಾತ್ರೆಗಿಳಿದೆ. ಪಾತ್ರೆಯ ಉದ್ದಗಲಕ್ಕೂ ಮರಳೋ ಮರಳು. ಅಲ್ಪ ಸ್ವಲ್ಪ ನೀರಿದ್ದಲ್ಲೂ ಹೆಚ್ಚು ಕಾಣಿಸುವುದು ಬಂಡೆಗುಂಡುಗಳೇ. ಮುಂದಿನ ಚುನಾವಣೆಗೆ ಪುಡಾರಿಗಳು ಚಿಕ್ಕಬಳ್ಳಾಪುರಕ್ಕೆ `ನೇತ್ರಾವತಿಯ ನೀರು’ ಬೊಬ್ಬೆ ಹೊಡೆಯುವ ಬದಲು, ಹೂಜಿಯ ತಳದಲ್ಲಿದ್ದ ನೀರೆತ್ತಲು ಕಾಗೆ ಮಾಡಿದ ಉಪಾಯದಂತೆ ಅಲ್ಲಿನ ನಂದಿಬೆಟ್ಟವನ್ನು ಇಲ್ಲಿಗೆ ತಂದು ಮುಳುಗಿಸುವುದನ್ನು ಯೋಜಿಸಬಹುದು! ಹೋದಷ್ಟೇ ವೇಗವಾಗಿ ವಾಪಾಸು ಮನೆ ಸೇರಿದೆ. (೧೨-೧-೨೦೧೫)

೨. ಫಲ್ಗುಣಿ ನದಿಯ ಮಕ್ಕಳಾಟಿಕೆ!

ಸೈಕಲ್ಲೇರಿ ಉರ್ವಾದ ಗಲ್ಲಿಗಳಲ್ಲಿ ಎಲ್ಲೋ ಹೊಕ್ಕು, ಎಲ್ಲೋ ಹೊರಡುವಾಟ ನಡೆಸಿದೆ. ಕೊನೆಗೆ ತೊಟ್ಟಿಲ್ದಗುರಿಯ ಸೇತುವೆಗೆ ಬಂದೆ. ಸಮುದ್ರದಲ್ಲಿ ಇಳಿತ ಶುರುವಾದ ಸಮಯ. ಫಲ್ಗುಣಿಯ ನೀರ ಜಾಲಗಳಷ್ಟೂ ಮೈದುಂಬಿಕೊಂಡಿತ್ತು. ಅದರ ದಂಡೆಯಲ್ಲೇ ಮಾಮೂಲಿನಂತೆ ಕೂಳೂರಿನತ್ತ ಪೆಡಲುತ್ತಾ ಎರಡು ಮೂರು ಕಡೆ ಸುಂದರ ಚಿತ್ರಗಳನ್ನು ಹಿಡಿದೆ. ಸಹಜ ನೀರಿನಲ್ಲಿ ಕೆಂಪು ನಳನಳಿಸುವ ಕಾಂಡ್ಲಾ ಬೇರ ಜಾಲ ಮತ್ತು ಮೊಳಕೆಗಳೆಲ್ಲ ನಾಗರಿಕ ಕೊಡುಗೆಯ ಕಪ್ಪನ್ನು ಕಳೆಯುವ ಜಳಕದಲ್ಲಿ ಮಿರುಗುತ್ತಿದ್ದವು. ಫಲ್ಗುಣಿಯ ಸಂಭ್ರಮಕ್ಕಂತೂ ಅಸಂಖ್ಯ ಸರಕುಗಳ ಸಂತೆಯೇ ನೆರೆದಿತ್ತು!

ಮನೆಯಾಟಕ್ಕೆ ಕೊರತೆಯಾಗದಂತೆ ಒಂದೆಡೆ ಒಡಕು ಕಮೋಡು. ಡರ್ರೆಂದು ಬೈಕೋಡಿಸಲು ಮುಖಮುಚ್ಚುವ ಹೆಲ್ಮೆಟ್ಟು. ಹೀಗೇ ಹೆಸರಿಸಲಾಗದ ಸಾವಿರಾರು `ನಾಗರಿಕ’ ಕೊಡುಗೆಗಳನ್ನು ಫಲ್ಗುಣಿ ನದಿ ದಿನಕ್ಕೆರಡು ಬಾರಿಯಾದರೂ (ಭರತ ಕಾಲದಲ್ಲಿ) ಅಲೆಗೈಗಳಲ್ಲಿ ಎತ್ತಿ, ಆಡಿಸಿ, ಕೆಲವೇ ಗಂಟೆಗಳ ಕಾಲಕ್ಕೆ, ಕೋಮಲವಾಗಿ ಇಳಿಸಿಟ್ಟು ಸಳಸಳನೆ ಸರಿಯುತ್ತಾಳೆ! ಇನ್ನಾಕೆಗೆ ಗೇರ್ ಸೈಕಲ್ಲಿನ ಬಯಕೆ ಬಂದರೆ ಎಂದು ಹೆದರಿ, ನಾನು ಸರ್ರನೆ ಕೂಳೂರಿಗಾಗಿ ಮನೆ ಸೇರಿದೆ. ಫಲ್ಗುಣಿಯ ಭಾಗ್ಯ ನಿಮ್ಮ ಮನ ಸೇರಿಸಿಕೊಳ್ಳಿ, ಹೊಸ ಆಟಿಕೆ ಕೊಡಬೇಡಿ. (೧೩-೧-೨೦೧೫)

೩. ನೇತ್ರಾವತಿಗೆ ವಿಷಪ್ರಾಶನ

ಇಂದಿನ ಸೈಕಲ್ ಸರ್ಕೀಟ್ ಉಳ್ಳಾಲ ಸಂಕಕ್ಕೇರಿದಾಗ ಸ್ಥಿರ ಮೆಲುಗಾಳಿ ಬೀಸುತ್ತಿತ್ತು. ಮಾರುದ್ದ ರೆಕ್ಕೆ ಹರಡಿ ಬಿಗಿಹಿಡಿದ ಹದ್ದುಗಳು, ಬಾಲವನ್ನು ಚುಕ್ಕಾಣಿ ಮಾಡಿ ಆಡುವ ಚಂದ ನೋಡಿಯೇ ಸುಖಿಸಬೇಕು.

ಯಂತ್ರ ರಹಿತ ತೇಲುರೆಕ್ಕೆಯನ್ನು (ಹ್ಯಾಂಗ್ ಪಳಗಿಸುತ್ತಿದ್ದ ದಿನಗಳಲ್ಲಂತೂ (ನೋಡಿ: ಹಾರೋಣ ಬಾಆಆ) ನಾನಂತೂ ಧಡೂತಿ ಹದ್ದಾಗುವ ಕನಸು ಹೊತ್ತಿದ್ದೆ. ಹೊತ್ತುಗಳೆಯದೆ ಸರ್ಕೀಟೇನೋ ಸ್ವಲ್ಪ ಮುಂದುವರಿಸಿದೆ. ಆದರೆ ಹಾರೋಹಕ್ಕಿಯನ್ನು ವಿಡಿಯೋ ಮಾಡುವ ಯೋಚನೆಯಲ್ಲಿ ಸೋರಿಹೋದ ಸಮಯದಿಂದ, ತೊಕ್ಕೊಟ್ಟು ಕಳೆದು ಬಬ್ಬುಕಟ್ಟೆ ತಲಪುವಾಗಲೇ ಮರಳಲು ಸಮಯ ಆದಂತಿತ್ತು. ಬಬ್ಬುಕಟ್ಟೆಯಿಂದ ಕಲ್ಲಾಪುವಿಗಿದ್ದ (ಮರಳಿ ಹೆದ್ದಾರಿಗೆ) ಒಳದಾರಿ ವಿಚಾರಿಸಿಕೊಳ್ಳುತ್ತ ಅನುಸರಿಸಿದೆ. ಸ್ವಲ್ಪ ಮಾತ್ರ ಡಾಮರು ದಾರಿ. ಮುಂದೆ ಗೊಸರು ಭೂಮಿಯ ಅಂಚು, ಮನೆಗಳ ಹಿಂಚು ಮುಂಚಿನ ಕಾಲುದಾರಿ ಅಥವಾ ಸವಕಲು ಜಾಡು. ಅಡ್ಡ ಬಿದ್ದ ಮರ ಕುಪ್ಪಳಿಸಿ, ನಾಲ್ಕೆಂಟು ಮೆಟ್ಟಿಲಿನಲ್ಲಿ ಎತ್ತಿಳಿಸಿ, ಮನೆಯ ಮೋಟು ಪೌಳಿ, ಇನ್ಯಾವುದೋ ಮನೆಯ ಹಿತ್ತಿಲು ಬಳಸಿ, ಬಾವಿಕಟ್ಟೆಗೆ ಸುತ್ತು ಹಾಕಿ, ಬಟ್ಟೆ ಹರಗಿದ ಹಗ್ಗಕ್ಕೆ ತಲೆ ತಗ್ಗಿಸಿ, ಕೊನೆಯಲ್ಲಿ ತುಂಡು ಕಾಂಕ್ರೀಟ್ ದಾರಿಗೆ ಬಿದ್ದು, ಮತ್ತೆ ಕಲ್ಲಾಪು ಸೇರಿದೆ.

ಉಲ್ಲಾಳ ಸಂಕದ ಎದುರು ದಂಡೆ ಸಮೀಪಿಸುವಲ್ಲಿ ದೋಣಿಯೇರಿದ ಇಬ್ಬರು ಬಲೆ ಬೀಸುತ್ತಿದ್ದದ್ದು ಕಂಡೆ. ಆದರೆ ಅವರ ಪಕ್ಕದಲ್ಲೇ ದೊಡ್ಡ ನಾಗರಿಕ ಮೋರಿಯೊಂದು ನೇತ್ರಾವತಿಯನ್ನು ಕೃಷ್ಣವೇಣಿಯನ್ನಾಗಿಸುತ್ತಿತ್ತು! ಅದರ ಪ್ರಭಾವಕ್ಕೋ ಎಂಬಂತೆ ಎರಡು ಬಾರಿಯೂ ಬೆಸ್ತರದ್ದು ಶೂನ್ಯ ಸಂಪಾದನೆ! (ವಿಡಿಯೋ ನೋಡಿ) ದೀಪದ ಕಂಬದ ಮೇಲೆ ಕುಳಿತ ಹದ್ದು, ದೀರ್ಘ ಶಿಳ್ಳೆ ಹಾಕಿ ಹೇಳಿತು “ಘಟ್ಟದ ಮೇಲಿನವರು ನೇತ್ರಾವತಿ ತಿರುಗಿಸುವ ಮಾತಾಡಿದರೆ, ಇಲ್ಲಿನವರು ಅವಳನ್ನು ವಿಷಕೊಟ್ಟು ಮುಗಿಸಿದ್ದಾರೆ.” ನನಗೆ ಒಮ್ಮೆಲೆ ಬೆಳಗ್ಗಿನಿಂದ ಬಾರದ ನಲ್ಲಿ ನೀರು ನೆನಪಾಗಿ ಸೀದಾ ಮನೆ ಸೇರಿದೆ. (೧೯-೧-೨೦೧೫)

೪. ಬೆಂಗ್ರೆ ಸುತ್ತು

ಕಾವೂರು ಪ್ರಸನ್ನ, ಗೆಳೆಯ ಅಶೋಕ ರಾಜಪುರೋಹಿತನೊಡನೆ ಹೆಚ್ಚು ಕಡಿಮೆ ನಿತ್ಯ ಸೈಕಲ್ಲೇರಿ `ಸೂರ್ಯನಮಸ್ಕಾರ’ ಮಾಡ್ತಾನೇಂತ ನನಗ್ಗೊತ್ತಿತ್ತು. ಇಂದು ಬದಲಾವಣೆಗೆಂದು ಸಂಜೆಗಣ್ಣಿನ ನಾನು ಅವರೊಡನೆ ಸೇರಿಕೊಂಡೆ. ಮಹಾತ್ಮ ಗಾಂಧಿ ಮಾರ್ಗದುದ್ದಕ್ಕೂ ಕತ್ತಲು ಮುಸುಕಿತ್ತು. ಲೇಡಿಹಿಲ್, ಕೊಟ್ಟಾರ, ಕೂಳೂರು, ತಣ್ಣೀರುಬಾವಿಯಾಗಿ ಬೆಂಗ್ರೆಯ ಕೊನೆ ಸಮೀಪಿಸುವಾಗ ಬೋಳೂರಿನ ಹಿಂದೂರುದ್ರಭೂಮಿಯ ಸ್ವಾಗತ (?) ಕಮಾನನ್ನು ಮೀರಿ ಅರುಣನೆದ್ದ. ನಾವು ಅಳಿವೆ ಬಾಗಿಲಿನವರೆಗೆ ಹೋಗಿ, ಸುಲ್ತಾನ್ ಬತೇರಿಗೆ ದೋಣಿ ಹಿಡಿದು, ಮನೆಗೆ ಮರಳಿದೆವು. (೨೩-೧-೨೦೧೫)

೫. ರೋಲರ್ ಸ್ಕೇಟಿಂಗಿನ ಮಹೇಶ್ ಕುಮಾರ್

ಸೈಕಲ್ಲಿಗಿಂದು ದೂರಗಾಮಿಯಾಗುವ ಮನಸ್ಸಿದ್ದಂತಿರಲಿಲ್ಲ. ನಂತೂರು ಕಳೆದ ಮೇಲೆ ಸಣ್ಣ ಚಕ್ರಗಳ ಮೇಲೆ ಓಡುವವರನ್ನು ನೋಡುವ ಬಯಕೆ ಆಯ್ತು. ಪದವು ಶಾಲೆಯ ಒತ್ತಿಗೇ ಇರುವ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ, ಒಪ್ಪಂದದ ಮೇರೆಗೇ ಉತ್ಸಾಹಿ ಮಹೇಶ್ ಕುಮಾರ್ ಬಳಗ ರೋಲರ್ ಸ್ಕೇಟಿಂಗ್ ಅಂಗಳ ಮಾಡಿಕೊಂಡು ಅಭ್ಯಾಸ ನಡೆಸುತ್ತಿದ್ದುದನ್ನು ಕಳೆದ ವರ್ಷ ಗಮನಿಸಿದ್ದೆ. ಇಲ್ಲುರುಳುರುಳಿ ಅವರ ಮಗಳೂ ಸೇರಿದಂತೆ ಭಾರೀ ಯುವಸೈನ್ಯ ರಾಜ್ಯ, ರಾಷ್ಠ್ರ ಮಟ್ಟದಲ್ಲಿ ಅನೇಕ ಹೆಸರು ಪಾರಿತೋಷಕಗಳನ್ನು ಜಯಿಸಿದ್ದನ್ನು ನಾನು ಪತ್ರಿಕೆಗಳಲ್ಲಿ ನೋಡುತ್ತಲೇ ಇದ್ದೆ. ಆದರೆ ಈ ವರ್ಷ ಇದ್ದಕ್ಕಿದ್ದಂತೆ ತೋಟಗಾರಿಕೆ ಇಲಾಖೆ ತೋರಿಕೆಗೆ ಅದನ್ನು ವಾರ್ಷಿಕ ಕಂತ್ರಾಟು ದರದಲ್ಲಿ ಹರಾಜಿಗಿಟ್ಟಿತ್ತು. ಇದರ ವಿರುದ್ಧ ಮಹೇಶ್ ಕುಮಾರ್ ಸಾರ್ವಜನಿಕ ಅಹವಾಲು ಮಂಡಿಸಿದ್ದನ್ನೂ ಪತ್ರಿಕೆಗಳಲ್ಲಿ ಓದಿ ಬೇಸತ್ತಿದ್ದೆ. ಅಲ್ಲಿ ಹೋಗಿ ನೋಡುವುದೇನು, ಗೇಟ್ ಬಂದಾಗಿತ್ತು.

ಗೇಟಿನ ಹೊರಗೆ ನಗರ ರಸ್ತೆಗಳ ಅಗಲೀಕರಣದಲ್ಲಿ ಕಿತ್ತುಬಂದ ಕಾಂಕ್ರೀಟ್ ಚಪ್ಪಡಿಗಳ ಸ್ಮಶಾನವೇ ಮೆರೆದಿತ್ತು. ಅದರ ಉತ್ತರಕ್ರಿಯೆಗೆಂಬಂತೆ ಸೇರಿಸಿದ್ದ ಕಸ ಕೊಳೆ, ಅರೆಬರೆ ಸುಟ್ಟು `ಸ್ವಚ್ಛಭಾರತ’ದ ಉದ್ಘಾಟನೆಗೆ ರಂಗ ಸಜ್ಜುಗೊಂಡಂತ್ತಿತ್ತು. ಜೇನುಗೂಡಿನಂತಿರಬೇಕಿದ್ದ ಸ್ಕೇಟಿಂಗ್ ರಿಂಕ್’ ಅನಾಥ ಅಂಗಳವಾಗಿತ್ತು. ಅದರ ಅಂಚಿನಲ್ಲೊಬ್ಬ ಸೋಮಾರಿ ಕುಳಿತಿದ್ದ.

ಆತನನ್ನು ನಾನು ವಿಚಾರಿಸಿದ್ದಕ್ಕೆ, ಅಲ್ಲಿನ ನಿಜ ಕಲಾಪವೇನೆಂಬ ಅರಿವೇ ಇಲ್ಲದಿದ್ದರೂ ಅಧಿಕೃತ ವಕ್ತಾರನ ಪೋಸ್ ಕೊಟ್ಟ. ಹುಲ್ಲು ತಿನ್ನಲು ಬಂದ ದನವನ್ನು ಅದರ ಮೇಲೆ ಮಲಗಿ ಗುರ್ರಾಯಿಸಿದ ನಾಯಿಯ ಹಾಗೆ, ತಿರುಗುವ ಚಕ್ರಗಳಿಗೆ ಕೋಲಿಕ್ಕಿದ ಹಾಗೆ, ತೋಟೆಗಾರಿಕೆಗೆ ಸ್ಕೇಟಿಂಗ್ ಬಲಿಯಾಗಿತ್ತು! ಅನುಕೂಲದ ಮಾತುಗಳು ಬರಲಿಲ್ಲವೆಂದು ಇನ್ನು ಯಾರಾದರೂ ನನ್ನ ಸೈಕಲ್ ಚಕ್ರಕ್ಕೂ ಕೋಲು ಹಾಕಲು ಹಿಂಬಾಲಿಸಿಯಾರೆಂಬ ಗುಮಾನಿಯಲ್ಲಿ, ಯೆಯ್ಯಾಡಿ, ಕಾವೂರು, ಕೂಳೂರಿನ ಬಳಸುದಾರಿ ಹಿಡಿದು ಮನೆ ಸೇರಿಬಿಟ್ಟೆ. (೨೪-೧-೨೦೧೫)

೬.ತಡವಾದ ಸೂರ್ಯೋದಯ, ಚುರುಕಾದ ಸೂರ್ಯಾಸ್ತ!

ಸೈಕಲ್ ಸರ್ಕೀಟಿಗೆ ನಂತೂರು, ಕುಲಶೇಖರ, ಕುಡುಪು, ವಾಮಂಜೂರು, ಪಿಲಿಕುಳ – ನಲ್ವತ್ತೇ ಮಿನಿಟಿನ ದಾರಿ. ದಾರಿಯಲ್ಲಿ ಕೆಲವು ಕಟ್ಟೆಮರಗಳನ್ನು (ನೋಡಿ – ಕಟ್ಟೇಪುರಾಣ, ಫೇಸ್ ಬುಕ್ಕಿನಲ್ಲೇ ನನ್ನ ಅನಿಯತ ಧಾರಾವಾಹಿ) ಕಂಡಿದ್ದರೂ ಚಿತ್ರಗ್ರಹಣಕ್ಕೆ ನಿಲ್ಲದ ತಪ್ಪಿಗೆ ಇಲ್ಲಿ ಕೊನೆಯಲ್ಲಿ ಸಿಕ್ಕಿದ್ದು ಈ ವಿದ್ಯುದ್ದೀಪದ ಕಟ್ಟೆ. ಪ್ರವೇಶ ಹಾಸಲು ಕೊಟ್ಟು ಉದ್ಯಾನವನದೊಳಗೆ ಹೋಗಿ ತರಹೇವಾರಿ ಕಟ್ಟೇ ಶೃಂಗಾರ ನೋಡಲು ಮನಸ್ಸು ಬರಲಿಲ್ಲ.

ವಾಪಾಸು ಹೊರಟಾಗ ಅಲ್ಲೇ ಈ ಕೆಲವು ಕಟ್ಟೆಗಳೇನೋ ಕಾಣಿಸಿದುವು. ಆದರೆ ಅಲ್ಲಿನ ಪ್ರಾಕೃತಿಕ ಸತ್ಯ – ಮಣ್ಣು, ನೀರು, ಬಿಸಿಲು ಇತ್ಯಾದಿ, “ಈ ಮರಕ್ಕಲ್ಲ” ಎನ್ನುತ್ತಿತ್ತು. ಇಟ್ಟವರ ಜಿದ್ದಿಗೆ ಮರ ಹೇಗೋ ಜೀವ ಕುದುರಿಸಿಕೊಳ್ಳುವ ಹಂತದಲ್ಲಿದೆ. ಆದರೆ ಈಗ ಚೌಕಟ್ಟೇ ಕಟ್ಟಿ, ಸುತ್ತಣ ನೆಲಕ್ಕೆಲ್ಲ ಇಂಟರ್ಲಾಕೋ ಕಾಂಕ್ರೀಟೋ ಸುರಿದು ಇಟ್ಟವರು ಸನ್ನಿವೇಶ ನರಕ ಮಾಡಿದ್ದಾರೆ. ಈ ಕೃತಕತೆಯ ಮುಂದುವರಿಕೆಯಾಗಿ ಇಲ್ಲಿ ಮಳೆನೀರಿಗೊಂದು ಅಣೆಕಟ್ಟು, ಅದಕ್ಕೊಂದು ನಡೆಕಟ್ಟೆ, ಬೇಲಿ ಮಾಡಿಬಿಟ್ಟಿದ್ದಾರೆ. ಕಟ್ಟೆಯೊಳಗೆ ನೀರಿಲ್ಲ, ಪಥದಲ್ಲಿ ನಡೆಯುವವರಿಲ್ಲ. ಆಚಿನ `ಸರ್ಕಾರೀ ಸಂತೆ’ಯಂತೂ (ನೋಡಿ: ಸರ್ಕಾರಿ ಸಂತೆಗೆಸಜ್ಜಾದ ಪಿಲಿಕುಳ) ಮೊದಲಿಗಿಂತಲೂ ಅನಾಥವಾಗಿ ಕಾಣುತ್ತಿತ್ತು.

ವಾಮಂಜೂರು ಕೈಕಂಬಕ್ಕೆ ಮರಳದೆ ಸಂತೋಷನಗರದ ಒಳದಾರಿ ಹಿಡಿದೆ. ಹಾಗೆ ಪಚ್ಚನಾಡಿ, ಪದವಿನಂಗಡಿಯಾಗಿ ಮೇರಿಹಿಲ್ ವೃತ್ತಕ್ಕೆ ಬರುವಾಗಲೇ ರವಿ ಜಾರಿದ್ದ. ಯೆಯ್ಯಾಡಿ ಕಳೆದಲ್ಲಂತೂ ನೇಪಥ್ಯದ ಗಗನಚುಂಬಿ ಕಟ್ಟಡ, ಮುನ್ನೆಲೆಯಲ್ಲೇ ಸಜ್ಜುಗೊಳ್ಳುತ್ತಿರುವ ಭಾರೀ ಜಾಹೀರಾತು ಫಲಕ ಮುಂದಿನ ದಿನಗಳಲ್ಲಿ ಈ ವಲಯದವರಿಗೆ ಇನ್ನೂ ಬೇಗನೆ, ಆದರೆ ಏನೇನೂ ರಂಗು ಸ್ವಾರಸ್ಯಗಳಿಲ್ಲದ ಸೂರ್ಯಾಸ್ತದ ಅವಕಾಶ ಕಲ್ಪಿಸುತ್ತಿವೆ! (ಪೂರ್ವ ದಿಕ್ಕಿನಲ್ಲೆದ್ದ ಅಸಂಖ್ಯ ಗಗನಚುಂಬಿಗಳು ಸೂರ್ಯೋದಯವನ್ನು ತಡಮಾಡಿದ ಹಾಗೇ!) ಬಾಡಿದ ಮುಖ ಹೊತ್ತು ಮನೆಗೆ ಮರಳಿದೆ. (೨೭-೧-೨೦೧೫)

೭.ಸಾಗರದರ್ಶಿನಿ!

ಇಂದು ನನ್ನ ಸೈಕಲ್ ಬಿಜೈ, ಕುಂಟಿಕಾನಕ್ಕಾಗಿ ಹೆದ್ದಾರಿಗೆ ಬರುವಾಗಲೇ ಗಂಟೆ ಐದು ಕಳೆದಿತ್ತು. ಸುಮ್ಮನೆ ವ್ಯಾಯಾಮವೆಂದೇ ಕೂಳೂರು, ಮತ್ತೂ ಮುಂದೆ ಎಂದು ತುಳಿಯುತ್ತಿದ್ದವನಿಗೆ ಪಣಂಬೂರಿನಲ್ಲಿ ಲಾರಿ ಅಡ್ಡ ಬಂತು. ಗುರಿಯಿಲ್ಲದ ಬಾಣದಂತೆ ಜನಪ್ರಿಯ ಕಡಲ ಕಿನಾರೆ ದಾರಿಗೇ ಹೊರಳಿಕೊಂಡೆ. ಅತ್ತ ರೈಲ್ವೇ ಹಳಿ ದಾಟಿದ ಮೇಲೆ ಕಲ್ಲಿದ್ದಲು ಸಾಗಣೆಯ ದೂಳು ವಿಪರೀತ. ಅದನ್ನು ನಿವಾರಿಸಲು ನೀರು ಚಿಮುಕಿಸುವ ವ್ಯವಸ್ಥೆ ಮಾಡಿದ್ದರೂ ಪಾದಚಾರಿಗಳಿಂದ ದ್ವಿಚಕ್ರಿಗಳವರೆಗೆ ಧರ್ಮಾರ್ಥ ಕರಿನೀರ ಶಿಕ್ಷೆಯಂತೂ ತಪ್ಪಿದ್ದಲ್ಲ! ಇಲ್ಲಿ ನಾನು ಯಾವುದೇ ಘನವಾಹನ ಸಂಚಾರ ಇಲ್ಲದ ಮುಹೂರ್ತ ಕಾದು, ಪುಟ್ಟಪಥದ ಮೇಲೇ ಸವಾರಿ ಹೂಡುತ್ತೇನೆ.

ಪಣಂಬೂರು ಕಿನಾರೆಯಲ್ಲಿ ಸ್ಥಳೀಯಾಡಳಿತ ಸಾರ್ವಜನಿಕ ವಾಹನಗಳಿಗೊಂದು ತಂಗುದಾಣ, ಶುಲ್ಕ ವಸೂಲಿ ವ್ಯವಸ್ಥೆ, ಉನ್ನತ ಸ್ತಂಬದ ಮೇಲೊಂದು ದೀಪಗುಚ್ಛ, ಬುಡದಲ್ಲೊಂದಿಷ್ಟು ತತ್ಕಾಲೀನ ನಡೆಮಡಿ (ಇಂಟರ್ಲಾಕ್) ಮಾಡಿ ಬಿಟ್ಟಿದ್ದರು. ನಾನು ದೀಪದ ಕಂಬ ಬಳಸಿ, ಹಾಗೇ ಉತ್ತರಕ್ಕೆ ಹಾಸಿದ್ದ ಇಂಟರ್ಲ್ಯಾಕ್ ನಡೆಮಡಿಯಲ್ಲಿ ತುಸು ಹೋದೆ. ಹಿಂದೆ ಇದು ಸುಮಾರು ನೂರಡಿ ಅಂತರದಲ್ಲಿ ಸುಮ್ಮನೆ ಒಂದು ಸುತ್ತು ಹಾಕಿತ್ತು. ಹಾಗೂ ಆ ಕೊನೆಯಲ್ಲಿ ಜನಸಂಚಾರವಿಲ್ಲದೆ ಆಳೆತ್ತರದ ಹುಲ್ಲೂ ಮುಳ್ಳೂ ಹಬ್ಬಿ ಮುಚ್ಚಿಯೇ ಹೋಗಿತ್ತು. ಇನ್ನೇನು, ಇವತ್ತಿನ ಸವಾರಿ ಅಕ್ಷರಶಃ `ವೆಂಕು ಪಣಂಬೂರಿಗೆ ಹೋದ’ ಕತೆ ಎಂದೇ ಯೋಚಿಸುತ್ತ ನೋಡುತ್ತೇನೆ – ದಾರಿ ಬಂದಾಗಿತ್ತು.

ತೆರೆಯ ಮರೆ ಕಟ್ಟಿ ಏನೋ ಅಲಂಕಾರಿಕ ರಚನೆಗಳು ರೂಪುಗೊಳ್ಳುತ್ತಿದ್ದವು. ಹಾಗೇ ಬಲಕ್ಕೆ ಹೊರಳಿದರೆ ವಿಸ್ತಾರಕ್ಕಿನ್ನೇನೋ ಭಾರೀ ಕಾಂಕ್ರೀಟ್ ಅಡಿಪಾಯವೂ ಕಾಣಿಸಿತು. ಕಡಲ ಕಿನಾರೆಯಿಂದ ನೂರಿನ್ನೂರು ಮೀಟರ್ ಅಂತರದವರೆಗೆ ಯಾವುದೇ ಖಾಯಂ ನಾಗರಿಕ ರಚನೆಗಳು ಕೂಡದು ಎನ್ನುವ ಶಾಸನವನ್ನು ಸರಕಾರವೇ ಉಲ್ಲಂಘಿಸಬಹುದೇ? (ಹೊಟ್ಟೆಪಾಡಿನ ಅರಣ್ಯವಾಸಿಗಳನ್ನು ಕಿತ್ತೆಸೆದು, ಸ್ವತಃ ಪ್ರವಾಸೋದ್ಯಮ ನಡೆಸುವ ವನ್ಯ ಇಲಾಖೆಯ ಹಾಗೆ?) ಅಡಿಪಾಯದ ಮೇಲೇರಲಿರುವ ರಚನೆಗಳ ಯೋಜನೆ ಏನೋ ನನಗೆ ತಿಳಿದಿಲ್ಲ. ಆದರೆ ಅತ್ತಣ ಅಲಂಕಾರಿಕ ರಚನೆಯಂತೂ ಇಲ್ಲಿನ ಮಳೆಗಾಲದ ಅಬ್ಬರಕ್ಕೆ ಉಳಿಯುವ ಮಾಲಲ್ಲ ಖಂಡಿತ. ಇವೆಲ್ಲಕ್ಕೂ ಮುಖ್ಯವಾಗಿ ಅದರ ಹಿತ್ತಲಿನಲ್ಲಿ ಸಹಜವಾಗಿರುವ ಹಿನ್ನೀರ ಹರಹೊಂದು ಭೂ-ಬಂಧಿಯಾಗಿ, ತನ್ನೆಲ್ಲ ಸಹಜ ಜೀವವೈವಿಧ್ಯವನ್ನು ಕೊಳಚೆ ಹೊಂಡದಲ್ಲಿ ಸಮಾಧಿಯಾಗಿಸಲು ಈಗಲೇ ಸಜ್ಜಾಗಿರುವುದು ತೀರಾ ಅಕ್ಷಮ್ಯ.

ಕಲ್ಲಿದ್ದಲು ರವಾನಿಸುವ ವಠಾರದ ಅಂಚಿನಲ್ಲೇ ಬೈಕಂಪಾಡಿ ಕಿನಾರೆಯತ್ತ ಸರ್ಕೀಟ್ ಮುಂದುವರಿಸಿದೆ. ಅಲ್ಲಿ ವಿರಮಿಸಿದ್ದ ನಾಲ್ಕೈದು ದೋಣಿಗಳ ಬಳಿಯಿದ್ದ ಓರ್ವ ಬೆಸ್ತನನ್ನು ಮಾತಾಡಿಸಿದೆ. ಹೊರ ಇಂಜಿನ್ ಕಟ್ಟಿಕೊಂಡು ನಾಲ್ಕು ಗಂಟೆಯ ಬೆಳಿಗ್ಗೆ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುವವರಂತೆ ಅವರು. “ಎಲ್ಲರೂ ಯಾಕೆ ಹಾಗೆ? ನದಿ ಮೀನುಗಳು ಬೇಡವೇ?” ನನ್ನಲ್ಲಿದ್ದ ಉತ್ತರವನ್ನೇ ಅವನು ಕೇಳಿದ “ಈಗ ಯಾವ ನದಿಯಲ್ಲಿ ಮೀನಿದೆ?” ಗಿರಿದರ್ಶಿನಿ, ವನದರ್ಶಿನಿ, ನದಿದರ್ಶಿನಿಯಂತೆ ಮನೆ, ವಿರಾಮಧಾಮಗಳನ್ನು ಕೇಳಿದ್ದೇವೆ. ಹೌದು, ಎಲ್ಲ ದರ್ಶನ ಮಾತ್ರ! ಅಂದರೆ, ಇಳಿಯಲೂ ಇಲ್ಲದ, ಅನುಭವಿಸಲೂ ಇಲ್ಲದ ಸ್ಥಿತಿಯನ್ನು ಬೆಟ್ಟ, ಕಾಡು, ನದಿಗಳಿಗೆ ನಾಗರಿಕತೆ ಕೊಟ್ಟದ್ದಾಗಿದೆ. ಪಣಂಬೂರು ಸಿದ್ಧತೆಯೊಂದೇ ಅಲ್ಲ, ಮೀನುಗಾರಿಕಾ ದಾರಿಯುದ್ದಕ್ಕೆ ಸಜ್ಜುಗೊಳ್ಳುವ ಅಸಂಖ್ಯ ಖಾಸಗಿ ಐಶರಾಮೀ ರಚನೆಗಳನ್ನು ನೋಡಿದರೆ `ಸಾಗರದರ್ಶಿನಿ’ ಬರುವ ದಿನಗಳು ದೂರವಿರಲಾರದು. ದಿನದ ಕೊನೆಯಲ್ಲಿ ಸಮುದ್ರ ತಳೆಯುವ ಕೆಂಬಣ್ಣ ಸೂರ್ಯನ ರಕ್ತಕಣ್ಣೀರೇ ಇರಬೇಕೆಂಬ ಭಯಕ್ಕೆ, ನಾನು ಹೆದ್ದಾರಿಗಿಳಿದು ಮಂತ್ರಿಸಿದ ಬಾಣದಂತೆ ಮನೆ ಸೇರಿಬಿಟ್ಟೆ. (೨-೨-೨೦೧೫)

೮: ಸುಂದರ ಮುಳ್ಳುಗಳು

ತಲೆಯೊಳಗೆ ಬುಲ್ಡೋಜರ್ ನುಗ್ಗಿತ್ತು, ಸರ್ಕೀಟಿಗಿಳಿದ ಸೈಕಲ್ ಚಕ್ರ ಗುರಿಯಿಲ್ಲದೆ ತಿರುಗುತ್ತಿತ್ತು. ನಂತೂರು, ಕುಲಶೇಖರಕ್ಕಾಗಿ ನೀರುಮಾರ್ಗದತ್ತ ಸಾಗಿದ್ದೆ. ಬಲಕ್ಕೆ ನೇರ ಗುಡ್ಡೆ ಹತ್ತುವ ಚಂದದ ಡಾಮರು ಮಾರ್ಗ ಕೇಳಿತು “ನೀನೇರಬಲ್ಲೆಯಾ ನಾನೇರಿದೆತ್ತರಕೆ?” ದೈಹಿಕ ಸವಾಲು ತಾನೇ – ಜಗ್ಗದೆ ಏರಿಯೇ ಬಿಟ್ಟೆ! ಕರ್ನಾಟಕ ಹೌಸಿಂಗ್ ಬೋರ್ಡಿನ ಯೋಜಿತ ಪುಟ್ಟ ವಠಾರ ಸೇರಿದ್ದೆ. ಅದರಂಚಿನಿಂದ ಅತ್ತ ಮೂಡಬಿದ್ರೆ ದಾರಿ – ಕುಡುಪು, ವಾಮಂಜೂರು ಪದವು ಎಂದು ದಿಟ್ಟಿಯೋಡಿತು. ಇತ್ತ ಮಂಗಳೂರ ಮೈಯಲ್ಲೇಳುತ್ತಿರುವ ಅಸಂಖ್ಯ ಮುಳ್ಳುಗಳೂ ಕಂಗೊಳಿಸಿದವು. ನೇರ ಪದತಲದಲ್ಲಿ ಎರಡೆರಡು ಜೆಸಿಬಿಗಳು ಸಹಸ್ರಮಾನಗಳುದ್ದಕ್ಕೆ ರೂಢಿಸಿದ ಪ್ರಾಕೃತಿಕ ಸತ್ಯಗಳನ್ನು ಬಗಿಬಗಿದು, ಟಿಪ್ಪರ್ ತುಂಬಿ ಎಲ್ಲೆಲ್ಲಿನ ವಿಕಾರಗಳನ್ನು ಸಪಾಟು, ಸುಂದರಗೊಳಿಸುತ್ತಲೇ ಇದ್ದುವು, ಅಲ್ಲೂ ಮುಳ್ಳುಗಳನ್ನು ಬೆಳೆಯಲು.

ಆಳವಾಗಿ ಬೇರುಬಿಟ್ಟ ವಿಚಾರಗಳನ್ನು ಕಿತ್ತೊಗೆಯುವುದು ಸುಲಭವಲ್ಲ. ಸೈಕಲ್ ಜ್ಯೋತಿನಗರದ ಗಲ್ಲಿಗಳಲ್ಲಿ ಸುತ್ತಿ, ನಂದಿನಿ ದಾರಿ ಏರಿ, ಸಿಲ್ವರ್ಗೇಟ್ ದಾರಿ ಇಳಿದು, ಕುಲಶೇಖರ ಕೈಕಂಬಕ್ಕಾಗಿ ಮರೋಳಿ ಕೊನೆಗೋಡಿತು. ಹೊರಗೂ ಕತ್ತಲು ಸಮೀಪಿಸುವುದು ಕಂಡು, ಹಿಂದೆ ತಿರುಗಿ, ನಂತೂರಿಗಾಗಿ ಕದ್ರಿ ಉದ್ಯಾನವನದತ್ತ ಹೊರಳಿದೆ. ಜಟೆಗಟ್ಟಿದ ಜೋಗಿ ಮಠದ ಬಳಿ ಭಾರೀ ಕೆಲಸ ನಡೆದಿತ್ತು. ಮಠ, ಬೇಲಿಗೆಲ್ಲ ರಂಗು ಬಂದಿತ್ತು. ಮಠದ ವಠಾರವೆಲ್ಲ ಮಂಕು-ಮುಳಿ ಧಿಕ್ಕರಿಸಿ, ಇಂಟರ್ಲಾಕ್ ಚಂದದಲ್ಲಿ ಬಿಸಿಲಿಗೆ ರಣಗುಡುತ್ತಿತ್ತು. ಮುಖ್ಯದಾರಿಗಿದ್ದ ಸಪುರ ಹರಕು ಸಂಪರ್ಕ ಡಾಮರು ದಾರಿ ಅವಸರವಸರವಾಗಿ ವಿಸ್ತರಿಸಿಕೊಂಡು, ದಪ್ಪನ್ನ ಕಾಂಕ್ರೀಟ್ ಟೊಪ್ಪಿ ಧರಿಸುತ್ತಿತ್ತು. ಎದುರಿನ ವಠಾರದ ಅಸಂಖ್ಯ ಮರಗಳ ಬೇರ ಜಾಲ ಹರಿದರೂ ಸರಿ, ಮರಗಳು ಒಣಗಿದರೂ ಸರಿ, ತಪ್ಪಲಿನ ಜಲನಿಧಿಗಳು ಬತ್ತಿದರೂ ಸರಿ, ನಡುವಣ ನೆಲ ಸಪಾಟಾಗಬೇಕೆಂಬಂತೆ ಜೆಸಿಬಿ ಸೇವೆ ಮುಗಿದೇ ಹೋಗಿತ್ತು.

ಇವೆಲ್ಲ ಯಾಕೆಂದು ಕಾರಣ ಹುಡುಕುವ ಕಷ್ಟ ಇರಲಿಲ್ಲ, ಎರಡೆರಡು ಬ್ಯಾನರ್ ಇದೇ ಹದಿನಾಲ್ಕಕ್ಕೆ ಮಠದಲ್ಲಿನ `ಭೂತಕ್ಕೆ’ ನೇಮೋತ್ಸವ ನಡೆಸಲಿರುವುದನ್ನು ಸಾರುತ್ತಿತ್ತು. ನೆಟ್ಟಗೆ ಮನೆಗೆ ಮರಳಿದೆ. ಆತ್ಮೀಯರೊಬ್ಬರ ಚರವಾಣಿ “ನಿನ್ನೆ ನೀವು ಹಾಕಿದ ಆ ಚಿತ್ರ ನಮ್ಮ ಮರ್ಯಾದೆ ತೆಗೀತದೆ.” ಫೇಸ್ ಬುಕ್ಕೇನು ಶಾಶ್ವತ? ಅವರು ಹೇಳಿದ ಚಿತ್ರಗಳನ್ನಷ್ಟೂ ಬುಲ್ಡೋಜ್ ಮಾಡಿ ಹಗುರಾದೆ. ಇನ್ನಾದರೂ ಸುಂದರ ಕಟ್ಟೆಯ ಒಣ ಗಿಡದ ಮೇಲೆ ಪುಟ್ಟ ಹಕ್ಕಿ ಕೂರಬಹುದೇ? ಹಾಡಬಹುದೇ? (೫-೨-೧೫)

೯: ಯಾಕಿಷ್ಟೊಂದು ದಾರಿ?

ನನ್ನ ಸೈಕಲ್ಲಿಗಿಂದು ಮತ್ತೆ ಸಂಗಾತಿಗಳ ಯೋಗ. “ಚೂಪು ನಾಲ್ಕುಗೆ ನಂತೂರು” (ಅರ್ಥಾವಾಗದವರು ಪದಶಃ ಇಂಗ್ಲಿಷ್ ಅನುವಾದಿಸಿ ನೋಡಿ) ಎಂದಿದ್ದರು ವೇಣು ವಿನೋದ್ ಮತ್ತು ಅಭಿಭಟ್ ಜೋಡಿ. ಹಾಗೆ ಬಾರದಾಗ ಮುನಿಸಿ ಮುಂದೆ ಹೋಗಿದ್ದೆ. ನನ್ನ ಖಾಸಗಿತನ ಕಳೆದ ಚರವಾಣಿ, ವಾಮಂಜೂರಿನಲ್ಲಿ ನಾನವರನ್ನು ಅರ್ಧ ಗಂಟೆ ಕಾಯುವಂತೆ ಮಾಡಿತು! ಸೀದ ಪಿಲಿಕುಳಕ್ಕೆ ಹೋದೆವು. ಅಲ್ಲಿನ ನಿತ್ಯಪೂಜೆ – ಕೊಳ, ಉದ್ಯಾನವನ, ವಿಜ್ಞಾನಕೇಂದ್ರ, ಪ್ರಾಣಿಸಂಗ್ರಹಾಲಯ, ಪ್ರಾದೇಶಿಕ ಗುಡಿಕೈಗಾರಿಕೆಗಳ ಕೇಂದ್ರ ಮುಂತಾದವುಗಳಲ್ಲಿ ನಮಗೆ ಆಸಕ್ತಿಯಿರಲಿಲ್ಲ. ಪದವಿನಾಚೆ ಆಳದ ಕೊಳ್ಳದಲ್ಲಿ ಹರಿಯುವ ಫಲ್ಗುಣಿ ನದಿಬದಿಗೆ ಇಳಿಯುವ ಸಂಭ್ರಮ.

ದಟ್ಟ ಕಾಡಿನೆಡೆಯಲ್ಲಿ ಸಾಗುವ ಆ ದಾರಿ – ಬಿರಿ ಕಡಿದರೆ ಬಂಗೀಜಂಪಾಗುವಷ್ಟು ಕಡಿದು, ಹುಶಾರಾಗಿಯೇ ಅನುಸರಿಸಿದೆವು. ಕೆಳ ಹಂತದಲ್ಲಿ ಮುಖ್ಯವಾಗಿ ಎಡಕ್ಕೊಂದು, ಅನಂತರ ಪುಟ್ಟ ಒಂದೆರಡು ಕವಲು ದಾರಿಗಳೇನೋ ಕಾಣಿಸಿದವು. ಆದರೆ ಶುದ್ಧ ಡಾಮರು ದಾರಿಯ ಕೊನೆ ರಿಸಾರ್ಟ್ ಗೇಟೊಂದಕ್ಕೆ ಮುಗಿದಿತ್ತು; ನದಿದಂಡೆಗೆ ದೊಣ್ಣೇನಾಯ್ಕನ ಅಪ್ಪಣೆ ಸಿಗಲಿಲ್ಲ; ಸೆಕ್ಕೂರಿಟ್ಟಿ! ಅಲ್ಲಿ ಜನಸಂಚಾರ ತೀರಾ ವಿರಳ. ಅದೃಷ್ಟಕ್ಕೆ ಸಿಕ್ಕವರೊಬ್ಬರು ಕೊಟ್ಟ ಸೂಚನೆ ಮೇರೆಗೆ, ತುಸು ಹಿಂದೆ ನಾವು ಅವಗಣಿಸಿದ್ದ ಕಚ್ಚಾ ಡಾಮರು ದಾರಿಯೇನೋ ಹಿಡಿದೆವು. ಆದರೆ ಸ್ವಲ್ಪೇ ಅಂತರದಲ್ಲಿ ಅದಿನ್ನೂ ನಿರ್ಮಾಣ ಹಂತದಲ್ಲೇ ಇರುವುದನ್ನು ಕಂಡುಕೊಂಡೆವು. ನೆಲ ಬಗಿಯುವ, ಸಮಹರಡುವ ಯಂತ್ರಗಳೆರಡೂ ಕಾಡಗರ್ಭದಲ್ಲಿ ಗದ್ದಲವೆಬ್ಬಿಸಿದ್ದುವು.

ಪದವಿನ ಕೆಳಹೊಟ್ಟೆಯಲ್ಲಿ ಅಡ್ಡ ಕೊಯ್ತ ಕೊಟ್ಟು ಗುರುಪುರ ಸೇತುವೆ ತಲಪುವುದದರ ಲಕ್ಷ್ಯವಂತೆ. ಹುಲಿಯ ಕೊಳವನ್ನು ಹೆಚ್ಚಿಸುವ ಮತ್ತು ಚಿರಂತನಗೊಳಿಸುವ ಹೆಸರಿನಲ್ಲಿ, ಅನೈಜ ನೀರು ಸಂಗ್ರಹಿಸಿದ್ದರ ಪರಿಣಾಮವನ್ನು ಕಂಡದ್ದಾಗಿದೆ. (ಇಲ್ಲೇ ಹಿಂದೊಂದು ಸೈಕಲ್ ಸರ್ಕೀಟಿನಲ್ಲಿ ಹೇಳಿದಂತೆ, ಸೌಮ್ಯ ಇಳುಕಲಿನ ದಕ್ಷಿಣ ಮಗ್ಗುಲು, ಅಂದರೆ ಕೆತ್ತಿಕಲ್ಲಿನ ವಲಯದಲ್ಲಿ ಭೂಕುಸಿತ ಪ್ರಾಕೃತಿಕ ದುರಂತವಲ್ಲ, ಮಾನವ ನಿರ್ಮಿತ.) ಈ ಉತ್ತರ ಮಗ್ಗುಲಿನ ತೀವ್ರ ಇಳುಕಲೋ ಪ್ರತ್ಯಕ್ಷ ಫಲ್ಗುಣಿ ನದಿಯದೇ ವಿಸ್ತೃತ ದಂಡೆ. ಯುಗಾಂತರಗಳಲ್ಲಿ ಮಿದು ಮಣ್ಣು ಕಳೆದು, ಗಿಡಮರಬಳ್ಳಿಯ ಆವರಣದಲ್ಲಿ ಪ್ರಾಕೃತಿಕವಾಗಿ ಸ್ಥಿರಗೊಂಡ ನೆಲವಿದು. ಇನ್ನು ಅದರ ಹಸುರು ಹೊದಿಕೆ ಕಳೆದು, ಬೇರು ಬಂಡೆಗಳ ಹೊಲಿಗೆ ಹರಿದು, ಮಳೆ ನೆರೆಗಳ ಜಡಿತಕ್ಕೆ ತೆರೆದಿಡುವುದು ಸರಿಯೇ? ದೂರಾಲೋಚನೆಯಿಲ್ಲದ ಯೋಜನೆಗಳ ಹುಚ್ಚಿನಲ್ಲಿ ದಾರಿ, ತಟ್ಟು, ಕಟ್ಟಡಗಳೆಂದು ಕಡಿಯುತ್ತ, ಕೆತ್ತುತ್ತ, ಸಮತೋಲನ ಕಳೆಯುವುದು ಹಿತವೇ?

ಮುಂದೊಂದು ದಿನ ಇಂಥಲ್ಲಿ ಸಂಭವಿಸಲೇಬೇಕಾದ ಪ್ರಾಕೃತಿಕ ತೀರ್ಮಾನಗಳಿಗೆ (ದುರಂತ?) ಇಂದಿನ `ಅಭಿವೃದ್ಧಿಪರ’ರನ್ನು ಕನಿಷ್ಠ ಹೆಸರಿಸುವ ಆಡಳಿತಾತ್ಮಕ ಧೈರ್ಯವಾದರೂ ಸಮಾಜಕ್ಕೆ ಬರಲಿ ಎಂದು ಹಾರೈಸಿ ಹಿಮ್ಮುಖರಾದೆವು. ಇಳಿದಾರಿಯಲ್ಲಿ ಮುಖ್ಯವಾಗಿ ಸಿಕ್ಕ ಎಡಗವಲನ್ನು ಈಗ ಬಲಗವಲಾಗಿ ಸ್ವೀಕರಿಸಿ ಅನುಸರಿಸಿದೆವು. ಸರಕಾರೀ ಕಿ.ಪ್ರಾ. ಶಾಲೆ, ಹಳೆಗಾಲದ ಕೃಷಿಭೂಮಿ `ಬಂಡಾರಮನೆ’ಗಳನ್ನು ಹಾಯುವಷ್ಟರಲ್ಲೇ ಉಸಿರು ಕಟ್ಟಿಹೋಗಿತ್ತು. ಅದನ್ನು ಹೆಕ್ಕುತ್ತ ಎರಡು ಹಿಮ್ಮುರಿ ತಿರುವುಗಳ ಬುಡದಲ್ಲಿ ನಿಂತಿದ್ದೆವು. ಬಲ ಕೊಳ್ಳ-ಕಾಡಿನ ಹೊಟ್ಟೆಯಿಂದೆದ್ದಂತೆ ಇಬ್ಬರು ಹಳ್ಳಿಹೆಂಗಸರು ಮಡಿ ಮಾಡಿದ ಬಟ್ಟೆ ಗಂಟು ಹೊತ್ತು ದಾರಿಗೆ ಬಂದರು. ಅವರು ಅದೇ ಮೂಡುಶೆಡ್ಡೆ ಪದವಿನ ಮೇಲಿನ ಹಳ್ಳಿಗರು. ಅಲ್ಲಿ ಎರಡು ದಿನ ನಲ್ಲಿ ನೀರು ಬರದ ಸಂಕಟಕ್ಕೆ ಇಲ್ಲಿನ ಕಣಿವೆಯ ಪುಟ್ಟ ಝರಿಗೆ ಒಗೆಯುವ ಬಟ್ಟೆ ಗಂಟು ತಂದವರು. ನಮ್ಮ ಕುತೂಹಲ ಕೆರಳಿತು. ಸೈಕಲ್ಲುಗಳನ್ನು ದಾರಿಯ ಬದಿಯಲ್ಲೇ ಬಿಡಲು ಧೈರ್ಯ ಸಾಲದೆ ತುಸು ಕೆಳಗಿಳಿಸಿ, ಪೊದರ ಮರೆಯಲ್ಲಿ ಬಿಟ್ಟೆವು. ಮತ್ತೆ ಹತ್ತೇ ಹೆಜ್ಜೆಯಲ್ಲಿ ಸಹಜ ಕಾಡ ಮರೆಯಲ್ಲಿ ಮೀನುಗಳಾಡುವ, ಹಕ್ಕಿಗಳು ಹೊಂಚುವ ಶುದ್ಧ ಝರಿ ಕಾಣಿಸಿತು. ಬಹುಶಃ ಪಿಲಿಕುಳದಲ್ಲಿ ಇಂಗಿದ ನೀರಿನ ಒಂದಂಶ ಇಲ್ಲಿ ಪ್ರಕಟವಾದಂತಿತ್ತು. (ಹಳ್ಳಿ ಹಾಯ್ದು ಬಂದ ತೊರೆಯಾಗಿದ್ದರೆ ನಾಗರಿಕ ಕೊಚ್ಚೆ ಹೊರಬೇಕಾಗುತ್ತಿತ್ತು!)

ಅದನ್ನು ನಾವು ಕುಡಿಯುವ ಧೈರ್ಯ ಮಾಡಲಿಲ್ಲ. ಆದರೆ ಕೈ ಮುಖ ತೊಳೆದು ಪುನಃಶ್ಚೇತನಗೊಂಡದ್ದಕ್ಕೆ ಮತ್ತಿನ ಭಾರೀ ಚಡಾವನ್ನು ಸೈಕಲ್ ಸೀಟಿನಲ್ಲೇ ಕುಳಿತು ಏರಿಸಿ ಮತ್ತೆ (ವಾಮಂಜೂರು-) ಪದವೀಧರರಾಗುವುದು ಸುಲಭವಾಯ್ತು. ನೇರ ಮೂಡಬಿದ್ರೆ ದಾರಿಗೆ ಸೇರಿಕೊಳ್ಳದೆ ಸಂತೋಷನಗರದ ಒಳದಾರಿ ಹಿಡಿದು, ಪಚ್ಚನಾಡಿ, ಪದವಿನಂಗಡಿ ಮಾರ್ಗವಾಗಿ ನಾನು ಕದ್ರಿಯತ್ತ ಹೊರಳಿದರೆ, ಅವರಿಬ್ಬರು ಬೊಂದೆಲಿನತ್ತ (ಅವರ ಮನೆ ಸುರತ್ಕಲ್) ಹೊರಳಿದರು. ಕತ್ತಲ ಮುನ್ನ ಎಲ್ಲ ಕ್ಷೇಮವಾಗಿ ಮನೆ ತಲಪಿದ್ದೆವೆಂದು ಬೇರೆ ಹೇಳಬೇಕೇ (೬-೨-೨೦೧೫)

೧೦: ದೀರ್ಘ ಓಟಕ್ಕೊಂದು ಪೀಠಿಕೆ

ಮಂಗಳೂರು ಬೆಂಗಳೂರು ಸೈಕಲ್ಲೋಟಕ್ಕೆ ಸಮಯ ಇನ್ನೂ ಮೂರು ವಾರ ಇದೆ. ಆದರೂ ಬೆಂಗಳೂರು ಓಡಾಟದಲ್ಲಿ ವಾರಕಾಲ ಜಡ್ಡುಗಟ್ಟಿದ ಕೈಕಾಲು ಕೊಡಹಿ, ಮೂಲೆಪಾಲಾಗಿದ್ದ ಸೈಕಲ್ ಎಳೆದು ಏರಿಯೇ ಬಿಟ್ಟೆ. ಅಶೋಕನಗರ, ತೊಟ್ಟಿಲ್ದಗುರಿ, ಗುರುಪುರನದಿ ದಂಡೆ, ಕೂಳೂರು ಸೇತುವೆ. ಸೇತುವೆಯ ಮೇಲೆ ವಾಹನಗಳ ಸಂಮರ್ದ. ಅದರ ಒಂದು ಅಂಚಿನಲ್ಲಿ ತಲೆ ಕೊಕ್ಕರೆ ಮಾಡುವ ಜನರನ್ನು ನೋಡಿದ ಮೇಲೆ ನಾನೂ ಗುಂಪಿನಲ್ಲಿ ಗೋವಿಂದನಾದೆ. ಸ್ವಲ್ಪ ಸಮಯಕ್ಕೆ ಮೊದಲು ಸಿಮೆಂಟ್ ಮೂಟೆಹೊತ್ತ ಲಾರಿಯೊಂದು ಹಳ್ಳ ಹಾರಿತ್ತು.

ಹಳ್ಳದಲ್ಲೇ ನಿಂತ ಮರವೊಂದರ ದೊಡ್ಡ ಕೈ ಮುರಿದು, ಸರಿಯಾಗಿ ಕವುಚಿ ಬಿದ್ದಿತ್ತು. ಚಾಲಕ, ಸಹಾಯಕರ ಗತಿಯೇನಾಯ್ತೋ ತಿಳಿಯದು. “ಪುಣ್ಯಕ್ಕೆ ನೀರಿಗೆ ಬೀಳಲಿಲ್ಲ” ಎನ್ನುವ ಉದ್ಗಾರ ಎಲ್ಲಿಂದಲೋ ಕೇಳಿತು. ಹೋಗುವ ಜೀವಕ್ಕೆ ನೆಲವಾದರೂ ನೀರಾದರೂ ಒಂದೇ. ಹಾಗಿದ್ದರೆ ಈ ಹಾರೈಕೆ ಸಿಮೆಂಟಿಗೇ ಇರಬೇಕು ಅನ್ನಿಸಿತು. ಈಗ ಅದೇ, ನೀರಿಗೇ ಬಿದ್ದಿದ್ದರೇನಾಗುತ್ತಿತ್ತು ಎಂದು ಯೋಚಿಸುತ್ತಾ ಕಾವೂರಿನತ್ತಣ ಸುಂದರ ಕಾಂಕ್ರೀಟ್ ರಸ್ತೆಯ ಮೇಲೆ ನನ್ನ ಸರ್ಕೀಟ್ ಮುಂದುವರಿಸಿದೆ.

“ಸಿಮೆಂಟ್ ಗಟ್ಟಿಗೊಂಡು ವ್ಯರ್ಥವಾಗುತ್ತಿತ್ತು” ಮರುಪೂರಣ ಅಸಾಧ್ಯವಾದ ಕಟ್ಟಡ ಸಾಮಗ್ರಿಯ ಬಗ್ಗೆ ಕನಿಕರಿಸಿತು – ನನ್ನೊಳಗಿನ ಪರಿಸರಪ್ರಜ್ಞೆ. ದಾರಿಯ ಅಡಿಯಲ್ಲೆಲ್ಲೋ ನಲ್ಲಿ ಒಡೆದು ಭಾರೀ ನೀರು ಹರಿದಿತ್ತು. ವಾಹನಗಳ ದಿಕ್ಚ್ಯುತಿ ಮಾಡಿ, ದಾರಿಯ ಆ ಭಾಗವನ್ನು `ಘೊಟ ಘೊಟ’ ಪುಡಿಗುಟ್ಟಿ, ತೇಪೆ ಹಚ್ಚುವ ಕಾಮಗಾರಿ ನಡೆದಿತ್ತು. “ಅಪಘಾತವಾದರೋ ಆಕಸ್ಮಿಕ. ಆದರಿಲ್ಲಿನಂತೆ ಯೋಜನಾ ಅಸಮರ್ಪಕತೆಯಿಂದಾಗುವ ಸಾವಿರಾರು ಕಾಮಗಾರಿಗಳಲ್ಲಿನ ಸಿಮೆಂಟು?” ನನ್ನೊಳಗಿನ ಕುಹಕಿ ಕೇಳಿದ. “ಜಲಮಾಲಿನ್ಯ ಹೆಚ್ಚಿ ಜೀವವೈವಿಧ್ಯ…” ನನ್ನೊಳಗಿನ ವನ್ಯಸಂರಕ್ಷಕ ವಾಕ್ಯ ಜೋಡಿಸುತ್ತಾ ಇದ್ದ. ಆತನ ಬಾಯಿಗೆ ಹೊಡೆದಂತೆ ನನ್ನೊಳಗಿನ ಸಿನಿಕ ಚುಚ್ಚಿದ “ಈಗ ಈ ನದಿ ನೀರು ಭಾರೀ ಶುದ್ಧವಾ?” “ಹೋಗಲಿ, ಅದನ್ನು ತೆಗೆಸುವ ಖರ್ಚು, ಜೀವಸೊತ್ತುಗಳ ನಾಶದ ಬಗ್ಗೆಯಾದರೂ ಕಾಳಜಿ ವ್ಯಕ್ತಪಡಿಸಬಹುದೇ” ಪ್ರಜಾಪ್ರಭುತ್ವದ ವಕ್ತಾರನಾಗಿ, ಸಾರ್ವಜನಿಕ ವೆಚ್ಚದ ಕಾವಲುಗಾರನಾಗಿ ಕೇಳಿದೆ. ನಾಡಿದ್ದು (ಮಾರ್ಚ್ ೧೪,೧೫) ಮಂ- ಬೆಂ ಸೈಕಲ್ ಓಟದಲ್ಲಿ ಅಡ್ಡಿಯಾಗುವ ಗುಂಡ್ಯ-ಸಕಲೇಶಪುರ ರಸ್ತೆ ಬಂದಾಗಿರುವುದು ನೆನಪಾಯ್ತು.

“ಇರುವ ದಾರಿಗೆ ತೇಪೆಹಾಕಲು ತಿಂಗಳಾನುಗಟ್ಟಳೆ ಲಕ್ಷಾಂತರ ವಾಹನ ಹಾಗೂ ಜನಗಳನ್ನು ವೃಥಾ ಬಳಲಿಸುತ್ತಿರುವಾಗ ಖರ್ಚು, ಶ್ರಮಗಳ ಕುರಿತ ನಿನ್ನ ಕಾಳಜಿ ಸತ್ತಿತ್ತೇ” ಸಿನಿಕ ಮತ್ತೆ ಚುಚ್ಚಿದ. ಅಂತೂ ಗೆದ್ದೆ ಎಂಬ ಧ್ವನಿಯಲ್ಲಿ “ಇಲ್ಲೇ ನನ್ನ ಟೈಮ್ ಲೈನಿನಲ್ಲಿ ಜನವರಿ ಐದರ ನಮೂದು – `ಶಿರಾಡಿಘಾಟಿಯನ್ನು ದೀರ್ಘಕಾಲೀನ ಚರ್ಮವ್ಯಾಧಿಗೆ, ಮೊನ್ನೆ… “ನೋಡು” ಎಂದು ನನ್ನ ಅಹಂ ಉತ್ತರಿಸಿ ಮುಗಿಸಿತು. (ನೋಡಿ: ವಿಶ್ವ (ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ)

ಕಾವೂರು ವೃತ್ತ ಸುತ್ತಿ, ಅಲ್ಲಿನ ಫಲ(ಪಳ)ನೀರು ದಾರಿ ಹಿಡಿದು ಪಾತಾಳಕ್ಕಿಳಿದೆ. ಹಿಂದೆ ಕಟ್ಟೆಪುರಾಣದಲ್ಲಿ ಇದರ ಉಲ್ಲೇಖ ಮಾಡಿದ್ದಾಗ ಕಾವೂರು ಪ್ರಸನ್ನ “ಅಲ್ಲಿ ಕೆಳಗೆ ಹೋಗಿ ನೋಡಬೇಕಿತ್ತು” ಎಂದದ್ದು ನೆನಪಿತ್ತು. ನಗರದ ಕಬಂಧ ಬಾಹುಗಳು ಅಲ್ಲಿನ ಫಲವತ್ತಾದ ಗದ್ದೆ, ತೋಟ, ನಿರ್ಮಲ ಜಲವನ್ನೆಲ್ಲ ಸೆಳೆದು ನುಂಗಿದಂತಿತ್ತು. ಹುಣಿ, ಬೇಲಿಗಳೆಲ್ಲ ಹೊಸರೂಪ ಪಡೆದು ಗೃಹನಿವೇಶನಗಳ ಪಾಗಾರಗಳಾಗಿವೆ. ಜಲಮೂಲಗಳೆಲ್ಲ ಮನೆಮನೆಯ ಕೊಳೆನೀರ ಕೂಲಿಗೆ ಸಜ್ಜಾಗಿವೆ. ಅಲ್ಲಿನ ಕಚ್ಚಾ ದಾರಿಯಲ್ಲಿ ಗಡಬಡಿಸಿ, ಮಂಜಲ್ ಕಟ್ಟೆ ಹಾದು, ತಿರುಗಿ ಕಾವೂರು ದಾರಿ ಸೇರಿದ್ದೆ. ಲಾರಿ ಲೋಡಿನ ಸಿಮೆಂಟ್ ಹಾಳಾದರೂ ಫಲನೀರು ಬತ್ತಿದರೂ ನನ್ನ ಸೈಕಲ್ ಸರ್ಕೀಟ್ ವ್ಯರ್ಥವಲ್ಲ; ಮಂ-ಬೆಂ ದೀರ್ಘ ಓಟಕ್ಕೆ ಇದಕ್ಕಿಂಥ ಉತ್ತಮ ಪೀಠಿಕೆ ಇಲ್ಲ ಎಂಬ ಸಂತೋಷದಲ್ಲಿ ಕೂಳೂರು, ಕುಂಟಿಕಾನಕ್ಕಾಗಿ ಮನೆ ಸೇರಿದೆ.(೨೧-೨-೨೦೧೫)

೧೧: ಇಂದು ಸೈಕಲ್ ಸರ್ಕೀಟ್ ಹೊರಡುವಾಗಷ್ಟೇ ಶ್ಯಾಮಲಾ ಮಾಧವ ನಿನ್ನಿನ ನನ್ನ ಟಿಪ್ಪಣಿಗೆ ಪ್ರತಿಕ್ರಿಯಿಸಿದ್ದು ಓದಿದ್ದೆ. ಅದಕ್ಕೇ ಏನೋ ಸುಮ್ಮನೆ ಶ್ಯಾಮಲಾರ ಉಚ್ಚಿಲ ಹೊಳೆ ದಾಟಿ, ತಲಪಾಡಿವರೆಗೂ ಹೋಗಿ ಹಾಗೇ ಬಂದೆ. ಸಣ್ಣ ಕುಟುಕು: ತಲಪಾಡಿ ಸೇತುವೆ ದಾಟುವಾಗ ಕೆಳಗಿನ ನೀರಿನ ಸಂಕಟ ನೋಡಲಾಗದೇ ಐದು ಮಿನಿಟು ನಿಂತಿದ್ದೆ.

ಹೆದ್ದಾರಿ ಪಕ್ಕದ ಮಣ್ಣ ದಾರಿಯಲ್ಲಿ ಅದರ ಪಾತ್ರೆಗೆ ಇಳಿದು ಅಸ್ತಮಿಸುವ ಸೂರ್ಯನ ಬೆಳಕಿನಲ್ಲಿ ಜೀವ ಎಂದೋ ಅಸ್ತಮಿಸಿದ ಹೊಳೆ ಮತ್ತದರ ಕಾರಣಗಳನ್ನು ಏಕಕಾಲಕ್ಕೆ ತೋರಿಸುವ ಎರಡು ಚಿತ್ರವಷ್ಟೇ ಹಿಡಿದು ಸೀದಾ ಮನೆ ಸೇರಿಕೊಂಡೆL (೨೬-೨-೧೫)

೧೨: ಸೈಕಲ್ ಸರ್ಕೀಟಿನಲ್ಲಿ ನಿನ್ನೆ ಸಂಜೆ ಕ್ಯಾಮರಾ ತೆಗೆಯುವ ಪ್ರಸಂಗ ಬರಲೇ ಇಲ್ಲ! ಹಾಗೆಂದು ಸವಾರಿ ಸಣ್ಣದೇನೂ ಅಲ್ಲ – ಸುಮಾರು ಎರಡು ಗಂಟೆಯ ಚಕ್ರಾಸನದಲ್ಲಿ ಸುರತ್ಕಲ್ ಮುಟ್ಟಿ ಬಂದಿದ್ದೇನೆ. ಇಂದು ಕುಳಿತು ಬರೆಯುವಾಗ, ಮನದ ವ್ಯಾಪಾರದಲ್ಲಿ, ದಾರಿಯ ಕುರಿತು ಎರಡು, ವ್ಯಕ್ತಿಗಳ ಕುರಿತು ಎರಡು ಟಿಪ್ಪಣಿಸುವ ಒತ್ತಡ ಮೂಡುತ್ತದೆ.

೧. ಬಿಜೈಯ ಕೆಸರಟ್ಟಿಸಿ ಬಸ್ ನಿಲ್ದಾಣದೆದುರಿನ ಅಷ್ಟಪಥ ಕೂಡುರಸ್ತೆಗೆ ಸಂಚಾರ ನಿಯಂತ್ರಣ ದೀಪಗಳು ಬಂದದ್ದೊಂದು ವಿಶೇಷ. ನಿಲ್ದಾಣದೆದುರು ಪುಟ್ಟಪಥ ಬಿಡಿ, ಕಾಂಕ್ರೀಟ್ ಅಂಚಿಗಿಳಿದರೂ ದ್ವಿಚಕ್ರಿಗಳಿಗೆ ಅಪಾಯ ಕಟ್ಟಿಟ್ಟ ಗಂಟು. ಎದುರು ಬದಿಯ ಅಂಗಡಿಗಳ ಅಂಗಳದಲ್ಲಿ ಸಮರ್ಪಕವಾಗಿ ಮೋರಿ ಮುಚ್ಚಲೂ ನರಕಸಭೆಗೆ ದಾರಿದ್ರ್ಯ ಕಳೆದಂತಿಲ್ಲ, ಅದಿರಲಿ. ಇತ್ತ ಇಂದಿನ ಪತ್ರಿಕೆಗಳನ್ನು ನೋಡುವಾಗ, ಹೆಚ್ಚು ಕಡಿಮೆ ನಾನು ಬಿಜೈಯಲ್ಲಿದ್ದ ಸಮಯಕ್ಕೆ ನಂತೂರಿನಲ್ಲಿ ಬಿರಿಕಿತ್ತ ಲಾರಿ ಮೂರು ಜೀವ ತೆಗೆದ ಘಟನೆ ನಡೆದಿತ್ತು. ಒಮ್ಮೆಗೆ ನೂರಾರು ವಾಹನಗಳ ಬಿಜೈ ಕೂಡುರಸ್ತೆಗೆ ಹೋಲಿಸಿದರೆ, ಸಾವಿರಾರು ವಾಹನಗಳ ನಂತೂರಿಗೆ ಕನಿಷ್ಠ ಈ ನಿಯಂತ್ರಣದೀಪಗಳ ಭಾಗ್ಯವಾದರೂ ಎಂದೋ ಬರಬೇಕಿತ್ತು. ಅಷ್ಟಾದರೂ ಆಗಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂಬ ವಿಷಾದ ಆವರಿಸಿಕೊಳ್ಳುತ್ತದೆ.

೨. ಕೂಳೂರು ಸಂಕ ಕಳೆದ ಮೇಲೆ ತುಂಬ ಉದ್ದಕ್ಕಿರುವ ಸರ್ವಿಸ್ ರಸ್ತೆ ಹೆದ್ದಾರಿಯ ಗೊಂದಲ ನಿರಾಕರಿಸುವ ಸೌಮ್ಯ ಸವಾರರಿಗೆ ಹೇಳಿ ಮಾಡಿಸಿದಂತಿದೆ. ನವಮಂಗಳೂರು ಬಂದರದ ಪಾಗಾರದ ನೆರಳಿನಲ್ಲಿ, ಬಹುಶಃ ಬಂದರದವರೇ ಹೆದ್ದಾರಿಯ ದೂಳು ಹೊಗೆಗಳಿಗೆ ಕಿಂಚಿತ್ ತಡೆಯಂತೆಬ್ಬಿಸುತ್ತಿರುವ ಉದ್ಯಾನದ ಮರೆಯಲ್ಲಿ ಉದ್ದಕ್ಕೆ ಪೆಡಲಿದ್ದೆ. ಜನಪ್ರಿಯ ಪಣಂಬೂರು ಕಿನಾರೆಗೆ ಹೋಗುವ ದಾರಿಗೆ ಹೊರಳಿ, ಮೊನ್ನೆಯಷ್ಟೇ ವರ್ಷಾವಧಿ ಜಾತ್ರೆ ಮುಗಿಸಿಕೊಂಡ ನಂದನೇಶ್ವರ ದೇವಳದ ಬಳಿ ಬಲ ಹೊರಳಿ ಬೈಕಂಪಾಡಿ ಮೇಲ್ಸೇತುವೆಯ ಬಳಿ ಮತ್ತೆ ಹೆದ್ದಾರಿ ಸೇರಿದ್ದೆ. ರೈಲ್ವೇ ಮೇಲ್ಸೇತುವೆ ಕಳೆದ ಮೇಲೆ ಕಡಲ ಕಿನಾರೆಯ ಮೀನುಗಾರಿಕಾ ದಾರಿ ಸೇರಿದರಂತೂ ಸುರತ್ಕಲ್ ದೀಪಸ್ತಂಭದವರೆಗೂ ಸವಾರಿ ಅಪ್ಪಟ ವಾಯುವಿಹಾರವೇ. ಆದರೆ ನಿನ್ನೆ, ಹೊಸದಾಗಿ ಬರುತ್ತಿರುವ ಎರಡನೆಯ ಮೇಲ್ಸೇತುವೆಗೆ ಸಂಪರ್ಕ ದಾರಿಯ ಕೆಲಸ ಭರದಿಂದ ನಡೆಯುತ್ತಿದ್ದುದರಿಂದ ಅತ್ತ ನುಸುಳುವ ಹಂಚಿಕೆಯನ್ನು ಹತ್ತಿಕ್ಕಿ, ಹೆದ್ದಾರಿಯಲ್ಲೇ ಮುಂದುವರಿದಿದ್ದೆ. ಈ ವಲಯದಲ್ಲಿ ಪರ್ಯಾಯ ಓಟ ಸಾಧ್ಯತೆಗಳು ಅಪಾರ.

೩. ಬೈಕಂಪಾಡಿ – ಸುರತ್ಕಲ್ ದಾರಿಯಲ್ಲಿ ಹಿಂದೆ ಎಡಕ್ಕೊಂದು ಭಾರೀ ಮರಗಟ್ಟೆ ಸಿಕ್ಕುತ್ತಿದ್ದದ್ದು ನೆನಪಾಯ್ತು. ಈಚೆಗೆ ಅದು ನನ್ನ ಕಣ್ತಪ್ಪಿಸುತ್ತಿರಬೇಕು ಅಥವಾ ಹೆದ್ದಾರಿ ಅಗಲೀಕರಣದಲ್ಲಿ ನಾಶವಾಗಿರಬೇಕು. ನನಗೆ ಆ ಕಟ್ಟೆಗಿಂತಲೂ ಮುಖ್ಯ, ಅದರೆದುರು ಆ ಕಾಲದಲ್ಲಿ ಬಸ್ ಕಾಯುತ್ತ ಒಂದೆರಡು ಬಾರಿ ಸಿಕ್ಕ ಎಚ್. ಮಂಜುನಾಥ ಭಟ್ಟರು. ಮಂಜುನಾಥ ಭಟ್ಟರೆಂದರೆ ಮಂಗಳೂರಿನ ನವಭಾರತದಿಂದ ತೊಡಗಿ, ಉಡುಪಿಯ ಉದಯವಾಣಿಯಲ್ಲಿ ನಿವೃತ್ತನಾಗಿ, ಸದ್ಯ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಪ್ರವೃತ್ತರಾಗಿರುವವರು, ಎಂದು ಸೂತ್ರ ಹಾಡಿದರೆ ಅದು ಭಟ್ಟರಿಗೆ ಮಾಡುವ ಅಪಚಾರ. ಲೆಕ್ಕಕ್ಕೆ ಪತ್ರಕರ್ತನಾದರೂ ಇವರ ಬಗೆಗಣ್ಣು, ಅಪಾರ ಓದು, ಕಾರ್ಯ ಶ್ರದ್ಧೆ, ಮನುಷ್ಯಪ್ರೀತಿಯಂಥ ಗುಣಗಳ ಒರಳಿನಲ್ಲರೆದ ಪಾಕ ಯಾವುದೇ (ಶುಷ್ಕ ಸಭಾ ಕಲಾಪದ ವರದಿಯಾದರೂ) ಲೋಕ ವಿಚಾರಕ್ಕೆ ಘನತೆ, ಗಹನತೆಗಳನ್ನು ತರುತ್ತಿತ್ತು. (ಉದಾ: ದೀವಟಿಗೆಯಲ್ಲಿ ಸಭಾಕ್ಲಾಸ್) ಮೊನ್ನೆ ನಾನು ಬೆಂಗಳೂರಿನ ಸಂಚಿ ಜ್ಞಾನಸರಣಿ ಭಾಷಣಕ್ಕೆ ಹೋಗಿದ್ದಾಗ, ಫೋನಿಸಿ ಭಟ್ಟರನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದೆ.

ಅದೇ ಹಳೆಯ ಪ್ರೀತಿಯಿಂದ ಎಲ್ಲಿಂದಲೋ ಯಾವುದೋ ಬಸ್ಸು ಹಿಡಿದು ಬಂದರು, ಕೇಳಿದರು, ಎಲ್ಲರಂತೆ ಎದ್ದು ಹೋದರು. ಮಳೆ ಮುಗಿದ ಮೇಲಿನ ಹನಿಗಳಂತೆ ನಾವು ನಾಲ್ಕಾರು ಜನ ಇನ್ನೂ ಮಾತು ಮುಂದುವರಿಸಿದ್ದಾಗ ಮಂಜುನಾಥ ಭಟ್ಟರು ಮರಳಿ ಬಂದದ್ದು ಕಂಡು ವಿಚಾರಿಸಿದೆ. “ಡಬ್ಬಿ ಮರೆತು ಬಂದೆ” ಎಂದರು. ಆ ಕ್ಷಣದಲ್ಲಿ ನನಗೆ ಹೊಳೆದದ್ದು ಇಷ್ಟೇ – ಅವರು ಕುಳಿತ ಕುರ್ಚಿಯ ಬಳಿ, ತಂದ ಯಾವುದೋ ಡಬ್ಬಿ ಮರೆತಿರಬೇಕು. ಅಷ್ಟೇ ಚುರುಕಾಗಿ ಅವರು ವಾಪಾಸಾಗುತ್ತಿದ್ದಾಗ ಕಾಳಜಿಯಿಂದಲೇ ಮತ್ತೆ ವಿಚಾರಿಸಿಕೊಂಡೆ, “ಸಿಕ್ಕಿತೇ?” ಪುಣ್ಯಾತ್ಮ “ಹಾಂ, ಹಾಂ” ಎಂದವರೇ ನಡೆದು ಹೋದರು. ಮನೆ ತಲಪಿದ ಮೇಲೆ, ಅಭಯ ಭವನದ ಬಾಗಿಲಿನಲ್ಲಿಟ್ಟಿದ್ದ ಸಾರ್ವಜನಿಕ ವಂತಿಗೆಯ ಡಬ್ಬಿ ತೆರೆದು ಲೆಕ್ಕ ಹಾಕುವಾಗ ನನ್ನ ಮಂದಬುದ್ಧಿ ಝಗ್ಗನೆದ್ದಿತು. ಸಭಾಕಲಾಪಗಳ ಕೊನೆಯಲ್ಲಿ ಅಭಯ “ಸಾರ್ವಜನಿಕ ಪಾಲುಗಾರಿಕೆಗಾಗಿ ಒಂದು ಡಬ್ಬಿ ಇಟ್ಟಿದ್ದೇವೆ. ಆಸಕ್ತರು ಹಣ ಹಾಕಬಹುದು” ಎಂದು ಘೋಷಿಸಿದ್ದ. ಅದೇ ಭಟ್ಟರು ಮರೆತ ಡಬ್ಬಿ! ಮಾತು ಕೇಳಿದ್ದು ಮಾತ್ರವಲ್ಲ, ಸರಣಿಗೆ ಯಥಾನುಶಕ್ತಿ ಧಾತೂ ಕೊಟ್ಟು ಹೋಗಿದ್ದರು.

೪. ಗ್ರಂಥಾಲಯವೆಂದರೆ ಬರಿಯ ಕಪಾಟು ಪುಸ್ತಕಗಳ ಒಟ್ಟಣೆ ಅಲ್ಲ ಎನ್ನುವುದನ್ನು ಸಿದ್ಧಪಡಿಸಲು, ತನ್ನ ಕಾಲೇಜು ಗ್ರಂಥಭಂಡಾರವನ್ನೇ `ದೇಶ’ ಮೀರಿದ ಪ್ರಯೋಗಗಳಿಗೆ ಒಳಪಡಿಸಿ ಮಾಡಿ ಯಶಸ್ವಿಯಾದ ಗೋವಿಂದದಾಸ ಕಾಲೇಜಿನ ಗ್ರಂಥಭಂಡಾರಿ ಬಾಲಕೃಷ್ಣ ಯಾನೆ ಬಾಕೃರನ್ನು `ಹೇಗಿದ್ದೀರಿ’ ಎಂದು ಕೇಳುವ ಸ್ನೇಹಾಚಾರಕ್ಕೆ ಅತ್ತ ನುಗ್ಗಿದ್ದೆ. ಅವರು ನಿವೃತ್ತರಾಗಿ ಆರು ತಿಂಗಳೇ ಆಗಿದೆ ಎಂದು ತಿಳಿದ ಮೇಲೆ ಸಿಗುವುದಾದರೂ ಹೇಗೆ? ಅತ್ರಿ ಬುಕ್ ಸೆಂಟರಿನ ರುಚಿಶುದ್ಧಿ ಮತ್ತು ಪ್ರಾಮಾಣಿಕತೆಗಳನ್ನು ಉಳಿಸಿಕೊಟ್ಟ, ವ್ಯಾವಾಹಾರಿಕ ಸಂಬಂಧ ನಿಸ್ವಾರ್ಥ ವೈಯಕ್ತಿಕ ಗೆಳೆತನಕ್ಕೂ ಬೆಳೆಯಬಹುದೆಂಬುದಕ್ಕೆ ಬಾಕೃವಿನಂಥ ಕೆಲವು ಗ್ರಂಥಪಾಲರ ಕೊಡುಗೆ ಬಹಳ ದೊಡ್ಡದು! (೨೭-೨-೨೦೧೫)

೧೩: ದೇವಂದ ಬೆಟ್ಟದ ದೇವಳವರಳುತ್ತಿದೆ

ನಿನ್ನೆ ಸಂಜೆ ನಾನು ಮಂಗಳೂರಿನಿಂದ, ಸುಂದರರಾಯರು ಜೋಡುಮಾರ್ಗದಿಂದ ಸೈಕಲ್ಲೇರಿ ಹೆದ್ದಾರಿ ಗುಂಟ ಸವಾರಿ ಮಾಡಿ ಸಂಧಿಸಿದ ಸ್ಥಳ ಅರ್ಕುಳ; ಇತ್ತ ಪಡೀಲ್ ಅಡ್ಯಾರಿನಿಂದ ಮುಂದೆ, ಅತ್ತ ತುಂಬೆ ಫರಂಗಿಪೇಟೆಯಿಂದ ಮುಂದೆ. ದಕ್ಷಿಣಕ್ಕೆ ಮೊಗಮಾಡಿದರೆ ನೇತ್ರಾವತಿ ನದಿ ಪಾತಳಿಯಿಂದ ದೇವಂದ ಬೆಟ್ಟದ ಎತ್ತರದಲ್ಲಿ, ಪ್ರಾಕೃತಿಕ ಹಸಿರು ಹರಿದು ತಲೆ ಎತ್ತುತ್ತಲಿರುವ ದೇವಳದ ಹೊಸ ಹಂಚು, ಕಗ್ಗಲ್ಲಿಗೆ ಒಪ್ಪಕೊಟ್ಟ ಮುರಕಲ್ಲ ಗೋಡೆ ಸಂಜೆ ಸೂರ್ಯನ ಕಾವಿನಲ್ಲಿ ಹೆಚ್ಚೇ ಕೆಂಪೇರಿ ಕಣ್ಣು ಕುಕ್ಕುತ್ತಿತ್ತು. ಹೊಳೆ ದಂಡೆ, ಹಾಯಿದೋಣಿಯ ಸವಾರಿ, ವಿಸ್ತಾರ ಮರಳ ಹಾಸಿನ ಹೂಳು ನಡಿಗೆ, ಕಂಗು ತೆಂಗಿನ ತೋಟದೊಳಗಿನ ದಾರಿಯ ಒನಪು, ಪಾವೂರು ಸ್ಟಾಪಿನಿಂದ ದಮ್ಮು ಕಟ್ಟುವ ಡಾಮರು ಚಡಾವು, ಕೊನೆಯಲ್ಲಿ ದೇವಂದ ಬೆಟ್ಟದ್ದೇ ಮತ್ತಷ್ಟು ಕಡಿದಾದ ಕಚ್ಚಾ ಮಾರ್ಗದ ಸರ್ಕಸ್ – ಸುಮಾರು ಅರ್ಧ ಗಂಟೆಯಲ್ಲಿ ನಮ್ಮನ್ನು ಶ್ರೀ ಸೋಮನಾಥೇಶ್ವರನ ಸಾನ್ನಿಧ್ಯಕ್ಕೆ ಮುಟ್ಟಿಸಿತ್ತು.

ಅಸಂಖ್ಯ ಬಿಹಾರಿ ಕೂಲಿ-ಕುಶಲಕರ್ಮಿಗಳು ಸೇರಿದಂತೆ ವಿದ್ಯುಜ್ಜನಕ, ಕಲ್ಲ ಕತ್ತರಿ, ಮಾರಿಹಲಿಗೆಗಳೆಲ್ಲ (ಬುಲ್ ಡೋಜರ್) ಬಿರುಸಿನ ಕೆಲಸ ನಡೆಸಿದ್ದವು. ಪಶ್ಚಿಮೋತ್ತರದ ಅರೆಶಿರ ಕ್ಷೌರದಲ್ಲಿ ಕಚ್ಚಾ ಮಾರ್ಗ ಇಳಿದು ಆಧುನಿಕಗೊಂಡ ಪ್ರಾಚೀನ ಬಾವಿಯನ್ನು ಸೇರಿತ್ತು. ನಿಸ್ಸಂದೇಹವಾಗಿ ಭಾರೀ ವೆಚ್ಚ ಹಾಗೂ ಸಾಹಸಗಳ ಸಾಧನೆ. ಒಳಗೆ ಪೇರಿದ ಕಾಂಕ್ರೀಟ್ ರಿಂಗುಗಳನ್ನು ನಾನು ಎರಡೆರಡು ಬಾರಿ ಎಣಿಸಲು ಪ್ರಯತ್ನಿಸಿ ಸೋತೆ. ಎಣಿಕೆ ನಲ್ವತ್ತೈದು ಅಂದರೆ, ಸುಮಾರು ಅರ್ಧಕ್ಕೂ ಮೊದಲೇ ತಪ್ಪುವಷ್ಟು ಆಳದಲ್ಲಿ ನೀರು ನಗುತ್ತಿತ್ತು. ಬಾವಿಯ ಸಮೃದ್ಧಿ ನೇತ್ರಾವತಿಯ ಸಮಾನತೆಯಲ್ಲೇ ಇದ್ದರೂ ಆಶ್ಚರ್ಯವಿಲ್ಲ. ದೇವಳದ ವಿಸ್ತಾರ ಅಂಗಳದಲ್ಲಿದ್ದ ಹಿಂದೆ ಚುರುಕಾಗಿದ್ದ ಮರಗೆಲಸದ ಕೊಟ್ಟಿಗೆ, ಶಿಲಾಶಿಲ್ಪಶಾಲೆ ಒಂದು ಮುಖ್ಯ ಹಂತದ ಕಾರುಭಾರು ಮುಗಿಸಿದ ವಿರಾಮ ಅನುಭವಿಸುವಂತಿತ್ತು.

ರಾಜ್ಯಾದ್ಯಂತ ಒಳನಾಡು ಮೂರು ದಿನದ ಅನಿರೀಕ್ಷಿತ ಮಳೆ ಎದುರಿಸುತ್ತಿರುವುದಕ್ಕೋ ಎಂಬಂತೆ ಎರಡು ದಿನದಿಂದ ಊರಲ್ಲೇ ಗಾಳಿಜೋರು ಎಂದರೆ, ಇಲ್ಲಿ ವಿಪರೀತ. ಚಬಕಿನ (ಗಾಳಿಮರ) ತೋಪಿನ ನೆರಳು, ಗಾಳಿಯ ತಣ್ಪನುಭವಿಸುತ್ತ ವಠಾರದ ಅಂಚಿನಲ್ಲಿ ಇಬ್ಬರು ಕುಳಿತಿದ್ದರು. ಒಟ್ಟಾರೆ ಕೆಲಸದ ಪ್ರಗತಿ, ಮುಂದಿನ ಹಂತಗಳ ವಿಚಾರಣೆ ಮಾಡಿದೆವು: ಮೊನ್ನೆ ಶಿವರಾತ್ರಿ ಸಣ್ಣದಾಗಿಯೇ ನಡೆಯಿತಂತೆ. ಎಷ್ಟಿದ್ದರೂ ಸ್ವಾಮಿ ತತ್ಕಾಲೀನ ಆಶ್ರಯದಲ್ಲಿದ್ದಾರಲ್ಲವೇ. ಮೇ ತಿಂಗಳ ಕೊನೆಗೆ ಬ್ರಹ್ಮಕಲಶಕ್ಕೆ ದಿನ ನಿಗದಿಯಾಗಿದೆ. ಬಹುಶಃ ವಠಾರದ ಚಬಕಿನ ಮರಗಳೆಲ್ಲ ಉತ್ಸವಕ್ಕೇಳುವ ದೊಂಪಕ್ಕೆ (ಚಪ್ಪರ) ಕಂಬಗಳಾಗಲಿವೆ. ಮತ್ತೇನಿದ್ದರೂ ಬೆಟ್ಟವೆಲ್ಲ ವ್ಯಾಪಿಸಲಿರುವ ಔಷಧೀವನಕ್ಕೆ ಅವು ಜಾಗ ತೆರವು ಮಾಡಲೇಬೇಕಲ್ಲವೇ?? ನಮ್ಮಲ್ಲಿ ಉತ್ತರವಿರಲಿಲ್ಲ. ಸಾವಿರಾರು ವರ್ಷಗಳಿಂದ ಕುರುಚಲು, ಬೀಳಲು ಎಂಬ ಪ್ರಾಕೃತಿಕ ಪ್ರಯೋಗಗಳ ಸರಣಿಯಲ್ಲಿ, ಹೆರೆತ, ಮೇವು, ಸೌದೆ, ಬೆಂಕಿ ಎಂಬಿತ್ಯಾದಿ ಮನುಷ್ಯ ಕಿರುಕುಳಗಳಲ್ಲಿ ಉತ್ತೀರ್ಣವಾಗಿ ಬಂದು ಬೆಟ್ಟವನ್ನೂ ಪರಿಸರವನ್ನೂ ಹಿಡಿದುಳಿದ ಸಸ್ಯರಾಶಿಗಳಲ್ಲಿಲ್ಲದ ಔಷಧೀಗುಣ ಇನ್ಯಾವುದಪ್ಪಾ ಎಂಬ ಹೊಸ ಸಮಸ್ಯೆ ಕಾಡತೊಡಗಿತು.

ಉರಿಯೋಟದ ಕೊನೆಯೆಂದು ಸಮುದ್ರಕ್ಕಿಳಿಯುತ್ತಿದ್ದ ಸೂರ್ಯನನ್ನು ಉಪೇಕ್ಷಿಸಲಾಗದೆ ನಾವೂ ಕಚ್ಚಾದಾರಿಯಲ್ಲಿ ಜರಜರ ಜಾರಿ, ನುಣ್ಣನೆ ಡಾಮರಿನಲ್ಲಿ ಲಗಾಮು ಕಡಿದವರಂತೆ ಹಾರಿ, ತೋಟದೊಳಗಿನ ಬಾಗುಬಳಕಿನ ತಗ್ಗುದಿಣ್ಣೆಗಳಲ್ಲಿ ಉಯ್ಯಾಲೆಯಾಡಿ, ಉಸುಕಿನಲ್ಲಿ ಕುಸಿದು, ನೀರಂಚಿನಲ್ಲಿ ಹಾಡಿದೆವು – ಅಂಬಿಗಾ ನಾ ನಿನ್ನ ನಂಬಿದೇ. ತಲಾ ರೂ ಐದರ ಹಾಸಲಿಗಷ್ಟೇ ಆ ದಡ-ಈ ದಡ ಮಾಡುವ ಸಾಯ್ಬ ಕೊನೆಯಲ್ಲಿ ಮರೆಯದೇ ಹೇಳಿದ “ಮೇ ತಿಂಗಳಲ್ಲಿ ನಮ್ಮ ಬ್ರಹ್ಮಕಲಶಕ್ಕೆ ಬರಲು ಮರೆಯಬೇಡಿ!” ಮೊನ್ನೆ ಆದಿತ್ಯವಾರವಷ್ಟೇ ಸಾವಿರ ಸಾವಿರ ಸಂಖ್ಯೆಯಲ್ಲಿ, ನೆಹರೂ ಅಲ್ಲಲ್ಲ, ಕೇಂದ್ರ ಮೈದಾನಿನಲ್ಲಿ “ನಾವೆಲ್ಲ ಒಂದು” ಎಂದು ಭುಜ ಹಾರಿಸಿದವರು ಇದನ್ನು ಕೇಳಿದ್ದರೆ ಪರಿಣಾಮವೇನಾಗುತ್ತಿತ್ತೋ ಎಂದು ಮನಸ್ಸಿನಲ್ಲೇ ನಗುನಗುತ್ತ ಎದುರುಗಾಳಿಯಲ್ಲಿ, ಪೂರ್ಣಗೊಂಡ ಕತ್ತಲಲ್ಲಿ ಪೆಡಲೊತ್ತುತ್ತ ಮನೆ ಸೇರಿದೆ. (೧-೩-೨೦೧೫)

೧೩: ಕ್ಕೊಂದು ಕೊಸರು:ಸಿದ್ಧತೆ

ಇಂದು ಕಾವೂರು ಪ್ರಸನ್ನ, ಅಶೋಕ್ ರಾಜಪುರೋಹಿತ್ ಮತ್ತು ನಾನು ಬೆಳಿಗ್ಗೆ ಆರು ಗಂಟೆಗೆ ಸೈಕಲ್ಲ್ ಏರಿ ಮಲ್ಪೆ ಮುಟ್ಟಿ ಮರಳಿದ್ದೇವೆ. ಸುಮಾರು ನೂರಾಮುವತ್ತು ಕಿಮೀ ಓಟಕ್ಕೆ ಅಭಿನಂದನೆ ಸಲ್ಲಿಸುವಂತೆ ಈಗ ನಾಲ್ಕು ಹನಿ ಮಳೆಯೂ ಬಂದಿದೆ. ಹೆಚ್ಚಿನ ವಿವರಗಳಿಗೆ ನೋಡಿ: ಬೆಂಗಳೂರ ದಾಳಿಗೆ ಮಂಗಳೂರ ದಂಡು ಸಜ್ಜುಗೊಳ್ಳುತ್ತಿದೆ. (೩-೩-೨೦೧೫)

೧೪: ಸೈಕಲ್ ಹೊರಲಾಗದ ಹೊರೆ

ಮಹಾಯುದ್ಧದ (ಬೆಂಗಳೂರು ಸೈಕಲ್ ಮಹಾಯಾನ) ವಿಜಯದೊಡನೆ ಕವಾಯತು ಮರೆತ ಕಾಸ್ತಾರನಾಗಬಾರದೆಂಬ ಎಚ್ಚರದಲ್ಲಿ ಒಂದೆರಡು ಸೈಕಲ್ ಸರ್ಕೀಟೇನೋ ಹೋಗಿದ್ದೆ. ಬರವಣಿಗೆ ಕೇವಲ ಪದ ಕಸರತ್ತಾಗಬಾರದೆಂದು ಸುಮ್ಮನಿದ್ದೆ! ಇಂದು ಕದ್ರಿಗುಡ್ಡೆ, ಬೊಂದೇಲ್, ಕಾವೂರಿಗಾಗಿ ಬಜ್ಪೆ ಪೇಟೆಯ ದಾರಿ ಹಿಡಿದಿದ್ದೆ. ಕೆಲವು ತಿಂಗಳ ಹಿಂದೆ ಇಲ್ಲೇ ಅಲೆಮಾರಿಯ ಟಿಪ್ಪಣಿಯಲ್ಲಿ ವಿಮಾನ ನಿಲ್ದಾಣಕ್ಕೆ ಆದ್ಯಪಾಡಿ ದಾರಿಯನ್ನು ಪರ್ಯಾಯ ದಾರಿಯಾಗಿ ರೂಪಿಸುತ್ತಿರುವ ಕುರಿತು ಬರೆದಿದ್ದೆ. ಅಲ್ಲಿ ತೋಡಿದ ಬಹುತೇಕ ಮಣ್ಣೆಲ್ಲ ಮಳವೂರ ಗದ್ದೆ ಬಯಲನ್ನು `ವರ್ಣಮಯವಾಗಿ ತುಂಬುತ್ತಿರುವುದು ಕಾಣಿಸಿತು. ಮತ್ತೆ ಆ ದಾರಿ ಈ ಹಳೆಯ ಬಜ್ಪೆ ದಾರಿಯಿಂದ ಬಹುವಿಸ್ತಾರದ ಹೊಸದೇ ಕವಲು ತೆರೆದುಕೊಂಡು, ಭರ್ಜರಿ ಕಾಮಗಾರಿಯನ್ನು ನಿರೂಪಿಸಿತು. ಗುಡ್ಡೆಯನ್ನು ಯದ್ವಾತದ್ವಾ ಸೀಳಿ, ಬಗಿದು ಮೂಡುತ್ತಿರುವ ದಾರಿಯಾದರೋ ವಿಮಾನನಿಲ್ದಾಣಕ್ಕೆ ಎರಡನೆಯದು ಎಂದಾಲೋಚಿಸುವಾಗ ಗಾಬರಿಯಾಗುತ್ತದೆ. ಮುಂದೆ ಬಜ್ಪೆ ಪೇಟೆಯತ್ತಣ ಗುಡ್ಡೆ ಹತ್ತಿ, ಪೊರ್ಕೋಡಿ ದಾರಿಯಲ್ಲಿಳಿದು, ಪೇಜಾವರದ ಕವಲಿನಲ್ಲಿ ಕೂಳೂರಿನತ್ತ ಸಾಗಿದಂತೆ ಇನ್ನೂ ಒಂದು ಅದ್ಭುತ ಕಂಡೆ. ಪಶ್ಚಿಮಘಟ್ಟದಲ್ಲಿ ಅಜರಾಮರವಾಗಿ `ತಿಂದುಕೊಂಡು’ ಬಿದ್ದಿರುವ ಕನಸನ್ನು ಊರ್ಜಿತದಲ್ಲಿಡಲು ಕುದುರೆಮುಖ ಗಣಿಗಾರಿಕಾ ಸಂಸ್ಥೆ, ಈ ಮಂಗಳೂರಿನ ಕೊನೆಯಲ್ಲಿ ಬೀಡುಕಬ್ಬಿಣದ ಕಾರ್ಖಾನೆಯ ಹುಸಿಬಸಿರು ಹೊತ್ತಿತ್ತು.

ಆಗ ಅದಕ್ಕೆಂದು ರಚಿಸಿದ ಕಿಮೀಗಟ್ಟಳೆ ಸಾಗಣಾಪಟ್ಟಿಯ ವ್ಯವಸ್ಥೆ ಇಂದು ತುಕ್ಕು ಹಿಡಿಯುತ್ತಾ ಸಾರ್ವಜನಿಕ ಹಣದ ಅಪಾಪೋಲಿಗೆ ಉದಾಹರಣೆಯಾಗುತ್ತಾ ಇರುವುದು ಗಮನಿಸಿದವರಿಗೆಲ್ಲ ತಿಳಿದ ಸತ್ಯ. ಅದಕ್ಕೆ ಸಮನಾಗಿ ಈಚಿನ ವರ್ಷಗಳಲ್ಲಿ ಎಮ್ಮಾರ್ಪೀಯೆಲ್ಲಿನ ಪೆಟ್ರೋ-ಉತ್ಪನ್ನಗಳನ್ನು ಬಂದರ್ ಮುಟ್ಟಿಸುವ ಕೊಳವೆ ಸಾಲು ಹರಿಯತೊಡಗಿತ್ತು. ಈಗ ಅದನ್ನು ಸಾರ್ವಕಾಲಿಕವಾಗಿ ರಕ್ಷಿಸಲು ಗುರುಪುರ ನದಿಯ ಉತ್ತರ ದಂಡೆಯನ್ನೇ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ. ಯಂತ್ರಸೌಕರ್ಯ, ಇಂಜಿನಿಯರಿಂಗ್ ಪರಿಣತಿಗಿದೆಲ್ಲ ತೃಣಮಾತ್ರದ ಸಾಧನೆಯಾಗಿಯೇ ತೋರಬಹುದು. ಆದರೆ ಯುಗಾಂತರಗಳಿಂದ ಪ್ರಕೃತಿ ನಿಲ್ಲಿಸಿದ ಗುಡ್ಡೆ, ಕೊರೆದ ಹೊಳೆಪಾತ್ರೆ, ಅಲ್ಲೆಲ್ಲ ವಿಕಸಿಸಿದ ಪ್ರಾಕೃತಿಕ ಸತ್ಯಗಳನ್ನೂ (ಬರಿಯ ಜೀವಜಾಲದ ಮಾತಲ್ಲ. ನೀರಿನ ಸೆಲೆಗಳು, ಭೂಮಿಯ ಸ್ಥಿರತೆ ಇತ್ಯಾದಿ ಸೇರಿ) ಕಾಣುವಷ್ಟು ಅಂತಃದೃಷ್ಟಿಯನ್ನು ಆಡಳಿತ ವ್ಯವಸ್ಥೆ ಖಂಡಿತವಾಗಿಯೂ ಇಟ್ಟುಕೊಂಡಿಲ್ಲವಲ್ಲ ಎಂಬುದು ನನ್ನ ಹೆದರಿಕೆ. ಇದಕ್ಕೆ ಸ್ಪಷ್ಟ ನಿದರ್ಶನ ನೇತ್ರಾವತಿ ನದಿ ತಿರುವು ಅಥವಾ ಎತ್ತಿನಹೊಳೆ ಅಥವಾ ಬಯಲು ಸೀಮೆಗೆ ಕುಡಿ-ನೀರುಒದಗಿಸುವುದು ಎಂಬಿತ್ಯಾದಿ ಹೊತ್ತಿಗೊಂದು ಕಳ್ಳ ಹೆಸರನ್ನು ಹೇಳುವ ಮಹಾಯೋಜನೆ. ಈಗಾಗಲೇ ಸಂಭವಿಸಿರುವ ಅನಾಹುತಗಳಿಗೆ ಮೂಡಬಿದ್ರೆ ದಾರಿಯ ಕೆತ್ತಿಕಲ್ಲು, ಎಮ್ಮಾರ್ಪೀಯೆಲ್ ಸುತ್ತಮುತ್ತಣ (ಜೋಕಟ್ಟೆ ಇತ್ಯಾದಿ) ಜನವಸತಿ, ಫಲಿಮಾರಿನ ಉಷ್ಣವಿದ್ಯುತ್ ಸ್ಥಾವರದ ಆಸುಪಾಸಿನ ಕೃಷಿ ಭೂಮಿಗಳನ್ನು ತೆರೆದ ಮನಸ್ಸಿನಿಂದ ನೋಡಿದರೆ ಸಾಕು. ನನ್ನ ಸೈಕಲ್ ಸರ್ಕೀಟಿನ ಮಿತಿಗಿದು ಹೊರಲಾರದ ಹೊರೆ ಎಂದುಕೊಂಡು ಸರ್ರನೆ ಕೂಳೂರು ಸಂಕ ದಾಟುತ್ತಿದ್ದಂತೆ ಸೂರ್ಯನಿಗೆ ವಿದಾಯ ಹೇಳಿ, ಬಿಜೈಗಾಗಿ ಮನೆ ಸೇರಿಕೊಂಡೆ. (೨೬-೩-೨೦೧೫)

೧೫: ಸೈಕಲ್ ಇಂದು ಶಾರ್ಟ್ ಸರ್ಕೀಟಿಗೊಳಗಾಯ್ತು

ಕದ್ರಿ ಮಾರುಕಟ್ಟೆಯಿಂದ ನಂತೂರಿನತ್ತ ನಡೆದಿರುವ ಕಾಂಕ್ರೀಟೀಕರಣದ ಫಲವಾದ ವಾಹನ ಗೊಂದಲವನ್ನು ಹಗುರವಾಗಿ ನಿವಾರಿಸಿ ಪದವಿಗೆ ಬರುವಾಗ ಮೊನ್ನೆಯಷ್ಟೇ ಸುದ್ದಿಯಾದ `ಸಂಗೀತ ಕಾರಂಜಿ’ ನೆನಪಾಯ್ತು. ನೇರ `ಜಿಂಕೆಪಾರ್ಕ್’ಗೆ ಹೋದೆ. ಆರೆಂಟು ತಿಂಗಳ ಹಿಂದಷ್ಟೇ `ಸೈಕಲ್ ಪಾರ್ಕ್’ಗೆ ಅಡಿಗಲ್ಲು ಹಾಕಿದ ಸಮಾರಂಭಕ್ಕೆ ಅವಕಾಶ ಮಾಡಿಕೊಟ್ಟ ಸುಮಾರು ಐವತ್ತಡಿ, ಅಯ್ವತ್ತಡಿ ಸ್ಥಳದ ಒಳ ಕೇಂದ್ರದಲ್ಲಿ ಬಾಡುಮಾಲಾಲಂಕೃತ `ಸಂಗೀತ ಕಾರಂಜಿ’ಯ ಅಡಿಗಲ್ಲು ಶೋಭಿಸಿತ್ತು.

ಹಿಂದೆ ಉಪಾಹಾರ ತಿಂದು ಎಸೆದ ತಟ್ಟೆ, ಲೋಟ ಕಸಗಳನ್ನು (ಎಲ್ಲ ಪರಿಸರಸ್ನೇಹೀ ಕಾಗದದ್ದೇ ಇದೆ ಎಂದು ಹೊಗಳೋಣವೇ?) ಬುಲ್ಡೋಜ್ ಮಾಡಿ ಕರೆಗೆ ಒತ್ತರಿಸಿದ್ದರು. ಬಹುಶಃ ಅದು ಹೊಸ ಅಭ್ಯಾಗತರುಗಳ ಕಣ್ಣಿಗೆ ಕಿಸರಾಗದಂತೆ ಶಾಮಿಯಾನಕ್ಕೆ ಸುಂದರ ಉದ್ಯಾನವನದ ದೃಶ್ಯಗಳೇ ಇರುವ ಪಕ್ಕದ ಬಟ್ಟೆಗಳನ್ನೂ ಕಟ್ಟಿರಬೇಕು. ಸಹಜವೇ ಬಿಡಿ, ಊರೆಲ್ಲಾ ಕಸದಕುಪ್ಪೆಯೇ ಆಗಿರುವಾಗ ಇಲ್ಲಿಂದ ತೆಗೆಸಿದರೂ ಹಾಕುವುದೆಲ್ಲಿಗೆ? ಈಚಿನ ಕಲಾಪವೂ ಅಷ್ಟೇ `ಸಮೃದ್ಧ’ವಾಗಿ ನಡೆದಿರಬೇಕೆಂಬಂತೆ ಆ ಅಂಗಳದಲ್ಲಿ ಹೊಸ ಕಸ ಪೇರಿತ್ತು. ಸೈಕಲ್ ಪಾರ್ಕ್ ಬರುತ್ತದೆ, ಸಂಗಾತಿಗಳು ದೊರಕುತ್ತಾರೆ ಎಂದೆಲ್ಲ ಕನಸು ಕಂಡ ನನ್ನ ಸೈಕಲ್ ನಿರಾಶೆಯಲ್ಲಿ ಕಣ್ಣು ಕತ್ತಲೆ ಬಂದು, ಹೊಸ ಅಡಿಪಾಯದ ಕಲ್ಲಿಗೆ ಮೈಕೊಟ್ಟು ಸುಧಾರಿಸಿಕೊಳ್ಳುತ್ತಿತ್ತು. ಆಗ ಆಚಿನ ಪೊದರು, ಕಸ, ಮುಳ್ಳಕಂಟಿಗಳೆಡೆಯಿಂದ “ಅಷ್ಟಕ್ಕೇ ಹೀಗಾದರೆ ನಮ್ಮನ್ನು ಕೇಳಿದರೆ ಹೇಗೋ” ಎಂದು ವಿಷಣ್ಣ ನಗೆಯೊಡನೆ ಯಾರೋ ಗೊಣಗಿದಂತೆ ಕೇಳಿಸಿ, ಸೈಕಲ್ ಅತ್ತ ಓಡಿತು.

ಪೊದರುಗಳ ಮರೆಯಲ್ಲಿ ಮಂಟಪ, ವೀರಗಲ್ಲು, ಜೋಡು ಜಾರುಬಂಡೆ, ಪಡಿಯಿಲ್ಲದ ದ್ವಾರಸ್ತಂಭ, ಕುಸಿದು ಬಿದ್ದ ಪಾಗಾರ, ತುಕ್ಕು ಹಿಡಿದ ಬೇಲಿ ಒಂದೊಂದರ ಮೂಕ ಭಾವವೂ ಅದೇ ಮಾತು, ಅದೇ ನಗುವಿನ ಅಭಿವ್ಯಕ್ತಿಯಾಗಿತ್ತು. ಇದ್ದದ್ದರಲ್ಲಿ ತೃಪ್ತ ಅಲ್ಲೇ ಆಚೆಗೆ ಇದ್ದ ಸಾಕಷ್ಟು ದೊಡ್ಡ ಸಿಮೆಂಟ್ ಕೊಳ. ಹಿಂದೆ ಇದು ನಲ್ಲಿ ಸಂಪರ್ಕದಲ್ಲಿ ನೀರು ಕಂಡದ್ದಿರಬಹುದು, ಇಂದು ಬೇಸರವಿಲ್ಲದೆ ಎಂದೋ ಬಂದ ಮಳೆಯ ನೆನಪನ್ನು ಧಾರಾಳ ಉಳಿಸಿಕೊಂಡಿದೆ. ಹಿಂದೆ ಇದು ಮೊಸಳೆ ಕಂಡದ್ದಿರಬಹುದು, ಈಗ ಸೊಳ್ಳೆಯಾದರೂ ಇದೆಯಲ್ಲ ಎಂದದರ ಸಮಾಧಾನ! ಜಿಂಕೆ ಉದ್ಯಾನ, ಉರಗ ಉದ್ಯಾನ, ಮಕ್ಕಳ ಗ್ರಂಥಾಲಯ, ಕಿರು ಪ್ರಾಣಿಸಂಗ್ರಹಾಲಯ, ಜಿಲ್ಲಾ ರಂಗಮಂದಿರ, ಸೈಕಲ್ ಪಾರ್ಕ್, ಈಗ ಸಂಗೀತ ಕಾರಂಜಿ ಎಂದಷ್ಟೇ ನನ್ನ ಬಡ ನೆನಪಿನ ಪಟ್ಟಿ ನಿಲ್ಲುತ್ತದೆ. ಆದರೆ ಈ ಸ್ಥಳದ ಅಡಿಗಲ್ಲು ಆಕರ್ಷಣೆಯ ನಿಜ ಲೆಕ್ಕವನ್ನು ಯಾರಾದರೂ ನಗರಸಭೆಯಿಂದ ಮಾಹಿತಿ ಹಕ್ಕಿನಲ್ಲಿ ಪಡೆದದ್ದೇ ಆದರೆ ಅದು ನಿಶ್ಚಿತವಾಗಿ ಲಿಮ್ಕಾ ಪುಸ್ತಕದಲ್ಲಿ ಜಾಗಪಡೆದೀತು!

ನಿರಾಶೆಯಲ್ಲಿ ತಿರುಗಿ ನಂತೂರಿನತ್ತ ಸಾಗುವಾಗ ಹೆದ್ದಾರಿಯ ಆಚೆ ಬದಿಗಿದ್ದ ಸ್ಕೇಟಿಂಗ್ ರಿಂಕಿನಲ್ಲೇನೋ ಚಟುವಟಿಕೆ ಕಾಣಿಸಿತು. ನೆನಪಿದೆಯಲ್ಲಾ – ಇಲ್ಲೇ ಹಿಂದೆ ಬರೆದ ಮಹೇಶ್ ಕುಮಾರ್ ಪ್ರಸಂಗ. ಇಂದು ಯಾವುದೋ ಹೊಸಮುಖ ಒಂದಷ್ಟು ಎಳೆಯರನ್ನು ಗುಡ್ಡೆ ಹಾಕಿಕೊಂಡು ಸ್ಕೇಟ್ಸ್ ಇಲ್ಲದೆ ಪ್ರಾಥಮಿಕ ವ್ಯಾಯಾಮ ಮಾಡಿಸುತ್ತಿತ್ತು. ಅಂಗಳದ ಅಂಚಿನಲ್ಲೆಲ್ಲ ಮಕ್ಕಳ ಪೋಷಕರು ಗಲಗಲ ಮಾಡಿಕೊಂಡು ಸಂಭ್ರಮದಲ್ಲಿದ್ದರು. ವಿಚಾರಿಸಿದೆ – ಮಕ್ಕಳ ಸರ್ವಾಂಗೀಣ ಅಭ್ಯುದಯದ ಕಾಳಜಿ ಹೊತ್ತ ಪೋಷಕರೇ ಸೇರಿ ಕಟ್ಟಿಕೊಂಡ ಕೂಟವಂತೆ. ಹೈದರಾಬಾದಿನಿಂದ ಸ್ಕೇಟಿಂಗಿನ ಶಿಕ್ಷಕನ ಆಮದಾಗುತ್ತಿದೆಯಂತೆ. ಬೇಸಿಗೆ ಶಿಬಿರದೊಡನೆ ಖಾಯಂ ತರಗತಿಗಳ ಆಶಯ ಪಲ್ಲವಿಸಲಿದೆಯಂತೆ. ಮಂಗಳ ಕ್ರೀಡಾಂಗಣದ ಸಮೀಪವೆಲ್ಲೋ ತನ್ನ ತರಗತಿಗಳನ್ನು ಮುಂದುವರಿಸಿಯೇ ಇರುವ ಮಹೇಶ್ ಕುಮಾರ್ ಹಿತ್ತಲಗಿಡ, ಮದ್ದಿಗಾಗುವುದಿಲ್ಲವೇ? ಸ್ಥಳೀಯವಾಗಿ ಇನ್ನೊಬ್ಬಾಕೆ ಮಹಿಳೆಯೂ ಮಕ್ಕಳನ್ನು ತರಬೇತುಗೊಳಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದು ನನ್ನ ನೆನಪಿನಲ್ಲಿದೆ. ಅವರೀಗಲೂ ತರಬೇತಿ ರಂಗದಲ್ಲಿದ್ದಾರೆ ಎಂದೂ ಕೇಳಿಬಂತು. ಅವರೂ ನಮಗೆ ವರ್ಜ್ಯವೇ? ಆಗಲಿ, ಹೈದರಾಬಾದಿನ ದೂರದ ಬೆಟ್ಟ ಹತ್ತಿರ ಬಂದಾಗಲೂ ನುಣ್ಣಗೇ ಇರಲಿ ಎಂದು ಆಶಿಸುತ್ತಾ ಕಿರು ಓಟವಷ್ಟೇ (ಶಾರ್ಟ್ ಸರ್ಕೀಟ್) ಸಾಧ್ಯವಾದ್ದಕ್ಕೆ ಸೂರ್ಯನಿಗೆ ಎರಡು ಬೈ-ಕೊಟ್ಟು ಮನೆ ಸೇರಿದೆ. (೨೮-೩-೨೦೧೫)

೧೬: “ಸೈಕಲ್ ಸರ್ಕೀಟ್ ಖೈದಾ?”

ಹಾಗೆಂದು ನಿರಾಶಾ ಕೇಳಿದಳು. “ಇಲ್ಲಿಲ್ಲ. ಬೆಂಗ್ಳೂರು ಓಡ್ಬಂದ್ಮೇಲೆ ಅವನ್ಗೆ, ಅದೇ ಸೈಕಲ್ಗೆ, ಏನೇನೋ ಖಾಯಿಲೆ ಪಾಪಾ….” ಆಶಾ ಪೂರ್ತಿ ಮಾಡುವ ಮೊದಲು…
“ಅದೇ ಸ್ವಲ್ಪ ಸ್ನಾಯು ಸೆಳೆತ (ಬ್ರೇಕ್ ರಬ್ಬರ್) ಅಂತಿದ್ದೇ.” “ಹೂಂ, ಇತ್ತು. ಸವಾರ ಉಡಾಫೆ ಮಾಡ್ದ. ಅದು ಮೂಳೆ ಸವೆತಕ್ಕೆ (ರಿಮ್ ಇರೋಶನ್) ಕಾರಣವಾಯ್ತು.”
“ಓ, ಅಡ್ಮಿಟ್ ಮಾಡಿದ್ಯಾ? ಬೆಂಗ್ಳೂರಲ್ಲಾ ಇಲ್ಗೇ ಬಂದಿದ್ದಾನಾ?” “ಇಲ್ಲಪ್ಪಾ, ಮಂಗ್ಳೂರಿಗೆ ಬಂದಾಗಿತ್ತು. ಇನ್ನೂ ಬೆಂಗ್ಳೂರು ಗಾಳೀನೇ ನಡೀತಿದೆ ಅಂತ ಜಂಬ್ದಲ್ಲೇ ಕಳದ್ವಾರ ಸರ್ಕೀಟ್ ಹೋಗಿದ್ದ.” “ಮತ್ತೆ ಬರಿಲೇ ಇಲ್ಲಾ!” “ಏನ್ ಬರ್ಯೋದ್ ಹೇಸ್ಗೇ. ಎಮ್ಮಾರ್ಪೀಯೆಲ್ ವಿಸ್ತರಣೆ ಮೇಲೆ ವಿಸ್ತರಣೆಯಾಗ್ತಲೇ ಇದೆ. `ಜನಪ್ರತಿನಿಧಿಗಳು’ ಮತ್ತು ಕಾರ್ಖಾನೆ ಉಗ್ದದ್ದನ್ನ ನೆಕ್ಕೋ ಬಹುತೇಕ ಮಾಧ್ಯಮಗಳು ಭಾರತದ ಭವ್ಯ ಭವಿಷ್ಯತ್ತಿನ ಉಜ್ವಲ ತಾರೆ ಎಂದೇ ಅದನ್ನು ಹೊಗಳ್ತಲೇ ಇದ್ದಾರೆ. ಕಾರ್ಖಾನೆ ಸುತ್ತಣ ಜನಜೀವನದ ದುರಂತಗಳಿಗೆ ಧ್ವನಿಯೇ ಸಿಕ್ತಾ ಇಲ್ಲ….” “ಏಯ್, ಸಾಕ್ನಿಲ್ಸೇ! ನಾನು ಸೈಕಲ್ ಕೇಳಿದ್ರೇ ನಿನ್ನ ಪರಿಸರದ ಪಾಠ ಯಾರಿಗ್ಬೇಕು.” “ಇಲ್ಲ ಮಾರಾಯ್ತೀ, ಅದನ್ನೇ ನೋಡಕ್ಕೇಂತ ಹೆದ್ದಾರಿಗುಂಟ ಓಡಿ, ಸುರತ್ಕಲ್ಲಿನಲ್ಲಿ ಹೊರಳಿ ಹಿಂದೂಸ್ತಾನ್ ಪೆಟ್ರೋಲಿಯಮ್ಮಿನವರ ಗೇಟ್ವರೆಗೂ ಹೋಗಿದ್ದಾ.” “ಆಮೇಲೇನಾಯ್ತು? ದಾರಿಲೇ ಕುಸುದು ಬಿದ್ನಾ?” “ತಡಿಯೇ. ಇನ್ನೂ ಮುಂದೆ ಹೋಗಿ, ಜೋಕಟ್ಟೆಗೆ ಒಳದಾರಿ ಹಿಡಿದು ಸುತ್ತಿ ನೋಡಬೇಕೂಂತಿದ್ದ. ಕಾವಲ್ಗಾರ ಹೇಳ್ದ, `ಪಾಸಿಲ್ಲದವರಿಗೆ ಒಳಗ್ ಬಿಡಲ್ಲ. ಸ್ವಲ್ಪ ಹಿಂದೆ ಹೋಗಿ, ಜೋಕಟ್ಟೆಗೆ ನೇರ ಕಾಂಕ್ರೀಟ್ ರೋಡಿದೆ.’” “ಹಹ್ಹಹ್ಹಾ! ಜೋಲ್ಮುಖಾ ಹಾಕ್ಕೊಂಡು ಜೋಕಟ್ಟೆಗೆ….” “ಜೋಕಟ್ಟೆ ಇವನು ಎಷ್ಟೂ ಕಂಡಿದ್ದಾನೆ. ಮತ್ತಷ್ಟರಲ್ಲಿ ದಿನದ ಅಂಪಾಯರ್, ಅದೇ ಸೂರ್ಯ, ಸಮಯ ಮುಗೀತಾ ಬಂತು ಎಂದ. ಎಂದಿನಂತೆ ಮತ್ತೆ ಹೆದ್ದಾರಿ ಸೇರಿ….” “ಅಯ್ಯೋ ಇಷ್ಟುದ್ದಕ್ಕೆ ಕಳೆದ ವಾರದ ಕತೆ ಹೇಳಿದ್ದಾ? ಅವನ ಖಾಯಿಲೆ, ಒಂದು ವಾರವಾದರೂ…”“ಅದ್ಕೇ ಬಂದೆ. ಮಾರಣೆ ದಿನ ನೋಡ್ತೇನೆ, ಅವನು ಎದುರು ಚಕ್ರದ ಗಾಳಿ ಬಿಟ್ಟು ಕೂತಿದ್ದ. ಏನ್ ಮುಳ್ಳೋ ಆಣಿಯೋಂತ ಜ್ಯೋತಿ (ಸೈಕಲ್ ಕಂ) ಆಸ್ಪತ್ರೆಗೆ ಹೋಯ್ತು. ಡಾ| ಕಾಸಿಂ (ಮೆಕಾನಿಕ್) `ಅಡ್ಮಿಟ್ ಮಾಡಿ. ಬದ್ಲೀ ಮೂಳೆ (ರಿಮ್ಮು) ಇಂಪೋರ್ಟ್ ಮಾಡಿ, ಹಾಕಿ ಉಸಾರ್ ಮಾಡಾಣಾ. ಒಂದ್ವಾರ ಟೇಂ ಬೇಕು’ ಅಂದ್ರು.” “ಕಳೀಲಿಲ್ವಾ ಒಂದ್ವಾರ?” “ಹೂಂ ಅದ್ಕೇ ಇವತ್ತು ವಿಚಾರಿಸ್ದೆ. ಜ್ಯೋತಿಯವರು `ಇನ್ನೂ ಬರ್ಲೇ ಇಲ್ಲ ನೋಡಿ. ಬಂದ ಕೂಡ್ಲೇ ತಿಳಿಸ್ತೇವೆ. ನಾವೀಗ ಗಾಳಿ ನಿಲ್ಲಿಸಿ ಕೊಡ್ತೀವಿ’ ಅಂತ ಕೊಟ್ಟೇಬಿಟ್ರು.” “ಅಂದ್ರೇ ಮತ್ತೆ ಹಾಗೇ ಇವತ್ತು ಸರ್ಕೀಟಿತ್ತಾ?” “ಅಂಪಾಯರ್ ಸೀಟೀ ಕೇಳ್ತಾ ಇತ್ತು. ಹಾಗೇ ಸುಮ್ನೇ ಬಂದರ್, ಬೋಳಾರ, ಬತ್ತೇರಿಗಾಗಿ ಮನೆ ಸೇರಿದೆ, ಅಷ್ಟೆ.” (೭-೪-೨೦೧೫)

೧೭: ಗೃಹಕೃತ್ಯದ ಓಡಾಟಗಳು?

ಮಡಚುವ ಸೈಕಲ್ಲಿನ ವೆಂಕಟ್ರಮಣ ಉಪಾಧ್ಯರು ತನ್ನ ಹೊಸ ಆವಿಷ್ಕಾರ ತಂದರು – ಹೆರೆಮಣೆ ಅಥವಾ ಕೆರೆಮಣೆ. (ಅದರ ವಿವರಗಳಿಗೆ ನೋಡಿ: ಉಪಾಧ್ಯ ಕೆರೆಮಣೆ ೨೦೧೫) ಅದರ ಒಂದು ಮಾದರಿಯನ್ನು ಅವರ ಅಣ್ಣನ ಮಗ – ಡಾ| ಮನೋಹರ ಉಪಾಧ್ಯರಿಗೆ ತಲಪಿಸುವುದು ಇಂದಿನ ಸೈಕಲ್ ಸರ್ಕೀಟಿನ ಮೊದಲ ಚರಣ ಎಂದು ಹಳೆಮೆಟ್ಟು (Helmet) ಏರಿಸಿ, ಪ್ಯಾಂಟ್ ಕಾಲು ಸುತ್ತುತ್ತಿದ್ದೆ. ಗೆಳೆಯ ನಿರೇನ್ ಜೈನ್ ಪತ್ನೀಪುತ್ರ ಸಹಿತ ನಮ್ಮ ಜೈವಿಕ ಅನಿಲ ಸ್ಥಾವರ ನೋಡಲು ಬಂದರು. (ನೋಡಿ: ಮನೆಮನೆಯಲ್ಲಿ ಜೈವಿಕ ಅನಿಲ ಸ್ಥಾವರ) ಅವರನ್ನೂ ಬೀಳ್ಕೊಳ್ಳುವಾಗ ದೀರ್ಘ ಓಟಕ್ಕೆ ಸಮಯ ಮೀರಿತ್ತು.

ನಂತೂರಿಗೇರುವಲ್ಲಿ ಅಲಾಪಿಸಿದೆ (ದಾರಿ ಕೆಲಸ ನಡೆದಿರುವುದರಿಂದ ನಿಶ್ಚಿತ ತಾಳ ಹಿಡಿಯುವುದು ಕಷ್ಟ). ಕುಲಶೇಖರ ಕೈಕಂಬ, ಮರೋಳಿಯವರೆಗೆ ಸೂರ್ಯ ಮೋಡದ ಮರೆ ಹಿಡಿದು, ಗಾಳಿ ತೀಡುವಾಗ ವಿಲಂಬಿತ ಗತಿಯಲ್ಲಿ ವಿಹರಿಸಿದೆ. ಕೊನೆಯಲ್ಲಿ ಸೂರ್ಯನಾರಾಯಣ ದೇವಸ್ಥಾನಕ್ಕಿಳಿಯುವ `ಪಾತಾಳ ದಾರಿ’ಯಲ್ಲಿ ದ್ರುತದಲ್ಲಿ ಸಾಗಿ, ಮಧ್ಯಮಾವತಿಯಲ್ಲಿ (ಉಪಾಧ್ಯರ ಮನೆ ) ಮುಗಿಸಿದೆ! (ವೀರ) ಸುಧನ್ವನ (ಮನೋಹರರ ಮಗನ ಹೆಸರು) ಮಾತೆ (ಡಾ|) ವಿದ್ಯಾರಲ್ಲಿ `ಮಂತ್ರಾಸ್ತ್ರ’ ಕೊಟ್ಟು ಮುಂದುವರಿದೆ. ಪಡೀಲು, ಬಜಾಲು ಎಂದ ಮೇಲೆ ರೈಲ್ವೇ ಕೆಳ ಸೇತುವೆ ಸಿಕ್ಕಲೇಬೇಕು. ಸದ್ಯ ಇರುವ ಹಳಿಗಳನ್ನು ಮುಟ್ಟದೇ ಮುಂದಾಗಿಯೇ ಎರಡು ಅಂಕಣದ ಸೇತುವೆ ಮುಗಿಸಿದ್ದರು. ಮೂರು ನಾಲ್ಕನೇ ಅಂಕಣ ದೇಶದಂತೇ ಪ್ರಗತಿಪಥದಲ್ಲಿತ್ತು! ಮತ್ತೆ ಅಲ್ಲೇ ಗಲ್ಲಿ ದಾರಿಗಳಲ್ಲಿ ಸುತ್ತಿ, ಎಕ್ಕೂರಿನಲ್ಲಿ ಹೊರಡುವಾಗ ಪಡುಗಡಲಿನಲ್ಲಿ ಉರಿಗೆಂಡ ಬಿದ್ದ ಸದ್ದು ಕೇಳಿದಂತಾಯ್ತು! ಅನ್ಯ ಯೋಚನೆಗಳನ್ನು ಬಿಟ್ಟು ಮಹಾವೀರರಷ್ಟೇ ಪಾರಾಗಬಹುದಾದ ವೃತ್ತ ಹಾಯ್ದು, ಕನಕನದಿಯ (ಕಂಕನಾಡಿ) ಪ್ರವಾಹದಲ್ಲಿ ಈಜಿ, ಬೃಹತ್-ಮಠಕ್ಕಾಗಿ ಮನೆ ಸೇರಿದೆ. (೮-೪-೨೦೧೫)

೧೮: ಅಯ್ಯೋ ಅಪಶಕುನಾ?

ಸೈಕಲ್ ಇನ್ನೇನು ಏರಬೇಕು “ಎಲ್ಲಿಗ್ ಹೊಕ್ಕೀರ್ರೀ ಅಂಕಲ್” ನಮ್ಮಾಚಿನ ಮನೆಯ ಕೆಲಸದಾಕೆಯ `ಒಂದಿಂಚು’ ಪೋರ ನಲಿ ನಲಿಯುತ್ತ ಕೇಳಿದ. ಸಾಂಪ್ರದಾಯಿಕ ಮನಸ್ಸಾಗಿದ್ದರೆ “ಅಯ್ಯೋ ಅಪಶಕುನ” ಅನ್ನಬೇಕಾದ ಸವಾಲು. ನಾನು ನಕ್ಕು “ಹೀಂಗಾ ದಾರಿ ಅಳ್ಯಾಕ್ ಹೊಂಟೀನಿ” ಅಂದವನೇ ಸವಾರಿ ನಡೆಸಿದೆ. ಜ್ಯೋತಿಗಾಗಿ ಬ್ಲೇಝಿಮನೆ ವೃತ್ತಕ್ಕೆ ಬರುವಾಗ ಸಿಗ್ನಲ್ಲಿಗೆ ಸಿಕ್ಕಿಬಿದ್ದೆ. ನೇರ ಹೋಗಬೇಕೆಂದಿದ್ದ ನಾನು ಪಂಪ್ವೆಲ್ಲಿನತ್ತವೇ ಹೊರಳಿ, ಮತ್ತೆ ಕಾಸರಗೋಡಿನತ್ತ ಹೆದ್ದಾರಿ ಹಿಡಿದೆ. ತೊಕ್ಕೋಟಿನಲ್ಲಿ ರಾಣಾರಂಪ; ಚತುಷ್ಪಥೀಕರಣದ ಅವ್ಯವಸ್ಥೆಗೆ, ದ್ವಾದಶವರ್ಷಕ್ಕೊಮ್ಮೆ ಬರುವ ಉಳ್ಳಾಲ ಉರೂಸ್ ಮತ್ತು ನಿತ್ಯ ಸಂಜೆಯ ಗೃಹಾಭಿಮುಖರ ಗದ್ದಲ, ಗೊಂದಲ. ಅಮಿತ ಸೈಕಲ್ ಸ್ವಾತಂತ್ರ್ಯದಲ್ಲಿ ನಾನಂತೂ ಚಿಮ್ಮಿದೆ. ಕೋಟೇಕಾರ್ ಬೀರಿಗೆ ಹೋಗಿ ದೇರಳಕಟ್ಟೆಯತ್ತ ಹೊರಳಿ ಮುಂದುವರಿದೆ.

ಕೊಂಡಾಣ ಮಹಾದ್ವಾರ, ಅದಕ್ಕೂ ಭರ್ಜರಿಯಾಗಿ ಮರುಸಜ್ಜುಗೊಳ್ಳುತ್ತಿರುವ ಮಡ್ಯಾರ್ ಮಹಾದ್ವಾರ ನೋಡುವಾಗ ಒಮ್ಮೆಗೆ ನಮ್ಮನೆಯ ಅಲ್ಪದ್ವಾರ, ಅಲ್ಲಿಂದು ಒಂದಿಂಚು ಪೋರನ ಪ್ರಶ್ನೆ, ಅದಕ್ಕೆ ತಳುಕುಹಾಕಿದ ಶಕುನಗಳ ನೆನಪಿನ ಮೆರವಣಿಗೆಗೆ ಸುಮಾರು ಮೂರು ದಶಕದ ಹಿಂದೆ ಇಲ್ಲೇ ನಡೆದ ಘಟನೆಯೊಂದು ತೆಕ್ಕೆ ಬಿದ್ದು ನಗು ಬಂತು. ಹೌದು, ಅಂದು (೧೯೮೦ರ ಸುಮಾರು) ಗೆಳೆಯ ಕೆ.ಎಲ್. ರೆಡ್ಡಿ (ರೋಶನಿ ನಿಲಯದ ಹಿಂದಿ ಅಧ್ಯಾಪಕ) ಹೊಸ ಸ್ಕೂಟರ್ ಕೊಂಡಿದ್ದರು. ಬಹುಶಃ ನಾಲ್ಕು ಗೇರಿನ ಲ್ಯಾಂಬ್ರೆಟ್ಟಾ ಇದ್ದಿರಬೇಕು. ನಾನು ಅವರಿಗೆ ಚಾಲನೆ ಕಲಿಸುವ ಉತ್ಸಾಹದಲ್ಲಿ ಕಂಕನಾಡಿ ವೃತ್ತದ ಬಳಿಯಿದ್ದ ಅವರ ಮನೆಗೆ ಹೋಗಿದ್ದೆ. ಹೊಸಾ ಸ್ಕೂಟರಿನಲ್ಲಿ ಬೆನ್ನಿಗೆ ರೆಡ್ಡಿಯವರನ್ನು ಹಾಕಿಕೊಂಡು ನಾನು ಸ್ಕೂಟರ್ ಹೊರಡಿಸುವಾಗ, ಅವರ ಹೆಂಡತಿ ಜಾನಕಿ (ಮಿಲಾಗ್ರಿಸ್ಸಿನಲ್ಲಿ ಕನ್ನಡ ಅಧ್ಯಾಪಿಕೆ) ಕೇಳಿದ್ದಿರಬೇಕು “ಎಲ್ಲಿಗೆ?”

ನಮ್ಮ ಸವಾರಿ, ಈಗಿನಂತೆ ವಾಹನ ಸಮ್ಮರ್ದವಿರದಿದ್ದ ಹೆದ್ದಾರಿ ಉದ್ದಕ್ಕೆ ಹೊರಟಿತ್ತು. ಅವರನ್ನು ಎದುರು ಕೂರಿಸಿ, ನಾನು ಹಿಂದಿನಿಂದಲೇ ಕೈ ಚಾಚಿ ಅವರ ಕೈಯೊಡನೆ ಹ್ಯಾಂಡಲ್ ಹಿಡಿದುಕೊಂಡು ಪಾಠ ನಡೆಸಿದ್ದೆ. ಖಾಲಿ ಓಟದಲ್ಲಿ ಅವರಿಗೆ ಬಿಡುತ್ತಾ ಗೇರ್ ಬದಲಾವಣೆ ನಾನೇ ಮಾಡಿ ತೋರುತ್ತಾ ಓತಪ್ರೋತ ಸಲಹೆ ಕೊಡುತ್ತಾ ಕೋಟೆಕಾರ್ ಬೀರಿಗಾಗಿ ಇಲ್ಲಿವರೆಗೂ ತಂದಿದ್ದೆ. (ಇಂದಿನ `ಮಡ್ಯಾರ್ ಕ್ಷೇತ್ರ’ ಆಗ ಕಗ್ಗಲ್ಲ ಕೋರೆ ಮಾತ್ರವಾಗಿತ್ತು) ಅಲ್ಲಿಗೆ ಸಾಕು ಅನ್ನಿಸಿ, ಸ್ವಲ್ಪ ವಿರಮಿಸಿ, ವಾಪಾಸು ಹೊರಟು ನಿಂತೆವು.

ಅದುವರೆಗೆ ಓಟದಲ್ಲೇ ಗೇರು ಬದಲಾವಣೆ ಅಭ್ಯಸಿಸಿದ್ದ ರೆಡ್ಡಿಗೆ ಸ್ವತಂತ್ರವಾಗಿ “ಕಿಕ್ ಸ್ಟಾರ್ಟ್, ಫಸ್ಟ್ ಗೇರ್, ರನ್” ಆದೇಶ ಕೊಟ್ಟು ನಾನು ಸುಮ್ಮನೆ ಹಿಂದೆ ಕುಳಿತುಕೊಂಡೆ. ರೆಡ್ಡಿ ಎರಡೋ ಮೂರೋ ಬಾರಿ ಕ್ಲಚ್ ಬಿಡುವುದು, ಆಕ್ಸಿಲರೇಟರ್ ಏರಿಸುವುದು ಹೊಂದಾಣಿಕೆ ಸರಿಯಾಗದೇ ಇಂಜಿನ್ ಬಂದ್ ಬೀಳುವುದು ನಡೆಸಿದರು. ಬಹುಶಃ ನನ್ನ ಕೊರೆತ ತಡೆಯದೆ, ಕೊನೇ ಬಾರಿಗೆ ಎಂಬಂತೆ ಒಮ್ಮೆ ರೆಡ್ಡಿ ಆಕ್ಸಿಲರೇಟರ್ ತುಸು ಹೆಚ್ಚೇ ತಿರುಗಿಸಿದ್ದರು. ಸ್ಕೂಟರ್ “ಬಿಡೋ” ಎಂದು ಬೊಬ್ಬಿರಿವಾಗ ಒಮ್ಮೆಲೇ ಕ್ಲಚ್ ಬಿಟ್ಟಿದ್ದರು. ಕ್ಷಣಾರ್ಧದಲ್ಲಿ ಸ್ಕೂಟರ್ ಮುಂದಿನ ಚಕ್ರ ಎತ್ತಿಹೋಗಿ, ಎರಡುರುಳು ಮುನ್ನುಗ್ಗಿ, ಹಿಡಿವವರಿಲ್ಲದೆ ಎಡಕ್ಕೆ ಬಿತ್ತು. ಗಾಬರಿಗೆಟ್ಟ ರೆಡ್ಡಿ ಕೈಯಿಂದ ಹ್ಯಾಂಡಲ್ ಕಳಚಿಹೋದಂತಾಗಿ ಬಲಕ್ಕೆ ಮಗುಚಿದ್ದರು. ನನ್ನ ಎರಡೂ ಕಾಲು ನೆಲದಲ್ಲೇ ಇದ್ದುದರಿಂದ ಸ್ಕೂಟರ್ ನನ್ನ ತಳದಿಂದ ಜಾರಿ, ನನ್ನನ್ನು ಅಲ್ಲೇ ನಿಲ್ಲಿಸಿ, ಮುಂದೆ ಹೋಗಿಬಿದ್ದಿತ್ತು. “ಅದೃಷ್ಟ ಒಳ್ಳೇದಿತ್ತು, ಸ್ಕೂಟರಿಗೇನೂ ಆಗಿಲ್ಲ” ಎನ್ನುತ್ತ ನಾನು ಸ್ಕೂಟರ್ ಎತ್ತಿ, ಸ್ಟ್ಯಾಂಡ್ ಹಾಕಿ ನಿಲ್ಲಿಸಿದೆ. ನಗುವೋ ನೋವೋ ಹೇಳಲಾಗದಂತೆ ದುಸುಮುಸು ಮಾಡುತ್ತಾ ರೆಡ್ಡಿ ಎದ್ದು ಬರುತ್ತಾ “ಹೂಂ, ಅದೃಷ್ಟ ದೊಡ್ಡದು, ನನಗೆ ತರಚಲು ಗಾಯಾನೂ ಆಗ್ಲಿಲ್ಲಾ” ಎಂದರು. ಆದರೆ ದೂಳು ಕೊಡವಿಕೊಳ್ಳುವಾಗಲೇ ಗೊತ್ತು ಅವರ (ಬಹುಶಃ) ಬಲಗೈ, ಮಣಿಗಂಟಿನಿಂದ ತುಸು ಮೇಲೆ ಊದಿಕೊಳ್ಳತೊಡಗಿತ್ತು; ಒಂದು ಸರಳ ಮೂಳೆ ಮುರಿತ!

ಸ್ಕೂಟರ್ ಬಿದ್ದದ್ದು ನೋಡಿ ಓಡಿ ಬಂದಿದ್ದ ದಾರಿ ಬದಿ ಮನೆಯ ಬಡವನೊಬ್ಬ ಪ್ರಥಮ ಚಿಕಿತ್ಸೆಗೆ ಪೂರ್ಣ ಸಹಕರಿಸಿದ. ಎರಡು ಬಿದಿರ ಸೀಳು ಕೈಗಿಟ್ಟು ಕಟ್ಟಿ, ಮುಂಡೊಂದರಲ್ಲಿ ಜೋಳಿಗೆ ಮಾಡಿ ಕೈಯನ್ನು ಕುತ್ತಿಗೆಗೆ ನೇಲಿಸಿದ್ದಾಯ್ತು. ಮತ್ತೆ ಸ್ಕೂಟರಿನಲ್ಲೇ ರೆಡ್ಡಿಯವರನ್ನು ಬೆನ್ನಿಗೇರಿಸಿಕೊಂಡು ಸೀದಾ ಮಂಗಳೂರು ನರ್ಸಿಂಗ್ ಹೋಮಿಗೊಯ್ದೆ. ಪರೀಕ್ಷಿಸಿದ ವೈದ್ಯರು “ಊತವಿಳಿಯಲಿ, ಎರಡು ದಿನ ಬಿಟ್ಟು ಶಸ್ತ್ರ ಚಿಕಿತ್ಸೆ ಮಾಡೋಣ” ಎಂದು ಸಲಹೆ ಕೊಟ್ಟರು. ಕೈಯನ್ನು ಸರಿಯಾಗಿ ಕಟ್ಟಿ, ನೋವಿಗೆ ಮದ್ದು ಕೊಟ್ಟು ಮನೆಗೆ ಕಳಿಸಿಕೊಟ್ಟರು.

ಜಾನಕಿ ಒಮ್ಮೆಗೆ ಗಾಬರಿಯಾದರೂ ಪರಿಸ್ಥಿತಿಗೆ ಸಜ್ಜಾದರು. ಇಷ್ಟರಲ್ಲಿ ನೋವು ತೊಡಗಿ, ಆತಂಕ ಹೆಚ್ಚಿ ರೆಡ್ಡಿ ಬಳಲಿದ್ದರು. ಅಂದು ಅವರದು ಹಳಗಾಲದ, ಹಂಚಿನ, ತಗ್ಗು ಮಾಡಿನ ಬಾಡಿಗೆ ಮನೆ, ಕಿಷ್ಕಿಂಧೆ. ಅಲ್ಲಿ ಗೋಡೆಯಂಚಿನಲ್ಲಿದ್ದ ನಿತ್ಯದ ಹಳೆ ಮಂಚದಲ್ಲಿ ರೆಡ್ಡಿ ಮೈಚಾಚಿದರು. ಅದು ಸರಿ, ಆದರೆ ವೈದ್ಯರ ಇನ್ನೊಂದು ಸೂಚನೆ – “ಕೈಯನ್ನು ತುಸು ಮೇಲೆ ಇಡಿ.” ಆಸ್ಪತ್ರೆಯಲ್ಲಾದರೋ ಸೂಕ್ತ ಸ್ಟ್ಯಾಂಡಿರುತ್ತದೆ. ನಾನು ಸೋಲಲಿಲ್ಲ, ದಪ್ಪ ಹಗ್ಗ ಒಂದನ್ನು ಕೈ ಎಟುಕಿನ ಮಾಡಿನ ಪಕಾಸೊಂದಕ್ಕೆ ಕಟ್ಟಿದೆ. ಅದರ ಇನ್ನೊಂದು ಕೊನೆಯನ್ನು ಮಲಗಿದ್ದಂತೆ ರೆಡ್ಡಿಯವರ ಕೈಗೆ ಹೊಂದಿಸಿ ಕಟ್ಟಿದ್ದಾಯ್ತು. ನನಗೆ ತೃಪ್ತಿಯಾಗಲಿಲ್ಲ, ಆರಿಸಿದ ಪಕಾಸು ತುಸು ದೂರದ್ದಾಗಿತ್ತು. ಸರಿ, ಮಂಚವನ್ನೇ ಇತ್ತ ಎಳೆದರಾಯ್ತೆಂದು, ರೆಡ್ಡಿ ಮಲಗಿದ್ದಂತೇ ಕೈ ಹಾಕಿ ಜಗ್ಗಿದೆ. ಮಂಚ ತುಸು ಹೆಚ್ಚು ಹಳಗಾಲದ್ದು, ದಡಾರೆಂದು ಮುರಿದು ಬಿತ್ತು. ಅದೃಷ್ಟ ದೊಡ್ಡದು, ರೆಡ್ಡಿಯವರ ತೋಳು ತುಸು ಚಾಚಿದ್ದಲ್ಲದೆ ಬೇರೇನೂ ಆಘಾತ ನಿಜಕ್ಕೂ ಆಗಲಿಲ್ಲ. (ಮುಂದೆ ಎಲ್ಲ ಸರಿಯಾಯ್ತು, ರೆಡ್ಡಿಯವರು ಗಟ್ಟಿ ಸವಾರರಾಗಿ ಆರೋಹಣದೊಡನೆ ಎಷ್ಟೋ ಕಾಡು ಸವಾರಿಯನ್ನೂ ಜೈಸಿದರು. ನೀತಿ J – ಸಂಕಲ್ಪ ಶುದ್ಧವಿದ್ದಾಗ ಅದೃಷ್ಟ ಎಲ್ಲೋ ಕೂಡಿಕೊಳ್ಳುವುದಿರಬಹುದು; ಶಕುನ, ಪುಣ್ಯ ಸುಳ್ಳೇ ಸುಳ್ಳು!)

ಓಹ್! ಕತೆ ಹೇಳುವ ಭರಾಟೆಯಲ್ಲಿ ನಾನಿಂದು ಒಂದು ಚಿತ್ರ ಹಿಡಿಯಲೂ ಮರೆತು ದೇರಳಕಟ್ಟೆ, ತೊಕ್ಕೊಟ್ಟಿಗಾಗಿ ಬಂದ ದಾರಿಯಲ್ಲೇ ಸುಕ್ಷೇಮವಾಗಿ ಮನೆ ಸೇರಿದೆ. (೯-೪-೨೦೧೫)

(ಅನಿಯತವಾಗಿ ಮುಂದುವರಿಯಲಿದೆ)