ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತ ಐದು

ಕೆಲವು ವಿಷಯಗಳ ಬಗ್ಗೆ ನಾವು ಪೂರ್ವಗ್ರಹ ಪೀಡಿತರಾಗಿ ನಾವೇ ಏನೇನೋ ಕಲ್ಪನೆ ಮಾಡಿಕೊಂಡಿರುತ್ತೇವೆ. ಅದನ್ನು ವಿಮರ್ಶಿಸುವ ಮನಸ್ಥಿತಿಯನ್ನೇ ಕಳಕೊಂಡಿರುತ್ತೇವೆ. ಅಂತಹ ಒಂದು ಘಟನೆ ನನ್ನಲ್ಲಿ ಪರಿವರ್ತನೆಯನ್ನುಂಟುಮಾಡಿದ್ದು ನೆನಪಾಗುತ್ತದೆ.

ಬಿಕರ್ನಕಟ್ಟೆಯ ಬಾಡಿಗೆ ಮನೆಯಲ್ಲಿದ್ದಾಗ ಆ ಮನೆಯ ಮಾಲಕಿಯ ಬಗ್ಗೆ ನಾನು ಒಂದು ಅಂತರವಿಟ್ಟುಕೊಂಡೇ ವ್ಯವಹರಿಸುತ್ತಿದ್ದೆ. ವರ್ಷಕ್ಕೊಮ್ಮೆ ಊರಿಗೆ ಬರುವಾಗ ಗಂಡ ಹೆಂಡತಿ ವಿಮಾನದಲ್ಲೇ ಬರುತ್ತಿದ್ದರು. ಬಂದ ಮೇಲೆ ಇಲ್ಲಿನ ಪ್ರಸಿದ್ಧ ದೇವಸ್ಥಾನಗಳಿಗೆಲ್ಲಾ ಪೂಜೆಗಾಗಿ ಖರ್ಚು ಮಾಡುವ ರೀತಿಯನ್ನು ಕಂಡೇ ಬೆರಗಾಗಿದ್ದೇನೆ. ಮುಂಬಯಿಯಲ್ಲಿ ಅವರಿಗೆ ಹೋಟೆಲ್ ಇದೆಯೆಂದು ಗೊತ್ತಿತ್ತು. ಅದರ ಜೊತೆಗೆ ಇನ್ನೂ ಏನೇನೋ ಉಪಕಸುಬುಗಳಿದ್ದವೆಂಬ ಗುಸು ಗುಸು ಸುದ್ದಿಗಳಿದ್ದುವು. ಅವರು ಊರಿಗೆ ಬಂದಾಗ ಜನರೊಂದಿಗೆ ವ್ಯವಹರಿಸುವ ರೀತಿ, ದೀನ ದಲಿತರ ಬಗ್ಗೆ ಅವರಿಗಿದ್ದ ಕಾಳಜಿ, ಸೌಮ್ಯ ಸ್ವಭಾವ, ಮಧುರವಾದ ಮಾತುಗಳನ್ನು ಕೇಳಿದ ಮೇಲೆ ಯಾರೋ ಇವರ ಮೇಲೆ ಅಸೂಯೆಯಿಂದ ಹೀಗೆ ಮಾತಾಡುತ್ತಾರೆಂದೇ ಭಾವಿಸಿದ್ದೆ. ಆದರೆ ೧೯೭೫ರಲ್ಲಿ ನಡೆದ ಘಟನೆಯ ಬಳಿಕ ಅವರು ನನ್ನೊಂದಿಗೆ ಮನಬಿಚ್ಚಿ ಮಾತಾಡಿದ ಬಳಿಕ ನನ್ನ ಆಪ್ತ ವಲಯಕ್ಕೆ ಅವರನ್ನು ಸೆಳೆದುಕೊಂಡೆ. ಸಮಯ ಸಂದರ್ಭಗಳು ಮನುಷ್ಯನನ್ನು ಎಂತೆಂತಹ ಅಗ್ನಿಪರೀಕ್ಷೆಗೊಡ್ಡುತ್ತವೆ ಎಂಬುದು ಮನದಟ್ಟಾಯಿತು.

ತಾಯಿ ತೀರಿದ ಮೇಲೆ ಮನೆಗೆ ಮಲತಾಯಿ ಬಂದಾಗ ತುತ್ತು ಅನ್ನಕ್ಕೆ ಕಷ್ಟಪಡಬೇಕಾದ ಸ್ಥಿತಿಯಲ್ಲಿ ಕೆಲಸಕ್ಕೆಂದು ಮುಂಬಯಿಗೆ ಕರೆದುಕೊಂಡು ಹೋದವರು ಮಾಡಿದ್ದೇನು ಗೊತ್ತೇ? ಗುಂಡು ಗುಂಡಾಗಿ ಲಕ್ಷಣವಾಗಿದ್ದ ಹುಡುಗಿಯನ್ನು ಹೋಟೇಲಲ್ಲಿ ಕೆಲಸಕ್ಕೆ ಸೇರಿಸಿದ್ದು. ಈ ಹೋಟೆಲು ದೇಹವ್ಯಾಪಾರದ ಕೇಂದ್ರವೂ ಆಗಿತ್ತೆಂದು ತಿಳಿದು ಕೆಲವು ದಿನ ಉಪವಾಸವೇ ಇದ್ದರಂತೆ. ಕೊನೆಗೆ ಇಲ್ಲಿಂದ ಪಾರಾಗುವ ದಾರಿ ಕಾಣದೆ ವೃತ್ತಿಯಲ್ಲಿ ನಿರತರಾಗಿದ್ದಾಗಲೇ ಓರ್ವನ ಪರಿಚಯವಾಯಿತು. ಅವನ ಸಹಾಯದಿಂದ ಅಲ್ಲಿಂದ ಹೊರಬಂದು ತಾವೇ ಪ್ರತ್ಯೇಕ ಹೋಟೆಲು ಪ್ರಾರಂಭಿಸಿದರು. ಗಂಡನಾಗಿ ತುಂಬಾ ಸಹಕಾರ ನೀಡಿದ್ದರಿಂದ ಮತ್ತು ಅವರ ಮುತುವರ್ಜಿಯಿಂದಲೇ ಬಡಮನೆತನದ ಹೆಣ್ಣುಮಕ್ಕಳನ್ನು ದಲ್ಲಾಳಿಗಳ ಮೂಲಕ ಕರೆಸಿ ಅದೇ ವೃತ್ತಿಯನ್ನು ಮುಂದುವರಿಸಿದರು. ಕೆಲವೇ ವರ್ಷದೊಳಗೆ ಲಕ್ಷ್ಮಿ ಅವರ ಕೈಹಿಡಿದಳು. ಮಂಗಳೂರಲ್ಲಿ ಜಮೀನು ಖರೀದಿಸಿ, ತನ್ನ ವಿಧವೆ ಅಕ್ಕನನ್ನು ಅಲ್ಲಿ ಕುಳ್ಳಿರಿಸಿ ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ಮುಂಬಯಿಯಿಂದ ಬರುವಾಗ ವಿಮಾನದಲ್ಲಿ ಬಂದರೆ ಮರಳುವಾಗ ಕಾರಲ್ಲೇ ಹೋಗುತ್ತಿದ್ದರು. ನಾಲ್ಕು ಗಂಟೆಗೆಲ್ಲಾ ಮನೆ ಬಿಡುತ್ತಿದ್ದರು. ಯಾಕೆಂದರೆ ಆ ಕಾರಲ್ಲಿ ಯಾರಾದರೂ ಹೆಣ್ಣುಮಕ್ಕಳಿರುತ್ತಿದ್ದರು. ಆದರೆ ಆ ಘಟನೆ ನಡೆದ ದಿನ ಅಂಕೋಲಾದಾಚೆ ಇವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ ವಿಷಯ ಪತ್ರಿಕೆಯಲ್ಲೂ ಬಂದಿತ್ತು. ಬಿಡುಗಡೆಯಾಗಿ ಬಂದ ಮೇಲೆ ಒಂದು ದಿನ, ನನ್ನಲ್ಲಿ ತನ್ನ ಬದುಕಿನ ಕತೆಯನ್ನು ಹೇಳಿ ಹನಿಗಣ್ಣಾದರು. ಅಂದಿನಿಂದಲೂ ನನಗೆ ಈ ವೃತ್ತಿನಿರತ ಮಹಿಳೆಯರ ಬಗ್ಗೆ ಇದ್ದ ತಾತ್ಸಾರದ ಬದಲು ಮೃದುಧೋರಣೆ ಉಂಟಾಗಿತ್ತು. ಅವರು ನನ್ನಲ್ಲಿ ಪೂರ್ಣ ತೆರೆದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಮಗೆಲ್ಲಾ ಸಾಮಾನ್ಯವಾಗಿ ಗೊತ್ತಿರುವಂತೆ ಮುಂಬಯಿಯಲ್ಲಿ ಹೆಚ್ಚಾಗಿ ಹಿಂದುಳಿದ ಮತ್ತು ಕೆಳವರ್ಗದ ಮಹಿಳೆಯರೇ ಈ ವೃತ್ತಿಯಲ್ಲಿದ್ದಾರೆಂದೂ ಅವರಿಂದಾಗಿಯೇ ಊರಿನಲ್ಲಿದ್ದ ಅವರ ಬಂಧುಗಳು ಸುಖಜೀವನ ನಡೆಸುತ್ತಿದ್ದಾರೆ ಎಂದೂ ತಿಳಿಯಿತು. ನನ್ನ ಪರಿಚಯದಲ್ಲಿರುವ ಮತ್ತು ನನ್ನ ಸಮೀಪದ ಬಂಧುಗಳಲ್ಲೂ ಈ ವೃತ್ತಿನಿರತರು ಇದ್ದರು. ಹಣ ಮಾತನಾಡಿದಾಗ ಪ್ರಪಂಚ ಮೌನವಾಗಿ ಕೇಳುತ್ತದಲ್ಲವೇ? ಆಧುನಿಕ ಕಾಲದಲ್ಲಿ ನಿಶ್ಚಿಂತೆಯಿಂದ ಸಾಯುವುದಕ್ಕೂ ಹಣ ಬೇಕು. ಎಲ್ಲ ಸದ್ಗುಣಗಳೂ ಹಣವನ್ನೇ ಆಶ್ರಯಿಸಿರುವ ಈ ಸಮಾಜದಲ್ಲಿ ಈ ವೃತ್ತಿನಿರತರಿಗೆ ಊರಿನಲ್ಲಿ ತುಂಬಾ ಗೌರವವೂ ಇತ್ತು. ಆದರೆ ಹಿಂದಿನಿಂದ ಆಡಿ ನಾಲಿಗೆ ತೀಟೆ ತೀರಿಸಿಕೊಳ್ಳುವವರಿಗೇನೂ ಕಡಿಮೆ ಇರಲಿಲ್ಲ. ಈ ರೀತಿಯ ದ್ವಂದ್ವ ಮನೋಭಾವ ಕೆಲಕಾಲ ನನ್ನನ್ನು ಕಾಡಿದ್ದುಂಟು.

ಡೀಡ್ಸ್ ಸಂಸ್ಥೆಯ ಮಹಿಳಾಪರ ಚಿಂತನಾ ಸಭೆಯಲ್ಲಿ ಲೈಂಗಿಕ ಕಾರ್ಯಕರ್ತೆಯರ ನಡುವೆ ಕೆಲಸ ಮಾಡಿದ ಅನುಭವಗಳನ್ನು ಹರಿಣಿ ಹಂಚಿಕೊಂಡರು. ಅವರ ನೆರವಿನಿಂದ ಇಂತಹ ಮಹಿಳೆಯರ ಅನುಭವಗಳನ್ನು ದಾಖಲಿಸಬೇಕೆಂದೂ ಇವರ ಬಗ್ಗೆ ಅಧ್ಯಯನ ಮಾಡಬೇಕೆಂದೂ ನಿರ್ಧಾರ ಮಾಡಿದೆ. ಡೀಡ್ಸ್‌ನ ಮೂಲಕ ಅವರನ್ನು ಸಂಪರ್ಕಿಸಿದರೆ ಅದಕ್ಕೊಂದು ತೂಕ ಹೆಚ್ಚುತ್ತದೆಂದು ಈ ಮಹಿಳೆಯರ ಸಂಘಟನೆಗೆ ಅರ್ಜಿ ಹಾಕಿದೆ. ಅವರು ತಿಂಗಳಿಗೊಮ್ಮೆ ಸಭೆ ಸೇರುವಾಗ ಅವರಲ್ಲಿ ಕೆಲವರನ್ನು ಮಾತಾಡಿಸಬಹುದೆಂದು ಅನುಮತಿ ಸಿಕ್ಕಿತು. ನಾನು ಮೊತ್ತಮೊದಲು ಒಬ್ಬರನ್ನು ಹತ್ತಿರ ಕೂರಿಸಿ “ನಿಮ್ಮ ಹಿನ್ನೆಲೆಯನ್ನು ನನ್ನಲ್ಲಿ ಹೇಳಬಹುದೇ? ಈ ವೃತ್ತಿಯನ್ನು ಆಯ್ಕೆ ಮಾಡಲು ಕಾರಣಗಳೇನು? ಎಂಬುದನ್ನು ತಿಳಿಸುತ್ತೀರಾ” ಎಂದೆ. ಆಕೆ ತಕ್ಷಣ “ನೀವು ನನ್ನಂಥವರನ್ನು ಮಾತ್ರ ಮಾತನಾಡಿಸುವುದಾ? ಪಂಚತಾರಾ ಹೋಟೆಲುಗಳಲ್ಲಿ ಗಂಟೆಗೆ ಸಾವಿರಗಟ್ಟಲೆ ರೇಟಿನಲ್ಲಿ ಒದಗುವ ಹೈಟೆಕ್ ವೇಶ್ಯೆಯರಿರುತ್ತಾರಲ್ಲಾ. ಅವರನ್ನು ಮಾತನಾಡಿಸುತ್ತೀರಾ?” ಎಂದಾಗ ಕೆನ್ನೆಗೆ ಬಾರಿಸಿದಂತಹ ಅನುಭವ ನನಗೆ. ತಕ್ಷಣಕ್ಕೆ ಏನು ಹೇಳಬೇಕೆಂದು ತಿಳಿಯದೆ ವಿಚಲಿತಳಾದರೂ “ನೋಡಿ, ಅವರೊಂದಿಗೆ ನಿಮ್ಮನ್ನು ಹೋಲಿಸಬೇಡಿ. ಅವರ ಉದ್ದೇಶ ಮತ್ತು ಆವಶ್ಯಕತೆಗಳು ಬೇರೆ, ನಿಮ್ಮದು ಬೇರೆ” ಎಂದೆ. “ಸರಿ, ಇದನ್ನು ಕೇಳಿ ಏನು ಮಾಡುತ್ತೀರಾ?” ಎಂದರು. ನಿಮ್ಮ ವೃತ್ತಿಯಲ್ಲಿ ನೀವು ಅನುಭವಿಸುವ ಹಿಂಸೆ, ಶೋಷಣೆಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತೇನೆ” ಎಂದೆ. “ಅದು ಒಳ್ಳೆಯ ಕೆಲಸ. ಅದರಿಂದ ನಮಗೇನು ಲಾಭ?” ಎಂದರು. ಇದು ವ್ಯವಹಾರದ ಪ್ರಶ್ನೆಯಾಗುತ್ತಿದೆ ಎಂದು ಅನಿಸಿತು. “ನೋಡಿ, ನಿಮಗೆ ನನ್ನ ಮೇಲೆ ನಂಬಿಕೆಯಿದ್ದರೆ ತಿಳಿಸಬಹುದು. ಒತ್ತಾಯವಿಲ್ಲ” ಎಂದೆ. “ಸರಿ, ಯೋಚಿಸಿ ಹೇಳುತ್ತೇನೆ” ಎಂದವರು ಮತ್ತೆ ನನ್ನ ಮುಖ ನೋಡಲಿಲ್ಲ.

ಇವರನ್ನು ಸಂದರ್ಶಿಸುವುದು ಕಷ್ಟ. ಸಂದರ್ಶಿಸಿದರೂ ಮಾತನಾಡಿಸುವುದು ಕಷ್ಟ, ಮಾತಾಡಿಸಿದರೂ ಬರೆಯುವುದು, ಪ್ರಕಟಿಸುವುದು ಮತ್ತೂ ಕಷ್ಟ ಎಂದು ಮನದಟ್ಟಾಯಿತು. ಈ ಕಾರ್ಯಕರ್ತೆಯರನ್ನು ಬೇಕಾದಲ್ಲಿಗೆ ಕರೆದೊಯ್ಯುವ ಶಂಕರ ಎಂಬ ರಿಕ್ಷಾ ಡ್ರೈವರ್ ನನ್ನ ಪರಿಚಿತ. ಅವನ ಸ್ನೇಹ ಬಳಸಿ ಅವನ ಶಿಫಾರಸ್ಸಿನಿಂದ ಒಂದಿಬ್ಬರನ್ನು ನನ್ನ ಆತ್ಮೀಯ ವಲಯಕ್ಕೆ ಸೇರಿಸಿಕೊಂಡು ಮಾತಾಡಿಸಿದೆ. ಏಡ್ಸ್ ಹರಡದಂತೆ ಕಾಂಡೋಮ್ ಬಳಸುವ ಅಗತ್ಯವನ್ನು ತಿಳಿಸುವ ಈ ಕಾರ್ಯಕರ್ತೆಯರು ನನ್ನ ಪ್ರಶ್ನೆಗಳಿಗೆ ಉತ್ತರವೇನೋ ಕೊಟ್ಟರು. ಆದರೆ ಅದರಲ್ಲಿ ಸತ್ಯಾಂಶಗಳನ್ನು ಹುಡುಕುವುದು ನನಗೆ ಕಷ್ಟವಾಯಿತು. ನಾನು ಅವರ ಪೂರ್ವಾಪರ ಕೇಳಿದ್ದಕ್ಕಿಂತ ಹೆಚ್ಚು ನನ್ನ ಪೂರ್ವಾಪರಗಳನ್ನೇ ಅವರು ಕೇಳಿ ಇವಳು ವಿಶ್ವಾಸಕ್ಕೆ ಅರ್ಹಳೋ ಅಲ್ಲವೋ ಎಂದು ತೂಗಿ ನೋಡಿದರು. ತಮ್ಮ ಕುಟುಂಬದಲ್ಲಿ ಯಾರಿಗೂ ತಿಳಿಯದಂತೆ ಈ ವೃತ್ತಿಯನ್ನು ರಹಸ್ಯವಾಗಿಟ್ಟಿದ್ದರು. ಕೆಲವು ಕುಟುಂಬದಲ್ಲಿ ಸೋದರ, ಸೋದರಿಯರ ಶಿಕ್ಷಣಕ್ಕೆ, ಹೆತ್ತವರ ಶುಶ್ರೂಷೆಗೆ, ದಿನನಿತ್ಯದ ಊಟೋಪಚಾರಕ್ಕೆ ಇವರ ಗಳಿಕೆಯೇ ಆಧಾರ. ತನ್ನ ವೃತ್ತಿಯ ಬಗ್ಗೆ ತಿಳಿದರೆ ಅವರ ಮುಂದೆ ಮಾನ ಹರಾಜಾಗುತ್ತದೆಂಬ ಭಯ. ಇನ್ನು ಕೆಲವರಲ್ಲಿ ಎಷ್ಟು ಒರಟು ವರ್ತನೆಗಳಿದ್ದವೆಂದರೆ ಅವರಲ್ಲಿ ಮಾತಾಡುವುದೇ ಕಷ್ಟ. ಈ ವೃತ್ತಿಗಿಳಿದ ಮೇಲೆ ಅವರು ತಮ್ಮ ವರ್ತನೆಗಳಲ್ಲಿ ಒರಟುತನವನ್ನು ರೂಢಿಸಿಕೊಳ್ಳದಿದ್ದರೆ ಒಂದು ದಿನವೂ ಬದುಕಲು ಸಾಧ್ಯವಿಲ್ಲದಂತಹ ವಾತಾವರಣವಿದೆ. ಒಂದು ರೀತಿಯಲ್ಲಿ ಅದೊಂದು ಭೂಗತ ಜಗತ್ತು. ಕುಡಿತದ ಚಟವಿಲ್ಲದವರೇ ಇಲ್ಲ. ಅವರ ದುಡಿಮೆಯ ಕಾಲಂಶ ಉಡುಗೆ ತೊಡುಗೆಗೆ ಮತ್ತು ಮದ್ಯಪಾನಕ್ಕೇ ವಿನಿಯೋಗವಾಗುತ್ತದೆ. ಈ ಎಲ್ಲಾ ವಿಷಯಗಳನ್ನು ಅವರು ಹೇಳದಿದ್ದರೂ ನಾನು ಊಹಿಸಿಕೊಳ್ಳಬಲ್ಲೆ. ಅವರ ಅಂತರಂಗದೊಳಗೆ ಸದಾ ಕುದಿವ ಜ್ವಾಲಾಮುಖಿಯಿತ್ತು. ಅದರೊಳಗೆ ಪ್ರವೇಶಿಸಲು ಅವರು ಬಿಡಲಿಲ್ಲ.

ಆದುದರಿಂದ ಅವರ ಮಧ್ಯೆ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಹರಿಣಿಯೊಂದಿಗೆ ಅವರನ್ನು ಭೇಟಿಯಾದೆ. ಅವಳ ಮೇಲಿನ ನಂಬಿಕೆಯಿಂದ ಕೆಲವರು ಮನಬಿಚ್ಚಿ ಮಾತಾಡಿದರು. ಅವರೇ ತೆರೆದಿಟ್ಟ ಸತ್ಯಗಳನ್ನು ನನಗೆ ಅರಗಿಸಿಕೊಳ್ಳುವುದೇ ಕಷ್ಟವಾಯಿತು. ಕೆಲವರ ಕತೆಯಂತೂ ಶೋಷಣೆ, ದಾರುಣ ಹಿಂಸೆಯ ಕಥನವಾಯಿತು. ಅವರು ಹೇಳಿದಂತೆ ಮಂಗಳೂರಿನಲ್ಲಿ ಈ ವೃತ್ತಿಯಲ್ಲಿರುವವರಲ್ಲಿ ಹೆಚ್ಚಿನವರು ಮುಸ್ಲಿಂ ಮಹಿಳೆಯರು. ಕಾಸರಗೋಡು ಮುಂತಾದ ಕಡೆಗಳಿಂದ ಇಲ್ಲಿಗೆ ಬಂದು ಮರಳುವವರು. ಗಂಡನಿಂದ ಪರಿತ್ಯಕ್ತರು. ಬದುಕಿಗೆ ಬೇರೆ ದಾರಿ ಕಾಣದೆ ಈ ವೃತ್ತಿಗೆ ಬಂದವರು. ಒಲ್ಲದ ಮನಸ್ಸಿನಿಂದಲೇ ಈ ವೃತ್ತಿಗೆ ಬಂದು ಬದುಕಿನ ಬಂಡಿಗೆ ಸಾರಥಿಯಾದರು. ಹಿಂದುಳಿದವರು ಮತ್ತು ದಲಿತ ಹೆಣ್ಣುಮಕ್ಕಳ ಸಂಖ್ಯೆಯೂ ತುಂಬಾ ಇದೆ. ನಾನು ಅವರಲ್ಲಿ ಮಾತಾಡುತ್ತಿದ್ದ ಸಮಯದಲ್ಲೇ ಇದೇ ವೃತ್ತಿಯಲ್ಲಿದ್ದ ಬ್ರಾಹ್ಮಣ ಸಮುದಾಯದ ಮಹಿಳೆಯೊಬ್ಬರು ನೆಹರೂ ಮೈದಾನದ ಬಳಿ ಅನಾಥಳಾಗಿ ಸತ್ತುಬಿದ್ದ ಘಟನೆಯನ್ನು ಹೇಳಿದರು.

ನನಗೆ ವಿಚಿತ್ರ ಅಂತ ಅನಿಸಿದ್ದು ಈ ವೃತ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಅಂದರೆ ೧೮ ವರ್ಷದೊಳಗಿನವರಿಂದ ಹಿಡಿದು ೫೦ ದಾಟಿದ ಮಹಿಳೆಯರೂ ಇದ್ದರು. ೬೦ ದಾಟಿದವರಿಗೆ ಗಿರಾಕಿಗಳು ಹದಿಹರೆಯದ ಹುಡುಗರಾದರೆ ೧೮ ವರ್ಷದೊಳಗಿನವರಿಗೆ ೫೦ ವರ್ಷ ದಾಟಿದ ಗಂಡಸರು. ಈ ವೃತ್ತಿಯಲ್ಲಿ ವಯಸ್ಸಾದಂತೆಲ್ಲಾ ಅವರ ರೇಟು ಕಡಿಮೆಯಾಗುತ್ತಾ ಹೋಗುತ್ತದೆ. ೧೦ ವರ್ಷದ ಹಿಂದೆ ಒಬ್ಬ ಗಿರಾಕಿಗೆ ಒಂದು ಸಾವಿರ ರೇಟು ವಿಧಿಸುತ್ತೇನೆ ಎಂದವಳು ಒಳ್ಳೆಯ ಗಿರಾಕಿಗಳು ಸಿಕ್ಕಿದರೆ ಒಂದು ದಿನದಲ್ಲಿ ಐದಾರು ಮಂದಿಯನ್ನು ಸಂತೋಷಪಡಿಸುತ್ತೇನೆಂದೂ ನಿರ್ಭಾವುಕವಾಗಿ ಹೇಳಿದಾಗ ಅವರ ಮಾನಸಿಕ ಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಅಸಮರ್ಥರೇನೋ ಎಂಬ ಭಾವ ಮೂಡಿತು. ಇವರಲ್ಲಿ ಅನಕ್ಷರಸ್ಥೆಯರು ಇಲ್ಲವೇ ಇಲ್ಲ. ಅಕ್ಷರಸ್ಥೆಯರಲ್ಲಿ ಒಬ್ಬಳು ಶಿಕ್ಷಕಿಯ ಮನಸ್ಥಿತಿಯನ್ನು ಕೇಳಿದರೆ, ನಮ್ಮ ಎದೆಬಡಿತವೇ ನಿಂತುಹೋದೀತೇನೋ ಎಂಬಷ್ಟು ದುಗುಡವಾಗುತ್ತದೆ. ಶಿಕ್ಷಕಿಯಾಗಿದ್ದು ಮದುವೆಯಾಗಿ ಕೆಲಸ ಬಿಟ್ಟವಳು ಬೆಂಗಳೂರಿಗೆ ಹೋಗಿ ಅಲ್ಲಿ ಗಂಡನ ಉದ್ದಿಮೆಗೆ ಸಹಾಯ ಮಾಡುತ್ತಿದ್ದವಳ ಬದುಕಿಗೆ ವಿಧಿ ಬರೆ ಎಳೆಯಿತು. ಗಂಡ ಹೃದಯಾಘಾತದಿಂದ ನಿಧನಗೊಂಡಾಗ ಅವನ ಕುಟುಂಬಸ್ಥರು ಅವನ ಎಲ್ಲ ಆಸ್ತಿಯನ್ನು ತಮ್ಮ ಕೈವಶ ಮಾಡಿಕೊಂಡಾಗ, ಪುಟ್ಟ ಗಂಡು ಮಗುವನ್ನು ಕರೆದುಕೊಂಡು ತವರಿಗೆ ಬಂದವಳಿಗೆ ಇಲ್ಲೂ ಆಶ್ರಯ ಸಿಗಲಿಲ್ಲ. ಆ ದುಃಖಕ್ಕೋ ಸೇಡಿಗೋ ಈ ವೃತ್ತಿಯನ್ನು ಪ್ರಾರಂಭಿಸಿದಳು. ಅದು ಹೇಗೆ ಗೊತ್ತೇ? ಪುಟ್ಟ ಮಗುವನ್ನು ಜೊತೆಗಿರಿಸಿಕೊಂಡೇ. ಮಗುವಿಗೆ ಶಾಲೆಗೆ ಹೋಗುವ ವಯಸ್ಸಾದರೂ ಆಕೆ ತನ್ನ ವೃತ್ತಿಯ ಜೊತೆಗೆ ಒಯ್ಯುತ್ತಿದ್ದಳೇ ವಿನಃ ಅದಕ್ಕೆ ಶಿಕ್ಷಣ ಕೊಡಿಸುವ ಪ್ರಯತ್ನವನ್ನೇ ಮಾಡದಾಗ ಸ್ವಯಂಸೇವಾ ಸಂಸ್ಥೆಯವರು ೮-೯ ವರ್ಷದ ಹುಡುಗನನ್ನು ಬಲ್ಮಠದ ಶಾಂತಿನಿಲಯದ ಪಕ್ಕದ ಶಾಲೆಗೆ ಸೇರಿಸಿದರು. ಓರ್ವ ಹೆಣ್ಣು ತನ್ನ ಮಗುವಿನ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರಲು ಸಾಧ್ಯವೇ ಎಂದು ಕರುಳು ಹಿಂಡಿದಂತಾಗುತ್ತದೆ.

ನಾನು ಮಾತಾಡಿಸಿದ ಪ್ರತೀ ಮಹಿಳೆಯರೂ ಪೊಲೀಸರಿಂದಾದ ಕ್ರೌರ್ಯವನ್ನು ವರ್ಣಿಸುವಾಗ ನಮ್ಮ ಹೃದಯ ಮರಗಟ್ಟಿದಂತಾಗುತ್ತದೆ. ಪುಕ್ಕಟೆ ಮೈ ನೀಡಬೇಕಾದುದು ಮಾತ್ರವಲ್ಲ ತಮ್ಮಲ್ಲಿದ್ದ ಹಣ, ಚಿನ್ನ ಎಲ್ಲವನ್ನೂ ಎಗರಿಸುವ ಅವರ ದುರಾಸೆಯನ್ನು ತಡೆಯುವವರೇ ಇರಲಿಲ್ಲ. ಕಾಲಿನ ಚೈನನ್ನೂ ಕೂಡಾ ಕಿತ್ತ ಪೊಲೀಸನ ಕ್ರೌರ್ಯಕ್ಕೆ ಹಿಡಿಶಾಪ ಹಾಕಿದ್ದನ್ನು ಕೇಳಿ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ನಾನು ಪ್ರಶ್ನಿಸಿದ್ದೆ. ಎಷ್ಟೋ ಸಲ ಬಂಧುಗಳೊಂದಿಗೆ ಕಾಣಿಸಿಕೊಂಡಾಗಲೂ ಪೊಲೀಸರು ವ್ಯಾನಿಗೆ ತಳ್ಳಿ ಕೇಸು ಜಡಿದ ಘಟನೆ ಹೇಳಿದರು. ಪೊಲೀಸರೆಂಬ ಗಂಡಗಣಗಳಿಗೆ ನಮ್ಮ ಪಾಲಿನ ಹಣ ಸಂದಾಯ ಮಾಡುವುದಲ್ಲದೆ ವಕೀಲರೆಂಬ ಕಿರಾತಕರೂ ನಮ್ಮ ಹಣ ಸುಲಿಗೆ ಮಾಡುತ್ತಿದ್ದರೆಂದು ಅವರದೇ ಎದೆಗುದಿಯ ರೋಷದಿಂದ ಹೇಳಿದಾಗ ನಮ್ಮಲ್ಲಿ ಅದಕ್ಕೆ ಯಾವ ಉತ್ತರವಾಗಲೀ ಪರಿಹಾರವಾಗಲೀ ಇರಲಿಲ್ಲ. ಕಾನೂನು ಪ್ರಕಾರ ನೋಡಿದರೆ ಪೊಲೀಸರಿಗೆ ವೇಶ್ಯಾವೃತ್ತಿಯನ್ನು ತಡೆಯುವ ಅಧಿಕಾರವಿಲ್ಲ. ಗಂಡು ಹೆಣ್ಣು ಈ ವೃತ್ತಿಗೆ ಪ್ರಚೋದನೆ ನೀಡುವುದು ಅಪರಾಧ. ಅದನ್ನು ಮಾತ್ರ ತಡೆಯುವ ಅಧಿಕಾರ ಅವರಿಗಿದೆ. ಹೀಗೆ ದೌರ್ಜನ್ಯ ನಡೆಸುವುದು ಕಾನೂನುಬಾಹಿರವಾಗಿದೆ. ಪೊಲೀಸರು ನೀಡುವ ಈ ಹಿಂಸೆಯನ್ನು ತಡೆಯಲು ಸಾಧ್ಯವೇ? ಎಂದು ಒಮ್ಮೆ ನಾನು ಮತ್ತು ಹರಿಣಿ ಪಾಂಡೇಶ್ವರದಲ್ಲಿ ಆಗ ಇನ್ಸ್‌ಪೆಕ್ಟರ್ ಆಗಿದ್ದ ವೆಂಕಟೇಶ ಪ್ರಸನ್ನರನ್ನು ಕಂಡು ಕೇಳಿದ್ದೆವು. ನಮ್ಮ ವಾದವನ್ನು ಅವರು ತಿರಸ್ಕರಿಸಲಿಲ್ಲ. ಆದರೆ ಹಾಗೆ ನಾವು ಮಾಡುವುದು `ಸ್ಪಿರಿಟ್ ಆಫ್ ಲಾ’ದ ಬಲದಿಂದ. ಈ ವೃತ್ತಿಯಲ್ಲಿದ್ದು ಅಷ್ಟು ಮಾಡದಿರಲು ಸಾಧ್ಯವೇ? ಎಂದಾಗ ಇದು ಯಾವ ಸ್ಪಿರಿಟ್, ಯಾವ ಲಾ ಎಂದು ಗೊತ್ತಾಗದೆ ಮೂಕರಾದೆವು. ಮಂಗಳೂರಿನ ಮುಖ್ಯ ಪೊಲೀಸ್ ಸ್ಟೇಶನ್‌ಗಳಲ್ಲಿ ಈ ವೃತ್ತಿನಿರತರನ್ನು ಬಂಧಿಸಿದ ಕೇಸುಗಳು ಹೆಚ್ಚುತ್ತಿರುವುದನ್ನು ಕೆಲವು ಸಬ್‌ಇನ್ಸ್‌ಪೆಕ್ಟರುಗಳು ಹೆಮ್ಮೆಯಿಂದ ಹೇಳಿದರೆ, ಇನ್ನು ಕೆಲವರು ವಿಷಾದದಿಂದ ಹೇಳಿದರು. ಮದುವೆ ಎಂಬ ಸಂಸ್ಥೆ ಹುಟ್ಟಿದಂದೇ ಹುಟ್ಟಿದ ಈ ವೃತ್ತಿಗೆ ಪ್ರಾಚೀನ ಕಾಲದ ಇತಿಹಾಸವಿದೆ. ಅದನ್ನು ಕಾನೂನುಬದ್ಧಗೊಳಿಸಿದರೂ ಹಿಂಸೆ ತಪ್ಪದು. ಈಗ ಇರುವಂತೆ ಮುಂದುವರೆದರೂ ಹಿಂಸೆ ತಡೆಯಲಾಗದು.

ಹಿಂಸೆಯ ಒಂದು ವಿಕೃತ ರೂಪವನ್ನು ಹೇಳಿದರೆ ನಾವು ಬೆಚ್ಚಿ ಬೀಳುವಂತಿದೆ. ಈ ವೃತ್ತಿಯ ಜಾಲವು ತಲೆಹಿಡುಕರ ಹಿಡಿತದಲ್ಲಿದೆ. ಆದರೆ ಅನ್ಯಾಯವಾದರೆ ಯಾರೂ ಸಹಾಯ ಮಾಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. `ಈಕೆ’ ತಲೆಹಿಡುಕರ ಮೊಬೈಲ್ ಕರೆಗೆ ಸ್ಪಂದಿಸಿ ಬಸ್‌ಸ್ಟ್ಯಾಂಡಿಗೆ ಬಂದಳು. ಅವಳನ್ನು ಗಿರಾಕಿಯು ಉಡುಪಿ ಬಸ್ಸಿಗೆ ಹತ್ತಿಸಿದ. ಗಿರಾಕಿ ಉಡುಪಿಯಲ್ಲಿ ಒಂದು ಹೋಟೇಲಲ್ಲಿ ರೂಮು ಮಾಡಿದ. ಆತನ ಹಾವಭಾವ ಮಾತುಗಳೆಲ್ಲಾ ಒಬ್ಬ ಸಜ್ಜನ, ಸರಳ ವ್ಯಕ್ತಿಯಂತೆ ಇತ್ತು. ಅವಳೂ ಖುಷಿಯಿಂದಲೇ ಅವನೊಂದಿಗೆ ಸಹಕರಿಸಿದಳು. ರಾತ್ರಿಯ ನಶೆಯಲ್ಲಿ ಸುಖದಲ್ಲಿ ತೇಲಾಡಿದಳು. ಬೆಳಕು ಹರಿದಾಗ ನೋಡುತ್ತಾಳೆ, ಅವನಿಲ್ಲ. ಅವಳ ಮೈಮೇಲೆ ತುಂಡು ಬಟ್ಟೆಯಿಲ್ಲ. ಆಭರಣವಿಲ್ಲ. ಪರ್ಸೇ ಇಲ್ಲ, ಮೊಬೈಲ್ ಇಲ್ಲ. ಎಲ್ಲವನ್ನೂ ಎಗರಿಸಿ ಹೊರಗಿನಿಂದ ಬೀಗ ಹಾಕಿ ಹೋಗಿದ್ದ ಆಸಾಮಿ. ಕಣ್ಣು ಕತ್ತಲೆ ಬಂದಂತಾಗಿ ಕಣ್ಣೀರಿಟ್ಟಳು. ವರಾಂಡದಲ್ಲಿ ಕಂಡ ಕೆಲಸದಾಳುಗಳಲ್ಲಿ ತನ್ನ ಪರಿಸ್ಥಿತಿ ಹೇಳಿದಳು. ಇಂತಹ ವೃತ್ತಿಯ ಹೆಂಗಸರ ಕಣ್ಣೀರಿಗೆ ಸ್ಪಂದಿಸುವಷ್ಟು ಸಮಾಜದಲ್ಲಿ ಹೃದಯವಂತಿಕೆ ಇರಲಿಲ್ಲ. ಅವರು ನಕ್ಕು ಸುಮ್ಮನಾದರು. ಕೊನೆಗೆ ಗೆಳತಿಯ ಫೋನ್‌ನಂಬ್ರ ಬಾಯಿಪಾಠವಿದ್ದುದರಿಂದ ಕೋಣೆಯಿಂದಲೇ ಫೋನ್ ಮಾಡಿ ಅವಳನ್ನು ಕರೆದಳು. ಅವಳು ಬಂದ ಮೇಲೆ ಚೂಡಿದಾರ್ ತಂದಳು. ಹೋಟೇಲಿನಿಂದ ಹೊರಬಂದರೆ ಬಿಲ್ ಕೂಡಾ ಕಟ್ಟಿಲ್ಲ ಆಸಾಮಿ. ಅದನ್ನೆಲ್ಲಾ ಕಂಡಾಗ ಎಷ್ಟೋ ಸಲ ಈ ಬದುಕೇ ಬೇಡ ಎಂದು ಅನಿಸುತ್ತದೆ ಅವರಿಗೆ. ಆದರೆ ಹಾಗೆ ಮಾಡಲು ಅವರಿಂದ ಸಾಧ್ಯವಾಗುವುದಿಲ್ಲ. ಅವರನ್ನು ನಂಬಿದ ಜೀವಗಳಿಗೆ ಆಶ್ರಯ ನೀಡಬೇಕೆಂಬ ಒತ್ತಡ ಅವರನ್ನು ಮತ್ತೆ ಮತ್ತೆ ಅದೇ ವೃತ್ತಿಗೆ ಅಂಟಿಸಿಬಿಡುತ್ತದೆ. ಈ ಅನುಭವವಾದ ಮಹಿಳೆ ಮರುವರ್ಷವೇ ವಿದೇಶದಲ್ಲಿ ಮನೆಗೆಲಸಕ್ಕೆ ಸೇರಿಕೊಂಡಳೆಂದು ತಿಳಿಯಿತು. ಇಲ್ಲಿ ಇನ್ನು ಒಂದು ವಿಚಿತ್ರ ಮನಸ್ಥಿತಿಯ ಮಹಿಳೆಯರೂ ಇದ್ದಾರೆ. ಎಷ್ಟೋ ವರ್ಷಗಳಿಂದ ಈ ವೃತ್ತಿ ಮಾಡಿದವರಿಗೆ ಸೆಕ್ಸ್ ಎಂಬುದು ಅದೊಂದು ಗೀಳಾಗಿ ಕಾಡುತ್ತದೆ. ಒಂದು ದಿನ ಸೆಕ್ಸ್ ಇಲ್ಲದಿದ್ದರೂ ಏನೋ ಕಳಕೊಂಡ ಭಾವ ಕಾಡುತ್ತದಂತೆ. ಕೆಲವು ಮಹಿಳೆಯರು ಈ ವೃತ್ತಿಯಿಂದಲೇ ಒಳ್ಳೆ ಮನೆ ಕಟ್ಟಿ ಸಂಸಾರವನ್ನು ಸುಖದಿಂದ ಬದುಕುವಂತೆ ವ್ಯವಸ್ಥೆ ಮಾಡಿದ ಮೇಲೆ ವೃತ್ತಿಯನ್ನು ತೊರೆದವರೂ ಇದ್ದಾರೆ. ಎಷ್ಟೋ ಮಹಿಳೆಯರು ೩೫ ವರ್ಷ ಆಗುವುದರೊಳಗೆ ನಾನಾ ಕಾಯಿಲೆಗೊಳಗಾಗಿ ಅಕಾಲ ಮರಣವನ್ನಪ್ಪಿದವರೂ ಇದ್ದಾರೆ. ಹಿಂದೆಲ್ಲಾ ಏಡ್ಸ್‌ನಿಂದ ಸಾಯುವವರಿದ್ದರು. ಈಗ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಭರದಿಂದ ಸಾಗುತ್ತಿದೆ. ಹಾಗಿದ್ದರೂ ಕಾಂಡೋಮ್ ಬಳಸಲು ನಿರಾಕರಿಸಿದ ಗಿರಾಕಿಗಳಿಂದ ಹಣ ಹೆಚ್ಚು ಸಿಗುತ್ತದೆಂಬ ದುರಾಸೆಗೆ ಬಲಿಯಾಗಿ ರೋಗ ಬರಿಸಿಕೊಂಡವರೂ ಇದ್ದಾರೆ. ಹೀಗೆ ಈ ಪ್ರಪಂಚದ ಸೃಷ್ಟಿಗೆ ಮೂಲವಾದ ಕಾಮವು ದಾಹವಾಗಿ ವ್ಯಾಮೋಹವಾಗಿ ಪ್ರಪಂಚವನ್ನು ಕಾಡಿದ ಪರಿಯನ್ನು ಕಂಡು ವಿಸ್ಮಯಪಟ್ಟಿದ್ದೇನೆ. ನಾನು ಸುಮಾರು ೧೬ ಮಂದಿಯನ್ನು ಮಾತಾಡಿಸಿ ಅವರ ನೋವಿಗೆ ಕಿವಿಯಾಗಿದ್ದೇನೆ. ಅವುಗಳನ್ನು ಕೃತಿರೂಪಕ್ಕಿಳಿಸಲು ಇನ್ನೂ ನನಗೆ ಧೈರ್ಯ ಬಂದಿಲ್ಲ. ಯಾಕೆಂದರೆ ಅವರ ಬಗ್ಗೆ ಇನ್ನೂ ನಿಗೂಢವಾದ ಅನೇಕ ರಹಸ್ಯಗಳಿವೆ. ಅವರು ಹೇಳಿದ ಮಾತುಗಳನ್ನು ಜರಡಿ ಹಿಡಿಯುವ ಕೆಲಸವನ್ನೂ ಮಾಡಬೇಕಿದೆ. ಹಾಗಾಗಿ ಅದನ್ನು ಕೃತಿರೂಪಕ್ಕಿಳಿಸಿಲ್ಲ.