ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ
ಅಧ್ಯಾಯ ೩೭

ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ ಮಾತೆಂದರೆ ಇಲ್ಲಿಯ ಜನರು ಯಾವುದೇ ಹೋರಾಟ ಅಥವಾ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ. ರಾಜ್ಯದ, ದೇಶದ ಬೇರೆ ಎಲ್ಲಾ ಕಡೆಗಳಲ್ಲಿ ಯಾವ ದೊಡ್ಡ ಚಳುವಳಿಗಳು ನಡೆದರೂ ಇಲ್ಲಿನವರು ಅದಕ್ಕೆ ಫಕ್ಕನೆ ಸ್ಪಂದಿಸುವುದಿಲ್ಲ. ಹೀಗೆ ಅನ್ನೂ ಅನೇಕ ಆರೋಪಗಳು ಈ ಜಿಲ್ಲೆಯ ಜನರ ಮೇಲೆ ಹೊರಿಸಿದ್ದಾರೆ. ಯಾಕಿಂತಹ ಆರೋಪ ಹೊರಿಸಿದರೋ ಗೊತ್ತಿಲ್ಲ. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲೂ ಇಲ್ಲಿಯ ಜನರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದರು. ಸುಮಾರು ಎಂಬತ್ತಕ್ಕೂ ಹೆಚ್ಚು ಮಂದಿ ಹೋರಾಟದ ನಾಯಕತ್ವ ವಹಿಸಿ ಜೈಲುಶಿಕ್ಷೆ ಅನುಭವಿಸಿದ ದಾಖಲೆಗಳಿವೆ. ದೇಶಭಕ್ತ ಕಾರ್ನಾಡು ಸದಾಶಿವ ರಾವ್ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯರು ಇಡೀ ರಾಷ್ಟ್ರವೇ ಗೌರವಿಸಿದ ಧುರೀಣರಾಗಿದ್ದಾರೆ. ಹಾಗಿದ್ದರೂ ಈ ಜಿಲ್ಲೆಯ ಬಗ್ಗೆ ಅದೊಂದು ಮಿಥ್ಯಾರೋಪವೆಂದೇ ತಿಳಿಯಬೇಕಾಗುತ್ತದೆ. ಚರಿತ್ರೆಯಲ್ಲಿ ದಾಖಲಾಗದೆ ಉಳಿದ ಸಂಗತಿಗಳೂ ಇರಬಹುದು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ನೂರಾರು ಮಹಿಳೆಯರು, ಬಿಲ್ಲವರು, ಮೊಗವೀರರು ಭಾಗವಹಿಸಿದರು ಎಂದು ದಾಖಲೆಗಳಿವೆ. ಆದರೆ ಅವರು ಯಾರು ಎಂದು ನಿರ್ದಿಷ್ಟ ಹೆಸರುಗಳಿಲ್ಲ. ಮಂಗಳೂರಿನ ಜೈಲಿನ ಕಡತಗಳನ್ನು ಪರಿಶೀಲಿಸಿದಾಗಲೂ ಶೀನ, ತುಕ್ರ, ದೂಮ ಎಂಬ ಹೆಸರುಗಳಿವೆ. ಅವರು ಯಾವ ಸಮುದಾಯಕ್ಕೆ ಸೇರಿದವರೆಂದು ದಾಖಲೆ ತಿಳಿಸುವುದಿಲ್ಲ. ಹೆಂಗಸರ ಹೆಸರಂತೂ ಇಲ್ಲವೇ ಇಲ್ಲ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಲ್ಲಿ ಸುಗುಣಾಬಾಯಿ, ಅಂಬಾಬಾಯಿ, ಲಕ್ಷ್ಮೀ ರೈ, ಉಮಾಬಾಯಿ ಕುಂದಾಪುರ ಮುಂತಾದವರ ಹೆಸರಿದ್ದರೂ ಅವರನ್ನು ಮಂಗಳೂರಿನ ಜೈಲಿನಲ್ಲಿರಿಸದೆ ಬೇರೆ ಕಡೆ ಇರಿಸಿರಬೇಕು. ಬಹುಶಃ ಕಣ್ಣೂರು ಕಾರಾಗೃಹದ ಕಡತಗಳನ್ನು ಪರಿಶೀಲಿಸಿದರೆ ವಿವರಗಳು ಸಿಗಬಹುದೇನೋ? ಇದೆಲ್ಲಾ ಯಾಕೆ ಹೇಳಿದೆನೆಂದರೆ ಈ ಜಿಲ್ಲೆಯ ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದರೂ ಅವರ ದಾಖಲೆ ಇಲ್ಲಿ ಸಿಗುವುದಿಲ್ಲ. ಅವಿಭಜಿತ ದಕ್ಷಿಣಕನ್ನಡದ ಮೊಗವೀರ, ಬಂಟ ಸಮುದಾಯದ ಮಹಿಳೆಯರು ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ಬಹಳ ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ಅದನ್ನು ದಾಖಲಿಸುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿಲ್ಲ. ಈ ಕೊರತೆಯನ್ನು ಕಂಡು ನಾನು ಮತ್ತು ಗುಲಾಬಿ ಬಿಳಿಮಲೆಯವರು ಸೇರಿ ಪೂರ್ಣ ಮರವೆಗೆ ಜಾರಿ ಹೋಗುವ ಮೊದಲು ಇಲ್ಲಿಯ ಮಹಿಳಾ ಹೋರಾಟದ ದಾಖಲೀಕರಣ ಮಾಡಬೇಕೆಂದು ನಿರ್ಧರಿಸಿ ಕ್ಷೇತ್ರಕಾರ್ಯಕ್ಕೆ ಹೊರಟೆವು.

ಮೊಗವೀರ ಮಹಿಳೆ ಕಲ್ಯಾಣಿ ಪುತ್ರನ್ನಾರ್ಯ ಎಂಬವರು ಹೋರಾಟದಲ್ಲಿ ಜೈಲು ಶಿಕ್ಷೆ ಅನುಭವಿಸಿದರೆಂಬ ಮಾಹಿತಿ ಸಿಕ್ಕಿ ಅವರ ಮುಂಬಯಿಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಾಗ ನನಗೆ ದೊಡ್ಡ ಆಘಾತವಾಗಿತ್ತು. ಅದು ಅವರ ಮೊಮ್ಮಕ್ಕಳಿರುವ ಮನೆಯಾದುದರಿಂದ ಈ ಮೂರನೇ ಪೀಳಿಗೆಗೆ ಕಲ್ಯಾಣಿಯವರ ತ್ಯಾಗದ ಅರಿವೇ ಇರಲಿಲ್ಲ. ನನ್ನೊಂದಿಗೆ ಮಾತಾಡುವಷ್ಟು ತಾಳ್ಮೆಯೂ ಅವರಿಗಿರಲಿಲ್ಲ. ಹಾಗಿರುವಾಗ ಮಹಿಳೆಯ ಇತಿಹಾಸವನ್ನು ಅವಳೇ ಬರೆಯಬೇಕು ತಾನೇ? His-sotryಯಲ್ಲಿ ಅವಳನ್ನು ಹುಡುಕುವುದು ಕಷ್ಟವೆಂದು ತಿಳಿಯಿತು. ಈಗಿನ ಪೀಳಿಗೆಗೆ ತಮ್ಮ ಅಜ್ಜ ಅಜ್ಜಿಯರ ಹೆಸರೇ ಗೊತ್ತಿಲ್ಲ. ಹಾಗಿರುವಾಗ ಅವರ ಚರಿತ್ರೆ ಗೊತ್ತಿರಲು ಸಾಧ್ಯವೇ? ಇಂತಹ ಅನುಭವಗಳಾದ ಮೇಲೆ ನಾವು ಆಯ್ದ ಕೆಲವು ಹಿರಿಯ ಮಹಿಳೆಯರನ್ನು ಸಂದರ್ಶಿಸಿ ಅವರ ನೆನಪಿನ ಉಗ್ರಾಣದಲ್ಲಿ ಉಳಿದಿದ್ದ ಸಂಗತಿಗಳನ್ನು ದಾಖಲಿಸಲು ಪ್ರಾರಂಭಿಸಿದೆವು.

ದಕ್ಷಿಣಕನ್ನಡ ಕೈಗಾರಿಕೆಗೆ ಮೊದಲು ತೆರೆದುಕೊಂಡ ಪ್ರದೇಶ. ಬಾಸೆಲ್ ಮಿಶನ್‌ನವರು ಮತಾಂತರಗೊಂಡ ಸ್ಥಳೀಯರಿಗೆ ಜೀವನೋಪಾಯಕ್ಕಾಗಿ ನೆರವಾಗಲೆಂದು ಹಂಚಿನ ಕಾರ್ಖಾನೆ, ಕೈಮಗ್ಗದ ಕಾರ್ಖಾನೆ, ಬನಿಯನ್ ಕಾರ್ಖಾನೆ, ಮುದ್ರಣ ಕಾರ್ಖಾನೆ ಹೀಗೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿದರು. ಮುಂದೆ ಗೇರು ಬೀಜದ ಕಾರ್ಖಾನೆ, ಬೀಡಿ ಉದ್ಯಮ, ಕಾಫಿ ಕಾರ್ಖಾನೆ, ಅಡಿಕೆ ಸುಲಿಯುವ ಕಾರ್ಖಾನೆಗಳೂ ಸ್ಥಾಪನೆಗೊಂಡವು. ಇಲ್ಲಿನ ಹೆಂಗಸರಿಗೆ ಮನೆಯಿಂದ ಹೊರಗೆ ದುಡಿದು ಗಳಿಸಬಹುದೆಂಬ ಅವಕಾಶ ಕಲ್ಪಿಸಿಕೊಟ್ಟದ್ದು ಈ ಕಾರ್ಖಾನೆಗಳು. ಕೈಮಗ್ಗ, ಬೀಜದ ಕಾರ್ಖಾನೆ, ಬೀಡಿ ಉದ್ಯಮ, ಕಾಫಿ ಕಾರ್ಖಾನೆ, ಅಡಿಕೆ ಸುಲಿಯುವ ಕಾರ್ಖಾನೆಗಳಲ್ಲಿ ಶೇ. ೮೦ ಮಂದಿ ಮಹಿಳೆಯರೇ ಕಾರ್ಮಿಕರು. ಸ್ವಾತಂತ್ಯಪೂರ್ವದಿಂದಲೇ ಈ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಸಂಘಟಿಸುವ ಕೆಲಸ ನಡೆಯಿತು. ಪ್ರಾರಂಭದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರು ಈ ಕೆಲಸ ಮಾಡಿದರೆ ಮುಂದೆ ಕಮ್ಯೂನಿಸ್ಟ್ ಪಕ್ಷವು ಅವರನ್ನು ಸಂಘಟಿಸಿತು. ತುಟ್ಟಿಭತ್ತೆಗಾಗಿ, ಬೋನಸ್‌ಗಾಗಿ, ಕನಿಷ್ಠ ವೇತನಕ್ಕಾಗಿ ಈ ಕಾರ್ಮಿಕರು ಮಾಲೀಕರೊಂದಿಗೆ ಆಗಾಗ ಸಂಘರ್ಷಕ್ಕಿಳಿದು ಚಳುವಳಿಗಳು ನಡೆದುವು. ಇದರ ಮುಂದಾಳುಗಳು ಪುರುಷರಾದರೂ ಭಾಗವಹಿಸಿದವರೆಲ್ಲರೂ ಮಹಿಳೆಯರು. ಈಗ ೮೦ರ ಗಡಿ ದಾಟಿದ ಈ ಮಹಿಳೆಯರು ಮಾಡಿದ ಅಂದಿನ ಹೋರಾಟದ ಕತೆಗಳನ್ನು ಹೇಳುವಾಗ ಕೇಳುವ ನಮಗೆ ರೋಮಾಂಚನವಾಗುತ್ತದೆ. ಇಲ್ಲಿ ಕಾರ್ಖಾನೆಗಳು ಹೆಚ್ಚಿದ್ದರಿಂದ ಕಮ್ಯೂನಿಸ್ಟ್ ಪಕ್ಷದ ಬೆಂಬಲಿಗರೂ ಹೆಚ್ಚು. ಆ ಕಾಲದಲ್ಲಿ ಉಳ್ಳಾಲ ಮತ್ತು ಬಂಟ್ವಾಳದ ಶಾಸಕರಾಗಿಯೂ ಆ ಪಕ್ಷದವರೇ ಆಯ್ಕೆಯಾಗಿದ್ದದ್ದು ವಿಶೇಷವಾಗಿ ಗಮನಾರ್ಹವಾಗಿದೆ.

ಕಾರ್ಮಿಕ ಮಹಿಳೆಯರ ಹೋರಾಟದ ಕತೆಯನ್ನು ದಾಖಲೀಕರಣ ಮಾಡಲು ನಮಗೆ ಸರಿಯಾದ ಮಾರ್ಗದರ್ಶನ ನೀಡಿದವರು ಹಿರಿಯರಾದ ಬಿ.ವಿ. ಕಕ್ಕಿಲ್ಲಾಯರು ಮತ್ತು ಬಿ. ಮಾಧವರು. ಯಾರ್‍ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಅವರಿಂದ ಪಡೆದು ಮುಂದುವರಿದೆವು. ಅನಕ್ಷರಸ್ಥರಾದ ಈ ಕಾರ್ಮಿಕ ಮಹಿಳೆಯರದ್ದು ತುತ್ತಿನ ಪ್ರಶ್ನೆಯಾದ್ದರಿಂದ ಪ್ರಾಣದ ಹಂಗು ತೊರೆದು ಹೋರಾಡಿದ ಕತೆಯನ್ನು ಅವರದೇ ಮಾತುಗಳಲ್ಲಿ ಸಂಗ್ರಹಿಸಿದೆವು. ಪೊಲೀಸರ ಲಾಠಿ ಏಟು ತಿಂದವರು, ರಸ್ತೆಯಲ್ಲಿ ಅಡ್ಡ ಮಲಗಿ ವಾಹನಗಳನ್ನು ತಡೆಗಟ್ಟಿದವರು, ಗರ್ಭಿಣಿಯರು, ಬಾಣಂತಿಯರು, ಪುಟ್ಟ ಕೂಸುಗಳನ್ನು ಕಂಕುಳಲ್ಲಿ ಎತ್ತಿಕೊಂಡವರು, ವೃದ್ಧೆಯರು, ಎಲ್ಲರೂ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡಿದ ಕತೆ ಸ್ವಾರಸ್ಯವಾಗಿದೆ. ಇವರ ಈ ಅನುಭವಗಳನ್ನು ದಾಖಲಿಸದಿದ್ದರೆ ಅವು ಯಾರ ನೆನಪಿನಲ್ಲೂ ಉಳಿಯುತ್ತಿರಲಿಲ್ಲ. ಅದಕ್ಕೇ ಹೇಳುವುದು ನಮ್ಮ ಚರಿತ್ರೆಯನ್ನು ನಾವೇ ಬರೆಯಬೇಕು ಎಂದು.

ಇಂತಹ ಸಂಘಟಿತ ಹೋರಾಟವಲ್ಲದೆ ವೈಯಕ್ತಿಕವಾಗಿ ಹೋರಾಡಿದ ಮಹಿಳೆಯರೂ ಇದ್ದಾರೆ. ಅವರಲ್ಲಿ ಶಕುಂತಳಾ ಕಾಮತ್, ಸಾರಾ ಅಬೂಬಕ್ಕರ್, ಶ್ಯಾಮಲಾ ಭಂಡಾರಿ ಮುಂತಾದವರು ಪ್ರಮುಖರು. ಶಕುಂತಲಾ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಆಡಳಿತ ಮಂಡಳಿ ರಿಲೀವಿಂಗ್ ನೋಟೀಸು ನೀಡಿತು. ಅದನ್ನು ಇವಳು ಪ್ರಶ್ನಿಸಿದ್ದೇ ತಪ್ಪಾಗಿ ಮುಂದೆ ಕಾನೂನು ಸಮರಕ್ಕೆ ಸಿದ್ಧಳಾಗಬೇಕಾಯಿತು. ಕೋರ್ಟು, ಕಚೇರಿ, ವಕೀಲರು, ಪೊಲೀಸು ಮುಂತಾದ ವ್ಯವಸ್ಥೆಯೊಳಗೇ ಸುತ್ತುವಂತಾಗಿ ಅವಳ ವೈಯಕ್ತಿಕ ನೆಮ್ಮದಿಯನ್ನು ಬೇರು ಸಹಿತ ಕಿತ್ತೆಸೆದಂತಾಯಿತು. ಸ್ಥಳೀಯ ಕೋರ್ಟಿನಲ್ಲಿ, ಹೈಕೋರ್ಟಿನಲ್ಲಿ ಕೊನೆಗೆ ಸುಪ್ರೀಂಕೋರ್ಟಿನಲ್ಲಿ ಕೂಡಾ ಆಕೆಯ ಪರವಾಗಿಯೇ ನ್ಯಾಯ ಲಭಿಸಿದರೂ ಆಡಳಿತ ಮಂಡಳಿ ಅವಳನ್ನು ಕೆಲಸಕ್ಕೆ ಸೇರಿಸಿಲ್ಲ. ಖಾಸಗಿ ಸಂಸ್ಥೆಗಳ ಮೇಲೆ ಸರಕಾರ, ಕಾನೂನು ಕೂಡಾ ಶಿರಬಾಗುತ್ತದೆಂಬುದಕ್ಕೆ ಇದು ಸಾಕ್ಷಿಯಾಯಿತು. ಕೋರ್ಟ್ ನಿಂದನೆಯ ಆರೋಪವೂ ಆಡಳಿತ ಮಂಡಳಿಯನ್ನು ಅಲ್ಲಾಡಿಸಲಿಲ್ಲವೆಂದ ಮೇಲೆ ಪ್ರಜಾಪ್ರಭುತ್ವಕ್ಕೆ ಬೆಲೆಯೆಲ್ಲಿದೆ? ಮಾನವಹಕ್ಕು ಆಯೋಗಕ್ಕೂ ದೂರು ಸಲ್ಲಿಸಿದಳು. ಉಹುಂ, ಪ್ರಯೋಜನವಿಲ್ಲ. ಸಾರ್ವಜನಿಕ ಗಮನ ಸೆಳೆಯಲು ಉಪವಾಸ ಸತ್ಯಾಗ್ರಹ ಮಾಡಿದಳು. ಅದೂ ಕೈ ಹಿಡಿಯಲಿಲ್ಲ. ಒಂಟಿ ಹೋರಾಟದಲ್ಲಿ ಗೆದ್ದವರು ಕಡಿಮೆ. ಯಾವುದೇ ಸಂಘಟನೆಯೊಂದಿಗೆ ಸೇರಿಕೊಳ್ಳುತ್ತಿದ್ದರೆ ಏನಾದರೂ ಪ್ರಯೋಜನವಾಗುತ್ತಿತ್ತೇ? ಗೊತ್ತಿಲ್ಲ. ಅವಳಲ್ಲಿ ಹೋರಾಟದ ಕೆಚ್ಚು ಈಗಲೂ ಜೀವಂತವಾಗಿದೆ. ಆಕೆ ಕಾನೂನಿನ ಸಹಾಯ ಬೇಡಿ ನ್ಯಾಯಾಲಯಕ್ಕೆ ಹೋದದ್ದು ಬೆಕ್ಕಿಗಾಗಿ ಹಸುವನ್ನು ಕಳೆದುಕೊಂಡಂತೆಯೇ ಆಯಿತು.

ಸಾರಾ ಅಬೂಬಕರ್ ಅವರನ್ನು ಇಲ್ಲಿನ ಸಂಪ್ರದಾಯಸ್ಥ ಮುಸ್ಲಿಮರು ತಮ್ಮವರೆಂದು ಸ್ವೀಕರಿಸಲು ಒಪ್ಪದೆ ಪುತ್ತೂರಿನ ಸಾಹಿತ್ಯ ಸಮಾವೇಶವೊಂದರಲ್ಲಿ ಅವರ ಮೇಲೆ ಹಲ್ಲೆ ಮಾಡಿದ್ದು, ಮುಖ್ಯ ಅತಿಥಿಗಳು, ಅಧ್ಯಕ್ಷರು ಭಾಷಣ ಮಾಡದೇ ಸಭೆಯಿಂದ ನಿರ್ಗಮಿಸುವಂತಾದ್ದು ದಾಖಲಾದ ಘಟನೆ. ಆ ಬಳಿಕ ಸಾರಾನ ಬಗ್ಗೆ ಅವಮಾನಕರವಾದ ಮಾತುಗಳನ್ನು ಮುಸ್ಲಿಂ ಬಂಧುಗಳು ಸನ್ಮಾರ್ಗ ಎಂಬ ಪತ್ರಿಕೆಯಲ್ಲಿ ಬರೆಯತೊಡಗಿದ್ದರು. ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದು ತರವಲ್ಲವೆಂದು ಸಾರಾ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಸಾರಾನ ಪರವಾಗಿ ಎ.ಪಿ. ಗೌರೀಶಂಕರ ಎಂಬ ವಕೀಲರು ವಾದಿಸಿದರು. ಸಾರಾಗೆ ಜಯವಾಯಿತು. ಪತ್ರಿಕೆಯಲ್ಲಿ ಇವರ ಬಗ್ಗೆ ಅಪಪ್ರಚಾರ ಮಾಡುವುದು ನಿಂತಿತು. ಹಿಂಸೆ, ಅವಮಾನ, ನಿಂದೆಗಳನ್ನು ಸಹಿಸುವುದು ಶೋಷಣೆ ಮಾಡುವವರಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ. ಅದರ ವಿರುದ್ಧ ಪ್ರತಿಭಟಿಸಿದರೆ ಮಾತ್ರ ಶೋಷಕರು ಸ್ವಲ್ಪ ಯೋಚನೆ ಮಾಡುತ್ತಾರೆ. ಆರೋಪ ಹೊರಿಸುವುದಕ್ಕೆ ಹಿಂಜರಿಯುತ್ತಾರೆ ಎಂಬ ಸತ್ಯವನ್ನು ಸಾರಾ ತನ್ನ ಕಾನೂನು ಹೋರಾಟದಲ್ಲಿ ಸಾಬೀತುಪಡಿಸಿದರು.

ಕುಂದಾಪುರದ ವಕೀಲೆ ಶ್ಯಾಮಲಾ ಭಂಡಾರಿಯವರು ವರದಕ್ಷಿಣೆಯ ವಿರುದ್ಧ ಕಾನೂನು ಸಮರ ಸಾರಿ ಗೆದ್ದವರು. ತನ್ನನ್ನು ವರಿಸಲು ಬಂದ ವರನ ಬಗ್ಗೆಯೇ ಕೇಸು ದಾಖಲಿಸಿ ಕಾನೂನು ಸಮರ ಸಾರಿದವರು. ತನ್ನನ್ನು ಮದುವೆಯಾಗಲಾರನೆಂದು ಗೊತ್ತಿದ್ದೂ ಕೂಡಾ ಬೇರೆ ಹೆಣ್ಣುಮಕ್ಕಳ ಹೆತ್ತವರು ವರದಕ್ಷಿಣೆಯ ಕಾರ್ಪಣ್ಯದಿಂದ ಪಾರಾಗುವಂತೆ ಮತ್ತು ಮದುವೆ ಗಂಡುಗಳು ಧನಪಿಶಾಚಿಗಳಾಗದಂತೆ ಎಚ್ಚರಿಕೆ ನೀಡಿದ ಚಾರಿತ್ರಿಕ ಘಟನೆಯಿದು. ನಮ್ಮ ಜಿಲ್ಲೆಯಲ್ಲೇ ಒಂದು ಭಾರೀ ಸಂಚಲನವನ್ನುಂಟುಮಾಡಿದ ಘಟನೆಯಾಗಿ ಸುದ್ದಿಯಾಗಿತ್ತು. ಡಾ. ಶಿವರಾಮ ಕಾರಂತರೂ ಕೂಡಾ ಶ್ಯಾಮಲಾ ಭಂಡಾರಿಯವರ ಈ ಕಾನೂನು ಸಮರವನ್ನು ಮೆಚ್ಚಿ ಬೆಂಬಲಿಸಿದ್ದರು ಎಂಬುದು ಗಮನಾರ್ಹ. ತನ್ನನ್ನು ವರಿಸಲು ಬಂದ ಗಂಡಿನ ಕಡೆಯವರು ವರದಕ್ಷಿಣೆಯ ಬೇಡಿಕೆಯಿಟ್ಟಾಗ ಅದು ಬಂಟ ಸಮುದಾಯದಲ್ಲಿ ಸಾಮಾನ್ಯ ಸಂಗತಿಯೆಂದು ಶ್ಯಾಮಲಾ ತಿಳಿದಿದ್ದರು. ಆದರೆ ಹುಡುಗ ಅದಕ್ಕಾಗಿ ಬೇರೆ ಕಡೆ ಹೆಚ್ಚು ವರದಕ್ಷಿಣೆಗೆ ಗಾಳ ಹಾಕುತ್ತಿದ್ದ ಸುದ್ದಿ ತಿಳಿದ ತಕ್ಷಣ ಅವರು ಜಾಗೃತರಾಗಿ ಅವರ ಧನದಾಹಕ್ಕೆ ಪಾಠ ಕಲಿಸಲು ಸಿದ್ಧರಾದರು. ಈ ಕಾನೂನು ಸಮರದಲ್ಲಿ ಶ್ಯಾಮಲಾ ಗೆದ್ದು ಹುಡುಗನು ದಂಡ ಪಾವತಿಸಬೇಕೆಂದು ಕೋರ್ಟು ಆದೇಶಿಸಿತು. ಅವನು ಮದುವೆಯಾಗಿ ಆರಾಮವಾಗಿದ್ದಾನೆ. ಶ್ಯಾಮಲಾ ಆ ಬಳಿಕ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಮಾಜದ ಶೋಷಿತರ ಆಸರೆಯಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಳೆದ ಶತಮಾನದ ೮೦ರ ದಶಕದಲ್ಲಿ ಮಂಗಳೂರಿನ ಶ್ರದ್ಧಾನಂದ ಸೇವಾಶ್ರಮದಲ್ಲಿ ನಡೆದ ಲೈಂಗಿಕ ಹಗರಣವೊಂದು ಬಯಲಾಗಿ ಮಂಗಳೂರಿನ ನಾಗರಿಕರು ಆ ಆಶ್ರಮದ ವಿರುದ್ಧ ಹೋರಾಟಕ್ಕೆ ಸಿದ್ಧರಾದರು. ಮೊತ್ತಮೊದಲು ಕಾಲೇಜು ವಿದ್ಯಾರ್ಥಿನಿಯರು ಸಂಘಟಿತರಾಗಿ ಮೆರವಣಿಗೆ ನಡೆಸಿದರು. ಚಂದ್ರಕಲಾ ನಂದಾವರ, ವಿಜಯಲಕ್ಷ್ಮೀ ಶೆಟ್ಟಿ, ನರೇಂದ್ರ ನಾಯಕ್ ಮುಂತಾದ ಪ್ರಜ್ಞಾವಂತರೆಲ್ಲಾ ಸಂಘಟಿತರಾಗಿ ಈ ಹಗರಣದ ಆರೋಪಿಗಳನ್ನು ಕಾನೂನಿನ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದರು. ಕಾನೂನಿನ ಬಲೆಯನ್ನು ದುಂಬಿಗಳು ಹರಿದು ಪಾರಾಗುತ್ತವೆ. ಸೊಳ್ಳೆಗಳು ಮಾತ್ರ ಸಿಕ್ಕಿಕೊಳ್ಳುತ್ತವೆ ಎಂಬ ಮಾತು ಸತ್ಯವಾಯಿತು. ಆರೋಪಿ ಆರಾಮವಾಗಿ ವಿದೇಶವಾಸಿಯಾದ. ಆದರೆ ಸಂತ್ರಸ್ತರಾದ ಹುಡುಗಿಯರ ಬಾಳಿಗೊಂದು ನೆಲೆಯನ್ನು ಕಲ್ಪಿಸಿಕೊಡುವುದಕ್ಕೆ ಚಂದ್ರಕಲಾ ನಂದಾವರ ಸಾಕಷ್ಟು ಶ್ರಮಿಸಿದರು. ಈ ಹೆಣ್ಣುಮಕ್ಕಳು ಸಮಾಜದಲ್ಲಿ ತಲೆಯೆತ್ತಿ ಬಾಳುವಂತಹ ವಾತಾವರಣ ಆಗ ಇರಲಿಲ್ಲ. ಅವರನ್ನು ಸ್ವಾವಲಂಬಿಯಾಗಿ ಬದುಕುವಂತೆ ಸಹಾಯ ಮಾಡುವುದೂ ಈ ಹೋರಾಟದಲ್ಲಿ ಭಾಗವಹಿಸಿದವರ ಕರ್ತವ್ಯವೆಂದು ತಿಳಿದು ಹಲವು ಹೆಣ್ಣುಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.

ಅವರಲ್ಲಿ ಕೆಲವರು ಶಿಸ್ತಿನ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟವಾಗಿ ಇವರ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದರು. ಅವರನ್ನೆಲ್ಲಾ ನಮ್ಮ ಮನೆಯ ಮಕ್ಕಳೆಂಬಷ್ಟು ಮಮತೆಯಿಂದ ಕಾಣುವ ವಾತಾವರಣ ಮೂಡಬೇಕಾದರೆ ದೀರ್ಘ ಕಾಲದವರೆಗೆ ಅವರೊಂದಿಗೆ ಸಂಪರ್ಕದಲ್ಲಿರಬೇಕಾಗಿತ್ತು. ಆಪ್ತ ಸಮಾಲೋಚನೆ ಮಾಡಬೇಕಿತ್ತು. ಅವರಲ್ಲಿ ಕೆಲವು ಹೆಣ್ಣುಮಕ್ಕಳ ಬಾಳು ಚಿಂದಿ ಚಿಂದಿಯಾಗದಂತೆ ಶ್ರಮಿಸಿದವರಲ್ಲಿ ಚಂದ್ರಕಲಾ ನಂದಾವರ ಮತ್ತು ವಿಜಯಲಕ್ಷ್ಮಿ ಶೆಟ್ಟಿಯವರು ಮುಖ್ಯರಾಗುತ್ತಾರೆ. ದಾರಿ ತಪ್ಪುವುದಕ್ಕಿಂತ ಅರ್ಧ ದಾರಿಯಲ್ಲಿ ಹಿಂತಿರುಗುವುದು ಲೇಸು ಎಂಬ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದವರು ಕಾನೂನಿನಲ್ಲಿ ಸೋತಿರಬಹುದು. ಆದರೆ ಸೋಲುಗಳು ಎಚ್ಚರಿಕೆಯಿಂದಿರಲು ಕಲಿಸುತ್ತವೆ. ಕೆಲಸದ ಮೇಲಿನ ಶ್ರದ್ಧೆಯನ್ನು ಹೆಚ್ಚಿಸುತ್ತವೆ ಎಂಬುದೂ ಅಷ್ಟೇ ಸತ್ಯವಲ್ಲವೇ?

ಇದೇ ಸಮಯದಲ್ಲಿ ಉಡುಪಿಯ ಮಲ್ಪೆಯಲ್ಲಿ ದಲಿತ ಮಹಿಳೆಯರ ಹೋರಾಟದ ಕತೆಯೂ ಮಹತ್ವದ್ದಾಗಿದೆ. ಮೀನು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ದಲಿತ ಮಹಿಳೆಯರಿಗೆ ಮೀನುಗಾರ ಮಹಿಳೆಯರಿಂದಲೇ ಅಂದರೆ ಮೊಗವೀರ ಮಹಿಳೆಯರಿಂದಲೇ ಒಂದಷ್ಟು ಅಡೆತಡೆಗಳುಂಟಾಗಿದ್ದುವು. ವೃತ್ತಿಸಹಜವಾದ ಮತ್ಸರವು ಈ ಮಹಿಳೆಯರ ಬದುಕನ್ನು ಅತಂತ್ರಗೊಳಿಸಿದಾಗ ಇವರು ಸಂಘಟಿತರಾಗಿ ಹೋರಾಟಕ್ಕಿಳಿದರು. ಮೀನು ಒಣಗಿಸುವ ಜಾಗಕ್ಕಾಗಿ ಇವರು ದೀರ್ಘ ಕಾಲ ಹೋರಾಟ ಮಾಡಬೇಕಾಯಿತು. ಚರಿತ್ರೆಯಲ್ಲಿ ತಿಳಿದಿರುವುದಕ್ಕಿಂತ ತಿಳಿಯದವುಗಳೂ ಹೆಚ್ಚಿವೆ. ಹಾಗೆಯೇ ನಮಗೆ ಈ ದಲಿತ ಮಹಿಳೆಯರನ್ನು ಸಂಪರ್ಕಿಸುವರೆಗೂ ಅವರು ಬದುಕಿಗಾಗಿ ಸಂಘಟಿತ ಹೋರಾಟ ಮಾಡಿದ ಕತೆಯೇ ಗೊತ್ತಿರಲಿಲ್ಲ. ಈ ಮಹಿಳೆಯರು ಶಾಸಕರ ಗಮನ ಸೆಳೆಯಲು ರಸ್ತೆಗೆ ಅಡ್ಡ ಮಲಗಿ ತಮ್ಮ ಪ್ರತಿಭಟನೆ ಸಲ್ಲಿಸಿದರು. ತನಗೂ ಇಲ್ಲಿ ಬದುಕುವ ಹಕ್ಕು ಇದೆ ಎಂಬುದನ್ನು ಸಾಬೀತುಪಡಿಸಲು ಸಂಘಟಿತ ಪ್ರಯತ್ನ ಮಾಡಿದ ಮೇಲೆ ಈಗ ಅವರೇ ಒಂದು ಸಹಕಾರಿ ಬ್ಯಾಂಕು ಸ್ಥಾಪನೆ ಮಾಡಿದ್ದಾರೆ. ಮಹಿಳೆಯರ ಸ್ವಉದ್ಯೋಗಕ್ಕೆ, ಶಿಕ್ಷಣ ಸವಲತ್ತುಗಳಿಗೆ ಸಹಾಯ ಮುಂತಾದ ಅಗತ್ಯಗಳನ್ನು ಪೂರೈಸಲು ಸಾಲದ ರೂಪದಲ್ಲಿ ಮತ್ತು ಧನಸಹಾಯದ ರೂಪದಲ್ಲಿ ನೀಡುವಷ್ಟು ಶಕ್ತರಾಗಿದ್ದಾರೆ. ಇದರಿಂದಾಗಿ ಆ ಸಂಘಟನೆಯಲ್ಲಿ ಭಾಗಿಯಾಗಿದ್ದವರ ಈಗಿನ ತಲೆಮಾರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಗಟ್ಟಿಗೊಳ್ಳುವುದಕ್ಕೆ ಸಹಾಯವಾಗಿದೆ. ಇವರ ಈ ಹೋರಾಟದ ಹಿಂದೆ ಅವರ ಸಮಾಜದ ಪುರುಷರೂ ಬೆಂಬಲ ನೀಡಿದ್ದನ್ನು ಮಹಿಳೆಯರು ಸ್ಮರಿಸುತ್ತಾರೆ.

ಹಾಗೆ ನೋಡಿದರೆ ಪ್ರತಿಯೊಬ್ಬ ಮಹಿಳೆಯ ಬದುಕೂ ಒಂದು ಹೋರಾಟದ ಕತೆಯೇ. ಉದ್ಯೋಗಸ್ಥ ಮಹಿಳೆಯು ಆಫೀಸು ಮತ್ತು ಮನೆಯನ್ನು ಸುಸೂತ್ರವಾಗಿ ನಿಭಾಯಿಸುವುದಕ್ಕೆ ಪಡುವ ಪಾಡು ಹೇಳಲಾರೆ, ಹೇಳದಿರಲಾರೆ ಎಂಬಷ್ಟು ಒತ್ತಡಗಳನ್ನು ಸೃಷ್ಟಿಸುತ್ತದೆ. ಹಾಗಾದರೆ ಗಂಡಸರಿಗೆ ಒತ್ತಡಗಳಿಲ್ಲವೇ? ಇದೆ. ಅವರು ಒತ್ತಡ ನಿವಾರಣೆಗಾಗಿ ಅವರೇ ಪರಿಹಾರ ಕಂಡುಕೊಳ್ಳುತ್ತಾರೆ ಮತ್ತು ಅವರ ಒತ್ತಡ ನಿವಾರಿಸಲು ಕುಟುಂಬ ತುದಿಗಾಲಲ್ಲಿ ನಿಂತು ಸಹಕರಿಸುತ್ತದೆ. ಹೆಣ್ಣಿನ ಪರಿಸ್ಥಿತಿಗೆ ಈ ರೀತಿಯ ಸ್ಪಂದನೆ ಸಿಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪುರುಷ ಸಮುದಾಯದ ಮನಸ್ಥಿತಿಯ ಬಗ್ಗೆ ಸ್ವಲ್ಪ ಬದಲಾವಣೆಯಾಗಿದೆ, ಸ್ತ್ರೀಪರವಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಅದಕ್ಕೆ ತೀರಾ ಭಿನ್ನವಾದ ಮನೋಭಾವಗಳು ವಿಜೃಂಭಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸ್ತ್ರೀ ತನ್ನ ಮನೆತನ, ಮಕ್ಕಳು, ಸಂಸಾರ ಮತ್ತು ತುತ್ತಿನ ಪ್ರಶ್ನೆಗಾಗಿ ಎಂತಹ ಹೋರಾಟಕ್ಕೂ ಸಿದ್ಧಳಾಗುತ್ತಾಳೆಂಬುದಕ್ಕೆ ನಮ್ಮ ಜಿಲ್ಲೆಯಲ್ಲೇ ಸಾಕಷ್ಟು ಉದಾಹರಣೆಗಳಿವೆ. ಈ ಮಹಿಳೆಯರ ಹೋರಾಟದ ಕತೆಗಳನ್ನು ದಾಖಲೀಕರಣ ಮಾಡಿದ ನನಗೆ ಮತ್ತು ಗುಲಾಬಿ ಬಿಳಿಮಲೆಯವರಿಗೆ ಧನ್ಯತಾಭಾವ ಮೂಡಿದೆ ಎಂದು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತೇನೆ.

(ಮುಂದುವರಿಯಲಿದೆ)