ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ
ಅಧ್ಯಾಯ ೩೮

`ತಾಯೊಲವೆ ತಾಯೊಲವು ಈ ಲೋಕದೊಳಗೆ ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ’ ಇದು ಜಿ.ಎಸ್. ಶಿವರುದ್ರಪ್ಪನವರ ಕವನದ ಸಾಲು. ಈ ಪ್ರಪಂಚದ ಸಮಸ್ತ ತಾಯಂದಿರಿಗೂ ಈ ಮಾತು ಅನ್ವಯವಾಗುತ್ತದೆ. ನನ್ನ ಅಮ್ಮನಂತೂ ಒಂಬತ್ತು ಮಕ್ಕಳನ್ನು ಹೆತ್ತು ಇಬ್ಬರನ್ನು ಮಾತ್ರ ಜೀವಂತವಾಗಿ ಉಳಿಸಿಕೊಂಡವಳು. ಹಾಗಾಗಿ ನಮ್ಮ ಮೇಲೆ ಅವಳ ಪ್ರೀತಿ ಧಾರಾಕಾರವಾಗಿ ಸುರಿದಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಸುಮಾರು ೮೪ ವರ್ಷಗಳ ತುಂಬು ಜೀವನವನ್ನು ಬಾಳಿದ ಆಕೆ ಜೀವನದುದ್ದಕ್ಕೂ ಅನುಭವಿಸಿದ ಮಾನಸಿಕ ಯಾತನೆ ಸಾಮಾನ್ಯವಾದುದಲ್ಲ. ಸಮೃದ್ಧ ಬೇಸಾಯದ ಗೇಣಿಭೂಮಿಯನ್ನು ಧಿಕ್ಕರಿಸಿ ಬರಿಗೈಯಲ್ಲಿ ಮಂಗಳೂರಿಗೆ ಬಂದು ಬಂಧುಗಳ ಹಂಗಿನಲ್ಲಿ ಬದುಕುವಂತಹ ಸ್ಥಿತಿಯಲ್ಲೂ ತಾಳ್ಮೆಗೆಡದೆ, ದುಡಿಮೆಯಿಲ್ಲದ ನಿತ್ಯರೋಗಿಯಾದ ಗಂಡನನ್ನು ತಾನು ಬೀಜದ ಕಾರ್ಖಾನೆಯಲ್ಲಿ ದುಡಿದು ಸಾಕಬಲ್ಲೆನೆಂಬ ಧೈರ್ಯ ತುಂಬಿದವಳು ಆಕೆ. ಅವರ ದಾಂಪತ್ಯದಲ್ಲಿ ಹೊಂದಾಣಿಕೆ ಮತ್ತು ಸಹನೆಯಿತ್ತೇ ಹೊರತು ಮಾಧುರ್ಯವಿರಲಿಲ್ಲ. ಎಲ್ಲಾ ಸಂಸಾರಗಳಲ್ಲಿ ಗಂಡ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದ. ನಮ್ಮಲ್ಲಿ ಹೆಂಡತಿ ಗಂಡ ಮಕ್ಕಳನ್ನು ಸಾಕುತ್ತಿದ್ದಳು. ಅಪ್ಪ ತೀರಿದ ಬಳಿಕ ದೀರ್ಘ ದಾಂಪತ್ಯದಿಂದ ಬಿಡುಗಡೆಗೊಂಡಾಗ ಅವಳ ಮನಸ್ಸಿಗೆ ಏನನಿಸಿರಬಹುದು? ಒಂದು ಬಂಧನದಿಂದ ಮುಕ್ತಿ ಲಭಿಸಿದ ಅನುಭವವಾಗಿರಬಹುದೇ? ಹೌದು, ಅವಳ ವರ್ತನೆಗಳು ಅದನ್ನೇ ಹೇಳುತ್ತಿದ್ದುವು. ಆ ಬಳಿಕ ಮಗನ ಮೇಲೆ ಪ್ರಾಣ ಇಟ್ಟುಕೊಂಡಿರುವ ಅಮ್ಮನಿಗೆ ಅವನೇ ನಮ್ಮ ರಕ್ಷಕ ಎಂಬ ಭಾವವಿತ್ತು. ಅಂತಹ ಮಗನಿಗೆ ಮದುವೆ ಮಾಡಬೇಕೆಂಬ ಉತ್ಸಾಹದಿಂದ ಅತ್ತೆಯೂ ಆದಳು.

ಈ ಉತ್ಸಾಹ ಹೆಚ್ಚು ಕಾಲ ಉಳಿಯಲಿಲ್ಲ. ನನ್ನಮ್ಮ ಆದರ್ಶ ತಾಯಿ ಆದಳೇ ಹೊರತು ಆದರ್ಶ ಅತ್ತೆ ಆಗಲಿಲ್ಲ. ಆದರ್ಶ ಅತ್ತೆಯಾಗುವ ಹಂಬಲ ಯೋಗ್ಯತೆ ಎಲ್ಲವೂ ಆಕೆಯಲ್ಲಿತ್ತು. ಆದರೆ ಆ ಯೋಗ್ಯತೆಯನ್ನು ಸಾಬೀತುಪಡಿಸುವ ಅವಕಾಶವೇ ಅವಳಿಗೆ ಸಿಗಲಿಲ್ಲ ಅಥವಾ ಆ ಯೋಗ್ಯತೆಯನ್ನು ಅವಳಿಂದ ಕಿತ್ತುಕೊಂಡರೋ ತಿಳಿಯದು. ತುಂಬಿದ ಅವಿಭಕ್ತ ಕುಟುಂಬದಲ್ಲಿ ಅತ್ತೆಯ ನಾಲ್ಕು ಮಂದಿ ಸೊಸೆಯಂದಿರಲ್ಲಿ ಪ್ರೀತಿಯ ಸೊಸೆಯಾಗಿ ಬಾಳಿದ ಅಮ್ಮನಿಗೆ ಒಬ್ಬ ಸೊಸೆಗೆ ಒಳ್ಳೆ ಅತ್ತೆಯಾಗಿ ಬಾಳುವ ಭಾಗ್ಯ ಒದಗಲಿಲ್ಲ. ಅದಕ್ಕಾಗಿ ಪರಿತಪಿಸಲಿಲ್ಲ. ತಾನು ಓಡಿಸಿದ ಗಾಡಿ ತನ್ನ ಇಷ್ಟದಲ್ಲಿಗೆ ಹೋಗದಿದ್ದರೆ ಗಾಡಿ ಹೋದಲ್ಲಿಗೆ ತಾನು ಹೋಗುವುದು ಎಂಬ ಹೊಂದಾಣಿಕೆ ಮಾಡಿಕೊಂಡು ಬಾಳಿದಳು. ಮೊಮ್ಮಕ್ಕಳು ಸಣ್ಣವರಿರುವಾಗ ಅವರನ್ನು ಎತ್ತಿ ಆಡಿಸಿ ಸಂತೋಷಪಟ್ಟಳು. ಮಕ್ಕಳು ಸ್ವಲ್ಪ ದೊಡ್ಡವರಾದಾಗ ಮಾತ್ರ ಅವರ ಹಿಂದೆ ಓಡಾಡುವುದು ಅವಳಿಂದ ಸಾಧ್ಯವಾಗದ ಕಾರಣ ಆ ಮಕ್ಕಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ನೋಡಿಕೊಳ್ಳಲಿಕ್ಕಾಗಿಯೇ ಯಾರಾದರೂ ಬಂಧುಗಳನ್ನು ಮನೆಯಲ್ಲಿರಿಸಿಕೊಳ್ಳುವುದು ಅನಿವಾರ್ಯವಾಯಿತು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭ ಮಾಡಿದ ಮೇಲೆ ಅವಳು ನಿರಾಳವಾದಳು.

ಸಂಜೆ ಮಕ್ಕಳು ಮನೆಗೆ ಬಂದಾಗ ಏನಾದರೂ ತಿಂಡಿ ಮಾಡಿ ಕಾಯುತ್ತಿದ್ದಳು. ನಾನು ಮತ್ತು ಲಲಿತಾ ಶಾಲೆಯಿಂದ ಮನೆಗೆ ಬರುವುದು ಸ್ವಲ್ಪ ತಡವಾದರೆ ಹೊರಗೆ ಕೂತು ಕುತ್ತಿಗೆ ಉದ್ದ ಮಾಡಿ ರಸ್ತೆಯನ್ನು ನೋಡುತ್ತಿದ್ದಳು. ಇನ್ನು ತಮ್ಮ ಬರುವುದು ತಡವಾದರೆ ಅವಳು ಕೂತಲ್ಲೇ ಚಡಪಡಿಸುವುದು ನಮಗೆ ಅರ್ಥವಾಗುತ್ತಿತ್ತು. ನಮಗೋಸ್ಕರ ಕಾಯುತ್ತಿರುವ ಒಂದು ಹಿರಿಜೀವವಿದೆ ಎನ್ನುವುದೇ ನಮಗೆ ಸಂಭ್ರಮದ ವಿಷಯವಾಗಿತ್ತು. ಅದು ಆಗ ಗೊತ್ತಾಗಿರಲಿಲ್ಲ. ಈಗ ಗೊತ್ತಾಗುತ್ತದೆ. ಏನೋ ಕೆಲಸಗಳಲ್ಲಿ ಮಗ್ನರಾದ ನಾವು ತಡಮಾಡಿ ಬರುತ್ತೇವೆಂದು ಹೇಳಿರುವುದಿಲ್ಲ. ಮನೆಗೆ ಬಂದರೆ ನಮ್ಮ ಮೇಲೆ ಸಣ್ಣದಾಗಿ ಆಕ್ಷೇಪಿಸಿ ಗದರುತ್ತಿದ್ದಳು. “ಹೇಳಬಾರದೇ? ಕತ್ತಲೆಯಾಗುವ ಮೊದಲು ಮನೆ ಸೇರಬಾರದೇ?” ಹೀಗೆಲ್ಲಾ ಮುನಿಸಿಕೊಳ್ಳುತ್ತಿದ್ದಳು. “ನಾವೇನು ಸಣ್ಣ ಮಕ್ಕಳೇ? ಇನ್ನೂ ಕೂಡಾ ನಮ್ಮನ್ನು ಕಾಯುತ್ತಾ ಕೂರುತ್ತೀಯಲ್ಲಾ? ನಿನಗೇನು ಬೇರೆ ಕೆಲಸವಿಲ್ಲವೇ?” ಹೀಗೆ ನಾನು ಗದರಿಸಿದ್ದೂ ಇದೆ. ಈಗ ಅಮ್ಮನಿಲ್ಲದ ಹೊತ್ತಿನಲ್ಲಿ ನನಗೋಸ್ಕರ ಮಿಡಿಯುವ ತುಡಿಯುವ ಜೀವದ ಬಗ್ಗೆ ಪ್ರೀತಿಯ ಸ್ಪಂದನವುಂಟಾಗುತ್ತದೆ.

ದೀರ್ಘ ಕಾಲದ ದಾಂಪತ್ಯದಲ್ಲಿ ಅಮ್ಮ ಏನು ಸುಖ ಕಂಡಳು? ಒಂಬತ್ತು ಮಕ್ಕಳನ್ನು ಹೆತ್ತು ಏಳು ಮಕ್ಕಳನ್ನು ಹೊಂಡದಲ್ಲಿ ಹೂತ ಅವಳ ದೌರ್ಭಾಗ್ಯಕ್ಕೆ ಎಣೆಯಿಲ್ಲ. ಮಕ್ಕಳಿಬ್ಬರು ಕಲಿತು ಸರಕಾರಿ ಹುದ್ದೆಯಲ್ಲಿದ್ದುದು ಮಾತ್ರ ಅವಳಿಗೆ ನೆಮ್ಮದಿಯನ್ನು ನೀಡಿದೆ. ತಾನು ಮದುವೆಯಾಗಿ ಗಂಡನಿಂದ ಸಾಸಿವೆ ಕಾಳಿನಷ್ಟು ಸುಖ ನೆಮ್ಮದಿಯನ್ನು ಕಾಣದಿದ್ದರೂ ತನ್ನ ಮಗಳು ಮದುವೆ ಆಗದೆ ಉಳಿದದ್ದು ಮಾತ್ರ ಆಕೆಗೆ ದೊಡ್ಡ ಚಿಂತೆಯಾಗಿ ಕೊರೆಯುತ್ತಿತ್ತು. ನೆನಪಾದಾಗಲೆಲ್ಲಾ “ನಿನಗೆ ಪ್ರಾಯ ಆದಾಗ ನೋಡಿಕೊಳ್ಳಲು ಯಾರಿದ್ದಾರೆ ಮಗಳೇ” ಎಂದು ಹನಿಗಣ್ಣಾಗುತ್ತಿದ್ದಳು. ಮದುವೆ ಆಗದವರು ಎಷ್ಟು ಸುಖವಾಗಿ ಬದುಕುತ್ತಾರೆ ನೋಡು ಎಂದು ನಾನು ಹಲವು ಮಹಿಳೆಯರ ಮಾದರಿಗಳನ್ನು ಅವಳ ಮುಂದಿಟ್ಟು ಸಂತೈಸುತ್ತಿದ್ದೆ. ಆದರೂ ಅವಳಿಗೆ ಸಮಾಧಾನವಾದಂತೆ ಕಾಣುತ್ತಿರಲಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಕಳಕಳಿಯಿರುವುದು ಎಲ್ಲಾ ತಾಯಂದಿರಿಗೂ ಸಹಜ ತಾನೇ?

ಅಮ್ಮ ತನಗೆ ಪ್ರಾಯವಾಗಿದೆ. ನಾನೇಕೆ ಕೆಲಸ ಮಾಡಬೇಕು ಎಂದು ಯೋಚಿಸಿದವಳಲ್ಲ. ತನಗೆ ಮಾಡಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಮಾಡುತ್ತಾ ಯಾರಿಗೂ ಹಿಂಸೆ ನೀಡದೆ, ಭಾರವಾಗದೆ ಬಾಳಿದವಳು. ವೃದ್ಧಾಪ್ಯದ ಕೆಲವು ಸಮಸ್ಯೆಗಳು ಬಿಟ್ಟರೆ ಆಕೆಗೆ ಯಾವ ಕಾಯಿಲೆಗಳೂ ಇರಲಿಲ್ಲ. ಆರೋಗ್ಯವಾಗಿದ್ದಳು. ಅಂತಹ ಅಮ್ಮ ಒಂದು ದಿನ ಕ್ರೂರಿಯೊಬ್ಬನ ದೌರ್ಜನ್ಯಕ್ಕೆ ತುತ್ತಾಗಿ ಹತಳಾಗುವಳು ಎಂದು ನಾವು ಯಾರೂ ಊಹಿಸಲು ಸಾಧ್ಯವಿರಲಿಲ್ಲ. ೨೦೦೦ನೇ ಇಸವಿಯ ದಶಂಬರ ತಿಂಗಳ ೨೬ನೇ ತಾರೀಕಿನ ಆ ದಿನವನ್ನು ನೆನೆದಾಗ ಕರುಳು ಕಿತ್ತಂತಾಗುತ್ತದೆ. ಆಕೆ ಕೊನೆಗಾಲದಲ್ಲೂ ಅಪಾರ ಹಿಂಸೆ ನೋವು ಅನುಭವಿಸಬೇಕಾಯ್ತೇ? ಎಂದು ನಾವು ಈಗಲೂ ಪರಿತಪಿಸುವಂತಾಯಿತು.

ನಾನು ಕ್ರಿಸ್‌ಮಸ್ ರಜೆಯಲ್ಲಿ ಮುಲ್ಕಿಯಿಂದ ಮನೆಗೆ ಬಂದಿದ್ದೆ. ದಶಂಬರ್ ೨೬ರಂದು ನನಗೆ ಉಳ್ಳಾಲದ ಲೂಸಿ ಪಿರೇರಾನ ಬಳಿಯಲ್ಲಿ ಸ್ವಲ್ಪ ಕೆಲಸವಿತ್ತು. ಸಂಜೆ ಬರುತ್ತೇನೆಂದು ಅಮ್ಮನಲ್ಲಿ ಹೇಳಿ ಹಂಪನಕಟ್ಟೆಗೆ ಹೋದವಳು ಟೆಲಿಪೋನ್ ಬೂತಿನಿಂದ ಲೂಸಿಯ ಮನೆಗೆ ಫೋನ್ ಮಾಡಿದೆ. ಸಂಪರ್ಕ ಸಿಕ್ಕದ ಕಾರಣ ಇನ್ನು ಉಳ್ಳಾಲಕ್ಕೆ ಹೋಗುವುದು ಬೇಡವೆಂದು ಸೀದಾ ಮನೆಗೆ ಮರಳಿ ಬಂದೆ. ಆಗ ಸುಮಾರು ಹನ್ನೆರಡೂವರೆ ಗಂಟೆಯಾಗಿತ್ತು. ಮನೆಯ ಬಾಗಿಲು ಬಡಿದೆ. ಬೆಲ್ ಒತ್ತಿದೆ. ಅಮ್ಮನ ಉತ್ತರವಿಲ್ಲ. ಬಾಗಿಲು ಚಿಲಕ ಹಾಕಿ ಹೊರಗೆ ಹಿತ್ತಲಲ್ಲಿ ತರಗೆಲೆ ಒಟ್ಟು ಮಾಡುತ್ತಿದ್ದಾಳೇನೋ ಎಂದು ಹಿತ್ತಲಿನಾಚೆಗೆ ಹೋಗುವಾಗ ಒಳಗಿನಿಂದ ರವಿ ಕಾಣಿಸಿಕೊಂಡ. ನನಗೆ ಆಶ್ಚರ್ಯವಾಯಿತು. “ಅರೇ, ನೀನೇನು ಮಾಡುತ್ತೀ ಒಳಗೆ?” ಎಂದು ಜೋರಾಗಿಯೇ ಕೇಳಿದೆ. ಏನೂ ಉತ್ತರಿಸದ ರವಿ ತಕ್ಷಣ ಹಿಂಬಾಗಿಲ ಚಿಲಕ ತೆಗೆದು ಧಡಧಡನೆ ಓಡಿದ. ನಮ್ಮ ಮನೆಯ ಪಕ್ಕದಲ್ಲಿ ಪಂಚಾಯತ್ ಆಫೀಸು ಇದೆ.

ಅಲ್ಲಿ ಕೆಲವರು ನಿಂತಿದ್ದರು. ನಾನು ಬೊಬ್ಬೆ ಹಾಕಿ, “ನೋಡಿ ಕಳ್ಳ ಕಳ್ಳ ಓಡುತ್ತಾನೆ. ಹಿಡಿಯಿರಿ” ಎಂದೆ. ಪಂಚಾಯತ್ ಆಫೀಸಿಗೆ ಬಂದ ಗಂಡಸೊಬ್ಬರು ಅವನನ್ನು ಬೆನ್ನಟ್ಟಿದರು. ದೊಡ್ಡ ರಸ್ತೆಯ ಪಕ್ಕದಲ್ಲಿ ಒಬ್ಬ ತರುಣ ನಿಂತಿದ್ದ. ರವಿ ಓಡಿಕೊಂಡು ಬರುತ್ತಿದ್ದವ “ಕೆಲಸ ಕೆಟ್ಟಿತು ಓಡುವಾ” ಎಂದು ಹೇಳಿದನಂತೆ. ಇಬ್ಬರೂ ಕುಡುಪು ಸಂಕದಾಚೆಯ ಗದ್ದೆಯಾಚೆ ಓಡಿದರು. ಅವರನ್ನು ಬೆನ್ನಟ್ಟಿಕೊಂಡು ಹೋದ ಗಂಡಸು ಒಂದಷ್ಟು ದೂರ ಓಡಿ ಅವರು ಮಾಯವಾದರೆಂದು ಹೇಳುತ್ತಾ ಹಿಂದಿರುಗಿದರು. ತೆರೆದ ಹಿಂಬಾಗಿಲಿನಿಂದ ಒಳಗೆ ಬಂದು ನೋಡುವಾಗ ಅಮ್ಮ ಕೋಣೆಯೊಳಗೆ ಮಂಚದಲ್ಲಿ ಮಲಗಿದ್ದಾರೆ. ಮೈಮೇಲೆ ಬಟ್ಟೆ ಇಲ್ಲ. ಗಾಬರಿಗೊಂಡ ನಾನು ಎದೆ ಮುಟ್ಟಿ ನೋಡಿದರೆ ಬೆಚ್ಚಗಿತ್ತು. ಕೂಡಲೇ ವಾಮಂಜೂರಿನ ಎ.ಬಿ. ಶೆಟ್ಟಿ ಡಾಕ್ಟರಿಗೆ ಫೋನ್ ಮಾಡಿದೆ. ಈಗ ನನ್ನ ಕೈಕಾಲೇ ಆಡದಂತಹ ಸ್ಥಿತಿ. ನನ್ನ ದೊಡ್ಡಮ್ಮನ ಮಗ ಕಮಲಾಕ್ಷ ನೆರೆಮನೆಯಲ್ಲಿದ್ದ. ಅವನನ್ನು ಕರೆಸಿದೆ. ಅಮ್ಮ ಮಂಚದ ಮೇಲೆ ಇದ್ದ ಸ್ಥಿತಿಯನ್ನು ಹೇಳಲೋ ಹೇಳದಿರಲೋ ಎಂಬ ಸ್ಥಿತಿಯಲ್ಲಿ ಒದ್ದಾಡಿದೆ. ಹತ್ತು ನಿಮಷದೊಳಗೆ ಬಂದ ಡಾಕ್ಟರು ಪರೀಕ್ಷೆ ಮಾಡಿ ಪ್ರಾಣ ಹೋಗಿದೆ ಎಂದು ಹೇಳಿದ ಮೇಲೆ ನನ್ನ ತಲೆ ಸಂಪೂರ್ಣ ಖಾಲಿಯಾಯಿತು. ಯೋಚಿಸುವ ಶಕ್ತಿಯನ್ನೇ ಕಳಕೊಂಡಿತು.

ಆಗ ಪಂಚಾಯತ್ ಆಫೀಸಿನಲ್ಲಿ ವಿಲೇಜ್ ಎಕೌಂಟೆಂಟ್ ಆಗಿ ಮಾಲಿನಿ ಎಂಬವರು ಇದ್ದರು. ಅವರು ಮೊತ್ತಮೊದಲು ಅಮ್ಮನ ಹೆಣವನ್ನು ಕಂಡವರು ಕುಸಿದು ಕುಳಿತುಬಿಟ್ಟರು. ಇಂತವರಿಗೇ ಹೀಗಾಯಿತು ಎಂದ ಮೇಲೆ ಇನ್ನು ನಾವು ಇಲ್ಲಿ ಕೆಲಸ ಮಾಡುವುದು ಹೇಗೆ? ಎಂದು ಖಿನ್ನತೆಗೊಳಗಾದರು. ಮೊದಲೇ ಆರೋಗ್ಯ ಸರಿಯಿಲ್ಲದ ಆಕೆ ಆ ಬಳಿಕ ಕೆಲಸಕ್ಕೆ ರಾಜಿನಾಮೆ ಕೊಟ್ಟುಬಿಟ್ಟರು. ೮೪ ವರ್ಷದ ವೃದ್ಧೆಯ ಮೇಲೆಯೇ ಇಂತಹ ಅತ್ಯಾಚಾರ ನಡೆಯಿತೆಂದ ಮೇಲೆ ಅಲ್ಲಿ ಕೆಲಸ ಮಾಡುವ ಸ್ಥೈರ್ಯವನ್ನೇ ಕಳಕೊಂಡುಬಿಟ್ಟರು. ಇನ್ನು ಮುಂದಿನ ಕೆಲಸ ನಡೆಯಬೇಕಲ್ಲ? ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿ ಇಲ್ಲಿ ಒಂದು ಕೊಲೆ ಆಗಿದೆ ಎಂದೆ. ಪೊಲೀಸರು ಬಂದರು. ತಾಯಿಯ ಮೇಲೆ ಅತ್ಯಾಚಾರ ಆಗಿದೆ ಎಂದು ನಾನು ಹೇಳಿದರೂ ಪೊಲೀಸರು ನಂಬುವ ಸ್ಥಿತಿಯಲ್ಲಿರಲಿಲ್ಲ. ಅಡಿಗೆ ಕೋಣೆಯಲ್ಲಿ ಎರಡು ಲೋಟಾಗಳಿದ್ದವು. ಜೂಸ್ ಬಾಟ್ಲಿಯೂ ಅಡುಗೆ ಕೋಣೆಯಲ್ಲಿತ್ತು. ಅಮ್ಮ ಜೂಸ್ ಮಾಡಿ ಇಬ್ಬರಿಗೆ ಕೊಟ್ಟಿದ್ದಾರೆ ಎಂದೆ. ಅದನ್ನು ಕೂಡಾ ಪೊಲೀಸರು ಕೇಳಿಸಿಕೊಳ್ಳಲಿಲ್ಲ. ಮಹಜರು ನಡೆಸಿ ಪೋಸ್ಟ್‌ಮಾರ್ಟಂಗೆ ಆಸ್ಪತ್ರೆಗೆ ಹೆಣವನ್ನು ಒಯ್ದರು. ಪ್ರಾಣ ಬಿಡುವ ಹೊತ್ತಿನಲ್ಲಿ ಎಷ್ಟು ಹಿಂಸೆ ನೋವು ಅನುಭವಿಸಿದರೋ? ನಮ್ಮನ್ನೆಲ್ಲಾ ಎಷ್ಟು ನೆನಪಿಸಿಕೊಂಡರೋ? ಆ ಕೊಲೆಗಡುಕರೊಂದಿಗೆ ಏನೇನು ಮಾತುಕತೆ ನಡೆಯಿತೋ? ಒಂದೂ ಗೊತ್ತಿಲ್ಲ. ನಾವು ಊಹಿಸಿಕೊಳ್ಳಬೇಕಷ್ಟೆ. ಇಬ್ಬರೂ ಯುವಕರು ಮನೆಯೊಳಗೆ ಬಂದಿದ್ದರು ಎಂಬುದಕ್ಕೆ ಜೂಸ್ ಕುಡಿದ ಲೋಟಗಳೇ ಸಾಕ್ಷಿ. ನಾನು ನೋಡುವ ಹೊತ್ತಿಗೆ ಮನೆಯೊಳಗೆ ಒಬ್ಬನೇ ಇದ್ದದ್ದು ಸತ್ಯ. ಹೆದ್ದಾರಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಆ ಇನ್ನೊಬ್ಬನನ್ನು ನಾನು ಗಮನಿಸಿಲ್ಲ.

ಕೊಲೆಯಲ್ಲಿ ಇಬ್ಬರೂ ಭಾಗಿಗಳೇ? ಒಬ್ಬನು ಮಾತ್ರವೇ? ಗೊತ್ತಿಲ್ಲ. ಮನೆಯಲ್ಲಿ ಪೊಲೀಸು ಸಿಬ್ಬಂದಿ ತನಿಖೆ ನಡೆಸುತ್ತಿರುವ ವೇಳೆಯಲ್ಲಿಯೇ ಮನೆಗೆ ಪೋನ್ ಬಂತು. ಕೊಲೆಗಾರನೇ ಫೋನ್ ಮಾಡಿದ್ದ. ರೋಹಿಣಿಯಕ್ಕನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ನೋಡಿದ್ದೆ. ಹೆದರಿ ಓಡಿಬಂದೆ ಎಂದು ಹೇಳಿದ. ಈ ಫೋನ್ ಎಲ್ಲಿಂದ ಬಂತು ಎಂಬುದನ್ನು ಪೊಲೀಸರು ಕಂಡುಹಿಡಿದರು. ಅದು ಕದ್ರಿ ಪಾರ್ಕಿನಾಚೆಯಿಂದ ಎಂದು ಗೊತ್ತಾದ ತಕ್ಷಣ ನನ್ನ ತಮ್ಮನ ಮಕ್ಕಳನ್ನು ಕರೆದುಕೊಂಡು ಕದ್ರಿ ಪಾರ್ಕಿಗೆ ಪೊಲೀಸರು ಧಾವಿಸಿದರು. ಅಲ್ಲಿ ಇಬ್ಬರೂ ಕುಡಿದು ಟೈಟ್ ಆಗಿ ಕೂತಿದ್ದರಂತೆ. ಪೊಲೀಸರನ್ನು ಕಂಡ ಕೂಡಲೇ ಓಡಿಹೋಗಲು ಪ್ರಯತ್ನಿಸಿದಾಗ ಪಾರ್ಕಿಗೆ ಬಂದಿದ್ದ ಹುಡುಗಿಯರು ಕೆಲವರು ದೂರದಲ್ಲಿ ಕೂತಿದ್ದವರು ಎದ್ದು ಅವರು ತಪ್ಪಿಸಿಕೊಂಡು ಓಡಿಹೋಗದಂತೆ ತಡೆದರಂತೆ. ಆ ಹೆಣ್ಣುಮಕ್ಕಳಿಗೆ ಅಂತಹ ಧೈರ್ಯ ಹೇಗೆ ಬಂತು? ಗೊತ್ತಿಲ್ಲ. ಹೆಚ್ಚು ಪ್ರಯಾಸವಿಲ್ಲದೆ ಪೊಲೀಸರು ಇಬ್ಬರನ್ನೂ ಬಂಧಿಸಿ ಪೊಲೀಸ್ ಠಾಣೆಗೆ ತಂದರು. ರವಿಯನ್ನು ಕರೆದುಕೊಂಡು ಮನೆಗೆ ಬಂದರು. ಆಗ ಅವನು ತೊಟ್ಟ ಶರ್ಟ್‌ನಲ್ಲಿ ರಕ್ತದ ಕಲೆಗಳಿದ್ದುವು. ವಿಪರೀತ ಕುಡಿದಿದ್ದ ಕಾರಣ ಅವನ ಬಾಯಿ ಬಿಡಿಸುವ ಕೆಲಸ ಮಾಡಲಿಲ್ಲ. ಅವನನ್ನು ಕಂಡಾಗ ಯಾಕೆ ಹಾಗೆ ಮಾಡಿದೆ? ಅಮ್ಮನ ಪ್ರಾಣ ತೆಗೆಯುವಂತಹ ಅನ್ಯಾಯವನ್ನು ನಿನಗೇನು ಮಾಡಿದ್ದಾರೆ? ಎಂದು ಕೇಳಬೇಕೆನಿಸಿತು. ಕೇಳಲಿಲ್ಲ. ಅವನ ಮುಖ ನೋಡುವುದೇ ಅಸಹ್ಯವೆನಿಸಿತು.

ವಾರಗಳ ಹಿಂದೆ ಷಷ್ಠಿ ಜಾತ್ರೆಗೆ ಬಂದವನು ಮನೆಗೆ ಬಂದು ಊಟ ಮಾಡಿ ಹೋದವನು ಇವನೇ ಏನು? ಅಮ್ಮನ ಕೈಯಿಂದಲೇ ಅನ್ನ ಹಾಕಿಸಿಕೊಂಡು ಹೊಟ್ಟೆ ತುಂಬ ಉಂಡದ್ದನ್ನು ಕಂಡು ಸಂತೋಷಪಟ್ಟ ಅಮ್ಮನ ಕತ್ತು ಹಿಸುಕುವಾಗ ಅವನಿಗೆ ಅದ್ಯಾವುದೂ ನೆನಪಾಗಲಿಲ್ಲವೇ? ಇನ್ನೂ ೨೪-೨೫ರ ತರುಣ. ತನ್ನ ಇಡೀ ಬದುಕನ್ನೇ ಕೊಂದು ಕೊಂಡು ನಮ್ಮ ಬದುಕಿಗೂ ಕತ್ತಲೆಯ ಮುಸುಕು ಹೊದಿಸಿದ ಅವನ ಉದ್ದೇಶವಾದರೂ ಏನು? ಒಂದರ್ಥದಲ್ಲಿ ಅವನು ದಾರಿ ತಪ್ಪಿದ ಮಗ. ಕುಡುಕ ತಂದೆಯ ಹಿಂಸೆ ಅನುಭವಿಸಿ ರೋಸಿದ ತಾಯಿ ಮಗನನ್ನು ತಿದ್ದಿ ಬುದ್ಧಿ ಕಲಿಸುವಲ್ಲಿಯೂ ಎಡವಿದರು. ತಿರುಬೋಕಿಯಾದ ಅವನನ್ನು ಅಂಕೆಯಲ್ಲಿರಿಸಲು ಅವನ ಬಂಧುಗಳಿಗೆ ಯಾರಿಗೂ ಸಾಧ್ಯವಾಗಲಿಲ್ಲ. ಈ ಘಟನೆ ನಡೆಯುವ ಎರಡು ವರ್ಷಗಳ ಹಿಂದೆ ಜಯಶ್ರೀ ಗೇಟ್ ಬಳಿಯಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದರಿಂದ ಬೈಕ್ ಒಂದನ್ನು ಕದ್ದು ಸಿಕ್ಕಿಬಿದ್ದು ಜೈಲು ಶಿಕ್ಷೆ ಕಂಡವನಿಗೆ ನೇಣುಗಂಬದ ಭಯವೂ ಕಾಡಲಿಲ್ಲವೆಂದು ಕಾಣುತ್ತದೆ. ಅಥವಾ ಜೈಲಿನಲ್ಲಿ ಪಳಗಿ ಬಂದವನಿಗೆ ಇನ್ನು ಯಾವ ಕ್ರೌರ್ಯವೂ ಸಲೀಸು ಎಂಬಂತಹ ಮನೋಭಾವ ಉಂಟಾಗಿರಬೇಕು.

ಒಮ್ಮೆ ಜೈಲಿನೊಳಗೆ ಹೋದವರು ಹೊರಬರುವಾಗ ಪಳಗಿದ ಕಳ್ಳರೋ, ಕೊಲೆಗಾರರೋ, ದರೋಡೆಕೋರರೋ ಆಗಿ ಹಿಂದೆ ಬರುತ್ತಾರೆ ಎಂಬುದು ರವಿಯ ಮಟ್ಟಿಗೆ ಸತ್ಯವಾಯಿತು. ಅಮ್ಮನ ಪ್ರಾಣವನ್ನು ಮಾತ್ರ ಅವನು ತೆಗೆದನೇ ಹೊರತು ಅವರ ಮೈಮೇಲಿನ ಒಡವೆಗಳಾಗಲೀ, ಮನೆಯ ಯಾವುದೇ ವಸ್ತುವನ್ನಾಗಲೀ ಅವನು ಮುಟ್ಟಲಿಲ್ಲ. ಯಾಕೆ? ಗೊತ್ತಿಲ್ಲ. ನಾನು ಮನೆಗೆ ಬರುವುದು ಇನ್ನೂ ತಡವಾಗುತ್ತಿದ್ದರೆ ಏನಾದರೂ ಕದಿಯುವ ಸಂಭವವಿದ್ದಿರಲೂಬಹುದು. ನಾನು ಅಮ್ಮನ ಪ್ರಾಣ ಹೋದ ಹೊತ್ತಿಗೆ ಅಲ್ಲಿ ಬಂದು ತಲುಪಿದ ಕಾರಣ ಅವನ ಎಲ್ಲಾ ಪ್ಲ್ಯಾನುಗಳೂ ಅಡಿಮೇಲಾಗಿರಬಹುದೇನೋ? ಅಂತೂ ಅಂದೇ ಸಂಜೆ ಅಮ್ಮನ ಶವಸಂಸ್ಕಾರ ನಡೆಯಿತು. ಹೀಗೆ ತಟ್ಟನೆ ಎದ್ದುಹೋದ ಅಮ್ಮನಿಗೆ ಇಂತಹ ಮರಣವನ್ನು ನೀಡಬೇಕಿತ್ತೇ ಆ ಕ್ರೂರಿಗಳು? ಯಾವ ಯಾವ ವಿಧದಲ್ಲಿ ಪೊಲೀಸರು ಕೇಳಿದರೂ ತಾನು ಕೊಲೆ ಮಾಡಿಲ್ಲವೆಂದೇ ಹೇಳಿದ ರವಿಯ ಮನಸ್ಸಿನಾಳದಲ್ಲಿ ಏನಿದೆ? ಯಾಕೆ ಈ ರೀತಿಯ ಸುಳ್ಳು ಹೇಳುತ್ತಿದ್ದಾನೆ ತಿಳಿಯದು. ಇವನ ಜೊತೆಗಾರ ವಿಶ್ವನಾಥ ಈ ಕೊಲೆಯಲ್ಲಿ ಎಷ್ಟು ಪಾಲುದಾರ ಗೊತ್ತಿಲ್ಲ. ಅವನೂ ಪೊಲೀಸ್ ಕಸ್ಟಡಿಯಲ್ಲಿದ್ದ ಕಾರಣ ಅವನ ಕುಟುಂಬದವರು ಮಂಗಳೂರಿನ ಪ್ರಸಿದ್ಧ ಕ್ರಿಮಿನಲ್ ಲಾಯರ್ ಸೀತಾರಾಮ ಶೆಟ್ಟಿಯನ್ನು ಹಿಡಿದು ಈ ಕೇಸನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು.

ಅಮ್ಮನ ಕೊಲೆಯಾಗಿ ಮೂರು ದಿನ ಕಳೆದಿರಬಹುದು. ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ನನಗೆ ಒಂದು ಕರೆ ಬಂತು. “ನೀನು ರೋಹಿಣಿ ಅಲ್ವಾ? ನಿನ್ನನ್ನೂ ನಿನ್ನ ಅಮ್ಮನನ್ನು ಕೊಂದಂತೆ ರೇಪ್ ಮಾಡಿ ಕೊಲ್ಲುತ್ತೇವೆ. ಹುಷಾರ್” ಎಂಬ ಬೆದರಿಕೆ ಹಾಕಿದರು. ಈಗ ನನ್ನ ಕೈಕಾಲೇ ಮರಗಟ್ಟಿತು. ಹಾಗಾದರೆ ಅಮ್ಮನನ್ನು ರೇಪ್ ಮಾಡಿ ಕೊಂದದ್ದೆಂದು ಅವರೇ ಒಪ್ಪಿಕೊಂಡಂತಾಯಿತಲ್ಲವೇ? ಈ ಫೋನ್ ಕಾಲ್ ಕೂಡಾ ಕದ್ರಿಪಾರ್ಕ್ ಕಡೆಯಿಂದಲೇ ಬಂದಿತ್ತು ಎಂದು ಗೊತ್ತಾಯಿತು. ಕದ್ರಿಪಾರ್ಕಿನಲ್ಲಿ ಒಂದು ರೌಡಿಗ್ಯಾಂಗ್ ಇತ್ತಂತೆ. ಪಾರ್ಕಿಗೆ ಬರುವ ಪ್ರೇಮಿಗಳನ್ನು ಗುರುತಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಯುವುದೇ ಈ ಗ್ಯಾಂಗಿನ ಕಸುಬಾಗಿತ್ತು. ಅದರಲ್ಲಿ ಈ ರವಿಯೂ ಒಬ್ಬ. ಅವನ ಗ್ಯಾಂಗಿನ ಗೆಳೆಯರು ನನಗೆ ಬೆದರಿಕೆ ಕರೆ ಮಾಡಿದ್ದರು ಎಂದು ಗೊತ್ತಾಯಿತು. ಪುನಃ ಪೊಲೀಸ್ ಕಂಪ್ಲೈಂಟ್ ಕೊಟ್ಟೆವು. ವಾರದ ಬಳಿಕ ಮತ್ತೊಂದು ಫೋನ್, ಅಲ್ಲಿಂದಲೇ. “ಮೊನ್ನೆ ಹೇಳಿದ್ದು ನೆನಪಿದೆಯಲ್ವಾ ಹುಷಾರ್” ಎಂದಷ್ಟೇ ಹೇಳಿ ಫೋನ್ ಇಟ್ಟರು. ಇದು ನನ್ನ ಬದುಕಿನ ಪ್ರತಿಕ್ಷಣವನ್ನು ನರಕಯಾತನೆ ಮಾಡಿತು. ನನ್ನ ಬುದ್ಧಿ, ತಿಳುವಳಿಕೆ, ಸಮಯಸ್ಫೂರ್ತಿ ಯಾವುದೂ ಇಲ್ಲಿ ಪ್ರಯೋಜನವಾಗಲಿಲ್ಲ. ಒಂದು ಸಣ್ಣ ತರಗೆಲೆ ಬಿದ್ದ ಶಬ್ದ ಕಿವಿಗೆ ಬಿದ್ದರೂ ಯಾರೋ ಅಪರಿಚಿತರು ನನ್ನ ಕೊಲೆಗೆ ಸಂಚು ರೂಪಿಸುತ್ತಾರೇನೋ ಎಂದು ವಾರಗಳ ಕಾಲ ಭಯದಿಂದ ತತ್ತರಿಸುವಂತಾಯಿತು.

ಕಂಗಾಲಾದ ನನ್ನ ಮನಸ್ಥಿತಿಯನ್ನು ಕಂಡು ನಮ್ಮ ಹಿತೈಷಿಯೂ ನಮ್ಮ ಮನೆಯ ಮೇಲೆ ವಾಸವಾಗಿರುವವನೂ ಆದ ಯುವಕನೊಬ್ಬ ಅವನದೇ ಒಂದು ಗ್ಯಾಂಗ್ ಕಟ್ಟಿಕೊಂಡು ಕದ್ರಿ ಪಾರ್ಕಿಗೆ ಹೋಗಿ ಅಲ್ಲಿ ಇದ್ದ ಗ್ಯಾಂಗಿನವರೊಂದಿಗೆ ಮುಖಾಮುಖಿಯಾಗಿ ಮುಖ ಮೂತಿ ನೋಡದೆ ಚಚ್ಚಿ ಇನ್ನು ಮುಂದೆ ಹೀಗೆ ಫೋನ್ ಮಾಡಿದರೆ ಈ ಭೂಮಿಯ ಮೇಲೆ ನೀವು ಹುಟ್ಟಿಲ್ಲವೆಂದು ಮಾಡಿಬಿಡುತ್ತೇವೆ ಎಂದರಂತೆ. ಆಮೇಲೆ ಬೆದರಿಕೆಯ ಕರೆಗಳು ನಿಂತವು. ಕೆಟ್ಟವನ ಕೈಯಲ್ಲಿ ಯಾವ ಆಯುಧ ಇದ್ದರೂ ನಮಗೆ ಅಪಾಯವೇ ಹೆಚ್ಚು. ಶಸ್ತ್ರಾಸ್ತ್ರಗಳ ಮೂಲಕ ನ್ಯಾಯ ದೊರಕಿಸಲು ಪ್ರಯತ್ನಿಸಿದರೆ ಕಾನೂನು ಮೂಕವಾಗುತ್ತದೆ. ಆದರೆ ಈ ಅಸ್ತ್ರಗಳು ಕ್ಷಿಪ್ರ ಪರಿಣಾಮ ಬೀರಿದ್ದು ಸುಳ್ಳವಲ್ಲವಷ್ಟೆ!

ಮುಂದಿನದೆಲ್ಲಾ ಕೋರ್ಟು ಮತ್ತು ವಕೀಲರ ಜೊತೆಗಿನ ನನ್ನ ಹೋರಾಟ. ನಿಜವಾಗಿ ಕೊಲೆ ನಡೆದಂದು ನಾನು ರವಿಯನ್ನು ಕಂಡಿಲ್ಲ. ಕಂಡಿದ್ದರೆ ಕಂಟ್ರೋಲ್ ರೂಮಿಗೆ ನಾನು ಫೋನ್ ಮಾಡಿದಾಗಲೇ ತಿಳಿಸುತ್ತಿದ್ದೆ. ಅಮ್ಮನನ್ನು ಅವರು ಕೊಲೆ ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಂಡು ಸತ್ತರು ಎಂದೇ ವಕೀಲರು ವಾದಿಸಿದರು. ಎರಡು ದಿನ ನನ್ನನ್ನು ಪಾಟೀ ಸವಾಲಿಗೆ ಒಳಪಡಿಸಿದ ಆ ಕ್ರಿಮಿನಲ್ ವಕೀಲರು ನನ್ನ ಬಾಯಿ ಮುಚ್ಚಿಸಲು ಶತಪ್ರಯತ್ನ ಮಾಡಿದರು. ನಾನು ಸುಳ್ಳು ಹೇಳುತ್ತೇನೆಂದು ದಬಾಯಿಸಿದರು. ಪ್ರಬಲವಾದ ಪ್ರತ್ಯಕ್ಷ ಸಾಕ್ಷಿ ನಾನೇ ಇದ್ದರೂ ಕೊನೆಗೆ ತೀರ್ಪು ಹೊರಬಂದಾಗ ನಾನು ದಿಗ್ಮೂಢಳಾದೆ. ಜಡ್ಜ್ ಮತ್ತು ವಕೀಲರೊಂದಿಗೆ ಏನಾದರೂ ಅಡ್ಡ ವ್ಯವಹಾರಗಳು ನಡೆದಿರಬಹುದೇ? ವಿಶ್ವನಾಥನನ್ನು ಕೊಲೆ ಕೇಸಿನಿಂದ ರಕ್ಷಿಸುವ ತಂತ್ರದಲ್ಲಿ ನಿಜವಾದ ಕೊಲೆಗಾರ ರವಿಯೂ ಪಾರಾದ. ಸರಿಯಾದ ಸಾಕ್ಷಿಗಳಿಲ್ಲದೆ ಇಬ್ಬರೂ ಒಂದು ವರ್ಷದ ಜೈಲುವಾಸದಿಂದ ಬಿಡುಗಡೆಗೊಂಡರು. ಇನ್ನು ಮುಂದಿನ ನಮ್ಮ ನಡೆ ಹೈಕೋರ್ಟಿಗೆ. ಇಲ್ಲಿ ನ್ಯಾಯ ಸಿಕ್ಕದ ಮೇಲೆ ಅಲ್ಲಿ ಸಿಗುವುದೆಂಬ ಖಾತ್ರಿ ಇರಲಿಲ್ಲ. ಆದರೆ ವರ್ಷದ ಬಳಿಕ ಈ ಕೊಲೆ ಕೇಸಿನ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಯಿತೆಂಬ ಸುದ್ದಿ ಪ್ರಕಟವಾಯಿತು. ಇದು ನನಗೆ ನ್ಯಾಯದ ವಿಡಂಬನೆಯಂತೆ, ಅಣಕದಂತೆ ಕಂಡಿತು.

ಇಬ್ಬರೂ ಆರೋಪಿಗಳು ಎಲ್ಲೋ ರಹಸ್ಯ ಸ್ಥಳದಲ್ಲಿ ಆರಾಮವಾಗಿ ಬದುಕುತ್ತಿದ್ದಾರೆ. ಅವರನ್ನು ಹುಡುಕಿ ತಂದು ಜೈಲಿಗೆ ಹಾಕುವುದಂತೂ ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲ. ಸ್ವತಂತ್ರವಾಗಿ ಜೀವನ ಮಾಡಬೇಕಾಗಿದ್ದ ಈ ಯುವಕರು ಎಲ್ಲೋ ಕಣ್ಣು ತಪ್ಪಿಸಿ ಗುಪ್ತವಾಗಿ ಬದುಕುವಂತಹ ಪರಿಸ್ಥಿತಿಯಲ್ಲಿ ಬಾಳಬೇಕಾಯಿತೇ? ಅವರನ್ನು ಹೆತ್ತಮ್ಮನಿಗೆ, ಪೋಷಕರಿಗೆ, ಬಂಧುಗಳಿಗೆ ಎಂತಹ ಮಾನಸಿಕ ಹಿಂಸೆ ನೀಡುತ್ತಿರಬಹುದು? ಇಷ್ಟು ವರ್ಷದ ನಂತರ ನನಗೆ ಈಗ ಶಾಂತಸ್ಥಿತಿಯಲ್ಲಿ ಯೋಚಿಸುವಾಗ ಭಾವನೆಗಳು ಬದಲಾಗಿವೆ. ನನ್ನ ಚಿಂತನೆಗಳು ಬದಲಾಗಿವೆ. ಆ ಯುವಕರ ಬಗ್ಗೆ ಸೇಡಿನ ಭಾವವಿಲ್ಲ. ನನಗೆ ಎಲ್ಲಾದರೂ ಕಾಣಲು ಸಿಕ್ಕಿದರೆ ಅವರನ್ನು ಎದುರಿಗೆ ಕೂರಿಸಿ ಪ್ರೀತಿಯಿಂದ ಅಂದು ಏನೇನು ನಡೆಯಿತು? ಯಾಕಾಗಿ ಅಮ್ಮನನ್ನು ಕೊಂದಿರಿ? ನಿಮ್ಮ ಉದ್ದೇಶವೇನಿತ್ತು ಎಂದು ಕೇಳಬೇಕೆಂದೆನಿಸುತ್ತದೆ. ಅವರು ಸತ್ಯ ಹೇಳಿಯಾರು ಎಂಬ ವಿಶ್ವಾಸವಿಟ್ಟುಕೊಂಡು ಮಾತಾಡಬೇಕು. ಅವರು ಸತ್ಯ ಹೇಳಿಯಾರೇ? ಸುಳ್ಳಿಗೆ ಒಂದು ಕಾಲಾದರೆ ಸತ್ಯಕ್ಕೆ ಎರಡು ಕಾಲು ಅನ್ನುತ್ತಾರೆ. ಅದು ಬೇಗನೇ ಪಲಾಯನ ಮಾಡುತ್ತದೆ. ಇಷ್ಟರವರೆಗೆ ನಡೆದದ್ದು ಸತ್ಯವಲ್ಲ ಎಂದು ತಿಳಿದರೆ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೇವೆಂಬ ಭಯವೂ ಅವರಿಗೆ ಸಹಜ. ಸತ್ಯಗಳು ಚಿರಂಜೀವಿಗಳಲ್ಲವಲ್ಲಾ. ಈ ಲೋಕದಲ್ಲಿ ಚಲಾವಣೆಯಲ್ಲಿರುವುದು ಸುಳ್ಳು ಬೆರೆತ ಸತ್ಯವಷ್ಟೆ. ತಾಮ್ರ ಬೆರೆತ ಬಂಗಾರದಂತೆ ಅದು ಅಶುದ್ಧವಾದರೂ ಹೆಚ್ಚು ಜನಪ್ರಿಯತೆಯಿರುವುದು ಅದಕ್ಕೇ ತಾನೇ? ಹಾಗಾಗಿ ನನ್ನ ಆಸೆ ಫಲಿಸುವುದು ಸಂಶಯ. ನಮ್ಮದೇ ಮನೆಯ ಹುಡುಗನೊಬ್ಬ ಇಂತಹ ಕ್ರೌರ್ಯ ಮಾಡಲು ಹೇಗೆ ಮನಸ್ಸಾಯಿತು? ಎಂಬ ಪ್ರಶ್ನೆ ಈಗಲೂ ಎಲ್ಲರನ್ನೂ ಕಾಡುತ್ತಿದೆ. ಆ ಹುಡುಗ ಬೇರಾರೂ ಅಲ್ಲ, ನನ್ನ ತಮ್ಮನ ಹೆಂಡತಿ ಲಲಿತನ ಅಣ್ಣನ ಮಗ. ಲಲಿತ ಪ್ರೀತಿಯಿಂದ ಕೈತುತ್ತು ಕೊಟ್ಟು ಲಾಲಿ ಹಾಡಿ ಬೆಳೆಸಿದ ಹುಡುಗ. ಅವನಿಂದ ಇಂತಹ ಕೃತ್ಯವೊಂದು ನಡೆಯಿತಲ್ಲಾ. ಒಂದು ಮುಗ್ಧಜೀವವೊಂದು ನರಳಿ ಸಾಯುವಂತಾಯಿತಲ್ಲಾ. ನಾನು ಬದುಕಿರುವವರೆಗೂ ನನ್ನನ್ನು ಈ ಪ್ರಶ್ನೆಗಳು ಚುಚ್ಚುತ್ತಲೇ ಇರುತ್ತವೆ. ನಮ್ಮ ಬದುಕಿನ ಶ್ರೇಷ್ಠ ಸಲಹೆಗಾರ ಕಾಲವೇ. ಆ ಕಾಲವೇ ನನಗೆ ಸಹನೆಯನ್ನು ಕಲಿಸಿದೆ.

ನನ್ನದೇ ಒಂದಷ್ಟು ಆಸಕ್ತಿಗಳನ್ನು ಬೆಳೆಸಿಕೊಂಡು ನನ್ನದೇ ಆದ ಗೆಳೆಯ ಗೆಳತಿಯರ ಬಳಗವನ್ನು ಕಟ್ಟಿಕೊಂಡು ನನ್ನ ನಿವೃತ್ತಿಯ ಬದುಕು ಯಾವುದೇ ಏರುಪೇರುಗಳಿಲ್ಲದೆ ಸಾಗುತ್ತಿದೆ. ನನ್ನನ್ನು ಪ್ರೀತಿಸುವವರು ಇಲ್ಲದಿದ್ದರೆ ನಾವು ಪ್ರೀತಿಸುವ ಬಳಗವೊಂದನ್ನು ನಮ್ಮ ಸುತ್ತ ಕಟ್ಟಿಕೊಳ್ಳಬೇಕು. ಇಲ್ಲಿವರೆಗಿನ ಜೀವನಯಾತ್ರೆಯಲ್ಲಿ ನನ್ನನ್ನು ಕರೆದೊಯ್ದ ಈ ದೇಹವೆಂಬ ಬಂಡಿಯಿದೆಯಲ್ಲಾ ಅದು ನನ್ನ ಸ್ವಂತ ಸ್ವತ್ತಲ್ಲ. ಒಂದಲ್ಲ ಒಂದು ದಿನ ಕೆಟ್ಟು ನಿಂತುಬಿಡುತ್ತದೆ. ರಿಪೇರಿ ಬೇಡುತ್ತದೆ. ಇಂತಹ ಸಂದರ್ಭದಲ್ಲಿ ನನ್ನಂತಹವರನ್ನು ನೋಡಿಕೊಳ್ಳುವುದಕ್ಕಾಗಿಯೇ ಇರುವ ಎಷ್ಟೋ ಸಂಸ್ಥೆಗಳಿವೆ. ಕೈಕಾಲು ಅಲ್ಲಾಡುತ್ತಿರುವಾಗಲೇ ಆರೈಕೆ ಮಾಡುವವರೂ ಇದ್ದಾರೆ. ಕೈಕಾಲು ಬಿದ್ದ ಮೇಲೆ ಆರೈಕೆ ಮಾಡುವವರೂ ಇದ್ದಾರೆ. ಇವರೊಂದಿಗೆ ಮೊದಲೇ ಸಂಪರ್ಕದಲ್ಲಿರುವ ಕಾರಣ ನಾಳೆಯ ಬಗ್ಗೆ ನನಗೆ ಚಿಂತೆ ಇಲ್ಲ. ಬದುಕಿರುವಷ್ಟು ಕಾಲ ಯಾರಿಗೂ ನೋವು ಉಂಟುಮಾಡದೆ ಯಾರಿಂದಲೂ ಛೀ ಥೂ ಅನ್ನಿಸಿಕೊಳ್ಳದೆ ಬಾಳುವಂತಹ ಭಾಗ್ಯ ಸಿಕ್ಕಿದೆಯಲ್ಲಾ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇರುವುದನ್ನೆಲ್ಲಾ ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಸು ನನ್ನದಲ್ಲ. ಬದುಕಿನ ಪ್ರತೀ ಕ್ಷಣಗಳನ್ನು ನಿರ್ಭಾವುಕ ದೃಷ್ಟಿಯಿಂದ ವೀಕ್ಷಿಸುವ ಪ್ರಜ್ಞೆ ನನ್ನಲ್ಲಿದೆ. ಜೀವನಪ್ರೀತಿ ಇದೆ. ಜೀವನೋತ್ಸಾಹವಿದೆ. ಆದುದರಿಂದ ಯಾವುದೇ ಅನಿರೀಕ್ಷಿತ ತಿರುವುಗಳು ನನ್ನ ಜೀವನದಲ್ಲಿ ಘಟಿಸಿದರೂ ಅದಕ್ಕೆ ನಾನೇ ಹೊಣೆಯೇ ಹೊರತು ಅನ್ಯರಲ್ಲವೆಂದು ದೃಢವಾಗಿ ನಂಬಿದ್ದೇನೆ. ಜೀವನ ಒಂದು ನದೀಪ್ರವಾಹದಂತೆ. ಅದರಷ್ಟಕ್ಕೆ ಹರಿಯುತ್ತಲೇ ಇರುತ್ತದೆ. ಈ ನದಿ ಅನೇಕ ತಿರುವುಗಳನ್ನೂ ಪಡೆದಿದೆ. ಆದರೆ ಎಂದೂ ದಂಡೆ ಮೀರಿ ಹರಿದಿಲ್ಲವೆಂದೇ ನನ್ನ ಭಾವನೆ. ಎಂತಹ ಪ್ರವಾಹವನ್ನೂ ತನ್ನ ಅಂಕೆಯಲ್ಲಿಟ್ಟುಕೊಂಡು ಒಳಗೇ ನಿಯಂತ್ರಣದಲ್ಲಿರಿಸಿಕೊಂಡ ಜೀವನದಿ ನಾನು. ನಾನು ಹೇಳಿದವುಗಳಿಗಿಂತಲೂ ಹೇಳದವುಗಳು ಎಷ್ಟೋ ಇವೆ. ಅವೆಲ್ಲವನ್ನೂ ಈ ಜೀವನವೆಂಬ ನದಿ ಸಾಗರಕ್ಕೆ ಒಯ್ದು ಆಳದಲ್ಲಿ ಹೂತುಬಿಡುತ್ತದೆ. ಅಪ್ಪನ ಪ್ರೀತಿ ಬೆಟ್ಟದಷ್ಟು ಅಮ್ಮನ ಪ್ರೀತಿ ಸಾಗರದಷ್ಟು ಎನ್ನುತ್ತಾರೆ. ಮಕ್ಕಳಿಗೆ ಅಪ್ಪ ಅಮ್ಮನ ಪ್ರೀತಿಯೊಂದೇ ಜೀವನಕ್ಕೆ ಸಂಜೀವಿನಿಯಾಗಿದೆ. ಆದುದರಿಂದಲೇ ಪ್ರಪಂಚದಲ್ಲಿ ಇಷ್ಟೊಂದು ಕ್ರೌರ್ಯಗಳು ವಿಜೃಂಭಿಸಿದರೂ ಮನುಷ್ಯ ಬದುಕು ಸಹನೀಯವಾಗಿದೆ. ಸುಂದರವಾಗಿದೆ. ಅಲ್ಲವೇ?

(ಮುಂದುವರಿಯಲಿದೆ)