ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೆಂಟನೇ ಅಧ್ಯಾಯ
[ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಇನ್ನಷ್ಟು ಬಿಡಿ ಪ್ರಸಂಗಗಳು]
ಸ್ಥಾನಮಹತ್ತ್ವ
ಭಾರತದ ಬಹಳ ದೊಡ್ಡ ಪ್ರಕಾಶಕ ಮತ್ತು ವಿತರಣ ಸಂಸ್ಥೆ – ಯು.ಬಿ.ಎಸ್. ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ವಾರ್ಷಿಕ ವಿಧಿಯಂತೆ ೧೯೯೫ರಲ್ಲಿ ಮಂಗಳೂರಿನಲ್ಲಿ ಎರಡನೇ ಸಲ ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ಮಾರಾಟವನ್ನು ವ್ಯವಸ್ಥೆ ಮಾಡಿದ್ದರು. ಇದು ವಿತರಕ ಮತ್ತು ಬಿಡಿ ಮಾರಾಟಗಾರನ ನಡುವಣ ಗೌರವವನ್ನು ಉಲ್ಲಂಘಿಸಿದಂತೆ ಎಂದು ನನಗನ್ನಿಸಿದ್ದಕ್ಕೆ ನಾನು ಬರೆದ ಪ್ರತಿಭಟನಾ ಪತ್ರದ ಕನ್ನಡ ರೂಪ:
ಇದೀಗ ಸಾರ್ವಜನಿಕರಿಗೆ ರಿಯಾಯಿತಿ ಮಾರಾಟ ಮೇಳವನ್ನು ನೀವು ಎರಡನೇ ಬಾರಿಗೆ ಮಂಗಳೂರಿನಲ್ಲಿ ನಡೆಸುತ್ತಿದ್ದೀರಿ. ಕಳೆದ ೨೦ ವರ್ಷಗಳಿಗೂ ಮಿಕ್ಕು ಕಾಲದಿಂದ ನಾನೂ ಸೇರಿದಂತೆ ಇತರ ಸ್ಥಳೀಯ ಪುಸ್ತಕ ವ್ಯಾಪಾರಿಗಳು ಈ ವಲಯದ ಸಾರ್ವಜನಿಕರ ಪುಸ್ತಕ ಅಗತ್ಯಗಳನ್ನು ಪೂರೈಸುತ್ತ ಬಂದಿದ್ದೇವೆ. ಇದರಲ್ಲಿ ನೀವು ನಮಗೆಲ್ಲ ವಿವಾದಾತೀತ ಸಗಟು ಸರಬರಾಜುದಾರ ಮತ್ತು ಮಹಾಪೋಷಕ ಸಂಸ್ಥೆಯಾಗಿಯೇ ನಡೆದುಕೊಂಡಿದ್ದೀರಿ. ನಿಮ್ಮನ್ನು ನಾವು ಕನಸುಮನಸುಗಳಲ್ಲೂ ಓರ್ವ ಪ್ರತಿಸ್ಪರ್ಧಿಯಾಗಿ ಅಥವಾ ವ್ಯಾಪಾರ ಸಂಹಿತೆಗೆ ಧಕ್ಕೆ ತರುವ ಕೂಟವಾಗಿ ಕಂಡವರಲ್ಲ. ಆದರೆ ಈಗ ಈ `ಸೇಲ್’ನ ಪ್ರಚಾರ, ಪ್ರದರ್ಶನ ಮತ್ತು ಮಾರಾಟ ಸ್ಪಷ್ಟವಾಗಿ ನಮ್ಮ ನ್ಯಾಯಬದ್ಧವಾದ ಹಿತಾಸಕ್ತಿಗಳ ಬುಡಕ್ಕಿಡುವ ಕೊಡಲಿ ಏಟಿನಂತೇ ಕಾಣುತ್ತಿದೆ. ನೀವು ಕೊಡುವ ೧೦% ವಟ್ಟಾ ಮತ್ತು ಮುಖ್ಯವಾಗಿ, ಸಾಮಾನ್ಯ ಮಾರುಕಟ್ಟೆಗೆ ಇನ್ನೂ ಲಭ್ಯವಿಲ್ಲದ ಪುಸ್ತಕಗಳನ್ನು ಇಲ್ಲಿಗೆ ಒದಗಿಸಿಕೊಳ್ಳುವ ಚಾತುರ್ಯ, ನಿಮ್ಮ ಉದ್ದೇಶಗಳ ಬಗ್ಗೇ ನಮಗೆ ಸಂಶಯವನ್ನು ಹುಟ್ಟಿಸುವಂತಿದೆ. ಉದಾಹರಣೆಗೆ ಕಳೆದ ವರ್ಷ ನಿಮ್ಮ ಮಾರಾಟ ಮೇಳಕ್ಕೆ ಬಂದ `ಮಿಶನರೀಸ್ ಇನ್ ಇಂಡಿಯಾ’ ಪುಸ್ತಕಕ್ಕೆ ನಾನು ಮೊದಲೇ ಬೇಡಿಕೆ ಸಲ್ಲಿಸಿದ್ದೆ. ವಿತರಣಕಾರನ ಸಹಜ ಔದಾರ್ಯಕ್ಕೆ ಎರವಾಗಿ ನೀವದನ್ನು ನನಗೆ ಕೊಡದೆ, ನಿಮ್ಮ ಸೇಲಿನಲ್ಲಿ ಚೆನ್ನಾಗಿ ಮಾರಿಕೊಂಡಿರಿ. ಹಾಗೇ ಈ ವರ್ಷ ಸಾಕಷ್ಟು ಮುಂಚಿತವಾಗಿಯೇ ನಾನು ಕೇಳಿ ಇಲ್ಲ ಎನ್ನಿಸಿಕೊಂಡ ಪುಸ್ತಕ – `ಗಣೇಶ ಕೋಶ’, ಈಗ ನಿಮ್ಮ ಮೇಳದಲ್ಲಿ ಭರದಿಂದ ಮಾರಾಟವಾಗುತ್ತಿರುವುದು ತಿಳಿದು ಬಂತು. ನನಗೆ ೨೫% ರಿಯಾಯ್ತಿ ಕೊಟ್ಟು, ೪೫ ದಿನ ಕಾಯುವುದಕ್ಕಿಂತ ೧೦% ನೇರ ಗಿರಾಕಿಗೇ ಕೊಟ್ಟು, ನಗದು ಪಡೆಯುವುದು ನಿಮಗೆ ತುಂಬ ಹಿತವಾಗಿ ಕಂಡಿರಬೇಕು!
ನಮ್ಮ ಖಾಯಂ ಗಿರಾಕಿಗಳೂ ಈಗ ಮುದ್ರಿತ ಬೆಲೆಯನ್ನು ಕೀಳಾಗಿ ಕಾಣತೊಡಗಿದ್ದಾರೆ. ಅವರೀಗ ರಿಯಾಯಿತಿ ಜಾಡ್ಯಕ್ಕೆ ಪಕ್ಕಾಗುತ್ತಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿರುವ ಈ ಕಾಹಿಲೆಗೆ ಮದ್ದಿಲ್ಲ ಮತ್ತು ಸಾವೂ ಇಲ್ಲ. ಅಷ್ಟೇಕೆ ಇದು ವ್ಯಾಪಾರವೇ ಅಲ್ಲ. ಪುಸ್ತಕ ಸಾಗರದಲ್ಲಿ ನಾನೊಂದು ಕಿರು ಮೀನು ಎಂಬರಿವು ಕಳೆದುಕೊಳ್ಳದೇ ನಿಮ್ಮ ಮಾರಾಟ ಮೇಳದ ಆಮಂತ್ರಣವನ್ನು ತಿರಸ್ಕರಿಸುತ್ತೇನೆ. ಮತ್ತು ನಮ್ಮ ಸಂಬಂಧ ವರ್ಧಿಸಬೇಕೆಂದು ನಿಮಗೆ ಅನ್ನಿಸಿದರೆ ಹೀಗೊಂದು ಆಶ್ವಾಸನೆ ಕೊಡಿ `ಇಂಥ ಮೇಳವನ್ನು ಮುಂದೆ ವಾರ್ಷಿಕ ವಿಧಿಯಂತೆ ನಡೆಸುವುದಿಲ್ಲ.’ ನಗರದ ಇತರ ಪುಸ್ತಕ ವ್ಯಾಪಾರಿಗಳೂ ಪ್ರಕಾಶಕರೂ ನಿಮ್ಮ ಮಾರಾಟ ಮೇಳದ ಅವ್ಯವಹಾರವನ್ನು “ಸಾಕು ಮಾಡಿ” ಎಂದು ನನ್ನೊಂದಿಗೆ ಧ್ವನಿ ಸೇರಿಸುವುದರಲ್ಲಿ ನನಗಂತೂ ಸಂದೇಹವಿಲ್ಲ.
ಯುಬಿಎಸ್ಸಿನವರಿಂದ “ಇದು ಖಾಯಂ ವ್ಯವಸ್ಥೆ ಆಗುವುದಿಲ್ಲ. ಅನನುಕೂಲಕ್ಕೆ ಕ್ಷಮಿಸಿ” ಎಂಬ ಪತ್ರ ಬಂತು. ಈ ಬಾಂಧವ್ಯದ ಕುರಿತು ಹೆಚ್ಚಿನ ವಿವರಣೆಗೆ ನೋಡಿ ಮಾರಾಟಗಾರನ ಸಮಸ್ಯೆಗಳು ಮತ್ತು ಪರಿಹಾರ.
ನಾಗರಿಕ ಜವಾಬ್ದಾರಿ ಮತ್ತು ಪುಸ್ತಕೋದ್ಯಮ
ಮಂಗಳೂರು ಆಕಾಶವಾಣಿ ಏರ್ಪಡಿಸಿದ್ದ ಚರ್ಚೆಯಲ್ಲಿ ನಾನು ಕೊಟ್ಟ ಅಭಿಪ್ರಾಯದ ಟಿಪ್ಪಣಿ: ಪುಸ್ತಕೋದ್ಯಮದ ಲೇಖಕ, ಪ್ರಕಾಶಕ, ಮುದ್ರಕ, ಮಾರಾಟಗಾರ, ಗ್ರಂಥಾಲಯ ಮತ್ತು ಓದುಗ ಎಂಬ ಸರಣಿಯಲ್ಲಿ ಮೊದಲ ಮೂರು ಅಂಗಗಳು ಏಕಮುಖಿಗಳು. ಇವು ಕನ್ನಡ ಪುಸ್ತಕ ಲೋಕದಲ್ಲಂತೂ ಸಾಮಾನ್ಯವಾಗಿ ಒಂದು ಕಾಲ ಘಟ್ಟದಲ್ಲಿ ಒಂದೊಂದೇ ಇರಲು ಸಾಧ್ಯ. ಬಿಡಿಸಿ ಹೇಳುವುದಾದರೆ ಒಂದು ಪುಸ್ತಕಕ್ಕೆ ಲೇಖಕ, ಪ್ರಕಾಶಕ, ಮುದ್ರಕ ಒಬ್ಬೊಬ್ಬರೇ. ಅಷ್ಟೇ ಏಕೆ ಎಷ್ಟೋ ಸಂದರ್ಭಗಳಲ್ಲಿ ಲೇಖಕ ಮತ್ತು ಪ್ರಕಾಶಕ ಕೂಡಾ ಒಬ್ಬರೇ ಆಗಿರುವುದೂ ಇದೆ. ಈ ಮೂರು ಅಂಶಗಳ ನೆಲೆ ಸಾಹಿತ್ಯವನ್ನು ಯಾವುದೇ ರೀತಿಯಲ್ಲೂ ಪ್ರಭಾವಿಸಬೇಕಿಲ್ಲ. ದಿಲ್ಲಿಯ ಲೇಖಕ, ಶಿವಕಾಶಿಯ ಮುದ್ರಣ, ಹೆಗ್ಗೋಡಿನ ಪ್ರಕಾಶನ ಮಂಗಳೂರಿನ ಓದುವಣಿಗೆಗೆ ಹೊಸ ಅರ್ಥಪುಷ್ಟಿಯನ್ನೇನೂ ಕೊಡುವುದಿಲ್ಲ. ಈ ಮೂವರು ಯಾರೇ ಇರಲಿ, ಎಲ್ಲೇ ಇರಲಿ ಅವರ ಕೆಲಸದ ಗುಣಮಟ್ಟವಷ್ಟೇ ಪುಸ್ತಕದ ಮಾರಾಟ ಅಥವಾ ಜನಪ್ರಿಯತೆಯ ನಿರ್ಧಾರಕ ಅಂಶವಾಗುತ್ತದೆ. ಉದ್ಯಮದ ಮುಂದಿನ ಅಂಶಗಳು ಬಹುಮುಖಿಗಳು. ಅಂದರೆ ಮಾರಾಟಗಾರ, ಗ್ರಂಥಾಲಯ, ಓದುಗರಿಗೆ ಸಂಖ್ಯಾಮಿತಿಯಿಲ್ಲ. ಇವರಲ್ಲೂ ಮಾರಾಟಗಾರ ಮತ್ತು ಗ್ರಂಥಾಲಯ ಅವಗಣಿಸಲಾಗದ ಆದರೆ ಬರಿಯ ಮಧ್ಯವರ್ತಿಗಳು. ಇವರ ನೆಲೆ ಹಾಗೂ ಕಲೆ ಪುಸ್ತಕೋದ್ಯಮದ ಆರ್ಥಿಕ ಭವಿಷ್ಯವನ್ನು ಸ್ಪಷ್ಟಗೊಳಿಸುತ್ತವೆ. ಪುಸ್ತಕದ ಮೌಲಿಕ ಭವಿಷ್ಯದ ನಿರ್ಧಾರ ಓದುಗನಿಗೆ ಬಿಟ್ಟದ್ದು. ಆದರೆ ಈ ಚರಮ ಸತ್ಯವನ್ನು ಹುಸಿಗೊಳಿಸಿ, ಅಂದರೆ ಹಣಹೂಡಿ ಹಣ ಬಾಚುವ ಮಟ್ಟಕ್ಕೇ ಇಂದು ಪುಸ್ತಕೋದ್ಯಮ ಚೂಪು ಪಡೆಯುತ್ತಿರುವುದನ್ನು ವಿಚಾರವಂತರೂ ಗಮನಿಸಿದಂತಿಲ್ಲ. ಪುಸ್ತಕೋದ್ಯಮಕ್ಕೆ ಪ್ರೋತ್ಸಾಹ ಎಂಬ ಭ್ರಮೆ ಅಥವಾ ವಿಚಾರವಂತಿಕೆಯನ್ನೇ ಭ್ರಷ್ಟಗೊಳಿಸುವ ದೊಡ್ಡ ಹೂಟದಲ್ಲಿ ಲೇಖಕ ಹಾಗೂ ಸರಕಾರ ತೊಡಗಿ, ಪುಸ್ತಕೋದ್ಯಮದ ಆರ್ಥಿಕ ನೆಲೆಯನ್ನಷ್ಟೇ ಗಟ್ಟಿಮಾಡುವ ಕಾರ್ಯಕ್ರಮವನ್ನು ಮತ್ತೆ ಮತ್ತೆ ನಡೆಸುತ್ತ ಬಂದಿದ್ದಾರೆ. ವಿಷಯದ ಬಗ್ಗೆ ಪ್ರಾವೀಣ್ಯ ಗಳಿಸದ ಲೇಖಕ, ಯಾಂತ್ರಿಕ ಕೌಶಲ್ಯವನ್ನಷ್ಟೇ ಪ್ರದರ್ಶಿಸುವ ಮುದ್ರಕ, ಹೂಡಿದ ಹಣವನ್ನು ಗುಣಾಕಾರಗಳಲ್ಲಿ ಮತ್ತು ಅತ್ಯಂತ ತ್ವರಿತವಾಗಿ ಹಿಂತೆಗೆಯುವುದನ್ನಷ್ಟೇ ಉದ್ದೇಶಿಸುವ ಪ್ರಕಾಶಕ ಮತ್ತು ಮಾರಾಟಗಾರ ಪುಸ್ತಕೋದ್ಯಮದ ಪ್ರಥಮ ವೈರಿಗಳು. ಮುದ್ರಿತವೆಲ್ಲವೂ ಸಂಗ್ರಾಹ್ಯ ಬೆಲೆ ರಿಯಾಯಿತಿ ಸಿಕ್ಕಷ್ಟು ಸಾಹಿತ್ಯಕ ಮೌಲ್ಯ ಹೆಚ್ಚು ಎಂದೆಲ್ಲ ಭ್ರಮಿಸುವ ಗ್ರಂಥಾಲಯ ಮತ್ತು ಓದುಗರು ಪುಸ್ತಕೋದ್ಯಮದ ಪರಮ ವೈರಿಗಳು.
ದಿನಾಂಕ ೭-೭-೧೯೯೭ರಂದು ಆಕಾಶವಾಣಿ ಮಂಗಳೂರು ಇದರಲ್ಲಿ ಪ್ರಸಾರವಾದ ಸಂದರ್ಶನಾಧಾರಿತ ಕಾರ್ಯಕ್ರಮ – ಹೊರಳು ದಾರಿಯಲ್ಲಿ ಮಂಗಳೂರು, ಇದರಲ್ಲಿ ನಗರದ ಓದಿನ ಒಲವೇನು ಎಂಬ ಪ್ರಶ್ನೆಗೆ ನಾನು ಕೊಟ್ಟ ಅಭಿಪ್ರಾಯದ ಪರಿಷ್ಕೃತ ರೂಪ:
ಮಂಗಳೂರು ನಗರದ ತೀವ್ರ ಬೆಳವಣಿಗೆ ಮತ್ತು ಟೀವೀ ಕೇಬಲ್ ಜಾಲಗಳ ಮೇಲಾಟದಲ್ಲಿ ಓದುವ ಸಂತೋಷಕ್ಕಾಗಿ ಪುಸ್ತಕ ಕೊಳ್ಳುವವರ ಸಂಖ್ಯೆ ತುಂಬ ಇಳಿದಿದೆ. ಆದರೆ ಕಲಿಕಾ ವಿಷಯ ವೈವಿಧ್ಯ, ಕಲಿಕಾ ಕೇಂದ್ರಗಳ ಹೆಚ್ಚಳದಿಂದ ಶುದ್ಧ ವ್ಯಾವಹಾರಿಕವಾಗಿ ಹೇಳುವುದಾದರೆ, ಪುಸ್ತಕ ವ್ಯಾಪಾರ ಚೆನ್ನಾಗಿಯೇ ಇದೆ ಎಂದು ಬೇಸರದಿಂದಲೇ ಗುರುತಿಸಬೇಕಾಗುತ್ತದೆ. ಮುದ್ರಿತ ಅಕ್ಷರ, ಪುಸ್ತಕದ ಬಗ್ಗೆ ನಮ್ಮ ಸಮಾಜಕ್ಕೆ ಪರಂಪರೆಯಿಂದ ಬಂದ ಗೌರವ ಭಾವ ಇನ್ನೂ ಇದೆ. ಆದರೆ ಆ ಭಾವ ಆಚರಣೆಗೆ ಇಳಿಯುವಾಗ ಮೊದಲಿನ ವ್ಯಾಪಕತೆ, ಸೂಕ್ಷ್ಮತೆ ಕಳೆದುಕೊಂಡಿದೆ. ಸ್ಪರ್ಧಾತ್ಮಕ ಓಟ ಸಮಾಜದ ಎಲ್ಲ ವರ್ಗಗಳನ್ನೂ ಬಲವಾಗಿ ಹಿಡಿದಿದೆ….. ಸೆಲ್ಲರ್ಸ್, ಸೂಪರ್ ಸೆಲ್ಲರ್ಸ್, ಸೆನ್ಸೇಷನ್ ಇತ್ಯಾದಿ ಪ್ರಾಥಮಿಕ ಆವಶ್ಯಕತೆಗಳೇ ಆಗಿಬಿಡುತ್ತಿವೆ.
ತಂತಮ್ಮ ವೃತ್ತಿಸಂತೋಷ, ಹವ್ಯಾಸೀ ಸಂತೋಷಗಳನ್ನು ಬಹುತೇಕ ನೆಲೆ ಕಾಣಿಸಲಾಗದವರ ಚಡಪಡಿಕೆಗಳಿಗೆ ಇಂದು ಕೈಪಿಡಿಗಳಷ್ಟೇ ಬೇಕಾಗಿವೆ. “ಎಲ್ಲ ಮುಳುಗಿ ಹೋಗಲಿದೆ” ಎಂಬ ತುರ್ತು ಕಾಡಿದವರು ನಾಸ್ಟ್ರಾಡಾಮಸ್, ಎರಿಕ್ ವಾನ್ ಡಾನಿಕನ್ಗಳ ಮಿಲಿಯಾಂತರ ಪ್ರತಿಗಳನ್ನು ಜೀರ್ಣಿಸಿಕೊಂಡಾರು. ಕನ್ನಡದ್ದೇ ಆದ ಪ್ರಳಯ ೧೯೯೯, ಕಲಿಯುಗಾಂತ್ಯ ಕಾಲಜ್ಞಾನಗಳೂ ಹಲವು ಆವೃತ್ತಿ, ಮರುಮುದ್ರಣಗಳನ್ನು ಕಾಣುವಂತೆ ಮಾಡಿದರು. ಕಾರ್ಯ ಕಾರಣ ಸಂಬಂಧ ವಿವೇಚಿಸಿ ದೈಹಿಕ/ ಮಾನಸಿಕ ಸ್ವಾಸ್ಥ್ಯ ಕಾಪಾಡಬೇಕಾದವರೇ ಆಯಿಲ್ ಪುಲ್ಲಿಂಗ್, ಪ್ರಾಣಿಕ್ ಹೀಲಿಂಗ್‍ಗಳಂಥ ಬಲು ಸೀಮಿತ ಚಿಕಿತ್ಸಾ ಪುಸ್ತಕಗಳನ್ನು ಸರ್ವ ರೋಗ ಗುಣಕಾರಿ ಎಂಬಂತೆ ಬರಗಿಗೊಂಡು ಒಯ್ಯುತ್ತಿದ್ದಾರೆ. ಈ ವರ್ಗದ ಯಾವುದೇ ಪುಸ್ತಕ ಎಷ್ಟೇ ಬೆಲೆಯದಾದರೂ ಮಾರಿಹೋಗುವ ಪರಿ ಆಶ್ಚರ್ಯ ಹುಟ್ಟಿಸುತ್ತದೆ. ವಾಸ್ತು, ಫಲ ಜ್ಯೋತಿಷ್ಯ ಪುಸ್ತಕಗಳು, ದಿನಕ್ಕೊಂದು ದೇವರು, ವ್ರತ ಸಂಬಂಧಿಸಿದಂತೆ ಬರುವ ಪುಸ್ತಕಗಳಂತೂ ಮಾನಸಿಕ ರಂಗದಷ್ಟೇ ಭೌತಿಕ ರಂಗದಲ್ಲೂ ತೀವ್ರ ಬದಲಾವಣೆಗಳನ್ನು ಪ್ರೇರಿಸಿ, ಜನ ಅಕ್ಷರಶಃ ದೀವಾಳಿ ಎದ್ದ ಕಥೆಗಳು ಧಾರಾಳ ಕೇಳುತ್ತಿವೆ. ಕಟ್ಟಡ, ಪರಿಸರ, ವಿಚಾರ ವಿಕಸಿಸಿದ್ದನ್ನು ಹಿಮ್ಮುಖಗೊಳಿಸುವ ಪ್ರಯತ್ನಗಳೇ ಇವುಗಳಲ್ಲಿ ಪ್ರಧಾನವಾಗಿ ಕಾಣಿಸುತ್ತಿವೆ.
ಒಳ್ಳೆಯ ಕಾದಂಬರಿ, ಆರೋಗ್ಯಪೂರ್ಣ ಜೀವನಾನುಭವ, ಸುಂದರ ಪ್ರವಾಸಕಥನ, ಪ್ರಕೃತಿ ವೈಶಿಷ್ಟ್ಯಗಳ ಹಲವು ಕಥನಗಳು, ಫಲವತ್ತಾದ ಮನಸ್ಸಿನ ಸೃಷ್ಟಿಗಳಾದ ಕಾವ್ಯ, ತತ್ತ್ವಗಳ ಲೋಕದಲ್ಲಿ ಹೊಸತೇನಿದೆ ಎಂದು ಮುಕ್ತ ಮನಸ್ಸಿನಿಂದ ನೋಡಿ ಆಯ್ದು ಕೊಳ್ಳುವವರು ಇಂದು ಗ್ರಾಮಾಂತರದಿಂದಷ್ಟೇ ಬರುತ್ತಾರೆ. ಅವರೂ ಡಿಸ್ಕುಗಳ ಗುದ್ದಿನಲ್ಲಿ ಕೇಬಲ್ಲುಗಳ ಉರುಳಿನಲ್ಲಿ ನಲುಗದೆ ಪಾರಾಗಿ ಉಳಿಯಲಿ, ನಿಜ ಪುಸ್ತಕ ಸಂಸ್ಕೃತಿ ಹೊಸ ಆಯಾಮದತ್ತ ವಿಕಸಿಸಲಿ ಎಂದು ಕಾದಿದ್ದೇನೆ.
ಸಣ್ಣ ಪ್ರಶ್ನೋತ್ತರದ ಆಯ್ದ ತುಣುಕುಗಳು
(ಉದಯವಾಣಿ ಮಂಗಳೂರು ಪುರವಣಿ ಕೇಳಿದ್ದ ಪ್ರಶ್ನೆಗಳಿಗೆ ೩-೧೦-೧೯೯೯ರಂದು ಅದರಲ್ಲೇ ಪ್ರಕಟವಾದ ನನ್ನುತ್ತರಗಳು:
ಮಂಗಳೂರಿನ ಓದುವ ಅಭಿರುಚಿ ಹೇಗೆ?
ನಾನು ಬರಿಯ ಮಾರಾಟಗಾರ. ಹಾಗಾಗಿ ಓದುಗ ಅಂದರೆ ಕೊಳ್ಳುವವ ಎಂದು ತೀರ್ಮಾನಿಸಿಕೊಂಡು ಮುಂದುವರಿಯುತ್ತೇನೆ. ಪುಸ್ತಕ ಉಪಯೋಗ ಆಧಾರಿತವಾದದ್ದು. ತೆರೆದ ಮನಸ್ಸಿಟ್ಟುಕೊಂಡು ಪುಸ್ತಕಗಳನ್ನು ನೋಡ ಬಂದು, ಆಸಕ್ತಿ ಕುದುರಿಸಿಕೊಂಡು ಪುಸ್ತಕ ಕೊಳ್ಳುವವರು ಕಡಿಮೆ. ಸಾದರ ಸ್ವೀಕಾರ, ಪುಸ್ತಕ ವಿಮರ್ಶೆಗಳಿಗಿಂತ ಜಾಹೀರಾತಿನ ಮಾತುಗಳಿಗೆ ಮಾರುಹೋಗುವವರು, ವಿಚಾರಪರತೆಗಿಂತ ಪ್ರತಿಷ್ಠೆ ಮೆರೆತವನ್ನು ಪುಸ್ತಕ ಸಂಗ್ರಹದಲ್ಲಿ ಕಂಡುಕೊಳ್ಳುವವರು ಹೆಚ್ಚು. ಜವುಳಿ ಅಂಗಡಿಯ ಕಡಿತದ ದರ, ಕೃಷಿ ರಂಗಕ್ಕೆ ಒದಗುವ ಸರಕಾರಿ ಸಹಾಯದಂಥದ್ದು ತಮ್ಮ ಸಾಹಿತ್ಯಪ್ರೇಮದ ಪೋಷಣೆಗೂ ಒದಗಬೇಕೆಂಬಲ್ಲಿ ಉದ್ಯಮದ ಮಾನ ಹರಾಜು ಹಾಕುವವರು ಪುಸ್ತಕೋದ್ಯಮದ ಒಳಗೂ ಹೊರಗೂ ಧಾರಾಳ ಇದ್ದಾರೆ.
ದೃಶ್ಯ ಮಾಧ್ಯಮಗಳಿಂದ ಓದುವ ಹವ್ಯಾಸದ ಮೇಲೆ ಪ್ರಭಾವ?
ಓದುವಣಿಗೆಯನ್ನು ಮನರಂಜನೆಗಾಗಿ, ಸಮಯ ಕಳೆಯುವ ಸಾಧನವಾಗಿ ಬಳಸುತ್ತಿದ್ದ ಬಲು ದೊಡ್ಡ ವರ್ಗ – ಇದರಲ್ಲಿ ಎಲ್ಲ ವಯೋಮಾನದವರೂ ಇದ್ದಾರೆ, ದೃಶ್ಯ ಮಾಧ್ಯಮಗಳಿಗೆ ಮಾರಿ ಹೋದದ್ದು ನಿಜ. ಹಾಗೇ ಉದ್ಯಮದಲ್ಲಿ ಸರಕಾರೀ ಹಸ್ತಕ್ಷೇಪದಿಂದ ಅಂದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಲಭ ಬೆಲೆಯ ಪುಸ್ತಕಗಳನ್ನು ಯಾವ ವಿವೇಚನೆ ಇಲ್ಲದೇ ಪ್ರಕಟಿಸಿ ವಿತರಿಸುವುದರಿಂದಲೂ ಓದುಗರು ಕೇವಲ ಸಂಗ್ರಾಹಕರಷ್ಟೇ ಆದದ್ದೂ ಮರೆಯುವಂತಿಲ್ಲ. ದೃಶ್ಯ ಮಾಧ್ಯಮ ಮುದ್ರಣ ಮಾಧ್ಯಮದ ಅನುಸಾರಿಯಾಗಿರುವಲ್ಲೆಲ್ಲ ತಮ್ಮ ವೀಕ್ಷಣಾರಂಜನೆಗೆ ಪೂರಕ ಸಾಹಿತ್ಯ ಹುಡುಕುವ ಹೊಸ ಕೊಳ್ಳುಗರಿಂದ ಒಟ್ಟಾರೆ ವ್ಯವಹಾರ ಚೆನ್ನಾಗಿಯೇ ಇದೆ.
ಎಳೆಯರಲ್ಲಿ ಓದುವ ಅಭಿರುಚಿ ಮೂಡಿಸಲು ಸಲಹೆ?
ವಿದ್ಯಾರ್ಥಿಗಳೆದುರು ಆದರ್ಶವಾಗಿ ನಿಲ್ಲಲಾರದ ಶಿಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಲ್ಲಿ ವ್ಯಕ್ತಿ ದೌರ್ಬಲ್ಯಗಳಷ್ಟೇ ವ್ಯವಸ್ಥೆಯ ದುಷ್ಪ್ರಭಾವವನ್ನೂ ನಾನು ಕಾಣುತ್ತಿದ್ದೇನೆ. ಆದರೂ `ಪಾವೆಂ ಆಚಾರ್ಯರ ಪದಾರ್ಥ ಚಿಂತಾಮಣಿ’ ಎಂದ ಕೂಡಲೇ ತಮ್ಮ ಗ್ರಂಥಾಲಯದಲ್ಲಿರುವ ಅಡುಗೆ ಪುಸ್ತಕಗಳನ್ನು ನೆನಪಿಸಿಕೊಳ್ಳುವ ಕನ್ನಡ ಪಂಡಿತರಿಂದ ತೊಡಗಿ, ಗೈಡು ಗದ್ಯಾನುವಾದಗಳಿಲ್ಲದೆ ಪ್ರವಚನದ ಅರ್ಧ ಗಂಟೆಯನ್ನೂ ತುಂಬಲು ಬಾರದ ಅಧ್ಯಾಪಕ ಮಹೋಪಾಧ್ಯಾಯರವರೆಗಿನ ವ್ಯಕ್ತಿಗಳನ್ನು ಕಾಣುವಾಗ ಎಳೆಯರ ಓದುವ ಅಭಿರುಚಿ ಬೆಳೆಯುವ ಬಗ್ಗೆ ನಿರಾಶೆಯೇ ಹೆಚ್ಚುತ್ತದೆ. ಆದರೂ ಕೆನರಾ ವಿದ್ಯಾಸಂಸ್ಥೆಗಳು ಗ್ರಂಥಾಲಯ ಬೆಳೆಸುವ ಮತ್ತು ಬಳಸುವ ಬಗ್ಗೆ ತೋರುವ ಕಾಳಜಿ ನಿಜಕ್ಕೂ ಉಲ್ಲೇಖನೀಯ. ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮುಕ್ತವಾಗಿ ಪಠ್ಯೇತರ ಪುಸ್ತಕಗಳನ್ನೇ ಬಹುಮಾನವಾಗಿ ಒಡ್ಡುವ ಅಂಶವಂತೂ ತುಂಬ ವಿದ್ಯಾಸಂಸ್ಥೆಗಳಿಗೆ ಪಾಠವಾಗಬೇಕು. ಈಚೆಗೆ ಕೆನರಾ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ನನ್ನಿಂದ ಬಹುಮಾನವಾಗಿ ಒಯ್ದಂಥ ಪುಸ್ತಕಗಳ ಮೊತ್ತ ರೂ ೭೫೦. ಸರಕಾರೀ ಬಿಡಿ, ಎಷ್ಟೋ ಘನತೆವೆತ್ತ ಖಾಸಗೀ ಶಾಲೆಗಳ ವಾರ್ಷಿಕ ಗ್ರಂಥಾಲಯ ಖರೀದಿಯೂ ಈ ಮೊತ್ತವನ್ನು ಮೀರುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಿದ್ಧ ಭಾಷಣ ಮತ್ತು ಪ್ರಬಂಧ, ಬಲು ಅಪಾಯಕಾರೀ ಕ್ವಿಜ್ ಸ್ಪರ್ಧೆಗಳನ್ನು ಕಡಿಮೆ ಮಾಡಿ ಅನೌಪಚಾರಿಕ ಅಧ್ಯಯನ, ಸೃಜನಶೀಲ ಬರವಣಿಗೆಗಳಿಗೆ ಒತ್ತು ನೀಡಿ ಉದಾರವಾಗಿ ಪುರಸ್ಕರಿಸುವ (ಮೊತ್ತ ದೊಡ್ಡದಾಗಬೇಕಿಲ್ಲ) ಕ್ರಮಗಳು ಪರಿಣಾಮಕಾರಿಗಳಾಗಬಲ್ಲವು. ಒಂದು ಬಡ ಕಿರಿಯ ಪ್ರಾಥಮಿಕ ಶಾಲೆಯ ಬಡ ಉಪಾಧ್ಯಾಯರೊಬ್ಬರು ಕೇವಲ ಸ್ವಂತ ಹಣದಿಂದ ಪ್ರತಿ ವರ್ಷ ತಮ್ಮ ಎಲ್ಲ ಸ್ಪರ್ಧಾ ಭಾಗಿಗಳಿಗೂ – ಗಮನಿಸಿ, ಕೇವಲ ವಿಜೇತರಿಗಲ್ಲ, ಪುಸ್ತಕ ಬಹುಮಾನ ಒಯ್ಯುತ್ತಿದ್ದುದು ನೆನಪಿಗೆ ಬರುತ್ತದೆ. ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರ ಪುಸ್ತಕ ಮಾಲೆಯ ೨೫ – ೫೦ ಪೈಸೆ ಪುಸ್ತಕಗಳನ್ನೇ ಇನ್ನೂರು ಮುನ್ನೂರರ ಸಂಖ್ಯೆಯಲ್ಲಿ ಆಯ್ದು, ವಿತರಿಸುತ್ತಿದ್ದರು. ತದ್ವಿರುದ್ಧವಾಗಿ ಭಾರಿ ಬೆಲೆಯ ನಿಘಂಟೋ ಜನರಲ್ ನಾಲೆಜ್ ಹೊತ್ತಗೆಯನ್ನೋ ಹತ್ತಿಪ್ಪತ್ತು ಸಂಖ್ಯೆಯಲ್ಲಿ ಒಯ್ದು ವಾರ್ಷಿಕ ಹರಕೆ ತೀರಿಸುವವರು ನಿಜದಲ್ಲಿ ಅಕ್ಷರ ವೈರಿಗಳು.
ನಿಮ್ಮ ವೃತ್ತಿಯ ಅವಿಸ್ಮರಣೀಯ ಅನುಭವ?
ಇಪ್ಪತ್ತುವರ್ಷದ ಹಿಂದೆ ತಾಪೇದಾರಿ ಹಿಡಿಯಲಾರೆ ಎಂದು ಸ್ವಂತ ಅಂಗಡಿ ತೆರೆದೆ. ಒಲವು ಆದರ್ಶಗಳನ್ನು ಕಟ್ಟಿಕೊಂಡು ಪುಸ್ತಕ ವ್ಯಾಪಾರಕ್ಕೇ ಇಳಿದೆ. ಸುಲಭದ ದಾರಿ ಬಿಟ್ಟು ಪಠ್ಯೇತರ ಪುಸ್ತಕಗಳಲ್ಲಿ ವ್ಯವಹಾರ ನಡೆಸಿದೆ. ಉದ್ದಕ್ಕೂ ಅನ್ಯ ಆದಾಯವೇನೂ ಇಲ್ಲದೆ ಚೆನ್ನಾಗಿ ನಡೆದಿದ್ದೇನೆ, ಬೆಳೆದಿದ್ದೇನೆ. ಪ್ರತಿ ದಿನವೂ ಪ್ರತಿ ಜನವೂ ನನಗೆ ಅಂದಂದಿಗೆ ತಾರೆಗಳೇ. ಈ ನೀಲಾಕಾಶ ಗ್ರಹಿಸುವ ನನ್ನ ಕಣ್ಣಿನ ವ್ಯಾಪ್ತಿ ಕಿರಿದಿರಬಹುದು, ಆದರೆ ವಾಸ್ತವ ಹಿರಿದು.
ಸಗಟು ರದ್ಧತಿ
೨೬-೧೦-೧೯೯೫ರ ಪ್ರಜಾವಾಣಿಯಲ್ಲಿ ಬಿ.ಜಿ.ಸತ್ಯಮೂರ್ತಿಯವರ ಪತ್ರದ ಸಾರಾಂಶ: ಕನ್ನಡ ಪುಸ್ತಕಗಳ ಸಗಟು ಖರೀದಿ ಸ್ಥಗಿತಗೊಳ್ಳಬಾರದು. ಇದಕ್ಕೆ ನನ್ನ ೨೬-೧೦-೧೯೯೫ರಂದೇ ಹೋದ `ಸಗಟು ಖರೀದಿ ರದ್ದಾಗಲಿ’ ಪತ್ರದ ಪೂರ್ಣ ಪಾಠ. (ಪ್ರಜಾವಾಣಿ ಅಲ್ಲಿ ಇಲ್ಲಿ ಕತ್ತರಿಯಾಡಿಸಿತ್ತು)
ಕನ್ನಡ ಪುಸ್ತಕೋದ್ಯಮ ಲೇಖಕ, ಪ್ರಕಾಶಕ ಮತ್ತು ಓದುಗ ಎಂಬ ಸರಣಿಯಲ್ಲಿ ದೃಢವಾಗಿ ಬೆಳೆಯುತ್ತಿತ್ತು. ಕೆಳಸ್ತರದಲ್ಲಿ ಮುದ್ರಕ, ಮಾರಾಟಗಾರ, ಗ್ರಂಥಾಲಯ ಇತ್ಯಾದಿ ಉದ್ಯಮದ ಉಪವೃತ್ತಿಗಳೂ ಆಗಿದ್ದುವು. `ಪ್ರಜೆಗಳು’ ಹೋಗಿ `ಓಟ್ ಬ್ಯಾಂಕ್’ಗಳನ್ನು ಗುರುತಿಸುವ ಪುಡಾರೀಕರಣ ಪುಸ್ತಕೋದ್ಯಮದಂಥ ವೃತ್ತಿ ಗುಂಪುಗಳನ್ನು ಗುರುತಿಸಿತು. ಈ ಗುಂಪುಗಳು ಓದುಗರನ್ನು ಕೊಳ್ಳುಗರನ್ನಾಗಿ ಅರ್ಥೈಸಿದರು. ಹತ್ತು, ನೂರು ಕೇಂದ್ರಗಳಲ್ಲಿ ನಡೆಯುತ್ತಿದ್ದ ಖರೀದಿಗಳನ್ನು ಕೇಂದ್ರೀಕರಿಸಿದರು. ಅದೇ ಬಲ್ಕ್ ಪರ್ಛೇಸ್ ಅಥವಾ ಸಗಟು ಖರೀದಿ. ಈ ವಿಪರೀತದ ಬೆಳವಣಿಗೆಯಲ್ಲಿ ಹಣ ಹಾಕಿ ಹಣ ತೆಗೆಯುವವರು ನುಗ್ಗಿ ಬೆಳೆದರು. ಇದರಿಂದ ಕನ್ನಡ ಬಾರದವರು, ಸಾಹಿತ್ಯದ ಗಂಧಗಾಳಿ ಇಲ್ಲದವರು ಇಂದು ಕನ್ನಡ ಪುಸ್ತಕೋದ್ಯಮದ ಮುಂಚೂಣಿಯಲ್ಲಿದ್ದಾರೆ. ಗುಣ ಹಾಕಿ ಹಣ ನಿರೀಕ್ಷಿಸುವವರು – ಕಳೆ ಸೊಕ್ಕಿದಾಗ ಬೆಳೆ ಸೊರಗುವಂತೆ, ಕಡಿಮೆಯಾಗಿದ್ದಾರೆ. ಸಗಟು ಖರೀದಿ ಉದ್ಯಮವನ್ನು ಕುಲಗೆಡಿಸುತ್ತದೆ. ವಿಕೇಂದ್ರೀಕರಣ ಪುಸ್ತಕೋದ್ಯಮದ ಸಹಜ ವಿಕಾಸಕ್ಕೆ ತೀರಾ ಅವಶ್ಯ.
ಇಂದು ವಿವಿಧ ಹೆಸರುಗಳ ಸಗಟು ಖರೀದಿ ಒಂದೋ ವಿಳಂಬಿಸಿದೆ ಅಥವಾ ಕಡಿಮೆಯಾಗಿದೆ ಎಂಬ ಅಹವಾಲು ಕೇಳುತ್ತಿದ್ದೇವೆ. ನಾನು ಹೇಳುತ್ತೇನೆ, ಇನ್ನೂ ಕಡಿಮೆ ಮಾಡಿ, ಅಷ್ಟೇ ಏಕೆ – ಸಗಟು ಖರೀದಿಯನ್ನೇ ರದ್ದುಪಡಿಸಿ.
ಶಿವರಾಮ ಕಾರಂತ ಪ್ರಕಾಶನ: ಕೋಟ ಶಿವರಾಮ ಕಾರಂತರ ನಿಧನಾನಂತರ ಅವರ ಕೃತಿಗಳ ಸ್ವಾಮ್ಯ ಪಡೆದ ಮಾಲಿನಿ ಮಲ್ಯರಿಗೆ ೨೩-೪-೧೯೯೮ರಂದು ನಾನು ಬರೆದ ಪತ್ರ: ನಮ್ಮೀರ್ವರಿಗೆ ಭೇಟಿ, ಮಾತುಗಳ ಪರಿಚಯವಿಲ್ಲದಿದ್ದರೂ ಸಮಾನ ವಿಚಾರಗಳ ಸಾಕಷ್ಟು ಪರಿಚಯ ಇದೆ ಎಂದು ತಿಳಿದು ಈ ಪತ್ರ ನೇರ ಬರೆಯುತ್ತಿದ್ದೇನೆ. ಕಾರಂತ ಕುಟುಂಬದ ಸ್ನೇಹಿತ, ಕಳೆದ ಸುಮಾರು ೨೨ ವರ್ಷಗಳಿಂದ ಕಾರಂತರವೂ ಸೇರಿದಂತೆ ಸಾಕಷ್ಟು ಕನ್ನಡ ಪುಸ್ತಕಗಳನ್ನು ಮಾರಿದವ, ಪುಸ್ತಕ ಮಾರಾಟ ಏನೋ ಒಂದು ಆದಾಯ ತರುವ ವೃತ್ತಿ ಎಂದಲ್ಲದೆ ವಿಚಾರ, ಬರವಣಿಗೆ ಮತ್ತು ಆಚರಣೆಗಳಲ್ಲಿ ಪುಸ್ತಕೋದ್ಯಮವನ್ನೇ ನೆಚ್ಚಿರುವವನು ನಾನು. ಇವುಗಳ ಮುನ್ನೆಲೆಯಲ್ಲಿ ನನ್ನ ಕೆಲವು ಖಚಿತ ಅಭಿಪ್ರಾಯಗಳನ್ನು ನಿಮಗೆ ತಿಳಿಸುವುದು ನನಗೆ ಕರ್ತವ್ಯವೇ ಆಗಿದೆ. ದಯವಿಟ್ಟು ಗಮನಿಸಿ.
ಎಲ್ಲ ಮಹಾನ್ ವ್ಯಕ್ತಿಗಳ ಪರ್ವ ಕಾಲಗಳಲ್ಲಿ, ಅಂದರೆ ಮಹತ್ ಕೃತಿ ಪ್ರಕಟವಾದಾಗಲೋ ಪ್ರಶಸ್ತಿ ಬಂದಾಗಲೋ ಪ್ರಾಯ ತುಂಬಿದಾಗಲೋ, ಅನಾರೋಗ್ಯ ಕಾಡಿದಾಗಲೋ ಮರಣ ಸಂಭವಿಸಿದಾಗಲೋ ವ್ಯಕ್ತಿಯ ಕೃತಿ ಅಥವಾ ದೊಡ್ಡತನ ಅನುಸರಿಸದೇ ತಮ್ಮ ಪ್ರಚಾರ ಮತ್ತು ಪರೋಕ್ಷ ಲಾಭಗಳಿಗಷ್ಟೇ ಪಾಲ್ಗೊಳ್ಳುವವರ ಸಂಖ್ಯೆ ಇಂದು ಭಾರೀ ಇದೆ. ರಾಜಕೀಯಸ್ಥರಲ್ಲಿ ಇದು ಹೇಸಿಗೆ ಬರಿಸುವಷ್ಟು ಹೆಚ್ಚಿದೆ. ದೀರ್ಘ ಕಾಲ ಕಾರಂತರ ಒಡನಾಡಿಯಾದ ನೀವು ಇಂಥ ನೂರಾರು ನಾಟಕಗಳನ್ನು ನೋಡಿರುತ್ತೀರಾದ್ದರಿಂದ ನಾನು ವಿವರಿಸಹೋಗುವುದಿಲ್ಲ. ಇದರಲ್ಲಿ ತೀರ ಈಚಿನ ಅಧ್ಯಾಯ ಮೊನ್ನೆ ಮೊನ್ನೆ ಕರ್ನಾಟಕ ಸರಕಾರ ಘೋಷಿಸಿಕೊಂಡ ಕಾರಂತ ಸಮಗ್ರ ಕೃತಿ ಪ್ರಕಟಣೆ. ಕಾರಂತ ಕೃತಿಗಳ ಸರ್ವಸ್ವಾಮ್ಯ ಪಡೆದಿರುವ ನಿಮ್ಮನ್ನು ಮೀರಿ ಈ ಅಥವಾ ಇನ್ಯಾವುದೇ ಯೋಜನೆಗಳು ಕಾರ್ಯಗತವಾಗುವುದು ಸಾಧ್ಯವಿಲ್ಲ. ಹಾಗಾಗಿ ನನ್ನ ವಿಚಾರಗಳನ್ನು ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಸರಕಾರಿ ಇಲಾಖೆಗಳ ಪ್ರಕಟಣೆಗಳು ಜನರಿಗೆ ಸುಲಭವಾಗಿ ಎಂದೂ ಮುಟ್ಟಿದ್ದಿಲ್ಲ. ಸರಕಾರ ಎತ್ತಿಕೊಂಡ ಪ್ರಕಟಣಾ ಕಾರ್ಯಕ್ರಮಗಳು ಯಾವುವೂ ಪೂರ್ಣಗೊಂಡದ್ದೂ ಇಲ್ಲ. ಇವುಗಳೊಡನೆ ನಿರ್ವಹಣೆಯ ಹಿಂಸೆ – ಅಂದರೆ ಮುದ್ರಣ ದೋಷ, ಸಂಪರ್ಕ ಶೂನ್ಯತೆ ಇತ್ಯಾದಿ ಸಾವಿರ. ಇದಕ್ಕೆ ಉದಾಹರಣೆಯಾಗಿ ಡಿವಿಜಿ ಕೃತಿ ಸಂಪುಟಗಳನ್ನು ನೆನಪಿಸಿಕೊಳ್ಳಬಹುದು. ಕೃತಿ ಸ್ವಾಮ್ಯಗಾರರನ್ನು ಅಲಕ್ಷಿಸಿ ಮುದ್ರಣ, ಪ್ರಕಟಣೆ ಮೊದಲ ಸಂಪುಟಕ್ಕೇನೋ ಕಾಣಿಸಿದರು. ಮತ್ತೆ ಹಕ್ಕುದಾರರು ಕೋರ್ಟು, ಖಟ್ಲೆಯ ಬಿಸಿ ಮುಟ್ಟಿಸಿದ ಮೇಲೆ ತಗ್ಗಿದರಂತೆ. ಸಮಗ್ರ ಕೃತಿ ಸಂಪುಟಗಳನ್ನು ಮುಂದುವರಿಸುವ ಕುರಿತು ಹಕ್ಕುದಾರರೊಡನೆ ರಾಜಿ ಆದರೂ ಮುಂದೆ ಸಂಪುಟಗಳ ಪ್ರಕಟಣೆ ಸಮಗ್ರ ಆಗಿಯೇ ಇಲ್ಲ. ಆದಷ್ಟೂ ಸಂಪುಟಗಳು ಸಾರ್ವಜನಿಕ ಅವಗಾಹನೆಗೆ, ಕೊಳ್ವಿಕೆಗೆ ಸುಲಭವಾಗಿ ಒಡ್ಡಿಕೊಂಡದ್ದೂ ಇಲ್ಲ. ಹೀಗೆ ಕಾರಂತ ಕೃತಿಗಳು ಆಗಬಾರದು. ಸರಕಾರವಿರಲಿ, ಸರ್ವಕೃತಿಗಳ ಏಕ ಸ್ವಾಮ್ಯ ವಹಿಸಿಕೊಳ್ಳಲು ಮುಂದಾಗುವ ಖಾಸಗಿಯವರಿರಲಿ ನೀವು ಒಪ್ಪಿಗೆ ಕೊಡಬಾರದು. ಕಾರಂತರೇ ಹುಟ್ಟು ಹಾಕಿದ್ದ `ಹರ್ಷ ಪ್ರಕಟಣಾಲಯ’ವೇ ಇತಿಹಾಸಕ್ಕೆ ಸಂದಮೇಲೆ ಕಾರಂತ ಜೀವಿತ ಕಾಲದ ಇತರ ಪ್ರಕಾಶಕರ ಹಂಗು ನಿಮಗಿರಬೇಕಾಗಿಲ್ಲ. ನೀವೇ ದೃಢವಾಗಿ ನಿಂತು ಕಾರಂತ ಕೃತಿಗಳ ನಿರಂತರ ಪ್ರಕಟಣೆ ನಡೆಸಬೇಕು. ಕುವೆಂಪು ಉದಯರವಿ ಪ್ರಕಾಶನವನ್ನು ಗಟ್ಟಿ ಮಾಡಿ ಗತಿಸಿದರು. ಸಾಲದ್ದಕ್ಕೆ ಅವರ ಉತ್ತರಾಧಿಕಾರಿ, ಅಂದರೆ ಮಗ ತೇಜಸ್ವಿ, ಅಷ್ಟರಲ್ಲೇ ಸ್ವತಂತ್ರವಾಗಿ ಪುಸ್ತಕ ಪ್ರಕಾಶನ ಎಂಬ ಹೆಸರಿನಲ್ಲಿ ಸ್ವಂತ ಪ್ರಕಟಣೆಗಳನ್ನು ತಂದು, ಅನುಭವಗಳಿಸಿ ಗಟ್ಟಿಯೂ ಆಗಿದ್ದರು. ಹಾಗಾಗಿ ಇಂದು ಯಾವುದೇ ಕುವೆಂಪು ಕೃತಿ ದೀರ್ಘ ಕಾಲ ಅಲಭ್ಯವಾಗಿ ಉಳಿಯದಂತೆ ಅವರು ನಡೆಸುತ್ತಿದ್ದಾರೆ. ಮಾಸ್ತಿ ಜೀವನ ಕಾರ್ಯಾಲಯ ಟ್ರಸ್ಟ್ ಉದ್ದೇಶ ಇಂಥದ್ದೇ ಇರಬೇಕು. ಆದರೆ ಅಲ್ಲಿ ಗಟ್ಟಿ ನಿಂತು ನಡೆಸುವ ವ್ಯಕ್ತಿಗಳಿಲ್ಲದೆ ಸೋತಿದೆ ಎಂದೇ ನನ್ನ ಭಾವನೆ. ಪ್ರಕಾಶನದ ನೇರ ಅನುಭವವೊಂದನ್ನುಳಿದು ಇವರೆಲ್ಲರಿಗೂ ಮಿಗಿಲು ನಿಮ್ಮ ಸ್ಥಾನ. ಕೃತಿ ಪರಿಚಯ, ಸಂಖ್ಯಾಬಾಹುಳ್ಯ ಮತ್ತು ವಿಷಯ ವೈವಿಧ್ಯ ನಿಮ್ಮ ಬಳಿ ಬೇರಾವುದೇ ಉತ್ತರಾಧಿಕಾರಿಗಿಂತ ಹೆಚ್ಚಿವೆ. ಈಗ ನೀವು ಮಾಡಬಹುದಾದದ್ದಿಷ್ಟು:
ವಿವಿಧ ಪ್ರಕಾಶಕರ ಬಳಿಯಿರುವ ಎಲ್ಲ ಕಾರಂತ ಕೃತಿಗಳನ್ನು ನೀವು ಸಗಟು ದರ ಮಾತಾಡಿ ಖರೀದಿಸಬಹುದು. ಅಲ್ಲವಾದರೆ, ಕನಿಷ್ಠ ಸ್ಪಷ್ಟ ದಾಸ್ತಾನು ಚಿತ್ರವನ್ನಾದರೂ ಸಂಗ್ರಹಿಸಿಕೊಳ್ಳಬೇಕು. ಇಲ್ಲವಾದರೆ ಕೆಲವರಾದರೂ ಮಾರುಕಟ್ಟೆಯ ಬೇಡಿಕೆ ನೋಡಿಕೊಂಡು ಹಳೆಯ ಮುದ್ರಣಗಳು ಅಕ್ಷಯವಾಗುವಂತೆ ಮಾಡಿಯಾರು! ಬೆಟ್ಟದ ಜೀವದ ಹಿಂದಿ ಆವೃತ್ತಿಯ ಪ್ರಕಾಶಕ ಮಹಾಶಯ ಕಾರಂತರನ್ನೇ ವಂಚಿಸಿ ಒಂಬತ್ತು ಮುದ್ರಣ ನಡೆಸಿಯೂ ಕೇವಲ ಹೊಸ ಮುದ್ರಣ ಎಂದು ವಾದಿಸಿದ್ದು ನಿಮಗೇ ಗೊತ್ತಿದೆ. ಅನಂತರ ಬೇಡಿಕೆ, ಅಲಭ್ಯತೆ, ಸಾರ್ವಕಾಲಿಕತೆ ಇತ್ಯಾದಿಗಳನ್ನು ಪರಿಗಣಿಸಿ, ಕ್ರಮವಾಗಿ ಒಂದೊಂದೇ ಪುಸ್ತಕವನ್ನು ನೀವೇ ಪ್ರಕಟಿಸಬೇಕು. ಹೆಸರಿಗೇನು – ಕಾರಂತ ಪ್ರಕಾಶನ, ಎಂದೇ ಇಟ್ಟುಕೊಳ್ಳಬಹುದು. ಇಂದಿನ ಗಣಕ ಸೌಕರ್ಯದಲ್ಲಿ ಪೂರ್ಣ ಅಕ್ಷರ ಜೋಡಣೆ, ಕರಡು ತಿದ್ದುವಿಕೆ, ಪುಸ್ತಕದ ರೂಪ ನಿರ್ದೇಶನ ನೀವೇ ಮಾಡಬಹುದು ಅಥವಾ ನಿಮ್ಮ ಸುತ್ತುಮುತ್ತಿನಲ್ಲಿ ಯಾವುದೇ ವೃತ್ತಿಪರರಿಂದ ಮಾಡಿಸಲೂಬಹುದು. ಮುದ್ರಣ, ರಟ್ಟು ಕಟ್ಟುವುದು ಇತ್ಯಾದಿಗಳಿಗೂ ನಿಮಗೆ ಹಲವು ಆಯ್ಕೆಗಳು ಲಭ್ಯ. ಹಾಗೆ ತಯಾರಾದ ಪುಸ್ತಕದ ಪೂರ್ಣ ದಾಸ್ತಾನು ನಿಮ್ಮ ವಶ ಮಾಡಿಕೊಂಡೇ ಮುಂದುವರಿಯಿರಿ.
ಮಾರಾಟ ಬೆಲೆಯನ್ನು ಆದಷ್ಟು ಕಡಿಮೆ ನಿಗದಿ ಪಡಿಸಿ. ನಾನು ಕಳೆದ ಸುಮಾರು ಒಂಬತ್ತು ವರ್ಷಗಳಿಂದ ನಡೆಸಿರುವ ಸಣ್ಣ ಪ್ರಕಾಶನ ವಿಭಾಗದಲ್ಲಿ, ತಯಾರಿ ಖರ್ಚಿನ ಮೇಲೆ ಇತರ ವ್ಯಾಪಾರಿಗಳಿಗೆ ಕೊಡಬೇಕಾದ ಕನಿಷ್ಠ ವಟ್ಟಾ ಅಂಶವನ್ನಷ್ಟೇ ಹೆಚ್ಚಿಸಿ ಮಾರಾಟ ಬೆಲೆ ನಿರ್ಧರಿಸುತ್ತೇನೆ. ಉದಾಹರಣೆಗೆ ಈಚಿನ ಪುಸ್ತಕ – ಕೃಷ್ಣ ವಿವರಗಳು, ನೋಡಿ. ಇದರ ತಯಾರಿ ವೆಚ್ಚ ಪ್ರತಿಯೊಂದಕ್ಕೆ ಸುಮಾರು ರೂ ಇಪ್ಪತ್ತು ಮಾತ್ರ, ಮುದ್ರಿತ ಬೆಲೆ ರೂ ಮೂವತ್ತು. ಮುದ್ರಿಸಿದ ಪ್ರತಿಗಳೆಲ್ಲವನ್ನೂ ವ್ಯಾಪಾರಿಗಳಿಗೇ ಮೂರನೇ ಒಂದು ರಿಯಾಯ್ತಿ ಬೆಲೆಯಲ್ಲಿ ಕೊಡುತ್ತ ಬಂದರೆ ನನಗುಳಿಯುವುದು ಕೇವಲ ಅಸಲು ಮಾತ್ರ. ಸದ್ಯ ನನ್ನ ಪ್ರಕಟಣೆಗಳ ಹೆಚ್ಚಿನ ಲೇಖಕ ನನ್ನ ತಂದೆ. ನಾವು ಪ್ರಕಾಶನವನ್ನು ಕೇವಲ ಸಾಮಾಜಿಕ ಜವಾಬ್ದಾರಿ ಎಂದೇ ಪರಿಗಣಿಸಿರುವುದರಿಂದ ಯಾವುದೇ ಲಾಭವನ್ನು ನಿರೀಕ್ಷಿಸುವುದಿಲ್ಲ. ನನ್ನ ಪ್ರಕಟಣೆಗಳನ್ನೇ ಬಿಡಿ ವ್ಯಾಪಾರಿಯಾಗಿ ನಾನು ನೇರ ಮಾರಿದಾಗ ಬರುವ ಆದಾಯ ನನ್ನ ಬಡ್ಡಿನಷ್ಟ ಮತ್ತು, ಇತರ ವೆಚ್ಚಗಳನ್ನು ತುಂಬಿಕೊಡುತ್ತದೆ. ತುಸು ಭಿನ್ನ ಸ್ಥಿತಿಯ ನೀವು ಖರ್ಚಿನ ಎರಡರಷ್ಟು ಬೆಲೆ ನಿಗದಿಸುವುದು ಸಾಧುವಾದೀತು. ಅಂದರೆ ರೂ ಇಪ್ಪತ್ತರ ಖರ್ಚಿನ ಪುಸ್ತಕಕ್ಕೆ ರೂ ನಲ್ವತ್ತು ಮುದ್ರಿತ ಬೆಲೆ ಇಡಬಹುದು. ಅದರಲ್ಲಿ ವ್ಯಾಪಾರಿಗೆ ರೂ ಹದಿಮೂರು ನಿಮಗೆ ರೂ ಏಳು. ವ್ಯವಹಾರ ನಗದು ಮಾತ್ರ. ದರದಲ್ಲಿ ತಾರತಮ್ಯ ಮಾಡಬೇಡಿ. ಸಗಟು ಖರೀದಿ, ಗ್ರಂಥಾಲಯ ಆಮಿಷಗಳಿಂದ ದೂರ ಇರಿ. ಪುಸ್ತಕ ಪಠ್ಯವಾದರೆ ವಟ್ಟಾದರ ಶೇಕಡಾ ೧೫ಕ್ಕೆ ಇಳಿಸುವುದು, ಹಾಗೇ ಮುದ್ರಣ ಬೆಲೆ ಇಳಿಸುವುದು ನಿಮಗೆ ಅಥವಾ ವ್ಯಾಪಾರಿಗಳಿಗೆ ನಷ್ಟ ಮಾಡದು. ದಾಸ್ತಾನು ನಿರ್ವಹಣೆ, ಪುಸ್ತಕಗಳ ಕಟ್ಟು ಮಾಡುವುದು, ಲಾರಿ ತುಂಬುವುದು ಇತ್ಯಾದಿಗಳಿಗೆ ನೀವು ಒಬ್ಬ ಕೆಲಸದವನನ್ನು ನೇಮಿಸಿಕೊಂಡರೆ ಸುಲಭವಾಗಿ ನಡೆಸಬಹುದು. ಕನ್ನಡದ ಹಿರಿಯ ಪ್ರಕಾಶಕ ಮೈಸೂರಿನ ಡಿವಿಕೆ ಮೂರ್ತಿ ಬಲು ಹಿಂದಿನಿಂದಲೂ ತಮ್ಮ ಪ್ರಕಾಶನವನ್ನು ಮಾತ್ರವಲ್ಲ, ಹಲವು ಸಣ್ಣ ಪ್ರಕಾಶಕರ ಪುಸ್ತಕಗಳ ವಿತರಣಾ ಹೊಣೆಯನ್ನೂ ವಹಿಸಿಕೊಂಡು ಯಶಸ್ವಿಯಾಗಿ ನಡೆಸುತ್ತಿರುವುದು ಹೀಗೇ.
ಬೇಂದ್ರೆ ಮರಣೋತ್ತರದಲ್ಲಿ ಅವರ ಮಕ್ಕಳು ಹಕ್ಕು ಚಲಾಯಿಸಿ ಎಲ್ಲ ಬೇಂದ್ರೆ ಸಾಹಿತ್ಯವನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಪ್ರಕಾಶನಕ್ಕಿಳಿದರೂ ಅದ್ದೂರಿ ಮುದ್ರಣ ಮತ್ತು ದುಬಾರಿ ಬೆಲೆಯೇನೂ ಇಡಲಿಲ್ಲ. ಆದರೆ ವ್ಯವಹಾರ ನೀತಿಯನ್ನು ಉದ್ಯಮದಲ್ಲಿಲ್ಲದಂತೆ ತೀರಾ ಹೊಸದಾಗಿಯೂ ಜಿಗುಟಾಗಿಯೂ ಮಾಡಿದರು. ಸಹಜವಾಗಿ ಇಂದು ಬೇಂದ್ರೆ ಕೃತಿಗಳು ಮಾರುಕಟ್ಟೆಯಲ್ಲಿ ಕಾಣದಂತಾಗಿದೆ. ಧಿಡೀರ್ ಲಾಭ ತರುವ ಕೆಲವೇ ಕೃತಿಗಳನ್ನು ಬಿಟ್ಟು ಉಳಿದಂತೆ ಕಾರಂತ ಕೃತಿಸಮುದ್ರ ನಾಳಿನ ದಿನಗಳಲ್ಲಿ ಹಾಗಾಗಬಾರದು ಎಂಬ ಕಳಕಳಿಯಿಂದ ನಮ್ಮೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಕಾರಂತ ಕೃತಿಗಳನ್ನು ಹಚ್ಚಿಕೊಂಡ ನಿಮಗೆ ಸೂಚಿಸುವುದಷ್ಟೆ ನನ್ನ ಉದ್ದೇಶ. ನನ್ನೀ ಅಭಿಪ್ರಾಯವನ್ನು ಪ್ರಾಸಂಗಿಕವಾಗಿ ಮಾತಿಗೆ ತಂದಾಗ ಕಾರಂತರ ನೆಚ್ಚಿನ ವಕೀಲರಾಗಿದ್ದ, ನಿಮಗೂ ಆತ್ಮೀಯರೇ ಆಗಿರುವ, ನನ್ನ ಸೋದರ ಮಾವ ಎ.ಪಿ. ಗೌರೀಶಂಕರ ಮತ್ತು ಬೆಂಗಳೂರಿನ ಸಾಹಿತ್ಯ ಭಂಡಾರದವರು ತುಂಬ ಬಲವಾಗಿಯೇ ಅನುಮೋದಿಸಿದ್ದಾರೆ.
ಗಮನಿಸಿ – ನನ್ನ ಅನುಭವಕ್ಕೆ ನಿಲುಕಿದಂತೆ, ಕಾರಂತರ ಎಲ್ಲ ಕಾದಂಬರಿಗಳಿಗೆ ನಿಯಮಿತ ಮತ್ತು ನಿರಂತರ ಬೇಡಿಕೆ ಇದೆ. ಬಾಳ್ವೆಯೇ ಬೆಳಕು, ಗೀತನಾಟಕಗಳು, ಯಕ್ಷಗಾನ, ಗ್ನಾನ ಮುಂತಾದ ವ್ಯಂಗ್ಯ ಬರಹಗಳಿಗೆಲ್ಲ ಸ್ಪಷ್ಟ ಬೇಡಿಕೆ ಇದೆ. ಹುಚ್ಚು ಮನಸ್ಸಿನ ಹತ್ತು ಮುಖ, ಮರಳಿ ಮಣ್ಣಿಗೆ, ಚೋಮನ ದುಡಿ, ಮೂಕಜ್ಜಿಯ ಕನಸುಗಳು ಇತ್ಯಾದಿ ಚೆನ್ನಾಗಿಯೇ ಮಾರಿಹೋಗುತ್ತವೆ.
ಸಗಟು ಖರೀದಿ, ಕೇಂದ್ರೀಕೃತ ಗ್ರಂಥಾಲಯ ಖರೀದಿ, ವಿತರಣಾಕಾರರ ಆಮಿಷಗಳನ್ನು ತಿರಸ್ಕರಿಸಿ ನಡೆದಷ್ಟೂ ನಿಮ್ಮ ವ್ಯವಹಾರ ನಿರುದ್ವೇಗಪೂರ್ಣವಾಗಿರುತ್ತದೆ. ಬೀದಿಗೋ ಕಟ್ಟಡಕ್ಕೋ ಹೆಸರಿಡುವುದರಲ್ಲಿ, ಕೇವಲ ಸಭಾರಂಜನೆಯ ಭಾಷಣ, ಗೋಷ್ಠಿಗಳಲ್ಲಿ ಕಾರಂತರು ಚಿರಂಜೀವಿಗಳಾಗರು. ಅವರ ಸ್ಮೃತಿಗೆ ಅವರದೇ ಕೃತಿಗಳ ನಿರಂತರ ಪ್ರಸರಣೆಗಿಂತ ದೊಡ್ಡ ಕಲಾಪ ಇನ್ನೊಂದಿಲ್ಲ ಎಂದೇ ಇಷ್ಟು ಬರೆದಿದ್ದೇನೆ. ನಿಮ್ಮ ಪ್ರತಿಕ್ರಿಯೆಯನ್ನು ಕಾದಿದ್ದೇನೆ. ಹೆಚ್ಚಿನ ವಿಚಾರ ವಿನಿಮಯಕ್ಕೆ ಸದಾ ಮುಕ್ತನಿದ್ದೇನೆ.
ಪ್ರತಿಕ್ರಿಯೆ ಬರಲೇ ಇಲ್ಲ – ಜನವರಿ ೧೯೯೯
(ಮುಂದುವರಿಯಲಿದೆ)
dodda pustaka (corporate ) publishersge maulika naithikathe irabeku, irutthade endu navu grahisuvude namma thappu! avrige pustaka, neerulli, gobbra, godi ella –samanu ashte .
Government hora tanda Karanthara samagra pustaka galu beleyalli bahala kadime ide.. idu oodugarige anookoolavagirabahudallave.