ಶ್ಯಾಮಲಾ ಮಾಧವರ ಆತ್ಮಕಥಾನಕ ಧಾರಾವಾಹಿ

[ಸಂಪಾದಕೀಯ ಟಿಪ್ಪಣಿ: ಶ್ಯಾಮಲಾ ಮಾಧವ – ಅಪ್ಪಟ ದಕ ಜಿಲ್ಲೆಯವರೂ ಹೌದು, ಅಭಿಮಾನೀ ಮುಂಬೈ ಕನ್ನಡತಿಯೂ ಹೌದು. ಇವರ ಪಾಕಶಾಲೆಯಲ್ಲಿ ಮನೆಮಾತಾದ ಮಲಯಾಳ (ಒಂದು ಪ್ರಬೇಧ), ಪ್ರಾದೇಶಿಕವಾಗಿ ಗಟ್ಟಿನುಡಿಯಾದ ತುಳು, ಶೈಕ್ಷಣಿಕ ಒಪ್ಪದೊಡನೆ ಹದಗೊಂಡ ಕನ್ನಡ, ಹಿಂದಿ, ಇಂಗ್ಲಿಷ್‍ಗಳೆಲ್ಲ ಸದಾ ಹಸನುಗೊಂಡು ರುಚಿವೈವಿಧ್ಯದಲ್ಲಿ ಸಾಹಿತ್ಯ ಪ್ರಯೋಗ ಕಾಣುತ್ತಲೇ ಇರುತ್ತವೆ. ಆಲಂಪನಾ, ಗಾನ್ ವಿತ್ ದ ವಿಂಡ್, ಆ ಲೋಕ, ಜೇನ್ ಏರ್ ಮುಂತಾದವು ಇವರ ಭಾಷಾ ಪ್ರಾವೀಣ್ಯ ಹಾಗೂ ಸೃಜಶೀಲ ಲೇಖನಿಗೆ ಕೆಲವು ಸಮರ್ಥ ಸಾಕ್ಷಿಗಳು. ಯಾವ ಪ್ರದರ್ಶನ ಚಟಗಳಿಲ್ಲದೆ ಇವರ ಕುಟುಂಬ ಮತಧರ್ಮ ಸಮನ್ವಯಕ್ಕೂ ಮಾನವೀಯ ಸ್ಪಂದನಕ್ಕೂ ಮಾದರಿಯಾಗಿರುವ ಪರಿ ಕಂಡು ನಾನು ಅಕ್ಷರಶಃ ಬೆರಗಾಗಿದ್ದೆ. ಅದರೊಡನೆ ಅಲ್ಲಿ ಇಲ್ಲಿ ಹೊಳೆಯುತ್ತಿದ್ದ ಇವರ ಬಾಲ್ಯ ಕಾಲದ ನೆನಪುಗಳ ಛಾಯಾ ಚಿತ್ರಗಳು, ನುಡಿಚಿತ್ರಗಳು ಕಳೆದು ಹೋಗದಂತೆ ಜೀವನ ಕ್ರಮದಲ್ಲಿ ಪೋಣಿಸಿ ನನ್ನ ಜಾಲತಾಣಕ್ಕೆ ಕೊಡಲು ಕೇಳಿಕೊಂಡೆ. ಇದು ಸುಮಾರು ಒಂದು ವರ್ಷದ ಹಿಂದಿನ ಮಾತು. ಶ್ಯಾಮಲಾ ಅಪಾರ ವಿಶ್ವಾಸದಲ್ಲಿ ಕೂಡಲೇ ಮಾದರಿ ಅಧ್ಯಾಯಗಳನ್ನು ನನಗೆ ಕಳಿಸುವುದಕ್ಕೇ ತೊಡಗಿದ್ದರು. ಆದರೆ “ಆತ್ಮಕಥೆಯಾಗಿ ಬರೆಯುವುದೇ ಕಾದಂಬರಿಯಾಗಿ ರೂಪಿಸುವುದೇ” ಎಂದು ನಾಲ್ಕೈದು ಅಧ್ಯಾಯ ಬರೆಯುವವರೆಗೂ ಅವರಲ್ಲಿ ಹೊಯ್ದಾಟ ನಡೆದೇ ಇತ್ತು. ಅಷ್ಟರಲ್ಲಿ ನಾನು ರೋಹಿಣಿಯವರ `ದೀಪದಡಿಯ ಕತ್ತಲೆ’ ಪ್ರಕಟಣೆಗೆ ತೊಡಗಿದ್ದರಿಂದ ಅನಿವಾರ್ಯವಾಗಿ ಶ್ಯಾಮಲಾರನ್ನು ಹಿಂದೆ ತಳ್ಳಿದ್ದೆ. ಆದರೆ ಈಗ, ಶ್ಯಾಮಲಾ ನೆನಪಿನ ಖಜಾನೆಯಿಂದ ಇನ್ನಷ್ಟು ತೆಗೆದು, ಕಾದಂಬರಿಯ ಹೊದಿಕೆ ಹಾಕಿ, ಗಟ್ಟಿ ಆತ್ಮವೃತ್ತಾಂತದ ಹೂರಣ ತುಂಬಿ, ಹಲವು ಕಂತುಗಳಲ್ಲಿ ಸುಂದರವಾಗಿ ರೂಪಿಸಿ, ಹೆಚ್ಚು ಕಡಿಮೆ ಒಂದು ವರ್ಷದ ಕಾವು ಕೊಟ್ಟು ಉಣಬಡಿಸುತ್ತಿದ್ದಾರೆ. ಅನ್ಯ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹೆಚ್ಚಿನ ಮಾನ್ಯತೆಯೋ ವಿಸ್ತೃತ ಪ್ರಸರಣವೋ ಆರ್ಥಿಕ ಆದಾಯಕ್ಕೂ ಕಾರಣವೋ ಆಗಬಹುದಾಗಿದ್ದ ಈ ರಸಪಾಕ – `ನಾಳೆ ಇನ್ನೂ ಕಾದಿದೆ’ಯನ್ನು ಹಲವು ನಾಳೆಗಳವರೆಗೂ ತಾಳ್ಮೆಯಿಂದ ಕಾದು ನನಗೇ ಒಪ್ಪಿಸುತ್ತಿರುವ ಶ್ಯಾಮಲಾ ಮಾಧವರ ವಿಶ್ವಾಸಕ್ಕೆ ನಾನು ಕೃತಜ್ಞ.]

ಅಧ್ಯಾಯ – ೧
ಕಥನ ಕಾರಣ

ಧೋ ಧೋ ಎಂದು ಮಳೆ ಹೊಯ್ಯುತ್ತಿದ್ದ ಕಾರ್ಗಾಲದ ಮೊದಲ ತಿಂಗಳ ಕೊನೆ. ಅದೇ ಜೂನ್ ತಿಂಗಳ ಜಡಿಮಳೆ. ಕೊಡಿಯಾಲ ಗುತ್ತಿನ ಜೈನರ ಬಾಡಿಗೆ ಮನೆಯಲ್ಲಿ ಭುವಿಗಿಳಿದ ಹಸುಗೂಸನ್ನು ಅಡಿಕೆ ಹಾಳೆಯಲ್ಲಿಟ್ಟು, ಮೈ ತೊಳೆಯಲು ಬಿಸಿನೀರು ತರಲೆಂದು ಅಜ್ಜಿ ಒಳ ಹೋಗಿದ್ದಾರೆ. ಒಳಗಡಿಯಿಟ್ಟ ಬೆಕ್ಕು, ಆ ಮಾಂಸಲ ರಕ್ತಸಿಕ್ತ ಮುದ್ದೆಗೆ ಬಾಯಿ ಹಾಕಲೆಂದು ಬಳಿ ಬರುತ್ತಿದೆ. ಆ ಹೆತ್ತ ಜೀವದ ಗಂಟಲಿನಿಂದ ಸ್ವರವೇ ಹೊರಡುತ್ತಿಲ್ಲ. ಭಯ, ನಿತ್ರಾಣಕ್ಕೆ ಚೀತ್ಕಾರವು ಗಂಟಲಲ್ಲೇ ಅಡಗಿದೆ. ಬಿಸಿನೀರಿನೊಡನೆ ಒಳಗಡಿಯಿಟ್ಟ ಅಜ್ಜಿ, ಬೋಗುಣಿಯನ್ನಲ್ಲೇ ಕುಕ್ಕಿ ಶಿಶುವಿನ ಬಳಿಗೆ ಧಾವಿಸಿ, ಬೆಕ್ಕಿನ ಬಾಯಿಂದ ಉಳಿಸಿದರೆಂದೇ ಇಲ್ಲಿಗೀ ಕಥೆ ಮುಗಿಯಿತು ಎಂದಾಗದೆ ತೆರೆದು ಕೊಂಡಿದೆ, ಈ ಕಥನ!

ನನ್ನ ಬಾಲ್ಯದ ಮೊದಲ ನಾಲ್ಕು ವರ್ಷಗಳನ್ನು ಕಳೆದ ಈ ಮನೆಯ ಚಿತ್ರ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ. ಒಂಬತ್ತು ತಿಂಗಳಲ್ಲೇ ನಡೆದಾಡ ತೊಡಗಿದ ಮಗು, ಶಾಲೆಗೆ ಹೊರಟ ಅಮ್ಮನ (ಯು. ವಸಂತಿ) ಹಿಂದೆ ಓಡಿ ಆ ಎತ್ತರ ಜಗಲಿಯಿಂದ ಬಿದ್ದುದಕ್ಕೆ ಲೆಕ್ಕವಿಲ್ಲವಂತೆ. ಅಂಗಳ, ಹಿತ್ತಿಲಲ್ಲೆಲ್ಲ ಓಡಾಡುತ್ತಿದ್ದ ಆ ಎಳೆಯ ಕಾಲ್ಗಳಿಗೆ ದೃಷ್ಟಿಯಾಯ್ತೋ ಎಂಬಂತೆ, ಒಂದೂವರೆ ವರ್ಷ ಪ್ರಾಯದಲ್ಲಿ ಒಂದು ಬೆಳಿಗ್ಗೆ, ಮೊಣಕಾಲು ಇದ್ದಕ್ಕಿದ್ದಂತೆ ಕೆಂಪಗೆ ಬಾತುಕೊಂಡು ದೊಡ್ಡ ಚೆಂಡಿನಂತಾಗಿ, ಡಾಕ್ಟರ ಬಳಿಗೆ ಧಾವಿಸಿದಾಗ ಡಾಕ್ಟರ್ ಸೂಜಿ ಚುಚ್ಚಿ , ಆ ಕೆಂಪನೆ ಬಾವು ಸುಟ್ಟ ಬದನೆಯಂತಾಯ್ತಂತೆ. ಅಂಗಳದ ಎಡಪಕ್ಕಕ್ಕೆ ಮಮತಾಮಯಿ ಅಂಬುಜಮ್ಮ ಮತ್ತು ಸೀತಕ್ಕನ ಮನೆಗಳು. ಆಡುವ ಮಕ್ಕಳನ್ನು ಒಳಕರೆದು ಅಂಬುಜಮ್ಮ ನೀಡುತ್ತಿದ್ದ ಕಾಫಿ, ತಿಂಡಿ; ಪುಟ್ಟ ಮಣೆಯ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು, ಈ ಚಿಕ್ಕ ಹುಡುಗಿ ಆ ಪುಟ್ಟ ಕಂಚಿನ ಗಿಣ್ಣಲಿನ ಕಾಫಿ ಕುಡಿಯುತ್ತಿದ್ದುದು ಈ ಕಂಗಳಿಗಿನ್ನೂ ಕಾಣುತ್ತಿದೆ. “ಸೀತಕ್ಕಾ, ಸೀತಕ್ಕಾ” ಎಂದು ಸದಾ ಸೀತಕ್ಕನ ಸೆರಗು ಹಿಡಿದು ಸುತ್ತಾಟ. ಎದುರು ಮನೆ ಆಳ್ವರ ಮಗಳು, ಗೆಳತಿ ಜಯಶ್ರೀಯೊಡನೆ ಗುತ್ತಿನ ವಿಶಾಲ ಗದ್ದೆಗಳಲ್ಲಿ ಅಲೆದಾಟ. ಈ ಸುತ್ತಾಟದಲ್ಲೊಂದಿನ ಗುತ್ತಿನ ಮನೆಯಿಂದ ಆಳುಗಳಿಬ್ಬರು ಕಂಬಳಿ ಕೊಪ್ಪೆಯಲ್ಲಿ ಏನೋ ಬಲು ಭಾರವಾದುದನ್ನು ಹೊತ್ತು, ಕಿರುತೋಡಿನ ಸಂಕದ ಮೇಲಿಂದ ಹೋಗುವುದನ್ನು ನೋಡುತ್ತಾ ನಿಂತಾಗ ಗುತ್ತಿನ ಒಡೆಯರು ಬಯ್ದು ಮನೆಗೆ ಹೋಗುವಂತೆ ಗದರಿದ ನೆನಪಿದೆ. ಮನೆಯೆದುರಿನ ಪೆಜಕಾಯಿ ಮರದ ಪುಟ್ಟ ಹಣ್ಣುಗಳ ಕಿತ್ತಳೆ, ಹಳದಿ ಸೊಳೆಗಳ ರುಚಿ ಇನ್ನೂ ಬಾಯಲ್ಲಿದೆ.

ಅಮ್ಮ ಟೀಚರಾಗಿದ್ದ ಬೆಸೆಂಟ್ ಶಾಲೆಯ ಸನಿಹದ ಥಿಯೊಸಾಫಿಕಲ್ ಸೊಸೈಟಿ ಹಾಲ್‌ನಲ್ಲಿ ನನ್ನ ಬೇಬಿ ಕ್ಲಾಸ್. ಪ್ರಾಯ ಮೂರು ವರ್ಷ. ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ಪಡಿವಾಳರ ವೈಭವೋಪೇತ ಬಂಗಲೆ, ‘ಲಕ್ಷ್ಮೀ ವಿಲಾಸ’. ಅಮ್ಮ ಮನೆಗೆ ಹಿಂದಿರುಗುವುದು ತಡವಿದ್ದರೆ, ಕೆಲವೊಮ್ಮೆ ಪಡಿವಾಳರ ಮಕ್ಕಳು ಮಾಣಿಕ್ಯ, ಶಾಂತಿಯರೊಡನೆ ನಮ್ಮನ್ನು ಕಳಿಸಲಾಗುತ್ತಿತ್ತು. ಆಗ ಅಚ್ಚರಿಯ ಕಣ್ಗಳಿಂದ ಆ ಮಹಲಿನ ಸೌಂದರ್ಯವನ್ನು ನಾನು ಕಣ್ಮನಗಳಲ್ಲಿ ತುಂಬಿ ಕೊಳ್ಳುತ್ತಿದ್ದೆ. ಜೈನರಾದ ಆ ಹುಡುಗರ ಊಟ ಸೂರ್ಯಾಸ್ತದೊಳಗೆ ಮುಗಿಯ ಬೇಕಿತ್ತು. ಜೊತೆಗೆ ಆಡುವ ನನಗೂ ಅವರೊಡನೆ ಊಟ. ಅಷ್ಟೊಂದು ಸಿರಿವಂತರಾದ ಅವರು, ಬರಿಯ ಹಾಲನ್ನ ಮಾತ್ರ ಯಾಕೆ ಮತ್ತು ಹೇಗೆ ಉಣ್ಣುತ್ತಾರೆಂಬ ನನ್ನ ಸಮಸ್ಯೆ ನನ್ನದೇ ಆಗಿತ್ತು. ನನ್ನ ಗಂಟಲೊಳಗಂತೂ ಆ ಹಾಲನ್ನ ಕಷ್ಟದಿಂದಲೇ ಇಳಿಯುತ್ತಿತ್ತು. “ರೋಗಿ ಬಯಸಿದ್ದೂ ಹಾಲು, ಅನ್ನ; ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬ ಮಾತು ನನಗೆ ಅರ್ಥವೇ ಆಗುತ್ತಿರಲಿಲ್ಲ. ಪಡಿವಾಳರ ಮನೆಯಿಂದ ನಮ್ಮ ಮನೆಗೆ ಬರುವ ದಾರಿಯ ಬಲಕ್ಕೆ ಸನಿಹದಲ್ಲೇ ಹರಿಜನರ ಕೇರಿ. ಮುಸ್ಸಂಜೆ ಹೊತ್ತು ಅಲ್ಲಿಂದ ಡೊಳ್ಳು, ವಾದ್ಯ ಹಾಗೂ ಕುಣಿತದ ಸದ್ದು ಕೇಳಿ ಬರುತ್ತಿತ್ತು. ಹರಿಜನ ಕೇರಿಯಿಂದ ಬರುತ್ತಿದ್ದ ಅದ್ದ, ನಮ್ಮ ಅಂಗಳವನ್ನು ಪೊಳಿಮಣೆಯಿಂದ ಬಡಿದು ಬಡಿದು, ಒರೆದು ಸಮತಟ್ಟು ಮಾಡುತ್ತಿದ್ದ. ಮತ್ತೆ ಅಂಗಳದಲ್ಲೇ ಅಮ್ಮ ಅವನಿಗೆ ಬಾಳೆಲೆಯಲ್ಲಿ ಗುಡ್ಡದಂತೆ ಎತ್ತರಕ್ಕೆ ಅನ್ನ, ಪದಾರ್ಥ ಬಡಿಸುತ್ತಿದ್ದರು. ಅವನ ಹೆಂಡತಿ ಗುಲ್ಲಿ, ತಲೆಯ ಮೇಲೆ ಬಾಲ್ದಿ, ತಗಡು, ಹಿಡಿಸೂಡಿ ಹೊತ್ತು, ಮನೆಗಳ ಪಾಯಿಖಾನೆ ತೊಳೆಯಲು ಹೋಗುತ್ತಿದ್ದಳು. ಅದ್ದ, ಗುಲ್ಲಿ ಎಂದರೆ ಈ ಪುಟ್ಟ ಬಾಲೆಗೆ ಅದೇನೋ ಆಕರ್ಷಣೆ.

ಮನೆಯಲ್ಲೊಂದು ಆಡು ಇತ್ತು. ಅಮ್ಮ ಆಡಿನ ಹಾಲು ಕರೆಯುತ್ತಿದ್ದುದು ನೆನಪಿದೆ. ನನಗೆ ಮೂರೂವರೆ ವರ್ಷವಾದಾಗ ತಂಗಿ ಮಂಜುಳಾ ಹುಟ್ಟಿ ಬಂದಳು. ಮಂಜುಳಾ, ತುಂಬ ಚೆಲುವಾದ ಮಗು. ಅಮ್ಮನ ಶಾಲೆಯಿಂದ ಸಂಗೀತದ ಮಾಷ್ಟ್ರು ಉಡುಪರು ಬಂದು, ಒಂದು ಸ್ಟೂಲ್ ಮೇಲೆ ಕ್ಯಾಮರಾ ಇರಿಸಿ, ಮಗುವಿನ ಫೋಟೋಗಳನ್ನು ತೆಗೆದುದು ನೆನಪಿದೆ. ಅವಳ ಈ ಫೋಟೋಗಳು, ಮತ್ತು ಅಣ್ಣ ಮೋಹನ ಒಂದು ವರ್ಷದ ಮಗುವಾಗಿದ್ದಾಗ ನೆಹರೂ ಡ್ರೆಸ್‌ನಲ್ಲಿ ತೆಗೆದ ಫೋಟೋ ಮತ್ತು ಮುಂದೆ ತಮ್ಮ ಮುರಲಿಯ ನೆಹರೂ ಡ್ರೆಸ್‌ನ ಫೋಟೋ ಕೂಡಾ ಮನೆಯಲ್ಲೂ, ಅಜ್ಜಿಮನೆಯಲ್ಲೂ ಗೋಡೆಯಲ್ಲಿದ್ದುವು. ನಾನು ಮಾತ್ರ ಎಲ್ಲೂ ಇರಲಿಲ್ಲ.

ಮೂರು ವರ್ಷ ಪ್ರಾಯದಲ್ಲಿ ಥಿಯೊಸಾಫಿಕಲ್ ಸೊಸೈಟಿ ಹಾಲ್‌ನಲ್ಲಿ ನೋಡಿದ, ಡಾ.ಶಿವರಾಮ ಕಾರಂತರ ‘ಕಿಸಾ ಗೌತಮಿ’ ನಾಟಕ ಈ ಮನದಲ್ಲಿ ಈಗಲೂ ಅಚ್ಚೊತ್ತಿ ನಿಂತಿದೆ. ನಾಟಕದ ಕೊನೆಗೆ ಧ್ವನಿಸಿದ ಬುದ್ಧಂ ಶರಣಂ ಗಚ್ಛಾಮಿ ….ಧರ್ಮಂ ಶರಣಂ ಗಚ್ಛಾಮಿ…. ಸಂಘಂ ಶರಣಂ ಗಚ್ಛಾಮಿ ಇಂದಿಗೂ ಕಿವಿಗಳಲ್ಲಿ ಅನುರಣಿಸುತ್ತಿದೆ. ಬುದ್ಧ, ಗೌತಮಿ, ಅವಳ ನಿರ್ಜೀವ ಕಂದ ಮತ್ತು ಆ ತಾಯ ರೋದನ ಮನದಲ್ಲಿ ಚಿತ್ರವತ್ತಾಗಿದೆ. ಅಮ್ಮನ ಬೆಸೆಂಟ್ ಶಾಲೆಯಲ್ಲೇ ಒಂದನೇ ತರಗತಿ ಸೇರಿದಾಗ, ಪ್ರಾಯ ನಾಲ್ಕು ವರ್ಷ. ಪ್ರಾಯವಾಗಿಲ್ಲವೆಂದು ರಿಜಿಸ್ಟರ್‌ನಲ್ಲಿ ಹೆಸರಿಲ್ಲದೆ ಟೀಚರ್ ಹೆಸರು ಕರೆಯದಿರುವುದು ಮನಕ್ಕೆ ಕೊರಗು. ಕೆಲವೇ ದಿನಗಳು ಆ ಜೈನರ ಮನೆಯಿಂದಲೇ ಗೆಳತಿ ಜಯಶ್ರೀಯೊಡನೆ ಶಾಲೆಗೆ ಪಯಣ. ಮತ್ತೆ ನಮ್ಮ ವಾಸ ಬೆಸೆಂಟ್ ಶಾಲೆಯ ಹಿತ್ತಿಲೊಳಗಿನ ಮನೆಗೆ ಬದಲಾಯ್ತು. ಗೆಳತಿಯೊಡನೆ ನಡೆದ ಆ ಕೆಲ ದಿನಗಳಲ್ಲೇ ಒಂದಿನ, ಇಬ್ಬರೂ ನಮ್ಮ ಶಾಲಾ ಚೀಲವನ್ನು ಗದ್ದೆಹುಣಿ ಕಡಿದಲ್ಲಿ ನೀರಿಗೆ ಮುಳಗಿಸಿ ಮೀನಮರಿಗಳನ್ನು ಹಿಡಿಯಲೆತ್ನಿಸಿ ಶಾಲೆಯಲ್ಲಿ ಟೀಚರಿಂದ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆಗೆ ಗುರಿಯಾದುದೂ ಮರೆಯುವಂತಿಲ್ಲ

ಬೆಸೆಂಟ್ ಶಾಲೆ ಹಾಗೂ ಆ ಪರಿಸರದಲ್ಲಿ ಕಳೆದ ಬಾಲ್ಯ ನನ್ನ ಪಾಲಿಗೆ ಬಹು ಮೂಲ್ಯವಾದುದು. ದೊಡ್ಡ ಶಾಲೆ, ಅಂದರೆ ಹೈಸ್ಕೂಲ್‌ನ ಹಿತ್ತಿಲ ಮೂಲೆಯ ಆ ಪುಟ್ಟ ಮನೆಯ ಪುಟ್ಟ ಮೆಟ್ಟಲುಗಳು. ಸರಳುಗಳುಳ್ಳ ಮುಂಭಾಗದ ಗೋಡೆಯಿದ್ದ ಕಿರು ಚಾವಡಿ. ಅದರ ಬಲಕ್ಕೆ ಚಿಕ್ಕದೊಂದು ಆಫೀಸ್ ಕೋಣೆ, ಚಾವಡಿಯಿಂದೊಳಕ್ಕೆ ಅಡುಗೆಕೋಣೆ, ಹೊರ ಜಗಲಿ, ಬಚ್ಚಲು ಮನೆ. ಆಫೀಸ್ ಕೋಣೆಯಲ್ಲಿ ಮರದ ದೊಡ್ಡದೊಂದು ಪೆಟ್ಟಿಗೆಯಲ್ಲಿ ನನ್ನ ತಂದೆ – ನಾರಾಯಣ ಉಚ್ಚಿಲರ ಕನ್ನಡ, ಇಂಗ್ಲಿಷ್ ಪುಸ್ತಕ ಭಂಡಾರವಿತ್ತು. ಕಾರಂತ, ನಿರಂಜನ, ಕಟ್ಟೀಮನಿ, ಸಿದ್ಧಯ್ಯ ಪುರಾಣಿಕ, ಅ.ನ.ಕೃ, ತ.ರಾ.ಸು ಹೀಗೆ ಕನ್ನಡ ಕಾದಂಬರಿ ಲೋಕ ನನ್ನೆದುರು ಇಲ್ಲಿ ತೆರೆದು ಕೊಂಡಂತೆ. ಆಗ ನಾನು ಕೌತುಕದಿಂದ ಕೇವಲ ದಿಟ್ಟಿಸಿ ಪುಟ ಮಗುಚುತ್ತಿದ್ದ ಇಂಗ್ಲಿಷ್ ಸಾಹಿತ್ಯ ಕೃತಿಗಳೂ ಅಲ್ಲಿದ್ದುವು. ಏಳೆಂಟರ ಹರೆಯದಲ್ಲಿ ನಿರಂಜನರ `ಚಿರಸ್ಮರಣೆ’ಯನ್ನೋದಿದಾಗ, ಮನೆಯ ಮೆಟ್ಟಲಲ್ಲಿ ಕುಳಿತು ಪೂರ್ವಾಗಸದ ತಾರೆಗಳನ್ನು ದಿಟ್ಟಿಸುತ್ತಾ, ನನ್ನ ತಂದೆಯೂ ತೀರಿಕೊಂಡಾಗ ಹಾಗೆಯೇ ನಕ್ಷತ್ರವಾಗುವರೆಂದು ನಂಬಿದ್ದೆ. ತಂದೆಯವರೊಡನೆ ರಾತ್ರಿ ಊಟದ ಬಳಿಕ ಅಂಗಳದಲ್ಲಿ ಅಡ್ಡಾಡುತ್ತಾ ಆಗಸದ ತಾರಾ ಪ್ರಪಂಚದ ಪರಿಚಯ. ಸದಾ ಪುಸ್ತಕ ಪ್ರಪಂಚ, ಭಾವಲೋಕದಲ್ಲಿ ಮುಳುಗಿರುತ್ತಿದ್ದವಳಿಗೆ, ನಿದ್ರಾ ಸಮಯವೆಂದರೆ, ತಪ್ಪದೆ ಕನಸು ತೆರೆದು ಕೊಳ್ಳುವ ಕಾಲ.ಬಾಲ್ಯದಲ್ಲಿ ಪುನಃ ಪುನಃ ಬೀಳುತ್ತಿದ್ದ ರಮ್ಯವೂ ಭಯಕಾರಕವೂ ಆದ ಕನಸೊಂದಿತ್ತು. ಹಚ್ಚ ಹಸುರಾದ, ಹಳದಿ, ಕೆಂಪು ಹೂಗಳಿಂದ ತುಂಬಿದ ತೋಟದ ಮಧ್ಯೆ ಓಡುತ್ತಿರುವ ಗಾಂಧೀಜಿಯವರ ಬೆನ್ನ ಹಿಂದೆ ತಂದೆಯವರೂ ಓಡುತ್ತಿದ್ದಾರೆ.

ತೋಟದ ನಡುವೆ ಹುಲಿಯಿರುವ ಬಾವಿಯೊಳಗೆ ಅವರು ಬೀಳುವರಲ್ಲಾ ಎಂಬ ಭಯದಿಂದ ನಾನು “ಅಚ್ಚಾ, ಅಚ್ಚಾ” ಎಂದು ವಿಹ್ವಲಳಾಗಿ ಕರೆಯುವಾಗ ಇದ್ದಕ್ಕಿದ್ದಂತೆ ಎಚ್ಚರಾಗಿ, ಕಾಲು ಕೊಕ್ಕೆ ಹಿಡಿದು ಕೊಂಡು ಅಸಾಧ್ಯ ನೋವು. ಅಣ್ಣ ಹಾಗೂ ನಾನು ತಂದೆಯವರನ್ನು ಅಚ್ಚಾ ಎಂದು ಕರೆದರೆ, ತಂಗಿ ಮಂಜುಳಾ ಹಾಗೂ ತಮ್ಮ ಮುರಲಿಗೆ ಅವರು ‘ಪಪ್ಪಾ’. ತಂದೆಯ ಮಮತೆಯ ಕೈ ಆ ಕಾಲನ್ನು ನೀವಿ, ಕೊಕ್ಕೆಯನ್ನು ಬಿಡಿಸುತ್ತಿತ್ತು. ‘ಪುರುಷೋತ್ತಮನ ಸಾಹಸ’ ಪತ್ತೇದಾರಿ ಕಾದಂಬರಿಗಳಲ್ಲೂ ಮುಳುಗಿರುತ್ತಿದ್ದ ನನಗೆ ಅರ್ಥವಿಲ್ಲದ ಭೀಭತ್ಸ ಕನಸುಗಳೂ ಸಾಕಷ್ಟು ಬೀಳುತ್ತಿದ್ದುವು. ಅವುಗಳಿಂದ ಎಚ್ಚರಾಗುವಾಗ ಸಂದರ್ಭಾನುಸಾರ, ಹಸಿ ಹಸಿ ಸ್ಪರ್ಶಾನುಭವವೂ ಉಳಿದುಕೊಂಡು ಚಿತ್ತವನ್ನು ಕಾಡುತ್ತಿತ್ತು.

ನಮ್ಮಣ್ಣ, ಗಾಂಧೀಜಿ ಹಂತಕನ ಗುಂಡಿಗೆ ಬಲಿಯಾಗಿ ಅಮರರಾದಂದೇ ಹುಟ್ಟಿ ಬಂದು ಮೋಹನನೆಂದೇ ಹೆಸರಾಂತ. ಮಂಜುಳನ ಬಳಿಕ ಒಂದೂವರೆ ವರ್ಷದಲ್ಲಿ ಹುಟ್ಟಿ ಬಂದವ, ತಮ್ಮ ಮುರಲೀಧರ. ಮಗುವಿಗೆ ಮೂರು ತಿಂಗಳಾದಾಗೊಮ್ಮೆ ರಾತ್ರಿ ನಮ್ಮಮ್ಮ ಮಗುವಿಗೆ ಸ್ನಾನ ಮಾಡಿಸಿ ಒಳ ತಂದಾಗ, ಮಗುವಿನ ಮೈ ಅದುರಲಾರಂಭಿಸಿ, ಸೆಟೆದು ಕೊಂಡಿತು. ತಂದೆ ಮನೆಯಲ್ಲಿರಲಿಲ್ಲ. ನಮ್ಮಮ್ಮ ಕಂಗಾಲಾಗಿ, ಬಳಿಯಲ್ಲೇ ಇದ್ದ ಡಾ. ವಸಂತಾ ಸತ್ಯಶಂಕರ್ ಅವರನ್ನು ಕರೆತರುವಂತೆ ನಮ್ಮನ್ನಟ್ಟಿದರು. ನಾನು, ಅಣ್ಣ, ಐದಾರು ವರ್ಷದ ಮಕ್ಕಳು, ಬಿಟ್ಟ ಬಾಣದಂತೆ ಆ ಕತ್ತಲಲ್ಲಿ, ಶಾಲಾ ಹಿತ್ತಿಲು ದಾಟಿ, ರಸ್ತೆಯಾಚೆ ಓಣಿಯಲ್ಲಿ ಸಣ್ಣ ಶಾಲೆಯ ಹಿಂಭಾಗದಲ್ಲಿದ್ದ ಆ ದೊಡ್ಡ ಮನೆಗೋಡಿ ಬಂದು, ಅಂಗಲಾಚಿ, ಡಾಕ್ಟರನ್ನು ಕರೆ ತಂದೆವು. ಮಗುವನ್ನು ಕವುಚಿ ಹಾಕಿ, ಗುದದ ಬಳಿಯ ರಂಧ್ರಕ್ಕೆ ಡಾಕ್ಟರ್ ಇಂಜೆಕ್ಷನ್ ಚುಚ್ಚುವುದನ್ನೇ ನಾನು ವಿಹ್ವಲಳಾಗಿ ನೋಡುತ್ತಾ ನಿಂತೆ., ಮಗು ಚೀರಿತು. “ಇನ್ನು ಭಯವಿಲ್ಲ” ಎಂದ ಡಾಕ್ಟರ್, ನನ್ನತ್ತ ತಿರುಗಿ, ನಗುತ್ತಾ “ಈ ಶ್ಯಾಮಲಾ , ಬಿಡಲೇ ಇಲ್ಲ; ಒಮ್ಮೆ ಬನ್ನಿ, ಡಾಕ್ಟರ್, ದಮ್ಮಯ್ಯ, ಎಂದು ಕೈ ಹಿಡಿದು ಎಳೆಯಲೇ ಶುರು ಮಾಡಿದಳು, ಒಳ್ಳೆಯ ಅಕ್ಕ! “, ಎಂದಂದು ಕೆನ್ನೆ ತಟ್ಟಿ ಹೊರಟು ಹೋದರು.

ಒಮ್ಮೆ ಮಗುವನ್ನು ನೋಡಲೆಂದು ಊರಿಂದ ಬಂದ ಅಜ್ಜಿಯರಿಬ್ಬರು, ಮುಂದು ಮಾಡಿದ್ದ ಬಾಗಿಲಿಂದ ಒಳ ಬಂದವರು, ಮನೆಯಲ್ಲಿ ಮಕ್ಕಳಿಬ್ಬರೇ ಮಲಗಿರುವುದನ್ನು ಕಂಡು ದುಃಖ ತಡೆಯಲಾಗದೆ ಅತ್ತೇ ಬಿಟ್ಟರಂತೆ. ಮಗು ಮಂಜುಳಾ ಕೆಳಗೆ ಚಾಪೆಯಲ್ಲಿ; ಎಳೆಯ ಕಂದ ತೊಟ್ಟಿಲಲ್ಲಿ. ಅಮ್ಮ, ಹಿರಿಯ ಮಕ್ಕಳು ಶಾಲೆಯಲ್ಲಿ. ತಂದೆ ಆಫೀಸ್‌ನಲ್ಲಿ. ಹೀಗೂ ಉಂಟೇ, ಎಂದು ನೋಡ ಬಂದ ಅಜ್ಜಿಯಂದಿರ ಕಳವಳ, ಕಳಕಳಿ.!

ನಾವು ಚಿಕ್ಕವರಿದ್ದಾಗ ನಮ್ಮ ಸೋದರತ್ತೆ ಶಾರದತ್ತೆ ಹೆಚ್ಚಾಗಿ ಊರಿಂದ ಬಂದು ನಮ್ಮೊಡನಿರುತ್ತಿದ್ದರು. ನಮ್ಮಮ್ಮನ ಚಿಕ್ಕಮ್ಮ – ನಮ್ಮ ಆಈ ಬೆಲ್ಯಮ್ಮ, ಕೂಡಾ ಕೆಲವೊಮ್ಮೆ ಬಂದು ಒಡನಿರುತ್ತಿದ್ದರು. ಹಲವಾರು ಕಥೆಗಳನ್ನು ಹೇಳುತ್ತಿದ್ದ ಈ ಬೆಲ್ಯಮ್ಮನ ಕಥೆಗಳಿಗೆ ನಾವು ಹ್ಞೂಂಗುಟ್ಟ ಬೇಕಿತ್ತು. ಇಲ್ಲವೇ ಕಥೆಯಿಲ್ಲ. ಕಥೆಯಲ್ಲಿ ಗಿಳಿ ಹಾರಿ ಹೋಗುವುದೋ, ರಕ್ಕಸ ಮಾಯವಾಗುವುದೋ ಏನಾದರೂ ನಡೆಯುತ್ತಿತ್ತು. ಆಗ ನಾವು ಹ್ಞೂಂಗುಟ್ಟಿದರೆ, “ಹ್ಞೂಂ ಎಂದ್ರೆ ಅದು ಬರ್‍ತದಾ?” – ಪ್ರಶ್ನೆ. ಈ ಪ್ರಶ್ನೆಗೆ “ಆ..” ಎಂದರೆ, “ಆ ಎಂದರೆ ಸಿಕ್ತದಾ?” ಎಂದು ಪ್ರಶ್ನೆ. ಹೀಗೆ ಸಾಗಿ ಕಥೆ ಅಲ್ಲಿಗೇ ನಿಲ್ಲುತ್ತಿತ್ತು. ಹೀಗಾಗಿ ಅವರನ್ನು `ಆ ಈ ಬೆಲ್ಯಮ್ಮ’ ಎಂದೂ, ಊಟದೊಟ್ಟಿಗೆ ಹಸಿ ಮೆಣಸು ತಿನ್ನುತ್ತಿದ್ದುದರಿಂದ, ಗಿಳಿ ಬೆಲ್ಯಮ್ಮ ಎಂದೂ ನಾವು ಕರೆಯುತ್ತಿದ್ದೆವು. ನಾಲ್ಕು ವರ್ಷಪ್ರಾಯದಲ್ಲಿ ನನ್ನ ಮೊದಲ ಹಲ್ಲು ಅಲುಗಾಡ ತೊಡಗಿ ಸಡಿಲವಾದಾಗ, ಈ ಬೆಲ್ಯಮ್ಮ, ನೂಲಿನಿಂದ ಆ ಹಲ್ಲನ್ನು ಕಿತ್ತಿದ್ದರು. ಕಿತ್ತ ಹಲ್ಲನ್ನು ಮಾಡಿನ ಮೇಲಕ್ಕೆಸೆವ ಆಟವಂತೂ ಬಲು ಮೋಜೆನಿಸಿತ್ತು.

ಉಚ್ಚಿಲ ಶಾಲೆಯ ಕರೆಸ್ಪಾಂಡೆಂಟ್ ಆಗಿದ್ದ ನಮ್ಮ ತಂದೆ ಸದಾ ಕಾರ್ಯಮಗ್ನರಾಗಿದ್ದು ಶಾಲಾಸಂಬಂಧ ಅವರ ಸಹಚರರನೇಕರು ಅವರನ್ನು ಸಿಗಲು ಬರುತ್ತಿದ್ದರು. ಅವರೆಲ್ಲರ ಗಂಭೀರ ದನಿಯ ತೂಕದ ಮಾತುಗಳು, ಗಹನವಾದ ಚರ್ಚೆ, ರಾಜಕೀಯ ವಿಚಾರಗಳು ಆ ಎಳೆಯ ಪ್ರಾಯದಲ್ಲೂ ನನ್ನಲ್ಲಿ ಕೌತುಕವನ್ನು ಮೂಡಿಸುತ್ತಿತ್ತು. ದೊಡ್ಡತಂದೆ – ಉದ್ಯಾವರದ ಗುಡ್ಡಪ್ಪ ಮಾಷ್ಟ್ರು, ಮಾವ – ಮುಲ್ಕಿಯ ನಾರಾಯಣ ಮಾಷ್ಟ್ರು, ಡಿಸ್ಟ್ರಿಕ್ಟ್ ಬೋರ್ಡ್ ಮಾವ, ಅಜ್ಜ ಕೆ.ಕೆ.ಉಚ್ಚಿಲ್, ಧರ್ಮರಾಯಜ್ಜ ಹೀಗೆ ಹಲವರು. ಬದುಕಿಗೊಂದು ಧ್ಯೇಯವಿದ್ದ, ಆದರ್ಶದ ಬೆನ್ನು ಹತ್ತಿದ ಆ ಜನಾಂಗ ಈಗ ಬರಿಯ ನೆನಪು! ಅಂತಹ ನಡೆ, ನುಡಿಯನ್ನು ಈಗೆಲ್ಲೂ ನಾವು ಕಾಣೆವಲ್ಲಾ ಎಂದು ವ್ಯಥೆಯೆನಿಸುತ್ತದೆ.

ಶಾಲೆಯ ಗೇಟ್ ಪಕ್ಕದ ವಿಶಾಲ ರೆಂಜೆ ಮರದಿಂದ ಸುರಿಯುತ್ತಿದ್ದ ಅಸಂಖ್ಯ ರೆಂಜೆ ಹೂಗಳನ್ನು ಹೆಕ್ಕಿ, ನಮಗಾಗಿ, ಟೀಚರ್‍ಸ್‌ಗಾಗಿ ಮಾರುದ್ದದ ಮಾಲೆಗಳನ್ನು ನಾವು ಮಾಡುತ್ತಿದ್ದೆವು. ಅಂತೆಯೇ ಶಾಲಾ ಮೈದಾನದಂಚಿಗೆ ತೋಡಿನುದ್ದಕ್ಕೂ ಹಬ್ಬಿದ ಮಧುಮಾಲತಿ ಬಳ್ಳಿಯ ಬಿರಿವ ಮೊಗ್ಗುಗಳನ್ನು ಕೊಯ್ದು, ಮತ್ತಷ್ಟು ಮಾಲೆಗಳು. ಮನೆಯೆದುರು ಬಾವಿಯ ಪಕ್ಕದಲ್ಲಿ ಹೂಮಳೆ ಸುರಿಸುತ್ತಿದ್ದ ಪಾರಿಜಾತದ ಮೊಗ್ಗು, ಹೂಗಳಿಂದ ಇನ್ನಷ್ಟು ಮಾಲೆಗಳು. ವೆಲ್ವೆಟ್ ಹೂಗಳನ್ನು ಕೋದು ಚೆಲುವಾದ ದಪ್ಪ ದಂಡೆಗಳು. ಹೂಗಳ ಕಂಪಿನಿಂದ, ಪುಸ್ತಕಗಳ ನಂಟಿನಿಂದ, ಶಾಲಾ ವಾತಾವರಣದಿಂದ ಮತ್ತು ರಜಾದಿನಗಳ ಪ್ರೀತಿಯ ಅಜ್ಜಿ ಮನೆಯ ವಾತ್ಸಲ್ಯ ಬಂಧದಿಂದ ಅರಳಿದ ಬಾಲ್ಯವದು, ಬೆಳೆದಂತೆ ತೆರೆದು ಕೊಂಡ ಸುತ್ತಣ ಬದುಕಿನ ಚಿತ್ರಗಳು ಮನವನ್ನು ಅರಳಿಸುತ್ತಾ, ಮುದುಡಿಸುತ್ತಾ, ಮತ್ತೆ ವಿಕಸಿಸುತ್ತಾ ಜೀವನ ದರ್ಶನವನ್ನೇ ತೆರೆದು ತೋರಿವೆ.. ಎಲ್ಲವೂ ಜೊತೆ ಜೊತೆಯಾಗಿ, ನೆನಪುಗಳ ದಿಬ್ಬಣವಾಗಿ ಹೊರಟಿರುವಾಗ, ಅಕ್ಷರಗಳಿಗಿಳಿಸದೆ ನಿರ್ವಾಹವಿಲ್ಲ. ಓದಲು, ಸ್ಪಂದಿಸಲು, ಸಹೃದಯರು ನೀವಿರುವಿರಲ್ಲಾ?

(ಮುಂದುವರಿಯಲಿದೆ)