ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’
ಅಧ್ಯಾಯ – ೨

ಪ್ರೀತಿಬಂಧಗಳ ಬಗೆ ಸಂಬಂಧಗಳ ಅಳವನ್ನು ಮೀರಿದ್ದು. ಭಾಮಾಂಟಿಯೊಡನೆ ನಮ್ಮ ಬಾಂಧವ್ಯ ಇಂತಹುದು. ನಾನು ಹುಟ್ಟಿದಂದೇ ನನ್ನನ್ನು ನೋಡಲು ಬಂದ ಭಾಮಾಂಟಿ, ಅದೇ ಹೊಸದಾಗಿ ಅಮ್ಮನ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿ ಕೊಂಡವರು. ಆಟಟೀಚರಿಗೆ ಮಗುವಾಗಿದೆ ಎಂದು ಕೇಳಿ, ಮನೆ ತೋರಲೆಂದು ಶಾಲಾ ಪೇದೆ ಕೊರಗನನ್ನು ಜೊತೆಗೆ ಕರಕೊಂಡು ಮಗುವನ್ನು ನೋಡ ಬಂದರಂತೆ. ಅಂದಿನಿಂದ ಇಂದಿನ ವರೆಗೂ ಅವರು ನಮ್ಮ ಪ್ರೀತಿಯ ಭಾಮಾಂಟಿ. ಮುತ್ತಿನಂತಹ ಅಕ್ಷರಗಳ ಆಂಟಿ, ಸಂಪೂರ್ಣ ವಾತ್ಸಲ್ಯಮಯಿ. ಆರನೇ, ಏಳನೇ ತರಗತಿಗೆ ಕನ್ನಡ, ಗಣಿತ, ಗೃಹವಿಜ್ಞಾನ ಕಲಿಸುತ್ತಿದ್ದ ಆಂಟಿಯನ್ನು ಶಾಲೆಯಲ್ಲಿ ಟೀಚರ್ ಎಂದು ಸಂಬೋಧಿಸುವುದು ನಮಗೆ ಬಹಳ ಕಷ್ಟವಾಗುತ್ತಿತ್ತು. ಹಾಗೆಯೇ ಶಾಲಾ ಹೆಡ್‌ಮಿಸ್ಟ್ರೆಸ್, ನಮ್ಮ ಪ್ರೀತಿಯ ರಾಧಾಂಟಿಯನ್ನು ಸಹ. ಗೈಡ್ಸ್ ಕ್ಯಾಂಪ್, ಸ್ಪೋರ್ಟ್ಸ್ ಮೀಟ್ ಎಂದು ನಮ್ಮಮ್ಮ ದೂರ ಪರವೂರಿಗೆ ಹೋದಾಗ ಭಾಮಾಂಟಿ ಬಂದು ನಮ್ಮೊಡನಿರುತ್ತಿದ್ದರು. ಹೊರೆಕೂದಲನ್ನು ಹೊತ್ತಿದ್ದ ನನ್ನ ತಲೆ ಕೂದಲನ್ನು ಎರಡು ಜಡೆಯಾಗಿ ಬಿಗಿದು ಕಟ್ಟಲು ಸಾಧ್ಯವಾಗುತ್ತಿದ್ದುದು, ಕೇವಲ ನಮ್ಮಮ್ಮ ಹಾಗೂ ಭಾಮಾಂಟಿಗೆ ಮಾತ್ರ. ಅಷ್ಟೂ ದಪ್ಪನಾದ ಉದ್ದ ಕೂದಲ ಹೊರೆ ನನಗೆ ಸಾಕು ಸಾಕೆನಿಸುತ್ತಿತ್ತು. ನಾನು ಹುಟ್ಟಿದಾಗ, ನೆರೆಯ ಅಂಬುಜಮ್ಮ ಅಂದರಂತೆ, “ತಲೆಗೆ ಎಷ್ಟು ಬೇಕಾದರೂ ಹೂ ಮುಡಿಸ ಬಹುದು; ಆದರೆ ಕಿವಿಗೆ ಮಾತ್ರ ಚಿನ್ನ ಇಡುವ ಹಾಗಿಲ್ಲ”, ಎಂದು. ಹೂ ಮುಡಿಯಲು ಚಪ್ಪಟೆ ಹಿಂಭಾಗದ ತಲೆ; ಭಾರ ಚಿನ್ನದೊಡವೆ ಧರಿಸಲಾಗದಂತೆ ತೆಳ್ಳನೆ, ಚಿಕ್ಕದಾದ ಕಿವಿಯ ಬಳ್ಳಿ! ಈ ತಲೆಗೂದಲಿಗೆ ನನ್ನ ಭಾಮಾಂಟಿ ಅದೆಷ್ಟು ರೆಂಜೆ, ಮಧುಮಾಲತಿ, ಸುರಗೆ ಹೂಮಾಲೆಗಳನ್ನು ಮುಡಿಸಿರಬಹುದೋ, ಲೆಕ್ಕವೇ ಇಲ್ಲ.

(ಕುಳಿತವರಲ್ಲಿ ಎಡದಿಂದ ಮೊದಲಿಗರು – ಹಿಮಾಲಯನ್ ವುಡ್ ಬಾಜ್ ಗ್ರೂಪ್ ನಲ್ಲಿ ಅಮ್ಮ ಎರಡನೇ ಸಾಲಿನಲ್ಲಿ ಬಲದಿಂದ ಎರಡನೆಯವರು.)

ಹೂಗಳು ಮತ್ತು ನನ್ನ ಜಡೆ , ಒಟ್ಟಿಗೇ ತರುತ್ತಿದೆ, ನನ್ನ ರಾಧಾಂಟಿಯ ನೆನಪು. ಬೆಸೆಂಟ್ ಶಾಲೆಯ ಹೆಡ್‌ಮಿಸ್ಟ್ರೆಸ್ ರಾಧಾ ಶೆಟ್ಟಿ, ಬಿಡಾರಂ ಕೃಷ್ಣಪ್ಪನವರ ಮಗ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಕೆ.ಎಲ್.ಎನ್ ರಾವ್ ಅವರನ್ನು ಮದುವೆಯಾಗಿ ರಾಧಾ ರಾವ್ ಆದರು. ಕೊಡಿಯಾಲ ಗುತ್ತು ಮನೆಯ ರಾಧಾಂಟಿ ಅತ್ಯಂತ ಚತುರ ಮತಿ. ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಉನ್ನತ ತರಬೇತಿಗಾಗಿ ಅಮೆರಿಕ ದೇಶಕ್ಕೆ ಹೋಗಿ ಬಂದವರು. ಮಾತಿನಲ್ಲಿ ‘ನಾನು’ ಎಂಬ ಪದದ ಪ್ರಯೋಗದಲ್ಲಿ ನನ್ನನ್ನು ತಿದ್ದಿದವರು. ಸ್ಕ್ವಾಡ್ ಲೀಡರ್‍ಸ್ ಯಾರ್‍ಯಾರು ಎನ್ನುವಾಗ ‘ನಾನು’ ಕೊನೆಯಲ್ಲಿರಬೇಕೆಂದೂ, ಕ್ರಿಕೆಟ್ ಆಡಿ ಶಾಲಾ ಕಿಟಿಕಿಯ ಗಾಜು ಒಡೆದವರಾರೆಂದು ಹೇಳುವಾಗ, `ನಾನು’ ಮೊದಲಲ್ಲಿರಬೇಕೆಂದೂ ಅಷ್ಟು ಸೊಗಸಾಗಿ ನನ್ನನ್ನು ತಿದ್ದಿದವರು. ಗುತ್ತಿನಮನೆಯಿಂದ ನಾವು ಶಾಲೆಯ ಮನೆಗೆ ಬಂದ ಬಳಿಕ, ಒಂದು ಸಂಜೆ, ಅಮ್ಮನನ್ನೊಪ್ಪಿಸಿ ನನ್ನನ್ನು ಜೊತೆಗೆ ತಮ್ಮ ಮನೆಗೆ ಕರೆದೂಯ್ದಿದ್ದರು. ಮರು ಬೆಳಿಗ್ಗೆ ನನ್ನ ಹೊರೆಗೂದಲನ್ನು ಹೇಗೋ ಕಟ್ಟಿ, ಮನೆ ತೋಟದ ಹೂಗಳ ರಾಶಿಯನ್ನೇ ನನ್ನ ತಲೆಗೆ ಮುಡಿಸಿ ಶಾಲೆಗೆ ಕರೆತಂದಾಗ ಉಳಿದ ಟೀಚರ್‍ಸ್ ನಕ್ಕು ಸುಸ್ತಾಗಿದ್ದರು. “ಇಟ್ ವಾಸ್ ಅ ರಿಯಲ್ ಸೈಟ್ !” ಎಂದು ಅಮ್ಮ ಅನ್ನುವುದನ್ನು ಕೇಳಿದ್ದೆ. ವಿವಾಹಪೂರ್ವ, ರಾಧಾಂಟಿಯ ಹದಿಮೂರು ಪುಟಗಳ ಪ್ರೇಮಪತ್ರದ ಮೇಘಸಂದೇಶವನ್ನೊಯ್ದು ಕೆ.ಎಲ್.ಎನ್. ರಾಯರ ಕೈಗಿತ್ತವರು ನಮ್ಮಮ್ಮನಂತೆ! ಅಮ್ಮನ ಆಫ್ಟರ್ ಸ್ಕೂಲ್ ಗೇಮ್ಸ್ ಹಾಗೂ ಗೈಡಿಂಗ್ ಕ್ಲಾಸ್‌ಗಳು ಮುಗಿದು ಅಮ್ಮ ಮನೆ ಸೇರುವಾಗ ನಿತ್ಯ ತಡ! ಹಾಗಾಗಿ ದಿನಂಪ್ರತಿ ಸಂಜೆ ಶಾಲೆ ಬಿಟ್ಟರೆ ಪಿ.ವಿ.ಎಸ್ ಬೇಕರಿಯ ದುಂಡನೆ ಬ್ರೆಡ್ ಒಂದೇ ನಮ್ಮ ತಿಂಡಿ. ಒಂದೂವರೆ ಬ್ರೆಡ್ ತಂದು , ಎಂಟು ಸಮ ತುಂಡುಗಳಾಗಿ ಕತ್ತರಿಸಿ, ನಾಲ್ವರಿಗೂ ಸಮ ಪಾಲು. ಅಮ್ಮ ಏನು ತಿನ್ನುತ್ತಿದ್ದರೋ, ಆ ಯೋಚನೆ ಆಗ ನಮಗೆಂದೂ ಬಂದಿರಲಿಲ್ಲ. ಬಹಳ ದೊಡ್ಡವಳಾದ ಮೇಲೇ, ಕಳೆದ ದಿನಗಳತ್ತ ದಿಟ್ಟಿಸಿದಾಗ, ಅಮ್ಮ ತಿಂದುದನ್ನಾಗಲೀ, ಉಂಡುದನ್ನಾಗಲೀ, ನಾವೆಂದೂ ಕಂಡೇ ಇರಲಿಲ್ಲವೆಂಬುದು ಪ್ರಜ್ಞೆಯನ್ನು ಹೊಕ್ಕಿದ್ದು! ಒಂದಿನ ಏನೋ ನಿಮಿತ್ತ ಬೇಕರಿ ಮುಚ್ಚಲ್ಪಟ್ಟಿದ್ದರಿಂದ, ಅಮ್ಮ ಹಿಂದಿರುಗಿದಾಗ, ನಾವು ನಾಲ್ವರೂ ತಿಂಡಿಗಾಗಿ ಅಮ್ಮನನ್ನು ಕಾಡ ತೊಡಗಿದ್ದೆವು. ಅದೇ ಆಗ ಮನೆ ಹೊಕ್ಕ ರಾಧಾಂಟಿ, ನಮ್ಮೆಲ್ಲರನ್ನೂ ಹೊರಡಿಸಿ ಕೊಂಡು, ಆಗ ಹೊಸದಾಗಿ ತೆರೆದಿದ್ದ ವುಡ್‌ಸೈಡ್ ಹೊಟೇಲ್‌ಗೆ ಕರೆದೊಯ್ದು ತಿನ್ನಿಸಿದ ಮಸಾಲೆದೋಸೆ ಹಾಗೂ ಗುಲಾಬ್ ಜಾಮೂನ್ ರುಚಿ ಇಂದಿಗೂ ಹಸಿರಾಗಿದೆ.

ಸಂಜೆ ಅಮ್ಮ ಹಿಂದಿರುಗುವ ಮುನ್ನ ಸಿಗಡಿ ಒಲೆಗಳಲ್ಲಿ ಮರದ ಹುಡಿ ತುಂಬಿಸುವ ಕೆಲಸ ನಮ್ಮ ಪಾಲಿಗಿತ್ತು. ಸಿಗಡಿಯ ಬಾಯಿಯಿಂದ ಒಳಕ್ಕೆ ಹಾಗೂ ಅದಕ್ಕೆ ತಾಗಿ ನಡುವಿನಿಂದ ಮೇಲಕ್ಕೆ ಹೀಗೆ ಎರಡು ಮರದ ಸೋಂಟೆಗಳನ್ನಿಟ್ಟು ಸುತ್ತಲೂ ಒತ್ತಿ ಒತ್ತಿ ಮರದ ಹುಡಿ ತುಂಬುವ ಕೆಲಸ. ಅಣ್ಣನಿಗೊಂದು ಕಲ್ಲಿದ್ದಲ ಸಿಗಡಿ ಸಿದ್ಧವಾಗಿಸುವ ಕೆಲಸ. ಸದಾ ತೀವ್ರ ಉಬ್ಬಸ ಬಾಧಿಸುತ್ತಿದ್ದ ನಮ್ಮ ತಂದೆಯವರಿಗೆ ಈ ಮರದ ಹುಡಿಯ ಸಿಗಡಿ ಒಲೆಯ ಹೊಗೆಯಿಂದ ತುಂಬ ಕೆಡುಕಾಗಿರ ಬಹುದೆಂದು ನಮ್ಮಮ್ಮನಿಗನಿಸಿದ್ದು ಬಹಳ ವರ್ಷಗಳ ನಂತರವೇ.

ಶಾಲಾ ಗೇಟ್‌ನೆದುರಿನ ರಸ್ತೆ ದಾಟಿದರೆ ಎತ್ತರದಲ್ಲಿ ಸಣ್ಣ ಶಾಲೆ. ಶಾಲೆಯ ಗಂಟೆ ಹೊಡೆದುದು ಕೇಳಿದ ಮೇಲೇ ಚೀಲ ಹಿಡಿದು ಓಟ. ಆ ಸಣ್ಣ ಶಾಲಾ ಹಾಲ್‌ನ ಮೇಲ್ಗಡೆ ವೃತ್ತಾಕಾರದ ಎತ್ತರದ ಬುರುಜು. ತೀರಿಕೊಂಡ ಟೀಚರೊಬ್ಬರು ಅಲ್ಲಿ ಪ್ರೇತವಾಗಿದ್ದಾರೆಂಬ ಮಕ್ಕಳ ಕಲ್ಪಕಥೆ, ನನ್ನನ್ನು ಸದಾ ಕುತೂಹಲಿಯಾಗಿಸಿ, ಅವಕಾಶ ಸಿಕ್ಕಾಗೆಲ್ಲ ಅಟೆಂಡರ್ ಐತಪ್ಪನ ಹಿಂದೆ, ಬುರುಜಿನ ಸುರುಳಿ ಮೆಟ್ಟಲುಗಳನ್ನೇರುವ ಯತ್ನ ನಡೆದೇ ಇತ್ತು. ಲೆಕ್ಕ ಕಲಿಸುವ ಆ ಟೀಚರ್ ಕೈಯಲ್ಲಿ ತೂತು ಇದೆಯೆಂದೂ, ಆ ತೂತಿನಿಂದ ಚಾಕ್ ಕೆಳಗೆ ಬೀಳಿಸಿ, ಮಕ್ಕಳು ಹೆಕ್ಕಿ ಕೊಡಲೆಂದು ಬಗ್ಗಿದರೆ, ಬೆನ್ನಿಗೊಂದು ಮಾರಣಾಂತಿಕ ಗುದ್ದು ಖಂಡಿತ, ಎಂದೂ ಕಥೆಯಿತ್ತು. ಹಾಲ್‌ಎದುರಿನ ಪುಟ್ಟ ಬಯಲಿನ ಅಂಚಿಗೆ ಹಾಸ್ಟೆಲ್ ಪದ್ಮವಿಹಾರ. ಶಾಲೆ ಬಿಟ್ಟ ಬಳಿಕ ಈ ಹಾಸ್ಟೆಲ್ ಗಂಟೆ ಹೊಡೆಯುವ ವರೆಗೆ ಅಲ್ಲಿ ನಮ್ಮ ವಿವಿಧ ಆಟಗಳು. ಗಂಟೆ ಹೊಡೆದು, ಮಕ್ಕಳೆಲ್ಲ ಹಾಸ್ಟೆಲ್ ಸೇರಿ ಕೊಂಡರೆ, ನಾವು ಇತ್ತ ಮನೆಗೆ. ಮನೆ ಎದುರು ಶಾಲಾ ಅಂಗಣದಲ್ಲಿ ಅಮ್ಮನ ಆಫ್ಟರ್ ಕ್ಲಾಸ್ ಗೇಮ್ಸ್, ಗೈಡಿಂಗ್ ಕ್ಲಾಸ್‌ಗಳು ನಡೆಯುತ್ತಿದ್ದುವು. ಮಕ್ಕಳನ್ನು ತಿದ್ದುವ, ಎಚ್ಚರಿಸುವ ಅಮ್ಮನ ಶಿಸ್ತು ಪಾಲನೆಯ ಬಿಗುವಾದ ದನಿ ಅಲ್ಲಿಂದ ಕೇಳಿ ಬರುತ್ತಿತ್ತು.

ಶಾಲಾ ಹಿತ್ತಿಲ ಮೂಲೆಯಲ್ಲಿ , ನಮ್ಮ ಮನೆಯಿಂದ ತುಸು ದೂರದಲ್ಲಿ ತೋಡಿನ ಅಂಚಿನಲ್ಲಿ ಶಾಲಾ ಮಕ್ಕಳಿಗಾಗಿ ಸಾಲಾಗಿ ಪಾಯಿಖಾನೆಗಳಿದ್ದುವು. ಹರಿಜನರ ತಲೆಯ ಮೇಲೆ ಮಲ ಹೊರಿಸುತ್ತಿದ್ದ ಅಂದಿನ ದಿನಗಳ ಹೇಯ ಪದ್ಧತಿಗೆ ಸಾಕ್ಷಿಯಾಗಿದ್ದ ಆ ವ್ಯವಸ್ಥೆಯ ಚಿತ್ರ ಇನ್ನೂ ನನ್ನ ಕಣ್ಣಲ್ಲಿದೆ. ಆ ದುರ್ಗಂಧ, ಗುಲ್ಲಿ ಹಾಗೂ ಅವಳ ಸಂಗಾತಿ ತೊಳೆದು ಹೋದ ಬಳಿಕ ಅಲ್ಲಿ ಉಳಿಯುತ್ತಿದ್ದ ಫಿನೈಲ್‌ನ ಗಾಢ ವಾಸನೆ , ತಲೆ ಮೇಲೆ ಕಬ್ಬಿಣದ ಬಾಲ್ದಿ, ತಗಡು, ಹಿಡಿಸೂಡಿಯ ಭಾರ ಹೊತ್ತು ಗುಲ್ಲಿ ನಡೆದು ಹೋಗುತ್ತಿದ್ದ ಆ ದೃಶ್ಯ – ಈಗಲೂ ಈ ಪಾಯಿಖಾನೆ ಆಗಾಗ ನನ್ನ ಕನಸಲ್ಲಿ ಪತ್ಯಕ್ಷವಾಗುವುದಿದೆ. ಅದರೊಳ ಹೊಕ್ಕು, ಎಲ್ಲೂ ಸ್ಥಳವಿರದೆ ದಿಕ್ಕೆಟ್ಟಂತಾಗುವ ಕನಸು ಅಡಿಗಡಿಗೆ ಕಾಡುವುದಿದೆ. ಈ ಸಾಲು ಪಾಯಿಖಾನೆಗಳ ಕೊನೆಗೆ ಪ್ರತ್ಯೇಕವಾಗಿ ಹೊರಗಿನಿಂದ ನಮ್ಮ ಮನೆಗಾಗಿ ಒಂದು ಸೆಪ್ಟಿಕ್ ಟ್ಯಾಂಕ್ ಪಾಯಿಖಾನೆಯ ವ್ಯವಸ್ಥೆ ಇತ್ತು. ಹೀಗಾಗಿ ಶಾಲಾ ಟೀಚರ್‍ಸ್, ಎಂದಾದರೂ ಶೌಚಕ್ಕೆ ಹೋಗುವುದಿದ್ದರೆ ಇದನ್ನೇ ಉಪಯೋಗಿಸುತ್ತಿದ್ದರು ಹಾಗೂ ನಮ್ಮ ಬಚ್ಚಲಲ್ಲಿ ಕಾಲ್ತೊಳೆದುಕೊಂಡು ಕ್ಲಾಸ್‌ಗೆ ಹಿಂದಿರುಗುತ್ತಿದ್ದರು.

ಒಂದು ಮಧ್ಯಾಹ್ನ ಹೀಗೆ ನಮ್ಮ ಸುಮಿತ್ರಾ ಬಾಯಿ ಟೀಚರ್ ನಮ್ಮಲ್ಲಿಗೆ ಬಂದುದಲ್ಲದಿದ್ದರೆ, ಅಂದೇ ನನ್ನೀ ಕಥೆಯ ಎರಡನೇ ಇತಿಶ್ರೀ ಆಗುತ್ತಿತ್ತೇನೋ. ನನಗಾಗ ಐದು, ನಮ್ಮಣ್ಣನಿಗೆ ಆರೂವರೆ ವರ್ಷ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ, ಪಲ್ಯವೇನೂ ಕಾಣದೆ, ಅಣ್ಣ, ” ಪಪ್ಪಡ ಕಾಯಿಸುವನಾ ಶ್ಯಾಮಲಾ? ” ಎಂದ. ನಾನು ಒಪ್ಪಿದೆ. ಅಣ್ಣ ಸೀಮೆ ಎಣ್ಣೆ ಸ್ಟೌ ಉರಿಸಿದ. ನಾನು ಕಾವಲಿ ಇಟ್ಟು ಎಣ್ಣೆ ಹೊಯ್ದೆ. ಅಣ್ಣ ಪಪ್ಪಡ ಹಿಡಿದು ಸಜ್ಜಾಗಿ ನಿಂತ. ಅಷ್ಟರಲ್ಲಿ ಸೀಮೆ ಎಣ್ಣೆ ವಾಸನೆಗೆ ಜಾಗೃತರಾಗಿ ಒಳ ಹೊಕ್ಕ ಟೀಚರ್, ಬಳಿಗೆ ಧಾವಿಸಿ, ನಮ್ಮನ್ನು ದೂರ ಸರಿಸಿ, ಸ್ಟೌ ನಂದಿಸಿ ನಮ್ಮನ್ನುಳಿಸಿದರು. ಐದು, ಆರರ ಆ ಎಳೆ ವಯದಲ್ಲಿ ತೆಂಗಿನೆಣ್ಣೆ, ಸೀಮೆ ಎಣ್ಣೆ ನಡುವಿನ ವ್ಯತ್ಯಾಸ, ಪರಿಚಯ ನಮಗೆಂತು? ಮಕ್ಕಳಿಗೆ ಏನಾದರೂ ಒಂದಿಷ್ಟು ಪಲ್ಯ ಮಾಡಿಟ್ಟೇ ಬರಬೇಕೆಂದು ಅಂದೇ ಅಮ್ಮನಿಗೆ ರಾಧಾಂಟಿಯ ಫರ್ಮಾನ್ ಹೊರಟಿತು.

ಪ್ರೈಮರಿಯ ಹೆಡ್‌ಮಿಸ್ಟ್ರೆಸ್, ನಮ್ಮ ಸೋದರತ್ತೆ ಯು.ಸುಂದರಿ ಟೀಚರ್, ಹೈಸ್ಕೂಲ್‌ನ ಕನ್ನಡ, ಗಣಿತ, ಗೃಹವಿಜ್ಞಾನ ಕಲಿಸುತ್ತಿದ್ದ ಆಂಟಿ ಭಾಮಾ ಟೀಚರ, ಸಾಯನ್ಸ್ ಟೀಚರ್ ಎ.ಸುಂದರಿ ಟೀಚರ್, ಸಂಸ್ಕೃತ ಪಂಡಿತ ಲೋಕಯ್ಯಶೆಟ್ಟರು, ಕನ್ನಡ ಪಂಡಿತ ಪಿ.ಕೆ.ನಾರಾಯಣರು, ಸಂಗೀತದ ಶ್ರೀನಿವಾಸ ಉಡುಪರು, ನನ್ನ ನೃತ್ಯಗುರು ರಾಜನ್ ಅಯ್ಯರ್ ಅವರು, ಚಿತ್ರಕಲೆಯ ಟೀಚರ್ ಗ್ರೀಟಾ ಸತ್ಯಾರ್ಥಿ ಹೀಗೆ ನಮ್ಮ ಅಂದಿನ ಆ ಭವ್ಯ ಗುರು ಪರಂಪರೆ! ಶಾಲೆಯ ವಸಂತೋತ್ಸವದ ತಯಾರಿಯಲ್ಲಿ ನೃತ್ಯ ನಾಟಕಗಳಿಗಾಗಿ ತಡರಾತ್ರಿಯವರೆಗೂ ಸಿದ್ಧ ಪಡಿಸುತ್ತಿದ್ದ ಕಿರೀಟಗಳ ಹೊಳಪು ಈಗಲೂ ಕಣ್ಣಲ್ಲಿದೆ. ಪಂಡಿತರ ಗೀತ ನಾಟಕಗಳಿಗೆ ಉಡುಪರ ಸಂಗೀತ; ನೃತ್ಯನಾಟಕಗಳಿಗೆ ರಾಜನ್ ಅಯ್ಯರ್ ಅವರ ನೃತ್ಯ ವೈಭವ! ಬುನಾದಿ ಶಿಕ್ಷಣದೊಂದಿಗೆ ಸಾಂಸ್ಕೃತಿಕ ವೈಭವ ಮೇಳೈಸಿದ ಸತ್ಪರಂಪರೆ !

ಬುನಾದಿ ಶಿಕ್ಷಣದ ಪ್ರೈಮರಿಯಲ್ಲಿ ನೂಲುವಿಕೆ ನಮಗೆ ಕಡ್ಡಾಯವಿತ್ತು. ಹತ್ತಿಯನ್ನು ಹಿಂಜಿ ಅರಳೆಯಾಗಿಸಿ, ಹಂಜು ಮಾಡಿ ತಕಲಿಯಿಂದ ನೂಲುವುದು, ನೂತದ್ದನ್ನು ರಾಟೆಯಲ್ಲಿ ಸುತ್ತುವುದು ತರಗತಿಯ ಪಾಠವಾಗಿತ್ತು. ನಮ್ಮ ತರಗತಿಯ ಹುಡುಗನೊಬ್ಬ ಒಂದಿನ, ನೆಲದಲ್ಲಿ ಬಿಟ್ಟಿದ್ದ ತನ್ನ ತಕಲಿಯ ಮೇಲೆ ತಾನೇ ತಪ್ಪಿ ಕಾಲಿರಿಸಿ, ತಕಲಿಯ ಚೂಪಾದ ಕೊಕ್ಕೆ ಅವನ ಪಾದದ ಮಣಿಗಂಟಿನಿಂದ ಒಳ ಹೊಕ್ಕು ಇನ್ನೊಂದೆಡೆಯಿಂದ ಹೊರ ಬಂದಿತ್ತು. ಶಾಲೆಯಲ್ಲಿ ಓಡಿ, ಆಡಿ ಬಿದ್ದು ಆಗುವ ವಿದ್ಯಾರ್ಥಿಗಳ ಗಾಯಗಳಿಗೆ ತಾನೇ ಪ್ರಥಮ ಚಿಕಿತ್ಸೆ ನೀಡುತ್ತಿದ್ದ ನಮ್ಮಮ್ಮ, ಈಗ ಏನೂ ಮಾಡಲಾಗದೆ ತಕ್ಷಣ ಅವನನ್ನು ವೆನ್‌ಲಾಕ್ ಹಾಸ್ಪಿಟಲ್‌ಗೆ ಕೊಂಡೊಯ್ದರು. ಕೊಕ್ಕೆಯಿದ್ದ ಕಾರಣ ತಕಲಿಯನ್ನು ಹಾಗೇ ಹೊರಗೆಳೆಯುವಂತಿರಲಿಲ್ಲ. ಬಂಧುವೂ, ಪರಿಚಿತರೂ ಆಗಿದ್ದ ಡ್ಯೂಟಿ ಡಾಕ್ಟರ್ ಏನಾದರೂ ಮಾಡುವರೆಂದು ಅಮ್ಮ ಕಾಯುತ್ತಿದ್ದರೆ, ಸಾಕಷ್ಟು ತಡವಾಗಿಯೇ ಬಂದ ಆತ, ಒರಟಾಗಿ ಆ ತಕಲಿಯನ್ನು ಹಾಗೇ ಹೋದಂತೆಯೇ ಹೊರಗೆಳೆದಾಗ ಅ ಹುಡುಗನಿಂದ ಹೊರಟ ಚೀತ್ಕಾರದ ಬಗ್ಗೆ, ಡಾಕ್ಟರರ ನಿಷ್ಕಾರುಣ್ಯದ ರೂಕ್ಷ ವ್ಯವಹಾರದ ಬಗ್ಗೆ ಹೇಳಿದ ಅಮ್ಮ ತುಂಬ ವ್ಯಥೆ, ಅಸಮಾಧಾನ ತೋರಿದ್ದರು.

ಮಳೆಗಾಲದ ದಿನಗಳಲ್ಲಿ ಶಾಲಾ ಬಯಲಿನಂಚಿನ ತೋಡು ಭೋರ್ಗರೆದು ಹರಿಯುತ್ತಿತ್ತು. ಶಾಲೆಯ ಪೂರ್ವಕ್ಕೆ ಮುಖ್ಯ ರಸ್ತೆಯೆದುರಿಗೆ ಎತ್ತರ ಮೈದಾನ ಪ್ರದೇಶದ ಅಂಚಿಗಿದ್ದ ತೂಬಿನಿಂದ ಧೋ ಧೋ ಎಂದು ಕೆಳಗಿಳಿವ ನೀರು, ರಸ್ತೆಯಡಿಯಿಂದ ಸಾಗಿ ನಮ್ಮ ತೋಡಿನಲ್ಲಿ ಧುಮುಕಿ ಭೋರ್ಗರೆದು ಸಾಗುತ್ತಿತ್ತು. ತೋಡಿನಂಚಿನುದ್ದಕ್ಕೂ ಹಬ್ಬಿದ ಮಧುಮಾಲತಿ ಬಳ್ಳಿಯ ಜೊತೆಗೆ ಬಳ್ಳಿಯಾಗಿ ನುಲಿಯುತ್ತಾ ಮಾರುದ್ದದ ಕೇರೆ ಹಾವುಗಳು ಕಾಣಿಸಿ ಕೊಳ್ಳುತ್ತಿದ್ದುವು. ಒಂದು ದಿನ ತೋಡಿನ ಮೊರೆತ ಭೋರ್ಗರೆಯುತ್ತಿರುವಾಗ ಪಾಯಿಖಾನೆ ಹೊಕ್ಕ ನಾನು, ಬಾಲ್ದಿಯ ನೀರಲ್ಲಿ ಮೇಲೆ ಮಾಡಿನ ಪಕ್ಕಾಸಿನಲ್ಲಿ ಸಿಂಬೆ ಸುತ್ತಿ ಕುಳಿತ ಹಾವಿನ ಪ್ರತಿಬಿಂಬ ಕಂಡು ಬೆಚ್ಚಿ ಹೊರಗೋಡಿ ಬಂದಿದ್ದೆ. ಅಪರೂಪಕ್ಕೆ ವಿಷದ ಹಾವುಗಳೂ ಕಾಣಿಸುತ್ತಿದ್ದುವು. ಒಂದಿನ, ನಾಲ್ಕು ವರ್ಷದ ಪುಟ್ಟ ತಮ್ಮ ಮುರಲಿ, ಹಿತ್ತಿಲ ಮಾವಿನ ಮರದಡಿಯಲ್ಲಿದ್ದ ದೊಡ್ಡ ಕಲ್ಲೊಂದನ್ನು ಎತ್ತಲು ಹೋಗಿ, ಅದರಡಿಯಲ್ಲಿದ್ದ ವಿಷದ ಕನ್ನಡಿ ಹಾವಿನ ಮೇಲೇ ಆ ಕಲ್ಲನ್ನು ಹಾಕಿ, ತುಂಡಾಗಿ ನುಲಿಯುತ್ತಿದ್ದ ಆ ಹಾವಿನ ಬಾಲದ ತುಂಡನ್ನು ಹಿಡಿದೆತ್ತಿದಾಗ, ಬಳಿಯೇ ಇದ್ದ ಸಾಯನ್ಸ್ ಅಟೆಂಡರ್ ಐತಪ್ಪ, ಓಡಿ ಬಂದು, ಮಗುವಿನ ಕೈಯಿಂದ ಆ ವಿಷ ಜಂತುವನ್ನು ಕಿತ್ತು ದೂರ ಎಸೆದಿದ್ದ. ಬಲು ತುಂಟನಾಗಿದ್ದ ತಮ್ಮ ಮುರಲಿ, ಶೈಶವದಲ್ಲಿ ಚೇಳುಗಳನ್ನೂ ಹಿಡಿಯಲೆತ್ನಿಸುತ್ತಿದ್ದ. ಮಕ್ಕಳಾದ ನಮ್ಮ ಕಣ್ಣುಮುಚ್ಚಾಲೆಯಾಟಕ್ಕೆ ಹೆಡ್‌ಮಿಸ್ತ್ರೆಸ್‌ನ ಆಫೀಸ್ ರೂಮ್ ಕೂಡಾ ಅಡಗುತಾಣವಾಗಿತ್ತು. ಅಲ್ಲಿ ಅಡಗಿರುವಾಗ ಪಕ್ಕದಲ್ಲಿ ಕ್ಯಾನ್ವಾಸ್‌ ಚೀಲದಲ್ಲಿ ತೂಗಿರುವ ಅಸ್ಥಿ ಪಂಜರ ಗಾಳಿಗೆ ಕಿರಿಗುಡುವ ಸದ್ದು ಹಾಗೂ ಆ ತೂಗಾಟಕ್ಕೆ ಭಯವೂ ಆಗುತ್ತಿತ್ತು. ಬಾಲ್ಯದ ಆ ದಿನಗಳಲ್ಲಿ ‘ಪುರುಷೋತ್ತಮನ ಸಾಹಸ’ ಮಾಲೆಯ ‘ಭಯಂಕರ ಬೈರಾಗಿ’, ‘ಅದೃಶ್ಯ ಮನುಷ್ಯ’ ಇಂತಹವರೆಲ್ಲ ನನ್ನ ರಾತ್ರಿಯ ಸ್ವಪ್ನಲೋಕದಲ್ಲಿ ಉತ್ಪಾತವನ್ನೇ ಎಬ್ಬಿಸುತ್ತಿದ್ದರು.

ಕೋರ್ಟ್‌ಗುಡ್ಡೆ ಏರಿ, ಅಲೋಶಿಯಸ್ ಕಾಲೇಜ್ ಆವರಣ, ಬಾವುಟಗುಡ್ಡೆಯಲ್ಲೆಲ್ಲ ಸುತ್ತಾಡಿ, ಲೈಬ್ರೆರಿ ಹೊಕ್ಕು ಹೊಸ ಪುಸ್ತಕ ಪಡೆದು, ಪಡುಗಡಲ ಸೂರ್ಯಾಸ್ತ ವೀಕ್ಷಿಸಿ ಮತ್ತೆ ಓಡುತ್ತಾ, ಕಾಲೇಜಿನ ಸಾಯನ್ಸ್ ಸೆಕ್ಷನ್‌ನ ತಿಮಿಂಗಿಲದ ಅಸ್ಥಿ ಪಂಜರವನ್ನು ತಿರು ತಿರುಗಿ ನೋಡುತ್ತಾ, ಗುಡ್ಡ ಇಳಿದು ಮನೆಗೆ ಮರಳುವುದು. ಕೈಕಾಲು ತೊಳೆದು, ಅಮ್ಮ ದೀಪವಿಟ್ಟೊಡನೆ ದೇವರ ಪಠದೆದುರು ಕುಳಿತು, ಕೈ ಮುಗಿದು ” ರಾಧಾಕೃಷ್ಣ ನೀ ದಯ ಮಾಡೋ….” ಎಂದು ಆರಂಭಿಸುವಾಗ, ಪಕ್ಕದ ಹಿತ್ತಿಲ ಪೊರ್ಬುವಿನ ಮನೆಯಿಂದ ” ಅಮ್ಚೆ ಬಪ್ಪಾ ……” ಎಂದು ಏರು ದನಿಯಲ್ಲಿ ಪೊರ್ಬು ಹಾಗೂ ಆತನ ಕೆಲಸದಾಳು ಮೊರೆಯಿಡುವ ಸಂಧ್ಯಾ ಪ್ರಾರ್ಥನೆ ಕೇಳಿ ಬರುತ್ತಿತ್ತು. ಏಕತಾನದ ಆ ದನಿಯನ್ನು ಮೀರುವ ಶಕ್ತಿ ನಮ್ಮ ಎಳೆಕಂಠಗಳಿಗಿರಲಿಲ್ಲ. ಅಡ್ಡ ಬಿದ್ದು ಎದ್ದೊಡನೆ ನಮ್ಮ ಬಾಯಿಂದಲೂ “ಅಮ್ಚೆ ಬಪ್ಪಾ…….” ಹೊರಡುತ್ತಿತ್ತು. ಕೈ ತಾನಾಗಿಯೇ ಎದೆಯ ಮೇಲೆ ಶಿಲುಬೆ ನಮನ ಮೂಡಿಸುತ್ತಿತ್ತು.

ಈಗ ವಿಶಾಲವಾದ ಮಾರಿಷ್ಕಾ ಕಾಂಪ್ಲೆಕ್ಸ್ ಎದ್ದಿರುವ ಪ್ರದೇಶದಲ್ಲಿದ್ದ ನಮ್ಮ ಡಾ. ಎಂ.ಎಸ್.ಪ್ರಭು ಅವರ ಡಿಸ್ಪೆನ್ಸರಿಗೆ ಭೇಟಿ ಬಾಲ್ಯದ ಆ ದಿನಗಳಲ್ಲಿ ಅನಿವಾರ್ಯವಾಗಿತ್ತು. ಜ್ವರ, ಸಾಂಕ್ರಾಮಿಕ ರೋಗಗಳು, ಆಡಿ ಓಡಿ ಬಿದ್ದು ಆದ ಗಾಯಗಳು, ನಮ್ಮನ್ನು ಅಲ್ಲಿಗೊಯ್ಯುತ್ತಿದ್ದುವು. ಡಾಕ್ಟರ್ ಪರೀಕ್ಷೆ ಮಾಡಿದ ಬಳಿಕ ಕಂಪೌಂಡರ್ ನೀಡುವ ಮಾತ್ರೆ, ಮಿಕ್ಸ್ಚರ್‌ಗಳೊಡನೆ ಹಿಂದಿರುಗುವುದು. ಅಲ್ಲೇ ಬಳಿಯಲ್ಲಿದ್ದ ನವಭಾರತ ಪತ್ರಿಕಾ ಮುದ್ರಣಾಲಯದೊಳಗೂ ನಾವು ಆಗೀಗ ನುಸುಳುವುದಿತ್ತು. ಚಂದಮಾಮದಂತೆಯೇ ನವಭಾರತದ ಶಿಂಗಳೀಕ ನನಗೆ ಅಚ್ಚುಮೆಚ್ಚಾಗಿದ್ದ. ಅಲ್ಲೇ ಪಕ್ಕದಲ್ಲಿ ನಮ್ಮ ನೃತ್ಯಾಭ್ಯಾಸ ನಡೆಯುತ್ತಿದ್ದ ಕಲಾನಿಕೇತನವಿತ್ತು. ಕೆಲವೊಮ್ಮೆ ನಿದ್ರೆಯಿಂದೇಳುವಾಗ ಕೊಕ್ಕೆಗಟ್ಟುತ್ತಿದ್ದ ನನ್ನ ಎಡಗಾಲು ಮುಂದೆ ಇನ್ನೂ ಹೆಚ್ಚಿನ ತೊಂದರೆಗೊಳಗಾಗುವವರೆಗೆ ನನ್ನ ಆಟೋಟ, ಸುತ್ತಾಟ, ನೃತ್ಯಾಭ್ಯಾಸ ಅಬಾಧಿತವಾಗಿತ್ತು. ನೃತ್ಯದಲ್ಲಿ ನನ್ನ ಆಸ್ಥೆಯನ್ನು ಗುರುತಿಸಿ ತಲೆಬಾಡಿಯ ನನ್ನ ಕಿರಿಯಜ್ಜ – ಮನೋಜಜ್ಜ, ಮುಂಬೈಯಿಂದ ತಂದಿತ್ತ ಗೆಜ್ಜೆ ಈಗಲೂ ನಮ್ಮ ಅಟ್ಟದಲ್ಲಿ ಅಮ್ಮನ ಪೆಟ್ಟಿಗೆಯಲ್ಲಿ ತಣ್ಣನೆ ಕುಳಿತಿದೆ. ಇಫ್ ವಿಶ್‌ಸ್ ವೇರ್ ಹಾರ್‍ಸ್‌ಸ್…….. ಮನೀಷೆಯೆಂಬ ಕುದುರೆಯನೇರಿ …….

(ಮುಂದುವರಿಯಲಿದೆ)