(ಪರ್ವತಾರೋಹಣ ಸಪ್ತಾಹದ ಮೂರನೇ ಭಾಗ)

ಪರ್ವತಾರೋಹಣ ಸಪ್ತಾಹದ ಮೊದಲ ಕಾರ್ಯಕ್ರಮ – ಕಳೆದ ವಾರ ಹೇಳಿದಂತೆ ಮಂಗಳೂರಿನದು, ಹಗಲು ಪೂರ್ತಿ ನಡೆದಿತ್ತು. ಉಳಿದ ಐದು ದಿನ – ಅಂದರೆ ಕ್ರಮವಾಗಿ ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಮೂಲ್ಕಿಯ ವಿಜಯಾ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜು ಮತ್ತು ಮೂಡಬಿದ್ರೆಯ ಮಹಾವೀರ ಕಾಲೇಜುಗಳಲ್ಲಿ, ಅಪರಾಹ್ನದಲ್ಲಷ್ಟೇ ನಡೆಯುತ್ತಿತ್ತು. ಕಲಾಪಗಳನ್ನು ಮುಗಿಸಿ, ನಾವು ಮಂಗಳೂರಿಗೆ ಮರಳುತ್ತಿದ್ದೆವು. ಕೊನೆಯದು – ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನದು ಮಾತ್ರ ವಿಶೇಷಪಟ್ಟದ್ದು. ಅದೂ ಲೆಕ್ಕಕ್ಕೆ ಅಪರಾಹ್ನವೇ ಶುರುವಾದರೂ ಮರುದಿನ ಸಂಜೆಯವರೆಗೂ ವ್ಯಾಪಿಸುವುದಿತ್ತು.

ಸಪ್ತಾಹದ ಎರಡನೇ ದಿನದ ಕಲಾಪ ಉಡುಪಿಯ ಎಂಜಿಎಂನದ್ದು. ಅವಿಭಜಿತ ದಕ ಜಿಲ್ಲೆಯ ಸಾಂಸ್ಕೃತಿಕ ವಕ್ತಾರ, ಮಹಾಸಂಘಟಕ, ಸಾಹಿತಿ, ನನ್ನ ಲೆಕ್ಕಕ್ಕೆ ತಂದೆಯ ಆತ್ಮೀಯ ಗೆಳೆಯ, ಸಹಜವಾಗಿ ನನ್ನ ಅಂಗಡಿಯ ಮಹಾಪೋಷಕ ಪ್ರೊ| ಕುಶಿ ಹರಿದಾಸ ಭಟ್ಟರು ಅಂದು ಎಂ.ಜಿಎಂ ಕಾಲೇಜಿನ ಪ್ರಾಂಶುಪಾಲ.

ಅವರು ಶಿವರಾಮ ಕಾರಂತರ ಷಷ್ಟ್ಯಬ್ದಿ ಕಲಾಪವನ್ನು ನಭೂತೋ (ನಭವಿಷ್ಯತ್ ಕೂಡಾ) ಎಂಬಂತೆ ನಡೆಸಿಕೊಟ್ಟ ಕಾಲದಿಂದ (೧೯೬೯) ಇಂದಿನವರೆಗೂ ಕುಶಿಯವರ ನೆರಳಿನ, ಮತ್ತೆ ಸ್ಮೃತಿಯ ಎಂಜಿಎಂ ಕಾಲೇಜು ವಠಾರದಲ್ಲಿ ಯಾವುದೇ ಕಾರ್ಯಭಾಗಿಯಾಗುವುದೆಂದರೆ ನನಗೆ ಸ್ವಂತ ಮನೆಯೊಳಗಾಡಿದಷ್ಟೇ ಉಲ್ಲಾಸದಾಯಕ. ಆ ಕಾಲದಲ್ಲಿ ಎಂಜಿಎಂ ವಠಾರದಲ್ಲಿ ಅಥವಾ ಸನಿಹದಲ್ಲೂ ಕನಿಷ್ಠ ಎರಡು ಮಾಳಿಗೆಯ ಕಟ್ಟಡ ಅಥವಾ ದರೆಯಿಲ್ಲದ್ದು ನಮ್ಮ ಶಿಲಾವರೋಹಣ ಅಥವಾ ನದಿದಾಟುವ ಪ್ರದರ್ಶನಕ್ಕೆ ರೋಮಾಂಚನದ ಸ್ಪರ್ಷ ಕೊಡುವಲ್ಲಿ ಕೊರತೆಯಾಗಿ ಕಾಡಿತು. ಆದರೇನು, ಸ್ವತಃ ಕುಶಿಯವರೇ ನಿಂತು ನೋಡಿ, ಸಭೆಯಲ್ಲಿ ಮಾತಾಡಿ, ಧಾರಾಳ ಪ್ರೋತ್ಸಾಹ ನೀಡಿದ್ದರು. ಅಲ್ಲಿ ನಾನು ನಮ್ಮ ಬಳಗದ ಅದುವರೆಗಿನ ಜಮಾಲಾಬಾದ್ ಏರೋಣದ ಸಾಹಸ ಕಥನವನ್ನೇ ಕೊಟ್ಟೆ.

ಮೂರನೇ ದಿನದ ಕಲಾಪದ ಪಾಲುದಾರ ಮೂಲ್ಕಿಯ ವಿಜಯಾ ಕಾಲೇಜು. ಇಲ್ಲಿನ ದೈಹಿಕ ಹಾಗೂ ಕ್ರೀಡಾ ಕಲಾಪಗಳ ಅಧ್ಯಾಪಕ ಬಾಳಿಗರು ಹಿಂದೆ ಮಡಿಕೇರಿಯಲ್ಲಿ ನನ್ನ ತಂದೆಯ ಸಹೋದ್ಯೋಗಿ ಮಿತ್ರರೇ ಆಗಿದ್ದವರು. ಅವರ ಪಾತ್ರವೇನಿತ್ತೆಂದು ಇಂದು ನನಗೆ ಮರೆತುಹೋಗಿದೆ. ಆದರೆ ಮೊದಲ ಪತ್ರವ್ಯವಹಾರದಿಂದ ತೊಡಗಿ, ಕೊನೆಯ ದಿನದ `ನೀವೇ ಅನುಭವಿಸಿ’ ಕಲಾಪದವರೆಗೂ ಅತ್ಯುತ್ಸಾಹದ ಭಾಗೀದಾರಿಕೆಯನ್ನು ಕೊಟ್ಟವರು ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬೆಳೆಸುವಲ್ಲಿ ನನ್ನ ತಂದೆಗೆ ತೀರಾ ಆತ್ಮೀಯರಾದ ಖ್ಯಾತಿವಂತ ಲೇಖಕ ಅಡ್ಯನಡ್ಕ ಕೃಷ್ಣಭಟ್ಟರು. ಕಾಲೇಜಿನ ಒಳಾಂಗಣದ ಗೋಡೆಯ ಎತ್ತರ ಶಿಲಾವರೋಹಣಕ್ಕೂ ಎರಡನೇ ಮಾಳಿಗೆಯ ಎದುರುಬದುರು ಬಾಲ್ಕನಿಗಳ ನಡುವೆ ನದಿದಾಟುವ ಕಲಾಪಕ್ಕೂ ಸಿಕ್ಕ ಅವಕಾಶ ನಮ್ಮ ಪ್ರದರ್ಶನಗಳಿಗೆ ಹೆಚ್ಚಿನ ಆಕರ್ಷಣೆಯನ್ನು ಕೊಟ್ಟಿತು.

ನಾವು ಮುಂದಾಗಿಯೇ ಪತ್ರಿಕಾ ಪ್ರಕಟಣೆ ಮತ್ತು ಆಮಂತ್ರಣಗಳಲ್ಲಿ ಸಾರ್ವಜನಿಕರನ್ನು ಸಪ್ತಾಹದ ಕೊನೆಯ ಕಲಾಪ – `ನೀವೇ ಅನುಭವಿಸಿ’ಗೆ ಕರೆದಿದ್ದೆವು. ಅದನ್ನು ನಾವು ಹೋದ ಏಳೂ ಕಾಲೇಜು ಕಲಾಪಗಳಲ್ಲಿ ಮತ್ತೊಮ್ಮೆ ಘೋಷಿಸಿ, ಭಾಗಿಯಾಗುವ ಉತ್ಸಾಹಿಗಳ ಹೆಸರನ್ನು ದಾಖಲಿಸಿಕೊಳ್ಳುತ್ತಿದ್ದೆವು. ಮೂಲ್ಕಿಯಲ್ಲಿ ಹೀಗೆ ಬರಲಿದ್ದ ಮಕ್ಕಳ ನೇತೃತ್ವವನ್ನೂ ಸ್ವತಃ ಅಡ್ಯನಡ್ಕ ಕೃಷ್ಣಭಟ್ಟರೇ ವಹಿಸಿಕೊಂಡದ್ದು ಅವಿಸ್ಮರಣೀಯ. ಅಲ್ಲಿನ ಸಭಾ ಕಲಾಪದಲ್ಲಿ ನಾನು ಹಿರಿಮರುದುಪ್ಪೆ ಕೇಳಿದ್ದೀರಾ? (ಇಲ್ಲೇ ಚಿಟಿಕೆ ಹೊಡೆದರೆ ಈಗಲೂ ನೀವದನ್ನು ಹೆಚ್ಚಿನ ವಿವರಗಳಲ್ಲಿ ಓದಿಕೊಳ್ಳಬಹುದು) ಎಂದೇ ಭಾಷಣಿಸಿದ್ದೆ. ಸಪ್ತಾಹದ ಒಟ್ಟಾರೆ ಪರಿಣಾಮವನ್ನು ಕಿಂಚಿತ್ ಪ್ರತಿಫಲಿಸುವಂತೆ ಮುಖ್ಯವಾಗಿ ಬಂದ ಲೇಖನಗಳೂ ಮೂಲ್ಕಿಯವೇ ಎನ್ನುವುದನ್ನು ನಾನಿಲ್ಲಿ ಸಂತೋಷದಿಂದ ದಾಖಲಿಸುತ್ತಿದ್ದೇನೆ. ವಿಜಯಾ ಕಾಲೇಜಿನ ೧೯೮೧ರ ವಾರ್ಷಿಕ ಸಂಚಿಕೆಯಲ್ಲಿ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಶಶಿಕಲಾ ಜಾಯ್ಸರಿಗೆ ಏರುಕಲ್ಲು ಆರೋಹಣ (ಸದಾ) ಮರುಕೊಳಿಸುವ ನೆನಪಾಗಿ ಹರಿದು ಬಂದರೆ, ಅದೇ ತರಗತಿಯ ರಾಮಚಂದ್ರ ಆಚಾರ್ಯರಿಗೆ ಭಾಗಿಗಳ ಹೆಮ್ಮೆಯಾಗಿ ಉಳಿದಿದೆ. ಎಲ್ಲವನ್ನು ಹಿಂದೆ ನಿಂತು ನಡೆಸಿಕೊಟ್ಟ ಅಡ್ಯನಡ್ಕ ಕೃಷ್ಣ ಭಟ್ಟರು ಅದೇ ವಿನಯದಲ್ಲಿ ಪುಟ್ಟ ಸಂಪಾದಕೀಯ ಟಿಪ್ಪಣಿಯಂತೆ ನೋಡದ ಕಾಡನ್ನು ತೆರೆದಿಟ್ಟಿದ್ದಾರೆ. ಇಂದು ಕೃಷ್ಣಭಟ್ಟರು ಸಪತ್ನೀಕರಾಗಿಯೇ ವೃದ್ಧಾಪ್ಯವನ್ನು ಬೆಳಗಾವಿಯಲ್ಲಿ ತಮ್ಮ ಮಗಳ ಸಂಸಾರದೊಂದಿಗೆ ಕಳೆಯುತ್ತಿದ್ದಾರೆ. ಶಶಿಕಲಾ ಜಾಯ್ಸ ಹಾಗೂ ರಾಮಚಂದ್ರ ಆಚಾರ್ಯರು ಜೀವನ ಶಾಲೆಯ ಯಾವ ಮೂಲೆಯಲ್ಲಿ ಯಾವ ಸ್ಥಿತಿಯಲ್ಲಿದ್ದಾರೋ ನಾಕಾಣೆ. ಓದುಗರಲ್ಲಿ ಪರಿಚಯಸ್ಥರಿದ್ದರೆ, ದಯವಿಟ್ಟು ಅವರಿಗೆ ಈ ಲೇಖನದ ಸೇತು ಕೊಡಬೇಕಾಗಿ ವಿನಂತಿ. ಸದ್ಯ ಆ ಮೂವರನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತ ಅವರ ಲೇಖನಗಳ ಯಥಾಪ್ರತಿಯನ್ನು ಕೊಡುತ್ತಿದ್ದೇನೆ.

ಏರುಕಲ್ಲು ಆರೋಹಣ:

೧ ಮರುಕೊಳಿಸುವ ನೆನಪು – ಶಶಿಕಲಾ ಜಾಯ್ಸ: ಬಾಲ್ಯದಲ್ಲಿ ಗುಡ್ಡಬೆಟ್ಟಗಳನ್ನು ನೋಡಿದಾಗ ಮನಸ್ಸು ಹುಚ್ಚೆದ್ದು ಕುಣಿದದ್ದುಂಟು. ಚಿಕ್ಕಪುಟ್ಟ ಗುಡ್ಡೆಗಳನ್ನು ಹತ್ತಲು ಪ್ರಯತ್ನಿಸಿದ್ದೂ ಉಂಟು. ಆದರೆ ೯-೧೨-೧೯೮೦ನೇ ಮಂಗಳವಾರ ಕಲ್ಪನೆಯ ಮರಿ ಮೊಟ್ಟೆಯಿಂದ ಹೊರ ಬಂದು, ರೆಕ್ಕೆಪುಕ್ಕ ಬಿಚ್ಚಿ ನರ್ತಿಸಿತು. ನಮ್ಮ ಕಾಲೇಜಿನಲ್ಲಿ ಅಂದು ಆರೋಹಣ ತಂಡದವರ ಕೃತಕ ಪರ್ವತಾರೋಹಣ ಪ್ರದರ್ಶನವಿತ್ತು. ಶ್ರೀಯುತರಾದ ಅಶೋಕವರ್ಧನ, (ಕಿರಣ್) ಕುಲಕರ್ಣಿ, (ಅಡ್ಡೂರು) ಸೂರ್ಯ(ನಾರಾಯಣ ರಾವ್), (ಎಸ್.ಡಿ) ಕೀರ್ತಿ, (ಬಿಕೆ) ಶರತ್, (ಸುಬ್ರಾಯ) ಕಾರಂತ, ಯಜ್ಞ ಹಾಗೂ ಪ್ರಾಧ್ಯಾಪಕಿ ಸುಧಾರವರ (ಬಹುಶಃ ಸಂತ ಏಗ್ನೆಸ್ ಕಾಲೇಜಿನಲ್ಲಿ ಜಯಂತರ ಸಹೋದ್ಯೋಗಿ) ತಂತ್ರ ಪ್ರದರ್ಶನ ನೋಡಿ ಮೈ ನವಿರೆದ್ದಿತು. ಮನದ ತುಡಿತ ತಡೆಯಲಾರದೆ ಅಶೋಕವರ್ಧನರಲ್ಲಿ ಹೆಸರು ನೋಂದಾಯಿಸಿಯೂ ಆಯಿತು. ಆದರೆ ಪರ್ವತ ಏರುವ ಮೊದಲು ೧೪ ಮೈಲು ನಡೆಯಬೇಕೆಂದಾಗ ಮಾತ್ರ ಉತ್ಸಾಹದ ಬೆಲೂನಿಗೆ ಎಲ್ಲೋ ತೂತು ಬಿದ್ದಂತಾಯಿತು. ಆದರೂ ಮನೋಸ್ಥೈರ್ಯದ ಬಲದಿಂದ ನಿರ್ಧರಿಸಿಯೂ ಆಯಿತು. ಮುಂದಿನ ಪ್ರಶ್ನೆ ಮನೆಯವರ ಅನುಮತಿ ಪಡೆಯುವುದು. ಕೊನೆಗೆ ಅತ್ತೂ ಕರೆದೂ ಅನುಮತಿ ಪಡೆದಾಗ ಏರುಕಲ್ಲಿಗೆ ಉಳಿದುದು ಒಂದೇ ಗೇಣು. ೧೩-೧೨-೧೯೮೦ರಂದು ಶನಿವಾರ ಮಧ್ಯಾಹ್ನ ಮೂಲ್ಕಿ ಬಸ್ ಸ್ಟೇಂಡಿನಿಂದ ನಮ್ಮ ಪ್ರಯಾಣ ಆರಂಭವಾಯಿತು. ಮಂಗಳೂರಿಗಾಗಿ ನಾವು ಉಜಿರೆ ಮಂಜುನಾಥೇಶ್ವರ ಕಾಲೇಜಿಗೆ ತಲುಪಿದಾಗ ಕತ್ತಲು ಕವಿಯತೊಡಗಿತ್ತು. ಅಂತೆಯೇ ಬಸ್ ಪ್ರಯಾಣಕ್ಕೇ ಸುಸ್ತಾದ ನಮ್ಮನ್ನು “ಇನ್ನು ೧೪ ಮೈಲು ನಡೆದು ಗುಡ್ಡೆ ಹತ್ತೋದು ಹೇಗಪ್ಪಾ” ಎಂಬ ಪ್ರಶ್ನೆ ಕಾಡುತ್ತಿತ್ತು.

ಮಂಜುನಾಥೇಶ್ವರ ಕಾಲೇಜಿನಲ್ಲಿ ಸಮಾರೋಪ ಭಾಷಣ ನಡೆಯುತ್ತಿತ್ತು. ತಂಡದವರೊಡನೆ ಕುಶಲೋಪರಿಯಾದ ಬಳಿಕ ಕಿಂಚಿತ್ ವಿಶ್ರಾಂತಿ ಪಡೆಯಲು ಅಲ್ಲಿಯ ಗೆಳತಿಯರು ವಿದ್ಯಾರ್ಥಿನಿ ನಿಲಯಕ್ಕೆ ಕರೆದೊಯ್ದರು. ಸ್ವಲ್ಪ ಹೊತ್ತಿನ ನಂತರ ಅಲ್ಲಿಂದ ಪುನಃ ಕಾಲೇಜಿಗೆ ಬಂದೆವು. ನಮ್ಮ ಪರ್ವತಾರೋಹಣ ಸಾಹಸಕ್ಕೆ ಭಾಗಿಗಳಾಗಲು ಒಟ್ಟು ೯೪ ಮಂದಿ ನೆರೆದಿದ್ದರು. ಅವರಲ್ಲಿ ೧೪ ಮಂದಿ ಮಹಿಳೆಯರು, ಅಂದರೆ ಹತ್ತು ಮಂದಿ ವಿದ್ಯಾರ್ಥಿನಿ ಹಾಗೂ ನಾಲ್ಕು ಮಂದಿ ಪ್ರಾಧ್ಯಾಪಿಕೆಯರು. ಅಶೋಕವರ್ಧನರು ಕಾರ್ಯಕ್ರಮವನ್ನು ವಿವರಿಸಿ ಸೂಚನೆಗಳನ್ನು ನೀಡಿದರು. ನಮ್ಮ ದಂಡಯಾತ್ರೆ ಆರಂಭವಾದಾಗ ರಾತ್ರಿ ೯.೧೫.

ಮಾಜಿ ಸೈನಿಕ (ವಾಸ್ತವದಲ್ಲಿ ಹೊಸಪೇಟೆ ಮೂಲದ, ಜುವಾರಿ ಕೃಷ್ಯೋಪಯೋಗೀ ಉತ್ಪನ್ನಗಳ ಮಂಗಳೂರು ಪ್ರತಿನಿಧಿಯಾಗಿದ್ದ ಕಿರಣ್ ಕುಲಕರ್ಣಿ ಮಾಜೀ ಎನ್ಸಿಸಿ ಪಟುವಷ್ಟೇ ಇದ್ದಿರಬೇಕು ಎಂದು ನನ್ನ ನೆನಪು – ಅವ) ಕುಲಕರ್ಣಿಯವರ ನೇತೃತ್ವದಲ್ಲಿ ನಮ್ಮ ಸೇನೆ ಮುಂದೆ ಸಾಗುತ್ತಿತ್ತು. [ಎಡ ಚಿತ್ರ – ನೆಲ್ಲಿತೀರ್ಥಗುಹೆಯೊಳಗಿನದು: ಎದುರು ಇರುವವರು ಕುಲಕರ್ಣಿ. ಲಿಂಗದ ಪಕ್ಕದಲ್ಲಿರುವಾ ಸೂರ್ಯ, ಹಿಂದೆ ಕುಳಿತವ ಪ್ರಕಾಶ್] ಪ್ರಾರಂಭದಲ್ಲಿ ಉತ್ಸಾಹದಿಂದ ಹಾಡುತ್ತಾ ನಾವು ಮುಂದೆ ಸಾಗಿದೆವು. ಲಾವಣಿ, ವೀರಗೀತೆ, ದೇಶಭಕ್ತಿ ಗೀತೆ, ಸಿನಿಮಾ ಹಾಡು ಇನ್ನೇನೇನೋ ಕಿರಿಚುತ್ತಿದ್ದೆವು. ಒಮ್ಮೆ ಅಯ್ಯಪ್ಪ ಭಕ್ತರಾದರೆ ಇನ್ನೊಮ್ಮೆ ಚಳವಳಿಯ ರೈತರು, ಮಗದೊಮ್ಮೆ ವಲಸೆ ಬಂದ ನಿರಾಶ್ರಿತರು. ನಾಯಿಗಳು ಬೊಗಳಿದಾಗ ನಾವೇ ಅವುಗಳ ಭಾಷೆಯಲ್ಲಿ ಮಾತಾಡಿ ಬಾಯಿಮುಚ್ಚಿಸಿದೆವು. ಅಂಧಕಾರದ ಆ ಗಂಟೆಗಳಲ್ಲಿ ಮೋಹಿನಿ, ಭೂತಪ್ರೇತಗಳಂತೆ ಅಣಕಿಸಿದೆವು. ನರಿಗಳಂತೆ ಊಳಿಟ್ಟೆವು. ನಿಸ್ಸಾರ್ ಅಹಮದರ `ಕುರಿಗಳು ಸಾರ್ ಕುರಿಗಳೂ’ ಆದೆವು. ಯಾವುದಾದರೂ ವಾಹನ ಬಂದಾಗ, ಅದರಲ್ಲಿ ನುಸುಳಿ ಯಾರಾದರೂ ಹಿಂತೆರಳಿದರೋ ಎನ್ನುವ ಸಂಶಯ ದೃಷ್ಟಿ ನಮ್ಮದು. ಚಳಿಯಿರಬಹುದೆಂದು ತಂದ ಬೆಚ್ಚನೆಯ ಉಡುಪುಗಳ ಆವಶ್ಯಕತೆಯೇ ಕಾಣಬರಲಿಲ್ಲ. ಮೇಲೆ ನಕ್ಷತ್ರ, ಸುತ್ತಲೂ ಅಂಧಕಾರದಲ್ಲಿ ಮುಳುಗಿದರೂ ಮುದಗೊಳಿಸುವ ಪ್ರಕೃತಿ, ಝರಿಗಳ ನಿನಾದ ಆಲಿಸುತ್ತಾ ಮುನ್ನಡೆದೆವು. ಇದೊಂದು ಕಠಿಣತರ ಸೈನಿಕ ತರಬೇತಿಯೆಂದರೆ ತಪ್ಪಾಗಲಾರದು. ದಣಿದಾಗ ರಸ್ತೆಯೇ ಹಂಸತೂಲಿಕಾ ತಲ್ಪ. ಅದರಲ್ಲಿ ಪವಡಿಸಿ ಉಲ್ಕಾಪಾತವನ್ನು ಅವಲೋಕಿಸಿದೆವು. ಬೆನ್ನ ಮೇಲಿನ ಗಂಟಿನಿಂದ ನೀರು, ತಿಂಡಿ ಖರ್ಚಾಗತೊಡಗಿತು. ಕೇವಲ ೫ ಮಿನಿಟು ವಿಶ್ರಾಂತಿಯ ಬಳಿಕ “ನಡೆ ಮುಂದೆ, ನಡೆ ಮುಂದೆ”. ಹತ್ತಾರು ಹ್ಯಾರ್ ಪಿನ್ ತಿರುವುಗಳನ್ನು ದಾಟಿ, ಏರಿನಲ್ಲಿ ಏರಿಬಂದಾಗ ಷೂನೊಂದಿನ ಘರ್ಷಣೆಯಿಂದ ಕಾಲುಗಳು ಹಾಡತೊಡಗಿದುವು. ಆದರೆ ಕೇಳಲು ಸಮಯವೆಲ್ಲಿ? ಕೊನೆಯ ತಿರುವು ದಾಟಿ ಬಂದಾಗ, ಇನ್ನು ಕಾಡಿನೊಳಗೆ ಕೇವಲ ಒಂದು ಕಿಮೀ ನಡೆದರೆ ನಮ್ಮ ರಾತ್ರಿಯ ಲಾಡ್ಜ್ ಸೇರಬಹುದೆಂದು ಸೂಚನೆ ಸಿಕ್ಕಿ ಸಂತೋಷವೆನಿಸಿತು. ಒಬ್ಬರ ಹಿಂದೆ ಒಬ್ಬರಂತೆ ನಮ್ಮ ಶಿಸ್ತಿನ ಇರುವೆ ಸಾಲು ರಸ್ತೆ ಬಿಟ್ಟು ಕಾಡು ಹೊಕ್ಕಿತು. ಆದಿತ್ಯವಾರ ಬೆಳಗಿನ ಮೂರು ಗಂಟೆಗೆ ನಮಗೆ ಶಿಬಿರಾಗ್ನಿ ತೋರಿಬಂತು. ವರ್ಧನರಾಗಲೇ ಒಲೆ ಹೂಡಿ, ಚಹಾ ಮಾಡಿ ನಮ್ಮನ್ನು ಎದುರುನೋಡುತ್ತಿದ್ದರು. ಗಡಬಡಿಸಿ ಚಹಾ ಕುಡಿದು, ೨ ತಾಸಿನ ನಿದ್ದೆಗಾಗಿ ಮರದ ಬುಡಗಳನ್ನೂ ಬಂಡೆಗಳನ್ನೂ ಆಶ್ರಯಿಸಿದೆವು. ಕೇವಲ ಕೆಲವೇ ಸೆಕೆಂಡುಗಳಲ್ಲಿ ನಮಗಾರಿಗೂ ಲೋಕದ ಪರಿವೆಯಿರಲಿಲ್ಲ. ಶಿಬಿರಾಗ್ನಿ ಹಾಗೂ (ಆರೋಹಣದ ಸದಸ್ಯರೇ) ಪಹರೆಯವರು ಇದ್ದುದರಿಂದ ನಮಗೆ ನಿಶ್ಚಿಂತೆ.

೫.೩೦ಕ್ಕೆ ಬೆಳಗ್ಗಿನ ಉಪಾಹಾರ ತಯಾರಿಕೆಯಲ್ಲಿದ್ದವರ ಮಾತುಗಳಿಂದ ಅಲ್ಲೇ ಸಮೀಪದಲ್ಲಿ ಮಲಗಿದ್ದ ನಮಗೆ ಎಚ್ಚರವಾಯಿತು. ಆದರೂ ಚಳಿಗೆ ಏಳಲು ಮನಸ್ಸಾಗದೆ ಮುದುರಿ ಮಲಗಿ ಎಲ್ಲಾ ಸಿದ್ಧವಾದ ಮೇಲೆ ಮೆಲ್ಲನೆ ಹೊದಿಕೆಯಿಂದ ಹೊರಬಂದೆವು. ದಂತಮಾರ್ಜನ ಪೂರೈಸಿ, ಉಪಾಹಾರ ಹೊಡೆದು, ಪ್ರಕೃತಿಕರೆ ಮುಗಿಸಿ, ಗಂಟುಗಳನ್ನು ಬೆನ್ನಿಗೇರಿಸಿ ಸಜ್ಜಾದಾಗ ಗಂಟೆ ೬.೩೦. ಯಜ್ಞರು ನಮ್ಮಿಂದ ಬೀಳ್ಕೊಟ್ಟು ಹಿಂದಕ್ಕೆ ಹೊರಟರು. ಹಿಂದಿನ ದಿನದ ಅಂದಾಜಿನ ಪ್ರಕಾರ ನಾವೂ ಹಿಂದಿರುಗಬೇಕಾಗಿತ್ತು. ಆದರೆ ಹವೆಯ ಪ್ರಭಾವವೋ (ಬಲಿತ) ಮನೋಸ್ಥೈರ್ಯವೋ ವಿಪರೀತ ಆಯಾಸವಾಗುತ್ತಿರಲಿಲ್ಲ. ಯಜ್ಞರನ್ನು ಕಳುಹಿಸಿ ನಾವು ಹತ್ತಲು ಪ್ರಾರಂಭಿಸಿದೆವು. ಸಸ್ಯವರ್ಗದ ಪರಿಚಯ ಮಾಡಿಕೊಡಲು ನಮ್ಮೊಂದಿಗೆ ಉಜ್ರೆಯ ಪ್ರಾಧ್ಯಾಪಕಿ (ಹೆಸರು?) ಇದ್ದರು. ರಸ್ತೆಯಲ್ಲಿ ನಡೆದಷ್ಟು ಸುಲಭವಾಗಿಲ್ಲದಿದ್ದರೂ ಕಾಡಿನಲ್ಲಿ ಏರುವುದು ಅಷ್ಟೊಂದು ತ್ರಾಸವೆನಿಸಲಿಲ್ಲ. ಅಂತೂ ಏರುಕಲ್ಲಿನ (ಶಿಖರ ಪ್ರದೇಶದ ಬಂಡೆಗಳ) ಬುಡಕ್ಕೆ ಬಂದಾಗ ಗಂಟೆ ಒಂಬತ್ತು. ಓಹ್! ಸುತ್ತಲಿನ ದೃಶ್ಯ ಅದೆಷ್ಟು ಸುಂದರ!! ಸುತ್ತಲ ಗುಡ್ಡೆಗಳು ಸೂರ್ಯಕಿರಣಗಳಿಂದ ಮಿಂದು ಅಲೌಕಿಕ ಸೌಂದರ್ಯದಿಂದ ವಿರಾಜಿಸುತ್ತಿದ್ದುವು. ಅದನ್ನು ನೋಡಿಯೇ ತಿಳಿಯಬೇಕಲ್ಲದೆ ಪದಗಳಿಂದ ವಿವರಿಸುವುದು ಕಠಿಣಸಾಧ್ಯ.

ಏರುಕಲ್ಲಿನ ಪದತಲದಲ್ಲಿ ವರ್ಧನರು ಏರುವ ವಿಧಾನ ತಿಳಿಸಿ ಕೊಟ್ಟರು. ಆಗ (ಪ್ರಾಧ್ಯಾಪಕ ಅಡ್ಯನಡ್ಕ) ಕೃಷ್ಣ ಭಟ್ಟರು ಹೇಳಿದ ಮಾತೊಂದು ನೆನಪಿಗೆ ಬಂದಿತು. ಪರ್ವತಾರೋಹಣ ನಮಗೂ ಪ್ರಕೃತಿಗೂ ನಡೆಯುವ, ಅಂಪೈರ್ ಇಲ್ಲದ ಆಟ. ಆದುದರಿಂದ ನಮ್ಮ ತಪ್ಪಿಗೆ ನಾವೇ ಜವಾಬ್ದಾರರು. ಈ ಆಟ ಆಡಲು ತುಂಬಾ ಜಾಗರೂಕರಾಗಿರಬೇಕು. ಒಬ್ಬರ ಹಿಂದೆ ಮತ್ತೊಬ್ಬರಂತೆ ನಡುವಿಗೆ `ಜೀವತಂತು’ ಸುತ್ತಿ ಮೇಲೇರತೊಡಗಿದೆವು. ಮೊದಮೊದಲು ಹೆದರಿಕೆಯಾದರೂ ನಾವು ಸಾಹಸಿಗಳೆಂದು ನೆನಪಾಗಿ ಹೆದರಿಕೆ ಕಾಲ್ಕಿತ್ತಿತು. ತಂಡದ ಮಹಿಳಾ ಸದಸ್ಯರಲ್ಲಿ ಮೊದಲಿಗಳಾಗಿ ಏರುಗಲ್ಲ ನೆತ್ತಿ ಮೆಟ್ಟಿ ನಿಂತಾಗ ಪಟ್ಟ ಕಷ್ಟ ಸಾರ್ಥಕವೆನಿಸಿತ್ತು. ಮೊದಲೇರಿದ್ದ ಮಿತ್ರರು ಚಪ್ಪಾಳೆ ತಟ್ಟಿ ಸ್ವಾಗತಿಸಿದಾಗ ಸ್ವಲ್ಪ ಜಂಭವೂ ಬಂದಿತ್ತೆನ್ನಿ. ಎಲ್ಲರೂ ಏರುಕಲ್ಲ ಮೇಲೆ ಸೇರಿದಾಗ ಮಧ್ಯಾಹ್ನ ೧೨.೩೦ ಗಂಟೆ. ಮುಂದೇನು? ಉದರಪೂಜೆ, ಮತ್ತಿನ್ನೇನು? ಚಪಾತಿ ಪಲ್ಯದ ಊಟ ಸಾಗಿತ್ತು. ಎಳೆ ಮಕ್ಕಳಂತೆ ಬೆಲ್ಲಕ್ಕಾಗಿ ಕಚ್ಚಾಡಿದ ದೃಶ್ಯ ನಯನ ಮನೋಹರ. ಕೇವಲ ಕೆಲವೇ ಗಂಟೆಗಳ ಒಡನಾಟದಿಂದ ಎಷ್ಟೋ ಅಪರಿಚಿತರು ಒಂದೇ ಮನೆಯವರಂತಾಗಿದ್ದೆವು. ಏರುಗಲ್ಲಿನ ಮೇಲೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡೆವು. ಏರುಕಲ್ಲಿನ ನೆನಪಿನ ಕುರುಹಾಗಿ `ಸಿಲ್ವರ್ ಫರ್ನ್’ ನನ್ನ ಚೀಲವೇರಿ ಕುಳಿತಿತ್ತು. ಕಲ್ಲಿನ ಒಡಲಲ್ಲಿ ಕಾಲೇಜಿನ, ನಮ್ಮ ಹೆಸರು ಕೆತ್ತಿ ಶಿಲ್ಪಿಗಳೂ ಆದೆವು.

ಇನ್ನು ಅವರೋಹಣ! ಏರುಕಲ್ಲನ್ನಗಲಲು ಮನಸ್ಸೇ ಇದ್ದಿಲ್ಲ. ಎಂತಹ ಉಲ್ಲಾಸ ನೀಡುವ ಸ್ವರ್ಗದಾಣವಾಗಿತ್ತದು. ಬೇಸರದಿಂದ ವಿದಾಯ ಹೇಳಿ, `ಶೋಲ್ಡರ್ ಬಿಲೇ’ (ರ್‍ಯಾಪೆಲಿಂಗ್) ತಂತ್ರದ ಮೂಲಕ ಏರು ಕಲ್ಲಿನಿಂದ ಇಳಿದೆವು. ಆಗಲೇ ಮುಸ್ಸಂಜೆಯಾಗುತ್ತಿದ್ದ ಕಾರಣ ಎಲ್ಲರಿಗೂ ಕಾಯಲು ವ್ಯವಧಾನವಿರಲಿಲ್ಲ. “ಪಂಚಮಂ ಕಾರ್ಯಸಿದ್ಧಿ” ಎಂದ ನಾವು (ವಿಜಯಾ ಕಾಲೇಜಿನ ಬಳಗ) ಐವರೂ `ಆರೋಹಣ’ದ ಕಾರ್ಯಕರ್ತರಿಂದ ಬೀಳ್ಕೊಂಡೆವು. ಕುಂದಾಪುರ ಕಾಲೇಜಿನವರೂ ಜೊತೆಗೂಡಿದರು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಕುಂದಾಪುರದ ಒಬ್ಬರೇ ವಿದ್ಯಾರ್ಥಿ ನಮ್ಮೊಂದಿಗಿದ್ದರು. ಉಳಿದವರು ನಾಪತ್ತೆ! ಗೂಬೆಯೊಂದಾಗಲೇ ಕೂಗಬೇಕೇ? ದಾರಿಯೂ ತಪ್ಪಿತ್ತು. ನಾವು ಆರು ಮಂದಿಯೂ ಕಾಡು ಮನುಷ್ಯರಂತೆ ಬೊಬ್ಬಿಡುತ್ತಾ ಕಿರುಚುತ್ತಾ ಹೋಗುತ್ತಿದ್ದೆವು. ನಮ್ಮ ಪ್ರಶ್ನೆ ನಮಗೇ `ಬೂಂರಾಂಗ್’ನಂತೆ ಹಿಂದೆ ಬರುತ್ತಿತ್ತು – ಪ್ರತಿಧ್ವನಿಯಿಂದಲ್ಲ, ಕುಂದಾಪುರ ತಂಡದಿಂದ. ನಮ್ಮ ಕಷ್ಟಗಳಿಗೆ ಕಿರೀಟವಿಡಲು ತಣ್ಣೀರಗುಗ್ಗು, ತುರಿಕೆ ಸೊಪ್ಪು, ನಂಜಿನ ಬಳ್ಳಿಗಳು ಶರ್ಟಿನ ಉದ್ದ ತೋಳುಗಳನ್ನೂ ಲೆಕ್ಕಿಸದೆ (ಸಂಪರ್ಕಕ್ಕೆ) ಬಂದಾಗ ಮನಸ್ಸಿನ ಶಾಂತತೆ ಕಾಡತೊಡಗಿತ್ತು. ಜಿಗಣೆಯ ಕಾಟ ಬೇರೆ. ಇತ್ತ ದಾರಿಯೂ ಸಿಗುತ್ತಿಲ್ಲ. ನಮ್ಮ ಭಂಡ ಧೈರ್ಯವೆಲ್ಲ ಮೆಲ್ಲನೇ ಕರಗತೊಡಗಿತು. ಕುಂದಾಪುರದವರು ಟೆಲಿಪತಿಯ ಮೂಲಕ ತಾಯಿಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದರು. “ಅಮ್ಮಾ, ನಿನ್ಮಗಾ ಇವತ್ ಮನೇಗ್ ಬರೋದಿಲ್ಲ.” ನಮ್ಮದೂ ಅದೇ ಅವಸ್ಥೆ. ಇದ್ದ ಬ್ರೆಡ್ಡನ್ನೆಲ್ಲ ಗುಡ್ಡದಲ್ಲಿ ಹಂಚಿ ತಿಂದಾಗಿತ್ತು. ಅವರಿಗೆಲ್ಲ ಮುಂದಿನ ಪ್ರಶ್ನೆ ಕಾಡುತ್ತಿದ್ದರೆ, ನಾನು ಹುಚ್ಚು ನಗುನಗುತ್ತಿದ್ದೆ. ಏಕೆಂದರೆ ಕೃಷ್ಣಭಟ್ಟರ ನಾಯಕತ್ವದಲ್ಲಿ, ಮಿತ್ರರ ಸ್ನೇಹಪೂರ್ಣ ವ್ಯವಹಾರದಿಂದ ನನಗೆ ಮನೆಯಲ್ಲಿದ್ದಂತೆಯೇ ಅನುಭವವಾಗುತ್ತಿತ್ತು. ಅಂತೂ ಕೃಷ್ಣ ಭಟ್ಟರು ದೂರದ ರಸ್ತೆಯಲ್ಲಿನ ವಾಹನಗಳ ಹಾರ್ನ್ ಆಲಿಸಿ, ಬುದ್ಧಿಯೋಡಿಸಿ, ಹಿಂದೆ ಲಾರಿ ಓಡಾಡುತ್ತಿತ್ತೆಂದು ಊಹಿಸಬಹುದಾದ ದಾರಿಯಲ್ಲೇ ಮುಂದೆ ಸಾಗಲು ಸೂಚಿಸಿದಾಗ ಏನೋ ಪರಿಹಾರ ಕಂಡಂತಾಯಿತು. ಅವರು ಹೇಳಿದ್ದು ನಿಜವಾಯಿತು. ಈ ದಾರಿ ನಮ್ಮನ್ನು ಟಾರ್ ರಸ್ತೆಗೆ ಸೇರಿಸಿದಾಗ ಎಲ್ಲರ ಮುಖದಲ್ಲಿ ನಗೆಯ ಸಿಂಚನವಾಯ್ತು. ಕುಂದಾಪುರದ ತಂಡದವರು ನಮಗಿಂತ ಮುಂಚೆ ಬಂದು ವಾಹನಗಳ ಪ್ರತೀಕ್ಷೆಯಲ್ಲಿದ್ದರು. ಮುಂದೆ ದಾರಿಯಲ್ಲಿ ಸಿಕ್ಕ ವಾಹನಗಳನ್ನು ನಿಲ್ಲಿಸಲು ಪ್ರಯತ್ನಪಟ್ಟರೂ ವಿಫಲರಾಗಬೇಕಾಯ್ತು. “ಇನ್ನು ದಯ ಬಾರದೇ…..” ವ್ಯರ್ಥ ವಿಲಾಪವಾಯಿತು. ರಸ್ತೆಗೆ ಅಡ್ಡ ಕುಳಿತು, ವಾಹನ ನಿಲ್ಲಿಸುವ ಧರಣಿ ಮುಷ್ಕರವೂ ಆಯಿತು. ಆದರೆ ವಾಹನ ಸಮೀಪಿಸುತ್ತಿದ್ದಂತೆ ನಮಗೆ ಧೈರ್ಯವೆಲ್ಲಿ? ಕೊನೆಗೆ ಇಂಡಿಯನ್ ಆಯಿಲ್ ಲಾರಿಯ ಮಂಗಳೂರಿನ ಡ್ರೈವರರೊಬ್ಬರು ಕರುಣೆ ತೋರಿ ನಮ್ಮನ್ನು ಉಜ್ರೆ ತಲುಪಿಸಿದರು. ಲಾರಿ ಪ್ರಯಾಣ ಒಂದು ಹೊಸ ಅನುಭವವೇ. ಉಜ್ರೆಯಲ್ಲಿ ಕುಂದಾಪುರ ಬಳಗದಿಂದ ಬೀಳ್ಕೊಂಡಾಗ ನಮ್ಮ ಬಸ್ಸು ರೆಡಿಯಾಗಿತ್ತು. ಮಂಗಳೂರಿಗೆ ಬರುವವರೆಗೂ ಹಾಯಾಗಿ ನಿದ್ದೆ ಮಾಡಿದೆವು. ಅಂತೂ ಮೂಲ್ಕಿ ಮುಟ್ಟಿದಾಗ ರಾತ್ರಿ ೯ ಗಂಟೆ.

ಮನೆಯಲ್ಲಿ ಜೀವಂತ, ಅದೂ ಏನೂ ಗಾಯಗಳಿಲ್ಲದೆ (ತುರಿಕೆ ಸೊಪ್ಪಿನ ಬಗ್ಗೆ ಅವರಿಗೇನು ಗೊತ್ತು, ಪಾಪ!) ಬಂದವಳನ್ನು ನೋಡಿದಾಗ ನೆಮ್ಮದಿಯ ನಿಟ್ಟುಸಿರು ಹೊರಬಿತ್ತು. ಮರುದಿನ ನಾವು ಕಾಲೇಜಿನ ಉಪನ್ಯಾಸಕರಿಂದ ಅಭಿನಂದನೆಗಳನ್ನು ಪಡೆದಾಗ ಧನ್ಯಭಾವ ಆವರಿಸಿತ್ತು. ಕೆಲವರು ಆಶ್ಚರ್ಯದಿಂದ ಹುಬ್ಬು ಏರಿಸಿದರು. “ಓಹ್! ತೇನ್ ಸಿಂಗ್, ಹಿಲೆರಿ ಮಾರಾಯ” ವಾಗ್ಬಾಣಗಳು ಕಿವಿಗೆ ಬಿದ್ದರೂ ಬೇಸರ ತಾರದೆ ಹೆಮ್ಮೆ ಎನಿಸುತ್ತಿತ್ತು. ತುರಿಕೆ ಸೊಪ್ಪಿನ ಪ್ರಭಾವ ಮಾತ್ರ (ಕೆಲವು ದಿನಗಳವರೆಗೆ) ತಣ್ಣೀರು ಸ್ಪರ್ಶವಾದಾಗಲೆಲ್ಲ ಗೊತ್ತಾಗಿ ನೆನಪು ಮರುಕಳಿಸುತ್ತಿತ್ತು.

೨. ಭಾಗಿಗಳ ಹೆಮ್ಮೆ – ರಾಮಚಂದ್ರ ಆಚಾರ್ಯ: ನಮ್ಮ ಕಾಲೇಜಿನಿಂದ ಹೊರಟ ಏರುಕಲ್ಲು ಆರೋಹಣ ತಂಡದ ಸದಸ್ಯರಲ್ಲಿ ನಾನೂ ಒಬ್ಬ. ನಮ್ಮ ಸಹಪಾಠಿನಿ ಶಶಿಕಲಾ ಜೋಯ್ಸ್ ಅವರ `ಮರುಕಳಿಸುವ ನೆನಪು’ಗಳು ನಮ್ಮ ತಂಡದ ಯಶಸ್ವೀ ಕಾರ್ಯಕ್ರಮದ ಪರಿಚಯವೂ ಹೌದು. ಅಂದು ಮುಂದೆಮುಂದೆ ನಡೆನಡೆದು, ಕಾಡುಮೇಡನ್ನು ಮೆಟ್ಟಿ, ಹಳ್ಳ ತೊರೆಗಳನ್ನು ದಾಟಿ ಬಂದ ನಮ್ಮನ್ನು ಮರುದಿನ ಮುಂಜಾವ ೩.೩೦ರ ಸಮಯಕ್ಕೆ ಏರುಕಲ್ಲು ಬೆಟ್ಟದ ತಪ್ಪಲಿನ ಕಾಡೊಂದು ತನ್ನೊಳಗೆ ನಿರ್ಮಿಸಿದ್ದ ಆ ಶಿಬಿರ ಸ್ಥಾನಕ್ಕೆ ಸ್ವಾಗತಿಸಿದಾಗ, ಶ್ರೀಯುತ ಅಶೋಕವರ್ಧನರು ಹೇಳಿದ “ಕಾಡು ಕರೆಕರೆದು ಸ್ವಾಗತಿಸುತ್ತದೆ – ಬಳ್ಳಿಯ ತೋರಣ ಕಟ್ಟಿ, ಚಿಗುರ ಚಪ್ಪರ ಹಾಕಿ, ತರಗೆಲೆಯ ಹಾಸು ಹಾಸಿ, ತಳಿರು ತಂಗಾಳಿ ಬೀಸಿ, ಸುಮವು ಕಂಪ ಸೂಸಿ ಕರೆಯುತ್ತದೆ” ಎಂಬ ಮಾತು, ನಮ್ಮೆಲ್ಲರ ಅವಿಸ್ಮರಣೀಯ ಅನುಭವದ ಪ್ರತಿಬಿಂಬ.

ಕಾಕತಾಳೀಯವೋ ಏನೋ ಎಂಬಂತೆ ನನ್ನ ಹಾಗೂ ನನ್ನ ಗೆಳೆಯ ಸುಬ್ರಹ್ಮಣ್ಯ ಎಂಕೆ ಅವರ ಬೂಟುಗಳು ತೊಂದರೆ ಕೊಡುತ್ತಿದ್ದುವು. ಬೂಟು ಕಳಚಿದೆವು, ಬ್ಯಾಗಿನಲ್ಲಿಟ್ಟೆವು. ಪರ್ವತಾರೋಹಣ ಪರಿಣತ ಅಶೋಕವರ್ಧನ್ “ಬೂಟುಗಳಿರಲ್ಲವಾದರೆ ಭಾರೀ ತೊಂದರೆಯಾಗಬಹುದು. ಕಾಡಿನಲ್ಲಿ ನಡೆಯುವಾಗ ಕಾಲಿನಡಿಯ ವಿಷಯ ಹೇಳಲಾಗುವುದಿಲ್ಲ. ಏರುಕಲ್ಲು ಏರುವುದು ಕಷ್ಟ” ಎಂದರು. ನಾವಿಬ್ಬರೂ ಧೃತಿಗೆಡದೆ ೧೯ಮೈಲು ಕಾಲ್ನಡಿಗೆ ಹಾಗೂ ಏರುಕಲ್ಲು ಆರೋಹಣ ಬರಿಗಾಲಿನಲ್ಲಿ ಯಶಸ್ವಿಯಾಗಿ ಮುಗಿಸಿ ಬಂದೆವು. ಅನಂತರದಲ್ಲಿ ನಮ್ಮ ಹೆಗ್ಗಳಿಕೆಯನ್ನು ತಿಳಿಸಿದಾಗ ಅವರು ಶುಭ ಕೋರಿದುದಂತೂ ಮರೆಯಲಾಗದ ಸಂಗತಿ. ಅಂದಿನ ಏರು ಕಲ್ಲು ಆರೋಹಣವನ್ನು ಮೊತ್ತಮೊದಲನೆಯದಾಗಿ ಪೂರೈಸಿದ ಮಹಿಳಾ ಭಾಗಿ ನಮ್ಮ ಕಾಲೇಜಿನ ಕುಮಾರಿ ಶಶಿಕಲಾ ಜಾಯ್ಸ್ ಎನ್ನುವುದಂತೂ ಹರ್ಷದ ಹಾಗೂ ಹೆಮ್ಮೆಯ ವಿಷಯ. ಈ ಆರೋಹಣದಿಂದ ನಾವು ಬಿನ್ನಾಣವಿಲ್ಲದೆ ಸುಖಕಷ್ಟಗಳಲ್ಲಿ ಪರಸ್ಪರ ಸಹಾನುಭಾಗಿಗಳಾಗುವ ಔದಾರ್ಯದ ಪಾಠವನ್ನೂ ಕಲಿತೆವು.

೩. ನೋಡದ ಕಾಡು – ಅಡ್ಯನಡ್ಕ ಕೃಷ್ಣ ಭಟ್ : ಹಾವು ಹಕ್ಕಿಗಳಿಲ್ಲದ ಕಾಡು, ಕಗ್ಗಲ್ಲ ತುಂಡುಗಳನ್ನು ಹುದುಗಿಸಿಕೊಂಡ ಮಿದುಮಣ್ಣು – ತಪ್ಪಲು. ಚಳಿಗಾಲದಲ್ಲೂ ಸುಖ ಶೀತಲ ಗಾಳಿ, ಬೆಟ್ಟದ ರಾತ್ರಿ ಕಾಡು ಎಷ್ಟು ನೀರವವೆಂದು ತಿಳಿಸಿತು. ಅಲೆಅಲೆಯಾಗಿ ಬರುವ ಗಾಳಿ ತಪ್ಪಲಿಗೆ ಹರಡಿ, ದೈತ್ಯ ಮರಗಳನ್ನು ಅಪ್ಪಿ ಆಡಿಸಿದಾಗ ಅರೆನಿದ್ದೆಯ ಮಂಪರಿನಲ್ಲಿ ವರ್ಷಧಾರೆಯ ಧೋಧೋ ಸದ್ದು – ಮಳೆಯ ಹನಿಯೂ ಇಲ್ಲ! ಎಚ್ಚೆತ್ತಾಗ ತಂಪಾದ ಉಸಿರು. ಒಂದು ತಪ್ಪಲಿಗೆ ನೆರಳು, ಮತ್ತೊಂದು ತಪ್ಪಲಿಗೆ ಎಳೆ ಬಿಸಿಲು. ಬೆಟ್ಟದ ಆ ಮುಂಜಾನೆ ಹೊಚ್ಚ ಹೊಸದು.

(ಮುಂದುವರಿಯಲಿದೆ)