(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ)

ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ ಪ್ರಾಂಶುಪಾಲರಾದ ಪ್ರೊ| ಎಂ. ಸೂರ್ಯನಾರಾಯಣಪ್ಪನವರು ನನಗೆ ಆತ್ಮೀಯರು. ಅಜ್ಜನ ಮನೆಯಲ್ಲಿದ್ದುಕೊಂಡು, ಮಂಗಳೂರಿನಲ್ಲಿ ಅಂಗಡಿ ತೆರೆಯುವ ಸಿದ್ಧತೆಯಲ್ಲಿದ್ದ ಕಾಲದಲ್ಲಿ ನಾನು ಬಂಡ್ವಾಳವಿಲ್ಲದ ಸರದಾರ. ಆದರೆ ಅಂದು ವಿವೇಕಾನಂದ ಕಾಲೇಜು ತನ್ನ ಬೇಡಿಕೆಯ ಪೂರ್ಣ ಮೊತ್ತ ನನಗೆ ಮುಂದಾಗಿ ಕೊಟ್ಟು, ಪುಸ್ತಕ ಖರೀದಿಸಿ ಪ್ರೋತ್ಸಾಹಿಸಿದ ಕ್ರಮ ಅನನ್ಯ. ಸಹಜವಾಗಿ ಅಲ್ಲಿ ನಮ್ಮ ಪರ್ವತಾರೋಹಣ ಸಪ್ತಾಹದ ನಾಲ್ಕನೇ ದಿನ ಎಂದರೆ ನನಗೆ ಹೆಚ್ಚಿನ ಉಮೇದು. ಸಾಲದ್ದಕ್ಕೆ ಇಡಿಯ ಕಾಲೇಜು ಮಾತ್ರವಲ್ಲ, ನನ್ನ ಬಹುತೇಕ ಬಂಧುವರ್ಗವೂ ಪ್ರೇಕ್ಷಾಗಡಣದಲ್ಲಿ ಹಾಜರಿದ್ದು ಮಹಾಲಿಂಗೇಶ್ವರನ ಜಾತ್ರೆಯನ್ನೇ ಸೋಲಿಸ ಹೊರಟ ಸನ್ನಿವೇಶ ಅಸಾಮಾನ್ಯವೇ ಇತ್ತು. ಮೈಸೂರಿನ ಪರ್ವತಾರೋಹಣ ದಿನಗಳಲ್ಲಿ ನನ್ನನ್ನು ನೆರಳಿನಂತೇ ಹಿಂಬಾಲಿಸಿದ್ದ ತಮ್ಮ – ಆನಂದವರ್ಧನ, ಪುತ್ತೂರಿನಲ್ಲಿ ನನ್ನನ್ನು ಸೇರಿಕೊಂಡಿದ್ದ. ಶಿಲಾವರೋಹಣದಲ್ಲಿ ಆತ ಕೆಲವು ಹೊಸ ಪ್ರದರ್ಶನ ತಂತ್ರಗಳಲ್ಲೂ ಪರಿಣತನಿದ್ದ. ಹಾಗಾಗಿ ಕಳೆದ ಮೂರು ದಿನಗಳಲ್ಲಿ ಪ್ರದರ್ಶನದ ನೇರ ನಿರ್ವಹಣೆಯಲ್ಲಿ ನಾನು ಕಾಣದಿದ್ದ ಬಿಡುವು ಇಲ್ಲಿ ಸಿಕ್ಕಿತು. ನಾವು ಕಾಲೇಜಿನ ಎತ್ತರದ ತಾರಸಿಗೆ ಮೊದಲೇ ಏರಿ, ನಮ್ಮ ಇಳಿಯುವ ಹಗ್ಗವನ್ನು ಎರಡೆಳೆಯಲ್ಲಿ ಭದ್ರ ಆಧಾರಗಳಿಗೆ ಯುಕ್ತ ಗಂಟುಗಳಿಂದ ಕಟ್ಟಿ, ಕೊಳ್ಳದಾಳಕ್ಕೆ ಬಿಟ್ಟು ಸಿದ್ಧರಾಗಿದ್ದೆವು. ಹಾಗಾಗಿ ಕಲಾಪದುದ್ದಕ್ಕೆ ನಾನು ಮೈಕ್ ಹಿಡಿದು ಕೊಡುತ್ತಿದ್ದ ವೀಕ್ಷಕ ವಿವರಣೆ ಹೆಚ್ಚು ಜನ ರಂಜಿಸಿತು. ಅದರಲ್ಲಿ ನಾನು ಕಲಾಪದ ವಿವರಣೆಯೊಡನೆ ಸದಸ್ಯನ ಆತ್ಮೀಯ ಪರಿಚಯ, ಪ್ರಾಕೃತಿಕ ಪರಿಸರದ ಸಣ್ಣಪುಟ್ಟ ರಂಜನೀಯ ನೆನಪುಗಳು, ಹಾಸ್ಯ, ಪ್ರಶ್ನೋತ್ತರಗಳನ್ನೆಲ್ಲ ಬೆಳೆಸಿ ಆಕರ್ಷಕ ಮಾಡಿದ್ದು ಮುಂದಿನ ದಿನಗಳಿಗೆ ಉತ್ತಮಿಸಲೊಂದು ಮಾದರಿಯಾಗಿಯೇ ನಡೆಯಿತು.

ನಮ್ಮ ಪ್ರದರ್ಶನ ಬತ್ತಳಿಕೆಯಲ್ಲಿ ಹಗ್ಗ ಬಳಸಿ ಬಂಡೆ ಇಳಿಯುವ (ರ್ಯಾಪ್ಲಿಂಗ್) ಐದಾರು ತಂತ್ರಗಳಿದ್ದವು. ಸ್ಥಿರ ಹಗ್ಗವನ್ನು ಕೇವಲ ಹಸ್ತದಲ್ಲಿ ಹಿಡಿದು ಬಾವಿಗಿಳಿಯುವವರ ಶಕ್ತಿಮೂಲವಾದ ಅ-ತಂತ್ರ ನಮ್ಮದಲ್ಲ. ಹಗ್ಗವನ್ನು ನಮ್ಮ ದೇಹಕ್ಕೆ ವಿವಿಧ ರೀತಿಗಳಲ್ಲಿ ಅಳವಡಿಸಿಕೊಂಡು ಕಡಿಮೆ ಶಕ್ತಿಯಲ್ಲಿ, ಹಗ್ಗದ ಉಜ್ಜಾಟವನ್ನು ದೇಹದ ಬೇರೆ ಭಾಗಗಳಿಗೂ ಹಂಚಿ ಹಗುರಾಗುವ ತಂತ್ರ ನಮ್ಮದು. ಭುಜ ಪ್ರಧಾನವಾದ ಶೋಲ್ಡರ್, ತೋಳು ಪ್ರಧಾನವಾದ ಸೈಡ್, ಹೊಟ್ಟೆ ಪ್ರಧಾನವಾದ ಸ್ಟಮಕ್ ರ್ಯಾಪ್ಲಿಂಗುಗಳದ್ದು ಒಂದು ವರ್ಗ. ಇವುಗಳಲ್ಲಿ ಪ್ರದರ್ಶಕ ದಪ್ಪದ ಒರಟು ಬಟ್ಟೆ ಧರಿಸಿರದಿದ್ದರೆ ಮತ್ತು ತಂತ್ರದ ಪಳಗುವಿಕೆ ಸರಿಯಿಲ್ಲದಿದ್ದರೆ ತೊಡೆ ಸಂದು, ಭುಜ, ಸೊಂಟ, ತೋಳುಗಳಲ್ಲಿ ಹಗ್ಗದ ಉಜ್ಜುಗಾಯಗಳು ಉಚಿತ! ಹಗ್ಗದುಜ್ಜಾಟವನ್ನು ಸರಳ ಹಗ್ಗದ ಬಳೆ (ಸ್ಲಿಂಗ್) ಹಾಗೂ ವಿಶೇಷ ಲೋಹದ ಉಂಗುರ – ಕೆರಾಬಿನರ್, ಅಂಥ ಸಲಕರಣೆಗಳ ಮೂಲಕ ಪೂರ್ಣ ತಪ್ಪಿಸಿ, ಹೆಚ್ಚಿನ ವೇಗದಲ್ಲೂ ಸುಲಭದಲ್ಲೂ ಇಳಿಯುವ ತಂತ್ರವಂತೂ ಬಹು ಜನಪ್ರಿಯ. ಜೂಮರ್ ಮತ್ತು ಇನ್ನೇನೋ ಮುಂದುವರಿದ ಹೆಸರುಗಳನ್ನು ನಾನು ಕೇಳಿದ್ದಿತ್ತು. ಅವನ್ನು ಬಳಸುವುದಿರಲಿ, ಇಂದಿಗೂ ಕಂಡದ್ದಿಲ್ಲ. ಇಲ್ಲೆಲ್ಲ ಹಸ್ತಗಳಿಗೆ ಮಾತ್ರ ಪರ್ವತಾರೋಹೀ ಕೈಗವುಸು ಕಡ್ಡಾಯ. ನಮ್ಮ ಸದಸ್ಯರ ಸಂಖ್ಯೆ ಮತ್ತು ಪರಿಣತಿ ಆಧರಿಸಿ ಒಂದೊಂದು ತಂತ್ರದ್ದೂ ಎರಡೋ ಮೂರೋ ಮಾದರಿಗಳನ್ನು ಕೊಡುತ್ತಿದ್ದೆವು. ಶೋಲ್ಡರ್, ಸ್ಲಿಂಗ್ ರ್ರ್ಯಾಪ್ಲಿಂಗುಗಳಲ್ಲಿ ನಮ್ಮ ನಡೆ ಹಿಮ್ಮುಖ. ನಾವಿಳಿಯುವ ಗೋಡೆ, ಬಂಡೆ ನೆಲಕ್ಕೆ ೯೦ರ ಕೋನದಲ್ಲಿದೆ ಎಂದು ಭಾವಿಸಿ, ಅದಕ್ಕೆ ಸುಮಾರು ೪೫ರ ಕೋನದಲ್ಲಿ ಇಳಿಯುತ್ತೇವೆ. ಇಲ್ಲೆಲ್ಲ ಕುಪ್ಪಳಿಕೆ, ಏನಲ್ಲದಿದ್ದರೂ ವೇಗದ ಹಿಮ್ಮೊಗದ ಚಲನೆ ಅಥವಾ ಇಳಿಕೆ ರೋಮಾಂಚಕಾರಿಯಾಗಿರುತ್ತದೆ. ಸೈಡ್ ರ್ಯಾಪ್ಲಿಂಗ್ – ಹೆಸರೇ ಹೇಳುವಂತೆ ಮಗ್ಗುಲ ನಡೆ. ಇದರಲ್ಲಿ ಇಳಿಹಗ್ಗದ ನೇರವನ್ನು ಬಿಟ್ಟು, ತುಸು ಅಡ್ಡಕ್ಕೂ ಚಲಿಸುವ ಸ್ವಾತಂತ್ರ್ಯವಹಿಸಬಹುದು. ಆದರೆ ಇದನ್ನು ನುಣ್ಣನೆ ಗೋಡೆಗಳಲ್ಲಿ ಪ್ರಯೋಗಿಸುವುದು ಅಷ್ಟೇನೂ ಆರೋಗ್ಯಕರವಲ್ಲ. ಸ್ಟಮಕ್ ಇಳಿಕೆಯಲ್ಲಿ ನಾವು ನೇರ ಪ್ರಪಾತವನ್ನು ದಿಟ್ಟಿಸುತ್ತ, ಗೋಡೆಗೆ ಲಂಬಕೋನದಲ್ಲಿ, ಕೇವಲ ನಡಿಗೆಯಲ್ಲಿ ಇಳಿಯುತ್ತೇವೆ. ಇದರಲ್ಲಿ ಗಾಯಾಳುಗಳನ್ನು ಪರಿಣತ ತನ್ನ ಬೆನ್ನ ಮೇಲೆ ಹೊತ್ತು ಇಳಿಯುವ ಅವಕಾಶವಿರುತ್ತದೆ. ಅದನ್ನು ಪ್ರದರ್ಶನಗಳಲ್ಲಿ ನಟಿಸಿದಾಗ ದೀರ್ಘ ಕರತಾಡನ ಬಿದ್ದೇ ಬೀಳುತ್ತದೆ. ಪ್ರಾಕೃತಿಕ ಪರಿಸರಗಳಲ್ಲಿ ಬಂಡೆಯ ಮುಂಚಾಚಿಕೆ, ಕಟ್ಟಡಗಳಲ್ಲೂ ಬಾಲ್ಕನಿಯಂಥ ಖಾಲೀ ಅವಕಾಶಗಳು ಬಂದಲ್ಲಿ ಇಳಿಯುವವನ ಪರಿಣತಿ ಹೆಚ್ಚಿನ ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ.

ಆರೋಹಣ ಸಂಸ್ಥೆಯ ಪ್ರದರ್ಶಕ ಸದಸ್ಯರ ಸಂಖ್ಯೆ ಸಣ್ಣದಿತ್ತು ಮತ್ತು ಅವರಿಗೆ ಸಿಕ್ಕ ತರಬೇತೂ ಅಲ್ಪಾವಧಿಯದ್ದು. ಅಲ್ಲದಿದ್ದರೂ ಎಲ್ಲ ಪ್ರದರ್ಶಕರಿಗೂ ಪ್ರತ್ಯೇಕ ಜೀವರಕ್ಷಕ ತಂತು (ಬಿಲೇ) ಕಟ್ಟಿಯೇ ಬಿಡುತ್ತಿದ್ದೆವು. ಯಾವುದೇ ಕಾರಣಕ್ಕೆ ಅವರು ಗೋಡೆಯ ಅರ್ಧದಲ್ಲಿ ಕೈ ಚೆಲ್ಲಿದರೆ – ಹಿಂದೆ ಏರಿಕಲ್ಲಿನ ಕಥನದಲ್ಲಿ ನಾನು ಹೇಳಿದಂತೆ, `ಕೊಡಪಾನ’ ಮಾಡಿ ಇಳಿಸುತ್ತಿದ್ದೆವು. ಹೆಚ್ಚಾಗಿ ಸ್ಟಮಕ್ ರ್ಯಾಪ್ಲಿಂಗ್ ಅಲ್ಲದಿದ್ದರೂ `ಗಾಯಾಳು’ವನ್ನು ಇಳಿಸುವ ತಂತ್ರ ಪ್ರದರ್ಶನ ನನ್ನದೇ ಇರುತ್ತಿತ್ತು. ನಾನು ಹೆಚ್ಚಾಗಿ ಸಣ್ಣಾಳು – ಕಿರಣ್ ಕುಲಕರ್ಣಿಯನ್ನೇ ಬೆನ್ನಲ್ಲಿ ಹೊರುತ್ತಿದ್ದೆ. ನಟನಾಚತುರ ಶರತ್ ಕೆಲವೆಡೆಗಳಲ್ಲಿ ಮೊದಲು ಅರ್ಧ ಇಳಿದು, `ಸ್ವಯ ತಪ್ಪುವುದು’ ಇತ್ತು. ಆಗ ನಾನು `ಆಪದ್ರಕ್ಷಕ’ನಂತೆ ಸ್ಟಮಕ್ ರ್‍ಯಾಪ್ಲಿಂಗಿನಲ್ಲಿಳಿದು, ಆತನಿಗೆ ನೀರು ಕುಡಿಸಿ, ನನ್ನ ಬೆನ್ನಿಗೇರಿಸಿಕೊಂಡು ಇಳಿದು ರಂಗೇರಿಸುವುದೂ ಇತ್ತು. ಆನಂದ ಹಿಮ್ಮುಖವಾಗಿಯೂ ಪ್ರಪಾತವನ್ನಿಳಿಯುತ್ತ `ಗಾಯಾಳು’ ಹೊರುವ ಹೊಸತೇ ತಂತ್ರವನ್ನು ಪುತ್ತೂರಿನಲ್ಲಿ ಯಜ್ಞರ ಮೂಲಕವೇ ಮಾಡಿಸಿ ಹೆಚ್ಚಿನ ಆಕರ್ಷಣೆ ಒದಗಿಸಿದ್ದ. ಆದರೆ ಪ್ರದರ್ಶನದ ಕೊನೆಗಾಗುವಾಗ ಗಡಿಬಿಡಿಯಲ್ಲಿ ಸ್ವತಃ ಆನಂದನೇ ಸಣ್ಣ ದೈಹಿಕ ಜಖಂ (ಪಾದ ಉಳುಕಿದ್ದು) ಅನುಭವಿಸಿದ್ದು ಪುತ್ತೂರಿನ ವಿಶೇಷ. ಹೆಚ್ಚಿನದೇನೂ ಆಗದಿದ್ದುದು ಅದೃಷ್ಟ ಎನ್ನಬಹುದು. ಅದು ವೀಕ್ಷಕರಿಗೆ ಏನು ಮಾಡಬಾರದೆಂದು ಎಚ್ಚರಿಸಲು ಒಳ್ಳೆಯ ನಿದರ್ಶನವೂ ಆಯ್ತು! ನನ್ನ ಮದುವೆಗೂ ಮುನ್ನ – ಸುಮಾರು ೧೯೭೭-೭೮ನೇ ವರ್ಷವಿರಬೇಕು, ಅದೊಂದು ಆದಿತ್ಯವಾರದ ರಜೆಯಲ್ಲಿ ನಾನು ಪುತ್ತೂರಿನ ಸಮೀಪದ ಹಳ್ಳಿ – ಆರ್ಯಾಪಿನಲ್ಲಿರುವ ನನ್ನ ಸೋದರ ಮಾವಂದಿರ ಮನೆಗಳಲ್ಲಿದ್ದೆ. ಆಗ ಸಮೀಪದ ಪಾಣಾಜೆಯ ನಿಗೂಢ ಗುಹೆ – ಜಾಂಬ್ರಿಯ ಪ್ರಸ್ತಾಪ ಬಂತು. ಸಾಹಸಿಗೆ ತೆರೆದುಕೊಳ್ಳದ ಪ್ರಾಕೃತಿಕ ನಿಗೂಢ ಇಲ್ಲ, ಪವಾಡ ಸುಳ್ಳು ಎನ್ನುವ ಪೈಕಿಯೇ ನನ್ನವರೆಲ್ಲ. ಹಾಗಾದರೆ ನಾವ್ಯಾಕೆ ಜಾಂಬ್ರಿಯನ್ನು ಶೋಧಿಸಬಾರದೆಂದು ನಾವು ನಾಲ್ಕೈದು ಮಂದಿ ಎರಡು ಸ್ಕೂಟರು, ಬಸ್ಸೇರಿ ಹೋಗಿದ್ದೆವು.

ಅದು ನನ್ನ ಗುಹಾಶೋಧಗಳ ಸರಣಿಗೆ (ಅವನ್ನೋದದವರು ಈಗಲೂ ಇಲ್ಲೇ ಚಿಟಿಕೆ ಹೊಡೆದು ಓದಿಕೊಳ್ಳಬಹುದು) ನಾಂದೀಗೀತೆಯೂ ಆಗಿತ್ತು. ಸಹಜವಾಗಿ ಪರ್ವತಾರೋಹಣ ಸಪ್ತಾಹದ ಪುತ್ತೂರು ಸಭಾ ಕಾರ್ಯಕ್ರಮದಲ್ಲಿ ನಾನು ಜಾಂಬ್ರಿಯಿಂದ ತೊಡಗಿ ಅದುವರೆಗಿನ ಗುಹಾಶೋಧಗಳ ಕಥನವನ್ನೇ ವಿಶೇಷ ಭಾಷಣವಾಗಿ ಕೊಟ್ಟೆ.

ಈ ಹೆಚ್ಚುಗಾರಿಕೆಗಳಿಗೆ ಸಹಜವಾಗಿ ಸಪ್ತಾಹದ ಕೊನೆಯ ಕಲಾಪ – ನೀವೇ ಅನುಭವಿಸಿ, ಇದಕ್ಕೆ ವಿವೇಕಾನಂದ ಕಾಲೇಜಿನಿಂದ ಸಾಕಷ್ಟು ದೊಡ್ಡ ತಂಡವೇ ಬಂದದ್ದಿರಬೇಕು. (ಅಂದಿನ ಎಲ್ಲ ಭಾಗಿಗಳ ಪಟ್ಟಿ ಇಂದು ನನ್ನಲ್ಲುಳಿದಿಲ್ಲ – ಕ್ಷಮಿಸಿ.) ಅವರಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿ ತಾಳ್ತಜೆ ಸುಬ್ರಹ್ಮಣ್ಯ ಭಟ್, ಮುಂದೆ ಬೆಳ್ತಂಗಡಿಯ ಸಹಕಾರೀ ಭೂ ಅಭಿವೃದ್ಧಿ ಬ್ಯಾಂಕ್ ೧೦-೫-೧೯೮೧ರಂದು ಪ್ರಕಟಿಸಿದ ಸ್ಮರಣ ಸಂಚಿಕೆ – ಭರವಸೆ ೧೯೮೧ರಲ್ಲಿ ಪ್ರಕಟಿಸಿದ ಲೇಖನ ಇಂದೂ ನನ್ನ ಮಧುರಸ್ಮೃತಿ ಸಂಗ್ರಹದಲ್ಲಿದೆ. ಅದನ್ನು ಯಥಾವತ್ತು ಈಗ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. (ಅದರ ಜತೆಗೇ ಪ್ರಕಟವಾದ ಸಾಂದರ್ಭಿಕ ಚಿತ್ರಗಳನ್ನೂ ಇಲ್ಲಿ ಬಳಸಿಕೊಂಡಿದ್ದೇನೆ.) ಸುಬ್ರಹ್ಮಣ್ಯ ಖ್ಯಾತ ಯಕ್ಷಗಾನ ಚರಿತ್ರಕಾರ ತಾಳ್ತಜೆ ಕೃಷ್ಣಭಟ್ಟರ ಮಕ್ಕಳಲ್ಲೊಬ್ಬ. ಅಂದು ವಿವೇಕಾನಂದ ಕಾಲೇಜಿನಲ್ಲೇ ಕನ್ನಡ ಅಧ್ಯಾಪಕರಾಗಿದ್ದು, ಮುಂದೆ ಮುಂಬೈ ವಿವಿನಿಲಯದ ಕನ್ನಡ ಪ್ರಾಧ್ಯಾಪಕರಾಗಿ, ಸಾಹಿತಿ ವಿಮರ್ಶಕರಾಗಿ ಪ್ರಸಿದ್ಧರೂ ಆಗಿ, ಸದ್ಯ ಉಪ್ಪಿನಂಗಡಿಯ ಬಳಿ ನಿವೃತ್ತ ಜೀವನ ನಡೆಸುತ್ತಿರುವ ತಾಳ್ತಜೆ ವಸಂತ ಕುಮಾರರ ತಮ್ಮನೂ ಹೌದು. ಸ್ವತಃ ಒಳ್ಳೆಯ ಸಾಹಿತ್ಯಪ್ರೇಮಿಯಾಗಿಯೇ ವಿಕಸನಗೊಂಡ ಸುಬ್ರಹ್ಮಣ್ಯ, ವೃತ್ತಿಯಲ್ಲಿ ಕ್ಯಾಮ್ಕೋ ಅವಲಂಬಿಸಿದ್ದು ಸಾಹಿತ್ಯರಂಗಕ್ಕೆ ಆದ ನಷ್ಟವೇ ಸರಿ ಎನ್ನುವಂತಿದೆ ಈ ಮೊಳಕೆಯ ಸಿರಿ! ಈಗ ಲೇಖನ

ಏರುಗಲ್ಲು! ಏರಿದವರು!?

– ತಾಳ್ತಜೆ ಸುಬ್ರಹ್ಮಣ್ಯ ಭಟ್

೧. ಶಿಖರ ವೈಭವ: ೧೯೮೦ ದಶಂಬರ ೧೪ರ ರವಿವಾರ ಪ್ರಾತಃಕಾಲ. ಬಾಲರವಿಯ ಹೊಂಗಿರಣಗಳು ಪೂರ್ವಾಚಲದಲ್ಲಿ ಮೂಡುತ್ತಿದ್ದವು. ಜಗತ್ತಿನ ನಿದ್ದೆ ದೂರವಾಯಿತು. ಪ್ರಕೃತಿ ತನ್ನ ನಿತ್ಯನೂತನ ವಿಲಕ್ಷಣ ಸೌಂದರ್ಯ ಸೂಸುತ್ತಿತ್ತು. ದಟ್ಟಡವಿಯಲ್ಲಿ ಧೀಮಂತ ದಿಟ್ಟ ಅಡಿ ಇಡುವ `ಆರೋಹಣ ತಂಡ’ ಬೆಟ್ಟವೇರುತ್ತಿತ್ತು. ನಿಸರ್ಗದ ಮಡಿಲಲ್ಲಿ ಪಕ್ಷಿಗಳ ಸುಪ್ರಭಾತಕ್ಕೆ ಉತ್ತರವಾಗಿ, “ಆರೋಹಣಕ್ಕೆ ಜಯವಾಗಲಿ” ಎಂಬ ಘೋಷಣೆ ಕೇಳಿ ಬರುತ್ತಿತ್ತು. ಇನ್ನೂ ಲೋಕಕ್ಕೆ ಬೆಳಕಾಗುವ ಮುನ್ನ, ಜಗವೇಳುವ ಮುನ್ನ, ನಾವು ಏರುಗಲ್ಲಿನ ಶಿರದಲ್ಲಿ ಪಾದಾರ್ಪಣೆ ಮಾಡಿದ್ದೆವು. ಅದು ಸಮುದ್ರಮಟ್ಟದಿಂದ ೩೧೩೭ ಅಡಿ ಎತ್ತರದ ಪ್ರದೇಶ. ಸಂತಸದ ಅತಿಶಯ ವ್ಯಕ್ತವಾಗದ ಸ್ಥಿತಿ, ಭೂ ಸಂಪರ್ಕ ಕಡಿದೆವೋ ಎಂಬ ಭಾವ, ಉದ್ವೇಗ ಉನ್ಮಾದವಾಗದ, ಶಾಂತ ಗಂಭೀರ ಅನಂತ ನೀಲಾಕಾಶ ನೋಡುತ್ತಾ ನಾವು ಮೂಕ ವಿಸ್ಮಿತರಾದೆವು. ಪುಳಕಿತ ನೇತ್ರಗಳು – ರೆಪ್ಪೆಗಳು ಮುಚ್ಚಲೊಪ್ಪವು. ನಿದ್ರಾಹಾರ ತೊರೆದು ದುಡಿದರೂ ದಣಿಯದ ದೇಹ-ಸಿದ್ಧಿಯಾಗಿತ್ತು. ಸಿದ್ಧರಿಗೇ ಸಿದ್ಧವಾದ ಲೋಕ – ವಿಶ್ವಾಮಿತ್ರ ಸೃಷ್ಟಿಯಿರಬೇಕು. ಎಲ್ಲೋ ಕೆಲವೊಂದು ಪ್ರಾಪಂಚಿಕ, ಕ್ರಿಯಾಶೀಲ ಹಸ್ತಗಳು ಕ್ಯಾಮರಾ ಕಣ್ಣು ತೆರೆಸುತ್ತಿದ್ದವು. ನನಗೆ ಮಾತ್ರ ಪಾರಮಾರ್ಥ್ಯಕ್ಕೆ ಹತ್ತಿರವಾದ ಅನುಭವ, ಆನಂದ ವೇದ್ಯವಾಯಿತು. ನಿರಂತರ ನಡಿಗೆಯ ಪ್ರತಿಫಲ, ಅಖಂಡ ಧೈರ್ಯ, ಉತ್ಸಾಹ, ದೇಹಬಲ – ಗುರಿಸೇರುವ ಛಲ, ಶಾಸ್ತ್ರೀಯ ಶಿಲಾರೋಹಣ ತಂತ್ರ, ಧೈರ್ಯಕ್ಕೆ ಜೀವರಕ್ಷಣಾ ತಂತು, ನಾವು ಏರುಗಲ್ಲನ್ನು ಏರುವಂತಾಯಿತು, ಪಕ್ಷಿನೋಟ ಬೀರುವಂತಾಯಿತು, ಆರೋಹಣ ಸಫಲವಾಯಿತು.

`ಆರೋಹಣ ಸಪ್ತಾಹ’ದ ಕೊನೆಯ ಕಾರ್ಯಕ್ರಮ – ಏರುಗಲ್ಲು ಶಿಖರಾರೋಹಣ ಹಾಗೂ ಶಿಲಾರೋಹಣ, ಪರ್ವತಾರೋಹಿಗಳಿಗೆ ಸವಾಲೆಸೆಯುವ ಇದು ಚಾರ್ಮಾಡಿ ಘಟ್ಟದಲ್ಲಿ ಕಲಶವಿಟ್ಟಂತಿದೆ. ಅಲ್ಲಿಯ ದಂತ ಕಥೆಗಳ ಪ್ರಕಾರ ಇದು ಪುರಾಣ ಪ್ರಸಿದ್ಧವಾಗಿದೆ. ಬಹಳ ಎತ್ತರವಾದ ಪರ್ವತದ ಶಿಖರದಲ್ಲಿ ಬೃಹದಾಕಾರದ (ಏರಲು ಕಠಿಣ ಸಾಧ್ಯವಾದ) ಬಂಡೆಯೊಂದು ಭದ್ರವಾಗಿ, ಸ್ಥಿರವಾಗಿ ತಳವೂರಿದೆ. ಇದುವೇ ಏರಬೇಕಾದ `ಏರುಗಲ್ಲು’! ಏರಿದರೆ ವಿಶ್ವ ದರ್ಶನ ಮಾಡಿಸುವ ದೈತ್ಯ ಕಲ್ಲು. `ದೂರದ ಬೆಟ್ಟ ನುಣ್ಣಗೆ’ ಕಂಡರೂ ಅದು ನಿಷ್ಕರುಣೆಯ ಕಲ್ಲು ಹೃದಯ ಎಂಬುದ ಹೋದವನೇ ಬಲ್ಲ. ಕಾಲಕ್ಕೆ ಎಲ್ಲವೂ ಬಾಗುತ್ತದೆ – ಬದಲಾಗುತ್ತದೆ. ಅದಕ್ಕೆ ಏರುಗಲ್ಲೂ ಹೊರತಾಗಿಲ್ಲ. ಅದೂ ಬದುಕುವುದ ಕಲಿತಿರಬೇಕು. ಅದಕ್ಕೆ ಇಲ್ಲಿಂದ ದೂರವಾಗಿ ಎತ್ತರದಿಂದ ಲೋಕ ನೋಡುತ್ತಿದೆಯೇನೋ!?

೨. ನಿಮಗೆ ನೀವೇ ಹೊಣೆ: ಇದು ಆರೋಹಿಗಳಿಗೆ ಕೊಟ್ಟ ಪ್ರಥಮ ಸೂಚನೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ಇದರ ಸಭಾಂಗಣದಲ್ಲಿ ನಾವೆಲ್ಲರೂ ಸಮಾವೇಶಗೊಂಡೆವು. ಸೂರ್ಯಾಸ್ತಮಕ್ಕೆ ಮೊದಲೇ ಕೆಲವೊಂದು ತಾಂತ್ರಿಕ ತರಬೇತಿ ಆಯಿತು. ಶ್ರೀ ಅಶೋಕವರ್ಧನರ (ಅತ್ರಿ ಬುಕ್ ಸೆಂಟರ್, ಮಂಗಳೂರು) ನೇತೃತ್ವ ನಮಗೆ ಭರವಸೆಯನ್ನು ನೀಡಿತು. ನಮ್ಮ ಭಾರ ಕಡಿಮೆಯಾಯಿತು. ಕೆಲವೊಂದು ಭಾಷಣಗಳಾದವು., ವಿವರಣೆ, ವಿಶ್ಲೇಷಣೆ, ವಿಮರ್ಶೆಗಳೆಲ್ಲವೂ ಸಾಗಿ ಸೂಕ್ತ ನಿರ್ದೇಶವಾಯಿತು. ಸಿದ್ಧವನದಲ್ಲಿ ಶುದ್ಧ ಭೋಜನ (ರಾತ್ರಿ) ಮಾಡಿ ಸಿದ್ಧರಾದೆವು, ನಿಯಮಗಳಿಗೆ ಬದ್ಧರಾದೆವು. ರಾತ್ರಿಯ ೯-೩೦ ಬಡಿಯಿತು, ನಾವು ಹೊರಟೆವು. ನಡಿಗೆಯ (Trekking) ಗುರಿಹೊತ್ತ ಪರ್ವತಾರೋಹೀ ತಂಡ ಉಜಿರೆ ತೊರೆಯುತ್ತಾ ಗಂಭೀರವಾಯಿತು. ಎಲ್ಲೋ ಕೆಲವೊಂದು ಭಕ್ತಿಗೀತೆಗಳು, ವೀರಗೀತೆಗಳು, ಘೋಷಣೆಗಳು ಕೇಳಿದರೂ ಹಿತವಾಗಿ ಉತ್ಸಾಹ ಕೊಡುವಂತಿತ್ತು. `ಯತ್ರನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರದೇವತಾ’ – ನಮ್ಮ ತಂಡದಲ್ಲಿ ಕಾಲೇಜು ನಾರಿಯರೂ ಇದ್ದರು. ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದ ಅವರಿಗೆಲ್ಲ ಬೇಗನೇ ಗುರಿ ಸೇರುವ ಬಯಕೆ – ಎಂತಹಾ ಗಂಡೆದೆ. ಕಾರ್ಗತ್ತಲು ಕಣ್ಣು ಚುರುಕಾಯಿತು. ಆರೋಹಿಗಳ ಬೆನ್ನಲ್ಲಿ ಚೀಲವಿತ್ತು. ಕೈಗಳು ರಕ್ಷಣೆಗೆ ಯಾ ಆಧಾರಕ್ಕೆ ಬಿಡುವಾಗಿತ್ತು. ಪ್ರತಿಯೊಬ್ಬರಲ್ಲೂ ಕೆಲವೊಂದು ಆವಶ್ಯಕ ಸಾಮಾಗ್ರಿಗಳಿರಲೇಬೇಕಾಗಿತ್ತು. ಉದಾ: ೨ ಸೆಲ್ಲಿನ ಟಾರ್ಚು, ವಾಟರ್ ಕ್ಯಾರಿಯರ್, ತಟ್ಟೆ, ಲೋಟ, ಟೋಪಿ, ಚೂರಿ ಇತ್ಯಾದಿ. ಬೂಟು ಇಲ್ಲದವ ನಡೆಯುವುದೇ ಅಸಾಧ್ಯ. ನೀರೂ ಅಷ್ಟೇ ಆವಶ್ಯಕ. ಪರ್ವತಗಳಲ್ಲಿ ನೀರಿನ ಅಭಾವವಿರುವುದರಿಂದ, ಪರ್ವತಾರೋಹಣ ಕಾಲದಲ್ಲಿ ಹಸಿವು, ಬಾಯಾರಿಕೆ ಬಹಳ ಆಗುವುದರಿಂದ ನೀರು ಅಪೂರ್ವ ವಸ್ತುವಾಗುವುದು. ಆದ್ದರಿಂದ ನಮಗೆ, “ಸತ್ತರೂ ನೀರು ಕೊಡದಿರಿ. ಕೊಟ್ಟರೆ ನಿಮಗೆ ನೀವೇ ಹೊಣೆ” ಎಂದು ಸ್ಪಷ್ಟ ಸೂಚನೆಯಾಗಿತ್ತು. ಎಲ್ಲರಲ್ಲೂ ೨ ಯಾ ೩ ಲೀ ನೀರು ಶೇಖರವಿತ್ತು. ನಡೆಯುತ್ತಾ ನೀರು ಕುಡಿಯಲಾಗದು, ಕುಡಿಯಬಾರದು! ಕಾಲ ಸಾಗುತ್ತಿದ್ದಂತೇ ಕಾಲು ಸಾಗುತ್ತಿತ್ತು. ಕೆಲವರ ಕೈಲಿ ತಾಳವಿತ್ತು.

೩. ನಡೆಮುಂದೆ ನಡೆಮುಂದೆ: ಮನುಷ್ಯನ ತಾಳ್ಮೆಗೂ ಒಂದು ಮಿತಿಯಿದೆ. ಮಾತೂ ಅಷ್ಟೆ. ಸಾಧನೆಯಲ್ಲೂ ಸದಾನಂದದಲ್ಲೂ ಮೌನವಿರುತ್ತದೆ. ಕಳೆದ ಮೀಟರು (ಮೈಲುಗಳು) ಗಂಟೆಗೆ ಮೀರಿದಾಗ ನಡೆಯುತ್ತಲೇ ದಣಿದ ದೇಹ – ಸಮಾಜಜೀವಿಯಾದ, ನಾಡಾಡಿಯಾದ ನಾವು ಕಾಡು ಕಂಡಾಗ ಗಂಭೀರರಾದೆವು. ನಮ್ಮವರ ಸೀಮಿತ ಪರಿಧಿಯಲ್ಲಿ ವನವಾಸಕ್ಕೆ ಹೊರಟವರು – ಮುಂದೆ ಮುಂದೆ ನಡೆಯುತ್ತಿದ್ದರು. `ತಮಸೋಮಾ ಜ್ಯೋತಿರ್ಗಮಯ’ ಬೆಳಕನ್ನು ಹುಡುಕುತ್ತಾ ಕಾರ್ಗತ್ತಲನ್ನು ದಾಟುತ್ತಿದ್ದೆವು. ನಮ್ಮದು ರಾಜಮಾರ್ಗ. ನಾವೇನೂ ಹೊಸದಾರಿ ಕಂಡುಹಿಡಿದವರಲ್ಲ. ಹಳೆಯ, ಸವೆದ ದಾರಿಯಲ್ಲಿ ಹೋಗುತ್ತಿದ್ದೆವು. ಸುಮಾರು ಮಧ್ಯರಾತ್ರಿ ಕಳೆದಿರಬಹುದು, ಚಾರ್ಮಾಡಿ ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಅಪವಾದವೆಂಬಂತೆ ಪ್ರಕಾಶಮಾನವಾದ ಎರಡು ಲೈಟುಗಳು ಫಕ್ಕನೆ ಒಂದು ತಿರುವಿನಲ್ಲಿ ಬೆಳಗಿದವು. ಅನಿರೀಕ್ಷಿತ ಘಟನೆ ಕುತೂಹಲಕಾರಿಯಾಗಿತ್ತು. ಅದು ಮೂರು ನಾಲ್ಕು ಮಂದಿ ಪಯಣಿಸುತ್ತಿದ್ದ ಒಂದು ಜೀಪು. ನಮ್ಮ ತಂಡದಲ್ಲಿ `ಶ್ರೀ ಯಜ್ಞ’ (ಮಂಗಳೂರು) ಅವರು ಮುಂದಾಳಾಗಿದ್ದವರು. ಅವರದು ಆಕರ್ಷಕ ವ್ಯಕ್ತಿತ್ವ. ಸಾಣೆ ತಲೆಯ ಅವರನ್ನು ಯಾರೂ ಕೇಳುವಂತಿತ್ತು. ಹಾಗೇ ನಿಂದ ವಾಹನವೂ ಯಜ್ಞರನ್ನು ನಿಲ್ಲಿಸಿತ್ತು. ಏನೋ ಮಾತುಗಳಾದ ಬಳಿಕ ಯಜ್ಞರು ವಿಷಯ ಪ್ರಚುರಪಡಿಸಿದರು. ಜೀಪು ಹೊರಟುಹೋಗಿತ್ತು, ನಿರಾಶೆಯಾಯಿತು! ಅದರಲ್ಲಿದ್ದವರು ಮಾನಸಿಕ ಸ್ಥಿರತೆ ಕಳೆದುಕೊಂಡವರು, ಪಾನಮತ್ತರು, ಗೂಂಡಾಗಳು. ಯುದ್ಧಕ್ಕೆ ಸವಾಲೆಸೆದಿದ್ದರು ಎಂದು ತಿಳಿಯಿತು. ಎಂಥಾ ಧೈರ್ಯ! ನಮ್ಮಂಥ ಕೆಲವು ಕರಾಟೆ ಪಟುಗಳಿಗೆ ಒದಗುತ್ತಿದ್ದ ಸದವಕಾಶ ತಪ್ಪಿಹೋಗಿತ್ತು. ಯಜ್ಞರ ಸಮಯಪ್ರಜ್ಞೆ, ಮುಂದಾಲೋಚನೆ ಎಲ್ಲವನ್ನೂ ನಿವಾರಿಸಿತ್ತು. ಅವರ ಪ್ರಖರ ಕ್ಯಾಮರಾ ಕಣ್ಣುಗಳು ಅಲ್ಲಲ್ಲಿ ನಿಸರ್ಗವನ್ನು ವೀಕ್ಷಿಸಲು ಹವಣಿಸುತ್ತಿತ್ತು. ಈಗ ಚಾರ್ಮಾಡಿಯ ಘಟ್ಟ. ಇಲ್ಲಿ ರಸ್ತೆ ಬಹಳ ಬಡವಾಗಿ, ಬಳುಕಾಗಿ ಹಾವಿನ ಹೆಜ್ಜೆಯಾಗಿತ್ತು. ಹುಣ್ಣಿಮೆಗೆ ಇನ್ನೂ ಒಂದು ವಾರವಿತ್ತು. ಚಂದ್ರನ ರೂಪ ಬದಲಾಗುತ್ತಿದ್ದ ಕಾಲ – ಬೆಳಕು ಮಂಕಾಗಿತ್ತು. ಇಕ್ಕೆಡೆಯಲ್ಲಿ ಬೆಳೆದಿದ್ದ ಮಹಾನ್ ವೃಕ್ಷಗಳು ತಮ್ಮ ಅಸ್ಥಿತ್ವದ ಮಹತ್ವವನ್ನು ವ್ಯಕ್ತಮಾಡುತ್ತಿದ್ದವು. ನಿಸರ್ಗವು ಹೊರಡಿಸುವ ಸದ್ದುಗಳು, ಮರದ ತಿಕ್ಕಾಟ, ಗಾಳಿ ಬೀಸಿದಾಗ ಪ್ರಾಣಿಗಳು ಊಳಿಡುವುದು ಭಯವುಳ್ಳವರಿಗೆ, ಪಟ್ಟಣಿಗರಿಗೆ ಭಯಂಕರ ಸತ್ಯಗಳಾಗಿದ್ದವು. ಇಂಥ ಕೆಲವು ಅನುಭವ ಹಗಲು ಪಯಣಿಸಿದರೂ ದೊರಕದು. ಘಟ್ಟದ ೮ನೇ ಹಿಮ್ಮುರಿ ತಿರುವು ಕಳೆಯಿತು. ಸುಮಾರು ಮುನ್ನೂರು ಗಜ ನಡೆದಾಗ ಮತ್ತೊಮ್ಮೆ ನಿಲುಗಡೆಯ ಸೂಚನೆಯಾಯಿತು. ಎಲ್ಲರಿಗೂ ಕುತೂಹಲ ಕೆರಳಿತ್ತು.

೪. ಶಿಬಿರ ಹೂಡಿದೆವು: ಕಿರಣ್ ಕುಲಕರ್ಣಿ – ಹಿಮಾಲಯ ಏರಿದವರು, ಆ ರಂಗದಲ್ಲಿ ಅನುಭವಿಗಳು. ಶ್ರೇಷ್ಠ ದಿಗ್ದರ್ಶಕರಲ್ಲೊಬ್ಬರಾದ ಅವರು ಐದು ಮಿನಿಟು ವಿಶ್ರಾಂತಿಯನ್ನು ಸಾರಿದರು. ಎಲ್ಲರಲ್ಲಿದ್ದ ಪ್ರಾಣಿ ಭಯ ದೂರವಾಯಿತು – ಸಮಾಧಾನವಾಯಿತು. ಕುಲಕರ್ಣಿಯವರ ಸಮಯೋಚಿತ ಕೃಪೆಗೆ, ದಣಿದು ಬಳಲಿದ ಆರೋಹಣ ತಂಡ ಮನಸಾ ಕೃತಜ್ಞತೆ ಸೂಚಿಸಿತು. ಅಲ್ಲಿ ತಂಡಕ್ಕೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಲಾಯಿತು. ನಿಸರ್ಗಕ್ಕೆ ತನ್ನದೇ ಆದ ಕೆಲವು ನಿಯಮಗಳಿವೆ. ಅದುವೇ ಅದರ ಸ್ವಭಾವಗಳಾಗಿವೆ. ಅದಕ್ಕೆ ವ್ಯತಿರಿಕ್ತವಾದರೆ ಅದು ಸ್ವಲ್ಪವೂ ಸಹಿಸದು. ಅದು ವನ್ಯಜೀವಿಗಳ ವಾಸಸ್ಥಾನ. ಅವುಗಳಲ್ಲು ಒಂದು ಸಾಮಾಜಿಕ ವ್ಯವಸ್ಥೆ, ಪದ್ಧತಿ ಇದೆ. ಕಾಡಿನಲ್ಲಿ ಹೋಗುವಾಗ ಇವಕ್ಕೆಲ್ಲ ಹೊಂದಿಕೊಂಡು ತಗ್ಗಿ, ಬಗ್ಗಿ, ಇಳಿದು, ಜಿಗಿದು ಹೋಗುವುದನ್ನು ಕಲಿಯಬೇಕು. ಅದೂ ಒಂದು ಕಲೆ. ನಾವೆಲ್ಲ ಬೇಟೆಗೆ ಬಂದವರಲ್ಲ ತಾನೆ! Search lightನಂತೆ ನಮ್ಮ ಟಾರ್ಚುಗಳ ಪ್ರಭೆಯನ್ನು ಸುತ್ತ ಬೀರಬಾರದೆಂದೂ ನಡಿಗೆಯು ಅತಿ ಜಾಗರೂಕತೆಯಿಂದಲೂ ಮೌನದಿಂದಲೂ ಸಾಗಬೇಕೆಂದು ಸೂಚನೆಯಾಯಿತು. ಶಾಂತಿಗೆ ಭಂಗ ತರುವುದು ಮಹಾ ಪಾಪವೂ ಅಪಾಯವೂ ಹೌದು. ಸಮಯವಾಯಿತು. ಯಾರೂ ಕದಲಲೊಲ್ಲರು, ಕುಳಿತವರಿಗೆ ಕಾಲು ಬಾರದು, ಮಲಗಿದವರಿಗೆ ತಲೆ ಎತ್ತಲಾಗದು, ಹಸ್ತ ಆನಿಸಿದವನಿಗೆ ಹಸ್ತ ಬಾರದು. ಇದೊಂದು ವಿಲಕ್ಷಣ ಸ್ಥಿತಿ. ಈ ತಂಡದಲ್ಲಿದ್ದ ನನ್ನ ಎನ್ಸಿಸಿ ಮಿತ್ರರೂ ಇದಕ್ಕೆ ಹೊರತಲ್ಲ. ಪಂಚತಂತ್ರವೋ ಚತುರೋಪಾಯವೋ ಇಲ್ಲಿ ಫಲಕಾರಿಯಾಗವು. ಸಮವಸ್ತ್ರವಿದ್ದರೆ ಅಧಿಕಾರವಾಣಿಯಾದರೂ ಚಲಾಯಿಸಬಹುದಿತ್ತು. ಮತ್ತೆ ನಮ್ಮವರ ಹೊರಡಿಸಲು ನನಗೆ `ಹೆತ್ತ ತಾಯಿಗೂ ಆಗದ ಕಷ್ಟ’ ಆಯಿತು. ಇನ್ನು ಪೂರ್ಣ ನಾವೇ ಮಾಡಬೇಕಾಗಿದ್ದ ಕಾಡುದಾರಿ! ಒಬ್ಬರ ಹಿಂದೊಬ್ಬರು, ಕಾಲಡಿಗೆ ಹರಿವ ಬೆಳಕು, ಮೌನವಾಗಿ ಸಾಗುವ ಬೂಟುಕಾಲುಗಳು. ದಂಡಯಾತ್ರೆ ಸುಮಾರು ೫ ತಾಸುಗಳ ನಿರಂತರ, ತೀವ್ರ ನಡಿಗೆಯ ಬಳಿಕ ಈಗ ಕಾಡಲ್ಲಿ ಕಾಲುಗಳು ನೆಲೆ ಹುಡುಕುತ್ತಿದ್ದವು. ಮಹತ್ತರವಾದುದುದು ಯಾವುದೂ ಸುಲಭಪ್ರದವಲ್ಲ – ಸಾಧನೆ ಬೇಕು. ಬುದ್ಧನಿಗೆ ಜ್ಞಾನ ಉದಯಿಸಿದ ವೃಕ್ಷಗಳೇ ಇರಬೇಕು – ಸುತ್ತಲೂ ನೆಲೆಯಾಗಿದ್ದು ಆಕಾಶ ಚುಂಬಿಸುತ್ತಿತ್ತು. ಎಲ್ಲರಿಗೂ ಜ್ಞಾನೋದಯವಾಯಿತು. ಆರೋಹಣ ತಂಡ ಬೆಳಕು ಕಂಡಿತು. ಮರವೊಂದು ಹೊತ್ತಿ ಉರಿದು ಕೆಂಡದ ಕಾಂಡವಾಗಿತ್ತು. ಚಳಿಯೂ, ಕೀಟಗಳೂ ದೂರ ಸಾಗಿದ್ದವು. ನಾವು ಅಲ್ಲಿ ಶಿಬಿರ ಹೂಡಿದೆವು. ನಿಸರ್ಗದ ಮಡಿಲಲ್ಲಿ ಮಲಗಿದೆವು.

೫. ನಿದ್ದೆಯೇ ಬಾರದು: ಬ್ರಾಹ್ಮೀಕಾಲ – ಮೂರು ಗಂಟೆಯ ಸಮಯ. ಗುಡ್ ನೈಟ್ ಹೇಳುವುದಕ್ಕೆ ಮುನ್ನ ಅಶೋಕವರ್ಧನರು ತಮ್ಮ ಸ್ವಹಸ್ತದಿಂದ ಬಿಸ್ಕೀಟು, ಬಿಸಿಬಿಸಿ ಚಹಾ ವಿತರಣೆ ಮಾಡಿ ಆರೋಹಿಗಳ ಹಸಿವು, ಆಸರುಗಳನ್ನು ಸ್ವಲ್ಪ ನೀಗಿಸಿದರು. ಎಲ್ಲರೂ ೫ ಗಂಟೆಗೆ ಏಳಬೇಕಾಗಿತ್ತು. ಕೇವಲ ಎರಡು ತಾಸುಗಳ ವಿರಾಮ ಮಾತ್ರ ಲಭ್ಯ. ಮರುದಿನ ಸೂರ್ಯೋದಯವಾಗೆ ಏರುಗಲ್ಲು ಏರುವುದು ಆಗಬೇಕಾಗಿತ್ತು. ಯಾರಿಗೂ ನಿದ್ದೆಯೇ ಬಾರದು. ಒಂದೆಡೆಯಿಂದ ಕಾಡಿನ ತಂಪುಗಾಳಿ ಬೀಸಿದರೆ, ಒಂದೆಡೆಯಿಂದ ಅಗ್ನಿಕಾಂಡ ತನ್ನ ರೌದ್ರಾಕಾರವನ್ನು ತೋರಿ ಉರಿಯಾಗಿ ಬಿಸಿ ಉಸಿರು ಬಿಡುತ್ತಿತ್ತು. ಈ ಹವಾ ನಿಯಂತ್ರಣ ವ್ಯವಸ್ಥೆ ಇನ್ನೆಲ್ಲಿ ಸಾಧ್ಯ. ಎಲ್ಲರೂ ಸೌಂದರ್ಯ ಪ್ರಿಯರು. ಎಲ್ಲರಲ್ಲೂ aesthetic sense ಕಂಡು ಬರುತ್ತಿತ್ತು. ಎಲ್ಲರೂ ಬಂಡೆಯ ಮೇಲೋ ಮರದ ಬೇರುಗಳ ಸಂದಿಯಲ್ಲೋ ತರಗೆಲೆಯ ಮೇಲೋ ತಗ್ಗಿನಲ್ಲೋ ದಿನ್ನೆಯಲ್ಲೋ ಮಲಗಿದ್ದರು. ಯಾರಿಗೂ ಯಾವುದೇ ರಕ್ಷಣೆಯಿಲ್ಲ. ಯಾವ ಕ್ಷಣಕ್ಕೂ ವಿಷ ಜಂತುಗಳು ಬರಬಹುದು. ಕಾಡಾನೆ, ಕಾಟಿ, ಭಯಂಕರ ಆಗುವ ಸಾಧ್ಯತೆಯೂ ಇದೆ. ಇವೆಲ್ಲದರ ನೆನಪಾಗಿ ಪ್ರಜ್ಞೆ ಮರುಕಳಿಸಿದಾಗ ನಾಸ್ತಿಕರೂ ಆಸ್ತಿಕರಾದರು. `ಹರೇ ರಾಮ’, `ಸ್ವಾಮೀ ಶರಣಂ’, `ರಾಘವೇಂದ್ರ’ ಜಪಮಾಡಿದವರಿದ್ದಾರೆ. ಬಹುಶಃ ಸಾಯಿಬಾಬರು ಮಾತ್ರ ಅಲ್ಲಿ ಬಳಕೆಯಾಗಿಲ್ಲ. ಇನ್ನೇನು ರೆಪ್ಪೆ ಮುಚ್ಚಿದೆವೋ ಇಲ್ಲವೋ ಏಳುವುದಕ್ಕೆ ಸೂಚನೆಯಾಯಿತು. ಸದ್ಯಕ್ಕೆ `ಕರ ಮೂಲೇತು ಗೋವಿಂದ ಪ್ರಭಾತೇ ಕರದರುಶನಂ’ – ಎಲ್ಲವೂ ಸಹಜವಾಗಿತ್ತು. ಆದರೆ ಪ್ರಕೃತಿಯಲ್ಲೂ ಪುರುಷರಲ್ಲೂ ಏನೋ ಒಂದು ಬದಲಾವಣೆ. ಶಿಬಿರಾಗ್ನಿಯು ಇನ್ನೂ ಝಳಪಿಸುತ್ತಿತ್ತು. ಅಲ್ಲಿಂದ ಉತ್ತರಕ್ಕೆ ಸುಮಾರು ೨೦೦ ಗಜ ದೂರದಲ್ಲಿ ನೀರಿನ ಝರಿ ಇದೆಯೆಂದು ಯಾರೋ ಪತ್ತೆ ಹಚ್ಚಿದರು. ಅನನ್ಯ ವನರಾಶಿಗಳೆಡೆಯಲ್ಲಿ ನಿತ್ಯಾಹ್ನಿಕ, ಪ್ರಾತರ್ವಿಧಿಗಳನ್ನೆಲ್ಲ ಪೂರೈಸಿ, ಶುದ್ಧವಾದ ನೀರನ್ನೇ ಕ್ಯಾನುಗಳಲ್ಲು ತುಂಬಿಸಿಕೊಂಡೆವು. ಅಶೋಕವರ್ಧನರು ಶಿಬಿರಾಗ್ನಿಯ ಸಮೀಪದಲ್ಲೆ ಒಲೆ ಹೂಡಿ ಚಹಾ ಸಿದ್ಧಗೊಳಿಸಿದರು. ಅವಲಕ್ಕಿ, ಬಾಳೆಹಣ್ಣುಗಳು ಬೆಳಗ್ಗಿನ ಉಪಾಹಾರವೂ ಆಯಿತು. ಎಲ್ಲರೂ ತಮ್ಮ ಸರಂಜಾಮುಗಳನ್ನು ಗಟ್ಟಿಯಾಗಿ ಬಂಧಿಸಿ, ಬೆನ್ನೇರಿಸಿಕೊಂಡರು. ಪಶ್ಚಿಮ ದಿಕ್ಕಿನಲ್ಲಿ ಭಯಂಕರ ಕಾಡು. ಅಡಿ ಇಡುವುದು ಅಸಾಧ್ಯವಾಗಿತ್ತು. ಆದರೆ ನಾವು ಹೋಗಬೇಕಾಗಿದ್ದ ದಕ್ಷಿಣ ದಿಕ್ಕಿನಲ್ಲಿ ಕಣಿವೆಯ ದಿಬ್ಬದಿಂದ ಮುಂದಕ್ಕೆ ಸುಮಾರು ಮೂರು ಮೈಲಿ ದೂರದವರೆಗೆ ಪರ್ವತದ ಇಳಿಜಾರು ತಪ್ಪಲಿನಲ್ಲಿ ಕುರುಚಲು ಮೆಳೆಗಳು ದಟ್ಟವಾಗಿ ಬೆಳೆದಿದ್ದವು. ಆಗ ಮತ್ತೊಮ್ಮೆ ಘೋಷಣೆ “ಆರೋಹಣಕ್ಕೆ ಜಯವಾಗಲಿ!”

೬. ಏರುಗಲ್ಲು ಏರಿದೆವು: ಪ್ರಾತಃಕಾಲ ಅರಣ್ಯದಲ್ಲಿ ದೊರಕುವ ಶಾಂತಿ, ಸಂತೋಷಗಳು ಇನ್ನೆಲ್ಲೂ ದೊರಕದು. ಅದಕ್ಕೇ ತಪಸಿಗಳು ವನವಾಸಿಗಳಾಗುತ್ತಿದ್ದಿರಬೇಕು. ಪರ್ವತದ ತಪ್ಪಲಿನ ಅಡವಿಯಲ್ಲೂ ಬೃಹದಾಕಾರದ ಬಂಡೆಗಳು. ಇವೆಲ್ಲ ಏರುಗಲ್ಲಿನ ಸಂತಾನವಿರಬೇಕು. ಪರ್ವತ ತುಂಬಾ ಕಡಿದಾಗಿತ್ತು. ಬೀಸುವ ತಂಗಾಳಿಗೆ ಮೈ ಪುಳಕಿತವಾದರೆ, ಪಕ್ಷಿಗಳ ಕಲರವವು ಕಿವಿಗೊಡುವಂತಿತ್ತು. ಕೆಲವೆಡೆ ಪ್ರಕೃತಿ ತನ್ನ ವಿಲಕ್ಷಣ ಸೌಂದರ್ಯ ಬೀರಿದರೆ, ಇನ್ನು ಕೆಲವೆಡೆ ತನ್ನ ಭಯಂಕರ ರೂಪವನ್ನು ತೋರಿಸಿ ಭಯ ಹುಟ್ಟಿಸುತ್ತಿತ್ತು. ಇದು ಹಿಮಾಲಯವಲ್ಲವಾದರೂ ಅಡಿ ತಪ್ಪಿದರೆ ಅನಂತದಲ್ಲೊಂದಾಗಿ ವಿಳಾಸವಿಲ್ಲದೆ ಹೋಗಬಹುದು. ಎಡವಿ ಬಿದ್ದು, ಎದ್ದು ನಡೆಯುವುದು ಸಾಮಾನ್ಯ. ಮುಟ್ಟಿದರೆ `ಶಾಶ್ವತ ಉರಿ’ ಏಳಿಸುವ `ತಣ್ಣೀರು ಗುಗ್ಗು’ ಕೆಲವರಿಗೆ ದರ್ಶನವಾದರೆ ಕೆಲವರಿಗೆ ಸಹಾಯಕ್ಕೆ ಉರಿ ಹಸ್ತ ಚಾಚಿತ್ತು. ಈ ಸಸ್ಯದ ಎಲೆಗಳು ಸ್ಪರ್ಶವಾದ ಬಳಿಕ ಸುಮಾರು ಹದಿನೈದು ದಿನಗಳವರೆಗೆ ನೀರು ಮುಟ್ಟಿದರೆ ಭಯಂಕರ ಉರಿ! ತಣ್ಣೀರು ಮುಟ್ಟಿದರೆ ಸಹಿಸಲಸಾಧ್ಯ! ಕೆಲವೆಡೆ ಬಂಡೆ ಏರಿ ಹಾರಿದರೆ, ಇನ್ನು ಕೆಲವೆಡೆ ಎರಡು ಹಸ್ತಗಳೂ ನಡಿಗೆಗೆ ಬೇಕಾಗುತ್ತಿತ್ತು. ಕೆಲವೆಡೆ ದಟ್ಟ ಪೊದರುಗಳು, ಮುಳ್ಳುಗಳು ನಡಿಗೆಗೆ ತಡೆ ಹಾಕಿದರೆ, ಇನ್ನು ಕೆಲವೆಡೆ ಮರದ ಬೇರುಗಳು ಆಧಾರವಾಗುತ್ತಿದ್ದವು. ಬಹಳ ಎತ್ತರಕ್ಕೆ ಏರುತ್ತಿದ್ದ ತಂಡ ಬಹಳ ನಿಧಾನವಾಗಿ ಒಂದೇ ಸಾಲಿನಲ್ಲಿ ಹೋಗುತ್ತಿತ್ತು. ಕೆಲವರಿಗೆ ಕೆಲವು ವಿಷಜಂತುಗಳ ದರ್ಶನವಾದರೂ ಧೈರ್ಯಗೆಡಲಿಲ್ಲ. ಹಾಗೇ ಏರುತ್ತ ಏರುತ್ತಾ ಸಾಗಿದಾಗ ಒಂದೆಡೆ ಮರಗಳು ಸ್ವಲ್ಪ ವಿರಳವಾಗಿದ್ದು, ಅಲ್ಲಿಂದ ೬೦ ಡಿಗ್ರಿ ಮೇಲೆ ನೋಡಿದಾಗ ಸುಮಾರು ಇನ್ನೂರು ಗಜ ಮುಂದೆ ಭಯಂಕರಾಕಾರದ ಬಂಡೆಯೇ ಪರ್ವತವಾಗಿ, ಸ್ಥಿರವಾಗಿ ನೆಲೆಯಾದುದು ಕಂಡು ಬಂತು. ಅದೇ ಏರುಗಲ್ಲು. ಬಾಲರವಿಯ ಹೊಂಗಿರಣ ಪೂರ್ವದಿಶೆಯಲ್ಲಿ ಕಾಣುತ್ತಿತ್ತು. ಶಾಸ್ತ್ರೀಯ ಶಿಲಾರೋಹಣ ತಂತ್ರವನ್ನು ತಿಳಿಯದ ನಾವು, ಸೊಂಟಕ್ಕೆ ಜೀವ ರಕ್ಷಣಾ ತಂತುವನ್ನು ಬಿಗಿಸಿಕೊಂಡು ಏರಿದೆವು. ಆ ಹೆಬ್ಬಂಡೆಯ ಮೇಲೂ ಒಂದು ಗುಹಾಶ್ರಯ. ಸುಮಾರು ನೂರೈವತ್ತು ಮಂದಿ ವಿಶ್ರಮಿಸಬಹುದು. ನಮ್ಮ ಹೆಬ್ಬಯಕೆ ಈಡೇರಿತ್ತು. ನಾವು ಒಂದು ಹಗಲಿಡೀ ಅಲ್ಲಿ ವಿಶ್ರಮಿಸಿದೆವು. ತಂದಿದ್ದ ಚಪಾತಿ, ಬ್ರೆಡ್ಡು, ಹಣ್ಣುಗಳು ಹೊಟ್ಟೆ ಸೇರಿದವು. ಬಹುಶಃ ಇನ್ನೊಮ್ಮೆ ಏರುವುದಕ್ಕೊಂದು ಅವಕಾಶ ಇಲ್ಲದೇ ಹೋಗಬಹುದು. ಕೆಲವರು ಶಾಸನ ಬರೆದರೆ, ಕೆಲವರು ಕ್ಯಾಮರಾಕ್ಕೆ ಮುಖವಿಟ್ಟರು. ಇನ್ನು ಸೂರ್ಯ ಪಶ್ಚಿಮಗಾಮಿಯಾಗುತ್ತಿದ್ದ. ನಾವು ಏರುಗಲ್ಲಿಗೆ ಗುಡ್ ಬೈ ಹೇಳಿದೆವು. ಸಾಹಸಕ್ಕೊಂದು ನೆಲೆ – ಏರುಗಲ್ಲು ನೀವೂ ಏರಬನ್ನಿ!

(ಮುಂದುವರಿಯಲಿದೆ)