ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ
ಅಧ್ಯಾಯ – ೧೩

ಕಾಲೇಜ್ ಸೇರುವ ಕಾಲಕ್ಕೆ ಮುಂದಿನ ಅಭ್ಯಾಸದ ವಿಷಯದ ಆಯ್ಕೆ ತುಸು ಕಷ್ಟವೇ ಆಯ್ತು. ಚರಿತ್ರೆ ಇಷ್ಟವಿದ್ದಂತೆ ಮೆಡಿಕಲ್ ಕಲಿಯುವ ಹಂಬಲವೂ ಇತ್ತು. ಆ ದಿನಗಳಲ್ಲಿ ಓದಿದ ‘ಹಂಬಲ’, ‘ಕೇದಿಗೆ ವನ’ ಕೃತಿಗಳು ಮೆಡಿಕಲ್ ಕಾಲೇಜ್‌ನ ಆಕರ್ಷಣೆಯೊಡ್ಡಿದ್ದವು. ಮೆಡಿಕಲ್ ಒಂದು ನೋಬ್‌ಲ್ ವೃತ್ತಿ ಎಂಬ ಭಾವನೆ ಬಾಲ್ಯದಿಂದಲೂ ಬೇರೂರಿತ್ತು. ಹಾಗಾಗಿ ವಿಜ್ಞಾನ ವಿಷಯವನ್ನೇ ಆರಿಸಿಕೊಂಡೆ.

[ಸೇಂಟ್ ಆಗ್ನಿಸ್ ಕಾಲೇಜ್ ಗೆಳತಿಯರು] ಕಾಲೇಜ್‌ನಲ್ಲಿ ನಮ್ಮ ಬಾಟನಿ ಮಿಸ್ ಹಾಗೂ ವಿಭಾಗ ಮುಖ್ಯಸ್ಥೆ ಮಿಸ್. ಲೀಲಾ ರಾವ್ ನನ್ನ ಅಚ್ಚುಮೆಚ್ಚಿನ ಪ್ರಾಧ್ಯಾಪಕಿಯಾದರು. ನಾನೂ ಅವರ ಮೆಚ್ಚಿನ ಶಿಷ್ಯಳಾದೆ. ಕೆಮಿಸ್ಟ್ರಿಯ ಮೋಹನ್ ಶೆಟ್ಟಿ, ಕನ್ನಡದ ಡಾ. ಪಾಲೆತ್ತಾಡಿ ಗೋಪಾಲಕೃಷ್ಣ ಭಟ್ಟರು, ಉಪಪಠ್ಯ ಶಾಕುಂತಲವನ್ನು ಕಲಿಸಿದ ಸಿಸ್ಟರ್ – ನಮ್ಮಮ್ಮನ ಗೆಳತಿ ಹಾಗೂ ಸಹಪಾಠಿ ಆಗಿದ್ದ ಸಿಸ್ಟರ್ ಇವಾಂಜಲಿಸ್ಟಾ, ಇಂಗ್ಲಿಷ್‌ನ ಮಿಸ್ ರಾಧಾ, ಸಿಸ್ಟರ್ ನೋಯೆಲಿನ್, ಸಿಸ್ಟರ್ ನೋಯೆಲ್, ಜ಼ುವಾಲಜಿ ಮಿಸ್ ಹಾಗೂ ರೀಡರ್ ಮಿಸ್ ಲಲಿತಾ ವೇಲಾಯುಧನ್ , ಭಾಸ್ಕರ್ ಶೆಟ್ಟಿ, ಕೊನೆಯ ವರ್ಷ ಬಾಟನಿ ಮಿಸ್ ಆಗಿ ಬಂದ ಮಿಸ್ ಉಷಾ ನಳಿನಿ ಎಲ್ಲರೂ ನನ್ನ ಮನದಲ್ಲಿ ಅಚ್ಚೊತ್ತಿ ನಿಂತಿದ್ದಾರೆ. ಕನ್ನಡದಂತೆಯೇ ನೀತಿಬೋಧೆ ವಿಷಯದಲ್ಲೂ ನಾನು ಸಿಸ್ಟರ್ ಇವಾಂಜಲಿಸ್ಟಾಗೆ ಅಚ್ಚುಮೆಚ್ಚು. ನೀತಿಬೋಧೆ ಪರೀಕ್ಷೆಯಲ್ಲಿ ಪುಟಗಟ್ಟಲೆ ಉತ್ತರ ಬರೆಯುತ್ತಾ ಸಾಗುವ ನನ್ನ ಮೇಲೆ ಗೆಳತಿಯರಿಗೆ ಅಸಹನೆ ಎನಿಸುತ್ತಿತ್ತು. ತಮ್ಮ ಪೇಪರ್ ಒಪ್ಪಿಸಲು ಎದ್ದು ಹೋಗುವಾಗ ತನ್ಮಯಳಾಗಿ ಬರೆಯುತ್ತಿದ್ದ ನನ್ನ ಕೈ ಚಿವುಟಿಯೇ ಅವರು ಹೋಗುತ್ತಿದ್ದರು. ಪ್ರತಿವರ್ಷ ಕಾಲೇಜ್ ದಿನಾಚರಣೆಯಲ್ಲಿ ನೀತಿಬೋಧೆಯ ಪ್ರೈಜ್ ಕೂಡಾ ನನ್ನ ಪಾಲಿಗಿತ್ತು.

ಸಿಸ್ಟರ್ ಇವಾಂಜಲಿಸ್ಟಾ, ಶಾಕುಂತಲವನ್ನು ಶಬ್ದಾರ್ಥ ನೀಡುತ್ತಾ ಚೆನ್ನಾಗಿಯೇ ಪಾಠ ಮಾಡಿದರೂ, ನೀತಿಬೋಧೆ ಕ್ಲಾಸ್‌ನಲ್ಲಿ ಸಿಸ್ಟರ್ ಬಾಯಿಂದ ಹೊರಡುತ್ತಿದ್ದ ನೀತಿಬೋಧಕ ನುಡಿಗಳ ಭಾರದಡಿ ಶಾಕುಂತಲೆ ನಲುಗಿ ತನ್ನ ಸೌಂದರ್ಯವನ್ನು ಕಳಕೊಂಡು ಬಿಡುತ್ತಿದ್ದಳು. ಶಕುಂತಲೆ ಕಾಲುಜಾರಿದ ಬಗ್ಗೆ ಶಿಷ್ಯೆಯರಿಗೆ ಎಚ್ಚರಿಕೆಯ ನುಡಿಗಳು ಪುಂಖಾನುಪುಂಖವಾಗಿ ಸಿಸ್ಟರ್ ಬಾಯಿಂದ ಹೊರಟು ಕೇಳುವ ನಮಗೆ ಅಸಹನೀಯವಾಗಿ ಅಪ್ರಿಯವೆನಿಸುತ್ತಿದ್ದವು. ಒಂದಿನ ನಾವೆಲ್ಲರೂ ಸೇರಿ ಸಿಸ್ಟರ ಕ್ಲಾಸ್ ಬಾಯ್‌ಕಾಟ್ ಮಾಡಬೇಕೆಂದು ನಿರ್ಧರಿಸಿ, ಹೊರಗೆ ಬಯಲಲ್ಲಿ ಕುಳಿತು, ಮತ್ತದು ಸಾಗದೆ ಕ್ಲಾಸಿಗೆ ಮರಳಿದ್ದೆವು.

ಕನ್ನಡ ಉತ್ತರ ಪತ್ರಿಕೆಯಲ್ಲಿ ಸಮಯ ಸಾಲದೆ ನಾನು ಅರ್ಧಕ್ಕೆ ನಿಲ್ಲಿಸಿದ್ದ ಶಾಕುಂತಲದಲ್ಲಿ ಚತುರ್ಥಾಂಕದ ಪ್ರಾಮುಖ್ಯ ಎಂಬ ಪ್ರಶ್ನೆಯ ಉತ್ತರದ ಬಗ್ಗೆ, ಪೇಪರ್ ತಿದ್ದಿದ ಪ್ರೊ. ಪಾಲೆತ್ತಾಡಿ ಗೋಪಾಲಕೃಷ್ಣ ಭಟ್ಟರು, “ರಸಗವಳವನ್ನು ಬಡಿಸಿ ಅರ್ಧದಲ್ಲಿ ಎಲೆ ಕಿತ್ತುಕೊಂಡಂತಾಯ್ತು. ಅದೇಕೆ ಶ್ಯಾಮಲಾ, ಉತ್ತರ ಪೂರ್ಣಗೊಳಿಸಲಿಲ್ಲ?” ಎಂದು ಕೇಳಿದ್ದರು. ಶಾಕುಂತಲದಲ್ಲಿ ನನಗೆ ಅಂತಹ ರುಚಿ ಮೂಡಲು ಕಾರಣರಾದವರು, ನಮ್ಮ ಪೂಜ್ಯ, ಪ್ರಿಯ ತೆಕ್ಕುಂಜೆಯವರು. ಸಿ.ಕೆ. ವೆಂಕಟರಾಮಯ್ಯನವರ ಮಹಾಕವಿ ಕಾಳಿದಾಸ ಉದ್ಗ್ರಂಥವನ್ನು ನನಗೆ ಪರಿಚಯಿಸಿದವರು; ಬರೆದುದೆಲ್ಲವೂ ಸುಂದರವಾಗಿರುವಂತೆ ನೋಡಿಕೊಳ್ಳಬೇಕೆಂದು ಮಂತ್ರೋಪದೇಶ ನೀಡಿದವರು.

೧೯೬೬ನೇ ಇಸವಿಯಲ್ಲಿ ಹಲವು ಅಸಾಮಾನ್ಯ, ಅಹಿತಕರ ಘಟನೆಗಳು ಘಟಿಸಿದುವು. ೬೫ರ ಕೊನೆಗೆ ಮಾಧವ ವಿಲಾಸ್‌ನ ಅಜ್ಜಿ, ನಮ್ಮಮ್ಮನ ಸೋದರತ್ತೆ ತೀರಿಕೊಂಡರು. ಅದಾಗಿ ಸ್ವಲ್ಪ ಸಮಯದಲ್ಲೇ ಅವರ ಮೊಮ್ಮಗ, ಲಿಲ್ಲಿ ಆಂಟಿ – ಡಾ. ಅಮೃತಂಕ್‌ಲ್ ಮಗ ಸುರೇಶ ಟೆಟನಸ್ ಕಾಯಿಲೆಗೀಡಾಗಿ ಆಸ್ಪತ್ರೆ ಸೇರಿದ. ತಿಂಗಳ ಹಿಂದೆ ಮನೆಯಲ್ಲೇ ಚೆಂಡಾಟ ಆಡುವಾಗ ತೆಂಗಿನ ಕಟ್ಟೆಗೆ ಬಿದ್ದ ಚೆಂಡು ಹೆಕ್ಕಲು ಹೋದವನಿಗೆ ಅಂಗಾಲಿಗೆ ತೆಂಗಿನ ಸೋಗೆ ಕಡ್ಡಿ ಚುಚ್ಚಿದ್ದೇ ಕಾರಣವಾಗಿ ಅದು ಟೆಟನಸ್ ವ್ರಣವಾಗಿ ಪರಿಣಮಿಸಿತ್ತು. ನೀರು ಕುಡಿಯಲಾಗದೆ ದವಡೆ ಸೆಟೆದು ಕೊಂಡಾಗ, ಪರಿಸ್ಥಿತಿಯ ಅರಿವಾಗಿ ತಂದೆ ಡಾ. ಅಮೃತಂಕ್‌ಲ್ ಹಾಗೂ ಚಿಕ್ಕಪ್ಪ ಡಾ. ರಾಧಂಕ್‌ಲ್ ಅವನನ್ನು ಆಸ್ಪತ್ರೆಗೊಯ್ದರು. ಚಿಕಿತ್ಸಾ ಕಾಲ ನಮ್ಮಮ್ಮ ಅವನೊಡನೆ ಆಸ್ಪತ್ರೆಯಲ್ಲಿದ್ದರು. ಅವರಿಗೂ, ಅವರ ಸಂಪರ್ಕಕ್ಕೆ ಬರುವವರೆಂದು ನಮಗೆ ಮಕ್ಕಳೆಲ್ಲರಿಗೂ ರಾಧಂಕ್‌ಲ್ ಮನೆಗೆ ಬಂದು ಟೆಟನಸ್ ಇಂಜೆಕ್ಷನ್ ನೀಡಿದ್ದರು. ಅದು ಮೊದಲ ಅನುಭವವಾಗಿದ್ದರಿಂದ ವಿಪರೀತ ನೋವು, ಜ್ವರ ಬಂದಿತ್ತು. ಬಿಲ್ಲಿನಂತೆ ಬಾಗಿದ್ದ ಸುರೇಶನ ಮೃತದೇಹವನ್ನು ಪಾಲಿಥಿನ್‌ನಲ್ಲಿ ಸುತ್ತಲಾಗಿತ್ತೆಂದು ವಿವರಗಳು ಕೇಳಿ ಬಂದಿದ್ದುವು. ಆಗಿನ್ನೂ ಟ್ರಿಪ್‌ಲ್ ಇಂಜೆಕ್ಷನ್‌ಗಳು ಜ್ಯಾರಿಗೆ ಬಂದಿರಲಿಲ್ಲ. ಅದೇ ಸಮಯ ಬಂದ ವಿಶು ಕುಮಾರರ ‘ಮದರ್’ ಕಾದಂಬರಿಯಲ್ಲೂ ಧನುರ್ವಾತ – ಟೆಟನಸ್‌ನ, ಉಲ್ಲೇಖವಿತ್ತು.

ಸುರೇಶ ತೀರಿಕೊಂಡ ಕೆಲ ದಿನಗಳಲ್ಲೇ ಅವನ ಸೋದರತ್ತೆ, ಲೇನ್ ಕಾಟೇಜ್‌ನ ಸೀತಮ್ಮಾಂಟಿ ರೇಬಿಸ್ ಕಾಯಿಲೆಗೀಡಾದರು. ಮನೆಯ ಪುಟ್ಟ ನಾಯಿಮರಿ ಅವರ ಕಾಲಿಗೆ ಕಚ್ಚಿತ್ತು. ಮನೆಯಲ್ಲೇ ಇದ್ದ ಡಾಕ್ಟರ್ – ರಾಧಂಕ್‌ಲ್, ಟೆಟನಸ್ ಇಂಜೆಕ್ಷನ್ ಚುಚ್ಚಿದ್ದರು. ಮನೆಯವರಿಗೇ ಕಚ್ಚುವ ನಾಯಿ ಯಾಕೆ ಬೇಕು, ಎಂದು ಮನೆಯೊಡತಿ ಅಜ್ಜಿ, ಅದನ್ನು ಕೊಟ್ಟು ಬಿಡುವಂತೆ ಆಜ್ಞಾಪಿಸಿದರು. ನಾಯಿ ದೂರವಾದ ಕಾರಣ, ಅದಕ್ಕೆ ರೇಬಿಸ್ ತಗಲಿದ್ದು ತಿಳಿಯಲಿಲ್ಲ. ನಾಯಿ ಕಚ್ಚಿದ್ದನ್ನೂ ಎಲ್ಲರೂ ಮರೆತರು. ಆದರೆ ತಿಂಗಳು ಕಳೆವಷ್ಟರಲ್ಲಿ, ಸೀತಮ್ಮಾಂಟಿಗೆ ನೀರು ಕುಡಿಯುವುದು ಕಷ್ಟವಾಗ್ತಾ ಬಂತು. ಎಷ್ಟೇ ಬಾಯಾರಿದರೂ, ನೀರನ್ನು ಬಾಯ ಬಳಿಗೆ ತರಲಾಗುತ್ತಿರಲಿಲ್ಲ. ಡಾ. ರಾಧಂಕ್‌ಲ್ ಎಚ್ಚತ್ತು ತಕ್ಷಣ ಸೋದರಿಯನ್ನು ಆಸ್ಪತ್ರೆಗೆ ಸೇರಿಸಿದರು. ಆಗಲೂ ನಮ್ಮಮ್ಮ ಸೀತಮ್ಮಾಂಟಿಯೊಡನೆ ಆಸ್ಪತ್ರೆಯಲ್ಲುಳಿದರು. ದೇವರ ನಾಮ, ತುಳಸೀ ಭಜನೆ ಹಾಡಿಕೊಳ್ಳಲು ಯತ್ನಿಸುತ್ತಿದ್ದ ಸೀತಮ್ಮಾಂಟಿಯ ಕೊರಳಿಂದ ನಡು ನಡುವೆ ನಾಯಿಯ ಮುಲುಗು ಕೇಳಿ ಬರುತ್ತಿತ್ತಂತೆ. ತಂದೆಯನ್ನು ಕಳಕೊಂಡ ತಮ್ಮ ಏಳು ಮಕ್ಕಳನ್ನು ಬಿಟ್ಟು, ಸೀತಮ್ಮಾಂಟಿಯೂ ಹೊರಟು ಹೋದರು.

ಆಸ್ಪತ್ರೆಯಲ್ಲಿ ಆಂಟಿಯೊಡನೆ ಇದ್ದ ಕಾರಣಕ್ಕೆ ನಮ್ಮಮ್ಮನಿಗೂ ಆಗ ಹೊಕ್ಕುಳ ಸುತ್ತ ರೇಬಿಸ್ ಇಂಜೆಕ್ಷನ್‌ಗಳು ಚುಚ್ಚಲ್ಪಟ್ಟಿದ್ದವು. ಬೆಸೆಂಟ್ ಶಾಲೆಯ ನಮ್ಮ ಸಾಯನ್ಸ್ ಟೀಚರ್ ಎ. ಸುಂದರಿ ಟೀಚರ್ ಕೂಡಾ ಮನೆಯ ನಾಯಿಮರಿ ಕಚ್ಚಿ ರೇಬಿಸ್‌ಗೆ ತುತ್ತಾಗಿದ್ದರು. ಇವೆಲ್ಲ ಆ ಕಾಲಕ್ಕೆ ನಮ್ಮ ವಲಯದಲ್ಲಿ ಹೊಸದಾಗಿ ಅನುಭವಕ್ಕೆ ಬಂದ ಭಯಾನಕ ಕಾಯಿಲೆಗಳು.

ನಾನು ಅತ್ಯಂತ ಮೆಚ್ಚಿದ, ನನ್ನನ್ನು ಗಾಢವಾಗಿ ಕಾಡಿದ ಕಾದಂಬರಿಗಳಲ್ಲಿ ‘ಮದರ್’ ಒಂದು. ಕಥಾ ನಾಯಕ ಕೃಷ್ಣರಾಜ ಒಂದು ನೆಗೆಟಿವ್ ಚಾರಿತ್ರ್ಯವಾದರೂ, ಕೊನೆಗೆ ತನ್ನಮ್ಮನನ್ನು ಹುಡುಕಿಕೊಂಡು ಅವನು ಅಲೆಯುವ, ಪಶ್ಚಾತ್ತಾಪದಿಂದ ಕೊರಗುವ ಪರಿ ನನ್ನನ್ನು ಎಷ್ಟೊಂದು ಪ್ರಭಾವಿಸಿತೆಂದರೆ, ನನ್ನ ಮೊದಲ ಮಗು ಜನಿಸಿದಾಗ ಅವನನ್ನು ಕೃಷ್ಣರಾಜನೆಂದೇ ಕರೆವ ಇಚ್ಛೆ ನನ್ನದಾಗಿತ್ತು. ಕೃಷ್ಣ ನನ್ನ ಆರಾಧ್ಯ ದೈವವಾಗಿದ್ದುದೂ ಇದಕ್ಕೆ ಕಾರಣ.

ಸೀಗೆಬಲ್ಲೆ ಹೌಸ್ ಮತ್ತು ಮಾಧವ ವಿಲಾಸ್‌ನ ಸೋದರತ್ತೆಯಂದಿರ ಮನೆಗಳೆರಡೂ ನಮ್ಮಮ್ಮನ ಮದುವೆಯ ಬಳಿಕ ಅಮ್ಮನಿಗೆ ಎರವಾಗಿದ್ದುವು. ಅಮ್ಮ ಮಾಧವ ವಿಲಾಸದಲ್ಲಿದ್ದಾಗ ಎಂಟನೆಯ ಕ್ಲಾಸಿನಲ್ಲಿ ಒಂದು ಮಧ್ಯಾಹ್ನ, ಕೊಟ್ಟಿಗೆಯಲ್ಲಿ ಕುಳಿತು ” ಗಾನ್ ವಿದ್ ದ ವಿಂಡ್ ” ಕಾದಂಬರಿಯನ್ನೋದುತ್ತಾ, ಕಥಾ ನಾಯಕಿ ಸ್ಕಾರ್ಲೆಟ್‌ಗೆ ಮಾತೃವಿಯೋಗವಾದುದನ್ನೋದಿ ಕಣ್ಣೀರು ಹರಿಸುತ್ತಿದ್ದಾಗ, ಚಂಪಕ ವಿಲಾಸದ ಅಜ್ಜಿ, ಅಲ್ಲಿಗೆ ಬಂದರಂತೆ. ಅಮ್ಮ ಅಳುತ್ತಿದ್ದುದನ್ನು ಕಂಡು, ಅಲ್ಲಿಯ ಅಜ್ಜಿಯೊಡನೆ, “ವಸಂತಾ ಯಾಕೆ ಅಳುತ್ತಿದ್ದಾಳೆ? ನೀನೇನಾದರೂ ಗದರಿಸಿದೆಯಾ?” ಎಂದು ವಿಚಾರಿಸಿದರಂತೆ. ಮತ್ತೆ ಕೆಲ ಸಮಯದಲ್ಲೇ ನಮ್ಮಮ್ಮನ ಅಮ್ಮ ಅಗಲಿದ್ದರು. ಮಾಧವ ವಿಲಾಸ್‌ನ ಅತ್ತೆಯ ಮಗ ಆನಂದಂಕ್‌ಲ್, ವಿದ್ಯಾಭ್ಯಾಸ ಮುಗಿಸಿ ಚೆರ್ವತ್ತೂರಿನಲ್ಲಿ ಸರಕಾರೀ ನೌಕರಿಯಲ್ಲಿದ್ದು, ಅವರ ಅತ್ತೆ- ನಮ್ಮಜ್ಜಿ – ಅವರೊಡನಿದ್ದರು. ಏನೋ ಉದರಶೂಲೆಯಿಂದ ಅವರು ಅಲ್ಲಿ ತೀರಿಕೊಂಡರು. ಶೈಶವದಲ್ಲೇ ತಂದೆಯನ್ನು, ಮತ್ತೆ ತಾಯನ್ನೂ ಕಳಕೊಂಡು ತಮ್ಮ ಕೃಪಾಶ್ರಯದಲ್ಲಿ ಬೆಳೆದ ನಮ್ಮಮ್ಮ, ತಮ್ಮ ಇಚ್ಛೆಗೆ ವಿರುಧ್ಧವಾಗಿ ಉಚ್ಚಿಲದ ಗುಡ್ಡೆಮನೆಯ ಅತ್ತೆಯ ಮಗನನ್ನು ವರಿಸ ಹೊರಟಾಗ ಈ ಸೋದರತ್ತೆಯಂದಿರ ಮನೆಗಳು ಅವರಿಗೆ ಎರವಾದುವು. ಅಮ್ಮನನ್ನು ಮದುವೆಯಾಗುವ ತಂದೆಯವರ ಧೃಢ ನಿರ್ಧಾರವೂ ಫಲಿಸಿ, ಅಮ್ಮನ ತಲೆಬಾಡಿ ಮಾವಂದಿರು ತಮ್ಮ ಮನೆಯಲ್ಲಿ ಅಮ್ಮನ ಮದುವೆ ನಡೆಸಿ ಕೊಟ್ಟರು.

[ವಿವಾಹಪೂರ್ವ ಬೆಸೆಂಟ್ ಶಾಲೆಯ ಪದ್ಮ ವಿಹಾರದ ವಾರ್ಡನ್ ಆಗಿದ್ದ ಅಮ್ಮನಿಗೆ ವಿದಾಯಕೂಟ.] ಎಷ್ಟೋ ವರ್ಷಗಳ ಬಳಿಕ, ಸಾಯುವ ಮುನ್ನ, ಮಾಧವ ವಿಲಾಸ್‌ನ ಅಜ್ಜಿ, ನಮ್ಮಮ್ಮನನ್ನು ಕರೆಸಿ, ತನ್ನೆರಡು ಜೋಡು ಚಿನ್ನದ ಬಳೆಗಳನ್ನು ಅಮ್ಮನಿಗಿತ್ತರು. ಆಗ ಮಗಳು ಲಿಲ್ಲಿ ಆಂಟಿ, “ವಸಂತಳಿಗೆ ಮದುವೆಯ ಪ್ರಾಯಕ್ಕೆ ಬಂದ ಮಗಳಿದ್ದಾಳೆ. ಅವಳಿಗೇನೂ ಕೊಡಲಿಕ್ಕಿಲ್ಲವೇ?”, ಎಂದು ಕೇಳಿದಾಗ, “ಅವಳದ್ದು ನನಗೇನೂ ಬಿದ್ದು ಹೋಗಿಲ್ಲ; ಇವಳಿಗೆ ಕೊಡಲಿತ್ತು, ಕೊಟ್ಟೆ, ಅಷ್ಟೇ” ಎಂದು ಬಿಗುವಾಗಿ ಉತ್ತರಿಸಿದರಂತೆ! ಇದನ್ನು ಕೇಳಿ ನಾವೆಲ್ಲ ಮನಸೋಕ್ತ ನಕ್ಕಿದ್ದೆವು!

(ಮುಂದುವರಿಯಲಿದೆ)