ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ – ನಾಳೆ ಇನ್ನೂ ಕಾದಿದೆ
ಅಧ್ಯಾಯ -೨೩

ಊರಿಗೆ ಹೋದಾಗಲೆಲ್ಲ ಗೆಳತಿ ಕ್ರಿಸ್ತಿನ್ ಹಾಗೂ ಶಾರದಾರಲ್ಲಿಗೆ ಒಮ್ಮೆಯಾದರೂ ಭೇಟಿ ನೀಡುವುದಿತ್ತು. ಗ್ಲೆನ್‌ವ್ಯೂ ನರ್ಸಿಂಗ್‌ಹೋಮ್‌ನ ಪಕ್ಕದ ಇಳಿಜಾರಿನಲ್ಲಿ ಇಳಿದರೆ, ಅಲ್ಲೇ ಅಲೋಶಿಯಸ್ ಡೌನ್ ಕಾಲೇಜ್ ಬಳಿಯಿರುವ ಕ್ರಿಸ್ತಿನ್ ಮನೆ ನನಗೆ ತುಂಬ ಪ್ರಿಯವಾಗಿತ್ತು. ಕ್ರಿಸ್ತಿನ್, ನಮ್ಮ ಸೇಂಟ್ ಆಗ್ನಿಸ್ ಕಾಲೇಜ್‌ನಲ್ಲೇ ಲೆಕ್ಚರರ್ ಆಗಿ ಸೇರಿಕೊಂಡಿದ್ದು, ಮಣಿಯವರು ಕೋಣಾಜೆಯ ಮಂಗಳ ಗಂಗೋತ್ರಿಯಲ್ಲಿ ಲೆಕ್ಚರರ್ ಆಗಿದ್ದರು. ಮದುವೆ, ಮಕ್ಕಳಾದ ಮೇಲೆ ಕ್ರಿಸ್ತಿನ್, ಮಣಿಯವರು ಕದ್ರಿಯ ನೃತ್ಯ ವಿದ್ಯಾಲಯದ ಪಕ್ಕದ ಬಾಡಿಗೆ ಮನೆಯಲ್ಲಿದ್ದರು. ನನ್ನಂತೆ ಕ್ರಿಸ್ತಿನ್‌ಗೂ ಮೂರು ಗಂಡು ಮಕ್ಕಳು – ಅಜಿತ್, ರಂಜಿತ್, ಪ್ರೇಮ್‌ಜಿತ್. ಮಗು ಹರ್ಷನನ್ನು ನೋಡಲು ಬಂದಿದ್ದ ಮಣಿ, ಹರ್ಷನನ್ನು ಮುದ್ದಾಡಿ, “ನಮ್ಮ ಮಗು ಇಲಿಮರಿಯಂತಿದ್ದಾನೆ” ಅಂದಿದ್ದರು. ಮರುವರ್ಷ ಊರಿಗೆ ಹಿಂದಿರುಗಿದವಳು, ಎಂದಿನಂತೆ ಅವರಲ್ಲಿಗೆ ಹೋದಾಗ, ನನಗೆ ಅಚ್ಚರಿ ಕಾದಿತ್ತು. ಕ್ರಿಸ್ತಿನ್ ಕುಟುಂಬವೇ ಅಲ್ಲಿಂದ ಮಾಯವಾಗಿತ್ತು. ಮರುವರ್ಷ ಅವರಮ್ಮನ ಮನೆಗೆ ಹೋದರೆ, ಪ್ರೊ. ಎಂ.ಡಿ.ಜೋಸೆಫ್ ಅವರ ಮನೆಯೇ ಮಾಯವಾಗಿತ್ತು. ಕೆಲವರ್ಷಗಳ ಬಳಿಕ, ಮಿಸ್ ಉಷಾ ನಳಿನಿ ಸಿಕ್ಕಾಗ, ಕ್ರಿಸ್ತಿನ್ ಕುಟುಂಬ ಅಮೆರಿಕಾಕ್ಕೆ ವಲಸೆ ಹೋದ ಬಗ್ಗೆ ತಿಳಿದು ಬಂತು. ಹಾಗೂ ಅವರಿಂದಲೇ ಕ್ರಿಸ್ತಿನ್‌ನ ಅಮೆರಿಕಾದ ಹೂಸ್ಟನ್‌ನ ವಿಳಾಸವೂ ಪ್ರಾಪ್ತವಾಯ್ತು. ಅಮೆರಿಕಾಗೆ ತನ್ನಣ್ಣನ ಬಳಿಗೆ ಹೋದ ಕ್ರಿಸ್ತಿನ್ ಕುಟುಂಬ, ಕ್ರಮೇಣ ತಮ್ಮ ಉಳಿದ ಎಂಟು ತಮ್ಮಂದಿರನ್ನೂ, ತಾಯ್ತಂದೆಯರನ್ನೂ ಅಲ್ಲಿಗೆ ಕರೆಸಿಕೊಂಡಿತ್ತು. ಕ್ರಿಸ್ತಿನ್, ತನ್ನಣ್ಣನ ಮಾತಿನಂತೆ ಮಗು ಪ್ರೇಮ್‌ನನ್ನು ಅಣ್ಣನ ಕುಟುಂಬದೊಡನೆ ಬಿಟ್ಟು, ಕ್ಯಾನ್ಸರ್ ರಿಸರ್ಚ್ ಹಾಸ್ಪಿಟಲ್‌ನಲ್ಲಿ ಅಧ್ಯಯನ ನಡೆಸಿ, ಅಲ್ಲೇ ರಿಸರ್ಚ್ ಗೈಡ್ ಆಗಿ ಸೇರಿದ್ದಳು. ನಮ್ಮ ನಡುವೆ ಪತ್ರಗಳು ಓಡಿಯಾಡಿದುವು. ನನ್ನ ಪ್ರಿಯ ಗೆಳತಿ ಪುನಃ ನನಗೆ ದೊರಕಿದ್ದಳು. ಹೂಸ್ಟನ್‌ನಿಂದ ಅವರ ಹೂಗಳ ಹಾಗೂ ತರಕಾರಿ ತೋಟದ, ಕಣ್ಸೆಳೆಯುವ ತಾವರೆ ಕೊಳದ ಹಾಗೂ ಬೆಳೆಯುತ್ತಿರುವ ಮುದ್ದುಮಕ್ಕಳ ಫೋಟೋಗಳು ನನ್ನ ಆಲ್ಬಮ್‌ನಲ್ಲಿ ಕಂಗೊಳಿಸಿದುವು.

ನಾವು ಛೇಡಾನಗರದ ಶ್ರೇಯಸ್‌ನಲ್ಲಿದ್ದಾಗೊಮ್ಮೆ, ವರ್ಲಿಯ ಸೀಮೆನ್ಸ್‌ನಲ್ಲಿ ನೌಕರಿಯಲ್ಲಿದ್ದ ಶಾರದಳ ಗಂಡ, ಒಂಬತ್ತು ತಿಂಗಳ ಮುದ್ದುಮಗು ರವಿಶಂಕರ್‌ನೊಡನೆ ಶಾರದಳನ್ನು ನಮ್ಮಲ್ಲಿಗೆ ಕರೆತಂದಿದ್ದರು. ಮತ್ತೆ ಮದರಾಸ್‌ನಲ್ಲಿ ಕಂಪೆನಿ ಸೇರಿದ ಶಾರದಳ ಗಂಡ ಅಪಘಾತ ಒಂದರಲ್ಲಿ ಎಳೆಯ ಮಗು ವರ್ಷಾಳೊಡನೆ ಪತ್ನಿ ಶಾರದಾರನ್ನು ಬಿಟ್ಟಗಲಿದ್ದು, ನಮ್ಮೆಲ್ಲರಿಗೆ ದೊಡ್ಡ ಆಘಾತವೇ ಆಗಿತ್ತು. ಮರಳಿ ತವರು ಸೇರಿದ ಶಾರದಳನ್ನು ನಾನು ಭೇಟಿಯಾಗುತ್ತಿದ್ದೆ. ಕಾವೂರಿನ ಅವರ ತೆಂಗು, ಕಂಗಿನ ತೋಟಗಳು, ಭತ್ತದ ಗದ್ದೆಗಳು ಮತ್ತು ರೈಸ್ ಮಿಲ್ ನೋಡುವುದೂ, ತುಷಾರ್‌ಗೆ ತೋರುವುದೂ ನನಗೆ ತುಂಬ ಇಷ್ಟವಾಗಿತ್ತು. ಸುರತ್ಕಲ್ ಗೋವಿಂದದಾಸ ಕಾಲೇಜ್‌ನಲ್ಲಿ ಒಂದು ವರ್ಷ ಲೆಕ್ಚರರ್ ಆಗಿದ್ದು, ಒಳ್ಳೆಯ ಕವಿಯಾಗಿದ್ದ, ಉತ್ತಮ ಸಾಹಿತಿಯೂ ಆಗಬಹುದಾಗಿದ್ದ ಶಾರದಾ, ಮತ್ತೆ ಮನೆ, ತೋಟ, ಸಂಸಾರದ ಜವಾಬ್ದಾರಿಯಲ್ಲೇ ಮುಳುಗಿ ಹೋದಳು.

ಕುಲಶೇಖರದ ತನ್ನ ದಿಸ್ಪೆನ್ಸರಿ ಮುಚ್ಚಿ, ಸೈಕಿಯಾಟ್ರಿಸ್ಟ್ ಪತಿ ಡಾ. ಉದಯಚಂದ್ರರೊಡನೆ ಲಂಡನ್ ಸೇರಿದ ಪ್ರಭಾ, ರಜೆಯಲ್ಲಿ ಬಂದಾಗಲೆಲ್ಲ ನಾವು ಭೇಟಿಯಾಗುತ್ತಿದ್ದೆವು. ಗೈನೆಕಾಲಜಿಸ್ಟ್ ಪ್ರಭಾ, ಲಂಡನ್‌ನಲ್ಲಿ ಪೀಡಿಯಾಟ್ರಿಕ್ಸ್‌ನಲ್ಲೂ ಸ್ಪೆಷಲೈಸೇಶನ್ ಮಾಡಿದಳು. ನಮ್ಮಮ್ಮನನ್ನು ಕಾಣಲು ಅವರು ಮನೆಗೆ ಬರುವಾಗ, ಮಕ್ಕಳು ಪ್ರಾರ್ಥನಾ, ಪಾವನಾ ಜೊತೆಗಿರುತ್ತಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯಲ್ಲಿ ಫಿಸಿಕ್ಸ್ ಪ್ರೊಫೆಸರ್ ಆಗಿದ್ದು, ಮುಂದೆ ಮೆಟೀರಿಯಲ್ ಸಾಯನ್ಸ್ ವಿಭಾಗ ಮುಖ್ಯಸ್ಥರಾದ ಡಾ. ಜಯಗೋಪಾಲಣ್ಣ ವಾವೆಯಲ್ಲಿ ನಮ್ಮ ತಂದೆಯ ಸೋದರಳಿಯ. ನಾನು ಹೈಸ್ಕೂಲ್‌ನಲ್ಲಿದ್ದಾಗ ಒಂದು ರಾತ್ರಿ ನಾವು ಕೊನೆಯ ರೈಲಿನಲ್ಲಿ ಮಂಗಳೂರಿಗೆ ಬರಲು ಸ್ಟೇಶನ್‌ಗೆ ಬರುತ್ತಿದ್ದಾಗ ಮೈಸೂರಿಗೆ ಎಮ್.ಎಸ್. ಮಾಡಲು ಹೊರಟಿದ್ದ ಜಯಗೋಪಾಲಣ್ಣ ಬ್ಯಾಗ್, ಬ್ಯಾಗೇಜ್‌ನೊಂದಿಗೆ ಎದುರಾದರು. ಅವರನ್ನು ಮಾತನಾಡಿಸಿದ ನಮ್ಮ ತಂದೆಯ ಮುಖ ಪ್ರೀತಿ, ಅಭಿಮಾನದಿಂದ ಹೊಳೆಯುತ್ತಿತ್ತು. ಮೇಲೆ ಆಗಸದಲ್ಲಿ ಹೊಳೆವ ಚಂದ್ರನಿದ್ದ. ರೈಲ್ವೇ ಹಳಿಗಳ ಪಕ್ಕದ ಕುರುಚಲು ಐವಿ ಬಳ್ಳಿಗಳ ಹಾಗೂ ಹೂಗಳ ಕಂಪು ಗಾಳಿಯಲ್ಲಿತ್ತು. ಜಯಗೋಪಾಲಣ್ಣನಂತೇ ನಾನೂ ವಿದ್ಯೆಯಲ್ಲಿ ಮುಂದಾಗಬೇಕು, ಎಂದು ತಂದೆಯವರು ಹೇಳಿದಾಗ, ಹೌದೆಂದಿತ್ತು, ನನ್ನ ಮನಸು.

ಎಮ್.ಎಸ್,ಸಿ. ಪ್ರಥಮ ರ್‍ಯಾಂಕ್ ಪಡೆದ ಪ್ರತಿಭಾ ಸಂಪನ್ನ ಜಯಗೋಪಾಲಣ್ಣ, ಜೊತೆಗಾತಿ ಜಯಶೀಲಾರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಜಯಶೀಲಕ್ಕ ಆರಂಭದಲ್ಲಿ ನಮ್ಮ ಬೆಸೆಂಟ್ ಕಾಲೇಜ್‌ನಲ್ಲಿ ಲೆಕ್ಚರರಾಗಿದ್ದು ಎಂದಾದರೂ ಅವರು ನಮ್ಮಲ್ಲಿಗೆ ಬರುತ್ತಿದ್ದಂತೆ, ನಾವೂ ಕೋಣಾಜೆಯ ಅವರ ಮನೆಗೆ ಹೋಗುವುದಿತ್ತು. ಮುಂದೆ ಮಂಗಳ ಗಂಗೋತ್ರಿಯಲ್ಲಿ ಮೆಟೀರಿಯಲ್ ಸಾಯನ್ಸ್ ವಿಭಾಗ ಮುಖ್ಯಸ್ಥರೂ ಆದ ಜಯಗೋಪಾಲಣ್ಣ, ಪ್ರಸ್ತುತ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಡೀನ್ ಆಗಿದ್ದಾರೆ.

ಬೇಸಿಗೆ ರಜೆಯಲ್ಲಿ ಊರಿಗೆ ಹೋದರೆ, ಮಳೆಗಾಲ ಆರಂಭವಾಗುವವರೆಗೂ ನಮ್ಮಲ್ಲಿ ನೀರ ಬವಣೆ. ತಂಗಿ ಮಂಜುಳಾ ಹಾಗೂ ನಾನು ಮಕ್ಕಳೊಡನೆ ಪೂರ್ವದ ಗದ್ದೆಗಳಾಚಿನ ತೋಟದ ತಗ್ಗಿನ ಮನೆಗಳಿಂದ ನೀರು ಹೊತ್ತು ತರುತ್ತಿದ್ದೆವು. ಒಗೆವ ಬಟ್ಟೆಗಳನ್ನೊಯ್ದು ಅಲ್ಲೇ ಒಗೆದು ತರುತ್ತಿದ್ದೆವು. ಹಾಗೇ ಪಶ್ಚಿಮದಲ್ಲಿ ಹೊಸ ಕೊಪ್ಪಳದ ಮನೆಯಲ್ಲಿ, ಅದರಾಚೆ ಸಮುದ್ರ ತಡಿಯ ನಮ್ಮ ಕೆಲ ಬಂಧುಗಳ ಮನೆಗಳಲ್ಲೂ ಬಟ್ಟೆ ಒಗೆದು ಬರುತ್ತಿದ್ದೆವು. ಉತ್ತರಕ್ಕೆ ಬೀರಿಯ ಬಳಿಯ ಬಂಧುಗಳ ಮನೆಯಿಂದ ಆ ಹೆದ್ದಾರಿ ದಾಟಿ ಕೈ ಕೈ ದಾಟಿಸಿ ಪುನಃ , ಪುನಃ ಕೊಡಗಟ್ಟಲೆ ನೀರು ಹೊತ್ತು ತರುವುದಿತ್ತು. ಆಗ ಇಷ್ಟೊಂದು ವಾಹನಗಳ ಭರಾಟೆಯಿರಲಿಲ್ಲ; ಈಗಂತೂ ಅಂತಹ ಯತ್ನದ ಯೋಚನೆಯೇ ನಿಷ್ಫಲ! ನಮ್ಮನ್ನೇ ನಾವು ದಾರಿ ದಾಟಿಸಿ ಕೊಂಡರೆ ನಮ್ಮ ಭಾಗ್ಯ!

ಈ ನನ್ನ ನೀರನರಸಿ ಹೋಗುವ ಅನುಭವವೇ ೧೯೮೪ರಲ್ಲಿ ‘ನೆರೆ’ ಎಂಬೊಂದು ಕಥೆಯನ್ನು ಬರೆಸಿತು. ಕಥೆ, ಮಯೂರ ಪತ್ರಿಕೆಯಲ್ಲಿ ಪ್ರಕಟವೂ ಆಯ್ತು. ಮೂರು ವರ್ಷ, ನಾಲ್ಕು ತಿಂಗಳ ಮಗು ಹರ್ಷ ಶಾಲೆಗೆ ಸೇರಿದಾಗಲೇ ತರಂಗ ಪತ್ರಿಕೆ, `ಶಿಕ್ಷಣವೋ ಶಿಕ್ಷೆಯೋ’ ಎಂಬ ವಿಷಯವಾಗಿ ಲೇಖನಗಳನ್ನು ಆಹ್ವಾನಿಸಿತು. ಮೊದಲ ದಿನ, ಮಗುವನ್ನು ಶಾಲೆಯಿಂದ ಹಿಂದಕ್ಕೆ ಕರೆತರಲು ಹೋದ ನಮ್ಮಮ್ಮ ಹಾಗೂ ನಾನು, “ಶಾಲೆ ಹೇಗಾಯ್ತು, ಹರ್ಷಾ?” ಎಂದು ಕೇಳಿದರೆ, ಮಗು, “ಇಲ್ಲಿ ಶಾಲೆಯೇ ಇಲ್ಲ; ಬರೀ ಜೈಲು” ಎಂದು ಉತ್ತರಿಸಿದ್ದ! ಡಾ. ಶಿವರಾಮ ಕಾರಂತರ ಲೇಖನದ ಬೆನ್ನಿಗೇ ನನ್ನ ಈ ಪ್ರತಿಕ್ರಿಯಾತ್ಮಕ ಲೇಖನ ‘ಶಾಲೆಯಲ್ಲ; ಜೈಲು’ ಪ್ರಕಟವಾಗಿತ್ತು. ಅದೇ ಆಗ ತೆರೆದು ಕೊಂಡಿದ್ದ ಮುಂಬೈಯ ವಿಹಾರಸ್ಥಳ, ಎಸ್ಸೆಲ್ ವರ್ಲ್ಡ್‌ಗೆ ಮಕ್ಕಳೊಡನೆ ಭೇಟಿಯಿತ್ತು, ಆ ಬಗ್ಗೆ ಬರೆದ ಪರಿಚಯಾತ್ಮಕ ಚಿತ್ರ ಲೇಖನ, ತರಂಗದ ಮುಖಪುಟ ಲೇಖನವಾಗಿ ಬೆಳಕು ಕಂಡಿತು. ಮತ್ತೆ ತಡೆಯಿರದೆ ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ ನನ್ನ ಕಥೆ, ಲೇಖನ, ಅನುವಾದಿತ ಕಥೆಗಳು ಪ್ರಕಟವಾಗತೊಡಗಿದವು. ನನ್ನನ್ನು ತಟ್ಟಿದ ವಿಷಯಗಳು, ಘಟನೆಗಳು ಲೇಖನ, ಕತೆಗಳಾಗಿ ತಕ್ಷಣ ರೂಪುಗೊಳ್ಳುತ್ತಿದ್ದುವು. ಬರೆದುದನ್ನು ತಿದ್ದಿ ಬರೆವ ಅಭ್ಯಾಸ ನನಗಿರಲಿಲ್ಲ. ಬರೆವಾಗ ಚಿತ್ತಾಗುವ ಸಮಸ್ಯೆಯೂ ಇರಲಿಲ್ಲ.

ಅಸ್ಥಮಾ ಬಾಧಿಸುತ್ತಿದ್ದ ನನ್ನ ತಂದೆಯವರು ಆಗಾಗ ಆಸ್ಪತ್ರೆ ಸೇರಬೇಕಾಗಿ ಬರುತ್ತಿತ್ತು. ಆಗೆಲ್ಲ ನಾನು ಊರಿಗೆ ಹೋಗಿ ಅಮ್ಮನಿಗೆ ಜೊತೆಯಾಗಿರುತ್ತಿದ್ದೆ. ಮಂಗಳೂರಿನ ಫಾ|ಮುಲ್ಲರ್‍ಸ್ ಆಸ್ಪತ್ರೆ ತಂದೆಯವರ ಅಸೌಖ್ಯ, ಶುಶ್ರೂಷೆಯಲ್ಲಿ ನಮಗೆ ಎರಡನೇ ಮನೆಯಂತೇ ಇತ್ತು. ರೆ. ಫಾ| ಬರ್ನಾರ್ಡ್ ಮೊರೇಸ್ ಅವರು ಅಲ್ಲಿನ ಡೈರೆಕ್ಟರ್ ಆಗಿದ್ದಾಗ, ಈ ಸೇವಾಸಂಸ್ಥೆಯ ಬಗ್ಗೆ ನಾನು ಬರೆದ ಲೇಖನವೂ ಸುಧಾ ಪತ್ರಿಕೆಯಲ್ಲಿ ಪ್ರಕಟವಾಯ್ತು. ಅಲ್ಲಿನ ಸೇವಾ ಮನೋಭಾವದಂತೇ ನನ್ನನ್ನು ತಟ್ಟಿದ್ದು, ಮುಂಬೈಯ ಬಾಂದ್ರಾ ಮೌಂಟ್ ಮೇರಿಯ ಬಳಿಯ ಶಾಂತಿ ಅವೇದನಾ ಆಶ್ರಮ. ಕ್ಯಾನ್ಸರ್ ರೋಗದ ಕೊನೆಯ ಹಂತದಲ್ಲಿ ವಿಷಮ ಸ್ಥಿತಿಯಲ್ಲಿರುವ ರೋಗಿಗಳಿಗೆ ನೋವರಿಯದ ಕೊನೆಯ ದಿನಗಳನ್ನು ಕರುಣಿಸುವ ಈ ಅಸ್ಪತ್ರೆಯ ಪರಿಚಯ ನನಗಾದುದು ಪ್ರಿಯ ಬಂಧುವೊಬ್ಬರ ಅಂತಿಮ ದಿನಗಳಲ್ಲಿ. ಬ್ಯಾಂಡ್‌ಸ್ಟ್ಯಾಂಡ್‌ನ ಸಮುದ್ರ ದಂಡೆಯ ಈ ಅಪರೂಪದ ಸೇವಾ ಸಂಸ್ಥೆಯ ಬಗ್ಗೆ ಬರೆದ ವಿಸ್ತೃತ ಲೇಖನ ತರಂಗದಲ್ಲಿ ಪ್ರಕಟವಾಯ್ತು.

೧೯೮೨ರಲ್ಲಿ ನಮ್ಮಮ್ಮ, ಮನೆಯೆದುರೇ ಹೆದ್ದಾರಿ ದಾಟಲೆಂದು ನಿಂತಿದ್ದಾಗ, ಕಾರ್ ಒಂದು ಢಿಕ್ಕಿಯಾಗಿ ಪಕ್ಕದ ತೋಡಿನಲ್ಲಿ ಬಿದ್ದು ಬಿಟ್ಟಿದ್ದರು. ಅಲ್ಲೆ ಇದ್ದ ನಮ್ಮ ಸಾಹಿತಿ ರಾಮಚಂದ್ರ ಉಚ್ಚಿಲರು, ಅಮ್ಮನನ್ನು ತೋಳ್ಗಳಲ್ಲಿ ಎತ್ತಿ ಮನೆಗೆ ತಂದಿದ್ದರು. ಉಚ್ಚಿಲ ಶಾಲಾ ಸಂಬಂಧ ಅದೇ ಆಗ ತಂದೆಯವರೊಡನೆ ತಾತ್ವಿಕ ಘರ್ಷಣೆಗಳಿದ್ದರೂ, ಚ.ರಾ. ಅವರು, ಹಿಂದೆ ಮುಂದೆ ನೋಡದೆ ಅಮ್ಮನ ನೆರವಿಗೆ ಧಾವಿಸಿದ್ದರು. ಆ ದಿನಗಳಲ್ಲಿ ತಂದೆಯವರನ್ನು ಸಿಗಲು ಆಗಾಗ ಮನೆಗೆ ಬರುತ್ತಿದ್ದ ಚ.ರಾ. ಅವರು, ಗೇಟ್ ಹೊಗುವಾಗ ಅಲ್ಲೇ ಹಿತ್ತಿಲಲ್ಲಿ ಆಡುತ್ತಿರುತ್ತಿದ್ದ ಮಗು ರೋಹನ್‌ನನ್ನು, “ಏನೋ ದೂಮಾಸ್?” ಎಂದು ಸಂಬೋಧಿಸುತ್ತಿದ್ದರು. ಒಂದಿನ ಅವರು ಗೇಟ್ ತೆರೆದು ಬರುತ್ತಿದ್ದುದನ್ನು ಕಂಡ ರೋಹನ್, “ಅಮ್ಮಮ್ಮಾ, ದೂಮಾಸಜ್ಜ ಬಂದ್ರು” ಎಂದು ಘೋಷಿಸಿದಾಗ, “ಎಲಾ ಇವನಾ!” ಎಂದು ಚಕಿತರಾದ ಅವರ ಮುಖದ ಕೌತುಕದ ನಗು ಈಗಲೂ ನನ್ನ ಕಣ್ಣಲ್ಲಿದೆ. ಆಸ್ಪತ್ರೆಗೊಯ್ಯಲ್ಪಟ್ಟು ಶುಶ್ರೂಷೆಯ ಬಳಿಕ ಮನೆಗೆ ಮರಳಿದ ಅಮ್ಮನ ಬಳಿಯಿರಲು ಹರ್ಷನೊಂದಿಗೆ ನಾನು ತೆರಳಿದ್ದೆ. ಅಮ್ಮ ಚೇತರಿಸಿಕೊಂಡು ಗುಣಮುಖರಾದಾಗ, ಮತ್ತೆ ಕೆಲ ದಿನಗಳಲ್ಲೇ ಪುನಃ ರಜೆಯಲ್ಲಿ ಊರಿಗೆ ಮರಳಲಿದ್ದುದರಿಂದ, ಹರ್ಷನನ್ನು ಅಮ್ಮನ ಬಳಿ ಬಿಟ್ಟು ಹೊರಟೆ. ಬಸ್ ಹೊರಡುವಾಗ, ಜೊತೆಯಲ್ಲಿ ಬರುವೆನೆಂದು ನನ್ನತ್ತ ಕೈ ಚಾಚಿ ಅಳಲಾರಂಭಿಸಿದ ಹರ್ಷನ ಮುಖ ಈಗಲೂ ನನ್ನನ್ನು ಕಾಡುವುದಿದೆ. ಹೇಗಾದರೂ, ಯಾಕಾದರೂ ಮಗುವನ್ನು ಬಿಟ್ಟು ಬಂದೆ, ಎಂಬ ಕ್ಲೇಶ ದಾರಿಯುದ್ದಕ್ಕೂ ಹೃದಯವನ್ನು ಹಿಂಡಿತ್ತು. ಒಮ್ಮೆ ಮುಂಬೈ ತಲುಪಿದ ಮೇಲೆ ನನ್ನ ಸಮಯವೆಲ್ಲವನ್ನೂ ಆಕ್ರಮಿಸಲು ರೋಹನ್ ಇದ್ದ. ಕಲಿಸಿ ಕೊಟ್ಟಂತೆ ಈಗವನು ನನ್ನನ್ನು ದೊಡ್ಡಮ್ಮಾ ಎಂದು ಕರೆಯುತ್ತಿದ್ದ. ಕೆಲದಿನಗಳ ಬಳಿಕ ಊರಿಗೆ ಮರಳಿದಾಗ, ಹಳದಿ ಫ್ರಾಕ್ ತೊಟ್ಟು ಮಲಗಿ ನಿದ್ರಿಸಿದ್ದ ಹರ್ಷ, ಎಚ್ಚತ್ತು ಎದ್ದು, ನನ್ನನ್ನು ಕಂಡವನೇ, ನಾಚಿ, ನಕ್ಕು ಪುನಃ ಅಲ್ಲೇ ಮಂಚದಲ್ಲಿ ಕವುಚಿಕೊಂಡ ಆ ಚೆಲುವಾದ ಘಳಿಗೆಯನ್ನೂ ಮರೆವಂತಿಲ್ಲ.

ಆಗಿನ ಮಂಗಳೂರು – ಮುಂಬೈ ಬಸ್ ಪಯಣಕ್ಕೆ ನಾವು ಆಶ್ರಯಿಸುತ್ತಿದ್ದುದು, ಘಟ್‌ಗೆ ಪಾಟೀಲ್ ಹಾಗೂ ಬಲ್ಲಾಳ್ ಬಸ್‌ಗಳನ್ನು. ಬೆಳಿಗ್ಗೆ ಹತ್ತೂವರೆಗೆ ಮಂಗಳೂರಿಂದ ಹೊರಡುತ್ತಿದ್ದ ಬಸ್, ಕುಂದಾಪುರದ ಹರಿನಿವಾಸ ಹೊಟೇಲಲ್ಲಿ ಊಟ, ಸಂಜೆ ನಾಲ್ಕಕ್ಕೆ ಕುಮಟಾದ ಹೊಟೇಲಲ್ಲಿ ಕಾಫಿ, ರಾತ್ರಿ ಯಲ್ಲಾಪುರ ಅಥವಾ ಶಿರಸಿಯಲ್ಲಿ ಊಟ, ಬೆಳಿಗ್ಗೆ ಖೊಪೋಲಿಯಲ್ಲಿ ಕಾಫಿ, ಹೀಗೆ ಯೋಜಿತವಾಗಿ ಸಾಗುತ್ತಿತ್ತು. ಹೊನ್ನಾವರದಲ್ಲಿ ಬಸ್, ಶರಾವತಿ ನದಿಯಲ್ಲಿ ಬಾರ್ಜ್ ಏರಿ ಸಾಗುತ್ತಿರುವಾಗ, ನಾನು ಆ ಬಾರ್ಜ್ ಯಾನದ ಸಂಪೂರ್ಣ ಆನಂದವನ್ನು ಸವಿಯುತ್ತಿದ್ದೆ. ರಸ್ತೆಗಳ ದುರವಸ್ಥೆಯಲ್ಲಿ ಕೆಲವೆಡೆ ದೋಣಿಯಂತೆ ಓಲಾಡುವ ಬಸ್; ಮೆಟ್ಟುಗಳನ್ನು ಕಾಲಿನಿಂದ ಕಳಚಿಟ್ಟರೆ, ಅವು ಬಸ್‌ನ ಓಲಾಟದಲ್ಲಿ ಎಲ್ಲೆಲ್ಲಿಗೋ ಹೋಗಿಬಿಟ್ಟು, ಮತ್ತೆ ಸಿಗುವುದು ಕಷ್ಟವಾಗುತ್ತಿತ್ತು. ಪಯಣದುದ್ದಕ್ಕೂ ಹೊಟೆಲ್, ಟಾಯ್‌ಲೆಟ್‌ಗಳ ದುಸ್ಥಿತಿ, ನರಕ ಸದೃಶವೇ ಆಗಿರುತ್ತಿತ್ತು. ಡಯಪರ್‌ಗಳಿನ್ನೂ ಬಂದಿರದ ಆ ಕಾಲದಲ್ಲಿ, ಚಡ್ಡಿ ಒದ್ದೆ ಮಾಡಿಕೊಂಡ ಎಳೆಮಕ್ಕಳ ಅಳುವಿನ ಕಿರಿಕಿರಿ ಪಯಣದುದ್ದಕ್ಕೂ ಸಾಮಾನ್ಯವಾಗಿತ್ತು. ಮುಂಬೈ ಸಮೀಪಿಸುವಾಗ ಖಂಡಾಲಾ ಘಾಟ್ ಏರಿ ಇಳಿವ ಸಾಹಸವಂತೂ ಹೇಳಿ ಮುಗಿಯದು! ಘಾಟ್ ಮಧ್ಯ ಅಪಘಾತಗಳು ಸಾಮಾನ್ಯವಾಗಿದ್ದು, ಮತ್ತೆ ದಾರಿ ತೆರವಾಗಲು ಗಂಟೆಗಳು ಹಿಡಿಯುತ್ತಿದ್ದ ಕಾರಣ, ಪಯಣ ಮತ್ತೂ ತಡವಾಗುತ್ತಿತ್ತು. ಸಂಚಾರವ್ಯವಸ್ಥೆಯಲ್ಲಾದ ಸುಧಾರಣೆ ಹಾಗೂ ದೇಶದ ಪ್ರಗತಿಗೆ ಈಗಿನ ಖಂಡಾಲಾ ಘಾಟ್ ಒಂದು ಅತ್ಯುತ್ತಮ ನಿದರ್ಶನ. ಆದರೆ ಆಗಿನ ಆ ಶಿಖರ ಮತ್ತು ಪ್ರಪಾತದ ನಿರಂತರ ಸುಂದರ ದೃಶ್ಯಗಳು, ಆ ಆತಂಕ, ಭಯದ ಅನುಭವ ಈಗ ಅಲಭ್ಯ.

ಈಗ ಚತುಷ್ಪಥವಾಗಿ ಮಾರ್ಪಟ್ಟ ನಮ್ಮೂರ ಹೆದ್ದಾರಿಯಲ್ಲಿ ನಮ್ಮ ಕಣ್ಣೆದುರೇ, ಅಮ್ಮನಿಂದ ತೊಡಗಿ, ನಮ್ಮ ಮನೆ ಮಂದಿಯನ್ನೂ ಒಳಗೊಂಡಂತೆ ಸಂಭವಿಸಿದ ಅಪಘಾತಗಳ ಸರಮಾಲೆಯ ವಿವರವಿನ್ನು ಇಲ್ಲಿ ಕಾದಿದೆ.

(ಮುಂದುವರಿಯಲಿದೆ)