ಶ್ಯಾಮಲಾಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ – ೨೯

ಒಳ್ಳೆಯ ಆರೋಗ್ಯ ನನಗೆ ತಾಯಿಯಿಂದ ಬಂದ ಬಳುವಳಿ ಇರಬಹುದು. ಬಾಲ್ಯದಲ್ಲಿ ಕಾಡಿದ ಪೋಲಿಯೋ, ಮತ್ತೆ ಕಾಡಿದ ಸರ್ಪಸುತ್ತು ಇಂತಹ ಅನಿರೀಕ್ಷಿತ ಆಘಾತಗಳ ಹೊರತು, ಸಾಮಾನ್ಯವಾಗಿ ಆರೋಗ್ಯಯುತ ದೇಹಪ್ರಕೃತಿಯೇ ನನ್ನದು. ಶೀತ ನನ್ನನ್ನು ಬಾಧಿಸುವುದು ಬಲು ಅಪರೂಪ. ಆದರೆ, ಬಂದರೆ ಜೋರಾಗಿಯೇ ಬಂದು ಹೋಗುವದು. ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿಯೂ ನನ್ನ ಜಾಯಮಾನವಲ್ಲ. ಬಿಸಿನೀರನ್ನು ಇಷ್ಟಪಡದೆ ತಣ್ಣೀರನ್ನೇ ಕುಡಿವ ನನಗೆ ಬಿಸಲೆರಿ ಅಂಥವೆಲ್ಲ ಬೇಕಿಲ್ಲ. ಮುಂಬೈಯ ನಳ್ಳಿ ನೀರು, ಊರಲ್ಲಿ ಮನೆಯ ಬಾವಿ ನೀರು. ಹೊಟ್ಟೆ ಕೆಡುವುದೆಂಬುದೂ ನನ್ನಿಂದ ಬಲು ದೂರ. ತಲೆನೋವು ಮಾತ್ರ ಹಲವು ವರ್ಷಗಳವರೆಗೆ ನನ್ನನ್ನು ಕಾಡುತ್ತಿತ್ತು. ಮಧ್ಯ ವಯಸ್ಸು ಸಮೀಪಿಸುವಾಗ ಕಾಡಿದ ಬೆನ್ನು ನೋವು ಬಹುಕಾಲ ಬಿಡದೆ ಜೊತೆಗಿತ್ತು.

ನನ್ನಚ್ಚ, ಚಿಕ್ಕಪ್ಪ ಇಬ್ಬರೂ ತೀವ್ರ ಅನಾರೋಗ್ಯದಿಂದಿದ್ದ ಆ ದಿನಗಳಲ್ಲಿ, ನನ್ನ ಬೆನ್ನು ನೋವು ತೀವ್ರವಾಗಿ, ಅಮ್ಮನ ಒತ್ತಾಯಕ್ಕೆ ಡಾಕ್ಟರ ಬಳಿಗೆ ಹೋಗಬೇಕಾಯ್ತು. ಫಾ| ಮುಲ್ಲರ್‍ಸ್‌ನ ಡಾ| ತಿವಾರಿ, ಗೈನೆಕಾಲಜಿಸ್ಟ್ ಬಳಿಗೆ ಕಳುಹಿದರು. ಗರ್ಭಕೋಶದಲ್ಲಿ ಮಲ್ಟಿಪ್‌ಲ್ ಫೈಬ್ರಾಯಿಡ್ ಇವೆಯೆಂದ ಡಾ| ಡಿ.ಕೆ.ಶೆಟ್ಟಿ, ತಕ್ಷಣವೇ ಅಡ್ಮಿಟ್ ಆಗಿ ಸರ್ಜರಿ ಮಾಡಿಸಿಕೊಳ್ಳುವಂತೆ ಹೇಳಿದರು. ಮನೆಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರೂ ತೀವ್ರ ಅನಾರೋಗ್ಯದಿಂದಿರುವ ಕಾರಣ, “ಈಗ ಬೇಡ, ಹಿಂದಿನಿಂದ ಮಾಡಬಹುದಲ್ಲ”, ಎಂದೆ. ಬೆನ್ನು ನೋವು ಹೊರತು ಬೇರಾವ ತೊಂದರೆಯೂ ನನಗಿರಲಿಲ್ಲ. “ನಿನಗೇನು ಅವರ ಸಾಲಿಗೆ ಸೇರಬೇಕಿದೆಯೇ?” ಎಂದು ಡಾಕ್ಟರ್ ಗದರಿದರು. ಹಾಗೆ ಸರ್ಜರಿಯಾಗಿ, ಗರ್ಭಕೋಶ ಮಾತ್ರವಲ್ಲ, ಸಿಸ್ಟ್ ಇದೆಯೆಂಬ ಕಾರಣಕ್ಕೆ ಓವರಿಗಳನ್ನೂ ಕಳಕೊಂಡು ಡಾಕ್ಟರ ಎಚ್ಚರದೊಡನೆ ಮನೆ ಸೇರಿದೆ. ರೆಸ್ಟ್ ತೆಗೆದುಕೊಳ್ಳಬೇಕೆಂಬ ಎಚ್ಚರವೇನಲ್ಲ; ರೆಸ್ಟ್ ಎಂಬ ಪದವೇ ಅವರ ಶಬ್ದಕೋಶದಲ್ಲಿರಲಿಲ್ಲ. ಓವರಿಗಳನ್ನು ಕಳಕೊಂಡ ಕಾರಣ, ಹಾರ್ಮೋನಲ್ ಮಾತ್ರೆಗಳನ್ನು ಬಿಡದೆ ಸೇವಿಸಬೇಕು; ಹಾಗೂ ಆರು ತಿಂಗಳಿಗೊಮ್ಮೆ ಕೋಲೆಸ್ಟರಾಲ್ ಅಳೆಯಲು ರಕ್ತ ಪರೀಕ್ಷೆ ಮಾಡುತ್ತಿರಬೇಕೆಂಬ ಎಚ್ಚರ!

ಫೈಬ್ರಾಯಿಡ್ ಹಾಗೂ ಹಿಸ್ಟರೆಕ್ಟಮಿ ಸ್ತ್ರೀಯರಿಗೆ ಸಾಮಾನ್ಯವಾದ್ದರಿಂದ ಅದರ ಬಗ್ಗೆ ನಾನೇನೂ ನಮೂದಿಸಬೇಕಾಗಿಲ್ಲ. ಆದರೆ ಹೇಳಲಿರುವುದು ಮುಂದಿನ ಬೆಳವಣಿಗೆ ಬಗ್ಗೆ. “ಮುಂಬೈಗೆ ಹಿಂದಿರುಗಿದ ಬಳಿಕ ಅಲ್ಲಿಯ ಡಾಕ್ಟರ್‍ಸ್, ಹಾರ್ಮೋನಲ್ ಮಾತ್ರೆಗಳನ್ನು ನಿಲ್ಲಿಸಿ ಬಿಡುವಂತೆ ಹೇಳಿದರೆ, ನಿಲ್ಲಿಸ ಬೇಡ. ನಿನಗೇನೂ ಬೇಗನೇ ಮುದುಕಿಯಾಗಬೇಕೆಂದಿಲ್ಲವಲ್ಲ?” ಎಂದರು, ನನ್ನ ಡಾಕ್ಟರ್. ಇಲ್ಲವೆಂದೆ. ಹಾಗಾದರೆ ತಪ್ಪದೆ ಮಾತ್ರೆ ತೆಗೆದುಕೊಳ್ಳುತ್ತಿರು, ಎಂದ ಅವರ ಸಲಹೆಯಂತೆ ನಾನು ನಡೆದೆ.

ತಂದೆಯವರನ್ನು ಕಳಕೊಂಡು ಮುಂಬೈಗೆ ಹಿಂದಿರುಗಿದ ಬಳಿಕ ನನ್ನ ಹೃದಯದ ನೋವನ್ನು ಹರಿಬಿಡಲು ಅವರ ಬಗ್ಗೆ ನನ್ನ ಮನದ ಮಾತುಗಳನ್ನು ಲೇಖನವಾಗಿ ಬರೆದೆ. `ಸತ್ಸಂಚಯ’ ಎಂದು ಹೆಸರಿಸಿದೆ. ಅವರ ಜೀವನ ಸತ್ಸಂಚಯವೇ ಆಗಿತ್ತು. ಮುಂದೆ ಈ ಲೇಖನ ಬೆಂಗಳೂರಿನಿಂದ ಹೊರಡುತ್ತಿದ್ದ, ಸಾಹಿತಿ ಜಯಂತ್ ಕಾಯ್ಕಿಣಿ ಸಂಪಾದಕತ್ವದ `ಭಾವನಾ’ ಪತ್ರಿಕೆಯಲ್ಲಿ ಪ್ರಕಟವಾಗಲಿದ್ದಾಗ ಪತ್ರಿಕೆ ನಿಂತು ಹೋಯ್ತು.

೨೦೦೦ನೇ ಇಸವಿ ನವೆಂಬರ್ ಹದಿನಾಲ್ಕು. ಆ ದಿನ ಗ್ರಹಣವಿತ್ತು. ಬಾಲ್ಯದಲ್ಲಿ ಚೌತಿ ಚಂದ್ರನನ್ನು ಕದ್ದು ನೋಡುತ್ತಿದ್ದ ಅದೇ ಕುತೂಹಲದಿಂದ ನಾನಂದು ಗ್ರಹಣದ ಹೊತ್ತು ಸೂರ್ಯನನ್ನು ನೋಡಿದ್ದೆ. ಇದು ಆ ದಿನವನ್ನು ನೆನಪಿಟ್ಟು ಕೊಳ್ಳುವ ಸಾಧನವಷ್ಟೇ ಹೊರತು, ಯಾವುದೇ ನಂಬಿಕೆಗೆ ಇಂಬಲ್ಲ. ಊಟದ ಹೊತ್ತು, ಬಗ್ಗಿ ಊಟ ಬಡಿಸುವಾಗ ಒಂದು ಫ್ಲೀಟಿಂಗ್, ಶೂಟಿಂಗ್ ತಲೆಶೂಲೆಯೊಂದು ಎರಡು ಮೂರು ಅಲೆಗಳಲ್ಲಿ ಹಾದು ಹೋದಂತಾಯ್ತು. ಕ್ಷಣ ಮಾತ್ರವಷ್ಟೇ. ನಾನೂ ಉಂಡು, ಅಡ್ಡಾಗಿ ಓದುತ್ತಿದ್ದವಳು ಮತ್ತೇನೂ ಅರಿಯೆ. ಎಚ್ಚರವಾಗುವಾಗ ಮಕ್ಕಳ ದನಿ, ತಂಗಿಯ ದನಿ, ನಮ್ಮ ಮಾವನ ಮಗ ರಾಹುಲ್‌ನ ದನಿ ಅಸ್ಪಷ್ಟವಾಗಿ ಕೇಳುತ್ತಿತ್ತು. ಅರೇ, ರಾಹುಲ್ ಯಾವಾಗ ಬಂದ, ತಂಗಿ ಯಾವಾಗ ಬಂದಳು, ಎಂದುಕೊಂಡು ಗಡಬಡಿಸಿ ಏಳಲು ಹೋದರೆ, ಅವರೆಲ್ಲ ನನ್ನನ್ನು ಹಾಗೇ ಮಲಗಿರುವಂತೆ ಅನುನಯಿಸಿದರು. ಅಟ್ಯಾಚ್ಡ್ ಬಾತ್‌ರೂಮ್‌ನ ಬಾಗಿಲ ಬಳಿ ನಾನು ಒರಗಿದ್ದೆ. ಮಂಚದ ಪಕ್ಕ ಕೆಳಗೆ ನೆಲದಲ್ಲಿ ಮಲಗಿ ಓದುತ್ತಿದ್ದವಳು ಇಲ್ಲಿ ಹೇಗೆ ಎಂಬ ಪ್ರಶ್ನೆ ಕಾಡಿದಾಗ, ಪಕ್ಕದ ಮನೆಯ ದೀಪಾ ಒಬ್ಬ ಯುವ ಡಾಕ್ಟರನ್ನು ಕರಕೊಂಡು ಬಂದಳು. ಡಾಕ್ಟರ್, ಮಕ್ಕಳೊಡನೆ ವಿಚಾರಿಸಿ, ಸೀಷರ್ ಇತ್ತೇ, ಏನೆಂದೆಲ್ಲ ಕೇಳಿ, ಎಪ್ಟಾಯಿನ್ ಮಾತ್ರೆ ಬರೆದುಕೊಟ್ಟು, ಮರುದಿನ ಇ.ಇ.ಜಿ. – ಇಲೆಕ್ಟ್ರೋ ಎನ್‌ಸೆಫಲೋಗ್ರಾಮ್ ಮಾಡಿಸುವಂತೆ ಸಲಹೆಯಿತ್ತು, ಅದರ ವರದಿಯೊಡನೆ ನರತಜ್ಞರನ್ನು ಕಾಣುವಂತೆ ತಿಳಿಸಿದರು. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹರ್ಷನನ್ನು ನಾನು ಬಳಿ ಕರಕೊಂಡೆ. ನನ್ನ ಎಡಗಾಲು, ಎಡಗೈ ಇದ್ದಕ್ಕಿದ್ದಂತೆ ತುಂಬ ದುರ್ಬಲವಾಗಿತ್ತು. ಸುಲಭವಾಗಿ ಕಾಲಿಗೆ ಮೆಟ್ಟು ಧರಿಸಲು ಆಗುತ್ತಿರಲಿಲ್ಲ. ಪೂರ್ಣ ನಿಶ್ಶಕ್ತಿ ಆವರಿಸಿತ್ತು.

ಇ.ಇ.ಜಿ. ಪರೀಕ್ಷೆ ಅಂತಹುದೇನನ್ನೂ ತೋರಲಿಲ್ಲ. ನರತಜ್ಞ ಡಾ. ಕಿಣಿ, ಎಪ್ಟಾಯಿನ್ ಮಾತ್ರೆಗಳನ್ನು ತಪ್ಪದೆ ತೆಗೆದುಕೊಳ್ಳುವಂತೆ ತಿಳಿಸಿ, ಮೂತ್ರಶಂಕೆ ಸರಿಯಾಗಲು ಏನೋ ಮಾತ್ರೆ ಬರೆದು ಕೊಟ್ಟರು. ತಿಂಗಳ ಕಾಲ ನಾನು ಕಣ್ಣು ಮುಚ್ಚಲೇ ಇಲ್ಲ. ಮುಚ್ಚಲು ಆಗುತ್ತಿರಲಿಲ್ಲ. ಹಗಲು, ರಾತ್ರಿ ಒಂದೇ ಆಗಿತ್ತು. ಕೈ ಕಾಲಿನ ದೌರ್ಬಲ್ಯವೂ ಕಡಿಮೆಯಾಗಲಿಲ್ಲ. ನಮ್ಮ ಪ್ಯಾಮಿಲಿ ಡಾಕ್ಟರ್ ಡಾ| ಹೆಗ್ಡೆ ಬಳಿಗೆ ಹೋದಾಗ, “ಇದೇನು ಇಷ್ಟು ಕೆಂಪು ಕೆಂಪಾಗಿದ್ದೀರಿ?” ಎಂದ ಅವರು, ಸ್ಪೆಷಲಿಸ್ಟ್ ಡಾ| ಮೇಲ್ಮನೆ ಅವರನ್ನು ಕಾಣುವಂತೆ ತಿಳಿಸಿದರು. ಸನಿಹದ ಪಾಂಚೋಲಿ ಆಸ್ಪತ್ರೆಯಲ್ಲಿ ಅವರನ್ನು ಕಾಣ ಹೋದರೆ, “ಯೂ ಲುಕ್ ಲೈಕ್ ಅ ಫಾರಿನರ್ ಕಮಿಂಗ್ ಟು ಇಂಡಿಯಾ ಆಂಡ್ ಗೆಟ್ಟಿಂಗ್ ಟಾನ್ಡ್!” ಅಂದ ಅವರು, ಅಡ್ಮಿಟ್ ಮಾಡಿಕೊಂಡರು. ಎಷ್ಟೋ ಇಂಜೆಕ್ಷನ್‌ಗಳಾದುವು. ರಕ್ತ ಪರೀಕ್ಷೆಯ ಬಳಿಕ ಜ್ಯಾಂಡಿಸ್ ಎಂದು ಡಾಕ್ಟರ್ ಸಾರಿದರು. ಕೈ ಕಾಲ್ಗಳಲ್ಲಿ ತೀವ್ರ ತುರಿಕೆ ಆರಂಭವಾಗಿ, ತಿಕ್ಕಿದಾಗ ಬಾತುಕೊಂಡಿತು. ಊರಿನಿಂದ ಅಮ್ಮ ಬಂದರು. ಐದು ದಿನಗಳ ಬಳಿಕ ರಜೆಯಲ್ಲಿ ಹೋಗಿದ್ದ ಮುಖ್ಯ ವೈದ್ಯಾಧಿಕಾರಿ ಬಂದವರು, ನನ್ನನ್ನು ನೋಡಿ, “ಸ್ಟೀವನ್ ಜಾನ್ಸನ್ಸ್ ಸಿಂಡ್ರೋಮ್, ಡಿಸ್‌ಛಾರ್ಜ್ ಮಾಡಲಾಗದು”, ಎಂದರು. ಆದರೆ ಎಡ್ಮಿಟ್ ಮಾಡಿದ ಡಾ| ಮೇಲ್ಮನೆ, “ಜ್ಯಾಂಡಿಸ್, ಮನೆಯಲ್ಲೆ ಟ್ರೀಟ್ ಮಾಡ ಬಹುದು” ಎಂದು ಮನೆಗೆ ಕಳುಹಿದರು. ಮೈಕೈಯ ತುರಿಕೆಗೆಂದು ಸ್ಕಿನ್ ಸ್ಪೆಷಲಿಸ್ಟ್ ಸ್ಟೀರಾಯಿಡ್ ಮಾತ್ರೆಗಳನ್ನ ಬರೆದು ಕೊಟ್ಟರು. ಮೂರು ದಿನಗಳಲ್ಲಿ ಪರಿಸ್ಥಿತಿ ಇನ್ನೂ ಕೆಡುಕಾಯ್ತು. ಡಾ| ಹೆಗ್ದೆ ಸೆಪ್ಟಿಸೀಮಿಯಾ ಆಗಿದೆಯೆಂದು ಹೇಳಿ ವಿಷಮ ಸ್ಥಿತಿಯೆಂದು ತಕ್ಷಣ ಆಸ್ಪತ್ರೆಗೆ ಸೇರಿಸುವಂತೆ ಸಲಹೆಯಿತ್ತರು. ಮಂಗಳೂರಿಗೆ ತಂದೆಯ ವೈದ್ಯ ಡಾ| ಕೆ.ಎಸ್. ಭಟ್ ಅವರಿಗೆ ಕರೆ ಮಾಡಿದಾಗ ವಿವರ ಕೇಳಿದ ಅವರೂ ಅದನ್ನು ಸಮರ್ಥಿಸಿದರು. ಮುಂಬೈಯ ಆಸ್ಪತ್ರೆಯ ಸಹವಾಸ ಇನ್ನು ಬೇಡವೇ ಬೇಡವೆಂದು ಊರಿಗೆ ಫಾ| ಮುಲ್ಲರ್‍ಸ್‌ಗೆ ಹೋಗಲೆಂದು ಫ್ಲೈಟ್ ಟಿಕೆಟಿಗಾಗಿ ಯತ್ನಿಸಿದರೆ, ಕ್ರಿಸ್‌ಮಸ್ ಸಮೀಪಿಸುತ್ತಿರುವ ಆ ಸಮಯ ಮಂಗಳೂರಿಗೆ ಒಂದೇ ಒಂದು ಟಿಕೆಟ್ ಕೂಡಾ ಲಭ್ಯವಿರಲಿಲ್ಲ. ಬಾಂಬೆ ಹಾಸ್ಪಿಟಲ್‌ನಲ್ಲಿ ನನ್ನ ಎಂಜಿನಿಯರ್ ಅಂಕ್‌ಲ್ ಮೊಮ್ಮಗಳು ಡಾ| ದೀಪಾಳಿಂದಾಗಿ ತಕ್ಷಣ ಪ್ರವೇಶ ದೊರೆಯಿತು. ಪರೀಕ್ಷಿಸಿದ ಡಾ| ಸೊರಾಬ್ಜಿ, ಎಲ್ಲವನ್ನೂ ಅರಿತುಕೊಂಡು, ಹಾರ್ಮೋನಲ್ ಮಾತ್ರೆ ಪ್ರಿಮ್ಯಾರಿನ್‌ನನ್ನು ತಕ್ಷಣ ನಿಲ್ಲಿಸುವಂತೆ ಹೇಳಿದರು. ನ್ಯೂರಾಲಜಿಸ್ಟ್ ಡಾ| ಭರೂಚಾ ಬಂದು ಪರೀಕ್ಷಿಸಿ ಎಪ್ಟಾಯಿನ್ ಮಾತ್ರೆಯ ಬದಲಿಗೆ ಗಾರ್ಡಿನಲ್ ಬರೆದಿತ್ತರು. ಮೆಡಿಸಿನ್ ಇಂಟರ್ ಆಕ್ಷನ್‌ನಿಂದಾಗಿ ಈ ಎಲ್ಲ ತೊಂದರೆ ಆಗಿತ್ತು. ಮೆಡಿಸಿನ್ ಇಂಡ್ಯೂಸ್ಡ್ ಜ್ಯಾಂಡಿಸ್ ತಗಲಿತ್ತು. ಸ್ಕಿನ್ ಸ್ಪೆಷಲಿಸ್ಟ್ ಕೊಟ್ಟ ಸ್ಟೀರಾಯಿಡ್ ಮಾತ್ರೆಗಳನ್ನು ಮಾತ್ರ ತಕ್ಷಣ ನಿಲ್ಲಿಸಲಾಗದೆ ಡಿಟೀರಿಯೊರೇಟಿಂಗ್ ಡೋಸ್‌ಗಳಲ್ಲಿ ಸೇವಿಸಿ ಮತ್ತೆ ನಿಲ್ಲಿಸುವಂತಾಯ್ತು. ಮಿದುಳಿನ ಎಮ್.ಆರ್.ಐ. ಮಾಡಲಾಯ್ತು. ಮಿದುಳಿನಲ್ಲೊಂದು ಗ್ಲಯೋಟಿಕ್ ಸ್ಕಾರ್ ಇರುವುದು ಪತ್ತೆಯಾಯ್ತು. ಜ್ಯಾಂಡಿಸ್ ಸಂಬಂಧ ಸತತ ಬ್ಲಡ್ ಟೆಸ್ಟ್ ನಡೆಯಿತು. ಕೈಕಾಲ್ಗಳ ಊತ ಕಡಿಮೆಯಾಗುತ್ತಾ ಬಂತು. ಮೈ ಚರ್ಮವೆಲ್ಲಾ ಪೊರೆಯಂತೆ ಉದುರಿ ಹೋಗಲಾರಂಭವಾಯ್ತು. ಮನೆಗೆ ಹಿಂದಿರುಗಿದ ಬಳಿಕ, ಎರಡು ತಿಂಗಳಾಗುವಾಗ ಕೊನೆಯದಾಗಿ ಅಂಗಾಲ ಚರ್ಮವೂ ಕಿತ್ತು ಹೋಗುವಾಗ ಅದರೊಡನೆ ಬಹಳ ಸಮಯದಿಂದಲೂ ಇದ್ದ ಕಾಲಿನ ಆಣಿಯೂ ( ಕಾರ್ನ್)ಹೊರಟು ಹೋಯ್ತು. ಬಾಂಬೆ ಹಾಸ್ಪಿಟಲ್ ನನಗೆ ಬಹಳ ಪ್ರಿಯವಾಯ್ತು. ಅಮ್ಮ ಹಾಗೂ ತುಷಾರ್ ನನ್ನೊಡನೆ ಆಸ್ಪತ್ರೆಯಲ್ಲಿದ್ದರು.

ಹೋದ ಶಕ್ತಿ ಹಿಂದಿರುಗಲು ಎರಡು ವರ್ಷಕ್ಕೂ ಹೆಚ್ಚು ಸಮಯ ಹಿಡಿಯಿತು. ಮನೆಗೆ ಹಿಂದಿರುಗಿ, ಚೇತರಿಸಿಕೊಂಡು ಕೆಲದಿನಗಳಾಗುವಾಗ ಪ್ರಿಮಾರಿನ್ ಮಾತ್ರೆ ಬಗ್ಗೆ ನನ್ನ ಡಾ| ಡಿ.ಕೆ.ಶೆಟ್ಟಿ ಅವರಿಗೆ ತಿಳಿಸಿ ಸಲಹೆ ಕೇಳಲು ಪತ್ರವೊಂದನ್ನು ಬರೆದೆ. ಪತ್ರ ತಲುಪಿದೊಡನೆ, ಲಂಡನ್‌ಗೆ ಹೊರಟಿದ್ದ ಡಾಕ್ಟರ್, ಏರ್ ಪೋರ್ಟ್‌ನಿಂದ ಕರೆಮಾಡಿ, ನಿಲ್ಲಿಸಿದ ಮಾತ್ರೆಯನ್ನು ಸದ್ಯ ತೆಗೆದು ಕೊಳ್ಳುವುದು ಬೇಡವೆಂದೂ, ಮೂರು ತಿಂಗಳ ಬಳಿಕ ತಾನು ಲಂಡನ್‌ನಿಂದ ಹಿಂದಿರುಗಿದಾಗ ಬಂದು ತನ್ನನ್ನು ಕಾಣುವಂತೆಯೂ ತಿಳಿಸಿದರು. ಮರು ವರ್ಷ, ಹೋಗಿ ಅವರನ್ನು ಕಂಡಾಗ, ಪುನಃ ಎಲ್ಲವನ್ನೂ ಕೇಳಿ, ಹಲವು ಪುಸ್ತಕಗಳನ್ನು ತೆರೆದು ರೆಫರ್ ಮಾಡಿ, ಅಪರೂಪದ ಪ್ರಕರಣಗಳಲ್ಲಿ ಹೀಗಾಗುವುದಿದೆ; ಆದ್ದರಿಂದ ಅದನ್ನು ನಿಲ್ಲಿಸಿ ಬಿಡುವುದೇ ಉತ್ತಮ, ಎಂದರು. ಕರ್ತವ್ಯ, ಹೊಣೆಯರಿತು ತಕ್ಷಣ ಸ್ಪಂದಿಸಿದ, ಡಾಕ್ಟರನ್ನು ನಾನು ನಿಜವಾಗಿಯೂ ಮೆಚ್ಚಿದೆ.
ಬಾಂಬೆ ಹಾಸ್ಪಿಟಲ್‌ನಲ್ಲಿ ಮೂರು ವರ್ಷಗಳ ವರೆಗೆ ಸತತ ವೈದ್ಯರನ್ನು ಕಾಣುತ್ತಿದ್ದು, ಪುನಃ ಪುನಃ ಬ್ಲಡ್ ಟೆಸ್ಟ್, ಎಮ್.ಆರ್.ಐ.ಗಳಾಗಿ ಔಷಧಿಯ ಬಗೆಗೆ ಎಚ್ಚರದೊಡನೆ ಐದು ವರ್ಷಗಳ ಬಳಿಕ ಕಾಣುವ ಆದೇಶದೊಡನೆ ನಾನು ಬಿಡುವಾದೆ.

೨೦೦೩ರಲ್ಲಿ, ನಮ್ಮಣ್ಣ ನನ್ನೊಡನೆ, ತಂದೆಯವರ ಬಗ್ಗೆ ಪುಸ್ತಕವೊಂದನ್ನು ತರುವ ಯೋಚನೆಯನ್ನು ಮುಂದಿಟ್ಟ. ಸಂತೋಷದಿಂದ ನನ್ನ `ಸತ್ಸಂಚಯ’ ಹೇಗೂ ಸಿಧ್ಧವಿದೆ, ಎಂದು ನಾನಂದೆ. ಅಣ್ಣ ಹದಿನೈದು ದಿನಗಳು ಉಜಿರೆಯಲ್ಲಿ ನ್ಯಾಚುರೋಪತಿ ಚಿಕಿತ್ಸೆಗಾಗಿ ಹೋದವನು, ಅಲ್ಲಿದ್ದಾಗ ಬರೆದ ಕೆಲವು ಪುಟಗಳನ್ನು ನನ್ನ ಕೈಗಿತ್ತ. ಅವನ್ನು ಪರಿಷ್ಕರಿಸಿ, `ನನ್ನ ಆದರ್ಶ – ನನ್ನ ತಂದೆ’ ಹಾಗೂ `ದಾರಿದೀಪವಾದ ಹಿರಿಯ ತಲೆಮಾರು’ ಎಂದು ಈ ಲೇಖನಗಳನ್ನು ನಾನು ಹೆಸರಿಸಿದೆ. ಹಿರಿಯರಾದ ರಾಮಚಂದ್ರ ಉಚ್ಚಿಲರು ಹಾಗೂ ಪ್ರೊ. ಅಮೃತ ಸೋಮೇಶ್ವರರು, ನಮ್ಮ ಕೋರಿಕೆಯಂತೆ ತಂದೆಯವರ ಬಗ್ಗೆ ತಮ್ಮ ಮಾತುಗಳನ್ನು ಬರೆದಿತ್ತರು. ಅವರ ಇತರ ಸಹಚರರನ್ನು ಕೇಳಿಕೊಂಡಿದ್ದರೂ, ಬರಹ ಸಿದ್ಧಿಸದೆಂದು ಇತರರು ಮುಂದಾಗಲಿಲ್ಲ.

ಈ ಸಂಕಲನವನ್ನು `ಸತ್ಸಂಚಯ’ವೆಂದೇ ಹೆಸರಿಸಿ, ಗುಡ್ಡೆಮನೆ ಪ್ರಕಾಶನವೆಂದು ಪ್ರಕಟಿಸಿದೆವು. ಈ ಕೃತಿ ಮಾರಾಟಕ್ಕಾಗಿರಲಿಲ್ಲ. `ದಾರಿದೀಪವಾದ ಹಿರಿಯ ತಲೆಮಾರು’, ಮುಖ್ಯವಾಗಿ ನಮ್ಮಮ್ಮನ ತಂದೆಯ ಕುಟುಂಬದ ಬಗೆಗಿದ್ದು, ಅಣ್ಣ ಸಂಗ್ರಹಿಸಿ ನಮೂದಿಸಿದ ವಿವರಗಳು ನಿಜಕ್ಕೂ ಅಮೂಲ್ಯವಾಗಿದ್ದುವು. ಆ ಹಿರಿಯರ ಬಗೆಗೆ ಈಗಾಗಲೇ ನನ್ನ ಈ ಆತ್ಮಕಥನದಲ್ಲಿ `ತುಳಸೀ ವಿಲಾಸ’ ಹಾಗೂ `ಕತ್ತಲೆಯಿಂದ ಬೆಳಕಿನೆಡೆಗೆ’ ಅಧ್ಯಾಯಗಳಲ್ಲಿ ನಿರೂಪಿಸಿದ್ದೇನೆ. `ಸತ್ಸಂಚಯ’ ಕೃತಿಗೆ ಫೋಟೋಗಳನ್ನು ಆರಿಸುವಲ್ಲಿ ಮಾತ್ರ ಲೋಪವಾಗಿ, ನನ್ನ ತಮ್ಮ ತಂಗಿಯರ ಫೋಟೋಗಳು ಇಲ್ಲಿ ಅಚ್ಚಾಗದೆ ಉಳಿದವು.

`ಸತ್ಸಂಚಯ’ ಕೃತಿ ನಮ್ಮ ಮನೆ – ಚೇತನಾದ ಅಂಗಣದಲ್ಲೇ ಅಂದಿನ ಫಾ| ಮುಲ್ಲರ್‍ಸ್ ಸೇವಾಸ್ಪತ್ರೆಯ ಡೈರೆಕ್ಟರ್ ಫಾ| ಮಿನೇಜ಼ಸ್ ಮತ್ತು ನಮ್ಮ ಬಂಧು, ಮಾನನೀಯ ಪ್ರೊ.ಅಮೃತ ಸೋಮೇಶ್ವರರ ಕೈಗಳಿಂದ ಬಿಡುಗಡೆಯಾಯ್ತು. ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅನಿಲ್ ಕುಮಾರ್ ಮತ್ತು ಮಂಗಳ ಗಂಗೋತ್ರಿಯ ಮೆಟೀರಿಯಲ್ ಸಾಯನ್ಸ್ ವಿಭಾಗ ಮುಖ್ಯಸ್ಥ, ಬಂಧು ಡಾ| ಜಯಗೋಪಾಲ್ ಉಚ್ಚಿಲ್ ಜೊತೆಗಿದ್ದರು. ನಮ್ಮ ತಂದೆಯವರು ರಚಿಸಿದ ಅವರ ಐದು ತಲೆಮಾರುಗಳ ವಂಶವೃಕ್ಷವೂ ಈ ಕೃತಿಯ ಕೊನೆಯ ಪುಟಗಳಲ್ಲಿ ಅಚ್ಚಾಗಿದೆ.

ಮುಂಬೈಗೆ ಹಿಂದಿರುಗಿದಾಗ, ಆತ್ಮೀಯ ಸಾಹಿತಿ ಕೆ.ಟಿ.ಗಟ್ಟಿ ಅವರು ಕೃತಿಯೊಂದರ ಕರಡು ಪ್ರತಿಯನ್ನು ಕಳುಹಿ ಕೊಟ್ಟು, ಅನುವಾದ ಮಾಡಲು ಸಾಧ್ಯವೇ, ನೋಡಿ, ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ಡಿ.ವೈ.ಎಸ್.ಪಿ. ರಾಮಯ್ಯ ರೈ ಅವರ ವೃತ್ತಿ ಜೀವನದ ಆತ್ಮಕಥನವದು. ಮಾನ್ಯ ಮುಖ್ಯ ಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ಮುನ್ನುಡಿ, ಕರ್ನಾಟಕದ ನಿವೃತ್ತ ಡಿ.ಜಿ.ಪಿ ಕೃಷ್ಣಮೂರ್ತಿ ಅವರಿಂದ ಪೀಠಿಕೆ ಹಾಗೂ ಕೆ.ಟಿ.ಗಟ್ಟಿ ಅವರ ಬೆನ್ನುಡಿಯಿರುವ ಈ ಕೃತಿಯ ಪುಟಗಳಲ್ಲಿ ನನ್ನ ಮಂಗಳೂರ ಪರಿಚಿತ ಹೆಸರುಗಳು ಕಾಣಿಸಿ ಕೊಂಡಾಗ ಆಸಕ್ತಿ ಕುದುರಿತು.

ಬಾಲ್ಯದಲ್ಲಿ ನಮ್ಮ ಮನೆ ಪಕ್ಕವೇ ಮಂಗಳೂರು ಸಬ್‌ಜೈಲಿನ ಗೋಡೆ ಹಾರಿ ಪಲಾಯನಗೈದ ಪೆರಿಸ್‌ನ ಕಥೆಯನ್ನು, ಕೃತಿಕತೃ ‘ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ’ ಎಂಬ ಶೀರ್ಷಿಕೆಯಲ್ಲಿ ತರಂಗದಲ್ಲಿ ವರ್ಷಗಳ ಹಿಂದೆ ಧಾರಾವಾಹಿಯಾಗಿಸಿದ್ದನ್ನು ಓದಿದ ನೆನಪೂ ಹಸಿಯಾಗಿತ್ತು. ಅಸೌಖ್ಯ ತಂದ ಒತ್ತಾಯದ ವಿಶ್ರಾಂತಿಯಿಂದ ಬಿಡುಗಡೆಯೂ ಬೇಕಿತ್ತು. ರಾಮಯ್ಯ ರೈ ಅವರ ವೃತ್ತಿ ಜೀವನದ ಅನುಭವಗಳು, ಅವರ ಸತ್‌ಚಿಂತನೆ, ಮೌಲ್ಯಗಳು ನನ್ನಿಂದ ಈ ಅನುವಾದವನ್ನು ಸಾಧ್ಯವಾಗಿಸಿದುವು. ಮಂಗಳೂರಲ್ಲಿ ನಡೆದ ಇಂಗ್ಲಿಷ್ ಆವೃತ್ತಿಯ ಬಿಡುಗಡೆಯಲ್ಲಿ ಆ ಸತ್ಯನಿಷ್ಠ, ಪ್ರಾಮಾಣಿಕ ಅಧಿಕಾರಿಯನ್ನು ಕಾಣುವ, ಭೇಟಿಯಾಗುವ ಅವಕಾಶವೂ ಪ್ರಾಪ್ತವಾಯ್ತು. ನಾಲ್ಕೇ ತಿಂಗಳಲ್ಲಿ ಅನುವಾದ ಸಿಧ್ಧವಾಯ್ತು. ಸುಧಾ ಪತ್ರಿಕೆಯಲ್ಲಿ ೨೦೦೫ರಲ್ಲಿ ಧಾರಾವಾಹಿಯಾಗಿ ಪ್ರಕಟವಾಯ್ತು. ಪ್ರತಿ ವಾರವೂ ಪ್ರತಿಕ್ರಿಯೆಗಳು ಪ್ರಕಟವಾಗುತ್ತಿದ್ದುವು. ವಾಸ್ತವ ಕಥೆಯಾದ್ದರಿಂದ ಪ್ರಕರಣವೊಂದರ ಬಗ್ಗೆ ಆಕ್ಷೇಪದ ದನಿಯ ಪ್ರತಿಕ್ರಿಯೆಯೂ ಬಂತು.

೨೦೦೫ರ ಉದಯ – ಶುಭೋದಯವಾಯ್ತು! ಕೆ.ಟಿ.ಗಟ್ಟಿಯವರ ಮಾತಿಗೊಪ್ಪಿ ನನ್ನ `ಗಾನ್ ವಿದ್ ದ ವಿಂಡ್’ ಪ್ರಕಟಿಸಲೊಪ್ಪಿದ ಪ್ರಕಾಶಕ – ಅಂಕಿತದ ಪುಸ್ತಕದ ಕಂಬತ್ತಳ್ಳಿಯವರು ಕೇಳಿದಂತೆ, ಕೃತಿಯ ಪಾತ್ರಗಳ ಪರಿಚಯ, ಕಥಾ ಸಾರಾಂಶ, ಇತಿಹಾಸ ಬರೆದ ಚಲಚ್ಚಿತ್ರದ ಪಾತ್ರವರ್ಗದ ಪರಿಚಯ, ಚಿತ್ರದೊಡನೆ ತಳಕು ಹಾಕಿಕೊಂಡ ದುರಂತಗಳು – ಎಲ್ಲವನ್ನೂ ಸಿದ್ಧಗೊಳಿಸಿ ಕಳುಹಿದೆ. `ಗಾನ್ ವಿದ್ ದ ವಿಂಡ್’ ಬೆಳಕು ಕಂಡಾಗ ನನ್ನ ಅನಾರೋಗ್ಯವೂ ಹೇಳಹೆಸರಿಲ್ಲದಂತೆ ಮಾಯವಾಯ್ತು. ಕೆ.ಟಿ.ಗಟ್ಟಿಯವರು ಆಗ ಬೆಂಗಳೂರಲ್ಲೇ ಮಗನ ಮನೆಯಲ್ಲಿದ್ದರು. ಮೊದಲ ಪ್ರತಿಯನ್ನು ಅವರ ಕೈಯಲ್ಲಿರಿಸಿ ಧನ್ಯಳಾದೆ. . ಅವರಿಗೇ ಕೃತಿಯನ್ನು ಸಮರ್ಪಿಸುವುದು ನನ್ನಿಚ್ಛೆಯಾಗಿದ್ದರೂ ಪ್ರಕಾಶಕರು ಆ ಅವಕಾಶವನ್ನು ಕೊಡಲಿಲ್ಲ. ಅನುವಾದವನ್ನು ಹಾಗೆ ಸಮರ್ಪಿಸುವ ಅಧಿಕಾರ ಅನುವಾದಕರಿಗಿಲ್ಲ ಎಂಬ ಅವರ ಮಾತು ಸರಿಯೆಂದು ನಾನನ್ನಲಾರೆ. ಪರಭಾಷಾ ಕೃತಿಯೊಂದನ್ನು ಕನ್ನಡಕ್ಕೆ ತಂದು ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತವಾಗಿಸುವ ಅನುವಾದಕರಿಗೆ, ತಮ್ಮ ಕೃತಿಯನ್ನು ಯಾರಿಗಾದರೂ ಸಮರ್ಪಿಸುವ ಅಧಿಕಾರ ಇಲ್ಲವೆಂಬುದು ಅರ್ಥಹೀನ!

ಕೃತಿಯ ಎರಡನೇ ಪ್ರತಿಯನ್ನು ಗಿರೀಶ ಕಾರ್ನಾಡರ ಕೈಯಲ್ಲೂ, ಮೂರನೆಯದನ್ನು ಗೆಳತಿ ಸ್ವರ್ಣಲತಾ, ಯಶೋಧರಣ್ಣನ ಕೈಯಲ್ಲೂ ಇರಿಸಿದೆ. ಅವರ ಮನೆಯಲ್ಲೇ ಕರಡು ಪ್ರತಿ ತಿದ್ದುವಲ್ಲಿ, ಸ್ವರ್ಣ ನನಗೆ ನೆರವಾಗಿದ್ದಳು. “ಕನ್ನಡದಲ್ಲಿ ಮಾತ್ರವಲ್ಲ, ಭಾರತದಲ್ಲೇ `ಗಾನ್ ವಿದ್ ದ ವಿಂಡ್’ ಅನುವಾದಿಸಿದವಳು, ಶ್ಯಾಮಲಾ ಒಬ್ಬಳೇ”, ಎಂದು ಯಶೋಧರಣ್ಣ ಅಂದಾಗ ಹೃದಯ ತುಂಬಿ ಬಂತು. ಇಪ್ಪತ್ತೇಳು ವಿದೇಶೀ ಭಾಷೆಗಳಿಗೆ ಅನುವಾದವಾಗಿದ್ದ `ಗಾನ್ ವಿದ್ ದ ವಿಂಡ್’, ಇಪ್ಪತ್ತೆಂಟನೆಯದಾಗಿ ಕನ್ನಡದಲ್ಲಿ ಬೆಳಕು ಕಂಡಿತು. ಕೃತಿ ಬೆಳಕು ಕಂಡುದನ್ನು ಕಾಣಲು ನನ್ನ ತಂದೆ ಇರದಿದ್ದರೂ, ಅವರ ಚೇತನ ನನ್ನನ್ನು ಹರಸಿದೆಯೆಂಬ ಧೃಢ ವಿಶ್ವಾಸ ನನ್ನದು.

ಮಂಗಳೂರಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ವತಿಯಿಂದ, ಆತ್ಮೀಯರಾದ ಕೆ.ಟಿ.ಗಟ್ಟಿ ಅವರ ಕೈಗಳಿಂದ ಕೃತಿ ಲೋಕಾರ್ಪಣಗೊಂಡಿತು. ಇಂಗ್ಲಿಷ್ ಪ್ರಾಧ್ಯಾಪಿಕೆ ಮಾಲಿನಿ ಹೆಬ್ಬಾರ್ ಅವರು ಸೊಗಸಾಗಿ ಕೃತಿ ಪರಿಚಯ ಮಾಡಿದರು. ಮತ್ತೆ ಕೆಲ ದಿನಗಳಲ್ಲಿ ಕೃತಿಯ ಮುಂಬಯಿ ಬಿಡುಗಡೆ, ಮುಂಬೈ ಕರ್ನಾಟಕ ಸಂಘದಲ್ಲಿ ಮಾನ್ಯ ವ್ಯಾಸರಾವ್ ನಿಂಜೂರರ ಕೈಗಳಿಂದಾಯ್ತು. ಪ್ರಿಯ ವ್ಯಾಸರಾಯ ಬಲ್ಲಾಳರು, ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ ಬರುವುದು ನಿಶ್ಚಯ, ಎಂದರು. ಅವರ ಮಾತು ನಿಜವಾಯ್ತು. ಮೂರೇ ತಿಂಗಳುಗಳೊಳಗೆ ನನ್ನ `ಗಾನ್ ವಿದ್ ದ ವಿಂಡ್’ ಕೃತಿಗೆ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಾಪ್ತವಾಯ್ತು. ಹತ್ತು ವರ್ಷಗಳ ಕಾಯುವಿಕೆ ಸಾರ್ಥಕವಾದಂತನಿಸಿತು.

ಐದು ವರ್ಷಗಳ ಚಿಕಿತ್ಸೆ ಚ್ಯುತಿಯಿಲ್ಲದೆ ಪೂರೈಸಿದ ಸಮಾಧಾನದಿಂದ ಡಾಕ್ಟರ ಬಳಿಗೆ ಹೋದರೆ, ಮತ್ತೊಂದು ವರ್ಷ ಕಡಿಮೆ ಡೋಸ್‌ನಲ್ಲಿ ತೆಗೆದುಕೊಂಡು, ನನಗೆ ವಿಶ್ವಾಸವಿದ್ದರೆ, ಹಾಗೂ ಮನೆಯವರ ಒಪ್ಪಿಗೆಯಿದ್ದರೆ ಮಾತ್ರೆ ನಿಲ್ಲಿಸಿ ಬಿಡಬಹುದು, ಎಂದರು. ಮನೆಯವರ ಪರವಾಗಿ ನಾನೇ ಇದೆಯೆಂದು ಸಾರಿ, ಹಾಗೇ ವರ್ಷದ ಬಳಿಕ ನಿಲಿಸುವೆನೆಂದೆ. ಪ್ರಶಸ್ತಿ ಪ್ರಯುಕ್ತ ಅಮ್ಮ ಹೊಸಪೇಟೆಗೆ ಹೊರಟಿದ್ದಾರೆಂದು ತುಷಾರ್ ಹೇಳಿದಾಗ ಡಾಕ್ಟರ ಮುಖವರಳಿತು. ಆರಂಭದಲ್ಲಿ ನನ್ನ ವಿವರಗಳನ್ನು ಕೇಳಿದ್ದ ಅವರು, ನನ್ನ ಕೇಸ್ ಶೀಟ್‌ನಲ್ಲಿ “ಟ್ರಾನ್ಸ್‌ಲೇಟೆಡ್ ಗಾನ್ ವಿದ್ ದ ವಿಂಡ್” ಎಂದು ಬರೆದಿದ್ದರು. ೨೦೦೩ರಲ್ಲಿ ಮಂಗಳೂರಿನಲ್ಲಿ ಫ್ರೋಜ಼ನ್ ಶೋಲ್ಡರ್‌ಗೆ ಫಾ| ಮುಲ್ಲರ್‍ಸ್ ಆಸ್ಪತ್ರೆಯಲ್ಲಿ ಡಾ| ಮಹಾಬಲ ರೈ ಅವರು ಮ್ಯಾನಿಪ್ಯುಲೇಶನ್ ಸರ್ಜರಿ ಮಾಡಿದಾಗ, ನನ್ನ ಕೇಸ್ ಶೀಟ್ ನೋಡಿದ ಡಾಕ್ಟರ್‍ಸ್ ತಂಡ, ಡಾ| ಭರೂಚಾ ಅವರ ಈ ಒಕ್ಕಣೆಯನ್ನೋದಿ ಕೌತುಕಗೊಂಡಿದ್ದರು. ಓದುಗಾ, ಪ್ರಿಯ ಕಾಯಕದ ಸಾರ್ಥಕ್ಯಕ್ಕಿಂತ ಮಿಗಿಲಾದ ಸಂಜೀವಿನಿ ಇದೆಯೇ?

(ಮುಂದುವರಿಯಲಿದೆ)