(ಚಕ್ರೇಶ್ವರ ಪರೀಕ್ಷಿತ ೧೩)

[ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ. ಆಕೆಯನ್ನು ಖಾಯಂ ಎನ್ನುವಂತೆ ಮೈಸೂರಿನ ಮನೆ – ಅತ್ರಿಯಲ್ಲಿ, ತಮ್ಮ – ಅನಂತವರ್ಧನ ಮತ್ತು ಅವನ ಹೆಂಡತಿ – ರುಕ್ಮಿಣಿಮಾಲಾ, ಉತ್ತಮ ವೈದ್ಯಕೀಯ ನೆರವಿನೊಡನೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಈಚೆಗೆ ಅವರಿಬ್ಬರಿಗೂ ಒಂದು ವಾರದ ಮಟ್ಟಿಗೆ ಪರವೂರಿಗೆ ಹೋಗುವ ಅನಿವಾರ್ಯತೆ ಬಂದಾಗ, ನಾವಿಬ್ಬರು ಅಲ್ಲಿಗೆ ಹೋಗಿ ಅಮ್ಮ ಮತ್ತು ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದೆವು. ಆ ಅವಧಿಯಲ್ಲಿ ಅಮ್ಮನ ಅನುಪಾನ, ಆರೈಕೆಗಳನ್ನು ಪೂರ್ಣ ನಡೆಸಿದವಳು ದೇವಕಿ; ನಾನು ಹುಸಿ-ಧೈರ್ಯಕ್ಕಷ್ಟೇ ಇದ್ದವ!

೧೯೬೯ ರಿಂದ ೧೯೭೪ ರವರೆಗೆ, ನನ್ನ ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಕುಟುಂಬದ ಭಾಗವಾಗಿಯೇ ಮೈಸೂರಿನಲ್ಲೇ ಇದ್ದೆ. ಮೊದಲ ಎರಡು ವರ್ಷ ಸರಸ್ವತೀಪುರದ ೧೩ನೇ ಮುಖ್ಯರಸ್ತೆಯ ಬಾಡಿಗೆಮನೆಯಲ್ಲಿ, ಅನಂತರ ಕಾಮಾಕ್ಷೀ ಆಸ್ಪತ್ರೆ ರಸ್ತೆಯ ಸ್ವಂತಮನೆ – ಅತ್ರಿಯಲ್ಲಿ; ಆಗ ಅದು ನನ್ನ ಮನೆಯೂ ಆಗಿತ್ತು. ೧೯೭೪ರಲ್ಲಿ ಸ್ವೋದ್ಯೋಗ (ಅತ್ರಿ ಬುಕ್ ಸೆಂಟರ್) ನೆಚ್ಚಿ ನಾನು ಮಂಗಳೂರನ್ನಾರಿಸಿಕೊಂಡೆ. ಅಲ್ಲಿಂದ ನನ್ನ ಕೌಟುಂಬಿಕ ಸಂಬಂಧಗಳಲ್ಲಿ ಮೈಸೂರಮನೆ ನನಗೆ ಕೇವಲ ತವರ್ಮನೆ. ಕೌಟುಂಬಿಕ ಸಂಬಂಧಗಳಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ನಾನಲ್ಲಿಗೆ ಅತಿಥಿ ಎನ್ನುವ ಭಾವ ಬರುತ್ತಿತ್ತು. ಇದರಿಂದುಂಟಾದ ನಿಷ್ಕ್ರಿಯೆಯನ್ನು ತಪ್ಪಿಸಲು, ಮೊನ್ನಿನ ವಾಸಾವಧಿಯಲ್ಲಿ, ಒಂದು ರಾತ್ರಿಗೆ ಎನ್ನುವಂತೆ ನಾನೊಬ್ಬನೇ ರೈಲುಯಾನದಲ್ಲಿ ಬೆಂಗಳೂರಿನ ಮಗನ ಮನೆಗೆ ಹೋಗಿ ಬಂದೆ. ಉಳಿದಂತೆ ರುಕ್ಮಿಣಿಯ ಗೇರ್ ಸೈಕಲ್ ಹಿಡಿದು ದಿನಕ್ಕೆ ಸುಮಾರು ಮೂರು ಗಂಟೆಯಂತೆ, ನಾಲ್ಕು ಸೈಕಲ್ ಸರ್ಕೀಟಿನಲ್ಲಿ ಮೈಸೂರು ದರ್ಶನ ನಡೆಸಿದೆ, ಮತ್ತೆ ರುಕ್ಮಿಣಿಯದ್ದೇ ಗಣಕ ಬಳಸಿ ಸಚಿತ್ರ ಟಿಪ್ಪಣಿಗಳನ್ನೂ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದೆ. ಅವನ್ನೇ ಈಗ ಸಂಕಲಿಸಿ, ಪರಿಷ್ಕರಿಸಿ, ಸಂವರ್ಧಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅಂಕಿಸಂಕಿಗಳ ಗೋಜಲಿಲ್ಲದೇ ಸುಮಾರು ನಾಲ್ಕು ದಶಕಗಳ ಕಾಲಪ್ರವಾಹದಲ್ಲಿ ಮೈಸೂರು ಕಡಿದದ್ದೆಷ್ಟು, ಕೂಡಿದ್ದೆಷ್ಟು ಎನ್ನುವ ಪರೋಕ್ಷ ದಾಖಲೆಯಾಗಿಯೂ ಇದು ನಿಮ್ಮ ಕುತೂಹಲಕ್ಕೆ ಆಹಾರವಾಗಬಹುದು ಎಂದು ನಾನು ನಂಬಿದ್ದೇನೆ.]

ಮೈಸೂರಿನಲ್ಲಿ ಮೂರನೇ ಮಳೆ!

ಮಧ್ಯಾಹ್ನ ನಾನು ದೇವಕಿ ಮೈಸೂರು ತಲಪಿದ್ದೆವು. ನಾವು ಬಸ್ಸಿನಲ್ಲಿ ಹರಿಸಿದ ಅಗಾಧ ಬೆವರೇ ಬಾಷ್ಪೀಕೃತಗೊಂಡು, ಸಂಜೆ ಆಗಸದಿಂದ ನಾಲ್ಕು ಹನಿಯಾಗಿ ಉದುರಿತು. ಆದರೆ ಮೈಸೂರಿನಲ್ಲೇ ಇರುವ ಅಂಗೈಬ್ರಹ್ಮಾಂಡಿ ಅರ್ಥಾತ್ ಚರವಾಣಿ ಚುರುಕಿನ ಅಭಿಜಿತ್ (ಹೋಮಿಯೋ ವೈದ್ಯ, ನನ್ನ ಸೋದರಮಾವನ ಮೊಮ್ಮಗ) ಫೇಸ್ ಬುಕ್ಕಿಗೆ ಧಾವಿಸಿದ “ಮೈಸೂರಿಗೆ ಮೂರನೇ ಮಳೆ.” ಆತನಿಗೆ ಅದು ನಮ್ಮ ‘ಶ್ರಮ’ವೆಂದು ಮನವರಿಕೆ ಮಾಡಲು ನಾನು ಮರು ಬೆಳಿಗ್ಗೆ, ರುಕ್ಮಿಣಿಯ ಎಂಟೀಬೀ ಸೈಕಲ್ ಹಿಡಿದು ಹೊರಟೇಬಿಟ್ಟೆ. ಪೆಡಲಾನಂದವನ್ನು ತುಸು ಹೆಚ್ಚೇ ಅನುಭವಿಸಲು ಅಭಿಜಿತ್ತಿನ ವಿರುದ್ಧ ದಿಕ್ಕಿಗೆ, ಅಂದರೆ ಕಾಮಾಕ್ಷೀ ಆಸ್ಪತ್ರೆಯತ್ತ ಏರುದಾರಿ (ಪಶ್ಚಿಮಮುಖಿ) ಹಿಡಿದು, ಎಲ್ಲೋ ತುಸು ಎಡಕ್ಕೆ ಮತ್ತೆ ಬಲಕ್ಕೆ ತಿರುಗಿ ಹೊಸ ಕಾಂತರಾಜೇ ಅರಸು ರಸ್ತೆಗಾಗಿ, ಮೈಸೂರಿನ ಮಹಾವರಣ ರಸ್ತೆ ಅಥವಾ ರಿಂಗ್ ರೋಡ್ ಅರ್ಥಾತ್ ಉಂಗುರ ರಸ್ತೆ ಸೇರಿಕೊಂಡೆ.

ದೊಡ್ಡದಾಗುತ್ತಿರುವ ಊರಿನ, ಅಂದರೆ ಕಿಷ್ಕಿಂಧೆಯಾಗುವ ಹಳೆ ದಾರಿಗಳಲ್ಲಿ ಸಿಲುಕಿಕೊಳ್ಳದೆ ದೀರ್ಘ ಓಟಕ್ಕಿಳಿದ ವಾಹನಗಳಿಗೆ ಮೊದಲ ಹಂತದಲ್ಲಿ ಪರ್ಯಾಯ ರಸ್ತೆ ಅರ್ಥಾತ್ ಬೈಪಾಸ್ ರೋಡ್‍ಗಳು ಒದಗುತ್ತವೆ. ಅಲ್ಲೂ ಬಿಗಡಾಯಿಸಿದ `ಕಾಯಿಲೆ’ಗೆ ಮೋಕ್ಷ ಕಾಣಿಸುವ ಮಾಯಾ ಉಂಗುರವೇ ಈ ಉಂಗುರ ರಸ್ತೆ! ಇದರ ಔಚಿತ್ಯ ಏನೇ ಇರಲಿ, ವೈಭವಕ್ಕೆ ಬಲಿಯಾಗುವುದು ಬಹುತೇಕ ಕೃಷಿಸಂಸ್ಕೃತಿಯೇ. ದಾರಿಯ ನೆಲ ಮಾತ್ರವಲ್ಲ, ಆಸುಪಾಸಿನ ಕೃಷಿಯೂ ಇದರ ಪ್ರಭಾವದಲ್ಲಿ ಅವಹೇಳನಕ್ಕೀಡಾಗುತ್ತದೆ. ಕೃಷಿನೆಲ ವಾಣಿಜ್ಯ ಪರಿವರ್ತನೆ ಕಂಡು, ನಿವೇಶನ, ರಸ್ತೆಜಾಲವೆಂದೂ ಮಳೆಯೋ ಒರತೆಯೋ ಇದ್ದ ನೀರ ಹರಿವುಗಳೆಲ್ಲ ಚರಂಡಿಯೆಂದೂ ಮೌಲ್ಯವರ್ಧನೆಗೊಳ್ಳುವ (?) ಪರಿ ಖಂಡಿತವಾಗಿಯೂ ಆರೋಗ್ಯಕರವಲ್ಲ! ಮೈತೆತ್ತ ಪ್ರಾಕೃತಿಕ ಸಂಪತ್ತು ಮತ್ತು ಅಳವಡಿಸಿ ಮುಗಿಯದ ಔದ್ಯಮಿಕ ಸವಲತ್ತುಗಳನ್ನು ನನ್ನ ಪೆಡಲಿಕೆಯ ಸುತ್ತಿಗೊಂದರಂತೆ ಎಣಿಸ ಹೊರಟು ನಾನು, ಕೊನೆಯಲ್ಲಿ `ಅಭಿವೃದ್ಧಿ’ಗೆ ಉಬ್ಬಲೇ ಅವಹೇಳನಕ್ಕೆ ಕುಗ್ಗಲೇ’ ಎಂಬ ಗಹನ ಸಂದೇಹದಲ್ಲಿ ಸಿಕ್ಕಿಕೊಂಡೆ. ಉದಾಹರಣೆಗೆ, ಒಂದೆಡೆ ಲಲಿತಮಹಲ್ಲಿನ (ಮೈಸೂರಿನ ಒಂದು ಖ್ಯಾತ ಅರಮನೆ) ಪ್ರತಿಕೃತಿಯಂತೆ ಕಲ್ಯಾಣ ಮಂದಿರವೊಂದು ಏಳುತ್ತಿದೆ. ಅದರ ಕೆಲಸ ಅರೆಬರೆ ಮುಗಿದಲ್ಲಿಗೇ ಒಂದು ಮದುವೆ ನಡೆದಿತ್ತು! ಅದರ ಒತ್ತಿನಲ್ಲೊಬ್ಬ ಮಹಾಶಯ, ಬಹುಶಃ ಐದು ನಿವೇಶನಗಳನ್ನೇ ಒಗ್ಗೂಡಿಸಿ (ಕುಂದದ ಮೇಲೆ ಅವುಗಳ ಕ್ರಮ ಸಂಖ್ಯೆಗಳನ್ನು ನಮೂದಿಸಿದ್ದಾರೆ), ಮಾರ್ಗದಂಚಿನ ತುಣುಕು ನೆಲವನ್ನಷ್ಟೇ ಎತ್ತರಿಸಿ ಭರ್ಜರಿ ಕುಂದ ಸಹಿತ ಗೇಟ್ (ಪಾಗಾರ ಇಲ್ಲ), ಅದಕ್ಕೆ ಬೀಗ, ನೋ ಪಾರ್ಕಿಂಗ್ ಫಲಕ ಇತ್ಯಾದಿ ಅಲಂಕಾರ ಮಾಡಿರುವುದು ತಮಾಷೆ ಏನೂ ಅಲ್ಲ!

ಉಂಗುರ ರಸ್ತೆ ಹೆಗ್ಗಡದೇವನ ಕೋಟೆ ರಸ್ತೆಯನ್ನು ಕತ್ತರಿಸುವಲ್ಲಿ ನಾನು ಬಿರಿ ಒತ್ತಿದೆ. ಅಲ್ಲೇ ಎಲ್ಲೋ ಅಭಿಜಿತ್ತಿನ ಹೊಮಿಯೋ ಕ್ಲಿನಿಕ್, ಹೊಸ ಮತ್ತು ಸ್ವಂತ ಕಟ್ಟಡ ಸೇರಿದ್ದು ನನ್ನ ತಿಳುವಳಿಕೆಯಲ್ಲಿತ್ತು. ಅದನ್ನು ಸುಲಭ ಕ್ರಮಗಳನ್ನು ಬಿಟ್ಟೇ ಶೋಧಿಸುವ ಉತ್ಸಾಹ ನನ್ನದು. ಇತ್ತ ಎನ್ನೈಯಿವರೆಗೂ ಅತ್ತ ತನಿಖಾಗೇಟಿನ ಇಳಿಜಾರ ಕೊನೆಯವರೆಗೂ ಸುತ್ತಾಡಿದ್ದಾಯ್ತು. ಅವರಿವರಲ್ಲಿ ವಿಚಾರಿಸಿದಾಗ ಸಿಕ್ಕಿದ ಸಲಹೆಗಳು ಸಾವಿರ, ಫಲಿಸಿದ್ದು ಒಂದೇ – ಆತ ಅಭಿಜಿತ್ತಿನ ಆಪ್ತ ಪರಿಚಿತನಂತೆ. “ಇಂಗೇ ರಿಂಗ್ ರೋಡಿಲೇ ಓಗಿ. ಫಸ್ಟ್ ಲೆಫ್ಟಲ್ಲ, ಸೆಕೆಂಡ್ ಲೆಫ್ಟಿಲಿ ತಿರ್ಕಳಿ. ಗೋಬಳಿಮರ ಸ್ಟಾಪ್ ಕೇಳಿ, ಅಲ್ಲೇ ಐತೆ…”

ಅದುವರೆಗೆ ಅದೃಶ್ಯವೂ ಅನಂತರ ಅಸ್ಪಷ್ಟವೂ ಆಗಿದ್ದ ಚಾಮುಂಡಿಬೆಟ್ಟ ಈಗ ನನ್ನ ನೇರ ಎದುರಿಗೇ ಹರಡಿಕೊಂಡಂತಿತ್ತು. ಸೂಚನೆಯಂತೇ ಗೋಬಳಿಮರ ಸ್ಟಾಪ್ – ಜೆಪಿ ನಗರದ ಹೃದಯ, ತಲಪಿದೆ. ಅದೋ ವೈದ್ಯ, ಶುಶ್ರೂಷಾಲಯಗಳ ಸಂತೆ! ಗೊಂದಲ ಕಳೆಯುವಂತೆ ಔಷಧ ಮಳಿಗೆಯೊಂದರಲ್ಲಿ ವಿಚಾರಿಸಿ, ‘ಇಂದ್ರಪ್ರಸ್ಥ ಹೊಮಿಯೋ ಚಿಕಿತ್ಸಾಲಯ’ವನ್ನೇನೋ ಹಿಡಿದೆ. ಆದರೆ ಅಭಿಜಿತ್ ನನ್ನ ಬರೋಣದ ಸೂಚನೆ ಸಿಕ್ಕವನಂತೆ, ಅದೇನೋ ವಿಶೇಷ ರಜಾ ಸೂಚನೆ ತಗಲುಹಾಕಿ ನಾಪತ್ತೆಯಾಗಿದ್ದ! ವಾಸ್ತವದಲ್ಲಿ ಅಭಿಜಿತ್ ನನ್ನ ಸೈಕಲ್ ಸವಾರಿಯ ಸಂತೋಷಕ್ಕೊಂದು ನೆಪ. ಹಾಗಾಗಿ ಮತ್ತೂ ಅವನಿಗೆ ಚರವಾಣಿಸಿ ತೊಂದರೆ ಕೊಡದೆ, ಸರಸ್ವತೀಪುರಕ್ಕೆ ಹತ್ತಿರದ ದಾರಿ ಹಿಡಿದೆ.

ನಿನ್ನೆ ಸಂಜೆ ತೊಡಗಿದ್ದ ಭೂಮಿ ಆಗಸದ ಕೊಡು – ಕೊಳೆ, ರಾತ್ರಿಗೂ ಮುಂದುವರಿದಿತ್ತು. ವಹಿವಾಟು ಇನ್ನೂ ಮುಗಿದಿಲ್ಲವೆನ್ನುವಂತೆ ಇಂದು ಇನ್ನೂ ನೇತುಬಿದ್ದ ಮೋಡಗಳು ನನಗೆ ಸೂರ್ಯ-ಮರೆಯೇನೋ ಹೌದು. ಆದರೆ ಅದು ಉಬ್ಬೆಮನೆ ಪರಿಣಾಮವನ್ನು ಬೀರಿದ್ದಕ್ಕೆ ಮನೆ (ಅತ್ರಿ) ಸೇರುವಾಗ ಮತ್ತೆ ಬೆವರಿನ ಹೊಳೆಯೇ ಹರಿದಿತ್ತು! (ಸೈಕಲ್ ಸರ್ಕೀಟ್ ೩೦೭/೧೯-೪-೧೭)

ದರ್ಗಾದಲ್ಲಿ ಕೇಸರಿ ಧ್ವಜ ಮತ್ತು ಸೈಕಲ್ ವಿಜಯ!

ಮೈಸೂರಿಗೆ ಬಂದವನಿಗೆ ‘ಒಂದು ಗಳಿಗೆ’ ಬೆಂಗಳೂರಿಗೆ ಹೋಗಿಬರುವ ಪ್ರೀತಿಯ ಜವಾಬ್ದಾರಿ ಒದಗಿತು. (ಅಭಯಾದ್ರಿಯಲ್ಲಿ ಬೆಳೆದ ಮಾವು ಸಹಿತ ಹಸಿರುವಾಣಿ `ಅರಮನೆ’ಗೆ [ಅ(ಭಯ)ರ(ಶ್ಮಿಯರ)ಮನೆ] ಮುಟ್ಟಿಸುವುದು!) ಸರಸ್ವತೀಪುರದಿಂದ ಸೈಕಲ್ಲೇರಿ ರೈಲ್ವೇ ನಿಲ್ದಾಣಕ್ಕೆ (ಸುಮಾರು ಮೂರು ಕಿಮೀ) ಮೆಟ್ಟಿ, ರೈಲಿನಲ್ಲಿ ಸಸೈಕಲ್ ಬೆಂಗಳೂರಿನ ಕೆಂಗೇರಿಸಿ, ಮತ್ತೆ ಅರಮನೆಗೆ ಸೈಕಲ್ಲಿಸಿ (ಸುಮಾರು ನಾಲ್ಕು ಕಿಮೀ), ಮರುದಿನ ಹೀಗೇ ಮರಳುತ್ತೇನೆ ಎಂದೊಮ್ಮೆ ಯೋಚಿಸಿದೆ. ಆದರೆ ರೈಲಿನಲ್ಲಿ ಸೈಕಲ್ ಸೌಲಭ್ಯ ಹೇಗಿದೆಯೆಂದು ನನಗೆ ತಿಳಿದಿಲ್ಲ. ಮತ್ತದರ ಪ್ರಾಯೋಗಿಕತೆಯನ್ನು ಶೋಧಿಸಲು ಅವಕಾಶ ಕೊಡದ ಜವಾಬ್ದಾರಿ ನನ್ನದಿತ್ತು. ತಣ್ಣಗೆ ಐವತ್ತು ರೂಪಾಯಿ ಕೊಟ್ಟು ನಿಲ್ದಾಣಕ್ಕೆ ವಟವೃಕ್ಷ ಹಿಡಿದೆ. ಹಿರಿಯ ನಾಗರಿಕನ ನೆಲೆಯಲ್ಲಿ ಕೇವಲ ನಲ್ವತ್ತೇ ರೂಪಾಯಿಗೆ (೧೪೦ ಕಿಮೀ) ಬೆಂಗಳೂರು ರೈಲೇರಿದೆ.

“ಈಗ್ತಾನೇ ತಗ್ದಿರೋದೂ, ಸುಡ್ಸುಡೂ, ಬಾಯಿಗಿಟ್ರೆ ಆನಂದಾ, ಗರ್ಗರೀ ಇದ್ರೂ ಭಾರೀ ಸಾಫ್ಟೂ, ಒಂದ್ ತಿಂದ್ರೇ ಇನ್ನೊಂದ್ ಬೇಕನ್ಸೋದೂ, ನೀವ್ ತಿಂದ್ರೇ ಮನೆಮಂದಿಗೆಲ್ಲಾ ಪಾರ್ಸೆಲ್ ಒಯ್ಬೇಕ್ ಅನ್ಸೋದೂ, ಈರುಳ್ಳಿ ಘಮ್ಮನ್ಸೋ ವಡಾ ಸಾರ್ – ಮದ್ದೂರೊಡಾ ಸಾರ್, ಒಂದಕ್ಕೆ ಹತ್ತೇ ರೂಪಾಯಿ, ಬಿಸೀ ಇಲ್ದೇ ಓದ್ರೇ ಕಾಸ್ವಾಪಾಸ್ ಮದ್ದೂರೊಡಾ…..” ಮೋಡಾ ಅಮರಿಸಿದ ಸೆಕೆಯಲ್ಲಿ, ರೈಲೋಟದ ಗಾಳಿ ತೀಡಿ ಮಾಯಾಲೋಕದಲ್ಲಿದ್ದವನನ್ನು ಒಮ್ಮೆಲೇ ಪಾಂಡವಪುರದಲ್ಲಿ ತಿವಿದೆಬ್ಬಿಸಿತೀ ರಾಗಲಹರಿ. ಒಂದಲ್ಲ – ಆರು ಕೊಂಡು, ನಾಲ್ಕು ಕಿಸೆಗೆ ಸೇರಿಸಿ (ಅಭಯರಶ್ಮಿಯರಿಗೆ), ಚಾ-ಟೀ ಸಾಂಗತ್ಯದಲ್ಲಿ, ಎರಡರ ನೀರುಳ್ಳಿ ಎಸಳೆಸಳ ಗರಿ-ಮೆಯನ್ನು ಬಲು ನಿಧಾನಕ್ಕೆ ನನ್ನದಾಗಿಸಿಕೊಳ್ಳುತ್ತ ಇನ್ನೊಂದೇ ಮಾಯಾಲೋಕದಲ್ಲಿ ಲಹರಿಸಿದ್ದೆ.

ಮುಂದೆ ಮಂಡ್ಯ, ಮದ್ದೂರು, ಚನ್ನಪಟ್ನಗಳಂತೇ ರಾಮನಗರವನ್ನೂ….. ಎನ್ನುವಾಗ ಕಾಣಿಸಿತ್ತು ಈ ದರ್ಗಾ! ರಾಮನಗರ ರೈಲ್ವೇ ನಿಲ್ದಾಣಕ್ಕೇ ತಾಗಿ ನಿಂತಂತಿದ್ದ ಈ ಸಣ್ಣ ದರ್ಗಾದ ಸಣ್ಣ ಸುಂದರೀಕರಣವೇನೋ ನಡೆಯುತ್ತಿತ್ತು. ಆದರೆ ನನ್ನನ್ನಾಕರ್ಷಿಸಿದ್ದು ಇದರ ಅಸಂಖ್ಯ ಹಸಿರು ಧ್ವಜಗಳ ನಡುವೆ ಮೆರೆದಿದ್ದ ಕೇಸರೀ ಧ್ವಜ! ಸ್ವತಂತ್ರ ಪುಟ್ಟ ಕಟ್ಟೆ, ಸ್ತಂಭ ಮತ್ತು ಧ್ವಜವೆಲ್ಲ ಕೇಸರೀ ವರ್ಣದ್ದೇ. ಧಾರೆಗಳಿದ್ದ ಶ್ವೇತವರ್ಣೀ ಗುಂಬಜ್ ಮೇಲಿನಿಂದ ನೋಡಿದರೆ ಚಕ್ರವೇ. ಒಟ್ಟು ಶಿಲ್ಪಾಲಂಕಾರದಲ್ಲೂ ಬಿಳಿ, ಹಸಿರಿನ ಜತೆಗೂಡಿದ್ದ ಪುಟ್ಟ ಪುಟ್ಟ ಕೇಸರೀ ವರ್ಣಾಲಂಕಾರ ನಿಸ್ಸಂದೇಹವಾಗಿ ಮತಧರ್ಮವನ್ನೂ ರಾಷ್ಟ್ರಧರ್ಮವನ್ನೂ ಸಮನ್ವಯಗೊಳಿಸಿದ ಉದಾತ್ತರೂಪಕವಾಗಿಯೇ ಕಾಣಿಸಿತು.

ಮತ್ತೆ ಬಿಡಿ, ಕೆಂಗೇರಿಯಲ್ಲಿಳಿದು ನಗರಸಾರಿಗೆ ಹಿಡಿದು ಮನೆ ಸೇರಿದೆ. ನಾನೊಯ್ದು ಮುಟ್ಟಿಸಿದ ಕಟ್ಟು ಮುಖ್ಯವೋ ಪ್ರೀತಿಯ ಮುದ್ದೆ – ಮೊಮ್ಮಗಳು ಆಭಾಳಿಂದ ಪಡೆದ ಸಂತೋಷ ದೊಡ್ಡದೋ ನೀವೇ ಅಂದಾಜಿಸಿಕೊಳ್ಳಿ! ರಾತ್ರಿ ಕಳೆದುಹೋಯ್ತು.

ಬೆಳಿಗ್ಗೆ ಅಭಯ ಗೂಗಲಿಸಿದಾಗ ಬೆಂಗಳೂರು ಕೇಂದ್ರದಿಂದ ಒಂಬತ್ತಕ್ಕೊಂದು ಎಕ್ಸ್‍ಪ್ರೆಸ್ ಕಾಣಿಸಿತು. ಅಂದರೆ ಮಾಮೂಲೀ ವಿಳಂಬ ಕಲ್ಪಿಸಿಕೊಂಡು ಒಂಬತ್ತೂ ಕಾಲಕ್ಕೆ ಅಭಯ ನನ್ನನ್ನು ಕೆಂಗೇರಿ ನಿಲ್ದಾಣದ ಹಿತ್ತಿಲ ಪ್ರವೇಶದಲ್ಲಿ ಇಳಿಸಿ ಹೋದ. ನಾಲ್ಕು ಜೋಡಿ ಕಂಬಿ ದಾಟಿ, ಪ್ಲ್ಯಾಟ್ ಫಾರಂ ಉದ್ದಕ್ಕೆ ನಡೆಯುತ್ತಿದ್ದಂತೆ, ನನ್ನ ನಿರೀಕ್ಷೆ ಮೀರಿ ಎಕ್ಸ್‍ಪ್ರೆಸ್ ಬಂದೇ ಬಿಟ್ಟಿತು. ಟಿಕೆಟ್ ಗೂಡಿಗೆ ಓಡಿ, ಹಿರಿತನದ ‘ಆಧಾರ’ ಸಹಿತ ನಲ್ವತ್ತು ರೂಪಾಯಿ ಒಡ್ಡಿ, “ಒಂದು ಮೈಸೂರು” ಅಂದೆ. ಗುಮಾಸ್ತೆ “ನಿಮ್ಗೆ ಎಕ್ಸ್‍ಪ್ರೆಸ್ ಸಿಗೋಲ್ಲ ಸಾರ್, ಹತ್ತು ಗಂಟೆ ಪ್ಯಾಸೆಂಜರ್ ಕೊಡ್ತಿದ್ದೀನಿ”

ಎಂದವನೇ ಹತ್ತು ರೂಪಾಯಿ ಮರಳಿಸಿ, ಮೂವತ್ತು ರೂಪಾಯಿ ಟಿಕೆಟ್ ಕೊಟ್ಟ. ಆದರೂ ಅದೃಷ್ಟ ನೋಡುವವನಂತೆ ಅಲ್ಲಿನ ರೈಲ್ವೇ ಹಳ್ಳಕ್ಕೆ ಧುಮುಕಿದೆ. ಎರಡು ಜೋಡಿ ಕಂಬಿ ಹಾಯ್ದು, ಎದುರು ದಂಡೆಯನ್ನು ತರುಣನೋರ್ವನ ಕೈಯಾಸರೆಯಲ್ಲೇರಿದೆ. ಮತ್ತಾಚಿನ ದಂಡೆಗೋಡುವವರೆಗೂ ಎಕ್ಸ್‍ಪ್ರೆಸ್ ನನ್ನನ್ನು ಕಾದೇ ಇತ್ತು. ಪ್ಯಾಸೆಂಜರ್ ಟಿಕೆಟ್ ಹಿಡಿದು ಎಕ್ಸ್‍ಪ್ರೆಸ್ ಏರಿಯೇ ಬಿಟ್ಟೆ! ತಮಿಳ್ನಾಡತ್ತಂಣಿದೆಲ್ಲೋ ನಿಶಾಚರಿಯಾಗಿ ಬಂದಿದ್ದ ರೈಲು ಭರ್ತಿಯಾಗಿತ್ತು. ನನಗೆ ಶ್ರೀರಂಗನಾಥನ (ಪಟ್ಟಣ) ಬಾಗಿಲವರೆಗೂ ನಿಂದು ಸೇವೆಯನು ಪಡೆಯುವ ಯೋಗ. ತನಿಖಾಧಿಕಾರಿ ಬಂದರೆ, ದಂಡ ಹಾಕಿದರೆ – ದುಪ್ಪಟ್ಟಿದ್ದೀತು. ಆದರೂ ಬಸ್ ಹಾಸಲಿಗಿಂತ ಕಡಿಮೆಯೇ ಎಂದು ಯೋಚಿಸಿದ್ದಷ್ಟೇ ಬಂತು. ಯಾರೂ ಕೇಳಲಿಲ್ಲ, ಮೈಸೂರಿನಲ್ಲಿ ಹೊರಬರುವಾಗ ತನಿಖೆ ಮಾಡುತ್ತಿದ್ದ ‘ದ್ವಾರಪಾಲಕಿ’ಯೂ ಆಕ್ಷೇಪಿಸಲಿಲ್ಲ!

ಹೀಗೆಲ್ಲ ಉಳಿಸಿದ ದುಡ್ಡಿಗೆ ಮತ್ತಷ್ಟು ಸೇರಿಸುವ ಉತ್ಸಾಹದಲ್ಲಿ ಸರಸ್ವತೀಪುರಕ್ಕೆ ಚಾರಣ ಕೈಗೊಂಡೆ! ಮಂಗಳೂರಿನಲ್ಲಿ ಇಲ್ಲದ ಪುಟ್ಟಪಥಗಳನ್ನರಸಿ ಒದ್ದಾಡುವ ವಾಕಿಂಕ್ ವೀರರಿಗೆ, ಮಹೀಶೂರಪುರದರಸರ ಕೊಡುಗೆ ಮತ್ತು ಮುಂದುವರಿದ ಪರಂಪರೆಯಿಂದ, ಅಲ್ಲಿನ ಸಾಮಾನ್ಯ ನಡಿಗೆಯೂ ಮೋಜಿನ ವಿಹಾರವೇ ಸರಿ! ಹಾಗೆ ‘ಮೆಟ್ರೋಪೋಲ್’ ಕಳೆದು, ಮಡಿಕೇರಿ ದಾರಿ ತುಳಿದು, ರಂಗಾಯಣದ ತಿರುವು ತೆಗೆಯುವಾಗ ಕಾಣಿಸಿತು: ಇನ್ನೂ ರೂಪುಪಡೆಯುತ್ತಿರುವ ಈ ಸೈಕಲ್ ತಂಗುದಾಣ. “ಸಾರ್ವಜನಿಕ ದಾರಿಯಲ್ಲಿ ಸೈಕಲ್ ಓಣಿ ಕೊಡಿ” ಎಂದು ‘ದೊರೆಗೆ ಮನವಿ’ ಒಪ್ಪಿಸಲು ನಾವು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆಸೈಕಲ್ಲೇರಿಯೇ ಹೋದದ್ದು ನೆನಪಾಯ್ತು. ಆದರೆ ಈಚೆಗೆ ತಿಳಿದಂತೆ, ವರ ಹೋಗಿ ಶಾಪದಂತೆ ‘ಸಾರ್ವಜನಿಕ ದಾರಿಗಳಲ್ಲಿ ಸೈಕಲ್ ನಿರ್ಬಂಧ’ದ ಯೋಚನೆಯೇ ಸರಕಾರೀ ತಲೆಗಳಿಗೆ ಒಮ್ಮೆ ಬಂದಿತ್ತಂತೆ! ಈ ದುಷ್ಟ ಚಿಗುರನ್ನು ಲೇಖಕ ಗೆಳೆಯ ಟೀಕೇ ರಹೀಂ ಚಿವುಟುವ ಕೆಲಸ ನಡೆಸಿದ್ದೂ ನೆನಪಾಗದಿರಲಿಲ್ಲ. ಅವೆಲ್ಲಕ್ಕೆ ವ್ಯತಿರಿಕ್ತವಾಗಿ ಇಲ್ಲಿ ಉನ್ನತ ದರ್ಜೆಯ ತಂಗುದಾಣವೇ ರೂಪುಗೊಳ್ಳುತ್ತಿರುವುದು ನೋಡಿ ಮನಸ್ಸು ತುಂಬಿಬಂತು. ಆದರೆ ಅತ್ತ ಮಹತ್ತರವಾದ ಬಸ್ ನಿಲ್ದಾಣವಿಲ್ಲ, ಇತ್ತ ರಂಗಾಯಣದ ದ್ವಾರವೂ ಅಲ್ಲ. ಎಲ್ಲೂ ಅಲ್ಲದಲ್ಲಿ ಅದೂ ಭಾರೀ ಅಲಂಕಾರದಲ್ಲಿ ಸುಮಾರು ಹದಿನಾರೇ ಸೈಕಲ್ಲು ತಂಗುವ ಈ ವ್ಯವಸ್ಥೆ ಯಾಕೆ ಎಂದು ಆಶ್ಚರ್ಯವೂ ತಲೆ ತಿನ್ನುತ್ತಿದ್ದಂತೆ ಮರಳಿ ಮನೆಯನ್ನೇ ಮುಟ್ಟಿದ್ದೆ. (೨೦-೪-೨೦೧೭)

ಟ್ರಿನ್-ಟ್ರಿನ್ – ಎಲ್ಲೆಂದರಲ್ಲಿ ಸೈಕಲ್ ಯೋಜನೆ!

“ಮೊನ್ನೆ ಬಿಟ್ಟಲ್ಲಿಂದ ಮುಂದಕ್ಕೆ” ಎಂದಿತ್ತು ಮೈಸೂರಿನ ನನ್ನ ಎರವಲು ಸಂಗಾತಿ – ಸೈಕಲ್! ಸರಿ, ಎಂದು ಇಂದು ಬೆಳಿಗ್ಗೆ ಎಂಟು ಗಂಟೆಗೆ ಏರಿಯೇ ಬಿಟ್ಟೆ. ಕನ್ನೇಗೌಡನ ಕೊಪ್ಪಲ್ ಹೊರಸುತ್ತು, ಜಯನಗರ ಮುಖ್ಯರಸ್ತೆ, ಅಶೋಕಪುರಂನ ಬಗಲು, ಎನ್ನೈಯೀ ಹಿತ್ತಿಲಿಗಾಗಿ ಹೆಗ್ಗಡದೇವನಕೋಟೆ ರಸ್ತೆ ಸೇರಿದೆ. ಮತ್ತೆ ಮೊನ್ನೆ ಮರಳಿದ ದಾರಿಯನ್ನು ನೆನಪಿಸಿಕೊಳ್ಳುತ್ತ, ರೈಲ್ವೇಹಳಿ ಮಗ್ಗುಲು ಬಿಡದೇ ಮುಂದುವರಿದು, ಗೊಬ್ಬಳೀಮರ ಅಡ್ಡರಸ್ತೆಗೆ ಹೊರಳಿಕೊಂಡೆ. ಇಂದ್ರಪ್ರಸ್ಥ ಹೋಮಿಯೋ ಚಿಕಿತ್ಸಾಲಯ ನಿನ್ನೆ ರಾತ್ರಿಯ ಅಭ್ಯಂಜನಕ್ಕೆ ಸಿಕ್ಕಿ ಲಕಲಕಿಸಿದ್ದರೂ ಅಭಿಜಿತ್ ನಿರೀಕ್ಷೆ ನನಗಿರಲಿಲ್ಲ (ಅವನ ಕೆಲಸದ ಸಮಯ ಹತ್ತರಿಂದ ಶುರು). ನಿಲ್ಲದೇ ಚೌಕಿಯಲ್ಲಿ ಬಲಮುರಿದು, ಮತ್ತೆ ಉಂಗುರ ರಸ್ತೆಗಿಳಿದೆ.

ಒಮ್ಮೆಗೆ ಮೂರು ಲಾರಿ ಹಾಯುವಂಥ ಎರಡು ಏಕಪಥಗಳು. ಉದ್ದಕ್ಕೂ ಹೆದ್ದೀಪಮರೆಗಾಗಿ ಹೂಗಿಡಗಳ ಸಾಲು ಹೊತ್ತ ವಿಸ್ತಾರ ನಡುಗಟ್ಟೆ. ಈ ಷಣ್ಪಥದ ಹೊರ ಅಂಚಿಗೆ ಕಾಂಕ್ರೀಟ್ ಹಲಿಗೆ ಹೊದ್ದು, ಪಾದಚಾರಿಗಳಿಗೆ ಪುಟ್ಟಪಥದಂತೇ ಒದಗುವ ಮಳೆನೀರ ಚರಂಡಿ, ನಿಯತಾಂತರದಲ್ಲಿ ಭಾರೀ ಕಂಬವೇರಿದ ಇತ್ತಲೆಯ ದಾರಿದೀಪಗಳ ಸಾಲು. ಇವುಗಳಿಂದಲೂ ಆಚೆಗೆ ಸ್ಥಳೀಯ ಸಂಚಾರ ಅನುಕೂಲಕ್ಕೊದಗುವ ದ್ವಿಪಥದ ಸೇವಾರಸ್ತೆಗಳು. ಪ್ರಧಾನರಸ್ತೆಯ ವಾಹನ ರಭಸಕ್ಕೆ ಸ್ಪಷ್ಟ ಮುನ್ಸೂಚನೆ ಕೊಡುವ ಅಸಂಖ್ಯ ಸಂಕೇತ ಫಲಕಗಳು, ಸೇವಾರಸ್ತೆಗಳಿಗೆ ವಿವಿಧ ಹಂತದ ವೇಗತಡೆಗಳು, ಮುಖ್ಯ ಕತ್ತರಿ ದಾರಿಗಳ ಬಳಿ ಸ್ವಾಗತ ಕಮಾನುಗಳು, ತ್ರಿವರ್ಣ ದೀಪ ಸಂಕೇತಗಳು ಎಂದಿತ್ಯಾದಿ ಮೆರೆವ ಉಂಗುರರಸ್ತೆಯ ವೈಭವದಲ್ಲಿ ನಾನು ಬಹುತೇಕ ಒಂಟಿಯಾಗಿ ಸೈಕಲ್ ಮೆಟ್ಟಿದೆ!

ಎದುರು ದಿಗಂತದಲ್ಲಿ ಗಗನಗಾಮಿಗೊಡ್ಡಿದ ವೇಗತಡೆಯಂತಿತ್ತು ಚಾಮುಂಡಿ ಬೆಟ್ಟಸಾಲು. ಅದು ನನ್ನ ಪ್ರತಿ ಪೆಡಲಿಕೆಯಲ್ಲೂ ಬೆಳೆ ಬೆಳೆದು ಅರ್ಧ ಆಕಾಶವನ್ನೇ ವ್ಯಾಪಿಸುವಂತಾಗುವಾಗ, ಉದಕಮಂಡಲದತ್ತ ಸಾರುವ ಹೆದ್ದಾರಿ ಕತ್ತರಿತಾಣ ಬಂತು. ನೀರು ಗುಟುಕರಿಸುತ್ತ, ಮನದ ಸ್ಥಿರಚಿತ್ರ (ಛಾಯಚಿತ್ರ ಸಹಿತ) ಗಟ್ಟಿ ಮಾಡಲು ಎರಡೇ ಮಿನಿಟು ವಿರಮಿಸಿದೆ. ಆದರೆ ದಕ್ಕಿದ್ದೇನು – ಅಡ್ಡಾತಿಡ್ಡ ನೂರೆಂಟು ವಿದ್ಯುತ್ ಸರಿಗೆ, ವಾರೆ ಕಂಬ, ಮೈಕ್ರೋವೇವ್ ಸ್ತಂಭ, ಸಜ್ಜುಗೊಳ್ಳುತ್ತಿರುವ ಭಾರೀ ಜಾಹೀರಾತು ಫಲಕ, ಪಾರಂಪರಿಕ ರಚನೆಗಳಿಗೆ ಕುರುಡಾದ ಕೃಷ್ಯುತ್ಪನ್ನಗಳ ಸಗಟು ಮಾರುಕಟ್ಟೆಯ ಕಟ್ಟಡಗಳು, ಕಣ್ಣಿಗೆ ರಾಚುವ ಬಣ್ಣಗಳು, ಕೊನೆಯಲ್ಲಿ ಎಂದಿನಂತೆ ಯಥೇಚ್ಛ ಹಾಳಮೂಳ, ಸದ್ಯದ ಮಳೆ ಪ್ರಭಾವದಲ್ಲಿ ಕೊಳಚೆಕೊಂಪೆ! ಬೆಟ್ಟದ ಭವ್ಯತೆಗೆ ಅಡ್ಡ ಹಿಡಿದ ಮಲಿನಗನ್ನಡಿ, ಅಭಿವೃದ್ಧಿಯ ಅವಸರದಲ್ಲಿ ಹೇರಿದ ಅವಲಕ್ಷಣಗಳು. ಪಾರಿಸರಿಕ ಸಮನ್ವಯದ ಮಂತ್ರ ಸಿದ್ಧಿಸದವರ ಈ ಬರ್ಬರತೆ ನಿಜಕ್ಕೂ ಚಿಂತಾಜನಕ.

ನಾನು ನಿಂತ ನೆಲೆಗೆ (ಬಂಡಿಪಾಳ್ಯ) ಚಾಮುಂಡಿ ಬೆಟ್ಟ ದಕ್ಷಿಣೋತ್ತರವಾಗಿ ಚಾಚಿಕೊಂಡಂತೆ ತೋರುತ್ತದೆ. (ಗೂಗಲಿನ ವಾಸ್ತವ ಬೇರೇ ಇದೆ, ಬಿಡಿ.) ಉಂಗುರ ರಸ್ತೆ ಅದರ ದಕ್ಷಿಣ ಪಾದದತ್ತ ಧಾವಿಸಿತ್ತು. ಅದು ಮುಂದೆ ತಪ್ಪಲಿನಲ್ಲೇ ಹಾಯ್ದು ಇಡಿಯ ಬೆಟ್ಟವನ್ನು ಆವರಿಸುತ್ತದೆ ಎಂದೂ ತಿಳಿಯಿತು. ಅದನ್ನನುಸರಿಸಲು ನನ್ನಲ್ಲಿ ಉತ್ಸಾಹವೇನೋ ಇತ್ತು, ಆದರೆ ನಾನು ಮನೆ ಬಿಡುವ ಮೊದಲು ನನ್ನಮ್ಮನಿಗೆ ಹನ್ನೊಂದು ಗಂಟೆಯೊಳಗೆ ಮರಳುತ್ತೇನೆ ಎಂದು ಧೈರ್ಯ ಕೊಟ್ಟಿದ್ದೆ. ನಾನದನ್ನು ಮೀರಿದರೆ, ಆಕೆಯ ವೃದ್ಧಾಪ್ಯದ ಬೇನೆ ಮತ್ತು ಭಯಗಳ ಮೇಲೆ ಹೆಚ್ಚಿನ ಆತಂಕ ಹೇರಿದಂತಾಗುತ್ತಿತ್ತು! ನಾನು ಲಕ್ಷ್ಯ ಬದಲಿಸಿದೆ. ಚಾಮುಂಡಿ ಶ್ರೇಣಿಯ ಈ ಕೊನೆಯ ಶಿಖರ ನನ್ನ ದಖ್ಖಣ ಪರ್ವತಾರೋಹಣ ದಿನಗಳಲ್ಲಿ ಬಲುಪ್ರಿಯವಾಗಿದ್ದ ನಲ್ವತ್ತಡಿ ಎತ್ತರದ ‘ಬಂಡೆ ಕೊರಕಲು’ (‘ಚಿಮಣಿ’) ಸಹಿತವಾದ ಶಿಬಿರತಾಣ. ಸಾರ್ವಜನಿಕರು ಗುರುತಿಸುವಂತೆ ಇದು ನಂದಿಯಿರುವ ತಾಣವೂ ಹೌದು. ಅದರ ಕುರಿತು ಇಲ್ಲೊಂದು ಆತ್ಮಕಥಾನಕ ಟಿಪ್ಪಣಿ ಅನಿವಾರ್ಯವಾಗುತ್ತದೆ (ಕ್ಷಮೆಯಿರಲಿ)

ಉಪಕಥೆ – ನನ್ನ ಮದ್ವೆ!

ವಿವಾಹ – ಅದ್ದೂರಿಯ ಸಮಾರಂಭ ಆಗಬಾರದು, ಜೀವನ ಪರ್ಯಂತದ ವೈಯಕ್ತಿಕ ಸಂಬಂಧಕ್ಕೆ ಸಾಂಕೇತಿಕ ನಾಂದಿ, ಅನಿವಾರ್ಯ ಸಾಮಾಜಿಕ ಮನ್ನಣೆಗೆ ಅವಶ್ಯ ಎಂದೇ ನಂಬಿದ ಕುಟುಂಬ ನಮ್ಮದು. ಈ ನಾಂದಿಯನ್ನು ನಾವು ಕೇವಲ ರಿಜಿಸ್ಟರ್ಡ್ ಮದುವೆಯಲ್ಲಿ ಕಂಡುಕೊಳ್ಳಲೂ ಸಿದ್ಧರಿದ್ದೆವು. ಆದರದು ಅದುವರೆಗೆ ಅಪರಿಚಿತವಾಗಿದ್ದ ಇನ್ನೊಂದು ಪಕ್ಷದ (ಹೆಣ್ಣಿನ ಕಡೆಯವರು) ಭಾವನೆಗಳ ಮೇಲೆ ಸವಾರಿ ಮಾಡುವ ಹುಂಬತನವಾಗಬಾರದೆಂಬುದಕ್ಕೆ ಸರಳ ಸಾಂಪ್ರದಾಯಿಕ ವಿವಾಹ, ಅಥವಾ ಲೋಕರೂಢಿಯಂತೆ `ವೈದಿಕ ವಿವಾಹ’ ಕ್ರಮಗಳನ್ನು ಅನುಸರಿಸಿದೆವು. ಸಹಜವಾಗಿ ನಾವು (ಎರಡೂ ಪಕ್ಷ ಸೇರಿ) ಬಗೆತರದ ಅಥವಾ ವೈಭವದ ಲಗ್ನಪತ್ರಿಕೆ ಮಾಡಿಸಲು ಹೋಗಲೇ ಇಲ್ಲ. ಒಂದು ಸಾಂಪ್ರದಾಯಿಕ ಲಗ್ನಪತ್ರಿಕೆ – ಬಹುಶಃ ಹೆಣ್ಣಿನ ಕಡೆಯವರೇ ಮಾಡಿಸಿದ್ದನ್ನು, ನಮಗೆ ಕೆಲವು ಪ್ರತಿ ಕೊಟ್ಟದ್ದಿರಬೇಕು. ಅದರ ವಿತರಣೆ ಎರಡೂ ಪಕ್ಷದಲ್ಲಿ ತಂದೆ ತಾಯಂದಿರೇ, ಮುಖ್ಯವಾಗಿ ಅನಿವಾರ್ಯ ಕುಟುಂಬಿಕರ ಒಳಗೆ ಮಾಡಿದ್ದರು.

ವೈಯಕ್ತಿಕವಾಗಿ ನಾನು ತೀರಾ ಆಪ್ತ ಮಿತ್ರವಲಯಕ್ಕೆ, ಬಾಯ್ದೆರೆಯಾಗಿ ಮದುವೆಯ ಮಾಹಿತಿ ಕೊಟ್ಟಿದ್ದೆ – ಕರೆ ಅಲ್ಲ. ಇದಕ್ಕಿದ್ದ ಪೂರಕ ಕಾರಣಗಳಲ್ಲಿ ಮೊದಲನೇದು, ಮುಹೂರ್ತ ಜೂನ್ ತಿಂಗಳ ಎರಡನೇ ವಾರ, ಅಂದರೆ ಜಡಿಮಳೆಗಾಲದ್ದು. ಇನ್ನು ಕಲ್ಯಾಣ ತಾಣವೋ ಕನಿಷ್ಠ ಎರಡು ಮುಳುಗು ಸೇತುವೆಗಳಾಚಿನ ಅರ್ಲಪದವಿನ ಹಳ್ಳಿಮೂಲೆಯ ಮನೆಯಂಗಳದಲ್ಲಿ ಹಾಕಿದ ಅಡಿಕೆ ಸೋಗೆ ಚಪ್ಪರ. ಅಲ್ಲಿಗೆ ಸ್ವಂತ ವಾಹನವಿಲ್ಲದವರು, ಸೀಮಿತ ಸಾರಿಗೆಯನ್ನು ನಂಬಿದರೆ, ಸುಮಾರು ಒಂದು ಕಿಮೀ ನಡೆಯಬೇಕಿತ್ತು. ಸಾಲದ್ದಕ್ಕೆ ಅದು ವಾರದ ನಡುವಿನ, ಅಂದರೆ ಕೆಲಸದ ದಿನ. ಇಷ್ಟಾಚಾರದ ಹೆಸರಿನಲ್ಲಿ ಯಾರಾದರೂ ತಮ್ಮ ಕೆಲಸಗಳನ್ನು ಬದಿಗೊತ್ತಿ ಬರುವಂತಾಗುವುದು ನಮಗೆ ಹಿಡಿಸುತ್ತಿರಲಿಲ್ಲ. ಆದರೂ…….

ಮದುವೆಯ ದಿನವೇ ಮಾಜಿ ರಾಷ್ಟ್ರಪತಿ ವಿವಿಗಿರಿ ತೀರಿಹೋದರು. ಸಿಕ್ಕ ರಜೆಯನ್ನು ಬಳಸುವಂತೆ, ಆಪ್ತ ಗೆಳೆಯರಾದ ಪಶುವೈದ್ಯ ರಾಘವೇಂದ್ರ ಉರಾಳ ಮಂಗಳೂರಿನಿಂದ ತನ್ನ ಕಾರು ಹೊರಡಿಸಿದರು. ಕನ್ನಡ (೨ಸಲ) ಪಂಡಿತ ಆರಾಧ್ಯ, ಮಂಕುತಿಮ್ಮನನ್ನು ನೆನೆಯುತ್ತ “ಮರಣಕೋ (ಗಿರಿಮರಣದ ಸಂತಾಪ ಸೂಚಕ ಸಭೆ ನಡೆಯುವುದಿತ್ತು!) ಮದುವೆ-goಓ”, ಎಂಬಲ್ಲಿ ಹೋಗುವ ಸಂಕೇತ ಗ್ರಹಿಸಿ, ಕಾರಿಗೆ ಸೇರಿಕೊಂಡರು. ಕಚ್ಚಾ ದಾರಿಯಲ್ಲಿ ಕಾರು ಹಾರದಂತೆ ಮತ್ತೊಂದಿಬ್ಬರು ಗೆಳೆಯರನ್ನೂ ತುಂಬಿಕೊಂಡೇ ಬಂದಿದ್ದ ಪಟಾಲಮ್ಮು ನನ್ನನ್ನು ಸೋಲಿಸಿತ್ತು!

ಮದುವೆಯ ಚಿತ್ರಗ್ರಹಣದ ಕುರಿತಂತೆ, ನಮ್ಮ ಪಕ್ಷ ಅನೌಪಚಾರಿಕತೆಯ ಹೆಸರಿನಲ್ಲಿ ಉಪೇಕ್ಷಿಸಿದರೆ, ಎದುರು ಪಕ್ಷ ಅನಾವಶ್ಯಕ ವೆಚ್ಚದ ಬಾಬೆಂದು ಕೈಬಿಟ್ಟಿತ್ತು. ಆದರೆ ಆ ದಿನಗಳಲ್ಲಿ ಸಂಬಂಧಿಕರೊಳಗೆ, ಕುಟುಂಬದ ನವವಿವಾಹಿತರ, ನವಜಾತರ ಚಿತ್ರಗಳಿಗೆ ಕಟ್ಟು ಹಾಕಿ, ಹಜಾರದಲ್ಲಿ ಶೂಲಕ್ಕೇರಿಸುವುದು (ಪುಣ್ಯಕ್ಕೆ ಅವರನ್ನೇ ಅಲ್ಲ!) ಒಂದು ಸಂಪ್ರದಾಯವೇ ಆಗಿತ್ತು. ಹಾಗೆ ಎರಡು ಪಕ್ಷಗಳ ಕೆಲವು ಆಪ್ತರಿಂದ ಬಂದ ಬೇಡಿಕೆಯನ್ನು ಮನ್ನಿಸುವಂತೆ, ಮುಂದೊಂದು ಶುಭದಿನ ನಾನೂ ದೇವಕಿಯೂ ಜೋಸ್ ಸ್ಟುಡಿಯೋಕ್ಕೆ ಹೋಗಿ ಚಿತ್ರವೇನೋ ತೆಗೆಸಿದೆವು. ಆದರೆ ಚಿತ್ರಗ್ರಾಹಿ, ನಮ್ಮನ್ನು ಫೋಟೋದಲ್ಲಿ `ಚಂದ’ ಮಾಡುವ ಭರದಲ್ಲಿ, ಸರಿಯಾಗಿಯೇ ಇದ್ದ ನನ್ನ ಮೀಸೆಗೆ ತುಸು ಕಪ್ಪನ್ನೂ ದೇವಕಿಗೆ ತುಸು ಬಿಳಿಯನ್ನೂ ಹೆಚ್ಚೇ ಹಾಕಿರಬೇಕು. ಅದನ್ನು ನೋಡುತ್ತಿದ್ದಂತೆ ನನ್ನ ಚಿಕ್ಕಮ್ಮ ಸೀತೆ ಹೇಳಿದ್ದಳು “ಪಾಪದ ದೇವಕಿಯನ್ನು ಲಪಟಾಯಿಸಿಕೊಂಡು ಬಂದವನ ಹಾಗೇ ಕಾಣ್ತೀ ಮಾರಾಯಾ”!

(ಬೇಡಿಕೆ ಮೇರೆಗೆ ಬರೆದು, ೧೨-೪-೧೭ರ ವಿಜಯವಾಣಿಯಲ್ಲಿ ಪ್ರಕಟಿತ ಟಿಪ್ಪಣಿ)

ಮೊದಲೇ ಹೇಳಬೇಕಿತ್ತು, ನಮ್ಮ ಮದುವೆ `ಗುರುಹಿರಿಯರಿದ್ದು’ ನಿಶ್ಚೈಸಿದ್ದು. ಅದೂ ಇನ್ನೇನು ಮಳೆಗಾಲ ಬರುತ್ತದೆ ಎನ್ನುವಾಗ `ನೋಡಿ’ದ್ದನ್ನು ಜೂನ್ ಮೂರನೇ ವಾರದಲ್ಲೇ ನಡೆಸುವಷ್ಟು ಅವಸರದಲ್ಲಿ ನಡೆದದ್ದು. ನಾವಾದರೂ ಈ ಕಾಲದವರಂತೆ ಪರಸ್ಪರ ಪರಿಚಯ ಹೆಚ್ಚಿಸಿಕೊಳ್ಳಲು ಯಾವುದೇ ಕ್ರಮ ಕೈಗೊಳ್ಳದ ಮೊದ್ದುಗಳು (ಚರವಾಣಿ ಇರಲಿಲ್ಲ, ಪ್ರತ್ಯೇಕ ಮಾತಾಡಿದ್ದೂ ಇಲ್ಲ!). ಮದುವೆಗೆ ನನ್ನ ಕಡೆಯಿಂದ ಬಂದ ಮಿತ್ರರಾದರೋ `ಅನಾಮಂತ್ರಿತರು’, ವಿಚಿತ್ರದವರು! ವರನ ಪಕ್ಷದಿಂದ ನಡೆಯಬೇಕಿದ್ದ ವಧೂಗೃಹಪ್ರವೇಶ ಎಂಬ ಔಪಚಾರಿಕತೆಯನ್ನು ಮೈಸೂರಿನ ದೂರಕ್ಕೆಳೆಯದೆ, ಮರುದಿನವೇ ಪುತ್ತೂರು ಸಮೀಪದ ನನ್ನಜ್ಜನ ಮನೆ – ಮರಿಕೆಯಲ್ಲೇ ಮುಗಿಸಿಬಿಟ್ಟಿದ್ದೆವು. ಮುಂದಿನ ಮೂರು ದಿನಗಳಲ್ಲಿ, ಜಡಿಮಳೆಯ ಬಿರುಸಿನಲ್ಲಿ ಅಜ್ಜನ ಮನೆ ಸಮ್ಮಾನವೇ ಮುಂತಾದ ಕಿರು ಔಪಚಾರಿಕತೆಗಳನ್ನು ಮುಗಿಸಿ ನವದಂಪತಿ ಮೈಸೂರಿಗೆ ಧಾವಿಸಿದ್ದೆವು. ಅಲ್ಲಿ ತಂದೆ ತಮ್ಮ ಮೈಸೂರಿನ ಆಪ್ತರಿಗೆ ಮದುವೆ ಲೆಕ್ಕದಲ್ಲಿ ಒಂದು ಊಟ, ಸಣ್ಣ ಸಂಗೀತ ಕೂಟ ವ್ಯವಸ್ಥೆ ಮಾಡಿದ್ದರು. ಈ ಎಲ್ಲ ಬಿಗಿಸರಿಗೆ ನಡಿಗೆಯಲ್ಲಿ ನನ್ನ ವೃತ್ತಿಯೇತರ ಆಸಕ್ತಿಯ ಕಿರು ಪರಿಚಯವನ್ನು ಕುಟುಂಬಕ್ಕೆ ಹೊಸದಾಗಿ ಬರುತ್ತಿದ್ದ ದೇವಕಿಗೆ ಮಾಡಿಕೊಡಬೇಕೆಂಬ ಉತ್ಸಾಹ ನನ್ನ ತಮ್ಮ – ಆನಂದವರ್ಧನನಿಗಿತ್ತು. ಆ ಪ್ರಕಾರ ಮರುಬೆಳಗ್ಗೆ ನಾವಿಬ್ಬರು, ಸಕಲ ಸಲಕರಣೆಗಳೊಡನೆ ಸಜ್ಜಾದ ಆನಂದ ಮತ್ತವನ ಗೆಳೆಯರೊಡನೆ ಚಾಮುಂಡಿ ಬೆಟ್ಟ ಏರಿದ್ದೆವು.

ನಮ್ಮ ಲಕ್ಷ್ಯವಾದರೋ ನಿಜ ಶಿಖರದ ಚಾಮುಂಡಿ ಅಲ್ಲ, ಸುಮಾರು ಮುಕ್ಕಾಲು ಭಾಗ ಏರಿದ ಮೇಲೆ ಸಿಗುವ ಇದೇ ನಂದಿಯ ಶಿಖರ! ಅಲ್ಲಿನ ೪೦ ಅಡಿ ಎತ್ತರದ ಕೊರಕಲಿನ ಬಂಡೆಯ ಮೇಲೆ, ದೇವಕಿಗೆ ಪ್ರಥಮಬಾರಿಗೆ ಶಿಲಾರೋಹಣದ ಪರಿಚಯ, ಪ್ರದರ್ಶನ ಕೊಟ್ಟಿದ್ದೆವು! ಸುಮಾರು ಮೂವತ್ತೇಳು ವರ್ಷಗಳ ಹಿಂದಿನ ಆ ನೆನಪಿನೊಡನೆ ಇಂದು ನಾನು ಬಂಡಿಪಾಳ್ಯದಿಂದ ನಂದಿಯತ್ತ ಸೈಕಲ್ ಮೆಟ್ಟತೊಡಗಿದ್ದೆ.

ಮೈಸೂರರಸರು ಕುಲದೇವಿ ಚಾಮುಂಡಿಯ ದರ್ಶನಕ್ಕೆ ಮೆಟ್ಟಿಲ ಸಾಲುಗಳಿದ್ದಂತೆ ಮೂರು ಸಾಧ್ಯತೆಗಳ ವಾಹನ ಮಾರ್ಗವನ್ನೂ ಮಾಡಿಸಿದ್ದರು. ಅವುಗಳಲ್ಲಿನ ಮುಖ್ಯ ಹಾಗೂ ಇನ್ನೊಂದು ಎಳೆ ಲಲಿತ ಮಹಲಿನತ್ತಣಿಂದಲೇ ತೊಡಗಿವೆ. ಮೂರನೇ ಎಳೆಯೇ ಈ ಬಂಡಿಪಾಳ್ಯ ರಸ್ತೆ. ಇದು ಸಾಂಪ್ರದಾಯಿಕ ಅಚ್ಚುಕಟ್ಟಿನೊಡನೆ, ಸಾಮಾನ್ಯ ಡಾಮರು ಕಂಡ ದಾರಿ. ಈಚಿನ ಮಳೆಗಳಿಂದ ಇಕ್ಕೆಲಗಳಲ್ಲಿ ತುಸು ಹಸಿರಾಗಿದ್ದರೂ ಗಾಳಿಯಾಡದ ಮಗ್ಗುಲಿದು. ಬಿಸಿಲು ಕಾಯುವ ಹೊತ್ತಿನಲ್ಲಿ ಕಟ್ಟೇರು ತುಳಿಯುವ ಪ್ರಸಂಗ. ಆದರೆ ನಾನೋ ನೆನಪುಗಳ ಬಲದಲ್ಲಿ (ಪಂಗುಂ?) ಲಂಘಯತೇ ಗಿರಿಂ ಮಾಡಿಬಿಟ್ಟೆ. ವಿರಳ ವಾಹನ ಸಂಚಾರಿಗಳ ‘ಪ್ರೋತ್ಸಾಹ’, ನಾನೇರಿದಂತೆಲ್ಲ ಆಳಕ್ಕಿಳಿಯುತ್ತಿದ್ದ ನಗರದ ದೃಶ್ಯದ ಚಂದ, ದಾರಿ ಹರಿದಂತೆ ತೆರೆದುಕೊಳ್ಳುತ್ತಿದ್ದ ಪ್ರಾಕೃತಿಕ ವಿಶೇಷಗಳ ಆಕರ್ಷಣೆ, ನಾಗರಿಕ ಅವಹೇಳನದ ವಿಕರ್ಷಣೆಗಳೆಲ್ಲವನ್ನೂ ಗ್ರಹಿಸುತ್ತ ಚಕ್ರ ಸುತ್ತಿದೆ. ಒಂದು ಹಂತದಲ್ಲಿ ಮುಖ್ಯ ದಾರಿ ಬಲಗವಲಿನಲ್ಲಿ ಚಾಮುಂಡೇಶ್ವರಿಯತ್ತ ಸಾರಿದರೆ, ಎಡದ ದಾರಿ ನಂದಿಯನ್ನುದ್ದೇಶಿಸಿತ್ತು. ಇಲ್ಲಿ ನಂದಿ ದಾರಿಯನ್ನು ಇಳಿವಾಹನಗಳಿಗಷ್ಟೇ ಸೀಮಿತಗೊಳಿಸಿದ (ಏಕಮುಖ ಸಂಚಾರ) ಬೋರ್ಡಿದ್ದರೂ ನಾನು ಸೈಕಲ್ ಸರಳತೆಯಲ್ಲಿ ಅದರಲ್ಲೇ ನುಗ್ಗಿದೆ. ಒಂಬತ್ತೂ ಮುಕ್ಕಾಲು ಗಂಟೆಯ ಸುಮಾರಿಗೆ ನಾನು ನಂದಿಯಲ್ಲಿದ್ದೆ.

ಅಭಿವೃದ್ಧಿಯ ಅವಲಕ್ಷಣ ನಂದಿಯನ್ನೂ ಬಿಟ್ಟಿಲ್ಲ. ನಂದಿಯ ಪಾರಿಸರಿಕ ಭವ್ಯತೆಯನ್ನು ಹುಗಿದು ಹಾಕುವ ಜೋಪಡಿ ಮಳಿಗೆಗಳು, ಜಾಹೀರಾತು ಫಲಕಗಳು, ವಾಹನ ತಂಗುದಾಣ, ಗದ್ದಲ-ಕೊಳಕಿನ ಭಕ್ತಿ, ಕಸ, ಕೊಚ್ಚೆ ….. ಹೇಳಿ ಮುಗಿಯದು. ಅಲ್ಲಿ ಹೆಚ್ಚು ಹೊತ್ತು ಕಳೆಯಲು ನನಗೆ ಮನಸ್ಸು ಬರಲಿಲ್ಲ. ಸಖೇದ ಒಂದೆರಡು ಚಿತ್ರ ಹಿಡಿದು, ಲಲಿತಮಹಲಿನತ್ತ ಸಾರುತ್ತಿದ್ದ ಇಳಿದಾರಿ ಹಿಡಿದೆ.

ಏರುಮೈಯಲ್ಲಿ ಸ್ತಬ್ಧವಾಗಿದ್ದ ಗಾಳಿ ಈಗ ಸಾಂತ್ವನ ಹೇಳತೊಡಗಿತ್ತು, ಮೋಡ ಛತ್ರಿ ಅರಳಿಸಿತ್ತು. ದಾರಿಯ ದಡಬಡ ತುಸು ಹೆಚ್ಚಿದಂತಿದ್ದರೂ ಉಸಿರು ಗಳಿಸುವ ಸವಾರಿಯಾದ್ದರಿಂದ ಬೇಗನೇ ಬುಡ ತಲಪಿದೆ. ಮುಂದೆ ಬಹುತೇಕ ಎಡದ ಕವಲುಗಳನ್ನೇ ಆರಿಸಿಕೊಳ್ಳುತ್ತ, ಮತ್ತೆ ಉದಕಮಂಡಲದ ದಾರಿಯನ್ನು ಅಡ್ಡ ಹಾಯ್ದು, ಎಲೆತೋಟದ ದಾರಿ ಕಳೆಯುತ್ತಿದ್ದಂತೆ ನೆನಪಾದವರು – ಅದೇ ವಲಯದಲ್ಲಿರುವ ನಿಡುಗಾಲದ ಆತ್ಮೀಯ ಗೆಳೆಯ, ಅನಾಮಂತ್ರಿತರಾಗಿಯೂ ನನ್ನ ಮದುವೆಗೂ ಬಂದಿದ್ದ ಕನ್ನಡ (ಎರಡುಸಲ) ಪಂಡಿತ ಆರಾಧ್ಯ!

ಸ್ಪಷ್ಟ ಕೆಲಸ ಮತ್ತು (ಸಾಧ್ಯವಿದ್ದಲ್ಲಿ) ಮುನ್ಸೂಚನೆ ಇಲ್ಲದೆ ಯಾರ ಮನೆಗೆ ಹೋಗುವುದಿದ್ದರೂ ನನಗೆ ಅಪಾರ ಮುಜುಗರ. ಆದರೆ ಇಲ್ಲಿ ಆರಾಧ್ಯರೇ ಹಿಂದೊಮ್ಮೆ ತಮಾಷೆಯಾಗಿ ನನ್ನಲ್ಲಿ ಹೇಳಿಕೊಂಡ ಆಖ್ಯಾನವೊಂದು ನೆನಪಾಗುತ್ತದೆ. ಅದು ೧೯೭೦-೮೦ರ ದಶಕದ ಘಟನೆ. ಅದು ಆರಾಧ್ಯರು ಮಂಗಳೂರಿನಲ್ಲಿ ಬ್ರಹ್ಮಚಾರೀ ಬಿಡಾರ ಹೂಡಿ, ಮಂಗಳಗಂಗೋತ್ರಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಚಯಿಸುತ್ತಿದ್ದ ಕಾಲ. ಇವರು ಸೇವಾವಧಿಯ ಉದ್ದಕ್ಕೂ ವಿದ್ಯಾರ್ಥಿಗಳೊಡನೆ ಮೌಲ್ಯಯುತವಾಗಿಟ್ಟುಕೊಂಡ ಸ್ನೇಹಾಚಾರ ಬಹಳ ದೊಡ್ಡದು. ಆ ಒಂದು ದಿನ ಇವರು ತುಸು ಗಂಭೀರವಾಗಿ, ನಿಗದಿತ ಮನೆಗೆಲಸ ಮಾಡದ ಶಿಷ್ಯನೊಬ್ಬನ ವಿಚಾರಣೆ ನಡೆಸಿದ್ದರು. ಆ ಪುಣ್ಯಾತ್ಮ ಸದರದಲ್ಲಿ “ನಿಮಗೇನು ಸಾರ್, ಮನೆಯೇ ಮಠವೇ” ಎಂದಿದ್ದ! ಅದನ್ನು ಆರಾಧ್ಯರು ಕ್ರೀಡಾಸ್ಫೂರ್ತಿಯಲ್ಲಿ ತೆಗೆದುಕೊಂಡು, ನಮ್ಮೊಡನೆ ಎಲ್ಲಾ ಹಂಚಿಕೊಂಡು ಸಂತೋಷಪಟ್ಟಿದ್ದರು. ಅದನ್ನೇ ಗುರಾಣಿಯಾಗಿಸಿಕೊಂಡು ನಾನು ಆರಾಧ್ಯರ ಮನೆಗೆ ನುಗ್ಗಿದೆ. ಮನಸ್ವೀ ನಗುವಿನೊಡನೆ ಐದು ಮಿನಿಟಿನ ಅನೌಪಚಾರಿಕ ಮಾತುಕತೆಯಾಡಿ, ಅವರ ಅಕ್ಕ ಇತ್ತ ರುಚಿಕರ ಕಾಫಿ ಹೀರಿ ಮತ್ತೆ ದಾರಿಗಿಳಿದೆ.

ಕೃಷ್ಣಮೂರ್ತಿಪುರಂ ಬಳಿ, ನಿನ್ನೆ ರಂಗಾಯಣದ ಬಳಿ ಕಂಡಂತದ್ದೇ ಹೊಸ ಸೈಕಲ್ ತಂಗುದಾಣವೊಂದು ಕಾಣಿಸಿತು. ಇಲ್ಲಿ ನನ್ನ ಅದೃಷ್ಟಕ್ಕೆ ಅದನ್ನು ಸಜ್ಜುಗೊಳಿಸುತ್ತಿದ್ದ ಇಬ್ಬರು ನೌಕರರು, ಎರಡು ಹೊಸ ಸೈಕಲ್ ಸಮೇತ ಸಿಕ್ಕಿದರು. ಅವರು ಕೊಟ್ಟ ಮಾಹಿತಿಯಂತೆ, ಈ ತಂಗುದಾಣಗಳು ನಗರದೊಳಗೆ ಮಹಾನಗರಪಾಲಿಕೆಯೇ ಜ್ಯಾರಿಗೆ ತರುತ್ತಿರುವ ಸಾರ್ವಜನಿಕ ಬಳಕೆಯ ಸೈಕಲ್ ಯೋಜನೆ – ಟ್ರಿನ್- ಟ್ರಿನ್ ಶಾಖೆಗಳು. ನಗರದೊಳಗೆ ಇಂಥವು ನಲ್ವತ್ತೆಂಟು ಇವೆ. ಅಲ್ಲೆಲ್ಲ ನಗರಪಾಲಿಕೆ ಏಕ ಗೇರಿನ ಸರಳ ಸೈಕಲ್ಲುಗಳನ್ನು, ಸರಳ ವ್ಯವಸ್ಥೆಯೊಡನೆ ಸಾರ್ವಜನಿಕರಿಗೆ ಬಾಡಿಗೆಗೆ ಒದಗಿಸುತ್ತದೆ. ಎಲ್ಲೇ ಸೈಕಲ್ ಪಡೆದ ಬಳಕೆದಾರ, ಆ ನಲ್ವಂತ್ತೆಂಟು ಶಾಖೆಗಳಲ್ಲೆಲ್ಲೂ ಅದನ್ನು ನಿಯಮಾನುಸಾರ ಬಾಡಿಗೆ ಕೊಟ್ಟು ಮರಳಿಸಬಹುದಂತೆ. ಚಾಮುಂಡಿ ಬೆಟ್ಟಕ್ಕೆ ಸೈಕಲ್ ಏರಿಸ ಬಯಸುವವರಿಗೆ ಹೆಚ್ಚುವರಿ ಗೇರುಗಳ ಸೈಕಲ್ಲೂ ತಪ್ಪಲಿನ ಶಾಖೆಗಳಲ್ಲಿರುತ್ತವೆ! ಒಟ್ಟಾರೆ ವ್ಯವಸ್ಥೆ ಅಂತರ್ಜಾಲಾಧಾರಿತವಾದ್ದರಿಂದ ಚರವಾಣಿಯೂ ಸೇರಿದಂತೆ ವಿವಿಧ ರೀತಿಯ ವಿದ್ಯುನ್ಮಾನ ಸೌಲಭ್ಯಗಳನ್ನು ಇದರಲ್ಲಿ ಧಾರಾಳ ನಿರೀಕ್ಷಿಸಬಹುದು. ಇವೆಲ್ಲ ಅಧಿಕೃತವಾಗಿ ಇನ್ನು ಲೋಕಾರ್ಪಣೆಯಾಗಬೇಕು ಎಂಬ ಸುದ್ಧಿ ಹಾಗೂ ಮೊನ್ನಿನ ನನ್ನ ತಪ್ಪು ಮಾಹಿತಿಗೆ ತಿದ್ದುಪಡಿಯನ್ನು ಕೂಡಲೇ ಅಂತರ್ಜಾಲದಲ್ಲಿ ಹಂಚಿಕೊಳ್ಳುವ ಆತುರದಲ್ಲಿ, ನೇರ ಮನೆ ಸೇರಿದೆ. (ಸೈಕಲ್ ಸರ್ಕೀಟ್ ೩೦೮/ ೨೧-೪-೨೦೧೭)

ಮತ್ತೆ ಟ್ರಿನ್-ಟ್ರಿನ್, ಹರ್ಷ, ಜೈ ಮಹಾಲಿಂಗೇಶ್ವರ!

ಇಂದು ಬೆಳಿಗ್ಗೆ ಸೈಕಲ್ಲೇರುತ್ತಿದ್ದಂತೆ ತಮ್ಮ ಅನಂತ, “ನಮ್ಮ ಗೋಶಾಲೆ ನೋಡೋ…” ಎಂದು ಸೂಚನೆ ಕೊಟ್ಟದ್ದು ಸಾಕಾಯ್ತು. ನೇರ ಉಂಗುರ ರಸ್ತೆ ಸೇರಿ ಎಂಬೀಜೀ (ಮೈಸೂರು ಭೋಗಾದಿ ರಸ್ತೆ) ಅಂದುಕೊಂಡೇ ಹೊರಟೆ. ಆದರೆ ತುಸು ಅಂತರದಲ್ಲೇ ವೈಯಕ್ತಿಕ ಕ್ರಮ ಸಂಖ್ಯೆ ನಮೂದಿಸಿದ `ಟ್ರಿನ್-ಟ್ರಿನ್’ ಬನಿಯನ್ ಹಾಕಿ, ಬಹುತೇಕ ಅವರದೇ ಹಳದಿವರ್ಣದ ಏಕಗೇರಿನ ಸೈಕಲ್ಲುಗಳನ್ನು ಸ್ಪರ್ಧಾಸ್ಫೂರ್ತಿಯಲ್ಲಿ ಮೆಟ್ಟುವ ಹಲವು ಯುವಕ, ಯುವತಿಯರನ್ನು ಕಂಡು ಆಕರ್ಷಿತನಾದೆ. ಅದು ಟ್ರಿನ್-ಟ್ರಿನ್ ಮತ್ತು ಜೆಸಿಯಿ (ಜಯಚಾಮರಾಜೇಂದ್ರ ಕಾಲೆಜ್ ಆಫ್ ಇಂಜಿನಿಯರಿಂಗ್) ಸಹಯೋಗದ ಸಮೂಹ ಸ್ಪರ್ಧೆಯಂತೆ. ಹುಡುಗರಿಗೆ ಹದಿನೈದು ಕಿಮೀ, ಹುಡುಗಿಯರಿಗೆ ಒಂಬತ್ತು ಕಿಮೀ ಲಕ್ಷ್ಯವಂತೆ. ಪ್ರವೇಶಧನ ರೂ ನೂರು, ಸೈಕಲ್ ಬೇಕಿದ್ದರೆ (ಸ್ವಂತದ್ದಿಲ್ಲದವರಿಗೆ) ರೂ ಹದಿನೈದು ಹೆಚ್ಚು. ಆರ್ನೂರಕ್ಕೂ ಮಿಕ್ಕು ಸ್ಪರ್ಧಿಗಳಿದ್ದಂತಿತ್ತು. ಅವರನ್ನನುಸರಿಸಿ ಕೊನೆಯವರೆಗೆ ಹೋದೆ. ಜೆಸಿಯಿ ವಠಾರದಲ್ಲಿ ಪೂರ್ಣಗೊಳಿಸಿದವರ ಸಂಭ್ರಮ ಹಾಗೂ ಸುಸ್ತನ್ನು ನೋಡಿದೆ. ಸಂಘಟನೆ ಬಹುಶಃ ಶುದ್ಧ ನೀರು ಮಾತ್ರ ಕೊಟ್ಟು, ಬಹುಮಾನ ವಿತರಣೆಯೊಡನೆ ಕಲಾಪ ಮುಗಿಸುವ ತಯಾರಿಯಲ್ಲಿತ್ತು! ಆಗ ನನಗೆ ಮಂಗಳೂರಿನ ಆರೆಕ್ಸ್ ಲೈಫ್ ಮತ್ತು ಜ್ಯೋತಿ ಸೈಕಲ್ಸಿನವರ ವರ್ಷಾವಧಿ ಸೈಕಲ್ ಅಭಿಯಾನ ಎಷ್ಟು ಘನ ಹಾಗೂ ಉದಾತ್ತವಾದದ್ದು ಎಂದು ಅಭಿಮಾನ ಹೆಚ್ಚಿತು. (ನೋಡಿ: ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು) ಮಂಗಳೂರಿನಲ್ಲಿ ಸತತ ಆರೇಳು ವರ್ಷಗಳಿಂದ ಡಿಸೆಂಬರ್ ಮೊದಲ ಆದಿತ್ಯವಾರ ನಡೆಯುತ್ತಲೇ ಬಂದಿರುವ ನಿಶ್ಚಿತ ಕಲಾಪವಿದು. ಇಲ್ಲಿ ಎಲ್ಲ ವರ್ಗದವರೂ ಸೇರಿ (ಪ್ರಾಯ ಹತ್ತರಿಂದ ಮೇಲಿನ ಗಂಡು ಹೆಣ್ಣು) ಸರಾಸರಿಯಲ್ಲಿ ಇಪ್ಪತ್ತಕ್ಕೂ ಮಿಕ್ಕು ಕಿಮೀ ಸವಾರಿಗೆ ಪ್ರವೇಶಧನ ತೀರಾ ಸಾಂಕೇತಿಕ – ಹಿಂದಿನ ಸಲ ಹತ್ತೋ ಹದಿನೈದೋ ರೂಪಾಯಿಯಷ್ಟೇ ಕೊಟ್ಟ ನೆನಪು.

ವ್ಯವಸ್ಥಾಪಕರು ಮತ್ತೆಲ್ಲವನ್ನೂ ಸ್ವಯಂಸೇವಕರ ಭಾರೀ ದಂಡು ಮತ್ತು ಸಮರ್ಥ ಪ್ರಾಯೋಜಕರನ್ನು ಕಂಡು ಭಾಗಿಗಳಿಗೆ ಮುಟ್ಟಿಸುತ್ತಾರೆ! ವಾಹನ, ವ್ಯಕ್ತಿ ಜಖಂಗಳಿಗೆ ಭದ್ರತಾ ಬೆಂಬಲ, ದಾರಿ ಉದ್ದಕ್ಕೂ ನೀರು, ಪಾನಕ, ಹಣ್ಣುಗಳ ವಿತರಣೆ, ಕೊನೆಯಲ್ಲಿ ಹೊಟ್ಟೆ ಭರ್ತಿ ಉಪಾಹಾರ! ಇದು ಸ್ಪರ್ಧೆಯೇ ಅಲ್ಲವಾದ್ದರಿಂದ ನೇರ ಬಹುಮಾನವಿಲ್ಲ. ಆದರೆ ಉಪಾಹಾರದ ಬೆನ್ನಿಗೇ ಭಾಷಣ-ಪಾಷಾಣಗಳನ್ನು ಮಿತಿಯಲ್ಲಿಟ್ಟು, ಸೈಕಲ್ ಸರ್ಕಸ್ ಪ್ರದರ್ಶನ ಕೊಟ್ಟು, ಅದೃಷ್ಟಚೀಟಿಯ ಆಟಗಳಾಡಿಸಿ ಭಾಗಿಗಳಿಗೆ ಹತ್ತಿಪ್ಪತ್ತು ಒಳ್ಳೆಯ ಸೈಕಲ್ ಸಹಿತ ಅನೇಕ ಪ್ರೋತ್ಸಾಹಕರ ನೆನಪಿನ ಕಾಣಿಕೆಗಳನ್ನು ವಿತರಿಸುತ್ತಲೂ ಬಂದಿದ್ದಾರೆ. ಇದರಲ್ಲಿ ವರ್ಷದಿಂದ ವರ್ಷಕ್ಕೆ ಭಾಗಿಗಳ ಸಂಖ್ಯೆ ಏರುತ್ತಲೇ ಇದೆ, ನಂಬಿದರೆ ನಂಬಿ, ೨೦೧೬ರಲ್ಲಿ ಎರಡೂವರೆ ಸಾವಿರಕ್ಕೂ ಮಿಕ್ಕು ಮಂದಿ – ಗಂಡು ಹೆಣ್ಣು ಬೇಧವಿಲ್ಲದೆ, ಅಂದರೆ ಪ್ರಾಯ ನೋಂದಾಯಿಸದೇ ಬಂದ ಎಂಟರ ಕಿರಿಯನಿಂದ ಹಿಡಿದು, ಎಂಬತ್ತೆರಡರ ಹಿರಿಯನವರೆಗೂ ಈ ಅಭಿಯಾನದಲ್ಲಿ ಸೈಕಲ್ ಮೆಟ್ಟಿದ್ದರು! ಅದರ ಬೆಳಕಿನಲ್ಲಿ ಮೈಸೂರು ಮಹಾನಗರ ಪಾಲಿಕೆಯೇ ನಾಯಕತ್ವ ವಹಿಸಿದ ಟ್ರಿನ್-ಟ್ರಿನ್ ಯೋಜನೆಯ ಬಗ್ಗೆ ನಾನು ಹೊಸದಾಗಿ ಯೋಚಿಸಬೇಕಾಯ್ತು.

ನಾನು ಹೊಸ ತಲೆಮಾರಿನ ಸೈಕಲ್ ಕೊಂಡಂದೇ ಬೆಂಗಳೂರಿನಲ್ಲಿ ಮುರಳಿ, ಸೈಕಲ್ ವೆಂಕಿ, ಸುಧೀರ್ ಮುಂತಾದ ಗೆಳೆಯರು ಹೀಗೇ ಸಾರ್ವಜನಿಕರಿಗೆ ಸೈಕಲ್ ಯೋಜನೆಯನ್ನು ಖಾಸಗಿ ಮಟ್ಟದಲ್ಲಿ ತರುವ ಕಾರ್ಯನಿರತರಾಗಿದ್ದರು. ಅದೇ ಯೋಚನೆಯ ಉತ್ಪನ್ನವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇನ್ಫೋಸಿಸ್ಸಿನಂಥ ಸಂಸ್ಥೆಗಳು ತಮ್ಮ ವಿಸ್ತಾರ ವಠಾರಗಳ ಒಳಗೆ ಇಂಥ ಸೌಕರ್ಯವನ್ನು ಉಚಿತವಾಗಿಯೇ ಒದಗಿಸಿದ್ದಾರೆ. ಅದನ್ನು ನಗರ ಮಟ್ಟದಲ್ಲಿ, ಅದೂ ಜವಾಬ್ದಾರಿಯ ಪರಂಪರೆಯಿಲ್ಲದ ಮಹಾನಗರಪಾಲಿಕೆಯಂಥ ಸಾರ್ವಜನಿಕ ಆಡಳಿತ ವಹಿಸಿಕೊಳ್ಳುವುದು ಖಂಡಿತವಾಗಿಯೂ ಸರಿಯಲ್ಲ. “ಒಮ್ಮೆ ಕೊಟ್ಟರೆ ಮುಗಿಯಿತು” ಎಂದೇ ಹಲವು ವರ್ಷಗಳಿಂದ ಕರ್ನಾಟಕ ಸರಕಾರ ಶಾಲಾ ಮಕ್ಕಳ ಮಟ್ಟದಲ್ಲಿ ವಿತರಿಸುತ್ತಿರುವ `ಉಚಿತ ಸೈಕಲ್’ ಯೋಜನೆಯನ್ನೇ ನೋಡಿ. ಸೈಕಲ್ಲುಗಳ ಖರೀದಿಯ ವೆಚ್ಚ, ಮತ್ತವುಗಳ ಗುಣಮಟ್ಟ, ದುರಸ್ತಿ, ಬಾಳ್ತನ, ಉಪಯುಕ್ತತೆಗಳ ನಿಜ ಮೌಲ್ಯಮಾಪನ ಎಂದೂ ಆದದ್ದಿಲ್ಲ. ಸಹಜವಾಗಿ ಕೇಳಿಬರುತ್ತದೆ (ಎಲ್ಲ ಸರಕಾರೀ ಯೋಜನೆಗಳಂತೆ) – ಉಚಿತ ಸೈಕಲ್ಲೂ ಆಡಳಿತ ವರ್ಗದ ವೈಯಕ್ತಿಕ ಕಾಮಧೇನು! ಸಾವಿರಾರು ಸೈಕಲ್ಲುಗಳು, ನೂರೆಂಟು ಶಾಖೆಗಳು, ವಿತರಣೆ ಮತ್ತು ದುರಸ್ತಿಗಳ ದಕ್ಷ ನಿರ್ವಹಣಾ ಸಿಬ್ಬಂದಿ, ಇವೆಲ್ಲದರ ಕೊನೆಯಲ್ಲಿ ಆರ್ಥಿಕ ಸ್ವಾವಲಂಬನೆ ಸರಕಾರೀ ವ್ಯವಸ್ಥೆಯಲ್ಲಿ ನಿರೀಕ್ಷಿಸುವುದು ಸಾಧ್ಯವೇ!

ಜೆಸಿಯಿ ವಠಾರ ಸಭಾಕಲಾಪಕ್ಕೆ ಸಜ್ಜುಗೊಳ್ಳುತ್ತಿದ್ದಂತೆ ನಾನು ಮತ್ತೆ ದಾರಿಗಿಳಿದೆ. ನಾನು ಮನೆ ಬಿಡುವಾಗ ಯೋಚಿಸಿದ್ದ ಎಂಬೀಜಿ ದಾರಿಯನ್ನು, ಸೈಕಲ್ ಸ್ಪರ್ಧೆಯ ಬೆನ್ನಿಗೆ ಬಿದ್ದು ನಾನಾಗಲೇ ದಾಟಿ ಬಂದಿದ್ದೆ. ಹಾಗಾಗಿ ಪೂರ್ವಯೋಜನೆಯನ್ನು ತಿರುಗಾಮುರುಗಾ ಮಾಡಿ, ನೇರ ಮಡಿಕೇರಿ-ಮಂಗಳೂರು ರಸ್ತೆಗೇ ಹೋದೆ. ಅದು ಉಂಗುರ ದಾರಿಯನ್ನು ಕತ್ತರಿಸುವಲ್ಲಿ ನಾನು ಯಾವತ್ತೂ ಕಂಡಂತೆ ವಾಹನ ಸಮ್ಮರ್ದ ವಿಪರೀತವೇ ಇರುತ್ತದೆ. ಸಹಜವಾಗಿ ಅಲ್ಲೀಗ ಮೇಲ್ಸೇತುವೆಯ ಕಾಮಗಾರಿ ಶುರುವಾಗಿದೆ. ಇಂದು ನಾನು ಹೋದ ಸಮಯವಾದರೂ ಕಛೇರಿ, ವಹಿವಾಟುಗಳು ಕೆಲಸಕ್ಕೆ ತೊಡಗುವ ಹೊತ್ತು. ಸಾರಿಗೆ ಒತ್ತಡ ತುಸು ಹೆಚ್ಚೇ ಇತ್ತು. ಆದರೆ ಮಂಗಳೂರಿನಲ್ಲಿ ನಾವನುಭವಿಸುವ ‘ಸೈಕಲ್ ಸರಳತೆ’ಗೆ ಇಲ್ಲೂ ಮನ್ನಣೆಯಿದೆ ಎಂದು ಕಂಡುಕೊಂಡೆ! ಮೋಟಾರು ವಾಹನಗಳೆಲ್ಲ ಹಸಿರು ದೀಪಕ್ಕಾಗಿ ಹೊಗೆ ಕಾರುತ್ತ, ಭುಸುಗುಡುತ್ತ ಇರುವಾಗ ಬೇರೊಂದೆರಡು ಸೈಕಲ್ಲಿಗರು ಹೋದಂತೆ, ಚಲನಶೀಲವಿದ್ದ ವಾಹನಧಾರೆಗೆ ಅಡ್ಡಿಯಾಗದಂತೆ ನಾನೂ ನಿರಾತಂಕವಾಗಿ ಮುಂದುವರಿದೆ.

ಕಾವೇರಿ ಪುರಾಣದಲ್ಲಿ ಅಗಸ್ತ್ಯರನ್ನು ಅಟಕಾಯಿಸಿದ ರಕ್ಕಸಸೋದರರಾದ ವಾತಾಪಿ ಇಲ್ವಲರ ಕತೆ ನಾವು ಕೇಳಿದ್ದೇವೆ. ಅವರಾದರೋ ಹಸಿದು ಬಂದವರ ಉದರಸೀಳಿ ಹೊಟ್ಟೆಹೊರೆಯುತ್ತಿದ್ದ ಭಯೋತ್ಪಾದಕರು. ಆದರೆ ಮೈಸೂರಿನ ಇಲವಾಲ (ವಾತಾಪಿಯ ಸೋಂಕಿಲ್ಲದ್ದಕ್ಕೋ ಏನೋ) ನನ್ನ ಲೆಕ್ಕಕ್ಕೆ ಕೇವಲ ಹರ್ಷ ತಾಣ! ಅಲ್ಲಿನ ಹೆವನ್ಸ್ ಬ್ರೆಡ್ ಫ್ಯಾಕ್ಟರಿ ದೇವಕಿಯ ಚಿಕ್ಕಪ್ಪನ ಮಗ ಹರ್ಷ ಉರುಫ್ ಹರೀಶ ಕೊಂದಲಕಾನನ ಯಜಮಾನಿಕೆಯದು. ಅಲ್ಲಿ “ಹೋ! ಅನಿರೀಕ್ಷಿತ ಭೇಟಿ” ಹರ್ಷೋದ್ಗಾರ ಕೇಳಿದ್ದಾಯ್ತು. ಹರ್ಷ ನನ್ನ ಜಾಲತಾಣ ಹಾಗೂ ಫೇಸ್ ಬುಕ್ಕನ್ನು ಗಂಭೀರವಾಗಿ ಓದಿ, ಮೆಚ್ಚುಗೆಯ ನುಡಿ, ಅಗತ್ಯ ಕಾಣಿಸಿದಾಗ ನಿರ್ದಾಕ್ಷಿಣ್ಯ ಚರ್ಚೆಯನ್ನೂ ನಡೆಸುವುವವ. ಮತ್ತಿವನ್ನೆಲ್ಲ ತನ್ನ ಸಹೋದ್ಯೋಗಿ ಹಾಗೂ ಮಿತ್ರರೊಡನೆ ಹಂಚಿಕೊಳ್ಳುತ್ತಲ್ಲೂ ಬಂದವ. ಇದನ್ನು ಶ್ರುತಪಡಿಸುವಂತೆ ನಾನಲ್ಲಿದ್ದ ಅಲ್ಪಾವಧಿಯಲ್ಲಿ – ಸರಿಯಾಗಿ ಹೇಳಬೇಕಾದರೆ, ಅವನ ಕಛೇರಿ ಸಹಾಯಕ ತುರ್ತಾಗಿ ತಯಾರಿಸಿಕೊಟ್ಟ ರುಚಿಕರವಾದ ಕರಿಚಾ ಕುಡಿದು ಮುಗಿಸುವುದರೊಳಗೆ, ಮೂರು ಸಾಕ್ಷಿ ಬೇರೇ ಸಿಕ್ಕಿತ್ತು! (ಅವನ ಸಹಾಯಕ, ನೆರೆವಠಾರದ ಇನ್ನೋರ್ವ ಉದ್ಯಮಿ ಮತ್ತು ಹೊರಗಿನ ಓರ್ವ ಲೆಕ್ಕಪತ್ರ ತನಿಖಾಧಿಕಾರಿ.)

ಹರ್ಷೋತ್ತರದಲ್ಲಿ ನಾನು ಮಡಿಕೇರಿಯ ಹೆದ್ದಾರಿ ಬಿಟ್ಟು ಎಡಕ್ಕೆರಡು ಕವಲಿಸಿದೆ. ಹುಯಿಲಾಳು ಹುಂಡಿಯ ಶನೀಶ್ವರನನ್ನು ಹೊರಗಿನಿಂದಲೇ ಕಂಡು, ಕೆ.ಹೆಮ್ಮನಳ್ಳಿಯ ಮಹಾಲಿಂಗೇಶ್ವರನಿಗೆ ವಠಾರವೆಲ್ಲ ಸುತ್ತಿ ಆತ್ಮೀಯ ಭೇಟಿ ಕೊಟ್ಟೆ! ಮೂಲದಲ್ಲಿ ವರಶಾಪ ಕೊಡುವ ದೇವರನ್ನೇ ನಂಬದ ನನ್ನ ಈ ಬೇಧದ ಹಿನ್ನೆಲೆ ತಿಳಿಯದವರಿಗಾಗಿ ಇಲ್ಲಿ ನಾನು ಎರಡು ಮಾತು ಸೇರಿಸಿಬಿಡುತ್ತೇನೆ. ಹಲವು ವರ್ಷಗಳ ಹಿಂದಿನ ಕತೆ. ಮೈಸೂರಿನ ಈ ಮೂಲೆಯಲ್ಲಿ, ಎರಡನೇ ವೀರಬಲ್ಲಾಳನ ಕಾಲದ ದೇವಳ ಮತ್ತದರ ಅಧಿಕೃತ ನೆಲ ಕೇವಲ ಸರಕಾರೀ ದಾಖಲೆಗಳಲ್ಲಷ್ಟೇ ಉಳಿದು, ಜನರಿಂದ ಪೂರ್ಣ ವಿಸ್ಮರಣೆಗೆ ಸಂದುಹೋಗಿತ್ತು. ನನ್ನ ತಮ್ಮ ಅನಂತವರ್ಧನ (ವೃತ್ತಿಯಲ್ಲಿ ದಕ್ಷ ಚಾರ್ಟರ್ಡ್ ಅಕೌಂಟೆಂಟ್) ಕೇವಲ ಕೃಷಿ ಆಸಕ್ತಿಯಿಂದ ಸಮೀಪದಲ್ಲಿದ್ದವನು, ತೀರಾ ಆಕಸ್ಮಿಕವಾಗಿ ಇದನ್ನು ಶೋಧಿಸಿದ್ದ. ಅನಂತ ನಮ್ಮ ತಂದೆ (ಜಿಟಿ ನಾರಾಯಣ ರಾವ್) ಅಥವಾ ನನ್ನಂತೆ ಸ್ಪಷ್ಟ ನಿರೀಶ್ವರವಾದಿಯಲ್ಲ. ಹಾಗೆಂದು ಕಟ್ಟಾ ದೇವ, ಮಠಾದಿಗಳ ಬೆಂಬಲಿಗನೂ ಅಲ್ಲ. ಇವನು ಕೆ.ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ದೇವಳವನ್ನು ಸ್ವಸ್ತ ಸಾಮಾಜಿಕ ಅಗತ್ಯಕ್ಕಾಗಿ, ಪೂರ್ಣ ಪುನಾರಚನೆಯಿಂದ ತೊಡಗಿ ಇಂದಿನ ಸ್ಥಿತಿಯವರೆಗೆ ಬೆಳೆಸಿದ. ಇದು ಜನಪ್ರಿಯ ಮಾದರಿಯಲ್ಲಿ ಭಕ್ತಿ-ಉದ್ಯಮದ ‘ವೈಭವ’ಗಳನ್ನೇನೂ ಪ್ರದರ್ಶಿಸುವುದಿಲ್ಲ. ಆದರೆ ಆಸುಪಾಸಿನ ನಂಬಿಕೆಯುಳ್ಳವರ ಸಾಮಾಜಿಕ ಸ್ತರೋನ್ನತಿಗಾಗಿ ಬಹುಮುಖೀ ಚಟುವಟಿಕೆಗಳನ್ನು ಹಮ್ಮಿಕೊಂಡು, ಪ್ರಭಾವೀ ಕೇಂದ್ರವಾಗಿ ವಿಕಸಿಸುತ್ತಲೇ ಇದೆ. (ನೋಡಿ: ಮಹಾಲಿಂಗೇಶ್ವರರಿಗೆ ಜಯವಾಗಲಿ!) ಇಲ್ಲಿನ ಬಾಲಶಿಬಿರಗಳು, ಸರಳ ವಿವಾಹಗಳು, ಯಾರಿಗೂ ಯಾವುದೇ ವಿಧಿನಿಷೇಧಗಳನ್ನು ಹೇರದ ಆರಾಧನಾ ಕ್ರಮಗಳು, ಪಾರಂಪರಿಕ ಕುಸ್ತಿ ಮತ್ತು ಜನಪದ ರಂಗಕಲೆಗಳ ಕುರಿತು ನಡೆಯುವ ಚಟುವಟಿಕೆಗಳೆಲ್ಲವನ್ನು ವಿವರಿಸ ಹೊರಟರೆ ಲೇಖನವೂ ಅನಂತವಾದೀತು!

ಏರುತ್ತಿದ್ದ ಬಿಸಿಲನ್ನು ಎರಡು ಇಷ್ಟ-ಭೇಟಿಗಳ ತಣ್ಪಿನಲ್ಲಿ ನಗಣಿಸಿ ಗೃಹಾಭಿಮುಖನಾದೆ. ಹೋಗುವಾಗ ತಪ್ಪಿದ್ದ ಎಂಬೀಜೀ ರಸ್ತೆಯನ್ನು ಈಗ ಹಿಡಿದು, ಉಂಗುರ ರಸ್ತೆಯನ್ನು ಕತ್ತರಿಸಿ, ಮಾನಸಗಂಗೋತ್ರಿಯನ್ನು ಪಕ್ಕಕ್ಕೆ ಬಿಟ್ಟು, ಸರಸ್ವತೀಪುರದ ಅಡ್ಡನೀಟ ರಸ್ತೆಗಳಲ್ಲಿ ವಿಹರಿಸಿ ಮನೆ ಸೇರಿದೆ. (ಸೈಕಲ್ ಸರ್ಕೀಟ್ ೩೦೯/೨೨-೪-೨೦೧೭)

ಉಂಗುರ ಪೂರ್ಣಯ್ಯ!

“ಮೈಸೂರಿನ ಉಂಗುರ ರಸ್ತೆ ೪೨ ಕಿಮೀ ಉದ್ದ, ಕಾರೇರಿದರೆ ಮುಕ್ಕಾಲುಗಂಟೆ” ಎಂದಿತು ಗೂಗಲ್ ನಕ್ಷೆ. ಈಚಿನ ನನ್ನೆರಡೂ ಸೈಕಲ್ ಸವಾರಿ ಅದನ್ನುದ್ದೇಶಿಸಿಯೇ ಹೊರಟರೂ ನಡುವೆ ‘ತಪೋಭಂಗ’ವಾದ ಕೋಪ ನನ್ನಲ್ಲಿತ್ತು. ಅದನ್ನಿಂದು `ಪೂರ್ಣಗೊಳಿಸಿಯೇ ಶುದ್ಧ” ಎಂದೇ ಬೆಳಿಗ್ಗೆ ಎಂಟೂಕಾಲರ ಸುಮಾರಿಗೆ ಸೈಕಲ್ಲೇರಿದ್ದೆ. ಯಜ್ಞಾರಂಭವಾಗುತ್ತಿದ್ದಂತೆ ಅಪ್ಸರೆಯ ನರ್ತನ! ಇನ್ನೂ ಸರಸ್ವತೀಪುರ ಬಿಟ್ಟಿರಲಿಲ್ಲ, ಎದುರಿನಿಂದ ಯುವ ಓಟಗಾರರ ಹೊಳೆ ಹರಿದು ಬರುತ್ತಿತ್ತು!. ಆಗ ನಿನ್ನೆಯ ನನ್ನ ಟಿಪ್ಪಣಿಯಲ್ಲಿದ್ದ ‘ಟ್ರಿನ್ ಟ್ರಿನ್ ಅಭಿಯಾನ’ದ ಮಾತಿಗೆ ಮೈಸೂರು ಮೂಲದ ಗೆಳೆಯ ಸಂದೀಪ್ ಕೊಟ್ಟ ಪ್ರತಿಕ್ರಿಯೆ ನೆನಪಾಯ್ತು “ನಾಳೆ ಬೇರೊಂದೇ ಸಂಘಟನೆಯ ಹತ್ತು ಕಿಮೀ ರಸ್ತೆ ಓಟ ಇದೆ, ಬರ್ತೀರಾ?” ನಾನು ಲಕ್ಷ್ಯಚ್ಯುತನಾಗದ ಎಚ್ಚರದಲ್ಲಿ, ಎರಡು ಚಿತ್ರಗ್ರಹಣ ಮಾತ್ರ ಮಾಡಿ, ನನ್ನದೇ ದಾರಿಯಲ್ಲಿ ಮುಂದುವರಿದೆ.

ಕೃಷ್ಣಮೂರ್ತಿಪುರ, ಝಾನ್ಸೀ ಲಕ್ಷ್ಮೀಬಾಯಿ ರಸ್ತೆ, ಎಲೆತೋಟದ ದಾರಿಗಾಗಿ ಉದಕಮಂಡಲ ದಾರಿ ಸೇರಿದೆ. ಅದರಲ್ಲೇ ಮುಂದುವರಿದು, ಮೊನ್ನೆ ಉಂಗುರ ದಾರಿ ಬಿಟ್ಟ ಜಾಗ, ಅಂದರೆ ಬಂಡಿಪಾಳ್ಯದಲ್ಲೇ ಮತ್ತೆ ಅದನ್ನು ಹಿಡಿದೆ. ಎಡ ಮಗ್ಗುಲಿನ ಕೃಷ್ಯುತ್ಪನ್ನ ಸಗಟು ಮಾರುಕಟ್ಟೆಯೇ ಮೊದಲಾದ ನಾಗರಿಕ ಅವ್ಯವಸ್ಥೆಗಳಿಗೆ ಬೃಹತ್ ಹಿಂದಿನ ಪರದೆಯಂತೆ ನಿಂತಿತ್ತು ನನ್ನ ಪ್ರಿಯ (ಚಾಮುಂಡಿಬೆಟ್ಟದ) ನಂದಿ ಶಿಖರ. ಅದೇ ನನ್ನೋಟಕ್ಕೆ ಆರಂಭದ ಬಿಗಿಲು ಹಾಕಿತು. ನಿನ್ನೆ ಮೊನ್ನೆಯೆಲ್ಲ ಬೆಳಗಾದದ್ದೇ ಆಕಾಶರಾಯರು ಒಣಗಲು ಹರಗುತ್ತಿದ್ದ ಮೋಡಗಳೆಲ್ಲ (ಗರಿಗರಿಯಾಗಿ?) ಇಂದು ಕಪಾಟು ಸೇರಿದಂತಿತ್ತು. ಸೂರ್ಯ ಉಗ್ರಪ್ರತಾಪಿಯಾಗುತ್ತ ನಡೆದಿದ್ದ. ಅಕಾಲಿಕ ಮಳೆಯ ಬೆನ್ನಿಗೆ ಬಂದ ಬಿಸಿಲ ಪ್ರಭಾವದಲ್ಲಿ ಬೆಟ್ಟ ಮಾತ್ರ ಮಬ್ಬುಮಬ್ಬಾಗಿತ್ತು. ಅವೆಲ್ಲವನ್ನು ನನ್ನ ಸಮಯಮಿತಿಗೆ ಹೊಂದಿಸಿ, ಇಂದು ಬೆಟ್ಟದ ಅಪ್ರದಕ್ಷಿಣೆ (ಬಲದಿಂದ ಎಡಕ್ಕೆ) ಪೂರ್ಣಗೊಳಿಸುವ ಹುಮ್ಮಸ್ಸಿನಲ್ಲಿ ನಾನು ಪೆಡಲಿದೆ. ನಂದಿಶಿಖರವನ್ನು ಮಿನಿಟು ಮಿನಿಟಿಗೂ ಹಿಂದಿಕ್ಕುತ್ತಾ ಕೊನೆಯಲ್ಲಿ ಮರೆಗೇ ಸರಿಸಿದೆ.

ಮೊನ್ನೆಯಿಂದ ಈ ವಲಯದಲ್ಲಿ ಹತ್ತೆಂಟು ಕಡೆ ‘ಜ್ವಾಲಾಮುಖಿ ತ್ರಿಪುರ ಸುಂದರೀ ದೇವಳಕ್ಕೆ ದಾರಿ’ ಎಂದು ಭರ್ಜರೀ ನಾಮಫಲಕಗಳನ್ನು ಕಂಡಿದ್ದೆ. ಆದರೆ ಇಂದು ಬಲಕ್ಕೆ ಅನತಿದೂರದಲ್ಲಿ ಸ್ವತಃ ದೇವಳವೇ ಕಂಗೊಳಿಸಿದಂತಿತ್ತು. ದೈವ ಸಾಕ್ಷಾತ್ಕಾರವನ್ನೇ ಉದ್ದೇಶವಾಗಿಟ್ಟುಕೊಂಡ ತೆನಾಲಿರಾಮ, ಸಾಕ್ಷಾತ್ ದೇವಿ ಎದುರು ನಿಂತಾಗ ನಗಾಡಿದ್ದು ನೆನೆಸಿಕೊಳ್ಳಿ. ಹಾಗೇ ನನ್ನ ಬಾಲ್ಯದಲ್ಲಿ, ಪ್ರಾಯಕ್ಕೆ ಬರುವ ಹುಡುಗಿಯರನ್ನು ಕಾಡುವ ಮೊಡವೆಗಳ ನೆಪ ಮಾಡಿ, “ಜ್ವಾಲಾಮುಖಿ ಸುಂದರೀ” ಎಂದು ಛೇಡಿಸುತ್ತಿದ್ದದ್ದು ಇಲ್ಲಿ ನೆನಪಾಗಿ ನಗೆ ಬಾರದಿರಲಿಲ್ಲ!

ಮುಂದೆ ಬಹು ದೂರದವರೆಗೂ ಬೆಟ್ಟದ ಒರಟು ಹಿತ್ತಿಲೇ ವಿಸ್ತರಿಸಿದಂತಿದ್ದುದರಿಂದ ಜನವಸತಿ, ಕೃಷಿಸಮೃದ್ಧಿ ವಿರಳವಾಗಿತ್ತು. ಈಚೆಗೆ ಬಹುಶಃ ಉಂಗುರ ರಸ್ತೆಯ ಪ್ರಭಾವದಲ್ಲಿ ಕಟ್ಟಡ ನಿವೇಶನ, ಉಪನಗರ ರಚನೆಗಳು ವಿಕಸಿಸಲು ತೊಡಗಿದಂತೆ ಕಾಣಿಸಿತು. ಅದರಲ್ಲಿ ಅಪವಾದವೆಂಬಂತೆ ‘ಕೆ.ಆರ್. ಶ್ರೀನಿವಾಸ ಐ.ಪಿ.ಎಸ್’ ಎಂಬ ಹೆಸರಿನ ಉಪನಗರ ಮಾತ್ರ ಆಶ್ಚರ್ಯಕರ ಪ್ರಗತಿ ಸಾಧಿಸಿದಂತಿತ್ತು; ಅದು ಮೈಸೂರಿನ ಭಾಗವಾಗಿಯೂ ಸ್ವತಂತ್ರ ನಗರದಂತೆಯೇ ಭಾಸವಾಯ್ತು.

ಬೆಟ್ಟದ ಹಿಮ್ಮೈ ಕಳೆದದ್ದಕ್ಕೆ ಪ್ರಥಮ ಸೂಚನೆಯಂತೆ ತಿರುಮಕೂಡ್ಲು ನರಸೀಪುರದ (ಟಿ.ನರಸೀಪುರ) ಕವಲು ಬಂತು. ಈ ಮಾರ್ಗದ ಹಳೇ ಚಹರೆಗಳು ನನ್ನ ಮನಃಪಟಲದಲ್ಲಿ ಪೂರ್ಣ ಮಾಸಿವೆ. ಆದರೆ ಅದು ಚೋದಿಸುವ ಹಳೆಯ ಅನುಭವದ ಸವಿ ಮಾತ್ರ ನಾನಿಲ್ಲಿ ಸಂಕ್ಷಿಪ್ತವಾಗಿಯಾದರೂ ಹಂಚಿಕೊಳ್ಳಲೇಬೇಕು. ಅದು (೧೯೭೧ರ ಸುಮಾರಿಗೆ) ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ವೈಭವದ ದಿನಗಳು. ನಾವು ಎರಡು ಹಗಲಿನ ಕಾವೇರಿ ನದಿ ದಂಡೆ ಚಾರಣ ನಡೆಸಿದ್ದೆವು.

ಮೊದಲ ದಿನ ಸಂಜೆಯೇ ನಮ್ಮ ತಂಡ ಸಕಲ ಸಜ್ಜಿತವಾಗಿ, ಬಸ್ಸೇರಿ ಶ್ರೀರಂಗಪಟ್ಟಣದ ಸಮೀಪದ ಕರಿಘಟ್ಟ ಎಂಬಲ್ಲಿ ಕಾವೇರಿ ದಂಡೆ ಮುಟ್ಟಿತ್ತು. ಅಲ್ಲೇ ರಾತ್ರಿಗೆ ಶಿಬಿರ ಹೂಡಿದ್ದೆವು. ಮರು ಹಗಲಿಡೀ ನದಿಯನ್ನೇ ಅನುಸರಿಸುತ್ತ ಸಂಜೆಗೆ ಬನ್ನೂರು ಹೊರವಲಯ ಸೇರಿದ್ದೆವು. dead tired ಆದ (ಬಳಲಿ ಸತ್ತಂಥ) ನಮಗೆ ಅಲ್ಲಿನ ಸ್ಮಶಾನವೇ ಶಿಬಿರತಾಣವಾಗಿ ಒದಗಿತ್ತು! ಮರು ಬೆಳಿಗ್ಗೆ ಚಾರಣ ಮುಂದುವರಿಸಿ, ಮಧ್ಯಾಹ್ನಕ್ಕೂ ಮೊದಲೇ ಗುರಿ – ಟಿ. ನರಸೀಪುರ, ಸೇರಿದ್ದೆವು.

ಚಾರಣವನ್ನು ಕಡ್ಡಾಯವಾಗಿ ನದಿ ತೀರದ ಸವಕಲು ಜಾಡುಗಳಿಗಷ್ಟೇ ಸೀಮಿತಗೊಳಿಸಿದ್ದೆವು. ಸಹಜವಾಗಿ ಪಾದ ಹುಗಿಯುವ ಮರಳ ನಡಿಗೆ, ಕಾಲುಕಟ್ಟುವ ಹುಲ್ಲುಹೊದರು, ಸೇತುವಿಲ್ಲದ ಅಸಂಖ್ಯ ಸಣ್ಣಪುಟ್ಟ ತೊರೆಗಳೆಲ್ಲ ನಮ್ಮ ಸವಾಲುಗಳು. ಮತ್ತೆ ಮೊದಲ ರಾತ್ರಿಯಿಂದ ತೊಡಗಿ ಕೊನೆಯವರೆಗೂ ನಮ್ಮೆಲ್ಲ ಊಟ, ವಿಶ್ರಾಂತಿಗಳ ಸರಕು ಎಲ್ಲರ ಬೆನ್ನೇರಿದ ಬೇತಾಳ. ಕಲ್ಲೊಟ್ಟಿ ಒಲೆ ಮಾಡಿ ಅಡುಗೆ ಮತ್ತೆ ಶುಚಿ ಮಾಡುವ, ರಾತ್ರಿ ಸರದಿಯಲ್ಲಿ ಪಹರೆ ನಡೆಸುವ ಕೆಲಸಗಳೂ ನಮ್ಮವೇ. ಈ ಎಲ್ಲ ಸಾಹಸಗಳೊಡನೆ ಸಂಜೆಯಷ್ಟೇ ಗುರಿ ಸೇರುವ ಮತ್ತೆ ಸಿಕ್ಕ ಬಸ್ಸು ಹಿಡಿದು ಮೈಸೂರಿಗೆ ಮರಳುವ ಯೋಜನೆ ನಮ್ಮದಿತ್ತು. ಈಗ ಅರ್ಧ ದಿನವೇ ಉಳಿದ ಸಂತಸದಲ್ಲಿ ನಾವು ಯೋಜನೆಗೆ ಹೊಸ ಸೇರ್ಪಡೆ ಹಾಕಿದೆವು. ಆ ಪ್ರಕಾರ ನದಿಯಲ್ಲಿ ಮಿಂದು, ಬಿಸಿಯೂಟ ಮಾಡಿ, ಅಲ್ಲೇ ತುಸು ವಿಶ್ರಾಂತಿ ಪಡೆದೆವು. ಮುಸ್ಸಂಜೆಗೆ ಮತ್ತೆ ಹೊಟ್ಟೆ ಚಿಂತೆ ಪರಿಹರಿಸಿ, ಉಳಿದೆಲ್ಲವನ್ನು ಬೆನ್ನಿಗೇರಿಸಿ, ವಾಹನಗಳ ಮಾರ್ಗದಲ್ಲಿ ಮೈಸೂರಿಗೆ (ಸುಮಾರು ೩೫ ಕಿಮೀ) ನಿಶಾಚಾರಣ ನಡೆಸಿದೆವು. ಅಂದು ಹೊಸದಿನ ಅರಳುತ್ತಿರುವಾಗ ನಾವು, ಇಂದು ನಾನು ಕಾಣುತ್ತಿರುವ ಇದೇ ಮಾರ್ಗದಲ್ಲಿ ಮೈಸೂರಿಗೆ ಮರಳಿದ್ದೆವು. ನಿದ್ದೆಗೇಡಿತನ, ಶ್ರಮ, ಹೊರೆ ಎಲ್ಲವನ್ನೂ ಮೀರಿ ಅಂದು ಒದಗಿದ ಆನಂದ, ಇಂದು ಮರುಕಳಿಸಿದಂತೆ ಎರಡು ಸುತ್ತು ಹೆಚ್ಚೇ ಪೆಡಲೊತ್ತಿದೆ.

ಕ್ರಮವಾಗಿ ಬನ್ನೂರು, ಮಹದೇವಪುರದ ಕವಲು ಕತ್ತರಿಗಳನ್ನೂ ಹಾಯ್ದೆ. ಮುಂದೆ ಬಹುದೂರಕ್ಕೇ ಕಾಣುವಂತೆ ಎತ್ತರದ ಕಾಂಕ್ರೀಟ್ ಕಾಲುಗಳ ಮೇಲೆ ನಿಂತ ವರುಣನಾಲೆ, ಅಂದರೆ ಕೃಷ್ಣರಾಜಸಾಗರದ ಬಲದಂಡೆಯ ಪ್ರಮುಖ ಕಾಲುವೆ, ತನ್ನ ಪಾಡಿಗೆ ಪಶ್ಚಿಮ – ಪೂರ್ವವಾಗಿ ನೇರ ಹರಿದಿತ್ತು. ಉಂಗುರದಾರಿ ಬಳಕುತ್ತ ಅದಕ್ಕೆ ಮೈ ಒರೆಸುವಂತೆ ಸಮೀಪಿಸಿತು. ಅಲ್ಲೇ ಈ ದಾರಿ ಮತ್ತು ಆ ನಾಲೆಯ ಸಾಮೀಪ್ಯಕ್ಕೆ ಅಂತರವಿಡುವಂತೆ ಅಡಿಯಲ್ಲಿ ತೂರಿ ಬಂತು ಬೆಂಗಳೂರ ಹೆದ್ದಾರಿ. ಉಂಗುರ ರಸ್ತೆಗೆ ಅತ್ತ ಮಡಿಕೇರಿ ಕವಲಿನಲ್ಲಿ ಕೆಳಸೇತಿನ ಕಾಮಗಾರಿ ತೊಡಗಿದ್ದು ನಿನ್ನೆ ಮೊನ್ನೆ ನೋಡಿದ್ದೆ. ಆದರೆ ಅಂಥದ್ದೇ ವ್ಯವಸ್ಥೆ ಇಲ್ಲಿ ಬೆಂಗಳೂರ ದಾರಿಗೆ ಇನ್ನೂ ತೊಡಗಿಲ್ಲದಿರುವುದು ಆಶ್ಚರ್ಯ! ನಿಜದಲ್ಲಿ ಉಂಗುರ ದಾರಿ ಎಂದಲ್ಲ, ಯಾವುದೇ ದಾರಿಯ (ಅರ್ಥಾತ್ ಪ್ರಾದೇಶಿಕ ಆಡಳಿತಗಳ ನಿರ್ಧಾರಗಳಿಗೆ) ಸ್ವಾತಂತ್ರ್ಯಕ್ಕೆ ಅಪವಾದವಾಗಿ ಕಾಡುವವು ರೈಲ್ವೇ ಹಳಿಗಳು (ಅರ್ಥಾತ್ ಕೇಂದ್ರ ಆಡಳಿತ!). ಇದನ್ನು ಮಂಗಳೂರಿನಲ್ಲಿ ನಾನು ಸಾಕಷ್ಟು ಕಂಡಿದ್ದೇನೆ. ಹಾಗಾಗಿಯೇ ಇರಬೇಕು, ಬೆಂಗಳೂರು ದಾರಿ ಕಳೆದು ತುಸು ಮುಂದೆ, ಮೊದಲು ಬೆಂಗಳೂರು ಮತ್ತೆ ಹಾಸನದ ರೈಲ್ವೇ ಹಳಿಗಳನ್ನು ದಾಟುವಲ್ಲಿ ಉಂಗುರದಾರಿ ಪೂರ್ಣ ಮೈ ಸಂಕುಚಿಸಿ, ಒಂದೇ ಸೇತುವೆಯ ಕೆಳಗೆ ನುಸುಳಲು ದ್ವಿಪಥವನ್ನಷ್ಟೇ ಬಳಸುತ್ತಿದೆ!

ವರುಣನಾಲೆಯ ಸುಂದರ ಚಿತ್ರಗ್ರಹಣಕ್ಕೆ ನಾನು ಬೆಂಗಳೂರ ಕವಲನ್ನೇ ತುಸು ಅನುಸರಿಸಿದ್ದೆ. ಆಗ ಅಲ್ಲಿ ಎಡ ಮಗ್ಗುಲಿನ ಝಿಂಕ್ ಶೀಟ್ ಮರೆಯ ತೆಂಗಿನ ತೋಪಿನಿಂದ ಅಬ್ಬರಿಸುವ ಮೋಟಾರ್ ಸೈಕಲ್ಲುಗಳ ಸದ್ದು, ಮೈಕಾಸುರನ ಪ್ರಕಟಣೆಗಳು ಕೇಳಿಸಿದವು. ಕುತೂಹಲಕ್ಕೆ ಅಲ್ಲಿದ್ದ ಮುಕ್ತದ್ವಾರವನ್ನು ಬಳಸಿದೆ. ಸ್ಥಳೀಯ ಮೋಟಾರ್ ಕ್ಲಬ್ಬೊಂದು ದ್ವಿಚಕ್ರ ವಾಹನಗಳ ಕಚ್ಚಾಜಾಡಿನ ಓಟದ ಸ್ಪರ್ಧೆ (ಮೋಟೋಕ್ರಾಸ್) ಏರ್ಪಡಿಸಿತ್ತು. ಸ್ಪರ್ಧಾ ಅಂಕಣ, ಆರಂಭ ಬಿಂದು, ಪ್ರೇಕ್ಷಾಂಗಣವೆಲ್ಲ ಖಾಲಿಖಾಲಿ. ಆದರೆ ಒತ್ತಿನ ಅಭ್ಯಾಸ ಕಳ ಹೂಂಕರಿಸುತ್ತಿತ್ತು, ನೋಂದಣಿ ಮೇಜು ಗಿಜಿಗುಡುತ್ತಿತ್ತು. ಹೆಚ್ಚಿದ ಕುತೂಹಲಕ್ಕೆ, ಒಂದು ವಿಭಾಗದ ಓಟವನ್ನಾದರೂ ನೋಡಲು ನಿಂತರೆ ನನ್ನ ಕಥೆ ಕೆಡುತ್ತದೆಂದು ಹೆದರಿ ನಾನು ಮತ್ತೆ ಉಂಗುರದಾರಿಗೆ ಶರಣಾಗಿದ್ದೆ!

ಚರವಾಣಿ ಬಂದು, ಹಳೆಯ ಕೈಗಡಿಯಾರ ಕೈಕೊಟ್ಟಾಗ ನಾನು ಹೊಸದಕ್ಕೆ ಹೋಗಲಿಲ್ಲ. ನಿವೃತ್ತನಾದ ಮೇಲಂತೂ ಸಹಜವಾಗಿ ‘ಸಮಯಪ್ರಜ್ಞೆ’ ಕಡಿಮೆಯೂ ಆಯ್ತು. ಹಾಗಾಗಿ ಕ್ರಮಿಸಿದ ದಾರಿ, ಕಾಯಿಸಿದ ಬಿಸಿಲು ಹೆಚ್ಚುತ್ತಿದ್ದಂತೆ ಅಮ್ಮನ ಪ್ರೀತ್ಯರ್ಥ ನಾನೇ ಹಾಕಿಕೊಂಡ ಸಮಯಮಿತಿ ಮೀರಿದೆನೋ ಎಂದು ಮನಸ್ಸಿನಲ್ಲೇ ಸಣ್ಣದಾಗಿ ಅಳುಕುತ್ತಿದ್ದೆ. ಆದರೆ ದೂರಗಮನದ ಅಂಶ ಮುಗಿಸಿದ್ದರಿಂದ, ಉಳಿದವನ್ನು ಕಡಿದೋಡುವುದೂ ನೇರ ಮನೆ ದಾರಿಹಿಡಿಯುವುದೂ ಒಂದೇ. ಹಾಗೆಂದು ಆಗಾಗ ಚರವಾಣಿ ತೆಗೆದು ಗಂಟೆ ನೋಡಿಕೊಳ್ಳದಿದ್ದರೂ “ತಡವಾಗಿಲ್ಲ” ಎಂದು ನನ್ನ ಸುತ್ತುಮುತ್ತ ಸುಳಿಯುತ್ತಿದ್ದ ನನ್ನದೇ ನೆರಳು ಭರವಸೆ ಕೊಡುತ್ತಿತ್ತು! ನಿಮಗೂ ತಿಳಿದಿರಬೇಕಲ್ಲ ಇಂದಿನ ಸೌರ ವಿಶೇಷ – ನೆರಳಿಲ್ಲದ ಗಳಿಗೆ, ಮಧ್ಯಾಹ್ನ ೧೨.೫೫ಕ್ಕೆ ಸೂರ್ಯ ಸ್ಪಷ್ಟ ಮೈಸೂರಿಗರ ನೆತ್ತಿಯ ಮೇಲೇ ಬಂದು, ಎಲ್ಲ ನೆರಳನ್ನು ಪೂರ್ಣ ಅದರ ಪಾದದಡಿಗೇ ತಳ್ಳುವವನಿದ್ದ. ಭೋಗಾದಿ ಕವಲು ಕಳೆದು ತುಸು ಮುಂದೆ ಅಂದಾಜಿನಲ್ಲೇ ಎಡಕ್ಕೆಲ್ಲೋ ಹೊರಳಿ, ಅಡ್ಡನೀಟ ರಸ್ತೆಗಳನ್ನು ಮನಸಾ ಬದಲಿಸುತ್ತಾ ಮನೆ ಸೇರಿದೆ. ಸೂರ್ಯ ಹುಸಿಯಾಡಲಿಲ್ಲ, ಗಂಟೆ ಹನ್ನೊಂದನ್ನು ಮೀರಿರಲಿಲ್ಲ! (ಸೈಕಲ್ ಸರ್ಕೀಟ್ ೩೧೦/ ೨೩-೪-೨೦೧೭)

ಮೈಸೂರಿನಲ್ಲಿಂದು ಹೊಸ ಬಡಾವಣೆಗಳು, ವಿವಿಧ ಹೆದ್ದಾರಿಗಳು ಬಿಡಿ, ಬಹುತೇಕ ಹಳೆ ದಾರಿಗಳೂ ಅತ್ತಿತ್ತ ಮರ, ಮನೆ ದೂಡಿ, ನಡುವೆ ದಿಬ್ಬ ಸಾಲುಹೂಡಿ ಕನಿಷ್ಠ ಚತುಷ್ಪಥಗಳಾಗುತ್ತಲೇ ಇವೆ. ಮೈಸೂರಿನ ಹಳೆಗಾಲದ ‘ಡಬ್ಬಲ್ ರೋಡ್’ ಅಥವಾ ಅಗಲ ಭಾರೀ ಎನ್ನುವ ಭಾವದಲ್ಲಿ ‘ನೂರಡಿ ರಸ್ತೆ’ ಎಂದೇ ಖ್ಯಾತವಾದ ಚಾಮರಾಜ ರಸ್ತೆ ಸುಲಭವಾಗಿ ಒಂದು ನಗೆಹನಿಯಾಗಿ ಹೋಗಿದೆ! ಹೀಗೇ ಒಂದು ಕಾಲದಲ್ಲಿ ಜಿಲ್ಲಾಧಿಕಾರಿ ಆಪ್ತರಕ್ಷಕನೊಡನೆ ಜಂಟಿ ಸೈಕಲ್ ಏರಿ – ವಾಯುಮಾಲಿನ್ಯ ತಡೆ, ಸರಳತೆ, ಆರೋಗ್ಯವೃದ್ಧಿ, ಸೈಕಲ್ ಓಣಿ ಎಂದೆಲ್ಲ ಸುದ್ದಿ ಮಾಡಿದ ಮೈಸೂರು ಇಂದು ಇನ್ನೇನು ತಿಂಗಳೊಳಗೆ ಟ್ರಿನ್ ಟ್ರಿನ್ ಯೋಜನೆಯ ಲೋಕಾರ್ಪಣೆಯೊಡನೆ ಖ್ಯಾತಿಯ ಶಿಖರವನ್ನೇನೋ ಸೇರಲಿದೆ. ಆದರದು ಕೈಕೊಟ್ಟ ಸಿಬ್ಬಂದಿ, ಹರಿದು ಬಿದ್ದ ಜಾಲ, ರಾಶಿಬಿದ್ದ ಗುಜರಿಯಾಗಿ (ಎಲ್ಲ ಸಾರ್ವಜನಿಕ ವೆಚ್ಚದಲ್ಲಿ) ಬಹಳ ದೊಡ್ಡ ನಗೆಹನಿಯಲ್ಲ, ದುರಂತವಾಗದಿರಲಿ ಎಂದಷ್ಟೇ ಹಾರೈಸಬಲ್ಲೆ.