ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು ಅದಕ್ಕೆ ಏಷ್ಯಾ ವಲಯಕ್ಕೇ ನಾಯಕತ್ವ ಕೊಟ್ಟು ಬೆಳೆಸಿದ್ದಾರೆ. ಉಲ್ಲಾಸ್ ತಮ್ಮ ವೈಜ್ಞಾನಿಕ ಪ್ರಕಟಣೆಗಳನ್ನು ಜಗತ್ತಿನಾದ್ಯಂತದ ವಿಜ್ಞಾನ ಸಂಸ್ಥೆ ಮತ್ತು ಗಂಭೀರ ವನ್ಯಪ್ರೇಮಿಗಳಿಗೆ ಕಳಿಸುವಂತೆ ನನಗೂ ಆಗಾಗ ಮಿಂಚಂಚೆ ಮೂಲಕ ಕಳಿಸುತ್ತಲೇ ಇರುತ್ತಾರೆ. ಅವರ ವನ್ಯಾಸಕ್ತಿಗೆ ಸಮರ್ಥ ಮುಂದುವರಿಕೆಯಂತೆ ವಿಕಸಿಸಿದ ಅವರ ಏಕೈಕ ಮಗಳು – ಕೃತಿಕಾರಂತ ಕೂಡಾ ಈಚೆಗೆ ಅದೇ ವಿಶ್ವಾಸದಿಂದ ತನ್ನ ವೈಜ್ಞಾನಿಕ ಪ್ರಬಂಧಗಳನ್ನು ನನಗೆ ಕಳಿಸುತ್ತಲಿದ್ದಾರೆ. ಈ ಪ್ರಬಂಧಗಳನ್ನು ನನ್ನ ತಿಳುವಳಿಕೆಯ ಭಾಗವಾಗಿಸಿಕೊಳ್ಳಲು ನನ್ನ ಸಂಸ್ಕಾರ, ಬಿಡುವು ಸಾಕಾಗುವುದಿಲ್ಲ. ಹಾಗಾಗಿ ಆ ಪ್ರಕಟಣೆಗಳನ್ನು ಬಹುತೇಕ ಗೌರವಪೂರ್ವಕವಾಗಿಯೇ ನಾನು ಕಡತಕ್ಕೆ ಜಾರಿಸಿ, ಮರೆತುಬಿಡುತ್ತಿದ್ದೆ.

ಸುಮಾರು ಮೂರು ತಿಂಗಳ ಹಿಂದೆ ಡಬ್ಲ್ಯುಸಿಎಸ್ಸಿನಿಂದ ಹೀಗೇ ನನಗೊಂದು ಪತ್ರ ಬಂತು. ಅದು ನಾಗರಹೊಳೆ ವಲಯದಲ್ಲಿ ವನ್ಯ ಸಂರಕ್ಷಣೆಯ ಕುರಿತಂತೆ ಕಮ್ಮಟವೊಂದರ ಭಾಗವಾಗಲು ವೈಯಕ್ತಿಕ ಆಹ್ವಾನ. ಪತ್ರವನ್ನು ಸಂಘಟನಾ ನಿರ್ವಾಹಕಿಯ ನೆಲೆಯಲ್ಲಿ ನಿತ್ಯಾ ಸತೀಶ್ – ನನಗೆ ಅಪರಿಚಿತೆ, ಬರೆದಿದ್ದರೂ ಕಮ್ಮಟದ ನಾಯಕತ್ವ ಕೃತಿಕಾರಂತರದ್ದೇ ಇತ್ತು. ಕೃತಿ ವನ್ಯಸಂರಕ್ಷಣೆಯ ಸಾಮಾಜಿಕ ಪರಿಣಾಮಗಳ ಅಧ್ಯಯನದಲ್ಲಿ ಅಖಿಲ ಭಾರತ ಮಟ್ಟದಲ್ಲೇ ಹಲವು ಕಾಲದಿಂದ ತೀವ್ರ ತೊಡಗಿಕೊಂಡ ಸಂಶೋಧಕಿ (ಸೋಷಿಯಲ್ ಸೈಂಟಿಸ್ಟ್) ಎಂದು ನನಗೆ ತಿಳಿದಿತ್ತು. ಸಂಶೋಧನಾ ವಿಚಾರಗಳಲ್ಲಿ ನನ್ನ ಮಿತಿಯ ಅರಿವಿನೊಡನೆ ಆ ಆಹ್ವಾನವನ್ನು ನಾನು ಎಂದಿನಂತೆ ಮರೆವಿಗೆ ಜಾರಿಸುವವನಿದ್ದೆ. ಆದರೆ ಉಲ್ಲಾಸ್ ಮತ್ತು ಕೃತಿಯರ ಆಶಯವನ್ನು ತಾರ್ಕಿಕ ಕೊನೆ ಕಾಣಿಸುವ ನಿತ್ಯಾಸತೀಶ್ ಛಲ, ನೆನಪಿನೋಲೆ ಮತ್ತು ಚರವಾಣಿ ಕರೆಯ ಮೂಲಕ ನನ್ನ ಅನುಮೋದನೆಯನ್ನು ಪಡೆದೇ ಬಿಟ್ಟಿತು. (೨೦೧೭) ಮೇ ಎಂಟರಿಂದ ಹನ್ನೊಂದರವರೆಗಿನ ಕಮ್ಮಟದಲ್ಲಿ ಭಾಗಿಯಾದೆ.

ಸ್ನಾಪ್ (SNAPP) – ಬಿಡಿಸಿ ಹೇಳುವುದಿದ್ದರೆ, Science for Nature and people partnership, ಅರ್ಥಾತ್ ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆಯನ್ನು ವೈಜ್ಞಾನಿಕವಾಗಿ ಸಮರ್ಥಿಸುವ ಕೂಟದ ಕಮ್ಮಟವದು. ಸ್ನಾಪ್ ಅಮೆರಿಕಾ ಮೂಲದ್ದಾದರೂ ವ್ಯಾಪ್ತಿ ಜಾಗತಿಕ ಮಟ್ಟದ್ದು; ಭೌಗೋಳಿಕ, ಜಾನಾಂಗಿಕ ಹಾಗೂ ರಾಜಕೀಯ ಒಲವುಗಳನ್ನು ಬುದ್ಧಿಪೂರ್ವಕವಾಗಿ ಮೀರಿದ್ದು. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯವೂ ಸೇರಿದಂತೆ ಕೆಲವು ಘನ ವನ್ಯ ಒಲವೂ ಆರ್ಥಿಕ ಬಲವೂ ಉಳ್ಳ ಸಂಸ್ಥೆಗಳು ಪರಿಸರ ಪೋಷಣೆಯ ತುರ್ತನ್ನು ಗಮನದಲ್ಲಿಟ್ಟುಕೊಂಡು, ಸಂಯೋಜಿಸಿದ ಸಂಘ – ಸ್ನಾಪ್. ೨೦೧೩ರಲ್ಲಿ ತೊಡಗಿದ ಇದು ತನ್ನ ನಾಲ್ಕು ವರ್ಷಗಳ ಚಟುವಟಿಕೆಗಳಲ್ಲಿ ೨೩ಕ್ಕೂ ಮಿಕ್ಕು ಯಶಸ್ವೀ ಕಲಾಪಗಳನ್ನು ಸಂಘಟಿಸಿದೆ. ಅದರಲ್ಲಿ ಅಮೆರಿಕಾದ ಎರಡೂ ಖಂಡಗಳಲ್ಲದೆ, ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ವಿವಿಧ ಭಾಗಗಳೂ ಸೇರಿವೆ. ಆನೆ ದಂತದ ದುರ್ವ್ಯವಹಾರ, ಮೀನುಗಾರಿಕೆಯ ನಷ್ಟ, ಹವಳ ದಿಬ್ಬಗಳ ದುರಂತ, ಸಹಜ ಕಾಡುಗಳ ನಾಶವೇ ಮೊದಲಾದ ವೈವಿಧ್ಯಮಯ ಪ್ರಾಕೃತಿಕ ಸತ್ಯಗಳಿಗೆ ಸ್ನಾಪ್-ಸೇತು ದೃಢವಾಗಿ ನಿಂತಿದೆ. ವನ್ಯವನ್ನು ಬಿಟ್ಟುಕೊಡದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಾಕರಿಸದೇ ಮನುಷ್ಯ ಹಿತ ಸಾಧನೆಯಲ್ಲಿ ಸ್ನಾಪ್ ತನ್ನ ಬದ್ಧತೆಯನ್ನು ಸಾರಿದೆ.

ಯೋಜನಾ ವಿಷಯ ಮತ್ತು ಅರ್ಜಿದಾರರ (ವಿದ್ಯಾಲಯ, ಸ್ವಯಂಸೇವಾ ಸಂಸ್ಥೆ…) ಸಾಮರ್ಥ್ಯಗಳನ್ನು ಒರೆಗೆ ಹಚ್ಚಿ, ಸದಸ್ಯತ್ವ ಪ್ರದಾನಿಸುವಲ್ಲಿಗೇ ಸ್ನಾಪ್ ನಿಲ್ಲುತ್ತದೆ. ನಿಯಮಾನುಸಾರ ಸದಸ್ಯ ತಂಡದ ಎರಡು ವರ್ಷಗಳ ಸಂಶೋಧನಾ ವೆಚ್ಚವನ್ನು ಸ್ನಾಪ್ ಭರಿಸುತ್ತದೆ. ಕೊನೆಯಲ್ಲಿ ಫಲಿತಾಂಶವನ್ನು, ಮತ್ತದರ ಬಳಕೆಯನ್ನು ಸಾರ್ವಜನಿಕಕ್ಕೆ ಉಚಿತವಾಗಿಯೇ ಬಿಡುಗಡೆ ಮಾಡುವ ಔದಾರ್ಯ ಸ್ನಾಪಿನದು. ಈ ನಿಟ್ಟಿನಲ್ಲಿ, ವರ್ಷದ ಹಿಂದೆ ಕೃತಿಕಾರಂತರ ಮೂಲಕ, ಭಾರತದ ಡಬ್ಲ್ಯುಸಿಎಸ್ ವಹಿಸಿಕೊಂಡ ಯೋಜನೆ – Connectivity across the landscape: Strategies to meet needs for infrastructure and wildlife in India. ಅರ್ಥಾತ್, ವೈವಿಧ್ಯಮಯ ಭೌಗೋಳಿಕ ಸ್ಥಿತಿಯಲ್ಲೂ ಸಂಪರ್ಕ; ಭಾರತದ ಔದ್ಯಮಿಕ ಮತ್ತು ವನ್ಯ ಆವಶ್ಯಕತೆಗಳ ಸಮನ್ವಯಕ್ಕೊಂದು ವೈಜ್ಞಾನಿಕ ನಿರ್ವಹಣಾ ಸೂತ್ರ.

ಮೊದಲೇ ಹೇಳಿದಂತೆ ಉಲ್ಲಾಸ ಕಾರಂತ, ನಾಗರಹೊಳೆಯಿಂದ ತೊಡಗಿ ಭಾರತಾದ್ಯಂತ ತನ್ನ ಕಲಾಪ ವಿಸ್ತರಿಸಿಕೊಂಡ `ಹುಲಿ ಸಂಶೋಧಕ’. ಅವರ ಸಂಶೋಧನೆಗೆ ಸುಮಾರು ಮೂರು ದಶಕಗಳ ಖಚಿತ ಇತಿಹಾಸವೇ ಇದೆ. `ಹುಲಿ’ ವನ್ಯಪರಿಸರಕ್ಕೊಂದು ಸಂಕೇತನಾಮ ಮಾತ್ರ. ವಾಸ್ತವದಲ್ಲಿ ಆರೋಗ್ಯಪೂರ್ಣ ಹುಲಿ ಸಂವರ್ಧನೆ ಎಂದರೆ ಭಾರತದ ವನ್ಯಪರಿಸರದ, ಪರೋಕ್ಷವಾಗಿ ಮಾನವ ಸಮಾಜದ್ದೂ ಆರೋಗ್ಯಪೂರ್ಣ ಬೆಳವಣಿಗೆಯೇ ಆಗಿದೆ. ಇದರಲ್ಲಿ ಸ್ಪಷ್ಟ ಸಾಕ್ಷ್ಯಾಧಾರಗಳೊಡನೆ ವರ್ತಮಾನದ ಹುಲಿ ಮತ್ತದರ ಪರಿಸರವನ್ನು ದಾಖಲಿಸುವಲ್ಲಿ, ವನ್ಯಪರಿಸರದ ಭೂತ ಮತ್ತು ಭವಿಷ್ಯಗಳನ್ನೂ ಉಲ್ಲಾಸ್ ರೇಖಿಸಿದ್ದಾರೆ. ಅಪ್ಪನ ವನ್ಯಪರ ಬೂಟಿನೊಳಗೆ ಕೃತಿ ತನ್ನ ಕಾಲುತೂರಿ, ವರ್ಷದ ಹಿಂದೆ ಈ ಹೊಸ ಯೋಜನೆಯನ್ನು ವಹಿಸಿಕೊಂಡರು. ಅಂದರೆ ಹುಲಿ ಸಂಶೋಧನೆಯಿಂದ ಸಿದ್ಧಿಸಿದ ಮಾಹಿತಿಗಳ ಬಲದಲ್ಲಿ ಹೆಚ್ಚಿನ ಸಾಧನೆಯ ಲಕ್ಷ್ಯವಿರಿಸಿಕೊಂಡಿದ್ದಾರೆ. ಅವರ ಬಳಗಕ್ಕೆ ನಡೆದು ಬಂದ ದಾರಿಯ ವಿಮರ್ಶೆಯೊಡನೆ, ಮುಂದಿನ ಹೆಜ್ಜೆಗಳನ್ನು ದೃಢಪಡಿಸುವ ಸಲಹೆಗಳ ಸಂಗ್ರಹಕ್ಕೆನ್ನುವಂತೆ ಪ್ರಸ್ತುತ ನಾಗರಹೊಳೆ ಕಮ್ಮಟವನ್ನು ನಡೆಸಿದರು.

ಭಾರತದಲ್ಲಿ ಹುಲಿ ಮತ್ತದರಂಥ ವನ್ಯ ಸ್ತನಿಗಳು (mammals) ಬಹು ಸಂಖ್ಯೆಯಲ್ಲಿರುವ ಎರಡು ವಲಯ – ಪಶ್ಚಿಮ ಘಟ್ಟ (ನಾಗರಹೊಳೆ, ಬಂಡಿಪುರ, ಮುದುಮಲೈ, ವೈನಾಡು ಮುಂತಾದವು) ಮತ್ತು ಮಧ್ಯ ಭಾರತದ (ಕನ್ಹಾ, ಬಾಂಧವಘರ್, ಪೆಂಚ್, ಶಿವ್ಪುರಿ, ಪನ್ನ ಮುಂತಾದವು) ವನಧಾಮಗಳನ್ನು ಇವರು ಆಯ್ದುಕೊಂಡಿದ್ದರು. ಬ್ರಿಟಿಷ್ ಆಡಳಿತವೂ ಸ್ವತಂತ್ರ ಭಾರತವೂ ವನ್ಯದ ಮಹತ್ವ ಕಾಡಿದಂತೆಲ್ಲ ವನ್ಯಸಂರಕ್ಷಣಾಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿವೆ. ಆದರೆ ಮನುಷ್ಯ ಕೇಂದ್ರಿತವಾದ ಆಡಳಿತದಲ್ಲಿ ಅನಿವಾರ್ಯವಾಗಿ ವನ್ಯ ವಿರುದ್ಧ ಕಾರ್ಯಾಚಾರಣೆಗಳನ್ನೂ ನಡೆಸುತ್ತ ಬಂದಿವೆ. ಇದರಿಂದ ವನ್ಯವಲಯಗಳ ಸಂಕೋಚ, ವನ್ಯಜೀವಿಗಳ ಸಮಸ್ಯೆಯೂ ಹೆಚ್ಚಿದೆ. ಸಹಜವಾಗಿ ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂಘರ್ಷ ತತ್ಕಾಲೀನ ಮತ್ತು ಅಪರಿಪೂರ್ಣ ಪರಿಹಾರಗಳಲ್ಲಷ್ಟೇ ನಿರಂತರ ಒಳಗುದಿ ಅನುಭವಿಸುತ್ತಿವೆ. ಯಾವುದೇ ನಾಗರಿಕ ಅಭಿವೃದ್ಧಿಪರ ಚಟುವಟಿಕೆ ಅನುದ್ದೇಶಿತವಾಗಿ ಸ್ಪಷ್ಟ ವನ್ಯವಿರೋಧಿಯಾಗಿಯೇ ರೂಪುಗೊಳ್ಳುತ್ತವೆ. ಈ ವಿರೋಧಾಭಾಸವನ್ನು ನಿವಾರಿಸುವಂಥಾ ಅಥವಾ ಅಭಿವೃದ್ಧಿ ಮತ್ತು ವನ್ಯಪರಿಸರವನ್ನು ಒಂದಾಗಿ ನೋಡುವಂಥಾ ಖಚಿತ ವೈಜ್ಞಾನಿಕ ಸಾಕ್ಷ್ಯಾಧಾರಗಳ ಮಾಹಿತಿಕೋಶ ರೂಪಿಸುವುದು ಕೃತಿ ಕಾರಂತರ ಯೋಜನೆ. ಕೋಶ ಉದ್ದಿಮೆದಾರರಿಗೆ ವನ್ಯಸ್ನೇಹಿಯಾಗುವಲ್ಲಿ, ವನ್ಯಪ್ರೇಮಿಗಳಿಗೆ ಅಭಿವೃದ್ಧಿಕಲಾಪಗಳ ಅನುಮೋದಕರಾಗುವಲ್ಲಿ ಮಾರ್ಗದರ್ಶೀ ಸೂತ್ರಗಳನ್ನು ತೋರಿಸುತ್ತದೆ. ಮಾಹಿತಿಕೋಶವನ್ನು ಪ್ರಾಯೋಜಿಸಿದ ಸ್ನಾಪ್ ಅಥವಾ ರೂಪಿಸುತ್ತಿರುವ ಕೃತಿಕಾರಂತ ಬಳಗ ಪ್ರತ್ಯಕ್ಷವಾಗಿ `ಪರಿಸರ ಹೋರಾಟ’ಕ್ಕೆ ಇಳಿಯದೆಯೂ ಉದ್ದಿಮೆಗಳ ವಕೀಲೀ ನಡೆಸದೆಯೂ ದೇಶವನ್ನು ಸಾಧ್ಯವಾದಷ್ಟೂ ಆರೋಗ್ಯಪೂರ್ಣ ದಿಕ್ಕಿಗೆ ನಡೆಸಲು ಈ ಮಾಹಿತಿಕೋಶ ಬೆಳಕು ಚೆಲ್ಲುತ್ತದೆ. ಮಾಹಿತಿಕೋಶ `ಹೋರಾಟಗಾರ’ರಿಗೆ, `ವಕೀಲ’ರಿಗೆ ಎಲ್ಲಕ್ಕೂ ಮುಖ್ಯವಾಗಿ ವೈವಿಧ್ಯವನ್ನು ಒಂದಾಗಿ ಕಾಣಬೇಕಾದ ಪ್ರಜಾಸರಕಾರಕ್ಕೆ ಪೂರ್ಣ ವಿಶ್ವಾಸಾರ್ಹ, ವೈಜ್ಞಾನಿಕ ಆಧಾರವೇ ಆಗುತ್ತದೆ.

ಹುಲಿ ಸಂಶೋಧನೆಯ ಅಪಾರ ಮಾಹಿತಿಗಳ ವ್ಯವಸ್ಥೆಯಲ್ಲಿ ಪ್ರಾಥಮಿಕವಾಗಿ ಹುಲಿಯ `ನಿನ್ನೆ’ಯನ್ನು (ಹಿಂದಿನ ಅಥವಾ ಭೂತಕಾಲದ) ಸಂಶೋಧಕರು ಸಂಗ್ರಹಿಸಿ, ಸಾಕ್ಷ್ಯಗಳ ಒರೆಗೆ ಹಚ್ಚಿ, ಮಾಹಿತಿಗಳ ಅಡಿಪಾಯ ರಚಿಸಿದ್ದಾರೆ. ಅದರ ಮೇಲೆ ವಿಸ್ತೃತ ಪ್ರಯೋಗಗಳ ಕಟ್ಟೋಣ ನಿಲ್ಲಿಸಿದ್ದಾರೆ.

ಹುಲಿಸಂಖ್ಯೆಯಿಂದ ತೊಡಗಿ ವಂಶವಾಹಿಯವರೆಗೂ ಹುಲಿ ವರ್ತನವಿಜ್ಞಾನದಿಂದ ಹಿಡಿದು ಸಂರಕ್ಷಣಾ ನಿಯಮಗಳವರೆಗೂ ಚೊಕ್ಕ ದಾಖಲೆಗಳ ಪೇರಿಕೆ ಇಲ್ಲಿದೆ. ಇವನ್ನೆಲ್ಲ ಕೃತಿ ಕಾರಂತರ ಸುಮಾರು ಐದು ಸಂಶೋಧಕರ ಬಳಗ ಹುಲಿಯ ಪರಿಸರ ಮತ್ತು ಆಹಾರ ಸರಪಳಿಯ ಆಧಾರದಲ್ಲಿ ಇತರ ಸ್ತನಿಗಳಿಗೆ ವಿಸ್ತರಿಸಿ, ಸ್ನಾಪ್ ಯೋಜನೆಯ ಅಗತ್ಯಗಳನ್ನು ಅನಾವರಣಗೊಳಿಸುತ್ತಿದ್ದಾರೆ. ಪೂರ್ಣಗೊಂಡಂದು ಇದನ್ನು ವನ್ಯ ಇಲಾಖೆಗಳೂ ಅಭಿವೃದ್ಧಿಕಲಾಪಗಳ ವಕ್ತಾರರೂ ಜಾಗೃತಸಮಾಜವೂ ಏಕ ಕಾಲಕ್ಕೆ ಬಳಸುವಂತಾಗುತ್ತದೆ. ಇದರಿಂದ ಪಶ್ಚಿಮಘಟ್ಟ ಮತ್ತು ಮಧ್ಯಭಾರತದ ವಲಯಗಳಲ್ಲಿ ಸಾಮಾಜಿಕ ಹಾನಿಯಿಲ್ಲದೇ ಆರೋಗ್ಯಪೂರ್ಣ ಜೀವವಿಸ್ತರಣೆ ಸುಲಭವಾಗುತ್ತದೆ. ಹಾಗೇ ಪರಿಸರ ಅವಹೇಳನವಿಲ್ಲದೇ (ವನ್ಯಪ್ರೇಮೀ) ನಾಗರಿಕ ಸೌಲಭ್ಯಗಳನ್ನು ವಿಸ್ತರಿಸುವುದು ಸಾಧ್ಯವಾಗುತ್ತದೆ. ಪ್ರಪಂಚದ ಜೀವವೈವಿಧ್ಯದ ನಾಳೆಗಳು (ಭವಿಷ್ಯ) ನಿಸ್ಸಂದೇಹವಾಗಿ ಬೆಳಗುತ್ತವೆ.

ಪ್ರಸ್ತುತ ಯೋಜನೆಯ ಮೊದಲಲ್ಲೇ (ಕಳೆದ ವರ್ಷ) ಬೆಂಗಳೂರಿನಲ್ಲೊಂದು ಕಮ್ಮಟ ನಡೆಸಿದ್ದರಂತೆ. ಅಲ್ಲಿ ಕೃತಿಕಾರಂತ ಮತ್ತು ಅವರ ಯುವ-ಸಂಶೋಧಕ ಬಳಗ (ವನ್ಯ ಜೀವವಿಜ್ಞಾನದ ಪದವೀಧರರಾದ ಸುಮಾರು ಐವರು), ಹಾಜರಿದ್ದ ಹಲವು ಸಂಪನ್ಮೂಲ ವ್ಯಕ್ತಿಗಳ ಸಮಕ್ಷಮದಲ್ಲಿ ಯೋಜನೆಯ `ಮುಖಪುಟ’ಗಳನ್ನು ರೂಪಿಸಿ, ಎರಡು ವರ್ಷಗಳ (ಯೋಜನಾವಧಿ) ನಡಿಗೆಯ ದಾರಿಯನ್ನು ಗುರುತಿಸಿಕೊಂಡಿದ್ದರು. ನಾಗರಹೊಳೆ ವನಧಾಮದ, ಕಬಿನಿ ಹಿನ್ನೀರ ದಂಡೆಯಲ್ಲಿನ ಈ ಕಮ್ಮಟ ಎರಡನೆಯದು; ಸವೆದ ದಾರಿಯ ಸಮೀಕ್ಷೆ, ಉಳಿದ ದಾರಿಗೆ ಬುತ್ತಿ ಕಟ್ಟುವ ಸನ್ನಿವೇಶ. ಇದರಲ್ಲಿ ಕಾರ್ಯಕಾರೀ ಬಳಗದ ಸುಮಾರು ಹತ್ತು ಮಂದಿ ಸೇರಿದಂತೆ ಒಟ್ಟು ಮೂವತ್ತೆರಡು ಮಂದಿ ಸಂಪನ್ಮೂಲ ವ್ಯಕ್ತಿಗಳು ಸರಾಸರಿಯಲ್ಲಿ ದಿನಕ್ಕೆ ಏಳು ಗಂಟೆಯಂತೆ, ಯಾವುದೇ ಔಪಚಾರಿಕತೆಗಳಲ್ಲಿ ಸಮಯ ಕಳೆಯದೇ ತೊಡಗಿಕೊಂಡದ್ದು ನನಗಂತೂ ಒಂದು ಅಪೂರ್ವ ಅನುಭವ.

ಭಾಗಿಗಳನ್ನು ಹೆಸರಿಸುವುದಾದರೆ, ಅಮೆರಿಕಾ ಮೂಲದ ಇಬ್ಬರು – ಸ್ನಾಪ್ ಕಾರ್ಯಕಾರೀ ನಿರ್ದೇಶಕ ಕ್ರೇಗ್ ಆರ್.ಗ್ರೋವ್ಸ್ ಮತ್ತು ಪ್ರಸ್ತುತ ಯೋಜನೆಗೆ ಪ್ರಾಯೋಜಕರ ಪ್ರತಿನಿಧಿಯಾಗಿರುವ ರುತ್ ಡಿಫ್ರೀಸ್ ಮುಖ್ಯರು. ಇತರ ಪ್ರಾಯೋಜಕ ಸಂಸ್ಥೆಗಳ ಪ್ರತಿನಿಧಿಗಳಾಗಿ ಇನ್ನೂ ಮೂವರು ಅಮೆರಿಕನ್ನರು – ರಾಬರ್ಟ್ ಅಮೆಂಟ್, ಕಿರ್ಕ್ ಓಲ್ಸನ್ ಮತ್ತು ಡೇವಿಡ್ ವಿಲ್ಕಿ ಕೂಡಾ ಸಕ್ರಿಯವಾಗಿ ಭಾಗವಹಿಸಿದ್ದರು. ಭಾರತೀಯ ಭಾಗಿಗಳ ಪಟ್ಟಿಯಲ್ಲಿ ಡಬ್ಲ್ಯುಸಿಎಸ್ಸಿನ ಏಷ್ಯಾವಲಯ ವರಿಷ್ಠನಾಗಿ ಉಲ್ಲಾಸ ಕಾರಂತ ಮತ್ತು ಪ್ರಸ್ತುತ ಯೋಜನೆಯ ಕಾರ್ಯಕಾರೀ ನಿರ್ದೇಶಕಿಯಾಗಿ ಕೃತಿಕಾರಂತ ಮೊದಲು ಕಾಣಿಸುತ್ತಾರೆ.

ಕರ್ನಾಟಕದ ರವೀಂದ್ರನ್, ಕೇರಳದ ಪ್ರಕೃತಿ ಶ್ರೀವಾಸ್ತವ, ಮಧ್ಯಪ್ರದೇಶದ ಶುಭೋರಂಜನ್ ಸೇನ್ ಮತ್ತು ಮಹಾರಾಷ್ಟ್ರದ ಕಿಶೋರ್ ರಿತೆ ನೇರ ವನ್ಯ ಇಲಾಖೆಯ ಹಿರಿಯರಾಗಿಯೂ ನೈಜ ವನ್ಯಕಾಳಜಿಯವರಾಗಿಯೂ ಭಾಗವಹಿಸಿದ್ದರು. ಅಜಿತ್ ಕುಮಾರ್ – ಡಬ್ಲ್ಯುಸಿಎಸ್ಸಿನ ವಿಸ್ತೃತ ಆಶಯದ ಅಂಗವಾಗಿ ಎರಡು ವರ್ಷಕ್ಕೊಮ್ಮೆ ಸಂಘಟಿತವಾಗುವ ವನ್ಯಜೀವಶಾಸ್ತ್ರದ ಶಿಕ್ಷಣಕೂಟದ ವರಿಷ್ಠ, ಜಗದೀಶ್ ಕೃಷ್ಣಸ್ವಾಮಿ – ಮುಖ್ಯವಾಗಿ ಜಲತಜ್ಞ ಮತ್ತು ಶಂಕರ ಶರ್ಮ – ವಿದ್ಯುಚ್ಛಕ್ತಿ ಪರಿಣತ, ವಿಶೇಷ ವಿಶ್ಲೇಷಣಕಾರರ ನೆಲೆಗಳಲ್ಲಿ ಕಮ್ಮಟದ ಘನತೆಯನ್ನು ಹೆಚ್ಚಿಸಿದರು. ಪ್ರವೀಣ್ ಭಾರ್ಗವ್ ಮತ್ತು ನಿರೇನ್ ಜೈನ್ ವನ್ಯ ಮತ್ತು ಸಾಮಾಜಿಕ ಸಮನ್ವಯಕ್ಕಾಗಿಯೇ ಹಲವು ನ್ಯಾಯಿಕ ಹೋರಾಟಗಳ ಯಶಸ್ಸು ಕಂಡೂ ಹಿಂಗದ ಉತ್ಸಾಹದಲ್ಲೇ ಕಮ್ಮಟವನ್ನು ಬೆಳಗಿದವರು. ಶ್ರೀನಿವಾಸ ವೈದ್ಯನಾಥನ್, ತೃಷ್ಣ ದತ್ತಾ, ಅಶ್ವಿನಿ ಛಾತ್ರೆ, ಮಿಲಿಂದ್ ಪರಿವಾಕಂ, ಉದಯನ್ ಪಾಟೀಲ್, ಮಂದಾರ ಪಾವ್ಗಿ, ಪ್ರಣವ್ ಚಂಚಾನಿ, ಪ್ರಾಚೀ ತಟ್ಟೆ, ತರುಣ್ ನಾಯರ್, ಸುಮನ್ ಜುಮಾನಿ, ರಜತ್ ನಾಯಕ್, ಶಿಶಿರ್ ರಾವ್, ಅನಿಶಾ ಜಯದೇವನ್, ಅನುಭವ್ ವನಮಾಮಲೈ ಮತ್ತು ನಿತ್ಯಾ ಸತೀಶ್ ತಮ್ಮ ಬಹುಮುಖ ಅಧ್ಯಯನ, ಅನುಭವಗಳನ್ನು ಪ್ರಾಮಾಣಿಕವಾಗಿ ವನ್ಯಪ್ರೇಮಕ್ಕೆ ಧಾರೆಯೆರೆದದ್ದಕ್ಕೆ ಕಮ್ಮಟದ ಯಶಸ್ಸೇ ಸಾಕ್ಷಿ. ನಾಲ್ಕು ದಿನಗಳ ಶಿಬಿರ ಬರಿಯ ಮಾತಿನ ಕಸರತ್ತಲ್ಲವೆಂದು ಪ್ರಮಾಣಿಸಿದರು.

೧೯೭೪ರಲ್ಲಿ ಕಾವೇರಿಯ ಒಂದು ಉಪನದಿಯಾದ ಕಬಿನಿಗೆ (/ಕಪಿಲ/ಕಪಿನಿ) ಬೀಚನಳ್ಳಿಯಲ್ಲಿ ಅಣೆಕಟ್ಟು ಬಂತು. ಹೀಗೆ ನಿಂತ ನೀರಿನ ಉತ್ತರದಂಡೆ ನಾಗರಹೊಳೆ, ದಕ್ಷಿಣದಂಡೆ ಬಂಡಿಪುರ ವನಧಾಮಗಳು. ಸಹಜವಾಗಿ, ಅದರಲ್ಲೂ ಬೇಸಗೆಯ ಕೊನೆಯ ಪಾದಗಳಲ್ಲಿ, ಇಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಆನೆಗಳೂ ಸೇರಿದಂತೆ ವನ್ಯಮೃಗಗಳ ಅಘೋಷಿತ ಜಾತ್ರೆಯೇ ನಡೆದಿರುತ್ತದೆ. ಅವನ್ನೆಲ್ಲ ಮನುಷ್ಯ ಮೋಜಿನ ಅಂಗವಾಗಿ ಬಳಸುವ ಉತ್ಸಾಹದಲ್ಲಿ ಇಲ್ಲಿ ರಾಜ್ಯ ಸರಕಾರ ಪ್ರಾಯೋಜಿಸಿದ ಜಂಗಲ್ ಲಾಜ್ ಸೇರಿದಂತೆ ಅಸಂಖ್ಯ ವಿಹಾರಧಾಮಗಳು ರೂಪುಗೊಂಡಿವೆ. ಅವುಗಳಲ್ಲೊಂದು – ಕಾಫಿ ಕೆಫ಼ೆಡೇ ಬಳಗದ `ಸೆರಾಯ್.’ ಇದು ನಾಗರಹೊಳೆ ವನಧಾಮದ ಒತ್ತಿನಲ್ಲಿ, ಅಂದರೆ ಹೆಗ್ಗಡದೇವನಕೋಟೆ – ಕಾರಾಪುರಗಳ ಅಂಚಿನಲ್ಲಿ, ಸರಕಾರೀ ವಿಹಾರಧಾಮವೆಂದೇ ಹೆಸರಾಂತ ಜಂಗಲ್ ಲಾಜಿನಿಂದ ಸುಮಾರು ಮುಕ್ಕಾಲೇ ಕಿಮೀ ಅಂತರದಲ್ಲಿದೆ.

ಸೆರಾಯ್ ನಮ್ಮ ಕಮ್ಮಟದ ಕಲಾಪಗಳಿಗೂ ಹೆಚ್ಚಿನ ಭಾಗಿಗಳ ವಸತಿಗೂ ನೆಲೆಯಾಗಿತ್ತು. (ನಾನೂ ಸೇರಿದಂತೆ) ಹೆಚ್ಚುವರಿ ಹತ್ತು ಮಂದಿಗಳು ಕೇವಲ ರಾತ್ರಿಯ ವಸತಿಗೆ ಮಾತ್ರ ಜಂಗಲ್ ಲಾಜಸ್ಸಿಗೆ ಹೋಗುತ್ತಿದ್ದೆವು. ಬೆಳಿಗ್ಗೆ ಏಳೂವರೆಯಿಂದ ತೊಡಗಿ ರಾತ್ರಿ ಒಂಬತ್ತರವರೆಗೆ ತಿಂಡಿ, ಸಭೆ, ಊಟಗಳಿಗೆ ಸೆರಾಯಲ್ಲಿ ಸೇರುತ್ತಿದ್ದೆವು. ಕಮ್ಮಟದ ಮಾನಸೋಲ್ಲಾಸದ ಭಾಗವಾಗಿ ಹೊಂದಿಸಿದ್ದ `ಕಾಡುಸುತ್ತುವ’ ಕಲಾಪಕ್ಕೆ ಮಾತ್ರ ಎಲ್ಲ ಜಂಗಲ್ ಲಾಜಸ್ಸನ್ನು ಸೇರುವುದು ಅನಿವಾರ್ಯವಿತ್ತು. (ವನವಿಹಾರ ಕೇವಲ ಸರಕಾರೀ ಸ್ವಾಮ್ಯದ್ದು.) ಹೆಚ್ಚಿನೆಲ್ಲಾ ಭಾಗಿಗಳನ್ನು ಬೆಂಗಳೂರಿನಲ್ಲಿ ಒಟ್ಟಾಗುವಂತೆ ಮಾಡಿ, ವಿಶೇಷ ಬಸ್ಸಿನ ವ್ಯವಸ್ಥೆಯಲ್ಲಿ ಸೆರಾಯ್ ಮುಟ್ಟಿಸಿದ್ದರು. ಅದಕ್ಕಳವಡದ ಕೆಲವರಿಗೆ ಸ್ವತಂತ್ರ ಸಾರಿಗೆ ಬಂದೋಬಸ್ತು ಅಚ್ಚುಕಟ್ಟಾಗಿಯೇ ಇತ್ತು. ನನಗೆ ಹೋಗುವಲ್ಲಿ, ಅನ್ಯ ಕಾರ್ಯನಿಮಿತ್ತ ಮಂಗಳೂರಿಗೆ ಬಂದಿದ್ದ ಉಲ್ಲಾಸ ಕಾರಂತರ ಜತೆ (ಅವರದೇ ಕಾರು), ಮರಳುವಲ್ಲಿ ನಿರೇನ್ ಜತೆ (ಬಾಡಿಗೆ ಕಾರು) ಸಿಕ್ಕಿದ್ದು ಹೆಚ್ಚಿನ ಸಂತೋಷಕ್ಕೂ ಕಾರಣವಾಯ್ತು.

ಮೊದಲ ದಿನ ಅಪರಾಹ್ನ ಎರಡರಿಂದ ಸಂಜೆ ಐದೂವರೆಯವರೆಗೆ ನಡೆದ ಸಭೆ ಬಹುತೇಕ ವಿವಿಧ ಹಂತಗಳ ಪರಿಚಯಾತ್ಮಕ ಕಲಾಪಗಳಿಗೆ ಸೀಮಿತವಾಗಿತ್ತು. ಹಾಗೇ ಕೊನೆಯ ದಿನದ ಕೇವಲ ಪೂರ್ವಾಹ್ನದ ಸಾಮಾನ್ಯ ಸಭೆ ಕೇವಲ ಒಂದು ಗಂಟೆಯಲ್ಲಿ ಸಮರ್ಪಕ ಮುಕ್ತಾಯವನ್ನು ಹಾಡಿತ್ತು. ಉಳಿದಂತೆ ಎರಡೂ ದಿನಗಳಲ್ಲಿ ಎಂಟೂವರೆಯಿಂದ ಮೂರೂವರೆಯವರೆಗೆ – ಚುಟುಕಿನ ಚಾ – ಊಟದ ವಿರಾಮವನ್ನುಳಿದು, ಗಂಭೀರ ವಿಚಾರ ಪ್ರಸ್ತುತಿ ಮತ್ತು ಚರ್ಚೆಗಳ ಕಲಾಪವೇ ಆಗುತ್ತಿತ್ತು. ಅನಂತರ ಎರಡೂ ಸಂಜೆಗಳಲ್ಲಿ ವನವಿಹಾರ. ಕೊನೆಯ ದಿನದ ಮೊದಲ ಭಾಗ ಕೇವಲ ಸ್ನಾಪ್ ಆಪ್ತ ಬಳಗದ (ಸುಮಾರು ಎಂಟು ಮಂದಿ) ವಿಚಾರ ವಿನಿಮಯವಾದ್ದರಿಂದ ಉಳಿದವರಿಗೆ ಹೆಚ್ಚಿನೊಂದು ವನವಿಹಾರ ದಕ್ಕಿತ್ತು. ಸೆರಾಯ್ (ಜಂಗಲ್ ಲಾಜ್ ಕೂಡಾ) ಬಹುತಾರಾ ಮಟ್ಟದ ವ್ಯವಸ್ಥೆಯಾದ್ದರಿಂದ – ವೈಯಕ್ತಿಕ ಒಗ್ಗದಿಕೆಗಳನ್ನು ಮರೆತರೆ, ಪರಿಸರ, ಸೌಕರ್ಯ ಮತ್ತು ತಿಂಡಿತೀರ್ಥ ತುಂಬ ಚೆನ್ನಾಗಿಯೇ ಇತ್ತು, ನನ್ನದೇ ಆಯ್ಕೆಗೆ ಬಿಟ್ಟದ್ದಿದ್ದರೆ ಅಗತ್ಯಕ್ಕಿಂತ ಹೆಚ್ಚಿಗೆಯೇ ಇತ್ತು!

ಕಬಿನಿ ವಲಯದಲ್ಲಿ ವಿಹಾರಧಾಮಗಳೆಷ್ಟಿದ್ದರೂ ವನಧಾಮವನ್ನು ಭದ್ರ ವಾಹನಗಳಲ್ಲೇರಿ ಸುತ್ತುವ, ಅರ್ಥಾತ್ ಸಫಾರಿಯ ಸ್ವಾಮ್ಯ ಕೇವಲ ಜಂಗಲ್ ಲಾಜಿನದ್ದು. ಸ್ನಾಪ್ ಕೂಟ ಕಮ್ಮಟದ ಕಲಾಪಗಳಲ್ಲಿ ಗಟ್ಟಿಯಾಗಿ ಕುಳಿತ ಜಡವನ್ನು ತೊಡೆಯಲು, ವಿಚಾರಗಳ ಬಿಸಿಯನ್ನು ತಣಿಸಲು ಎರಡು ಸಂಜೆಗಳಲ್ಲಿ ವನವಿಹಾರದ ಅವಕಾಶವನ್ನು ಸೂಕ್ತ ಪಾವತಿ ಕೊಟ್ಟು ಹೊಂದಿಸಿದ್ದರು. ಜಂಗಲ್ ಲಾಜಿನ ವಾಹನಗಳು ಮೂರೂವರೆಗೇ ಸೆರಾಯಿಗೆ ಬಂದು ಶಿಬಿರಾರ್ಥಿಗಳನ್ನು ಒಯ್ದು, ಮುಸ್ಸಂಜೆಗೆ ತಿರುಗಾಟ ಮುಗಿದ ಮೇಲೆ ಬಿಟ್ಟು ಹೋಗುತ್ತಿದ್ದವು. ಕೊನೆಯ ದಿನ, ಸ್ನಾಪ್-ಆಪ್ತ ಬಳಗದ ವಿಚಾರ ವಿನಿಮಯದ ವೇಳೆ ಇತರರು ಸ್ವಂತ ವೆಚ್ಚದಲ್ಲಿ ಬೆಳಗ್ಗಿನ ವನವಿಹಾರಕ್ಕೆ ಸೇರಿಕೊಳ್ಳುವ ಹೆಚ್ಚುವರಿ ಅವಕಾಶವನ್ನು ಮುಕ್ತವಾಗಿಟ್ಟಿದ್ದರು. ವಾಸ್ತವದಲ್ಲಿ ಜಂಗಲ್ ಲಾಜಿನಲ್ಲೇ ಇದ್ದವರಿಗೆ ದಿನಕ್ಕೆರಡು ಕಾಡು ಸುತ್ತಾಟ ಉಚಿತವೇ ಇದ್ದುದರಿಂದ ನಾನೂ ಸೇರಿದಂತೆ ಹತ್ತು ಮಂದಿಗೆ ಇದೂ ಉಚಿತವಾಗಿಯೇ ದಕ್ಕಿತು.

ನಾಗರಹೊಳೆಯ ಬಲು ದೊಡ್ಡ ಭಾಗವನ್ನು ಮನುಷ್ಯನ ದುರಾಸೆಯ ಪ್ರತೀಕವೆನ್ನುವಂತೆ ಸಾಗುವಾನಿ, ನೀಲಗಿರಿಯಂಥ ಏಕಜಾತಿಯ ನೆಡುತೋಪುಗಳೇ ಆವರಿಸಿವೆ. ಇವು ಸಹಜ ಕಾಡನ್ನೂ ಅನುಸರಿಸಿ ಬರುವ ಜೀವವೈವಿಧ್ಯವನ್ನೂ ನಿರಾಕರಿಸುತ್ತವೆ. ನೀಲಗಿರಿಯಂಥವು ಪ್ರಾಣಿಗಳ ಮೇವಿಗೂ ದಕ್ಕದೆ, ಉದುರು ಕಸಗಳಿಂದ ಇತರ ಹಸಿರು ಮತ್ತು ಜೀವವಿಕಾಸಕ್ಕೂ ಬಹಳ ದೊಡ್ಡ ಕುತ್ತಾಗಿಯೇ ಕಾಡುತ್ತವೆ. ಗಾಯದ ಮೇಲಿನ ಬರೆಯ ಹಾಗೆ ಕಬಿನಿಯ ಹಿನ್ನೀರಿನ ಅಂಚಿನ ಸಹಜ ಬಿದಿರ ತೋಪುಗಳೂ ಈಚೆಗೆ ಹೂ ಬಿಟ್ಟು ಸತ್ತುಹೋಗಿವೆ. ಕಬಿನಿ ವಲಯದ ಕಾಡು ದಾರಿಗಳು ಎಲ್ಲೆಲ್ಲಿ ಸುತ್ತಿದರೂ ಮತ್ತೆ ಮತ್ತೆ ಜಲಾಶಯದ ಪಾತ್ರೆ ಕಾಣಿಸುವಾಗ ಬಿದಿರಹಿಂಡ್ಲುಗಳು ಒಣಗಿದ್ದೂ ಅಡ್ಡ ಮಗುಚಿದ್ದೂ ಕಾಣುತ್ತಿತ್ತು. ಹಾಗೆ ಉಂಟಾದ ಮೇವಿನ ಕೊರತೆ, ಬೇಸಗೆಯ ಬಿರುಸಿಗೆ ಬತ್ತಿದ ಸಣ್ಣ ನೀರಿನಾಸರೆಗಳು, ಹಿಂಬಾಲಿಸುವ ಬೆಂಕಿಯ ಬೆದರಿಕೆಗಳು ಮುಪ್ಪುರಿಗೊಂಡು ವನ್ಯ ಮೃಗಗಳನ್ನೆಲ್ಲ ಕಬಿನಿ ಹಿನ್ನೀರಿನಂಥ ದೊಡ್ಡ ಜಲಾಶಯಗಳ ಆಸುಪಾಸಿಗೇ ತಳ್ಳುತ್ತವಂತೆ. ಏಪ್ರಿಲ್, ಮೇ ತಿಂಗಳುಗಳಲ್ಲಿ ಅಲ್ಲಿ ಎಡೆ ಮಳೆ ಬಾರದಿದ್ದರೆ, ಸಣ್ಣ ಪ್ರಾಣಿಗಳ ಕತೆ ಬಿಡಿ, ಸಾವಿರದ ಲೆಕ್ಕದಲ್ಲಿ ಆನೆಗಳೂ ಕಬಿನಿಯ ಮುಳುಗಡೆ-ಪಾತ್ರೆಯಲ್ಲಿ ನೀರುಮಾತ್ರವಲ್ಲ ಮೇವೂ ಅರಸುವುದನ್ನು ಧಾರಾಳ ಕಾಣಬಹುದಂತೆ. ಆನೆಗಳು ಜಿಂಕೆಯಾದಿ ಗೊರಸಿನ ಪ್ರಾಣಿಗಳು ಮೇಯ್ದು ನೆಲ ಕಚ್ಚಿಸಿದ ಹುಲ್ಲಿನ ಬುಡವನ್ನು ಕಾಲಿನಲ್ಲಿ ಒದ್ದು ಬೇರು ಸಹಿತ ಎಬ್ಬಿಸುತ್ತವಂತೆ. ಮತ್ತೆ ಅದನ್ನು ಸೊಂಡಿಲಲ್ಲಿ ಪೆಂಡಿ ಮಾಡಿ ಹಿಡಿದು, ತಮ್ಮದೇ ಕಾಲುಗಳಿಗೆ ಬಡಿಬಡಿದು ಮಣ್ಣುದುರಿಸಿ ಹೊಟ್ಟೆ ತುಂಬಿಸಿಕೊಳ್ಳುವ ದೃಶ್ಯ ಕರುಣಾಜನಕವೇ ಆದರೂ ಬಹುಜನಾಕರ್ಷಕವೆಂದು ಕೇಳಿದ್ದೆ.

ಈ ವರ್ಷ ನಾವು ಬರುವ ಮೊದಲೇ ಅಲ್ಲಿ ಮೂರು – ನಾಲ್ಕು ಮತ್ತೆ ನಾವಿದ್ದಂತೆಯೂ ಒಂದೆರಡು ಮಳೆ ಬಂದಿತ್ತು. ಕಾಡಿನೊಳಗಿನ ಕೆರೆ, ಸಣ್ಣ ಹೊಂಡಗಳೆಲ್ಲ ಚೇತರಿಸಿಕೊಂಡಿದ್ದವು, ಪ್ರಾಣಿಗಳೂ ಸಾಕಷ್ಟು ಚದುರಿದ್ದವು. ಆದರೂ ಮಾಮೂಲೀ ಅಸಂಖ್ಯ ಜಿಂಕೆ, ನವಿಲುಗಳಲ್ಲದೆ ಕೆಲವು ಕಡವೆ, ಕಾಟಿ, ಕೆಂಜಳಿಲು, ಎರಡು ನಮೂನೆಯ ಮಂಗಗಳು, ಹಂದಿಗಳು, ಹಕ್ಕಿಗಳು ಧಾರಾಳ ದರ್ಶನ ಒದಗಿಸಿದವು. ಜಂಗಲ್ ಲಾಜಿನ `ದಿನದ ವೀಕ್ಷಣೆ’ಯ ಫಲಕದಲ್ಲಿ ಹೆಚ್ಚುಕಮ್ಮಿ ನಿತ್ಯವೂ ನಮೂದು ಪಡೆದ ಹುಲಿ ಚಿರತೆಯಾದಿ ನಿಗೂಢ ಪ್ರಾಣಿಗಳು ನಮಗೂ ಸಿಕ್ಕಿ ಮೂಲದಲ್ಲಿ ವನಧಾಮವನ್ನು ರೂಪಿಸಿದವರನ್ನು ಹೊಗಳುವಂತಿತ್ತು. ಹಾಗೇ ಸ್ಪಷ್ಟ ಪಕ್ಕೆಲುಬುಗಳು ಕಾಣುತ್ತಿದ್ದ ಆನೆ, ಕಾಟಿ ವನಧಾಮದ ಹಸಿರಿನ ಸ್ಥಿತಿ ಹಿಂದಿನ ಸಹಜಾರಣ್ಯದ ಸ್ಥಿತಿಗೆ ಮರಳುವಂತಾಗುವುದು ಎಷ್ಟು ಅವಶ್ಯ ಎನ್ನುವುದನ್ನೂ ಸಾರುತ್ತಿದ್ದವು.

ವಿವಿಧ ಸ್ಥಾನಮಾನದ ವನಧಾಮಗಳನ್ನು ನೋಡಿಕೊಳ್ಳುವಲ್ಲಿ ಅರಣ್ಯ ಇಲಾಖೆಯ ಅಸಾಮರ್ಥ್ಯವನ್ನು ಗ್ರಹಿಸಿಯೇ ತಿಳಿದವರು ದಾಖಲೆಗಳಲ್ಲಿ ವನ್ಯ ಇಲಾಖೆಯನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾದರು. ಆದರೆ ಇವರ ಮನೋಸ್ಥಿತಿ ಇನ್ನೂ ಹಿಂದಿನ ವಾಸನೆಯನ್ನು ಕಳಚಿಕೊಂಡಿಲ್ಲ. ಪ್ರಸ್ತುತ ಕಮ್ಮಟಕ್ಕೆ ಬರುವ ಮುನ್ನ ನಿರೇನ್, ಕೇರಳದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಬೇರೊಂದೇ ಕಮ್ಮಟದಲ್ಲಿ ಭಾಗಿಯಾಗಿದ್ದರು. ಅಲ್ಲಿ ನಾಗರಿಕ ಅವಹೇಳನಕ್ಕೊಳಗಾದ ಖಾಸಗಿ ತುಣುಕು ನೆಲಗಳನ್ನು ಪ್ರಾಕೃತಿಕ ಸ್ಥಿತಿಗೆ ಮರಳಿಸುವುದನ್ನು ರೂಢಿಸಿಕೊಂಡವರೇ ಶಿಬಿರಾರ್ಥಿಗಳಿಗೆ ಅನುಭವದ ಪಾಠ ಮಾಡಿದ್ದರು. ಆದರಿಲ್ಲಿ ಕನಿಷ್ಠ ಐದಾರು ದಶಕಗಳಿಂದ, ಸಾವಿರಾರು ಎಕ್ರೆ ಪ್ರಾಕೃತಿಕ ವನ್ಯಕ್ಕಾಗಿಯೇ ಮೀಸಲಾದ ವ್ಯವಸ್ಥೆ ಅದನ್ನು ಮನಗಂಡೇ ಇಲ್ಲ! ಉಲ್ಲಾಸ ಕಾರಂತ ತೀವ್ರ ವಿಷಾದದಲ್ಲಿ ಹೇಳಿದ ಮಾತು “ಸರಕಾರ ವನ್ಯ ಪುನರುಜ್ಜೀವನದ ಕಾರ್ಯಸೂಚಿಯೇ ಇಲ್ಲದೆ, ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ.” ಧಾರಾಳವಾಗಿ ಮೇಲ್ಮೈ ನೀರನ್ನೇ ಹಿಡಿದಿಡಬೇಕಾದ ಅರಣ್ಯಗಳನ್ನು ಪುನಾರಚಿಸುವ ಕಲಾಪ ಬಿಟ್ಟು ಇಲಾಖೆ ನಿರಂತರ ಮನುಷ್ಯ ರಚನೆಗಳನ್ನು ಹೇರುವಲ್ಲೇ ವ್ಯಸ್ತವಾಗಿದೆ. ನೂರೆಂಟು ಬೋರ್ಡುಗಳು, ತಡೆಗಟ್ಟೆಗಳು, ತೂತುಭಾವಿಗಳು, ಮತ್ತವುಗಳಿಂದ ನೀರೆತ್ತಲು ಸೌರಶಕ್ತಿ ಚಾಲಿತ ಪಂಪುಗಳು, ಪ್ರವಾಸೀ ಸೌಲಭ್ಯಗಳು, ನೂರೆಂಟು ಔದ್ಯಮಿಕ ಕಲಾಪಗಳಿಗೆ ಉದಾರ ಅನುಮತಿ ಕೊಡುವುದೇ ಮುಂತಾದ ಸಾಕಷ್ಟು ಕೆಟ್ಟ ಉದಾಹರಣೆಗಳನ್ನು ಇಲ್ಲಿ ಕಂಡೆ, ಸರಕಾರೀ ಸ್ವಾಮ್ಯದ ಅನ್ಯ ವನಗಳಲ್ಲೂ ಕಂಡಿದ್ದೇನೆ. ಕಬಿನಿ ವಲಯದಲ್ಲಿ ನನಗೆ ಸಿಕ್ಕ ಮೂರು ಕಾಡು ಸುತ್ತಾಟದ ಮೂರು ಕಿರು ದರ್ಶನಗಳನ್ನಷ್ಟೇ ಇಲ್ಲಿ ತುಸು ವಿವರದಲ್ಲಿ ಹೇಳಿ ಮುಗಿಸುತ್ತೇನೆ.

ಮೊದಲನೇದು: ಮೈಸೂರಿನಿಂದ ಹೆಗ್ಗಡದೇವನಕೋಟೆಗಾಗಿ ಕೇರಳಕ್ಕೆ ಹೋಗುವ ದೊಡ್ಡ ದಾರಿಯ ಬಹ್ವಂಶ ನಾಗರಹೊಳೆ ವನಧಾಮದ ಪಕ್ಕೆಯನ್ನು ಸೀಳಿಕೊಂಡೇ ಹೋಗುತ್ತದೆ. ಅದು ತುಸು ಪ್ರಾಣಿ ದೂರವಾಗುವಲ್ಲಿ ಮತ್ತು ಜನಪರವಾಗುವಲ್ಲಿ ಕಪಿನಿ ಅಂಚಿನ ಅಮುಖ್ಯ ಹಳ್ಳಿಗಳಾದ ಬೆಳ್ತೂರು, ಉದ್ಬೂರು ದಾರಿಗಳಿಗೆ ಹೊರಳಿಕೊಳ್ಳುವುದು ಉತ್ತಮ ಎಂದು ಇಲಾಖೆ ಈಚೆಗೆ ತಿದ್ದುಪಡಿ ಮಾಡಿದೆ. ಆ ವಲಯದಲ್ಲಿ ದೊಡ್ಡ ದಾರಿಯನ್ನು ಅನೂರ್ಜಿತ ಬಿಟ್ಟು, ಎರಡೂ ಕೊನೆಗಳಿಗೆ ವನ್ಯ ಇಲಾಖೆ ಬಲವಾದ ಗೇಟು ಹಾಕಿದೆ. ಈಗ ಇಲಾಖೆ ಅನುಮತಿಸಿದ ಮತ್ತು ಸಫಾರಿ ವಾಹನಗಳಿಗೆ ಮಾತ್ರ ಇಲ್ಲಿ ದಡಬಡ ಸಂಚಾರ.

ನಮ್ಮ ಮೊದಲ ಸಂಜೆಯ ಸಫಾರಿ ಕೇರಳದತ್ತಣ ಗೇಟಿನಿಂದ ದೂರ ಹೊರಟಿತ್ತು. ವ್ಯಾನ್ ಚಾಲಕ ತನ್ನ ಚರವಾಣಿಯಲ್ಲಿ ಮಾಡಿಕೊಂಡ ಖಾಸಗಿ ಮಾಹಿತಿ ಜಾಲದಲ್ಲಿ ಒಮ್ಮೆಲೆ ಏನೋ ಸಂಕೇತ ಬಂದಿರಬೇಕು. ಚಾಲಕ ವ್ಯಾನನ್ನು ಒಮ್ಮೆಲೇ ಸುಮಾರು ೭೦ – ೧೦೦ ಮೀಟರ್ ಉದ್ದಕ್ಕೆ ಭಾರೀ ವೇಗದಿಂದ ಹಿಂಚಲನೆ ಮಾಡಿ, ಗೇಟೆತ್ತಿ, ಒಳಗಿನ ದಾರಿಗಿಳಿಸಿದ. ಹರಕು ದಾರಿಯಲ್ಲಿ ಭಾರೀ ವೇಗದಿಂದಲೇ ಎರಡು ಮೂರು ಕಿಮೀ ಧಾವಿಸಿ, ಒಂದು ಕಿರುಸೇತುವೆಯನ್ನು ಬಲು ಎಚ್ಚರದಿಂದ ಸಮೀಪಿಸಿ, ಇಂಜಿನ್ ಆರಿಸಿಬಿಟ್ಟ. ವ್ಯಾನಿನ ಐದು ಸಾಲಿನ, ವಿವಿಧ ಎತ್ತರದ ಸೀಟುಗಳೇ ಎಡಕ್ಕೆ ವಾಲಿಕೊಂಡಂತೆ, ಹತ್ತೂ ಉಸಿರು ನಿಂತಂತೆ, ಕತ್ತುಗಳು ಎರಡಿಂಚು ಹೆಚ್ಚೇ ಲಂಬಿಸಿದಂತೆ, ಇಪ್ಪತ್ತೂ ಕಣ್ಣು ಕೀಲಿಸಿದಂತೆ ದಾರಿ ಮಗ್ಗುಲ ಸಣ್ಣ ತಗ್ಗಿನ ಪೊದರನ್ನು ಅರಸಿದವು. ಪೊದರ ಮರೆಯಲ್ಲಿ ಅಸ್ಪಷ್ಟ ಹಳದಿ ಕಪ್ಪಿನ ಪಟ್ಟೆಗಳ ಚಲನ ಕಾಣಿಸಿತು. ಎಲ್ಲರ ನಾಡಿಮಿಡಿತವೂ ಪಿಸುನುಡಿ ಚಿತ್ರಬರೆಯುತ್ತಲೇ ಇತ್ತು. ಒಂದು ದೊಡ್ಡದು (ತಾಯಿ?) – ಮೈ ಚಾಚಿದೆ, ಎರಡು ಸಣ್ಣವು (ಮರಿಗಳು?) – ಅತ್ತಿತ್ತ ನಡೆದಿವೆ. ಅಮ್ಮನ ಬಾಲನುಲಿಯುತ್ತಲೇ ಇದೆ, ಕತ್ತೆತ್ತಿ ನಮ್ಮ ಪಿಸುನುಡಿಗೆ ಕಿವಿ ಚೂಪು ಮಾಡಿದ್ದಾಳೆ. ಮೆಲ್ಲನೆದ್ದು ಮಕ್ಕಳಿಗೆ ಗುರ್ ನುಡಿ ಕೊಟ್ಟಂತಾಯ್ತು. ಒಮ್ಮೆಲೇ ಮೃದು ಹೆಜ್ಜೆಗಳನ್ನು ಇತ್ತ ಬೆಳೆಸಿ, ಪೊದರ ತೆರೆ ಸರಿಸಿ ನಮ್ಮ ಮಗ್ಗುಲಿನಲ್ಲೇ ಧುತ್ತೆಂದು ನಿಂತಿತಾ ಹುಲಿ!

ವ್ಯಾನಿನಲ್ಲಿ ನಾವು ಕುಳಿತಂತೇ ಬಾಗಿ ಕೈ ಚಾಚಿದರೆ ತಲೆ ಸವರಬಹುದಾದಷ್ಟೇ ಅಂತರದಲ್ಲಿ `ಚಂಡ ವ್ಯಾಘ್ರ.’ ಚಾಲಕ ವ್ಯಾನನ್ನು ಹತ್ತಡಿ ಮುಂದಕ್ಕೆ ಸರಿಸಿದ. ಹುಲಿ ದಾರಿ ನಡುವಿಗೇ ನಡೆದು, ತಗ್ಗಿನಲ್ಲಿ ನಿಂತ ಮಳೆನೀರಿಗೆ ಬಾಯಿ ಹಚ್ಚಿತು. ತುಸು ನಾಚಿಕೆಯಲ್ಲಿ ಅಥವಾ ಮಕ್ಕಳಾಟಿಕೆಯಲ್ಲಿ ಒಂದನ್ನೊಂದು ನೂಕುತ್ತಾ ಎರಡು ಸಣ್ಣವೂ ಹಿಂಬಾಲಿಸಿದವು. ವಿರಾಮದಲ್ಲಿ ಅತ್ತಿತ್ತ ಅಡ್ಡಾಡಿ, ಮತ್ತೆ ಮತ್ತೆ ನೀರು ನೆಕ್ಕಿ, ಅದಿದರ ಬಾಲ ಕಚ್ಚುವ ಆಟವಾಡಿ, ಮೈಚಾಚಿ ಕುಳಿತು, ಹಲ್ಲುಕಳೆದು ಅಣಕು ಕೋಪ ತೋರಿ……

ಮೂವರೂ ನಮಗೆ ಸುಮಾರು ಅರ್ಧ ಗಂಟೆಯ ಕಾಲ ಉಚಿತ ಪ್ರದರ್ಶನ ಕೊಟ್ಟರು! ಏತನ್ಮಧ್ಯೆ ನಮ್ಮ ಚಾಲಕನ ಕರೆ ಕೇಳಿ ವನ ಸಾಗರದ ಯಾವ್ಯಾವ ಮೂಲೆಯಲ್ಲಿದ್ದ ಇತರ ಸಫಾರಿ ವ್ಯಾನ್, ಬಸ್ಸುಗಳೆಲ್ಲಾ ಇಲ್ಲಿಗೋಡಿ ಬಂದಿದ್ದವು. ಇದ್ದ ಅಸಮ ನೆಲದಲ್ಲೂ ಎಡೆ ಹುಡುಕಿ ಅವೆಲ್ಲ ಗರಿಷ್ಠ ವ್ಯಾಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಂಡಿದ್ದವು.

ಅವುಗಳ ಎಲ್ಲ ಮಗ್ಗುಲುಗಳಿಂದಲೂ ತಲೆ, ನಮನಮೂನೆಯ ಕ್ಯಾಮರಾ, ಚರವಾಣಿ, ದುರ್ಬೀನು ಚಾಚಿ ಪೂರ್ಣ ಪಿಸುಸ್ತರದಲ್ಲೇ ಆದರೂ ಅದೆಷ್ಟು ವಾವ್‍ಗಳು, ಕ್ಲಿಕ್ ಸರಣಿಗಳು, ಹಿಂಚಾಚಿದ ಕೋಲತುದಿಗೆ ಹಲ್ಲು ಕಿಸಿವ ಸೆಲ್ಫಿಗಳೂ! ಪ್ರದರ್ಶನಾವಧಿ ಮುಗಿಯಿತೆಂದೋ ಮನುಷ್ಯ ಪ್ರಾಣಿಗಳ ದರ್ಶನ ಸಾಕಾಯ್ತೆಂದೋ ಆ ಮೂರೂ ಹುಲಿಗಳು ದಾರಿಯ ಬಲ ಮಗ್ಗುಲಿನ ಪೊದರಿನಲ್ಲಿ ಕರಗಿ ಹೋಗುತ್ತಿದ್ದಂತೆ, ದಿನವೂ ಕರಗುತ್ತ ಬಂದಿತ್ತು, ಅಂದಿನ ವನವಿಹಾರದ ಅವಧಿಯೂ ಮುಗಿದಿತ್ತು.

ಮತ್ತಿನದು: ಮೇವಿನ ಕೊರತೆ ನೀಗಲೋ ಎಂಬಂತೆ, ಅದೊಂದೆಡೆ ಇಲಾಖೆಯವರೇ ಎತ್ತೆತ್ತರದ ಗೆಲ್ಲುಗಳಲ್ಲಿನ ಹಸಿರ ಕುಡಿಗಳನ್ನು ಕತ್ತರಿಸಿ ಚೆಲ್ಲಿದಂತಿತ್ತು. ಪುಟ್ಟ ದಂತಿ ಸೇರಿದಂತೆ ನಾಲ್ಕು ಆನೆಗಳು ಕಾಣಿಕೆಯನ್ನು ಒಪ್ಪಿಸಿಕೊಂಡಿದ್ದವು. ಇವೆಲ್ಲ ಕಾಡದಾರಿಯ ಮಗ್ಗುಲಲ್ಲೇ ಒದಗಿದ್ದರಿಂದ ಇಂಜಿನ್ ಆರಿಸಿ ನಿಂತು ನೋಡುತ್ತಿದ್ದೆವು. ಮಿನಿಟು ಕಳೆದಂತೆ ಹಿಂಡಿನ ಹಿರಿಯಳೊಬ್ಬಳಿಗೆ ನಮ್ಮ ದೃಷ್ಟಿ ಹಿಡಿಸದಾಗಿರಬೇಕು. ಒಮ್ಮೆಗೆ ಸೊಪ್ಪನ್ನು ಚೂರ್ಣಮಾಡಿ, ದಂಟನ್ನು ಜಗಿದು ನುಂಗುವ ಕಾಯಕ ಬಿಟ್ಟು, ನಮ್ಮತ್ತ ಎರಡು ಹೆಜ್ಜೆ ಬೆಳೆಸಿತು. ಸೂಚನೆಯರಿತ ಚಾಲಕ ಕೂಡಲೇ ಜಾಗ ಖಾಲಿ ಮಾಡಿಸಿದ.

ಬೆಳಗ್ಗಿನ ಪಿರಿಪಿರಿ ಮಳೆಯಲ್ಲಿ ಕೇರಳದತ್ತಣ ದೊಡ್ಡ ದಾರಿಯಲ್ಲೇ ನಮ್ಮ ಸಫಾರಿ ಹೊರಟಿತ್ತು. ವನಧಾಮಗಳಲ್ಲೆಲ್ಲ ದಾರಿಯ ಇಕ್ಕೆಲಗಳಲ್ಲಿ ಕಾಡುಪ್ರಾಣಿಗಳ ಚಲನವಲನ ಚಾಲಕರಿಗೆ ಸ್ಪಷ್ಟವಾಗಲು (ಅಪಘಾತ ನಿವಾರಣೆಗೆ) ಸುಮಾರು ಇಪ್ಪತ್ತು ಮೂವತ್ತು ಮೀಟರ್ ಅಂತರಕ್ಕೆ ಪೊದರು ಚೊಕ್ಕ ಸವರುತ್ತಾರೆ. ಇಲ್ಲಿ ಪ್ರಾಣಿಗಳು ಸರಾಗ ದಾರಿಗಿಳಿಯದಂತೆ ಅಗಳು ಬೇರೇ ತೋಡಿದ್ದರು. ಅಲ್ಲಿ ತೆರವಿನ ಪೊದರಂಚಿನಲ್ಲಿ ಎರಡು ಆನೆಗಳು – ಎದುರಿನದು ಅಕ್ಕ, ಇನ್ನೊಂದು ಹಿಂ-ಬಾಲಕ – ಏನೋ ರಾಜಕಾರ್ಯ ಹಿಡಿದವರಂತೆ, ದಾರಿಗೆ ಸಮರೇಖೆಯಲ್ಲಿ ಬೀಸಾ ಬೀಸಾ ನಡೆದಿದ್ದರು. ನಾವು ಕುತೂಹಲಕ್ಕೆ ನಿಧಾನಿಸಿ ಅವುಗಳನ್ನು ನೋಡುತ್ತ ಸಾಗಿದೆವು. ಸ್ವಲ್ಪದರಲ್ಲೇ ಅವು ಎಡ ಹೊರಳಿ ಪೊದರುಗಳಲ್ಲಿ ಕರಗಿದವು. ಸ್ವಲ್ಪ ಮುಂದೆ, ನಾನು ಮೊದಲೇ ಹೇಳಿದ ಗೇಟು ಮುಚ್ಚಿದ ಸ್ಥಳ ಬಂತು. ನಾವು ದೊಡ್ಡ ದಾರಿಯನ್ನೇ ಆಯ್ದುಕೊಂಡು ತೀವ್ರ ಎಡ ಹೊರಳಿದೆವು. ಇಲ್ಲಿಗೆ ಆನೆಯಗಳು ಮುಂದುವರಿದಿರಲಿಲ್ಲ. ಬಹುಶಃ ಅದು ತಿಳಿದೇ ಆ ಆನೆಗಳು ಪೊದರ ಮರೆ ಹರಿದು ದಾರಿ ದಾಟಲು ಬಂದವು. ಅದರ ಸವಕಲು ಜಾಡಿಗೆ ನಮ್ಮ ಜೀಪು ಅಡ್ಡಲಾಗಿತ್ತು. ಒಮ್ಮೆಗೇ ತರುಣಿ ನಿಂತು, ಪಕ್ಕದ ಮರದ ಕೊಂಬೆಗೆ ಸೊಂಡಿಲು ಹೊಸೆದು, ವೈಯ್ಯಾರದಲ್ಲಿ “ಹೀಗೆ ಮಾಡಿದರೆ ಹೇಗೆ” ಎಂದು ಕೇಳಿದಂತಾಯ್ತು. ನಮ್ಮ ಚಿತ್ರಗ್ರಹಣಕ್ಕೆಂದು ನಿಲ್ಲಿಸಿದ್ದ ಜೀಪನ್ನು ಚಾಲಕ ತುಸು ಮುಂದೆ ಒಯ್ದ ಕೂಡಲೇ ಆ ಜೋಡಿ ಮತ್ತೆ ಹಿಂದಿನ ವೇಗದಲ್ಲೇ ದಾರಿ ದಾಟಿ ಮರೆಯಾದವು.

ಕೊನೆಯದು: ಅದು ಬೆಳಗ್ಗಿನ ಸಫಾರಿ. ಆಗಷ್ಟೇ ಮಳೆ ಬಿಟ್ಟಿತ್ತು. ನಮ್ಮ ವ್ಯಾನ್ ನಿರ್ಬಂಧಿತ ದಾರಿಯಲ್ಲಿ ನಿಧಾನವಾಗಿ ಸಾಗಿದ್ದಂತೇ ಚಾಲಕನ ಚರವಾಣಿ ಸಂದೇಶ ಸಾರಿತು “ಚಿರತೆ”! ಹರಕು ಹೊಂಡಗಳು ಒಮ್ಮೆಗೇ ಮರೆತು ಹೋದಂತೆ ವ್ಯಾನ್ ಹಾರಿತು. ಒಂದು ಕಿಮೀ ಅಂತರದಲ್ಲೇ ಸಂದೇಶ ಕಳಿಸಿದ ಇನ್ನೊಂದು ಸಫಾರಿ ವ್ಯಾನ್ ಕಾಣಿಸಿತು. ಅದರ ಪಕ್ಕದಲ್ಲೇ ನಮ್ಮದೊಂದು ಆಯಕಟ್ಟಿನ ಜಾಗ ಹಿಡಿದೇನೋ ನಿಂತದ್ದಾಯ್ತು. ಆ ವ್ಯಾನಿನವರೆಲ್ಲ ಬಲ ಮಗ್ಗುಲ ಪೊದರು ಕುರುಚಲು ಮರಗಳಾಚೆ ದೃಷ್ಟಿ ಕೀಲಿಸಿದ್ದನ್ನೇ ಅನುಕರಿಸಿದೆವಾದರೂ ಒಮ್ಮೆಗೆ ಬಗೆ ಹರಿಯಲಿಲ್ಲ, ಚಿರತೆ ಎಲ್ಲಿ? ದಾರಿಯಿಂದ ಸುಮಾರು ಐವತ್ತಡಿ ಆಚೆ ಇನ್ನೊಂದೇ ಮರದ ಮರೆಯಲ್ಲೆಂಬಂತೆ ಅಲ್ಲೊಂದು ಭಾರೀ ಮರ. ಅದರ ಸುಮಾರು ನಲ್ವತ್ತಡಿ ಎತ್ತರದ ಕವಲಿನಲ್ಲಿ, ಅಸ್ಪಷ್ಟ ಗಂಟು. ಇರುವೆ ಗೂಡೋ ಎಲೆರೆಂಬೆಗಳ ಮಾಯಕವೋ ಎಂದುಕೊಳ್ಳುತ್ತಿದ್ದಂತೆ, ಕೊಂಬೆಗುಂಟ ಚಾಚಿದ್ದ ಕತ್ತೆತ್ತಿ, ಕಿವಿ ನಿಮಿರಿಸಿ ನಮ್ಮತ್ತ ನೋಡಿತ್ತು ಚಿರತೆ. ಎಲ್ಲೋ ರಾತ್ರಿ ಪಟ್ಟಾಗಿ `ಊಟ’ ಹೊಡೆದು ವಿಶ್ರಾಂತಿಗೆ ನೆಲೆಸಿತ್ತು, ಪಾಪ. ಬೆಳಗ್ಗಿನ ಜಾವದಲ್ಲಿ ಪಿರಿಪಿರಿ ಮಳೆ ಕಾಡಿದ್ದನ್ನು ಮಿಸುಕದೆ ಸಹಿಸಿಕೊಂಡರೂ ಈಗ “ಈ ವ್ಯಾನುಗಳ ಗದ್ದಲಾ” ಎಂದು ಸಿಡುಕು ನೋಟ ಹಾಕಿದ್ದಿರಬೇಕು. ಒತ್ತಿ ಕುಳಿತದ್ದಕ್ಕೆ ಜೋಮುಗಟ್ಟಿದ ಹಿಂಗಾಲನ್ನು ಮೆಲ್ಲ ಕೆಳಬಿಟ್ಟು, ಗುಂಯ್‍ಗುಟ್ಟಿದ ಕೀಟಕ್ಕೊಂದು ಬಾಲದ ಬೀಸು ಕೊಟ್ಟು ಮತ್ತೆ ಕತ್ತು ಚಾಚಿದಾಗ ಅದೇ ಭ್ರಮೆ – ಇರುವೆ ಗೂಡೋ ಎಲೆರೆಂಬೆಗಳ ಮಾಯಕವೋ. ಹತ್ತಿಪ್ಪತ್ತು ಮಿನಿಟು ಕಳೆದರೂ ಚಿರತೆ ಹೆಚ್ಚಿನ್ನೇನೂ ಪ್ರದರ್ಶನ ಕೊಡುವ ಉತ್ಸಾಹ ತೋರಲಿಲ್ಲ. ನಾವು ಹಿಂದೆ ಸರಿದೆವು.

ಕಮ್ಮಟದ ಕಲಾಪಗಳೆಲ್ಲ ಮುಗಿದು ಎಲ್ಲರೂ ಪರಸ್ಪರ ಅನೌಪಚಾರಿಕ ವಿದಾಯದ ಮಾತುಗಳನ್ನಾಡುತ್ತಿದ್ದ ಸಮಯ ಕೃತಿ ಸಹಜ ವಿಷಾದದಲ್ಲೇ ನನ್ನಲ್ಲಿ ಒಂದು ಮಾತು ಹೇಳಿದರು. “ನೀವು ವಿಚಾರ ವಿನಿಮಯದಲ್ಲಿ ಒಂದು ಮಾತನ್ನೂ ಆಡಲೇ ಇಲ್ಲ.” ನಿಜ, ನನಗೆ ಏನು ಮಾತಾಡಲೂ ತೋಚಲೇ ಇಲ್ಲ. ಅದಕ್ಕೆ ಸಣ್ಣ ಸಮಜಾಯಿಷಿಯನ್ನು ನಾನು ಕೊಡಲೇ ಬೇಕು. ಮೂಲದಲ್ಲಿ `ಸಂಶೋಧನಾ ವಿಭಾಗದ ಕಲಾಪ ನನ್ನ ತುತ್ತಲ್ಲ’ ಎಂಬ ನನ್ನ ಸರಿಯಾದ ನಿಲುವನ್ನು ಒತ್ತಾಯಕ್ಕೆ ಬದಲಿಸಿ, ಅಲ್ಲಿಗೆ ಹೋದದ್ದು ನನ್ನ ತಪ್ಪು. ಕಮ್ಮಟಕ್ಕೆ ಹೋಗಲು ನಾನು ಒಪ್ಪಿಕೊಂಡಂದಿನಿಂದ ಕಬಿನಿಯಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಕೇಳುವವರೆಗೂ ನನಗೆ ಸಮರ್ಪಕವಾಗಿ ವಿಷಯದ ಪರಿಚಯವನ್ನೇ ನೀಡಲಿಲ್ಲ. ಅವರ ಮೊದಲ ಪತ್ರದಲ್ಲಿ, ಕೇವಲ ಪ್ರಾಸಂಗಿಕವಾಗಿ ಸ್ನಾಪ್ ಇಂಡಿಯಾ ಯೋಜನೆಯ ಒಂದು ಸೇತು ಇತ್ತು. ನನ್ನ ಮಿತಿಯಲ್ಲಿ ನಾನದನ್ನು ಗ್ರಹಿಸಲೇ ಇಲ್ಲ. ಆದರೆ `ಕಮ್ಮಟದ ವಿಷಯವೇನು? ನನ್ನ ಪಾತ್ರವೇನು?’ ಎಂದು ಮತ್ತೆಮತ್ತೆ ಕೇಳಿದರೂ ಅತ್ತಣಿಂದ ಯಾವ ಸ್ಪಷ್ಟನೆಯನ್ನು ಕೊಡದುಳಿದದ್ದು ಖಂಡಿತಕ್ಕೂ ಸರಿಯಲ್ಲ. ಸ್ನಾಪಿನ ವರಿಷ್ಠ ಕ್ರೇಗ್ ಗ್ರೋವ್ಸ್ ಕಮ್ಮಟದ ಮೊದಲಲ್ಲಿ ಎಲ್ಲರಿಗೆ ಕೊಟ್ಟ ಸ್ನಾಪಿನ ೨೦೧೫ರ ಪುಟ್ಟ ವರದಿ-ಪುಸ್ತಿಕೆಯನ್ನು ನೋಡಿದಾಗಲೇ ನನಗೆ ಕಲಾಪಗಳ ನಿಜಸ್ವರೂಪ ತಿಳಿಯಿತು. ಯಾವುದೇ ಸಭಾ ಕಲಾಪಗಳಲ್ಲಿ ಸ್ವಾನುಭವಕ್ಕೆ ನಿಲುಕದ ವಿಚಾರಗಳ ಕುರಿತು ನಾನು ಮಾತಾಡುವವನಲ್ಲ.

ಪ್ರಸ್ತುತ ಕಮ್ಮಟದಲ್ಲಿ ಕೆಲವು ಸಂಪನ್ಮೂಲ ವ್ಯಕ್ತಿಗಳೆಂದು ಬಂದವರು, ಕೇವಲ ಸ್ವಪ್ರತಿಷ್ಠೆಗಾಗಿ ಮಾತು ಬೆಳೆಸುತ್ತಿದ್ದ ಠಕ್ಕು, ನಾನು ಎಂದೂ ನಡೆಸಿದ್ದಿಲ್ಲ. ಆದರೆ ಕೃತಿಕಾರಂತರ ಯೋಜನೆಯ ಔಚಿತ್ಯ, ಪ್ರಾಯೋಜಕರ ಪ್ರಾಮಾಣಿಕತೆ, ಆ ಬಳಗ ಕಳೆದೊಂದು ವರ್ಷದಿಂದ ನಡೆಸಿದ ಕೆಲಸದ ಮಹತ್ತು, ಕಮ್ಮಟವನ್ನು ಆಯೋಜಿಸಿ ನಡೆಸಿದ ಅಚ್ಚುಕಟ್ಟು, ಭಾಗಿಗಳಲ್ಲಿ ಹೆಚ್ಚಿನ ವ್ಯಕ್ತಿಗಳ ಸಾಮರ್ಥ್ಯ, ನಡೆದ ಚರ್ಚೆಗಳ ಗಹನತೆ, ವರ್ಷ ಕಳೆದು ಮೂಡಲಿರುವ ಫಲಿತಾಂಶದ ಉಪಯುಕ್ತತೆಯ ಬಗ್ಗೆ ನನಗೆ ಅಪಾರ ಮೆಚ್ಚುಗೆಯಲ್ಲದೆ ಇನ್ನೊಂದಿಲ್ಲ. ಕಮ್ಮಟ ಕಲಾಪಗಳಿಗೆ ನನ್ನ ಕೊಡುಗೆ ಏನೂ ಇಲ್ಲವಾದರೂ ಕಮ್ಮಟ ನನಗೆ ಕೊಟ್ಟ ಹೊಸ ನೋಟಕ್ಕೆ ಅನಂತ ವಂದನೆಗಳು.
ಅಂತಿಮವಾಗಿ ಕಮ್ಮಟದ ಕುರಿತ ನನ್ನ ಗ್ರಹಿಕೆಯನ್ನು ಮೂರು ಸೂತ್ರಗಳಲ್ಲಿ ಹೇಳಿಬಿಡುತ್ತೇನೆ:

೧. ಕಮ್ಮಟದ ಫಲಿತಾಂಶ ಪ್ರಾಯೋಜಕ ಸಂಸ್ಥೆಗೆ (ಸ್ನಾಪ್) ಕೃತಾರ್ಥತೆಯನ್ನು ಮಾತ್ರ ಕೊಡುತ್ತದೆ. (ಸ್ಪಷ್ಟೀಕರಣ: ಅಮೆರಿಕದ ಸ್ವಾರ್ಥ, ಯಾವುದೇ ಪಕ್ಷ ರಾಜಕಾರಣದ ಅಸ್ತ್ರ, ನಿರಂತರ ಹಣಗಳಿಸುವ ವ್ಯವಸ್ಥೆಗಳಂಥ ಯಾವುದೇ ನಿಗೂಢ ಕಾರ್ಯತಂತ್ರ ಇದರಲ್ಲಿಲ್ಲ.)
೨. ನಾಗರಿಕ ಅಭಿವೃದ್ಧಿ ಕಲಾಪಗಳಿಗೆ ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳಲು ಇದು ನಿಸ್ಸಂದೇಹವಾಗಿ ಕೈಮರವಾಗುತ್ತದೆ. (ಉದಾಹರಣೆಗೆ – ನೂರೊಂದು ನಾಗರಿಕ ಸವಲತ್ತುಗಳು ಪಶ್ಚಿಮ ಘಟ್ಟವನ್ನುತ್ತರಿಸುವಲ್ಲಿ ಕನಿಷ್ಠ ಪ್ರಾಕೃತಿಕ ಹಾನಿಯ ದಾರಿ ಇದು ತೋರಬಲ್ಲುದು)
೩. ಪ್ರಾಕೃತಿಕ ಸತ್ಯಗಳನ್ನು ಸೀಮಿತ ಸ್ವಾರ್ಥಗಳಿಗಾಗಿ ಅವಹೇಳನ ಮಾಡುವವರನ್ನು ಶಿಕ್ಷಿಸ ಹೊರಡುವವರಿಗೆ ಇದು ದೃಢ ವೈಜ್ಞಾನಿಕ ನೆಲೆಯಾಗುತ್ತದೆ.

(ಉದಾಹರಣೆ: ಘೋಷಣೆ ಮತ್ತು ಕಾರ್ಯಾಚರಣೆಗಳಿಗೆ ತಾಳಮೇಳಗಳಿಲ್ಲದ ಎತ್ತಿನಹೊಳೆ ಯೋಜನೆಯ ಪಾರಿಸರಿಕ, ಪರೋಕ್ಷವಾಗಿ ಸಾಮಾಜಿಕ ದ್ರೋಹಗಳ ವಿರುದ್ಧ ವೈಜ್ಞಾನಿಕ ಸಾಕ್ಷ್ಯಗಳು ಇದರಲ್ಲಿವೆ.)