ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೮

ಏಳೆಂಟು ವರ್ಷದವಳಿದ್ದಾಗ ನೋಡಿದ ಮೈಸೂರು, ಶ್ರೀರಂಗಪಟ್ಟಣಗಳ ನೆನಪು ಹೃದಯದಲ್ಲಿ ಮಸುಕಾಗಿದ್ದು, ಪುನಃ ನೋಡಬೇಕೆಂಬ ಹಂಬಲ ಸದಾ ನನ್ನದಾಗಿತ್ತು. ಅನುವಾದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯುವುದೆಂದರಿತಾಗ ನನ್ನ ಹೃದಯ ಸಂತಸದಿಂದ ಪುಟಿದೆದ್ದಿತು. ಬೆಂಗಳೂರು ತಲುಪಿದ ನನ್ನನ್ನೂ ತುಷಾರ್‌ನನ್ನೂ ಗೆಳತಿ, ಬಂಧು ಸ್ವರ್ಣಲತಾ ಮೈಸೂರಿಗೆ ಕರೆದೊಯ್ದಳು.

ನದಿ ಕಾವೇರಿ ಎದುರಾದಾಗಲೇ ಮೈ ಪುಳಕಿತವಾಯ್ತು. ಮಂಗಳೂರಿನಿಂದ ಪ್ರಜ್ವಲ್ ನೇರವಾಗಿ ಅಲ್ಲಿಗೇ ಬಂದು ತಲುಪಿದ್ದ. ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷರು, ಡಾ. ಕೆ.ವಿ.ನಾರಾಯಣರನ್ನೂ, ಪ್ರಶಸ್ತಿ ಪ್ರದಾನಿಸುವ ಹಿರಿಯರಾದ ಜಿ.ರಾಮಕೃಷ್ಣ ಹಾಗೂ ಅತಿಥಿ, ಸಾಹಿತಿ ಡಾ.ರಾಜೇಂದ್ರ ಚೆನ್ನಿ ಅವರನ್ನೂ ಭೇಟಿಯಾದೆ. ಮೈಸೂರು ಯೂನಿವರ್ಸಿಟಿ ಪ್ರಾಂಗಣದಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ! ಪಕ್ಕದ ಸಿ.ಐ.ಐ.ಎಲ್. ಗೆಸ್ಟ್ ಹೌಸ್‌ನಲ್ಲಿ ಸುಧಾರಿಸಿಕೊಂಡು ಸಿದ್ಧರಾಗಿ ಹೊರಡುವಾಗ ಕೆಳಗೆ ಕಾದಿದ್ದ ಇತರ ಪ್ರಶಸ್ತಿ ವಿಜೇತರು ಮಾನ್ಯ ಪ್ರೊ. ಎಚ್.ಕೆ. ರಾಮಚಂದ್ರ ಶರ್ಮಾ, ಪ್ರೊ. ಅಬ್ದುಲ್ ಮಜೀದ್ ಖಾನ್, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಹಾಗೂ ಮಾರ್ಕಂಡಪುರ ಶ್ರೀನಿವಾಸ ಅವರನ್ನು ಭೇಟಿಯಾಗುವ ಸೌಭಾಗ್ಯ!. ವಯೋವೃದ್ಧರೂ, ಜ್ಞಾನವೃದ್ಧರೂ ಆದ ಹಿರಿಯರ ನಡುವೆ ನಾನಿದ್ದೆ. ಸಂಕೋಚವೆನಿಸಿತು.

ನಾಡಗೀತೆಯೊಡನೆ ಆರಂಭವಾಗಿ ಮೈ ನವಿರೇಳಿಸಿದ ಕಾರ್ಯಕ್ರಮ ಅತ್ಯಂತ ಚೊಕ್ಕವಾಗಿ, ಸ್ಮರಣೀಯವಾಗಿ ನಡೆಯಿತು. `ವಿಶ್ವಭಾರತಿಗೆ ಕನ್ನಡದಾರತಿ’ ಎಂಬ ಸ್ತುತಿವಾಕ್ಯದೊಡನೆ ಕಾಜಾಣ ಪಕ್ಷಿಗಳ ಪ್ರತಿಮೆಯ ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಇತರ ಸಮ್ಮಾನಗಳೊಡನೆ ಪ್ರದಾನಿಸಲ್ಪಟ್ಟ ಪ್ರಶಸ್ತಿಯನ್ನು ಆ ಸನ್ಮಾನ್ಯರ ಕೈಗಳಿಂದ ಸ್ವೀಕರಿಸಿ ಧನ್ಯಳಾದೆ. ಗೆಳತಿ ಸ್ವರ್ಣ ಮರುಬೆಳಗು ಬೆಂಗಳೂರಿಗೆ ಹಿಂದಿರುಗಿದಳು. ನನ್ನ ಪ್ರಶಸ್ತಿಯ ನೆನಪಿಗೆ ಹಾಗೂ ನಮ್ಮ ಮೈಸೂರು ಭೇಟಿಯ ನೆನಪಿಗೆ ಮೈಸೂರ್ ಸಿಲ್ಕ್ ಸೀರೆಯನ್ನೇ ಕೊಂಡು ನನಗಿತ್ತು ತಣಿದಳು.

ಮರುಬೆಳಗು ಹೊಟೆಲ್‌ಗೆ ವಾಸ್ತವ್ಯ ಬದಲಿಸಿಕೊಂಡು, ಮೈಸೂರು ದರ್ಶನಕ್ಕೆ ಹೊರಟೆವು. ಡ್ರೈವರ್ ಪಾಶಾ ನಮ್ಮನ್ನು ಚಾಮುಂಡಿ ಬೆಟ್ಟಕ್ಕೊಯ್ದ. ಉಪಾಹಾರಕ್ಕೆ ಮೊದಲು ದೇವಿಯ ದರ್ಶನ ಮಾಡಿ ಬನ್ನಿರೆಂದ. ಏಳೆಂಟರ ಹರೆಯದಲ್ಲಿ ಕಂಡ ಚಾಮುಂಡಿ ಬೆಟ್ಟ ಇನ್ನೂ ನನ್ನ ನೆನಪಲ್ಲಿತ್ತು. ನಂದಿಯ ನೆನಪೂ ಇತ್ತು. ಆದರೆ, ಆ ಎಳೆಯ ಕಣ್ಣುಗಳಿಗೆ ಆಗ ಅಗಾಧವಾಗಿ ಕಂಡಿದ್ದ ಮಹಿಷಾಸುರ ಪ್ರತಿಮೆ ಮಾತ್ರ ಈಗ ಕುಬ್ಜವಾದಂತಿತ್ತು! ಬೆಟ್ಟ ಹಾಗೂ ದೇವಿ ಚಾಮುಂಡೇಶ್ವರಿಯ ಸನ್ನಿಧಿ, ಮನಕ್ಕೆ ತಂಪೆರೆಯಿತು; ಸಂತಸ, ಸಾಫಲ್ಯ ನೀಡಿತು. ಬೆಟ್ಟವಿಳಿಯುತ್ತಾ ತಪ್ಪಲಲ್ಲಿ ಹರಡಿದ ನಗರದ ವಿಸ್ತಾರವನ್ನು ಕಣ್ಣಲ್ಲಿ ತುಂಬಿಕೊಳ್ಳುವಾಗ, ಡ್ರೈವರ್ ಪಾಶಾ, ಅರಮನೆಯನ್ನೂ ಕಾರಂಜಿ ಕೆರೆಯನ್ನೂ ತೋರಿದ. ಕಾರಂಜಿ ಕೆರೆ ಅಂದು ಮುಚ್ಚಿದ್ದುದರಿಂದ ಅಲ್ಲಿಗೆ ಭೇಟಿ ಮರುದಿನಕ್ಕೆಂದಾಯ್ತು.

ಅರಮನೆ ಆವರಣದ ಉನ್ನತೋನ್ನತ ಸುವಿಶಾಲ ವೃಕ್ಷಗಳು, ಮಂದಿರದ ಚೆಲುವಾದ ಗೋಪುರ, ಅರಮನೆಯ ಸುವಿಶಾಲ ಸೌಧಗಳ ಸುಂದರ ವಿನ್ಯಾಸ, ಒಳಗಣ ಬಹುಮೂಲ್ಯ ಚಿತ್ತಾರದ ಸ್ತಂಭಗಳು, ಪೀಠೋಪಕರಣಗಳು, ಸಿಂಹಾಸನ, ವರ್ಣಚಿತ್ರಗಳು ಎಲ್ಲವನ್ನೂ ಕಣ್ಣಲ್ಲಿ ತುಂಬಿಕೊಂಡು ಮುಂದೆ ಶ್ರೀರಂಗಪಟ್ಟಣದತ್ತ ಪಯಣಿಸಿದೆವು. ಶಾಲಾದಿನಗಳಲ್ಲಿ ದೌಲತ್ ಕಾದಂಬರಿ ಓದಿದಾಗಿನಿಂದ ಮನದಲ್ಲಿ ಬೀಡುಬಿಟ್ಟ ಶ್ರೀರಂಗಪಟ್ಟಣ ನೋಡುವಾಸೆ! ಮೊದಲು ತ್ರಿವೇಣಿ ಸಂಗಮಕ್ಕೆ ಪಾಶಾ ನಮ್ಮನ್ನೊಯ್ದ. ಅಲ್ಲಿನ ಪರಿಸರ ಸ್ವಚ್ಛವಾಗಿರಬೇಕಿತ್ತೆಂದು ಅನಿಸಿತು. ಮಂಡ್ಯದ ತಾಜಾ ಕಬ್ಬಿನ ರಸವನ್ನು ಕುಡಿದು, ಹೊಟ್ಟೆ ತಣಿಸಿಕೊಂಡು ಟೀಪೂ ಸ್ಮಾರಕದತ್ತ ಬಂದೆವು. ಅತ್ಯಂತ ಚೆಲುವಾದ ಟೀಪೂ ಸಮಾಧಿ! ಅದರ ಸೌಂದರ್ಯವನ್ನು ಸವಿದಷ್ಟೂ ಸಾಕೆನಿಸಲಿಲ್ಲ.

ಕರಿಶಿಲೆಯ ನವಿರಾದ ಸ್ತಂಭಗಳ ಮೇಲೆ ಸಾತ್ವಿಕ ಚಂದನವರ್ಣದ ಗೋಲಾಕಾರದ ಗುಮ್ಮಟವನ್ನು ಹೊತ್ತ ಕಲಾತ್ಮಕ ಕುಸುರಿ ಕೆತ್ತನೆಯ ಭವ್ಯ ಸಮಾಧಿ. ಒಳಗೆ ಚಿರನಿದ್ರೆಯಲ್ಲಿ ಪವಡಿಸಿದ ತಂದೆ ಹೈದರಾಲಿ, ತಾಯಿ ಫಾತಿಮಾ ಬೇಗಂ ಹಾಗೂ ಟೀಪೂ ಸುಲ್ತಾನನ ಸಮಾಧಿಗಳು. ಅತ್ಯಂತ ವ್ಯವಸ್ಥಿತವಾದ ವಿಶಾಲ ಹಸಿರು ಹಾಸಿನ ಆವರಣದಲ್ಲಿ ಹಲವು ಸಮಾಧಿಗಳು. ಅಲ್ಲಿಂದ ದರಿಯಾ ದೌಲತ್. ಟೀಪೂ ಸಮ್ಮರ್ ಪ್ಯಾಲೇಸ್ ಹಸಿರು ಹಾಸಿನ ವಿಶಾಲ ತೋಟ, ಅಪರೂಪದ ವೃಕ್ಷಗಳು, ಫಿರಂಗಿಗಳು, ಒಳಗೆ ಮ್ಯೂಸಿಯಮ್. ಅಲ್ಲಿ ಕಾಪಿಟ್ಟ, ಶಿಥಿಲವೂ ಮಸುಕೂ ಆಗುತ್ತಿರುವ ಗೋಡೆಗಳೆತ್ತರದ ತೈಲವರ್ಣಚಿತ್ರಗಳು! ಇತರ ಅಮೂಲ್ಯ ವಸ್ತುಗಳು! ಫಿರಂಗಿಗಳನ್ನು ಆಮದು ಮಾಡಿ, ಬ್ರಿಟಿಶರನ್ನು ಮೆಟ್ಟಿ ನಿಂತ ಆ ಮೈಸೂರು ಹುಲಿಯನ್ನು ಮೋಸದಿಂದ ಕೊಲ್ಲಲು ಸಹಾಯವಾದ ಟೀಪೂ ಗೇಟ್ ನೋಡುತ್ತಾ, ಸುಲ್ತಾನನಿಗೆ ಪ್ರಿಯವಾದ ಶ್ರೀರಂಗನಾಥ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿ, ಆ ಕರಿಶಿಲೆಯ ಅತ್ಯಂತ ಚೆಲುವಾದ ದಿವ್ಯ ಮೂರುತಿಯನ್ನು ಕಣ್ಣಲ್ಲಿ ತುಂಬಿ ಕೊಂಡೆವು. ಪಾದ ನೋಡಿ, ಪಾದ ನೋಡಿ, ಎಂದು ಬಳಿ ನಿಂತವರು ಹೇಳುತ್ತಿದ್ದರೂ, ಶ್ರೀರಂಗನ ಮುಖದಿಂದ ನನ್ನ ದೃಷ್ಟಿ ಸರಿಯಲಿಲ್ಲ. ಪಾದದ ಬಳಿ ಲಕ್ಷ್ಮಿ ಇರುವಳೆಂಬುದು ಗಮನಕ್ಕೂ ಬರಲಿಲ್ಲ. ಮತ್ತೆ ನೋಡೋಣವೆಂದರೆ, ಕ್ಷಣ ಮಾತ್ರ ಸಿಗುವ ದರ್ಶನ ಭಾಗ್ಯ.

ಮರುಬೆಳಗು ಚಿಕ್ಕ, ಚೊಕ್ಕ ಮೈಲಾರಿ ಹೊಟೇಲ್‌ನಲ್ಲಿ ಬಾಯಲ್ಲಿ ಕರಗುವ ಬೆಣ್ಣೆ ಮಸಾಲೆದೋಸೆ, ಕಾಫಿಯ ಉಪಾಹಾರ ಸೇವಿಸಿ, ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದೆವು. ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಬಂಧಿಸಿಡುವ ವಿಚಾರ ತುಷಾರ್‌ಗೆ ಹಿಡಿಸದ್ದು. ಆದರೆ, ಮೈಸೂರು ಮಹಾರಾಜರ ರೇಂಜರ್ ಆಗಿದ್ದು, ಮೃಗಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಿವಂಗತ ಪ್ರಿಯ ಮನಮೋಹನ್ ಅಂಕ್‌ಲ್ ನೆನಪಿಗೆ ಅಲ್ಲಿಗೆ ಭೇಟಿಕೊಡಬೇಕೆಂದ ನನಗೆ ನಿರಾಶೆ ಮಾಡದೆ, ಅದನ್ನೂ ಒದಗಿಸಿದರು. ಮನಮೋಹನ್ ಅಂಕ್‌ಲ್, ನಮ್ಮ ತಂದೆಯ ಮಾವನ ಮಗ. ಸ್ವರ್ಣನ ತಾಯಿಯ ತಂಗಿ ರೇವತಿ ಚಿಕ್ಕಮ್ಮ ಅವರ ಪತ್ನಿ ಹಾಗೂ ನಮ್ಮಮ್ಮನಿಗೆ ವಾವೆಯಲ್ಲಿ ಚಿಕ್ಕಮ್ಮ. ಮೈಸೂರು ಖೆಡ್ಡಾ ಏರ್ಪಡಿಸುತ್ತಿದ್ದ ಮನಮೋಹನ್ ಅಂಕ್‌ಲ್ ಮಕ್ಕಳಲ್ಲಿ ವನಜಾ, ಕಾಡಿನ ನಡುವೆಯೇ ಹುಟ್ಟಿದವಳು.

ಹಾಗೆಂದೇ ವನಜಾ ಎಂದು ಹೆಸರಾಂತಳು. ಮಹಾರಾಜರು ಅಂಕ್‌ಲ್‌ಗೆ ಮೈಸೂರಿನಲ್ಲಿ ರೇಶ್ಮೆ ಕೃಷಿಭೂಮಿ ಉಂಬಳಿಯಾಗಿ ನೀಡಿದ್ದರು. ಅಂಕ್‌ಲ್ ನನಗೆ ಬರೆಯುತ್ತಿದ್ದ ಪತ್ರಗಳು ನನ್ನ ಪತ್ರಸಂಚಯದಲ್ಲಿ ಸುರಕ್ಷಿತವಾಗಿವೆ. ಅಲ್ಲಿಂದ ಕಾರಂಜಿ ಕೆರೆಯತ್ತ ನಮ್ಮ ಪಯಣ. ವಿಶಾಲ ವೃಕ್ಷಗಳ, ಹಸಿರ ಹಾಸಿನ, ಕಾಲ್ದಾರಿಯ ಕೊನೆಗೆ ಸುವಿಶಾಲವಾಗಿ ಕಣ್ಮನ ತುಂಬುವ ಕೆರೆಯಲ್ಲಿ ದೋಣಿವಿಹಾರದ ಸುಖ, ಸಂತಸ ನಮ್ಮದಾಯ್ತು. ದೋಣಿ ಪೆಡ್‌ಲ್ ಮಾಡಲು ತುಷಾರ್, ಪ್ರಜ್ವಲ್ ಇದ್ದುದರಿಂದ ನಾನು ಸುತ್ತಣ ಸಂದರ್ಯವನ್ನು ಕಣ್ಗಳಲ್ಲೂ, ಕ್ಯಾಮರಾದಲ್ಲೂ ಕ್ಲಿಕ್ಕಿಸುತ್ತಾ ಪರವಶಳಾದೆ. ಮತ್ತಲ್ಲಿನ ಮಯೂರೋದ್ಯಾನ, ಚಿಟ್ಟೆ ಪಾರ್ಕ್‌ಗಳಲ್ಲಿ ವಿಹರಿಸಿ, ಪಕ್ಷಿವೀಕ್ಷಣಾ ಗೋಪುರವೇರಿ ಆ ಸುರಮ್ಯ ಪ್ರಕೃತಿಯನ್ನು ಆಸ್ವಾದಿಸಿದೆವು. ಭೋಜನಾನಂತರ ಜಗನ್ಮೋಹನ ಪ್ಯಾಲೇಸ್‌ಗೆ ಭೇಟಿನೀಡಿ ಕಲಾಕೃತಿಗಳ ಸೌಂದರ್ಯ ಸವಿದೆವು. ರಾಜಾ ರವಿವರ್ಮ ವರ್ಣಚಿತ್ರಗಳ ಗ್ಯಾಲರಿಯಂತೂ ಸಮ್ಮೋಹಕವಾಗಿತ್ತು. ಅರಮನೆ ಮಾತ್ರ ಇನ್ನೂ ಸುಸ್ಥಿತಿಯಲ್ಲಿರಬೇಕಿತ್ತು, ಎಂದನಿಸದಿರಲಿಲ್ಲ.

ಅಲ್ಲಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಪಯಣ. ರಕ್ಷಿತಾರಣ್ಯವನ್ನು ಮತ್ತೆ ನೋಡಬಹುದು ಎಂದು ಮೊದಲು ಪಕ್ಷಿವೀಕ್ಷಣೆಗಾಗಿ ದೋಣಿಗಳತ್ತ ಸಾಗಿದೆವು. ಸುರಕ್ಷೆಗಾಗಿ ತೇಲಂಗಿಗಳು ಕಡ್ಡಾಯವಿದ್ದವು. ಉತ್ತಮ ಛಾಯಾಗ್ರಾಹಕನಾದ ತುಷಾರ್‌ಗೆ ಇಲ್ಲಿ ವಿಫುಲ ದೃಶ್ಯ ಸಂಪತ್ತು ಕಾದಿತ್ತು. ದ್ವೀಪಗಳನ್ನು ಸಮೀಪಿಸುವಾಗ ಮರಗಳಲ್ಲಿ ಬೀಡುಬಿಟ್ಟ ಪಕ್ಷಿಸಂಕುಲದಿಂದ ಅಸಾಧ್ಯ ವಾಸನೆಯೂ ಜೊತೆಯಾಯ್ತು. ನೀರಲ್ಲಿ ದೋಣಿಯ ಸಮೀಪವೇ ತೇಲಿ ಬರುವ ಮೊಸಳೆಗಳನ್ನು ಕಂಡು ಪರಮಾಶ್ಚರ್ಯವಾಯ್ತು. ನಮ್ಮ ಪ್ರಶ್ನೆಗೆ ಅವು ಏನೂ ಮಾಡುವುದಿಲ್ಲವೆಂದು ಉತ್ತರಿಸಿದಾಗ ಇನ್ನೂ ಹೆಚ್ಚಿನ ಅಚ್ಚರಿಯೇ ಆಯ್ತು. ದಡಕ್ಕೆ ಹಿಂದಿರುಗುವಾಗ, ತುಷಾರ್‌ನ ಫೋಟೋಗ್ರಾಫಿ ನೋಡಿದ್ದ ದೋಣಿಯಾತ, ಬೇಕಿದ್ದರೆ ಹಕ್ಕಿಗಳ ಸಂತಾನೋತ್ಪತ್ತಿಯ ವಿಶೇಷ ಛಾಯಾಗ್ರಹಣಕ್ಕೆ ಅವನನ್ನು ಕರೆದೊಯ್ಯುವುದಾಗಿ ಕರೆಯಿತ್ತ, ಆದರೆ, ಸಮಯದ ಅಭಾವದಿಂದ ಈ ಕರೆಯನ್ನು ಒಪ್ಪಿಕೊಳ್ಳಲಾಗಲಿಲ್ಲ. ದಡದಲ್ಲಿಳಿದ ಮೇಲೆ ರಕ್ಷಿತಾರಣ್ಯದ ವನಸಂಪತ್ತನ್ನು ನೋಡಿ ಸಂತೋಷಿಸಿ, ಅಲ್ಲಲ್ಲಿ ಸಂಸ್ಕರಿಸಿಟ್ಟ ಕಾವೇರಿಯ ತಂಪುನೀರನ್ನು ಕುಡಿದು, ಕಾರಿಗೆ ಮರಳಿದೆವು. ನಗರ ಸೇರುವಾಗ ರಾತ್ರಿಯಾಗಿತ್ತು.

ಮರುಬೆಳಗು ನೋಡಲು, ಸೇಂಟ್ ಫಿಲೊಮಿನಾ ಚರ್ಚ್ ಬಳಿಯಲ್ಲೇ ಇತ್ತು. ಮೈಸೂರು ಮಹಾರಾಜ ಶ್ರೀ ಶ್ರೀ ಕೃಷ್ಣರಾಜ ಒಡೆಯರು ನಿರ್ಮಿಸಿದ ಉನ್ನತಾಕಾರದ ಗಾಥಿಕ್ ಶೈಲಿಯ ಭವ್ಯಾಕೃತಿಯ ಚರ್ಚ್‌ನ ಸೌಂದರ್ಯವನ್ನು ಕಣ್ಗಳಲ್ಲಿ ತುಂಬಿಕೊಂಡು, ನಗರಕ್ಕೆ ವಿದಾಯ ಹೇಳಿ ಮರಳಿ ಬೆಂಗಳೂರಿಗೆ ಹೊರಟೆವು. ಮಾನಸ ಗಂಗೋತ್ರಿಯನ್ನು, ಕುವೆಂಪು ಅವರ ಉದಯರವಿಯನ್ನು, ಕುಕ್ಕರಹಳ್ಳಿ ಕೆರೆಯನ್ನು, ಹಾಗೆಯೇ, ಕಂಡ, ಕಾಣದ ಇಡಿಯ ಮೈಸೂರನ್ನೇ ಪುನಃ ಕಾಣುವ ಆಶೆಯಂತೂ ಹೃದಯದಲ್ಲಿ ಬೆಚ್ಚಗೆ ಕುಳಿತಿದೆ.

(ಮುಂದುವರಿಯಲಿದೆ)