ಸೋದರಳಿಯಂದಿರ ಬಂಧ ಸಂಬಂಧಗಳು ೧

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)
(ಭಾಗ ೩)

– ವಿ. ರಘುಚಂದ್ರ ಹೆಬ್ಬಾರ್

ಸಂಕ್ಷಿಪ್ತ ಜೀವನ ಚಿತ್ರ

ಬಾಗಲೋಡಿ ದೇವರಾಯರು ನನ್ನ ಸೋದರಮಾವ. ಅವರ ಅಕ್ಕ ಇಂದಿರಾ ನನ್ನ ತಾಯಿ. ದಕ್ಷಿಣ ಕನ್ನದ ಜಿಲ್ಲೆಯ ಕಿನ್ನಿಕಂಬಳ ಇವರ ಜನ್ಮ ಸ್ಥಳ (ಫೆಬ್ರುವರಿ ೨೮, ೧೯೨೭). ತಂದೆ ಕೃಷ್ಣರಾಯರು (೧೮೯೩-೧೯೭೫) ಅಲ್ಲಿಯ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ತಾಯಿ ಲಕ್ಷ್ಮಿ (೧೮೯೮-೧೯೩೨). ೧೯೩೨ರಲ್ಲಿ ಈಕೆಯ ಮರಣಾನಂತರ ಕೃಷ್ಣರಾಯರು ಎರಡನೆಯ ಮದುವೆ ಆದರು. ದ್ವಿತೀಯ ಪತ್ನಿಯ ಹೆಸರು ಕೃಷ್ಣವೇಣಿ.

ಕೃಷ್ಣರಾಯರೊಬ್ಬ ಆದರ್ಶ ಗುರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಅನೇಕ ಯಶಸ್ವೀ ಪ್ರಯೋಗಗಳನ್ನು ನಿರ್ವಹಿಸಿದ ಕುಶಲಿ. ದೇವಮಾವನೊಬ್ಬ ಆಜನ್ಮ ಜೀನಿಯಸ್ – ಯಾವುದೇ ತರಗತಿಯ ಅವಧಿ ಪೂರ್ತಿಗೊಳ್ಳುವ ಮೊದಲೇ ಮೇಲಿನದಕ್ಕೆ ಜಿಗಿಯುತ್ತಿದ್ದ ಬಾಲಪ್ರತಿಭೆ. ಪ್ರತಿಯೊಂದು ತರಗತಿಯಲ್ಲಿಯೂ ಈತನದು ಅಗ್ರಸ್ಥಾನ. (ಅಪ್ಪ – ಕೃಷ್ಣರಾಯರ ಮಡಿಲಲ್ಲಿ ಕುಳಿತ ಬಾಲ – ದೇವರಾಯರ ಚಿತ್ರದ ಸಂಗ್ರಹ ನರಸಿಂಗ ರೈ, ಕೃಪೆ: ಕೆ.ಪಿ. ರಾವ್) ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಅಲ್ಲಿಯ ಆದರ್ಶ ಮುಖ್ಯೋಪಾಧ್ಯಾಯ ಎಂ.ಎಸ್. ಏಕಾಂಬರರಾಯರ ನೆಚ್ಚಿನ ವಿದ್ಯಾರ್ಥಿಯಾಗಿ ಎಸೆಸೆಲ್ಸಿ ಮುಗಿಸಿದರು (೧೯೪೨). ಮುಂದಿನ ಎರಡು ವರ್ಷ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಅಧ್ಯಯನ (೧೯೪೨-೪೪); ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಇವರು ಆಯ್ದುಕೊಂಡಿದ್ದ ಐಚ್ಛಿಕ ವಿಷಯಗಳು. ಹಿಂದಿ ದ್ವಿತೀಯ ಭಾಷೆ, ಕಾಲೇಜಿನ ಭಾಷಣ, ಲೇಖನ ಸ್ಪರ್ಧೆಗಳಲ್ಲಿ ಇವರು ಸದಾ ಮುಂದು.

ಮುಂದೆ ಭೌತವಿಜ್ಞಾನ ಆನರ್ಸ್ ಓದುವ ಸಲುವಾಗಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಅರ್ಜಿ ಸಲ್ಲಿಸಿದರು. ಪ್ರಿನ್ಸಿಪಾಲ್ ಅಲೆಕ್ಸಾಂಡರ್ ಜಾನ್ ಬಾಯ್ಡ್ ನನ್ನ ಮಾವನ ಅಂಕಪಟ್ಟಿಯಿಂದ ಆಕರ್ಷಿತರಾಗಿ ಇವರಿಗೊಂದು ಪತ್ರ ಬರೆದರಂತೆ. “ನಿಮ್ಮ ಪ್ರಥಮ ಆದ್ಯತೆ ಭೌತವಿಜ್ಞಾನ ಎಂದಿದ್ದೀರಿ. ಇದಕ್ಕೆ ಪ್ರವೇಶ ಕೊಡಲು ಅಡ್ಡಿ ಏನೂ ಇಲ್ಲ. ಆದರೆ ಅಂಕಪಟ್ಟಿ ಪ್ರಕಾರ ನಿಮ್ಮ ಆಸಕ್ತಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಧಿಕವಾಗಿದೆಯೆಂದು ತೋರುತ್ತದೆ. ಎಂದೇ ಇಂಗ್ಲಿಷ್ ಆನರ್ಸನ್ನು ನೀವು ಸೇರುವುದು ಯುಕ್ತ ಎಂದು ಸಲಹೆ ನೀಡುತ್ತಿದ್ದೇನೆ. ಇದನ್ನು ನೀವು ಒಪ್ಪಿಕೊಂಡದ್ದಾದರೆ ನಿಮಗೆ ಕಾಲೇಜಿನ ವತಿಯಿಂದ ಕೈತ್‍ನೆಸ್ ವಿದ್ಯಾರ್ಥಿ ವೇತನ ನೀಡಲಾಗುವುದೆಂದು ತಿಳಿಸಲು ಸಂತೋಷಿಸುತ್ತೇನೆ.” ಮಾವ ಅಸ್ತು ಎಂದರು.

ಹೀಗೆ ೧೯೪೪ ಶೈಕ್ಷಣಿಕ ವರ್ಷಾರಂಭದಲ್ಲಿ ಅವರು ಕ್ರಿಶ್ಚಿಯನ್ ಕಾಲೇಜಿನ ಇಂಗ್ಲಿಷ್ ಆನರ್ಸ್ ತರಗತಿಗೆ ದಾಖಲಾದರು. ೧೯೪೭ರಲ್ಲಿ ಬಿಎ (ಆನರ್ಸ್) ಪದವೀಧರರಾದರು – ಮಾಮೂಲಿನಂತೆ ಪ್ರಥಮ ಶ್ರೇಣಿಯಲ್ಲಿ. ಮುಂದಿನ ಎರಡು ವರ್ಷ ಅಲ್ಲೇ ಇಂಗ್ಲಿಷ್ ಟ್ಯೂಟರ್, ತರುವಾಯ ಕಾರೈಕುಡಿ ಅಳಗಪ್ಪ ಚೆಟ್ಟಿಯಾರ್ ಕಾಲೇಜಿನಲ್ಲಿ ಉಪನ್ಯಾಸಕ. ಅದೇ ವೇಳೆಗೆ (೧೯೪೯) ಮಂಗಳೂರು ಸರ್ಕಾರೀ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆತದ್ದರಿಂದ ತವರಿಗೆ ಮರಳಿದರು. (ಚಿತ್ರದಲ್ಲಿ ಲೇಖಕ – ರಘುಚಂದ್ರ ಹೆಬ್ಬಾರ್)

ಜೊತೆಯಲ್ಲೇ ಅಖಿಲ ಭಾರತ ಸೇವಾ ವ್ಯವಸ್ಥೆಗೆ (ಐ.ಎ.ಎಸ್) ಸಂಬಂಧಿಸಿದ ಸ್ಪರ್ಧಾಪರೀಕ್ಷೆಗೆ ಅಧ್ಯಯನ ಕೈಗೊಂಡರು. ಆ ಪರೀಕ್ಷೆಯಲ್ಲಿ ಐದನೆಯ ಸ್ಥಾನ ಇವರಿಗೆ ಬಂದಿತು – ತಮಗೆ ಪ್ರಿಯವಾದ ವಿದೇಶಾಂಗ ಸೇವಾವ್ಯವಸ್ಥೆಯನ್ನು (ಐ.ಎಫ್.ಎಸ್) ಸ್ವಂತ ಇಷ್ಟದಿಂದ ಆಯ್ದುಕೊಂಡರು (೧೯೪೯). ಇಂಗ್ಲೆಂಡಿನಲ್ಲಿ ತಕ್ಕ ತರಬೇತಿ ಪಡೆದು ಮಾಸ್ಕೋ ದೂತಾವಾಸಕ್ಕೆ ನಿಯುಕ್ತರಾದರು (೧೯೫೧).

ಇಲ್ಲಿಯ ತನಕದ ಆರೋಹಣ ಪರ್ವ ಈಗ ಹಠಾತ್ತನೆ ಕೈದಾಯಿತು. ಅವರ ಆರೋಗ್ಯ ಹದಗೆಟ್ಟಿತು – ಬೆನ್ನೆಲುಬಿಗೆ ಕ್ಷಯಬಾಧೆ. ಹುದ್ದೆ ಖಾಯಂ ಆಗಿರದ ಈ ರೋಗಿಯನ್ನು ಭಾರತದ ಬೆಚ್ಚನೆಯ ಪರಿಸರಕ್ಕೆ ರವಾನಿಸಿದರು. ಮುಂಬಯಿಯ ಕೆ.ಇ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ. ಮುಂದೆ ಕಿನ್ನಿಕಂಬಳಕ್ಕೆ – ತಾಯಿಯಿರದ ತವರಿಗೆ, ವಿಶ್ರಾಂತಿಯ ಸಲುವಾಗಿ ವರ್ಗಾವಣೆ. ತಂದೆ, ಚಿಕ್ಕಮ್ಮ ಕೃಷ್ಣವೇಣಿ, ಅಣ್ಣ ಶ್ರೀಶ (೧೯೧೩-೭೭), ಬಂಧು ಮಿತ್ರರೆಲ್ಲರ ಅಕ್ಕರೆಯ ಆರೈಕೆ ಹಾರೈಕೆಗಳ ಫಲವಾಗಿ ಇವರು ಚೇತರಿಸಿಕೊಂಡರು ಮಾತ್ರವಲ್ಲ, ೧೯೫೬ರಲ್ಲಿ ಹೊಸ ವೈದ್ಯಕೀಯ ತಪಾಸಣೆಯನ್ನು ಯಶಸ್ವಿಯಾಗಿ ಎದುರಿಸಿ ತೇರ್ಗಡೆ ಹೊಂದಿದರು ಕೂಡ. ಹೀಗೆ ನನ್ನ ಮಾವ ಮರುವುಟ್ಟು ಪಡೆದು ವಿದೇಶಾಂಗ ಸೇವೆಗೆ ಮರಳಿದರು.

ತಮ್ಮ ಸಮೀಪ ಸಂಬಂಧಿ ವಿಜಯಲಕ್ಷ್ಮಿ (೧೯೩೭) ಜೊತೆ ದೇವರಾಯರ ಮದುವೆ ನಡೆಯಿತು (೧೯೫೯). ಈಕೆ ರಾಜಕೀಯಶಾಸ್ತ್ರದಲ್ಲಿ ದೆಹಲಿ ವಿವಿ ನಿಲಯದ ಸ್ನಾತಕೋತ್ತರ ಪದವೀಧರೆ. ಈ ದಂಪತಿಗಳ ಏಕೈಕ ಪುತ್ರ – ದುರ್ಗಾಪ್ರಸಾದ (೧೯೬೦) ಮೂರು ದಶಕ ಪರ್ಯಂತ ವಿವಿಧ ದೇಶಗಳಲ್ಲಿ ವೃತ್ತಿನಿರತರಾಗಿದ್ದು ಫೆಬ್ರುವರಿ ೧೯೮೫ರಲ್ಲಿ ನಿವೃತ್ತರಾದರು. ಆಗ ಅವರು ಬಲ್ಗೇರಿಯಾ ದೇಶದಲ್ಲಿ ಭಾರತದ ರಾಯಭಾರಿ. ಮುಂದೆ ದೀರ್ಘಕಾಲ ಬಾಳಲಿಲ್ಲ. ಈ ಚಿರಂತನ ಜ್ಞಾನಪರಿವ್ರಾಜಕನ ಚೇತನ ಜುಲೈ ೨೫, ೧೯೮೫ರಂದು ಅನಂತಲೀನವಾಯಿತು.

ವ್ಯಕ್ತಿತ್ವ ವೈಲಕ್ಷಣ್ಯಗಳು

ಮಾವನಿಗೂ ನನಗೂ ವಯೋಮಾನಾಂತರ ಸುಮಾರು ೬ ವರ್ಷ – ಅಂದರೆ, ನಾನು ಪ್ರೌಢಶಾಲಾಶಿಕ್ಷಣ ಮುಗಿಸಿ ಕಣ್ಣುಬಿಡುತ್ತಿದ್ದಾಗಲೇ ಅವರು ವೃತ್ತಿಯಲ್ಲಿ ಶಿಖರಾರೋಹಿ ಆಗಿದ್ದರು. ವಿದೇಶಾಂಗ ಸೇವೆ ಸೇರುವ ಮೊದಲು ೪ ವರ್ಷ ಕಾಲ ನಾನು ಮಂಗಳೂರಿನಲ್ಲಿ ಅವರೊಂದಿಗೆ ನೆಲಸಿದ್ದೆ. ಮುಂದೆ ಕಿನ್ನಿಕಂಬಳದಲ್ಲಿ (ತಂದೆ ಮನೆಯಲ್ಲಿ) ಅವರು ಚೇತರಿಸಿಕೊಳ್ಳುತ್ತಿದ್ದಾಗ ಅವರನ್ನು ಆಗಾಗ ಹೋಗಿ ಕಾಣುತ್ತಿದ್ದೆ. ಅಲ್ಲದೇ ಅವರು ಮೂರು ವರ್ಷಗಳಿಗೊಮ್ಮೆ ಭಾರತಕ್ಕೆ ಮರಳುತ್ತಿದ್ದಾಗ ನಮ್ಮಲ್ಲಿಗೆ ಬಂದೇ ಬರುತ್ತಿದ್ದರು. ಅವರದು ಅಂತರ್ಮುಖಿತ್ವ ಎಂದು ಅರಿತುಕೊಂಡೆ.

ತಮ್ಮ ಕಾಲೇಜು ವಿದ್ಯಾಭ್ಯಾಸ ಪೂರ್ತಿಗೊಳಿಸುವ ತನಕವೂ ಮಾವ ಅತ್ಯಂತ ಸರಳ ಜೀವನ ಬಾಳಿದರು. ಪಾದರಕ್ಷೆಗಳಿಲ್ಲ, ಕೈಗಡಿಯಾರ ಕಟ್ಟಲಿಲ್ಲ. ಶೋಕೀ ಬಾಳೆಂದರೆ ಒಗ್ಗದಿಕೆ. ಖಾದಿ ಬಟ್ಟೆಯ ತುಂಡು ಪಂಚೆ, ಜುಬ್ಬ ಮಾತ್ರ ಉಡುಪು. ಅವರ ಶಿಕ್ಷಣ ವೆಚ್ಚವನ್ನು ಅಣ್ಣ ಶ್ರೀಶರಾಯರು (ಇವರು ಮದುವೆ ಆಗಲಿಲ್ಲ, ಮನೆ ಕಟ್ಟಲಿಲ್ಲ), ತಮ್ಮ ಅಲ್ಪ ವೇತನದಿಂದಲೇ, ಭರಿಸುತ್ತಿದ್ದುದರಿಂದ ಅಗ್ರಜನಿಗೆ ಕನಿಷ್ಠ ಹೊರೆ ಬೀಳುವಂತೆ ಎಚ್ಚರವಹಿಸಿದರು ಈ ಮಹಾಮೇಧಾವೀ ಅನುಜ. ಸರಳ ಜೀವನ ಗಹನ ಚಿಂತನ – ಇದು ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣ.

ಎಡಗೈ ಬೆರಳುಗಳ ಉಗುರುಗಳನ್ನು ನೀಳವಾಗಿ ಬೆಳೆಸಿದರು. ಇತ್ತ ಮೀಸೆಯ ಕವಲುಗಳನ್ನು ಪುಷ್ಕಳವಾಗಿ ತಿದ್ದಿ ತೀಡಿದರು. ಹೀಗೆ ಹುಲಿಮೀಸೆ, ಹುಲಿಯುಗುರಿನ ಮಾವ. ಈ ವಿಚಿತ್ರ ಭಂಗಿಯಿಂದಾಗಿಯೇ, ಐ.ಎ.ಎಸ್ ಮೌಖಿಕ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆಯುವಂತಾಯಿತು. ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಭಾರತದ ರಾಯಭಾರಿಗೆ ಇಂಥ ವಿಲಕ್ಷಣ ಮೀಸೆ ಭೂಷಣವಲ್ಲ ಎಂದು ಪರೀಕ್ಷಕರು ಹಿತವಚನ ನುಡಿದಾಗ ಮಾವ ತಬ್ಬಿಬ್ಬು. ಪರಿಣಾಮವಾಗಿ ಅವು ಛೇದನಗೊಂಡವು! “ಸಮೀಪ ಬಂಧುಗಳ ಆಕ್ಷೇಪಣೆ ಲೆಕ್ಕಿಸದೆ ಮೀಸೆ ಉಗುರು ಸಂರಕ್ಷಣೆಯ ಛಲ ತೊಟ್ಟೆ. ನನಗೆ ನಾನೇ ಗರಿಷ್ಠ ಹಾನಿ ಮಾಡಿಕೊಂಡೆ. ಮತ್ತೆ ನಿರುಪಾಯನಾಗಿ ನಾನೇ ಅವನ್ನು ಛೇದಿಸಿ ಹದಗೊಳಿಸಿದೆ. ಇದು ಮೀಸೆಯ ದುರದೃಷ್ಟ!” ಎನ್ನುತ್ತಿದ್ದರು, ನಖ-ಶ್ಮಶ್ರುಕೂರ್ಚ ವಿಮೋಚಿತ ಮಾವ.

ಅವರ ಪ್ರಖರ ಕಾಂತ ವ್ಯಕ್ತಿತ್ವದ ಎರಡನೆಯ ಪ್ರಮುಖ ರೇಖೆ ಜೀವ ಕಾರುಣ್ಯ – ನಿರ್ಮಲಾಂತಃಕರಣ. ಇದಕ್ಕೆ ಸಾಕ್ಷಿಯಾಗಿ ಅನೇಕ ನಿದರ್ಶನಗಳನ್ನು ಉಲ್ಲೇಖಿಸಬಹುದು. ಖುದ್ದು ನನ್ನದೇ ಅನುಭವ ಹೇಳುತ್ತೇನೆ.

ಹನ್ನೆರಡನೆಯ ವಯಸ್ಸಿನಲ್ಲಿ ನಾನು ೭ನೆಯ ಇಯತ್ತೆಗೆ ತೇರ್ಗಡೆಗೊಂಡು ಮುಂದಿನ ಪ್ರೌಢಶಾಲಾ ಶಿಕ್ಷಣಕ್ಕೆ ನರಿಮೊಗರು ಎಂಬ ಹಳ್ಳಿಯಿಂದ ೫ ಮೈಲು ದೂರದ ಪುತ್ತೂರು ಪೇಟೆಗೆ ದಿನವೂ ನಡೆದು ಹೋಗಿ ಹಿಂತಿರುಗಬೇಕಾಗಿತ್ತು. ನನ್ನ ಈ ಚಾರಣ ಜ್ಞಾನಯಜ್ಞವನ್ನು ಕಣ್ಣಾರೆ ಕಂಡ ಮಾವ ತುಂಬ ಪರಿತಪಿಸಿದರು. ಆಗ ಅವರಿನ್ನೂ ಉದ್ಯೋಗಿ ಆಗಿರಲಿಲ್ಲ. ಆದರೂ ತಮ್ಮ ಅಣ್ಣನೊಂದಿಗೆ (ಶ್ರೀಶ) ಈ ವಿಷಯ ಪ್ರಸ್ತಾವಿಸಿ, ಮುಂದಿನ ಶಿಕ್ಷಣದ ಸಲುವಾಗಿ ನನ್ನನ್ನು ಮಂಗಳೂರಿಗೆ ಕರೆದೊಯ್ದರು. ಅವರ ಅಣ್ಣ ಮತ್ತು ಅಕ್ಕಂದಿರ ಮನೆಗೆ ಕಿರಿಯ ಬಂಧುವಾಗಿ ನಾನೂ ಸೇರಿದೆ.

ನಾನು ಲೆಕ್ಕದಲ್ಲಿ (ಗಣಿತ) ತೀರ ಹಿಂದೆ. ಮಾವನೋ ಬಲು ಮುಂದೆ. ಮಂಗಳೂರಿನ ನಮ್ಮ ಬಿಡಾರದಲ್ಲಿ ನನಗೆ ಲೆಕ್ಕ ಕಲಿಸಿಯೇ ಬಿಡಲು ಅವರು ಮುಂದಾದರು – ಮೀಸೆ ಹುರಿಗೈದು, ಉಗುರುಗಳನ್ನು ಕೆರೆ ಕೆರೆದು! ಅವರೊಮ್ಮೆ ನನ್ನ ದಡ್ಡತನದಿಂದ ರೋಸಿಹೋಗಿ ತಲೆಗೆ ಎರಡು ಕುಟ್ಟಿ ಬೈದದ್ದು ಈಗಲೂ ನನಪಿದೆ. “ಶೌಚದ ಬಳಿಕ ನೀನು ಹಿಂತಿರುಗಿ ನೋಡಿರುವೆಯಾ? ಮಲದೊಂದಿಗೆ ನಿನ್ನ ಮಿದುಳು ಕೂಡ ವಿಸರ್ಜನೆಗೊಂಡಿರಬೇಕು.” ಆದರೂ ನಾನು ಜಪ್ಪಯ್ಯ, ಗೊಳ್ಳನೆ ನಕ್ಕೆ ಅವರ ನುಡಿಮುತ್ತಿಗೆ. ಇದು ಅವರನ್ನು ಇನ್ನಷ್ಟು ರೇಗಿಸಿರಬೇಕು – ಎರಡನೆಯ ಕಂತಿನ ಕುಟ್ಟಿ ಪ್ರಹಾರ ನನ್ನ ದಪ್ಪ ಮಂಡೆ ಮೇಲೆ. ನಾನು ಬೊಬ್ಬಿಟ್ಟೆ. ಅವರು ಎರಡೂ ಕೈಗಳಿಂದ ತಮ್ಮ ತಲೆಯನ್ನೇ ಚಚ್ಚಿಕೊಂಡರು.

ದೇವಮಾವ ಸಾಹಸಪ್ರಿಯ. ತೋಡು ಹೊಳೆಗಳಿಗೆ ಅಡ್ಡ ಕಟ್ಟಿದ್ದ ಬಿದಿರು – ಅಡಿಕೆಮರ ಸಂಕಗಳನ್ನು ಮಂಗನಂತೆ ಕುಪ್ಪಳಿಸಿ ನೆಗೆದು ದಾಟುತ್ತಿದ್ದರು. ಬೆಟ್ಟ ಏರುವುದರಲ್ಲಿಯೂ ಇಳಿಯುವುದರಲ್ಲಿಯೂ ಅವರು ಸಾಕ್ಷಾತ್ ಹನೂಮಂತ ಕುಲಜರೇ. ಅವರ ಕಪಿಸೈನ್ಯದ ಪದಾತಿಗಳು ನಾವೆಲ್ಲ. ಅವರೇ ನಮಗೆ ಸ್ಫೂರ್ತಿಯ ಚಿಲುಮೆ, ಜ್ಞಾನಜ್ಯೋತಿ, ಆದರ್ಶ ಮಾನವ.

ಸಾಯಂಕಾಲವಾಯಿತೆಂದರೆ ಅವರು ನಮ್ಮನ್ನೆಲ್ಲ ಸೇರಿಸಿಕೊಂಡು ಗುಡ್ಡೆಗೋ ಕಿನಾರೆಗೋ ದಾಳಿಯಿಡುವುದು ಮಾಮೂಲು. ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಅವರು ಮಕ್ಕಳಿಂದ ಬಗೆಬಗೆಯ ಆಟಗಳನ್ನು ಆಡಿಸುತ್ತಿದ್ದರು. ಇಲ್ಲೆಲ್ಲ “ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ” ಅವರ ಜಾಯಮಾನ. ಕತೆಗಟ್ಟಿ ನವುರಾಗಿ ಕಡೆದು ನಗೆಯ ಬೆಳುದಿಂಗಳು ಹರಿಸುವುದು ಮಾವನ ವ್ಯಕ್ತಿತ್ವದ ಮೂರನೆಯ ಮುಖ್ಯ ಗುಣ. ಮನೋರಂಜನೆಯೊಂದಿಗೆ ಚಿಕಿತ್ಸಕ ಚಿಂತನ ಪ್ರೇರಣೆಯೂ ಸೇರಿರುತ್ತಿತ್ತು. ಅವರ ಕತೆ ಮತ್ತು ಕಲೆಗಾರಿಕೆಗಳಲ್ಲಿ.

ಮಾವ ಅಂದು ಹೆಣೆದ – ಪತ್ರೊಡೆ ರಾಮಭಟ್ಟರ ಕತೆ:

ಕೆಸುವಿನ ಪತ್ರೊಡೆ ಎಂಬುದು ರಾಮಭಟ್ಟ ದಂಪತಿಗಳ ಪಂಚಪ್ರಾಣ ಖಾದ್ಯ. ಒಂದು ಮುಂಜಾನೆ ಭಟ್ಟರ ಮನೆಯಲ್ಲಿ ತಯಾರಿಸಲಾದ ಪತ್ರೊಡೆಯ ಘಮಘಮ ಪರಿಮಳ ಮನೆಯೊಳಗೆ ಮಾತ್ರವಲ್ಲ ಹೊರಗೂ ಹಬ್ಬಿದೆ. ಗಂಡ ಹೆಂಡಿರು ಪತ್ರೊಡೆಯನ್ನು ಸಮವಾಗಿ ಹಂಚಿಕೊಂಡು ಆಸ್ವಾದಿಸುವುದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟರಲ್ಲೇ ಗೆಳೆಯ ಶಂಕರಭಟ್ಟ ಅಲ್ಲಿಗೆ ಆಗಮಿಸಬೇಕೇ! ಹುಳಿ ಮೋರೆಯ ಹೆಂಡತಿ ಈ ಅನಾಹ್ವಾನಿತ ಅನಿಷ್ಟವನ್ನು ನಿವಾರಿಸುವ ಸಲುವಾಗಿ ಒಂದು ಲೋಟ ಕಣ್ಣ ಕಾಫಿ (ಡಿಕಾಕ್ಷನ್ ಮಾತ್ರ) ಅವನ ಮುಂದೆ ಕುಕ್ಕಿ ಇಡುತ್ತಾಳೆ. ಅವರ ಇಂಗಿತ ಗ್ರಹಿಸಿದ ಶಂಕರಭಟ್ಟ ಕಣ್ಣ ಕಾಫಿ ಹೀರಿ ಪತ್ರೊಡೆಯ ಅಪ್ಯಾಯಮಾನ ಆಘ್ರಾಣನೆಯಿಂದಲೇ ತೃಪ್ತನಾಗಿ ಮನವಿಲ್ಲದ ಮನದಿಂದ ನಿರ್ಗಮಿಸುತ್ತಾನೆ. ತತ್ಕ್ಷಣ ಗಂಡಹೆಂಡಿರು ಪತ್ರೊಡೆಯನ್ನು ಎರಡು ಸಮಪಾಲುಗಳಾಗಿ ಇಬ್ಬರಿಗೂ ಅನ್ಯಾಯವಾಗದ ತೆರದಲ್ಲಿ, ಹಂಚಲು ಉಪಾಯ ಹುಡುಕುತ್ತಾರೆ. ಗಂಡನ ಕಣ್ಣಿಗೆ ಹೆಂಡತಿಯೂ ಈಕೆಯ ಕಣ್ಣಿಗೆ ಆತನೂ ಬಟ್ಟೆ ಕಟ್ಟಿ ಖಾದ್ಯಬಟ್ಟಲಿನ ಎದುರುಬದಿರು ಕೂರುತ್ತಾರೆ. ಗಂಡನ ಬಾಯಿಗೆ ಹೆಂಡತಿಯೂ ಹೆಂಡತಿಯ ಬಾಯಿಗೆ ಗಂಡನೂ ಪತ್ರೊಡೆ ತುಂಡುಗಳನ್ನು ಕ್ರಮವಾಗಿ ಉಣಿಸಬೇಕೆಂಬ ಷರತ್ತಿನೊಡನೆ. ಈ ತಿನ್ನಿಸು-ತಿನ್ನು ಹೋರಾಟದಲ್ಲಿ ಗಂಡ ಹೆಂಡಿರಿಬ್ಬರೂ ಪರಸ್ಪರ ಆರೋಪಮಾಡಿಕೊಳ್ಳುತ್ತಾರೆ – ಆತ ಊಡಿದ ತುಂಡು ಚಿಕ್ಕದಾಯಿತೆಂದು ಈಕೆಯೂ, ಈಕೆ ಉಣಿಸಿದ ತುತ್ತು ಕಿರಿದಾಯಿತೆಂದು ಆತನೂ ದೂಷಿಸುತ್ತಾರೆ.

ಈ ಕದನ ಮುಂದುವರಿಯುತ್ತಿದ್ದಾಗ ಶಂಕರಭಟ್ಟನ ಪುನರಾಗಮನವಾಗಿದೆ – ತಾನು ಆ ಹಿಂದೆ ಮರೆತುಹೋಗಿದ್ದ ಛತ್ರಿಯನ್ನು ಒಯ್ಯುವ ಸಲುವಾಗಿ. ಅಲ್ಲಿ ಕಂಡ ಅನಿರೀಕ್ಷಿತ ದೃಶ್ಯದಿಂದ ಆತ ಅವಾಕ್ಕಾಗಿದ್ದಾನೆ. ಮುಸಿಮುಸಿ ನಗುತ್ತ ಅವರಿಬ್ಬರ ನಡುವೆ ಪಕ್ಕಕ್ಕೆ ಮೆತ್ತಗೆ ನುಸುಳಿದ್ದಾನೆ. ಹೆಂಡತಿಯ ತುತ್ತು ಮುಂದೆ ಬಂದಾಗ ತಾನೇ ಮಂಡೆಯೊಡ್ಡಿ ಬಾಯಿ ಕಳೆದು ಅದನ್ನು ನುಂಗಿದ್ದಾನೆ. ಗಂಡನ ಪಾಳಿ ಬಂದಾಗಲೂ ಹೀಗೆಯೇ ಮಾಡಿದ್ದಾನೆ. ಇವನಿಗೆ ಉಭಯ ಲಾಭ! ತಾಳ್ಮೆ ಕಳೆದುಕೊಂಡ ಗಂಡ ತನ್ನ ಮಡದಿಯ ಕೆನ್ನೆಗೊಂದು ಬಾರಿಸಿಯೇ ಬಿಟ್ಟಿದ್ದಾನೆ – ಆ ಹೊಡೆತ ಗುರಿತಪ್ಪಿ ಶಂಕರಭಟ್ಟನ ಕೆನ್ನೆಗೆ ಬಿದ್ದಿದೆ, “ಅಯ್ಯೋ!” ಎಂಬ ಆರ್ತನಾದ ಇವನಿಂದ ಹೊರಹೊಮ್ಮಿದೆ. ಗಾಬರಿಗೊಂಡ ದಂಪತಿಗಳು ಒಡನೆ ಕಣ್ಣುಗಳಿಗೆ ಸುತ್ತಿದ್ದ ಬಟ್ಟೆ ಬಿಚ್ಚಿ ನೋಡಿದಾಗ ….. ಇಲ್ಲಿಗೆ ಪತ್ರೊಡಾಯಣ ಮುಗಿಯಿತು.

ನಿರೀಶ್ವರತೆಯಿಂದ ಈಶ್ವರತೆಯೆಡೆಗೆ

ಮೊದಲಿಗೆ ದೇವಮಾವ ಒಬ್ಬ ಉಗ್ರ ನಿರೀಶ್ವರವಾದಿ. ಜಪ, ತಪ, ಪೂಜೆ, ಪುರಸ್ಕಾರ ಸ್ವತಃ ಕೈಗೊಳ್ಳಲಿಲ್ಲ. ಇವರಿಗೆ ಉಪನಯನವೂ ಆಗಿರಲಿಲ್ಲ. ಸದ್ವರ್ತನೆ, ಸಭ್ಯತೆ ಮತ್ತು ಸಂಸ್ಕಾರಗಳನ್ನು ನಿಜಜೀವನದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಿಸುತ್ತಿದ್ದರು. ಆಷಾಢಭೂತಿತ್ವವನ್ನು ಮನಸಾರೆ ಹಳಿಯುತ್ತಿದ್ದರು. ಆಧ್ಯಾತ್ಮಿಕ ಅಥವಾ ಅಲೌಕಿಕ ವಿಚಾರಗಳು ಅವರನ್ನು ಆಕರ್ಷಿಸಲಿಲ್ಲ. ಹಾಗೆಂದು ತಮ್ಮ ವಿಚಾರಗಳನ್ನು ಇತರರ ಮೇಲೆ ಎಂದೂ ಹೇರಲಿಲ್ಲ. ಸ್ವಧರ್ಮನಿಷ್ಠೆ ಮತ್ತು ಪರಮತಗೌರವ ಮಾವನ ಸಂಕೀರ್ಣ ವ್ಯಕ್ತಿತ್ವದ ನಾಲ್ಕನೆಯ ಎಳೆ.

ಆಧ್ಯಾತ್ಮಿಕ ಮದ್ಯಪಾನದಿಂದ ಉನ್ಮತ್ತನಾದ ವಿಪ್ರೋತ್ತಮನೊಬ್ಬ ಮಾವನನ್ನು ಆಖಾಡಕ್ಕೆ ಬಲಾತ್ಕಾರವಾಗಿ ಎಳೆದ. ಲವಲೇಶ ಉದ್ವಿಗ್ನತೆ ತಳೆಯದೆ ಇವರು ನಿರೀಶ್ವರವಾದವನ್ನು ಮಂಡಿಸಿದರು. ಪ್ರಕೃತಿಯೊಂದೇ ಸತ್ಯ; ದೇವರು, ಸ್ವರ್ಗ, ನರಕ, ಪುನರ್ಜನ್ಮ ಮುಂತಾದವು ಮಾನವ ಕಲ್ಪನೆಗಳು – ಇದು ಮಾವನ ವಿಚಾರಾಧಾರಿತ ನಿಲವು. ಅಧ್ಯಾತ್ಮವಾದಿ ಉದ್ರಿಕ್ತನಾಗಿ ತನ್ನ ಕಂಠತ್ರಾಣದಿಂದ ಮಾವನ ವಾದವನ್ನು ಮುಳುಗಿಸಿ ತಾನು ಗೆದ್ದೆನೆಂದು ಬೀಗಿದ! ಮಿದುಳು ಸೋತಲ್ಲಿ ಗಳ (ಕಂಠ) ಅಥವಾ ಸ್ನಾಯು ಮುಂಬರುವುದು ನಿಯಮವೇ?

ಇಂಥ ನಿರೀಶ್ವರವಾದಿ ದೇವಮಾವ ಹಠಾತ್ತನೆ ದೇವಾರಾಧಕರಾದದ್ದೊಂದು ನಿಗೂಢ ಸಂಗತಿ. ಅವರು ವಿದೇಶಾಂಗ ಸೇವೆಗೆ ಸೇರಿದ ತರುಣದಲ್ಲೇ ಭೀಕರ ರೋಗಬಾಧಿತರಾದ ಘಟನೆಯನ್ನು ಹಿಂದೆ ಪ್ರಸ್ತಾವಿಸಿದೆ. ಕೆಲಸ ಖಾಯಂ ಆಗಿರದಿದ್ದ ಈ ರೋಗಿಯ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸುವಂತಿರಲಿಲ್ಲ. ಅಣ್ಣ ಶ್ರೀಶರಾಯರ ಮೇಲೆ ಈ ಹೊರೆ ಬಿತ್ತು. ಇವರಾದರೂ ಬಡತನದ ಬಾಳು. ರುಗ್ಣ ಶಯ್ಯೆಯಲ್ಲಿದ್ದ ದೇವಮಾವನನ್ನು ರೋಗದ ಜೊತೆಗೆ ಈ ಚಿಂತೆಯೂ ಬಹಳವಾಗಿ ಬಾಧಿಸಿತು. ಪರಿಣಾಮ: ಆತ್ಮಹತ್ಯೆಯ ವಿಫಲ ಪ್ರಯತ್ನ. ತಮ್ಮನನ್ನು ಉಳಿಸಲು ಶ್ರೀಶ ಮಾವ ಪಟ್ಟ ಶ್ರಮ ಊಹಾತೀತ. ಹಲವಾರು ಅನುಕಂಪಪೂರಿತ ಸ್ನೇಹಿತರ ಪ್ರಯತ್ನದಿಂದ ಕೊನೆಗೂ ಸರ್ಕಾರ ಚಿಕಿತ್ಸೆಯ ಖರ್ಚನ್ನು ಹೊರಲು ಮುಂಬಂದಿತು. ತಾವು ಸಾವಿನಿಂದ ಪಾರಾದದ್ದು ಮತ್ತು ಈ ಅನಿರೀಕ್ಷಿತ ಆರ್ಥಿಕ ನೆರವು ಒದಗಿದ್ದು ಮಾವನಲ್ಲಿ ದೈವ ಚಿಂತನೆಯನ್ನು ಪ್ರೇರಿಸಿರಬೇಕು. ಅಂದಿನಿಂದ ಮುಂದಕ್ಕೆ ಅವರೊಬ್ಬ ಶ್ರದ್ಧಾನ್ವಿತ ಭಗವಚ್ಚಿಂತಕರಾದರು.

ಆರಾಧನಾ ಎಂಬ ಸಣ್ಣಕಥೆಗಳ ಸಂಕಲನದ `ಲೇಖಕನ ವಿಜ್ಞಾಪನೆ’ಯಲ್ಲಿ ಅವರೇ ಬರೆದಿದ್ದಾರೆ (೧೯೫೬) “ನಾನು ಹಿಂದಕ್ಕೆ – ಧರ್ಮ – ಭಕ್ತಿ – ಭಾವಗಳ ಮೃದುವಾದ ಭರ್ತ್ಸನೆ ಮಾಡಿದ್ದೆ….. ನಿರೀಶ್ವರವಾದಿ ಎಂದು ಒಣ ಜಂಭದಿಂದ ನಟಿಸುತ್ತಿದ್ದೆ. ಆದರೆ ಈಗ ಭಗವಂತನ ಮುನಿಸಿನ ಪೆಟ್ಟು ತಿಂದು ತಿಂದು ಹಣ್ಣಾಗಿ ದೇವರ ಭಯವುಂಟಾಗಿ – ಜ್ಞಾನದ ಆರಂಭವೂ ಆಗಿದೆಯೋ ಏನೋ…..” ಬದಲಾದ ತಮ್ಮ ಭಾವನೆಗಳನ್ನು ಒಂದು ಕವಿತೆಯ ಸಾಲುಗಳನ್ನು ಉದ್ಧರಿಸಿ ಅರುಹಿದ್ದಾರೆ:

ಹಗಲೆಲ್ಲ ಬೆಳಗುತಿರಲು ಜಗವೆಲ್ಲ ನನ್ನದೆಂದೆ
ಬಲು ಹಿಗ್ಗಿ ಗರ್ವದಿಂದ ನಿನ್ನ ಸ್ಮರಣೆಯಿರದೆ ಮೆರೆದೆ
ಅಪರಾಧವನ್ನು ಕ್ಷಮಿಸೀ ಕೃಪೆದೋರೋ ಕತ್ತಲಲ್ಲೀ……

ಅಂದಿನಿಂದ ಮಾವ ಕಟೀಲು ದುರ್ಗಾಪರಮೇಶ್ವರಿಯ ಅನನ್ಯ ಭಕ್ತ. ತಮ್ಮ ಸುಪುತ್ರನಿಗೆ ದುರ್ಗಾಪ್ರಸಾದ ಎಂಬ ಅನ್ವರ್ಥಕ ಹೆಸರಿಟ್ಟದ್ದನ್ನೂ ಇಲ್ಲಿ ಸ್ಮರಿಸಬೇಕು. ಪ್ರತಿ ಸಲವೂ ಊರಿಗೆ ಬಂದಾಗ ಅವರು ಮೊದಲು ಕಟೀಲು (ದೇವಿ) ಮತ್ತೆ ಕಿನ್ನಿಕಂಬಳಕ್ಕೂ (ತಂದೆ) ಕೊನೆಗೆ ಮಂಗಳೂರಿಗೂ (ಅಣ್ಣ) ಕಡ್ಡಾಯವಾಗಿ ಭೇಟಿ ನೀಡುತ್ತಿದ್ದರು: ದೇವಿ-ಪಿತೃ-ಅಗ್ರಜ ಸಾಹಚರ್ಯ ಇವರಲ್ಲಿ ವಿನೂತನ ಚೇತನ ಪ್ರೇರಿಸುತ್ತಿತ್ತು. ತಂದೆ ಕೃಷ್ಣರಾಯರು ೧೯೭೫ರಲ್ಲಿಯೂ ಅಣ್ಣ ಶ್ರೀಶರಾಯರು ೧೯೭೭ರಲ್ಲಿಯೂ ಮಡಿದಾಗ ದೇವಮಾವನ ಕಿನ್ನಿಕಂಬಳ ಯಾತ್ರೆ ಕೈದಾಯಿತು. ನಿರೀಶ್ವರತೆಯಿಂದ ಈಶ್ವರತೆಯೆಡೆಗಿನ ಮಾವನ ಬೌದ್ಧಿಕ ಉತ್ತರಣೆ ಅವರ ಜೀವನದಲ್ಲಿ ಒಂದು ಪರ್ವಬಿಂದು. ಅಂತೆಯೇ ಆ ಹಿರಿ ಚೇತನದ ಇನ್ನೂ ಒಂದು ಎಳೆ (ಐದನೆಯದು).

ಸಾಹಿತ್ಯಪ್ರೇಮ

ಅವರು ವಿನೋದ ಮತ್ತು ವ್ಯಂಗ್ಯ ಪತ್ರಿಕೆಗಳನ್ನು ಮೆಚ್ಚುತ್ತಿದ್ದರು. ತಮ್ಮ ಮಿತಿಯೊಳಗೆ ಪುಸ್ತಕ ಖರೀದಿಸಿ ಓದಿ ಸವಿದು ವಿವರಿಸುವುದು ಅವರ ಪ್ರಿಯ ಹವ್ಯಾಸ. ಕಾರಂತ, ಕುವೆಂಪು, ಡಿವಿಜಿ, ಮಾಸ್ತಿ, ಬೇಂದ್ರೆ ಮೊದಲಾದ ಕನ್ನಡ ಸಾಹಿತಿಶ್ರೇಷ್ಟರ ಕೃತಿಗಳು ಅವರ ಖಾಸಗಿ ಗ್ರಂಥಾಲಯವನ್ನು ಅಲಂಕರಿಸಿದ್ದುವು. ಕಾರಂತರ ಕಾದಂಬರಿಗಳು ಅವರಿಗೆ ಅಚ್ಚುಮೆಚ್ಚು – ಚೋಮನ ದುಡಿ, ಮುಗಿದ ಯುದ್ಧ, ಮರಳಿ ಮಣ್ಣಿಗೆ, ಬೆಟ್ಟದ ಜೀವ ಇವು ಮಾವ ಹೆಚ್ಚು ಮೆಚ್ಚಿದ ಕಾರಂತಕೃತಿಗಳು. ಇವು ಯಾವುದೇ ವಿದೇಶೀ ಶ್ರೇಷ್ಠತಮ ಕಾದಂಬರಿ ಜೊತೆ ಸರಿದೊರೆಯಾಗಿ ನಿಲ್ಲಬಲ್ಲವು ಎಂದು ಅವರು ಘೋಷಿಸುತ್ತಿದ್ದರು.

ಕಾರಂತರು ಪುತ್ತೂರುವಾಸಿ ಆಗಿದ್ದಾಗ ದೇವಮಾವ `ಬಾಲವನ’ದಲ್ಲಿ ಅವರೊಂದಿಗೆ ಸಾಹಿತ್ಯಸಲ್ಲಾಪ ನಡೆಸಿದ್ದರು. ಅದಕ್ಕೆ ನಾನೊಬ್ಬ ಮೂಕ ಸಾಕ್ಷಿ. ಅವರಿಬ್ಬರೂ ಪರಸ್ಪರ ಸಂಪರ್ಕವನ್ನು ಮುಂದುವರಿಸಿಕೊಂಡು ಹೋದರು. ಉಭಯರೂ ಸಮಾನ ಚಿಂತನಶೀಲರಾಗಿದ್ದುದೇ ಇದರ ಕಾರಣ.

ಮದ್ರಾಸಿನಲ್ಲಿ ಕ್ರಿಶ್ಚಿಯನ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗಲೇ ಅವರು ಸಣ್ಣ ಕತೆಗಳನ್ನು ಬರೆಯಲಾರಂಭಿಸಿದ್ದರು. ಸ್ವತಃ ಮಾಸ್ತಿಯವರೇ ಇವನ್ನು ಮೆಚ್ಚಿ ತಮ್ಮ ಜೀವನ ಮಾಸಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಒಮ್ಮೆ ಮಾವ ಕಳಿಸಿದ ಕೆಲವು ಕತೆಗಳು ಪ್ರಕಟವಾಗದಿದ್ದಾಗ ಅವು ಅಸ್ವೀಕೃತವಾದರೆ ಹಿಂತಿರುಗಿಸಬೇಕೆಂದು ವಿನಂತಿಸಿದರಂತೆ. ಮಾಸ್ತಿ ಅವರು ಒಡನೆ ಉತ್ತರ ಬರೆದರು. “ನಿಮ್ಮ ಕತೆಗಳನ್ನು ಸ್ವೀಕರಿಸದಿರುವ ದಾರ್ಷ್ಟ್ಯ ಜೀವನಕ್ಕೆ ಬರುವುದುಂಟೇ?” ಮುಂದೆ ಆ ಕತೆಗಳು ಪ್ರಕಟವಾದುವು. ಜೀವನ ಕಾರ್ಯಾಲಯ ಮಾವನ ಹುಚ್ಚ ಮುನಸೀಫ ಮತ್ತು ಇತರ ಕತೆಗಳು ಸಂಕಲನ ಪ್ರಕಟಿಸಿದ್ದು (೧೯೪೯) ಈಗ ಇತಿಹಾಸ.

ಮುದ್ದಣನ ಯಮಲೋಕ ಯಾತ್ರೆ ಎಂಬ ಕತೆಯನ್ನು ಮಾವ ಮಂಗಳೂರಿನ ಒಂದು ಮಾಸಪತ್ರಿಕೆಯಲ್ಲಿ ಪ್ರಕಟಿಸಿದರು: ನಗರದ ಧರ್ಮಾಸ್ಪತ್ರೆಯೊಂದರಲ್ಲಿ ಮಡಿದ ಬಡರೋಗಿಯೊಬ್ಬನ ದಾರುಣ ಕತೆ, ಜೀವನ ವ್ಯಥೆ. ವೈದ್ಯರ ಮತ್ತು ಆಯಾಗಳ ದುಡ್ಡಿನ ದಾಹದಿಂದ ಈತ ಬವಣೆ ಅನುಭವಿಸಿ ಪರಲೋಕವಾಸಿ ಆಗಬೇಕಾಯಿತು. ಆ ರುಗ್ಣಾಲಯದ ಹೆಸರನ್ನು `ಒಂದು ಲೆಕ್ಕ ಆಸ್ಪತ್ರೆ’ (ವೆನ್ಲಾಕ್ ಆಸ್ಪತ್ರೆ?) ಎಂದೂ ವೈದ್ಯರ ಹೆಸರನ್ನು ಡಾ| ಕ್ಷಾಮರಾವ್ ಎಂದೂ ರೋಗಿಯ ಹೆಸರನ್ನು ಮುದ್ದಣ ಎಂದೂ ಉಲ್ಲೇಖಿಸಿದ್ದರು. ಮಾವ ಈ ಕತೆಗೊಂದು ಅಡಿಟಿಪ್ಪಣಿ ಸೇರಿಸಿದ್ದರು. ಅದರ ಸಾರಾಂಶ: “ಕಥಾವಸ್ತು ಕಾಲ್ಪನಿಕವಲ್ಲ. ನೂರಕ್ಕೆ ನೂರು ನೈಜ ಘಟನೆ. ಇದರಲ್ಲಿ ವರ್ಣಿಸಿರುವ ಸಂಗತಿಗಳು ನಿಜವಲ್ಲ ಎಂದು ಸಾಬೀತಾದಲ್ಲಿ ಈ ಲೇಖಕ ಸಿಡುಬು, ಕಾಲೆರಾ, ಕ್ಷಯ ಮೊದಲಾದ ಮಾರಕ ವ್ಯಾಧಿಗಳಿಗೆ ತುತ್ತಾಗಲು ಸಿದ್ಧ.”

ಈ ಟಿಪ್ಪಣಿ ಓದಿ ಮಾವನ ಅಣ್ಣ, ಅಕ್ಕ ಮತ್ತು ಇತರ ಸಂಬಂಧಿಗಳು ಸಿಟ್ಟಾದರು. ಮಾರಕ ಖಾಯಿಲೆಗಳನ್ನು ಅನಾವಶ್ಯಕವಾಗಿ ಆಮಂತ್ರಿಸಿಕೊಳ್ಳಬಾರದಿತ್ತೆಂದು ಅವರ ಆಕ್ಷೇಪಣೆ. ಮುಂದೆ ದೇವಮಾವ ಅಸ್ಥಿಕ್ಷಯ ಪೀಡಿತರಾದಾಗ ಈ ನೆಂಟರೇನೆಂದಿರಬಹುದು!

ಶಿಸ್ತು ಸ್ವಚ್ಛತೆಗಳ ಸಾಕಾರ ರೂಪ

ಒಮ್ಮೆ ಮಾವ ಕಟೀಲು ದುರ್ಗಾಪರಮೇಶ್ವರಿಯ ದರ್ಶನಕ್ಕೆ ಹೋಗಿದ್ದರು. ಕ್ಷೇತ್ರ ಪುರೋಹಿತರು ಇವರನ್ನು ಗೌರವಾದರಪೂರ್ವಕ ಬರಮಾಡಿಕೊಂಡರು. ದೇವೀ ದರ್ಶನಕ್ಕೋಸ್ಕರ ಅಲ್ಲಿ ಜನಪ್ರವಾಹವೇ ಸಂದಣಿಸಿತ್ತು. ನೂಕುತ್ತ ಮುಂದಕ್ಕೆ ಧಾವಿಸಲು ಪ್ರಯತಿಸುತ್ತಿದ್ದ ಭಕ್ತರನ್ನು ಪುರೋಹಿತರು ಹಿಂದಕ್ಕೆ ತಳ್ಳುತ್ತಿದ್ದರು. ಈ ತುಮುಲ ಮತ್ತು ಭಕ್ತರ ದುಗುಡ ಗಮನಿಸಿದ ಮಾವ “ಅವರನ್ನುಹಿಂದಕ್ಕೆ ನೂಕಬೇಡಿ. ಎಲ್ಲ ಭಕ್ತರೂ ಸಮಾನರು. ದೇವ ಸಾನ್ನಿಧ್ಯದಲ್ಲಿ ಮೇಲು ಕೀಳು ಸಲ್ಲದು. ನನ್ನ ಉಪಸ್ಥಿತಿಯ ಕಾರಣವಾಗಿ ಇತರ ಭಕ್ತರು ಕಿರಿಕಿರಿ ಅನುಭವಿಸಬೇಕಾಗಿ ಬಂದರೆ ನಾನು ಈ ಕ್ಷಣವೇ ನಿರ್ಗಮಿಸಬೇಕಾಗುತ್ತದೆ” ಎಂದುಬಿಟ್ಟರು. ಈ ಹಠಾತ್ ತಾಡನೆಯಿಂದ ಪುರೋಹಿತರು ಅಪ್ರತಿಭರಾದರು. ನಾನಂತೂ ಮಾವನ ಖಚಿತ ನಿಲವನ್ನು ಮನಸಾರೆ ಮೆಚ್ಚಿದೆ.

ಸಾಹಿತ್ಯದಂತೇ ಅವರಿಗೆ ಉತ್ತಮ ಚಲಚ್ಚಿತ್ರಗಳೂ ಪ್ರೀತಿಯವು. ಕೆ.ಎಲ್. ಸೈಗಲ್ ಮತ್ತು ಪಂಕಜ್ ಮಲ್ಲಿಕ್ ದ್ವಯರ ಸಂಗೀತವನ್ನು ಅವರು ಬಲುವಾಗಿ ಮೆಚ್ಚಿದ್ದರು. ಆತ್ಮ ಸಂತೋಷಾರ್ಥ ಆ ಧಾಟಿಗಳನ್ನು ಆಗಾಗ ಸುಶ್ರಾವ್ಯವಾಗಿ ಹಾಡುವುದಿತ್ತು. ಸೈಗಲ್ `ದೋನೈನಾ’ ಮತ್ತು ಪಂಕಜ್ ಮಲ್ಲಿಕರ `ನಾ ಕರೆ ಇತ್ನಾ ಪ್ಯಾರೇ’ ಜನಪ್ರಿಯ ಧಾಟಿಗಳನ್ನು ಸೊಗಸಾಗಿ, ಅದೇ ಗತ್ತು ಗಾಂಭೀರ್ಯಸಹಿತ, ಹಾಡುವುದನ್ನು ಕೇಳಿ ಆನಂದಿಸಿದ್ದೇನೆ. ಇಂದೂ ಅವು ನನ್ನ ಮನದಲ್ಲಿ ಅನುರಣಿಸುತ್ತಿವೆ.

ಹೊರನೋಟಕ್ಕೆ ದೇವಮಾವನದು ಅತಿಗಂಭೀರ ವದನ. ಅವರ ಭರ್ಜರಿ ಮೀಸೆ ಮತ್ತು ಗಂಡು ದನಿ ಇದಕ್ಕೆ ಪೂರಕವಾಗಿದ್ದುವು. ನಡೆನುಡಿಗಳಲ್ಲಿಯೂ ಅವರದು ರಾಜಠೀವಿ. ವಿನಯವಂತಿಕೆ, ಸರಳತೆ, ಪಾರದರ್ಶಕತೆ ಮತ್ತು ವಿನೋದಶೀಲತೆ ಅವರ ನಿತ್ಯ ನಿರಂತರ ಒಡನಾಡಿಗಳು.

ಮಾವನ ಅಸ್ಮಿತೆ, ಆರ್ಜವ – ಒಂದು ನಿದರ್ಶನ

ವ್ಯಕ್ತಿಯ ಅಸ್ಮಿತೆ (identity) ಆರ್ಜವಗಳಿಗೆ (integrity) ವಿನಾಕಾರಣ ಹಠಾತ್ ಆಘಾತ ಬಡಿದರೆ ಆತ ಉದ್ರಿಕ್ತನಾಗುವುದು ವಾಡಿಕೆ. ಆ ಕ್ಷಣ ಆತನಿಗೆ ಪ್ರತಿಕ್ರಿಯೆ ಪ್ರದರ್ಶಿಸಲಾಗದಿದ್ದರೆ, ಆ ವೇದನೆ ದೀರ್ಘಕಾಲ ಆತನೊಳಗೆ ಸುಪ್ತವಾಗಿ ಮಸೆಯುತ್ತಿದ್ದು, ಅನಿರೀಕ್ಷಿತ ಸಂದರ್ಭದಲ್ಲಿ ಆಸ್ಫೋಟಿಸುವುದು ವಿರಳವಲ್ಲ. ಕ್ರೋಧದ ಈ ವಿವಿಧ ರೂಪಗಳು ಆತ ಮನುಷ್ಯ ಎಂಬುದನ್ನು ತೋರಿಸಿಕೊಡುತ್ತವೆ: “ಕ್ರೋಧೋದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ” (ಗೀತಾ). ನಮ್ಮ ದೇವ ಮಾವನಿಗೆ ಇಂಥ ಕ್ರೋಧೋದ್ಭವ ಸಕಾರಣವಾಗಿಯೇ ಒಮ್ಮೆ ಆಯಿತಾದರೂ ಒಂದು ಕ್ಷಣ ಅದರಿಂದ ಅವರು ಸಮ್ಮೋಹಿತರಾಗಿದ್ದರೂ ಅವರ ವ್ಯಕ್ತಿತ್ವದ ಪ್ರಧಾನ ಶ್ರುತಿಯಾಗಿದ್ದ ದೇವತ್ವ ಮರುಗಳಿಗೆಯೇ ಹೇಗೆ ಪ್ರಕಾಶಿಸಿತು ಎಂಬುದಕ್ಕೆ ನನ್ನ ಮನೆಯಲ್ಲೇ ನಡೆದ ಈ ಮುಂದಿನ ಘಟನೆ ಸಾಕ್ಷಿ. (ಆಗ ಅವರು ವಾರ್ಷಿಕ ರಜೆಯಲ್ಲಿ ವಿದೇಶದಿಂದ ಊರಿಗೆ ಮರಳಿದ್ದರು.)

ವಿದ್ಯಾರ್ಜನೆಯ ಕಾಲದಲ್ಲಿ ದೇವಮಾವ ಒಂದು ವಿದ್ಯಾಸಂಸ್ಥೆಯಲ್ಲಿ ಅನುಭವಿಸಿದ ಮಾನಸಿಕ ಹಿಂಸೆ ಮತ್ತು ಅಪಮಾನಗಳನ್ನು, ಸಹನೆಯ ಕಟ್ಟೆಯೊಡೆದು, ಉದ್ವಿಗ್ನತೆಯಿಂದ ಹೊರಗೆಡಹಿದ ದೃಶ್ಯ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಮಾವನ ಶಿಕ್ಷಣ ವೆಚ್ಚವನ್ನು ಅವರ ಅಣ್ಣ ಶ್ರೀಶರಾಯರು ಭರಿಸಬೇಕಾದ ಪರಿಸ್ಥಿತಿ. ಕಬ್ಬಿಣದ ಒಂದು ಅಂಗಡಿಯಲ್ಲಿ ಗುಮಾಸ್ತರಾಗಿ ಈ ಅಣ್ಣನ ಉದ್ಯೋಗ. ಅಂದರೆ ಅಲ್ಪ ಆದಾಯ. ಎಂದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ ತನಗೂ ದೊರಕಿದರೆ ಅಣ್ಣನ ಆರ್ಥಿಕ ಹೊರೆ ಒಂದಿಷ್ಟು ಕಮ್ಮಿಯಾಗಬಹುದೆಂಬುದು ದೇವಮಾವನ ಅನಿಸಿಕೆ. ಎಲ್ಲ ಪಠ್ಯ ವಿಷಯಗಳಲ್ಲಿ ನಡೆದ ಪರೀಕ್ಷೆಗಳಲ್ಲಿಯೂ ಮಾವ ಗರಿಷ್ಠ ಅಂಕ ಗಳಿಸಿದ್ದರು. ಈ ಯೋಗ್ಯತೆಯ ಆಧಾರದಲ್ಲಿ ತಾನು ವೇತನ ಪಡೆಯಲು ಅರ್ಜಿ ಸಲ್ಲಿಸಿದರು. ಆದರೆ ವಿದ್ಯಾರ್ಥಿವೇತನದ ದಾನಿಗಳು ವಿಧಿಸಿದ್ದ ನಿಯಮ ಪ್ರಕಾರ ಇವರಿಗೆ ವೇತನ ಮಂಜೂರಾಗಲಿಲ್ಲ.

ಮುಂದಿನ ಒಂದು ಘಟನೆ ಇವರನ್ನು ಕಂಗೆಡಿಸಿತು. ಶಿಕ್ಷಣ ಸಂಸ್ಥೆಯ ವರ್ಧಂತ್ಯುತ್ಸವ ದಿನದಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಅದರ ಅವಿಭಾಜ್ಯ ಅಂಗ. ಪೂರ್ಣ ಅರ್ಹತೆಯಿದ್ದರೂ ಎಲ್ಲ ಬಹುಮಾನಗಳಿಂದ ಮಾವ ವಂಚಿತರಾಗಿದ್ದರು(?). ಇದರ ಕಾರಣ ತಿಳಿಯಲು ಇವರು ಮುಖ್ಯಸ್ಥರನ್ನು ಭೇಟಿಯಾದರು. ಆ ಸಂಸ್ಥೆ ನಡೆಸಿದ ನೀತಿಬೋಧೆ ಪರೀಕ್ಷೆಯಲ್ಲಿ ಮಾವನ ಗೈರುಹಾಜರಿಯನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಹಾಗೂ ಈ ಕಾರಣಕ್ಕಾಗಿ ಇವರಿಗೆ ನೀಡಬೇಕಾದ ಎಲ್ಲ ಬಹುಮಾನಗಳನ್ನೂ ತಡೆಹಿಡಿಯಲಾಗಿದೆ ಎಂಬ ನಿರ್ದಾಕ್ಷಿಣ್ಯ ವಿವರಣೆ ದೊರೆಯಿತು. ಆ ಪರೀಕ್ಷೆಗೆ ಮಾವ ಗೈರುಹಾಜರಾದುದು ನಿಜ. ಆದರೆ ಆ ಪ್ರಮಾದ ಸಂಭವಿಸಿದ ಹಿನ್ನೆಲೆಯನ್ನು ಅವರು ವಿವರಿಸಲು ಮಾಡಿದ ಪಯತ್ನ ಮಾತ್ರ ವಿಫಲವಾಯಿತು.

ಮಾವ ನನ್ನೊಡನೆ ಹೇಳಿದ ಪ್ರಕಾರ ಆ ಪ್ರಮಾದದ ಹಿನ್ನೆಲೆ ಹೀಗಿತ್ತು. ನೀತಿಬೋಧೆ ಪರೀಕ್ಷೆಗೆ ಹಾಜರಾಗಲು ಅವರು ಸರ್ವಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ನಿಯೋಜಿತ ಪರೀಕ್ಷೆ ಬೆಳಗ್ಗೆ ೧೧ರಿಂದ ೧೨ ಗಂಟೆಯ ತನಕ ನಡೆಯುವುದೆಂದು ನಂಬಿದ್ದರು; ಹಾಗೂ ಇನ್ನೂ ಹೆಚ್ಚು ಓದಿಕೊಳ್ಳುವ ಸಲುವಾಗಿ ಬೆಳಿಗ್ಗೆ ೧೦-೧೧ರ ತರಗತಿಗೆ ಗೈರುಹಾಜರಾಗಿದ್ದರು. ಆದರೆ ೧೧ ಗಂಟೆಗೆ ಹೋದಾಗ ಪರೀಕ್ಷೆ ಅದಾಗ ತಾನೇ ಮುಗಿದು ಹೋಯಿತೆಂದು ತಿಳಿಯಿತು. ಇದರ ಪರಿಣಾಮವೇ ಇವರ ಗೈರುಹಾಜರು ದಾಖಲೆ. ಇವರು ತಬ್ಬಿಬ್ಬಾದರು. ಏನೂ ತೋಚದೆ, ಇದನ್ನು ಗೋಪ್ಯವಾಗಿಟ್ಟುಕೊಂಡರು. ಯಾರೊಂದಿಗೂ ತನ್ನ ಅಸಹನೀಯ ಸಂಕಟ ತೋಡಿಕೊಳ್ಳಲಿಲ್ಲ. ಆದರೆ ವಿದ್ಯಾಸಂಸ್ಥೆಯ ಕಡತಗಳಲ್ಲಿ ಮಾತ್ರ ಇವರ ಗೈರುಹಾಜರಿ ದಾಖಲಾಗಿತ್ತು.

ಸಂಸ್ಥೆಯಲ್ಲಿಯ ನಿಯೋಜಿತ ಶಿಕ್ಷಣ ಮುಗಿಯಿತು. ನಿರೀಕ್ಷೆಯಂತೆ ಎಲ್ಲ ವಿಷಯಗಳ ಪರೀಕ್ಷೆಗಳಲ್ಲಿಯೂ ಇವರಿಗೆ ಗರಿಷ್ಠ ಅಂಕಗಳು ದೊರೆತವು. ಉನ್ನತ ಶಿಕ್ಷಣದ ಸಲುವಾಗಿ ಬೇರೆಯದೊಂದು ಸಂಸ್ಥೆಗೆ ಅರ್ಜಿ ಹಾಕಿದರು. ಪ್ರತಿಭಾಪುರಸ್ಕಾರವೋ ಎಂಬಂತೆ ಇವರಿಗೆ ಅನಾಯಾಸವಾಗಿ ಆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿತು. ಮಾವನಿಗೆ ಹಿಗ್ಗು. ಅನ್ಯವಿದ್ಯಾಸಂಸ್ಥೆಗೆ ಸೇರ್ಪಡೆಗೊಳ್ಳಲು, ನಿಕಟಪೂರ್ವ ಸಂಸ್ಥೆಯಿಂದ `ವರ್ಗಾವಣೆ ಪತ್ರ’, `ಗುಣನಡತೆ ಪತ್ರ’ ಪಡೆದುಕೊಳ್ಳುವ ಸಲುವಾಗಿ, ಅರ್ಜಿ ಸಲ್ಲಿಸಿದರು. ಇವನ್ನು ತೆಗೆದುಕೊಳ್ಳಲು ಮಾವ ಮುಖ್ಯಸ್ಥರನ್ನು ಭೇಟಿಯಾದಾಗ ಅವರ ಆರ್ಭಟೆ, ಒದರಿಕೆ ಇವರಿಗೆ ತೀರ ಅನಿರೀಕ್ಷಿತವಾಗಿದ್ದುವು. `ವರ್ಗಾವಣೆ ಪತ್ರ’ ನೀಡಿದರೂ `ಗುಣ ನಡತೆ ಪತ್ರ’ವನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದರು. ಮಾವ ತಳಮಳಗೊಂಡರು. `ನೀತಿಬೋಧೆ’ ಪರೀಕ್ಷೆಗೆ ಗೈರುಹಾಜರಾದಂದಿನಿಂದಲೂ ಬೆನ್ನು ಹತ್ತಿದ ಬೇತಾಳದಂತೆ ಒಂದಲ್ಲ ಒಂದು ಇವರನ್ನು ಕಾಡುತ್ತಲೇ ಇತ್ತು. ಸುದೈವವಶಾತ್ `ಗುಣನಡತೆ ಪತ್ರ’ ಹಾಜರು ಪಡಿಸಲಾಗದಿದ್ದರೂ ಇವರಿಗೆ ಸುಗಮವಾಗಿ ಆ ಇನ್ನೊಂದು ಸಂಸ್ಥೆಯಲ್ಲಿ ಅಧ್ಯಯನಕ್ಕೆ ಸ್ಥಳ ದೊರೆತಾಗ ಇವರು ಹಿಂದಿನ ಕಠೋರ ಅನುಭವವನ್ನು ಮರೆತರು (?).

ಮುಂದೆ ಇವರು ಭಾರತ ದೇಶದ ರಾಯಭಾರಿಯಾಗಿ ಪರದೇಶಗಳಲ್ಲಿ ನೇಮಕಗೊಂಡರು. ಆ ವೇಳೆಗೆ ಇವರು ಮೊದಲು ಓದಿದ್ದ (ಮತ್ತು ಗುಣನಡತೆ ಪತ್ರ ಕೊಡದಿದ್ದ) ವಿದ್ಯಾಸಂಸ್ಥೆ ಶತಮಾನೋತ್ಸವದ ಸಂಭ್ರಮದಲ್ಲಿತ್ತು. ಹಳೆಯ ವಿದ್ಯಾರ್ಥಿಗಳ ವಿಳಾಸಗಳನ್ನು ಪತ್ತೆ ಮಾಡಿಕೊಂಡು ಆ ಸಂಸ್ಥೆ ದೇವಮಾವನಿಂದಲೂ ಪತ್ರಮುಖೇನ ಉದಾರ ದೇಣಿಗೆ ಯಾಚಿಸಿತು.

ತಮ್ಮ ಆಪ್ತ ಮಿತ್ರ ಕುಶಿ ಹರಿದಾಸ ಭಟ್ಟರ ಉಪಸ್ಥಿತಿಯಲ್ಲಿ ಮಾವ ನನ್ನೊಡನೆ ಆ ಪತ್ರದ ಕುರಿತು ಪ್ರಸ್ತಾವಿಸುವಾಗ ಉದ್ರಿಕ್ತಗೊಂಡರು. ಅವರ ಸಹನೆಯ ಕಟ್ಟೆಯೊಡೆದು ಕೋಪೋದ್ರಿಕ್ತರಾದರು. ದಶಮಾನಗಳಿಂದ ಅದುಮಿಟ್ಟುಕೊಂಡು ಘಾಸಿಗೊಂಡ ಇವರ ಭಾವನೆಗಳು ಉಗ್ರ ಪದಗಳಲ್ಲಿ ಪ್ರಕಟಗೊಂಡುವು. ತಾವು ಅನುಭವಿಸಿದ ನರಕಯಾತನೆಯನ್ನು ಭಾವೋದ್ರೇಕದಿಂದ ನಮ್ಮ ಮನ ಕರಗುವಂತೆ ವರ್ಣಿಸಿದರು. ನಾವು ಮೂಕರಾದೆವು, ದುಃಖಿತರಾದೆವು.

ಕೆಲವು ನಿಮಿಷಗಳ ಕಾಲ ಗಾಢ ಮೌನ ಕೋಣೆಯನ್ನು ಆವರಿಸಿತು. ಆ ಮೌನವನ್ನು ಅವರೇ ಭೇದಿಸಿ ಶಾಂತಚಿತ್ತರಾಗಿ ತನ್ನ ನಿಲವನ್ನು ಬದಲಾಯಿಸಿದ್ದು ನಮ್ಮನ್ನು ಅಚ್ಚರಿಗೊಳಿಸಿತು. “ಇದು ಕ್ರೋಧ. ಕ್ರೋಧ ಎಂದೂ ಒಳಿತಲ್ಲ. ನಾವೆಲ್ಲ ಕೇವಲ ಮನುಷ್ಯರು ಎಂಬುದಕ್ಕೆ ಈ ಕ್ರೋಧವೂ ಒಂದು ಉದಾಹರಣೆ. ನಾನು ಸಂಸ್ಥೆಯ ನಿಷ್ಕರುಣೆಗೊಳಗಾದರೂ ನನಗೆ ಸಂಸ್ಥೆಯ ಮೇಲೆ ಅದಕ್ಕಿಂತಲೂ ಮುಖ್ಯವಾಗಿ ಅಲ್ಲಿಯ ಶ್ರೇಷ್ಠತಮ ಅಧ್ಯಾಪಕ ವೃಂದದ ಮೇಲೆ ಅಪಾರ ಗೌರವವಿದೆ. ಅದರ ದ್ಯೋತಕವಾಗಿ ನನ್ನ ಪುಟ್ಟ ದೇಣಿಗೆಯನ್ನು ಆ ಸಂಸ್ಥೆಗೆ ಖಂಡಿತವಾಗಿ ಕಳುಹಿಸಿಕೊಡುತ್ತೇನೆ” ಎಂದು ಹೇಳಿದಾಗ ನಾನು ಮಾವನ ಎರಡು ಮುಖಗಳನ್ನು – ರುದ್ರ ಮತ್ತು ಶಾಂತ – ಕಂಡೆ. ರವಾನಿಸಿದರು ಕೂಡ. ಭಗವದ್ಗೀತೆಯ – ದುಃಖೇಶ್ಟನುದ್ವಿಗ್ನಮನಾಃ ಸುಖೇಶು ವಿಗತಸ್ಪೃಹಃ| ವೀತರಾಗ ಭಯ ಕ್ರೋಧಃ ಸ್ಥಿತಧೀರ್ಮುನಿರುಚ್ಯತೇ – ಈ ಶ್ಲೋಕದ ಪ್ರತೀಕವಾಗಿದ್ದರು ಅವರು.

ಮಾವ ಹೇಳಿದ ಕತೆಗಳು

ಕಿನ್ನಿಕಂಬಳದಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದ ಅವಧಿ. ಆಗ ನಾನು ಅವರ ಹಳೇ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿ. ರಜಾ ದಿನಗಳಲ್ಲಿ ಊರಿಗೆ ಬಂದಾಗ ದೇವಮಾವನಲ್ಲಿಗೆ ಹೋಗುತ್ತಿದ್ದೆ. ಅಂದಿನ ನಮ್ಮ ವಿದ್ಯಾರ್ಥಿ ಬಳಗದಲ್ಲಿ ಚಲಾವಣೆಯಲ್ಲಿದ್ದ ಹಲವಾರು ಹಾಸ್ಯಪ್ರಸಂಗಗಳನ್ನು ಅವರಿಗೆ ಹೇಳುತ್ತಿದ್ದೆ. ಆ ಹರ್ಷವಾತಾವರಣದಲ್ಲಿ ಅವರು ಕೂಡ ತಮ್ಮ ಸಂಗ್ರಹದಿಂದ ಕೆಲವಾರು ಘಟನೆಗಳನ್ನು ನನಗೆ ವಿವರಿಸಿದರು. ಮೂರನ್ನು ಮಾತ್ರ ಇಲ್ಲಿ ನಿರೂಪಿಸುತ್ತೇನೆ.

ಇಂಗ್ಲೆಂಡಿನಲ್ಲೊಂದು ಸತ್ಕಾರ ಕೂಟ. ಸುಂದರ ಯುವತಿಯೊಬ್ಬಳನ್ನು ಆತಿಥೇಯ ಪಾತ್ರ ನಿರ್ವಹಿಸುವಂತೆ ನೇಮಿಸುವುದು ಅಲ್ಲಿಯ ಸಂಪ್ರದಾಯ. ಆಮಂತ್ರಿತರೆಲ್ಲರೂ ಸಕಾಲದಲ್ಲಿ ಆಸನಾರೂಢರಾಗಿರುತ್ತಾರೆ. ಅವರ ಪೈಕಿ ಒಬ್ಬ ಭಾರತೀಯ ಗಣ್ಯ, ಆತಿಥೇಯ ಮಹಿಳೆಯತ್ತ ಧಾವಿಸಿ, “ಮ್ಯಾಡಮ್! ನನಗೆ ತುರ್ತಾಗಿ ಉಚ್ಚೆ ಹೊಯ್ಯಬೇಕಾಗಿದೆ. ಮೂತ್ರಿ ಎಲ್ಲಿದೆಯೆಂದು ತಿಳಿಸುವಿರಾ?” ಎಂದು ಕೇಳಿದ. ಆಕೆ ಆತನನ್ನು ನಿರ್ಮಲಮಂದಿರದತ್ತ ಕರೆದೊಯ್ದು ಅಲ್ಲಿಯ ಅನುಕೂಲತೆಗಳನ್ನು ವಿವರಿಸಿ, ಒಂದು ಕಿವಿ ಮಾತು ಉಸುರಿದಳು, “ಸರ್! ಇನ್ನು ಮುಂದೆ ಇಂಥ ಅನಿವಾರ್ಯ ಸನ್ನಿವೇಶ ತಲೆದೋರಿದರೆ, `ನಾನು ಕೈತೊಳೆಯಬೇಕಿದೆ, ಬಾತ್ ರೂಂ ಎಲ್ಲಿದೆ’ ಎಂದಿಷ್ಟೇ ಕೇಳಿದರೆ ಸಾಕು, ಎಲ್ಲವೂ ಸುಸೂತ್ರವಾಗುತ್ತವೆ.” ಕೆಲವು ದಿವಸಾನಂತರ ಇನ್ನೊಂದು ಸತ್ಕಾರ ಸಮಾರಂಭದಲ್ಲಿ ಇದೇ ಆತಿಥೇಯ ಮಹಿಳೆ ಅದೇ ಗಣ್ಯ ಭಾರತೀಯನನ್ನು ಗುರುತಿಸಿ ಮುಗುಳ್ನಗು ಬೀರಿ, ಆತನ ಬಳಿಸಾರಿ, “ಸರ್! ತಮಗೆ ಕೈ ತೊಳೆಯಬೇಕಾಗಿದೆಯೇ” ಎಂದು ವಿಚಾರಿಸಿದಳು. “ಥೇಂಕ್ ಯೂ ಮ್ಯಾಡಮ್! ನಾನದನ್ನು ರಸ್ತೆ ಬದಿಯ ಲೈಟ್ ಕಂಬದ ಅಡಿಯಲ್ಲಿ ಮಾಡಿ ಮುಗಿಸಿದ್ದೇನೆ.”

*********************************************

ಕಮ್ಯೂನಿಸ್ಟ್ ರಶ್ಯಾ ದೇಶದ ಪ್ರಧಾನಿ ನಿಕಿಟಾ ಕ್ರುಶ್ಚೇವ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭ. ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರನ್ನು ಮುಂಬಯಿಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಉಭಯರೂ ಒಂದೇ ಕಾರಿನಲ್ಲಿ ನಗರಕ್ಕೆ ಸಾಗುತ್ತಿದ್ದಾಗ ರಸ್ತೆಯ ಇಬ್ಬದಿಗಳಲ್ಲಿಯೂ ಜನ ತಲೆತಗ್ಗಿಸಿ ಕುಕ್ಕರಗಾಲಿನಲ್ಲಿ ಕೂತಿದ್ದುದು ಕಂಡಿತು. (ನೆಹರೂ, ಬಾಗಲೋಡಿ – ಚಿತ್ರ ಸಂಗ್ರಹ ಶ್ರೀಮತಿ ಬಾಗಲೋಡಿ, ಕೃಪೆ ಸುರೇಂದ್ರ ರಾವ್)

ಕುತೂಹಲಿ ಕ್ರುಶ್ಚೇವ್, “ಅವರೇನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದಾಗ ಖಿನ್ನರಾದ ನೆಹರು, “ಅದು ಶೌಚಕ್ರಿಯೆ” ಎಂದರು. ಕ್ರುಶ್ಚೇವರಿಗೆ ದಿಗಿಲು, “ರಶ್ಯಾ ದೇಶದಲ್ಲಿ ಇಂಥ ದೃಶ್ಯ ಕಾಣಸಿಗದು. ಅಕಸ್ಮಾತ್ ಏನಾದರೂ ಶುನಕಾನುಕರಣ ಪ್ರಸಂಗ ಕಂಡುಬಂದರೆ ಆ ವ್ಯಕ್ತಿಯನ್ನು ಒಡನೆ ಗುಂಡಿಕ್ಕಿ ಕೊಲ್ಲಲಾಗುವುದು.” ಮರುವರ್ಷ ನೆಹರು ರಶ್ಯಾಕ್ಕೆ ಭೇಟಿ ನೀಡಿದರು. ಸಂಪ್ರದಾಯದಂತೆ ಕ್ರುಶ್ಚೇವ್ ಇವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಇಬ್ಬರೂ ಜೊತೆಯಾಗಿ ಒಂದೇ ಕಾರಿನಲ್ಲಿ ಮಾಸ್ಕೋ ನಗರಕ್ಕೆ ತೆರಳುತ್ತಿದ್ದಾಗ ಅದೇ ಶುನಕಾನುಕರಣ ದೃಶ್ಯ ಇಲ್ಲಿಯೂ ಗೋಚರವಾಗಬೇಕೇ!

ಈಗ ಬಡ್ಡಿಸಹಿತ ಮುಯ್ಯಿ ಮರುಪಾವತಿಸುವುದು ನೆಹರು ಸರದಿ! “ಅತ್ತ ನೋಡಿ ಮಾನ್ಯ ಕ್ರುಶ್ಚೇವರೇ! ನಿಮ್ಮ ನಾಡಿನಲ್ಲಿಯೂ ಬಹಿರಂಗ ಶೌಚ ಕಾಣುವುದಲ್ಲ?” ತತ್ಕ್ಷಣ ಕ್ರುಶ್ಚೇವ್ ಕ್ರುದ್ಧರಾಗಿ ಆ ಅನಾಗರಿಕ ವ್ಯಕ್ತಿಯನ್ನು ಸೆರೆಹಿಡಿದು ಗುಂಡಿಕ್ಕಿ ಕೊಲ್ಲಲು ಅಧಿಕಾರಿಗೆ ಆದೇಶ ನೀಡಿದರು. ಸ್ವಲ್ಪ ಹೊತ್ತಿನಲ್ಲೇ ಅಧಿಕಾರಿ ಮರಳಿ ಬಂದು ಕ್ರುಶ್ಚೇವರ ಕಿವಿಯಲ್ಲೇನೋ ಪಿಸುಗುಟ್ಟಿದ. ಕ್ರುಶ್ಚೇವ್ ನೆಹರು ಕಡೆ ತಿರುಗಿ ನುಡಿದರು, “ಕ್ಷಮಿಸಿ ಪ್ರಧಾನಿಯವರೇ! ಅಪರಾಧಿಯನ್ನು ಸೆರೆ ಹಿಡಿಯಲಾಗಿದೆ. ಆದರೆ ಆತನಿಗೆ ಗುಂಡುಹೊಡೆದು ಸಾಯಿಸಲು ನಿಮ್ಮ ಪರವಾನಿಗೆ ಅಗತ್ಯ. ಏಕೆಂದರೆ ಆತ ಭಾರತೀಯ ದೂತಾವಾಸದ ಒಬ್ಬ ನೌಕರ!”

*********************************************

ಬ್ರಿಟನ್ನಿನ ಒಬ್ಬ ಹೆಸರಾಂತ ಸಾಹಿತಿ ಅಲ್ಲಿಯ ಉದ್ಯಾನವನವೊಂದರಲ್ಲಿ ಕುಳಿತು ಗಾಢಾಲೋಚನೆಯಲ್ಲಿ ಮಗ್ನನಾಗಿದ್ದಾನೆ. ಸ್ಕಾಟ್‍ಲೆಂಡಿನ ಸುಂದರ ಯುವತಿಯೊಬ್ಬಳು ಅಲ್ಲಿ ಅಡ್ಡಾಡುತ್ತ ಬರುತ್ತಿದ್ದಾಳೆ – ಬಿಂಕ, ಒನಪು, ವೈಯಾರ ಸಹಿತ. ದೂರದಲ್ಲಿ ಪ್ರತಿಮೆಯಂತೆ ನಿಶ್ಚಲನಾಗಿ ಕುಳಿತಿದ್ದ ಸಾಹಿತಿಯನ್ನು ಕಾಣುತ್ತಾಳೆ. ಆತನ ಭಾವಚಿತ್ರಗಳನ್ನು ಮಾಧ್ಯಮಗಳಲ್ಲಿ ನೋಡಿದ್ದರಿಂದ ಒಡನೆ ಗುರುತು ಹಿಡಿದು ಪುಳಕಿತಳಾಗುತ್ತಾಳೆ. ಆತನೊಡನೆ ತುಸು ಮಾತಾಡುವುದು ಸಾಧ್ಯವಾದೀತೆ? ಇದು ಅವಳ ಉತ್ಕಟ ಹಂಬಲ. ಧೈರ್ಯ ತಳೆದು, ಮೃದುವಾಗಿ ಅವನ ಬಳಿ ಸಾರಿ, ಮಾತಿನ ಶುಭಾರಂಭ ಮಾಡುತ್ತಾಳೆ “Excuse me sir! Have you got the time?” ಸಾಹಿತಿ ಆಕೆಯನ್ನು ಕತ್ತೆತ್ತಿ ಕೂಡ ನೋಡದೆ, “Neither have I the time nor the inclination!” ಎಂದಿದ್ದಾನೆ.

ಉಳಿದಿರುವುದೇನು?

ಹೀಗಿದ್ದರು ನಮ್ಮ ದೇವಮಾವ. ಈಗ ಉಳಿದಿರುವುದು ಅವರ ಭಾವ ಮತ್ತು ಅವರು ಹಾಡಿ ಬಿತ್ತರಿಸಿದ ರಾಗ. ಆಲ್ಬರ್ಟ್ ಐನ್ಸ್ಟೈನ್ (೧೮೭೯-೧೯೫೫) ಮಡಿದಾಗ ಶಿಷ್ಯ ಕಾರ್ನೀಲಿಯಸ್ ಲ್ಯಾಂಕ್ಸೋಸ್ (೧೮೯೩-೧೯೭೪) ಸಲ್ಲಿಸಿದ (೨೬-೪-೧೯೫೫) ನುಡಿನಮನ ನಮ್ಮ ನಲ್ಮೆಯ ದೇವಮಾವನೆಂಬ ಮಹಾಮಾನವನನ್ನು ಕುರಿತು ಕೂಡ ಅಷ್ಟೇ ನಿಜ. “ಇಂಥ ಒಬ್ಬ ವ್ಯಕ್ತಿ [ಐನ್ಸ್ಟೈನ್] ಚಿರಂಜೀವಿ ಎಂದನ್ನಿಸುತ್ತದೆ – ಬೇತೋವನ್ನನಂಥ ಒಬ್ಬ ವ್ಯಕ್ತಿ ಹೇಗೆ ಎಂದೂ ಮೃತನಾಗನೋ ಹಾಗೆ. ಆದರೆ ಶಾಶ್ವತವಾಗಿ ನಷ್ಟವಾಗಿ ಹೋದ ಬೇರೇನೋ ಒಂದಿದೆ: ಬಾಳುವುದರ ಬಗ್ಗೆ ಅವರಿಗಿದ್ದ ಪರಿಪೂರ್ಣಾನಂದ. ಇದು ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಊಹೆಗೂ ನಿಲುಕದಷ್ಟು ವಿನಯವಂತರೂ ನಿರಾಡಂಬರ ಸ್ವಭಾವದವರೂ ಆಗಿದ್ದ ಈ ಮಹಾಪುರುಷ ನಮ್ಮೊಡನೆ ಉಳಿದಿಲ್ಲವೆಂಬುದನ್ನು (ಚಿತ್ರದಲ್ಲಿ ವಿ.ಆರ್. ಹೆಬ್ಬಾರ್ ಮತ್ತವರ ಮಗಳು ಶ್ರೀಮತಿ ಗಾಯತ್ರಿ) ಒಪ್ಪುವುದು ಅತಿ ಕಷ್ಟ. ವಿಧಿ ಅವರಿಗೆ ಅನುಗ್ರಹಿಸಿದ್ದ ಅವರ ಏಕಮೇವಾದ್ವಿತೀಯ ಪಾತ್ರದ ಪೂರ್ಣ ಅರಿವು ಅವರಿಗಿತ್ತು; ಇದರೊಂದಿಗೆ ಸ್ವಂತ ಹಿರಿಮೆಯ ಅರಿವು ಕೂಡ. ಆದರೆ ಈ ಹಿರಿಮೆ ಹಿಮಾಲಯಭವ್ಯವಾಗಿದ್ದುದರಿಂದಲೇ – ಆಂತರಿಕ ಆವಶ್ಯಕತೆಯಾಗಿ, ತೋರ್ಕೆ ವರ್ತನೆಯಾಗಿ ಅಲ್ಲ – ಅವರು ನಮ್ರರೂ ವಿನೀತರೂ ಆಗಿದ್ದರು.”

ಸಾವು? ಜೀವನಯಾನವೈದಲಿಹ ಕಟ್ಟಕಡೆ
ರೇವು! ಸುಂದರ ಸುಖಸಮೃದ್ಧ ಚಿರಸಂತೃಪ್ತ
ಠಾವು! ಪೀಳಿಗೆ ವರ್ಧಿಸಲು ವ್ಯಕ್ತಿ ಮುಡಿಪಿಡುವ
ಠೇವು! ತಿಳಿ ಜೀವಸಾತತ್ಯವಿದು ಅತ್ರಿಸೂನು

(ಮುಂದುವರಿಯಲಿದೆ)