ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ ಹೆಜ್ಜೆಯ ಜೀವ ಕಲಾಪದ ದಾಖಲೆ ಮಾತ್ರ ಆಯ್ತು. ವರ್ಷದ ಇತರ ಋತುಮಾನಗಳಲ್ಲಿ ಇದೇ ಕಪ್ಪೆಗಳ ವರ್ತನೆ ಏನು? ಅದಕ್ಕೂ ಮುಖ್ಯವಾಗಿ ಒಟ್ಟಾರೆ ಪ್ರಾಣಿಪರಿಸರವನ್ನು ಗಾಢವಾಗಿ ಪ್ರಭಾವಿಸುವ ಸಸ್ಯಪರಿಸರದ ತಿಳುವಳಿಕೆ ಗಳಿಸಿದರೆ ಹೇಗೆ? ಎಂಬ ಪ್ರಶ್ನೆಗಳಿಗೆ ತೀರಾ ಸಣ್ಣ ಉತ್ತರವಾಗಿ, ಗುಬ್ಬಿ ಲ್ಯಾಬ್ಸ್ ಮೊನ್ನೆ ಮೂರು ದಿನ (ಸೆಪ್ಟೆಂಬರ್ ೧೫ರಿಂದ ೧೭, ೨೦೧೭) ಮತ್ತೆ ಬಿಸಿಲೆಯ ಅಶೋಕವನ ಕೇಂದ್ರಿತವಾಗಿ ಇನ್ನೊಂದೇ ಕ್ಷೇತ್ರಕಾರ್ಯಕ್ಕೆ ಅಂತರ್ಜಾಲದಲ್ಲಿ ಸಾರ್ವಜನಿಕ ಕರೆ ಕೊಟ್ಟಿತು. ನಮಗೆಲ್ಲ ತಿಳಿದಂತೆ ಪಡುವಣ ಕಡಲ ಕಿನಾರೆಗೊಂದು ರೂಪ (ಅವಿಭಜಿತ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳು), ಒಟ್ಟಾರೆ ರಾಜ್ಯಕ್ಕೆ ಪಡುವಲ ರಕ್ಷಣಾ ಕೋಟೆಯಂತೇ ನಿಂತಿವೆ ಪಶ್ಚಿಮ ಘಟ್ಟಗಳು. ಹೀಗೆ ಕರಾವಳಿ ವಲಯದ ನೀರು ಸಮೃದ್ಧಿಗಳ ಮೂರ್ತ ರೂಪವೇ ಆದ ಪಶ್ಚಿಮಘಟ್ಟವನ್ನು ಈ ಅಧ್ಯಯನ ಶಿಬಿರ ಮುನ್ನೆಲೆಯಲ್ಲಿ ಕರಾವಳಿ ವಲಯ ಮಾತ್ರ ಮರೆತು ಕುಳಿತಂತಿತ್ತು; ಇತ್ತಣಿಂದ ಓರ್ವ ಅಭ್ಯರ್ಥಿಯೂ ಇಲ್ಲ! (ಗಮನಿಸಿ: ಇಂದು ಎತ್ತಿನಹೊಳೆ ತಿರುಗಿಸುವ ಯೋಜನೆ ವಿರುದ್ಧ ಸ್ಪಷ್ಟ ನ್ಯಾಯಿಕ ಕಾರ್ಯಾಚರಣೆ ನಡೆಸುತ್ತಿರುವುದು ಘಟ್ಟದ ಮೇಲಿನವರೇ!!)

ಬಿಸಿಲೆಯ ತುಣುಕು ಕಾಡಿನ (ಅಶೋಕವನ) ‘ಯಜಮಾನ’ನ ನೆಲೆಯಲ್ಲಿ ನಾನು ಮೊ.ಬೈಕೇರಿ, ಸಹ ಸಂಘಟಕನ ನೆಲೆಯಲ್ಲಿ ರೋಹಿತ್ ರಾವ್ ಕಾರೇರಿ, ವಿಶಿಷ್ಟ ಕಾರಣಗಳಿಗಾಗಿ ಬೆಳಿಗ್ಗೆ ಎಂಟೂವರೆಯ ಸುಮಾರಿಗೆ ಸ್ವತಂತ್ರವಾಗಿ ಹೊರಟಿದ್ದೆವು. ರೋಹಿತ್ ಮಂಗಳೂರಿನಿಂದ ಅವಿರತ ಓಟದಲ್ಲೇ ಕುಳ್ಕುಂದದವರೆಗೆ ಬಂದಿದ್ದರೂ ಕಾಡುದಾರಿಯಲ್ಲಿ ಚಿತ್ರಗ್ರಹಣ, ವಿರಾಮದ ವೀಕ್ಷಣೆ ನಡೆಸುತ್ತ ಸಾಗಿದ್ದರು. ನಾನು ಉಪ್ಪಿನಂಗಡಿಯಲ್ಲಿ ಕಾಫಿ ಬಿಡುವು ಮಾಡಿ, ಕಡಬ ಕುಳ್ಕುಂದಕ್ಕಾಗಿ ಕಾಡುದಾರಿಯಲ್ಲಿ ರೋಹಿತ್ ಕಾರು ಹಿಂದಿಕ್ಕಿದೆ. ದಕ ಗಡಿಯೊಳಗಿನ ದಾರಿ ಹಿಂದಿನಂತೆ ಸುಸ್ಥಿರ ಡಾಮರಿನಲ್ಲೇ ಇತ್ತು. ಮುಂದಿನ ಕಾಂಕ್ರೀಟ್ ಹಾಸು ಕೂಡಾ ಕಳೆದ ಕಪ್ಪೆ ಶಿಬಿರಕ್ಕೆ ಬಂದಾಗ ಇದ್ದಲ್ಲೇ ವಿರಮಿಸಿತ್ತು. ದರೆ ಬದಿಯ ಚರಂಡಿಗಳು ರೂಪುಗೊಳ್ಳದೆ ಅಲ್ಲಲ್ಲಿ ಪುಟ್ಟ ಜರಿತಗಳು ಒಡ್ಡುಗಟ್ಟಿದಂತಾಗಿ ಉದ್ದುದ್ದಕ್ಕೆ ದಾರಿಯೇ ತೊರೆಯಾಗಿ ಹರಿದಿತ್ತು. ದೊಡ್ಡದಾಗಿ ಕುಸಿತ ಕಂಡ ಕಲ್ಲುಮಣ್ಣನ್ನು, ಉರುಳಿದ್ದ ಮರ ಬಿದಿರುಹಿಂಡಿಲನ್ನು ಇಲಾಖೆ ಸರಳವಾಗಿ (?) ಎಳೆದು ಕೊಳ್ಳ ತುಂಬಿಸಿದ್ದೂ ಕಾಣುತ್ತಿತ್ತು. ಅಭಿವೃದ್ಧಿಗುಳಿದ ಐದಾರು ಕಿಮೀ ದಾರಿಯ ಆಜೂಬಾಜಿನ ಮರ ದರೆ ಸವರುವ, ಸೇತುವೆಗಳನ್ನು ಹಿಗ್ಗಿಸುವ ಕೆಲಸಗಳು ಮಾತ್ರ ಮುಗಿದಿತ್ತು. ಈ ಓಡಾಟಗಳಲ್ಲಿ ಉಳಿದಿದ್ದ ಹಳೇ ಡಾಮರು ಮಾರ್ಗ ಯದ್ವಾತದ್ವಾ ಹುಡಿಯಾಗಿ ಹೊಂಡ ಸರಣಿ, ಕೆಸರಕಂಪ, ಜಲ್ಲಿರಾಶಿಯಷ್ಟೇ ಆಗಿತ್ತು. ಅವು ನಾಲ್ಗಾಲಿ ಪಯಣಿಗರನ್ನು ಸತಾಯಿಸಿದರೆ, ಇಗ್ಗಾಲಿಯವರನ್ನು ಅಡ್ಡ ಮಲಗಿಸಲು ಹೊಂಚುವಂತೆಯೇ ಇತ್ತು. ಆದರೂ ಹಳೇಪೈಕಿಯವನೆಂದು ನನಗೆ ರಿಯಾಯಿತಿ ಸಿಕ್ಕಿತೋ ಏನೋ, ಎಲ್ಲೂ ಬೀಳದೆ, ಹನ್ನೊಂದೂವರೆಯ ಸುಮಾರಿಗೆ ಬಿಸಿಲೆ ಗೇಟ್ ತಲಪಿದ್ದೆ!

ಶಿಬಿರ ಸಂಘಟಕ – ಗುಬ್ಬಿ ಲ್ಯಾಬ್ಸ್, ಅಂತರ್ಜಾಲದಲ್ಲಿ ಕೊಟ್ಟ ಕರೆಗೆ ನಲ್ವತ್ತೈವತ್ತು ಮಂದಿ ಸ್ಪಂದಿಸಿದ್ದೇನೋ ನಿಜ. ಆದರೆ ರಜಾ ಸೌಕರ್ಯ, ಪ್ರಯಾಣದ ಅಂತರ, ಆಸಕ್ತಿ (ಹಣವೂ ಇರಬಹುದು) ಮುಂತಾದವನ್ನು ಅಳೆದೂ ಸುರಿದೂ ಬಿಸಿಲೆಗಿಳಿದವರು ಸುಮಾರು ಇಪ್ಪತ್ತೈದು ಮಂದಿ. ಅದರಲ್ಲಿ ಪುಣೆ ಮೂಲದ, ಸದ್ಯ ರತ್ನಗಿರಿಯಲ್ಲಿ (ಪಶ್ಚಿಮ ಘಟ್ಟದ ಉತ್ತರ-ಪಶ್ಚಿಮ ಮೂಲೆಯ) ಪರಿಸರ ನಿಗಾ ವೃತ್ತಿಯಲ್ಲೇ ಇರುವ ಆಕಾಶ್‍ರಿಂದ ಹಿಡಿದು ಪಕ್ಕದ ಹಾಸನದ ಕಾಲೇಜು ವಿದ್ಯಾರ್ಥಿಗಳವರಿದ್ದರು. ಆಕಾಶ್ ಕೊಂಕಣ್ ರೈಲು ಹಿಡಿದು ರಾತ್ರಿಯ ಕೊನೆಯ ಪ್ರಹರಿಯಲ್ಲಿ ಮಂಗಳೂರು, ಮುಂದೆ ದಿನದ ಮೊದಲ ಬಸ್ಸಿನಲ್ಲಿ ಸುಬ್ರಹ್ಮಣ್ಯ, ಅಲ್ಲಿ ಬಸ್ ಬದಲಿಸಿ ಬಿಸಿಲೆ ಸಾಕ್ಷಾತ್ಕರಿಸಿಕೊಂಡಿದ್ದರು. ಬೆಂಗಳೂರಿನ ಜಗದೀಶ್ ನೇರ ಸುಬ್ರಹ್ಮಣ್ಯದಲ್ಲಿ ಬಸ್ಸಿಳಿದು, ಅದುವರೆಗೆ ಅಪರಿಚಿತ ಆಕಾಶ್ ಹಿಡಿದ ಬಸ್ಸಿನಲ್ಲೇ ಬಿಸಿಲೆಗೆ ಬಂದಿದ್ದರು. ಇನ್ನೆಷ್ಟೋ ಬೆಂಗಳೂರ ಮಂದಿ, ರಾತ್ರಿ ಬಸ್ ಹಿಡಿದು, ಅಪರಾತ್ರಿಯಲ್ಲೇ ಸಕಲೇಶಪುರದಲ್ಲಿಳಿದು ಜಾಗರಣೆ ಮಾಡಿದ್ದರು. ಮತ್ತೆ ದಿನದ ಮೊದಲ ಬಸ್ಸೇರಿ ಇನ್ನೆಲ್ಲೆಲ್ಲಿಂದಲೋ ಒಟ್ಟುಗೂಡಿದ್ದ ಇತರ ಭಾಗಿಗಳೊಡನೆ ಬಿಸಿಲೆ ಕಂಡುಕೊಂಡರು. ಎಂದಿನಂತೆ ಸಮುದಾಯ ಭವನ ವಾಸ್ತವ್ಯ ವಿಚಾರವಿನಿಮಯಕ್ಕೆ ನೆಲೆಯಾಗಿಯೂ ದೇವೇಗೌಡ-ಕಮಲಮ್ಮ ದಂಪತಿಯ ತುಳಸಿ ಹೋಟೆಲ್ ಎಲ್ಲರ ಹೊಟ್ಟೆಪಾಡಿಗೂ ಸಜ್ಜುಗೊಂಡಿದ್ದವು.

ಗುಬ್ಬಿ ಲ್ಯಾಬ್ಸ್ ಎಂದಿನಂತೆ ಔಪಚಾರಿಕ ಮಟ್ಟದಲ್ಲಿ, ಅರಣ್ಯ ಇಲಾಖೆಗೆ ನಮ್ಮ ಜೀವವೈವಿಧ್ಯ ಶಿಬಿರದ ಮಾಹಿತಿಯನ್ನೊಳಗೊಂಡ ಪತ್ರವನ್ನು ಸಾಕಷ್ಟು ಮುಂಚಿತವಾಗಿಯೇ ಕಳಿಸಿತ್ತು. ಆದರೆ ಈ ಬಾರಿ ಅದರ ಕುರಿತು ಇಲಾಖೆಯದೇನೋ ತುಸು ರಗಳೆ ಇದೆಯೆಂದು ಕಂಡದ್ದಕ್ಕೆ, ಹಿಂದಿನ ದಿನವೇ ಗುಬ್ಬಿ ಲ್ಯಾಬ್ಸ್ ಪ್ರತಿನಿಧಿಯಾಗಿ ವಿಘ್ನೇಶ್ ಬಿಸಿಲೆಗೆ ಬರಬೇಕಾಯ್ತು. ಆತ ಮೊದಲು ಅರಣ್ಯಾಧಿಕಾರಿಯನ್ನು ಮಾತಾಡಿಸಿ ಮತ್ತೆ ಪೋಲಿಸ್ ಠಾಣೆಗೂ ಭೇಟಿಕೊಟ್ಟು, ಸ್ಪಷ್ಟೀಕರಣ ಕೊಡುವಂತಾದ್ದು ಇಲಾಖೆಯ ಅಜ್ಞಾನಕ್ಕೇ ಕನ್ನಡಿ ಹಿಡಿದಂತಿತ್ತು. ನಮ್ಮ ಶಿಬಿರದ ಪ್ರಾಥಮಿಕ ಮಾತು, ಓಡಾಟಗಳೆಲ್ಲ ಗ್ರಾಮೀಣ ಆಡಳಿತದ (ರೆವಿನ್ಯೂ) ವಲಯದೊಳಗೂ ಕ್ಷೇತ್ರಕಾರ್ಯ ಶುದ್ಧ ಖಾಸಗಿ ನೆಲ (ಪಟ್ಟಾ ಭೂಮಿ) – ಅಶೋಕವನದೊಳಗೂ ನಡೆಯುವುದಿತ್ತು. ಸಾಲದ್ದಕ್ಕೆ ಆರು ವರ್ಷಗಳ ಹಿಂದಿನ ಪ್ರಥಮ ಕಪ್ಪೆ ಶಿಬಿರದಿಂದ ತೊಡಗಿ, ಇಂದಿನವರೆಗೂ ಇಲಾಖೆಗೆ ಮುನ್-ಮಾಹಿತಿ ಮತ್ತು ಮುಕ್ತ ಆಮಂತ್ರಣವೂ ಹೋಗುತ್ತಲೇ ಇತ್ತು. ಶಿಬಿರ ಸಮಾಪನದ ವಿವರಗಳು ಸಾರ್ವಜನಿಕ ಮಾಧ್ಯಮಗಳಲ್ಲಿ (ಮುಖ್ಯವಾಗಿ ನನ್ನ ಜಾಲತಾಣದಲ್ಲಿ) ಮುಕ್ತವಾಗಿ ಪ್ರಕಟವಾಗುತ್ತಲೂ ಇತ್ತು. ಆದರೂ ಈ ಬಾರಿ ತೆರೆದಿಟ್ಟ ಪುಸ್ತಕವನ್ನು ಓದಿ ಹೇಳುವ ಕೆಲಸವೂ ನಮ್ಮದೇ ಆದದ್ದು ವಿಚಿತ್ರ! ಅಡಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ಇಲಾಖೆ ತನ್ನ ಒಬ್ಬಿಬ್ಬ ಕೆಳಸ್ತರದ ನೌಕರರನ್ನು ಶಿಬಿರ ಭಾಗಿಗಳಾಗುವಂತೆ ಸೂಚಿಸಿತ್ತು. ಅವರು ಮುಖವೇನೋ ತೋರಿಸಿದರು. ಸಮುದಾಯ ಭವನದ ಒಳಗೆ ನಡೆಯುತ್ತಿದ್ದ ವಿಷಯ ಪ್ರವೇಶಾತ್ಮಕ ಅವಧಿಗವರು ಬರಲಿಲ್ಲ. ಹೊರಾಂಗಣದ ಒಂದು ಸುತ್ತಿಗೆ ಮಾತ್ರ ಇದ್ದೂ ಇರದಂತೆ ಜತೆಗಿದ್ದರು; ಸರಕಾರೀ ಕಛೇರಿಗಳಲ್ಲಿ ಕಾಣುವಂತೆ ಪುಸ್ತಕದಲ್ಲಿ ರುಜು ಹಾಕಿ, ಕ್ಯಾಂಟೀನಿನಲ್ಲಿ ಋಜುವಾಗಿರಬೇಕು!

ಬೆಳಿಗ್ಗೆ ಕಾರೇರಿ ಬೆಂಗಳೂರು ಬಿಟ್ಟ ಗುಬ್ಬಿ ಲ್ಯಾಬ್ಸ್ ಬಳಗ ಕೊನೆಯವರಾಗಿ ಬಿಸಿಲೆಗೆ ಬರುವಾಗ ಅರ್ಧ ದಿನವೇ ಕಳೆದು ಊಟದ ಹೊತ್ತೇ ಬಂದಿತ್ತು. ಅಷ್ಟರೊಳಗೆ ಮುಂದಾಗಿ ಬಂದ ಬಹುಮಂದಿ ಬಿಸಿಲೆ-ಹೊಸಬರಿಗೆ ನಿಪ್ಪಟ್ಟು ಚಾ ಕೊಟ್ಟು, ಕಿಮೀ ದೂರದ ವೀಕ್ಷಣಕಟ್ಟೆಗೆ ಚಾಲನೆ ಕೊಟ್ಟು, ಬಿಸಿಯಾಗಿಸುವ ಕೆಲಸ ನಾನು ಮತ್ತು ರೋಹಿತ್ ಮಾಡಿದ್ದೆವು!

ಊಟ ಮುಗಿದದ್ದೇ ಭೈಠಕ್ ಶುರು. ಭಾಗಿಗಳ ಸ್ವಪರಿಚಯ, ಗುಬ್ಬಿ ಬಳಗದ ನಿರ್ದೇಶಕ ಎಚ್.ಎಸ್. ಸುಧೀರರ ಪ್ರಾಸ್ತಾವಿಕ ನುಡಿ. ಹಿಂಬಾಲಿಸಿದವರು ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿ – ಕೆ.ಎಸ್. ಶೇಷಾದ್ರಿ. (ವಿವರಗಳಿಗೆ ಹಿಂದಿನ ಕಪ್ಪೆ ಶಿಬಿರದ ಲೇಖನಗಳು ಓದಿಕೊಳ್ಳಿ) ಇವರು ಕೆ.ವಿ ಗುರುರಾಜರ ‘ಕಪ್ಪೆ ಬೂಟಿ’ನೊಳಗೇ ಕಾಲಿಟ್ಟವರು ಮತ್ತು ಅವರ ಖಾಸಾ ಗೆಳೆಯ. ಪ್ಲ್ಯಾಸ್ಟಿಕ್ ಹೆಕ್ಕುವುದು, ಬಯಲ ಶೌಚ ನಿಷೇಧಿಸುವುದು, ವರ್ಷಂಪ್ರತಿ ಅದದೇ ಹೊಂಡಕ್ಕೆ ಹೊಸದಾಗಿ ಗಿಡ ನೆಡುವುದು ಎಂಬಿತ್ಯಾದಿ ಸರಳ ಪರಿಸರ ವ್ಯಾಖ್ಯಾನಕ್ಕೆ ಮೀರಿದ, ವಿಶ್ವವ್ಯಾಪೀ ಜೀವವೈವಿಧ್ಯದ ಬೆಳಕು ಇಂಥಲ್ಲಷ್ಟೇ ಕಾಣಿಸೀತು. ಶೇಷಾದ್ರಿ ಅದನ್ನು ಅಸಂಖ್ಯ ಉದಾಹರಣೆಗಳೊಂದಿಗೆ, ಆಕರ್ಷಕವಾಗಿ ಶಿಬಿರದುದ್ದಕ್ಕೆ ವಿಸ್ತರಿಸಿದರು. ಪ್ರಾಗೋ ಟೋಡೋ? ಕಿರ್ಕಿರಿ ಕೀಟವೋ (ಕ್ರಿಕೆಟ್ಟೋ) ಕಪ್ಪೆಯೋ? ಕಪ್ಪೆ ಕಾಲು ಬೀಸಿದ್ದು ಹೆಣ್ಣೊಲಿಸುವ ನೃತ್ತಕ್ಕೋ ಪ್ರತಿಸ್ಪರ್ಧಿಗೆ ಒತ್ತಕ್ಕೋ….

ಹೀಗೆ ಸಂಗತ, ಅಸಂಗತ ಸವಾಲುಗಳೆಲ್ಲ ನಿಶ್ಶೇಷವಾಗುವಂತೆ ಕಲಾಪ ಕಟ್ಟಿದರು ಶೇಷ. ಆರು ವರ್ಷಗಳುದ್ದಕ್ಕೆ ಕಪ್ಪೆಗಳ ಬೆಂಬತ್ತಿದ ‘ಗುರು’ (Gururaja Kv) ಕೊಟ್ಟ ಮಜಲೋಟದ ದಂಡವನ್ನು (relay baton) ಅಷ್ಟೇ ಸಮರ್ಥವಾಗಿ ನಿರ್ವಹಿಸಿದರು. ಒಳಾಂಗಣದಲ್ಲಿ ಮಾತುಗಳಿಗೆ ಮಡಿಲಗಣಕಾಧಾರಿತ ಸ್ಲೈಡ್‍ಗಳು, ಹೊರಗೆ ಜೀವಂತ ಸಾಕ್ಷಿಗಳು! ತಂತ್ರಜ್ಞಾನದ ಮಹಿಮೆಯಲ್ಲಿ ಇಂದು ಸಿದ್ಧ ಮಾಹಿತಿಗಳು ಹೊರಾಂಗಣಕ್ಕೂ ಅಪಾರ ಸಹಕರಿಸುತ್ತವೆ. ಗುಬ್ಬಿ ಲ್ಯಾಬ್ಸ್ ಮತ್ತು ಕೆವಿಜಿ ರೂಪಿಸಿದ ಯಾಪ್ ಎಲ್ಲರ ಅಂಗೈಯೊಳಗಿನ ಚರವಾಣಿಯಲ್ಲಿ ಅಡಕವಾಗಿ, ಈ ವಲಯದ ಕಪ್ಪೆಗಳೆಲ್ಲದರ ಕರೆ ಸಹಿತ ಮಾಹಿತಿಯನ್ನು ಖಚಿತವಾಗಿಯೇ ಕೊಡುತ್ತಿರುವುದು ಇಲ್ಲಿ ತುಂಬಾ ಉಪಯುಕ್ತವಾಗುತ್ತಿತ್ತು. ಇವುಗಳೊಡನೆ ನನ್ನ ಆರು ವರ್ಷಗಳ ಹಿಂದಿನ ನೆನಪೊಂದು ಸುಳಿದು ಬಂತು….

ಅಂದು, ಇಲ್ಲೇ ಮೊದಲ ಕಪ್ಪೆ ಶಿಬಿರದ ಕಾಲಕ್ಕಾಗುವಾಗ, ಸಮುದಾಯ ಭವನದಲ್ಲಿ ಬಾವಿಗಿಟ್ಟ ಪಂಪಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು. ಶಿಬಿರದ ರಾತ್ರಿಯ ಬೆಳಕಿಗೆ ಮೊಂಬತ್ತಿಗಳೇ ದಿಕ್ಕು. ಶಿಬಿರದಲ್ಲಿನ ಸ್ಲೈಡ್ ಪ್ರದರ್ಶನಕ್ಕಾಗಿ ನಾವು ಮಂಗಳೂರಿನಿಂದ ಕಿರು ವಿದ್ಯುಜ್ಜನಕ, ಪುಟ್ಟ ಟ್ರಂಕ್ ದಪ್ಪದ ಪ್ರೇಷಕವನ್ನು ಸಾಗಿಸಿ ಕಷ್ಟಪಟ್ಟಿದ್ದೆವು. ಇಂದೂ ಸಮುದಾಯ ಭವನದ (ಅ)ವ್ಯವಸ್ಥೆಯಲ್ಲಿ ವಿಶೇಷ ಬದಲಾವಣೆಯಾಗಿಲ್ಲ. ಆದರೆ ತಂತ್ರಜ್ಞಾನ ಮುಂದುವರಿದಿದೆ ಅಥವಾ ಸಾಮಾನ್ಯರ ಕೈಗೆಟುಕುವಂತಾಗಿದೆ. ಒಂದೆರಡು ಗಂಟೆ ನಿರಂತರ ಶಕ್ತಿಯೂಡುವ ಸಣ್ಣ ಬ್ಯಾಟರಿ ಬಲದ, ಬುತ್ತಿಪೆಟ್ಟಿಗೆಯಷ್ಟೇ ಪುಟ್ಟ ಎಲ್ಲೀಡಿ ಪ್ರೇಷಕ ನಮ್ಮ ವೀಕ್ಷಣೆಯನ್ನು ಸರಳವಾಗಿಸಿತ್ತು. ಭವನದೊಳಗಿನ ಬೆಳಕಿಗೆ ಹರಕುಮುರುಕು ಸರಿಗೆ ಎಳೆದಿದ್ದರೂ ಪವರ್ ಪ್ಯಾಕುಗಳೂ ಬಂದಿದ್ದ ಮೂರು ಕಾರುಗಳಲ್ಲೇ ಸುಲಭ ಮರುಪೂರೈಕೆಯ ವ್ಯವಸ್ಥೆಗಳೂ ಇದ್ದುದರಿಂದ ಮೂರು ದಿನದ ಕಲಾಪಗಳು ಹಗುರವಾಗಿಯೇ ನಡೆದವು.

ಈ ಋತುಮಾನದ ಮಳೆ ಕಳೆದ ವರ್ಷಕ್ಕಿಂತಲೂ ಹೆಚ್ಚು ದಿಕ್ಕೇಡಿ. ಕಪ್ಪೆ ಶಿಬಿರದ ದಿನಾಂಕಗಳವರೆಗೆ ಬಿಸಿಲೆಯಲ್ಲೂ ಮಳೆ ತೀವ್ರ ಕೊರತೆಯಾಗಿತ್ತು. ಅನಂತರ ಸಾಕಷ್ಟು ಬಂದಿದ್ದರೂ ಹೋಟೆಲ್ ದೇವೇಗೌಡರ ಮಾತಿನಂತೆ “ಮತ್ತೆ ನಿನ್ನಿವರ್ಗೂ ಮಳೆನೇ ಇರ್ಲಿಲ್ಲ.” ಆದರೂ ತಡ ಸಂಜೆಯಲ್ಲಿ ನಾವು ‘ಕಪ್ಪೆ ಭೇಟಿ’ಗೆ ಗಾಡಿ ದಾರಿ ಹಿಡಿದಾಗ, ಮರುದಿನ ಮರ ಗುರುತಿಸಲು ಇಳಿದಾಗ, ರಾತ್ರಿ ಇನ್ನೊಂದೇ ದಾರಿಯಲ್ಲಿ ‘ಮಂಡೂಕ ಮಿಲನ’ ನೋಡಲು ಹೊರಟಾಗೆಲ್ಲ ಮಳೆ ಚಿರಿಪಿರಿ ಎಂದು ಬಿಡದೇ ಕಾಡಿತ್ತು. ಅಲ್ಲೆಲ್ಲ ನೀರಧಾರೆ ದೊಡ್ಡದಿರಲಿಲ್ಲ. ಹಾಗಾಗಿ ಶಿಬಿರಕ್ಕೆ ಆವಶ್ಯಕವಾದ ‘ಶೇಷ’ ವಾಗ್ಧಾರೆಗೆ ತಡೆಯಾಗಲಿಲ್ಲ, ಸಮೃದ್ಧಿ, ವೈವಿಧ್ಯ ಬಡವಾಗಲೂ ಇಲ್ಲ.

ಗಾಡಿದಾರಿಯಲ್ಲಿ ಅಶೋಕವನಕ್ಕಿಳಿಯುವ ಝರಿಯವರೆಗೆ ನಮ್ಮ ಸರ್ಕೀಟ್ ಹೋಗಿತ್ತು. ಇತ್ತ ಹಳ್ಳಿದಾರಿಯಲ್ಲಿ ಹಿಂದೆ ಏರಿದ್ದ ಭಾರೀ ಬಂಡೆಯವರೆಗೂ ಪಾದ ಬೆಳೆಸಿದ್ದೆವು. ಸಮುದಾಯ ಭವನದ ಒತ್ತಿನ ಪುಷ್ಕರಣಿ ಮೊದಲ ಕಪ್ಪೆ ಶಿಬಿರದ ಕಾಲದಲ್ಲಿ ನೀರು ತುಂಬಿ ಕಾಣಿಸಿತ್ತು. ಅದು ಈ ಬಾರಿ ಕಳೆ, ಗೊಸರು ತುಂಬಿ ನಿರಾಶೆ ಹುಟ್ಟಿಸುವಂತಿತ್ತು. ತುಸು ಆಚಿನ ದೊಡ್ಡ ಕೆರೆ ಮಾತ್ರ ಮೈದುಂಬಿತ್ತು. ಒಂದು ತಡರಾತ್ರಿಯಲ್ಲಿ ಇವೆರಡರ ಆಸುಪಾಸಿನಲ್ಲೂ ನಮ್ಮವರ ಹುಡುಕಾಟ ನಡೆದಿತ್ತು. ಇಲ್ಲಿನ ಹಿಂದಿನೊಂದು ಕಪ್ಪೆ ಶಿಬಿರದಲ್ಲಿ ಭಾಗಿಯಾದ ಅನುಭವದ ಬಲದಲ್ಲಿ ಶೇಷಾದ್ರಿ ಮೊದಲೇ ಕಣಿನುಡಿದಿದ್ದರು “ಏನೇ ಇರಲಿ, ಹತ್ತಕ್ಕೂ ಹೆಚ್ಚು ಕಪ್ಪೆ ವೈವಿಧ್ಯ ಸಿಕ್ಕುವುದು ಖಾತ್ರಿ.” ಋತುಮಾನದ ಆದಿಯಲ್ಲಿ ಕಾಣಿಸುವ ಮಂಡೂಕಕುಲ ‘ಮಿಲನೋತ್ಕಟ’ ಚಟುವಟಿಕೆಗಳು ವಿಶೇಷ ಕಾಣಿಸಲಿಲ್ಲ. ಆದರೂ ಕೊನೆಯಲ್ಲಿ ನಮಗೆ ಹದಿನೇಳಕ್ಕೂ ಮಿಕ್ಕು ಕಪ್ಪೆಕುಲ ವೈವಿಧ್ಯದ ಇರವಿಗೆ ಸ್ಪಷ್ಟ ಸಾಕ್ಷಿಗಳು ದಕ್ಕಿದ್ದವು. ಹೆಚ್ಚಿನವು ದರ್ಶನವನ್ನೇ ಕೊಟ್ಟರೆ, ಕೆಲವು ನಮಗೆ ಅಗಮ್ಯ ಮೂಲೆಗಳಲ್ಲಿದ್ದುಕೊಂಡು ಸ್ಪಷ್ಟ ಕರೆಗಳನ್ನು ಕೊಟ್ಟು ಸಾಂತ್ವನ ಹೇಳಿದ್ದವು. ನೀರೊಳ್ಳೆ, ಹಸಿರುಹಾವುಗಳು, ಈ ವಲಯಕ್ಕೆ ವಿಶಿಷ್ಟವಾದ ಅರಣೆ ಜೋಡಿ ಮತ್ತು ಹಲ್ಲಿ, ಹಲ ನಮೂನೆಯ ಹಕ್ಕಿ, ಚಿಟ್ಟೆ, ಅಣಬೆ, ಮರೆತರೂ ಬಿಡದೆ ಅಟಕಾಯಿಸುವ ಜಿಗಣೆಸೈನ್ಯ ಶಿಬಿರೋತ್ಸಾಹಿಗಳ ಸೂಕ್ಷ್ಮ ಗ್ರಹಿಕೆಗೆ ಪುಟ ನೀಡಿದ್ದವು. ಇನ್ನು ಬಳ್ಳಿ ಗಿಡಮರಾದಿಗಳ ಸಮೃದ್ಧಿ, ಮುಖ್ಯವಾಗಿ ವೀಕ್ಷಣ ಕಟ್ಟೆಯಿಂದ ಕಾಣುವ ಮೋಡಗಳ ಲೀಲೆಯಲ್ಲಿ ವಿರಾಜಮಾನವಾದ ಕುಮಾರ ಪರ್ವತರಾಜ, ಕಂಡೂ ಕಾಣದೆಯೂ ನಿರಂತರ ಭೋಪರಾಕಿಸುವ ನೀರಹರಿವೂ ಸೇರಿದಂತೆ ಅರಣ್ಯಘೋಷ ಸದ್ದುಗಳು ಸಮಯದ ಮಿತಿಯಲ್ಲದಿದ್ದರೆ, ಜೀವಮಾನವೇ ಸಣ್ಣದು ಎನ್ನುವಂತಿದ್ದವು.

ಶಿಬಿರದ ಎರಡನೇ ಬೆಳಿಗ್ಗೆಗೆ, ಸಕಲೇಶಪುರಕ್ಕೆ ಬಂದಿಳಿದಿದ್ದ, ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ರೀಕಾಂತ ಗುನಗ ಮತ್ತವರ ಸಮಾನಾಸಕ್ತ ಗೆಳೆಯ ಎಂ.ಎನ್. ನಾಯಕ್ ಅವರನ್ನು ಸುಧೀರ ಕಾರಿನಲ್ಲಿ ಹೋಗಿ ಕರೆತಂದರು. ಅವರು ಪಶ್ಚಿಮ ಘಟ್ಟ ವಲಯದ ಸಸ್ಯಸಂಪತ್ತನ್ನು ವೈಜ್ಞಾನಿಕವಾಗಿ ಗುರುತಿಸುವುದು ಮತ್ತು ಸರ್ವೇಕ್ಷಣ ನಡೆಸುವಲ್ಲಿ ಪರಿಣತರು. ಅವರೂ ವಿಷಯ ಪ್ರವೇಶಿಕಾ ಮಾತುಗಳನ್ನು ಭವನದೊಳಗೇ ಕೊಟ್ಟು, ಹತ್ತೂವರೆಯ ಸುಮಾರಿಗೆ ಕ್ಷೇತ್ರಕಾರ್ಯಕ್ಕಿಳಿಸಿದರು. ಯೋಜನೆಯಂತೆ ಎಲ್ಲ ಗಾಡಿದಾರಿಯನ್ನನುಸರಿಸಿ ಅಶೋಕವನಕ್ಕೆ ಧಾವಿಸಬೇಕಿತ್ತು. ಆದರೆ ಬಹುತೇಕ ಶಿಬಿರಾರ್ಥಿಗಳು (ಐಟಿಯವರು) ಜೀವವಿಜ್ಞಾನ-ದೂರರಾದ್ದರಿಂದ ದಾರಿಯಲ್ಲಿ ಸಿಕ್ಕ ಮರಗಿಡಗಳ ಧ್ಯಾನ ತುಸು ಜಾಸ್ತಿಯೇ ಮಾಡಿದರು. ಶ್ರೀಕಾಂತರ ವಿದ್ವತ್ ಮತ್ತು ವಿನಯ ಅವರನ್ನು ಸಮಾಧಾನಿಸುತ್ತ ಸಾಗಿ ಬರುವಲ್ಲಿ ಸಮಯ ಸಹಕರಿಸಲಿಲ್ಲ! ಹನ್ನೆರಡು ಗಂಟೆಯ ಸುಮಾರಿಗೆ ಎಲ್ಲರು ಅಶೋಕವನ ತಲಪಿದಾಗ ಪೂರ್ವ ಯೋಜನೆಯನ್ನು ಹೃಸ್ವಗೊಳಿಸುವುದು ಅನಿವಾರ್ಯವಾಯ್ತು.

ಅಶೋಕವನದ ತೊರೆ ದಂಡೆಯಲ್ಲಿ ನಾವು ಗುರುತಿಸಿಕೊಂಡ ಶಿಬಿರತಾಣ ಮೂಲದಲ್ಲಿ ಏಲಕ್ಕಿ ಸಸಿಮಡಿ ಪೋಷಿಸಲು ಮಾಡಿದ ತಟ್ಟು. ಅದರಿಂದ ತುಸು ಆಚೆಗೆ, ನನ್ನ ಇಚ್ಛೆಯ ವಿರುದ್ಧ, ಅರಣ್ಯ ಇಲಾಖೆ ಆನೆ ತಡೆಯಾಗಿ ನಿರ್ಮಿಸಿದ್ದ ವಿದ್ಯುತ್ ಬೇಲಿಯಿತ್ತು. ವಾಸ್ತವದಲ್ಲಿ ಆ ಬೇಲಿ ಬಾಲಗ್ರಹ ಕಳಚಿಕೊಳ್ಳಲೇ ಇಲ್ಲ. ಅದರಲ್ಲೆಂದಾದರೂ ಮಿಂಚು ಹರಿದಿತ್ತೋ ಊರಿಗೆ ನುಗ್ಗಬಹುದಾಗಿದ್ದ ಆನೆ ಹಿಂಡನ್ನು ನಿರುತ್ತೇಜನಗೊಳಿಸಿತ್ತೋ ನಾನಂತೂ ಕೇಳಿಲ್ಲ! ಆದರೆ ನಿಜದ ಕಾರ್ಯಾಚರಣೆಯ ವೈಖರಿ ನನಗೆ ತಿಳಿಯದ್ದೇನೂ ಅಲ್ಲ. ಕಂಬ, ತಂತಿ, ವಾಹಕಗಳು, ಬ್ಯಾಟರಿ, ಶಕ್ತಿ ಮರುಪೂರಣದ ಸಲಕರಣೆಗಳು, ಸಿಮೆಂಟು, ಬೇಲಿ ಹೋದ ಉದ್ದಕ್ಕೂ ಎರಡೂ ಪಕ್ಕಗಳಲ್ಲಿ ಕಾಡುಕೀಸುವ ಕಾಮಗಾರಿ, ಕಾರ್ಮಿಕರ ಓಡಾಟ, ಊಟ, ವಸತಿ… ಇತ್ಯಾದಿ ವಹಿವಾಟಿನ ಒಳಹೊರಗು – ಛೆ ಛೆ ಹೇಳಿ ಮುಗಿಯುವಂತದ್ದಲ್ಲ, ಬಿಡಿ. ಇಂದಿನ ನಮ್ಮ ಸರ್ವೇಕ್ಷಣೆ ಈ ಮನುಷ್ಯ ಚಟುವಟಿಕೆಯನ್ನು ಮೀರಿದ ನೆಲದಲ್ಲಾಗಬೇಕಿತ್ತು.

೨೦೦೭ರಷ್ಟು ಹಿಂದೆ ನಾವಿಲ್ಲಿ ಮೂರು ದಿನಗಳ ಒಂದು ಅನೌಪಚಾರಿಕ ಶಿಬಿರ ನಡೆಸಿದ್ದೆವು. (ನೋಡಿ: ಕಾನನದೊಳಗಿಂದೆದ್ದು ಬಂದವನಾವನಿವಂ) ಅಂದು ನಮ್ಮೊಡನೆ ವನ್ಯಜೀವ ಶಾಸ್ತ್ರದಲ್ಲಿ ಉನ್ನತ ಅಧ್ಯಯನ ನಡೆಸುತ್ತಿದ್ದ ನಾಲ್ವರು ಹುಡುಗಿಯರು ಇದ್ದರು. ಅವರಿಗೆ ಇಲ್ಲಿನ ಸಸ್ಯ ಅಧ್ಯಯನಕ್ಕೊಂದು ನಿವೇಶನ (ಪ್ಲಾಟ್) ನಿಶ್ಚಯಿಸುವ ಉತ್ಸಾಹ ಬಂದಿತ್ತು. ಆ ಕಾಲದಲ್ಲಿ ಅನಿಷ್ಟದ ವಿದ್ಯುತ್ ಬೇಲಿ ಬಂದಿರಲಿಲ್ಲ. ಆದರೆ ಸಸ್ಯ ಮಡಿಯ ತಾಣದಿಂದಾಚೆಗೆ ಹಳ್ಳಿಯ ಗೋಮಂದೆಯ ಚರಾವಿನ ಕೆಲವು ಜಾಡುಗಳಿದ್ದವು. ಹಾಗಾಗಿ ಅಧ್ಯಯನಿಗಳು ತೊರೆಯ ಎದುರು ದಂಡೆಯ ತುಸು ಕಡಿದಾದ ನೆಲದಲ್ಲಿ, ಹೆಚ್ಚು ಮನುಷ್ಯ ದೂರವಾದ ಕಾಡನ್ನೊಳಗೊಂಡು ನಿವೇಶನ ಗುರುತಿಸಿದ್ದರು. ಆದರೆ…..

ಶ್ರೀಕಾಂತರು ನಿವೇಶನ ಗುರುತಿಸುವಲ್ಲಿ ಬೇಲಿ ವಲಯವನ್ನಷ್ಟೇ ಮೀರಿದರು, ತೊರೆ ಸಾಮೀಪ್ಯವನ್ನು ಬಿಡಲಿಲ್ಲ. ಬಹುಶಃ ಇಲ್ಲಿ ನೀರಿನ ಕಾರಣದಿಂದ ಕಾಣುವ ಸಸ್ಯ ವೈವಿಧ್ಯದ ಸಮೃದ್ಧಿಯನ್ನವರು ಲಕ್ಷ್ಯದಲ್ಲಿಟ್ಟಿರಬೇಕು. ನಮ್ಮಲ್ಲಿ ಉದ್ದದ ಅಳತೆಪಟ್ಟಿ ಹಾಗೂ ಹಗ್ಗ ಸುರುಳಿಗಳಿದ್ದವು. ಹಳ್ಳಿಯ ಜಾನುವಾರು ಜಾಡನ್ನೇ ಕೇಂದ್ರವಾಗಿಟ್ಟುಕೊಂಡು ಸುಮಾರು ಇಪ್ಪತ್ತೈದು ಮೀಟರಿನ ಉದ್ದಗಲದ ಚೌಕಕ್ಕೆ ನೆಲದಲ್ಲಿ ಹಗ್ಗ ಹಾಸಿದರು. ಅನಂತರ ಶಿಬಿರಾರ್ಥಿಗಳನ್ನು ಅದರೊಳಗೆ ನಾಲ್ನಾಲ್ಕು ಜನ ಕೈ ಕೈ ಹಿಡಿದು ಸಣ್ಣ ಚೌಕಗಳನ್ನು ಮಾಡಿಕೊಳ್ಳುತ್ತ ಎರಡು ಗುಂಪುಗಳಲ್ಲಿ ದಾಖಲೀಕರಣ ನಡೆಸಲು ಬಿಟ್ಟರು. ಅಲ್ಲಿ ಲಭ್ಯ ಹುಲ್ಲಿನಿಂದ ಮಹಾಮರದವರೆಗೆ ಸಸ್ಯಶಾಸ್ತ್ರೀಯ ಗುರುತು ಮತ್ತು ಹೆಸರನ್ನು ಶ್ರೀಕಾಂತ್ ಮತ್ತು ನಾಯಕ್ ಹೇಳಿಕೊಟ್ಟರು. ಸಂತೋಷದ ವಿಚಾರವೆಂದರೆ, ಅವರ ತತ್ಕಾಲೀನ ನೆನಪನ್ನು ಮೀರಿದ ಕೆಲವು ಸಸ್ಯಗಳು ಕಾಣಿಸಿದ್ದವು. ಅಂಥಲ್ಲೆಲ್ಲ ಸವಿನಯ ಅವನ್ನು “ಗುರುತರಿಯದ ಮಾದರಿ” ಎಂದೇ ದಾಖಲಿಸಿಕೊಳ್ಳಲು ಸೂಚಿಸುತ್ತಿದ್ದರು. ಆದರೆ ಅವುಗಳ ಲಕ್ಷಣಗಳ ಪಟ್ಟಿ ಮಾಡಿಕೊಂಡು, ಹಿಂದಿನಿಂದ ಪುಸ್ತಕಗಳ ಮೊರೆಹೋಗಿ, ಗುರುತು ಹಚ್ಚುವ ಹೊಣೆಯನ್ನು ಶ್ರೀಕಾಂತರು ಮರೆಯಲಿಲ್ಲ. ಉಳಿದಂತೆ, ಒಂದೇ ಜಾತಿಯ ಸಸ್ಯಗಳಿದ್ದರೆ ಸಂಖ್ಯೆ, ಗಿಡ ಅಥವಾ ಮರವಾದರೆ ಅವುಗಳ ನಿರ್ದಿಷ್ಟ ಎತ್ತರದಲ್ಲಿ ಕಾಂಡದ ಸುತ್ತಳತೆ ಮತ್ತು ಅಂದಾಜು ಎತ್ತರವನ್ನು ಟಿಪ್ಪಣಿ ಪುಸ್ತಕದಲ್ಲಿ ದಾಖಲಿಸಿಕೊಂಡೆವು. ಕೊನೆಯಲ್ಲಿ ಒಟ್ಟು ನಿವೇಶನವನ್ನು ಜೀಪಿಎಸ್ ಮೂಲಕ ಸ್ಥಾನ ನಿರ್ದೇಶನ ಮಾಡಿ, ಕಂಡುಕೊಂಡದ್ದೂ ಆಯ್ತು. ಈ ಎಲ್ಲ ಸಸ್ಯ ಮಾಹಿತಿಗಳು ವಿರಾಮದಲ್ಲಿ ಸೂಕ್ತ ಪುಸ್ತಕಗಳ ಮೂಲಕ ಹೆಚ್ಚಿನ ಪರಿಚಯಕ್ಕೊದಗುವುದು ಒಂದು ಲಾಭ. ಮತ್ತೆ ನಿಯತ ಕಾಲಾಂತರದಲ್ಲಿ (ವಿವಿಧ ಋತುಮಾನಗಳಲ್ಲಿ ಅಥವಾ ವರ್ಷಕ್ಕೊಮ್ಮೆ ಅನ್ನಿ) ಇದೇ ಕ್ಷೇತ್ರಕ್ಕೆ ಮರುಭೇಟಿ ಕೊಡುತ್ತ ಬಂದರೆ, ವನ್ಯ ವಿಕಾಸದ ಇತಿಹಾಸವನ್ನೇ ಜೀವಂತವಾಗಿ ಕಾಣಬಹುದು!

ತುಂಟ ಬಿಸಿಲಕೋಲಿಗೂ ಇಣುಕಿಂಡಿ ಕೊಡದ ಕಾಡಿನಲ್ಲೊಂದು ಭಾರೀ ಮರ ಬಿತ್ತೆನ್ನಿ. ಅದು ಹರಿದ ಬಳ್ಳಿ ಬಂಧ, ಹುಡಿಗುಟ್ಟಿದ ನೆರೆಹೊರೆಯ ಗಿಡಮರ, ಮಗುಚಿದ ನೆಲದ ಸತ್ತ್ವ, ಒದಗಿದ ಋತುಸಂಧಾನ, ಸನ್ನಿವೇಶದ ಲಾಭಕ್ಕೆರಗುವ ಇತರ ಜೀವಜಂತುಗಳ ಕೊಡುಗೆ ಅಲ್ಲೊಂದು ಹೊಸದೇ ಭೂಮಿಕೆಯನ್ನು ಸೃಷ್ಟಿಸುತ್ತದೆ. ಸಹಜವಾಗಿ ಹೊಸಬೆಳೆಯ ಕಳೆಯೇ ಬೇರೆ. ಬಿದ್ದ ಕೊಂಬೆ, ಬೊಡ್ಡೆಗಳನ್ನೇ ಕಾದ ನೂರೆಂಟು ಕೀಟ, ಅಣಬೆಗಳು ನಾವು ಕಾಣದ್ದೇನಲ್ಲ. (ಅವೆಲ್ಲ ನಮಗೆ ಪರಿಚಿತ ಎನ್ನುವ ದಾರ್ಷ್ಟ್ಯ ನನ್ನದಲ್ಲ!) ಆದರೆ ಅವನ್ನೂ ಮೀರಿ ಗಾಳಿಗುದುರೆ ಏರಿ ಬಂದ ಯಾವುದೋ ಕನಸಿನ ಬೀಜ, ಮಳೆ ನೀರಗುಂಟ ತೇಲಿ ಲಂಗರಿಕ್ಕಿದ ಬೇರ ಮುಗುಳು, ಅಡ್ಡಾಡಿದ ಪ್ರಾಣಿಪಕ್ಷಿಗಳ ಮಲದಲ್ಲಿ ಹಾಯ್ದು ನಿಂದ ವಿಕಾಸ ನಾಟಕದ ಇನ್ನೊಂದೇ ಅದ್ಭುತ ದೃಶ್ಯ ಹೊಸದೇ ಅವಕಾಶವನ್ನು ಬಳಸಿ ಅರಳುವ ಚಂದ ಊಹೆಗೂ ನಿಲುಕದು. ಪ್ರಕೃತಿ ಬಹು ಸಹಸ್ರಾವಧಾನಿ – ಇದಕ್ಕೆ ನೆನಪುಗಳ ಹಂಗೋ ಭವಿಷ್ಯತ್ತಿನ ಭೀತಿಯೋ ಖಂಡಿತಾ ಇಲ್ಲ; ಭಾವಗಳ ಸೋಂಕೇನಿದ್ದರೂ ನಮ್ಮದು! ಆದರೆ ಅದರ ಪ್ರತಿ ಕ್ರಿಯೆಯಲ್ಲೂ ವಿಶ್ವದ ಆಳ ಹರಹುಗಳು ನಿಸ್ಸಂದೇಹವಾಗಿ ಅಡಗಿಯೇ ಇರುತ್ತವೆ.

ಮಳೆ, ಜಿಗಣೆ, ಕೆಸರು, ಏರಿಳಿತ, ಕಾಡು ಎಲ್ಲ ಒಪ್ಪಿಕೊಂಡು ಶ್ರದ್ಧೆ ಶಿಸ್ತುಗಳೊಡನೆ ಸಸ್ಯ ಗುರುತಿಸುವ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೆ ನಾವು ತುಳಸಿ ಹೋಟೆಲ್ ಮುಟ್ಟಿದಾಗ ಸಂಜೆಯಾಗಿತ್ತು! ಅಪರಾಹ್ನದ ಮತ್ತು ಮರುಬೆಳಗ್ಗಿನ ಬೈಠಕ್ಕುಗಳಲ್ಲಿ ಶ್ರೀಕಾಂತರು, ಕ್ಷೇತ್ರಕಾರ್ಯದ ನಡುವೆ ಪ್ರಸರಿಸಲಾಗದ ಮತ್ತು ಪರಿಹರಿಸಲಾಗದ ವಿಚಾರಗಳನ್ನು ಸಮರ್ಪಕಗೊಳಿಸಿದರು. ಅಂದು ಕತ್ತಲಲ್ಲಿ ಮೊದಲೇ ಹೇಳಿದಂತೆ ‘ಬಂಡೆ’ಯವರೆಗಿನ ನಡಿಗೆ, ಮರು ಬೆಳಿಗ್ಗೆ ಎಲ್ಲರಿಗೂ ಅಧಿಕೃತವಾಗಿ ಬಿಸಿಲೆಯ ಕುಖ್ಯಾತ ಬೀಟಿ ಸ್ಪಾಟ್ (ಕ್ಷಮಿಸಿ, ಇಲ್ಲಿ ಪ್ರಕೃತಿಯ ದೋಷವೇನೂ ಇಲ್ಲ, ಎಲ್ಲ ಇಲಾಖೆಯದು) ದರ್ಶನದೊಡನೆ ಹೊರಸಂಚಾರಗಳೆಲ್ಲ ಮುಗಿಸಿದೆವು. ಶ್ರೀಕಾಂತರು ಕೆಲವರ್ಷಗಳ ಹಿಂದೆ, ಅದೇ ಮೊದಲಬಾರಿಗೆ ಬಿಸಿಲೆ ಭೇಟಿ ಕೊಟ್ಟಿದ್ದರಂತೆ. ಅಂದು ಬಿಸಿಲೆಯ ಮರಪಾಚಿಗೇ ಸೀಮಿತವಾದ ಆರ್ಕಿಡ್ ಮತ್ತೊಂದು ಸಸ್ಯ ವಿಶೇಷಗಳ ಅಧ್ಯಯನವೇ ಇವರ ಲಕ್ಷ್ಯವಾಗಿತ್ತಂತೆ. ಈ ಸಲದ ನಮ್ಮ ಭೇಟಿ ಸಂದರ್ಭದಲ್ಲಿ ಆ ಆರ್ಕಿಡ್ಡನ್ನು ಮತ್ತೆ ಅದೇ ಸ್ಥಳದಲ್ಲಿ ಗುರುತಿಸಲು, ನಮಗೆಲ್ಲ ತೋರಿಸುವಂತಾದ್ದು ಶ್ರೀಕಾಂತರಿಗೊಂದು ಧನ್ಯತೆಯ ಕ್ಷಣ.

ಶಿಬಿರದ ಕೊನೆಯ ಕಲಾಪ – ಗುರುತಿಸಿದ ಜೀವವೈವಿಧ್ಯಗಳ ಪುನರ್ಮನನ ನಡೆದಿದ್ದಂತೆ ಅನಿರೀಕ್ಷಿತ ಅತಿಥಿಯೊಬ್ಬರು ಬಂದರು. ಎರಡು ವಾರಗಳ ಹಿಂದಷ್ಟೇ ನಾನು ಹಳೆಯಂಗಡಿ ಪಪೂ ಕಾಲೇಜಿನ ಒಂದು ಸಣ್ಣ ಪರಿಸರ ಕಲಾಪಕ್ಕೆ ಹೋಗಿದ್ದೆ. ಆಗ ಪರಿಚಿತರಾದ ಅಲ್ಲಿನ ಮೇಷ್ಟ್ರು – ಅನಿಲ್ ವಿ. ಚೆರಿಯನ್‍, ಮೂಲತಃ ಕಡಬದವರು ಎಂದು ನನಗೆ ತಿಳಿಯಿತು. ಆಗ ಪ್ರಾಸಂಗಿಕವಾಗಿ ಈ ಶಿಬಿರದ ಕುರಿತು ಅವರಿಗೆ ಮಾಹಿತಿ ಕೊಟ್ಟಿದ್ದೆ. ಇಷ್ಟರಲ್ಲೇ ನನ್ನ ಜಾಲತಾಣವನ್ನು ಸುಮಾರು ಜಾಲಾಡಿದ ಅನಿಲ್, ‘ಅಶೋಕವನ’ ನೋಡುವ ಬಯಕೆ ಕಟ್ಟಿಕೊಂಡಿದ್ದರು. ಈ ಆದಿತ್ಯವಾರ ಕಡಬಕ್ಕೆ ಬಂದವರು, ತನ್ನ ಹಳೇ ಬುಲೆಟ್ (ಬೈಕಿನ) ನೊಗಕ್ಕೆ ಕಟ್ಟಿಸಿದ್ದ ಲೊಂಬಾರ್ಡಿನಿ (ಇಂಜಿನ್) ಕುದುರೆಯನ್ನು ಧಗ್ ಧಗ್ ಓಡಿಸುತ್ತ ಬಿಸಿಲೆಗೇ ಬಂದಿದ್ದರು. ನಾವು ಶಿಬಿರ ಬರ್ಖಾಸ್ತು ಮಾಡುವ ಸಲುವಾಗಿ ಅಶೋಕವನಕ್ಕೆ ಸಣ್ಣ ಭೇಟಿ ಕೊಡಲು ಕಾರು ಬೈಕೇರಿ ಹೋಗುವಾಗ ಅನಿಲ್ ಕೂಡಾ ನಮ್ಮ ಜತೆಗಿದ್ದರು. ಬಿಸಿಲೆ ಮಾರ್ಗ ಅಗಲೀಕರಣದ ಉತ್ಪಾತ ಮತ್ತು ಸಹಜ ಮರ ಕೊಂಬೆ ಉರುಳಿದ್ದರಿಂದ ನಮ್ಮ ಕಾಡಿಗೆ ನುಗ್ಗುವ ಒಳದಾರಿ ಮುಚ್ಚಿಹೋಗಿತ್ತು. ಬದಲಿ ಜಾಡು ಹುಡುಕಿಕೊಂಡಲ್ಲಿ ಅನಿಲ್ ಕೂಡಾ ಭಾಗಿಯಾಗಿ ಸಂತಸಪಟ್ಟರು. ಪ್ರಕೃತಿಪರ ಮನಕಟ್ಟುವಲ್ಲಿ ಮುಗಿದ ಬಿಸಿಲೆ ಶಿಬಿರವನ್ನು ತನ್ನ ಕಾಲೇಜಿನ ಮಕ್ಕಳಿಗೂ ಮುಟ್ಟಿಸುವ ಕುರಿತು ಕನಸು ಕಟ್ಟುತ್ತ ನನ್ನ ಮಂಗಳೂರಿಗೆ ಮರಳುವ ದಾರಿಯಲ್ಲಿ ಕಡಬದವರೆಗೆ ಸಂಗಾತಿಯೂ ಆದರು.

ಜೀವವೈವಿಧ್ಯದ ಪರಿಸರಕ್ಕಾಗಿ ನಾಗರಿಕ ಕಸ ಹೆಕ್ಕುವುದಲ್ಲ, ಮೂಲದಲ್ಲಿ ಬಿಕ್ಕಲೇಬಾರದು. ರಾಜಕೀಯ ಲಾಭೋದ್ದೇಶದ ಸ್ವಚ್ಛ ಭಾರತಕ್ಕಾಗಿ ಕ್ಷುದ್ರ ಮಾನವಮಿತಿಯ ಕಲಾಪಗಳನ್ನು ಹೇರುವುದಲ್ಲ, ಬಹುದೊಡ್ಡ ಗಾತ್ರದಲ್ಲಿ ಕುಸಿಯುತ್ತಿರುವ ಪ್ರಾಕೃತಿಕ ಸಂಪತ್ತನ್ನು ಚೆನ್ನಾಗಿ ಅರಿತು ಉಳಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಶಿಬಿರ ಯಶಸ್ವಿಯಾಯಿತು. ಸುಮಾರು ತೊಂಬತ್ತರಷ್ಟಿದೆ ಎಂದೇ ಭಾವಿಸಿದ್ದ ಭಾರತೀಯ ಕಪ್ಪೆ ವೈವಿಧ್ಯ ಎರಡೇ ದಶಕಗಳಲ್ಲಿ ಮೂರು ಶತಕ ದಾಟಿದ್ದು ಇಂಥದ್ದೇ ಅರಿವಿನ ಕ್ರಾಂತಿಯಿಂದಲೇ ಹೊರತು ಪವಾಡದಿಂದಲ್ಲ. ಹಾಗೇ ತತ್ಕಾಲೀನ ನೀರು, ವಿದ್ಯುಚ್ಛಕ್ತಿ, ಅಭಿವೃದ್ಧಿ ಕಲಾಪಗಳ ಭ್ರಮೆಯಲ್ಲಿ ಗುರುತರಿಯದೇ ನಾಶವಾಗುವ ನಿಜ ಸಂಪನ್ಮೂಲಗಳ ಶೋಧಕ್ಕೆ ಇಂಥ ಇನ್ನಷ್ಟು ‘ಗುರುತಿಸುವ’ ಶಿಬಿರಗಳು ಎಲ್ಲೆಲ್ಲೂ ನಡೆಯುವಂತಾಗಲಿ.

(ಮುಗಿಯಿತು)

ಉತ್ತರಕಾಂಡ

ಮೇಲಿನ ಆಶಯಕ್ಕೆ ಪೂರಕವೋ ಎನ್ನುವಂತೆ ಇದೇ ಅಕ್ಟೋಬರ್ ೨೮,೨೯ರಂದು ಮೈಸೂರಿನ ಇಂದ್ರಪ್ರಸ್ಥ ಕೃಷಿಕ್ಷೇತ್ರದಲ್ಲಿ ನನ್ನ ಹತ್ತಿರದ ಬಂಧು ಎ.ಪಿ. ಅಭಿಜಿತ್ ‘ಜೇಡಗಳನ್ನು ಗುರುತಿಸಿ’ ಶಿಬಿರ ಘೋಷಿಸಿದ್ದಾನೆ. ವಿವರಗಳಿಗೆ ಸಂಪರ್ಕಿಸಿ – abhiapc@gmail.com . ಹಾಗೇ ಡಿಸೆಂಬರಿನಲ್ಲಿ ಮತ್ತೆ ಗುಬ್ಬಿ ಲ್ಯಾಬ್ಸ್, ಉತ್ತರಕನ್ನಡ ಜಿಲ್ಲೆಯೊಳಗೆ ಮುಂದುವರಿದ ಪರಿಸರ ಅಧ್ಯಯನ ಶಿಬಿರವನ್ನೂ ನಡೆಸುತ್ತಿದೆ.