(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)
(ಭಾಗ ೫)

– ಕುಶಿ ಹರಿದಾಸ ಭಟ್ಟ

[ಉಡುಪಿಯ ಶೈಕ್ಷಣಿಕ-ಸಾಂಸ್ಕೃತಿಕ-ಸಾಮಾಜಿಕ ದ್ರಷ್ಟಾರರಾಗಿ ರಾರಾಜಿಸಲಿದ್ದ ಕುಶಿ ಮತ್ತು ಕನ್ನದ ಕಥಾಲೋಕಕ್ಕೆ “ಪ್ರಜ್ವಲಿಸುವ ಮಹದುಲ್ಕೆಯ ತೆರದಲಿ” (ಕುವೆಂಪು) ಪ್ರವೇಶಿಸಿದ ಹಾಗೂ ಭಾರತದ ಭಾವೀ ರಾಯಭಾರಿಯಾಗಿ ವಿಜೃಂಭಿಸಲಿದ್ದ ಬಾಗಲೋಡಿ ಎಂಬ `ದ್ರವ್ಯ’ಗಳು ಕ್ರಿಶ್ಚಿಯನ್ ಕಾಲೇಜಿನ ಕ್ವಥನ ಭಾಂಡದಲ್ಲಿ ರೂಪಾಂತರಗೊಂಡ `ಸಿದ್ಧಪಾಕ’ಗಳು, ಪ್ರಸಿದ್ಧ ಸೀಮಾ ಪ್ರತಿಭೆಗಳು – ಜಿಟಿನಾ]

೧೯೪೬ನೆಯ ಜೂನ್ ೨೩ರಿಂದ ೧೯೪೯ನೆಯ ಏಪ್ರಿಲ್ ವರೆಗೆ ತಾಂಬರಂನಲ್ಲಿ ಕಳೆದ ಕಾಲೇಜ್ ದಿನಗಳು ನನ್ನ ಜನ್ಮ ವೃತ್ತಾಂತದ ಸ್ವರ್ಣಪುಟಗಳಾಗಿದ್ದುವು. ಪಾಠಪ್ರವಚನದ ಮೂಲಕ ಕಲಿತದ್ದಕ್ಕಿಂತ ಹೆಚ್ಚಾಗಿ ಓರಗೆಯ ಗೆಳೆಯರಿಂದ, ಕಾಲೇಜಿನ ವಿಶಿಷ್ಟ ಸನ್ನಿವೇಶದಿಂದ, ಸಮಕಾಲೀನ ವಿದ್ಯಮಾನಗಳ ಪ್ರಭಾವದಿಂದ ಅನುಭವ ಗಳಿಸಿದೆ. ಎಲ್ಲ ಅನುಭವಗಳಿಗು ಮನಸ್ಸು ತೆರೆದಿಟ್ಟೆ. ೧೯೪೬-೪೭ ಸ್ವಾತ್ರಂತ್ರ್ಯಪೂರ್ವದ ಒಂದು ವರ್ಷ ಭಾರತದ ರಾಜಕೀಯ ರಂಗ ಪ್ರಕ್ಷುಬ್ಧವಾಗಿತ್ತಲ್ಲವೇ? ಆದರೆ ಕ್ರಿಶ್ಚಿಯನ್ ಕಾಲೇಜಿನ ಪರಿಸರ ಶಾಂತವಾಗಿತ್ತು. ಕಾಲೇಜಿನ ವರಿಷ್ಠರಾದ ಸ್ಕಾಟಿಷ್ ಮಿಶನಿನ ಗುರುಗಳೂ ಪ್ರೊಫೆಸರರುಗಳೂ ಬ್ರಿಟಿಷ್ ಸಾಮ್ರಾಜ್ಯದ ಅವಸಾನ ಸಮೀಪಿಸಿದ್ದನ್ನು ನಿಚ್ಚಳವಾಗಿ ಅರಿತು ಹೊಸ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗುತ್ತಿದರು. “ಎಷ್ಟು ಬೇಕಾದರೂ ಮೆರವಣಿಗೆ ತೆಗೆಯಿರಿ. ಕಾಲೇಜಿನ ಒಳಗಡೆಯೇ ಸುತ್ತಿಬನ್ನಿ, ಹೊರಗೆ ಹೋಗಿ ಪೋಲಿಸರ ಕಣ್ಣಿಗೆ ಬೀಳಬೇಡಿ” ಎಂದು ಉಪಾಯ ಸೂಚಿಸುತ್ತಿದ್ದರು. ಆದ್ದರಿಂದ ಸ್ವಾತಂತ್ರ್ಯ ಸಮರಕ್ಕೆ ಬೆಂಬಲ ನೀಡುವ ನಮ್ಮ ಮೆರವಣಿಗೆಗಳು ಕ್ಯಾಂಪಸ್ಸಿನಲ್ಲೇ ಅರ್ಧತಾಸು, ಒಂದು ತಾಸು ಸುತ್ತಾಡಿ ನೀರಿನ ಟ್ಯಾಂಕಿನ ಅಡಿಯಲ್ಲಿ ಗುಂಪುಗೂಡಿ ಉದ್ಭೋಧಕ ಭಾಷಣ ಮಾಡಿ ತೃಪ್ತಿಪಡುತ್ತಿತ್ತು. ಇಂಕಿಲಾಬ್ ಜಿಂದಾಬಾದ್, ಜೈ ಹಿಂದ್ ಘೋಷಣೆಗಳನ್ನು ನಾನೂ ಸಾಕಷ್ಟು ಕೂಗಿದ್ದೇನೆ; ಹಿಂಬಾಲಕನಾಗಿ! ಸಹಪಾಠಿ ಸೇವ ನಮಿರಾಜಮಲ್ಲರಾದರೋ ವಿದ್ಯಾರ್ಥಿ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿ ಮುಂದಾಳು ಸ್ಥಾನದಲ್ಲಿದ್ದರು. ನಾವು ಅವರ ಬೆನ್-ಬಲ ಅಷ್ಟೇ. ಕಾಲೇಜಿಗೆ ಬಂದದ್ದು ಅಧ್ಯಯನಕ್ಕೆ ಮಾತ್ರ ಎಂದು ನಾನು ಕಣ್ಪಟ್ಟಿ ಹಚ್ಚಿಕೊಂಡಿದ್ದೆ. ನನ್ನ ಎಷ್ಟೋ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೆ – ಉದಾಹರಣೆಗೆ ನಾಟಕರಂಗದ ಸಮೀಪ, ಆಟದ ಬಯಲಿನ ಸಮೀಪ ಹೋಗಲಿಲ್ಲ. ಆಟವಾಡುವ ಸಮಯವೇ ಅಂದರೆ ಸಾಯಂಕಾಲ ೪ ರಿಂದ ೭ ನನ್ನ ಮುಖ್ಯ ಅಧ್ಯಯನ ವೇಳೆ ಆಗಿತ್ತು. ಆ ಅವಧಿಯ ತಪೋಭಂಗಕ್ಕೆ ವಿಘ್ನ ತರಲು ಸಾಧ್ಯವಾದದ್ದು ಬಾಗಲೋಡಿ ದೇವರಾಯರಿಂದ ಮಾತ್ರ. ನನಗಿಂತ ಎರಡು ವರ್ಷ ಮೊದಲೇ ಕ್ರಿಶ್ಚಿಯನಿನಲ್ಲಿ ಇಂಗ್ಲಿಷ್ ಸಾಹಿತ್ಯದ ಆನರ್ಸಿಗೆ ಸೇರಿದ ದೇವರಾಯರಂಥ ಪ್ರತಿಭಾವಂತರ ಸ್ನೇಹ ದೊರೆತದ್ದು ನಾನು ಆ ಕಾಲೇಜು ಆರಿಸಿದ್ದರ ದೊಡ್ಡ ಲಾಭ. ದೇವರಾಯರು, ನಮಿರಾಜ ಮಲ್ಲರು, ರಂಗನಾಥ ಶೆಣೈ, ಎಂ ಜನಾರ್ದನರು ಮಂಗಳೂರಿಂದ ಬಂದವರಾದರೆ, ಬೆಂಗಳೂರಿನ ಪ್ರೇಮಾನಂದ, ಕೊಡಗಿನ ಜಿ.ಟಿ. ನಾರಾಯಣ ರಾಯರು, ಎಂ. ಗೋಪಾಲಕೃಷ್ಣ ಮುಂತಾದವರು ಸೇರಿ ಒಂದು ಕನ್ನದ ಮಿತ್ರರ ಬಳಗವೇ ಅಲ್ಲಿ ರೂಪುಗೊಂಡಿತ್ತು.

ಸ್ನಾತಕೋತ್ತರ ಹಂತದಲ್ಲಿ ಅರ್ಥಶಾಸ್ತ್ರ ಅಭ್ಯಾಸ ಮಾಡುವ ವಿದ್ಯಾರ್ಥಿಗೆ, “ನೀನು ಸ್ವಲ್ಪ ಸಾಹಿತ್ಯವನ್ನು ಓದಿಕೋ, ಅರ್ಥಶಾಸ್ತ್ರ ತನ್ನಷ್ಟಕ್ಕೆ ಬರುತ್ತದೆ” ಎಂಬ ಉಪದೇಶವನ್ನು ಯಾರಾದರೂ ಮಾಡಿಯಾರೇ? ಮಾಡಿದರೆ ಕೇಳಿಯಾರೇ? ಕೇಳಿದವನು ನಾನು, ಉಪದೇಶಿಸಿದವರು ಇತ್ತೀಚೆಗಷ್ಟೇ ನಮ್ಮನ್ನಗಲಿದ ಬಾಗಲೋಡಿ ದೇವರಾಯರು. ಡಾಸ್ಟೊವಸ್ಕಿ, ಕಾಸ್ಲರ್, ಬಾಲ್ಝಾಕ್, ಅನಾತೋಲ್ ಫ್ರಾನ್ಸ್, ಕಾದಂಬರಿಗಳನ್ನು ಓದಿದ್ದರಿಂದ ನನ್ನ ಅರ್ಥಶಾಸ್ತ್ರದ ಚಿಂತನಕ್ಕೆ, ಅಭ್ಯಾಸಕ್ಕೆ ಯಾವುದೇ ಅಡೆ ತಡೆ ಆಗಲಿಲ್ಲ. ಬರವಣಿಗೆಯಂತೂ ಇನ್ನಷ್ಟು ಪುಷ್ಟವಾಯಿತು ಎಂತಲೇ ಬಹುಶಃ ಪರೀಕ್ಷಕರು ಎಣಿಕೆಗೆ ಮೀರಿದ ಅಗ್ರಸ್ಥಾನವನ್ನು ನನಗೆ ಕಲ್ಪಿಸಿಕೊಟ್ಟರು.

ದೇವರಾಯರಿಗೂ ನನಗೂ ಮೂರುನಾಲ್ಕು ವರ್ಷ ಅಂತರ – ವಯಸ್ಸಿನ ಲೆಕ್ಕದಲ್ಲಿ ನಾನು ಹಿರಿಯ. ಭಗವಂತ ದಯಪಾಲಿಸಿದ ಪ್ರತಿಭೆಯ ಲೆಕ್ಕದಲ್ಲಿ ಅಗಾಧ ಅಂತರವೆಂದರೆ ಅದು ಅತಿಶಯೋಕ್ತಿಯೂ ಅಲ್ಲ, ಕೀಳರಿಮೆಯೂ ಅಲ್ಲ. ಇದು ದೇವರಾಯರನ್ನು ಸಮೀಪದಿಂದ ಬಲ್ಲ ಇಷ್ಟಮಿತ್ರರು – ನನ್ನಂಥವರು – ಬಂಧುಬಳಗ ಇಷ್ಟೇ ಸೀಮಿತ ವಲಯದ ಜನಗಳ ಅರಿವಿನಲ್ಲಿರುತ್ತಿತ್ತು. ದೇವರಾಯರು ಅದೊಂದು ಶುಭಮುಹೂರ್ತದಲ್ಲಿ ಸಣ್ಣಕತೆಯ ಕ್ಷೇತ್ರವನ್ನು ಪ್ರವೇಶಿಸಿರದಿದ್ದರೆ, ಭಾರತೀಯ ವಿದೇಶಾಂಗ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡ ಕನ್ನಡದ ಈ ಒಂದು ವಿಶಿಷ್ಟ ಪ್ರತಿಭೆ, ಅಂತರಂಗದ ಸಂಪುಟದಲ್ಲಿ ಕನ್ನಡ ಸಾಹಿತ್ಯ ರಚನೆಯ ಒಲವನ್ನು ಬಹುಕಾಲ ಸುಪ್ತವಾಗಿಸಿಕೊಂಡು, ಇನ್ನೇನು ನಿವೃತ್ತಿಯ ಪರ್ವದಲ್ಲಿ ಅದಕ್ಕೆ ಪೂರ್ಣ ಅವಕಾಶ ಒದಗಿಸುವೆನೆಂದು ಪಣತೊಟ್ಟು ಕಾರ್ಯರಂಗಕ್ಕೆ ಇಳಿಯುತ್ತಿದ್ದಂತೆಯೇ ತೊಟ್ಟು, ಕಳಚಿ ಬಿದ್ದ ಹೂವಿನಂತಾದದ್ದು ಕನ್ನದಿಗರ ದುರ್ದೈವ.

ದೇವರಾಯರ ಸಾಹಿತ್ಯ ಪಕ್ಷಪಾತಕ್ಕೆ ನಾನಾ ಮುಖಗಳು. ಅವರ ವ್ಯಕ್ತಿತ್ವದ ಒಳತಿರುಳು ಸಾಹಿತ್ಯ. ಮಾತನಾಡಿದ್ದೆಲ್ಲ ಸಾಹಿತ್ಯ. ಇದನ್ನು ವರ್ಷಗಟ್ಟಲೆ ಕೇಳಿ ಆನಂದಿಸಿದವರಲ್ಲಿ ನಾನೊಬ್ಬ. ೧೯೪೬ರಿಂದ ೧೯೫೦ರವರೆಗಿನ ಕಾಲ ಸಂಧಿಯಲ್ಲಿ ದೇವರಾಯರಿಗೂ ನನಗೂ ಭೆಟ್ಟಿಯಾದದ್ದು, ಸ್ಕಾಟಿಷ್ ಮಿಶನಿಗೆ ಸೇರಿದ ಆಂಗ್ಲ ಪಾದ್ರಿಗಳು ಇಲ್ಲಿ ದೇವರಾಯರ ಸಾಹಿತ್ಯಶಕ್ತಿಗೆ ನೀರೆರೆದು ಪೋಷಿಸಿದರು. ಸಾಹಿತ್ಯ ವಿಷಯದ ಆನರ್ಸ್ ತರಗತಿಗೆ ಸೇರುವ ಮೊದಲೇ ಮಂಗಳೂರಿನ ಅಲೋಶಿಯಸ್ ಕಾಲೇಜಿನ ಗ್ರಂಥಾಲಯದ ಆಂಗ್ಲ ಕನ್ನಡ ಸಾಹಿತ್ಯ ಕೃತಿಗಳನ್ನು ಇಡಿಯಾಗಿ ನುಂಗಿ ಜೀರ್ಣಿಸಿಕೊಂಡ ದೇವರಾಯರ ಭಾಷಾ ಕೌಶಲ್ಯವನ್ನು ಕ್ರಿಶ್ಚಿಯನ್ ಕಾಲೇಜಿನ ಬಿಳಿಯ ಪ್ರೊಫೆಸರುಗಳು ಹಾಡಿ ಹೊಗಳುತ್ತಿದ್ದರು. ಕಾಲಾವಧಿ ಪರೀಕ್ಷೆಗಳ ಉತ್ತರ ಪತ್ರಿಕೆಗೆ ದೇವರಾಯರು ಬರೆಯುತ್ತಿದ್ದ ಉತ್ತರಗಳನ್ನು ಪೋಣಿಸಿದರೆ ಒಂದು ವಿಮರ್ಶನ ಗ್ರಂಥ ಸಂಕಲಿಸಬಹುದಾಗಿತ್ತು. `ಪದವಿಟ್ಟಳುಪದಗ್ಗಳಿಗೆ’ ಪುಟಪುಟದಲ್ಲೂ! ಮಹಾರಾಯ, ಇಷ್ಟು ಭಾರೀ ಇಂಗ್ಲಿಷ್ ಬರೆಯಬೇಡ, ನಮಗೆ ಭಯವಾಗುತ್ತದೆ ಎಂದು ಅವರ ಆಂಗ್ಲ ದೇಶಸಂಜಾತ ಪ್ರಾಧ್ಯಾಪಕರು ನಗೆಯಾಡುತ್ತಿದ್ದರಂತೆ. ದೇವರಾಯರು ಕಲಿತು ಮುಗಿಸಿ, ಉದ್ಯೋಗವಶರಾದ ಮೇಲೆ ನಮ್ಮನ್ನು ಕಂಡಾಗ ಈ ಪ್ರಾಧ್ಯಾಪಕರ ಪ್ರಶ್ನೆ “ರಾಯರೆಲ್ಲಿ? ಎಂಬುದೇ. ಅಂದರೆ ರಾಯರ ಬಿಂಬ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಇತ್ತು ಎಂದಲ್ಲವೇ ಅರ್ಥ?

ದೇವರಾಯರ ಬರವಣಿಗೆಯಷ್ಟೇ ಮಾತೂ ಸೃಜನಶೀಲ, ಉಲ್ಲಾಸದಾಯಕ. ಸಾಹಿತ್ಯದ ರಸಘಟ್ಟ ಅವರ ಜೀವನದೊಳಗಿನ ಸಾರ ಸರ್ವಸ್ವ. ಅದರ ಬಹಿರಂಗ ಪ್ರಕಟಣೆ – ಮಾತು, ಬರಹ. ಸಂಜೆಯಾಗುತ್ತಲೇ ದೇವರಾಯರು ಹಾಸ್ಟೆಲಿನ ಕೋಣೆಗಳಿಗೆ ಪ್ರದಕ್ಷಿಣೆ ಹಾಕಿ ನಾಲ್ಕಾರು ಜನ ಗೆಳೆಯರ ಗುಂಪನ್ನು ಒಡಗೂಡಿ ವಿಹಾರಕ್ಕಾಗಿ ಹೋಗುವುದು ರೂಢಿ: ನನ್ನ ಕೊಠಡಿಗೆ ಬಂದು, ಅಶಿಸ್ತುಪೂರ್ವಕ ಹಗ್ಗದಲ್ಲಿ ನೇತು ಹಾಕಿದ ಅಂಗಿಯನ್ನು, ಓದುವುದರಲ್ಲಿ ಆಸಕ್ತನಾಗಿದ್ದ ನನ್ನ ಕೈಗಿತ್ತು ಎಬ್ಬಿಸಿ, ನಾಲ್ಕು ಮೈಲು ದೂರ ನಡೆಸಿಕೊಂಡು ಹೋದರೆಯೇ ಅವರಿಗೆ ಮನಶ್ಶಾಂತಿ – ಅಂದಿನ ಮಟ್ಟಿಗೆ. ಒಟ್ಟು ಎಂಟು ಮೈಲು ಸಾಹಿತ್ಯ ಚರ್ಚೆ – ಹೆಚ್ಚಿನ ಕಾಲ ಅವರದೇ ಮಾತು. ನನ್ನದು ವಿಷ್ಕಂಭಕಗಳು ಮಾತ್ರ. ಆ ಮಾತು ಕೇಳಿ ಮರುಳಾಗದವರಾರು? ವಿಶ್ವಸಾಹಿತ್ಯವೆಂಬುದು ಅಲ್ಲಿಯ ನಿತ್ಯ ಮಸಾಲೆ.

ಇಂಟರ್ ಮುಗಿಸಿ ಆನರ್ಸ್ ಕಳೆಯಲು ೩ ವರ್ಷ ಹಿಡಿಯುತ್ತದೆ. ಪರೀಕ್ಷೆಗಳ ರಾಜ ಆನರ್ಸ್ – ಇದರಲ್ಲಿ ಒಂದೇ ಸಲಕ್ಕೆ ಪಾಸಾಗಬೇಕೆಂಬ ಶರ್ತ. ಏಟಿಕೇಟಿ, ಕ್ಯಾರಿ ಓವರ್‍ಗಳಿಲ್ಲದೇ ಒಂದೇ ಮೆಟ್ಟಿನಲ್ಲಿ ಲಂಘಿಸಬೇಕು ಎಂಬುದನ್ನು ಮೊದಲೇ ಹೇಳಿದ್ದೇನೆ. ಅಂಥದರಲ್ಲಿಯೂ ಇಂಗ್ಲಿಷ್ ಸಾಹಿತ್ಯದ ಅಮೂಲಾಗ್ರಮಥನ ಮಾಡಿ ಆ ಪರೀಕ್ಷೆಯಲ್ಲಿ ಯಶಗಳಿಸುತ್ತಿರುವಾಗಲೇ ದೇವರಾಯರು ೧೭ ಮೈಲು ದೂರದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರಕ್ಕೆ ಹೋಗಿ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಅಧ್ಯಯನ ಮಾಡಿದರು. ಶಬ್ದಲೋಲ ರಾಯರಿಗೆ ಭಾಷೆಗಳು ನೀರು ಕುಡಿದಷ್ಟು ಲೀಲಾಜಾಲ. ಉದ್ಯೋಗಗಳು ತೀರ ವಿರಳವಾಗಿದ್ದ ೧೯೫೦ರ ಪೂರ್ವಭಾಗದಲ್ಲಿ ಅವರು ೩ ವರ್ಷ ಪ್ರಾಧ್ಯಾಪಕರಾಗಿದ್ದರು. ಅವರ ಉಪನ್ಯಾಸಗಳ ಸೊಗಸನ್ನು ಅಂದಿನ ವಿದ್ಯಾರ್ಥಿಗಳು ಇಂದಿಗೂ ಮೆಲಕು ಹಾಕುತ್ತಿದ್ದಾರೆ. ಮದರಾಸ್ ಕ್ರಿಶ್ಚಿಯನ್, ಕಾರೈಕುಡಿಯ ಅಲಗಪ್ಪ ಹಾಗೂ ಮಂಗಳೂರಿನ ಸರ್ಕಾರಿ ಕಾಲೇಜು ಈ ಮೂರರಲ್ಲಿ ದೇವರಾಯರು ತಮ್ಮ ಶಿಕ್ಷಕ ವೃತ್ತಿಯನ್ನು ಮೆರೆಸಿದರು. ಆಳಾಗಿ ಅವರು ದೀರ್ಘಕಾಯರಲ್ಲ; ಅದರ ಬಗ್ಗೆ ಅವರಿಗೇ ತುಸು ಮುಜುಗರ. ಅದೇ ವೈಲಕ್ಷಣ್ಯವನ್ನು ನಗುಮಾತಿನಲ್ಲಿ ತೇಲಿಸುತ್ತಿದ್ದರು. ಕೆಲವೊಮ್ಮೆ ಉಗುರುಗಳನ್ನು ಉದ್ದವಾಗಿ ಬೆಳೆಯಗೊಡುವರು. ಇನ್ನು ಕೆಲ ಬಾರಿ ಹೋತನ ಗಡ್ಡವನ್ನು ಇಳಿಸುವರು. ಇನ್ನೊಮ್ಮೆ ಮೀಸೆಯನ್ನು ಕನ್‍ಫ್ಯೂಶಿಯಸ್ ಚೀನೀ ಶೈಲಿಯಲ್ಲಿ ತೀಡುವರು.

ಸಾಹಿತ್ಯೋಲ್ಲಾಸ ಅವರ ಜೀವನ ಧರ್ಮವಾಯಿತು. ಜೀವನೋತ್ಸಾಹವೂ ಆಯಿತು. ಕೂತು ವಿಚಾರಗೋಷ್ಠಿ ನಡೆಸುವುದು ಅವರಿಗೆ ಸ್ವಲ್ಪ ದೂರ. ದೂರ ನಡೆಯುವುದು, ಹತ್ತಿರದ ಗುಡ್ಡ ಬೆಟ್ಟಗಳನ್ನೇರುವುದು – ಕಾಲೇಜು ದಿನಗಳಲ್ಲಿ ಅವರ ದೈನಂದಿನ ಕಾರ್ಯಕ್ರಮ. ಇಲ್ಲೂ ದೇಹಕ್ಕೂ ಮನಸ್ಸಿಗೂ ಉಲ್ಲಾಸ ನೀಡುವ ಮಾತುಗಳ ಭರಾಟೆ. ವಿದ್ಯಾರ್ಥಿ ದೆಶೆಯಲ್ಲಿ ಉಡುಗೆ ತೊಡುಗೆ, ರೂಮಿನ ಅಂದ ಓರಣಗಳ ಬಗ್ಗೆ ಅವರ ದಿವ್ಯ ನಿರ್ಲಕ್ಷ್ಯ ಕಾಲೇಜಿಗೆ ಸ್ವಾರಸ್ಯದ ವಿಷಯ. ಕುದಿಯುವ ಕಾಫಿಯನ್ನು ಕುಡಿದು “ನೋಡುವ ಬನ್ನಿ ಪೈಪೋಟಿಗೆ” ಎಂದು ಪಂಥಾಹ್ವಾನ ನೀಡುವರು! ನೀಳವಾದ ಉಗುರು ತೋರಿಸಿ “ನಾನು ನರಸಿಂಹ” ಎನ್ನುವರು. ತಾಂಬರಮ್ಮಿನ ಎರಡು ಚಿಕ್ಕ ಗುಡ್ಡಗಳನ್ನು ವಾರಕ್ಕೆರಡು ಬಾರಿ ಏರಿ ಇಳಿಯುವಾಗ `ಆಂಜನೇಯ.’ ಮೊತ್ತಮೊದಲು ನನ್ನ ತಿರುಪತಿ ಯಾತ್ರೆಯಲ್ಲಿ ಅವರ ಜತೆಗೆ ಬೆಟ್ಟ ಏರುವಾಗ ನಾವೆಲ್ಲ ದಾರಿಯಲ್ಲಿ ನಡೆದರೆ ಅವರಾದರೋ ಕಣಿವೆಗೆ ಅಡ್ಡವಾಗಿ ಕಟ್ಟಿದ ಗೋಡೆಯ ಮೇಲೆ, ಕೆಳಗಿನ ಪ್ರಪಾತದ ದೃಶ್ಯವನ್ನು ಉದ್ದಕ್ಕೂ ಸವಿಯುವಂತೆ ಸರ್ಕಸ್ ಮಾಡುತ್ತ ಹೋಗುತ್ತಾರೆ. “ಸ್ವಲ್ಪ ಇಳಿಯಿರಿ ಮಾರಾಯ್ರೇ, ಅಥವಾ ಮಾತಾದರೂ ನಿಲ್ಲಿಸಿ” ಎಂಬ ನಮ್ಮ ವಿನಂತಿಗೆ ಆಂಜನೇಯನ ಕಿವಿ ಕಿವುಡು.

ದೇವರಾಯರ ಆನರ್ಸ್ ಕೊನೇ ವರ್ಷದಲ್ಲಿದ್ದಾಗ ನಾನು ಕ್ರಿಶ್ಚಿಯನ್ ಕಾಲೇಜು ಸೇರಿದ್ದು. ನಾವು ಸಹವರ್ತಿಗಳಾಗಿದ್ದುದು ಅಲ್ಲಿ ಕೆಲ ವರ್ಷಗಳು ಮಾತ್ರ. ಆಮೇಲೆ ಈ ನಂಟು ಉದ್ದಕ್ಕೂ ಬೆಳೆಯುತ್ತಲೇ ಹೋಗಿ ಕೊನೆಗೊಮ್ಮೆ ನಾವು ನಿಜಕ್ಕೂ ನೆಂಟರಾಗುವ ಸಂದರ್ಭವೂ ಒದಗಿತು. ಅಂದಿನಿಂದ ಸುಮಾರು ೪೦ ವರ್ಷಗಳ ಸುದೀರ್ಘ ಅವಧಿಯಲ್ಲಿ ನಮ್ಮ ಸ್ನೇಹ ದೃಶ್ಯವಾಗಿ ಅದೃಶ್ಯವಾಗಿ, ಪತ್ರವ್ಯವಹಾರ ಇದ್ದೋ ಇಲ್ಲದೆಯೋ, ಹೇಳಿಕೆ ಕೇಳಿಕೆಗಳ ಮೇಲಿಂದಲೂ ಕೂಡ ಅವರು ಎಲ್ಲೇ ಇರಲಿ, ಅಲ್ಲಿಂದಲೇ ಪ್ರವರ್ಧಮಾನವಾಗುತ್ತಲೇ ಹೋಯಿತು. ಹೀಗಾದ್ದರಿಂದ ಅವರ ವ್ಯಕ್ತಿತ್ವದ ಸಾಹಿತ್ಯಾಂಶದ ತುಡಿತ-ಮಿಡಿತಗಳನ್ನು ಊಹಿಸಿಕೊಳ್ಳುವ ಅರ್ಹತೆ ನನಗೆ ಪ್ರಾಪ್ತವಾಯಿತು. ಅವರು, “ಭಟ್ಟರೇ, ಈಗ ೩೦ ವರ್ಷಗಳ ಬಳಿಕ ಮತ್ತೆ ಕಥೆ ಬರೆಯುತ್ತಿದ್ದೇನೆ. ಮಯೂರ ನೋಡಿ, ಸುಧಾ ನೋಡಿ,” ಎಂದು ಬಲ್ಗೇರಿಯಾದಿಂದ ಪತ್ರ ಬರೆದದ್ದುಂಟು. “ಅಭಿಪ್ರಾಯ ಕೊಡಿ” ಎಂದಾಗ, “ಹಿಂದಿನ ಹಾಗೆಯೇ ಬರೆಯುತ್ತಿದ್ದೀರಿ” ಎಂಬುದನ್ನು ವಸ್ತುಸ್ಥಿತಿ ವರ್ಣನೆ ಎಂದು ತಿಳಿದರೋ, ವಿಮರ್ಶೆಯ ಸಾಲೆಂದು ಭಾವಿಸಿದರೋ ಗೊತ್ತಾಗಲಿಲ್ಲ. ಮೂವತ್ತು ವರ್ಷಗಳು ತಾನು ಹೊರದೇಶಗಳಲ್ಲಿದ್ದುದರಿಂದ ಉಂಟಾದ ನಷ್ಟಭಾಗವನ್ನು ತುಂಬಿಸಿಕೊಳ್ಳಲು ಅತ್ಯಂತ ಕಾತರರಾಗಿ ಕನ್ನಡದ ಆಧುನಿಕ ಸಾಹಿತ್ಯ ಕೃತಿಗಳನ್ನು ಓದಲು ತೊಡಗಿದ್ದರು – ಮರಣಪೂರ್ವದ ನಾಲ್ಕು ತಿಂಗಳು ತಾನು ಉಳಿದ ಸಾಹಿತ್ಯ ಕೃಷಿಕರ ಜತೆಗೆ ಸಮಾಂತರಗೊಳ್ಳುವುದು ಹೇಗೆಂಬುದಕ್ಕಾಗಿ ನಿರಂತರ ವಾಚನ ನಡೆಸಿದ್ದರು. ತನ್ನನ್ನು ತಾನೇ ಅಪ್‍ಡೇಟ್ ಮಾಡಿಕೊಳ್ಳಲು ಹೆಣಗಿದರು. ಹಾಗೆ ನೋಡಿದರೆ ಬಹುಶಃ ಈ ಉತಾವಳಿ ಅವರ ಮಟ್ಟಿಗೆ ಅನಾವಶ್ಯ,. ಅವರ ಕಥನ ಶೈಲಿಯನ್ನು ಪರಿಶೀಲಿಸಿದರೆ ಅದು ಎಂದಿಗೂ ಹಳೆಯದೆನಿಸದ ನವ್ಯಾತಿನವ್ಯಗಳೂ ಸವ್ಯಾಪಸವ್ಯಗಳೂ ಕಂಗೆಡಿಸದ ನೇರವಾದ ಕಥನ ಶೈಲಿ; ಸುಪ್ತ ಚೇತನದ ಹಾಗೂ ಪ್ರಜ್ಞಾಪ್ರವಾಹದ ಒಳ-ಒಳ-ಒಳ ಸ್ತರಗಳ ಬಣ್ಣನೆಯನ್ನು ಮಾಡಿ ದಣಿದ ಮೇಲೆ ಅರ್ವಾಚೀನ ಕಥನ ತಂತ್ರ ಮತ್ತೆ ಹಿಂತಿರುಗಬೇಕಾದ `ಸನಾತನ’ವೆನಿಸುವಂಥ ಕಥೆ ಹೇಳುವ ಶೈಲಿ; ಮಾತಿನ ಧಾಟಿಗೂ ಸಾಹಿತ್ಯದ ಧಾಟಿಗೂ ಹೊಂದಾಣಿಕೆ ಮಾಡಿ ರಸಸೃಷ್ಟಿ ಮಾಡಬಲ್ಲ ಶಕ್ತಿಶಾಲಿ ಶೈಲಿ. ಮೂಲದಲ್ಲಿ ಮಾಸ್ತಿಯವರಿಂದಲೂ ಕಾರಂತರಿಂದಲೂ ಸ್ಫೂರ್ತಿ ಪಡೆದ ಬರವಣಿಗೆಯ ರೀತಿ – ದ್ರಾಕ್ಷಾಪಾಕ ಅದು.

ದೇವರಾಯರನ್ನು ಸಾಹಿತ್ಯ ರಚನೆಗೆ ಪ್ರಚೋದಿಸಿದ್ದು ಪೂಜ್ಯ ಮಾಸ್ತಿಯವರ ಆದೇಶ ಹಾಗೂ ಕ್ರಿಶ್ಚಿಯನ್ ಕಾಲೇಜಿನ ಕನ್ನಡಿಗ ಗೆಳೆಯರ ಗುಂಪು. ಅದರೊಳಗೂ ದೇವರಾಯರಿಗೆ ಸಮಕಾಲೀನವಾಗಿ, ನನಗೆ ಓರಗೆಯ ಸಹಪಾಠಿಗಳಾಗಿ ದೊರೆತು ಈಗ ಕಥೆಗಾರ, ಕಾದಂಬರಿಕಾರರೆಂದು ಪ್ರಸಿದ್ಧರಾದ ಸೇವ ನಮಿರಾಜಮಲ್ಲರ ಅಹರ್ನಿಶಿ ಕಥಾರಚನ ಕಾಯಕ. ಮಲ್ಲರದ್ದು ಸಮೃದ್ಧ ಬರವಣಿಗೆ, ದಣಿಯದ ಲೆಕ್ಕಣಿಕೆ, ದೇವರಾಯರ ಆಸೆ ಚಿಗುರಿದ್ದು ಬಹುಶಃ ಮಲ್ಲರ ಉದಾಹರಣೆಯಿಂದ. ಅವರು ಸಣ್ಣ ಕಥೆಯನ್ನೇ ತನ್ನ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮವಾಗಿ ಸ್ವೀಕರಿಸಿದ್ದಕ್ಕೂ ಇದೇ ಕಾರಣ. ಕಥೆಗಳಾದರೂ ಎಂಥವು – ಮೊತ್ತಮೊದಲ ರಚನೆಯಾದ ‘ಶುದ್ಧ ಫಂಟಿಂಗ’, ಹುಟ್ಟು ಕಥೆಗಾರ ಮಾಸ್ತಿಯವರ ಮನ ಸೆಳೆಯಿತು. ಜೀವನದಲ್ಲಿ ಪ್ರಕಟವೂ ಆಯಿತು. ‘ಹುಚ್ಚ ಮುನಸೀಫ ಮತ್ತು ಇತರ ಕತೆಗಳು’ ಎಂಬ ಪ್ರಥಮ ಕಥಾ ಸಂಗ್ರಹ ಪ್ರಕಟಣೆಯೂ ಮಾಸ್ತಿಯವರಿಂದಲೇ ಆಯ್ತು. `ಪ್ರಥಮ ದೃಷ್ಟಿಯ ಪ್ರೇಮ’ದಂತೆ ಉಭಯ ಕತೆಗಾರರೂ ಕೈಕುಲುಕಿದರು. ದೇವರಾಯರು ಇದು ಮಹಾಪ್ರಸಾದವೆಂದುಕೊಂಡರು. ತನಗೆ “ಕತೆಗಳನ್ನು ಬರೆಯುವುದರಲ್ಲಿ ಆತ್ಮ ವಿಶ್ವಾಸ ಮೂಡಿಸಿದವರು ಕರ್ನಾಟಕ ಸಾಹಿತ್ಯಕ್ಕೆ ತಿಲಕಪ್ರಾಯರಾದ ಪೂಜ್ಯ ಮಾಸ್ತಿಯವರು. ತಮ್ಮ ಹಿರಿತನದ ಕೃಪಾಛತ್ರದ ನೆರಳಿನಲ್ಲಿ ಕಿರಿಯರನ್ನು ಬರಮಾಡಿಸಿ ಸಾಹಿತ್ಯ ದೀಕ್ಷೆ ಕೊಡುತ್ತಿರುವುದು ಶ್ರೀನಿವಾಸರ ಅನುಗ್ರಹ” ಎಂದು ಅವರು ತಮ್ಮ ಎರಡನೇ ಕಥಾಸಂಗ್ರಹದ ಮುನ್ನುಡಿಯಲ್ಲಿ ವಿನೀತರಾಗಿ ಬರೆದಿದ್ದಾರೆ. ದೇವರಾಯರ ಕಥೆಗಳು ಸೂಚಿಸುವ ಅನುಭವದ ಸಂಕೀರ್ಣತೆ, ಗಾಢತೆ, ಹೃದಯವಂತಿಕೆ, ನಿರೂಪಣೆಯಲ್ಲಿ ಅಡಗಿರುವ ಕನ್ನಡ ಶೈಲಿಯ ಸುಕುಮಾರತೆ, ಕಥಾನಿರ್ವಹಣೆಯಲ್ಲಿ ತೋರುವ ಕೌಶಲ ಬರಿಯ ಸಾಹಿತ್ಯಜ್ಞನ ಸೊತ್ತಲ್ಲ. ಎಳವೆಯಲ್ಲಿ ಮೂಡುವ ಹೀಚುಭಾವಗಳೂ ಅಲ್ಲ, ಕಥೆಗಳ ಸ್ಥಾಯಿಯಲ್ಲಿ ಕೂಗಿ ಕರೆಯುವ ಪ್ರಬುದ್ಧತೆ ಅಸಾಧಾರಣವಾದ ಪ್ರತಿಭೆಯ ದ್ಯೋತಕ. ಮಾಸ್ತಿಯವರು ಮೆಚ್ಚಿಕೊಂಡದ್ದು – ಲೇಖಕರು ಯಾರೆಂದರಿಯದೆ ಆತನ ಬರಹದಿಂದಲೇ ಮೌಲ್ಯಾಂಕನ ಮಾಡಿದ್ದು – ಅನಾಮಧೇಯ ತರುಣ ಲೇಖಕನೊಬ್ಬನ ಪ್ರತಿಭಾ ಪ್ರಬುದ್ಧತೆಯನ್ನು. ತೀರ ಸಾಮಾನ್ಯ ಪತ್ರಗಳ ವ್ಯಕ್ತಿತ್ವವನ್ನು ಬಿಡಿಸಿ ತೋರಿಸುವಾಗಲೂ ಉತ್ತಮರ ಜೀವನದ ಕಷ್ಟ ಕಾರ್ಪಣ್ಯ, ತಟವಟಗಳನ್ನು ಬಣ್ಣಿಸುವಾಗಲೂ ಲೇಖಕನಲ್ಲಿ ಎದ್ದು ತೋರುವ ಮಾನವಸಹಜವಾದ ಮರುಕವನ್ನು. ಪರಿಸರಕ್ಕೆ ಸ್ಪಂದಿಸುವ ಮನುಷ್ಯ ಅಂತರಂಗದ ಎಷ್ಟು ಕೋಟಲೆಗಳಿಗೆ ಬದ್ಧನೂ ಪರಂಪರೆಯ ಸಂಗತಿಗಳಿಂದ ಬಂಧಿತನೂ ಆಗಿರುವನೋ ಅಷ್ಟೇ ಬಾಹ್ಯ ಒತ್ತಡಗಳಿಗೂ ಮಣಿಯುವ ನಿಸ್ಸಹಾಯಕನೂ ಆಗಿರುತ್ತಾನೆ. ಪರಿಸರ ಮನುಷ್ಯ – ಈರ್ವರ ಸಂಘರ್ಷ ಯಾವುದೋ ಒಂದು ಕಾಲಘಟ್ಟದಲ್ಲಿ – ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯ ೨೦ನೇ ಶತಮಾನದ ಆದಿ ಭಾಗದಲ್ಲಿ ನಡೆದದ್ದಾದರೆ ಅದನ್ನು ವರ್ಣಿಸುವಲ್ಲಿ ದೇವರಾಯರದು ಎತ್ತಿದ ಕೈ. ಇಲ್ಲಿಯ ಅನುಭವ ಸಾಚಾ ಹಾಗೂ ದಟ್ಟ ಮಾತ್ರವಲ್ಲ – ತೀರ `ಅಥೆಂಟಿಕ್’. ಕಾರಂತರ ಕಾದಂಬರಿಗಳ ಮುದುಕ ಮುದುಕಿಯರಂತೆ ಅಳಿದುಹೋದ ಸಂಸ್ಕೃತಿಯ ಸಂಜಾತರೆನಿಸಿದ ಈ ವ್ಯಕ್ತಿಗಳೇ ಸಂಪೂರ್ಣ ವ್ಯಕ್ತಿತ್ವವುಳ್ಳವರು – ಅವರು ‘ಶುದ್ಧ ಫಂಟಿಂಗ’ ಆಗಿರಲಿ, ‘ಹುಚ್ಚ ಮುನಸೀಫ’ರೇ ಆಗಿರಲಿ, ನೋಡಿದ ಕಥೆಯಲ್ಲವಾದರೂ ಮನಸ್ಸಿನಲ್ಲಿ ಪಾಕಗೊಂಡು ನೆನಪಿನಂಗಳದಲ್ಲಿ ನಲಿದು ಲೇಖನಿಯಲ್ಲಿ ಢಾಳವಾಗಿ ಅಚ್ಚೊತ್ತಬಲ್ಲ, ಹೃಷ್ಟಪುಷ್ಟ ಪಾತ್ರಗಳು.

ಪ್ರಥಮ ಸಂಕಲನ ಪ್ರಕಟವಾದದ್ದು ೧೯೪೯ರಲ್ಲಿ; ಎರಡನೆಯ ಆರಾಧನ ೧೯೫೪ರಲ್ಲಿ. ಈ ಐದು ವರ್ಷಗಳ ನಡುವೆ ದೇವರಾಯರ ಜೀವನದಲ್ಲಿ ಒಂದು ದೊಡ್ಡ ಕರಿ ನೆಳಲು ಹಾದುಹೋಯಿತು. ಅಖಿಲ ಭಾರತೀಯ ವಿದೇಷಾಂಗ ಸೇವಾ ಪರೀಕ್ಷೆಯಲ್ಲಿ ೮ನೇ ರ್‍ಯಾಂಕಿನಲ್ಲಿ ತೇರ್ಗಡೆ ಹೊಂದೆ ಕೇಂಬ್ರಿಜ್ಜಿನಲ್ಲಿ ತರಬೇತಿ ಶಿಕ್ಷಣ ಮುಗಿಸಿ, ಮಾಸ್ಕೋದಲ್ಲಿ ಪ್ರಥಮತಃ ಸೇವಾಸಚಿವನಾಗಿ ನೇಮಕಗೊಂಡ ಹೊತ್ತಿನಲ್ಲೇ ಅವರಿಗೆ ಅಸ್ಥಿ ಮೂಲವಾದ ಒಂದು ಗಂಭೀರ ಕಾಯಿಲೆ ತಲೆದೋರಿತು. ಇದರಿಂದ ಐದು ವರ್ಷಗಳ ಕಾಲ ಬಳಲಿ ಬೆಂಡಾಗಿ ಅಪಾರ ವೇದನೆಯನ್ನನುಭವಿಸಿದ ಬಳಿಕವೂ ಅವರು ಮರಳಿ ವಿದೇಶಾಂಗ ಸೇವೆಯ ಅರ್ಹತೆ ಗಳಿಸಿದ್ದು ನಿಜಕ್ಕೂ ಒಂದು ಪವಾಡ. ಈ ಕಾಯಿಲೆಯಿಂದ ತನಗೆ ಮುಕ್ತಿ ಹೇಗೆ, ತಾನು ಮರಳಿ ದೇಶಸೇವೆಗೆ ಅಣಿಯಾಗುವುದು ಹೇಗೆಂಬುದನ್ನು ಮುಂಬಯಿಯ ಎರಡು ಮೂರು ಶುಶ್ರೂಷಾಲಯಗಳಲ್ಲಿ, ಕೊನೇ ವರ್ಷ ಊರಿಗೆ ಮರಳಿದ ಮೇಲೂ ಕೂಡ, ಚಿಂತೆ, ಚಿಂತನ, ಹೃದಯ ಮಂಥನ. ಆಸ್ಪತ್ರೆಯ ಹಾಸುಗೆಯಲ್ಲೇ ನಾಲ್ಕು ವರ್ಷ ಕಳೆದಾಗಲೂ ದೇವರಾಯರು ಧೃತಿಗೆಡದೆ, ಅನೇಕ ಮಾನಸಿಕ ತುಮುಲಗಳಲ್ಲೂ ಸೋತು ಗೆದ್ದು, ಗೆದ್ದು ಸೋತು ಕೊನೆಗಂತೂ ವಿಮೋಚನೆ ಪಡೆದು, ಆರೋಗ್ಯವನ್ನೂ ಮರಳಿ ಸಂಪಾದಿಸಿ ಪೂರ್ವದ ಸೇವಾರಂಗವನ್ನು ಸೇರಿ, ದೇಹದ ದೌರ್ಬಲ್ಯವನ್ನೂ ಗಮನಿಸದೆ ೩೦ ವರ್ಷಗಳ ವಿದೇಶ ಸೇವೆಯನ್ನು ನಾಡಿಗೆ ಒಪ್ಪಿಸಿ ವಿಶ್ರಾಂತರಾದದ್ದು ಅವರಿಗೇನೇ ಹಿನ್ನೋಟ ಬೀರಿದಾಗ ಅಚ್ಚರಿ ಎನಿಸೀತು. ದಾರುಣವಾದ ಕಾಯಿಲೆ, ಮತ್ತು ಆರ್ಥಿಕ ತಾಪತ್ರಯಗಳು, ನಡುವೆ ಬಂಧುಮಿತ್ರರ ಕೈಗೂಸಾಗಿ ಬದುಕುಳಿದ ತಾವು ಇನ್ನು ತಮ್ಮ ಶೇಷ ಜೀವನವನ್ನು ದೇಶಕ್ಕೆ ಮುಡಿಪಿಡಬೇಕೆಂಬ ಸರ್ವಾರ್ಪಣ ಬುದ್ಧಿಯಿಂದ ಅವರು ಕೆಲಸ ಮಾಡಿದರು. ಹೀಗೆ ಆಚೆ ಹೋಗಿ ಈಚೆ ಬಂದ ತನ್ನ ಮೇಲೆ ಭಗವಂತನ ಕರುಣೆ ಇಲ್ಲದೆ ಹೋಗಿದ್ದರೆ ತನ್ನ ಉದ್ಧಾರ ಸಾಧ್ಯವೇ ಇಲ್ಲವೆಂದು ಸುಪ್ತೋತ್ಥಿತರಾದ ದೇವರಾಯರಲ್ಲಿ ಒಂದು ವಿಚಿತ್ರ ಮನಃಪರಿವರ್ತನೆ ಸಂಭವಿಸಿತು. ವಿಚಾರವಾದಿಗಳೂ ನಿರೀಶ್ವರವಾದಿಗಳೂ ಆಗಿದ್ದ ಅವರು ಕಟೀಲಿನ ದುರ್ಗಾಪರಮೇಶ್ವರಿಯ ಅಖಂಡ ಭಕ್ತರಾದರು. ಪರಮ ಭಾಗವತರಾದರು. ಆಸ್ತಿಕ್ಯವನ್ನು ಜೀವನದ ಒಂದು ಪ್ರಮುಖ ಅಂಗವಾಗಿ ಮಾಡಿಕೊಂಡರು. ಹಿಂದೆ ಬರೆದ ಕಥೆಗಳಲ್ಲಿ ನಿರೀಶ್ವರವಾದದ ಛಾಯೆ ಕಂಡರೆ ಅದನ್ನು ತಿದ್ದಿ ಮರುಪ್ರಕಟಣೆಗೆ ಅಳವಡಿಸಿದರು. ಆರಾಧನಾ ಸಂಗ್ರಹದ ಮುನ್ನುಡಿಯಲ್ಲಿ ಅವರ ಅಂತರಂಗದ ಆತ್ಮಕಥನವಿದೆ. “ನಾನು ಹಿಂದಕ್ಕೆ ಬರೆದಾಗ ಅನಾತೋಲ್ ಫ್ರಾನ್ಸಿನಂತೆಯೇ ಧರ್ಮ, ಭಕ್ತಿ, ಭಾವಗಳ ಮೃದುವಾದ ಭರ್ತ್ಸನೆ ಮಾಡಿದ್ದೆ. ಆ ಕಾಲದಲ್ಲಿ ನಾನೂ ನಿರೀಶ್ವರವಾದಿ ಎಂದು ಒಣ ಜಂಭ ನಟಿಸುತ್ತಿದ್ದೆ. ಆದರೆ ಈಗ ಭಗವಂತನ ಮುನಿಸಿನ ಪೆಟ್ಟು ತಿಂದು ಹಣ್ಣಾಗಿ, ದೇವರ ಭಯವುಂಟಾಗಿದೆ – ಜ್ಞಾನದ ಆರಂಭವೂ ಆಗಿದೆಯೋ ಏನೋ. ಆದುದರಿಂದ ಈ ಕತೆಗ ತತ್ತ್ವವೇ ಬದಲಾಗಿದೆ” ಎಂದು ಬರೆದರು. `ಅನ್ಯಥಾ ಶರಣಂ ನಾಸ್ತಿ’ ಎಂಬ ಪ್ರಾಮಾಣಿಕ ಭಾವುಕತೆಯನ್ನು ಬಾಳಿನ ಮಂತ್ರವಾಗಿ ಅಂಗೀಕರಿಸಿದ್ದರಿಂದ ಅವರ ಬಾಳಿಗೊಂದು ಹೊಸ ತಿರುವು ಮೂಡಿತು. ಎಲ್ಲಿಯವರೆಗೆಂದರೆ ವಾಚಕರನ್ನು ಕರೆದು ತನ್ನ ರಚನೆಯ ಆಧಾರವನ್ನು ಮನಗಾಣಲು ಒತ್ತಾಯಿಸುವ ತನಕವೂ: “ಈ ಸಂಗ್ರಹದ ಕಥೆಗಳನ್ನು ಓದುಗರು ಆಳವಾದ ಭಾವದಿಂದ, ದಾರ್ಶನಿಕ ದೃಷ್ಟಿಯಿಂದ ವಿಚಾರದಿಂದ ಓದಿದರೆ ಕೃತಜ್ಞನಾಗುವೆನು. ನನ್ನ ಕಥೆಗಳೆಲ್ಲವೂ `ದೇವರು, ಧರ್ಮ, ಮನುಷ್ಯ, ಜೀವನ ಮತ್ತು ಮರಣ’ಎಂಬ ಐದು ಪರಮ ತತ್ತ್ವಗಳ ಮೇಲೆ ನಿಂತಿರುವುವು ಎಂಬುದನ್ನು ದಯವಿಟ್ಟು ಓದುಗರು ಮನಗಾಣಬೇಕು” ಎಂದು ಅನುನಯ ಮಾಡುವ ನಿಲುಮೆಯ ತಳದಲ್ಲಿ ಐದು ವರ್ಷಗಳ ಕಾಲ ಸಂತತವಾಗಿ ತಾನುಂಡ ನೋವಿನ ಆಕ್ರಂದನವಿರುವುದನ್ನು ನಾವು ಗಮನಿಸಬೇಕಾಗುತ್ತದೆ.

ಇಂಥ ಭಾವುಕ ಪರ್ವದಲ್ಲಿ ರಚಿತವಾದ, ತಿದ್ದುಪಡಿಗೊಳಗಾದ ಕಥೆಗಳುಳ್ಳ ಆರಾಧನಾ ಸಂಕಲನವು ಹುಚ್ಚ ಮುನಸೀಫದಂತೆಯೇ ಕನ್ನಡ ಸಾಹಿತ್ಯದ ಒಂದು ಆಚಂದ್ರಾರ್ಕ ಕೃತಿಯೇ ಆಗಿದೆ. ಪ್ರತಿಯೊಂದು ಕಥೆಯಲ್ಲಿ ಕೊನೆಗೆ ಬರುವ ಹಠಾತ್ ತಿರುವು ಬದುಕಿನ ಅನಿಶ್ಚಿತತೆಯನ್ನೂ ಪರಾಧೀನತೆಯನ್ನೂ ಒಂದು ದರ್ಶನದ ಸೆಳಕಿನಂತೆ ಮಿಂಚಿಸಿ ಮಾಯವಾಗಿಸುತ್ತದೆ. ಉದಾಹರಣೆಗೆ ಭಾರತೀಯ ಸಂಸ್ಕೃತಿಯೂ ಬೇಡ, ಸಂಸ್ಕಾರವೂ ಬೇಡವೆಂದಿರುವ ಜರ್ಮನ್ ತಾಯಿಗೆ ವಿಮಾನಾಘಾತದಲ್ಲಿ ಸಿಕ್ಕ ಶವ ಅದಲು ಬದಲಾಗಿ ಆಕೆಯ ಮಗನು ಭಾರತೀಯ ಮಾದರಿಯಲ್ಲೇ ಭಾರತದಲ್ಲಿ ಅಂತ್ಯಸಂಸ್ಕಾರ ವಶವಾದದ್ದು; ಜೀವನಪರ್ಯಂತ ಹೇಳಿದ್ದೆಲ್ಲ ಕರಾರುವಾಕ್ಕಾಗಿ ನಡೆಸಿದ ಹುಲಿಜೋಯಿಸರು ತನ್ನ ಕೊನೆಗಾಲಕ್ಕೆ ಸುಳ್ಳು ಭವಿಷ್ಯ ನುಡಿದು ಒಂದು ಹೆಣ್ಣು ಜೀವವನ್ನು ಉಳಿಸಲು ಮನಕರಗಿದ್ದು; ಯುದ್ಧಭೂಮಿಯಲ್ಲಿ ಸಾವನ್ನೆದುರಿಸಿ ವೀರಾಗ್ರಣಿಯಾಗಿ ಮೆರೆದ ಯೋಧ ಹಳ್ಳಿಗೆ ಮರಳಿದ ದಿನವೇ ಅಪಮೃತ್ಯುವಿಗೊಳಗಾದದ್ದು; ಕಲ್ಲು ಮನಸ್ಸಿನ ರಾಜಮ್ಮ ತನ್ನ ನಾಲಿಗೆ ತಪ್ಪನ್ನು ತಿದ್ದಿಕೊಳ್ಳಲು ಕ್ಷೇತ್ರದವರೆಗೆ ಯಾತ್ರೆ ಮಾಡಿದ್ದು; ಅಹಿಂಸಾವಾದಿ ಭಿಕ್ಷು ಸರ್ವಾರ್ಥಸಿದ್ಧಿ ಖಳ.

`ಲೋಕಮಿತ್ರ’ – ಕುಶಿ ಅಭಿನಂದನ ಗ್ರಂಥ, ೧೯೮೯, ಎಂಜಿಎಂ ಕಾಲೇಜು, ಉಡುಪಿಯ ಪ್ರಕಟಣೆ – ಇದರಲ್ಲಿಯ ಕುಶಿಯವರ ನಿವೇದನೆಯಿಂದ ಉದ್ಧೃತಾಂಶ.

ಜನತುಳಿದ ಜಾಡಿನಲಿ ನಡೆಯನಿವ ಸ್ವಂತಪಥ-
ವನು ಹುಡುಕಿ ಕಾಡುಮೇಡುಗಳಡ್ಡ ಸಾಗುವನು
ತನುವಿಗಂಜುವುದುಂಟೆ, ಮನಕಧೀನವದೆಂದು
ದಿನದಿನಂ ಧಾವಿಸುವ ಕೊಡಿಯೆಡೆಗೆ ಅತ್ರಿಸೂನು

ಮಾನವೀಯತೆಯಲ್ಲಿ ಮೊಳವಳ್ಳಿ, ದಾನಶೂ
ರತ್ವದಲಿ ಕಾರ್ನಾಡು, ವೈದುಷ್ಯದಲಿ ಮುಳಿಯ
ಬುದ್ಧಿ ತೀಕ್ಷ್ಣತೆಯಲಿ ಕಡೆಂಗೋಡ್ಲು, ಕೆಚ್ಚಿನಲಿ
ಕಾರಂತ – ಕಿನ್ನಿಕಂಬಳದ ಈ ಸಂದೀಪ್ತಿ ಅತ್ರಿಸೂನು!

(ಮುಂದುವರಿಯಲಿದೆ)