ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರ ಅದರ ವಾರ್ಷಿಕ ತಿರುಗಾಟ ನಾಟಕಗಳ ನಾಂದಿಯೂ ಹೌದು. ಎಂದಿನಂತೆ ಈ ವರ್ಷದ ಶಿಬಿರ ಅಕ್ಟೋಬರ್ ಒಂದರಿಂದ ನಡೆಯಲಿದೆ ಎಂದು ತಿಳಿಯುತ್ತಿದ್ದಂತೆ, ಸಂಚಿ ಬಳಗದ ದಾಖಲೀಕರಣದ ದಿನಾಂಕವೂ ಸೆಪ್ಟೆಂಬರ್ ೨೬ಕ್ಕೇ ನಿಗದಿಗೊಂಡಿತು. ಅದು ಎಂದಿನಂತೆ ಸಂಚಿ ದಾಖಲೀಕರಣಕ್ಕಾಗಿ ವಿಶೇಷ ಪ್ರದರ್ಶನ (ಸಾರ್ವಜನಿಕರಿಗಿಲ್ಲ) ಮತ್ತು ದಾಖಲೀಕರಣದ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಗರಿಷ್ಠ ಪ್ರದರ್ಶನಗಳ ವ್ಯವಸ್ಥೆಯೂ ಆಗಿರುತ್ತದೆ. ಸಂಚಿ ಫೌಂಡೇಶನ್, ಭಿನ್ನ ಕಾರ್ಯವಲಯಗಳ ಆದರೆ ಸಾಂಸ್ಕೃತಿಕ ಕನ್ನಡ ಕಟ್ಟುವಲ್ಲಿ ಏಕಾಸಕ್ತಿಯ ಮೂವರ ಕೂಟ. ಸಂಚಿಯಲ್ಲಿ ದಾಖಲೀಕೃತ ಮಾಹಿತಿಯ ಅಂತರ್ಜಾಲ ನಿರ್ವಹಣೆ ಗಣಕತಜ್ಞ ಓಂಶಿವಪ್ರಕಾಶ್ ನಡೆಸಿದರೆ, ವೈಚಾರಿಕ ಹಂದರ ಕಟ್ಟುವವರು ಪ್ರಜಾವಾಣಿ ಬಳಗದ ಬಹುಶ್ರುತ ಸಂಪಾದಕ ಎನ್.ಎ.ಎಂ ಇಸ್ಮಾಯಿಲ್.
ಸಿನಿಮಾ ನಿರ್ದೇಶನವೇ ವೃತ್ತಿಯಾದ ಅಭಯ ಸಹಜವಾಗಿ ವಾಸ್ತವದ ದಾಖಲೀಕರಣ ನಡೆಸುತ್ತಾನೆ. ಅಭಯ ಈ ಬಾರಿ ಸ್ವಂತ ನಿರ್ದೇಶನದ ತುಳು ಸಿನಿಮಾ (ವಿವರಗಳು ಸದ್ಯೋಭವಿಷ್ಯತ್ತಿನಲ್ಲಿ) ಒಂದರಲ್ಲಿ, ಅವಿಭಜಿತ ದಕ ಜಿಲ್ಲೆಯ, ಅದರಲ್ಲೂ ಮುಖ್ಯವಾಗಿ ಮಲ್ಪೆ ಕಡಲ ಕಿನಾರೆಗಳಲ್ಲೇ ಚಿತ್ರೀಕರಣ ನಿರತನಾಗಿದ್ದ. ಹಾಗಾಗಿ ಜತೆಯಲ್ಲೇ ಇದ್ದ ಕ್ಯಾಮರಾಮನ್ ವಿಷ್ಣುಪ್ರಸಾದ್, ಹೆಚ್ಚುವರಿ ಕ್ಯಾಮರಾಮನ್ ಲಕ್ಷ್ಮಣ ನಾಯಕ್ ಮತ್ತು ಆತನ ಸಿನಿಮಾಕ್ಕೆ ನಿರ್ವಹಣಾ ಸಹಾಯಕನಾಗಿ ಒದಗಿದ್ದ ರಕ್ಷಿತ್ ಕಾರಂತರನ್ನು ಕೇವಲ ಗೆಳೆತನಕ್ಕಾಗಿ ಸೇರಿಸಿಕೊಂಡು ಮಂಗಳೂರಿನಿಂದಲೇ ಹೊರಟ. ಅವನ ಕಾರಿನಲ್ಲಿ ಖಾಲಿಯುಳಿದ ಒಂದು ಸ್ಥಾನವನ್ನು ನಾನು ಸದುಪಯೋಗಪಡಿಸಿದೆ; ಹಿಂದಿನೆಲ್ಲ ವರ್ಷಗಳಂತೆ, ದಾಖಲೀಕರಣದ ಕೆಲಸಕ್ಕೆ ಉಪಯೋಗಿಯಾಗದಿದ್ದರೂ ಉಪದ್ರವಿಯಾಗದ ಎಚ್ಚರದಲ್ಲಿ ೨೫ರ ಬೆಳಿಗ್ಗೆ ನಾನೂ ಅಭಯನ ಕಾರೇರಿದ್ದೆ.
ಚತುಷ್ಪಥ ಬಹುತೇಕ ಪೂರ್ಣಗೊಂಡ ಕುಂದಾಪುರ ದಾರಿ ಹಿಡಿದಿದ್ದೆವು. ಸಾಲಿಗ್ರಾಮದ ‘ಮಂಟಪ’ದಲ್ಲಿ ಊಟದ ಶಾಸ್ತ್ರ ಮುಗಿಸಿ, ಕೋಟೇಶ್ವರದಲ್ಲಿ ಬಲ ಹೊರಳಿ, ಸಿದ್ಧಾಪುರ- ವರಾಹಿಯಲ್ಲಿ ಘಟ್ಟದಾರಿ ಹಿಡಿದೆವು. ಏರು, ಅಂಕಾಡೊಂಕಿ, ದಡಬಡ ಪಚಕ್, ಏಸಿ ಕಳಚಿ ಹಸಿರ ಉಸಿರು ತುಂಬಿದ ಕಾಡೆಲ್ಲ ಗಣನೆಗಿಲ್ಲವಾಗಿತ್ತು. ಸಪುರ ದಾರಿಯಲ್ಲಿ ಬಸುರೆಳೆಯುವ ಲಾರಿಗಳಿಂದ ರಹದಾರಿ ಗಿಂಜಿ, ದೀಪಧಾವಂತದಲ್ಲಿ ಸೇತಿಗಾತುರ ತೋರುವ ಎದುರು ವಾಹನವನ್ನು ಝಂಕಿಸಿ, ಕುರುಡು ತಿರುವುಗಳಲ್ಲಿ ದಾರಿಯುಳಿಸದ ಎದುರು ಪಕ್ಷಿಗಳನ್ನು ಬೆದರಿಸಿ, ಮಳೆಯ ಪಿರಿಪಿರಿಗೆ ಕನ್ನಡಿತೊಳಚ ಹಾಕಿ, ಮಂಕಾಡಿಸುವ ಮಂಜಿಗೆ ದೀಪ ಹಚ್ಚುವವರೆಗೂ ಸವಾರಿ ಯಾಂತ್ರಿಕವಾಗಿಯೇ ನಡೆದಿತ್ತು. ಆದರೆ ಹಿರಿತನಕ್ಕೊಪ್ಪಿದ ನಾನು, ಸ್ವಭಾವ ಮೌನಿಯಾದ ಲಕ್ಷ್ಮಣರನ್ನುಳಿದು ಮೂವರ ಮಾತು, ಚರವಾಣಿ ಮಾತೋ ಕಸರತ್ತೋ ಅವಿರತ ನಡೆದೇ ಇತ್ತು! ನಡೆದಿರುವ ಸಿನಿಮಾ ಮತ್ತು ಕಾದಿರುವ ದಾಖಲೀಕರಣಗಳಿಂದ ಹಿಡಿದು, ದೃಶ್ಯಮಾಧ್ಯಮ ಸಾಗರ ಮಥನದಲ್ಲಿ ಕಸ, ರಸ, ವಿಷ, ಅಮೃತ ಬರುತ್ತಲೇ ಇತ್ತು. ದಾರಿ ಸವೆದೂ ಸವಿಯದವರ ಕಂಡು ತುಸು ಬದಲಾವಣೆಗಾಗಿ ನಾನು ಬಿರಿಯೊತ್ತಿದೆ!
ಹಿಂದೊಮ್ಮೆ ಹೀಗೇ ನೀನಾಸಂ ದಾಖಲೀಕರಣದ ಕೂಟಕ್ಕೆ ಸೇರಿಕೊಳ್ಳಲೆಂದು ನಾನೂ ದೇವಕಿಯೂ ಇದೇ ದಾರಿಯಲ್ಲಿ ಕಾರೇರಿ ಹೋದದ್ದಿತ್ತು. (ನೋಡಿ: ನೀನಾಸಂ ನಾಟಕಗಳ ದಾಖಲೀಕರಣ) ಆಗ ನಗರ ಬಸ್ ನಿಲ್ದಾಣದಲ್ಲಿ ಊಟ ಮಾಡಿ ಹೊರಟಾಗ, ಅಲ್ಲೇ ಇದ್ದ ಕೋಟೆ ನೋಡಿ ಸರಳ ಸೌಂದರ್ಯಕ್ಕೆ ಮರುಳಾಗಿದ್ದೆವು. ಅಂದು ಅದರ ಗೋಡೆಯ ಕೆಲವು ಸಣ್ಣ ಜೀರ್ಣೋದ್ಧಾರಕಾರ್ಯ ನಡೆಯುತ್ತಿದ್ದದ್ದು, ಈಗ ಪೂರೈಸಿದಂತಿತ್ತು. ಪುಟ್ಟ ಕೋಟೆಯೊಳಗೆ ಸುತ್ತಾಡಿದ್ದ ನನ್ನ ರಮ್ಯ ನೆನಪನ್ನು ಇವರಿಗೊಪ್ಪಿಸಿ, ನೂರಾರು ವರ್ಷಗಳ ಹಿಂದಿನ (ಭೂತಕಾಲದ) ರೋಮಾಂಚಕತೆಯ ಘನ ಸಾಕ್ಷಿಯನ್ನು ಬೊಟ್ಟುಮಾಡಿ ತೋರಿಸಿ ಎಲ್ಲರನ್ನು ವರ್ತಮಾನಕ್ಕೆಳೆದೆ. ಪೇಟೆ ಮತ್ತು ಜನವಸತಿಯಿಂದ ಹೊರಕ್ಕೇ ಇರುವ ಕೋಟೆಯ ಮಹಾದ್ವಾರದ ಬಳಿ ಕಾರು ಬಿಟ್ಟು ನಡೆದೆವು. ಒಳಗೆ ಮಹಾ ಕೆರೆಯ ಮಗ್ಗುಲಿನಿಂದ ಎರಡನೇ ಸುತ್ತಿನ ಎತ್ತರಕ್ಕೇರಿ, ಅಡಿಪಾಯವನ್ನಷ್ಟೇ ಉಳಿಸಿಕೊಂಡ ಆಸ್ಥಾನದ ಅಂಕಣಗಳನ್ನು ಸುತ್ತಿ, ಎಡ ಮಗ್ಗುಲಿನಿಂದ ಕೇಂದ್ರ ಬುರುಜಿಗೊಂದು ಅರೆಪ್ರದಕ್ಷಿಣೆ ಹಾಕಿದೆವು. ಮಹಾಗೋಡೆಯ ಒಳ ತಗ್ಗಿನಲ್ಲಿ ಅರೆಬರೆ ತೆರವಾಗುಳಿದಿದ್ದ ಕೆಲವು ಕೊಠಡಿಗಳನ್ನಿಣುಕಿ, ಗೋಡೆಯಗುಂಟ ನಡೆದು, ಕೇಂದ್ರ ಬುರುಜಿನ ಹಿಮ್ಮೈಯಲ್ಲಿದ್ದ ಹೊರಚಾಚು ಮೆಟ್ಟಿಲುಗಳಲ್ಲಿ ಅತ್ಯುನ್ನತಿಯನ್ನು ಸಾಧಿಸಿದೆವು. ಐತಿಹಾಸಿಕ ಅಗತ್ಯಗಳೇ ಆಗಿದ್ದ ಕೋಟೆಯ ಅಸಂಖ್ಯ ರಚನೆಗಳೆಲ್ಲ ಪ್ರಾಕೃತಿಕ ಪುನರುತ್ಥಾನದಲ್ಲಿ ಹರಿತ ಕಳೆದುಕೊಂಡು ಸುಂದರ ಹಸಿರುಗಂಬಳಿ ಹೊದ್ದ ದಿಬ್ಬಗಳಾಗಿದ್ದವು. ಅಪಾಯಕಾರೀ ಕಂದಕ, ಸುಲಭ ದಾರಿ ಕೊಡದ ಭಾರೀ ಕಲ್ಲುಗಳ ಮಹಾಗೋಡೆಗಳೂ ಸುಳಿಗಾಳಿಗೂ ರೋಮಾಂಚನಗೊಳ್ಳುವ ಹಸಿರಂಗಿಯನ್ನೇ ತೊಟ್ಟು ಮೋಹಕವಾಗಿದ್ದವು. ಕೋಟೆಯಾಚಿನ ಕನ್ನಡಿ ಹಾಸಿನಂಥ ಭಾರೀ ಕೆರೆ, ಬಳುಕು ಬಳ್ಳಿಯಂಥ ಹೊಳೆ, ಆಗೀಗ ವಾಹನ ಸಂಚಾರ ತೋರುವ ಡಾಮರು ದಾರಿ, ಹೆಚ್ಚೇನು ವಿರಳ ಆಧುನಿಕ ಕಟ್ಟಡಗಳೂ ಪ್ರಕೃತಿ ಕಾವ್ಯದ ಲಯಸಾಧಿಸಿ ಎಲ್ಲರನ್ನೂ ಮರುಳುಗಟ್ಟಿಸಿತು. ಬುರುಜಿನ ಎದುರು ಜಾರಿನಲ್ಲಿ ಇಳಿದು, ಅವಕಾಶ ಸಿಕ್ಕಲ್ಲೆಲ್ಲ ಗೋಡೆಗಳ ಅಂಚಿನಲ್ಲಿ ಹೊಸತೇ ದೃಶ್ಯಗಳಿಗೆ ಹೊಂಚಿ, ಬುರುಜೊಂದರಲ್ಲಿ ಶಿಥಿಲವಾಗಿಯೂ ತಾಳ್ಮೆಗೆಡದ ಇಣುಕಂಡಿಯನ್ನೂ ಕಾಣುತ್ತ ನಡೆದೆವು. ಕೋಟೆ ಪೂರ್ಣ ಮಾನವರಚನೆಯೇ ಆದರೂ ಒಳಗಿನ ನೀರ ಅಗತ್ಯಗಳಲ್ಲಿ ಖಂಡಿತವಾಗಿಯೂ ಸ್ವಾಯತ್ತೆ ಸಾಧಿಸಿತ್ತು ಎನ್ನುವುದಕ್ಕೆ ಕುರುಹಾಗಿ ಇಂದೂ ಮಳೆನೀರಲ್ಲಿ ತುಂಬಿಕೊಂಡಿದ್ದ ಕೆರೆ, ಅದರ ಪರಿಸರ ಕಲುಷಿತಗೊಳ್ಳದಂತೆ ನೀರ ಸಂಗ್ರಹಿಸುವ ಜಾಣ್ಮೆಗಳಂತು ಊರ ಎಲ್ಲ ನದಿ, ಆಗಸದ ಎಲ್ಲ ಮೋಡಗಳನ್ನೂ ಆಪೋಷಣಗೈಯ್ಯ ಹೊರಟ ಪುಡಾರಿ-ವಿಜ್ಞಾನಿಗಳಿಗೆ ಕಾಣದಾಯ್ತೇ ಎಂಬ ವಿಷಾದದಲ್ಲಿ ಮರಳಿ ಕಾರೇರಿ, ಸಾಗರ ದಾರಿಯಲ್ಲಿ ಮುಂದುವರಿದೆವು.
ಈ ವಲಯದಲ್ಲಿ ಘಟ್ಟ ಹತ್ತಿದ ಮೇಲೆ ಪ್ರಧಾನವಾಗಿ ಲಿಂಗನಮಕ್ಕಿ (ಶರಾವತಿ – ಸುಮಾರು ಐವತ್ತಮೂರು ವರ್ಷಗಳಿಂದೀಚೆಗೆ) ಮತ್ತು ಮಾಣಿ (ವರಾಹಿ – ಸುಮಾರು ನಲ್ವತ್ತು ವರ್ಷಗಳಿಂದೀಚೆಗೆ) ಅಣೆಕಟ್ಟುಗಳ ಹಿನ್ನೀರ ಹರಹು ಶತಶತಮಾನಗಳ ಕಾಲ ಸಹಜವಾಗಿ ವಿಕಸಿಸಿದ್ದ ಕೃಷಿ, ಸಾರಿಗೆ ಸಂಪರ್ಕ, ಒಟ್ಟಾರೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರ ವಿವರಗಳನ್ನು ನಾ. ಡಿಸೋಜರು ಅನೇಕ ಲೇಖನ, ಕತೆ, ಕಾದಂಬರಿಗಳಲ್ಲೂ ಗಿರೀಶ ಕಾಸರವಳ್ಳಿಯವರು ಸಿನಿಮಾವಾಗಿಯೂ (ದ್ವೀಪ) ಈಚೆಗೆ ಡಿ.ಎಸ್. ಶ್ರೀಧರರು ವಿದ್ಯುನ್ಮಾನ ಮಾಧ್ಯಮದಲ್ಲಿ (ಫೇಸ್ ಬುಕ್ ನಮೂದು: ಮುಳುಗಡೆ, ಒಳಗಡೆ) ಟಿಪ್ಪಣಿಗಳ ಸರಣಿಯಲ್ಲೂ ಹಿಡಿದಿಡುವ ಕೆಲಸವನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಆದರೆ ಅವೆಲ್ಲ ತೇಲುವ ಮಂಜುಗಡ್ಡೆಯ ತುದಿಗಳು ಮಾತ್ರ. ಅದರ ವಿಸ್ತಾರಕ್ಕಿಳಿಯುವ ಧೈರ್ಯ ನನಗಂತೂ ಇಲ್ಲ. ಆದರೆ ಆ ಸಮಸ್ಯೆಗಳ ಸಣ್ಣ ಪರಿಣಾಮ – ಹಳೆ, ಹೊಸ ದಾರಿಗಳ ಗೊಂದಲ, ನಮ್ಮನ್ನು ಕಾಡಿತು. ಹಿಂದಿನ ಸಲ ನಾನು ಕಾರೋಡಿಸಿದ್ದಾಗ, ಹೊಸನಗರದಿಂದ ಮುಂದೆ ಬಹುತೇಕ ಹಳ್ಳಿಗಾಡಿನ ದಾರಿಗಳಲ್ಲೇ ಸುಮಾರು ಮೂವತ್ತೈದೇ ಕಿಮೀ ಅಂತರದಲ್ಲಿ ಹೆಗ್ಗೋಡು ತಲಪಿದ್ದೆವು. ಆದರೆ ಅದ್ಯಾವುದೋ ಮಾಯೆಯಲ್ಲಿ ಅಭಯನಿಗೆ ರಿಪ್ಪನ್ ಪೇಟೆಯ ಬಳಸು ದಾರಿಯೇ ಹೋಗುವಾಗಲೂ ವಾಪಾಸಾಗುವಾಗಲೂ ಸಿಕ್ಕಿ ಹೆಚ್ಚು ಕಮ್ಮಿ ದುಪ್ಪಟ್ಟು ದೂರ ಮತ್ತು ಸಮಯವನ್ನು ವ್ಯರ್ಥಗೊಳಿಸಿದ್ದೆವು! ಇದು ದಾರಿ ತಪ್ಪಿದ ಸಣ್ಣ ಉದಾಹರಣೆ ಮಾತ್ರ. ಆದರೆ ಈ ವಲಯದಲ್ಲೇ ದೊಡ್ಡ ಸಮಾಜದೊಡನೆ ಸಹಜವಾಗಿ ಬೆಳೆದಿದ್ದ ಅನೇಕ ಅವಶ್ಯ ಸಂಬಂಧಗಳನ್ನು – ಸೇತುವೆ, ಆರೋಗ್ಯ, ವಿದ್ಯೆ ಇತ್ಯಾದಿ ತಲೆಮಾರುಗಳೇ ಕಳೆದುಹೋದ ಇಂದಿಗೂ ತಪ್ಪಿಸಿಕೊಂಡವರ ಸ್ಥಿತಿ ‘ಅಭಿವೃದ್ಧಿ ಕಥನ’ಗಳಲ್ಲಿ ಕಳೆದೇಹೋಗುತ್ತವೆ.
ಸಂಜೆ ಆರು ಗಂಟೆಯ ಸುಮಾರಿಗೆ ನೀನಾಸಂ ವಠಾರ ಸೇರಿದೆವು. ಎಂದಿನಂತೆ ಅಜ್ಜರ ಮನೆಯೆದುರು ಕಾರು ಬಿಟ್ಟು, ಒಳಗೆ ಚೀಲ ಸಲಕರಣೆ ಎಸೆದು, ಆಹಾರ್ಯದಲ್ಲಿ ಲಘೂಪಹಾರ ಸೇವಿಸಿದ್ದೇ ಕಾರಂತ ರಂಗಮಂದಿರಕ್ಕೆ ಧಾವಿಸಿದೆವು. ತಿರುಗಾಟ ೨೦೧೭ರ ಒಂದು ನಾಟಕ, ಮರುದಿನ ಮೊದಲು ದಾಖಲೀಕರಣಕ್ಕೆ ಒಡ್ಡಿಕೊಳ್ಳಲಿದ್ದದ್ದು – ಸು ಬಿಟ್ಟರೆ ಬಣ್ಣ, ಬಾ ಬಿಟ್ಟರೆ ಸುಣ್ಣ, ಖಾಲಿ ಭವನಕ್ಕೆ ಅಂತಿಮ ಅಭ್ಯಾಸ ಪ್ರದರ್ಶನ ಕೊಟ್ಟು ಮುಗಿಸುವ ಹಂತದಲ್ಲಿತ್ತು. ಅವರ ಲಹರಿಗಡ್ಡಿಯಾಗದಂತೆ ಹಿಂದಿನ ಬಾಗಿಲಿನಲ್ಲಿ ಹಗುರ ಹೆಜ್ಜೆಯಲ್ಲಿ ಒಳಸೇರಿದವರು, ತುದಿಗಾಲಿನಲ್ಲೇ ಹೊರಬಂದೆವು.
ನೀನಾಸಮ್ ರಂಗಶಿಕ್ಷಣ ಕೇಂದ್ರದ್ದು “ಗುರುವಿನ ಗುಲಾಮನಾಗುವ ತನಕ…” ಪಲ್ಲವಿಯನ್ನು ಕಳಚಿಟ್ಟ ಗುರುಕುಲ ಶಿಕ್ಷಣ. ಹಣ ಪ್ರಭಾವಗಳ ಸೋಂಕಿಲ್ಲದ ಯೋಗ್ಯತೆಯೊಂದೇ ಇಲ್ಲಿನ ಪ್ರವೇಶಕ್ಕೆ ಮಾನದಂಡ. ಇದು ತನ್ನ ವಠಾರದ ಒಳಗೇ ವಸತಿ, ತರಗತಿ, ಗ್ರಂಥಾಲಯ, ಆತ್ಮೀಯ ಗುರುವೃಂದ, ಧ್ವನಿ ದೀಪ ವೇಷಭೂಷಣ ಮತ್ತು ರಂಗಸಲಕರಣೆಗಳಿಂದ ಸಜ್ಜಾದ ಕನಿಷ್ಠ ಎರಡು ರೀತಿಯ ಪ್ರದರ್ಶನಾಂಗಣ, ಆಹಾರ ವ್ಯವಸ್ಥೆಗಳಿಂದ ಸ್ವಯಂಪೂರ್ಣವಿದೆ. ಆದರೆ ಹಳೆಗಾಲದ ‘ಗುರುಚರಣಸೇವೆ’ಯ ಭ್ರಮಾಮುಕ್ತವಾಗಿದೆ. ಇವೆಲ್ಲ ಸಾಧ್ಯವಾಗಿರುವುದು ಸರಕಾರದ ಅನುದಾನ, ಯಾವುದೇ ಹಂಗು ಹೇರದ ಪ್ರಾಯೋಜಕರ ಸಹಾಯ ಮತ್ತು ಬಹುಮುಖ್ಯವಾಗಿ ಕೆವಿ ಸುಬ್ಬಣ್ಣನವರ ಆದರ್ಶಗಳನ್ನು ಅಂದಂದಿನ ಅಗತ್ಯಗಳ ತಕ್ಕಡಿಯಲ್ಲಿ ತೂಗಿ ಖಚಿತವಾಗಿ ನಡೆಸುವ ಅವರದೇ ಕುಟುಂಬ (ಮುಖ್ಯವಾಗಿ ಕೆ.ವಿ. ಅಕ್ಷರ) ಮತ್ತು ಊರವರ ಪ್ರೀತಿ. ಹೆಗ್ಗೋಡು ಲೆಕ್ಕ ಹಾಕಿ ನಾಲ್ಕೈದು ಅಂಗಡಿಗಳಷ್ಟೇ ಇರುವ ಅಪ್ಪಟ ಹಳ್ಳಿಯೇ ಆದ್ದರಿಂದ ಇಲ್ಲಿ ಶಿಕ್ಷಣಾರ್ಥಿಗಳು ಅಥವಾ ತತ್ಕಾಲೀನ ಶಿಬಿರಗಳನ್ನರಸಿ ಬಂದವರು ಅನ್ಯ ಆಕರ್ಷಣೆಗಳ ಬೆಂಬತ್ತಿ ಸುತ್ತುವ ಪ್ರಮೇಯವೇ ಇಲ್ಲ. ಸಹಜವಾಗಿ ಬೆಳಿಗ್ಗೆ ಏಳೂವರೆಯಿಂದಲೇ ಗಿಜಿಗುಡುವ ವಠಾರ, ಅಗತ್ಯ ಬಂದಲ್ಲಿ ಅಪರಾತ್ರಿ ಹನ್ನೆರಡಾದರೂ ವಿರಮಿಸುವ ಅವಸರ ಇಲ್ಲದೇ ನಡೆದಿರುತ್ತದೆ! ಇಂಥ ಕುಲುಮೆಯಲ್ಲಿ ಪಕ್ವಗೊಂಡ, ಅಂದರೆ ತಮ್ಮ ಒಂದು ವರ್ಷದ ಶಿಕ್ಷಣಾವಕಾಶವನ್ನು ಹೀಗೊಮ್ಮೆ ನಿಕಷಕ್ಕುಜ್ಜಿ ನೋಡುವ ಭಾಗವಾಗಿ, ಪ್ರಸಕ್ತ ವಿದ್ಯಾರ್ಥಿಗಳು ತಯಾರು ಮಾಡಿದ ನಾಟಕ ‘ನೂರ್ ಜಹಾನ್’. ಹಿಂದಿಯ ದ್ವಿಜೇಂದ್ರ ಲಾಲ್ ರಾಯ್ ಸಾಹಿತ್ಯವನ್ನು, ಕನ್ನಡಕ್ಕೆ ಆರ್. ನಾಗರಾಜ್ ತಂದರೆ, ಇಲ್ಲಿ ರಂಗಕ್ಕಳವಡಿಸಿ ನಿರ್ದೇಶಿಸಿದವರು ನೀನಾಸಂ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರೇ ಆದ ಮಂಜು ಕೊಡಗು. ಮೊಗಲ್ ಸಾಮ್ರಾಟ ಅಕ್ಬರನ ರಾಷ್ಟ್ರಕಾರಣದ ಸಾಧನೆಗಳು, ಮುಂದಿನ ತಲೆಮಾರಿನಲ್ಲಿ ಕುಟುಂಬಕಾರಣಕ್ಕೆ ಪಲ್ಲಟಗೊಂಡು, ಪರೋಕ್ಷವಾಗಿ ಅವನತಿಯತ್ತ ಸಾಗಿದ್ದನ್ನು ಪ್ರದರ್ಶನ ತುಂಬ ಸಮರ್ಥವಾಗಿ ಬಿಂಬಿಸಿತು. ವಿವಿಧ ‘ಕನ್ನಡಗಳ’ ಇಪ್ಪತ್ತಕ್ಕೂ ಮಿಕ್ಕ ವಿದ್ಯಾರ್ಥಿಗಳು ಒಂದು ಶೈಲೀಕೃತ ನುಡಿಗೆ ಪಳಗಿ, ಗಂಭೀರ ವಿಷಾದವೇ ಪ್ರಧಾನಸ್ರೋತವಾದ ಘಟನಾಸರಣಿಯನ್ನು ರಂಗ ಚಟುವಟಿಕೆಗಳ ಬಲದಲ್ಲಿ ಪ್ರೇಕ್ಷಕ ಆಕರ್ಷಕವಾಗಿಸಿದ ಪ್ರದರ್ಶನದ ಸಾಧನೆ ಅಸಾಮಾನ್ಯ. ರಂಗಶಿಕ್ಷಣ ಕೇಂದ್ರಕ್ಕೆ ಸಂದ ಅಷ್ಟು ವರ್ಷಗಳಲ್ಲಿ ಇಂಥ (ಐವತ್ತರವತ್ತಕ್ಕೂ ಮಿಕ್ಕು) ಪ್ರಯೋಗಗಳು, ಕೇವಲ ಪ್ರಾದೇಶಿಕ ಪ್ರಚಾರದೊಡನೆ ಅಲ್ಲೇ ಒಂದೆರಡು ಪ್ರದರ್ಶನ ಕಂಡು ಮರವೆಗೆ ಸಲ್ಲುತ್ತಲೇ ಬಂದಿವೆ. ಹಾಗೇ ನೂರ್ ಜಹಾನ್ ಯೋಜನೆಯಂತೆ ನಾವಲ್ಲಿಗೆ ಹೋಗುವ ಹಿಂದಿನ ದಿನ ತನ್ನ ಮೊದಲ ಸಾರ್ವಜನಿಕ ಪ್ರದರ್ಶನ ಕಂಡಿತ್ತು. ಮತ್ತು ನಾವು ಹೋದ ದಿನ ಸಂಜೆ ಏಳೂವರೆಗೆ ಎರಡನೇ ಪ್ರದರ್ಶನ ಕೊಟ್ಟು ಮರುದಿನ ಕೇವಲ ದಾಖಲೀಕರಣಕ್ಕಾಗಿ ಮೂರನೆಯ ಹಾಗೂ ಪ್ರಾಯಃ ಕೊನೆಯ ಪ್ರದರ್ಶನವನ್ನೂ ಕೊಡುವುದಿತ್ತು. ನಾಟಕ ನೋಡುವ ಸಹಜ ಆಸಕ್ತಿ ಮತ್ತು ದಾಖಲೀಕರಣಕ್ಕೂ ನಾಟಕದ ನಡೆಯ ಪೂರ್ವಪರಿಚಯವಿದ್ದರೆ ಒಳ್ಳೆಯದು ಎನ್ನುವ ಭಾವ ಸೇರಿಸಿಕೊಂಡು ನಾವೆಲ್ಲ ನೂರ್ ಜಹಾನ್ ಸಂತೋಷದಿಂದ ಅನುಭವಿಸಿದೆವು. ಮರುದಿನ ದಾಖಲೀಕರಣದ ಎರಡನೇ ಪ್ರದರ್ಶನವಾಗಿ ಅಭಯನ ಬಳಗ ಚಿತ್ರೀಕರಿಸಿಕೊಳ್ಳುತ್ತಿದ್ದಾಗಲೂ ನನಗೆ ಮತ್ತದೇ ಕುತೂಹಲಾಸಕ್ತಿಯನ್ನು ಉಳಿಸಿಕೊಟ್ಟದ್ದು ಪ್ರಯೋಗದ ದೊಡ್ಡ ಯಶಸ್ಸೇ ಸರಿ. ಸಂಚಿ ಫೌಂಡೇಶನ್ನಿನ ದಾಖಲೀಕರಣ ಲೋಕಾರ್ಪಣಗೊಂಡ ಕಾಲಕ್ಕೆ ನೀವೂ ಇದನ್ನು ನೋಡಿ ಮೆಚ್ಚುವುದು, ಇದಕ್ಕೊಂದು ಸಾರ್ವಕಾಲಿಕ ಸಮ್ಮಾನವನ್ನೇ ತಂದುಕೊಡುವುದು ನಿಶ್ಚಯ.
ಫ್ರಿಟ್ಜ್ ಬೆನೆವಿಟ್ಜ್ ಜರ್ಮನಿ ಮೂಲದ ಖ್ಯಾತ ರಂಗ ನಿರ್ದೇಶಕ. ಇವರು ಭಾರತಕ್ಕೆ ಅತಿಥಿಯಾಗಿ ಬಂದು, ಇಲ್ಲಿನ ರಂಗವೈವಿಧ್ಯಗಳಿಗೆ ಮಾರುಹೋಗಿ ಇಲ್ಲೇ ಬಹುಕಾಲ ಅಧ್ಯಯನ ಮತ್ತು ರಂಗಕರ್ಮಗಳಲ್ಲಿ ನಿರತರಾದದ್ದು, ಕೀರ್ತಿಶೇಷರಾದದ್ದು ಎಲ್ಲ ಗಂಭೀರ ರಂಗಾಸಕ್ತರಿಗೆ ತಿಳಿದ ವಿಚಾರವೇ ಇದೆ. ಅವರ ಭಾರತದ ಚಟುವಟಿಕೆಗಳ ಬಹುದೊಡ್ಡ ಅವಧಿಯನ್ನು ಮತ್ತು ಸೇವೆಯನ್ನು ಇದೇ ನೀನಾಸಂ ಬಳಗದಲ್ಲಿ ನಡೆಸಿದ್ದರು. ನೀನಾಸಂ ವಠಾರದಲ್ಲಿ ನಮ್ಮನ್ನುಳಿಸಿಕೊಂಡ ಮನೆಗಿದ್ದ ಅಡ್ಡ ಹೆಸರು – ಅಜ್ಜರ ಮನೆ, ಇದರ ಹಿಂದಿನ ಅಜ್ಜ ನಾವು ಊಹಿಸಿದಂತೆ ಯು.ಆರ್.ಅನಂತಮೂರ್ತಿಯವರಲ್ಲ, (ನೋಡಿ: ನೀನಾಸಂನಲ್ಲಿ ನಾಟಕಗಳ ಮಳೆ…) ಫ್ರಿಟ್ಜ್ ಬೆನೆವಿಟ್ಜ್ ಎಂದು ನೇರ ಕೆ.ವಿ. ಅಕ್ಷರರಿಂದಲೇ ತಿಳಿಯಿತು. ಇದಕ್ಕೆ ಕಾರಣವಾದದ್ದು, ಇದೇ ಸೆಪ್ಟೆಂಬರ್ ೨೯ರ ಸುಮಾರಿಗೆ ದಿಲ್ಲಿಯಲ್ಲಿ ಬೆನೆವಿಟ್ಜ್ ಕುರಿತು ನಡೆಯಲಿದ್ದ ಸ್ಮೃತಿ ಗೋಷ್ಠಿ. ಅದರಲ್ಲಿ ಕೆವಿ ಅಕ್ಷರ ಕೂಡಾ ಒಬ್ಬ ಮಾತುಗಾರನಾಗಿ ಆಯ್ಕೆಗೊಂಡಿದ್ದರು. ಆದರೆ ಮತ್ತೆರಡೇ ದಿನದಲ್ಲಿ (ಅಕ್ಟೋಬರ್ ಒಂದರಿಂದ) ‘ಮನೆಯದ್ದೇ’ ದೊಡ್ಡ ಕಲಾಪ – ವಾರ್ಷಿಕ ಸಂಸ್ಕೃತಿ ಶಿಬಿರ, ಇದರ ತಯಾರಿಗಳ ಬಿಸಿ ಬಿಟ್ಟು ಹೋಗುವುದುಂಟೇ? ಅದಕ್ಕೆ ಪರಿಹಾರವಾಗಿ, ಅವರು ಸಂದರ್ಭೋಚಿತವಾದ ಮಾತುಗಳನ್ನು, ಮಗ ಶಿಶಿರನ ಮೂಲಕ ಚರವಾಣಿಯಲ್ಲಿ ವಿಡಿಯೋ ದಾಖಲೀಕರಣ ಮಾಡಿ, ಮಿಂಚಂಚೆ ಮಾಡುವ ಅಂದಾಜಿನಲ್ಲಿದ್ದರು. ಅದನ್ನು ಅಭಯ ಸ್ವಂತ ಕ್ಯಾಮರಾ ಮತ್ತು ಜತೆಯಲ್ಲೇ ಇದ್ದ ಕ್ಯಾಮರಾಮ್ಯಾನ್ ವಿಷ್ಣು ಮೂಲಕ ಹೆಚ್ಚು ಚಂದಕ್ಕೆ ಮಾಡಿಕೊಟ್ಟ. ಆ ನೆಪದಲ್ಲಿ ಅಕ್ಷರರ ನೆನಪುಗಳು ನಮಗೂ ಕೇಳಲು ದಕ್ಕಿದ್ದು ಸಂತೋಷದ ಸಂಗತಿ.
ನಾಟಕವನ್ನು ನಾಟಕದ ಅನುಭವ ಕೊಡುವಂತೆಯೇ ದಾಖಲಿಸಲಿಕ್ಕೆ ಅಭಯನಲ್ಲಿದ್ದ ಒಂದು ಕ್ಯಾಮರಾ ಸಾಕಾಗುವುದಿಲ್ಲ. ಆತ ಎರಡು ಹೆಚ್ಚುವರಿ ಕ್ಯಾಮರಾ, ಪೂರಕ ಸಲಕರಣೆಗಳು ಮತ್ತು ಸಹಾಯಕ ಸಿಬ್ಬಂದಿಗಳನ್ನು ಬೆಂಗಳೂರಿನಿಂದ ವ್ಯವಸ್ಥೆ ಮಾಡಿದ್ದ. ಅಲ್ಲದೆ, ಕ್ಯಾಮರಾ ಸ್ಥಳೀಯವಾಗಿ ಗ್ರಹಿಸುವ ಧ್ವನಿ ಮಟ್ಟ ಇಂಥ ದೂರದೃಷ್ಟಿಯ ಕಲಾಪಗಳಿಗೆ ಸಮರ್ಪಕವೂ ಆಗುವುದಿಲ್ಲ. ಅದಕ್ಕಾಗಿ ಸ್ವಂತ ಸಲಕರಣೆಗಳೊಡನೆ ಗೆಳೆಯ, ಶಬ್ದ ತಂತ್ರಜ್ಞ ಜೆಮಿ ಡಿಸಿಲ್ವಾ ಕೂಡಾ ಬೆಂಗಳೂರಿನಿಂದಲೇ ಬರುವಂತೆ ಕೇಳಿಕೊಂಡಿದ್ದ. ನಾಡಿನ ಹೆಮ್ಮೆಯ ಸಾಂಸ್ಕೃತಿರಂಗ ಹೆಗ್ಗೋಡು. ಇದರ ಇಂಥ ತುರ್ತುಗಳನ್ನು ಗಣಿಸಿಯೇ ಕರ್ನಾಟಕ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ನಿತ್ಯ ಒಂದು ರಾತ್ರಿ ಬಸ್ಸನ್ನು ನೇರ ಹೆಗ್ಗೋಡಿಗೇ ಓಡಿಸುತ್ತಿದೆ. ಅದು ಹಗಲೆಲ್ಲ ಕಾರಂತ ರಂಗಮಂದಿರದ ಎದುರೇ ವಿಶ್ರಮಿಸಿ ರಾತ್ರಿ ಎಂಟೂವರೆಗೆ ಮರುಪಯಣ ಮಾಡುತ್ತದೆ. ಇದು ಸಲಕರಣೆ ಸಹಾಯಕರ ದಿನ ಲೆಕ್ಕದ ಬಾಡಿಗೆ, ಭತ್ತೆಗಳ ವೆಚ್ಚ ಉಳಿತಾಯ ಮಾಡಲೂ ಬಹಳ ಸಹಕಾರಿಯಾಗಿ ಒದಗಿತ್ತು; ಬೆಳಿಗ್ಗೆ ಬಂದವರು, ಹಗಲೆಲ್ಲ ದುಡಿದು, ಮತ್ತದೇ ಬಸ್ಸಿನಲ್ಲಿ ರಾತ್ರಿ ಮರಳುವ ವ್ಯವಸ್ಥೆ. ದಾಖಲೀಕರಣದ ಅನಿವಾರ್ಯತೆಗಳಲ್ಲಿ ಗಡಿಯಾರದ ಕೈ ಕಟ್ಟುವುದು ಕಷ್ಟ. ಸಂಜೆ ನಾಲ್ಕೈದು ಗಂಟೆಗೇ ನಾಟಕ ಮುಗಿದು, ವಿರಾಮದಲ್ಲಿ ಹೊರಡಬೇಕಾದವರು ವಾಸ್ತವದಲ್ಲಿ ಬಸ್ಸಿನ ನಿಗದಿತ ವೇಳೆಯನ್ನೂ ಐದು ಹತ್ತು ಮಿನಿಟು ಮೀರಿದ್ದರು. ಅದೃಷ್ಟವಶಾತ್ ಬಸ್ಸಿನ ಸಿಬ್ಬಂದಿಯೂ ಪ್ರದರ್ಶನದ ಬಿಟ್ಟಿ ಪ್ರೇಕ್ಷಕರಲ್ಲಿ ಸೇರಿಹೋಗಿದ್ದುದರಿಂದ, ಅಂದು ಬಸ್ಸು ಹತ್ತು ಮಿನಿಟು ತಡೆದು, ಎಲ್ಲರನ್ನು ಸೇರಿಸಿಕೊಂಡೇ ಮರಳಿತ್ತು.
ಬೆಳಿಗ್ಗೆ ಏಳೂವರೆಯಿಂದ ತೊಡಗಿ ರಾತ್ರಿ ಎಂಟೂವರೆಯ ತನಕ ಮೂರು ನಾಟಕಗಳು ವಿಡಿಯೋ ದಾಖಲೀಕರಣಕ್ಕೊಳಗಾದವು. ಮೊದಲು ಮತ್ತು ಕೊನೆಯ ಪ್ರದರ್ಶನಗಳಲ್ಲಿ ತಿರುಗಾಟ ೨೦೧೭ರ ನಾಟಕಗಳು, ಶಿವರಾಮ ಕಾರಂತ ರಂಗಮಂದಿರದಲ್ಲಿ ನಡೆದವು. ನಡುವೆ ಶಿಕ್ಷಣ ಕೇಂದ್ರದ ಭಾಗವಾದ ಆಪ್ತರಂಗಭೂಮಿಯಲ್ಲಿ, ನಾವು ಹಿಂದಿನ ದಿನವೇ ಒಮ್ಮೆ ನೋಡಿದ್ದ ನೂರ್ ಜಹಾನ್ ಮತ್ತೆ ಪ್ರದರ್ಶನಕ್ಕೆ ಬಂತು. ಈ ವ್ಯವಸ್ಥೆ ಸಹಜವಾಗಿ ತಿರುಗಾಟದ ಎರಡನೇ ನಾಟಕಕ್ಕೆ ರಂಗಸಜ್ಜಿಕೆಗಳ ಬದಲಾವಣೆಗೆ ಸಮಯಾವಕಾಶವನ್ನೂ ಕೊಟ್ಟಿತ್ತು. ಮೊದಲೇ ಹೇಳಿದಂತೆ, ದಾಖಲೀಕರಣಗಳು ಸಾರ್ವಕಾಲಿಕವಾಗಿ ಪರಿಪೂರ್ಣ ರಂಗಾನುಭವವನ್ನು (ಸಿನಿಮಾನುಭವ ಅಲ್ಲ) ಕೊಡುವಂತಿರಬೇಕೆನ್ನುವುದು ಸಂಚಿಯ ಕಾಳಜಿ. ಇದು ನಾಟಕದ ಲಹರಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದಿದ್ದರೂ ದಾಖಲೀಕರಣದಲ್ಲಿ ಕೆಲವು ಹೆಚ್ಚಿನ ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತದೆ. ಈ ಎಚ್ಚರ ನಾಟಕದ ನಿರ್ದೇಶಕ ಹಾಗೂ ನಟವರ್ಗಕ್ಕೂ ಇದ್ದುದರಿಂದ ಪ್ರದರ್ಶನಗಳಲ್ಲಿ ಕೆಲವೊಮ್ಮೆ ಏಕಸ್ರೋತ ಕಡಿಯುವುದೂ ಇತ್ತು. ಹಾಗಾಗಿ ಕಲಾಪಗಳು ನಿಜ ನಾಟಕದ ಅವಧಿಯನ್ನು ಅನಿರ್ದಿಷ್ಟವಾಗಿ ಮೀರಿ ನಡೆಯಿತು. ತಂತ್ರಜ್ಞರೂ ಕಲಾವಿದರೂ ಅಕ್ಷರಶಃ ಆಹಾರ, ವಿಶ್ರಾಂತಿಗಳ ಪರಿವೆಯಿಲ್ಲದೆ ‘ಯಜ್ಞ’ ನಿರತರಾಗಿದ್ದರು. ನಾನು ಮಾತ್ರ ಕೇವಲ ವೀಕ್ಷಣಾ ಪುಣ್ಯದ ಪಾಲುದಾರನಾಗುಳಿದೆ!
ಸು ಬಿಟ್ರೆ ಬಣ್ಣ, ಬಾ ಬಿಟ್ರೆ ಸುಣ್ಣ – ತಿರುಗಾಟ ೨೦೧೭ಕ್ಕೆ ಸಿದ್ಧವಾದ, ದಾಖಲೀಕರಣದ ಕ್ಯಾಮರಾದೆದುರು ಮೊದಲು ಪ್ರದರ್ಶಿತವಾದ ನಾಟಕ. ಇದೇನಪ್ಪಾ ಹೆಸರಿನ ಚಮತ್ಕಾರ ಎಂದು Wikipediaದಲ್ಲಿ ತಿಣುಕಿದಾಗ ತಿಳಿಯಿತು – ಇತಾಲಿಯಾದ (ಇಟಲಿ) ಕಾರ್ಲೋ ಗೊಲ್ಡೋನಿ ಸ್ವಂತ ಭಾಷೆಯಲ್ಲೇ ೧೭೪೬ರಲ್ಲಿ ಹಾಸ್ಯ ನಾಟಕಕ್ಕೆಂದೇ ರೂಕ್ಷ ಚೌಕಟ್ಟು, ಒಂದಷ್ಟು ಸೂಚನೆಗಳ ಸಂಕಲನವನ್ನು ಪ್ರಕಟಿಸಿದ್ದನಂತೆ. ಹಲವು ಪ್ರದರ್ಶನಗಳ ಅನುಭವದಲ್ಲಿ, ೧೭೫೩ರಲ್ಲಿ ಮತ್ತದನ್ನು ಅವನೇ ಪರಿಷ್ಕರಿಸಿದ್ದು ಈಗಲೂ ಚಾಲ್ತಿಯಲ್ಲಿರುವ ಆವೃತ್ತಿ. ಅದನ್ನು Servant of two masters ಎಂದು ಪ್ರಥಮವಾಗಿ ಎಡ್ವರ್ಡ್ ಜೋಸೆಫ್ ಡೆಂಟ್ ಇಂಗ್ಲಿಷಿಗೆ ತಂದ. ಮುಂದೆ ಮತ್ತೂ ಕೆಲವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ನನಗೆ ಆ ಇಂಗ್ಲಿಷ್ ಹೆಸರು ಕೇಳುತ್ತಿದ್ದಂತೆ, ಕೆಲ ವರ್ಷಗಳ ಹಿಂದೆ ಇದನ್ನೇ ಪುಗಳೆಂದಿ ಪ್ರಹಸನ ಎಂಬ ಹೆಸರಿನಲ್ಲಿ ಮೈಸೂರಿನ ರಂಗಾಯಣ ಪ್ರಸಿದ್ಧಿಸಿದ್ದು ನೆನಪಿಗೆ ಬಂತು. ಆ ಪ್ರಯೋಗ ಒಂದು ಸಲ ಅಲ್ಲ, ಭಿನ್ನ ಪರಿಸರಗಳಲ್ಲಿ (ಮೈಸೂರು, ಹೆಬ್ರಿ ಮತ್ತು ಮಂಗಳೂರು) ಮೂರು ಬಾರಿ ನೋಡಿದರೂ ನನಗೆ ಬೇಸರ ಮೂಡಿಸದೆ, ಹೊಸಹೊಸದಾಗಿ ಸಂತೋಷ ಕೊಟ್ಟಿತ್ತು. ಅದರ ಅನುವಾದಕ ಎಸ್. ರಾಮನಾಥ್ ಮತ್ತು ನಿರ್ದೇಶಕ ಪ್ರಸನ್ನ. ನೀನಾಸಂ ಅನುಸರಿಸಿದ್ದು ಜೋಗಿಯವರ ಅನುವಾದ, ನಿರ್ದೇಶನ ಇಕ್ಬಾಲ್ರದ್ದು. ಸಹಜವಾಗಿ ಪ್ರದರ್ಶನವೂ ಹೊಸತೇ ಇತ್ತು. ರಂಗಾಯಣದ ಪ್ರಯೋಗ ಗದ್ಯ ಮತ್ತು ಸಹಜ ಚಲನವಲನಗಳಲ್ಲೇ ಹಾಸ್ಯ ರಂಜನೆಯನ್ನು ತುಂಬ ಚೆನ್ನಾಗಿಯೇ ಕೊಡುತ್ತದೆ. ನೀನಾಸಂ ಪ್ರಯೋಗ ಹಾಸ್ಯಕ್ಕೆ ಹಾಡು ಕುಣಿತಮಣಿತಗಳ ಗಮ್ಮತ್ತನ್ನು ಸೇರಿಸಿ ಉಣಿಸುತ್ತದೆ. ಪುಗಳೆಂದಿ ಪ್ರಯೋಗದಲ್ಲಿ ಕನ್ನಡ ತಮಿಳು ಭಾಷಾ ಸ್ವಾರಸ್ಯ ಪ್ರಾದೇಶಿಕ ಘಮಲು ತಂದರೆ, ಸು ಬಿಟ್ಟರೆಯಲ್ಲಿ ಅಂತರಧರ್ಮೀಯ ವಿವಾಹದ ಸ್ವಾರಸ್ಯ ಸೇರಿಕೊಳ್ಳುತ್ತದೆ. ಇದರ ಸ್ವಲ್ಪೇ ಸ್ವಲ್ಪ ರುಚಿ ನಿಮಗೆ ಹತ್ತಲು, ಎರಡು ಚಲಚಿತ್ರ ತುಣುಕುಗಳನ್ನಷ್ಟೇ ಲಗತ್ತಿಸಿದ್ದೇನೆ. ಪ್ರದರ್ಶನದ ಪೂರ್ಣ ಸಂತೋಷಕ್ಕೆ ತಿರುಗಾಟ ೨೦೧೭ ನಿಮ್ಮ ಸಮೀಪದ ಊರಿಗೆ ಬರುವುದನ್ನು ಕಾದು, ಅವಶ್ಯ ನೋಡಿ. ಹಾಗೂ “ನೋಡಲು ಆಗಲೇ ಇಲ್ಲ” ಎನ್ನುವವರಿಗೆ ಮತ್ತೆ ಇದ್ದೇ ಇದೆ, ತಿರುಗಾಟ-೨೦೧೭ (ಯಕ್ಷಗಾನದ ನುಡಿಕಟ್ಟಿನಲ್ಲಿ ಹೇಳುವಂತೆ) ಗೆಜ್ಜೆ ಬಿಚ್ಚಿದ ಮೇಲೆ, ಸಂಚಿ ದಾಖಲೀಕರಣದ ಶಾಶ್ವತ ಉಚಿತ ಪ್ರದರ್ಶನ – ಅಂತರ್ಜಾಲದಲ್ಲಿ!!
ಹನ್ನೊಂದು ಗಂಟೆಯ ಸುಮಾರಿಗೆ ಮೊದಲ ದಾಖಲೀಕರಣ ಮುಗಿಯಬೇಕೆನ್ನುವ ಅಂದಾಜು, ಗಡಿ ಮೀರಿ ಹನ್ನೆರಡೂವರೆಗೆ ಲಂಬಿಸಿತು. ಬೆನ್ನಿಗೆ ಆಪ್ತ ರಂಗಭೂಮಿಯ ನಾಟಕ – ನೂರ್ ಜಹಾನ್, ಕಾದಿದೆ ಎಂದು ದಾಖಲೀಕರಣದವರು ಊಟ ಬಿಟ್ಟೇನೋ ಧಾವಿಸಿದರು. ಆದರೆ ಮುಂದುವರಿದಂತೆ ಅಲ್ಲೂ ಹತ್ತೆಂಟು ವೇಗತಡೆಗಳು! ಪ್ರದರ್ಶನದ ನಡುವೆ ಸಮೀಪದ ದಾರಿಯಲ್ಲೇ ಅರ್ಧ ಗಂಟೆಯ ಬಿಡುವು ಕೊಟ್ಟು ಎರಡು ಬಾರಿ, ಮೈಕ್ ಹಚ್ಚಿದ ಆಟೋರಿಕ್ಷಾ ಅದೇನೋ ಬೊಬ್ಬಿಟ್ಟಾಗ ಪ್ರದರ್ಶನ ನಿಲ್ಲಬೇಕಾಯ್ತು.
ಮತ್ತೆ ಎಲ್ಲ ಸರಿಯಾಗಿ ನಡೆದಿದೆ ಎನ್ನುವಾಗ ಭಾರೀ ಮಳೆ ಕವುಚಿಕೊಂಡಿತು. ನಾಟಕದ ಡೋಲು ಜಾಗಟೆಗಳನ್ನು ಮೀರಿದ ಗುಡುಗು ಸಿಡಿಲುಗಳ ತಾಡನಕ್ಕೆ, ಹಂಚಿನ ಮಾಡಿನ ಮೇಲೆ ದಪ್ಪ ಹನಿಗಳ ನರ್ತನಕ್ಕೆ ಮತ್ತೆ ಧ್ವನಿ ದಾಖಲೆಯವ ಸೋಲಲೇಬೇಕಾಯ್ತು. ಸಣ್ಣ ಕ್ಯಾಮರಾ ಐಬೂ ಒಮ್ಮೆ ಪ್ರದರ್ಶನವನ್ನು ತಡೆಹಿಡಿಯಿತು. ಇವೆಲ್ಲ ಕಳೆಯಿತೆನ್ನುವಾಗ ನಾಯಕಿ ಪಾತ್ರದಾಕೆಗೇ ಅವೇಳೆಯ ಅಸೌಖ್ಯ ತುಸು ಕಾಡಿತು. ಹತ್ತು ಗಂಟೆಗೇ ಬಣ್ಣ, ವೇಷ ತಳೆದು ಕುಳಿತ ಒಟ್ಟಾರೆ ತಂಡಕ್ಕೆ ತಿಂಡಿ ತೀರ್ಥ ಹೊತ್ತಿನದಾಗಿರಲಿಲ್ಲ. ಅದರ ಮೇಲೆ ಆಕೆಗೆ ಮೊದಲೇ ಇದ್ದ ತುಸು ಅನಾರೋಗ್ಯ ಸೇರಿಕೊಂಡಿತ್ತು. ಅದಕ್ಕೂ ಪ್ರದರ್ಶನ ನಿಲ್ಲಿಸಿ, ಆಕೆ ಸುಧಾರಿಸಿಕೊಂಡು ಒಟ್ಟಾರೆ ಮುಕ್ತಾಯ ಮುಟ್ಟುವಾಗ ಗಂಟೆ ನಾಲ್ಕಾಗಿತ್ತು. ನಾವೆಲ್ಲ ಮಧ್ಯಾಹ್ನದ ಊಟವನ್ನು ಸಂಜೆಯ ಕಾಫಿಯೊಡನೆ ಸೇರಿಸಿಯೇ ತೆಗೆದುಕೊಂಡೆವು.
ಸ್ವಪ್ನವಾಸವದತ್ತ, ಪ್ರತಿಜ್ಞಾ ಯೌಗಂಧರಾಯಣಗಳ ಕನ್ನಡ ಭಾಷಾಂತರ ನನಗೆ ಸ್ನಾತಕ ತರಗತಿಗಳಲ್ಲಿ ಪಠ್ಯವಾಗಿ ‘ಕಾಡಿದ್ದವು’. ಪರೀಕ್ಷೆ, ಅಂಕಗಳಿಕೆಗಳ ಗೋಠಾಳೆ ಕಳಚಿಕೊಂಡ ಮೇಲೆ ಅದೇ ನಾಟಕಕಾರ – ಭಾಸ, ಆತನ ಕೃತಿಗಳನ್ನು ಸಾಭಿನಯ ರಂಗದ ಮೇಲೆ ಕಾಣುವಂತಾದ ಕಾಲಕ್ಕೆ ನಿಜಕ್ಕೂ ಬಲುಹಿತವಾಗಿ ಕಾಡತೊಡಗಿದೆ. ಇದಕ್ಕೆ ಅಪವಾದವಲ್ಲವೆಂಬಂತೆ ಸಂಚಿಯ ದಾಖಲೀಕರಣಕ್ಕೆ ಒಡ್ಡಿಕೊಂಡ ನೀನಾಸಂ ತಿರುಗಾಟ ೨೦೧೭ರ ಎರಡನೇ ನಾಟಕ – ಮಧ್ಯಮ ವ್ಯಾಯೋಗ. ನನಗೆ ಹಿಂದೆಯೂ ಇದನ್ನು ಭಿನ್ನ ಪ್ರಯೋಗಗಳಲ್ಲಿ ಕಂಡ ನೆನಪು ಇದೆ. ಇಲ್ಲಿ ನೀನಾಸಂ ತಿರುಗಾಟ ೨೦೧೭ಕ್ಕೆ ಆರಿಸಿಕೊಂಡ ಪಠ್ಯ ಎಲ್. ಗುಂಡಪ್ಪನವರ ಅನುವಾದ ಮತ್ತು ರಂಗದ ಮೇಲಿನ ನಿರ್ದೇಶನ ಉಮೇಶ್ ಸಾಲ್ಯಾನ್. ಪ್ರಯೋಗದಲ್ಲಿ ಅದೇನೋ ಭೂತಾರಾಧನೆ ಮಿಳಿತಗೊಂಡಂತೆ, ಮತ್ತಾ ಭೂತ ತೆಲುಗು ಮಾತಾಡಿದಂತೆ, ಇತ್ತ ಗೋಪಾಲಕೃಷ್ಣ ಅಡಿಗರು ಬಂದಂತೆ, ಕೊನೆಯಲ್ಲೆಲ್ಲೋ ಕೇಸರಿಕರಣ ನುಸುಳಿದ್ದೂ ಕಾಣುತ್ತೇವೆ. ಆ ವೈಚಾರಿಕ ಸುಳಿಗಳನ್ನು ಮೀರಿ ರಕ್ಕಸನ ಎದುರು ನಲುಗಿದ ಬಡಯಾತ್ರಿಕರ ಹಿಂಡು, ಭೀಮ ಘಟೋತ್ಕಚರ ಮುಖಾಮುಖಿ, ಹಿಡಿಂಬೆ ಭೀಮರ ಮರುಭೇಟಿ ಪ್ರದರ್ಶನದಲ್ಲಿ ಸುಂದರವಾಗಿಯೇ ಮನಮುಟ್ಟಿತು. ಸದ್ಯ ಅದರ ಎರಡೇ ಚಲಚಿತ್ರ ತುಣುಕುಗಳನ್ನಷ್ಟೇ ಇಲ್ಲಿ ಕೊಡುತ್ತಿದ್ದೇನೆ. ಉಳಿದಂತೆ ಸು ಬಿಟ್ರೆ… ನಾಟಕಕ್ಕೆ ಹೇಳಿದ ಮಾತೇ ಇದಕ್ಕೂ ಅನ್ವಯ. ಬೇಕೆಂದ ಕಾಲಕ್ಕೆ, ಸಮಯಕ್ಕೆ, ಯಾವುದೇ ಶುಲ್ಕ ಅನುಮತಿಯ ಅಗತ್ಯವಿಲ್ಲದೆ, ಜಗತ್ತಿನಾದ್ಯಂತ ಅಂತರ್ಜಾಲದ ಸಂಪರ್ಕವಿರುವವರೆಲ್ಲರ ಬೆರಳ ತುದಿಯ ಸಂಜ್ಞೆಗೆ ಒಂದೇ ತೀವ್ರತೆಯಲ್ಲಿ ನೋಡುವ ಅವಕಾಶ (ಇಲ್ಲಿ ಚಿಟಿಕೆ ಹೊಡೆಯಿರಿ: https://www.youtube.com/watch?v=f6o9_UX90lc) ಸಾರ್ವಜನಿಕರದ್ದು. ಇದರ ಔದಾರ್ಯ ನೀನಾಸಂ, ಹೆಗ್ಗೋಡಿನದ್ದಾದರೆ, ಸಾಧನೆ ಸಂಚಿ ಟ್ರಸ್ಟ್ನದು.
ಹಿಂದಿನ ರಾತ್ರಿಯ ಮಲಗುವಾಗಿನ ತಡ, ದಿನಪೂರ್ತಿಯ ಅವಿಶ್ರಾಂತ ದುಡಿಮೆಯ ಆಯಾಸಗಳನ್ನು ಲಕ್ಷಿಸಿ ಆ ರಾತ್ರಿಗೆ ನಾವು ಹೆಗ್ಗೋಡಿನಲ್ಲೇ ಉಳಿದೆವು. ಬೆಳಿಗ್ಗೆ ಮಾತ್ರ ಐದಕ್ಕೇ ಹೊರಟು, ಮತ್ತೆ ತಪ್ಪಿದ ಬಳಸುದಾರಿಯನ್ನೇ ಅನುಸರಿಸಿ ಪಯಣಿಸಿದೆವು. ಮಂಜು, ಆಗೀಗ ಪಿರಿಪಿರಿ ಮಳೆ, ಧಿಡೀರನೆ ಪ್ರತ್ಯಕ್ಷವಾಗುವ ದಾರಿಯ ಹೊಂಡಗಳನ್ನೆಲ್ಲ ಸುಧಾರಿಸಿಕೊಂಡು ಘಟ್ಟ ಇಳಿದೆವು. ವರಾಹಿಯ ಮೊದಲ ಹೋಟೆಲಿನಲ್ಲಿ ಹೊಟ್ಟೆ ಚಿಂತೆ ಪರಿಹರಿಸಿಕೊಂಡು ಹತ್ತು ಗಂಟೆಗೂ ಮೊದಲೇ ಮಂಗಳೂರು ಸೇರಿದೆವು.
I went through the pieces on You Tube. There was no sound control here. I am at present at the Central University of Gujarat, Gandhinagar. I will be back in December and I will work at Alva's college establishing Alva's School of Advanced Studies. I hope I succeed. I have passed on the entire library and films/videos (circa 6000) to them for Research & Reference.