(ಸಹಪಾಠಿ ಮಿತ್ರರು ಕಂಡ ಬಾಗಲೋಡಿ – ೩ರ ಉತ್ತರಾರ್ಧ)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)
(ಭಾಗ ೮)

– ಜಿ.ಟಿ. ನಾರಾಯಣ ರಾವ್

ಕ್ರಿಶ್ಚಿಯನ್ ಕಾಲೇಜ್ ಹಾಸ್ಟೆಲ್ಲಿನ ಪುಷ್ಕಳ ಪೌಷ್ಟಿಕ ರುಚಿಕರ ಆಹಾರ ಸೇವನೆಯೂ ದೇವರಾಯರ ಎತ್ತರ, ಸುತ್ತಳತೆ ಅಥವಾ ಭಾರ ವೃದ್ಧಿಸಲು ಶಕ್ತವಾಗಲಿಲ್ಲ. ಅತಿ ಕ್ಷಿಪ್ರ ವೇಳೆಯಲ್ಲಿ ಅತ್ಯಲ್ಪ ಆಹಾರ ಸೇವನೆ, “ಬದುಕುವ ಓದುವ ಬರೆಯುವ ಎಲ್ಲ ಸಂತೋಷಕ್ಕಾಗಿ ಈ ತೊಂದರೆ ಅನುಭವಿಸಬೇಕು ನೋಡಿ!” ಅವರ ಹೊಟ್ಟೆಯನ್ನೂ ಮಿದುಳು ಮೇದು ವಿಜೃಂಬಿಸುತ್ತಿದ್ದ ದೃಶ್ಯ ಕಂಡಾಗಲೆಲ್ಲ ಹುಟ್ಟಾ ಹೊಟ್ಟೆಬಾಕನೂ ತಿಂಡಿಪೋತನೂ ಆದ ನಾನು ಕೆಣಕುವುದಿತ್ತು. “ದಡ್ಡನಾದರೂ ದೊಡ್ಡನಾಗಿರಬೇಕು, ನನ್ನಂತೆ!”

“ಆತ್ಮ ಭರ್ತ್ಸನೆ ಸಲ್ಲದು. ಪರನಿಂದನೆ ಕೂಡ. ಅವರವರ ಸುಖದು:ಖ ಅವರವರಿಗೆ,” ಅವರ ನಯ ನಿರಾಕರಣೆ. ಎಂದೂ ಅಣಕವಾಡಿದವರಲ್ಲ, ಮುಂದೆ ಅವರವರ ಸುಖದುಃಖ ಎಂಬ ಕತೆಯನ್ನೂ ಬರೆದರು. ನಿಜ; ಮುಪ್ಪಿನ ಷಡಕ್ಷರಿ ವಚನ –

ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ

ಅಲ್ಪಾಹಾರವನ್ನಾದರೂ ಕ್ಲುಪ್ತ ಅವಧಿಗಳಲ್ಲಿ ಸೇವಿಸುತ್ತಿರಲಿಲ್ಲ. ನೆಲಗಡಲೆ, ಕರಿದ ತಿಂಡಿ, ಕಹಿಕಾಫಿ ಮುಂತಾದವುಗಳಿಂದ ಹಸಿವಿಗೆ ತಾತ್ಕಾಲಿಕ ವಿದಾಯ ಹೇಳುತ್ತಿದ್ದರು. “ಇಪ್ಪತ್ತರ ಈ ತಾರುಣ್ಯದಲ್ಲಿ ನಿಮ್ಮ ದೇಹ ಇಂಥ ದಂಡನೆಗಳನ್ನು ಸಹಿಸಿಕೊಂಡರೂ ಮುಂದೆ ವಯಸ್ಸು ಏರಿದಂತೆ ನಿಶ್ಶಕ್ತತೆ ಹಣುಕದೇ?” ಎಂದು ನಾವು ಮಿತ್ರರು ಪಶ್ನಿಸಿದರೆ ಅವರದು ಸಿದ್ಧ ಉತ್ತರ, “Man does not live by bread alone.” “Yes! He wants butter also!” ಎಂದು ಕೆಣಕುತ್ತಿದ್ದೆ. ಜೀಟಿ! ಓದಲು ತಿಳಿಯಲು ತಿರುಗಲು ಮಥಿಸಲು ಬೇಕಾದಷ್ಟು ಇರುವಾಗ ತಿನ್ನೋದರಲ್ಲಿ ಕಾಲ ಪೋಲು ಮಾಡಲು ನನ್ನ ಮನವೊಪ್ಪದು.” ಅವರ ನಿಷ್ಠುರ ನಿರೀಶ್ವರತೆ ಮತ್ತು ಅನಿಯತಕಾಲಿಕ ಅಲ್ಪಾಹಾರ ಕ್ರಮ ವ್ಯತ್ಯಯವಾಗುವ ಲಕ್ಷಣ ಕಾಣಲಿಲ್ಲ –

ಉಣಿಸೊಂದು ಹೊರೆಯಿವಗೆ ಪುಸ್ತಕವನೋದುತ್ತ

ಕಣಸು ಕಾಣುವುದೊಂದೆ ಮೆಚ್ಚುಗೆಯ ಹವ್ಯಾಸ

ತನುವಿರದೆ ಮನವಿಲ್ಲವೆಂದಾಗ ಪೇಳುವನು

“ಮನರಹಿತ ತನುಬರಿದೆ ಜಡರಾಶಿ!” ಅತ್ರಿಸೂನು

ಉದ್ದ ಬೆಳೆಯುವ ಹವಣು

Illustrated Weekly of Indiaದಲ್ಲಿ ಪ್ರಕಟವಾಗುತ್ತಿದ್ದ “Grow tall” ಜಾಹೀರಾತಿಗೆ ನಾವೆಲ್ಲರೂ ಮರುಳಾಗಿದ್ದೆವು. ಕೇವಲ ಗುಳಿಗೆ ಸೇವನೆಯಿಂದ ಕೆಲವು ಇಂಚು ಎತ್ತರ ಬೆಳೆಯುವುದಾದರೆ – ಹಾಗೆಂದು ಆ ಜಾಹೀರಾತು ಚಿತ್ರ ಸಹಿತ ಘೋಷಿಸಿತ್ತು – ಎಂಥ ಸೊಗಸು, ಎಂಥ ಮದ್ದು ಒಂದು “ಕೈ” ನೋಡಬಾರದೇಕೆ?

ದೇವರಾಯರನ್ನು ಅವರ ದೈಹಿಕ ವಾಮನತೆ – ಬೌದ್ಧಿಕ ತ್ರಿವಿಕ್ರಮನಾಗಿದ್ದರೂ – ಬಲುವಾಗಿ ಕಾಡುತ್ತಿತ್ತೆಂದು ಅವರ ನಡೆನುಡಿಗಳಲ್ಲಿ ನಮಗೆ ವ್ಯಕ್ತವಾಗುತ್ತಿತ್ತು. ಸರಿ, ಎಲ್ಲರೂ ಆ ಕಂಪೆನಿಗೆ ಕ್ಯಾಟಲಾಗ್ ಕಳಿಸಲು ಕಾಗದ ಬರೆದೆವು. ಯಥಾಕಾಲದಲ್ಲಿ ಪ್ರತಿಯೊಬ್ಬನಿಗೂ ಒಂದೊಂದು ಆಕರ್ಶಕ ಪುಸ್ತಿಕೆ ಪುಕ್ಕಟೆ ಬಂತು. ಆ ವಿಶೇಷ ಹಾರ್ಮೋನ್ ಗುಳಿಗೆಗಳನ್ನು ಒಂದು ತಿಂಗಳು ಎಡೆಬಿಡದೆ ನುಂಗಿದರೆ ಮೂರು ತಿಂಗಳ ಒಳಗೆ ಕನಿಷ್ಠ ಮೂರು ಅಂಗುಲ ಉದ್ದವಾದರೂ ಬೆಳೆಯುವುದು ಖರೆ ಎಂಬ ಭರವಸೆ ನುಡಿ ಕೂಡ ಸೇರಿಸಿದ್ದರು. ಅವುಗಳ ನಿಗದಿ ಬೆಲೆಯನ್ನು ಮುಂಗಡವಾಗಿ ಆ ಕಂಪೆನಿಗೆ ಕಳಿಸಬೇಕೆಂಬುದು ಷರತ್ತು. ದುಡ್ದಿನ ಹಿರಿಮೊತ್ತ ನೋಡಿ ನಾನು ಹೌಹಾರಿ ಈ ಓಟದಿಂದ ಕಂಬಿಕಿತ್ತೆ. ದೇವರಾವ್ ಹೀಗಲ್ಲ – ಹಣ ರವಾನಿಸಿಯೇ ಬಿಟ್ಟರು. ಗುಳಿಗೆ ಭಾಂಗಿ ಬಂತು. ಸೇವನೆ ವಿಧಿ ಪ್ರಕಾರ ಸಾಗಿತು. ಮೂರಲ್ಲ ಆರು ತಿಂಗಳುಗಳೇ ಉರುಳಿದುವು. ವಿಷಯ ನನಗೆ ಮರೆತೇ ಹೋಗಿದ್ದಾಗ ದೇವರಾಯರು ಆ ಕಂಪನಿಗೊಂದು ತೀಕ್ಷ್ಣ ಪತ್ರ ಬರೆದು ನನಗೆ ಓದಿ ಹೇಳಿದರು, “ಶುದ್ಧ ಫಟಿಂಗರು. ಎಲ್ಲ ಮೋಸ, ದ್ರೋಹ” ಎಂದು ಹಾರಾಡಿದರು. ಅವರು ಬರೆದ ಕತೆ ಶುದ್ಧ ಫಟಿಂಗಕ್ಕೆ ಈ ಘಟನೆ ಪ್ರೇರಕವಾಗಿರಬಹುದೇ?

ಕಗ್ಗ ಗೀಚುವುದರಲ್ಲಿ ನಿಸ್ಸೀಮನಾಗಿದ್ದ ನಾನು ಒಡನೆ ಒಂದು ಭಾಮಿನೀ ಷಟ್ಪದಿ ಹೊಸೆದು ಅವರಿಗೊಪ್ಪಿಸಿದೆ:

ಉದ್ದವಾಗಲು ಔಷಧಿಯ ತರಿ-
ಸಿದ್ದ ಹಣವನು ವೆಚ್ಚ ಮಾಡಿದ-
ರುದ್ದವಾಗದಿರಲೈ ಪರಮನ ಮನದಿ ಶಪಿಸುತಲಿ
ಇದ್ದು ಫಲವೇನಿನ್ನು ಘಟವ-
ನ್ನೊದ್ದು ಬಿಡುವೆನೆನುತ್ತ ಹಗಲಲಿ
ಬಿದ್ದರಾ ಜಲವಿರದ ಹೊಂಡಕೆ ನಮ್ಮ ದೇವಣ್ಣ!

ಆ ಕ್ಷಣವೇ ಅವರು ನನಗಿತ್ತ ಚಾಟೂಕ್ತಿ (ಚಾಟಿ ಏಟು) –
ಜೀಟಿಯೊಬ್ಬನು ಕೋತಿಶ್ರೇಷ್ಠನು
ಕೀಟಲೆಗಳನೆತ್ತಿ ಹಾಕುತ
ಕಾಟ ಕೊಡುವುದರಲ್ಲಿ ಸುಖಿಸುವ ಶಕುನಿ ವಂಶಜನು
ಸಾಟಿಯಿಲ್ಲಿವನುಪಟಳಕೆ ಮಿಗೆ
ತಾಟಕಾಸುರನಹುದು ಗುಟ್ಟನು
ಸ್ಫೋಟಿಸುತ್ತಾನಂದ ಪಡೆಯುವ ಧೂರ್ತ ಕೋಡಗನು

ಅವರನ್ನು ಮಂಗಗಳೂರಿನ ಮಂಗ ಎಂದು ನಾನು ಅಣಕಿಸುವುದಿತ್ತು. ಆಗ ಅವರು “ಏನಯ್ಯಾ ಕೊಡಗಿನ ಕೋಡಗರೇ! ಕೋಡಂಗಿಗಳೇ!” ಎಂದು ಪ್ರತಿನಮನ ಸಲ್ಲಿಸುವುದಿತ್ತು. ಇಲ್ಲೆಲ್ಲ ಆಧಾರ ಶ್ರುತಿ ಪರಿಶುದ್ಧ ಪ್ರೇಮ. ನಿರ್ವ್ಯಾಜ ಅಂತಃಕರಣ ಮತ್ತು ದೇವರಾಯರ ಧೀಮಂತಿಕೆ ಕುರಿತು ಅಭಿಮಾನ ಮತ್ತು ಬೆರಗು.

ಅಂದು ಲಯೊಲಾದಲ್ಲಿ ಅರ್ಥ ಶಾಸ್ತ್ರ ಎಂಎ ಓದುತ್ತಿದ್ದ ನಮ್ಮ ಕನ್ನಡದ ದತ್ತು ಪುತ್ರ ಗುರುಮೂರ್ತಿ (ಈಗಲೂ ಮದ್ರಾಸು ನಿವಾಸಿ, ಮಗಳು ಅಳಿಯ ಬೆಂಗಳೂರಿನಲ್ಲಿದ್ದಾರೆ. ೨೦೦೩) ಮತ್ತು ನಾವು ಆರು ಮಂದಿ ವಡಪಳನಿಗೆ ನಡೆದು ಹೋದೆವು. ಮಹಾಬಲಿಪುರಕ್ಕೆ ಬಸ್ಸಿನಲ್ಲಿ ಹೋಗಿ ದೋಣಿಯಲ್ಲಿ ಹಿಂತಿರುಗಿದೆವು. ಪಾಂಡಿಚೇರಿಗೆ ರೈಲಿನಲ್ಲಿ ಹೋಗಿ ಎರಡು ದಿನ ಅಲ್ಲಿದ್ದು ಮರಳಿದೆವು. ನಮ್ಮ ಆನಂದೋಲ್ಲಾಸಗಳಿಗೆ ಬಾನೇ ಮಿತಿ.

IFSನ ಮಾಯಾಲೋಕ, ಧರೆಗವತರಿಸಿಹ ನೂತನ ನಾಕ

ಇಷ್ಟರಲ್ಲಿ ದೇವರಾಯರು IFS ಪರೀಕ್ಷೆ ಬರೆದರು. ನಾನು ಸ್ಥಳೀಯವಾಗಿ ಹಲವಾರು ಸ್ಪರ್ಧಾಪರೀಕ್ಷೆಗಳನ್ನು ದಾಟಿ ಡೆಹ್ರಾಡೂನಿಗೆ ಅಂತಿಮ ಆಯ್ಕೆ ಸಲುವಾಗಿ ಹೋದೆ – Indian Air Forceನಲ್ಲಿ ಆಫೀಸರ್ ಆಗಲು. ಅಲ್ಲಿಯ ನಾಲ್ಕು ದಿನಗಳ ಅತಿ ಕಠಿಣ ದೈಹಿಕ ಹಾಗೂ ಬೌದ್ಧಿಕ ತಪಾಸಣೆಗಳ ಅನಂತರ ಭವ್ಯ ವೈಫಲ್ಯವೆದುರಿಸಿ ಕೃತಾರ್ಥನಾದೆ – IQ high, lacks OLQ ಎಂಬ ಶಿಫಾರಸು ಪತ್ರವನ್ನೂ ಪಡೆದೆ. ಮುಂದೆ ೧೯೫೨ರಲ್ಲಿ ನಾನು ಎನ್.ಸಿ.ಸಿ ಅಧಿಕಾರಿಯಾಗಿ ಆಯ್ಕೆಯಾದಾಗ ಸೇನಾಬಲಗಳ ಈ ಬೀಜಮಂತ್ರದ ನಿಗೂಢಾರ್ಥ ಅರಿತೆ: Intelligence Quotient high, lacks Officer-like Qualities. ಪುಳಿಚಾರಿಗೆಲ್ಲಿಂದ ಬರಬೇಕು table manners, ಚಾಕು-ಭರ್ಚಿ-ಚಮಚ ಊಟ ಕ್ರಮ!

ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಟ್ಯೂಟರ್ ಆಗಿ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮುಂದುವರಿಯಲು ಅವಕಾಶವಿರಲಿಲ್ಲ. ಈ ಹುದ್ದೆ ಮುಂದೆ ಉಪನ್ಯಾಸಕನಾಗಲು ಮತ್ತು ಸಂಶೋಧನೆ ಮಾಡಲು ಒಂದು ಸೋಪಾನ ಮಾತ್ರ. ದೇವರಾಯರ ಗುರಿ ಹೇಗೂ ಸ್ಪಷ್ಟವಾಗಿತ್ತು. IFS, ಉಪನ್ಯಾಸಕ ಹುದ್ದೆ ನನಗೆ ಒಡನೆ ದೊರೆಯಲಿಲ್ಲ, ಸಂಶೋಧನೆಗೈಯುವ ತಾಕತ್ತು ಇರಲಿಲ್ಲ.

ಬಾಗಲೋಡಿ-ಕುಶಿ ಪ್ರಭಾವಲಯದಲ್ಲಿ ನಾನು ಇಂಗ್ಲಿಷಿನ ಅಭಿಜಾತ ಕೃತಿಗಳನ್ನು ಅಭ್ಯಸಿಸಿದೆ. ಸ್ವತಂತ್ರವಾಗಿ ಜನಪ್ರಿಯ ವಿಜ್ಞಾನ ಗ್ರಂಥಗಳು ಓದಿ ದೃಷ್ಟಿ ದಿಗಂತವನ್ನು ವಿಸ್ತರಿಸಿಕೊಂಡೆ. ಕನ್ನಡದಲ್ಲಿ ಲೇಖನಗಳನ್ನು ಬರೆದೆ – ಜೀವನ, ಜಯಂತಿ, ಜಯಕರ್ನಾಟಕ ಮುಂತಾದ ಮಾಸ ಪತ್ರಿಕೆಗಳಲ್ಲಿ ಅವು ಪ್ರಕಟವಾದುವು. ಆದರೆ ಗಂಭೀರ ಜನಪ್ರಿಯ ವಿಜ್ಞಾನ ವಾಜ್ಞ್ಮಯ ರಚನೆಗೆ ಇಳಿದಿರಲಿಲ್ಲ – ಕನ್ನಡದಲ್ಲಿ ಆ ಸಂಕೀರ್ಣ ಪರಿಕಲ್ಪನೆಗಳನ್ನು ನಾನು ಇಂಗ್ಲಿಷಿನ ಜಾರ್ಜ್ ಗ್ಯಾಮೊ, ಜೇಮ್ಸ್ ಜೀನ್ಸ್ ಮೊದಲಾದವರಂತೆ ನಿರೂಪಿಸಬಲ್ಲೆನೇ?

೧೯೪೯ರ ಶೈಕ್ಷಣಿಕ ವರ್ಷಾರಂಭ. ದೇವರಾಯರಿಗೆ ಕಾರೈಕುಡಿ ಡಾ. ಅಲಗಪ್ಪ ಚೆಟ್ಟಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಸಿಕ್ಕಿತು. ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತುಸು ತಡವಾಗಿ ಗಣಿತೋಪನ್ಯಾಸಕನಾದೆ.

ತತ್ಪೂರ್ವ ಕ್ರಿಶ್ಚಿಯನ್ ಕಾಲೇಜಿನಲ್ಲಿದ್ದಾಗ ನಮ್ಮೊಳಗೆ ಸದಾ ನಡೆಯುತ್ತಿದ್ದ ಚರ್ಚೆಗಳಲ್ಲಿ ಒಂದು ಪ್ರಧಾನ ವಿಷಯ: ವಿಜ್ಞಾನದ ಸಾಮಾಜಿಕ ಬದ್ಧತೆ. ೧೯೪೫ರಲ್ಲಿ ಜಪಾನಿನ ಮೇಲೆ ಪರಮಾಣು ಬಾಂಬ್ ತಾಡನೆಯಾಯಿತು. ಲಕ್ಷಾಂತರ ಮಂದಿ ಕ್ಷಣಾರ್ಧದಲ್ಲೇ ಆವೀಕೃತರಾದರು. ಪ್ರಪಂಚದ ಮನಸ್ಸಾಕ್ಷಿ ಆಗ ವಿಜ್ಞಾನದಲ್ಲಿ ಅಂತಕನ ದೂತನನ್ನೇ ಕಂಡಿತು. “ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ” (ಪುರಂದರದಾಸ).

ವಿಜ್ಞಾನಕ್ಕೆ ಮನವಿಲ್ಲ, ಮರುಕವಿಲ್ಲ, ಒಡಲೂ ಇಲ್ಲ. ಮಾನವ ಸೃಷ್ಟಿಯದು. ನಿಸರ್ಗ ರಹಸ್ಯಗಳನ್ನು ಆವಿಷ್ಕರಿಸಿ ವಿವರಿಸುವುದು ಅದರ ಹೊಣೆ. ಇದನ್ನು ಒಳಿತಿಗೆ ಅಥವಾ ಕೆಡುಕಿಗೆ ನಿಯೋಜಿಸುವುದು ಜನನಾಯಕತ್ವ. ಅಂದರೆ ಪ್ರಭುತ್ವ ಪರಮಾಣು ಬಾಂಬ್ ನಿರ್ಮಿಸು, ಶತ್ರುವಲಯದ ಮೇಲೆ ಅದನ್ನು ಕೆಡೆ ಎಂದು ಆದೇಶಿಸಿದ್ದು ಪ್ರಭುತ್ವ – ವಿಜ್ಞಾನ ಅಲ್ಲ. ಆದ್ದರಿಂದ ಪ್ರಭುತ್ವದ ವಕ್ತಾರರು ಅನೈತಿಕ ಅಥವಾ ಮಾನವಹಿತಮಾರಕ ಮಾರ್ಗ ಅನುಸರಿಸದಂತೆ ನಿಯಂತ್ರಿಸಬೇಕಾದವರು ಜನ. ವಾಸ್ತವವಾಗಿ ವಿಜ್ಞಾನಕ್ಕೆ ಅಪರಿಹಾರ್ಯ, ಅಗಮ್ಯ ಅಥವಾ ಅಸಾಧ್ಯವಾದದ್ದು ಯಾವುದೂ ಇಲ್ಲ. ಇದು ನನ್ನ ದೃಢ ನಿಲವು. ಇಂದಿನ ಅನುಭವದಿಂದ ಅದನ್ನು ನೋಡಿದಾಗ ಒಂದು ಅನುಭವಜನ್ಯ ಸೂಕ್ತಿ ನೆನಪಿಗೆ ಬರುತ್ತದೆ: ಅರಿವು ಕಡಿಮೆಯಾದಷ್ಟು ನಿಲವು ಜಿಗುಟಾಗುತ್ತದೆ. ದೇವರಾಯರ ಒತ್ತು ಸದಾ ಮಾನವೀಯತೆ-ನೈತಿಕತೆಯತ್ತ ಇತ್ತು.

ಕಾರೈಕುಡಿಯಿಂದ ಅವರು ನನಗೊಂದು ಉಡುಗೊರೆ ಕಳಿಸಿದರು (೨೫-೮-೧೯೪೯): The Problems of Philosophy. ಲೇಖಕ ಬರ್ಟ್ರೆಂಡ್ ರಸೆಲ್. ಈತ ಮಹಾ ದಾರ್ಶನಿಕ ವಿಜ್ಞಾನಿ. ಐನ್ಸ್‍ಟೈನ್ ಸಮಭುಜ, ಮಾನವೀಯತೆಯ ಸಾಕಾರ ರೂಪ ಎಂದೆಲ್ಲ ನಾನು ದೇವರಾಯರ ಸಂಗದಲ್ಲಿ ಓದಿ, ಚರ್ಚಿಸಿ ತಿಳಿದಿದ್ದೆ. ಈ ಹೊಸ ಪುಸ್ತಕವನ್ನು ಒಡನೆ ಓದಿದೆ, ಗ್ರಹಿಸಿದೆ, ಸ್ವಾಂಗೀಕರಿಸಿದೆ, ನೂತನನೇ ಆದೆ: ವಿಜ್ಞಾನವನ್ನಾಗಲೀ ಇತರ ಯಾವುದೇ ಮಾನವ ಚಿಂತನ ಪ್ರಕಾರವನ್ನೇ ಆಗಲಿ (ಉಳಿದವು ಎರಡು ಎಂದು ೧೯೫೫ರ ವೇಳೆಗೆ ಅರಿತೆ: ಧರ್ಮ ಮತ್ತು ಪ್ರಭುತ್ವ) ನಿರ್ದ್ರವ್ಯತೆಯಲ್ಲಿ (vacuum) ಅಭ್ಯಸಿಸಬಾರದು. ಮಾನವೀಯತೆಯ ನೆಲೆಯಲ್ಲಿ ಪರಸ್ಪರ ಪೂರಕ ಪೋಷಕವೆಂದು ಪರಿಗ್ರಹಿಸಬೇಕು. ಇಲ್ಲವಾದರೆ ವ್ಯಕ್ತಿ ಅಂಧತೆಯತ್ತ (fanaticism) ತೊನೆಯುತ್ತಾನೆ ಎಂಬ ಉದಾತ್ತ ಚಿತ್ರ ಸ್ಪಷ್ಟವಾಗತೊಡಗಿತು. ಹೀಗೆ ದೇವರಾಯರು ತಮ್ಮ ಉದಾರ ನಡವಳಿಕೆಯಿಂದ ಮೂರನೆಯ ಸಲ ನನಗೆ ಮಾರ್ಗಪ್ರವರ್ತಕರಾದರು: ಆ ಪುಸ್ತಕದ ಮೊದಲ ಪರಿಚ್ಛೇದ:

Is there any knowledge in the world which is so certain that no reasonable man could doubt it? This question, which at first sight might not seem difficult, is really one of the most difficult that can be asked. When we have realised the obstacles in the way of a straightforward and confident answer, we shall be well launched on the study of philosophy – for philosophy is merely the attempt to answer such ultimate questions, not carelessly and dogmatically, as we do in ordinary life and even in sciences, but critically, after exploring all that makes such questions puzzling, and after realizing all the vagueness and confusion that underlie our ordinary ideas.

ಮಂಗಳೂರಿನಲ್ಲಿ ಸಮಾಗಮ

ಅತಿ ಶೀಘ್ರದಲ್ಲೇ ದೇವರಾಯರು ಕಾರೈಕುಡಿಯಿಂದ ಮಂಗಳೂರಿಗೆ “ಬಿಜಯಂಗೈದರು.” ಈಗ ಅವರು ಮಂಗಳೂರು ಸರ್ಕಾರೀ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ. ಅಂದಿನ ಸಂಪ್ರದಾಯ ಪ್ರಕಾರ ಉಪನ್ಯಾಸಕರು ಒಂದೋ ದೇಶೀ ವಸ್ತ್ರಾಲಂಕೃತರಾಗಬೇಕು – ಕಚ್ಚೆಪಂಚೆ, ಮುಚ್ಚಿದ ಕೋಟ್ (ತೆರೆ ಕೋಟ್ ಆದಾಗ ಕಂಠ ಕೌಪೀನ – neck tie, ಧರಿಸಿರಲೇಬೇಕು). ತಲೆಗೆ ರುಮಾಲು, ಇಲ್ಲವೇ ಪಾಶ್ಚಾತ್ಯ ಸೂಟ್ ಬೂಟ್, ಟೈ ಪರಿವೇಷ್ಟಿತರಾಗಿರಬೇಕು. ಸ್ವಾತಂತ್ರ್ಯ ಬಂದು ಇನ್ನೂ ಎರಡು ವರ್ಷ ಸಂದಿರಲಿಲ್ಲ ಎಂಬುದನ್ನು ಗಮನಿಸಬೇಕು. ಬ್ರಿಟಿಷ್ ಕ್ರಮ, ಮರ್ಜಿ, ಇಂಗ್ಲಿಷ್ ಭಾಶೆ, ಶೈಲಿ ಎಲ್ಲವೂ ದೈವಿಕ ಅಂತಸ್ತು ಪಡೆದಿದ್ದ ದಿನಗಳವು.

ಹುಟ್ಟೂರಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ. ವಯಸ್ಸಿನ್ನೂ ೨೩, ಆಸಾಮಿ ಕುಳ್ಳು – staff dignity (ಸ್ಥಾನ ಪ್ರತಿಷ್ಠೆ) ಕಾಪಾಡುವುದು ಹೇಗೆ? ಅವರು ಪರಿಪೂರ್ಣ ಬ್ರಿಟಿಷ್ ಪೋಷಾಕು ಧರಿಸಿದರು. ಹುಲುಸು ತಲೆಗೂದಲು, ಹುರಿ ಮಾಡಿದ ಮೀಸೆ, ನೆಟ್ಟಗೆ ಆತ್ಮ ವಿಶ್ವಾಸದಿಂದ ಚುರುಕಾಗಿ ನಡಿಗೆ – ಲಿಲ್ಲೀಪುಟ್ ಮಂಗಳೂರಿಗೆ ಬಂತೇ ಎಂದು ದೂರದಿಂದ ನೋಡುವವರಿಗೆ ಅಚ್ಚರಿ. ಆದರೆ ಮಾತುಕತೆ ನಡವಳಿಕೆ ಎಲ್ಲದರಲ್ಲೂ ವಿನಯವಂತ, ಮೋಹಕ ವ್ಯಕ್ತಿತ್ವ – You can’t but love and admire him ಎನ್ನುವ ಧೀರಗಂಭೀರ ಸುಂದರ.

ವೀರ ಬೀಡು ಬಲಭೀಮೈಯ ಅರಸು ಕತೆಯಲ್ಲಿ ದೇವರಾಯರು ಕುಳ್ಳರಸನನ್ನು ವರ್ಣನೆ ಮಾಡುವ ನವುರು ಹಾಸ್ಯ ನೋಡಿ, “ಹಾಗೆಂದು ಕುಳ್ಳರಿಗೆ, ಅಪಾಂಗರಿಗೆ ಇರುವ ವಿಕೃತ ಶರೀರದಂತೆ, ದೇಹವೇನೂ ಸೊಟ್ಟಗಾಗಲೀ, ಮುಖವೇನಾದರೂ ಸುಕ್ಕುಗಟ್ಟಿಯಾಗಲೀ, ಅಂಗಾಂಗಗಳು ಪ್ರಮಾಣ ಮೀರಿ ಬೆಳೆದಾಗಲೀ ಇರಲಿಲ್ಲ. ಮೂಗು, ಕಣ್ಣು, ಕಿವಿ, ಕೈಕಾಲು ಗಾತ್ರಕ್ಕೆ ತಕ್ಕಂತೆ ಪರಿಷ್ಕಾರವಾಗಿ, ಚೊಕ್ಕವಾಗಿ ವರಶಿಲ್ಪಿ ಕಡೆದ ಗೊಂಬೆಯಂತೆ ಪ್ರಮಾಣಬದ್ಧವಾಗಿ ತೂಗಿ ಇಟ್ಟಂತೆ ಮಾಟವಾಗಿದ್ದುವು. ವಾಮನಮೂರ್ತಿಯ ತುಟಿಯ ಮೇಲೆ ಚಿಗುರು ಮೀಸೆಯೂ ಒಪ್ಪುತ್ತಿತ್ತು.” ಇವರು ತಮ್ಮನ್ನೇ ಆ ಕುಳ್ಳರಸನಲ್ಲಿ ಕಂಡು ಕಂಡರಿಸಿದರೇ?

ಸರ್ಕಾರೀ ಕಾಲೇಜಿನ ಜೂನಿಯರ್ ಇಂಟರ್ಮೀಡಿಯೆಟ್ ತರಗತಿಗೆ staff dignity ರಕ್ಷಿಸುವಂತೆ ಸರ್ವಾಲಂಕಾರಭೂಷಿತ ‘ಅರಸ’ರ ಪ್ರವೇಶವಾಗಿದೆ. ವೇದಿಕೆಯಲ್ಲಿ ಲಟ್ಟ ನಿಂತು, ಆ ನೂರಕ್ಕೂ ಮಿಕ್ಕಿದ ಗಡಣವನ್ನು ಸರ್ವೇಕ್ಷಿಸಿದ್ದಾರೆ. ಈ ವಿಚಿತ್ರ ಬ್ರಹ್ಮ ಸೃಷ್ಟಿ ಕಂಡ ಇಪ್ಪತ್ತರ ಹರೆಯದ ವಿದ್ಯಾರ್ಥಿಗಳಲ್ಲಿ ಸ್ತಂಭಿತ ಮೌನ ವ್ಯಾಪಿಸಿದೆ. ಹಿಂದಿನ ಸಾಲಿನ ಒಬ್ಬ ಠೊಣಪ ಆ ಗಭೀರ ಮೌನ ಮುರಿದಿದ್ದಾನೆ. ದೇವರಾಯರಿಗೆ (ಮುಖದಲ್ಲಿ ತುಸು ಚೀನೀ ಛಾಯೆ ಮಿನುಗುತ್ತಿತ್ತು) ತುಳು ಅರ್ಥವಾಗದೆಂದು ಭಾವಿಸಿ ಉದ್ಗರಿಸಿದ್ದಾನೆ. “ವಾ ತೂಲ ಮಾರಾಯಾ! ಆಯೆನ ಮೀಸೆ, ಉಂತುನ ಪೊರ್ಲು ತೂಯಾರಾ! ಬೊಕ್ಕ ಆಯೆ ಕುದ್ಯದ ಆಸಾಮಿ! ಇಂಬ್ಯೆ ದಾಯಿತ ಆಂಗ್ರೇಜಿ ಪಾಟ ಮಣ್ಪುನಿ ಮಣ್ಣ್!”

ದೇವರಾಯರು ಆ ಉದ್ಗಾರ ಹೊಮ್ಮಿದೆಡೆಗೇ ನೇರ ಬಾಣದಂತೆ ಚಿಮ್ಮಿ ಸಿಡಿದರು “ಪೋಯಾ! ದುಂಬು ಈ ಪಾಟ ಕೇನ್ಲಾ, ಬೊಕ್ಕ ಪಾತೇರ್ಲಾ ಕುದ್ಯನೋ ಅತ್ ಉದ್ದನೋ ಪಂಡ್‍ದ್.” ತರಗತಿ ಗಪ್‍ಚಿಪ್; ಇವ ಬೇರವನಲ್ಲ, ಇವ ನಮ್ಮವ! ಒಂದೆರಡು ದಿವಸಗಳಲ್ಲಿಯೇ ದೇವರಾಯರ ಅಪಾರ ವೈದುಷ್ಯ, ನಿರರ್ಗಳ ಅಭಿವ್ಯಕ್ತಿ, ಎಣೆಯಿರದ ಸಹೃದಯತೆ, ಅದಮ್ಯ ಉತ್ಸಾಹ ಎಲ್ಲವೂ ಕಾಲೇಜಿನಲ್ಲಿ ಮಾತ್ರವಲ್ಲ ನಗರದಲ್ಲೇ ಮನೆಮಾತಾದುವು. ಅವರು ವಿದ್ಯಾರ್ಥಿಗಳ hero ಮತ್ತು role model! ಗಾತ್ರ ಚಿಕ್ಕದಾದರೂ ಪಾತ್ರ ನಿರ್ವಹಣೆಗೆ ಮತ್ತು ಮಿತ್ರನ (=ಸೂರ್ಯ) ಪ್ರತಾಪ ಪ್ರದರ್ಶನಕ್ಕೆ ಕೊರತೆಯೇ!

ನಮ್ಮ ಸಂಜೆ ತಿರುಗಾಟ ಮತ್ತೆ ಆರಂಭವಾಯಿತು – ಕದ್ರಿಗುಡ್ಡೆ, ಸುಲ್ತಾನ ಬತ್ತೇರಿ, ಕೂಳೂರು ಸಂಕ (ಆಗ ನಿರ್ಮಾಣವಾಗುತ್ತಿತ್ತು), ಉಳ್ಳಾಲ ಇತ್ಯಾದಿ. ಆದರೆ ದೀರ್ಘ ಕಾಲ ಈ ಪಥ ಪರಿಕ್ರಮಣ ಮತ್ತು ಜ್ಞಾನ ಪರಿವ್ರಜನ ಮುಂದುವರಿಯಲಿಲ್ಲ. ಅವರು IFSಗೆ ಆಯ್ಕೆಗೊಂಡಿದ್ದು ಪೂರ್ವ ಶಿಕ್ಷಣ ಪಡೆಯುವ ಸಲುವಾಗಿ ನವದೆಹಲಿಗೆ ಧಾವಿಸಿಯೇಬಿಟ್ಟರು. ಆ ವೇಳೆಗೆ (೧೯೪೯ರ ಉತ್ತರಾರ್ಧ) ಓದು ಮುಗಿಸಿ ಕುಶಿ, ಶೆಣೈ ಉಡುಪಿಗೂ ಮಲ್ಲ, ಜನಾರ್ದನ ಮಂಗಳೂರಿಗೂ ಮರಳಿದರು. ಆದರೆ ನಮ್ಮ ಕೇಂದ್ರ ಗುರುತ್ವ ಬಂಧಕ ಬಲ ಮಾತ್ರ ಗೈರುಹಾಜರು. ಎಂದೇ ನಾವು ಒಂದೆಡೆ ಕಲೆತು ಕ್ರಿಶ್ಚಿಯನ್ ದಿನಗಳ ಸಂಭ್ರಮವನ್ನು ಮತ್ತೆ ಆವಾಹಿಸುವುದು ಸಾಧ್ಯವಾಗಲಿಲ್ಲ. ಇನ್ನು ನನ್ನ ಮನಸ್ಥಿತಿ ಸದಾ ಒಂದೇ –

ಅಂದಿಗದು ಪರಮಸುಖವಿಂದಿಗಿದು ಸಂತೋಷ
ಬಂಧಿಯಾಗದಿರು ಭೂತಕೆ, ಭವಿಷ್ಯವ ನೆನೆದು
ಇಂದು ಚಡಪಡಿಸದಿರು – ವರ್ತಮಾನದಿ ಬಾಳು
ಸುಂದರತೆಯನ್ನೆಸಗು ಸರ್ವತ್ರ ಅತ್ರಿಸೂನು

ಒಮ್ಮೊಮ್ಮೆ ಮಜಲು ಬಸ್ ಪಯಣಿಸಿ (ಮಂಗಳೂರು-ಉಡುಪಿ ಕರಾವಳಿ ಬಸ್ ಮಾರ್ಗದಲ್ಲಿ ಸೇತುವೆಗಳನ್ನು ಕಟ್ಟಿರಲಿಲ್ಲ) ಉಡುಪಿಗೆ ತೆರಳಿದಾಗ, ಕುಶಿ ವಠಾರದಲ್ಲಿ ತ್ರಿಮೂರ್ತಿ ಸಂಗಮ – ಅವರು, ಶೆಣೈ ಮತ್ತು ನಾನು. ಮಣಿಪಾಲದ ಬೋಳು ಹರವಿನಲ್ಲಿ ತಿರುಗಾಟ, ದೂರದ ಅಬ್ಬಿಗೆ ಕಾಲ್ನಡಿಗೆ, ಕಡಲ ಕಿನಾರೆಗೆ ಪಾದಯಾತ್ರೆ ಮುಂತಾದವು ಮಾಮೂಲೀ ವೇಳಾಪಟ್ಟಿಗಳಾದುವು. ಆಗ ಎಲ್ಲ “ಹರಿವುದೆನ್ನ ಮನವು ಹಿಂದೆ ಕಳೆದ ದಿನದ ಹಾದಿ ಹಿಡಿದು ಪರಿಮಳಕ್ಕೆ ಸಾರುತಿರುವ ತುಂಬಿಯಂತೆ ಸುಳಿದು ಸುಳಿದು” (ಕಡೆಂಗೋಡ್ಲು). “ಭೃಂಗದ ಬೆನ್ನೇರಿ” ಬರುತ್ತಿತ್ತು ಕಲ್ಪನಾವಿಲಾಸ. ಕ್ರಿಶ್ಚಿಯನ್ ಕಾಲೇಜ್ ದಿನಗಳ ಮಂದಹಾಸ! “ಅನುಭವವು ಸವಿ” ನಿಜ, ಅದರ ನೆನಪೂ ಸವಿ.

ಹುಟ್ಟು ದಿನದ ಗಟ್ಟಿ ಕೊಡುಗೆ

ಜನ್ಮ ದಿನಾಚರಣೆ ಕುರಿತಂತೆ ನನ್ನ ಭಾವ ಪೂರ್ಣ ನಿರ್ಲಿಪ್ತತೆ – yet another day ಎಂಬ ಧೋರಣೆ. ಅಥವ ನೆಹ್ರು ಹೇಳಿದಂತೆ, Birthdays are ugly reminders of an advancing age.” ಆದರೆ ದೇವರಾಯರು ತಮ್ಮ ಗೆಳೆಯರ ಹುಟ್ಟುಹಬ್ಬಗಳ ಬಗ್ಗೆ ಈ ನಿರ್ಭಾವುಕ ನಿಲವು ತಳೆದವರಲ್ಲ. ಏಕೆಂದರೆ ಅವರ ಜೀವನದ ಆಧಾರ ಶ್ರುತಿ ಬೇಂದ್ರೆಯವರು ಹಾಡಿದಂತೆ –

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

೧೯೫೦ರ ಫೆಬ್ರುವರಿ ತರುಣದಲ್ಲಿ ನನಗೊಂದು ಪುಸ್ತಕದ ಭಾಂಗಿ ಬಂತು. ರುಜು ಬಿ. ದೇವರಾವ್, ಕೇಂಬ್ರಿಜ್, ೩೦ ಜನವರಿ ೧೯೫೦. ಎರಡು ಅನರ್ಘ್ಯ ಗ್ರಂಥಗಳು, ಭಾರತದಲ್ಲಿ ಅಲಭ್ಯ. ಓದುತ್ತ ಓದುತ್ತ ಅವುಗಳ ಮಹತ್ತ್ವ ಅರಿತೆ. ದೇವರಾಯರ ದರ್ಶನಕ್ಕೆ ಶರಣಾದೆ. ಪುಸ್ತಕಗಳು: The Universe and Dr. Einstein by Lincoln Barnett (Victor Gollanez, 1949) ಮತ್ತು The Einstein theory of relativity by H.G & L.R. Lieber (Dobson).

ಮೊದಲನೆಯದಕ್ಕೆ ಐನ್ಸ್‍ಟೈನ್ ಬರೆದ ಮುನ್ನುಡಿಯಿಂದ ಆಯ್ದ ಭಾಗ: Lincoln Barnett’s book represents a valuable contribution to popular science writing. The main ideas of the theory of relativity are well preserved. Moreover, the present state of our knowledge in physics is aptly characterised.

ಎರಡನೆಯದಕ್ಕೆ ಐನ್ಸ್‍ಟೈನ್ ಬರೆದ ಪರಿಚಯ ನುಡಿ: Not only simulating to the layman but also will tend to counteract a too narrow specialization on the part of professional mathematicians. ಬರಗೇಡಿ ಅಶನ ಕಬಳಿಸುವ ಆತುರತೆಯಿಂದ ಈ ಕೃತಿಗಳನ್ನು ಹಲವು ಬಾರಿ ಓದಿದೆ. ನನ್ನದೇ ಕಲ್ಪನಾ ವಿಹಾರದಲ್ಲಿ ತೇಲಾಡಿದೆ. ಗ್ಯಾಮೊ, ಜೀನ್ಸ್ ಮೊದಲಾದ ಪ್ರಪಂಚ ಪ್ರಸಿದ್ಧ ವಿಜ್ಞಾನಿಗಳು ಇಂಗ್ಲಿಷಿನಲ್ಲಿ ಬರೆದಿದ್ದ ಜನಪ್ರಿಯ ಗ್ರಂಥಗಳನ್ನು ಓದಿ ಮನನಿಸಿ ಹೊಸ ದೃಷ್ಟಿ ತಳೆದೆ: ಕಂಬಳಿ ಹುಳು ತನ್ನ ಸುತ್ತ ಪೊರೆ ನೇಯ್ದು ಏಕಾಂತ ಚಿಂತನೆಯಲ್ಲಿ ಮಗ್ನವಾಯಿತು. ಇದರ ಫಲ ನಾನೊಬ್ಬ ಕನ್ನಡ ಜನಪ್ರಿಯ ವಿಜ್ಞಾನ ಲೇಖಕನಾಗಿ ಅರಳಿದ್ದು, ಕ್ರಮೇಣ ಒಂದು ನಿರೂಪಣ ಶೈಲಿ ಕಂಡುಕೊಂಡೆ: ಸಾಹಿತ್ಯರಹಿತ ವಿಜ್ಞಾನ ಶುಷ್ಕ ತರ್ಕ, ವಿಜ್ಞಾನರಹಿತ ಸಾಹಿತ್ಯ ಪಿಷ್ಟಪೇಷಣ. ಹೀಗೆ ನನಗೆ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಜ್ಞ್ಮಯ ರಚನೆಗೆ ಪರೋಕ್ಷ ಪ್ರೇರಣೆ ನೀಡಿದವರು ನಮ್ಮ ಬಾಗಲೋಡಿ.

ಬಾಗಲೋಡಿಗೆ ಬಡಿದ ಮಾರಕ ಬೇನೆ

೧೯೫೩ರ ಶೈಕ್ಷಣಿಕ ವರ್ಷ ತೊಡಗಿದಾಗ ನಾನು ಮಡಿಕೇರಿ ಸರ್ಕಾರಿ ಕಾಲೇಜಿನಲ್ಲಿ ಗಣಿತೋಪನ್ಯಾಸಕನಾಗಿ ನೇಮಕಗೊಂಡಿದ್ದೆ. ಆ ಸುಮಾರಿಗೆ ಕುಶಿಯವರಿಂದ ತಿಳಿದುಬಂದ ಸುದ್ದಿ ತುಂಬ ಕಳವಳಕಾರಿಯಾಗಿತ್ತು: ಲಂಡನ್ ಮುಂದೆ ಮಾಸ್ಕೋ ದೂತಾವಾಸಗಳಲ್ಲಿ ಸೇವೆ ಸಲ್ಲಿಸಲು ನಿಯೋಜಿತರಾಗಿದ್ದ ಕೃಶಕಾಯ ದೇವರಾಯರು ಆ ಸ್ಥಳಗಳಲ್ಲಿಯ ತೀವ್ರ ಹವಾವೈಪರೀತ್ಯಗಳ ಕಾರಣವಾಗಿ ವ್ಯಾಧಿಗ್ರಸ್ತರಾಗಿದ್ದಾರೆ. ಬೆನ್ನೆಲುಬಿನ ಭದ್ರತೆಗೆ ಸಂಬಂಧಿಸಿದ ಉಲ್ಬಣ ಸ್ಥಿತಿ. ಮುಂಬಯಿಯ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಹಾಸ್ಪಿಟಲ್ಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೋ ಉತ್ಕಟ ಉದ್ವೇಗ ಕ್ಷಣದಲ್ಲಿ ಅಸುನೀಗುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಆಸ್ಪತ್ರೆಯ ದಕ್ಷ ಕ್ಷಿಪ್ರ ಉಪಚಾರದ ಪರಿಣಾಮವಾಗಿ ಮೃತ್ಯು ಮುಖದಿಂದ ಸದ್ಯಕ್ಕೆ ಪಾರಾಗಿದ್ದಾರೆ.

ಅವರ ಆರ್ಥಿಕ ಸ್ಥಿತಿ ದೈಹಿಕ ಸ್ಥಿತಿಯಷ್ಟೇ ಶೋಚನೀಯವಾಗಿತ್ತು. ತಂದೆ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ. ನಿಮ್ನ ಮಧ್ಯಮ ವರ್ಗದ ಕುಟುಂಬ. ವಿದೇಶೀ ಸೇವೆಯಲ್ಲಿ (ಐ.ಎಫ್.ಎಸ್) ದೇವರಾಯರ ಹುದ್ದೆ ಇನ್ನೂ ಖಾಯಂ ಆಗಿರಲಿಲ್ಲ. ಆದ್ದರಿಂದ ಸರ್ಕಾರದ ನೆರವು ಬಹುತೇಕ ಶೂನ್ಯ. ಪೂರ್ತಿ ವೈದ್ಯಕೀಯ ವೆಚ್ಚವೂ ಈ ಬಡ ಕುಟುಂಬದ ಹೊಣೆ ಮತ್ತು ಹೊರೆ.

ಇಂಥ ಪರೀಕ್ಷಾ ಸಂದರ್ಭದಲ್ಲಿ ನಾವು ಗೆಳೆಯರ – ಕುಶಿ, ಶೆಣೈ, ಮಲ್ಲ, ಜನಾರ್ದನ ಮತ್ತು ನಾನು – ಕರ್ತವ್ಯವೇನು? ಹೇಗೆ? ಪರಿಹಾರ: ಕುಶಿಯವರ ಹಿರಿತನದಲ್ಲಿ ನಮ್ಮೆಲ್ಲರ ಮಾಸಿಕ ದೇಣಿಗೆಗಳು ದೇವರಾಯರಿಗೆ ನೇರ ತಲಪುವಂತಾಯಿತು. ಇಲ್ಲಿ ಹಣದ ಮೊತ್ತಕ್ಕಿಂತಲೂ ನಮ್ಮೆಲ್ಲರ ಸ್ವಯಂಸ್ಫೂರ್ತ ಸಹಾನುಭೂತಿ ಅವರಿಗೆ ಸಾಕಷ್ಟು ಸಮಾಧಾನ ನೀಡಿತು. ಮಂಗಳೂರು ವಸಂತ ಮಾಲಿಕೆ ಪ್ರಕಾಶಕ ಶ್ರೀನಿವಾಸ ಉಡುಪರನ್ನು (ಇವರು ಆ ಮೊದಲು ನನ್ನ ಎರಡು ಕಥಾಸಂಕಲನಗಳನ್ನು ಹೊರ ತಂದಿದ್ದರು) ಸಂಪರ್ಕಿಸಿ ದೇವರಾಯರ ಆರಾಧನಾ ಕಥಾಗುಚ್ಛವನ್ನು ಪ್ರಕಟಿಸಿದ್ದಾಯಿತು (೧೯೫೬). ಇದು ಅದೇ ವರ್ಷ ಮದ್ರಾಸು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಉಪಪಠ್ಯ ಪುಸ್ತಕವಾಯಿತು. ಮತ್ತು ಲೇಖಕರಿಗೆ ಹಿರಿಮೊತ್ತದ ಗೌರವಧನ ತಂದುಕೊಟ್ಟಿತು.

ಈ ಪುಸ್ತಕಕ್ಕೆ ಅವರು ಬರೆದಿರುವ ಮುನ್ನುಡಿಯಲ್ಲಿಯ ವಿಶ್ವಾಸ ಪಲ್ಲಟ (shift of faith) ಗಮನಾರ್ಹವಾಗಿದೆ. “ನಾನು ಹಿಂದಕ್ಕೆ ಆ ಕಥೆಯನ್ನು (ಆರಾಧನಾ ಬರೆದಾಗ, [ಅನಾತೋಲ್] ಪ್ರಾನ್ಸ್‍ನಂತೆಯೇ ಧರ್ಮ – ಭಕ್ತಿ – ಭಾವಗಳ ಮೃದುವಾದ ಭರ್ತ್ಸನೆಯನ್ನು ಮಾಡಿದ್ದೆ. ಆ ಕಾಲದಲ್ಲಿ ನಾನೂ ಫ್ರಾನ್ಸ್‍ನಂತೆಯೇ ನಿರೀಶ್ವರವಾದಿ ಎಂದು ಒಣ ಜಂಬದಿಂದ ನಟಿಸುತ್ತಿದ್ದೆ. ಆದರೆ ಈಗ ಭಗವಂತನ ಮುನಿಸಿನ ಪೆಟ್ಟು ತಿಂದು ಹಣ್ಣಾಗಿ ದೇವರ ಭಯವುಂಟಾಗಿದೆ – ಜ್ಞಾನದ ಆರಂಭವೂ ಆಗಿದೆಯೋ ಏನೋ? ಆದುದರಿಂದ ಈ ಕಥೆಯ ತತ್ತ್ವವೇ ಬದಲಾಗಿದೆ.”

ಅವರು ಕಟೀಲು ದುರ್ಗಾಪರಮೇಶ್ವರಿಯ ನೈಷ್ಠಿಕ ಭಕ್ತರಾದದ್ದು ಆ ಜೀವನ-ಮರಣ ಹೋರಾಟದಲ್ಲಿ ಗೆದ್ದು ಬಂದ ಬಳಿಕವೆಂದು ತಿಳಿದಿದ್ದೇನೆ. ದೇವರ ಬಗೆಗಿನ ಈ ವೈಯಕ್ತಿಕ ವಿಶ್ವಾಸ – ಅವಿಶ್ವಾಸಗಳನ್ನು ಮೀರಿ ಅವರು ಸದಾ ಮಹಾಮಾನವರಾಗಿದ್ದಾರೆಂಬುದು ಮುಖ್ಯ. ಹೀಗಾಗಿ ಅವರ ಆರಂಭದ ಕಠಿಣ ನಿರೀಶ್ವವಾದದಷ್ಟೇ ಗೌರವ ಭಾಜನವಾಗಿದೆ ತದನಂತರದ ನಿಷ್ಠ ಈಶ್ವರವಾದ ಕೂಡ.

ದೇವರನು ನಂಬುವುದು ನಂಬದಿರುವುದು ನಿನ್ನ
ಭಾವಕೋಶದ ನಿಲವು – ಶ್ರೇಷ್ಠ ಮಾನವನಾಗಿ
ಜೀವಿ ಪರಿಸರ ಸಮಶ್ರುತಿ ಬಾಳ್ವೆಯತಿ ಮುಖ್ಯ
ಸಾವಿನಲಿ ಸಂತೃಪ್ತಿ ಗಳಿಸುವೆಯೊ ಅತ್ರಿಸೂನು

ಅವರು ಆಸ್ಪತ್ರೆಯಿಂದ ವಿಮೋಚಿತರಾಗಿ ಮರುವುಟ್ಟು ಪಡೆದು ದೀರ್ಘ ಚೇತರಿಕೆ ಸಲುವಾಗಿ ತಾಯಿಯಿಲ್ಲದ ತವರಿಗೆ ಮರಳಿದರು – ಕಿನ್ನಿಕಂಬಳದ ಕೈಗಂಬ. (“ಚಿಕ್ಕಮ್ಮನವರಿಗೆ ದೇವಮಾವನ ಬಗ್ಗೆ ಅಪಾರ ವಾತ್ಸಲ್ಯ. ಮಾವನಿಗಾದರೋ ಆಕೆ ಸಾಕ್ಷಾತ್ ಹೆತ್ತಮ್ಮನೇ – ಹೀಗಿತ್ತು ಮನೆಯೊಳಗಿನ ಸಾಮರಸ್ಯ” ಎನ್ನುತ್ತಾರೆ ಅಳಿಯ ಅರವಿಂದ ಶರ್ಮ.) ಆರೋಗ್ಯ ಗಳಿಸಿ ಪುನಃ ವೈದ್ಯಕೀಯ ತಪಾಸಣೆಗೆ ಒಳಗಾಗಿ ಅರ್ಹತಾ ಪತ್ರ ಸಂಪಾದಿಸಿ ಐ.ಎಫ್.ಎಸ್ಸಿಗೆ ಮರುದಾಖಲಾದರು. ಅವರ ಸಮೀಪ ಸಂಬಂಧಿ, ನವದೆಹಲಿಯಲ್ಲಿ ಪದವೀಧರೆಯಾಗಿದ್ದ, ವಿಜಯಲಕ್ಷ್ಮಿ ಎಂಬ ವಧು ಈ ‘ಸತ್ಯವಾನ’ನನ್ನು ಒಲಿದು ಮದುವೆಯಾದರು. ಮಂಗಳೂರಿನ ಮಂಗಳಾದೇವಿ ದೇವಾಲಯದಲ್ಲಿ ನೆರವೇರಿದ ಈ ವಿವಾಹಕ್ಕೆ ನಾವು ಐವರು ಗೆಳೆಯರೂ (ಕುಶಿ, ಜನಾರ್ದನ, ಮಲ್ಲ, ಶೆಣೈ ಮತ್ತು ನಾನು) ಹೋಗಿದ್ದೆವು. ದೂರದ ಮದ್ರಾಸಿನಿಂದ ಗುರುಮೂರ್ತಿ ಶುಭಾಶಯ ಸಂದೇಶ ಕಳಿಸಿದ್ದರು.

ಆರ್ಜವ ಅವ್ಯಾವಹಾರಿಕವೇ?

ಮುಂದೆ ೧೯೮೫ರಲ್ಲಿ (ವಯಸ್ಸು ೫೮) ನಿವೃತ್ತರಾಗುವ ತನಕವೂ ಈ ದಂಪತಿಗಳು (ಏಕಮಾತ್ರ ಪುತ್ರ ದುರ್ಗಾಪ್ರಸಾದನ ಸಹಿತ – ಹೆಸರಿನ ಅರ್ಥ ಗಮನಿಸಬೇಕು) ಪರದೇಶಗಳಲ್ಲಿಯ ಭಾರತೀಯ ದೂತಾವಾಸಗಳಲ್ಲಿಯೇ ಕೆಲಸ ಮಾಡಬೇಕಾಗಿ ಬಂದದ್ದು ವಿಪರ್ಯಾಸ: ವಿದೇಶಾಂಗ ಕಾರ್ಯದರ್ಶಿಯಾಗಿ ನವದೆಹಲಿಯಲ್ಲಿ ಸೇವೆ ಸಲ್ಲಿಸಲು ಬೇಕಾದ ಸಕಲ ಅರ್ಹತೆಗಳೂ ಅವರಲ್ಲಿದ್ದುವು – ಧೀಶಕ್ತಿಯೇ, ಪ್ರವರ್ತನಶೀಲತೆಯೇ, ಅನುಭವವೇ, ದೇಶಪ್ರೇಮವೇ, ನಿಷ್ಠೆಯೇ? ಇವೆಲ್ಲವುಗಳ ಮೂರ್ತರೂಪವೂ ಕಾರ್ಯಮೇರುವೂ ಆಗಿದ್ದ ಅವರಿಗಿಲ್ಲದಿದ್ದುದು political godfather, ರಾಜಕೀಯ ವಶೀಲಿ.

ಹರಿದಾಸಭಟ್ಟರು ತಮ್ಮ ವಿದೇಶೀ ಪರ್ಯಟನೆಯಲ್ಲಿ ಒಮ್ಮೆ ಬಲ್ಗೇರಿಯಾಕ್ಕೆ ಹೋಗಿದ್ದರು – ಅಲ್ಲಿ ಭಾರತದ ರಾಯಭಾರಿಯಾಗಿದ್ದ ದೇವರಾಯರನ್ನು ನೋಡಲೆಂದೇ. ವಿಜಯಲಕ್ಷ್ಮಿ-ದೇವರಾವ್ ದಂಪತಿಗಳ ಅತಿಥಿಯಾಗಿ ತಂಗಿದ್ದರು. ಭಾರತಕ್ಕೆ ಮರಳಿದ ಬಳಿಕ ಕುಶಿ ತಮ್ಮ ಅನುಭವವನ್ನು ನನಗೆ ಬಣ್ಣಿಸಿದ ಪರಿ, “ದೇವರಾಯರ ಆರೋಗ್ಯ ಅತಿಸೂಕ್ಷ್ಮ. ಉದ್ಯೋಗ ಇತರ ಕರ್ತವ್ಯ ನಿರ್ವಹಣೆ, ಆಹಾರ, ವಿಶ್ರಾಂತಿ ಒಂದೊಂದರಲ್ಲಿಯೂ ಅವರನ್ನು ನವಜಾತ ಶಿಶುವಿನಂತೆ ಜತನದಿಂದ ಕಾಪಾಡಬೇಕಾಗಿತ್ತು. ಆ ಮಹಾತಾಯಿ ತಮ್ಮ ಪತಿಯನ್ನು ನೋಡಿಕೊಳ್ಳುತ್ತಿದ್ದ ಪರಿ ನನಗೆ ಒಂದು ಸಂಗತಿಯನ್ನಂತೂ ಖಾತ್ರಿಗೊಳಿಸಿದೆ – ಸಾವಿತ್ರಿ ಪಾತ್ರ ಕೇವಲ ಪೌರಾಣಿಕ ಪ್ರತಿಮೆ ಅಲ್ಲ. ಸದಾ ಜೀವಂತ ಮಾನವೀಯ ಸೂತ್ರ.”

೧೯೮೦ರ ದಶಕ. ಸದ್ಯವೇ ನಿವೃತ್ತರಾಗಲಿದ್ದ (೧೯೮೫) ದೇವರಾಯರು ಆ ಮೊದಲು ಸಪತ್ನೀಪುತ್ರ ನಮ್ಮ ಮನೆಗೆ (ಮೈಸೂರು) ಬೆಂಗಳೂರಿನಿಂದ ಆಗಮಿಸಿದರು. ನಾನು ಅವರನ್ನು ನೋಡದೇ ಹತ್ತಿರ ಹತ್ತಿರ ಕಾಲು ಶತಮಾನವೇ ಸಂದಿತ್ತು. ಆಗ ನಾನು ಕಂಡದ್ದು ಕಲ್ಪನೆಯ ದೇವರಾಯರನ್ನಲ್ಲ; ಶ್ಮಶ್ರು ಶೋಭಿತ, ಶ್ಮಶ್ರುಕೂರ್ಚ ಭೂಷಿತ, ಪಕ್ವ ತತ್ತ್ವಜ್ಞಾನಿಯ ಗಾಂಭೀರ್ಯಭರಿತ ವದನವನ್ನು. ತಲೆಗೂದಲು, ಗಡ್ಡ ಮೀಸೆಗಳ ಮೇಲೆಲ್ಲ ಬೆಳ್ಳಿ ಸರಿಗೆಗಳು ಹೇಗೆ “ಕಾಲನ ಬದ್ಧ ಭ್ರುಕುಟಿಯ ಮುಂಗಡೆ” ಈ ತೊಗಲು ಗೊಂಬೆ ಕುಣಿದು ಹಣ್ಣಾಗಬೇಕು ಎಂಬುದರ ನಿದರ್ಶನಗಳಾಗಿದ್ದವು. ನಾನೂ ಅವರಿಗೆ ಇನ್ನೊಂದು ರೀತಿಯಲ್ಲಿ ಬಾಗಿರುವುದು ಅಥವಾ ಮಾಗಿರುವುದು (?) ಕಂಡಿರಬಹುದು. ಆದರೆ ಪ್ರೀತಿ ವಿಶ್ವಾಸಗಳು ಕಾಲದೇಶಾತೀತ.

ಅವರು ತನ್ನ ನಿವೃತ್ತ ಜೀವನವನ್ನು ಮೈಸೂರಿನಲ್ಲಿ ಕಳೆಯಲು ಉದ್ದೇಶಿಸಿದ್ದರು. ತಾವು ಖರೀದಿಸುವ ಸಲುವಾಗಿ ಹಲವಾರು ಮನೆಗಳನ್ನು ಗುರುತಿಸಿಡಬೇಕೆಂದು ಆ ಮೊದಲೇ ನನಗೆ ಬರೆದಿದ್ದರು. ಎರಡು ಕೊಠಡಿಗಳೂ ಗೆರಾಜೂ ಇರುವ ಸುಸಜ್ಜಿತ ಒಂಟಿ ಮನೆ ಅವರ ನಿರೀಕ್ಷೆ. ಅಂದಾಜು ಬೆಲೆ ರೂ ಒಂದು ಲಕ್ಷ. ನನಗೆ ಆಶ್ಚರ್ಯ: ಐ.ಎಫ್.ಎಸ್ ನಿವೃತ್ತಿ ಪೂರ್ವದಲ್ಲಿ ಗರಿಷ್ಠ ಮಿತಿ ರೂ ೧ ಲಕ್ಷ! ಅವರು ಬಂದರು. ರೂ ೨ ಲಕ್ಷದ ಒಳಗೆ ಅವರ ಆವಶ್ಯಕತೆ ಪೂರೈಸುವ ಮನೆ ದೊರೆಯಲಿಲ್ಲ. “ನಿಮ್ಮ ಉಳಿತಾಯ ಮೊಬಲಗು ಇಷ್ಟು ಕಿರಿಯದೇ?” ನನ್ನ ಪ್ರಶ್ನೆ.
“ನಿಷ್ಠುರ ಪ್ರಾಮಾಣಿಕ ಜೀವನ ನಡೆಸುವ ಯಾವ ಐ.ಎಫ್.ಎಸ್ ಅಧಿಕಾರಿಯೂ ಅದೂ ವಿದೇಶಗಳಲ್ಲಿ ಕೆಲಸ ಮಾಡಿದ್ದಾದರೆ, ಇದಕ್ಕಿಂತ ಹೆಚ್ಚು ಹಣ ಕೂಡಿಡಲಾರ.” “ಕೇಂದ್ರ ಸರಕಾರದ ವರ್ಚಸ್ಸು ಬೀರಿ ಸರ್ಕಾರೀ ಗೃಹವೊಂದನ್ನು ಕೇವಲ ಸಾಂಕೇತಿಕ ಬೆಲೆಗೆ ಕೊಳ್ಳಬಹುದಲ್ಲ? ಇದು ಅನೈತಿಕವಾದುದಲ್ಲ?” “ಈ ತನಕ ವಶೀಲಿದೂರನಾಗಿದ್ದ ನಾನು ಈಗ ನಾಲ್ಕು ಅಂಗುಲ ನೆಲ ಮತ್ತು ಗುಡಿಸಲಿಗಾಗಿ ಶೀಲಭ್ರಷ್ಟನಾಗಲೇ?” ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃನ ಚೈನಂ ಕ್ಲೇದಯಂತ್ಯಾಪೋ ಸಶೋಷಯತಿ ಮಾರುತಃ ಭಗವದ್ಗೀತೆಯ ಈ ಮೇಲಿನ ಶ್ಲೋಕ ನೆನಪಾಯಿತು; ನಿಜ, ಅಧಿಕಾರ ಅವರನ್ನು ಭ್ರಷ್ಟರಾಗಿಸಲಿಲ್ಲ, ಧೀಶಕ್ತಿ-ಯೌವನ ನೀತಿಚ್ಯುತರಾಗಿಸಲಿಲ್ಲ. ಉದ್ಯೋಗನಿಮಿತ್ತ ಒದಗಿದ್ದ ಸೌಕರ್ಯಗಳು ವಿಚಲಿತಮನಸ್ಕರನ್ನಾಗಿಸಲೂ ಇಲ್ಲ. ಊಟ ನಮ್ಮ ಮನೆಯಲ್ಲಿ ಮುಗಿಯಿತು. ಹರಟೆ ಸಾಗಿತು. ಬೆಂಗಳೂರಿಗೆ ಮರಳುವ ಮೊದಲು ನನಗೊಂದು ಖಾಸಗಿ ಪ್ರಶ್ನೆ ಹಾಕಿದರು, “ನಿಮ್ಮ ಈ ಮನೆಯ ಬೆಲೆ ಎಷ್ಟಾಗಬಹುದು?”

“ಸುಮಾರು ಏಳು ಲಕ್ಷ ರೂಪಾಯಿ.” “What?” ಈ ಉದ್ಗಾರದ ಧ್ವನ್ಯರ್ಥ ಗ್ರಹಿಸಿ ಒಡನೆ ವಿವರಣೆ ನೀಡಿದೆ. “ನಾನು ೧೯೭೧ರಲ್ಲಿ ಈ ಮನೆಯನ್ನು ನಿವೇಶನ ಸಹಿತ ಖರೀದಿಸುವಾಗ ಪಾವತಿಸಿದ್ದು ಕೇವಲ ರೂ ೩೫,೦೦೦. ಅದೂ ಸಾಲ ಮಾಡಿ. ಮುಂದೆ ಕ್ರಮೇಣ ಅಧಿಕ ಸೌಕರ್ಯಗಳನ್ನು ಸೇರಿಸಿದೆ. ಜೀವನವೂ ಬಲು ಸರಳ.” “ಜೀಟಿ! ನನ್ನ ಬದುಕು ವ್ಯರ್ಥವಾಯಿತು. ಕಾಲೇಜಿನಲ್ಲಿಯೇ ಮುಂದುವರಿದಿರಬೇಕಾಗಿತ್ತು.” (“GT! I’ve wasted my life. I should have continued in the college.”)

ಮೃಗಶಾಲೆ ಸಿಂಹತ್ವ ವನರಾಜಿ ಹರಿಣತ್ವ
ಸೊಗವಾವುದೋ ನಿನಗೆ? ಪರತಂತ್ರ ರಕ್ಷಣೆಯೋ?
ಮಿಗೆ ಸ್ವತಂತ್ರ ವಿಹಾರವೋ? ಸೃಜನಶೀಲತೆಯ
ಮುಗುಳರಳಲಾಗೊ ನೀನಿರ್ಮುಕ್ತ ಅತ್ರಿಸೂನು

ಭ್ರಮನಿರಸನ ಪರಂಪರೆಯೆ ಬದುಕು? ಒಂದನುಂ
ಕ್ರಮಿಸಿರಲು ಬೇರೊಂದು ಮುಸುಕುವುದು ನಿಯಮವೇ?
ಸಮಚಿತ್ತದಿಂದೆಲ್ಲವನು ತರಿದೊಗೆಯಲು ಸ್ವ-
ಭ್ರಮನಾಶವಾಗುವುದು – ಇದೆ ಮುಕ್ತಿ ಅತ್ರಿಸೂನು

ಬೆಂಗಳೂರಿನಲ್ಲಿ ಖೋಲಿ ಮನೆಯೊಂದನ್ನು (apartment) ಖರೀದಿಸುವುದು ಅವರಿಗೆ ಸಾಧ್ಯವಾಯಿತು. ೨೫ ಜುಲೈ ೧೯೮೫ರಲ್ಲಿ ಅವರು ವಿಧಿವಶರಾದರೆಂದು ತಿಳಿಯಿತು. ಆಗಲೂ ಈಗಲೂ ಸದಾಕಾಲವೂ ಪ್ರಸ್ತುತವಾಗುವ ಸೂಕ್ತಿಗಳು –

ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು
ಕತ್ತಲೆಯ ಮೊಡಕು ಮೂಲೆಗಳ ಸೇರದಿರು
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ
ಮೃತ್ಯು ನಿನಗಲ್ಪತೆಯೊ ಮಂಕುತಿಮ್ಮ

ಉತ್ಸಾಹವನು ಹೀರು ಉಲ್ಲಾಸವನು ಬೀರು
ಮತ್ಸರ ತಿರಸ್ಕರಿಸು ಸದ್ಗುಣ ಪುರಸ್ಕರಿಸು
ನಿತ್ಯೋತ್ಸವವು ಜೀವನವೆನುತ್ತ ಸತ್ಕಾರ್ಯ
ಭೃತ್ಯನಾಗಲೊ ಸಾವಿರದ ಠಾವು ನಿನ್ನ ರೇವು ಅತ್ರಿಸೂನು!

(ಜಿಟಿನಾ ಲೇಖನ ಮುಗಿಯಿತು)
(ಸರಣಿ ಮುಂದುವರಿಯಲಿದೆ)