(ಒಂದು ದಾಖಲೀಕರಣದ ಆಯೋಜನಾ ಕಥನ)

ಕುಂಟು ನೆಪವೊಂದರಿಂದ ದ್ರೌಪದಿ ಪಾಂಡವರೈವರ ಪತ್ನಿಯಾದಳು. ಇದನ್ನೇ ನೆಪವಾಗಿಟ್ಟುಕೊಂಡು ಬಳ್ಳಾರಿ ಮೂಲದ, ಬೆಂಗಳೂರು ವಾಸಿಯಾದ ವಸುಧೇಂದ್ರರು ಈ ಸಲದ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲೊಂದು ಲೇಖನ ಪ್ರಕಟಿಸಿದರು. ಹಿಂಬಾಲಿಸಿದಂತೆ ಲೇಖನವನ್ನು ೧೭-೧೦-೧೭ರಂದು ಫೇಸ್ ಬುಕ್ಕಿನ ತಮ್ಮ ಖಾತೆಗೂ ಏರಿಸಿದರು. ಅವರ ವಿಶ್ಲೇಷಣೆ ಚೆನ್ನಾಗಿಯೇ ಇತ್ತು. ಆದರೆ ಕರಾವಳಿ ಅರ್ಥಾತ್ ತಾಳಮದ್ದಳೆಯ ವಲಯದೊಳಗೆ ಸಾಕಷ್ಟು ಉಸಿರಾಡಿದ ನನಗೆ ಬಿಟ್ಟಿ ಸಲಹೆ ಕೊಡದಿರಲು ಸಾಧ್ಯವಾಗಲಿಲ್ಲ. ಯಕ್ಷಗಾನ ಅರ್ಥಧಾರಿಗಳು (ರಂಗದಲ್ಲೂ ಕೂಟದಲ್ಲೂ) ಇಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ, ನಿತ್ಯ ನೂರರಂತೆ ಪುರಾಣಪಾತ್ರಗಳಲ್ಲಿ ಉಸಿರಾಡುತ್ತಾರೆ. ಸ್ಥಳ, ಕಾಲ, ವ್ಯಕ್ತಿ ಪ್ರಭಾವದಲ್ಲಿ ಆ ಪಾತ್ರಗಳು ಎತ್ತಿ ಹಾಕುವ ಸಮಸ್ಯೆಗಳನ್ನೂ ಅಷ್ಟೇ ನಿಸೂರಾಗಿ ಒದಗಿಸುವ ಸಮಾಧಾನಗಳನ್ನೂ ಕೇಳಿಯೇ ಸಂತೋಷಿಸಬೇಕು. ‘ವಸುಧೇಂದ್ರರು ಅಂಥ ನಾಲ್ಕೈದು ಮಂದಿಯ ಕೂಟವನ್ನು ಬೆಂಗಳೂರಿನಲ್ಲೇ ಆಯೋಜಿಸಿ ಕಂಡುಕೊಳ್ಳಬಹುದು’ ಎಂಬರ್ಥದಲ್ಲಿ ನಾನು ಫೇಸ್ ಬುಕ್ಕಿನಲ್ಲಿ ಚುಟುಕು ಪ್ರತಿಕ್ರಿಯೆ ಹಾಕಿದೆ. ಅದರಲ್ಲೇ, ಹಾಗೊಂದು ಕಲಾಪ ನಡೆಯುವುದಾದಲ್ಲಿ, ನಾನೇ ಹೇಳಿದ ‘ಕಾಲ- ಪ್ರಭಾವ’ದ ಪರಿಣಾಮ ಹೊಸದೇ ಇರುತ್ತದೆ, ಮತ್ತದನ್ನು ಕೇಳಿ ಸಂತೋಷಿಸಲು ನಾನೂ ಅಲ್ಲಿರಲು ಇಷ್ಟಪಡುತ್ತೇನೆ ಎಂದು ಸ್ವಾರ್ಥವನ್ನೂ ಸೇರಿಸಿದ್ದೆ! ಆ ಪ್ರತಿಕ್ರಿಯೆಯಲ್ಲಿ ವಸುಧೇಂದ್ರರ ಪರಿಚಯ ಲಾಭಕ್ಕೆನ್ನುವಂತೆ, ಆ ಕ್ಷಣಕ್ಕೆ ನನ್ನ ತಲೆಗೆ ಬಂದ, ಫೇಸ್ ಬುಕ್ಕಿನಲ್ಲೂ ಕ್ರಿಯಾಶೀಲರಾಗಿರುವ ಎರಡು ಯುವ ಕಲಾವಿದರು – ರಾಧಾಕೃಷ್ಣ ಕಲ್ಚಾರ್ ಮತ್ತು ವಾಸುದೇವರಂಗಾಭಟ್ಟರ ಹೆಸರನ್ನೂ ಲಗತ್ತಿಸಿದ್ದೆ (ಟ್ಯಾಗ್ ಮಾಡಿದ್ದೆ). ನನ್ನ ನಿರೀಕ್ಷೆಯಂತೆ, ಕಲಾವಿದರಿಬ್ಬರು ಚುರುಕಾಗಿಯೇ ಅನುಮೋದನೆಯನ್ನು ಒತ್ತಿದರು. ಆದರೆ ನಾನು ಹೆಚ್ಚಿನ ನಿರೀಕ್ಷೆಯಿಟ್ಟಿದ್ದ ವಸುಧೇಂದ್ರರು ಯಾಕೋ ನಿರ್ಭಾವದ ‘ಲೈಕ್’ ಒತ್ತಿದಂತನಿಸಿತು. ಇದರಿಂದ ಅನಾವಶ್ಯಕವಾಗಿ ನನಗೆ ಸೋಲಿನ ಭಾವ ಬಂತು. ಈ ನಡುವೆ……

ಅಭಯಸಿಂಹ (ನಮ್ಮ ಮಗ) ಕಳೆದ ನಾಲ್ಕೈದು ತಿಂಗಳಿನಿಂದ ತನ್ನ ಹೊಸ ಸಿನಿಮಾದಲ್ಲಿ ಮುಳುಗಿಹೋಗಿದ್ದಾನೆ. ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣದ ಬಹುಭಾಗವನ್ನು ಈ ವಲಯಗಳಲ್ಲೇ ಮಾಡಿ ಬೆಂಗಳೂರಿಸಿದ್ದ. ಆಗ ಅಕಾಲಿಕ ಮಳೆ ತಡೆಹಿಡಿದಿದ್ದ ಒಂದೆರಡು ದಿನಗಳ ಬಾಕಿ ಚಿತ್ರೀಕರಣವನ್ನು ಪೂರೈಸಿಕೊಳ್ಳಲು ಮತ್ತೆ ಅಕ್ಟೋಬರ್ ಕೊನೆಗೆ ಬರುತ್ತೇನೆಂದಿದ್ದ. ಹಿಂದೆ ಅವನು ಚಿತ್ರೀಕರಣದ ನಡುವೆಯೇ ಎರಡು ದಿನ ಬಿಡುವು ಮಾಡಿಕೊಂಡು, ಲಭ್ಯವಿದ್ದ ತಂತ್ರಜ್ಞರನ್ನೇ ಸಂಯೋಜಿಸಿಕೊಂಡು ಹೆಗ್ಗೋಡಿಗೆ ಹೋಗಿ ಬಂದದ್ದು ನೀವೆಲ್ಲ ತಿಳಿದೇ ಇದ್ದೀರಿ (ಹೆಗ್ಗೋಡಿನ ಹನಿಗಳು). ಹಾಗೇ ಇನ್ನೊಂದು ಭಿನ್ನ ಕಲಾಪ ಈ ಬಾರಿ ನಾನೇ ಅವನಿಗೊದಗಿಸಿದರಾಗದೇ? ವಸುಧೇಂದ್ರರಿಗೆ ಬರೆದು ಕೊಟ್ಟ ಸಲಹೆಯನ್ನು ನಾನೇ ನುಂಗಿದೆ.

ವೇಷಭೂಷಣ, ವಿಶೇಷ ದೀಪಧ್ವನಿ, ಔಪಚಾರಿಕ ರಂಗಸ್ಥಳಗಳಾದಿ ಕಟ್ಟುಪಾಡುಗಳಿಲ್ಲದ ಕಲೆ ತಾಳ ಮದ್ದಳೆ. ಅದನ್ನು ಸಾರ್ವಜನಿಕ ಕಲಾಪ ಮಾಡುವುದೆಂದರೆ ಸಂಘಟನಾ ಸಂಕಟಗಳು ಸಾವಿರ. ಬದಲು ಅದನ್ನು ನಮ್ಮ ಮನೆಯಲ್ಲೇ ಸಣ್ಣದಾಗಿ ನಡೆಸಿ, ಅಭಯನಿಂದ ವಿಡಿಯೋ ದಾಖಲೀಕರಣಗೊಳಿಸಿ, ಅಂತರ್ಜಾಲದ ಮೂಲಕ ದೊಡ್ಡ ಲೋಕಕ್ಕೆ ಸದಾ ಲಭ್ಯವಾಗುವಂತೆ ಮಾಡುವ ಯೋಚನೆ ನಮ್ಮದು. ಅಭಯ ಹಸಿರು ಕಂದೀಲು ಆಡಿಸಿದ. ಕ್ಷಣ ಮಾತ್ರವೂ ವಿಳಂಬಿಸದೆ ಫೇಸ್ ಬುಕ್ಕಿನಲ್ಲಿ ಅನುಮೋದನೆ ಕೊಟ್ಟಿದ್ದ ಕಲ್ಚಾರ್ ಮತ್ತು ವಾರಂಭಟ್ಟರಿಗೆ ನನ್ನ ಅಗತ್ಯವನ್ನು ಸ್ಪಷ್ಟಪಡಿಸಿ, ದಿನಾಂಕ ಕೇಳಿದೆ.

ದ್ರೌಪದಿಯ ಪಂಚ ಪತಿತ್ವದ ಲೇಖನಕ್ಕೆ ಪ್ರತಿಕ್ರಿಯಿಸುವಾಗ ನನ್ನ ಲಕ್ಷ್ಯದಲ್ಲಿ ಕೇವಲ ವಸುಧೇಂದ್ರರಿರಲಿಲ್ಲ. ಕನ್ನಡದ ವಿದ್ವತ್ ವಲಯದೊಳಗೆ ಬಹುದೊಡ್ಡ ವರ್ಗಕ್ಕೆ ಇಂದಿಗೂ ಯಕ್ಷಗಾನ, ತಾಳಮದ್ದಳೆಗಳ ಕುರಿತು ದೊಡ್ಡ ಅವಜ್ಞೆ ಇದೆ. ಯಕ್ಷಗಾನ ಒಂದು ಜನಪದ (ಗಮಾರರ ಒರಟು) ಕಲೆ, ತಾಳಮದ್ದಳೆ (ಅಥವಾ ಅರ್ಥಗಾರಿಕೆ) ಏನೋ ಒಣತರ್ಕ, ಹೆಚ್ಚೆಂದರೆ ಬಿಚ್ಚಿಟ್ಟ ನಿಘಂಟು, ಅಥವಾ ಪುಣ್ಯನಾಮಸ್ಮರಣೆಗೊಂದು ಭಕ್ತಾದಿಗಳ ನೆಪ ಎಂಬಿತ್ಯಾದಿ ಭ್ರಮೆ ಇದ್ದೇ ಇದೆ. ವಸುಧೇಂದ್ರರ ನೆಪದಲ್ಲಿ ಅದನ್ನು ಕಿಂಚಿತ್ ನಿವಾರಿಸುವ ಪ್ರಯತ್ನ ನಮ್ಮದು. ದ್ರೌಪದಿಯ ಪಂಚಪತಿತ್ವ ಸ್ಫುಟಗೊಳ್ಳುವಂತೆ, ಆದರೆ ಶುದ್ಧ ತಾಳಮದ್ದಳೆಯ ವಿನ್ಯಾಸವೇ ಇರುವಂತೆ ಒಂದು ಪ್ರಸಂಗವನ್ನು ಆರಿಸಿಕೊಳ್ಳಲು ಕಲಾವಿದ ಮಿತ್ರರನ್ನು ಕೇಳಿಕೊಂಡೆ.

ಇಂದು ವೇಷಭೂಷಣಾದಿಗಳ ಯಕ್ಷಗಾನಕ್ಕಾದರೋ ಸ್ಪಷ್ಟ ವಲಯಗಳಿವೆ (ಮುಖ್ಯವಾಗಿ ತೆಂಕು ಮತ್ತು ಬಡಗು) ಮತ್ತು ಹಲವು ಸಿದ್ಧ ಸಂಘಟನೆಗಳೂ ಇವೆ. ಅದರಲ್ಲೂ ಮಳೆ ದೂರಾದ ದಿನಗಳಲ್ಲಿ ಪ್ರತಿ ದಿನವೆಂಬಂತೆ ವೃತ್ತಿಪರ ಪ್ರದರ್ಶನಗಳನ್ನೇ ಕೊಡುವ ಹಲವು ಮೇಳಗಳೇ ಇವೆ. ಆದರೆ ತಾಳಮದ್ದಳೆ ಎಲ್ಲ ಗಡಿಗಳನ್ನೂ ಮೀರಬಲ್ಲುದು, ಯಾವುದೇ ಸಂಯೋಜನೆಗಳಲ್ಲೂ ಜನಮನವನ್ನು ಧಾರಾಳ ತಣಿಸಬಲ್ಲುದು. (ಬಹುತೇಕ ಯಕ್ಷಗಾನ ಕಲಾವಿದರು ತಾಳಮದ್ದಳೆಯ ಅರ್ಥಧಾರಿಗಳೂ ಹೌದು) ಈ ಮಾತನ್ನು ಸ್ಪಷ್ಟೀಕರಿಸಲು ಸಣ್ಣ ಉದಾಹರಣೆಯಾಗಿ ತೆಂಕು ತಿಟ್ಟಿನ ಖ್ಯಾತ ವೇಷಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರನ್ನೇ ನೋಡಿ. ಇವರು ಬಡಾಬಡಗಿನ ಭಾಗವತರೊಂದಿಗೆ, ತಿಟ್ಟುಗಳ ಹಂಗೇ ಇಲ್ಲದೆಯೂ ಪುರಾಣಪ್ರಜ್ಞೆಯುಳ್ಳ ವಾಗ್ಮಿಯೊಂದಿಗೂ ಕೂಟವನ್ನು ಯಶಸ್ವೀಗೊಳಿಸಬಲ್ಲರು. ಆದರೆ ಅಂಥಾ ಕೆಲವು ಖ್ಯಾತನಾಮರು ಯಕ್ಷಗಾನಗಳ ತಿರುಗಾಟದ ಋತುಗಳಲ್ಲಿ, ಎಲ್ಲಂದರಲ್ಲಿನ ಕೂಟಗಳಿಗೆ ಸೇರಿಕೊಳ್ಳುವುದು ಅಸಾಧ್ಯವಾಗುವುದಿದೆ. ಇನ್ನೂ ಮೇಳದ ತಿರುಗಾಟದ ದಿನಗಳು (ಸುಮಾರು ಮೇ ಕೊನೆಯಿಂದ ನವೆಂಬರ್ ಮೊದಲ ವಾರದವರೆಗೆ) ಶುರುವಾಗಿಲ್ಲ ಎನ್ನುವುದು ನಮ್ಮ ಅನುಕೂಲಕ್ಕಿತ್ತು. ಯುಕ್ತ ಹಿಮ್ಮೇಳ ಮತ್ತು ಹೆಚ್ಚಿನ ಮುಮ್ಮೇಳ ಕಲಾವಿದರ ಆಯ್ಕೆಗೆ ಅವಕಾಶ ದೊಡ್ಡದಿತ್ತು. ಮತ್ತಾ ಸ್ವಾತಂತ್ರ್ಯವನ್ನು ಮಿತ್ರದ್ವಯಕ್ಕೇ ಬಿಟ್ಟಿದ್ದೆ. ಕೊನೆಯದಾಗಿ ಪ್ರೇಕ್ಷಕರ ಬಿಡುವು, ಸಮಯ….

ನನ್ನ ಪರಿಚಯದಲ್ಲಿ ತಾಳಮದ್ದಳೆಯ ಸೂಚನೆ, ಅದರಲ್ಲೂ ವೈಯಕ್ತಿಕ ಆಮಂತ್ರಣ ಕೊಟ್ಟರೆ ಬರುವ ಜನ ತುಂಬಾ ಇದ್ದರು. ಆದರೆ ನಮ್ಮ ಕೋಣೆಯ ಮಿತಿ ಮತ್ತು ಬರುವವರ ವಾಹನಗಳಿಗೆ ನಿಲ್ಲುವ ಸ್ಥಳದ ಕೊರತೆ ಮನಸ್ಸಿನಲ್ಲಿತ್ತು. ಇವನ್ನು ಪರೋಕ್ಷವಾಗಿ ನಿಯಂತ್ರಿಸಲು ಕಲಾಪವನ್ನು ಏರುಹಗಲೇ (ಬೆಳಿಗ್ಗೆ ಒಂಬತ್ತೂವರೆಯಿಂದ ಮಧ್ಯಾಹ್ನ ಸುಮಾರು ಒಂದು ಗಂಟೆಯವರೆಗೆ) ನಿಶ್ಚೈಸಿಕೊಳ್ಳುವುದು ಅನಿವಾರ್ಯವಾಯ್ತು. ಸಾರ್ವಜನಿಕ ಕೂಟಗಳನ್ನು ಸಂಯೋಜಿಸುವರು ಹೆಚ್ಚಾಗಿ ಸಾರ್ವಜನಿಕ ರಜಾದಿನಗಳು, ಹಬ್ಬಗಳು, ಶನಿ-ಆದಿತ್ಯವಾರಗಳನ್ನೆಲ್ಲ ಲೆಕ್ಕ ಹಾಕುತ್ತಾರೆ ಮತ್ತು ಸಾಕಷ್ಟು ಮುಂಚಿತವಾಗಿ ಕಲಾವಿದರನ್ನು ‘ಕಾಯ್ದಿರಿಸುತ್ತಾರೆ’! ನನಗೆ ಪ್ರೇಕ್ಷಕರು ಹೆಚ್ಚು ಬೇಕಿರಲಿಲ್ಲ. ಹಾಗಾಗಿ ನಾನು ಆ ಇಬ್ಬರ ಬಿಡುವಿನಲ್ಲಿ, ಅಕ್ಟೋಬರ್ ಮೂವತ್ತೊಂದು, ಮಂಗಳವಾರ (ಕೆಲಸದ ದಿನ) ಆರಿಸಿಕೊಂಡೆ. ಮತ್ತು ಸಾಮಾನ್ಯರ ಕೆಲಸದ ಅವಧಿಯನ್ನೂ ಪರಿಗಣಿಸಿ, ನಮ್ಮ ಕೂಟವನ್ನು ಪೂರ್ವಾಹ್ನಕ್ಕೇ ನಿಷ್ಕರಿಸಿದೆ. ಭಾಗಿಗಳೆಲ್ಲರಿಗು ಲಘೂಪಹಾರ ಮತ್ತು ಕಲಾಪ ಮುಗಿದ ಮೇಲೆ ಸರಳ ಊಟ – ಹೊರಗಿನಿಂದ ತರಿಸುತ್ತಿರುವುದನ್ನು ಎಲ್ಲ ಆಮಂತ್ರಿತರಿಗೂ ಮೊದಲೇ ತಿಳಿಸಿದ್ದೆವು. ಇದು ಪರೋಕ್ಷವಾಗಿ ದಾಖಲೀಕರಣದ ಶಿಸ್ತಿಗೆ, ಅರ್ಥಾತ್ ಯಾವುದೇ ಅನಪೇಕ್ಷಿತ ಸದ್ದುಂಟಾಗದ ಪರಿಸರಕ್ಕೆ ಅನುಕೂಲಕರವಾಗಿಯೂ ಒದಗಿತು.

‘ಜನಪ್ರಿಯತೆ’ ಎನ್ನುವ ಗುಣವೂ ಇಂದು ಬಹುತೇಕ ಮಾರುಕಟ್ಟೆಯ ಮಾಲಾಗಿದೆ! ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡು, ಸಾಂಪ್ರದಾಯಿಕತೆಯನ್ನು ಸಿನಿ(ಕ?) ಅಥವಾ (ಅ)ಭಾವಗೀತೆಗಳಿಗೆ ಮಾರಿಕೊಂಡು, ತಮ್ಮ ಶಾರೀರದ ಮಿತಿಯನ್ನು ಹರಕೊಂಡು ಧ್ವನಿ ತೆಗೆಯುವ, ಸಂಗೀತಕ್ಕಿಂತ ಸರ್ಕಸ್ಸಿನ ಪ್ರೀತಿಯನ್ನು ಮೆರೆಸುವ ಎಷ್ಟೋ ಭಾಗವತರು ನನ್ನ ಮನಸ್ಸಿನಲ್ಲಿದ್ದರು. ಒಂದು ವಾದನದ ನುಡಿತಗಳಿಗೇ ಪಳಗದವರೂ ನಾಲ್ಕೋ ಎಂಟೋ ಮದ್ದಳೆ ಚಂಡೆಗಳನ್ನು ನೆರಹಿ ಗದ್ದಲವೆಬ್ಬಿಸುವುದನ್ನು ಕೇಳಿ ಬಳಲಿದ್ದಂತೂ ಮರೆಯುವ ಹಾಗೇ ಇರಲಿಲ್ಲ. ಪ್ರಸಿದ್ಧರ ಮಾತುಗಳ ಮಾಸಲು ನಕಲೊಪ್ಪಿಸುವ, ಪರ್ಯಾಯ ಶಬ್ದಗಳ ಸರ ಪೋಣಿಸುವ, ಸಿದ್ಧ ವಾಕ್ಯಖಂಡಗಳ ಕಂಠಪಾಠ ಒಪ್ಪಿಸುವ, ಗಂಟಲ ತ್ರಾಣ ಮತ್ತು ಅನಪೇಕ್ಷಿತ ದೇಹಭಾಷೆಯಲ್ಲೇ ಹುಸಿಬೀಗುವ, ನೇರ ನಾಲ್ಕರ ಬದಲು ಬಳಸು ನಾಲ್ವತ್ತರ ಬಳಸುವ…… ಮುಂತಾದವರು ನಮ್ಮ ಆದರ್ಶದ ಕಲ್ಪನೆಗೆ ಒಡ್ಡಿಕೊಳ್ಳುವಂತಿರಲಿಲ್ಲ. ಹಾಗಾಗಿ ಕಲೇತರ ಪ್ರಭಾವಗಳ ವ್ಯಕ್ತಿಗಳನ್ನು ಪರಿಗಣಿಸದಂತೆ ನನ್ನಿಬ್ಬರೂ ಕಲಾಮಿತ್ರರಿಗೆ ಮೊದಲೇ ಸ್ಪಷ್ಟಪಡಿಸಿದ್ದೆ. ಆ ನಿಟ್ಟಿನಲ್ಲಿ ನಾನೇ ತುಸು ಮುಂದುವರಿದು, ಕೆಲವು ಹೆಸರುಗಳನ್ನೂ ಸೂಚಿಸಿದ್ದೆ. ನಿಜದಲ್ಲಿ ಮಿತ್ರರಿಗೂ ಅದು ಒಪ್ಪಿತವೇ ಇತ್ತು ಮತ್ತು ಅದೃಷ್ಟಕ್ಕೆ ಅವರಿಬ್ಬರ ಬಿಡುವು ನಮ್ಮನುಕೂಲಕ್ಕೂ ಒದಗಿತು.

ಕಲ್ಚಾರರ ಸ್ನಾತಕೋತ್ತರ ಸಹಪಾಠಿ, ಶುದ್ಧ ಕಂಠದ, ಸಂಪ್ರದಾಯದ ಬಲವುಳ್ಳ (ಖ್ಯಾತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಶಿಷ್ಯ), ಹೊಸ ತಲೆಮಾರಿನ ಭಾಗವತ – ಸುಬ್ರಾಯ ಸಂಪಾಜೆ, ನಮಗೆ ಭಾಗವತರಾಗಿ ಒದಗಿದರು. ಸುಬ್ರಾಯರು ಅಧ್ಯಾಪಕನಾಗಿ ವೃತ್ತಿ ಜೀವನವನ್ನು ಆರಂಭಿಸಿದರೂ ಕಳೆದ ಸುಮಾರು ಎರಡು ದಶಕಗಳಿಂದ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಹಿತ್ಯದ ಓದಿಗೆ ಹವ್ಯಾಸದ ಕಲಾಸಾಂಗತ್ಯ ಒದಗಿ ಮೂಡಿದ ಹೊತ್ತಗೆ, ಮತ್ತದಕ್ಕೆ ಮಿತ್ತೂರು ಪ್ರತಿಷ್ಠಾನದಿಂದ ಬಂದ ಪ್ರಶಸ್ತಿ – ಕಿರೀಟ ಮತ್ತದಕ್ಕೆ ಮುಡಿಸಿದ ಗರಿಯೇ ಸೈ.

ನನ್ನಂಗಡಿಯ ಕೊನೆಯ ದಿನಗಳಲ್ಲಿ ಕೇವಲ (ಕನ್ನಡ, ಇಂಗ್ಲಿಷ್) ಪುಸ್ತಕಪ್ರೇಮಿಯಾಗಿ ಪರಿಚಯಕ್ಕೆ ಬಂದ ತರುಣ ಕೃಷ್ಣಪ್ರಕಾಶ ಉಳಿತ್ತಾಯ. ದಾಕ್ಷಿಣ್ಯದ ಈ ಮುಗುಳು ಅರಳಿದಾಗ, ನನ್ನ ಹೆಂಡತಿ ದೇವಕಿಯ ತವರ ಮೂಲದ ಆತ್ಮೀಯರ ಸಂಬಂಧ, ಕರ್ನಾಟಕ ಬ್ಯಾಂಕಿನ ಮಾನವೀಯ ಸಂಪನ್ಮೂಲ ಖಾತೆಯ ಪ್ರಬಂಧಕ ಎಂದೆಲ್ಲ ಬಾಂಧವ್ಯ ತೆರೆದುಕೊಂಡಿತ್ತು. ಪರಿಚಯ ಗಾಢವಾದಂತೆ, ಕೃಷ್ಣಪ್ರಕಾಶ್ ಬಾಲ್ಯದಲ್ಲಿ ಸ್ವತಃ ತಂದೆಯಿಂದ, ಮುಂದೆ ಯಕ್ಷಗುರು ದಿ.ಪುಂಡಿಕಾಯಿ ಕೃಷ್ಣ ಭಟ್ ಮತ್ತು ಮೋಹನ ಬೈಪಾಡಿತ್ತಾಯರಿಂದ ಪರಿಣತನಾದ ಚಂಡೆ ಮದ್ದಳೆಗಳ ವಾದಕನೆಂದೂ ಕಂಡುಕೊಂಡೆ. ಇವರ ನುಡಿತಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ವಲಯದ ಖ್ಯಾತನಾಮರಾದ ತೃಚ್ಚಿ ಕೆ.ಆರ್. ಕುಮಾರ್ ಮತ್ತು ಕುಕ್ಕಿಲ ಶಂಕರ ಭಟ್ಟರ ಗುರುತ್ವ ಮೃದಂಗವಾದನದ ಸ್ಪಷ್ಟ ಮುಖಗಳನ್ನೂ ಕೊಟ್ಟಿದೆ. ಸಾಮಾನ್ಯ ಹಿಮ್ಮೇಳ ವಾದಕರಿಗಿಲ್ಲದ ಅಧ್ಯಯನಶೀಲತೆ ಉಳಿತ್ತಾಯರನ್ನು ಛಾಂದಸ ಗಣೇಶ ಕೊಲಕಾಡಿಯವರಲ್ಲಿ ಒಯ್ದರೆ, ಸಿದ್ಧಿಸಿಕೊಂಡ ಭಾಷಾ ಅಭಿವ್ಯಕ್ತಿ ಇವರನ್ನು ಸಮೂಹ ಮಾಧ್ಯಮಗಳಲ್ಲಿ (ಮುದ್ರಣ ಮತ್ತು ವಿದ್ಯುನ್ಮಾನ) ನಿಜ ಜನಪ್ರಿಯತೆಯಲ್ಲಿ ನಿಲ್ಲಿಸಿವೆ.

ಪುಸ್ತಕೋದ್ಯಮ ಮೂವತ್ತಾರು ವರ್ಷಗಳ ಕಾಲ ನನಗೆ ಪ್ರತ್ಯಕ್ಷವಾಗಿ ವೃತ್ತಿ ಹಾಗೂ ಜೀವನ ಭದ್ರತೆಗಳನ್ನು ಕೊಟ್ಟಿತು. ಆ ಉದ್ದಕ್ಕೆ ನನ್ನರಿವಿಗೆ ಅಷ್ಟಾಗಿ ಬಾರದ ಮೂರನೇ ಧಾರೆಯೊಂದು (ನದಿ ಸಂಗಮಗಳಲ್ಲಿ ಅಗೋಚರವಾಗಿ ಸೇರುವ ಜ್ಞಾನವಾಹಿನಿ ಸರಸ್ವತಿಯಂತೆ) ಇದ್ದದ್ದು, ಅದು ನಿಸ್ಸಂದೇಹವಾಗಿ ಮತ್ತು ಬಲಯುತವಾಗಿ ನನ್ನ ಇರವಿನ ಉದ್ದಕ್ಕೆ ಚಾಚಿಕೊಳ್ಳುವುದನ್ನು ಇಂದು ನಾನು ಸಾರ್ವಜನಿಕದ ಸಾಹಿತ್ಯಪ್ರೀತಿಯಲ್ಲಿ ಕಾಣುತ್ತಿದ್ದೇನೆ. ಎಂಎ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ರಾಧಾಕೃಷ್ಣ ಕಲ್ಚಾರ್ ಅನಿವಾರ್ಯವಾಗಿ ನನ್ನಂಗಡಿಯ ಗಿರಾಕಿ. ಇವರು ವೃತ್ತಿ ಜೀವನವನ್ನು ಪತ್ರಕರ್ತನಾಗಿ ಆರಂಭಿಸಿದಾಗ ನಮ್ಮಲ್ಲಿ ವ್ಯಾಪಾರದ ಸಂಬಂಧದಿಂದ ಹೊರಗಿನ ಬಂಧ ಏರ್ಪಟ್ಟಿತ್ತು. ಮುಂದುವರಿದ ದಿನಗಳಲ್ಲಿ ಇವರು ಸರಕಾರೀ ಕಾಲೇಜು ಉಪನ್ಯಾಸಕನಾದರು. ಈ ವೇಳೆಯಲ್ಲಿ ಇವರ ತಾಳಮದ್ದಳೆಯ ಸುದ್ದಿಗಳು ನನ್ನನ್ನು ಮುಟ್ಟಿದಾಗ ನಾನು ಕೇಳುವ ಅವಕಾಶಕ್ಕೆ ಸಣ್ಣ ಕುತೂಹಲಿಯಾಗಿದ್ದೆ. ಆದರೆ ಮುಂದುವರಿದು, ಸಾಮಾನ್ಯರು ದಕ್ಕಿಸಿಕೊಳ್ಳಲು ಹಪಹಪಿಸುವ ಸರಕಾರೀ ಉಪನ್ಯಾಸಕ ವೃತ್ತಿಯಿಂದಲೇ ಈತ ಸ್ವಯಂ ನಿವೃತ್ತಿ ಪಡೆದು, ಪೂರ್ಣಾವಧಿ ತಾಳಮದ್ದಳೆಯಲ್ಲೇ ನೆಲೆ ಕಾಣುವ ಛಲ ಹೊತ್ತಾಗ ನಿಜಕ್ಕೂ ಅಭಿಮಾನಿಯಾದೆ. ಹಳೆ ತಲೆಯ ಅರ್ಥಧಾರಿಗಳು ಖ್ಯಾತಿಯ ಬೂದಿಹೊತ್ತವರಾಗುತ್ತಿದ್ದ ಕಾಲಕ್ಕೆ ಮೂಡಿದ ಕೆಲವೇ ನಿಗಿನಿಗಿ ಕೆಂಡಗಳಲ್ಲಿ ಕಲ್ಚಾರ್ ನಿಸ್ಸಂದೇಹವಾಗಿ ಒಬ್ಬರು. ಹೀಗೆ ಕಲ್ಚಾರ್ ಹೊಟ್ಟೆಪಾಡನ್ನು ಮೀರಿದ ಕಲಾವಿದನಾಗಿ ತೋರಿದ್ದಕ್ಕೇ ನನಗೆ ಸಹಜವಾಗಿ ವಾಸುದೇವ ರಂಗಾಭಟ್ಟರ ಜತೆಗೆ ಪ್ರಸಂಗ, ನಡೆ ಮತ್ತು ಇತರ ಕಲಾವಿದರ ಆಯ್ಕೆಗೆ ಸೂಕ್ತ ವ್ಯಕ್ತಿ ಎಂದನ್ನಿಸಿತ್ತು. ನಮ್ಮ ದಾಖಲೀಕರಣ ತಾಳಮದ್ದಳೆಯ ವಿನ್ಯಾಸ ಕೆಡಿಸದೆ, ಆಶಯವನ್ನೂ ಬೀಳುಗಳೆಯದೆ ಯಶಸ್ವಿಯಾಯ್ತು.

ಮಧೂರು ಯಕ್ಷಗಾನದ ಆರಾಧ್ಯ ದೈವ ಗಣಪನ ಕ್ಷೇತ್ರ. ವಾಸುದೇವ ರಂಗಾಭಟ್ಟನೆಂಬ ಯುವ ಅರ್ಥಧಾರಿ ಆ ಮಧೂರಿನ ಸುಖ್ಯಾತ ಜೋಯಿಸರೊಬ್ಬರ ಪುತ್ರ. ಈ ಎರಡು ಅಂಶಗಳು (ಕ್ಷೇತ್ರ, ಪುತ್ರ) ಯಕ್ಷಗಾನವನ್ನು ಆರಾಧನೆಯನ್ನಾಗಿ ನೋಡುವ ಕಣ್ಣುಗಳಿಗೆ ಮತ್ತು ಪುಣ್ಯಕಥನಗಳಿಗೆ ತೆರೆದುಕೊಳ್ಳುವ ಕಿವಿಗಳಿಗೆ ಹಿತವಾಗಿಯೇ ಇರುವುದು ತಪ್ಪಲ್ಲ. ಆದರೆ ತಾಳಮದ್ದಳೆಯನ್ನು ಪುರಾಣಗಳ ಘನ ಚೌಕಟ್ಟಿನ ಮೇಲೆ ಹಬ್ಬುವ ಸುಂದರ ಬಳ್ಳಿಯಂತೆ, ಅಂದರೆ ಬರಿಯ ಕಲೆಯಾಗಿ, ಖಚಿತ ವೈಚಾರಿಕ ನೆಲೆಯುಳ್ಳದ್ದಾಗಿ ಗ್ರಹಿಸುವ ನನಗೆ ಆಕರ್ಷಣೆಯನ್ನು ಮೂಡಿಸಿರಲಿಲ್ಲ. ಹಾಗಾಗಿ ವಾಸುದೇವರ ಪರಿಚಯ ಮತ್ತು ಮೊದಲ ಹೆಜ್ಜೆಗಳನ್ನು ಗಮನಿಸುವಲ್ಲಿ ನಾನು ಹಿಂದೆ ಬಿದ್ದಿದ್ದೆ. ಆದರೆ ಆಕಸ್ಮಿಕವಾಗಿಯೇ ಅವರನ್ನು ಒಮ್ಮೆ ಕೇಳಿಸಿಕೊಂಡ ನಾನು, ಮುಂದೆ ಅವರನ್ನೇ ಕುರಿತು ಕೇಳುವುದಕ್ಕಾಗಿ ಅವಕಾಶ ಹುಡುಕುವಂತಾಗಿತ್ತು! ಅದರಲ್ಲೂ ಒಮ್ಮೆ ಪ್ರಭಾಕರ ಜೋಶಿಯವರ ರಾವಣನಿಗೆ ಅತಿಕಾಯನಾಗಿ ವಾಸುದೇವರು ನಡೆಸಿಕೊಟ್ಟ ಸಂವಾದದ ಕೊನೆಯಲ್ಲಿ ರಾವಣನ ಹತ್ತೂ ತಲೆದೂಗಿದ್ದು ಕಂಡಿದ್ದೆ. ರಂಗದಿಂದ ಇಳಿದ ಮೇಲೂ ಜೋಶಿಯವರು ವಾರಂಗನಿಗೆ ಕೊಟ್ಟ ನುಡಿ ಸಮ್ಮಾನ ತುಂಬ ದೊಡ್ಡದು. ಅನಂತರದ ದಿನಗಳಲ್ಲಿ ಇವರು ವಿದ್ಯಾರ್ಹತೆಯಿಂದ ಸುಲಭದಲ್ಲಿ ಸಾಧಿಸಬಹುದಾಗಿದ್ದ ವಕೀಲ ವೃತ್ತಿಯನ್ನೂ ನಿರಾಕರಿಸಿ ಯಕ್ಷ-ವೇಷಕ್ಕೂ ಇಳಿದು, ವೃತ್ತಿಪರ ತಿರುಗಾಟದ ಅನುಭವಕ್ಕಾಗಿ ಮೇಳಕ್ಕೇ ಸೇರಿದಾಗ ನಾನು ಬೆರಗುಪಟ್ಟಿದ್ದೆ. ಒಮ್ಮೆ ಇವರ ಯಾವುದೋ ಪ್ರದರ್ಶನವನ್ನು ನೋಡಿದ ಕೊನೆಯಲ್ಲಿ, ನಾನು ಅಂದಿನ ಸಣ್ಣ ಅಸಮಾಧಾನವನ್ನು ಹೀಗೇ ಎಲ್ಲೋ ದಾಖಲಿಸಿದ್ದೆ. ಅದನ್ನವರು ಹಳೆತಲೆಯವರಂತಲ್ಲದೆ (ನಾನೇ ತಪ್ಪಿದ್ದಿರಬಹುದಾದರೂ) ಸಮಭಾವದಿಂದಲೇ ಸ್ವೀಕರಿಸಿದ್ದಂತೂ ನನ್ನ ಅನುಭವದಲ್ಲಿ (ಯಕ್ಷಗಾನದಲ್ಲಿ ಕೆರೆಮನೆ ಶಂಭು ಹೆಗಡೆ, ನಾಟಕರಂಗದಲ್ಲಿ ಬಿವಿ ಕಾರಂತರು ಸ್ವೀಕರಿಸಿದ್ದರು) ತೀರಾ ವಿರಳ. ನನ್ನ ಮನೆಯ ತಾಳಮದ್ದಳೆಯ ‘ವೀಳ್ಯ’ವನ್ನು ಇವರು ಕಲ್ಚಾರ್ ಜತೆಗೂಡಿ ಸ್ವೀಕರಿಸಿದ್ದಲ್ಲದೆ, ಪ್ರಸಂಗದ ಆಯ್ಕೆ, ನಡೆ ಮತ್ತು ಲಕ್ಷ್ಯಗಳ ಬಗ್ಗೆ ನನ್ನಷ್ಟೇ ಕಾಳಜಿ ವಹಿಸಿ ದಾಖಲೀಕರಣವನ್ನು ಚಂದಗಾಣಿಸಿದರು.

ನಮ್ಮ ಪ್ರದರ್ಶನಕ್ಕೆ ದೇವಿದಾಸ ಕವಿಯ ಕೃಷ್ಣಸಂಧಾನದ ಮೊದಲ ಒಂದು ತುಣುಕನ್ನು ಮಿತ್ರರು ಆರಿಸಿಕೊಂಡಿದ್ದರು. ಅದರಲ್ಲಿ ಕೃಷ್ಣನಿಗೆ ತನ್ನ ‘ಭೂಭಾರ ಇಳಿಸುವ’ ನಿರ್ಧಾರಕ್ಕೆ ಪಾಂಡವರು ‘ಯುದ್ಧ ಬೇಕು’ ಎಂದು ಸ್ಪಷ್ಟವಾಗಿ ಬಯಸುವುದು ಆವಶ್ಯಕವಿತ್ತು. ಅದಕ್ಕಾಗಿ ಧರ್ಮರಾಯನ ರಾಜೀಸೂತ್ರದ ಜಪ ಮತ್ತು ಅನುಜರೆಲ್ಲರ ಕುರುಡು ಭ್ರಾತೃನಿಷ್ಠೆ ಸಣ್ಣ ಅಡ್ಡಿಯಾಗಿತ್ತು. ಅದನ್ನು ನಿವಾರಿಸಲು ಆತ ಭೀಮನನ್ನು ಅಗ್ನಿಕನ್ನೆಯ ತಾಪಕ್ಕೊಡ್ಡಿ, ಬೇಕಾದ ಭಂಗಿಗೆ ಬಗ್ಗಿಸುವ ಸನ್ನಿವೇಶವಷ್ಟೇ – ನಮ್ಮ ಆಯ್ಕೆ. ಮೊದಲು ನಿರಾಶೆಯ ಆಳದಲ್ಲಿ ಬಿದ್ದು, ಕೊನೆಯಲ್ಲಿ ಕೆರಳಿ ಎದ್ದು ನಿಲ್ಲುವ ಭೀಮತನವನ್ನು ಕಲ್ಚಾರ್ ವಹಿಸಿಕೊಂಡರು. ಸಂಧಾನಕ್ಕೆ ಹೊರಟ ಅಣ್ಣನ (ಕೃಷ್ಣ) ಮೇಲೆ ಅತುಲ ವಿಶ್ವಾಸವಿದ್ದರೂ ಪತಿಗಳೈವರ ತೋರಿಕೆಯ ಉದಾಸಚಿತ್ತವನ್ನು ಪುಟಿದೆಬ್ಬಿಸುವ ಕಿಡಿ – ದ್ರೌಪದಿಯ ವಾಗ್ವೈಭವ, ನಡೆಸಿಕೊಟ್ಟವರು ವಾಸುದೇವ ರಂಗಾಭಟ್ಟ. ನಮ್ಮ ಕೂಟಕ್ಕೆ ಭೀಮ ದ್ರೌಪದಿಯರ ನಡುವೆ ಸಂಪರ್ಕಸೇತುವಾಗಿಯಷ್ಟೇ ತೋರುವ ಕೃಷ್ಣ ಪಾತ್ರ ಅಗತ್ಯದ್ದೇ ಆದರೂ ಸಣ್ಣ ನಿರ್ವಹಣೆಯದು. ಅದಕ್ಕೆ ಬಂದವರು ಹರೀಶ ಬೊಳಂತಿಮೊಗರು, ಇನ್ನೋರ್ವ ಯುವಕಲಾವಿದ. ಇವರು ಕೌಟುಂಬಿಕ ಬಂಧದಲ್ಲಿ ಕಲ್ಚಾರರಿಗೆ ಭಾವ, ನಮಗೂ (ಸೊಸೆ) ರಶ್ಮಿಯ ಮೂಲಕ ಬಾದರಾಯಣ ಸಂಬಂಧಿ! ಓದಿದ್ದು ಮೆಕ್ಯಾನಿಕಲ್ ಡಿಪ್ಲೊಮಾ, ನೆಲೆಸಿದ್ದು ಪಿತ್ರಾರ್ಜಿತ ಕೃಷಿಭೂಮಿ ಮತ್ತು ಪ್ರೀತಿಯಿಂದ ಬಗಲಲ್ಲಿಟ್ಟುಕೊಂಡದ್ದು ತಾಳಮದ್ದಳೆಯ ಅರ್ಥಗಾರಿಕೆ, ಹವ್ಯಾಸಿಗಳಿಗೆ ಯಕ್ಷ-ಶಿಕ್ಷಣ. ನಾನು ಹರೀಶರನ್ನು ಕೇಳಿದ್ದು ತುಂಬ ಕಡಿಮೆ. ಆದರೂ ದಿನದ ಕಲಾಪದ ನಾಂದಿ ಹಾಗೂ ಮುಕ್ತಾಯವನ್ನು ಸಮರ್ಥನೀಯವಾಗಿಸಿದವರು ಹರೀಶ ಬೊಳಂತಿಮೊಗರು.

ತಾಳಮದ್ದಲೆಯ ಅರ್ಥಗಾರಿಕೆಯ ಮಿತಿಯನ್ನು ಮೀರದೆ, ದ್ರೌಪದಿಯ ಪಂಚಪತಿತ್ವದ ಚರ್ಚಾ ಲಕ್ಷ್ಯವನ್ನು ಪರೋಕ್ಷವಾಗಿ ನಡೆಸಿದ ಕೂಟ, ಬೆಳಿಗ್ಗೆ ಸುಮಾರು ಹತ್ತು ಗಂಟೆ ಹತ್ತು ಮಿನಿಟಿನಿಂದ ಅವಿರತವಾಗಿ ಮಧ್ಯಾಹ್ನ ಒಂದೂವರೆ ಗಂಟೆಯವರೆಗೆ ನಡೆಯಿತು. ಮೊದಲೇ ಹೇಳಿದಂತೆ ನಮ್ಮ ಮನೆಯ ಮಿತಿಗಳ ಲೆಕ್ಕ ಇಟ್ಟು ನಾನು ಪ್ರೇಕ್ಷಾ ಆಮಂತ್ರಣವನ್ನು ತುಂಬಾ ಜಿಪುಣನಂತೇ ವಿತರಿಸಿದ್ದೆ. ಹಾಗೆ ಬಂದ ಸುಮಾರು ಮೂವತ್ತು ಮಂದಿಯಲ್ಲಿ ಬಹುಮುಖ್ಯರಾದವರು ಹಿರಿಯ ಕಲಾವಿದ, ವಿದ್ವಾಂಸ ಪ್ರಭಾಕರ ಜೋಶಿ. ನಾವು ಕಲಾಪದ ಎರಡೂ ತುದಿಗಳಲ್ಲಿ ಯಾವುದೇ ಔಪಚಾರಿಕತೆಗಳನ್ನು (ದೀಪೋಜ್ವಲನ, ಶುಭಾಕಾಂಕ್ಷೆ, ಅಭಿಪ್ರಾಯ ಸಂಗ್ರಹ ಇತ್ಯಾದಿ) ಇಟ್ಟುಕೊಂಡಿರಲಿಲ್ಲ. ಮತ್ತೆ ಅಂಥ ಯಾವ ನಿರೀಕ್ಷೆಗಳನ್ನೂ ಜೋಶಿಯವರು ಇಟ್ಟುಕೊಳ್ಳದೇ ಕೂಟದ ಉದ್ದಕ್ಕೂ ತನ್ಮಯರಾಗಿ ನಿಂದು, ಕೊನೆಯಲ್ಲಿ ಖಾಸಗಿಯಾಗಿಯೇ ಆದರೂ ಎಲ್ಲ ಯುವ ಕಲಾವಿದರನ್ನು, ಆಯೋಜಿಸಿದ ನಮ್ಮನ್ನೂ ಪ್ರೋತ್ಸಾಹಿಸಿದ ಪರಿ ಹೃದ್ಯವಾಗಿತ್ತು. ಪಣಂಬೂರಿನಿಂದ ಬಂದ ಸೇರಾಜೆ ಸೀತಾರಾಮ ಭಟ್ಟರು ಇನ್ನೋರ್ವ ಹಿರಿಯ ಅರ್ಥಧಾರಿ. ಅಲ್ಲದೆ ಜೋಡುಮಾರ್ಗದಿಂದ ಬಂದ ಸುಂದರರಾವ್ ದಂಪತಿ ಮತ್ತು ಹೆಬ್ಬಾರ್ ದಂಪತಿ, ವಿಟ್ಲದಿಂದ ದೇರಾಜೆ ಮೂರ್ತಿ, ಮಂಗಳೂರಿನವರೇ ಆದ ಮಂಟಪ ಮನೋಹರ ಉಪಾಧ್ಯ ದಂಪತಿ, ಕೆ.ಎಲ್ ರೆಡ್ಡಿ ದಂಪತಿ, ಲಕ್ಷ್ಮೀನಾರಾಯಣ ಭಟ್, ಮುರಳೀಧರ ಪ್ರಭು, ಮಹಿಳಾ ತಾಳಮದ್ದಳೆಗಳಲ್ಲಿ ಅರ್ಥಧಾರಿತ್ವವನ್ನು ಕೆಲವು ನಡೆಸಿದ್ದ ಬಿ.ಎಂ.ರೋಹಿಣಿ, ನಳಿನಿ, ಶ್ಯಾಮಲಾ, ಚಂದ್ರಹಾಸ ಉಳ್ಳಾಲ, ಪ್ರಭಾಕರ ಕಾಪಿಕಾಡ್, ನಮ್ಮ ಪಕ್ಕದ ಮನೆಯವರೂ ಆದ ಸೋದರಮಾವ ಗೌರೀಶಂಕರ ಅತ್ತೆ ದೇವಕಿ, ಭಾವ ಸುಬ್ರಹ್ಮಣ್ಯಂ ಪ್ರೇಕ್ಷಕರ ತಾದಾತ್ಮ್ಯ, ದಾಖಲೀಕರಣಕ್ಕೆ ಅವಶ್ಯವಾದ ಶಿಸ್ತುಗಳನ್ನು ಚಂದಕ್ಕೆ ಮೈಗೂಡಿಸಿಕೊಟ್ಟರು. ಮನೆಯವರಾಗಿಯೇ ಧರ್ಮತಡ್ಕದಿಂದ ಬಂದು ಭಾಗವಹಿಸಿದ್ದ ರಶ್ಮಿಯ ಅಮ್ಮ – ಪರಮೇಶ್ವರಿ ಮಣಿಮುಂಡ, ಮೇಲ್ಮನೆಯ ತಾಳಮದ್ದಳೆಯನ್ನೂ ಕೆಳಮನೆಯ ಮಗಳು, ಪುಳ್ಳಿಯರ ಚಾಕರಿಯನ್ನೂ ಸಮಸಮವಾಗಿಯೇ ನಡೆಸಿರಬೇಕು. ಇಂಥ ಗೃಹಕಲಾಪಗಳನ್ನು ನಡೆಸಿದಾಗ ಅತಿಥಿಗಳ ಉಪಚಾರದ ಗೋಠಾಳೆಯಲ್ಲಿ ಮನೆಯ ಗೃಹಿಣಿ ಮುಳುಗಿಯೇ ಹೋಗುತ್ತಾಳೆ. ಇದನ್ನು ನಿವಾರಿಸಲೆಂಬಂತೆ ನಾವು ಬೆಳಗ್ಗಿನ ಉಪಾಹಾರ, ಹನ್ನೊಂದು ಗಂಟೆಯ ಚಾ ಮತ್ತು ಮಧ್ಯಾಹ್ನದ ಸರಳ ಊಟವೆಲ್ಲವನ್ನೂ ವೃತ್ತಿಪರ ಅಡುಗೆಯ ಪ್ರಭಾಕರ ಭಟ್ಟರಿಂದ ತರಿಸಿಕೊಂಡಿದ್ದೆವು. ಆದರೂ ಮುಖ್ಯ ಕಲಾಪದ ಬಹ್ವಂಶಕ್ಕೆ ದೇವಕಿ ಇದ್ದೂ ಇಲ್ಲದಂಥ ಸ್ಥಿತಿ ತಪ್ಪಿಸಲಾಗಲೇ ಇಲ್ಲ.

ಅಭಯ ಇದಕ್ಕಾಗಿ ಬೆಂಗಳೂರಿನಿಂದ ಓರ್ವ ಕ್ಯಾಮರಾ ಸಹಾಯಕನೊಡನೆ ಎರಡು ಕ್ಯಾಮರಾ ತರಿಸಿಕೊಂಡಿದ್ದ. ಅವೆರಡನ್ನು ಚಲಾಯಿಸಲು ಆತನ ಆಪ್ತ ತಂತ್ರಜ್ಞರೇ ಆದ ವಿಷ್ಣು ಮತ್ತು ಲಕ್ಷ್ಮಣ್ ನಾಯಕ್ ಕುಳಿತಿದ್ದರು. ಸ್ವಂತ ಕ್ಯಾಮರಾವನ್ನು ಸ್ವತಃ ಅಭಯನೇ ಚಲಾಯಿಸಿದ. ಮೊದಲೇ ಹೇಳಿದಂತೆ ವಿಶೇಷ ದೀಪಧ್ವನಿವರ್ಧಕಗಳನ್ನು ಬಳಸದಿದ್ದರೂ ಧ್ವನಿಯ ಶುದ್ಧ ದಾಖಲೀಕರಣಕ್ಕಾಗಿ ಪ್ರತಿ ಕಲಾವಿದನಿಗೆ ಅಂಗಿಯೊಳಗೆ ಧ್ವನಿಗ್ರಾಹಿಗಳನ್ನು ಇಟ್ಟು, ಶಬ್ದಗ್ರಹಣದ ಕೆಲಸವನ್ನು ಚೊಕ್ಕಗೊಳಿಸಿದವರು ಬೆಂಗಳೂರಿನಿಂದಲೇ ಬಂದಿದ್ದ ತಂತ್ರಜ್ಞ ವೆಂಕಟೇಶ್ ಗೌಡ.

ಅಭಯ ಸದ್ಯದ ಸಿನಿಮಾ ಬಿಸಿಯಲ್ಲಿ ಸಂಚಿಯ ನಾಲ್ಕೈದು ವಿಡಿಯೋ ದಾಖಲೆಗಳನ್ನು ಸಂಸ್ಕರಿಸುವ ಕೆಲಸವನ್ನು ಅನಿರ್ದಿಷ್ಟವಾಗಿ ಮುಂದೂಡುತ್ತಲೇ ಇದ್ದಾನೆ. ಆದರೆ ಇಲ್ಲಿ ಅಪ್ಪ ಅಮ್ಮರದೇ ಆಯೋಜಿತ ಕಲಾಪ ಎನ್ನುವ ದಾಕ್ಷಿಣ್ಯಕ್ಕೆ (ನಾವು ಹೇರಿದ್ದಲ್ಲ!) ಒಳಪಟ್ಟವನಂತೆ ಪ್ರಥಮಾದ್ಯತೆಯಲ್ಲಿ ಇದರ ಸಂಸ್ಕಾರಕ್ಕಿಳಿದ. ಮೂರೂ ಕ್ಯಾಮರಾಗಳ ಮತ್ತು ಪ್ರತ್ಯೇಕ ಧ್ವನಿಗ್ರಹಣದ ಫಲಿತಾಂಶಗಳನ್ನು ಗುಣವರಿತು ಸಂಕಲಿಸುವ ಕೆಲಸವನ್ನು ನಿಜದಲ್ಲಿ ನಡೆಸುವ ಪ್ರತ್ಯೇಕ ಪರಿಣತರೇ (ಸಂಕಲನಕಾರ ಎನ್ನುವುದು ಸಿನಿಮಾಗಳಲ್ಲಿ ಹೆಸರಿಸಿ ಗೌರವಿಸುವ ಹುದ್ದೆ) ಇರುತ್ತಾರೆ. ಆದರೆ ಅಭಯ ಮುಖ್ಯವಾಗಿ ಪುಣೆಯ (ಎಫ್.ಟಿ.ಐ.ಐ) ಶಿಕ್ಷಣದ ಬಲದಲ್ಲಿ ಮತ್ತೆ ವೃತ್ತಿರಂಗದ ಅನಿವಾರ್ಯತೆಯಲ್ಲಿ ಸಿನಿಮಾದ ಸರ್ವಾಂಗೀಣ ಕಲಾಪಗಳಲ್ಲೂ ಪರಿಣತಿಯನ್ನು ಸಾಧಿಸಿದ್ದಾನೆ. ಹಾಗೆ ನಿನ್ನೆ ತನ್ನೆಲ್ಲ ಯೋಚನೆಗಳನ್ನು ಬದಿಗಿಟ್ಟು ಪಟ್ಟು ಹಿಡಿದು ಕುಳಿತು ಸುಮಾರು ಮೂರು ಗಂಟೆ ಹತ್ತೊಂಬತ್ತು ಮಿನಿಟಿನ ‘ದ್ರೌಪದೀ ಪರೀಕ್ಷೆ’ಯನ್ನು ಚೊಕ್ಕಗೊಳಿಸಿ, ಅಂತರ್ಜಾಲದ ಮೂಲಕ (ಸಂಚಿ ಜಾಲತಾಣ) ಲೋಕಾರ್ಪಣಗೊಳಿಸಿದ್ದಾನೆ. ಅದನ್ನೀಗ ನೋಡುವ ಸಂತೋಷ ನಿಮ್ಮದಾಗಲಿ.