“ದೋಣಿ ಸಾಗಲಿ ಮುಂದೆ ಹೋಗಲಿ, ೨೦೧೮ ಸೇರಲಿ…..” ಹಾಡುತ್ತ ಮೊನ್ನೆ (೩೧-೧೨-೨೦೧೭) ಮೂರು ಕಯಾಕ್ಗಳಲ್ಲಿ (ಫೈಬರ್ ಗ್ಲಾಸಿನ ಎರಡು ಪದರದ, ತೆಪ್ಪದಂಥ ದೋಣಿ) ನಾವು ಆರು ಮಂದಿ (ಪ್ರವೀಣ್, ಯಶಸ್, ಅನಿಲ್ ಶೇಟ್, ಶಿವಾನಂದ್, ದೇವಕಿ ಮತ್ತು ನಾನು) ಉಚ್ಚಿಲದ ತ್ರಿವೇಣಿ ಸಂಗಮದಲ್ಲಿ ಮನಸೋಯಿಚ್ಛೆ ವಿಹರಿಸಿ ಮರಳಿದೆವು. ಚಳಿಗಾಲದ ತೆಳು ಮಂಜು ಹರಿಯುವ ಸಮಯ ಕಾದು, ಅಂದರೆ ಸುಮಾರು ಎಂಟು ಗಂಟೆಯಿಂದ ಹನ್ನೊಂದೂವರೆಯವರೆಗೂ ಈ ‘ಸುಂದರಬನ’ದ ಮೂಲೆ ಮೊಡಕುಗಳನ್ನು ನಿಶ್ಚಿಂತೆಯಿಂದ ತೊಳಸುಗೈಗಳಲ್ಲಿ ಹುಟ್ಟು ಹಾಕುತ್ತ, ತೇಲಾಡಿ, ಒಂದಿಬ್ಬರು ಈಜಿನ ಶಾಸ್ತ್ರ ಮಾಡಿಯೂ ಸಂತೋಷಿಸಿದೆವು.
ಈಚೆಗೆ ಪಡುಗಡಲಿನಿಂದ ಎರಗಿದ ಓಖಿ ಚಂಡಮಾರುತ ಉಚ್ಚಿಲ ಬಟಪಾಡಿಯ ಈ ಕೊನೆಯ ಭೌಗೋಳಿಕ ಲಕ್ಷಣಗಳನ್ನು ಪ್ರಭಾವಿಸಿದೆ ಎಂಬ ಸುದ್ದಿ ಬರುವಾಗ ನಾನು ಮೈಸೂರಿನಲ್ಲಿದ್ದೆ. ಮೊನ್ನೆ ಬಂದವನೇ ಅತ್ತ ಸೈಕಲ್ ಸರ್ಕೀಟ್ (ಸಂ. ೩೭೦/೨೯-೧೨-೨೦೧೭, ಅಪ್ರಕಟಿತ) ಹೊಡೆದೆ. ಉಚ್ಚಿಲದ ಪಡುಕರೆಯಲ್ಲಿ, ಉಳ್ಳಾಲದತ್ತಣ ತಿರುವಿನಲ್ಲಿದ್ದ ರಿಸಾರ್ಟ್ ಒಂದರ ಮಾರ್ಗದ ಕಡಲಂಚಿನ ರಚನೆಗಳೇನು, ಮರಳರಾಶಿಯ ಮೇಲೆ ಮಣ್ಣು ಸುರುವಿ ಮಾಡಿದ್ದ ಅರೆವಾಸಿ ತಟ್ಟನ್ನೂ (ಸಮನೆಲ) ಸಮುದ್ರ ನುಂಗಿನೊಣೆದಿತ್ತು. ಅದರ ಒತ್ತಿಗಿದ್ದ ಪುಟ್ಟ ಗಟ್ಟಿ ಮನೆ – ಅಭಯ ಅವನ ‘ಪಡ್ಡಾಯಿ’ ಸಿನಿಮಾಕ್ಕೆ ದೂರದ ಅಂದಾಜು ಹಾಕಿ ಬಿಟ್ಟ ಮನೆ, ಕಳೆದ ಮಳೆಗಾಲದ ಕಡಲಕೊರೆತವನ್ನೇನೋ ಆಡಳಿತ ಯಂತ್ರ ಸಕಾಲಿಕವಾಗಿ ಹೊತ್ತು ಹಾಕಿದ ಬಂಡೆಗಳ ಮರೆಯಲ್ಲಿ ತಾಳಿಕೊಂಡಿತ್ತು. ಆದರೆ ಓಖಿ ಹೊಡೆತದಲ್ಲಿ ಪೂರ್ಣ ಮಾಯವಾಗಿತ್ತು. ಅದರ ಎದುರಂಗಳದಲ್ಲಿದ್ದ ಬಾವಿ, ಕೈತೊಳೆಯುವ ತೊಟ್ಟಿಗಳ ಭಗ್ನಾವಶೇಷ ಕರುಣಾಜನಕವಾಗಿತ್ತು. ಇತ್ತ – ಬಟಪಾಡಿ ಮಗ್ಗುಲಿನಲ್ಲಿ, ಮೂರು ವರ್ಷಗಳ ಹಿಂದಿನ ಕಡಲಕೊರೆತದಲ್ಲಿ ಪಶ್ಚಿಮದ ಅಸ್ತಿವಾರವನ್ನೇ ಕಳೆದುಕೊಂಡು ಕುಸಿದು, ಮುರಿದು, ಓರೆಯಾಗಿ ಒರಗಿದ್ದ ಒಂದೂವರೆ ಮಾಳಿಗೆಯ ಪಕ್ಕಾ ಕಾಂಕ್ರೀಟ್ ಕಟ್ಟಡ ಏನೂ ಉಳಿಯದಂತೆ ಕಡಲ ಉದರ ಸೇರಿತ್ತು. ಅವೆಲ್ಲ ಮರೆತು ನಮ್ಮ ತ್ರಿವೇಣಿ ಸಂಗಮಕ್ಕೆ ಬಂದಾಗ….
(ಗ್ರ್ಯಾಂಡ್ ಕ್ಯಾನಿಯನ್ನಿನಂಥ ವಿಡಿಯೋ. ಕೊನೆಯಲ್ಲಿ ಭ್ರಮನಿರಸನಗೊಳಿಸುವ ಸ್ಥಳೀಯ ಕೊಡುಗೆಯನ್ನು ಅವಶ್ಯ ಗಮನಿಸಿ) ಬಟಪಾಡಿ ದಾರಿಯ ಕುರುಡು ಕೊನೆಯಲ್ಲಿ ವೃತ್ತಾಕಾರದಲ್ಲಿ ಡಾಮರ್ ಎಳೆದು ವಾಹನಗಳಿಗೆ ತಿರುಗಿಸಿಕೊಳ್ಳಲು ಅನುಕೂಲ ಮಾಡಿದ್ದಾರೆ. ಅದರಿಂದಲೂ ತುಸು ಮುಂದುವರಿಯುವ ಕಚ್ಚಾ ಮಾರ್ಗ, ಬಹುಶಃ ಊರಿನ ಕಟ್ಟಡ ಮುರುಕುಗಳು, ಹಾಳಮೂಳ ಎಸೆಯುವವರೇ ಮಾಡಿಕೊಂಡಂತಿದೆ. ಅಲ್ಲಿ ಕಾಲಕಾಲಕ್ಕೆ ಬಂದು ಬೀಳುತ್ತಿದ್ದ ತೆಂಗಿನ ಬೇರಬೊಡ್ಡೆಗಳಿಂದ ತೊಡಗಿ ತರಹೇವಾರು ನಾಗರಿಕ ಉಚ್ಚಿಷ್ಟಗಳನ್ನು ಪಟ್ಟಿ ಮಾಡಿದರೆ ಅನಂತ. ಅಲ್ಲಿ ಏನೇನೋ ಸಾವಯವ ವಸ್ತುಗಳು ಕೊಳೆತ, ಯಾರೋ ‘ಕರುಣಾಳು’ ಕೊಟ್ಟ ಬೆಂಕಿಯ ಪರಿಣಾಮವಾಗಿ ಕಚಡಾ ಕರಟಿದ ವಾಸನೆಗಳೇನೋ ಎಂದಿನಂತೇ ಇತ್ತು. ಆದರೆ ಸಮುದ್ರ ಸೊಕ್ಕಿನ ಕಾಲದಲ್ಲಿ ಕಡಲಕಿನಾರೆಯ ಮರಳದಿಬ್ಬವೇ ಪೂರ್ಣ ಅಡಿಮೇಲಾಗಿ, ಮೊದಲಿಗಿಂತಲೂ ಎತ್ತರಕ್ಕೆ ಬಂದಂತಿತ್ತು.
ಹಿಂದೆಲ್ಲ ದೋಣಿಯಾಟಕ್ಕೆ ಕಾರಿನಲ್ಲಿ ಬಂದಾಗ, ದೋಣಿಗಳನ್ನು ಹೊತ್ತು ಸಂಗಮದ ನೀರಿಗೆ ನಡೆಯುವ ಜಾಡು ಕಡಿದು, ಕೊಚ್ಚೆ, ಕಾಲಿಗೆ ಗಂಟಿಕ್ಕುವ ಹುಲ್ಲು ಎಲ್ಲ ಸಿಕ್ಕಿ ತ್ರಾಸದಾಯಕವಾಗುತ್ತಿತ್ತು. ಅದಿಂದು ಹಸನಾಗಿತ್ತು. ಅಳಿವೆ (ನದಿಬಾಯಿ ಅರ್ಥಾತ್ ಸಮುದ್ರ ಸೇರುವ ಕಂಡಿ) ಸಹಜವಾಗಿ ಮುಚ್ಚಿಹೋಗಿತ್ತು. ಹಾಗೇ ಸಂಗಮದ ನೀರಂಚಿಗೂ ಹೋಗಿದ್ದೆ. ಅಲ್ಲಿ ನೆರೆಕರೆ ಮೂಲದ ಯಾರೋ ತರುಣ – ‘ದುಬೈಬಾವ’, ಬಹುಶಃ ಕ್ರಿಸ್ಮಸ್ ರಜೆಯಲ್ಲಿ ಬಂದಾತ, ತನ್ನ ಮೂರ್ನಾಲ್ಕು ಸಂಬಂಧಿಗಳೊಡನೆ ಬಾಲ್ಯದ ನೆನಪುಗಳನ್ನು ನವೀಕರಿಸುವ ಹಂಚಿಕೆ ಹಾಕಿದ್ದ; ಸಂಗಮದಲ್ಲಿ ಈಜಿನ ಮಝಾ! ಸಂಗಮದ ಅಂಚಿನ ಕೊಳೆ, ಅಲ್ಲಲ್ಲಿ ಕಾಣುತ್ತಿದ್ದ ಕಸಕೊಳಕಿನ ತೆಪ್ಪಗಳೆಲ್ಲ ಓಖಿ ಕೃಪೆಯಲ್ಲಿ ಬಹುತೇಕ ಸಮಾಧಿಯಾಗಿತ್ತು. ಅದರ ಸಾಗರ ಮಗ್ಗುಲಿನ ಓರೆಕೋರೆ ದಂಡೆಯಲ್ಲಿ ಮೊದಲೆಲ್ಲ ಕಾಲು ತೊಡರುತ್ತಿದ್ದ ಹಸಿರ ಬಳ್ಳಿ, ನಾಗರಿಕ ಕಸಗಳೆಲ್ಲ ಕಳೆದು ಶುಭ್ರ ಮರಳಿನದೂ ಹೆಚ್ಚಿನ ವಿಸ್ತಾರದ್ದೂ ಆಗಿ ಅವರನ್ನು ಮರುಳುಗೊಳಿಸಿದ್ದಿರಬೇಕು. ಸರಸ್ಸಿನ ಹೊಸಮರಳ ದಂಡೆಯ ಉದ್ದದಲ್ಲಿ ನೀರ ಇಳಿತದಿಂದುಂಟಾದ ಮರಳ ರಚನೆ, ಕಿರಿದರಲ್ಲಿ ಮಹತ್ತಾದ (ಅಮೆರಿಕಾದ) ಗ್ರ್ಯಾಂಡ್ ಕ್ಯಾನಿಯನ್ನನ್ನೇ ಹೋಲುತ್ತಿತ್ತು. ಸೈಕಲ್ಲಿನಲ್ಲಿ ಮರಳುವ ಮೊದಲು, ‘ದುಬೈಬಾವ’ನ ಬಳಗವನ್ನು ಎಚ್ಚರಿಸಲು ಮರೆಯಲಿಲ್ಲ – “ಈಜಿಗಿಳಿಯುವುದಿದ್ದರೆ ನೆನಪಿರಲಿ, ನೀರು ಕಂಡಷ್ಟು ಶುದ್ಧವಿಲ್ಲ!”
ಹಳೆ ವರ್ಷದ (೨೦೧೭) ಕೊನೆಯ ದಿನದ ದೋಣಿವಿಹಾರವನ್ನು ಉಚ್ಚಿಲ ಹೊಳೆಯ ಎಡದಂಡೆಗೆ ಹೆಚ್ಚು ಸಮೀಪವಿರುವಂತೆ ಶುರು ಮಾಡಿದ್ದೆವು. ಹುಟ್ಟು ಹಾಕುವಲ್ಲಿ ನಮ್ಮಷ್ಟೂ ಪಳಗದ ಉಳಿದೆರಡೂ ಜೋಡಿ, ಅಡ್ಡಾತಿಡ್ಡ ಅಲೆಯುತ್ತಾ ಆಗೀಗ ನೀರಿನಲ್ಲೆ ಸೊನ್ನೆ ಸುತ್ತುತ್ತಾ ಕೆಲವೊಮ್ಮೆ ಹಿಂದೆಮುಂದಕ್ಕೂ ತೊನೆಯುತ್ತಾ ಅನುಸರಿಸುತ್ತಿದ್ದದ್ದು ಎಲ್ಲರಿಗೂ ಮೋಜಿನ ಸಂಗತಿಯೇ ಆಗಿತ್ತು. ಮುಂದುವರಿದಂತೆ ಕುದ್ರುಗಳ (ನಡುಗಡ್ಡೆ) ಎಡೆಯಲ್ಲೋ ಸೇತುವೆ ಕುಂದಗಳ ಸಂದಿನಲ್ಲೋ ನುಸಿಯುವಲ್ಲೆಲ್ಲ ಇವರು ಅನುದ್ದೇಶಿತವಾಗಿ ಇನ್ನೊಂದು ದೋಣಿಗೋ ದಂಡೆಯ ಪೊದರಿಗೋ ಕಾಂಡ್ಲಾ ಬೇರಗಾಲುಗಳಿಗೋ ಟಕರಾಯಿಸುವುದಿತ್ತು. ಜಲಮಾಧ್ಯಮ ಮಾತ್ರ ಅಕ್ಷರಶಃ ನಿಂತೇ ಇದ್ದುದರಿಂದ ನಮ್ಮೆಲ್ಲ ಹರಕತ್ತುಗಳೂ ಹಗುರಕ್ಕೇ ನಡೆಯುತ್ತಿದ್ದುದರಿಂದ ಆಟವೇ ಆಗುತ್ತಿತ್ತು; ಅಪಘಾತವಲ್ಲ. ಪರಸ್ಪರ ಹುಟ್ಟುಗಳಿಂದ (ತೊಳಸುಗೈ) ಕುಟ್ಟುವುದನ್ನು ತಪ್ಪಿಸುತ್ತಿದ್ದೆವು, ಪೊದರೋ (ಬಹುತೇಕ ಮುಳ್ಳಿರುತ್ತಿರಲಿಲ್ಲ) ಬೇರುಗಾಲುಗಳನ್ನೋ ಕೈಯಲ್ಲೇ ಹಿಡಿದು ಸಂಭಾಳಿಸಿಕೊಳ್ಳುತ್ತಿದ್ದೆವು.
‘ಸ್ಯಾಂಕ್ಟಮ್’ ಮನೆಯ ದೋಣಿಗಟ್ಟೆ ಈ ಜಾಡಿನಲ್ಲಿ ತುಸು ದೊಡ್ಡದು. ಆದರೆ ಅದೂ ಸೇರಿದಂತೆ, ಒಟ್ಟಾರೆ ತೊರೆಗಿಳಿದ ಜಾಡುಗಳೆಲ್ಲ ತೀರಾ ಕಡಿಮೆ ಬಳಕೆಯಾದ ಲಕ್ಷಣ ವಿಷಾದಕರವೇ ಸರಿ. ಹಾಗೂ ಬಳಸಿದಲ್ಲಿ, ಕಾಣಿಸುತ್ತಿದ್ದ ಕಸಕುಪ್ಪೆ, ಸಮೀಪಿಸಿದಲ್ಲಿ ನಮ್ಮ ಮೂಗಿಗೆ ಅಡರುತ್ತಿದ್ದ ಗೃಹ ಕೊಳಚೆಯ ದುರ್ವಾಸನೆ ನಮ್ಮನ್ನು ದೂರ ನೂಕುತ್ತಿತ್ತು. ಮನೆಯಂಚಿನ ಇಷ್ಟು ದೊಡ್ಡ ನೀರ ಹರಹು ಯಾವುದೇ ಜಲಸಂಸ್ಕೃತಿಯನ್ನು ಊರ್ಜಿತಲ್ಲಿಡದಷ್ಟು ವಿಷಮಯವಾಗಿದೆಯೆಂದರೆ ಯಾರಿಗಾದರೂ ಸಂತೋಷವಾದೀತೇ?
ಕಾಲುಸಂಕ, ತಗ್ಗಿನಲ್ಲಿ ಅಡ್ಡ ದಾಟುವ ವಿದ್ಯುತ್ ಸರಿಗೆ, ನೀರಿನಲ್ಲೇ ಕೊಳೆಮೆತ್ತಿಕೊಂಡು ಹೆಬ್ಬಾವಿನಂತೆ ಅಡ್ಡಾದಿಡ್ಡಿ ಬಿದ್ದಿದ್ದ (ಬಹುಶಃ) ದೂರವಾಣಿ ಕೇಬಲ್, ಎರಡೆರಡು ರೈಲ್ವೇ ಸೇತುವೆಗಳನ್ನೆಲ್ಲ ನೋಡುತ್ತಾ ಹೆದ್ದಾರಿ ಸೇತುವೆಯ ಹತ್ತಿರದವರೆಗೂ ಹೋಗಿ ಹಿಂದೆ ಸರಿದೆವು. ಹೆದ್ದಾರಿ ಸೇತುವೆಯಡಿಯಲ್ಲೂ ದೋಣಿ ದಾಟಲು ಅವಕಾಶ ದೊಡ್ಡದೇ ಇದ್ದರೂ ನಾವು ಧೈರ್ಯ ಮಾಡಲಿಲ್ಲ. ಕಾರಣ, ಆಗೀಗ ದಾರಿಹೋಕ ವಾಹನಗಳಿಂದ ಕೊಳೆತ ಕಟ್ಟುಗಳು ನೀರಿಗೆ ಬೀಳುತ್ತಿದ್ದದ್ದು! ತೀರಾ ವಿರಳವಾಗಿ ಹಕ್ಕಿಗಳ ದರ್ಶನ, ಆಗಿಂದಾಗ್ಗೆ ರೈಲೋಟ, ಅವುಗಳ ಹಾರ್ನಿನ ಅಬ್ಬರ ಮಾತ್ರ ನಮಗಲ್ಲಿ ಕಾಣಿಸಿದ ಚರಚಿತ್ರಗಳು. ಉಳಿದಂತೆ, ಮೂಗಿನ ವಾಸನಾಗ್ರಹಿಕೆಯನ್ನು ಮರೆತರೆ, ಹುಟ್ಟು ಚಾಲನೆಯಲ್ಲಿ ನೀರು ನಮ್ಮ ಮೈಗೆ ಸೋಕದ ಎಚ್ಚರವಹಿಸಿದರೆ ಸಾಕು. ಸುತ್ತುವರಿದ ಕಾಂಡ್ಲಾವನದ ಹಸಿರು, ನೇಲುತ್ತಿದ್ದ ಅದರ ಜೀವಪ್ರಸಾರದ ಕೋಡುಗಳು, ಬೇರಗಾಲುಗಳ ವೈಖರಿ ಯಾರನ್ನೂ ಮರುಳುಗೊಳಿಸುತ್ತದೆ. ಹಾಗೇ ಆ ಕುದುರುಗಳ ಪ್ರಾಕೃತಿಕ ಸ್ಥಿತಿಯಲ್ಲೇ ಸಣ್ಣದಾಗಿ ನಿಲ್ಲುವುದು, ಬಳಗದೊಡನೆ ಅಲ್ಲೇ ತುಸು ನೀರಾಟವಾಡುವುದು, ಒಯ್ದ ತಿಂಡಿತೀರ್ಥ ಸವಿಯುವುದು ಸಾಧ್ಯವಿದ್ದಿದ್ದರೆ ಎಂದು ಕನವರಿಸುತ್ತ ಸಂಗಮಕ್ಕೆ ಮರಳಿದ್ದೆವು.
ಉಚ್ಚಿಲದ ತ್ರಿವೇಣೀ ಸಂಗಮದ ಕುರಿತು ಮಾತಾಡಲು ಸ್ಥಳೀಯ ಜನ ಮತ್ತು ಅವಕಾಶ ಸಿಕ್ಕಲ್ಲೆಲ್ಲ ನಾನು ಕೊರೆಯುತ್ತಲೇ ಇರುತ್ತೇನೆ. ಅದನ್ನು ಪ್ರಾಕೃತಿಕವಾಗಿ ಶುದ್ಧವಾಗಿಸಿ, ಸಾರ್ವಜನಿಕರ ಆರೋಗ್ಯಪೂರ್ಣ ಬಳಕೆಗೆ ಒದಗಿಸುವ ನನ್ನ ಮಿತಿಯ ಕನಸನ್ನು ಪ್ರಸರಿಸುತ್ತಲೇ ಇರುತ್ತೇನೆ. ಮುಖ್ಯವಾಗಿ ಸ್ಥಳೀಯ ಜನ – ತೊಡಗಬೇಕು ಸರಕಾರವಲ್ಲ, ಎಂದೂ ಮರೆಯದೆ ಒತ್ತಾಯಿಸುತ್ತೇನೆ. ಇದು ಇನ್ನೊಂದೇ ಸರಕಾರೀ ‘ಅಭಿವೃದ್ಧಿ’ ಯೋಜನೆ ಆಗದಂತೆ ನೋಡಿಕೊಳ್ಳಲು, ಹೀಗೆ ಎಚ್ಚರಿಸುವುದೂ ಇದೆ: “ಕಬ್ಬಿಣ, ಕಾಂಕ್ರೀಟ್, ಇಂಟರ್ಲಾಕ್ ಮುಂತಾದ ರಚನೆಗಳ ನಡೆಮಡಿ, ಬೇಲಿ, ಮರೆ, ನೆರಳು ಇಲ್ಲಿ ಕೂಡದು. ‘ಪರಿಸರಸ್ನೇಹೀ’ ದೀಪಸ್ತಂಭ, ‘ನನ್ನನ್ನು ಬಳಸಿ’ ಕಸತೊಟ್ಟಿ, ಅರವಟ್ಟಿಗೆ, ಕುರುಕಲು ಅಡ್ಡೆಯೇ ಮುಂತಾದ ‘ಜನಪರ’ ಎಂಬ ಪರಿಸರವಂಚನೆಯಂತೂ ಇಲ್ಲಿ ಮಾಡಲೇಬಾರದು! ಸಾವಿರದೊಂದು ‘ಮಾಡು, ಬಿಡಿ’ ಮತ್ತು ರಂಗಿನ ಆದರ್ಶಗಳ ಘೋಷಣಾಫಲಕಗಳು, ಪ್ರವೇಶಶುಲ್ಕ, ಕಾವಲಿನ ಕಟ್ಟೆ ಇತ್ಯಾದಿ ಬರಕೂಡದು. ಹೆಚ್ಚೆಂದರೆ ಸೀಟಿ, ಲಾಠಿಗಳ ಒಬ್ಬ ಸಿಗಡಿ ಹೆಕ್ಕುವವನು ಕಣ್ಗಾವಲಿನವ ಸಾಕು. ಉಳಿದಂತೆ ಪ್ರಾಕೃತಿಕ ಸ್ಥಿತಿಯೇ ಜನಮಿತಿಯನ್ನು ನಿರ್ಧರಿಸಿಕೊಳ್ಳಲು ಬಿಟ್ಟು ಬಿಡಬೇಕು!!” (“ಅಯ್ಯೋ ಅಲ್ಲಿ ಇಳಿಯಕ್ಕೊಂದು ಕಟ್ಟೆಯಿಲ್ಲ, ಕೂರಕ್ಕೊಂದು ಬೆಂಚಿಲ್ಲ, ನಡ್ಯಕ್ಕೊಂದು ಫುಟ್ಪಾಥಿಲ್ಲ, ಬಾಯಾರಿದರೆ ಸಿಹಿನೀರಿಲ್ಲ, ಟೈಮ್ಪಾಸಿಗೆ ಚರ್ಮುರಿ ಕುರ್ಕುರೆ ಸಿಕ್ಕರೆಷ್ಟು ಮಝಾ, ಡ್ರೆಸ್ ಛೇಂಜ್ ಮಾಡಕ್ಕೆ ಕ್ಯಾಬಿನ್ನಿಲ್ಲ, ಮಳೆ ಬಂದರೆ ಮಾಡಿಲ್ಲ, ಕತ್ತಲಾದರೆ ದೀಪವಿಲ್ಲ….” ಎಂದು ಅನಂತ ಕೊರಗಿನ ಪಟ್ಟಿ ಬೆಳೆಸುವವರಿಗೆ, ದೃಢವಾಗಿ ಹೇಳುವವರು ಬೇಕು “ಅಲ್ಲಿನ ನಿಸರ್ಗ ನಿಯಮ ಒಗ್ಗಿಸಿಕೊಳ್ಳಲಾಗದವರು ಅಲ್ಲಿಗೆ ಹೋಗುವುದೇ ಬೇಡ; ಮನೆಯಿಂದ ಹೊರಗೂ ಮನೆಯ ಯಾಕೆ ಬೇಕು?!” Home away from Home?)
ತಲಪಾಡಿ ಹೊಳೆಯಲ್ಲೂ ರೈಲ್ವೆಸಂಕ ದಾಟಿ, ಹೆದ್ದಾರಿಯ ಸೇತಿಗೆ ಸಮೀಪದಲ್ಲಿ ಸಲಾಂ ಕೊಟ್ಟು ಮರಳಿದೆವು. ಈ (ನೀರ) ಜಾಡಿನಲ್ಲಿ ಕೆಲಬಲಗಳಲ್ಲಿ ತೆಂಗಿನ ಕೃಷಿ ಜಾಸ್ತಿ. ಆದರೂ ನೀರಿನ ಅಂಚುಗಳೂ ಸೇರಿದಂತೆ ತೇಲು ಕೊಳೆ ಕಡಿಮೆ ಇತ್ತು. ಇದಕ್ಕೆ ಮುಖ್ಯ ಕಾರಣ ಮರಳು ಸಂಗ್ರಹದ ದೋಣಿಗಳ ಸಂಚಾರ. ನಮಗೆದುರಾಗಿಯೇ ಜಲ್ಲೆ ಹಾಕುವ ಮೂರು ದೊಡ್ಡ ನಾಡದೋಣಿಗಳು, ಜನ ಸಿಕ್ಕಿದ್ದರು. ಇವು ಇಲ್ಲಿ ದಿನಕ್ಕೆ ನೂರೆಂಟು ಸಲ ಮೇಲೆ ಕೆಳಗೆ ಓಡಾಡುತ್ತವೆ.
ತಮಾಷೆ ಎಂದರೆ ಇಲ್ಲಿ ಮರಳು ಕಡಲ ಕಿನಾರೆಯದ್ದು; ನೀರಿನಾಳದ್ದಲ್ಲ! ಇಲ್ಲಿಗೆ ಕಸ ಕೊಳೆ ಬರುವುದು ಕಡಿಮೆ ಅಥವಾ ದೋಣಿಯವರು ‘ಸ್ವಚ್ಛ ಭಾರತ್’ ನಡೆಸಿರಬಹುದೇ ಎಂದು ಭ್ರಮಿಸಬೇಡಿ. ದೋಣಿ ಸಂಚಾರದ ಕಲಕುವಿಕೆ, ತೋರಿಕೆಯ ಕಸವನ್ನು ನೀರ ತಳಕ್ಕೆ ತಳ್ಳಿರಬೇಕು. ಅಲ್ಲೇ ಒಬ್ಬ ಬಡಪಾಯಿ ಬಗಲಲ್ಲೊಂದು ಬಲೆ ಕಟ್ಟಿಕೊಂಡು ಸಿಗಡಿ (ಮರುವಾಯಿ) ಸಂಗ್ರಹಕ್ಕೆ ಮುಳುಗೇಳುತ್ತಿದ್ದ. ಆತನ ಸಂಗ್ರಹಕ್ಕೆ ಮರಳುಗಾರರ ಬಾಧೆಯಿಲ್ಲವಂತೆ; ಮುಳುಗಿದ ಕೊಳಚೆಯದ್ದು ಮಾತ್ರ. ವಾಸ್ತವದಲ್ಲಿ ಇಲ್ಲಿ ಮರಳುಗಾರರು ನದಿನೀರನ್ನು ಕೇವಲ ಸಾಗಣೆಗಷ್ಟೇ ಬಳಸುತ್ತಾರೆ. ಅವರ ಮರಳು ಸಂಗ್ರಹವೇನಿದ್ದರೂ ಕಡಲ ಕಿನಾರೆಯದ್ದೇ! ನನಗೆ ತಿಳಿದಂತೆ ಇದು ಎರಡುಪಟ್ಟು ಅನ್ಯಾಯ. ೧. ಕಡಲಕಿನಾರೆ ರಕ್ಷಣಾ ಕಾನೂನು ಉಲ್ಲಂಘನೆ ಮತ್ತು ೨. ಕಟ್ಟಡಗಳ ಬಳಕೆಗೆ ಅಯೋಗ್ಯ ಉಪ್ಪು-ಮರಳು ಪೂರೈಕೆ! ದೊಡ್ಡ ನದಿ ಮತ್ತು ದಾರಿಗಳ ಮರಳು ಸಂಗ್ರಹ ಮತ್ತು ಸಾಗಣೆಯ ಗದ್ದಲವೇ ಮುಗಿಯದಷ್ಟಿದೆ. ಇನ್ನು ಈ ಕಾಂಡ್ಲವನದ ಅಗಮ್ಯ ನೆಲದಲ್ಲಿ, ಲೋಕ ಕಾಣದವರ ಹೆಡ್ಡು ಮಾತಿನಂತೆ ‘ಎಂದೂ ಮುಗಿಯದ’ ಸಮುದ್ರದಂಡೆಯ ಮರಳಿನ ಸಂಗ್ರಹದಲ್ಲಿ ನ್ಯಾಯಾನ್ಯಾಯ ನಿರ್ಧರಿಸುವವರು ಯಾರು?
ಇಂದು ಮುಂಬೈವಾಸೀ ಶ್ಯಾಮಲಾ ಮಾಧವ, ಮೂಲತಃ ಇದೇ ಉಚ್ಚಿಲದವರು. ನಾವಿಲ್ಲಿ ದೋಣಿ ವಿಹಾರ ನಡೆಸಿದಾಗೆಲ್ಲ, ಇಲ್ಲೆಲ್ಲೋ ದಂಡೆಯಲ್ಲಿರುವ ತಮ್ಮ ಗುಡ್ಡೇಮನೆಯ ನೆನಪುಗಳನ್ನು ಆಕೆ ಮೆಲುಕು ಹಾಕುವುದಿರುತ್ತದೆ. ಆ ಯೋಚನೆಯಲ್ಲಿದ್ದವನಿಗೆ ಇಲ್ಲೊಂದು ಹಳೆಗಾಲದ ಸಾಕಷ್ಟು ದೊಡ್ಡ ಮನೆ ಹಾಳುಸುರಿದಿರುವುದು ಕಾಣಿಸಿತ್ತು. ಇದರ ಇತಿವೃತ್ತ ತಿಳಿದಿದ್ದರೆ ಶ್ಯಾಮಲಾರೇ ಹೇಳಿಯಾರು ಎಂದು ಕಾದಿದ್ದೇನೆ.
ಹಿಂದೆಲ್ಲಾ ಹೆಸರಿಸುವಲ್ಲಿ ಮಾತ್ರ ಕುಂಜತ್ತೂರು ಹೊಳೆಯನ್ನು ತ್ರಿವೇಣಿ ಸಂಗಮದ ಅಂಗ ಎನ್ನುತ್ತಿದ್ದೆ. ಆದರೆ ಈಗ ಓಖಿಯ ಪರಿಣಾಮವಿರಬೇಕು, ತಲಪಾಡಿ ಹೊಳೆಯಲ್ಲಿ ಮರಳುವಾಗ ನೀರಿನ ವಿಸ್ತಾರ ಕವಲೊಂದು ದಕ್ಷಿಣಕ್ಕೆ, ಅಂದರೆ ಕುಂಜತ್ತೂರು ಬದಿಗೆ ಹರಡಿರುವುದು ನಮ್ಮನ್ನು ಆಕರ್ಷಿಸಿತ್ತು. ನಮ್ಮ ಸರೋವರದ ಸಮಗ್ರ ದರ್ಶನಕ್ಕೆ ಕೊರತೆ ಬಾರದಂತೆ, ಸವಾರಿ ಸ್ವಲ್ಪ ಅತ್ತವೂ ಹೊರಳಿತ್ತು. ಆದರೆ ಆ ದಂಡೆಗಳು ಪೇಲವವಾಗಿದ್ದುದರಿಂದ ಮುಂದುವರಿಯದೆ, ತೇಲುತ್ತ ತುಸು ವಿರಮಿಸಿದ್ದೆವು. ಚಳಿಗಾಲದ ಬಿಸಿಲಾದ್ದರಿಂದ ಶಿವಾನಂದ್ ಹೆಚ್ಚು ತ್ರಾಸವಿಲ್ಲದೇ ಸಣ್ಣ ನಿದ್ರೆಯನ್ನೇ ತೆಗೆದರು. ಆದರೆ ಕಡಲೀಜಿನ ಪ್ರವೀಣ – ಪ್ರವೀಣ್, ಈಜು ತುಡಿತ ತಾಳಲಾರದೆ, ನೀರ ಕೊಳೆಯನ್ನು ಉಪೇಕ್ಷಿಸಿದರು. ಅವರು ಬನಿಯನ್ ಕಳಚಿ ನೀರಿಗಿಳಿದದ್ದೇನೋ ನಿಜ, ಈಜಿದ್ದು ಮಾತ್ರ ನಾಸ್ತಿ. ಒಟ್ಟಾರೆ ತ್ರಿವೇಣಿ ಸಂಗಮ ವಲಯದಲ್ಲಿ ಆಳ ತುಂಬ ಕಡಿಮೆ ಎಂದು ನಾನು ಕಂದುಕೊಂಡದ್ದನ್ನು ಪ್ರವೀಣ್ ಅನುಮೋದಿಸಿದರು. ಅವರು ಆಚೀಚೆ ನಾಲ್ಕು ಬ್ಯಾಕ್ ಸ್ಟ್ರೋಕ್ ಹಾಕಿ, ಮತ್ತೊಂದಷ್ಟು ಹೊತ್ತು ಸುಮ್ಮನೆ ಕೈಕಾಲು ಬಿಸಾಡಿ, ನೀರ ಮೇಲೆ ಶವಾಸನ ಹಾಕಿದ್ದರು! ಇಷ್ಟಾಗುವಾಗ ಈಜು ಬಾರದಿದ್ದ ಅನಿಲ್ ಶೇಟ್ಗೂ ನೀರಿನ ಆಕರ್ಷಣೆ ಕಾಡಿರಬೇಕು. ಅವರೂ ಕೊಳಕ್ಕಿಳಿದು ಪುನೀತರಾದರು.
ನನ್ನ ಈಚಿನ ಕಪ್ಪೆ ಶಿಬಿರದ ಕಥನ ಓದಿದವರಿಗೆಲ್ಲ ಯಶಸ್ – ವೃತ್ತಿಯಲ್ಲಿ ಪಶುವೈದ್ಯ, ಆಸಕ್ತಿಯಲ್ಲಿ ಜೀವವೈವಿಧ್ಯಪ್ರೇಮಿ ಎಂದು ತಿಳಿದೇ ಇದೆ. (ಮೇಲೆ: ಇಲ್ಲೇ ಯಶಸ್ ಚಿತ್ರೀಕರಿಸಿದ ಜೆಲ್ಲಿಫಿಶ್ ವಿಡಿಯೋ ನೋಡಿ) ತಲಪಾಡಿ ಹೊಳೆ ದಂಡೆಯ ಒಂದು ಮರಳಡ್ಡೆಯ ಅಂಚಿನ ನೀರ ತಳದಲ್ಲಿ ನಾವು ಕೆಲವು ಸತ್ತ ನೀರೊಳ್ಳೆಯಂಥ ಹಾವುಗಳನ್ನು ಕಂಡಿದ್ದೆವು. ಯಶಸ್ ತುಸು ತನಿಖೆ ಮಾಡಿ ಅವು ನೀರೊಳ್ಳೆಯಲ್ಲ – dog faced water snake ಅರ್ಥಾತ್ ನಾಯಿಮುಖದ ಹಾವು, ಕಡಲ ಹಿನ್ನೀರು, ಜವುಗು ಪ್ರದೇಶಗಳ ಸಹಜ ಪ್ರಜೆ ಎಂದೇ ಗುರುತಿಸಿದರು. ಅವು ಸುಮಾರು ಐದಿದ್ದರೆ, ಮೇಲೊಂದು ಸತ್ತ ಹೆಬ್ಬಾವನ್ನೂ ಗಮನಿಸಿ, ಹೆಚ್ಚಿನ ಕುತೂಹಲ ತಾಳಿದರು. ಅಲ್ಲೇ ದಂಡೆಯಲ್ಲಿದ್ದ ಮರಳುಗಾರರ ಮನೆಯಾಕೆ, ಅವೆಲ್ಲ ಮೀನುಗಾರಿಕೆಯ ಬಲೆಗೆ ಸಿಕ್ಕಿ ಸತ್ತವು ಎಂದೇನೋ ವಿವರಣೆ ಕೊಟ್ಟಳು. ಆದರೆ ದೋಣಿಯ ಹುಟ್ಟಿನ ಸಹಾಯದಲ್ಲೇ ಒಂದೆರಡು ಮಾದರಿಯನ್ನು ಎತ್ತಿದ ಯಶಸ್, ಪರಿಣತ ಪಶುವೈದ್ಯನ ನೆಲೆಯಲ್ಲಿ ಹೆಚ್ಚಿನ ಮಾಹಿತಿಯನ್ನೂ ನಮಗೊದಗಿಸಿದರು. ಅವು ಹೊಡಿ, ಬಡಿಯ ಸಾವೂ ಇದ್ದಂತಿಲ್ಲ! ಮತ್ತೆ ನೆಲವಾಸಿಯಾದ ಹೆಬ್ಬಾವು ಮೀನುಗಾರಿಕೆಯ ಬಲೆಗೆ ಸಿಲುಕಿಕೊಳ್ಳುವುದಾದರೂ ಹೇಗೆ?
ನಮ್ಮ ಸಂದೇಹದ ಮಾತುಗಳು ಗಂಟಲಲ್ಲೇ ಉಳಿದುಹೋಯ್ತು. ಅಳಿವೆ ಬಂದಾದ ಕಾರಣದಲ್ಲಿ, ನೀರಿನ ಲವಣಾಂಶ ಹೆಚ್ಚಿದ್ದಕ್ಕೋ ಕೊಳಚೆಯಲ್ಲಿ ಬಂದ ವಿಷದ ಪರಿಣಾಮವೋ ಇರಬಹುದೇ ಎಂಬ ಆತಂಕವೂ ಸೇರಿಕೊಂಡಿತು. ಸಂಗಮದ ಒಳ್ಳೆಯ ಬಿಸಿಲು ಬೀಳುವ ದಂಡೆಗಳಲ್ಲಿ ಕೆಲವೆಡೆಗಳಲ್ಲಿ, ಹಚ್ಚ ಹಸುರಿನ ದೊಡ್ಡ ಪೊದರಿನಂಥ ಸಸ್ಯವೊಂದು ನಮ್ಮನ್ನು ಬಹಳವಾಗಿ ಆಕರ್ಷಿಸುತ್ತಿತ್ತು. ಅದರ ಎಲೆಗಳ ಸಮೃದ್ಧಿ, ನಂದಿಬಟ್ಟಲಿನಂಥ ಬಿಳಿಯ ಹೂಗಳು ಸುಂದರವಾಗಿಯೇ ಇತ್ತು. ಇನ್ನೂ ಹೆಚ್ಚಿಗೆ ಕುತೂಹಲ ಮೂಡಿಸಿದ್ದು ಅದರ ಕಾಯಿಗಳು. ದೂರ ನೋಟಕ್ಕೆ ಒಳ್ಳೆಯ ಕಾಡುಮಾವಿನ ಕಾಯಿಗಳದೇ ಗಾತ್ರ, ರೂಪ ಮತ್ತು ಗೊಂಚಲು. ಒಂದೆಡೆ ದಂಡೆಯಲ್ಲಿದ್ದ ಸ್ಥಳೀಯನಲ್ಲಿ ವಿಚಾರಿಸಿಯೂ ನೋಡಿದೆವು. ಅದು ಮನುಷ್ಯ ಬಳಕೆಗೆ ವಿಷ ಎಂದಷ್ಟೇ ಆತ ತಿಳಿಸಿದನಾದರೂ ನಮಗೆ ಮಾಹಿತಿ ಸಾಕಾಗಲಿಲ್ಲ. ಹಾಗಾಗಿ ನೀರಿಗೆ ಚಾಚಿಕೊಂಡಿದ್ದ ಪುಟ್ಟ ಗೆಲ್ಲಿನ ಕುಡಿಯನ್ನು – ಎಲೆ, ಹೂ, ಕಾಯಿಗಳ ಸಮೇತ ಮುರಿದಿಟ್ಟುಕೊಂಡೆವು. ಮಂಗಳೂರಿಗೆ ಮರಳಿದ ಮೇಲೆ ನಮ್ಮ ಆತ್ಮೀಯರೂ ಸಂತ ಏಗ್ನೆಸ್ ಕಾಲೇಜಿನ ನಿವೃತ್ತ ಸಸ್ಯಶಾಸ್ತ್ರಜ್ಞೆಯೂ ಆದ ಉಷಾ ನಳಿನಿಯವರಿಗೆ ಈ ಮಾದರಿಯನ್ನು ಮುಟ್ಟಿಸಿದೆವು. ಅವರು ಆ ಕ್ಷಣಕ್ಕೆ ‘ಸೆರೆಬ್ರಾ’ ಎಂದು ಅದನ್ನು ಸರಿಯಾಗಿಯೇ ಗುರುತಿಸಿದರು. ಮುಂದುವರಿದು ಆಕರ ಗ್ರಂಥದ ಸಹಾಯದಿಂದ ಅನ್ಯ ವಿವರಗಳನ್ನು ಕೊಡಲು ತಯಾರಿದ್ದರೂ ನಮಗೆ ನಿಂತು ಕೇಳಿಸಿಕೊಳ್ಳುವ ಬಿಡುವಿರಲಿಲ್ಲ. ಹಾಗೆಂದು ಮನೆಗೆ ಬಂದಮೇಲೆ, ಉಷಾನಳಿನಿ ಕೊಟ್ಟ ‘ನಾಮದ ಬಲ’ದಲ್ಲಿ ಜಾಲಾಡಿದಾಗ, ತುಸು ಭಯವೇ ಆಯ್ತು. ಸೆರೆಬ್ರಾಕ್ಕೆ ಪರ್ಯಾಯ ಹೆಸರೇ ‘ಆತ್ಮಹತ್ಯಾ’ ಗಿಡ! (ಅದರ ಕುರಿತ ಹೆಚ್ಚಿನ ವಿವರಗಳನ್ನು ಆಸಕ್ತರು ಇಲ್ಲಿ ಓದಿಕೊಳ್ಳಬಹುದು: A surprising tropical plant : Cerberaodollam / Suicide Tree) ಒಂದು ಲೆಕ್ಕದಲ್ಲಿ, ಈ ಗಿಡ ಜನೋಪಯೋಗಿಯಾಗದಿರುವುದೂ ತ್ರಿವೇಣಿ ಸಂಗಮದ ಪ್ರಾಕೃತಿಕ ಸಂರಕ್ಷಣೆಗೆ ವರವೇ ಸರಿ. ಸೆರೆಬ್ರಾದ ಮನುಷ್ಯೋಪಯೋಗಕ್ಕೆ ಮಾತ್ರ ವಿಷವಾಗುವ ಗುಣ ಪ್ರಕೃತಿ ದತ್ತವಾದದ್ದು. ಅಂದರೆ ಅದನ್ನು ಅವಲಂಬಿಸಿ ಜೀವಜಾಲದಲ್ಲಿ ಇನ್ನೇನೋ ಸುಸಾಂಗತ್ಯ ಇದ್ದೇ ಇರುತ್ತದೆ. ಆದರೆ ಮನುಷ್ಯಕೃತ ಕೊಳಚೆಯದು?
ಸಂಗಮದ ಹಳೆಯ ಸಮುದ್ರ ಬದಿಯ ದಂಡೆ ಶ್ರೀಕೃಷ್ಣನ ಕತೆಯಲ್ಲಿ ನಂದಗೋಕುಲದ ಜನಜಾನುವಾರುಗಳ ನಿತ್ಯೋಪಯೋಗೀ ಮಡುವೊಂದರಲ್ಲಿ ಭಾರೀ ಕಾಳಿಂಗಸರ್ಪ ನೆಲೆಸಿದ್ದು ತಿಳಿದಿದ್ದೇವೆ. ಅದರ ಪರಿಣಾಮವಾಗಿ ಆ ಮಡುವೂ ವಿಷಮಯವಾಗಿ, ‘ಕಾಳಿಂದೀ ಮಡು’ವೆಂದೇ ಕುಖ್ಯಾತವಾದ್ದೂ, ಕೃಷ್ಣ ಕಾಳಿಂಗಮರ್ದನನಾದ್ದೂ ನಾನೇನು ಹೊಸದಾಗಿ ಹೇಳಬೇಕಿಲ್ಲ. ಹಾಗೇ ನಮ್ಮ ಸುಂದರ ತ್ರಿವೇಣಿ ಸಂಗಮದ ನೀರು ಮನುಷ್ಯ ವಿಕಲ್ಪದಿಂದ ಕಾಳಿಂದೀ ಮಡುವಾಗಿದೆ, ವಿಷಮಯವಾಗಿದೆ. ಇನ್ನೂ ಮುಖ್ಯವಾಗಿ ಇದು (ಸೆರೆಬ್ರಾದಂತೆ) ಯಾವುದೇ ಜೀವಜಾಲದ ಪೋಷಣೆಗೆ ಸಹಕಾರಿಯೂ ಅಲ್ಲ. ಊರ ಮಹನೀಯರು ಸಮಾನಮನಸ್ಕರ ಕೂಟ ಕಟ್ಟಿ ತುರ್ತಾಗಿ ಕಾಳಿಂಗಮರ್ದನ ನಡೆಸಬೇಕು. ಇಲ್ಲವಾದರೆ ಹೀಗೇ ಹೆಚ್ಚೆಚ್ಚು ನಿರುಪಯೋಗಿಯಾಗಿ, ವಿಷಮಯವಾಗಿ ಕಾಲಾಂತರದಲ್ಲಿ ಹೂಳು ಹೆಚ್ಚಿ ತಾನಳಿಯುವುದರೊಡನೆ ಪರಿಸರ ನೆಚ್ಚಿದ ಎಲ್ಲವನ್ನೂ ಅಳಿಸಿಯೇ ಬಿಡುವುದು ನಿಶ್ಚಯ!