(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)
(ಭಾಗ ೧೯)

– ಬಾಗಲೋಡಿ ದೇವರಾವ್

[ಇದು ಜಾನ್ ಗುಂಥರ್ ಎಂಬ ಜಗದ್ವಿಖ್ಯಾತ ಗ್ರಂಥಕರ್ತನ ಇನ್ಸೈಡ್ ಯು.ಎಸ್.ಎ ಎಂಬ ಗ್ರಂಥದಿಂದ ಸಂಗೃಹೀತವಾದುದು. ಈತ ಇನ್ಸೈಡ್ ಯುರೋಪ್, ಇನ್ಸೈಡ್ ಏಷ್ಯಾ, ಇನ್ಸೈಡ್ ಲ್ಯಾಟಿನ್ ಅಮೆರಿಕಾ ಮೊದಲಾದ ಪುಸ್ತಕಗಳನ್ನೂ ಬರೆದಿದ್ದಾನೆ. ಸತ್ಯಸ್ಥಿತಿಯನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆ ಎಳೆಯುವುದು ಈತನ ವೈಶಿಷ್ಟ್ಯ.

ಇದರೊಡನೆ ಅಮೆರಿಕ ದೇಶದ ನೀಗ್ರೋ ಸಂಘದ ಕಾರ್ಯದರ್ಶಿಯೂ ಶ್ರೇಷ್ಠ ಪತ್ರಿಕಾ ವ್ಯವಸಾಯಿಯೂ ಆದ ವಾಲ್ಟನ್ ವೈಟ್ ಮಹಾಶಯನ ಇನ್ವೆಸ್ಟಿಗೇಟ್ ಲಿಂಚಿಂಗ್ಸ್ ಎಂಬ ವರದಿಯಿಂದಲೂ ರಿಚರ್ಡ್ ರೈಟ್ ಎಂಬ ನೀಗ್ರೋ ಲೇಖಕನ ದಿ ಎಥಿಕ್ಸ್ ಆಫ್ ಲಿವಿಂಗ್ ಜಿಮ್ ಕ್ರೊ ಎಂಬ ಆತ್ಮಕಥೆಯ ಪ್ರಸಂಗಗಳಿಂದಲೂ ವಸ್ತುವನ್ನು ಸಂಗ್ರಹಿಸಿದೆ – ಲೇಖಕ]

ಈಗ ಮುಂದೆ ವಿವರಿಸುವ ನೀಗ್ರೋ ಜನರ ದುಃಖ ಪರಂಪರೆ ಚಾರಿತ್ರಿಕವಲ್ಲ. ಪ್ರಾಚೀನಕಾಲದ ಗತಪುರಾಣವಲ್ಲ. ಇದೇ ೨೦ನೆಯ ಶತಮಾನದ ಪ್ರಜಾಪ್ರಭುತ್ವದ ಯುಗದಲ್ಲಿ ಸ್ವಾತಂತ್ರ್ಯದ ನಾಡೆಂದು ಹೆಸರು ಪಡೆದ ಅಮೆರಿಕದಲ್ಲಿ ಜರಗುತ್ತಿರುವ ಭೀಕರ ಕೃತ್ಯಗಳ ಮತ್ತು ಅನ್ಯಾಯದ ‘ವರದಿ’. ಈ ‘ದೇವರ ಮಕ್ಕಳಾದ’ ನೀಗ್ರೋ ಜನತೆ ಹಿಂದಿನ ಕಾಲದಲ್ಲಿ ಅನುಭವಿಸಿದ ಯಾತನೆಯ ಇತಿಹಾಸ ಒಂದು ಕ್ರೂರ ರಾಮಾಯಣದಂತಿದೆ. ಕಣ್ಣೀರಿನ ಕತೆಯೆಂದೇ ಅನ್ನಬಹುದು. ಆಫ್ರಿಕ ದೇಶದಲ್ಲಿ ಸ್ವತಂತ್ರವಾಗಿ ಸಚ್ಛಂದವಾಗಿ ತಮ್ಮ ತಮ್ಮ ಗ್ರಾಮ ಗ್ರಾಮಾಂತರಗಳಲ್ಲಿ (ಕ್ರಾಲ್ ಎಂದು ಇವಕ್ಕೆ ಹೆಸರು) ತಮ್ಮ ತಮ್ಮ ದೇವ ದೇವತೆಗಳನ್ನು ಪೂಜಿಸುತ್ತ ಕೃಷಿ ಮಾಡಿ, ಬೇಟೆಯಾಡಿ ಹೊಟ್ಟೆ ಹೊರೆಯುತ್ತ ನೃತ್ಯ, ಪೂಜೆ ಮೊದಲಾದ ಸಮಾರಂಭಗಳಲ್ಲಿ ನಲಿಯುತ್ತಿದ್ದ ನೂರಾರು ಜನಾಂಗಗಳನ್ನು ಬಿಳೀ ಜನರೂ ಅರಬ್ಬೀ ಜನರೂ ಹೆಡೆಮುರಿಕಟ್ಟಿ ಸೆಳೆದು ತಂದು ತಮ್ಮ ‘ಮೃತ್ಯು ನೌಕೆ’ (death ship) ಎಂದು ಸುಪ್ರಸಿದ್ಧವಾದ ಹಡಗುಗಳಲ್ಲಿ ತುಂಬಿ ಅಮೆರಿಕ ದೇಶಕ್ಕೆ ಕೊಂಡು ಹೋಗಿ ದನ, ಕರು ಜಾನುವಾರುಗಳಂತೆ ಅಲ್ಲ – ಕಲ್ಲು ಮಣ್ಣಿನಂತೆ ಮಾರಿದುದು ಒಂದು ಅಮಾನುಷತೆಯ ಪುರಾಣ. ಆ ಮೃತ್ಯು ನೌಕೆಗಳಲ್ಲಿ ಗೋಣಿಗಳನ್ನು ತುಂಬುವಂತೆ ಈ ಬಡಪ್ರಾಣಿಗಳನ್ನು ತುಂಬಿದುದರಿಂದ ಎಷ್ಟೋ ಮಂದಿಗೆ ಮರಣಯಾತ್ರೆಯಾದುದೂ ಅಮೆರಿಕಕ್ಕೆ ಬಂದ ಮೇಲೆ, ತಾಯಿ ಮಗುವಿನಿಂದ ಗಂಡ ಹೆಂಡತಿಯಿಂದ ಅಕ್ಕ ತಮ್ಮನಿಂದ ಕ್ರೂರವಾಗಿ ದೂರಮಾಡಲ್ಪಟ್ಟು ಯಾರು ಯಾರಿಗೋ ಎಲ್ಲಿ ಎಲ್ಲಿಯೋ ವಿಕ್ರೀತರಾಗಿ ಗುಲಾಮಗಿರಿಯಲ್ಲಿ ಬಿಳಿಯವರ ಗಾಣದ ಎತ್ತುಗಳಾಗಿ – ಅವರ ಸಜೀವ ಸೊತ್ತುಗಳಾಗಿ ಹತ್ತಿಯ ತೋಟಗಳಲ್ಲಿ, ಗದ್ದೆಗಳಲ್ಲಿ ಖಡ್ಗಮೃಗದ ತೊಗಲ ಚಾವಟಿಯಿಂದ ಹೊಡೆತ ತಿನ್ನುತ್ತ, ಹಿಂಸೆಯನ್ನು ಸಹಿಸುತ್ತ ನರಕ ಜೀವನವೆಂಬಂತೆ ಆಯುಷ್ಯ ಕಳೆದುದೂ ಇನ್ನೊಂದು ರಕ್ತ ಸಿಂಚಿತ ಪುರಾಣ. ಈಗ ಮುಂದೆ ಬರುವುದು ಈ ಜನಗಳು ಈ ಪ್ರಜಾಪ್ರಭುತ್ವದ ೨೦ನೆಯ ಶತಮಾನದಲ್ಲಿ ಸ್ವಾತಂತ್ರ್ಯದ ನೆಲೆವೀಡೆನಿಸಿರುವ ಅಮೆರಿಕದಲ್ಲಿ ಪಡುತ್ತಿರುವ ದುರವಸ್ಥೆಯ ವರ್ಣನೆ.

“ಸ್ವಾತಂತ್ರ್ಯದ ನಾಡು, ಸಾಹಸಿಗಳ ಬೀಡು, ಆದ ಈ ಸ್ವರ್ಣಭೂಮಿಯಲ್ಲಿ ಕರಿಯನಾಗಿರುವುದು ಮಾತ್ರ ತುಸು ಅನಿಷ್ಟ” ಎಂದು ರಡ್‍ಯಾರ್ಡ್ ಕಿಪ್ಲಿಂಗ್ ಚುಚ್ಚು ಮಾತು ಅಂದಿದ್ದಾನೆ.

[ಚಿತ್ರ: ಜಾನ್ ಗುಂಥರ್] ಮೊನ್ನೆ ಮೊನ್ನೆ (೧೯೪೫) ತಾನೆ ‘ಸ್ವಾತಂತ್ರ್ಯಕ್ಕಾಗಿ ಮತ್ತು ಪ್ರಜಾಪ್ರಭುತ್ವಕ್ಕಾಗಿ’ ಹೂಡಿದ ಯುದ್ಧ ಮುಗಿಯಿತಷ್ಟೆ. ಎಷ್ಟೋ ಜನ ನೀಗ್ರೋ ಯುವಕರೂ ಸೈನಿಕರಾಗಿ, ಇಪೊಜಿಮಾ, ಪ್ಯಾಸಿಫಿಕ್ ಯುದ್ಧ ರಂಗಗಳಲ್ಲಿ, ರಕ್ತ ಹರಿಸಿ, ಜೀವವನ್ನು ಮೃತ್ಯುವಿನೆದುರಿಗೆ ಇರಿಸಿ, ಪ್ರಾಣವನ್ನು ಹೊಣೆಯಾಗಿರಿಸಿ, ಅಮೆರಿಕನ್ ಬಿಳಿಯರ ಒಡನೆಯೇ ಜಪಾನದದೆದುರು ಕಾದಿ, ಕೀರ್ತಿಪಡೆದಿದ್ದಾರೆ. ‘ಅಟ್ಲಾಂಟಿಕ್ ಚಾರ್ಟರ್’ ಮತ್ತು ಪ್ರಜಾಪ್ರಭುತ್ವವನ್ನು ರಕ್ತದ ಧಾರೆಯೆರೆದು ಕಾಪಾಡಿದ್ದಾರೆ. ಕೆಲವರು ಯುದ್ಧ ಮುಗಿದು, ಅಮೆರಿಕಕ್ಕೆ ಮರಳಿದರು. ಅವರಲ್ಲಿ ಒಬ್ಬನು ಅಂದನಂತೆ, “ನಮ್ಮ ಸ್ವಾತಂತ್ರ್ಯದ ಯುದ್ಧ ನಮ್ಮ ಮನೆ ಸೇರಿದನಂತರವೇ ಮೊದಲಾಗುತ್ತದೆ” ಎಂದು. ಈ ಮಾತು ಎಷ್ಟು ಸತ್ಯವೆಂದು ಆದ ಒಂದು ಘಟನೆ ಸಾರುತ್ತದೆ.

ಯುದ್ಧರಂಗದಲ್ಲಿ ಮರಳಿದ ನೀಗ್ರೊ ಸೈನಿಕನೊಬ್ಬ, ಅಟ್ಲಾಂಟಾದಲ್ಲಿ, ತನ್ನ ಮನೆಗೆ ಹೋಗಲೆಂದು ಬಸ್ ಹತ್ತಿದ. ಬಸ್ಸುಗಳಲ್ಲಿ ನೀಗ್ರೊಗಳಿಗೆ ಕುಳಿತುಕೊಳ್ಳಲು ಹಿಂಭಾಗದಲ್ಲೊಂದು ಸಣ್ಣ ಬೆಂಚಿರುತ್ತದೆ. ಆ ಸ್ಥಾನದಲ್ಲಿ ಹೊರತು, ಬೇರೆ ಎಲ್ಲಿಯೂ ಕುಳಿತು, ಶ್ವೇತವರ್ಣೀಯರ ಪಾವಿತ್ರ್ಯಕ್ಕೆ ಭಂಗ ತರಬಾರದೆಂದು ನಿಯಮವಿದೆ. ಐಸಾಕ್ ವುಡ್ಯಾರ್ಡ್ ಎಂಬ ಈ ನೀಗ್ರೊ ಸೈನಿಕ, ಸುಮ್ಮನೆ ಈ ಸ್ಥಳದಲ್ಲೇ ಕುಳಿತಿದ್ದ. ಒಂದು ಕಡೆ ಬಸ್ ನಿಂತಾಗ, ಅಲ್ಲಿಯ ವಿಶ್ರಾಂತಿ ಗೃಹಕ್ಕೆ (ಸರ್ಕಾರಿ) ಹೋಗಬೇಕೆಂದು ಇಚ್ಛಿಸಿದ. ಬಿಳಿ ಡ್ರೈವರ್ ಒಪ್ಪಲಿಲ್ಲ. ನೀಗ್ರೊ ತಾನು ಸರಕಾರದ ಪ್ರಜೆ. ತಾನೂ ಟಿಕೆಟ್ ಪಡಕೊಂಡ ಪ್ರಯಾಣಿಕ ಎಂದು ಸಾಧಿಸಿ, ಡ್ರೈವರನ ಅನ್ಯಾಯವನ್ನು ಪ್ರತಿಭಟಿಸಿದ. ಡ್ರೈವರ್ ಹೋಗಿ ಪೊಲೀಸನೊಬ್ಬನನ್ನು (ಈತನೂ ಬಿಳಿಯನೇ – ನೀಗ್ರೊ ಪೊಲೀಸರು ಬಹಳ ಅಪರೂಪ; ೧೦೦,೦೦೦ ನೀಗ್ರೊಗಳಿರುವ ಪೇಟೆಯೊಂದರಲ್ಲಿ ನೀಗ್ರೊ ಪೋಲಿಸನೊಬ್ಬನೂ ಇರುವುದಿಲ್ಲ) ಕರೆದ. ಈ ಪೋಲಿಸ್ ಯಮದೂತ ಬಂದು ನೀಗ್ರೊ ಸೈನಿಕನನ್ನು ಅಮಾನುಷವಾಗಿ ಹೊಡೆದು ಬಡಿದ ಮಾತ್ರವಲ್ಲ, ತನ್ನ ಲಾಠಿಯ ಕೊನೆಯಿಂದ ಆತನ ಎರಡು ಕಣ್ಣುಗಳನ್ನು ಜಜ್ಜಿ, ಕೊರೆದುಬಿಟ್ಟ. ಇಂದಿಗೂ ಐಸಾಕ್ ಕುರುಡನೇ ಆಗಿ ಬದುಕಿದ್ದಾನೆ. ಈ ದುಷ್ಕರ್ಮವಾದನಂತರ ಅಷ್ಟಕ್ಕೇ ಬಿಡದೇ ಆತನನ್ನು ಜೈಲಿಗೆ ಹಾಕಿದರು.

ಇಡೀ ಅಮೇರಿಕ ಖಂಡದ ನೀಗ್ರೊಗಳೆಲ್ಲ ಕ್ಷುಬ್ದರಾದರು. ಅವರ ಪತ್ರಿಕೆಗಳು (Crisis, People’s Voice, Informer) ಚಳವಳಿ ಹೂಡಿದುವು. ನೀಗ್ರೊ ಧುರೀಣರು ಸರಕಾರಕ್ಕೆ ಮೊರೆಯಿಟ್ಟರು. ಬಹಳ ಗುಲ್ಲೆಬ್ಬಿಸಿ, ದೂರಿಟ್ಟನಂತರ ಪೋಲಿಸಿನವನ ವಿಚಾರಣೆಯಾಯಿತು. ವಿಚಾರಣೆಯಾಗಿ, ಆತನು ಬರೇ ಆತ್ಮರಕ್ಷಣೆಗಾಗಿ ಈ ರಾಕ್ಷಸೀಯ ಶೌರ್ಯವನ್ನು ಮಾಡಿದನೆಂದೂ ಆತ ನಿರ್ದೋಷಿಯೆಂದೂ ನಿರ್ಣಯಿಸಲ್ಪಟ್ಟು ಆತನ ಬಿಡುಗಡೆಯಾಯಿತು. ಬಿಳಿ ಜನರ ನ್ಯಾಯಕ್ಕೊಂದು ಕಿರೀಟವಿಟ್ಟಂತಾಯಿತು.

ಕರೀಜನರು, ಈ ಬಿಳಿಯರ ಸ್ವಾತಂತ್ರ್ಯ-ಸ್ವರ್ಗದಲ್ಲಿ, ಮೋಟರು ಬಸ್ಸು ಮತ್ತು ರೈಲ್ವೆಗಾಡಿಗಳಲ್ಲಿ ಪ್ರತ್ಯೇಕ ಬಂಡಿಗಳನ್ನು ಉಪಯೋಗಿಸಬೇಕು. ರೈಲು ಬಂಡಿಯಲ್ಲಿ ಮೊದಲನೆಯ ತರಗತಿಯ ಟಿಕೆಟ್ ಪಡಕೊಂಡ ನೀಗ್ರೊ ವ್ಯಕ್ತಿ – ಅವನು ಎಂಥ ವಿದ್ವಾಂಸನೇ ಇರಲಿ, ಪಾಲ್ ರಾಬ್ಸನ್‍ನಂಥ ಜಗತ್ಪ್ರಸಿದ್ಧ ಗಾಯಕನೇ ಇರಲಿ – ಸಾಮಾನು ತುಂಬುವ ‘ಗೂಡ್ಸ್’ನಂಥ ಗಾಡಿಯಲ್ಲಿ ಕೂರಬೇಕು. ವಿಶ್ರಾಂತಿ ಗೃಹಗಳನ್ನು ಉಪಯೋಗಿಸಬಾರದು.

ಬಿಳಿಯರ ಸಿನಿಮಾ ಥಿಯೇಟರುಗಳಿಗೂ ಹೋಟೇಲುಗಳಿಗೂ ನೀಗ್ರೊಗಳಿಗೆ ಪ್ರವೇಶವಿಲ್ಲ. ಸಿನೆಮಾ ಥಿಯೇಟರುಗಳಿಗೆ ‘ನೀಗ್ರೊಗಳಿಗೂ ನಾಯಿಗಳಿಗೂ ಪ್ರವೇಶವಿಲ್ಲವಾದರೆ’ ಹೋಟೆಲುಗಳಲ್ಲಿ ನಾಯಿಗಳಿಗಾದರೂ ಪ್ರವೇಶವಿದೆ. ಈ ಸ್ಥಿತಿ, ಅಮೆರಿಕದ ದಕ್ಷಿಣ ಪ್ರಾಂತಗಳಲ್ಲಿ ಅತಿ ಅಸಹ್ಯವಾಗಿದೆ. ನೀಗ್ರೊ ಜನರಿಗೆ ಬೇರೆಯೆ ‘ಹೊಲೆಗೇರಿ’. ಪ್ರತಿ ಪಟ್ಟಣದಲ್ಲಿಯೂ ಅವರು ಅತಿ ಕೊಳಕಾದ, ಸಂಕೀರ್ಣವಾದ ಸಂದಿಗೊಂದಿಯಲ್ಲಿ ವಾಸಿಸಬೇಕು. ಜನಸಂಖ್ಯೆ ಎಷ್ಟೇ ಹೆಚ್ಚಾಗಲಿ, ಅವರು ಹೊರಗೆ ವಾಸಿಸಕೂಡದು. ಅವರು ಬಿಳಿಯರ ಅಮರಾವತಿಯಲ್ಲಿ ಭೂಮಿ-ಕಾಣಿ ಕೊಂಡುಕೊಳ್ಳಬಾರದು. ಅಷ್ಟು ಮಾತ್ರವಲ್ಲ; ನೀಗ್ರೊಗಳು ಕರಕಂದಾಯ, ಮುನಿಸಿಪಲ್ ತೆರಿಗೆ ಏನೇ ಸುರಿಯುತ್ತಿದ್ದರೂ ಅವರು ವಾಸಿಸುವ ಭಾಗದಲ್ಲಿ ನಲ್ಲಿ ನೀರಿನ ಸರಬರಾಯಿ ಇಲ್ಲ; ವಿದ್ಯುತ್ ಶಕ್ತಿಯ ಅಥವಾ ಗ್ಯಾಸಿನ ವ್ಯವಸ್ಥೆಯಿಲ್ಲ. ಚರಂಡಿಗಳ, ಮತ್ತು ನೈರ್ಮಲ್ಯದ ಮುನಿಸಿಪಲ್ ವ್ಯವಸ್ಥೆಯೂ ಇಲ್ಲ. ಈ ಕರಿ ಮೃಗಗಳಿಗೆ ಈ ಸುಖವೆಲ್ಲ ಏಕೆ? ಅದೆಲ್ಲ ಶ್ವೇತ ದೇವತೆಗಳ ವಿಶಿಷ್ಟ ಹಕ್ಕುಗಳು ಅಲ್ಲವೇ?

ಯಾವ ನೀಗ್ರೊ ವಿದ್ಯಾರ್ಥಿಯೂ ಬಿಳಿಯರ ಶಾಲೆ, ಹೈಸ್ಕೂಲು, ಕಾಲೇಜುಗಳನ್ನು ಪ್ರವೇಶಿಸಲಾರ. ಅವರಿಗಾಗಿಯೇ ಎಂದು, ಪ್ರತ್ಯೇಕವಾಗಿ, ಹರಕು ಮುರುಕು ಶಾಲೆಗಳನ್ನೇನೋ ಕಟ್ಟಿಸಿದ್ದಾರೆ. ಸರಕಾರೀ ನಿಬಂಧನೆಯ ಪ್ರಕಾರ, ಅವರಿಗಾಗಿ ಪ್ರತ್ಯೇಕ ಕಾಲೇಜು ಇಲ್ಲದಿದ್ದರೆ ಬಿಳಿಯರ ಕಾಲೇಜಿಗೆ ಸೇರುವ ಹಕ್ಕಿದೆ. ಈ ನಿಯಮವನ್ನು ತಲೆಕೆಳಗು ಮಾಡಲು, ಈ ಘನ ಹೊಂದಿದ ಸರಕಾರವೇ ಯುಕ್ತಿ ಹೂಡಿ, ನೀಗ್ರೊಗಳ ಸಣ್ಣ ಬಾಲಕರ ಶಾಲೆಯೊಂದಕ್ಕೆ ‘ಯೂನಿವರ್ಸಿಟಿ’ (ವಿಶ್ವವಿದ್ಯಾನಿಲಯ) ಎಂದು ಗಂಭೀರವಾದ ಹೆಸರಿಡುತ್ತದೆ. ಸರಕಾರದ ಕರ್ತವ್ಯ ಪೂರ್ಣವಾಯಿತಷ್ಟೆ?

ಕಾರ್ಖಾನೆಗಳಲ್ಲಿ, ಸರಕಾರೀ ಕಛೇರಿಗಳಲ್ಲಿ, ಅಂಗಡಿಗಳಲ್ಲಿ, ನೀಗ್ರೊಗಳಿಗೆ ಕೆಲಸ ನಾಸ್ತಿ. ಅವರಿಗಾಗಿ ಸಾಮಾನು ಹೊರುವ ಕೂಲಿಕೆಲಸ, ಮರಕಡಿಯುವ ಕೆಲಸ, ಟರ್ಪೆಂಟೈನ್ ಮತ್ತು ತಾರು ಕೈಗಾರಿಕೆಯ ಕೆಲಸ, ಹಾಗೂ ಗೊಬ್ಬರ ತಯಾರಿಸುವ ಕಠಿಣ ಮತ್ತು ಹೊಲಸು ಕೆಲಸಗಳು – ಇವನ್ನು ಪ್ರತ್ಯೇಕವಾಗಿ ಇರಿಸಿದ್ದಾರೆ. ಒಳ್ಳೆಯ ವಿದ್ಯೆಯನ್ನು ಪಡೆದ, ಸುಶಿಕ್ಷಿತ ನೀಗ್ರೊಗಳಿಗೂ ಗುಮಾಸ್ತೆ, ಟೈಪ್ ಮಾಡುವ ಕೆಲಸ ಇತ್ಯಾದಿ ಉದ್ಯೋಗಗಳನ್ನು ನಿರಾಕರಿಸುತ್ತಾರೆ. ಅಷ್ಟೇ ಅಲ್ಲ, ಇದಕ್ಕಿಂತಲೂ ಅಸಹ್ಯವಾದ ಅನ್ಯಾಯವೆಂದರೆ, ನೀಗ್ರೊಗಳಿಗೆ ಬಿಳಿಯರಿಗೆ ಅದೇ ಉದ್ಯೋಗಕ್ಕೆ ಕೊಡುವ ಸಂಬಳದ (ವೇತನದ) ಮುಕ್ಕಾಲು ಅಂಶವನ್ನು ಮಾತ್ರ ಕೊಡುವುದೆಂದು ನಿಯಮವಿದೆ. ವೈದ್ಯ, ಕಾನೂನು, ಯಾಂತ್ರಿಕಶಾಸ್ತ್ರ, ವಿಜ್ಞಾನ ಇವನ್ನು ಕಲಿಯಲು ಸೌಲಭ್ಯಗಳಿಲ್ಲ. ಇವೆಲ್ಲ ಬಿಳಿಯರಿಗೇ ಮೀಸಲು. ಉತ್ತರದ ಕೆಲವು ಪ್ರಾಂತಗಳಲ್ಲಿ ಉದಾರ ಹೃದಯಿಗಳು ಕೆಲವರು, ಈ ನಿಯಮವನ್ನು ಮೀರಿ, ನೀಗ್ರೊಗಳಿಗೆ ಉಪಕಾರ ಮಾಡುತ್ತಿದ್ದಾರೆ. ಅಲ್ಲದೆ ನೀಗ್ರೊ ಜನರೇ ಸಂಘಟಿತರಾಗಿ, ಅಲ್ಲಲ್ಲಿ ತಮ್ಮದೇ ಕಾಲೇಜುಗಳನ್ನು ಕಟ್ಟಿದ್ದಾರೆ. ನೀಗ್ರೊ ಜನರಲ್ಲೇ ಜಿ. ಡಬ್ಲ್ಯು ಕಾರ್ವರ್ ಎಂಬ ಪ್ರಸಿದ್ಧ ವಿಜ್ಞಾನಿಯೊಬ್ಬ, ಜನ್ಮವೆತ್ತಿ ಕೀರ್ತಿ ಗಳಿಸಿದ್ದಾನೆ. ಆದರೆ ಆ ಬಡಪಾಯಿಗೆ ಎಷ್ಟೋ ಸಂಶೋಧನೆಗಳನ್ನು ನಡೆಸಿ ಹೆಸರು ಗಳಿಸಿದ ಮೇಲೂ ವಿಶ್ವವಿದ್ಯಾನಿಲಯದ ‘ಕರ್ಮಶಾಲೆ’ಯನ್ನು (ಲೆಬರೆಟರಿ) ಉಪಯೋಗಿಸಲು ಅನುಮತಿ ದೊರೆಯಲಿಲ್ಲ. ಬಣ್ಣ ಕಪ್ಪಾದರೆ, ಮಿದುಳೂ ಕಪ್ಪೇ, ಜ್ಞಾನವೂ ಕಪ್ಪೇ ಎಂದು ಬಿಳಿಯರ ಸಿದ್ಧಾಂತ.

ಯಾವ ನೀಗ್ರೊವಿಗೂ ಈ ಬಿಳಿರಾಜ್ಯದ ಹೆಚ್ಚಿನ ಭಾಗಗಳಲ್ಲಿ – ಮುಖ್ಯವಾಗಿ ದಕ್ಷಿಣ ಪ್ರಾಂತಗಳಲ್ಲಿ, ಆತ್ಮ ಗೌರವವನ್ನಿಟ್ಟುಕೊಂಡು, ಬದುಕಲು ಸಾಧ್ಯವಿಲ್ಲ. ಅಟ್ಲಾಂಟಾ ಎಂಬ ನೀಗ್ರೊ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಧಾನರಾದ ಡಾ. ರೈಡ್ ಎಂಬವರಿಗೆ, ಕೊಲಂಬಿಯಾ ವಿಶ್ವವಿದ್ಯಾಲಯವೂ ಬರ್ಲಿನ್, ಪ್ಯಾರಿಸ್, ಮತ್ತು ಲಂಡನ್ ವಿಶ್ವವಿದ್ಯಾಲಯಗಳೂ ವಿದ್ವತ್ತಿನ ಆದರ ಸೂಚಕ ಬಿರುದುಗಳನ್ನು (ಡಾಕ್ಟರೇಟ್) ಕೊಟ್ಟು, ಗೌರವಿಸಿವೆ. ಆದರೆ ಈ ವಿದ್ವಾಂಸರು, ತಮ್ಮದೇ ಹುಟ್ಟೂರಿನಲ್ಲಿ, ಯಾವ ದೊಡ್ಡ ಹೋಟೆಲಿನೊಳಗೆ ಕಾಲಿಟ್ಟರೆ ಅಥವಾ ರೈಲು ಬಂಡಿಯಲ್ಲಿ ಒಳ್ಳೆಯ ಗಾಡಿಗಳಲ್ಲಿ ಕುಳಿತರೆ, ಅಥವಾ ತಮ್ಮ ತರಕಾರಿ ಮಾರುವ ಬಿಳಿಯ ಅಂಗಡಿಯ ಯಜಮಾನನನ್ನು “ಸರ್” ಎಂದು ವಿನೀತರಾಗಿ ಸಂಬೋಧಿಸದಿದ್ದರೆ, ಅವರ ಹಲ್ಲನ್ನು ಪೊಲೀಸಿನವನೋ ಕಾವಲಿನವನೋ ಅಂಗಡಿಯವನೋ ಪುಡಿಮಾಡುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಒಂದು ಬಾರಿ ಒಬ್ಬ ಆಢ್ಯ ನೀಗ್ರೊ ಗೃಹಸ್ಥನಿಗೆ ಅವಮಾನವಾಗಿ ಆತ (ನೀಗ್ರೊ) ಅಂಗಡಿಯಾತನಿಗೆ ಎದುರಾಡಿದ. ಫಲರೂಪವಾಗಿ ಅವನಿಗೆ ಕಪಾಲಮೋಕ್ಷವಾಯಿತು. ನಡುಹಗಲಲ್ಲಿ ನೂರಾರು ಜನರ ಸಮಕ್ಷಮದಲ್ಲಿ ಈ ಅನ್ಯಾಯವಾಯಿತು. ಕೋರ್ಟಿನಲ್ಲಿ ವಿಚಾರಣೆಯಾದಾಗ, ಬಿಳಿಯನಿಗೆ ಹಿತವಾಯಿತು. ಪತ್ರಿಕೆಗಳು ಪಾದರಿಗಳು ನೀಗ್ರೊಗಳನ್ನೇ ದೂಷಿಸಿದರು.

ಸೂರ್ಯಾಸ್ತವಾದ ಮೇಲೆ ಯಾವ ನೀಗ್ರೊ ಮನುಷ್ಯನೂ ಬಿಳಿಯರ ಮನೆಮಠಗಳಿರುವಲ್ಲಿ ಅಲೆದಾಡಬಾರದು. ಅಂದರೆ ರಾಜಬೀದಿ, ಮಾರ್ಕೆಟ್ಟು, ಅಂಗಡಿಗಳಿರುವ ಮುಖ್ಯ ರಸ್ತೆ, ನಗರೋದ್ಯಾನ, ವಿಹಾರಸ್ಥಾನ ಎಲ್ಲಿಯೂ ಈ ಕರಿಯರ ನೆರಳು ಸೋಂಕಬಾರದು. ರಿಚರ್ಡ್ ರೈಟ್ ಎಂಬ ನೀಗ್ರೊ ಲೇಖಕ, ಎಳೆಯವನಿದ್ದಾಗ, ಒಮ್ಮೆ ತನ್ನ ಬಿಳಿ ಯಜಮಾನನ ಅಪ್ಪಣೆಯಂತೆ, ಬಿಳಿಯರ ಕೇರಿಗೆ ಹೋಗಿದ್ದಾಗ, ಪೊಲೀಸರವನು ಅವನನ್ನು ಹಿಡಿದು, ಚೆನ್ನಾಗಿ ಥಳಿಸಿ, ಕಿಸೆಯನ್ನೆಲ್ಲ ಶೋಧಿಸಿ ಕಳಿಸಿದನು. ಇನ್ನೊಮ್ಮೆ, ಈತನೇ ದೊಡ್ಡವನಾದನಂತರ, ತನ್ನ ಗೆಳತಿ ನೀಗ್ರೊ ಮಹಿಳೆಯೊಡನೆ ಸಂಜೆ ಹೊತ್ತಿಗೆ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ. ಕಾವಲಿನ ಪೊಲೀಸಿನವ, ಈ ಮಹಿಳೆಯನ್ನು ಕಂಡು, ಅವಳ ಮೈಮೇಲೆ ಕೈಮಾಡಿ, ಅವಮಾನಮಾಡಿದ. ರೈಟ್ ಪ್ರತಿಭಟಿಸಿದಾಗ ಪೊಲೀಸಿನವನ ಕೋವಿ ಹೊರಬಂತು, “ಏನೆಲಾ ನೀಗ್ರಾ? ನಿನಗೆ ಭಾರೀ ಕೋಪವೇ” ಎಂದು ಅಬ್ಬರಿಸಿದಾಗ, ರೈಟ್ ಪೆಚ್ಚುಮೋರೆ ಹಾಕಿಕೊಂಡು, ಅವಮಾನವನ್ನು ನುಂಗಿ ಹೋಗಬೇಕಾಯಿತು.

ಒಂದು ಬಾರಿ ಬಸ್ಸಿನಲ್ಲಿ ಹೋಗುತ್ತಿದ್ದಾಗ, ರೈಟ್, ಬಿಳಿಯನೊಬ್ಬನನ್ನು “ಸರ್” ಎಂದು ಸಂಬೋಧಿಸಲು ಮರೆತ. ಫಲವಾಗಿ ಆತನನ್ನು ಚಲಿಸುವ ಬಸ್ಸಿನಿಂದ ಹೊರದಬ್ಬಿದರು. ಜ್ಞಾನವಿಲ್ಲದೆ ಬಿದ್ದ ಆತನನ್ನು ಮತ್ತೂ ಚೆನ್ನಾಗಿ ಥಳಿಸಿ ಬಡಿದು, “ಏನೆಲಾ! ಬಿಳಿಯನಿಗೆ ‘ಸರ್’ ಎಂದು ಸಂಬೋಧಿಸುವಷ್ಟು ಮಿದುಳಿಲ್ಲವೇ ಹಂದಿ ನಿನಗೆ?” ಎಂದು ಅಬ್ಬರಿಸಿದರು. ರಿಚರ್ಡ್ ರೈಟ್ ಪ್ರಸಿದ್ಧ ಲೇಖಕನಾದಮೇಲೂ, ಸಾರ್ವಜನಿಕ ವಾಚನಾಲಯ ಗ್ರಂಥಾಲಯಗಳಿಂದ ಪುಸ್ತಕ ಪಡೆಯಲಾಗುತ್ತಿರಲಿಲ್ಲ. ಆತ ತನ್ನ ಬಿಳಿಯ ಮಿತ್ರರಿಂದ, ಒಂದು ಚೀಟಿ ಪಡಕೊಂಡು, ಅವರ ಸೇವಕನೆಂದು ನಟಿಸಿ, ಅವರಿಗಾಗಿ ಎಂಬಂತೆ ಪುಸ್ತಕ ಪಡಕೊಳ್ಳಬೇಕಾಗಿತ್ತು.

ಹಿಂಸಾಕಾಂಡ: ಈ ಅಮೆರಿಕನ್ ಶ್ವೇತನಾಗರಿಕರ ಅತಿ ಸವಿಯಾದ ಆಟವೆಂದರೆ ‘ಲಿಂಚಿಂಗ್’ (Lynching). ಯಾರಾದರೂ ಬಡಪಾಯಿ ನೀಗ್ರೊನನ್ನು ಯಾವುದಾದರೊಂದು ಆಪಾದನೆಗೆ ಗುರಿ ಮಾಡಿ, ಬಿಳಿಯರೆಲ್ಲರೂ ಆತನನ್ನು ಚಿತ್ರಹಿಂಸೆ ಮಾಡಿ, ಮೈಮೇಲೆ ಎಣ್ಣೆ ಸುರಿದು, ಬೆಂಕಿ ಹತ್ತಿಸಿಯೋ ದೇಹದ ಅಂಗಾಂಗಗಳನ್ನು ಛಿನ್ನ ವಿಚ್ಛಿನ್ನ ಮಾಡಿಯೋ ಗುಂಡು ಹೊಡೆದು , ಚೂರ್ಣ ಮಾಡಿಯೋ ಕೊಲ್ಲುವುದು, ಈ ಸಭ್ಯ ಜನತೆಯ ವಿನೋದಾವಳಿಗಳಲ್ಲಿ ಒಂದು. ನೀಗ್ರೊಗಳು, ಬಿಳಿಯ ಸಮಾಜದ ನಾಶಕ್ಕಾಗಿ ಸಂಚು ಹಾಕುತ್ತಿದ್ದಾರೆ, ಬಿಳಿಯ ಹೆಂಗಸರನ್ನು ಭಂಗಗೊಳಿಸಲು ಹವಣಿಸುತ್ತಾರೆ ಎಂಬ ಕೂಗನ್ನೆಬ್ಬಿಸಿ, ನೀಗ್ರೊಗಳ ಇಡೀ ಪಾಳಯಗಳನ್ನು – ಸಾವಿರಗಟ್ಟಲೆ ಮನೆ-ಗುಡಿಸಲುಗಳನ್ನು ಸುಟ್ಟು ಭಸ್ಮ ಮಾಡಿ, ಲಂಕಾಕಾಂಡವನ್ನು ರಚಿಸುವುದೂ ಒಂದು ಆಟವೇ. ಈ ಪುಣ್ಯ ಕಾರ್ಯಕ್ಕಾಗಿಯೇ ಒಂದು ಗುಪ್ತ ಸಂಘವಿದೆ. ಈ ಹಿಂಸಾ ಸೇನೆಗೆ ಕ್ಲು-ಕ್ಲಕ್ಸ್-ಕ್ಲಾನ್ (Klu-klux-klan) ಎಂದು ಶುಭನಾಮ. ಇದರಲ್ಲಿ ದೊಡ್ಡ ದೊಡ್ಡ ಆಢ್ಯ ಮಹನೀಯರು, ಸರಕಾರಿ ಅಧಿಕಾರಿಗಳು, ಜಡ್ಜರು, ಮುನಸೀಫರು, ಪೊಲೀಸ್ ಅಧಿಕಾರಿಗಳು, ಸರಕಾರಿ ವಕೀಲರು, ನ್ಯಾಯಾಧಿಕಾರಿಗಳು ಮೊದಲಾದ ಘನಹೊಂದಿದ ಧುರೀಣರೆಲ್ಲ ಸೇರಿಕೊಂಡಿರುತ್ತಾರೆ. ಈ ದುಷ್ಟ ಸಂಘದ ಪ್ರಾಬಲ್ಯ ದಕ್ಷಿಣದ ಪ್ರಾಂತಗಳಲ್ಲಿ ಹೆಚ್ಚು ಅಮಾನುಷವಾಗಿರುತ್ತವೆ.

ಇದರ ಪೈಶಾಚಿಕತೆಯ ಕತೆ ಕೇಳಿ: ಈ ಪಾಪಪುರಾಣವನ್ನು ನೀಗ್ರೊಗಳ ರಾಷ್ಟ್ರೀಯ ಸಂಘದ ಕಾರ್ಯದರ್ಶಿ ವಾಲ್ಟರ್ ವೈಟ್ ಎಂಬಾತ ಸಂಶೋಧಿಸಿ ಬರೆದಿದ್ದಾನೆ. ಈತನ ವರ್ಣ – ಆಕಾರ ಶುದ್ಧ ಬಿಳಿಯರಂತೆಯೇ ಇವೆ. ಆದ್ದರಿಂದ ಎಷ್ಟೋ ಬಾರಿ, ಈತನನ್ನು ಬಿಳಿಯನೆಂದೇ ಭ್ರಮಿಸಿದವರಿಗೆ, “ಕ್ಷಮಿಸಿ, ನಾನು ನೀಗ್ರೊ; ಬಿಳಿಯನಲ್ಲ” ಎಂದು ತಿಳಿಸುವ ಕಷ್ಟ ಪ್ರಸಂಗ ಬರುತ್ತದೆ. ಆದರೆ ಈ ಬಿಳಿ ವರ್ಣ ಆಕಾರಗಳೇ ಈತನಿಗೆ ಮಂತ್ರ ಕವಚಗಳಾಗಿವೆ. ಯಾವುದೇ ಊರಲ್ಲಿ, ನಗರದಲ್ಲಿ ರಾಕ್ಷಸೀ ಕೃತ್ಯ ಜರಗಿದರೆ, ಧೈರ್ಯವಾಗಿ ಅಲ್ಲಿಗೆ ಹೋಗಿ, ಎಲ್ಲ ವಿಚಾರಗಳನ್ನು ತಿಳಿದುಕೊಂಡು, ಪತ್ರಿಕೆಗಳಲ್ಲಿ ಪ್ರಕಾಶಿಸಿ ಅನ್ಯಾಯವನ್ನು ಬಹಿರಂಗಪಡಿಸುತ್ತಾನೆ. ಸರಕಾರಕ್ಕೂ ಮನವಿ ಮಾಡುತ್ತಾನೆ. ಇದರಿಂದ ನೀಗ್ರೊ ಜನತೆಯಲ್ಲಿ ಸಂತಾಪ, ಕ್ಷೋಭೆ ಉಂಟಾಗುತ್ತದೆಯೇ ಹೊರತು, ಬೇರೇನು ಪರಿಣಾಮವಾಗುವುದಿಲ್ಲ. ನೀಗ್ರೊ ದ್ವೇಷಿ ಅಧಿಕಾರಿಗಳಿಂದ ತುಂಬಿದ ಸರಕಾರ, ಕಣ್ಣು ಮುಚ್ಚಿ, ಗುಟ್ಟಾಗಿ, ಹಿಂಸಕರಿಗೆ ಸಹಕಾರವನ್ನೀಯುತ್ತದೆ. ಪತಿಕೆಗಳೂ ಪಾದರಿಗಳೂ “ಅಸ್ತು” ಅನ್ನುತ್ತಾರೆ. ಈ ಕರಿ ಮೃಗಗಳಿಗೆ ತಕ್ಕ ಶಾಸ್ತಿಯಾಯಿತೆಂದು, ಭುಜ ತಟ್ಟಿಕೊಳ್ಳುತ್ತಾರೆ.

ಜಾರ್ಜಿಯಾ ಪ್ರಾಂತದಲ್ಲಿ ಒಬ್ಬ ಗರ್ಭಿಣಿ ನೀಗ್ರೊ ಹೆಂಗಸನ್ನೂ ಹತ್ತು ಜನ ನೀಗ್ರೊ ಗಂಡಸರನ್ನೂ ಅತಿ ಕ್ರೌರ್ಯದಿಂದ, ಅವರ್ಣನೀಯವಾದ, ಹೇಯ ಹಿಂಸೆಗಳೊಡನೆ, ಹೇಳಬಾರದ ಯಾತನೆ ಕೊಟ್ಟು ಕೊಂದರು. ವಾಲ್ಟರ್ ವೈಟ್ ಆ ಊರಿಗೆ ಹೋಗಿ ಅಲ್ಲಿಯ ಅಂಗಡಿಗಳಲ್ಲೂ ಹೊಟೇಲುಗಳಲ್ಲೂ ಮಾತುಕತೆ ಬೆಳೆಸಿ ಇಡೀ ಪ್ರಸಂಗವನ್ನೆಲ್ಲ ತಿಳಿದುಕೊಂಡ. ಆ ಕ್ಲು-ಕ್ಲಕ್ಸ್-ಕ್ಲಾನ್ ಪಡೆಯ ರಾಕ್ಷಸೀ ಮುಖಂಡನೊಬ್ಬ, ನಡುಹಗಲಲ್ಲಿ, ನೂರಾರು ಜನರೆದುರು, ಆ ನಿಸ್ಸಹಾಯ ಜನರ ಮೇಲೆ ತೋರಿಸಿದ ತನ್ನ ಶೌರ್ಯ ಪರಾಕ್ರಮವನ್ನು ವರ್ಣಿಸುತ್ತಿದ್ದ. ಅಲ್ಲಿಯ ಜನರಿಗೆ ಕೊನೆಗೆ ವೈಟ್‍ನ ಮೇಲೆ ಸಂದೇಹವುಂಟಾಗಿ, ಆತ ತನ್ನ ಜೀವವನ್ನುಳಿಸಿಕೊಳ್ಳಲು, ಊರು ಬಿಡಬೇಕಾಯಿತು.

ಇನ್ನೊಂದು ಬಾರಿ, ಮೂರು ಜನ ನೀಗ್ರೊಗಳ ಮೇಲೆ ಒಂದು ಕೊಲೆಯ ಆಪಾದನೆಯಾಯಿತು. ಪೊಲೀಸರು ಅವರನ್ನು ವಿಚಾರಣೆಗೆ ಗುರುಮಾಡಿದರೂ ಆ ಊರಿನ ನೀಗ್ರೊಗಳು ಸ್ವಲ್ಪ ಶಿಕ್ಷಿತರಾಗಿದ್ದು, ವ್ಯಾಪಾರ-ದಂಧೆಗಳಲ್ಲಿ ಸ್ವಲ್ಪ ಮುಂದುವರಿದಿದ್ದರಿಂದ, ಬಿಳಿಯರ ದ್ವೇಷಕ್ಕೆ ಪಾತ್ರರಾಗಿದ್ದರು. “ಆ ಮೂರು ಜನ ಆಪಾದಿತರು, ಸಂಪೂರ್ಣವಾಗಿ ನನ್ನಷ್ಟೇ ನಿರ್ದೋಷಿಗಳಾಗಿದ್ದರು” ಎಂದು ವೈಟ್ ಹೇಳುತ್ತಾನೆ. ಆದರೆ ಸ್ಥಳೀಯ ಕೋರ್ಟಿನ ಜಡ್ಜ್, ಜ್ಯೂರಿ, ವಕೀಲರುಗಳಿಂದ ಹಿದಿದು, ಕೋರ್ಟಿನ ಕಂಬವೂ ನೀಗ್ರೊದ್ವೇಷಿಯಾದುದರಿಂದ, ಅರ್ಧ ಗಂಟೆಯ ವಿಚಾರಣೆಯ ಪ್ರಹಸನವಾಗಿ, ಮೂವರಿಗೂ ಮರಣದಂಡನೆ ವಿಧಿಸಲ್ಪಟ್ಟಿತು. ನೀಗ್ರೊಗಳೆಲ್ಲ ಕ್ಷುಬ್ದರಾಗಿ ವರಿಷ್ಠ (Federal) ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ವರಿಷ್ಠ ಕೋರ್ಟಿನಲ್ಲಿ, ಆಪಾದನೆ ಪೂರಾ ತಿರಸ್ಕರಿಸಲ್ಪಟ್ಟು ಆಪಾದಿತರು, ನಿರ್ದೋಷಿಗಳೆಂದು ಘೋಷಿಸಲ್ಪಟ್ಟರು. ಮಾತ್ರವಲ್ಲ, ಕೆಳ ಕೋರ್ಟಿನ ನ್ಯಾಯಬಾಹಿರತೆಯ ಮೇಲೆ ಕಟುಟೀಕೆಯೂ ಆಯಿತು.

ಬಿಡುಗಡೆ ಹೊಂದಿದ ಮರುದಿನವೇ ಪೋಲಿಸರು ಆ ಮೂವರನ್ನು ಬೇರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ದಸ್ತಗಿರಿ ಮಾಡಿದರು. ಆ ದಿನ ಊರಲ್ಲಿ ಏನೇನೋ ಸುದ್ದಿಯಿದ್ದುದರಿಂದ, ಊರಿನ ನೀಗ್ರೊ ಜನ ಪ್ರಮುಖರು, ತಾವು ಜೈಲಿನ ರಕ್ಷಣೆಗಾಗಿ ಬಂದಿರಲು ಅಪೇಕ್ಷಿಸಿದರು. ಜೈಲಿನ ವಾರ್ಡರ್, ಅವರ ಪ್ರಾರ್ಥನೆಯನ್ನು ನಿರಾಕರಿಸಿದ. ಅದೇ ರಾತ್ರಿ ಬಿಳಿಯರ ಒಂದು ದೊಡ್ಡ ಪಡೆ, ಕ್ಲು-ಕ್ಲಕ್ಸ್-ಕ್ಲಾನಿನ ಅದ್ಭುತ ವೇಷ ಮತ್ತು ಮೊಗವಾಡ ಧರಿಸಿ, ವೇಷಪಲ್ಲಟಿಸಿ, ಕೋವಿ, ಗುಂಡು ಮೊದಲಾದ ಆಯುಧಗಳನ್ನು ಹಿಡಿದು ಸನ್ನದ್ಧವಾಗಿ ಜೈಲಿಗೆ ಬಂತು. ರಕ್ಷಣೆಯ ನಟನೆಯನ್ನು ಅಭಿನಯಿಸಿ ಮತ್ತೆ ಜೈಲಿನ ವಾರ್ಡರ್ ಆ ಮೂರು ಜನ ನೀಗ್ರೊ ಕೈದಿಗಳನ್ನು ರಕ್ತಕ್ಕಾಗಿ ಹಸಿದಿದ್ದ ಆ ಜನಸಮೂಹಕ್ಕೆ ಒಪ್ಪಿಸಿದ. ಈ ನಿರಪರಾಧಿಗಳಿಗೆ ‘ಅಗ್ನಿಯ ಜ್ಞಾನಸ್ನಾನ’ (Baptism of fire) ಆಯಿತು. ಅಂದರೆ ಮೈಯ ಮೇಲೆ ಪೆಟ್ರೋಲ್ ಎಣ್ಣೆ ಸುರುವಿ, ಉರಿ ಹಚ್ಚಿದರು. ಆ ಗುಂಪಿನ ಮುಖಂಡರು, ಆ ನಗರದ ಗಣ್ಯವ್ಯಕ್ತಿಗಳು, ಸರಕಾರೀ ಅಧಿಕಾರಿಗಳು, ಮಹಾಪ್ರಭೃತಿಗಳೇ ಆಗಿದ್ದರಿಂದ, ಪೋಲಿಸರಾಗಲೀ ಸರಕಾರವಾಗಲೀ ಯಾವ ಗೋಜಿಗೂ ಹೋಗಲಿಲ್ಲ.

ಇದೊಂದು ಸಣ್ಣ ಹತ್ಯಾಕಾಂಡವಾದರೆ ಇದಕ್ಕಿಂತ ಭಯಾನಕ ಅಗ್ನಿಕಾಂಡಗಳು ಜರಗಿವೆ. ಒಂದು ಬಾರಿ, ಒಬ್ಬ ನೀಗ್ರೊ ಹುಡುಗ, ಒಬ್ಬ ಬಿಳಿ ಹೆಂಗಸಿನ ಮೇಲೆ ಕೈ ಮಾಡಿದನೆಂಬ ಶುದ್ಧ ಸುಳ್ಳು ಆಪಾದನೆ ಬಂದಿತು. ಕೋರ್ಟು ಆ ಹುಡುಗನನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿತೇನೋ ಸರಿ. ಆದರೆ ಸಂಜೆಗೆ ಜನರ ಒಂದು ದೊಡ್ಡ ಸಮೂಹ – ಗುಂಡು, ಕೋವಿ ಮಾತ್ರವಲ್ಲ, ಮೆಷಿನ್ ಗನ್, ಡೈನಮೈಟ್, ರಿವಾಲ್ವರ್‍ಗಳು, ರೈಫಲ್ಲುಗಳಿಂದ ಸನ್ನದ್ಧವಾಗಿ, ನೀಗ್ರೊ ಪಾಳಯದ ಮೇಲೆ ದಾಳಿ ಮಾಡಿತು. ನೀಗ್ರೊಗಳು ಹೆಚ್ಚಾಗಿ ನಿಶ್ಶಸ್ತ್ರರೂ ಅಲ್ಪಸಂಖ್ಯಾತರೂ ಆದ್ದರಿಂದ ಆತ್ಮರಕ್ಷಣೆ ಸಾಗಲಿಲ್ಲ. ಮನೆ, ಅಂಗಡಿಗಳೆಲ್ಲ ಸುಟ್ಟು ಭಸ್ಮವಾದುವು. ಎಷ್ಟೊ ಬಡಪಾಯಿಗಳು ಪ್ರಾಣ ಕಳೆದುಕೊಂಡರು. ಆದರೆ ಬಿಳಿಯರ ಪ್ರತೀಕಾರ ಇಲ್ಲಿಗೆ ನಿಲ್ಲಲಿಲ್ಲ. ಮರುದಿನ, ಈ ಭಸ್ಮವಾದ ನೀಗ್ರೊ ಪಾಳಯಕ್ಕೆ ಪೊಲೀಸೂ ರಿಜರ್ವ್ ಸೇನೆಯೂ ಬಂದುವು. ಐವತ್ತು ಜನ ನೀಗ್ರೊಗಳು – ಶಾಂತಿ ಭಂಗ, ನರಹತ್ಯೆ, ದೊಂಬಿ, ದಂಗೆ ಇತ್ಯಾದಿ ಅಪಾದನೆಗಳ ಮೇಲೆ ಸೆರೆ ಹಿಡಿಯಲ್ಪಟ್ಟರು. ಸೈನಿಕರು ಇನ್ನಷ್ಟು ಲಂಕಾಕಾಂಡ ಹಬ್ಬಿಸಿದರು. ಆದರೆ ಮೇಲೆ ಒಂದು ನೂರು ಬಿಳಿಯರನ್ನು ‘ಸ್ಪೆಷಲ್ ಶಾಂತಿ ರಕ್ಷಕ’ರನ್ನಾಗಿ ನೇಮಿಸಿದರು. ಇವರಿಗೆ ಯಾವನೇ ನೀಗ್ರೊನನ್ನು ವಾರಂಟು ಇಲ್ಲದೆ ಸೆರೆ ಹಿಡಿಯುವ ಅಧಿಕಾರ ಕೊಡಲ್ಪಟ್ಟಿತು.

ಬಿಳಿ ಸ್ತ್ರೀಯರ ಮೇಲೆ ಕೈ ಮಾಡಿದರೆಂಬ ಆಪಾದನೆ, ಬಹಳ ಸುಲಭವಾಗಿ ಬಡ ನೀಗ್ರೊಗಳ ಮೇಲೆ ಹೇರಲ್ಪಡುತ್ತದೆ. ಆದರೆ ಈ ಮುಂದಿನ ಅಂಕೆ ಸಂಖ್ಯೆಗಳನ್ನು ಗಮನಿಸಬೇಕು. ೨೫೨೨ ನೀಗ್ರೊ ಜನ, ಬಿಳಿಯರ ಯಾತನೆ ಪೀಡನೆಗಳಿಗೆ ಗುರಿಯಾದರು; ಇವರ ಪೈಕಿ, ಬರೀ ೪೭೭ ಜನರ ಮೇಲೆ ಬಿಳಿ ಸ್ತ್ರೀಯ ಮಾನಭಂಗದ ಆರೋಪವಿತ್ತು; ಇವರಲ್ಲಿ ೪೦೦ರ ಮೇಲೆ ಶುದ್ಧ ನಿರ್ದೋಷಿಗಳು.

ಅದೇ, ಈ ಮುಂದಿನ ಅಂಕೆ-ಸಂಖ್ಯೆಗಳು ಯಾವ ದೌರಾತ್ಮ್ಯವನ್ನು ತೋರಿಸುತ್ತವೆಂದು ಪರಿಶೀಲಿಸಿ: ಇಡೀ ಅಮೆರಿಕದಲ್ಲಿರುವ ೧೩೦ ಲಕ್ಷ ನೀಗ್ರೊಗಳ ಪೈಕಿ, ೬೦ ಲಕ್ಷ ಜನರು ‘ಮುಲಾಟ್ಟೋ’ಗಳು – ಅಂದರೆ, ಬಿಳಿಯರ ರಕ್ತ ಸೇರಿದ ಮಿಶ್ರಿತ ಜನಾಂಗದವರು. ಬಿಳಿಯ ಜನರು, ನೀಗ್ರೊ ಹೆಂಗಸರ ಮೇಲೆ ಅಸಹಾಯ, ದಲಿತ ಗುಲಾಮ, ಸ್ತ್ರೀಯರ ಮೇಲೆ, ನಡೆಸಿದ, ಮಾನಹೀನ ಅತ್ಯಾಚಾರದ ಪ್ರತ್ಯಕ್ಷ ನಿದರ್ಶನಗಳಾಗಿ ಈ ೬೦ ಲಕ್ಷ ‘ಮಿಶ್ರ’ ರಕ್ತದ ಜನರಿದ್ದಾರೆ. ನೀಗ್ರೊ ಸಮಾಜದ ವೃದ್ಧ ಧುರೀಣನಾದ ಡಾ. ಡಬ್ಲ್ಯೂ.ಇ.ಬಿ. ಡೂಬಿಯೋ ಎಂಬಾತ ಸಂತಾಪದಿಂದ, “ನಿಮ್ಮ ಜನಾಂಗದ ಮಹಾನುಭಾವರು, ನನ್ನ ಜನಾಂಗದ ಅಸಹಾಯ ಸ್ತ್ರೀಯರ ಮೇಲೆ ಮಾಡಿದ ಪಾಪಕರ್ಮ ೬೦ ಲಕ್ಷ ಜನರ ಹಣೆಗಳಲ್ಲಿ, ರಕ್ತದಲ್ಲಿ, ಅಳಿಸದಂತೆ ರಕ್ತಾಕ್ಷರಗಳಲ್ಲಿ ಮೂಡಿವೆ” ಎಂದು ಶಪಿಸಿದ್ದಾನೆ.

ಲಿಲಿಯನ್ ಸ್ಮಿತ್ ಎಂಬ ಬಿಳಿಯ ಲೇಖಕಿ. “ತಮ್ಮ ರಕ್ತದಿಂದಲೇ ಹುಟ್ಟಿದ ತಮ್ಮ ಮಕ್ಕಳನ್ನೇ, ಕೀಳುಜಾತಿಯೆಂದು, ಮೃಗಸಮಾನವಾಗಿ ಕಂಡು, ಅವರ ಜೀವನಕ್ಕೆ ಸಹಾಯವೀಯುವ ಬದಲು, ಅವರ ಮೇಲೆ ಅಸಂಖ್ಯಾತ ಅನ್ಯಾಯ ಮತ್ತು ದುಃಖಪರಂಪರೆಯನ್ನು ಹೇರಿದುದು ಮಾನವ ಧರ್ಮಕ್ಕೇ ಕಳಂಕ” ಎಂದು ಉಗ್ರವಾಗಿ ಖಂಡಿಸಿದ್ದಾಳೆ. ಬಿಳಿಯರ ಮತ್ತು ನೀಗ್ರೊಗಗಳಲ್ಲಿ ಮಿಶ್ರ ವಿವಾಹವಾಗುವುದು ಒಂದು ಕಾಲಕ್ಕೆ, ಕಾನೂನು ಪ್ರಕಾರ ನಿಷಿದ್ಧವಾಗಿತ್ತು. ಈಗ ಕಾಯಿದೆಯ ವಿಘ್ನವೇನೂ ಇಲ್ಲ; ಆದರೆ ದಕ್ಷಿಣ ಪ್ರಾಂತಗಳಲ್ಲಿ ಈ ಮಾತೆತ್ತಿದರೆ, ಬಿಳಿಯರು ಕೆಂಡವಾಗುತ್ತಾರೆ.

೧೯೪೬ನೆಯ ಫೆಬ್ರುವರಿಯಲ್ಲಿ ಕೊಲಂಬಿಯಾದಲ್ಲಿ (ಟೆನೆಸ್ಸಿ) ಲಿಂಚಿಂಗಿನ ಭೀಕರ ಘಟನೆ ನಡೆಯಿತು. ಅವರ ಫಲವಾಗಿ, ಅಪರಾಧಿಗಳೂ ಹತ್ಯಾಕಾರಿಗಳೂ ಆದ ಬಿಳಿಯರ ಬದಲು, ಹಾನಿಪಡೆದ ನೀಗ್ರೊಗಳನ್ನೇ ಕೋರ್ಟಿಗೆಳೆದೊಯ್ದರು. ವಿಚಾರಣೆಯನ್ನು ನೀಗ್ರೊಗಳಿರುವ ಊರಿನಿಂದ, ೫೩ ಮೈಲಿ ದೂರವಿರುವ ಬೇರೊಂದು ನಗರದಲ್ಲಿ ಮಾಡಿದರು. ಆ ಊರಿನಲ್ಲಿ ಯಾವ ಹೋಟೆಲಾಗಲೀ ಮನೆಯಾಗಲೀ ಈ ನೀಗ್ರೊಗಳಿಗೆ ಇರಲು ಉಣಲು ಸೌಕರ್ಯ ಕೊಡಲು ಒಪ್ಪಲಿಲ್ಲ. ನೀಗ್ರೊಗಳ ವಕೀಲರಿಗಾಗಲೀ ಸಾಕ್ಷಿಯವರಿಗಾಗಲೀ ಬಸ್ಸಿನ ಸೌಕರ್ಯ ಕೊಡದಂತೆ ಮಾಡಿದರು.

ಈ ಘೋರ ಅನ್ಯಾಯ ನಡೆದುದು ಆಗ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಜೇಮ್ಸ್ ಬೈರ್ನ್ಸರ ಊರಲ್ಲಿ. ಆ ಹೊತ್ತಿಗೆ ಬೈರ್ನ್ಸ್, ಯೂರೋಪ್ ಖಂಡದ ಗ್ರೀಸ್ ಮತ್ತು ಬಲ್ಗೇರಿಯಾ ದೇಶಗಳಲ್ಲಾಗುತ್ತಿದ ಅನ್ಯಾಯಗಳನ್ನು ತೀವ್ರ ವಾಗ್ವಿಲಾಸ ಮತ್ತು ಶಬ್ದ ವೈಭವದೊಡನೆ ಖಂಡಿಸುತ್ತಿದ್ದರು.

ನೀಗ್ರೊಗಳ ಮಹಾತ್ಮನೆಂದು ಹೆಸರಾಂತ ದಿವಂಗತ ಬೂಕರ್ ಟಿ. ವಾಷಿಂಗ್ಟನ್ನನ ಕಾಲದಲ್ಲಿ ಮಾಂಸದ ಅಂಗಡಿಗಳಲ್ಲಿ ಹೊರಗೆ, ‘ಲಿಂಚ್’ ಸುಖಕ್ಕೆ ಪಾತ್ರರಾಗಿದ್ದ ನೀಗ್ರೊಗಳ, ತುಂಡರಿಸಿದ ಕೈಬೆರಳುಗಳನ್ನು ಪ್ರದರ್ಶನಕ್ಕಾಗಿ ಇರಿಸುತ್ತಿದ್ದರಂತೆ, ಈಗ ಅಂಥ ಪ್ರದರ್ಶನವೇನೂ ಅಷ್ಟಾಗಿ ಇಲ್ಲದಿದ್ದರೂ ಕ್ರೌರ್ಯ ಕಡಿಮೆಯಾಗಿಲ್ಲ. ಎಷ್ಟೋ ಬಾರಿ, ಸುಳ್ಳು ಆಪಾದನೆಗಳಿಂದ ವಿಮೋಚನೆ ಹೊಂದಿದ ಮೇಲೆ ಪೊಲೀಸರ ಮತ್ತು ಅಧಿಕಾರಿಗಳ ಸಹಕಾರದಿಂದ ಬಿಳಿಯರು, ‘ಆರೋಪಿ’ಗಳೆನಿಸಿಕೊಂಡ ನಿರ್ದೋಷಿಗಳನ್ನು ಹಿಂಸಿಸಿ ಕೊಂದಿದ್ದಾರೆ. ಲೆಕ್ಸಿಂಗ್‍ಟನ್ ಎಂಬಲ್ಲಿ ಒಬ್ಬ ನೀಗ್ರೊ ಕೃಷಿಕನನ್ನು ಕಳುವಿನ ಆರೋಪದ ಮೇಲೆ ಚಾಟಿಯಿಂದ ಹೊಡೆದು ಕೊಂದರು. ಕೋರ್ಟಿನಲ್ಲಿ ವಿಚಾರಣೆಗಾಗಿ ‘ಆತ್ಮರಕ್ಷಣೆ’ಗೋಸ್ಕರ ಬಿಳಿಯರು ಆತನನ್ನು ಕೊಂದರೆಂದು ತೀರ್ಪಾಯಿತು.

ರಾಜಕೀಯ ಹಕ್ಕು ಬಾಧ್ಯತೆಗಳ ‘ಕಣ್ಣುಮುಚ್ಚಾಲೆ’: ಅಬ್ರಹಾಂ ಲಿಂಕನ್ ಎಂಬ ವಿಭೂತಿಪುರುಷನ ಅನುಗ್ರಹದಿಂದ, ನೀಗ್ರೊ ಜನರು ೧೮೬೫ರಲ್ಲಿ ದಾಸ್ಯದಿಂದ ವಿಮೋಚನೆ ಹೊಂದಿದರು. ಅವರಿಗೆ ನಾಮ ಮಾತ್ರಕ್ಕೆ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳು ದೊರೆತುವು. ಚುನಾವಣೆಗಳಲ್ಲಿ ಭಾಗವಹಿಸುವ ಹಕ್ಕೂ ಹೆಸರಿಗೆಂಬಂತೆ ಇದೆ. ಆದರೆ, ಧೂರ್ತರಾದ ಬಿಳಿಯರು, ಈ ಹಕ್ಕು ಕನ್ನಡಿಯೊಳಗಿನ ಗಂಟಾಗುವಂತೆ ಯುಕ್ತಿ ಹೂಡಿದ್ದಾರೆ. ನೀಗ್ರೊ ಜನರು ನೂರರಲ್ಲಿ ತೊಂಬತ್ತೊಂಬತ್ತು ಬರೀ ದರಿದ್ರರು. ಅತಿ ಬಡತನದಿಂದ ಬಳಲುತ್ತಿದ್ದಾರೆ. ಅವರ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಮೇಲೆ ಬಿಳಿಯ ಸರಕಾರಕ್ಕೇನು ಮಮತೆ? ಮತದಾರರೆಲ್ಲರೂ ‘ತಲೆ ತೆರಿಗೆ’ಯೊಂದನ್ನು ತೆರಬೇಕು. ನೀಗ್ರೊ ಜನರಿಗೆ ತಲೆತೆರಿಗೆ (poll-taz) ಕೊಡುವಷ್ಟು ತ್ರಾಣವಿರುವುದಿಲ್ಲ. ಇನ್ನು ಈ ಚಕ್ರವ್ಯೂಹವನ್ನು ಭೇದಿಸಿ, ನೀಗ್ರೊ ಮತದಾರ ಬಂದರೆ ಇನ್ನೊಂದು ಅಗ್ನಿಪರೀಕ್ಷೆಯಿದೆ. ಇದೊಂದು ವಿದ್ಯಾ ಪರೀಕ್ಷೆ. ಚುನಾವಣೆಯ ಅಧಿಕಾರಿ, ಮತದಾರರನ್ನು ಪ್ರಶ್ನೆಗಳಿಂದ ಪರೀಕ್ಷಿಸಿ ಆತನಿಗೆ ಅಮೆರಿಕದ ರಾಜ್ಯಾಂಗ ರಚನೆ ತಿಳಿದಿದೆಯೋ ಎಂದು ನೋಡುವುದೊಂದು ಕ್ರಮ. ಯಥಾರ್ಥವಾಗಿ, ನೀಗ್ರೊಗಳಿಗೆ ಅಸಂಬದ್ಧ ಪ್ರಶ್ನೆ ಕೇಳಿ, ಅವರನ್ನು ಅಪಾತ್ರರೆಂದು, ಹೊರಗೆ ಕಳಿಸುವುದೇ ಈ ಯುಕ್ತಿಯ ರಹಸ್ಯ.

ಈ ಚಕ್ರವ್ಯೂಹವನ್ನೆಲ್ಲ ಭೇದಿಸಿ ಬಂದ, ನೀಗ್ರೊ ಮತದಾರ, ಬಿಳಿಯರ ಕ್ರೋಧವನ್ನು ಎದುರಿಸಬೇಕಾಗುತ್ತದೆ. ಎಷ್ಟೊ ಕಡೆ ಮತದಾನದ ಆಫೀಸಿನ ಹೊರಗೆ ಬಿಳಿಯರ ದೊಡ್ಡ ಸಶಸ್ತ್ರ ಗುಂಪೇ ನಿಂತಿದ್ದು ಈ ‘ನೀಗ್ರೊ’ ಒಳಗೆ ಕಾಲಿಡದಂತೆ ಸರ್ಪ ಕಾವಲಾಗಿರುತ್ತದೆ. ದಕ್ಷಿಣದ ‘ಬಿಲ್ಬೊ’ ಮತ್ತು ‘ಟಾಲ್ಮಾಜ್’ ಎಂಬಿಬ್ಬರು ಧುರೀಣರು (ಅವರಲ್ಲಿ ಮೊದಲಿನವರು ‘ಸೆನೆಟ್’ನ ಸದಸ್ಯ) “ಈ ‘ನೀಗ್ರಾ’ ಮೃಗಗಳನ್ನು ಮತದಾನ ಮಾಡಲು ನಮ್ಮಲ್ಲಿ ‘ಬಿಳೇ’ (!) ರಕ್ತವಿರುವವರೆಗೆ ಎಂದಿಗೂ ಬಿಡೆವು” ಎಂದು ಶಪಥ ಹಾಕಿದ್ದರು. ಅವರ ಮಾತು ನಡೆಯಿತು.

ಸ್ವಾತಂತ್ರ್ಯದ ಬೀಡು, ಸಾಹಸಿಗಳ ಸೂಡು ಆದ ಅಮೆರಿಕ! ಅದರ ಮಂತ್ರ – ಗಾಯತ್ರಿ ಅಂದರೆ, “ಎಲ್ಲ ಮಾನವರೂ ಸ್ವತಂತ್ರರೂ ಸಮಾನರೂ ಆಗಿ ಜನ್ಮವೆತ್ತಿದ್ದಾರೆ” (All men are born free and equal) ಎಂಬ ಘೋಷಣೆಯನ್ನು ಪ್ರಪಂಚದಲ್ಲೆಲ್ಲ ಡಂಗುರ ಸಾರುತ್ತಿದ್ದಾರೆ. ಅದರ ಪ್ರತ್ಯಕ್ಷ ವಿಪರ್ಯಯ ನಿದರ್ಶನವೆಂದರೆ ಅಮೆರಿಕದ ನೀಗ್ರೊ.

ಲೋಕಸೇವಕ, ದೀನಬಂಧು ಆಲ್ಬರ್ಟ್ ಶ್ವೇತರನ ವಾಣಿಯಿದು, “ಯೇಸು ದೇವನ ಅನ್ಯಾಯಿಗಳೆನ್ನಲ್ಪಡುವ ಐರೋಪ್ಯರು ತಮ್ಮ ಕೈಯಾರೆ ಕಪ್ಪು ಜನರ ಮೇಲೆ ಮಾಡಿದ ಅತ್ಯಾಚಾರ, ಗೈದ ದೌರ್ಜನ್ಯ, ಜನನಾಶ, ಹಿಂಸೆ, ಕ್ಷಯಗಳಿಗೆ ಮಿತಿಯಿಲ್ಲ. ಈ ಪಾಪದ ಪುರಾಣ ಓದಲು ಅಸಾಧ್ಯ.”

-ಪ್ರಬುದ್ಧ ಕರ್ಣಾಟಕ ಸಂಪುಟ ೩೦, ಸಂಚಿಕೆ ೧, ೧೯೪೮

(ಇನ್ಕಾ ನಾಗರಿಕತೆ ಕುರಿತು ದೇವರಾಯರು ಬರೆದು ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಿದೆಯೆನ್ನಲಾದ ಲೇಖನ ಸದ್ಯ ಅಲಭ್ಯ – ಸಂ)

ಕುಲಮದ ಛಲಮದ ವಿದ್ಯಾಮದದವರ ತೋರದಿರಾ
ಅವರ ಆರೂಢ ಪದವಿಯನೆನಗೆ ತೋರದಿರಾ
ಅವರ ಗರುವ ಗಂಭೀರತನವನೆನಗೆ ತೋರದಿರಾ
ಶಮೆದಮೆಯುಳಿದು ದಶಮುಖ ನಿಂದು
ಲಿಂಗದಲ್ಲಿ ಲೀನವಾದವರನಲ್ಲದೆ
ಎನಗೆ ತೋರದಿರಾ, ಗುಹೇಶ್ವರಾ

(ಮುಂದುವರಿಯಲಿದೆ)