(ಚಕ್ರೇಶ್ವರ ಪರೀಕ್ಷಿತ – ೧೬)

೧. ಆಭಾ ಕರೆದಮೇಲೇ ಹೋಗದಿರಲಾದೀತೇ?:

ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ (ಸೊಸೆ) ಆಭಾ (ಮೊಮ್ಮಗಳು) ನಮ್ಮೊಡನಿದ್ದರು. ನಮ್ಮ ಮನೆಯಲ್ಲೇ ಅವತರಿಸಿ, ಗಾಳಿಯನ್ನು ಕಲಕಿ ಝಾಡಿಸುತ್ತಿದ್ದಂತೆ ಬೆಂಗಳೂರಿಸಿದ್ದ ಮೊಮ್ಮಗು, ಈಗ ಮಗುಚಿ, ಹರಿಯುವಷ್ಟಾಗಿತ್ತು. ಸಹಜವಾಗಿ ಮನೆಯ ನೆಲದಲ್ಲಿ ವಿರಮಿಸಿದ್ದ ಡಬ್ಬಿ, ಚೀಲಗಳು ಹೆದರಿ ಕಾಲ್ಮಣೆ, ಮೇಜುಗಳನ್ನೇರಿ ಕುಳಿತವು. ಕಾಲೊರಸುಗಳು, ಬಟ್ಟೆದೋಟಿಗಳು ಬಚ್ಚಲು, ಹಿತ್ತಲು ಸೇರಿ ಬಾಗಿಲೆಳೆದುಕೊಂಡವು. ಆಭಾ ವಿಕಾಸಪಥದ ಮುಂದಿನ ನಾಲ್ಕೆಂಟು ದಿನಗಳು (ಸರೀಸೃಪಗಳು ನಾಲ್ಗಾಲಿನವಾದ) ಜೀವವಿಕಾಸ ಬೃಹನ್ನಾಟಕದ ಕಿರುರೂಪಕವೇ ಆಗಿತ್ತು. ಆಕೆ ನಿರಾತಂಕವಾಗಿ ತೆವಳುತ್ತಿದ್ದ ಕುರ್ಚಿಯ ತಳ ಈಗ ತಲೆಗೆ ಹೆಟ್ಟತೊಡಗಿತ್ತು; ನೆಲಕ್ಕೆ ಕೈಕೊಟ್ಟು ಎದೆ ಎತ್ತುತ್ತಿದ್ದಳು. ನುಸುಳಿ ಸಾಗುತ್ತಿದ್ದ ಟೀಪಾಯ್ ಸಂದು ಇರುಕಿಸಿತ್ತು; ನಾಲ್ಗಾಲು ತೊಡಗಿದ್ದಳು. ಕುರ್ಚಿ ಹತ್ತಿ ಕುಳಿತಳು, ಟೀಪಾಯ್ ಮೇಜುಗಳೆಲ್ಲವೂ ಕೈಯಾಸರೆಯಲ್ಲಿ ನಿಲ್ಲುವ ತಾಣಗಳಾದವು. ಅಗಮ್ಯವೆಂದೇ ಬಿಟ್ಟಿದ್ದ ಮಹಡಿಗೇರುವ ಸೋಪಾನಸರಣಿಯ ಬುಡಕ್ಕೆ ಹೋಗಿ ಈಗ ಆಕೆ “ಹತ್ತಿ” ಎಂದು ಮೊಣಕಾಲಿಕ್ಕಿದರೆ ಸಾಕು, ಬೆಂಗಾವಲಿನವರು ಥೇಟ್ ‘ವಿಕೆಟ್ ಕೀಪರ್’ಗಳಾಗಲೇಬೇಕು! ಎರಡೂ ಹಸ್ತ ಅರಳಿಸಿ ಹಿಂದುರುಳದಂತೆ ಕಾಯಲೇಬೇಕು. ನಾವು ತಿನ್ನುವ ಯಾವುದಕ್ಕೂ ಅವಳ ಪೂರ್ಣ ತೆರೆದ ಬಾಯಿ ಪಾಲು ಕೇಳುತ್ತಿತ್ತು. ಹಾಗೆಂದು ಕುಶಿ ಹೆಚ್ಚಿ ಯಾವುದನ್ನೂ ಇದ್ದಂತೆ ಕೊಡುವಂತಿಲ್ಲ; ಇರುವ ಮೂರೂವರೆ ಹಲ್ಲು ತಪ್ಪಿಸಿ ಗಂಟಲು ಕಟ್ಟಿಬಿಟ್ಟರೆ? ಮೆತ್ತಗಿನ ದೋಸೆ, ರೊಟ್ಟಿಯಾದರೂ ಹಿಸಿದು ಕೊಡಬೇಕು. ಚಕ್ಕುಲಿ, ಚಿಪ್ಸ್ ಕುಟ್ಟಾಣಿಗಿಕ್ಕಿ ಪುಡಿ ಮಾಡಿ ಕೊಟ್ಟರೆ “ಎಷ್ಟು ತಿಂದರೂ ಸಾಲದು”! “ಆಂ” (=ತಿನ್ತೇನೆ?) ಸೌಮ್ಯ ಅರ್ಜಿ, “ಆಂಪುಡ್ಕ” (=ತಿನ್ನುವುದನ್ನು ಕೊಡೋ?) ಹಕ್ಕೊತ್ತಾಯ!

ದಿನದಿನವೂ ‘ಹೊಸ ಆಟ’, ಹೊಸ ಪ್ರದರ್ಶನ. ಮೇಜಿನಂಚು ಹಿಡಿದು ಅದರುದ್ದ ನೋಡಿದ್ದಾಯ್ತು, ಟೀಪಾಯಿಯ ಸುತ್ತಳತೆ ತೆಗೆದದ್ದಾಯ್ತು. ಮುಂದೆ ಅಲ್ಲಿ ಅಮ್ಮ, ಇಲ್ಲಿ ಅಜ್ಜಿಯಿದ್ದರೆ ನಡುವೆ ಇವಳದ್ದು ಕೈಬಿಟ್ಟಾಟ. ಜತೆಗೆ “ತಾನೆ ತಾನೇ” ಎಂದು ಅಡ್ಡಾತಿಡ್ಡ ಓಟ ಸಾಧನೆಯ ಜಪ. ಅವಳ ಪ್ರತಿಯೊಂದೂ ಮುಗ್ದ ಕಲಿಕೆಯ ನಡೆಗಳೆಲ್ಲ ನಮಗೆ ಮುದ್ದಿನ ಆಟಗಳೇ. ಅವಳ ಸಹಜ ತೊದಲ್ನುಡಿಗಳೆಲ್ಲ (ಹಿರಿಯರ ಅನುಕರಣೆಗಿರುವವಲ್ಲ ಎಂಬ) ನಮ್ಮ ಓದು ತಿಳುವಳಿಕೆಗಳನ್ನು ಮರೆಯಿಸಿ, ಮೆಲುಕು ಹಾಕಿ, ಅವಳಿಗೇ ಪ್ರಯೋಗಿಸಿ ಮೋಜುಪಡುವ ಸನ್ನಿವೇಶಗಳು; ತಿರುತಿರುಗಿ ಕೇಳುವ ಚಪಲ, ತಪ್ಪೆಂದು ಅರಿವಿದ್ದೂ ಆಗೊಮ್ಮೆ ಈಗೊಮ್ಮೆ ಬಂದವರೆದುರು ‘ಪ್ರದರ್ಶಿಸುವ’ ಭ್ರಾಂತು!

ಆಭಾ ಹೆಚ್ಚಾಗಿ ಯಾವುದೇ ಹೊಸಬರ ಸಂಗವನ್ನೂ ತಿರಸ್ಕರಿಸಿದ್ದಿಲ್ಲ. ಆದರೆ ಸುಂದರ ಕೀರ್ತನೆಯೊಂದು ಚರಣಗಳಲ್ಲಿ ವಿಸ್ತರಿಸಿದ ಭಕ್ತಿಯನ್ನು ಮತ್ತೆ ಮತ್ತೆ ಪಲ್ಲವಿಗೆ ಹೋಗಿ ಬಲಗೊಳಿಸಿಕೊಳ್ಳುವಂತೆ, ಆಭಾ ಯಾರೊಡನೆಷ್ಟು ಆಟದಲ್ಲಿ ಮಗ್ನಳಾಗಿದ್ದರೂ ನಿಯತ ಕಾಲಗಳಲ್ಲಿ ಒಂದು ಗಳಿಗೆಗಾದರೂ ಅಮ್ಮನಪ್ಪುಗೆಗೆ ಧಾವಿಸುತ್ತಿದ್ದದ್ದು ನಮಗೆ ಆಶ್ಚರ್ಯದ ಬಂಧ. ಇದನ್ನು ನಾವು ತಮಾಷೆಗೆ “ಬ್ಯಾಟ್ರೀ ರೀಚಾರ್ಜ್” ಎನ್ನುವುದಿತ್ತು.

ಆಭಾಳಿಗೆ ಮನೆ, ಊರುಗಳಲ್ಲಿ ನಮ್ಮದು, ದೂರದ್ದು ಎಂಬ ಕಲ್ಪನೆ ಇನ್ನೂ ಬಂದಂತಿಲ್ಲ. ಆದರೆ ಅವಳೊಂದಿಗೆ ತೀರಾ ಒಡನಾಡಿದವರು, ತುಸು ಸಮಯ ಕಳೆದ ಮೇಲೂ ಕಣ್ಣ ಮರೆಯಲ್ಲಿದ್ದರೂ ಆಕೆ ಗ್ರಹಿಸಿದ ಯಾವುದೋ ಸೂಚ್ಯ ಸದ್ದು, ಕ್ರಿಯೆಗಳಲ್ಲೆ ಪರಿಚಯ ಹೇಳುವ ಪರಿ ಭಾರೀ ಚಂದ. ಉದಾಹರಣೆಗೆ ಬೆಂಗಳೂರಿನಲ್ಲಿದ್ದುಕೊಂಡು ಅಭಯ ಅಥವಾ ರಶ್ಮಿ ಚರವಾಣಿಯಲ್ಲಿ ಮಂಗಳೂರಿನ ನಮ್ಮೊಡನೆ ಸಂಭಾಷಿಸುವ (ಏಕಮುಖ) ಶೈಲಿಯಲ್ಲೇ ಆಕೆ ನಮ್ಮನ್ನು ಗುರುತಿಸುತ್ತಿದ್ದಳು. ಆಗಲೂ ಇಲ್ಲೂ ನಾನು ಸ್ವಲ್ಪಕಾಲ ಮರೆಯಲ್ಲಿದ್ದು, ಕೇವಲ ಧ್ವನಿ ಕೇಳಿದಾಗಲೂ ನನ್ನ ‘ಸಿಳ್ಳೇ ಹವ್ಯಾಸ’ವನ್ನು ತುಟಿ ಚೂಪು ಮಾಡಿ ಅನುಕರಿಸಿ, “ಊ ಊ” ಎಂದೂ ಅಸ್ಪಷ್ಟ ಅಭಿನಯ ಮಾಡುವುದರೊಂದಿಗೆ “ಅಜ್ಜ” ಎನ್ನುತ್ತಾಳೆ. ಆಕೆ ಮಾಡಿದ್ದೆಲ್ಲಕ್ಕೂ ಪ್ರೀತಿಯ ಅನುಮೋದನೆ ಕೊಡುತ್ತಿದ್ದ ದೇವಕಿಯನ್ನು “ಅಪ್ಪೂ” (ಹವ್ಯಕದಲ್ಲಿ ಹೌದು) ಎಂದೇ ಗುರುತಿಸುತ್ತಾಳೆ. ದೇವಕಿ ಹಣೆಗೆ ಕೈಯಿಟ್ಟು “ರಾಮಾ” ಎನ್ನುವುದರ ಆಭಾ ಅಭಿನಯ ನೋಡಿದರೆ ಆಜನ್ಮ ಉರಿಮುಖಿಯೂ ತಲೆ ಚಚ್ಚಿಕೊಂಡು ನಗದಿದ್ದರೆ ನನ್ನಾಣೆ! ಗಾಳಿಗುದ್ದುವ ಮಗು ಹೋಗಿ, ನಾನೇ “ಆಭಾ” ಎಂದು ಎದೆ ತಟ್ಟಿ ಹೇಳಿಕೊಳ್ಳುವ ಹಂತಕ್ಕೆ ಬೆಳೆದಿದ್ದಳು. (ಪ್ರಾಯ ಒಂದೂವರೆ ವರ್ಷ ಮೀರಿಲ್ಲ.) ಅಭಯನ ಚಿತ್ರೀಕರಣದ ಅವಧಿ ಮುಗಿದಿತ್ತು, ಮೂವರೂ ಬೆಂಗಳೂರಿಸಿದರು.

ಮುಂದಿನ ದಿನಗಳಲ್ಲಿ ಅಭಯ ಚಿತ್ರೀಕರಣದ ಉತ್ತರಕ್ರಿಯೆ, ಹೊಸತೇ ಮಹಾ ಕಲಾಪವೊಂದರಲ್ಲಿ ಇನ್ನಷ್ಟು ತೀವ್ರವಾಗಿ ತೊಡಗಿಕೊಂಡ. ಅವೆಲ್ಲದರ ವಿವರಗಳು, ಆತಂಕಗಳು ಪುರುಸೊತ್ತಾದಾಗ ಅಭಯ, ಅಲ್ಲವಾದರೂ ರಶ್ಮಿ ಮೂಲಕ ನಮಗೆ ತಿಳಿಯುತ್ತಲೇ ಇತ್ತು. ಅದು ನಮ್ಮ ಬುದ್ಧಿಗೆ, ಆರ್ಥಿಕತೆಗೆ ಬೇಕಾದ್ದೇ. ಅದರೆ ಅದಕ್ಕೂ ಮಿಗಿಲಾದ್ದು – ರಶ್ಮಿ ಆಗಾಗ ಅಂತರ್ಜಾಲದಲ್ಲಿ ಕಳಿಸುತ್ತಿದ್ದ ಸ್ಥಿರ, ಕಿರು ಚಲಚಿತ್ರ ತುಣುಕುಗಳೊಡನೆ ಚರವಾಣಿ ಮಾತುಗಳಲ್ಲಿ ಬಿತ್ತರಿಸುತ್ತಿದ್ದ ಆಭಾ ಕಲಾಪಗಳು. ಇವು ನಮ್ಮ ಭಾವಕೋಶಕ್ಕೆ ಅಪ್ಯಾಯಮಾನವಾದವು. ಸಿನಿಮಾ, ಪ್ರವಾಸಾದಿಗಳಿಗೆ ಲೋಕರಂಗದ ಮುಖವಿದೆ. ಆಭಾ ನಮಗೆ ಅಂತರಂಗದ್ದು. ರಶ್ಮಿ ತೊಳೆದ ತಟ್ಟೆ ಕಪಾಟು ಸೇರಿಸುವಾಗ ತಪ್ಪಿ ‘ಠಂ’ ಎನ್ನಿಸಿದ್ದಕ್ಕೆ (ನಾನು ಆಕೆಗಾಗಿ ಊಟದ ತಟ್ಟೆಯನ್ನು ಕೆಲವೊಮ್ಮೆ ಬೊಟ್ಟುವುದಿತ್ತು!),ಅಭಯ ಗಣಕದಲ್ಲಿ ಗಂಭೀರವಾಗಿ ಸಂಕಲಿಸುತ್ತಿದ್ದ ರಂಗಗೀತೆಗಳ ನಡುವೆ ಯಾವುದೋ ರಾಗ ಧಾಟಿ ‘ಮೂಡಿ ಬಾರಯ್ಯಾ…’ದಂತೆ ಕೇಳಿದಾಗ (ನನ್ನ ಗಣಕ ಚಟುವಟಿಕೆ ಮಧ್ಯೆ ಅವಳು ಬಂಗಾಗೆಲ್ಲ ನಾನು ನೀನಾಸಂ ರಂಗಗೀತೆಗಳನ್ನು ಕೇಳಿಸುವುದಿತ್ತು. ಅವುಗಳಲ್ಲೂ ‘ಮೂಡಿ ಬಾರಯ್ಯಾ…’, ಎನಿತು ದೂರಕೆ ಸರಿದು ನಿಂತಿಹೆ ಮತ್ತು ಅಗಲಿ ಇರಲಾರೆನೋ – ಅವಳ ಬಹು ಪ್ರೀತಿಯ ರಾಗಗಳು. ತಮಾಷೆ ಎಂದರೆ ಮೂರೂ ವಿರಹಗೀತೆಗಳು!!), ಇನ್ನೇನೋ ಚಟುವಟಿಕೆಯಲ್ಲಿದ್ದ ಆಭಾ ಕಣ್ಣಲ್ಲಿ ಹೊಸ ಮಿಂಚು ಹೊಳೆಯಿಸಿ “ಅಜ್ಜ” ಎಂದು ಬಿಡುವುದಿದೆ. ಆಕೆಗೆ ಊಟ ಮಾಡಿಸುವ ಕೊಸರಾಟದಲ್ಲಿ ರಶ್ಮಿಯ ಕೈತುತ್ತು ತಟ್ಟಿ, ತಿನಿಸು ಊರೆಲ್ಲಾ ಹರಡಿದಾಗ, ಇತರರು ತಲೆಬಿಸಿ ಮಾಡುವ ಮೊದಲೇ ಆಭಾ ಅಜ್ಜಿಯನ್ನು ಆವಾಹಿಸಿಕೊಂಡವಳಂತೆ, ತನ್ನ ಪುಟ್ಟಕೈಯನ್ನು ಹಣೆಗೆ ಬಡಿದು “ರಾಮಾ” ಎನ್ನುವುದೂ ಇದೆ. ಅವಳ ಮಾತು, ಚರ್ಯೆಗಳು ನೇರ ನಮ್ಮನ್ನು ಕರೆಯದಿದ್ದರೇನು, ಭಾವಮಿಡಿತದಲ್ಲಿ ನಾವು ಧಾರಾಳ ಸೇರಿದ್ದೇವಲ್ಲಾ – ಸಾಕು. ಹಾಗಾಗಿ ಹೈದರಾಬಾದ್ ಮಹಾಯಾನ, ಮೈಸೂರು ಕರ್ತವ್ಯಗಳ ಸುತ್ತು ಮುಗಿದ ಮೇಲೆ, ನಾಲ್ಕು ದಿನಕ್ಕಾದರೂ ಸರಿ ಎಂದು ಬೆಂಗಳೂರಿಸಿದ್ದೆವು – ಆಭಾ ಸಾಂಗತ್ಯಕ್ಕೆ. ಆ ಸಣ್ಣ ಅವಧಿಯಲ್ಲಿ ದಿನದ ಮುಕ್ಕಾಲು ವೀಸಾ ತೂಕ ಆಭಾ ಅನುಭವಗಳೇ ಇದ್ದರೂ ಇಲ್ಲಿ ಇನ್ನು ಸ್ತುತಿಪಾಠ ಹೆಚ್ಚಿಸುವುದಿಲ್ಲ! ನಾನು ಗಳಿಸಿದ ಕೆಲವು ಭಿನ್ನವಾದ ಅನುಭವವನ್ನಷ್ಟೇ ಟಿಪ್ಪಣಿಗಳ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.

೨. ಎಲ್ಲ ಸಮಸ್ಯೆಗಳಿಗೆ ಸೈಕಲ್ ಉತ್ತರ!

ಮೇಲಿನದು ಶೀರ್ಷಿಕೆಯಲ್ಲ, ಇತರರ ಮಾತಿಗೆ ಮೊದಲು ನಾನು ಹೀಗೆ ಹೇಳುತ್ತೇನೆಂದು ನನ್ನ ಮೇಲಿನ ದೇವಕಿಯ ಆರೋಪದ ಸಾರ. ಇದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚದೆ ಸೈಕಲ್ ಕೊಂಡವರಲ್ಲಿ ಅಭಯನೂ ಒಬ್ಬ. ಆದರೆ ಅವನು ಬಹುತೇಕ ಭಕ್ತರಂತೆ ‘ನಾಮದ ಬಲವೊಂದಿದ್ದರೆ ಸಾಕು’ ಎಂದುಕೊಂಡವ! ಅದರ ‘ಸಿದ್ಧಿ’ಗಿಳಿಯದೆ, ‘ಸಾನ್ನಿಧ್ಯ’ವನ್ನಷ್ಟೇ ಉಳಿಸಿಕೊಂಡಿದ್ದಾನೆ. ಹೋದ ಮರುದಿನ ಬೆಳಗ್ಗಿನ ನನ್ನ ‘ಸರ್ಕೀಟ್’ಗೆಂದು ಆ ಸೈಕಲ್ ಹಿಡಿದರೆ ಸಹಜವಾಗಿ ನಿರಾಶೆ ಕಾದಿತ್ತು. ಹೆಸರು ಖ್ಯಾತಿಗಳಲ್ಲಿ ಪೂರಾ ಅದು ನನ್ನದೇ ‘ಜಾತಿ’ – ಮೆರಿಡಾ ಎಂಟೀಬಿ. (ಇದರಲ್ಲೇ ನಾನು ಎರಡು ವರ್ಷಗಳ ಹಿಂದೆ ಉದಕಮಂಡಲಕ್ಕೆ ಹೋಗಿ ಬಂದದ್ದು ನಿಮಗೆ ನೆನಪಿರಬಹುದು. ಇಲ್ಲದಿದ್ದರೆ ಇಲ್ಲಿ ನೋಡಿ: ನೀಲಗಿರಿಗೆ ಸೈಕಲ್ ಸವಾರಿ) ಉಸಿರುಬಿಟ್ಟ ಚಕ್ರ, ತುಕ್ಕು ಹಿಡಿದ ಸರಪಳಿ, ಜಡ್ಡುಗಟ್ಟಿದ ಗೇರು ಸಂಕೀರ್ಣ, ಸವಕಲು ಬಿರಿ – ತೀರಾ ನಿಸ್ತೇಜ ಚಿತ್ರ. ಮೊದಲ ದಿನ ಅದರ ದೂಳು ಹೊಡೆದು, ಬೆಂಗಳೂರು ಲೆಕ್ಕದಲ್ಲಿ ಭಾರೀ ಬೆಳಿಗ್ಗೆಯೇ (ಎಂಟೂವರೆಗೆ!) ಕೆಲಸ ಶುರು ಮಾಡಿದ್ದ ಮೋಟಾರ್ ಸೈಕಲ್ ಕ್ಲಿನಿಕ್ಕಿನವನ ಕೃಪೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದೆ. ಆತ ಹೊರರೋಗಿ ವಿಭಾಗದಲ್ಲಿ ಚಕ್ರಕ್ಕೆ ಗಾಳಿ ಹಿಡಿದು, ಸಂಧಿಗಳಿಗೆ ಎಣ್ಣೆ ಬಿಟ್ಟುಕೊಟ್ಟ.

ಚನ್ನಸಂದ್ರದ ವಿಷ್ಣುವರ್ಧನ ರಸ್ತೆಯಲ್ಲಿರುವ ಅ(ಭಯ)ರ(ಶ್ಮಿಯರ)ಮನೆಯಿಂದ ಕನಕಪುರದತ್ತಣ ರಸ್ತೆ ಹಿಡಿದೆ. ನೈಸ್ ರಸ್ತೆಯಡಿಯಲ್ಲಿ ನುಸಿದು, ದಿಬ್ಬ ಏರಿ, ತುರಹಳ್ಳಿ ಕಾಡಿನಂಚಿನ ಮಹಾದೇವಿ ದೇವಳ ಕಂಡೆ. ಅದು ನಮ್ಮ ‘ಅರಮನೆ’ಗೆ ಸಮೀಪದ ಗುಡ್ಡೆಯ ಮೇಲಿರುವ ಓಂಕಾರಾಶ್ರಮದ ಶಾಖೆಯಂತೆ, ಹತ್ತೇ ವರ್ಷ ಪ್ರಾಯದ್ದಂತೆ. ದೇವಕರುಣೆ ಅಪಾರ – ಗುಡ್ಡೆಯೇ ಮಹಮ್ಮದನಲ್ಲಿಗೆ ಬಂದಂತೆ, ಹೊಸ ಬಡಾವಣೆಗಳಲ್ಲಿ ‘ಭಜನಾಗ್ಲಾನಿ’ ಬರದಂತೆ, ದೇವಳವೇ ಅಲ್ಲಿಗೆ ಅವತರಿಸಿತ್ತು; ಮಹಿಮೆ ಅಪಾರ! ಹಾಗೆಂದು ಹೊಗಳಿ ಮುಗಿಸುವ ಮುನ್ನ, ಮುಂದೆ ನಿಜಕ್ಕೂ ಒಂದು ಹಳತೇ ದೇವಳ-ಮಹಾದ್ವಾರ ಕಾಣಿಸಿತು. ಅದರ ಆಚೆಗೆ ಇದ್ದಿರಬಹುದಾದ ಆಲಯ ಮಾತ್ರ ಯಾವ ಕುರುಹೂ ಉಳಿಯದಂತೆ ಬಯಲಾಗಿತ್ತು. ಅಲ್ಲಿ ಹೊಸತೇ ವಸತಿ ನಿವೇಶನಗಳು, ಮೂಲಾವಶ್ಯಕತೆಗಳಾದ ರಸ್ತೆ, ದೀಪಸ್ತಂಭ, ಚರಂಡಿ, ಇತ್ಯಾದಿಯೊಡನೆ ಸಜ್ಜಾಗಿದ್ದದ್ದು ಕಾಣಿಸಿತು. ಅಂದರೆ, ಮೊದಲೇ ಲಕ್ಷಾಂತರ ದೇವರುಗಳ ಭಾರ(-ತ)ಕ್ಕೆ ಹೊಸ ದೇವರುಗಳ ಸೇರ್ಪಡೆ ಮಾತ್ರವಲ್ಲ, ಕೆಲವಾದರೂ ದೇವರುಗಳನ್ನು, ಅಲ್ಲಲ್ಲ ಸ್ಥಾನಗಳನ್ನು ಇಲ್ಲವಾಗಿಸುವ ತಾಕತ್ತೂ ನಮಗುಂಟೂಂತಾಯ್ತು. ಈಗ ನೀವೇ ಹೇಳಿ – ಅಳುವುದೋ ನಗುವುದೋ?

ಸ್ವಲ್ಪ ಕಚ್ಚಾದಾರಿ ಕಳೆದದ್ದೇ ಮತ್ತೆ ಜೋಡಿದಾರಿ. ಅದು ಮುಂದುವರಿದಲ್ಲಿ ಡಾಮರೀಕರಣ ನಡೆದಿತ್ತು. ನಾನು ಎಡಗವಲು ಹಿಡಿದೆ. ಅದು ಬೆಮನಪಾದ (ಬೆಂಗಳೂರು ಮಹಾನರಕಪಾಲಿಗೆ) ಘನತ್ಯಾಜ್ಯ ಪರಿವರ್ತನ ಘಟಕಕ್ಕೆ ಮುಗಿದಿತ್ತು. ನಾನು ಕುತೂಹಲದಲ್ಲಿ ಒಳಗಿನ ಕಾರ್ಯಾಚರಣೆಯನ್ನು ನೋಡಲು ಮುಂದಾದೆ. ಕಸಗಳ ಸ್ವರ್ಗದ ಜಯವಿಜಯರು ತಡೆದರು. ಒಬ್ಬ ಕೆಳಧ್ವನಿಯಲ್ಲಿ ‘ಸ್ಥಳೀಯ ದೇವರ’ (ಡ್ಯಾಮೇಜರ್ ಯಾನೆ ಮ್ಯಾನೇಜರ್) ಮೊರೆ ಹೋಗಲು ಸೂಚಿಸಿದ. ಅದನ್ನು ಕೇಳಿಸಿಕೊಂಡ ದೊಡ್ಡ ಬಾಯಿಯವ, ಏನೋ ರಾಷ್ಟ್ರೀಯ ಗೌಪ್ಯ ಕಾಯುವ ಜವಾಬ್ದಾರಿಯವನಂತೆ ಮೊದಲು ಅವನಿಗಷ್ಟು ಶಾಪ ಹಾಕಿದ. ಅನಂತರ “ಬೊಮ್ಮನಪಾದದಿಂದ ಪರಮೇಶ್ವರನ್ ತನ್ನಿ” (ಬೆಮನಪಾದ ಪರ್ಮೀಶನ್) ಎಂದು ನನ್ನನ್ನು ಸಾಗಹಾಕಿದ. ಇದ್ದರೂ ಇರಬಹುದು, ಮನೆಮನೆಯ ಕಸಕ್ಕೆ ಅದೆಷ್ಟು ವ್ಯಾನು ಸಿಬ್ಬಂದಿ, ನಮ್ಮ ಅಂಗಳ ಶುದ್ಧಿಯಿಂದು ರಾಷ್ಟ್ರೀಯ ಆಂದೋಳನ – ಸ್ವಚ್ಛಭಾರತ್! ‘ಬರಗಾಲ ಬಹುಜನಪ್ರಿಯ’ ಎಂದು ಒಂದೇ ಪುಸ್ತಕ ಬರೆದು ಪಿ. ಸಾಯಿನಾಥರು ತಪ್ಪಿದ್ದಾರೆ. ನಿಜದಲ್ಲಿ ಅದು ಒಂದು ಪುಸ್ತಕ ಮಾಲೆಯ ಮೊದಲ ಪುಸ್ತಕ ಮಾತ್ರ. ಸರಣಿಯನ್ನು ಮುಂದುವರಿಸುವುದಾದರೆ ‘ಕೊಳಚೆಯೆಂದರೂ ಬಹುಜನಪ್ರಿಯ’ ಯಾಕಾಗಬಾರದು?! ಘನತ್ಯಾಜ್ಯ ಘಟಕದ ಭಾರೀ ಕಟ್ಟಡ, ಕೇವಲ ಅದಕ್ಕಷ್ಟೇ ಬರುವ ‘ಕಚಡಾ ಲಾರಿ’ಗೂ ಇನ್ನೂರಡಿಗೂ ಮಿಕ್ಕ ಚತುಷ್ಪಥ ಅಲಂಕಾರದ ದಾರಿ ಎಲ್ಲ ನೋಡಿದರೆ ‘ನವನಿರ್ಮಾಣ’ವೆಂದರೂ ಬಹುಜನಪ್ರಿಯ ಸರಣಿಯಲ್ಲಿ ಮೂರನೆಯ ಪುಸ್ತಕವಾದರೆ ಆಶ್ಚರ್ಯವಿಲ್ಲ. ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ.

ಮುಂದುವರಿದು, ಬಲಗವಲು ಆಯ್ದು ಕೆಂಗೇರಿಯ ಬಳಿ ಮತ್ತೆ ವಿಷ್ಣುವರ್ಧನ ರಸ್ತೆ ಸೇರಿದೆ. ‘ಅರಮನೆ’ಯನ್ನೂ ಮೀರಿ ಬೆಮೆಲ್ ಬಸ್ ನಿಲ್ದಾಣದೆದುರು ಹಾಯ್ದು ನೋಡಿದೆ. ಅಲ್ಲಿನ ಭಾರೀ ಸೈಕಲ್ ಅಂಗಡಿಯಾತನಿಗೆ ಇನ್ನೂ (ಹನ್ನೊಂದು ಗಂಟೆ) ಬೆಳಿಗ್ಗೆಯಾದಂತಿರಲಿಲ್ಲ. ದೇವಕಿಯ ಆರೋಪ ಪಟ್ಟಿಗೆ ಪ್ರತಿಪಟ್ಟು ಎಂಬಂತೆ, ‘ಸೈಕಲ್ಲೇ ಸಮಸ್ಯೆ’ಯಾಗಿ ಉಳಿದ ನಿರಾಶೆಯಲ್ಲೇ ಮನೆಗೆ ಮರಳಿದೆ.

೩. ಕೊಳಚೆ ಕೈಯಲ್ಲಿ ಹಿಡಿದಿಟ್ಟ ಗಂಗೆ

ಇಂದು (೨೨-೧೨-೨೦೧೭) ಬೆಳಿಗ್ಗೆ ಬೆಮೆಲ್ ಬಸ್ ನಿಲ್ದಾಣದ ಎದುರಿನ ನಿದ್ರಾಭಯಂಕರ ಸೈಕಲ್ ಅಂಗಡಿ ದ್ವಾರದಲ್ಲಿ ಹನ್ನೊಂದೂವರೆಯವರೆಗೂ ತಪಸ್ಸು ಮಾಡಿ ಪ್ರತ್ಯಕ್ಷೀಕರಿಸಿಕೊಂಡೆ. ಮೊದಲು “ಅಯ್ಯೋ ಎಣ್ಣೆ ಹಾಕಿದ್ಯಾಕೆ, ವಾಟರ್ ವಾಶ್ ಮಸ್ಟ್, ಬಿರಿರಬ್ಬರ್ ಬದಲಾವಣೆ ಅವಶ್ಯ, ಯಾವ ಸರಿಗೆಗಳೂ ನಂಬುವಂತಿಲ್ಲ, ಡಿರೇಲರ್ ಕೆಲ್ಸಾ ಮಾಡ್ತಿಲ್ಲ….. ‘ಬಳಸು, ಬಿಸಾಕು’ ಯುಗಧರ್ಮದಂತೆ ಮಾರುದ್ದ ಅಂದಾಜುಪಟ್ಟಿ ಹೊರಟಿತು. ಕಾರ್ಪೊರೇಟ್ ಆಸ್ಪತ್ರೆಗೆ ತಾವೇನೂ ಕಡಿಮೆಯಿಲ್ಲ ಎನ್ನುವಂತೆ, ಒಳರೋಗಿ ಮಾಡಿಕೊಳ್ಳಲು ಕಾಗದ ಪತ್ರ ಸಜ್ಜುಗೊಳಿಸುತ್ತ “ಇದು ರಫ್ ಎಸ್ಟಿಮೇಟ್. ಎಲ್ಲಕ್ಕೂ ಬಿಟ್ಟೋಗಿ” ಎಂದ. ನಾನು “ಮಾಡು ಇಲ್ಲವೇ (ಗಾಡಿ) ಬಿಡಿ, ಇಲ್ಲಿ ನನ್ನದೇನಿದ್ದರೂ ಮೂರು ದಿನದ ಬಾಳು’” ಎಂದು ಅಧ್ಯಾತ್ಮದ ಪಟ್ಟು ಹಾಕಿದ ಮೇಲೆ ಗೇರು, ಬ್ರೇಕು ತುಸು ಸರಿ ಮಾಡಿಕೊಟ್ಟ (ಅಂತದ್ದರಲ್ಲೂ ಮುನ್ನೂರಿಪ್ಪತ್ತು ರೂಪಾಯಿ ಕೈ ಬಿಟ್ಟಿತು).

ಮನೆಯವರೆಗೆ ಸುಮ್ಮನೇ ಮೆಟ್ಟಿದವ, ಸೈಕಲ್ಲಿನ ಹೆಚ್ಚಿನ ಪರೀಕ್ಷೆಗೆನ್ನುವಂತೆ ಕೆಂಚೇನಹಳ್ಳಿ ರಸ್ತೆಯುದ್ದಕ್ಕೆ ಮುಂದುವರಿಸಿದೆ. ಕಳೆದ ಬಾರಿ ಬಂದಿದ್ದಾಗ. ಜ್ಞಾನಾಕ್ಷಿ ವಿದ್ಯಾಲಯಕ್ಕೆ ಮುನ್ನ ಭಾರೀ ದೂಳು ಎಬ್ಬಿಸಿ, ಹೂಳು ಕೊಟ್ಟು ಕಾಡುತ್ತಿದ್ದ ‘ಅಭಿವೃದ್ಧಿ ಪಥ’ದಲ್ಲಿದ್ದ ಪಥ ಈಗ ಶುದ್ಧವಾಗಿತ್ತು. ಹಾಗೇ ಪಟ್ಟಣಗೆರೆ ಹಳ್ಳಿಯ ಸಾಂಪ್ರದಾಯಿಕ ಗಲ್ಲಿಗಳನ್ನು ಕುಟ್ಟಿ, ಕೊಚ್ಚಿ ನವವಾಹನ ಭರಾಟೆಗೆ ತೆರೆದಿಟ್ಟಿದ್ದರು. ಈ ವರ್ಷದ ವಿಶೇಷ ವರುಣಕೃಪೆ ಇಲ್ಲಿನ ಕೆರೆಯಲ್ಲೂ ಸಮೃದ್ಧಿ ಮೂಡಿಸಿತ್ತು. ಆದರೆ ಅದಕ್ಕೆ ಜಲ ಊಡುವ ಪ್ರದೇಶವೆಲ್ಲ ಕೊಳಚೆಯವೇ ಆದರೆ ‘ಗಂಗೆ’ ಹೇಗೆ ಶುದ್ಧ ಉಳಿದಾಳು?!

ಮುಂದೆ ಬಲಕ್ಕೆ ತಿರುಗಿ ನಿಮಿಷಾಂಬ ದೇವಳದ ದಾರಿಯಲ್ಲಿ ತುಸು ಹೋಗಿ, ನಾಮಧಾರೀ ತರಕಾರಿ ಅಂಗಡಿಯ ಬಳಿ ಎಡ ತಿರುಗಿ, ರಾಜರಾಜೇಶ್ವರಿ ನಗರದ ಹೃದಯಕ್ಕೇ ನುಗ್ಗಿದೆ. ಆ ಕೊನೆಯಲ್ಲಿ ನನ್ನ ಚಿಕ್ಕಪ್ಪ (ದಿವಂಗತ) ಮೂರ್ತಿ ಮನೆಗೆ ಐದೇ ಮಿನಿಟಿನ ಭೇಟಿ ಕೊಟ್ಟೆ. ತಮ್ಮ (ಚಂದ್ರ) ಶೇಖರನಿಗೆ ಹಲೋ ಹೇಳಿ, ಮರಳುವಲ್ಲಿ ರಾಜರಾಜೇಶ್ವರಿ ನಗರದ ಮುಖ್ಯ ದಾರಿಯನ್ನೇ ಬಳಸಿಕೊಂಡೆ. ಮತ್ತೆ ಪಟ್ಟಣಗೆರೆ, ವಿಷ್ಣುವರ್ಧನ ರಸ್ತೆ, ಅರಮನೆ.

೪. ಡಬ್ಬಲ್ ಫಿಲ್ಟರ್ಡ್ ವೃಷಭಾವತಿ ತೀರ್ಥ!

ಉತ್ತಮ ತಳಿಯ ಸಸ್ಯ ಬೀಜ ಸಂವರ್ಧನೆಯಲ್ಲಿ ಹೆಸರುವಾಸಿಯಾಗಿ ಈಚೆಗೆ ತೀರಿಹೋದ ಮನಮೋಹನ ಅತ್ತಾವರ (೧೯೩೨-೨೦೧೭) ಅವರ ಗಣ್ಯ ಪಾಲುಗಾರರು ನಮ್ಮ (ದಕ ಜಿಲ್ಲೆಯ) ನೂಜೀಬೈಲಿನ ಕೃಷ್ಣಭಟ್ಟರು (ಬೆಂಗಳೂರು ನಿವಾಸಿ). ಇವರ ಆದರ್ಶ ಕೃಷಿಕ್ಷೇತ್ರದ ಒಂದು ತುಣುಕು ‘ಅರಮನೆ’ಯ ಒತ್ತಿಗೇ ಇದೆ. ಇಂದು (೨೩-೧೨-೨೦೧೭) ಬೆಳಿಗ್ಗೆ ವಿಷ್ಣುವರ್ಧನ ರಸ್ತೆಯ ವಾಹನ ಒತ್ತಡ ತಪ್ಪಿಸಲು ನೂಜೀಬೈಲು ವಠಾರದ ಒತ್ತಿನ ದಾರಿಯ ಉದ್ದಕ್ಕೆ ಸೈಕಲ್ಲೇರಿ ಹೊರಟೆ. ಕೆಲವು ಕುರುಡುಕೊನೆಗಳನ್ನು ಶೋಧಿಸಿ, ತಲಪಿದ್ದು ಬೆಂಗಳೂರಿನ ನರಕದ ಹೊಳೆ ಎಂದೇ ಖ್ಯಾತವಾಗಿರುವ ವೃಷಭಾವತಿಯ ದಂಡೆ.

ವೃಷಭಾವತಿಗೆ ಇಲ್ಲಿ ಹೊಸ ಸೇತುವೆಯ ಕಾಮಗಾರಿ ಬಹುತೇಕ ಪೂರ್ತಿಯಾಗಿದ್ದರೂ ವಾಹನ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಆದರೆ ಸೈಕಲ್ ಎತ್ತಿ ದಾಟಿಸಲು ಅಡ್ಡಿಯಿರಲಿಲ್ಲ. ಆಗ ಕ್ಷಣ ಮಾತ್ರ ಹೊಳೆ ಪಾತ್ರೆಗೆ ದೃಷ್ಟಿ ಹಾಯಿಸಿದರೂ ಕಾಣಿಸುವ ಅವಹೇಳನದ ಕುರುಹುಗಳು ಸಾವಿರ! ಅಲ್ಲಿನ ಸ್ಥಳನಾಮ – ಮೈಲಸಂದ್ರ, ಇದರ ಮೂಲ ಏನೇ ಇರಲಿ, ಕಣ್ಣು ಮೂಗಿದ್ದ ಯಾರಿಗೂ ಇಂದು ಅದು ಮೈಲಿಗೆ ಸಮುದ್ರ. ಅದನ್ನು ಕಳಚಿಕೊಂಡು ಮೈಸೂರು ರಸ್ತೆ ಸೇರಿ ಕೆಂಗೇರಿಯತ್ತ ಮುಂದುವರಿದೆ.

ಎರಡೆರಡು ಮೇಲ್ಸೇತುವೆಗಳ ಅಡಿಯಲ್ಲಿ ತೂರಿ, ಬಲ ದಾರಿಗೆ ಹೊರಳಿಕೊಂಡೆ. ಈ ವಲಯದಲ್ಲಿ ಬೆಂಗಳೂರು ಅಭಿವೃದ್ಧಿ ನಿಗಮ (ಬಿಡಿಎ) ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಅಸಂಖ್ಯ ವಸತಿ ನಿವೇಶನಗಳನ್ನೂ, ಗೃಹಸಮುಚ್ಛಯಗಳನ್ನೂ ಸಾರ್ವಜನಿಕರಿಗೆ ಸಜ್ಜುಗೊಳಿಸುತ್ತಿದೆ. (ಇಲ್ಲಿ ಅಭಯನಿಗೆ ಸ್ವಂತದ ಕನಸಿನ ಮನೆ ಕಟ್ಟಲು, ‘ಗುಬ್ಬಚ್ಚಿಗಳು’ ಸಿನಿಮಾದ ರಾಷ್ಟ್ರಪತಿ ಪ್ರಶಸ್ತಿ ವಿಜೇತನ ನೆಲೆಯಲ್ಲಿ ಒಂದು ನಿವೇಶನ ಸಿಕ್ಕಿದೆ). ಕೆಲವೇ ವರ್ಷಗಳ ಹಿಂದಿನವರೆಗೂ ಅದೆಲ್ಲ ನಾನು ಮೊದಲೇ ಹೇಳಿದ ಮನಮೋಹನ ಅತ್ತಾವರ, ನೂಜಿಬೈಲ್ ಕೃಷ್ಣಭಟ್ಟರ ಬೀಜ ಸಂವರ್ಧನೆಯ ಫಲವಾಗಿ ನೂರಾರು ಸಸ್ಯ ತಳಿಗಳು ವಿಕಸಿಸಿದ್ದ ನೆಲವಾಗಿತ್ತಂತೆ. ಇಂದು ಕಾಂಕ್ರೀಟ್ ಕಬ್ಬಿಣಗಳ ಗಗನಚುಂಬಿ ಬೆಸುಗೆಯಲ್ಲಿ ನೂರು ಸಾವಿರ ಮನೆಗಳಾಗಿ ಅರಳುತ್ತಿವೆ. ಮೂವತ್ತು ನಲ್ವತ್ತರ (ಅಡಿ) ಸಾವಿರಾರು ತುಣುಕುಗಳಾಗಿ ಮನುಷ್ಯೇಕ ತಳಿ ಸಂವರ್ಧನೆಯ ಶುಷ್ಕ ನೆಲವಾಗಲಿದೆ. ವಲಯದ ಮಳೆನೀರ ಹರಿವಿನ ತಗ್ಗು ಹೆಸರಿಗೆ ರಾಜಕಾಲುವೆ ಎನ್ನಿಸಿಕೊಂಡರೂ ಮತ್ತೊಂದೇ ಕೊಳಚೆ ಉಪನದಿಯಾಗಿ ವೃಷಭಾವತಿಯ ಸಂಪತ್ತಿಗೆ ಸೇರಲಿದೆ. ಮುಂದೆ ಅರ್ಕಾವತಿ, ಕಾವೇರಿ ಎಂದೆಲ್ಲಾ ಸಂಗಮಿಸಿ ಮತ್ತೆ ಕೊಳಾಯಿಗಳ ಸಾಲಿನಲ್ಲಿ ಇದೇ ನಾಗರಿಕರ ಹೊಟ್ಟೆ ಸೇರಿ ಅಣಕಿಸಲಿದೆ. ಈ ಕುರಿತ ವಿಷಾದ, ಬೆರಗು, (ಅಭಯನ ಲೆಕ್ಕದ) ಸಂತೋಷಗಳ ಮಿಶ್ರ ಸ್ಥಿತಿಯಲ್ಲಿ ಮೂಕನಾಗಿ ನಾನು ಆ ವಲಯದ ಉದ್ದಗಲಕ್ಕೆ ಪೆಡಲು ತುಳಿದು ಮುಗಿಸಿ, ಹಿಮ್ಮುಖನಾದೆ. ಕೆಂಗೇರಿಯಲ್ಲಿ ವಿಷ್ಣುವರ್ಧನ ರಸ್ತೆ ಹಿಡಿದು ಮನೆ ಸೇರಿ, ಆ ಕ್ಷಣದ ಸಮಾಧಾನಕ್ಕಾಗಿ, ಡಬ್ಬಲ್ ಫಿಲ್ಟರ್ಡ್ ಕಾವೇರಿ ನೀರಿನ ಕುದಿಮಿಶ್ರಣವೊಂದನ್ನು (ಚಾ!) ಲೋಟ ತುಂಬ ಹೊಟ್ಟೆಗೆ ಸುರಿದುಕೊಂಡೆ.

೫. ದೊಡ್ಡವನ ತಪ್ಪಿಗೆ ಸಣ್ಣವರ ದಂಡ ಪ್ರಸಂಗ!

ಇಂದು (೨೪-೧೨-೧೭) ಮತ್ತೆ ಕೆಂಚೇನಳ್ಳಿ ಕವಲನ್ನೇ ನನ್ನ ಸೈಕಲ್ ಒಲಿದಿತ್ತು. ಜ್ಞಾನಾಕ್ಷೀ ವಿದ್ಯಾಲಯ ಕಳೆದ ಮೇಲೆ ಅದರಿಂದ ಬಲಕ್ಕೆ ಸಾರುವ ಕೆಂಪೇಗೌಡ ಜೋಡಿ ರಸ್ತೆ ಅನುಸರಿಸಿದೆ. ಅದು ನಿಧಾನದಲ್ಲಿ ಬಂದ ಮೋಟಾರ್ ವಾಹನಗಳನ್ನೂ ನನ್ನನ್ನು ಪ್ರಥಮ ಗೇರಿಗಿಳಿಸುವ ಷಣ್ಮುಖ ಗುಡ್ಡೆಕ್ಕೇರಿಸಿತು. ಬೆಟ್ಟದೆತ್ತರದಲ್ಲಿ ಬೆಳೆದ ಮರಗಳನ್ನೂ ಮೀರಿ ತಲೆ ಎತ್ತಿದ ಭಾರೀ ಷಣ್ಮುಖನ ಸಿಮೆಂಟ್ ಶಿಲ್ಪದಲ್ಲೇನೋ ಗಾಬರಿಯ ಕಳೆ ಕಾಣಿಸಿದಂತಾಯ್ತು. ನನ್ನ ಊಹೆಯಂತೆ ಕಾರಣ ಸರಳ: ಆ ವಿಗ್ರಹವೇ ದೇವರುಗಳ ಮೂಲ ಆಶಯವಾದ ಪ್ರಕೃತಿತತ್ತ್ವವನ್ನು ಮೀರಿ ಭೂಮಾಕಾರ ತಳೆದಿತ್ತು. ಈಗ ಅದನ್ನೂ ಮೀರಿಸುವ ಉತ್ಪಾತಕ್ಕೆ, ಕ್ಷಮಿಸಿ ಅಭಿವೃದ್ಧಿಗೆ, ವಠಾರದ ಕೆಳ ಅಂಚಿನ ನೆಲ – ಬಹುತೇಕ ಕಗ್ಗಲ್ಲಿನ ಹಾಸನ್ನು, ಹುಡಿಗುಟ್ಟಿ ರಾಶಿ ಹಾಕಿದ್ದು ಕಾಣುತ್ತಿತ್ತು. ನಮ್ಮೂರಿನಲ್ಲಿ ದೇವಂದ ಬೆಟ್ಟ ವಿಕಸಿಸುತ್ತಿರುವ ಪರಿಯನ್ನು ಸಖೇದ ಕಂಡ ನನಗೇನೋ ಇದು ಚೆನ್ನಾಗಿಯೇ ಅರ್ಥವಾಗಿತ್ತು. ಪಾಪ ಹಗಲಾದರೆ ಸ್ತುತಿಪಾಠವನ್ನಷ್ಟೇ ಕೇಳಿ, ಗಂಧಪುಷ್ಪಾದಿ ನೈವೇದ್ಯಗಳಿಂದಷ್ಟೇ ತೃಪ್ತನಾಗಿ, ಭಕ್ತಮನೋಭೀಷ್ಟದ ಆಳವನ್ನರಿಯದೇ ಕೃಪಾದೃಷ್ಟಿಯನ್ನಷ್ಟೇ ಬೀರಿ ರೂಢಿಯಾಗಿದ್ದ ಆರ್ಮುಖನಿಗೆ ಇದು ಹೊಸಪರಿ. ಭಕ್ತಾದಿಗಳು ಪ್ರಾರ್ಥನೆ ಸಹಿತ ಬುಡದ ಕಲ್ಲ ಕೊರೆದು, ಸ್ಫೋಟಿಸುವುದನ್ನು ಮಂಗಳ ವಾದ್ಯಗಳಿಗೆ ತಪ್ಪು ತಿಳಿದನೇನೋ! ಭಾರೀ ಭಾಂಡಗಳಲ್ಲಿ ತಂತಂದು ಸುರಿವ ರೆಡಿಮಿಕ್ಸ್, ಊರುವ ಸರಳು, ಹೇರಿದ ಹಲವು ಸಾಮಗ್ರಿಗಳನ್ನು ಅಲಂಕಾರಕ್ಕೆ ಭ್ರಮಿಸುತ್ತಾನೇನೋ. ಮತ್ತೆ ನೀರು ನಿಲ್ಲದ ಹೊಸಪಥಗಳಲ್ಲಿ, ಜೀವಜಾಲ ಹರಿದ ಹಸಿರ ಸಾನ್ನಿಧ್ಯದಲ್ಲಿ, ಇನ್ನಷ್ಟು ಮತ್ತಷ್ಟು ಮುತ್ತುವ ಮಂದೆಯನ್ನು ಗ್ರಹಿಸಿ, ವರ-ಶಾಪಗಳ ಗೊಂದಲವೇ ಆರೂ ಮುಖಗಳಲ್ಲಿ ಏಕೀಭವಿಸಿದ ಭಾವವಿರಬೇಕೋ ಏನೋ! ನಾನಂತೂ ಪಕ್ಕಾ ನಾಗರಿಕನ ನಿರುಮ್ಮಳತೆಯಲ್ಲಿ…..

ಗುಡ್ಡದಂಚಿನಲ್ಲಿ ಹಾಯ್ದು, ನೈಸ್ ರಸ್ತೆಯಡಿಯಲ್ಲಿ ನುಸುಳಿ, ಪೂರ್ಣಪ್ರಜ್ಞ ನಗರಕ್ಕಾಗಿ ಮತ್ತೆ ವಿಷ್ಣುವರ್ಧನ ರಸ್ತೆಗೆ ನಡುವಿನಲ್ಲೆಲ್ಲೋ ಸೇರಿದೆ. ಇಷ್ಟಾಗುವಾಗ ಗುರಿಯಿಲ್ಲದ ಸುತ್ತಾಟಕ್ಕೆ, ದೇವಕಿಯ ಅಕ್ಕನ ಮಗ – ವಿಜಯಕೃಷ್ಣನ (ಮುನಿಯಂಗಳ) ಮನೆಯನ್ನು ಲಕ್ಷ್ಯವಾಗಿ ಕಲ್ಪಿಸಿಕೊಂಡೆ. ಆದರೆ ಸ್ಥಳ ಗುರುತಿಸುವಲ್ಲಿ ನಾನು ಸ್ವಲ್ಪ ತಪ್ಪಿ ಮೊದಲು ‘ಅರಮನೆ’ಯ ದಿಕ್ಕು ಹಿಡಿದಿದ್ದೆ. ನೈಸ್ ರಸ್ತೆಯನ್ನು ಕೆಳಸೇತುವೆಯಲ್ಲಿ ಕಂಡಾಗ ತಪ್ಪಿನರಿವಾಗಿ ತಿದ್ದುಪಡಿ ಮಾಡಿಕೊಂಡೆ, ಸೇತುವೆಯ ಒತ್ತಿನಲ್ಲಿದ್ದ ಎಡ ಕವಲು ಹಿಡಿದು ನೋಡಿದೆ. ಅದು ಕುರುಡು ಕೊನೆ ಕಾಣಿಸಿದಾಗ ಹಿಂಬಂದು, ಮತ್ತೆ ಉತ್ತರಳ್ಳಿಮುಖಿಯಾದೆ. ಮುಂದಿನ ತೀವ್ರ ಎಡ ತಿರುವಿನ ಬಳಿ ಮತ್ತೊಮ್ಮೆ ಸ್ಥಳ ಗುರುತಿಸುವಲ್ಲಿ ತಪ್ಪಿ, ಬಲ ಮುಖ್ಯ ರಸ್ತೆ ಹಿಡಿದು ದೊಡ್ಡ ಇಳಿಜಾರು ಅನುಭವಿಸಿದೆ. ಆದರದೂ ಕುರುಡುಕೊನೆಯಲ್ಲಿ ಸಾಧನಾ ಕಾಲೇಜು ಮತ್ತೊಂದು ವಸತಿ ಸಮುಚ್ಚಯ ತೋರಿದಾಗ ನನ್ನ ನೆನಪಿಗಡರಿದ್ದ ಮೋಡ ಹರಿಯಿತು. ಇದು ಅಂತಿಮ ಪ್ರಯತ್ನ ಎಂದುಕೊಳ್ಳುತ್ತ ಮತ್ತೆ ಮುಖ್ಯದಾರಿಗೆ ಬಂದು, ಪುನಃ ಉತ್ತರಳ್ಳಿಯತ್ತ ಪೆಡಲಿದೆ.

ಅಲ್ಲೊಂದಷ್ಟು ಉದ್ದಕ್ಕೆ ವಿಷ್ಣುವರ್ಧನ್ ರಸ್ತೆಯ ಎರಡೂ ಮಗ್ಗುಲಲ್ಲಿ – ಕಾರಣವೇನೋ ತಿಳಿದಿಲ್ಲ, ಯಾವುದೇ ಕಟ್ಟಡಗಳಿಲ್ಲ. ಬದಲಿಗೆ ಎಲ್ಲೆಲ್ಲಿನ ಕಟ್ಟಡಗಳ ಮಹಾಖಂಡಗಳು ಗುಡ್ಡೆ ಬಿದ್ದಿವೆ. ಅಷ್ಟೇ ಆಗಿದ್ದರೆ ದಾರಿಯ ಪರಿಷ್ಕರಣಕ್ಕೆ ಉಚಿತ ಕಚ್ಚಾವಸ್ತು ಎಂದು ಭಾವಿಸಬಹುದಿತ್ತು. ಆದರೆ ಹಿಂದೆ ನಾನು ಕಂಡಂತೆ, ಅತ್ತಿತ್ತ ಓಡಾಡುವ ವಾಹನವಂತ ‘ನಾಗರಿಕರು’ ಆ ಗುಡ್ಡೆಗಳಿಗೆ ತಮ್ಮ ಮನೆಯ ಹಾಳುಮೂಳಿನ ಧಾರಾಳ ವಂತಿಗೆ ಮುಕ್ತ ಕೈಯಲ್ಲಿ ಸೇರಿಸಿ, ಬಣ್ಣ, ವಾಸನೆಗಳೊಡನೆ ಜೀವಜಾಲವನ್ನೇ ಪೋಷಿಸಿದ್ದರು. ನನಗಂತೂ ಆ ದಿನಗಳಲ್ಲಿ ಆ ಜಾಗ ದಾಟುವುದೆಂದರೆ ಉಸಿರು ಬಿಗಿ ಹಿಡಿದ ಧಾವಂತ. ಆದರೆ ಇಂದು ಕೊಳೆತು ನಾರುವ ಹಸಿ, ಅದರ ಆಕರ್ಷಣೆಗೆ ಮುತ್ತಿಗೆ ಹಾಕಿದ ಬೀಡಾಡಿ ಜಾನುವಾರು, ನಗರ ಪ್ರಜ್ಞೆಗೇ ಕೊಳ್ಳಿಯಿಟ್ಟಂತೆ ಅಲ್ಲಿ ಇಲ್ಲಿ ಭೀಕರ ಘಾಟಿನ ಹೊಗೆಯಾಡುತ್ತ, ಆಗೀಗ ಗಾಳಿಸುಳಿಗೆ ಒಯ್ಯನೆದ್ದು ನಡೆಗೆಟ್ಟವರ ಮುಖಕ್ಕೇ ರಾಚುವ ಪ್ಲ್ಯಾಸ್ಟಿಕ್ಕಾದಿ ಅನರ್ಥಗಳು, ದುರ್ನಾತ ಇರಲೇ ಇಲ್ಲ. ಇದೇನಾಶ್ಚರ್ಯ ಎಂದು ನಾನು ಉದ್ಗರಿಸುವುದರೊಳಗೆ ಮಧ್ಯಂತರದಲ್ಲೊಬ್ಬ ಲಾಠೀವಾಲ ಕುರ್ಚಿ ಹಾಕಿ ಕುಳಿತು ಕಣ್ಗಾವಲು ನಡೆಸಿದ್ದು ಕಾಣಿಸಿತು. ಇಂಥದ್ದೇ ವ್ಯವಸ್ಥೆ ಊರಿನಲ್ಲೂ – ಸ್ಪಷ್ಟವಾಗಿ ಹೇಳುವುದಾದರೆ, ಸುರತ್ಕಲ್ ದೀಪಸ್ತಂಭಕ್ಕೆ ಹೋಗುವ ದಾರಿಯ ಬದಿಯಲ್ಲೂ ಇರುವುದು ನೆನಪಾಯ್ತು. ಯಾರ್ಯಾರೋ ತ್ಯಾಗ ಮಾಡಿ ಕೊಡಿಸಿದ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳ ಮೇಲೂ ನಮ್ಮದೇ ಮನೆಯನ್ನು (ದೇಶವನ್ನು) ಶುಚಿಯಾಗಿಟ್ಟುಕೊಳ್ಳಲು ಹೆಜ್ಜೆ ಹೆಜ್ಜೆಗೆ ಲಾಠೀವಾಲ ಬೇಕಾಗುತ್ತದಲ್ಲಾ ಎಂಬ ವಿಷಾದದೊಡನೆ ವಾಹನ ಪ್ರವಾಹದಲ್ಲಿ ಸೇರಿಹೋದೆ.

ಉತ್ತರಳ್ಳಿ ಬಸ್ ನಿಲ್ದಾಣ ಕಳೆದು, ಗುಬ್ಬಲಾಳ ಕವಲಿನಲ್ಲಿ ಬಲ ಹೊರಳುವಲ್ಲಿ ನಾನು ಸರಿದಾರಿ ಹಿಡಿದದ್ದು ಖಾತ್ರಿಯಾಗಿತ್ತು. ಮುಂದೆ ಕಿರು ಸೇತುವೆಯೊಂದರ ಮರುನಿರ್ಮಾಣಕ್ಕೆ ಮಾರ್ಗ ದೊಡ್ಡ ವಾಹನಗಳಿಗೆ ಬದಲಿ ದಿಕ್ಕು ಕಾಣಿಸಿದ್ದರೂ ಸೈಕಲ್ ಸರಳತೆಯಲ್ಲಿ ನನ್ನ ಪ್ರಗತಿಗೇನೂ ತೊಂದರೆಯಾಗಲಿಲ್ಲ. ‘ನಮ್ಮ ಶಾಲೆ’ಯ ಬಳಿ ಎಡ ಹೊರಳಿ ಕೂಗಳತೆಯಲ್ಲೇ ಇದ್ದ ಲಕ್ಷ್ಯಕ್ಕೆ ಪ್ರಧಾನ ಓಟ ಮುಗಿಸಿದ್ದೆ. ವಾರದ ರಜೆ ಹೊಂದಿಸಿ ಅವನು ಸಕುಟುಂಬ ಊರಿಗೆ ಹೊರಟಿದ್ದ. ಆದರೆ ‘ಮೀಸೆಯಪ್ಪಚ್ಚಿ’ಯನ್ನು ಕಂಡ ತಪ್ಪಿಗೆ ಒಂದು ಚಾದಂಡ ಒಪ್ಪಿಸಿ ಹೊರಟರು. ನಾನು ಹೊಸ ರಸ್ತೆ ಅನಾವರಣ ಮಾಡುವ ಉತ್ಸಾಹದಲ್ಲಿ, ಬನಶಂಕರಿ ಆರನೇ ಘಟ್ಟದ ನೀವೇಶನಗಳ ದಾರಿ ಹಿಡಿದು, ನೈಸ್ ರಸ್ತೆಯಡಿಯಲ್ಲಿ ನುಸಿದು, ಕನಕಪುರ ರಸ್ತೆ ಮತ್ತೆ ವಿಷ್ಣುವರ್ಧನ ರಸ್ತೆ, ಕೊನೆಯಲ್ಲಿ ಅರಮನೆಗೆ ಮುಗಿಸಿದೆ.

೬. ಮೌನಂ ಪಂಡಿತ ಲಕ್ಷಣಂ

ಬೆಂಗಳೂರು ಮೊಕ್ಕಾಂನ ಆರನೇ ದಿನದ ಸೈಕಲ್ ಸವಾರಿಗೆ (೨೫-೧೨-೨೦೧೭) ಇಳಿದ ಮೇಲೆ ಬೆಂಗಳೂರಿನಲ್ಲೇ ಇರುವ ನನ್ನ ಓರ್ವ ಚಿಕ್ಕಮ್ಮ – ಮೀನಾಕ್ಷಿ, ನೆನಪಾಯ್ತು. ಚನ್ನಸಂದ್ರದಿಂದ ಗಾಂಧೀಬಜಾರಿನ ಆ ಕೊನೆಗೆ ಹೋಗಲು ನನಗಿದ್ದ ಒಂದೇ ಪೂರ್ವಪರಿಚಿತ ದಾರಿ – ಮೈಸೂರು ದಾರಿ. ಆದರೆ ಅಲ್ಲಿನ ಮಹಾ ಸಂತೆಯೊಳಗೊಂದಾಗಲು ಮನಸ್ಸಾಗಲಿಲ್ಲ. ಬದಲು ನಾನು ನಿಶ್ಚೈಸಿಕೊಂಡ ಲಕ್ಷ್ಯದ ಅಂದಾಜು ದಿಕ್ಕು ಹಿಡಿದು, ಎಂಥದ್ದೇ ಏರಿಳಿತ, ಅಂಕಾಡೊಂಕಿನ ಗಲ್ಲಿಯಾದರೂ ಸೈ, ಬೆಂಗಾಡೂರಿನ ದೂಳುಹೊಗೆಯ ಹೊದಿಕೆ ಸ್ವಲ್ಪ ತೆಳ್ಳಗಾದರೂ ಇರುತ್ತದೆ ಎಂದೇ ಭಾವಿಸಿ ಆರಿಸಿಕೊಂಡೆ. ಹಾಗೆ ಹೋಗುತ್ತ ಎಲ್ಲೋ ಒಂದೆಡೆ, ಸುಮಾರು ಐದು ದಶಕಗಳ ಹಿಂದಿನ ಹನುಮಂತನಗರ, ಬಸವನಗುಡಿ, ಗಾಂಧೀ ಬಜಾರ್ ಭೂಲಕ್ಷಣಗಳನ್ನು ಚೂರಾದರೂ ಕಂಡಾಗ, ಸರಿದಾರಿ ಹಿಡಿದರಾಯ್ತೆಂಬ ಧೈರ್ಯ ನನ್ನದು. ಕೆಂಚೇನಹಳ್ಳಿ ರಸ್ತೆಯಲ್ಲಾಗಿ, ಪಟ್ಟಣಗೆರೆ ವೃತ್ತದಲ್ಲಿ ಬಲ ಹೊರಳಿ, ನಿಮಿಷಾಂಬಾ ದೇವಳದೆದುರು ಹಾಯ್ದು ನೇರಾನೇರ ನುಗ್ಗಿದೆ. ಅದೇನೋ ಬೆಟ್ಟದ ಮೇಲಿನ ಭರ್ಜರಿ ಶಾಲಾವಠಾರ ನನ್ನನ್ನು ತಡೆಯಿತು. ತುಸು ಆಚಿನ ಷಣ್ಮುಖ ದೇವಳದಲ್ಲಿ ವನ್ಯ ಪರಿಸರವಿದ್ದರೆ, ಇಲ್ಲಿ ನನ್ನನ್ನು ಮೊದಲು ಆಕರ್ಷಿಸಿದ್ದು ನಗರ ಶಿಸ್ತಿನ ಉದ್ಯಾನ ಪರಿಸರ. ಇದು ‘ಜನಪ್ರಿಯ’ ಸಚಿವ ಡಿ.ಕೆ. ಶಿವಕುಮಾರರ ಯಜಮಾನಿಕೆಯ ಶಾಲೆ – ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್. ದ್ವಾರಪಾಲರು ನನಗೆ ಅದರ ‘ಹಿಲ್ ವ್ಯೂ’ ದಕ್ಕಿಸಿಕೊಳ್ಳಲು, ಕನಿಷ್ಠ ಉದ್ಯಾನದ ಚಂದ ವಿವರಗಳಲ್ಲಿ ಕಾಣಲು ಅವಕಾಶವನ್ನು ‘ಪಬ್ಲಿಕ್’ ಮಾಡಲೇ ಇಲ್ಲ.

ಅವರಿವರನ್ನು ವಿಚಾರಿಸಿ, ಎಡ ಮಗ್ಗುಲಿನ ತೀರಾ ಕಡಿದಾದ ದಾರಿ ಹಿಡಿದೆ. ಶಿಖರದಲ್ಲಿ ಸಾಂಪ್ರದಾಯಿಕ ನಗರಳ್ಳಿ – ಬಂಗಾರಪ್ಪನಗರ, ಅದಕ್ಕೆ ತಾಗಿದಂತೆ ಇನ್ನೊಂದೇ ವಿದ್ಯಾಸಂಸ್ಥೆ. ಅವನ್ನೆಲ್ಲ ಎಡಕ್ಕೆ ಬಿಟ್ಟು, ಲಕ್ಷ್ಯ ಮರೆಯದೆ, ಇನ್ನೊಂದು ಮಗ್ಗುಲಿನ ತೀವ್ರ ಇಳುಕಲನ್ನೇ ಆರಿಸಿಕೊಂಡೆ. ನಗರಕೊಳೆ, ಜಲಕಳೆ ಸೇರಿದ ಹೊಸಕೆರೆ (ಯಾವ ಕಾಲದ ಹೊಸತೋ ನನಗೆ ತಿಳಿದಿಲ್ಲ) ದಂಡೆ ಹಾಯ್ದು, ಅದೆಲ್ಲೋ ಸುತ್ತಿ, ಗಿರಿನಗರದ ಲಕ್ಷ್ಮೀವೆಂಕಟೇಶ್ವರ ದೇವಳದೆದುರು ನಿಂತೆ. ಅಲ್ಲೊಂದು ಕ್ಯಾಮರಾ ಚಿಟಕಾಯಿಸಿಕೊಂಡೆ. ಮುಂದೆ ಯಾವುದೋ ಗಲ್ಲಿಯಲ್ಲಿ ದಿಕ್ಕೆಟ್ಟು, ಕಚ್ಚಾ ಒಳದಾರಿಯೊಂದರಲ್ಲಿ ಸೈಕಲ್ ನೂಕಿ ಹೊಸ ದಿಕ್ಕು ಕಂಡುಕೊಂಡೆ. ಮತ್ತೆ ಅವರಿವರನ್ನು ಕೇಳಿಕೊಳ್ಳುತ್ತ, ಯಾವುದೋ ಡಬ್ಬಲ್ ರೋಡು, ಇನ್ಯಾವುದೋ ಎಂಬತ್ತಡಿ ರಸ್ತೆ, ಮೇಲ್ಸೇತುವೆ, ಶ್ರೀನಗರವೆನ್ನುವಾಗಲೇ ಅಪಸ್ವರ ಸುಸ್ವನವಾಗತೊಡಗಿತ್ತು. ನಾವು ಹನುಮಂತನ ನಗರದಲ್ಲಿದ್ದಾಗ ಅದರಾಚಿನ ಶ್ರೀನಗರಕ್ಕೆ ಹೆರಿಗೆಯ ಸಂಕಟ. ಓರ್ವ ಪ್ರೌಢಶಾಲಾ ವಿದ್ಯಾರ್ಥಿಯಾಗಿ ನನ್ನ ಯಾವ ಚಟುವಟಿಕೆಗಳಿಗೂ ಶ್ರೀನಗರದ ದೂಳೇಳುವ ಕಚ್ಚಾ ಮಾರ್ಗಗಳು, ಹೊಸಮನೆಗಳೇಳುವ ಗದ್ದಲಗಳು ಕೂಡಿ ಬರಲೇ ಇಲ್ಲ. ಆದರೆ ಪೆಡಲಿಕೆಗೆ ತುಸು ಮುಂದೆ ಬಂಗಾಗ ಸಿಕ್ಕ ರಾಮಾಂಜನೇಯ ಗುಡ್ಡದ ಉಲ್ಲೇಖ ನನ್ನ ನೆನಪಿನ ರಾಗಕ್ಕೆ ಶ್ರುತಿಯಾಗಿ ಹೊಂದಿತು. ಇಂದಿನ ರಾಮಾಂಜನೇಯ ಬೆಟ್ಟವೇ ಅಂದಿನ ಹನ್ಮಂತನ ಬೆಟ್ಟ! ಮುಳ್ಳು, ಕಲ್ಲುಗಳ ಸವಕಲು ಜಾಡುಗಳ, ಮರೆಯಲ್ಲಷ್ಟು ಗೊಬ್ಬರ ಹಾಕಿ, ಒಡ್ಡು ಬಂಡೆಗಳ ಮೇಲೆ ಬೆರಣಿ ತಟ್ಟುತ್ತಿದ್ದ ಜನಗಳ ಬಳಕೆಯಲ್ಲಿದ್ದ ಅಪ್ಪಟ ಗ್ರಾಮೀಣ ಗುಡ್ಡೆಯ ನೆತ್ತಿಯಲ್ಲಿ ಅಷ್ಟೇ ಒಡ್ಡು ಕಲ್ಲುಗಳ ಗುಡಿ – ಮತ್ತೆ ಅಪ್ಪಟ ಜನಪದ ಭಕ್ತಿಯ ಅಷ್ಟೇನೂ ಜನಪ್ರಿಯವಲ್ಲದ ಸ್ಥಳ, ಇಂದು ಭೀಕರ ‘ಸಮಾಜೋ-ಧಾರ್ಮಿಕ’ ಕೇಂದ್ರ; ಸರಳವಾಗಿ ಹೇಳುವುದಾದರೆ ಧರ್ಮೋದ್ಯಮ ಸ್ಥಳ. ಇದನ್ನು ನಾಲ್ಕು ವರ್ಷಗಳ ಹಿಂದೊಮ್ಮೆ ಕಂಡಿದ್ದೇನಾದ್ದರಿಂದ (ನೋಡಿ: ಬೋರೇಗೌಡ ಬೆಂಗಳೂರಿಗ್ಬಂದ!) ಹೊಸದಾಗಿ ಹೋಗುವ ಮನಸ್ಸು ಮಾಡಲಿಲ್ಲ. ಹಾಗೇ ನಾನು ಸ್ಪಷ್ಟವಾಗಿ ಸುಂಕೇನಹಳ್ಳಿ ಗುರುತಿಸಿದಾಗಲೂ ತುಸು ದಾರಿ ಬದಲಿಸಿ, ‘೧೩೭, ನಾಲ್ಕನೆಯ ಅಡ್ಡ ರಸ್ತೆ (ಐದು ದಶಕಗಳ ಹಿಂದಿನ ನಮ್ಮ ವಾಸವಿಳಾಸ)’ ಕುರಿತು ನೋಡುವ ಪ್ರಯತ್ನಕ್ಕೂ ಇಳಿಯಲಿಲ್ಲ. ಗುತ್ತಳ್ಳಿ, ‘ಪ್ರಜಾಮತ’ ರಸ್ತೆಗಾಗಿ ಗಾಂಧೀ ಬಜಾರ್ ಮುಟ್ಟುವ ಸ್ವಲ್ಪ ಮೊದಲೇ ಬಲಕ್ಕೆ, ಅಂದರೆ ಡೀವೀಗುಂಡಪ್ಪ ರಸ್ತೆಗೆ ಹೊರಳಿಕೊಂಡೆ. ಮುಂದೆ ಕಹಳೆ ಬಂಡೆ ರಸ್ತೆಗಾಗಿ ಎಂ.ಎನ್. ಕೃಷ್ಣರಾವ್ ಪಾರ್ಕ್. ಅದರ ಎದುರಿನಲ್ಲೇ ಚಿಕ್ಕಮ್ಮನ ಮನೆ.

ಚಿಕ್ಕಮ್ಮ ಇರಲಿಲ್ಲ. ತಮ್ಮ ಅನಂತ ಭಟ್, ನಾದಿನಿ ವೀಣಾರ ಜತೆ ನಾಲ್ಕು ಮಾತಾಡಿ, ಚಾ ಕುಡಿದು ಹಿಮ್ಮುಖನಾದೆ. ಸೀದಾ ಗಾಂಧಿ ಬಜಾರಿನಲ್ಲೇ ಸಾಗುತ್ತ ಅಂಕಿತ ಪುಸ್ತಕ ಮಳಿಗೆಗೆ ಒಂದು ಇಣುಕು ನೋಟ ಹಾಕಿದೆ. ಮಳಿಗೆಯ ಮಾಲಕ ಪ್ರಕಾಶ್ ಕಂಬತ್ತಳ್ಳಿಯವರು ಕಾಣಿಸಿದ್ದರಿಂದ ನಾಲ್ಕು ಮಾತಿಗೆ ನಿಂತೆ. ಪ್ರಾಸಂಗಿಕವಾಗಿ, ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಗ್ರಂಥೋದ್ಯಮದ ಚರಿತ್ರೆ ದಾಖಲು ಮಾಡಲು ಹೊರಟಿರುವ ವಿಚಾರದಲ್ಲಿ ನನ್ನ ಕಟು ಟೀಕೆಯನ್ನು ಸಣ್ಣದರಲ್ಲಿ ಹೇಳಿದೆ. (ಫೇಸ್ ಬುಕ್ಕಿನಲ್ಲಿ ಅವನ್ನು ನವೆಂಬರ್ ೧೯ ರಿಂದ ೨೬ರ ಒಳಗೆ ಮೂರು ಪ್ರಕಟಣೆಗಳಾಗಿ ದಾಖಲಿಸಿದ್ದೇನೆ, ಆಸಕ್ತರು ಓದಿಕೊಳ್ಳಬಹುದು) ಪ್ರಕಾಶ್ ಜಾಣರು, ಏನೂ ಪ್ರತಿಕ್ರಿಯಿಸಲಿಲ್ಲ! ಅವರ ಕಾಫಿ ಮತ್ತಿತರ ಔಪಚಾರಿಕತೆಗಳಲ್ಲಿ ವೇಳೆಗಳೆಯಲಿಚ್ಛಿಸದೆ ಬೇಗ ದಾರಿಗಿಳಿದೆ.

ರಾಮಕೃಷ್ಣಾಶ್ರಮದ ವೃತ್ತದಲ್ಲಿ ಬಸವನಗುಡಿ ರಸ್ತೆ ಹಿಡಿದು, ನೇರ ಮೈಸೂರು ರಸ್ತೆ ಸೇರಿದೆ. ನಾಯಂಡಹಳ್ಳಿಯವರೆಗೆ ಮಾಮೂಲಿ ಸಂಚಾರಗೊಜ್ಜಿದ್ದರೆ, ಮುಂದೆ ರಾಜರಾಜೇಶ್ವರಿ ಗೇಟಿನವರೆಗೆ ‘ನಮ್ಮ ಮೆಟ್ರೋ’ ಹಳಿ ನಿರ್ಮಾಣದಿಂದಾದ ಇರುಕು ಮತ್ತು ರಸ್ತೆಗೆ ಬಿಳಿಹೊದಿಕೆ ಹಾಕುವ ಹೊಸತೇನೋ ಪ್ರಯೋಗ ಸೇರಿ ಪರಿಸ್ಥಿತಿ ವಿಪರೀತವೇ ಇತ್ತು. ಆದರೆ ನೀವು ಅಂದುಕೊಂಡಂತೇ ಸೈಕಲ್ ಸರಳತೆಯಲ್ಲಿ, ನಾನೆಲ್ಲವನ್ನೂ ಸುಲಭವಾಗಿ ಪರಿಹರಿಸಿಕೊಂಡು ರಾರಾ ನಗರದೊಳಗೆ ಹಾದು, ಪಟ್ಟಣಗೆರೆ ವೃತ್ತವನ್ನು ಮುಟ್ಟಿದೆ. ಅಷ್ಟೇ ಸಲೀಸಾಗಿ ಹೋದ ದಾರಿಯಲ್ಲೇ ಮತ್ತೆ ಅರಮನೆ ಸೇರಿದೆ.

೭. ಸವಾರಿಯಲ್ಲಿ ದಕ್ಕಿದ ಕಾಳುಗಳು

ಬೆಂಗಳೂರು ಮೊಕ್ಕಾಂನ ನನ್ನ ಕೊನೆಯದಿನದ ಸೈಕಲ್ ಸವಾರಿ ವಿಷ್ಣುವರ್ಧನ ರಸ್ತೆಗಾಗಿ ಹೊರಟಿತ್ತು. ಕೆಂಗೇರಿಯಲ್ಲಿ ಮೈಸೂರುಮುಖಿಯಾಗಿ ಹೊರಳಿ, ಮೇಲ್ಸೇತುವೆ ಕಾಣಿಸಿದಾಗ ಅದನ್ನೇರಿ ಕೆಂಗೇರಿ ಉಪನಗರದತ್ತ ವಾಲಿದೆ. ಆಗ ಇಲ್ಲೇ ಹಿಂದೊಮ್ಮೆ ಮಾರಗೊಂಡನ ಹಳ್ಳಿಯಲ್ಲಿನ ನಾಗೇಶ ಹೆಗಡೆಯವರ ಮನೆಯಿಂದ ಸೈಕಲ್ಲಿನಲ್ಲೇ ಮರಳಿದ್ದು ನೆನಪಾಯ್ತು. ಈ ಸಲವೂ ಅದೇ ಸೂಳಿಕೆರೆ/ ತಾವರೆಕೆರೆ ದಾರಿಗೇ ಎಡ ಹೊರಳಿದೆ. ನೈಸ್ ರಸ್ತೆಯನ್ನು ಮೇಲ್ಸೇತಿನಲ್ಲಿ ನಿಂತು ತುಸು ದಿಟ್ಟಿಸಿದೆ. (ವಿಡಿಯೋ ನೋಡಿ) ಅದರಲ್ಲಿ ಯಾಂತ್ರಿಕ ವಾಹನಗಳಿಗೆ (ಸೈಕಲ್, ಎತ್ತಿನ ಗಾಡಿ ಮುಂತಾದವಕ್ಕೆ ಪ್ರವೇಶವಿಲ್ಲ) ಎಲ್ಲೋ ದೂರದೂರಕ್ಕೊಂದು ಸುಂಕದ ಕಟ್ಟೆ ಬಿಟ್ಟರೆ, ಅನಿರ್ಬಂಧಿತ ಓಟ ಒಂದೇ ಮಂತ್ರ. ದಿಗಂತದಿಂದ ದಿಗಂತಕ್ಕೆ ಬಹುತೇಕ ನೇರ, ನುಣ್ಣಗಿನ ದಾರಿ, ನಡುಖಂಡದಲ್ಲಿ ಶಿಸ್ತಿನ ಪೊದರು, ಅಂಚುಗಟ್ಟಿದ ಮರಗಳಾದರೋ ಗೌರವರಕ್ಷೆ ಕೊಡಲು ನೇರ ನಿಂತ ಸೈನಿಕರು. ನೋಡನೋಡುತ್ತಾ ನಿರಂತರ ಒಂದು ಬದಿಯಲ್ಲಿ ಬರುತ್ತಲೂ ಇನ್ನೊಂದು ಬದಿಯಲ್ಲಿ ಹೋಗುತ್ತಲೂ ಇರುವ ವಾಹನವೈವಿಧ್ಯಗಳು ಮರೆಯಾಗಿ, ಯಾವುದೋ ಬೃಹತ್ ಕಾರ್ಖಾನೆಯ ಸಾಗಣಾಪಟ್ಟಿಕೆ ಚಾಲನೆಯಲ್ಲಿದ್ದ ಭ್ರಮೆ ಬರುತ್ತದೆ. ಈಗಾಗಲೇ ನಮ್ಮಲ್ಲಿ ಯಾಂತ್ರಿಕವಾಗಿ ಏರಿಳಿಯುವ ಮೆಟ್ಟಿಲಸಾಲು (ಎಸ್ಕಲೇಟರ್) ಧಾರಾಳ ಬಂದಿವೆ. ನಾನಿನ್ನೂ ಕಂಡಿಲ್ಲವಾದರೂ (ಮುಖ್ಯವಾಗಿ ಕೆಲವು ವಿದೇಶಗಳ) ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಹರಿದಾಡುವ ನಡೆಮಡಿಯನ್ನೂ ಕೇಳಿದ್ದೇನೆ. ಜನ, ಜಾನುವಾರು, ಇತರ ಯಾವುದೇ ಚಟುವಟಿಕೆಗಳು ಇಲ್ಲದ ರಸ್ತೆ, ಮೆಟ್ರೋಹಳಿಗಳನ್ನು ಯೋಚಿಸುವಾಗ ಮುಂದಿನ ಹಂತದಲ್ಲಿ ಊರಿಂದೂರಿಗೂ ಹರಿದಾಡುವ ದಾರಿಗಳೇ ಬಂದರೆ ಆಶ್ಚರ್ಯವಿಲ್ಲ. ಆಗ ವಾಹನ ವೈವಿಧ್ಯ ಬಿಡಿ, ನಮ್ಮದೇ ಕುರ್ಚಿ, ಸ್ಟೂಲುಗಳಿಲ್ಲದೆಯೂ ಸಾಗಣಾಪಟ್ಟಿಕೆಗೆ ನಾವು ಬೆಂಗಳೂರಿನಲ್ಲಿ ಉದುರಿದರೆ, ನಿಯತ ಕಾಲಾಂತರದಲ್ಲಿ ಮಂಗಳೂರಿನಲ್ಲಿ ಕಳಚಿಕೊಳ್ಳಬಹುದು; ಮರವೆ, ನಿದ್ರೆ ಕಾಡಿದರೆ ಮುಂಬೈ, ದಿಲ್ಲಿಯೂ ಕಾಣಬಹುದು!

ಕೊಮ್ಮಘಟ್ಟ ಕೆರೆ, ಸೂಳಿಕೆರೆಯ ಸರಕಾರಿ ಕಾಡು ಕಳೆದು, ಇನ್ನೊಂದೇ ‘ಹೊಸಕೆರೆ’. ಸಂಪರ್ಕ, ಸಂಚಾರ ಸಣ್ಣದಿದ್ದ ಕಾಲದಲ್ಲಿ ಹಳ್ಳಿಗಳ ಲೆಕ್ಕಕ್ಕೆ ‘ಹೊಸಕೆರೆ’ ಉದಯಿಸಿದ್ದು ಅನ್ವರ್ಥನಾಮವೇ ಆದದ್ದಿರಬಹುದು. ಆದರೆ ಇಂದು ಹಳ್ಳಿ ನಶಿಸಿ, (ದೊಡ್ಡ) ಬೆಂಗಳೂರಿನ ಲೆಕ್ಕ ಹಾಕುವಾಗ “ಎಷ್ಟಪ್ಪಾ ಹೊಸ್ಕೆರೆ” ಎಂದು ಆಶ್ಚರ್ಯಪಡುವಂತಾಗುತ್ತದೆ. ಆ ಕೊನೆಯಲ್ಲಿ ನಾಗೇಶ ಹೆಗಡೆಯವರ ಮಾರಗೊಂಡನ ಹಳ್ಳಿ ಸಿಕ್ಕಿತು. ಸದ್ಯ ನಾಗೇಶರು ವಾಸ್ತವ್ಯ ಬದಲಿಸಿರುವುದರಿಂದ, ಹಳೆಮನೆ ಬಾಗಿಲು ತಟ್ಟುವುದು ಬಿಟ್ಟು, ತಾವರೆಕೆರೆಯತ್ತ ಮುಂದುವರಿದೆ.

ಅದೊಂದು ನಿರ್ಜನ, ಕುರುಚಲು, ಪುಡಿ ಬಂಡೆಗಳ ಗುಡ್ಡೆ. ಅದನ್ನೇರುವ ದಾರಿಯ ಹಗುರ ತಿರುವೇರಿನ ಕೊನೆಯಲ್ಲಿ ಒಂಟಿಮರ, ಬುಡದಲ್ಲೊಂದು ಪುಟ್ಟ ಗುಡಿ. ಗುಲಗಂಜಿ ಹಳ್ಳಿಯ ಆ ಗುಡಿಯತ್ತ ಸಣ್ಣದಾಗಿ ಕಾಂಕ್ರೀಟ್ ದಾರಿ, ಕೊನೆಯಲ್ಲಿ ಹತ್ತೆಂಟು ಗಟ್ಟಿ ಮೆಟ್ಟಿಲ ಸಾಲೇನೋ ಇತ್ತು. ಆದರೆ ನನ್ನ ಕಣ್ಣಿದ್ದದ್ದು ಸರಳ ಆಲಯಕ್ಕಿಂತ ವಠಾರದ ಪರಿಸರದ ಮೇಲೆ. ಸ್ಥಳಪುರಾಣ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಗುಡಿಯ ಹೊರ ಅಂಚಿನ ಸವಕಲು ಜಾಡು ಅನುಸರಿಸಿದೆ. ಅಲ್ಲಿ ದಾರಿಗರಿಗೆ ಕಾಣಿಸದ ಗುಡ್ಡದ ಹಿಮ್ಮೈಯ ಆಳದಲ್ಲೊಂದು ಭಾರೀ ಕಲ್ಲಕೋರೆ ಇತ್ತು. ಗುಡಿಯ ಬುಡಕ್ಕಷ್ಟು ರಿಯಾಯ್ತಿ ಕೊಟ್ಟಂತೆ ಕಲ್ಲ ದಿಬ್ಬ ಉಳಿಸಿ, ಅತ್ತ ನೂರಕ್ಕೂ ಮಿಕ್ಕು ಆಳದಷ್ಟು, ಅಂದರೆ ತಪ್ಪಲಿನ ನೆಲಮಟ್ಟಕ್ಕೇ ಕಲ್ಲಸೂರೆ ಆಗಿತ್ತು. ಆ ತಳದಲ್ಲಿ ಎರಚಾಡಿದ ಕಲ್ಲ ಉಳಿಕೆ, ಸಾಗಣಾ ವಾಹನಗಳು ಮೂಡಿಸಿದ ಜಾಡು, ಕಾರ್ಮಿಕರು ಬಿಟ್ಟ ಹಾಳಮೂಳ ಎಲ್ಲ ಸದ್ಯ ಅಲ್ಲೇನೂ ಚಟುವಟಿಕೆ ಇಲ್ಲವೆಂದೇ ಕಾಣಿಸಿತು. ಅಲ್ಲಿ ಉಂಟಾಗಿದ್ದ ಮೂರು ನಾಲ್ಕು ತಗ್ಗುಗಳಲ್ಲಿ ನಿಂತ ಮಳೆ ನೀರಿನ ವರ್ಣ ವೈವಿಧ್ಯ – ಹಸುರು, ಕಂದು, ಇನ್ನೂ ಮುಖ್ಯವಾಗಿ ಒಂದರ ಶುದ್ಧ ಬಿಳಿ ಕುತೂಹಲಕಾರಿಯಾಗಿತ್ತು. ಆದರೆ ಬಳಸು ದಾರಿಯಲ್ಲಿ ಬುಡಕ್ಕಿಳಿದು ನೋಡುವಷ್ಟು ವ್ಯವಧಾನವಿರಲಿಲ್ಲವಾಗಿ ಮತ್ತೆ ತಾವರೆಕೆರೆ ದಿಕ್ಕು ಹಿಡಿದೆ.

ಕೆಂಗೇರಿಯಿಂದ ತೊಡಗಿದಂತೆ ಈ ಉದ್ದಕ್ಕೂ ಸಣ್ಣಪುಟ್ಟ ಕವಲು ದಾರಿಗಳು ಬಂದಲ್ಲೆಲ್ಲ ನಾನನುಸರಿಸಿದ ದಿಕ್ಕನ್ನೇ ಬಾಣ ಗುರುತಿನಲ್ಲಿ ತೋರುತ್ತಾ ‘The Pipal tree’ (ಆಲದ ಮರ) ಎಂಬ ನಾಮಫಲಕಗಳು ಕಾಣುತ್ತಲೇ ಇದ್ದವು. ನನ್ನ ಯಾನಾವಧಿ ಪರ್ಮಿಟ್ (ಇಶ್ಯೂಯಿಂಗ್ ಅಥಾರಿಟಿ – ವೈಫ್! ಷರಾ ಇಷ್ಟೇ “ಹನ್ನೊಂದು ಗಂಟೆಯೊಳಗೆ ಬಾರದಿದ್ದರೆ, ಚಾ ಇಲ್ಲ!”) ತೀರುತ್ತ ಬಂತೆಂಬಲ್ಲಿ, ತಾವರೆಕೆರೆ ಇನ್ನೂ ನಾಲ್ಕು ಕಿಮೀ ಎಂಬೊಂದು ರಸ್ತೆ ಕತ್ತರಿ ಬಂತು. ಅಲ್ಲಿ ‘ಆಲದ ಮರ’ದ ಕೈ ಎಡ ಕವಲಿಗಿತ್ತು. ಬಂದ ದಾರಿಯಲ್ಲೇ ವಾಪಾಸಾಗುವ ನೀರಸತೆ ತಪ್ಪಿಸಲು ದಾರಿಹೋಕರನ್ನು ವಿಚಾರಿಸಿದೆ. “ಹೂಂ, ಹಿಂಗೇ ಐದು ಕಿಮೀಗೆ ರಾಮೋಹಳ್ಳಿ, ಅಲ್ಲೇ ಎಡಕ್ ತಿರಿಕ್ಕೊಂಡ್ರೆ ಮೈಸೂರ್ ದಾರಿ, ಬಲಕ್ಕೋದ್ರೆ ದೊಡ್ಡಾಲ” ಅಂದ್ರು. ಆಗ ಒಮ್ಮೆಲೇ ಟ್ಯೂಬ್ ಲೈಟ್, ಅದೇ ನನ್ನ ತಲೆ ಝಿಗ್ಗ ಬೆಳಕಾಯ್ತು – ನಾನು ನಿರ್ಲಕ್ಷಿಸಿದ ಅಷ್ಟೂ ಕೈಮರ ಬಹುಖ್ಯಾತಿಯ ದೊಡ್ಡಾಲ ಹೇಳುತ್ತಿದೆ!

ದೊಡ್ಡಾಲ ಹಿಂದೊಮ್ಮೆ ಬೈಕೇರಿ ದೇವಕೀಸಹಿತನಾಗಿಯೇ ನೋಡಿದ್ದೆ. ಆದರೆ ಇಷ್ಟು ಬಂದ ಮೇಲೆ ಇನ್ನೊಮ್ಮೆ ನೋಡಿಯೇ ಮರಳುವ ಆಸೆಗೆ ಅತ್ತ ಪೆಡಲಿದೆ. ಸ್ವಲ್ಪ ದಡಬಡ ದಾರಿಯಾದರೂ ‘ಟೂರ್ ಡಿ ಫ್ರಾನ್ಸ್’ ಸ್ಪರ್ಧಾಳುವಿನ ಶಕ್ತಿ ಆವಾಹಿಸಿಕೊಂಡು ಮೆಟ್ಟಿದೆ. ಮುಂದೆ ಸಿಕ್ಕ ಕವಲು ದಾರಿಯಲ್ಲಿ ವಿಚಾರಣೆಯ ಯೋಚನೆ ಬಿಟ್ಟು ‘ಆಲದ ಮರಕ್ಕೆ’ ನಾಮಫಲಕಗಳನ್ನೇ ಅನುಸರಿಸುತ್ತ ಹೋದೆ. ಆದರೆ ಆ ಕೊನೆಯಲ್ಲಿ – ದೊಡ್ಡ ಠುಸ್ ಪಟಾಕಿ! ಅಲ್ಲೊಂದು ಸಣ್ಣ ಆಲದ ಮರಕ್ಕೆ ಕಟ್ಟೆ ಮಾಡಿ, ಬಲಕ್ಕೆ the Pipal tree ಎಂದೊಂದು ಖಾಸಗಿ ಬಡಾ(ಯಿ)ವಣೆಯ (ಸದ್ಯ ಬಟಾಬಯಲೇ ಹೆಚ್ಚು) ಸ್ವಾಗತ ಕಮಾನು ತೋರಿತ್ತು. ಅಲ್ಲಿದ್ದ ದ್ವಾರಪಾಲಕ – ಹಿಂದೀಯನನ್ನು ವಿಚಾರಿಸಿದೆ, “ದೊಡ್ಡಾಲ ಮಾಲೂಂ ನಹೀ.” ಮುಂದೊಬ್ಬ ಹಳ್ಳಿಗ “ಓ ನೀವ್ ಅಂಗೇ ಓಗ್ಬೇಕಿತ್ತು. ಇದ್ ಸೊಲ್ಪ ಸುತ್ತೇ ಆದ್ರೂ ರಾಮೋಳ್ಳಿ, ದೊಡ್ಡಾಲಕ್ಕೆ ಓಯ್ತದೇಳಿ” ಎಂದ. ನಾನು ಚಕ್ರನೋಟಕನಾಗಿ ತುಳಿದೇ ತುಳಿದೆ. ಮುಂದೊಂದು ಜೋಡು ಆಲದ ಮರಗಳ ಕಟ್ಟೇ (ಅರಳೀಕಟ್ಟೆ ಎಂದೇ ಅನ್ವರ್ಥ ಸ್ಥಳನಾಮ) ಬಳಿಯಲ್ಲಿ ಎಡಗವಲು ಮೈಸೂರು ರಸ್ತೆಗೆ ಒಳದಾರಿ ಎಂಬ ಸೂಚನೆ ಕಾಣಿಸಿತು. ಆಗಲೇ ನನ್ನ ಪೂರ್ವನಿರ್ಧರಿತ ಯಾನಾವಧಿ ಅರ್ಥಾತ್ ಚಾ ಅವಕಾಶ ಕಳೆದೇ ಹೋಗಿತ್ತು. ಇನ್ನು ಎರಡೋ ಮೂರೋ ಕಿಮೀ ದೂರದ ರಾಮೋ ಹಳ್ಳಿ, ಒಂದು ಕಿಮೀ ಆಚಿನ ದೊಡ್ಡಾಲ, ಅದರ ದರ್ಶನಕ್ಕೆ ಸಮಯ, ಮತ್ತೆ ಬಿಡಿಸಿಕೊಂಡ ಅಷ್ಟೂ ದಾರಿಯನ್ನು ಮರಳಿ ಸುತ್ತಲು ಸಮಯ ಎಲ್ಲ ಲೆಕ್ಕ ಹಾಕಿದರೆ ಊಟಕ್ಕೇ ಸೊನ್ನೆಯಾದೀತೇ ಎಂದು ಹೆದರಿ, ಯೋಜನೆ ಬದಲಿಸಿದೆ; ಎಡ ಹೊರಳಿದೆ.

ಹೊಸ ದಾರಿ ನನ್ನನ್ನು ಬಿಡದಿಗೋ ರಾಮನಗರಕ್ಕೋ ಮುಟ್ಟಿಸುತ್ತದೆಂದೇ ನಂಬಿ ಇನ್ನಷ್ಟು ವೇಗ ಹೆಚ್ಚಿಸಿದೆ. ಮುಂದೊಂದು ಕವಲಿನಲ್ಲಿ, ಕೆಲವು ಹಳ್ಳಿಗರು ಈ ವಲಯದ ಮಾಮೂಲೀ ಅಭ್ಯಾಸದಂತೆ, ದಾರಿಗೆಲ್ಲ ಕತ್ತರಿಸಿ ತಂದ ಒಣ ಪೈರನ್ನು ಹರಡಿ, ಒಕ್ಕಲು ನಡೆಸಿದ್ದರು. ಮೂರುದಾರಿ ಕೇಂದ್ರದಲ್ಲೇ ಒಬ್ಬ ಕಾಲ್ಮಣೆ ಏರಿ, ಹೆಂಗಸರು ಗುಡಿಸಿ ತಂದ ಕಸ-ಕಾಳು ಮಿಶ್ರಣವನ್ನು ಗಾಳಿಗೆ ತೂರುತ್ತಾ ಇದ್ದ. ಅವರಲ್ಲಿ ದಾರಿ ವಿಚಾರಿಸಿದೆ. ನನ್ನ ಹೆಚ್ಚಿನ ಶ್ರಮಪೂರ್ಣವಾದ ವೇಗಸಾಧನೆ, ಬಿಡದಿ, ರಾಮನಗರಗಳ ಕಲ್ಪನೆ ಎಲ್ಲ ಜೊಳ್ಳಾಗಿ ತೂರಿಹೋದವು! ವಾಸ್ತವದಲ್ಲಿ ನಾನು ಗುಲಗಂಜಿಹಳ್ಳಿಗೇ ಸಣ್ಣ ಸುತ್ತು ಹಾಕಿ ಮತ್ತೆ ನಾಗೇಶ ಹೆಗಡೆಯವರ ಮನೆ ಪಕ್ಕಕ್ಕೇ ಅಂದರೆ ಮಾರಗೊಂಡನ ಹಳ್ಳಿಗೇ ತಲಪಿದ್ದೆ! ದಕ್ಕಿದ ಗಟ್ಟಿ ಕಾಳು ಒಪ್ಪಿಕೊಂಡು, ಮತ್ತದೇ ಹೊಸಕೆರೆ, ಸೂಳೆಕೆರೆಕಾಡು, ಕೊಮ್ಮಘಟ್ಟ ಕೆರೆ, ಕೆಂಗೇರಿ, ವಿಷ್ಣುವರ್ಧನ ರಸ್ತೆಗಾಗಿ ಅರಮನೆ ಮುಟ್ಟುವಾಗ ಹನ್ನೆರಡೂವರೆ ಗಂಟೆಯೇ ಆಗಿತ್ತು. ಆದರೆ ಆಭಾಳ ಮೂಲಕ ಅಜ್ಜಿಯ ವಶೀಲಿಬಾಜಿ ಮಾಡಿ “ಬಿಶೀ ಚೋಯ್” ಮಾತ್ರ ತಪ್ಪಿಹೋಗದ ಹಾಗೆ ನೋಡಿಕೊಂಡೆ.