(ಚಕ್ರೇಶ್ವರ ಪರೀಕ್ಷಿತ ೧೭)
ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ
ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್ ಕೇವಲ ನನ್ನ ವ್ಯಾಯಾಮವೇ” ಎಂಬ ಯೋಚನೆಯಲ್ಲೇ ಸೈಕಲ್ ಮೆಟ್ಟತೊಡಗಿದೆ. ಪಂಪ್ವೆಲ್, ಪಡೀಲ್, ಪರಂಗಿಪೇಟೆ ಕಳೆಯುವವರೆಗೂ ನನಗೆ ದಾರಿ ಖರ್ಚಿಗೆ ಅದೇ ಒದಗಿತು! ಅಲ್ಲಿ ತುಂಬೆಯ ಹೊಸ ಅಣೆಕಟ್ಟು ನೋಡುವ ಮಿದುಳಲೆ ಬಂದದ್ದಕ್ಕೆ ನಿಂತೆ. ನೇತ್ರಾವತಿ ಹೋರಾಟಗಾರ, ಜೋಡುಮಾರ್ಗದ ಗೆಳೆಯ ಸುಂದರರಾಯರ ಕಿವಿ ಚರವಾಣಿಯಲ್ಲೇ ಕಚ್ಚಿ “ಬರ್ತೀರಾ” ಕೇಳಿದೆ. ಅವರು ಮಂಚಿಯ ಕಾರಂತೋತ್ಸವದಲ್ಲಿ `ಬೆಪ್ತಕ್ಕಡಿ ಭೋಳೇಶಂಕರ’ ನೋಡಲು ಹೊರಟು ನಿಂತಿದ್ದರು. ಇನ್ನು ಮುಂದುವರಿದು ವಾಪಾಸಾಗುವ ಕತ್ತಲ ದಾರಿಯಲ್ಲಿ ನಾನೂ ಅದೇ (ಬೆಪ್ತಕ್ಕಡಿ….) ಆಗುವುದು ಬೇಡವೆಂದು ಹಿಮ್ಮುಖನಾದೆ.
ಫರಂಗಿಪೇಟೆಯ ಆ ಮಗ್ಗುಲಲ್ಲಿ ಪೇಟೆಯ ಸಮ ವಿಸ್ತೀರ್ಣದಲ್ಲೇ ಎಂಬಂತೆ ಬಿದ್ದಿದ್ದ ಕಸಕುಪ್ಪೆ ಮಾಮೂಲೀ (?) ವಾಕರಿಕೆ ಹುಟ್ಟಿಸುವಂತಿತ್ತು. ಇನ್ನೂ ಆಚೆಗೆ ಸಂಜೆಸೂರ್ಯನಿಂದ ಕಡ ತಂದ ಆಭರಣದಲ್ಲಿ ನೇತ್ರಾವತಿ ಥಳಥಳಿಸುತ್ತಿದ್ದಳು. ಮತ್ತೂ ಆಚಿನ ದೇವಂದಬೆಟ್ಟದಲ್ಲಿ ನೆತ್ತಿಯ ಕಾಡು ಬಗಿದು ನಿಂತ ಸೋಮನಾಥ ದೇವರು, ಸದ್ಯದಲ್ಲೇ ಬರಲಿರುವ ತನ್ನ ಕಲಶಸ್ನಾನಕ್ಕೆ ಇಳಿಯೆಣಿಕೆಯಲ್ಲಿ ಇನ್ನೊಂದು ಬೆರಳು ಮಡಚಲು ಅನುವಾಗಿದ್ದ. ನಾನು ಸೀದಾ ನದಿ ದಂಡೆಗಿಳಿವ ಕಚ್ಚಾ ದಾರಿ ಅನುಸರಿಸಿದೆ. ಅಲ್ಲಿ ಈ ವಲಯದಲ್ಲೇ ಹೆಚ್ಚು ಸುಸಜ್ಜಿತವಾದ ದೋಣಿಗಟ್ಟೆಯ ಕಾಮಗಾರಿ ನಡೆದಿತ್ತು. (ಬಹುಶಃ ಇದೂ ಸೋಮನಾಥನ ಉತ್ಸವಕ್ಕೆ ತಯಾರಿ ಇರಬಹುದು.) ಹಾಯಿ ದೋಣಿಯೊಂದು ಆ ದಂಡೆಯತ್ತ ಹಾಯ್ದಿತ್ತು. ಔಟ್ ಬೋರ್ಡ್ ಇಂಜಿನ್ ಜೋಡಿಸಿದ, ಇನ್ನೂ ದೊಡ್ಡ ದೋಣಿ ಇಲ್ಲೇ ಜನ ಮಾಡುತ್ತಿತ್ತು. ಕಟ್ಟೆಯ ಮರೆಯಲ್ಲಿ ಕೇವಲ ಎರೆಕೊಕ್ಕೆ ಕಟ್ಟಿದ ದಾರ ಬಿಟ್ಟು ಕುಳಿತವ, ಮೀನಧ್ಯಾನದಲ್ಲಿದ್ದ. ನಾನು ಸೈಕಲ್ಲಿನ ಕ್ರಮಿಸಿದ ದೂರ, ಗಳಿಸಿದ ಔನ್ನತ್ಯ, ಬಳಸಿದ ಸಮಯದ ಲೆಕ್ಕ ಎಂದೂ ಹಿಡಿದವನಲ್ಲ. ಆದರೂ ಇಂದಿನ ಪುಟ ತುಂಬುವಷ್ಟು ವಿವರ ಹಿಡಿದದ್ದು ಸಣ್ಣದೇ ಎಂದುಕೊಂಡು, ತಳುವದೆ ಗೃಹಾಭಿಮುಖನಾದೆ, ಕತ್ತಲೆ ಜಯಿಸಿದೆ! (೧೦-೪-೨೦೧೫)
ರೈತ ದೇಶದ ಬೆನ್ನೆಲುಬು?:
ನಾಟಕ, ಯಕ್ಷಗಾನ, ಕಿರು ಚಿತ್ರಗಳ ನೆಪಗಳಲ್ಲಿ ನನ್ನ ಸೈಕಲ್ ಸರ್ಕೀಟ್ ಮೂರು ದಿನ ಹಿಂದೆ ಬಿತ್ತು. ಇನ್ನು ಸಂಜೆಯವರೆಗೆ ತಾಳೆನೆನ್ನುತ್ತ, ಮೊನ್ನೆ (೧೫-೪-೧೫) ಹಗಲು ಹತ್ತೂಕಾಲರ ಸುಮಾರಿಗೇ ಹೊರಬಿದ್ದೆ. ಕೊಟ್ಟಾರ, ಕೂಳೂರು ಕಳೆದು ಬಲಕ್ಕೆ ಹೊಳೆ ದಂಡೆಯಗುಂಟ ಹರಿಯಿತು ಸವಾರಿ. ಇಲ್ಲಿ ವರ್ಷಕ್ಕೂ ಮಿಕ್ಕು ಕಾಲದಿಂದ ದಾರಿಯ ಎಡ ಮಗ್ಗುಲಿಗೆ ಹಲವು ವಿಧದ ಭಾರೀ ಕೊಳವೆ ಸಾಲುಗಳ ಕೆಲಸ ನಡೆದೇ ಇದೆ. ಬಹುಶಃ ತಣ್ಣೀರುಬಾವಿಯ ಬಳಿಯ ಇಂಡಿಯನ್ ಆಯಿಲ್ ಡಿಪೋ ಮತ್ತು ಕೆಲವು ಇನ್ನೂ ಆಚಿನ ಸಮುದ್ರವನ್ನೇ ಉದ್ದೇಶಿಸಿ ಬರುವುದಿರಬೇಕು. ಹೆದ್ದಾರಿಯನ್ನು ಭಾರೀ ಎತ್ತರದಲ್ಲಿ ದಾಟುವ ಕೊಳವೆ ಸಾಲು ಇಲ್ಲಿ ನೆಲದಾಳದಲ್ಲೂ ತುಸು ಮೇಲೆಯೂ ಕೂರಿಸುತ್ತಲೇ ಇದ್ದಾರೆ. ಇದರಲ್ಲಿ ಯಾವ್ಯಾವ ಕಾರ್ಖಾನೆಗಳ ಉಚ್ಚಿಷ್ಟಗಳಿವೆಯೋ ಏನೇನು ಪೆಟ್ರೋ ಉತ್ಪನ್ನಗಳಿವೆಯೋ ಸ್ಪಷ್ಟವಿಲ್ಲ. ಈಗ ಅವು ಒತ್ತರಿಸಿದ ದಾರಿಯನ್ನು ಬಲ ಮಗ್ಗುಲಿನ ನದಿದಂಡೆಯ ಅಂಚಿನವರೆಗೂ ವಿಸ್ತರಿಸುವಂತೆ ಕೆಲಸ ಭರದಿಂದ ನಡೆದಿದೆ. ಹಿಂದೆ ಇಲ್ಲೇ ಯಾರೋ ನದಿ ದಂಡೆಯ ಉದ್ದಕ್ಕೂ ಒಮ್ಮೆಗೇ ಎತ್ತರಕ್ಕೆ ಮಣ್ಣು ತುಂಬಿ ಮಾರ್ಗ ವಿಸ್ತರಣೆಗೆ ಹೊರಟದ್ದು, ಸಾರ್ವಜನಿಕ ಜಾಗೃತಿಯ ಫಲವಾಗಿ ಅದನ್ನು ತಡೆದದ್ದೆಲ್ಲ ನನ್ನ ನೆನಪಿನಂಗಳದಲ್ಲಿ ಸ್ಪಷ್ಟವಿದೆ. ಆದರೀಗ ಹೆಚ್ಚು ಜಾಣತನದಲ್ಲಿ ಸ್ವಲ್ಪ ಸ್ವಲ್ಪೇ ಹೊಳೆಪಾತ್ರೆಗೆ ದಾರಿಯನ್ನು ಒತ್ತುವರಿ ಮಾಡಿ, ದಂಡೆ ಗಟ್ಟಿ ಮಾಡುವ ತೋರಿಕೆಯಲ್ಲಿ ಹೊಳೆಯ ತಳದಿಂದಲೇ ಭರ್ಜರಿ ಅಡಿಪಾಯ, ಉಕ್ಕಿನ ಹಂದರದ ಕಾಂಕ್ರೀಟ್ ಗೋಡೆಯನ್ನೇ ಮೇಲೆಬ್ಬಿಸುತ್ತಿದ್ದಾರೆ. ಮುಂದೆ ದಾರಿಯನ್ನು ಅಡ್ಡಗಟ್ಟುವ ಒಂದೆರಡು ಹಿನ್ನೀರ ಹರಹುಗಳ ಮೇಲಿದ್ದ ಸೇತುವೆಗೂ ವಿಸ್ತರಣೆಯ ಯೋಗ ಬಂದಿದೆ, ಅಡಿಪಾಯಕ್ಕೆ ಕುಟ್ಟಣ ನಡೆದಿದೆ. ಅಂದರೆ ಫಲ್ಗುಣಿ ನದಿಯ ಉತ್ತರ ದಂಡೆ ತನ್ನ ಪ್ರಾಕೃತಿಕ ಪ್ರವೃತ್ತಿಗಳನ್ನೆಲ್ಲ ನೀಗಿಕೊಂಡು ಕೇವಲ ದ್ರವ ಸಾಗಿಸುವ ಪಾತ್ರೆಯಾಗಲಿದೆ. ಸೂಕ್ಷ್ಮವಾಗಿ ಹೇಳುವುದಾದರೆ ಕಾಂಕ್ರೀಟ್ ಚರಂಡಿಯಾಗಲಿದೆ. ದಂಡೆಯ ಮೂಲಕ ಆಚಿನ ನೆಲಕ್ಕೆ ಇಂಗುವ ನೀರು, ಅಂಚಿನಲ್ಲಿನ ಕೆಸರು, ಅದಕ್ಕೆ ಸಹಜವಾಗಿ ವಿವಿಧ ಅಂತಸ್ತುಗಳ ಹುಲ್ಲು, ಪೊದರು, ಗಿಡ, ಮರ ಮತ್ತವನ್ನು ಆಶ್ರಯಿಸಿದ ಜಲ, ಉಭಯಚರ, ನೆಲ ಹಾಗೂ ಹಾರುವ ಜೀವರಾಶಿಗಳೆಲ್ಲ ಈ ಮಗ್ಗುಲಲ್ಲಿ ಪೂರ್ಣ ನಿರ್ವಸಿತವಾಗಲಿವೆ. ಮುಂದೆ ಸದ್ಯದ ದಾರಿ ಮತ್ತು ಈ ಗೋಡೆಯಂತರಕ್ಕೆ ಮಣ್ಣು ತುಂಬಿ, ದಾರಿ ವಿಸ್ತರಣೆಯಾಗುವುದು ಖಂಡಿತ. ಆ ಕಾಲಕ್ಕೆ ಮಳೆಗಾಲಗಳಲ್ಲಿ ಈ ದಂಡೆಯತ್ತ ಬಿದ್ದ ಮಳೆನೀರು ಕಾರ್ಖಾನೆಗಳ ಕಲ್ನಾರು ಅಥವಾ ಕಾಂಕ್ರೀಟ್ ತಾರಸಿಗಳಿಂದ ಇಳಿದು, ಇಂಟರ್ಲಾಕ್ ಅಂಗಳಗಳನ್ನು ಬಳಿದು, ಕಾಂಕ್ರೀಟ್ ಚರಂಡಿಗಳಲ್ಲಿ ಹರಿದು ಬರಲಿದೆ. ನೀರಿಂಗದ ಪ್ಲ್ಯಾಸ್ಟಿಕ್ ಶೀಟುಗಳ ಮೇಲೆ ಮೀಟರ್ ದಪ್ಪಕ್ಕೆ ಬಿದ್ದ ಡಾಮರ್ ದಾರಿಯನ್ನೂ ತೊಳೆದಿಳಿಯುವ ನೀರಿನೊಡನೆ ಸಂಗಮಿಸಿ ಹೊಳೆಯನ್ನು ಸೇರಲಿದೆ.
ಸುಮಾರು ಮಧ್ಯಂತರದಲ್ಲಿ ಮುಖ್ಯ ದಾರಿಯ ಎಡಗವಲು ಬೈಕಂಪಾಡಿಯ ಉದ್ಯಮ ವಲಯಕ್ಕೆ ಹೋದರೆ ಬಲಗವಲು ಟೋಟಲ್ ಗ್ಯಾಝ್ ವಿತರಣಾ ಕೇಂದ್ರದ ದ್ವಾರಕ್ಕೆ ಮುಕ್ತಾಯವಾಗುತ್ತದೆ. ಅಲ್ಲಿ ಇದ್ದೂ ಇಲ್ಲದಂತೆ ಬಲಕ್ಕೊಡೆಯುವ ಪುಟ್ಟ ಕವಲಿನ ಗಲ್ಲಿದಾರಿ ವಿರಾಮದಲ್ಲಿ ತೋಟಗದ್ದೆ ಸುತ್ತುತ್ತ, ತೊರೆ ಹಿನ್ನೀರ ಹರಹುಗಳನ್ನು ಬಳಸುತ್ತ, ಅಲ್ಲಿಲ್ಲಿ ಡಾಮರು ಕಿತ್ತರೂ ಮಟ್ಟಸ, ಪ್ರಶಾಂತ ಓಟವನ್ನೇ ಕೊಡುತ್ತಿತ್ತು. ಆದರೆ ಫಲ್ಗುಣಿಗೆ `ಶಿಸ್ತು’ ಕಲಿಸಿದ ರಕ್ಕಸ ಕೈಗಳು ಈಗ ಇತ್ತಲೂ ಚಾಚಿವೆ. ಪೊದರು, ಕುರುಚಲು ಮರಗಳನ್ನೆಲ್ಲ ಚೊಕ್ಕ ಮಾಡಿ ತೆಗೆದು, ಜವುಗುಭೂಮಿಯೆಲ್ಲ ನಿಗಿದು ಪ್ರತ್ಯೇಕ ನೇರ, ವಿಸ್ತಾರ ದಾರಿಗಳ ಜಾಲ ಬರುತ್ತಲಿದೆ. ನೆರಳು, ಹಸಿರು, ಹೂವು, ನೀರಿನ ಪರಿಮಳಗಳ ನಡುವೆ ಏಳುತ್ತಿರುವ ದೂಳ ರಾಶಿಯ ನಡುವೆ ಮುಖಕ್ಕೆ ಬಟ್ಟೆ ಕಟ್ಟಿದ ಮಂದಿ ಜೆಸಿಬಿ, ಹಿತಾಚಿ, ಟಿಪ್ಪರ್, ಲೆವೆಲರ್, ರೋಲರ್ ಹೊಡೆಯುತ್ತಿದ್ದಾರೆ. ವಿಸ್ತರಿಸುತ್ತಿರುವ ಔದ್ಯಮಿಕ ಏಡಿಗಂತಿಯ (ಕ್ಯಾನ್ಸರ್) ಕೊಂಡಿಗಳು ಬಿಗಿಯುತ್ತಿರುವಾಗ ಇದೇ ಕೊನೆಯ ಸಲವೋ ಎಂಬಂತೆ ಹಳೆ ದಾರಿಯ ಅಸಂಖ್ಯ ತಿರುವು, ಹರುಕುಗಳಲ್ಲಿ ಸೈಕಲ್ ಬಳುಕಿಸಿ, ಕುಪ್ಪಳಿಸಿ ಸಾಗಿದೆ. ಪೇಜಾವರ ಮಠದ ದಾರಿ ಕಳೆದು, ರೈಲ್ವೇ ಹಳಿ ಹಾಯ್ದು, ಜೋಕಟ್ಟೆ ಕೇಂದ್ರ ತಲಪಿದೆ. ಅಲ್ಲಿನ ನೇರ ದಾರಿ ಪೊರ್ಕೋಡಿಗಾಗಿ ಬಜ್ಪೆಗೇರುವುದು ನನಗೇನೂ ಹೊಸದಲ್ಲ. ಬದಲಿಗೆಂಬಂತೆ ಎಡಗವಲು ಹಿಡಿದೆ. ಒಂದೇ ಚಡಾವು ಏರುವುದರೊಳಗೆ ಜೋಕಟ್ಟೆ ಸೇರಿದಂತೆ ಬಹಳ ದೊಡ್ಡ ನಾಗರಿಕ ವಲಯದ ನಿಜ ಮಹಾಸಮಸ್ಯೆ ಒಮ್ಮೆಗೆ ತೆರೆದು ಬಿದ್ದಂತೆ ತೋರಿತು….. ಏನದು?
ಎಮ್ಮಾರ್ಪೀಯೆಲ್, ಎಸ್ಸೀಜೆಡ್!
ಹೌದು, ಜೋಕಟ್ಟೆಯ ಎಡಗವಲು ಅನುಸರಿಸಿ, ದಿಬ್ಬ ಏರಿ ನಿಂತ ನನ್ನೆದುರಿಗೆ ಹಬ್ಬಿತ್ತು ದೇಶದ, ರಾಜ್ಯದ ಅಭಿವೃದ್ಧಿಯ ಹರಿಕಾರರು – ಮಹೋದ್ದಿಮೆಗಳು. ರೈತ – ದೇಶದ ಬೆನ್ನೆಲುಬು ಎನ್ನುತ್ತಿದ್ದ ಕಾಲವೊಂದಿತ್ತು. ಈಗ (ದಧೀಚಿಯ?) ಬೆನ್ನೆಲುಬು ಮುರಿದು ದೇಶ ರಕ್ಷಣೆಗೆ ಹೊರಟವರೇ ಎಲ್ಲ. ಲಗಾಮಿಲ್ಲದ ಉದ್ದಿಮೆಗಳು ದೇಶವೆಂಬ ಅಮೂರ್ತಕ್ಕೆ ಭಾಗ್ಯವಿಧಾತ ಎಂದೇ ಪ್ರಚಾರಸತ್ರ ನಡೆದಿದೆ. ಆದರೆ ಸುತ್ತುವರಿದ ನೆಲ, ಜಲ, ಜನತೆ ಎಂಬ ಮೂರ್ತ ಸತ್ಯಕ್ಕೆ ಅವೇ ನಿತ್ಯ ಶಾಪ ಎನ್ನುವುದಕ್ಕೆ ಸುತ್ತುವರಿದ ಊರುಗಳೇ ಸಾಕ್ಷಿ. ನೂರಿನ್ನೂರು ಮೀಟರ್ ಅಂತರದಲ್ಲಿ ಆಯುಷ್ ಆಸ್ಪತ್ರೆ, ಭೂ ಚೇತನಾ ಯೋಜನೆಯನ್ನು ಜಾಹೀರುಪಡಿಸುವ ಇಲಾಖಾ ಕಛೇರಿ, ಕೊಳವೆ ನೀರು ಸರಬರಾಜು ಯೋಜನೆಯ ಭಾರೀ ಟ್ಯಾಂಕ್ – ಎಲ್ಲ ಜನಪರವಾದ ಕ್ರಮಗಳೇ ಕಾಣುತ್ತವೆ. ಆದರೆ ಅವುಗಳೆಲ್ಲದರ ಕಾಳಜಿಯನ್ನು ಸಾರುವಂತೆಯೇ ಆಸ್ಪತ್ರೆಗೆ ಆಯುಷ್ಯವಿಲ್ಲ, ಚೇತರಿಸಿಕೊಳ್ಳಲು ಭೂಮಿಯೇ ಉಳಿದಿಲ್ಲ, ಎಲ್ಲೆಲ್ಲಿನ ಟ್ಯಾಂಕರ್ ನೀರಲ್ಲವಾದರೆ `ಸರಬರಾಜು ಯೋಜನೆ’ ಯಶಸ್ವಿಯಲ್ಲ! ಒಟ್ಟು ಪರಿಸರ ಹಾಳು ಸುರಿಯುತ್ತಿತ್ತು. ಹೆಚ್ಚು ಪ್ರಸ್ತುತವಾಗಿ ಕಾಣುತ್ತಿದ್ದ `ಪ್ರತಿಭಟನಾ’ ಜೋಪಡಿಯೂ ಇಂದು ಖಾರ ಕಳೆದುಕೊಂಡದ್ದಕ್ಕೆ ಅಲ್ಲಿ ಬೀಡಾಡಿ ಜಾನುವಾರು ಸೇರಿಕೊಂಡಿತ್ತು. ಅಲ್ಲೇ ಮುಳ್ಳು ಪೊದರು ಮುಚ್ಚಿಕೊಂಡಿದ್ದ ಬಾವಿಯನ್ನು ಇಣುಕಿ ನೋಡಿದೆ. ಗೋಡೆಯಲ್ಲಿ ಹಬ್ಬಿದ್ದ ಮುಳಿ, ಮುಳ್ಳುಗಳ ಮರೆಯಾಚೆ ತಳದ ಬೊಟ್ಟು ನೀರಿನಲ್ಲಿ ಹರಕು ಟಯರು, ಪ್ಲ್ಯಾಸ್ಟಿಕ್ ಬಿಂದಿಗೆಯಷ್ಟೇ ಕಾಣಿಸಿತು. ಹಾದಿ ಸಾಗಿದ್ದ ಸ್ಥಳೀಯ ಮಹಿಳೆಯೊಬ್ಬಳು ನನ್ನ ಕುತೂಹಲಕ್ಕೆ ಪಾಲುದಾರಳಾದಳು. ಸಹಜವಾಗಿ ಆಕೆಯಲ್ಲಿ ನಾನೊಂದೆರಡು ವಿಚಾರಣೆ ನಡೆಸಿದೆ. ಕೂಡಲೇ ಆಚೀಚಿನ ಮನೆಯಿಂದ ಎರಡು ಗಂಡಸರೂ ಇಳಿದು ಬಂದರು. ಬಚ್ಚಿದ ಗಂಟಲಿನಲ್ಲಿ “ಇಲ್ಲಿ ಯಾವ ಬಾವಿಯಲ್ಲೂ ನೀರಿಲ್ಲ, ಇದ್ದರೂ ಬಳಸುವಂತಿಲ್ಲ….” ಎಂಬಲ್ಲಿಂದ, ಅಯಾಚಿತವಾಗಿ ಅವರ ಕೊರಗುಗಳ ಪಟ್ಟಿ ಬೆಳೆಯಿತು.
ಜೋಕಟ್ಟೆಯ ಮುಖ್ಯದಾರಿ ಇಡಿಕಿರಿದ ಅಂಗಡಿ, ಮನೆಗಳ ಹರಕು ಗಲ್ಲಿಯಿಂದ ಈಗ ಅರೆಮನಸಿನಲ್ಲೇ ಎಂಬಂತೆ ಕಾಂಕ್ರೀಟಿಗೆ ಮತಾಂತರಗೊಳ್ಳುತ್ತಿದೆ, ಅಷ್ಟೆ! ಉಳಿದಂತೆ ಕೊಳಚೆ ವ್ಯವಸ್ಥೆ, ಚರಂಡಿ, ಪುಟ್ಟಪಥ, ವಿದ್ಯುತ್ ಮುಂತಾದ ನಾಗರಿಕ ಸವಲತ್ತು ಬಿಡಿ, ಶುದ್ಧ ನೀರು ಮತ್ತು ಗಾಳಿಯಿಂದಲೂ ಇಲ್ಲಿನ ನಾಗರಿಕರು ಪೂರ್ಣ ವಂಚಿಸಲ್ಪಟ್ಟಿದ್ದಾರೆ. ವಂಚನೆಯಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು, ಸ್ಥಳೀಯ ಆಡಳಿತಗಳನ್ನು, ಕೊನೆಯಲ್ಲಿ ಮಾಧ್ಯಮಗಳನ್ನೂ ಹೆಸರಿಸುವಲ್ಲಿ ಜನ ಹಿಂಜರಿಯುವುದಿಲ್ಲ. ಎಲ್ಲಕ್ಕೂ ಕಾರಣ ಎದುರು ಹರಡಿಬಿದ್ದ ಮಹೋದ್ದಿಮೆ. ಭಾರೀ ಉಕ್ಕಿನ ತೊಲೆ, ಹಂದರ, ಅದನ್ನಾಧರಿಸಿ ಯಾವುದರಿಂದ ಎಲ್ಲಿಗೋ ಎಂಬಂತೆ ವಿವಿಧ ಗಾತ್ರ, ನಮೂನೆಗಳ ಕೊಳವೆಗಳ ಜಾಲ ಏಕನಾದದಲ್ಲಿ ಭುಸುಗುಡುತ್ತಿದ್ದುವು. ಆಗಸದ ಶುದ್ಧಕ್ಕೆ ನೆಟ್ಟ ಭರ್ಚಿಯಂತೆ ಹತ್ತೆಂಟು ಚಿಮಣಿ, ವೀಕ್ಷಣಾ ಮೀನಾರುಗಳು. ಯಾವ್ಯಾವುದು ಯಾವ್ಯಾವ ಕಾಲದಲ್ಲಿ ಏನೆಲ್ಲ ಗಾಳಿಯಲ್ಲಿ ಹರಿಬಿಡುತ್ತದೆ, ಪರಿಣಾಮಗಳೇನು ಎಂದು ಸುತ್ತಲಿನ ಜನಗಳಿಗೆ ತಿಳಿಸಿದವರಿಲ್ಲ. ಅದೇನೋ ವಾಸನೆಯಿಂದ ದಮ್ಮು ಕಟ್ಟುತ್ತಾ ಬಂತೆಂದು ಜನರ ಹುಯ್ಲು ಮೇಲಿನ ಕಿವುಡರಿಗೆ ತಟ್ಟಿ, ತನಿಖೆಗೆ ಬರುವಾಗ ಇಲ್ಲಿ ಎಲ್ಲ ಸ್ವಚ್ಛ. “ಕಿವಿ ಹರಿಯುತ್ತಿದೆ” ಎಂಬ ಅಹವಾಲು ವಿಚಾರಣೆಯ ಹಂತಕ್ಕೆ ಬರುವಾಗ ಇಲ್ಲಿ ಎಲ್ಲ ಶಾಂತ! ಒಂದಂತೂ ಸ್ಪಷ್ಟ – ವಠಾರದ ಬಲಕೊನೆಯಲ್ಲಿನ, ಬಹುಶಃ ಎತ್ತರದಲ್ಲಿ ಎಲ್ಲವನ್ನೂ ಮೀರಿದ ಮತ್ತು ಸ್ವತಂತ್ರವಾಗಿ ನಿಂತಂತೆ ತೋರುವ ಉಕ್ಕಿನ ಗೋಪುರದ ನಡುವಣ ಮಹಾ ಚಿಮಣಿ. ಈ ನೆಲದ ಸಹಜ ಫಲವಂತಿಕೆ, ನೀರ ಸಮೃದ್ಧಿ, ಸಮಾಜ ಸಂತೃಪ್ತಿಯನ್ನೇ ಬಲಿಗೊಟ್ಟ ಮಸಣದ ಚಿಮಣಿಯಂತೆ ನಿರಂತರವಾಗಿ ಅಗ್ನಿಜ್ವಾಲೆಯನ್ನೇ ಉಗುಳುತ್ತದೆ. “ನಮಗಿಲ್ಲಿ ಬೇಸಗೆಯ ಉರಿಯೇ ಗೊತ್ತಾಗುತ್ತಿರಲಿಲ್ಲ. ಈಗ ಇತ್ತ ಎಕ್ಕಾರಿನವರೆಗೆ ಚಳಿಗಾಲವೂ ನಮಗೆ ಉರಿ ಬೇಸಗೆ.”
ಉದ್ದಿಮೆಗಾಗಿ ನಡೆದ ಭೂಸ್ವಾಧೀನ, ಹಣದ ಪರಿಹಾರ, ಮರುವಸತಿಗಳ ಯಶಸ್ಸೆಲ್ಲವನ್ನು ಸೂತ್ರ ರೂಪದಲ್ಲಿ ಹೇಳುವಂತೆ ಜನ ಎದುರಿನ ಒಂದು ಸಣ್ಣ ವಠಾರವನ್ನು ತೋರಿದರು. ದಾರಿಯ ಅಂಚಿಗೇ ಎಂಬಂತೆ ನಾಲ್ಕೈದು ವಿದ್ಯುತ್ ಪರಿವರ್ತಕಗಳ ಕೇಂದ್ರವೊಂದು ಪಾಗಾರ ಬೇಲಿಗಳ ಬಂದೋಬಸ್ತಿನ ನಡುವೆ ತುಕ್ಕು ತಿನ್ನುತ್ತಿತ್ತು. ಅದಕ್ಕೂ ಮುನ್ನ ಅಲ್ಲಿ ಮೂರ್ನಾಲ್ಕು ಖಾಸಗಿ ಮನೆಗಳಿದ್ದುವಂತೆ. ಒಮ್ಮೆ ಆ ಪರಿವರ್ತಕಗಳಲ್ಲಿ ಎರಡೋ ಮೂರೋ ಸ್ಫೋಟಿಸಿ ಅಗ್ನಿಕಾಂಡವೇ ನಡೆಯಿತಂತೆ. ಜೀವಹಾನಿಯಾಗದಿದ್ದುದೇ ಪುಣ್ಯವೆಂಬಂತೆ ಜನ ಪುನರ್ವಸತಿ ಒಪ್ಪಿಕೊಂಡು ಜಾಗ ಖಾಲಿಮಾಡಿದರಂತೆ.
ಇಂದ್ಯಾಕೋ ಸೈಕಲ್ ಸರ್ಕೀಟಿನ ಸಮಯಮಿತಿ ಮೀರುತ್ತಿದೆ ಎಂಬೊಂದೇ ಕಾತರದಲ್ಲಿ ನಾನು ಮುಂದಿನ ದಾರಿ ಹಿಡಿದೆ. ಕಳಾವರದ ಇಗರ್ಜಿಯಲ್ಲಿ ಏನೋ ಮಂಗಳ ಕಾರ್ಯ ನಡೆದಂತಿತ್ತು. ತತ್ಕಾಲೀನ ಉರಿಗೆ ಜನ (/ಡಾಂಕಿ?) ಡಿಂಕಿ ಐಸ್ಕ್ರೀಮ್ ಮೆಲ್ಲುತ್ತ ನಡೆದಿದ್ದರು. ಕವಲು ಬಂದಲ್ಲಿ ನಾನು ಎಡದ್ದನ್ನು ಅನುಸರಿಸಿ, ನೇರ ಉದ್ದಿಮೆ ವಠಾರಕ್ಕೆ ಇಳಿದೆ. ಆ ಕೃತಕ ಸುವಿಸ್ತಾರ ತಟ್ಟಿನಲ್ಲಿ ಬಲದ ಕವಲು ನೇರ ಕಾರ್ಖಾನೆಯ ಒಳಕ್ಕೆ ಹೋಗುತ್ತಿತ್ತು. ಕಾವಲ ಕಟ್ಟೆ “ಗುರ್ರ್” ಎಂದಿತು. ನಿಷ್ಪಾಪಿಯಂತೆ ನಾನು ಉಡುಪಿ ಹೆದ್ದಾರಿಗೆ ದಾರಿ ಕೇಳಿದೆ. ಆಚಿನ ಎಡಗವಲು ತೋರಿ, “ಸುರತ್ಕಲ್ ನೋಡಿಕೋ” ಎಂದಿತು. ಈಗ ಕೂಳೂರಿನಿಂದ ಕಳಾವರಿನವರೆಗೆ ನಾನನುಭವಿಸಿದ ದಡಬಡ, ದೂಳು, ಆತಂಕಗಳೇನೂ ಇಲ್ಲದ ಸುಂದರ ಸವಾರಿ. ಬಹುಶಃ ಮಹೋದ್ದಿಮೆಯ ನೆಲದಾಟದಲ್ಲಿ ಭೂಬಂಧಿಯಾದ ಒಂದಷ್ಟು ನೀರ ಹರಹು ಸುಂದರವಾಗಿಯೇ ಕಾಣುತ್ತಿತ್ತು. ಅಲ್ಲಿನ ಹಸಿರು, ಆಡುವ ಹಕ್ಕಿಗಳ ಹಿಂಡು ನನ್ನ ಹಾಗೆ ಭೂತ ಭವಿಷ್ಯಗಳ ಕಾಟವಿಲ್ಲದ್ದಕ್ಕೇ ಉಲ್ಲಸಿತವಾಗಿಯೇ ಕಾಣುತ್ತಿತ್ತು. ಉರಿಬಿಸಿಲು ಮೈಸುಡುವುದು ಸಾಲದೆಂಬಂತೆ ಅನಾವಶ್ಯಕ ಊರ ಚಿಂತೆಯ ಮನದುರಿ ಕಟ್ಟಿಕೊಂಡು ನಾನು ಸೈಕಲ್ ತುಳಿದದ್ದಕ್ಕೆ ಮನೆಯೇನೋ ಮುಟ್ಟಿದೆ. ಇಷ್ಟು ಹಳಹಳಿಸಿದ್ದಕ್ಕೆ ಎಷ್ಟು ಮನಮುಟ್ಟಿದೆ, ನೀವೇ ಹೇಳಬೇಕು. (೧೭-೪-೨೦೧೫)
ದೂಳೀ ಸ್ನಾನ!:
“ಓ ಗೇರ್ ಸೈಕಲ್ಲಾ? ಮತ್ತೆ ಸುಲೂಭ!” ಎನ್ನುವವರಿಗೆ ನಿಜದಲ್ಲಿ ಸಾಮಾನ್ಯ ಸೈಕಲ್ಲೂ ಹೆಚ್ಚು ಬಿಟ್ಟ ಅನುಭವವಿರುವುದಿಲ್ಲ 🙂 ಸ್ವಯಂಚಲಿ ಯಂತ್ರಗಳಲ್ಲೂ (ಆಟೋಮೊಬೈಲ್) ಗೇರ್ ಅಂದರೆ ಶಕ್ತಿಯಲ್ಲ. ಒಟ್ಟು ಯಂತ್ರ ಕೊಡುವ ಶಕ್ತಿ ಅಥವಾ ದೃಢತೆಯನ್ನು ಕಡಿಮೆ ಇಂಧನದಲ್ಲಿ ಸಾಧಿಸುವ ಕಚ್ಚುಗಾಲಿಗಳ ಸಂಯೋಜನೆಯಷ್ಟೇ ಗೇರ್. ಸೈಕಲ್ಲಿನಲ್ಲಿ ಶಕ್ತಿಯ ಮೂಲವಾಗಿ ಸವಾರನ ಶ್ರಮ ಇದ್ದರೆ, ಗೇರ್ ಸಹಕರಿಸುತ್ತದೆ.
ಬಳ್ಳಾರಿಯ ಓರ್ವ ಹಿರಿಯರು ಮಂಗಳೂರಿನಲ್ಲಿ ಉದ್ಯೋಗಿಯಾದ ಮೊಮ್ಮಗನ ಬಿಡಾರಕ್ಕೆ ಬಂದಿದ್ದರಂತೆ. ಅವರಿಗೆಲ್ಲೋ ಸುದ್ದಿ ಸಿಕ್ಕಿ, “ನಾರಾಯಣರಾಯರ ಮಗನನ್ನಾದರೂ ನೋಡುವ” ಪ್ರೀತಿಗಾಗಿ ತಮ್ಮ ಮೊಮ್ಮಗನ ಬೈಕೇರಿ ನನ್ನ ಮನೆಗೂ ಬಂದರು. ನನ್ನ ಚಟುವಟಿಕೆಗಳನ್ನು ಕೇಳಿ “ಅದೇನಪ್ಪಾ ಗೇರ್ ಸೈಕಲ್ಲೂ” ಎಂದು, ಸೈಕಲ್ ನೋಡುವ ಉತ್ಸಾಹ ತೋರಿದರು. ಕೂಡಲೇ `ಆಧುನಿಕ’ಕ್ಕೆಲ್ಲ ತಾನು ವಕ್ತಾರನೆಂಬ ಭ್ರಮೆಯಲ್ಲಿ ತರುಣ “ಅಜ್ಜಾ ಈ ಭಾರೀ ಡೌನಿನಲ್ಲಿ ಸೈಕಲ್ ಇಳಿಸುವಾಗ ಬ್ರೇಕ್ ಸಾಕಾಗೋಲ್ಲ. ಗೇರ್ ಹಾಕ್ಕೊಂಡ್ರೆ…” ನಾನು ಅನಿವಾರ್ಯವಾಗಿ ನಡುವೆ ಬಾಯಿ ಹಾಕಿ ವಿವರಿಸಬೇಕಾಯ್ತು. ಇದು ಸ್ವಯಂಚಲಿ ಯಂತ್ರದಂತೆ ಅಲ್ಲ. ಏರುದಾರಿಯಲ್ಲಿ ಸಹಕರಿಸುವ ಸೈಕಲ್ ಗೇರ್ ಇಳಿದಾರಿಯಲ್ಲಿ ನಿರುಪಯೋಗಿ. ವಾಸ್ತವವಾಗಿ ಇದು ಗೇರಿನ ದೋಷವಲ್ಲ, ಅದರ ತತ್ತ್ವವನ್ನು ತಪ್ಪಾಗಿ ಗ್ರಹಿಸಿದವರ ದೋಷ! ಸ್ವಯಂಚಲಿ ಯಂತ್ರದಲ್ಲಿ ಶಕ್ತಿಮೂಲ ವಾಹನದೋಟವನ್ನು ತನ್ನ ಗರಿಷ್ಠ ಮಿತಿಗೆ ದೂಡುವಂತೇ ಕನಿಷ್ಠ ಮಿತಿಗೂ ಹಿಡಿದಿಡಬಲ್ಲುದು. ಅದನ್ನು ನಿವಾರಿಸಲು ಕ್ಲಚ್ ಎಂಬ ಸಾಧನವಿದೆ. ಸೈಕಲ್ ಹಾಗಲ್ಲ. ಇಲ್ಲಿ ಫ್ರೀ ವೀಲ್ ಇದೆ. ಇದು ಗೇರಿಗೆ ಮುನ್ನೂಕುವ ಸಾಮರ್ಥ್ಯ ಮಾತ್ರ ಕೊಡುತ್ತದೆ. ಹಾಗಾಗಿ ಅದನ್ನು ಮೀರಿದ ಪರಿಸ್ಥಿತಿಯಲ್ಲಿ ಸೈಕಲ್ ಕ್ಲಚ್ ಹಿಡಿದ ವಾಹನದೋಟದಂತೆ ಅಮಿತ ವೇಗದಲ್ಲೇ ಧಾವಿಸುತ್ತದೆ. ಸೈಕಲ್ ಗೇರಿನದ್ದಾದರೂ ಇಳಿಜಾರಿನ ನಿಯಂತ್ರಣ ಸವಾರನ ಚಾಲನ ಸಾಮರ್ಥ್ಯ ಮತ್ತು ಬ್ರೇಕುಗಳನ್ನೇ ಅವಲಂಬಿಸಿರುತ್ತದೆ!
ಗೇರಿನ ಸಹಕಾರದ ಪರೀಕ್ಷೆಗೆ ಮಂಗಳೂರಿನ ಆಸುಪಾಸಿನಲ್ಲಿ ಎಷ್ಟೂ ಸವಾಲುಗಳಿವೆ. ಅಂಥವುಗಳನ್ನು ಸರಣಿಯಲ್ಲಿ ಒಡ್ಡಿ ಸವಾರನನ್ನು ನೀರುನೀರು ಮಾಡುವಲ್ಲಿ ಬಹುಖ್ಯಾತ ದಾರಿ ನೀರ್ಮಾರ್ಗ. ಅಥವಾ ಹಾಗೆ ಹೋಗುವ ಕಲ್ಪಣೆ ರಸ್ತೆ ಅಥವಾ ಬೆಂಜನಪದವು ರಸ್ತೆ. ಮೊನ್ನೆ ಅದರಲ್ಲೇ ಹೊರಟಿದ್ದೆ. ನಂತೂರು, ಕುಲಶೇಖರಕ್ಕಾಗಿ, ಕುಡ್ಪಿನ ಇಳಿಜಾರು ಅರ್ಧ ಇಳಿದಿದ್ದೆ. ಅಲ್ಲಿ ಬಲದ ಕವಲಿನಲ್ಲಿ ಮತ್ತೈದು ಕಿಮೀಗೆ ನೀರ್ಮಾರ್ಗ. ಇವೆಲ್ಲ ಮನಃಪಟಲದ ಚಿತ್ರಕ್ಕೆ ಏನೂ ವ್ಯತ್ಯಯವಾಗದಂತೆ ಸರಿದು ಹೋದವು. ಪೇಟೆ ಕಳೆದದ್ದೇ ಬೊಂಡಂತಿಲದ ಕಣಿವೆಗೆ ಧುಮುಕಿದಂತೋಡುವ ಇಳಿಜಾರು ತೊಡಗಬೇಕು. ಅಲ್ಲಿ ಬಲಕ್ಕೊಂದು ಬಲವಾದ ಬಾಣದ ಗುರುತು ಸಹಿತ ವಿಶೇಷ ಬೋರ್ಡು – “ವಾಹನ ಚಾಲಕರು ಬದಲಿದಾರಿ ಬಳಸಿ.” ಅದು ನಾನಿನ್ನೂ ಶೋಧಿಸದ ದಾರಿಯೇ. ಆದರೆ “ಇದನ್ನು ಯಾಕೆ ಮುಚ್ಚಿದ್ದಾರೆ” ಎನ್ನುವ ಕುತೂಹಲಕ್ಕೆ, ಮೂಲ ಯೋಚನೆಯಂತೇ ಮುಂದುವರಿದೆ. ಸಂಜೆಯ ಸಮಯಾವಕಾಶಕ್ಕೆ ಹೊರೆಯಾಗದಂತೆ, ಅರ್ಧ ಇಳಿಜಾರಿನಲ್ಲಿ ಬಲಗವಲಿಗೆ ಹೊರಳಿದೆ. ಇದು ವಳಚಿಲ್, ಅಡ್ಯಾರಿನತ್ತ ಹೋಗುವ ಮಾರ್ಗ. ಸಣ್ಣ ದಿಬ್ಬ ಏರಿ ಮತ್ತಾಚಿನ `ಪಾತಾಳ’ಕ್ಕಿಳಿದೆ. ಮತ್ತಿನ್ನೊಂದೇ ಕಟ್ಟೇರು ತೊಡಗಬೇಕು ಎನ್ನುವಲ್ಲಿ ಹಳೇ ಸೇತು ಕಳಚಿ ಹೊಸತರ ಕೆಲಸ ಪ್ರಗತಿಯಲ್ಲಿತ್ತು. ನೀರ್ಮಾಗದ ಬದಲಿದಾರಿಯ ಸೂಚನೆ ಸಮರ್ಥನೀಯವಾಗಿತ್ತು. ಆದರೂ ತತ್ಕಾಲೀನ ಬಳಕೆಗಾಗಿ ಇಲ್ಲೂ ಒಂದು ಪರ್ಯಾಯ ದಾರಿಯನ್ನು ಹೊಸದಾಗಿ ಮಾಡಿದ್ದರು. ದಾರಿಯಿಂದಲೂ ಬಲ-ಕೆಳಕ್ಕೊಂದು ದೊಡ್ಡ ಮನೆಯಿತ್ತು. ಅದರಂಗಳಕ್ಕಿಳಿವ ದಾರಿಯನ್ನು ತುಸು ಬಲಪಡಿಸಿ, ಕೊನೆಯಲ್ಲಿ ಎಡ ಹೊರಳಿಸಿದ್ದರು. ಮುಂದೆ ಕಲ್ಪಿಸಲಾಗದಷ್ಟು ಕಡಿದಾದ ಶುದ್ಧ ಮಣ್ಣದಾರಿ ನೇರ ಗುಡ್ಡೆ ಏರಿತ್ತು. ವ್ಯವಸ್ಥಾಪಕರು ಅದರ ಅಪಾಯಕರ ಸ್ಥಿತಿ ಅರಿತು ಏರುಮುಖದಲ್ಲಿ ಅದನ್ನು ಯಾರೂ ಬಳಸದಂತೆ `ವಾಹನಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡನ್ನೂ ಹಾಕಿದ್ದರು.
ನನ್ನ ತಂದೆ ಜೀವನಾನುಭವದಲ್ಲಿ ಗಳಿಸಿದ `ಸವಾಲನ್ನು ಎದುರಿಸುವ ಛಲ’ವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ನಿಮಗೆ ತಿಳಿದೇ ಇದೆ. (ಇದರ ಮೂರನೇ ಮುದ್ರಣ ಅಭಿನವ ಪ್ರಕಾಶನದ್ದು ರೂ ನೂರೈವತ್ತಕ್ಕೆ ಮಾರುಕಟ್ಟೆಯಲ್ಲಿದೆ) ಆ ಛಲ ಒಂದಂಶ ನನ್ನಲ್ಲೂ ಇತ್ತು. “ಪರ್ವತಾರೋಹಣಕ್ಕೆ ಹೇಳಿ ಮಾಡಿಸಿದ ಚಕ್ರ ನನ್ನ ಸೈಕಲ್ಲಿನದು (ಎಂಟೀಬಿ). ಪ್ರಯತ್ನ ನನ್ನದು. ಹಾಗೂ ಆಗದಿದ್ದರೆ ಸೈಕಲ್ ಅಲ್ಲವೇ, ಇಳಿದು ನೂಕಿದ” ಇದು ನನ್ನ ಯೋಚನೆ. ನಾನೊಮ್ಮೆ ನಿಂತು, (ಚಿತ್ರ ತೆಗೆದು,) ಸ್ಥಳ ಪರಿಶೀಲನೆ ಮಾಡಿಕೊಂಡೆ. ಮತ್ತೆ ಮನೆಯಂಗಳದಲ್ಲೇ ಒಂದು ಸುತ್ತು ತುಳಿದು ಗೇರಿನ ಸಂಯೋಜನೆಯನ್ನು ಒಂದು, ಒಂದಕ್ಕೆ ಮಾಡಿಕೊಂಡೆ. (ಸರಪಳಿಯ ಚಾಲನೆಯಲ್ಲೇ ಗೇರ್ ಕ್ರಮವಾಗಿ ಬದಲಿಸಬೇಕು.) ಮತ್ತೆ ರಥದೆತ್ತರಕ್ಕೆ ಸಪುರ ಏಣಿಯಲ್ಲಿ ಉತ್ಸವಮೂರ್ತಿಯನ್ನು ಹೊತ್ತವರು ಧಾವಿಸುವಂತೆ ಗುಡ್ಡೆ ದಾರಿಯನ್ನು ಹೆಟ್ಟಿದೆ. ಇಳಿ ವಾಹನಗಳನ್ನಷ್ಟೇ ಕಂಡ ಆ ನೆಲವಿಡೀ ಹಳದಿ ದೂಳನ್ನೇ ರಾಶಿ ಹಾಕಿದಂತಿತ್ತು. ಅದರಲ್ಲಿ ನನ್ನ ಚಕ್ರ ಹೂತುಹೋಗಬಾರದೆನ್ನುವ ಎಚ್ಚರದಲ್ಲಿ ಜಾಡು ಆಯ್ದುಕೊಳ್ಳುತ್ತ ಬಿರುಸಿನಿಂದಲೇ ಪೆಡಲ್ ತುಳಿದೆ. ಎಲ್ಲೋ ಆಗೀಗ ದೂಳು ಕೂರಿಸುವ ಸಲುವಾಗಿ ತುಸು ನೀರು ಹನಿಸಿದ್ದಿರಬೇಕು. ಹಾಗಾಗಿ ಎಡೆಯಲ್ಲಿ ಅನಿಯತವಾಗಿ ತುಸು ಗಟ್ಟಿಯ ಜಾಡು ಕಾಣಿಸುತ್ತಿದ್ದುದನ್ನೇ ನಾನು ಆಯ್ದುಕೊಂಡಿದ್ದೆ. ಹಾಗೆಂದು ಪೂರ್ಣ ಗಟ್ಟಿ ನಯವಾಗಿದ್ದ ನೆಲ ಆರಿಸಲೂ ಮನವಳುಕುತ್ತಿತ್ತು – ಚಕ್ರ ಜಾರಬಾರದಲ್ಲ. ತೀವ್ರ ಏರಿನ ಪರಿಣಾಮವಾಗಿ ಒಂದೆರಡು ಬಾರಿ ಎದುರಿನ ಚಕ್ರ ಸಣ್ಣದಾಗಿ ನೆಲ ಬಿಟ್ಟ ಅನುಭವವಾಯ್ತು. ವೈಜ್ಞಾನಿಕ ಸೈಕಲ್ಲಿಂಗಿನಲ್ಲಿ ಸವಾರ ಮುಂಬಾಗಿಯೇ ಪೆಡಲೊತ್ತುತ್ತಾನೆ. ಅದೂ ಸಾಲದೆಂಬಂತೆ ನಾನು ಎದೆಯನ್ನೇ ಹ್ಯಾಂಡಲ್ಲಿಗೆ ಮುಟ್ಟಿಸುವಂತೆ ಬಾಗಿದ್ದೆ. ಸಣ್ಣದಾಗಿ ಹಾಗೊಮ್ಮೆ ಹೀಗೊಮ್ಮೆ ತುಸು ಹೊರಳಿದರೂ ನೋಡನೋಡುತ್ತಿದ್ದಂತೆ ಮುಕ್ಕಾಲು ಏರು ಕಳೆದಿದ್ದೆ. ದಾರಿ ಸಾಕಷ್ಟು ಅಗಲವಿದ್ದರೂ ಗುಡ್ಡೆಯ ನೆತ್ತಿಯಿಂದ ಬಂದೊಂದು ವ್ಯಾನ್, ಬಹುಶಃ ನನ್ನ ದಮ್ ನೋಡಿ ದಂಗಾಗಿ, ಅಂಚಿಗೆ ಸರಿದು, ಮಣ್ಣಿಗಿಳಿಯದೆ ನಿಂತುಬಿಟ್ಟಿತ್ತು. ಆಗ ಕ್ಷಣಮಾತ್ರದಲ್ಲಾಯ್ತೊಂದು ದ್ರೋಹ. ಎದುರು ಚಕ್ರಕ್ಕೊಂದು ಪುಟ್ಟ ಕಲ್ಲ ಮೊಳಕೆ ಹೆಟ್ಟಿ, ಅದನ್ನು ಪುಟಿಸಿ ದೂಳರಾಶಿಗೆ ಹೊರಳಿಸಿತು. ಅದೇ ಕ್ಷಣದಲ್ಲಿ ಚಲನೆಯ ನಿರಂತರತೆ ಕಡಿದು, ಒಮ್ಮೆಗೇ ನೂಕಿದಂತಾಗುವಾಗ ಹಿಂದಿನ ಚಕ್ರ ಜರ್ರೆಂದು ಜಾರಿತು. ನನ್ನ ಯೋಚನೆಗೂ ಮೀರಿದ ವೇಗದಲ್ಲಿ ನಾನು ಅಡ್ಡಬಿದ್ದಿದ್ದೆ! ಸೇತುವೆಯ ಕೆಲಸ ನಡೆಸಿದ್ದವರು, ವ್ಯಾನಿನ ಚಾಲಕ “ಹೋ” ಎಂದರು. ಇನ್ನವರ ಸಾಂತ್ವನ, ಸಹಾಯಕ್ಕೂ ಮಿಗಿಲಾಗಿ ಬುದ್ಧಿವಾದ ಕೇಳುವ ಹೆದರಿಕೆಯಲ್ಲಿ ಕೂಡಲೇ ಎದ್ದೆ. ನಾನೂ ಸೈಕಲ್ಲೂ ಅರಶಿನ ರಾಶಿಯಲ್ಲಿ ಮುಳುಗೆದ್ದ ಹಾಗಿದ್ದೆವು. ಅದು ಬಿಟ್ಟರೆ ನೋವು, ಮುರಿತಗಳೇನೂ ಆಗಿರಲಿಲ್ಲ. (ಹೌದು, ಅಡಿಗೆ ಬಿದ್ದರೂ ಮೀಶೆ ಮಣ್ಣಾಗಿರಲಿಲ್ಲ!) ಆಚೆ ಬಿದ್ದಿದ್ದ ಸೈಕಲ್ಲನ್ನೂ ಎತ್ತುತ್ತ ಎಲ್ಲರಿಗೂ ಏನೂ ಆಗಿಲ್ಲವೆಂಬಂತೆ ಕೈಯಾಡಿಸಿ ಡಾಮರ್ ದಾರಿಗೆ ಸೈಕಲ್ಲನ್ನು ನೂಕಿ ನಡೆದೆ. ಅವರಿಗೆಲ್ಲ ಹೆಚ್ಚಿನ ಭರವಸೆ ಕೊಡುವಂತೆ ಮತ್ತೆ ಸೀಟಿಗೇರಿ ತುಳಿದೇ ಗುಡ್ಡೆ ಮುಗಿಸಿ, ತಿರುವಿನಲ್ಲಿ ಅವರಿಂದ ಕಣ್ಮರೆಯಾದೆ. ಮುಂದೊಂದು ಮನೆಯಲ್ಲಿ ಬಕೆಟ್ ನೀರು ಪಡೆದುಕೊಂಡು, ಎಲ್ಲ ತೊಳೆದು, ಸವಾರಿ ಮುಂದುವರಿಸಿದೆ. ಕವಲು ದಾರಿಯಲ್ಲಿ ಎಡದ ವಳಚ್ಚಿಲ್ ಲಕ್ಷ್ಯ ಬಿಟ್ಟು ಬಲದ ದಾರಿಯಲ್ಲಿ ಸಾಗಿದೆ. ಅದರಲ್ಲೂ ಕಿಮೀ ಅಂತರದಲ್ಲಿ ಸಿಗುವ ಬಲಗವಲು ಮತ್ತೆ ನೀರ್ಮಾಗಕ್ಕಾದರೆ (ಮೊದಲ ಬೋರ್ಡು ಕಾಣಿಸಿದ ಬದಲಿ ಮಾರ್ಗವಿದೇ) ನಾನು ಎಡದ ಅಡ್ಯಾರ್ ದಾರಿ ಹಿಡಿದೆ. ಐದೇ ಮಿನಿಟಿನಲ್ಲಿ ಅಡ್ಯಾರ್ ಕಟ್ಟೆಯಲ್ಲಿ ಹೆದ್ದಾರಿ ಸೇರಿದ್ದೆ.
ಕಣ್ಣೂರು ದರ್ಗಾದ ಪಕ್ಕದ ಮೈದಾನ, ದಾರಿ ನೇತ್ರಾವತಿಯ ಹೊಯ್ಗೆ ಹೊರುವವರ ದೊಡ್ಡ ಕೇಂದ್ರ. `ಮರಳು ಮಾಫಿಯಾದ ಮೇಲೆ ದಾಳಿ’ ಪತ್ರಿಕಾ ವರದಿಗಳೆಲ್ಲ ಬಹುಶಃ ಘಟ್ಟದ ಮೇಲಿನ ನಕ್ಸಲೈಟ್ ಕೋಂಬಿಂಗಿನಷ್ಟೇ ಪರಿಣಾಮಕಾರಿಯಿರಬೇಕು. ದರ್ಗಾದ ಬಾವಿಯಿಂದ ಕುಡಿಯುವ ನೀರಿನ ಬಿಂದಿಗೆಗಳ ತಲೆಹೊರೆ ಸಾಲು ಬಿಹಾರೀ ಮರಳುಗಾರರ ಗುಡಾರಗಳ ಶಿಬಿರ ಸೇರುತ್ತಲೇ ಇತ್ತು. ಹೊಳೆ ದಂಡೆಯಲ್ಲಿ ಮರಳ ರಾಶಿ ಬೀಳುವುದು, ಬುಲ್ಡೋಜರುಗಳು ಲಾರಿ ತುಂಬುವುದು ಮಾಮೂಲಿನಂತೆ ನಡೆದಿತ್ತು. ನಾನು ನೇರ ಹೊಳೆಯತ್ತ ದೃಷ್ಟಿ ಹರಿಸಿ, ಮೂರು ವಾರದ ಹಿಂದೆ ನಾವು ಕಯಾಕಿನಲ್ಲಿ ಪ್ರದಕ್ಷಿಣೆ ಹೊಡೆದ ಕುದುರುಗಳನ್ನಷ್ಟು ಕ್ಯಾಮರಾ ತುಂಬಿಕೊಂಡೆ. ಇತ್ತ ಲಾರಿಯಿಂದ ಧುಮುಕಿ ಬಂದೊಬ್ಬ ತರುಣ, ಅತ್ತ ಮರಳೆತ್ತುವ ಗುದ್ದಲಿಯನ್ನೇ ಗಂಭೀರವಾಗಿ ಭುಜಕ್ಕೇರಿಸಿ ಬಂದ ಮರಳುಗಾರ ಹುಬ್ಬಿನ ಚಲನೆ, ಹೂಂಕಾರಗಳಲ್ಲೇ ನನ್ನನ್ನು ಪ್ರಶ್ನಿಸಿದರು. ದೋಣಿವಿಹಾರದ ಕತೆ, ಕುದುರಿನ ಚಂದ, ನಿವೃತ್ತ ಪುಸ್ತಕ ವ್ಯಾಪಾರಿ ಎಲ್ಲ ತಿಳಿದ ಮೇಲೆ ಅವರು ಸಡಲಿದಂತೆ ಕಂಡಿತು. ಇನ್ನೂ ಹೆಚ್ಚಿಗೆ ನನ್ನನ್ನು ಸಾಬೀತುಗೊಳಿಸಲು ಹೊರಟು ಹೆಡ್ಡನಂತೆ ಸಿಕ್ಕಿಬೀಳುವ ಮೊದಲು ಜಾಗ ಖಾಲಿ ಮಾಡಿದೆ. ಸೂರ್ಯನ ಹೆಗಲಿಗೆ ಕೈಚಾಚಿ ಸವಾರಿ ನಡೆಸಿ, ಜ್ಯೋತಿಯಲ್ಲಿ ಅವನನ್ನು ಬಂದರಿನತ್ತ ಕಳಿಸಿ ನಾನು ಮನೆ ಸೇರಿಕೊಂಡೆ. “ಇದೇನು?” ಎಂದ ದೇವಕಿಗೆ “ಆನೆಯ ಹಾಗೆ ದೂಳೀ ಸ್ನಾನ” ಎಂದೆ! ಪರಿಷ್ಕರಿಸಿದ ಗಾದೆಯನ್ನೂ ಹೊಡೆದೆ (ನಡೆವರೆಡವದೆ ಕುಳಿತರೆಡಹುವರೆ) “ಸವಾರನಲ್ಲದೆ ಗಿವಾರ ಮಗಚುವನೇ?” (೧೮-೪-೨೦೧೫)
ಒಂದೊಂದಾಗಿಯೇ ಕೂಡಿಸಿ ಮಾಡಿದ ಶತಕ!:
ಫೇಸ್ ಬುಕ್ಕಿನ ನನ್ನ ಈ ಟಿಪ್ಪಣಿಗಳು, ನಾನು ಯೋಚನೆ ಮಾಡಿ ರೂಪುಗೊಂಡವೇನಲ್ಲ. ಸೈಕಲ್ ಓಡುವ ಉದ್ದಕ್ಕೆ ನೋಡಿದ್ದು, ಅದಕ್ಕೆ ಸಂಬಂಧಿಸಿದಂತೆ ಯೋಚಿಸಿದ್ದನ್ನು ಚಿತ್ರವಷ್ಟೇ ಹೇಳಲಾರದು ಎಂದು ಕಾಣಿಸಿದ್ದಕ್ಕೆ ಬರೆಯುತ್ತ ಹೋದದ್ದು, ಅಷ್ಟೆ. ಫೇಸ್ ಬುಕ್ಕಿಗೆ ಜಾಲತಾಣದ ಶಿಸ್ತಿಲ್ಲ; ಇದೊಂದು ಸಂತೆ. ಇದು ಎಷ್ಟೋ (ಎಲ್ಲ ಅಲ್ಲ) ಹಳೆ ನಮೂದುಗಳನ್ನು, ಹಾಕಿದವರ ಅರಿವಿಗೆ ಬರದಂತೆ ಕಿತ್ತು ಹಾಕಿಬಿಡುತ್ತದೆ. (ಉದಾ: ನಾನು ಇಲ್ಲೇ ಕ್ರಮಸಂಖ್ಯೆ ಸಹಿತ ಕೊಡುತ್ತ ಬಂದಿರುವ ದಿನಕ್ಕೊಂದು ಐನ್ಸ್ಟೈನ್ ಹಿಂದಿನ ನಮೂದುಗಳನ್ನು ಹುಡುಕಿ ನೋಡಿ) ಹಾಗಾಗಿ ಸೈಕಲ್ ಸರ್ಕೀಟ್ ಟಿಪ್ಪಣಿಗಳ ನನ್ನ ಪ್ರತಿ ಲೆಕ್ಕ ತೆಗೆದಾಗ, ಇಂದಿಗೆ ಶತಕ ಹೊಡೆದ ಅನುಭವವಾಯ್ತು. ಇಲ್ಲ, ಇದು ಯಾವ ಪ್ರತಿಷ್ಠೆಗೆ, ಉಬ್ಬರಕ್ಕೆ ಪೀಠಿಕೆಯಲ್ಲ. ಹುಟ್ಟಿದ ತಪ್ಪಿಗೆ ಸಾಯದ ಅದೃಷ್ಟಕ್ಕೆ ಲೆಕ್ಕಕ್ಕೆ ಸಿಕ್ಕುವ ಪ್ರಾಯದಂತೆ, ಹೀಗೊಂದು ಬರೆಯಲು ತೊಡಗಿದ `ಅಪರಾಧಕ್ಕೆ’ ದಕ್ಕಿದ ಅಂಕಿಯ ದಾಖಲೆ ಮಾತ್ರ. ಈ ಅಂದಾಜನ್ನು ಹಿಡಿದು ಫೇಸ್ ಬುಕ್ಕಿನಲ್ಲಿ ಸದ್ಯ ಉಳಿದ ಹಿಂದಿನ ಸೈಕಲ್ ಸರ್ಕೀಟ್ ಟಿಪ್ಪಣಿಗಳಿಗೆ ನೂರರಿಂದ ಇಳಿಯೆಣಿಕೆಯಲ್ಲೂ ಮುಂದಿನವಕ್ಕೆ ೧೦೧ರಿಂದ ಏರುಕ್ರಮದಲ್ಲೂ ಕ್ರಮಸಂಖ್ಯೆ ರೂಢಿಸುತ್ತಿದ್ದೇನೆ – ದಯವಿಟ್ಟು ಗಮನಿಸಿ.
ಇಂದು ಸಂಜೆ ಸೆಕೆ ಏರಿ, ಆಕಾಶದಲ್ಲಿ ಖರ್ಚಿಲ್ಲದ ಧ್ವನಿ ಬೆಳಕಿನ ಪ್ರದರ್ಶನ ಜೋರಾದಾಗ ನಗರ ಪ್ರದಕ್ಷಿಣೆಗಷ್ಟೇ ಸೈಕಲ್ ಸರ್ಕೀಟ್ ಎಂದೇ ಹೊರಟೆ. ಸೈಕಲ್ಲೋಡುತ್ತಿದ್ದಂತೆ ಹೊರಚಿತ್ರಕ್ಕೆ “ಮಳೆ ಬಂದರೆ…..” ಎಂಬ ಮನೋಲಹರಿ ಜೊತೆಗೊಟ್ಟಿತ್ತು. ಕೊಡಿಯಾಲಗುತ್ತಿನ ಹೊಸ ಕಾಂಕ್ರೀಟ್ ದಾರಿಯಂಚಿನ ಅಪೂರ್ಣಗೊಂಡ ಚರಂಡಿ ಕೆಲಸ ದಾರಿಗೆ ರಾಡಿ ತುಂಬಲಿತ್ತು. ಬಿಜೈ ದಾರಿಯ `ಮೋರ್’ ಬಳಿಯ ಸೇತುವೆಯ ಅಂಚುಗಟ್ಟುವ ಕೆಲಸದ ಅಚ್ಚುಕಟ್ಟು ಕೆಟ್ಟುಹೋಗಲಿತ್ತು. ಕದ್ರಿಯಲ್ಲಿ ತೀರ್ಥವಾಗಿ ತೊಡಗಿ ಕೊಡಿಯಾಲ ಗುತ್ತಿನ ಬಳಿ `ನರಕದಹೊಳೆ’ಯೇ ಆಗುವ ತೋಡು ಮಳೆಯ ಅವಭೃತದ ಸಂಭ್ರಮವನ್ನು ಹೂಳೆತ್ತದ ಪಾತ್ರೆ ಮೀರಿ ಹಂಚಿಕೊಳ್ಳಲಿತ್ತು. ಡೊಂಗರಕೇರಿ – ಕುದ್ರೋಳಿ ದಾರಿಯ ಕಾಂಕ್ರೀಟ್ ತೇಪೆ ಹದಗೆಡಲಿತ್ತು. ಬೋಳೂರಿನ ಗಲ್ಲಿ ಮನೆಯ ಮದುವೆಯಲಂಕಾರ ನೆಂಟರು ಹೋಗುವ ಮುನ್ನ ನೀರುಕುಡಿಯಲಿತ್ತು. ಅಲ್ಲೇ ವಠಾರಕ್ಕೆಲ್ಲ ಉಚಿತ ಸುವಾಸನೆ ಬೀರುತ್ತಿದ್ದ ಅಗರಬತ್ತಿ ಕಾರ್ಖಾನೆಗೆ ಹಿತ್ತಲಿನ ನದಿ ದಂಡೆಯ ಕಸಗುಪ್ಪೆ ಕೆರಳಿ, ಪರಿಮಳದ ಸ್ಪರ್ಧೆ ಕೊಡಲಿತ್ತು. ಬರಲಿರುವ ಸಿಹಿನೀರಿಗೆ ಪಾತ್ರೆ ಖಾಲಿಯುಳಿಸುವಂತೆ ಉಪ್ಪುನೀರು ಕಡಲಿಗೋಡುತ್ತಿತ್ತು. `ಇಳಿತ’ದಿಂದ ಬತ್ತಲಾಗುತ್ತಿರುವ ಗೊಸರಿನ ಹಾಳುಮೂಳದಲ್ಲಿ ಹೊಟ್ಟೆಯಪಾಡಿಗಾಗಿ ನಡೆದ ಶ್ವೇತಾಂಬರರ ಒಂಟಿಗಾಲಿನ ತಪಸ್ಸು ಭಂಗವಾಗುವುದಿತ್ತು. ನದಿದಂಡೆಯ ಸಣ್ಣ ಬಯಲಿನಲ್ಲಿ `ಕಡಲ ತರಕಾರಿ’ಗಳ ತಿನಿಸಿನ ಮೇಳ ಆಯೋಜಿಸಿದವರು ಹರಕೆ ಹೊರುವುದು ಬಾಕಿ. ಬೋಟ್ ಕ್ಲಬ್ಬಿನ ಅಂಗಳದ ಪಾರ್ಟಿ ಒಳಾಂಗಣಕ್ಕೆ ಜಾರುವುದಕ್ಕೂ ಸಿದ್ಧ. ಬೆಂಗ್ರೆಯಿಂದ ದೋಣಿಯೇರಿ ಬಂದ ಜನ ಮಳೆಗೆ ಮುನ್ನ ಹೊಳೆ ದಾಟಿದ ಸಂತಸದೊಡನೆ ಮನೆ ತಲಪುವ ಅವಸರದಲ್ಲಿದ್ದರು. ಇತ್ತಣವರು, ಮೋಡದ ಮರೆಯಿಂದ ನಕ್ಕು, ಹೊಳೆಯಡ್ಡಕ್ಕೆ ಬೆಳ್ಳಿ ಬೇಗಡೆ ಹೊಳೆಯಿಸಿದವನನ್ನು ಕಂಡರು. ಆ ಭರವಸೆಗೆ ಮನಸೋತು, ದಿನಮಣಿಯನ್ನು ಕಡಲಕಿನಾರೆಗೇ ಬೆಂಬತ್ತಿ “ಬಾಯ್” ಹೇಳುವ ತರಾತುರಿ ತೋರಿದರು. ನದೀದಂಡೆಯ ಸ್ವಚ್ಛ ಗಾಳಿಯ ಭ್ರಮೆಯಷ್ಟಕ್ಕೆ ಬಂದ ಜನ ದಂಡೆಯ ಕಟ್ಟೆಯ ಮೇಲೆ, ಬತ್ತೇರಿಯ ಎತ್ತರದ ಗೋಡೆಯಂಚಿನಲ್ಲಿ ಕಾಲಿಳಿಸಿ ಕುಳಿತಿದ್ದರು. ಹೊಳೆಯ ಸ್ವಾಸ್ಥ್ಯದ ಮೇಲೆ ನಾಗರಿಕತೆಯ ಪರಿಣಾಮದ ಅರಿವಿದ್ದವರು ದೃಶ್ಯಕ್ಕಷ್ಟೇ ತೃಪ್ತರೆಂಬಂತೆ ಕಾರಿನ ಕನ್ನಡಿ ಏರಿಸಿ, ಗುರ್ರೆಂದು ಏಸಿ ಚಾಲೂ ಇಟ್ಟಿದ್ದರು…….
ಬೆವರಿನ ಹೊಳೆ ಹರಿದರೂ ಸರಿ, ಮಳೆ ಸಿಕ್ಕು ಬಯಲಿನ ಸ್ನಾನವಾದರೂ ಸರಿ ಎಂದೇ ನಡೆದ ನನ್ನ ವಿರಾಮದ ಓಟ ಎರಡೂ ಲಾಭವಿಲ್ಲದಂತೆ ಮನೆಯಲ್ಲಿ ಮುಗಿಯಿತು. (೧೯-೪-೨೦೧೫)
ದೋಣಿಯವ ಮಿಂಡ:
ನನ್ನ ಸೈಕಲ್ ಅಂತೂ ನಿನ್ನೆ (೨೩-೪-೧೫) ಎರಡೂ ರಿಮ್ಮು, ಡಿರೇಲರ್ `ಅದೂ ಇದೂ’ ಎಂದು ಬದಲಿ ಅಂಗಾಂಗ ಜೋಡಿಸಿಕೊಂಡು ಬಂತು. ಆದರೆ ಮುಗಿಲಲೋಕದ ಸಂಕಟ ಬಿಡಬೇಕಲ್ಲ! ಮಂಗಳವಾರ ರಾತ್ರಿಯ ಅದರ ಆರ್ಭಟೆ, ಗೋಳು ಇನ್ನೂ ಮುಗಿದಂತಿರಲಿಲ್ಲ. (ಆ ಕಾರಣದಲ್ಲಿ ಕೆಲವು ಮನೆ, ಮನಸ್ಸಿಗೆ ಆದ ನಷ್ಟ ತೀರಾ ವಿಷಾದಕರ) ನಿನ್ನೆ ಇಡೀ ಅದಕ್ಕೆ ಉಮ್ಮಳಿಸಿ ಬರುತ್ತಿದ್ದ ದುಃಖ ಮತ್ತೆ ಇಂದು ಬೆಳಿಗ್ಗೆ ಹರಕೊಂಡು ಬಿತ್ತು. ಇನ್ನೂ ಮುಗೀಲಿಲ್ಲ ಎನ್ನುವಂತೆ ಪುನಃ ಮಂಕು, ಸೆಕೆ. ಏತನ್ಮಧ್ಯೆ ಮೊನ್ನೆ ಮಧ್ಯಾಹ್ನಕ್ಕೆ ಕಾವೂರು ಪ್ರವೀಣನ ಮಗನ ಉಪನಯನ. ರಾತ್ರಿಗೆ ಕೆ.ಎಲ್ ರೆಡ್ಡಿ, ಜಾನಕಿಯರ ಎರಡನೇ ಮೊಮ್ಮಗಳನ್ನು (ಚೈತ್ರಪುತ್ರಿ) ತೊಟ್ಟಿಲಿಗೇರಿಸುವ ಸಂಭ್ರಮ. ಕಳಶಪ್ರಾಯವಾಗಿ ನಿನ್ನೆ ಮಧ್ಯಾಹ್ನ ಅಮೃತಸೋಮೇಶ್ವರರ ಮನೆ ಒಕ್ಕಲು! ಒಂದರ ಮೇಲೊಂದು ಭರ್ಜರಿ ಊಟವೇನೋ ಸರಿ, ಆದರೆ ಪಚನಸಹಕಾರೀ ವ್ಯಾಯಾಮ ಎಲ್ಲಿ? ”ಹಾಂ, ಹೀಗೇ ಕೆತ್ತಿಕಲ್ಲಿನತ್ತ ಹೋದರೂ ಹೋದೆ…” ಎಂದು ದೇವಕಿಗೆ ಹೇಳಿ ಸೈಕಲ್ ಏರಿಯೇ ಬಿಟ್ಟೆ. ಆದರೆ…..
ವಾಸ್ತವದಲ್ಲಿ ವಿಶೇಷ ಒಲವುಗಳೇನೂ ಇಲ್ಲದೆ, ಇತರ ವಾಹನಗಳ ತತ್ಕಾಲೀನ ಅಡ್ಡಿ ನಿವಾರಿಸುವಲ್ಲಿ ಬದಲಿ ದಾರಿಗೆ ತಿರುತಿರುಗುವುದರೊಡನೆ ಕೂಳೂರು, ತಣ್ಣೀರಬಾವಿಗಾಗಿ ಬೆಂಗರೆಯ ಕೊನೆಯನ್ನು ಮುಟ್ಟಿದ್ದೆ. ಒಮ್ಮೆಗೆ ನಮ್ಮ ಹಬ್ಬ, ಜಯಂತಿಗಳ ಸೋಮಾರಿ ದಿನಗಳು ಮುಗಿದರೂ ವಾತಾವರಣ ಜಗ್ಗುತ್ತಲೇ ಇತ್ತು. ಬದಲಿ ಮಾತಿನಲ್ಲಿ ಹೇಳುವುದಿದ್ದರೆ, ದುಡಿಮೆಯ ದಿನವೇ ಆದರೂ ಬಹುತೇಕ ದೋಣಿಗಳು ತಂಗಿದ್ದುವು. ಟಗ್, ಟ್ರಾಲ್ ಜೂಗರಿಸಿದ್ದವು. ದೋಣಿ ರಿಪೇರಿಯವರೂ ಅರೆಮನಸ್ಸಿನಲ್ಲಿ ಕೆಲಸ ನಡೆಸಿದ್ದರು. ಮಕ್ಕಳಿಗೆಲ್ಲ ಬೇಸಗೆ ರಜೆಯಾಗಿ ಮುಳ್ಳು, ಮರಳೆಂದು ನೋಡದೆ ಆಟ ಸಾಗಿತ್ತು. ಅಲ್ಲೂ ಉರಿಸೆಕೆಯಲ್ಲಿ ಉರುಡು, ಬೆವರು ಬಸಿಯುವ ಕಷ್ಟ ಯಾರಿಗೆ ಬೇಕು – ಆಟಕರಿಗಿಂತ ನೋಟಕರೇ ಹೆಚ್ಚು!
ಎರಡು ದಿನದ ಹಿಂದೆ ಬಂದ ಅಕಾಲಿಕ ಮಳೆಗೆ ಗಾಳಿ ವಿಕಟ ಸಾಹಚರ್ಯ ಕೊಟ್ಟಿತ್ತು. ಗಾಳಿಮರವನ್ನೇ ಬಾರುಕೋಲು ಮಾಡಿ, ಅರಣ್ಯ ಇಲಾಖೆಯ ತೋರಿಕೆಯ `ನವೀನ ಜೋಪಡಿಯ’ ಮಾಡಿನ ನಡು ಮುರಿದಿತ್ತು. ಸಾಲದೆಂಬಂತೆ ಆಚೀಚೆ ಇನ್ನೂ ಕೆಲವು ಮರಗಳ ಬುಡಮಗುಚಿ, ಸೊಂಟ ತಿರುಚಿ ಮತ್ತೆ ನಿಷ್ಪಾಪಿಯಂತೆ ಅಲೆಲಲನೆ ಜತೆಯಲ್ಲಿ ಮರಳು ತೊಳೆಯುವ ಕಾಯಕಕ್ಕೆ ಮರಳಿತ್ತು. ಏನೇ ಇರಲಿ, ಮಳೆಗಾಲದಲ್ಲಿ ತೇಲುಸೌದೆಯನ್ನು ಕಷ್ಟದಲ್ಲಿ ಸಂಗ್ರಹಿಸುತ್ತಿದ್ದ ಬೆಂಗ್ರೆ ವಾಸಿಗಳಿಗೆ ಅನಿರೀಕ್ಷಿತ ಸೌದೆ-ಮುಹೂರ್ತ ಸಮನಿಸಿತ್ತು!
ನನ್ನ ವಿರಾಮದ ಸವಾರಿಗೆ ಒಮ್ಮೆಗೆ ಭರಗುಟ್ಟುವ ಗಾಳಿ ಕಾಡತೊಡಗಿತು. ಜಾರುಜಾಡು ಹಿಡಿದ ಸೂರ್ಯನೇ ಕಾವಳಿದು, ಮೋಡದ ಕೊಡೆ ಹಿಡಿದ. ನಾನು ಮತ್ತೆ ಹನ್ನೆರಡು ಕಿಮೀ ಸೈಕಲ್ ಮೆಟ್ಟುವ ಯೋಚನೆ ವಿಮರ್ಶಿಸಬೇಕಾಯ್ತು. ಅಲ್ಲಿಂದ ಸುಲ್ತಾನ್ ಬತ್ತೇರಿಗೆ ಹೋಗುವವರಿಗಿದ್ದ ದೋಣಿಗಟ್ಟೆಗೆ ಹೋಗಿ, ಟಿಕೆಟ್ ಖರೀದಿಸಿ ನಿಂತೆ. ಹತ್ತೆಂಟು ಮಕ್ಕಳಿದ್ದರು. ಆದರೆ ದೋಣಿ ಇನ್ನೇನು ಬಂತು ಎನ್ನುವುದರೊಳಗೆ ತಟಪಟ ಹನಿಯಪ್ಪ ಬಂದೇ ಬಂದ. ಜೊತೆಜೊತೆಗೆ ಕಡಲ ಕಿನಾರೆಯಿಂದ ಹಿಂಡು ಹಿಂಡು ಜನ ಓಡಿ ಬರತೊಡಗಿದರು. (ತುಂಬ ಜನಕ್ಕೊಂದು ಭ್ರಮೆ – ಸಮುದ್ರದಲ್ಲಿ ಗಂಟೆಗಟ್ಟಳೆ ಆಡಿದರೆ ಅಡ್ಡಿಯಿಲ್ಲ, ಮಳೆಯಲ್ಲಿ ನೆಂದರೆ ಶೀತಜ್ವರ ಖಾತ್ರಿ!) ದೋಣಿ ನಿಲ್ಲುವುದರೊಳಗೆ ಭರ್ಜರಿ ಗಾಳಿ, ಮಳೆ. ಸೈಕಲ್ ಕುರಿತಂತೆ ದೋಣಿಯವರ ಅಸಮಾಧಾನ ನಾನು ಮೊದಲು ಕಂಡವನೇ. ಆ ಸಂಕೋಚದಲ್ಲಿ ನಾನು ಹಿಂದೆ ಸರಿದು ನಿಂತೆ. ದೋಣಿ ಹೋಯ್ತು, ಮತ್ತೆ ಬಂತು, ಮತ್ತೆ ಹೋಯ್ತು. ಜನ ಬರುತ್ತಲೇ ಇದ್ದರು. ಹವಾ ಮುನಿಸು ಮುಂದುವರಿದಿತ್ತು. ಈ ಗದ್ದಲದಲ್ಲಿ ನನ್ನ ಬೆನ್ನಿಗಿದ್ದ ಸೂರ್ಯ ಹೇಳದೇ ಕೇಳದೇ ಜಾಗ ಖಾಲಿ ಮಾಡಿದ್ದ. ಏಳೂವರೆಗಾಗುವಾಗ “ಇದು ಲಾಸ್ಟ್ ಟ್ರಿಪ್” ಎಂಬ ಘೋಷಣೆ ಕೇಳಿದ ಮೇಲೆ ನಾನೂ ನುಗ್ಗಿದೆ. ನನ್ನ `ವೇಗ’ಕ್ಕೆ ದೋನಿ `ಚಕ್ಕ ಬಾರಿಸಿದ್ದರೆ’ ಕುಶಿಯಲ್ಲಿ ಆಚೆ ದಂಡೆಗೆ ಹೋಗಿ ಬೀಳುತ್ತಿದ್ದೆನೋ ಏನೋ. ಬದಲಿಗೆ ದೋಣಿಯವ ನನ್ನನ್ನು ಸೇರಿಸಿಕೊಂಡು, `ಡಿಫೆನ್ಸ್’ ಆಡಿದ. ಹೇಳಿದ್ದನ್ನೇ ಹತ್ತು ಸಲ ಹೇಳಿದ “ಇಲ್ಲಿ ಸೈಕಲ್ ತರಬಾರ್ದೂಂತ ಹೇಳಿದ್ದಲ್ವಾ…. ಹೇಳಿದ್ದಲ್ವಾ…” ಎಂದೋ ಬರಲಿರುವ ತೂಗು ಸೇತುವೆ ಇಂದೇ ಬರಬಾರದಿತ್ತೇ ಎಂದು ನಾನು ಮನದಲ್ಲೇ ಕೊರಗುತ್ತ, `ಭಾರದ್ವಾಜ ಮಂತ್ರ’ ಜಪಿಸುತ್ತಾ ಸುಮ್ಮನಿದ್ದೆ. ಕೊನೆಗೂ ಆತ ಸುಲ್ತಾನ್ ಬತ್ತೇರಿಯ ದೋಣಿಗಟ್ಟೆಯಲ್ಲಿ ಬಿಟ್ಟುಕೊಟ್ಟಾಗ, ದೊಡ್ಡ ಥ್ಯಾಂಕ್ಸ್ ಹೇಳಿ, ತಲೆಯಲ್ಲಿ ಸುಳಿಯುತ್ತಿದ್ದ ಕೊಳಕು ಗಾದೆ (ನದಿ ದಾಟಿದ್ದೇ ದೋಣಿಯವ ಮಿಂಡ) ಅಲ್ಲೇ ಹೂತು ಹಾಕಿದೆ. ಪಿರಿಪಿರಿ ಮಳೆಯಲ್ಲಿ, ಕತ್ತಲ ದಾರಿಯ ಮಿಂಚಾಗಿ ಮನೆಸೇರಿಕೊಂಡೆ. (೨೩-೪-೨೦೧೫)
ಮಳೆಗಾಲದ ನೀರವರಿ!:
ಇಂದು ಬೆಳಿಗ್ಗೆ ಆರು ಗಂಟೆಯ ಅಲಾರಾಂಗಿಂತಲೂ ಮೊದಲೇ ಮಳೆರಾಯ ಅವತರಿಸಿದ್ದ. ನಾನು ಎಂದಿನಂತೆ ನಡೆದೇ ಹಾಲು, ಪತ್ರಿಕೆ ತರಲು ಹೊರಟಾಗ ಬಿಟ್ಟುಕೊಟ್ಟ. ಆದರೆ ನಮ್ಮ ಪ್ರಾತರ್ವಿಧಿಗಳೆಲ್ಲ ಮುಗಿದು, ಗಂಟೆ ಒಂಬತ್ತರ ಹತ್ತತ್ತಿರ ಬಂದರೂ ಕಾವಳ ಹರಿದಿರಲಿಲ್ಲ. ಇದೇ ಸ್ಥಿತಿ ಸಂಜೆಗಾದರೆ ಹಿಂಬಾಲಿಸುವ ಅಕಾಲಿಕ ರಾತ್ರಿ ಹೆಚ್ಚಿನ ಸಮಸ್ಯೆಯಾಗುತ್ತದೆ. ಬದಲು ನನ್ನ ದಿನದ ಸೈಕಲ್ ಸರ್ಕೀಟ್ ಈಗಲೇ ಹೊರಟರೆ? ನಾನು ಎಂದಿನಂತೆ ಎರಡನೇ ಸುತ್ತಿನ ಗಣಕಕಾರ್ಯಕ್ಕೆ ಕೂರುವ ಬದಲು ಸೈಕಲ್ ಏರಿಬಿಟ್ಟೆ.
ಮೊನ್ನೆ ಅಂದಾಜಿಸಿ, ಕೊನೇ ಗಳಿಗೆಯಲ್ಲಿ ಬಿಟ್ಟಿದ್ದ ಕೆತ್ತಿಕಲ್ಲು-ಉಳಾಯಿಬೆಟ್ಟು ಉದ್ದೇಶಿಸಿ ನಂತೂರು, ಕುಲಶೇಖರ ಕೈಕಂಬದವರೆಗೇನೋ ತುಳಿದೆ. ಆದರೆ ತಲೆಯೊಳಗೆ ಆಗಷ್ಟೇ ಪತ್ರಿಕೆಯಲ್ಲಿ ಓದಿದ ಭಾರತೀ ನಗರದ `ನೆರೆ ಸಂತ್ರಸ್ತ’ರ ಪಾಡು ತಿರುಗುತ್ತಿತ್ತು. ನಗರದೊಳಗೆ ಹರಿಯುತ್ತಿದ್ದ ತೀರ್ಥಗಳೆಲ್ಲ `ಸಪುತೀ’ಗಳಾದ ಕತೆ ಹೊಸತೇನಲ್ಲ! ಆದರೀಗ ಮೊದಲ ಮಳೆಯಲ್ಲೇ ಮೋರಿಯ ಕಸಕುಪ್ಪೆಯ ಅಣೆಕಟ್ಟುಗಳು ಬೃಹತ್ತಾಗಿ, ಸಪುತೀ ಅಕ್ಷರಶಃ ಮೇರೆಮೀರಿ, ಮನೆಮನೆಗೆ ನೀರವರಿ (ನೀರು+WORRY) ಶುರುವಾಗಿತ್ತು. ನನ್ನ ಸೈಕಲ್ ಸವಾರಿಯಾದರೂ ಅಲ್ಲಲ್ಲಿ ಮಡುಗಟ್ಟಿದ ಹಕ್ಕಿ-ಕೊಳಗಳನ್ನು ಬಳಸಿ, ಪಾತಾಳ-ಗಂಗೆಯ ಸೇಚನವನ್ನು ಎರಡೆರಡು ಕಡೆ ತಪ್ಪಿಸಿದ್ದೂ ನೆನಪಾದಾಗ ಕೆತ್ತಿಕಲ್ಲು ದಾರಿ ಅಪಾಯಕಾರಿ ಎನಿಸಿತು.
ಸಪುರ ಅಂಕುಡೊಂಕಿನ ದಾರಿ, ಕೆಲಸದ ದಿನದ ತುರ್ತಿನಲ್ಲಿ ಮೂಡಬಿದ್ರೆ-ಮಂಗಳೂರಿನ ನಡುವಣ ವಾಹನ ಸಮ್ಮರ್ದವೆಲ್ಲ ನೆನೆಸಿ ಒಮ್ಮೆಗೇ ಪಡೀಲಿನತ್ತ ಹೊರಳಿದೆ. ಮತ್ತೆ ನಿರ್ಯೋಚನೆಯಿಂದ ಪುತ್ತೂರ ದಾರಿ ಹಿಡಿದೆ. ಬಿಸಿಲ ಹೊಡೆತವಿಲ್ಲದೆ, ತಣ್ಪುಹೊತ್ತ ಗಾಳಿಯ ಕುಮ್ಮಕ್ಕು ಸೇರಿ ಅವಿರತ ಚಕ್ರ-ಚಾರಣದಲ್ಲಿ ಸುಮಾರು ಐವತ್ತೈದೇ ಮಿನಿಟಿನಲ್ಲಿ ಜೋಡುಮಾರ್ಗದ ಗೆಳೆಯ ಸುಂದರ ರಾಯರ ಮನೆ ಸೇರಿದ್ದೆ. ನಮ್ಮೊಳಗೆ ಮಾತಿಗೆ ವಿಷಯಕ್ಕೆಂದೂ ಬರವಾದದ್ದಿಲ್ಲ. ಆದರೂ ವಿಶೇಷವಾಗಿ ನಾಳೆ ಅಲ್ಲೇ ಸಮೀಪ ಮೌನೀಶ ಮಲ್ಯರ ಮನೆಯಲ್ಲಿ ಸಾರ್ವಜನಿಕರಿಗಾಗಿ ನಡೆಯುವ ಹಲಸಿನ ಮೇಳದ ಕುರಿತು ಹತ್ತು ಮಿನಿಟು ಮಾತಾಡಿ ಮರಳಿ ಹೊರಟೆ. ರಾಯರ ಹೆಂಡತಿ ರಮಾ “ಚಾ, ನೇರಳೆ ಜೂಸ್…” ಎಂದೆಲ್ಲಾ ಆಮಿಷಗಳ ಪಟ್ಟಿ ಹೇಳುತ್ತಿದ್ದಂತೆ ಇನ್ನೆಲ್ಲಿ ಊಟಕ್ಕೂ ನಿಲ್ಲಿಸಿಬಿಡುತ್ತಾರೋ ಎಂದು ಆತಂಕಿಸಿ ಎಲ್ಲ ನಿರಾಕರಿಸಿ ಮತ್ತೆ ಮಂಗಳೂರ ದಾರಿ ಹಿಡಿದೆ. ಹನ್ನೊಂದೂವರೆಗೆ ಮನೆಯಲ್ಲಿದ್ದೆ.
ಈಗಷ್ಟೇ ಬಿಸಿಬಿಸಿಯಾಗಿ ನೇಪಾಳದ ಭೂಕಂಪನದ ವರದಿಗಳನ್ನು ನೋಡಿದೆ. ಭಾರತಖಂಡ ಭಾಗದಲ್ಲಿ ಉತ್ತರಕ್ಕಿಂತ ಎಷ್ಟೆಷ್ಟೋ ಸ್ಥಿರ ನೆಲೆಯಲ್ಲೇ ನಾವಿದ್ದೇವೆ – ಸಂತೋಷವೇ. ಆದರೆ ಬೆಳಗ್ಗಿನಿಂದ ಮನದ ಕಡಾಯಿಯಲ್ಲಿ ಕುದಿಯುತ್ತಿರುವ ಭಾರತೀನಗರದ ನೆರೆ, ಮೂಡಬಿದ್ರೆ ದಾರಿಯ ದುಃಸ್ಥಿತಿ, ಕೆತ್ತಿಕಲ್ಲಿನ ದುರಂತ, ನೇತ್ರಾವತಿಯಾದಿ ನದಿಪಾತ್ರೆಗಳ ಮರಳಗಳ್ಳರಾದಿ ವಿಚಾರಗಳಿಂದ, “ನಮ್ಮ ಸಂತೋಷವಾದರೂ ದೀರ್ಘಾಯುವಲ್ಲ”, ಎಂದು ಹೇಳದೇ ಮುಗಿಸಲಾಗುತ್ತಿಲ್ಲ 🙁 ೨೫-೪-೨೦೧೫
ನಿಜಸಂದ್ರದಿಂದ ಕೊನಸಂದ್ರಕ್ಕೆ:
ಅರಬೀಸಂದ್ರ ತಟದ ಮಂಗಳೂರಿನ ಅಭಯಾದ್ರಿಯಿಂದ ಇಂದು ಬೆಳಗ್ಗೆ ಬೆಂಗಳೂರಿನ ಚನ್ನಸಂದ್ರದ ಮಡಿಲಲ್ಲಿರುವ ಅ(ಭಯ)ರ(ಶ್ಮಿಯರ)ಮನೆಗೆ ಬಂದೆವು. ನಿಶಾಚರಿ ಬಸ್ಸಿನ ಹವಾನಿಯಂತ್ರಿತ ವಾತಾವರಣಕ್ಕೆ ಕಟ್ಟಿದ ಮೂಗನ್ನು ಬಿರಿಸುವಂತೆ ಅಭಯನ ಸೈಕಲ್ ಏರಿ (ಅಶೋಕವರ್ಧನನಾದ ನಾನು) ವಿಷ್ಣುವರ್ಧನ ರಸ್ತೆಯ ಮೇಲೆ ಹೊರಟೆ. ಕೆಂಗೇರಿಯತ್ತಣ ಇಳಿಜಾರಿನಲ್ಲಿ ಸಾಗಿ, ನಗರದ ಮಹಾಪುಣ್ಯವತಿ ವೃಷಭಾವತಿಯ ಮೇಲ್ವಾಯ್ದು, ಕನಕಪುರ ರಸ್ತೆಗೆ ಹೊರಳಿ ಮುಂದುವರಿದೆ. ನೈಸ್ ರಸ್ತೆಯ ಅಡಿಯಲ್ಲಿ ನುಸುಳಿ, ಬನಶಂಕರಿ ಆರನೇ ವಿಭಾಗದ ಅನಾಥ ಗಲ್ಲಿಗಳಲ್ಲಿ ಸುಳಿದು ಹೊನ್ನಮ್ಮದೇವಿಯ ಗುಡಿ ಕಂಡೆ. ಮತ್ತೂ ಆಚಿನ ದಾರಿಯುದ್ದ ಕೊನೆಗಂಡದ್ದು ಕೊನಸಂದ್ರದ ದಂಡೆಯ ಮೇಲೆ. ಬೆಂಗಾಡೂರಿನ ಸಂದ್ರಗಳನ್ನೆಲ್ಲ ಕೊಳಚೆಯಲ್ಲಿ ಕೊನೆಗಾಣಿಸಿ, ಅಕ್ರಮದಲ್ಲಿ ಹೂತು, ಬಹುಮಹಡಿ ಗೋರಿಗಳನ್ನು ಬೆಳೆಸಿದ್ದು ಕಂಡಿದ್ದೆ. ದುರಾಸೆ ರಥದ ಮಹಾಚಕ್ರ ಸುತ್ತು ಪೂರ್ಣಗೊಳಿಸಿದಂತೆ ಆ ಬಹುಮಹಡಿಗಳನ್ನು ಕುಟ್ಟಿ ಕೊನೆಗಾಣಿಸುವ, ಸಂದ್ರಗಳಿಗೆ ಪುನರ್ಜಲ ಕಾಣಿಸುವ ಮುಖಪುಟ ವಾರ್ತೆ ಓದಿ ಆಗಷ್ಟೇ ಓದಿ ಬಂದಿದ್ದವನಿಗೆ ಇದು ಆಶ್ಚರ್ಯ. ಬೊಮ್ಮ, ದೊಮ್ಮ, ಕೆಂಪ, ದೊಡ್ಡ, ಚನ್ನ, ಅಲ್ಸೂರು, ಸ್ಯಾಂಕಿ ಮುಂತಾಗಿ ಸಾಕ್ಷಾತ್ ಸಮುದ್ರಗಳೆಂದೋ ಮಹಾಜಲಾಶಯಗಳೆಂದೋ ನಾಮಕಾವಸ್ಥೆ ಖ್ಯಾತಿಯಾದರೂ ಗಳಿಸಿವೆ. ಅವುಗಳ ನಡುವೆ ತಾನು ‘ಕೊನೆ’ ಎಂದೇ ಹೇಳಿಕೊಳ್ಳುವ ಈ ‘ಸಂದ್ರ’ದ್ದು ವಿನಯವೋ ಗರ್ವವೋ? ಸೈಕಲ್ ದಂಡೆಗೇರಿಸಿದೆ.
ಕೊನಸಂದ್ರದ ಮುಖ್ಯ ಜಲಾನಯನ ಪ್ರದೇಶಗಳೆಲ್ಲ ಚರಂಡಿ, ಮೋರಿಗಳಾಗಿಹೋಗಿವೆ. ಅವುಗಳ ಮೊತ್ತ ಎರಡು ಮಹಾನಾಲೆಗಳಲ್ಲಿ ಕೊನಸಂದ್ರಕ್ಕೆ ಮುಟ್ಟುವಲ್ಲಿ ಮುಖ್ಯದಾರಿಗೆ ದೊಡ್ಡ, ಕೆರೆದಂಡೆಗೆ ಪುಟ್ಟ ಎರಡೆರಡು ಸೇತುವೆಯ ಗೌರವ ಸಂದಿದೆ. ಮುಂದೆ ಕೊಳವೆಬಾಯಿ, ಗೊಸರು ತಡೆಗಟ್ಟೆ, ಪ್ರವಾಹದ ಕೊರೆತಕ್ಕೆ ನೆಲಹಾಸು, ಅಂಚುಗಳಿಗೆ ಕಲ್ಲಕಟ್ಟೆ ಎಲ್ಲಾ ಕೊಟ್ಟು ಶೃಂಗರಿಸಲಾಗಿದೆ. ಆದರೂ ಈಚಿನ ಅಕಾಲಿಕ ಅತಿವೃಷ್ಟಿಯಲ್ಲಿ ಒಂದು ನಾಲೆ ಹಿಂಗದ ಬಾಯಾರಿಕೆಯಲ್ಲಿ ಬಂದಷ್ಟೂ ನೀರಿನ ಆಪೋಷಣ ತೆಗೆದು, ಲಂಟಾನವೇ ಮೊದಲಾದ ಹಸಿರು ಸ್ನೇಹವನ್ನೇ ದಟ್ಟವಾಗುಳಿಸಿಕೊಂಡಿದೆ. ಮತ್ತೊಂದು ತನ್ನ ಜೋಡುಕೊಳವೆ ಬಾಯಿಯ ಇಕ್ಕೆಲಗಳಲ್ಲಿ ಹೂಳು ತುಂಬಿಕೊಂಡು ತಾನು ಕೊಡುವವನೇ ಕೊಳುವವನೇ ಎಂಬ ವಿವಂಚನೆಯಲ್ಲಿದೆ.
ಕೊನಸಂದ್ರದ ನಿಜ ಉಚ್ಛ್ರಾಯ ಹೇಗಿತ್ತೋ ನನಗೆ ತಿಳಿದಿಲ್ಲ. ಆದರೂ ಅದರ ಕೊನೆಯ ರಾಜ್ಯವ್ಯಾಪ್ತಿ ಗುರುತಿಸುವ ದಂಡೆ ಈಗಲೂ ಸುಸ್ಥಿಯಲ್ಲಿದೆ, ಸಾಕಷ್ಟು ವಿಸ್ತಾರ ಪ್ರದೇಶವನ್ನೇ ಕಾಣಿಸುತ್ತದೆ. ಅದರ ಸೇವಾಕರ್ತರು ಸುತ್ತಣ ದಂಡೆ ಎತ್ತರಿಸಿ, ಬಿಗಿ ಮಾಡಿದ್ದಾರೆ. ಮತ್ತಷ್ಟು ಒಳ, ಹೊರ ಹರಿವುಗಳಿಗನುವಾಗುವಂತೆ ಪುಟ್ಟ ಸೇತುವೆಗಳನ್ನು ಕೊಟ್ಟಿದ್ದಾರೆ. ಅದರ ಹೊರವಲಯದಲ್ಲಿ ಬೇಲಿ ಬಿಗಿದಿದ್ದಾರೆ. ಕಟ್ಟೆಯುದ್ದಕ್ಕೆ ಅಲಂಕಾರಿಕ ಗಿಡ, ಮರ ಬೆಳೆಸಿದ್ದಾರೆ. ಎಲ್ಲ ಹೊತ್ತುಗಳ ಜನಬಳಕೆಗೆ ಒದಗುವಂತೆ ಸಾಲು ದೀಪವಿಟ್ಟಿದ್ದಾರೆ. ನೀರಗನಸಿನ ಮೇಲೆ ಆಶಾನೌಕೆ ತೇಲಿಸಲು ವಿವಿಧ ಹಂತಗಳ ದೋಣಿಗಟ್ಟೆಯನ್ನಂತೂ ಬಲು ಭದ್ರವಾಗಿಯೇ ಕಟ್ಟತೊಡಗಿದ್ದೂ ಕಾಣುತ್ತದೆ. ಆದರೆ ಕುಸಿಯುತ್ತಿದ್ದ ನೀರಮಟ್ಟವನ್ನು ತತ್ಕಾಲೀನ ಒಳಾವರಣದಲ್ಲಿ, ಪುಟ್ಟ ಕೆರೆಯ ಸ್ವರೂಪದಲ್ಲೆಲ್ಲ ಹಿಡಿದಿಡಲು ನಡೆಸಿದ ಪ್ರಯೋಗಗಳೂ ಇಂದು ಬಂ(ಜೆ)ಜರಾಗಿರುವುದು ಕಾಣುತ್ತದೆ. ಕೊಳದ ಪ್ರಾಕೃತಿಕ ಇನ್ನೊಂದು ಕೊನೆಯಲ್ಲಿ ಕೋಡಿಬಾಯಿ, ನಾಲೆಗಳ ಅಪೂರ್ಣ ಕಾಮಗಾರಿ ನೋಡುವಾಗ ಜಲಾಶಯ ಕವಿಸಿದ ನಿರಾಶೆಯ ಚಿತ್ರ ಸ್ಪಷ್ಟವಾಗುತ್ತದೆ. ಬಹುಶಃ ಇತಿಹಾಸದ ದಿನಗಳಲ್ಲಿ ಇಲ್ಲಿ ಉಕ್ಕಿದ ನೀರನ್ನು ಆ ಕೊನೆಯಲ್ಲಿ ಬಳಸುತ್ತಿದ್ದ ಎಮ್ಮಿನಳ್ಳಿ ಎಮ್ಮೆಗಳು, ಈಗ ಜಳಕಕ್ಕೆ ನೇತ್ರಾವತಿ ನದಿಯನ್ನೇ ಕಾದು ಕುಳಿತಿರಬೇಕು.
ನೀರಿರಲಿ, ಬಿಡಲಿ ಯೋಜನೆಗಳ ಮಹಾಪೂರದಲ್ಲಿ ಇಲ್ಲಿ ಸ್ವರ್ಗ ಕಾಣಿಸಿದ ಎಂಜಿನಿಯರುಗಳಿಗೆ ಜೈ. ನೀರ ಮೇಲಿನ ಎಲೆಯಂಥ (ಗಮನಿಸಿ, ಎಲೆಯ ಮೇಲಿನ ಹನಿಯಾದರೋ ಆರಿಹೋಗಬಹುದು. ಇವು ಮುಳುಗವು, ಎಂದೂ ಬಾಡವು!) ಎಲ್ಲ ಕಂಡೂ ಕಾಣದಂತುಳಿಸಿದ ಬಾಬುಗಳಿಗೆ ಜೈ, ಜೈ. ಸ(ಸ್ವಾ)ಹಕರಿಸುವ ಕಂತ್ರಾಟುದಾರರಿಗೆ ಜೈ, ಜೈ, ಜೈ. ಕೊನಸಂದ್ರ ಮಹಾಪುರಾಣದ ಕೊನೆಯಲ್ಲಿ ಸರ್ವನಿ(ರ್ನಾಮಕ)ಯಾಮಕರಾದ (ಪಕ್ಷಾತೀತ) ರಾಜಕಾರಣಿಗಳಿಗೆ ಲೆಕ್ಕದ್ದೆಲ್ಲ ಸಾಲದು, ಜೈ(ಲೇ)ಮಾಲೇ ಸಿದ್ಧಿಸಲಿ ಎಂದು ಮನಸಾರೆ ಹಾರೈಸಿ, ಮರಳಿ ವಿಷ್ಣುವರ್ಧನ ದಾರಿಗಾಗಿ ಅರಮನೆ ಸೇರಿಕೊಂಡೆ. (೪-೫-೨೦೧೫)
(ಅನಿಯತವಾಗಿ ಮುಂದುವರಿಯಲಿದೆ)
I am a regular reader of your posts on face book and a regular here also.!When i read your posts i too feel the same way.But isn't it true that the the people at large we the citizens of India are responsible for the the current state of affairs.When as a nation there is no certainty of rule of law, people start behaving this way.And further 'development' is synonymous with building infrastructure, destruction at 'acceptable level' is expected of.What is acceptable I don't know !Waste disposal in a ever changing and ever growing problem and challenge. Once again it needs a lot of infrastructure and technology. No manufacturer is capable of handling waste created by product manufactured by him. Unless user public is aware of the problem and ready to pay for it no one can help.Government should create awareness and infrastructure first and implement the existing law uniformly on all.When I read your posts I don't get an Idea what we may do as the citizens of this planet earth.The problem it seems is every one is passing the buck and it doesn't stop anywhere.cycle circuit is good eye opener for readers like me in may more way s. Your observations of the ever changing surrounding and the constant degradation of our land and it's socioeconomic structure is really an eyeopener.Finally do you need to focus only on the negative and gloomy aspects of the fact !
ಸರಕಾರೀ ಅಭಿವೃದ್ಧಿ ಕಲಾಪಗಳಲ್ಲಿ ಈಚೆಗೆ ಹೆಚ್ಚೆಚ್ಚು (ಹುಚ್ಚುಚ್ಚು?) ಎಲ್ಲವನ್ನೂ ಅವಗಣಿಸಿ ಹಣದ ವಹಿವಾಟೊಂದೇ ಲಕ್ಷ್ಯವಾಗಿ ಕಾಣುತ್ತಿರುವುದರಿಂದ ನಾನು ಸದಾ ಟೀಕಾಕಾರನಂತೆ, ಸಿನಿಕನಂತೆ ಪಾತ್ರವಹಿಸುತ್ತೇನೆ. ಅಂದ ಮಾತ್ರಕ್ಕೆ ಸೈಕಲ್ ಹೊಡೆಯುವ ವ್ಯಾಯಾಮದ ಭಾಗದಲ್ಲಿ, ಪ್ರಕೃತಿಗೆ ತೆರೆದುಕೊಂಡು ಚಿತ್ರಗ್ರಹಿಸಿ ಪ್ರಕಟಿಸುವಲ್ಲಿ, ವಿವೇಚನೆ ಬಳಸಿದರೆ ಒಳ್ಳೆಯದು ಎಷ್ಟು ಹತ್ತಿರದಲ್ಲಿದೆ ಎಂದು ಬರವಣಿಗೆ ಮೂಲಕ ಸೂಚಿಸುವಲ್ಲಿ (ನಿರಂತರ ಮಾಡುತ್ತಿರುವುದರಿಂದ) ಯಾರೂ ನನ್ನ ಸಂತೋಷವನ್ನು ಕಾಣಬಹುದು ಎಂದು ಭಾವಿಸುತ್ತೇನೆ. ಸರಕಾರ, ಉದ್ಯಮಪತಿಗಳು ಇದನ್ನು ಗ್ರಹಿಸಲಿ ಎಂಬ ಒಂದು ಉದ್ದೇಶದೊಡನೆ, ಇದಕ್ಕೆ ಬೇಕಾದ ಸಾರ್ವಜನಿಕ ಜಾಗೃತಿಯಾಗಲಿ ಎನ್ನುವ ಉದ್ದೇಶವೂ ಸೇರಿ ಇದೆ. ನೀನು ಸರಿಯಾಗಿ ಹೇಳಿದಂತೆ, ಈ ‘ಭೂಮಿಯ ಪ್ರಜೆ’ಯಾಗಿ ಇನ್ನು ಹೆಚ್ಚು ಕಾಲ ‘ಮನುಷ್ಯ’ (ನಾನ್ಲ್ಲು, ನನ್ನ ಕುಟುಂಬ ಇತ್ಯಾದಿ ಅಲ್ಲ) ಉಳಿಯುವತ್ತ ಎಲ್ಲರೂ ವಿವೇಚನೆ ಬೆಳೆಸಿಕೊಳ್ಳುವಷ್ಟು ನನ್ನ ಬರಹಗಳು ಪ್ರೇರಕವಾದರೆ ನಾ ಧನ್ಯ.