ಜಂಟಿ ಸೈಕಲ್ ಮಾರಿಹೋದ ಮೇಲೆ, ಒಂಟಿ ಸೈಕಲ್ಲೇರಿ ನಾ ಕಂಡ ಲೋಕದ ‘ಪ್ರಥಮಾನುಭವ ವರದಿ’ ದೇವಕಿಗೆ ಸಾಕಾಗುತ್ತಿರಲಿಲ್ಲ. ಅದನ್ನು ಸ್ವಲ್ಪ ತುಂಬಿಕೊಡುವಂತೆ ಕಳೆದ ವರ್ಷ (೭-೩-೨೦೧೭) ಇಂಥದ್ದೇ ಉರಿಬಿಸಿಲಿನಲ್ಲಿ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ನಾವಿಬ್ಬರು ಮನೆಯಲ್ಲೇ ತಿಂಡಿ ಮುಗಿಸಿ ಮೋಟಾರ್ ಸೈಕಲ್ ಏರಿದೆವು. ತೊಕ್ಕೋಟು, ಕಿನ್ಯ ಅಡ್ಡ ರಸ್ತೆಗಾಗಿ ಮೊದಲ ಭೇಟಿ ಗೆಳೆಯ ಪ್ರಸನ್ನನ ಸಾವಯವ ಕೃಷಿಕ್ಷೇತ್ರ. ಇಲ್ಲಿಗೆ ಇದಕ್ಕೂ ಎರಡು ತಿಂಗಳ ಹಿಂದಿನ ನನ್ನೊಂದು ಸೈಕಲ್ ಸರ್ಕೀಟಿನ ಪೀಠಿಕೆ ಬೇಕಾಗುತ್ತದೆ:

ಪ್ರಸನ್ನನ ಕುಟುಂಬ, ಕಿನ್ಯದ ಬಳಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಅನುಕೂಲಕ್ಕೊದಗಿತೆಂದು ಮೂರು ತುಂಡು ಕುರುಚಲು ಕಾಡುಗುಡ್ಡೆ ಕೊಂಡಿದ್ದರು (ಒಟ್ಟು ವಿಸ್ತೀರ್ಣ ಒಂದೆರಡು ಎಕ್ರೆಯಿರಬಹುದು). ನನ್ನ ಸಹಜ ಸಸ್ಯ ಪುನರುಜ್ಜೀವನದ ಪ್ರಯೋಗವನ್ನು (ಅಭಯಾರಣ್ಯದ್ದು) ಪ್ರಸನ್ನ ಅನುಸರಿಸಲೆಂದು ನಾನು ಒತ್ತಾಯ ಹೇರಿದ್ದಿತ್ತು. ಆದರೆ ಆಗ ಅವನ ಕುಟುಂಬ ಸಣ್ಣದಾಗಿ ಹಣಪ್ರಪಂಚದಲ್ಲಿ ಕೈಕಟ್ಟಿದ್ದಕ್ಕೆ, ಹಾಗೇ ಬಿಟ್ಟಿದ್ದರು. ಇದ್ದಕ್ಕಿದ್ದಂತೆ ಮೂರು ತಿಂಗಳ ಹಿಂದೊಮ್ಮೆ ಪ್ರಸನ್ನ “ಕಿನ್ಯದ ಜಮೀನಿನಲ್ಲಿ ಕೃಷಿ ‘ಅಭಿವೃದ್ಧಿ ಕಾರ್ಯ’ಕ್ಕೆ ತೊಡಗಿದ್ದೇನೆ” ಎಂದಾಗ ನಾನು ಕುಶಿಪಟ್ಟಿದ್ದೆ. ನಿನ್ನೆ ಬೆಳಿಗ್ಗೆ (೩೦-೧-೨೦೧೭) ಅದರ `ವರ್ತಮಾನ’ವನ್ನು ಕಾಣಿಸುತ್ತೇನೆಂದು ಪ್ರಸನ್ನ ಸೈಕಲ್ ತೆಗೆದಾಗ ಪ್ರಸನ್ನನ ಇನ್ನೊಬ್ಬ ಗೆಳೆಯ ಅಶೋಕ್ ಮತ್ತು ನಾನೂ ಸೈಕಲ್ಲೇರಿ ಜೊತೆಗೊಟ್ಟೆವು.

ಯಾವುದೇ ಜೀವಿಯ ಮೂಲಭೂತ ಆವಶ್ಯಕತೆಯೇ ಆಗಿರುವ ನೀರು, ಗಾಳಿ ಮತ್ತು ಆಹಾರಗಳಲ್ಲಿ ವಿಷವೇರುತ್ತಿರುತ್ತಿರುವುದರ ವಿರುದ್ಧ ತಮ್ಮ ಅಳಿಲಸೇವೆ ಎಂಬಂತೆ, ಪ್ರಸನ್ನ ಆ ತುಂಡು ಭೂಮಿಗಳನ್ನು ಸಾವಯವ ಕೃಷಿಗೆ ತೊಡಗಿಸುವ ಕೆಲಸಕ್ಕಿಳಿದಿದ್ದ. ಆ ನೆಲದಲ್ಲಿ ಸಹಜವಾಗಿ ಮೂಡಿ, ದಟ್ಟವಾಗಿ ಹಬ್ಬಿದ್ದ ಒಂದಷ್ಟು ಕುರುಚಲನ್ನು, ಮಾದರಿಗೆಂಬಂತೆ ಉಳಿಸಿದ್ದಾನೆ. ಉಳಿದ ನೆಲವನ್ನು ಯೋಜನೆಯಂತೆ ಹಸನು ಮಾಡಿದ್ದ. ಬೇಲಿ ಬಲಿದು, ಅಂಚುಗಳಲ್ಲಿ ಪರೋಕ್ಷವಾಗಿ ಹಸಿರ ಬೇಲಿಯಂತಾಗಲು ಉದ್ದನ್ನ ಮರವಾಗುವ ಸಸಿಗಳನ್ನಿರಿಸಿದ್ದ. ಉಳಿದಂತೆ ವಿವಿಧ ಹೊಂಡ, ಮಡಿಗಳಲ್ಲಿ ಮೋಪು, ಹಣ್ಣಿಗೊದಗುವಂತೆ ಮರವಾಗುವ ಸಸ್ಯಗಳು, ತೆಂಗು, ಬಾಳೆ, ತರಕಾರಿ, ಹಣ್ಣು, ಹೂ ಎಂದು ಕನಸುಗಳ ಜಾಲವನ್ನು ವಾಸ್ತವದಲ್ಲಿ ಕಾಣಲು ವ್ಯವಸ್ಥೆಯಾಗಿತ್ತು. ನೆಲದ ಸಹಜ ತಗ್ಗಿನ ಕೇಂದ್ರದಲ್ಲಿ ವಿಸ್ತಾರ ಕಾಂಕ್ರೀಟ್ ಬಳೆಗಳಿಳಿಸಿದ ಬಾವಿ, ಉನ್ನತಿಯಲ್ಲಿ ಟಾಂಕಿ, ನೀರಾವರಿಯ ಕೊಳವೆಜಾಲ, ಅನಿವಾರ್ಯವಾದ ಕೃಷಿ ಕೊಟ್ಟಿಗೆ, ಎರೆಗೊಬ್ಬರ ಸ್ಥಾವರ, ಕಿರುಸಸ್ಯಗಳಿಗೆ `ಹಸಿರುಮನೆ’ ಎಂದೆಲ್ಲ ಕೆಲಸ ಸಾಗಿದೆ.

ಅವನ್ನೆಲ್ಲ ವಿವರಗಳಲ್ಲಿ ನೋಡಿ, ಒಂದು `ಪ್ರಣಾಮ’ (ಪ್ರಸನ್ನನ ಮನೆ ಹೆಸರೂ ಇದೇ) ಸಲ್ಲಿಸಿದ್ದಾಯ್ತು! (ಈ ಕೃಷಿಭೂಮಿಗೆ ಅವನೇನು ಹೆಸರಿಟ್ಟಂತಿಲ್ಲ.) ಅನಂತರ ಅವರಿಬ್ಬರಿಗೆ ಅಲ್ಲಿಂದ ಆರೆಂಟು ಕಿಮೀ ಅಂತರದಲ್ಲೇ ಇರುವ ನನ್ನ `ಅಭಯಾರಣ್ಯ’ – ವನ್ಯದ ಪುನರುತ್ಥಾನ ನೆಲ, ನೋಡುವ ಉತ್ಸಾಹ ಬಂತು. ಬಿಸಿಲು ಏರಿತ್ತು, “ತಿಂಡಿಗೆ ಮನೆಗೇ ಮರಳು”ವ ಯೋಚನೆಯಲ್ಲಿ ಖಾಲಿ ಹೊಟ್ಟೆ ಬೇರೆ. ಆದರೂ ಕಿನ್ಯದ ದಾರಿಯಲ್ಲೇ ಒಂದು ಉದ್ದದ ಏರಿನೊಡನೆ ಎರಡು ಕಿಮೀ ಮುಂದುವರಿದು ನಾಟೇಕಲ್ಲೇನೋ ತಲಪಿದೆವು. ಅಷ್ಟರಲ್ಲಿ ಅಶೋಕ್‍ಗೆ ಅಭ್ಯಾಸ ಕಡಿಮೆಯಾದ ಪರಿಣಾಮ ಕಾಣಿಸುತ್ತಿತ್ತು. “ಇನ್ನು ಮಂಜನಾಡಿಯ ಕಣಿವೆಗಿಳಿದು, ಮೊಂಟೆಪದವಿನ ಎತ್ತರಕ್ಕೇರಿದರಾಯ್ತು. ಕೇವಲ ಆರೇ ಕಿಮೀ ಅಭಯಾರಣ್ಯಕ್ಕೆ ದಾರಿ” ಎಂಬ ನನ್ನ ಆಶ್ವಾಸನೆ ಅಶೋಕ್‍ಗೆ ಬೆದರಿಕೆಯಾಗಿ ಕೇಳಿಸಿರಬೇಕು! ಉಳಿದ ಚೈತನ್ಯ ಮಂಗಳೂರಿಗೆ ಮರಳುವುದಕ್ಕೇ ಎಂದುಕೊಂಡು ಅಶೋಕ್ ವಾಪಾಸು ಹೊರಟರು.

ನಾವಿಬ್ಬರು `ತೊಟ್ಟ ಬಾಣ’ ಹುಸಿಯಾಗದಂತೆ ಅಭಯಾರಣ್ಯದತ್ತ ಮುಂದುವರಿದೆವು. ಕಲ್ಲಕಟ್ಟ, ಮಂಜನಾಡಿ ದೇವಳದವರೆಗೆ ನಮ್ಮದು ಹೆಚ್ಚು ಕಡಿಮೆ ಶರವೇಗವೇ; ಒಳ್ಳೆ ಇಳಿಜಾರು. ಮತ್ತಿನ ಅಲೆಯಲೆಯ ಸುದೀರ್ಘ ಏರು ಮುಗಿಸಿ ತೌಡುಗೋಳಿ ಅಡ್ಡರಸ್ತೆ, ಅಥವಾ ಮೊಂಟೆಪದವಿನ ಪಶ್ಚಿಮ ಮತ್ತು ಅತ್ಯುನ್ನತ ಕೊನೆ ತಲಪಿದಾಗ ಇಬ್ಬರಿಗೂ ಮನಸ್ಸಿನಲ್ಲೇ “ನಾವೂ ಅಶೋಕ್ ಜತೆ ಮರಳಬೇಕಿತ್ತು” ಎಂಬ ಭಾವ ಬಂದಿತ್ತು. ಪ್ರಸನ್ನನಂತೂ “ಹಿಂದೆ ಹೋಗುವಾಗ ನನ್ನ ಸೈಕಲ್ಲಿಗೆ ಬಸ್ಸಿನ ಟಾಪೇ ಗತಿ” ಎಂದು ಘೋಷಿಸಿದ್ದ.

ಮೋಂಟುಗೋಳಿಯ ಭಜನಾ ಮಂದಿರದ ಬಳಿಯಲ್ಲಿ ಬಲಕ್ಕೆ ತಿರುಗಿದರೆ ಸಿಗುವ ನನ್ನ ಚಿಕ್ಕಮ್ಮನ ಕೃಷಿಕ್ಷೇತ್ರ – ಎಡೆಂಬಳೆ, ಪ್ರಸನ್ನನಿಗೆ ಮೊದಲು ತೋರಿಸಿದೆ. ಚಿಕ್ಕಮ್ಮ – ಭವಾನಿಯನ್ನುಳಿದು ಮನೆ ಮಂದಿ ಎಲ್ಲ ಗೋಸಮ್ಮೇಳನಕ್ಕೆ ಹೋಗಿದ್ದರು. ಚಿಕ್ಕಮ್ಮ ಹಿಂದಿನ ದಿನ ಬಂದ ಮಳೆಗೆ ತುಸು ನೆಂದ ಒಳ್ಳೆಮೆಣಸನ್ನು ಬಿಸಿಲಿಗೆ ಹರಡುವ ಕೆಲಸ ನಡೆಸಿದ್ದರು. ಅವರೆಂದೂ `ಅ-ತಿಥಿ’ ಸತ್ಕಾರಕ್ಕೆ ಕೊರತೆ ತಂದವರಲ್ಲ, ನಿನ್ನೆಯೂ ಮಾಡುವವರಿದ್ದರು. ಆದರೆ ನಮ್ಮ ಬರಗೆಟ್ಟ ಪರಿಸ್ಥಿತಿಯಲ್ಲಿ, ಅವರೇನು ಕೊಟ್ಟರೂ “ಇಷ್ಟೇ ಕೊಟ್ಟದ್ದಾ” ಎನ್ನುವ ಮಾತು ಬಂದೀತೆಂದು ಹೆದರಿ, ಅದಕ್ಕೂ ಮಿಗಿಲಾಗಿ ಮತ್ತೆ ಸಮಯ ಸೋರಿ ಹೋಗುತ್ತದೆ ಎಂದೂ ಉಪಚಾರ ನಿರಾಕರಿಸಿದೆವು. ಅವರ ತೋಟದ ಒಳಗಿನ ದಾರಿ ಹಿಡಿದು ‘ಅಭಯಾರಣ್ಯ’ಕ್ಕೆ ಹೋದೆವು. ನಾನು ಅಭಯಾರಣ್ಯದ ಗೇಟಿನ, ಮತ್ತಲ್ಲಿನ ನಮ್ಮ ಬಿಡಾರ – ಕಾಡ್ಮನೆಗಳ ಕೀಲಿಕೈ ಒಯ್ದಿರಲಿಲ್ಲ. ಹಾಗಾಗಿ ಸೈಕಲ್ ಹೊರಗೇ ಬಿಟ್ಟು, ಪಾಗಾರ ಹಾರಿ ಒಳಗೆ ಪ್ರಸನ್ನನಿಗೆ ಒಂದು ಸುತ್ತು ಹಾಕಿಸಿದೆ. ಅಲ್ಲಿನ ಸಹಜ ಹಸಿರಿನಿಂದ ಪ್ರಸನ್ನನಿಗೇನಾದರೂ ಹೊಸ ಪ್ರೇರಣೆ ಒದಗಿತೇ – ಗೊತ್ತಿಲ್ಲ.

ಮತ್ತೆ ಸೈಕಲ್ ಏರುವಾಗ ಮಂಗಳೂರಿನ ಇಪ್ಪತ್ತೊಂದು ಕಿಮೀ ದೂರಕ್ಕಿಂಥ, ಘನ ಏರುವಲಯಗಳು ಎಷ್ಟು ಎಂಬ ಲೆಕ್ಕವೇ ದೊಡ್ಡದಾಗಿ ಕಾಡುತ್ತಿತ್ತು. ಆದರೆ ತೌಡುಗೋಳಿ ಅಡ್ಡರಸ್ತೆಯಿಂದ ಕಲ್ಕಟ್ಟದವರೆಗಿನ ಉದ್ದದ ಇಳಿದಾರಿ ನಮ್ಮಲ್ಲಿ ಹೊಸ ಚೇತನ ತುಂಬಿತ್ತು. `ಏರಿದವನಿಳಿಯಲೇಬೇಕು’ ಎಂಬ ಕಟು ಸತ್ಯಕ್ಕೆ, ‘ಸೈಕಲ್ ಕೋಶ’ದಲ್ಲಿ ನಾವು ಸುಖಾಂತದ ಅರ್ಥ ಕಂಡುಕೊಂಡಿದ್ದೆವು! ಬಹುಶಃ ಇದೇ ನಮ್ಮ ನಾಟೇಕಲ್ಲಿನ ಎತ್ತರಕ್ಕೇರುವ ಶ್ರಮವನ್ನು ಹಗುರಾಗಿಸಿತ್ತು. ಸೈಕಲ್ಲನ್ನು ಬಸ್ಸಿಗೇರಿಸುವ ಅಥವಾ ಕಲ್ಕಟ್ಟದಲ್ಲಿ (ಏರುದಾರಿಯ ಆರಂಭ ಬಿಂದು) ನಮ್ಮೆದುರೇ ಗೊಟಗೊಟವೆಂದು ಹೊರಟ ಖಾಲೀ ಟಂಟಂ ಟೆಂಪೋದವನ ಬಳಿ ಬಿಟ್ಟಿ ಸವಾರಿ ಕೇಳುವ ಚಪಲವನ್ನು ಹತ್ತಿಕ್ಕಿತ್ತು. ನಾಟೇಕಲ್ಲಿನಲ್ಲಿ ಎರಡೆರಡು ಬಾಳೇಹಣ್ಣು, ಕಿತ್ತಳೆ ಹಣ್ಣು ಹುಡಿ ಹಾರಿಸಿ ನವಚೈತನ್ಯರಾದೆವು. ಮುಂದೆ ಸುಲಭ ಹಾಗೂ ನೇರ ದಾರಿಯಾಗಿ ದೇರಳಕಟ್ಟೆ, ಕುತ್ತಾರು, ತೊಕ್ಕೋಟು ಹಿಂದಿಕ್ಕುತ್ತ ಹೆದ್ದಾರಿಗಿಳಿದೆವು. ಎಲ್ಲೂ ನಿಂತು ನೋಡುವ ಚಪಲವುಳಿಸಿಕೊಳ್ಳದೇ ಪಾದಗಳನ್ನು ಲಯಬದ್ಧ ಚಕ್ರವಾತಕ್ಕೆ ಸಿಲುಕಿಸಿ ಮನೆ ಸೇರುವಾಗ ಊಟಕ್ಕೇ ಮುಹೂರ್ತ ಹತ್ತಿರ ಬಂದಿತ್ತು! ಈಗ ಕಳೆದ ವರ್ಷದ ಕತೆಗೇ ಮರಳೋಣ……

ಪ್ರಸನ್ನನ ಕೃಷಿಕ್ಷೇತ್ರದಲ್ಲೀಗ ನಮ್ಮನ್ನು ಪೂರ್ಣಗೊಂಡ ಪಾಗಾರ, ಗೇಟು ಅದಕ್ಕೆ ಬೀಗದ ತೊಡವು ಎದುರುಗೊಂಡಿತು. ಕಾವಲಿನವನಿರಬಹುದೆಂದುಕೊಂಡು, ಒಂದೆರಡು ಕೂಕಳು ಹಾಕಿದೆವು, ಪ್ರತಿಸ್ಪಂದನ ಕಾಣಲಿಲ್ಲ. “ಎಷ್ಟಿದ್ದರೂ ನಮ್ಮದೇ” ಎಂದು ಸದರವಹಿಸಿ, ಇಬ್ಬರೂ ಪಾಗಾರ ಹತ್ತಿ ಒಳಹಾರಿ ಕಾವಲುಮನೆ ಎದುರು ಹೋದೆವು. ಪ್ರಸನ್ನನ `ಉಸ್ತುವಾರಿ ಸಚಿವ’ ಚರವಾಣಿಯಲ್ಲಿ ವ್ಯಸ್ತನಿದ್ದು, ನಮ್ಮ ಕರೆಗಳನ್ನು ಸ್ವೀಕರಿಸಿರಲಿಲ್ಲ! ನಮ್ಮ `ಆಧಾರ ಕಾರ್ಡ್’ ಆತನಿಗೆ ಒಪ್ಪಿಗೆಯಾದ ಮೇಲೆ ನಮ್ಮ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಟ್ಟ. ತೆರೆದ ಬಾವಿ ಮತ್ತು ಎರೆಗೊಬ್ಬರದ ಕಳಕ್ಕೆ ಬಲೆಯ ಮುಚ್ಚಳ ಬಂದಿತ್ತು. ಬಾವಿಯ ನೀರಿನ್ನೂ ಹಣಿಯಾಗಿರಲಿಲ್ಲ, ಗೊಬ್ಬರದ ಕಳದೊಳಗಿನ್ನೂ ಹುಳಬಿಟ್ಟಿರಲಿಲ್ಲ. ಹಿಂದೆ ಒಂದು ಬದಿ ತೆರೆದು ಬಿದ್ದಿದ್ದ ವಾರ್ಷಿಕ ಬೆಳೆಯ ಸಸ್ಯಗಳಿಗಾಗಿ ಮಾಡಿದ್ದ ಹಸಿರುಮನೆ ಇಂದು ಪೂರ್ತಿ ಮುಚ್ಚಿತ್ತು; ಕಾರಣ ಹೇಳಿದರೆ ರಾಷ್ಟ್ರದ್ರೋಹ ಎನ್ನಬೇಡಿ – (ರಾಷ್ಟ್ರಪಕ್ಷಿ) ನವಿಲುಗಳ ಹಾವಳಿ! ಆ ಹಸುರು ಬಲೆಮನೆಯ ಒಂದಂಚಿನಲ್ಲಿ ಹೇರಿದ್ದ ಭಾರ ಸರಿಸಿ ಒಳನೋಡಿದೆವು. ಮೆಣಸು, ಬದನೆ, ಬೆಂಡೆ, ಕೊತ್ತಂಬರಿ, ಪಾಲಕ್ ಮುಂತಾದವು ಬೆಳೆದು, ಪಾಕಪಾತ್ರೆ ಕಾಣಲು ಸಿದ್ಧವಾದಂತಿತ್ತು. ಕೆಂಪಗಿದ್ದ ಎರಡು ಟೊಮೇಟೋ ಹಾಗೇ ಚಪ್ಪರಿಸಿ ತಿನ್ನಲು ಯೋಗ್ಯವೇ ಇದ್ದರೂ ದಾಕ್ಷಿಣ್ಯ ಕೈಕಟ್ಟಿತು – ಪ್ರಸನ್ನ ಇರಬೇಕಿತ್ತು! ಹೊರಗೆ ಮತ್ತಷ್ಟು ಬೇರೂರುತ್ತಿದ್ದ ಸಸ್ಯ ವೈವಿಧ್ಯದ ಮೇಲೊಂದು ಕಣ್ಣು ಹಾಕಿ, ಚಾಲ್ತಿಗೆ ಬಂದಿರುವ ಹನಿನೀರಾವರಿಯ ವ್ಯವಸ್ಥೆಯನ್ನೂ ನೋಡಿ ಸಂತೋಷಪಟ್ಟೆವು. ಅಲ್ಲೊಂದು ವಿದ್ಯುಜ್ಜನಕ ಇಟ್ಟುಕೊಂಡಿತ್ತು. ಎಲ್ಲರಿಗೂ ಕಾಣುವಂತೆ ಕಂಬ ತಂತಿ ಬಂದಿದೆ, ಬಾವಿಯಿಂದ ನೀರೆತ್ತುವ ಕೆಲಸವೂ ನಡೆದಿದೆ – ಮತ್ತೆ “ಇದ್ಯಾಕೆ?” – ಸಹಜವಿತ್ತು ನನ್ನ ಪ್ರಶ್ನೆ. `ಉಸ್ತುವಾರಿ ಸಚಿವ’ ಉಸುರಿದ – ಸದ್ಯ ಸಿಕ್ಕ ವಿದ್ಯುತ್ ಸಂಪರ್ಕ ಪಂಪಿಗೆ ಮಾತ್ರ (ಪವರ್ ಲೈನ್). ರಾತ್ರಿಯಲ್ಲಿ ಬೆಳಕು ಮತ್ತು ಇತರ ಅಗತ್ಯಗಳಿಗೆ ವಿದ್ಯುಜ್ಜನಕ ಅನಿವಾರ್ಯ! ಏತನ್ಮಧ್ಯೆ ಅತ್ಯಾಶ್ಚರ್ಯಕರವಾಗಿ ಅಲ್ಲಿ ಹೊಸದಾಗಿ ಊರಿದ್ದ ಒಂದೇ ಬಾಸ್ಕೆಟ್ ಬಾಲ್ ಸ್ತಂಭ ಕಾಣಿಸಿತು. ಇದೇನು – ಮಂಟಪರ ಏಕವ್ಯಕ್ತಿ ಯಕ್ಷಗಾನ ಇದ್ದ ಹಾಗೆ, ಪ್ರಸನ್ನನದ್ದು ಏಕಪಕ್ಷೀ ಬಾಸ್ಕೆಟ್ ಬಾಲಿರಬಹುದೇ? ಇದಕ್ಕುತ್ತರವನ್ನು ಪ್ರಸನ್ನನಿಂದಲೇ ಹೊರಡಿಸುವ ತೀರ್ಮಾನದೊಡನೆ, ಈಗ ಮುಕ್ತವಾಗಿದ್ದ ಗೇಟಿನಲ್ಲೇ ಮರ್ಯಾದಸ್ತರಂತೆ ಹೊರ ಬಂದೆವು.

ಮಂಗಳೂರು ಬಿಡುವಾಗಲೇ ಪೂರ್ವಾಧಿಪ ಟೊಮೇಟೋದಂತೇ ದರ್ಶನ ಕೊಟ್ಟಿದ್ದ. ಎಂದಿನಂತೆ ಉಸಿರು ಕಟ್ಟಿ, ಬೆವರು ಬಸಿದು “ಪೆಡಲಪ್ಪೋ ಪೆಡಲು” ರಾಗ ಇಲ್ಲದೇ (ಮೋಟಾರ್ ಸೈಕಲ್ಲಾದ್ದರಿಂದ) ನಸು ಚಳಿಯೇ ಹಿಡಿದುಕೊಂಡಿತ್ತು. ಕಿನ್ಯದಿಂದ ಮುಂದೆ ನಾಟೇಕಲ್ಲು. ಅಲ್ಲಿ ಎಡ ಹೊರಳಿ ಕೊಣಾಜೆ ದಾರಿ ಹಿಡಿದರೂ ಮುಂಜಾನೆಯ ಮಬ್ಬು ಕಡಿಮೆಯಾಗಿರಲಿಲ್ಲ. ಆದರೆ ಬೆಳಕರಿಸಿದ ಸೂರ್ಯ ಹಿತವಂದಿಗನಾಗಿದ್ದ. ಮಂಗಳಗಂಗೋತ್ರಿಯೊಳಗೆ ಹಾಯ್ದು, ಫಜೀರಿನಲ್ಲಿ ಕವಲೊಡೆದು, ಪದವಿನ ಮೂಲೆ ಮೊಡಕುಗಳಲ್ಲಿ ಹಾವಾಡಿ, ಮೆಟ್ಟಿ ಮುಗಿಯದ್ದು ಮತ್ತು ತಳವಿಲ್ಲದ್ದು ಎಂಬಂತೇ ಸೈಕಲ್ಲಿಗರನ್ನು ಕಾಡುವ ಏರಿಳಿತಗಳನ್ನು ಲೀಲಾಜಾಲವಾಗಿ ಏರಿಳಿದು ಇನೋಳಿಯೊಳಗಣ ದೇವಂದ ಬೆಟ್ಟಪ್ಪ(/ಟ್ಟು) ಅರ್ಥಾತ್ ಸೋಮನಾಥನ ಸಮಕ್ಷಮದಲ್ಲಿ ನಿಂತೆವು. (ಈ ದೇವಳದ ಕುರಿತ ಹೆಚ್ಚಿನ ವಿವರಗಳು ಇಲ್ಲೇ ನನ್ನ ಹಳೆ ಸೈಕಲ್ ಸರ್ಕೀಟ್ಗಳಲ್ಲಿವೆ) ದೇವಳ ನಿರ್ಜನವಿತ್ತು. ಗರ್ಭಗುಡಿಯ ಹೊರವಲಯದಲ್ಲಿ ವಿವಿಧ ದಿಕ್ಕುಗಳಿಗೆ ಮುಖಮಾಡಿ ನಿಂತ ಪರಿವಾರ ದೇವರುಗಳಲ್ಲಿ (ಪಾರ್ವತಿ, ಗಣಪ…) ಯಾರನ್ನೋ ಮುಖತಃ ಸಂಸ್ಕೃತದಲ್ಲಿ ಹೊಗಳುತ್ತಿದ್ದ ಭಟ್ಟರ ಧ್ವನಿ ಅಶರೀರವಾಣಿಯಂತೇ ಕೇಳುತ್ತಿತ್ತು. ನಾವಾದರೋ ದೇವಬಿಂಬ ದರ್ಶನದ ಸಾರ್ಥಕ್ಯ ಅಥವಾ ತೀರ್ಥ ಗಂಧಗಳ ಮೋಹ ಇಟ್ಟುಕೊಂಡವರಲ್ಲ. (ಆದರೆ ದುರ್ಗಮ್ಮನ ಪಂಚಾಮೃತ, ಸತ್ಯನಾರಾಯಣನ ಸಪಾತ್ ಭಕ್ಷ್ಯ, ತಿಮ್ಮಪ್ಪನ ಲಾಡು, ಮಧೂರಪ್ಪನ ಅಪ್ಪ, ಶರವು ಗಣಪನ ಪಂಚಕಜ್ಜಾಯಗಳಂಥ ನಾಲಗೆ ಮುಟ್ಟುವ ಪ್ರಸಾದಗಳ ಕಡುಮೋಹಿಗಳು!) ಹಾಗಾಗಿ ದೇವಳದ `ಸುತ್ತುಗಟ್ಟೆ’ ಬಿಟ್ಟು ಅಂಗಳಕ್ಕಿಳಿದು `ಹೊರಪ್ರಪಂಚ’ ಎಷ್ಟು ಬದಲಾಗಿದೆ ಎಂದು ನೋಡುತ್ತ ಬಂದೆವು. ಕಬ್ಬಿಣಯುಕ್ತ ಕಾಂಕ್ರೀಟ್ ಗೋಡೆ ಎಬ್ಬಿಸಿ ವಿಸ್ತರಿಸಿದ ಅಂಗಳದ ಮೇಲೆ ಕಾಂಕ್ರೀಟ್ ಸ್ತಂಭಗಳ ಸಹಿತ ಗೋಡೆ ಎದ್ದು ನಿಲ್ಲುತ್ತಿದೆ. ಸಹಜವಾಗಿ ಬೋಳು ಕೈಲಾಸದ ನೆತ್ತಿಯಲ್ಲಿ, ಪ್ರಕೃತಿಯಲ್ಲಿ ಒಂದಾಗಿ ಕುಳಿತ ಶಿವನಿಲ್ಲಿ ಹೆಚ್ಚೆಚ್ಚು ಪ್ರಕೃತಿ ದೂರನೇ ಆಗುತ್ತಿದ್ದಾನೆ. ಸುತ್ತಣ ಸಹಜ ಕಾಡು ಸವರಿ, ಕಾಲ್ಪನಿಕ ಶಿಷ್ಟವನ ಪೋಷಿಸುವ ಅತಿರೇಕಕ್ಕೆ ಅಲ್ಲಲ್ಲಿ ಸಸಿಹೊಂಡಗಳನ್ನು ಮಾಡುತ್ತಿದ್ದಾರೆ. ಬೆಟ್ಟಕ್ಕೆ ಬಲವಾದ ಅಡ್ಡ ಬರೆ ಹಾಕಿದಂತೆ ಬುಲ್ಡೋಜರ್ ಚಲಾಯಿಸಿ ನೇರ ನದಿ ಪಾತ್ರೆಗಿಳಿಯುವ ಹೊಸ ದಾರಿಯನ್ನೇ ಕಡಿದಿದ್ದಾರೆ! ಅದರ ಉದ್ದಕ್ಕೆ ನಡೆದು ನೋಡಿ ಬಂದೆ; ಅದರ ಪರಿಷ್ಕರಣ ಇನ್ನೇನೆಲ್ಲ ಬೆಟ್ಟಕ್ಕೆ ಹೇರಲಿದೆಯೋ – ಶಿವನೇ ಬಲ್ಲ!

ದೇವಂದ ಬೆಟ್ಟದಿಂದ ಫಜೀರಿನವರೆಗೆ ಹೋದ ದಾರಿಯಲ್ಲೇ ಮರಳಿ ಕಂಬಳಪದವಿನತ್ತ ಎಡಗವಲನ್ನು ಹಿಡಿದೆವು. ಇನ್ಫೊಸಿಸ್ಸಿನಿಂದ ಮುಂದೆ, ಮುಡಿಪು, ಬಾಕ್ರಬೈಲ್ ಎಂದಿಳಿದಿಳಿದಿಳಿದು, ಎರಡು ಸುತ್ತು ಹಿಮ್ಮುರಿ ತಿರುವೇರಿ, ಪಾತೂರು ಮಹಾದ್ವಾರದ ಬಳಿ ಬಲ ಹೊರಳಿ, ಒಳಗೊಳಗೆ ಮತ್ತಷ್ಟು ಹತ್ತಿಳಿದು ನಿಂತದ್ದು – ಸೂರ್ಯೇಶ್ವರನ ಸನ್ನಿಧಿಯಲ್ಲಿ. ಹಳಗಾಲದಲ್ಲಿದು ಒಂದು ಸರಳ ದೇವಳ. ಅದು ಅದ್ದೂರಿಯ ಪುನರ್ನಿರ್ಮಾಣ ಕಂಡು, ಬ್ರಹ್ಮಕಲಶ ಮುಗಿಸಿ, ಪ್ರಥಮ ಶಿವರಾತ್ರಿ ಕಾಣುತ್ತಿದ್ದಂದು (೨೪-೨-೨೦೧೭) ನಾನಿಲ್ಲಿಗೆ ಸೈಕಲ್ಲಿನಲ್ಲಿ ಬಂದು ಪ್ರಥಮ ಭೇಟಿ ಕೊಟ್ಟಿದ್ದೆ. ಅದನ್ನು ಸಂಕ್ಷಿಪ್ತವಾಗಿ ಹೇಳಿಯೇ ಮುಂದುವರಿಯುತ್ತೇನೆ……

ಶಿವರಾತ್ರಿಯಂದು ಸೈಕಲ್ ಶತಕ!

ಶಿವರಾತ್ರಿಯ ಮುಂಜಾನೆ ನಾಲ್ವರ (ವೇಣುವಿನೋದ್, ಶ್ರೀಕಾಂತರಾಜ, ಹರಿಪ್ರಸಾದ್ ಶೇವಿರೆ ಮತ್ತು ನಾನು) ಸೈಕಲ್ ತಂಡ ಮಂಗಳೂರು ಬಿಟ್ಟಿತ್ತು. ತೊಕ್ಕೋಟಿನ ಹೋಟೆಲ್ ‘ಸಮಾಧಾನ’ದಲ್ಲಿ ಮೊದಲ ಸುತ್ತಿನ ಹೊಟ್ಟೆ-ಸಮಾಧಾನಕ್ಕೆ ನಿಂತಿತು. ಆದರೆ ಹೆದ್ದಾರಿಯ ವಿಸ್ತರಣೆಯಲ್ಲಿ, ಅಸ್ತಿತ್ವವನ್ನು ಕಳೆದುಕೊಳ್ಳಲಿರುವ ಆ ಹೋಟೆಲ್ ಅಷ್ಟೇನೂ ಸಮಾಧಾನದಲ್ಲಿದ್ದಂತಿರಲಿಲ್ಲ. ಯಜಮಾನ ವಿಲಂಬಿತ ಗತಿಯಲ್ಲಿ ಉಪ್ಪಿಟ್ಟು, ಶಿರಾ, ಹಳಸಲನ್ನ ಒಗ್ಗರಣೆ (ಪುಲಾವ್!) ಒದಗಿಸಿದ. ನಾವದನ್ನು ಮುಗಿಸಿ ಮುಡಿಪಿನ ದಾರಿ ಹಿಡಿಯುವಾಗ ಆಕಾಶ ಕರಿಯುಡುಗೆ ಕಳಚತೊಡಗಿತ್ತು.

ಕುತ್ತಾರು, ದೇರಳಕಟ್ಟೆ, ನಾಟೇಕಲ್ಲು ಕಳೆದು ಕೊಣಾಜೆ ಶ್ರೇಣಿಯ ಉತ್ತುಂಗ ಸೇರುತ್ತಿದ್ದಂತೆ ಸಾಕ್ಷಾತ್ ಉದಯರವಿಯೇ ನಮ್ಮನ್ನು ಎದುರುಗೊಂಡ. ಮಂಜಿನ ಮಕ್ಮಲ್ಲನ್ನು ಕಳೆದು, (ಅಳಿದುಳಿದ) ಹಸಿರಿನ ಹಾಸು ಮತ್ತು ನಾಗರಿಕತೆಯ ವಿಕೃತ ಕಸಕೊಳಕನ್ನೂ ಏಕಕಾಲಕ್ಕೆ ಬೆಳಗುತ್ತ, ಮುಡಿಪಿನ ಗುಡ್ಡೆ ಹಾಗೂ ಇನ್ಫೋಸಿಸ್ ಕಟ್ಟೋಣಗಳ ಎಡೆಯಲ್ಲಿ ಪ್ರತ್ಯಕ್ಷನಾದ. ಇದು ಆ ಗುಡ್ಡೆಸಾಲಿನ (ಶ್ರೇಣಿಯ) ಉತ್ತರ ಪೂರ್ವದ ವಕ್ರವಿನ್ಯಾಸವನ್ನು ತೋರುವುದರೊಡನೆ, ನಮ್ಮ ನಿಜಲಕ್ಷ್ಯವಾದ ಬಾಕ್ರಬೈಲಿಗೆ ದಿಕ್ಸೂಚಿಯಂತೆಯೂ ಇತ್ತು.

ಮಂಗಳೂರು ವಿವಿ ನಿಲಯ ತನ್ನ ವ್ಯಕ್ತಿ ನಿರ್ಮಾಣದ ಹೊಣೆಯನ್ನು ಹುಚ್ಚುಚ್ಚು ಕಟ್ಟಡ ಅಲಂಕರಣಗಳಲ್ಲಿ ಕಳೆದುಕೊಳ್ಳುತ್ತಿರುವ ಪರಿಗೆ ಹೊಸ ನಿದರ್ಶನವೆಂಬಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿನಿಲಯದ ಕಾಮಗಾರಿ ಭಾರಿಯಾಗಿಯೇ ನಡೆದಿರುವುದು ಕಾಣುತ್ತಿತ್ತು. ಹಾಗೇ ಪ್ರಸ್ತುತ ದಾರಿಯ ಹೆಚ್ಚಿದ ಪ್ರಾಶಸ್ತ್ಯಕ್ಕೆ (– ಮಂಗಳೂರು ವಿವಿನಿಲಯ, ಪೀಯೇ ತಂತ್ರಜ್ಞಾನ ಕಾಲೇಜ್, ಮೂರು ಮತ್ತೊಂದು ವೈದ್ಯಕೀಯ ಕಾಲೇಜುಗಳು, ಇನ್ಫೊಸಿಸ್ ಮತ್ತು ತಂತ್ರಜ್ಞಾನಾಧಾರಿತ ಉದ್ದಿಮೆಗಳ ವಲಯಾಭಿವೃದ್ಧಿ ಇತ್ಯಾದಿ) ಪ್ರಶಸ್ತಿಯಾಗಿ ತಿಂಗಳ ಹಿಂದೆ ದಾರಿಯ ಚತುಷ್ಪಥೀಕರಣಕ್ಕೆ ನಾಂದಿಯಾಗಿತ್ತು; ಇನ್ಫೋಸಿಸ್ ಎದುರಿನ `ಏರನ್ನು ಸಮಾಧಾನ’ಗೊಳಿಸುವ ಕೆಲಸ ಭರದಿಂದ ನಡೆದಿತ್ತು. ಮುಡಿಪು ಪೇಟೆ ಇನ್ನೂ ಕಣ್ದೆರೆದಿರಲಿಲ್ಲ.

ಮುಡಿಪುಗುಡ್ಡೆಯನ್ನು ಹಿಂದಿಕ್ಕಿದ ಮೇಲೆ, ಅಂದರೆ ಊರ ಕೊನೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ವಠಾರ ಕಳೆದದ್ದೇ ದೀರ್ಘ ಮತ್ತು ತೀವ್ರ ಇಳಿಜಾರು ತೊಡಗುತ್ತದೆ. ಮಾಯಾಲೋಕಕ್ಕಿಳಿದಂತೆ ತೆಳು ಮಂಜಿನ ಮುಸುಕು ಹರಿಯುತ್ತ, ಹಸಿರುಹೂವಿನ ಪರಿಮಳ ಆಸ್ವಾದಿಸುತ್ತ, ನುಣ್ಣನೆಯ ದಾರಿಯಲ್ಲಿ ಗುಡ್ಡೆಯ ಏಣುಕಣಿವೆಗಳನ್ನು ಬಳಸುವ ಓರೆಕೋರೆಗಳಲ್ಲಿ ಬಳಕುತ್ತ ಇಳಿಯುವಾಗ, ಬಹುಶಃ ಎಲ್ಲರೂ ಲಹರಿ ಗಾಯಕರೇ! ದಾರಿಯಲ್ಲೊಂದೆರಡು ಸಣ್ಣ ಹರಕು, ವಿರಳ ವಾಹನ ಸಂಚಾರ ನಮ್ಮ ಸಂತೋಷವನ್ನೇನೂ ಕಡಿಮೆ ಮಾಡಲಿಲ್ಲ. ಆದರೆ ಮನದಾಳದಲ್ಲಿ, ಮರಳುವ ದಾರಿಯ ಕೊರಗು ಕಾಡದೆಯೂ ಇರಲಿಲ್ಲ! ಆಗ ಸೂರ್ಯನ ಪೂರ್ಣ ಕೃಪೆ ಸಹಿಸಿಕೊಂಡು, ಇಷ್ಟುದ್ದಕ್ಕೆ ಬೆಟ್ಟ ಏರಿಸಬೇಕೆನ್ನುವ ಭಯ, ಪರ್ಯಾಯ ಮಾರ್ಗ ಯೋಚಿಸುವಂತೆ ಮಾಡಿತ್ತು.\

ಬಾಕ್ರಬೈಲಿನ ಸಾಲೆತ್ತೂರು ಕೈಮರ ಕಳೆಯುತ್ತಿದ್ದಂತೆ ಪಾತೂರು ಸೂರ್ಯೇಶ್ವರ ದೇವಳದ ಬ್ರಹ್ಮಕಲಶದ ಜಾಹೀರಾತುಗಳು, ಮಾರ್ಗಾಲಂಕಾರಗಳು ನಮ್ಮ ವಿಶೇಷ ಗಮನ ಸೆಳೆದವು. ಒಮ್ಮೆಗೆ ಇಳಿದಾರಿ ಮುಗಿದು, ತೋಡು ಕಳೆದು, ಇನ್ನೊಂದೇ ಗುಡ್ಡೆಯ ತೀವ್ರ ಏರು ಬಂತು. ಹಿಂದೆ ಈ ಏರಿನ ತೀವ್ರತೆಗೆ ಸೋತು ಹೊರೆ ಹೊತ್ತ ಲಾರಿ ಹಿಂಗಾಲಿಯಲ್ಲಿ ನಿಂತ ಬೆರಗು, ಗರ್ಭಿಣಿ ಬಸ್ಸೂ ಸೇರಿದಂತೆ ಹಲವು ವಾಹನಗಳು ಮುಲುಗುತ್ತ ಮಗ್ಗುಲು ಮಲಗಿದ ನೆನಪೆಲ್ಲ ನನಗೆ ಬರದಿರಲಿಲ್ಲ. ಅಲ್ಲಿ ಎರಡೋ ಮೂರೋ ಹಿಮ್ಮುರಿ ತಿರುವು ಕಳೆದ ಬಲ ಬದಿಗೆ ಸೂರ್ಯೇಶ್ವರ ದೇವಳದ ಮಹಾದ್ವಾರ. ನಮಗೆ ಗುರುತಿಗೆ ಸುಲಭವಾಗುವಂತೆ ಅದಿನ್ನೂ ಸಂದ ಬ್ರಹ್ಮಕಲಶದ ಅಲಂಕಾರಗಳನ್ನು ಕಳಚಿರಲಿಲ್ಲ. ಒಳಗೆ ಉದ್ದಕ್ಕೂ ಬ್ರಹ್ಮಕಲಶೋತ್ಸವದ ಫ್ಲೆಕ್ಸ್ ಜಾಹೀರಾತು, ಅಲಂಕಾರಗಳ ಅಬ್ಬರ ಅಸಾಮಾನ್ಯವೇ ಇತ್ತು. ದಾರಿಯೂ ಮತ್ತೆರಡೆರಡು ತೀವ್ರ ಇಳುಕಲುಗಳಲ್ಲಿ ನಮ್ಮನ್ನು ಉರುಳಿಸಿ, ಕುತ್ತೇರಿನಲ್ಲಿ ದಂಕಟ್ಟಿಸಿ – ಒರೆಗೆ ಹಚ್ಚಿಯೇ ಸುಮಾರು ಒಂದು ಕಿಮೀ ಅಂತರದ ದೇವಳದ ವಠಾರ ಸೇರಿಸಿತು. ಪ್ರಖರ ಸೂರ್ಯ ತೊಳೆಯುತ್ತಿದ್ದ, ಪೂರ್ವಾಭಿಮುಖವಾದ ಭಾರೀ ಗೋಡೆಯ ನೆತ್ತಿಯ ಎತ್ತರದಲ್ಲಿ ಮಂದಿರವಿತ್ತು. ವಾಸ್ತವದಲ್ಲಿ ಅದು, ಹಳೆಗಾಲದ ಶಿಖರಿಣೀ ದೇವಳ. ಆದರೆ ಆಧುನಿಕ ಸೇವಾಕರ್ತರ ಹಮ್ಮಿನಲ್ಲಿ ಅರ್ಧ ಗುಡ್ಡೆಯನ್ನೇ ಕಳೆದುಕೊಂಡು, ಎದುರಂಗಳವನ್ನು ವಿಸ್ತರಿಸಿಕೊಂಡಂತಿತ್ತು. ದೇವಳಕ್ಕೆ ಹಿಮ್ಮೈಯಲ್ಲಿ ಬೇರೊಂದು ದಾರಿಯೂ ಇದೆ.

ಸೈಕಲ್, ಪಾದರಕ್ಷೆಗಳನ್ನು ಬಿಟ್ಟು, ಸೋಪಾನಗಳ ಸರಣಿಯೇರಿದೆವು. ಇನ್ನೂ ಉಪಯುಕ್ತತೆಗಳನ್ನು ಸಾರಿಕೊಳ್ಳದ ಎರಡು ಅಂತಸ್ತಿನ ಹಜಾರಗಳನ್ನು ಕೆಳಗುಳಿಸುತ್ತ, ನಿಜಮಂದಿರದ ಎತ್ತರ ತಲಪಿದೆವು.

ಹಳೆಗಾಲದ ವಾಸ್ತುವನ್ನುಳಿಸಿಕೊಂಡು, ಆಧುನಿಕ ರಚನೆ ಹೇರಿಕೊಂಡ ದೇವಾಲಯ ಆಕರ್ಷಣೀಯವಾಗಿಯೇ ಇತ್ತು. ಕಳೆದ ಉತ್ಸವ, ದಿನದ ಹಬ್ಬಗಳನ್ನೆಲ್ಲ ಸೇರಿಸಿ ವಠಾರದ ಕಳೆಯೂ ಚೆನ್ನಾಗಿಯೇ ಇತ್ತು. ಗಂಟೆ ಎಂಟಾದರೂ ಭಕ್ತಾದಿಗಳು ಎಂಟು ಹತ್ತು ಮಂದಿ ಬಂದಿದ್ದರೂ “ಬಾಗಿಲನು ತೆರೆದು ಸೇವೆಯನು ಕೊಡೋ…..” ಮನವಿಗೆ ದೇವ ಸ್ಪಂದಿಸಿರಲಿಲ್ಲ! ಕನಿಷ್ಠ ಅರ್ಚಕರಾದರೂ ಸಹಕರಿಸಬೇಕಿತ್ತು. ಆದರೆ ಸಾಲೆತ್ತೂರು ದಾರಿ ನವೀಕರಣದ ನೆಪದಲ್ಲಿ ಬಂದಾಗಿ, ಅರ್ಚಕರು ಬರಬೇಕಿದ್ದ ಬಸ್ಸು ಬರುವುದು ವಿಳಂಬವಾಗಿತ್ತು!

ತೊಕ್ಕೋಟಿನಲ್ಲಿ ತಿಂಡಿ ತಿನ್ನುತ್ತಿರುವಾಗ ನಮ್ಮ ಬಳಗ ಮೂವರೊಳಗೆ (ದೇವನಂಬಿಕೆಯಿಲ್ಲದ ನನ್ನನ್ನುಳಿದು) ಗಂಭೀರವಾಗಿ ಜಿಜ್ಞಾಸೆ ಮೂಡಿತ್ತು – ಸ್ನಾನ ಮಾಡದೇ ಸೂರ್ಯೇಶ್ವರನ ದರ್ಶನ ಮಾಡಬಹುದೇ? ವೀರಪಂಥದಲ್ಲಿ ಬೆವರಸ್ನಾನಕ್ಕೆ ಮನ್ನಣೆಯುಂಟೆಂದು ನಾನು ತೀರ್ಪು ಕೊಟ್ಟಿದ್ದೆ. ಆದರೆ ಇಲ್ಲಿ ಪರಿಸ್ಥಿತಿ ಬೇರೇ ನಿರ್ಧರಿಸಿತ್ತು; ದೇವಬಿಂಬದ ದರ್ಶನವಾಗಲೇ ಇಲ್ಲ. ಆದರೆ ನಾನು, ದೇವಳದ ಹಿತ್ತಲಿನ ವಠಾರಕ್ಕೆ ಭದ್ರ ಸುತ್ತುಗೋಡೆಯಂತೇ ಹಿಂದಿನಿಂದ ಬೆಳೆದು, ಇನ್ನೂ ಆಧುನಿಕ ಅಭಿವೃದ್ಧಿಯಲ್ಲಿ ಅಪ್ರಸ್ತುತವೆಂಬಂತೆ ಕಾಣದುಳಿದ ಕೆಲವು ಭಾರೀ (ಧೂಪ, ಮಾವು, ಆಲ ಇತ್ಯಾದಿ) ಮರಗಳ ಬಲದಲ್ಲಿ ದೇವರ ಕಂಡೆ. ಮಾರಿಹಲಿಗೆಗೆ (ಜೇಸೀಬಿ) ಸಿಕ್ಕಿ ಕೆಂದೂಳೆಬ್ಬಿಸುವ ಕೆಳ ಅಂಗಳದ ಮೂಲೆಯಲ್ಲಿದ್ದ ಭಾರೀ ಅಶ್ವತ್ಥ ಕಟ್ಟೆಯ ಚಂದದಲ್ಲಿ ದೇವರ ಕಂಡೆ. ಹೊಸದಾಗಿ ರೂಪುಗೊಂಡ ಅಲಂಕಾರಿಕ ಪುಷ್ಕರಿಣಿಗಳಿಗೆ ಪ್ರೇರಣೆಯಾದ ಮತ್ತೂ ಹಿತ್ತಲಿನ ಸುಲಭಸಾಧ್ಯವಲ್ಲದ ಗುಡ್ಡೆ (ಅದೂ ಭೀಕರವಾಗಿ ಮಟ್ಟವಾಗುತ್ತಿದೆ), ಕಗ್ಗಾಡಿನಲ್ಲೆಲ್ಲೋ ಇರುವ ಮೂಲ ನೀರಕಣ್ಣಿಗೆಲ್ಲ ಮನಸಾ ವಂದಿಸಿ, ವಾಪಾಸು ಹೊರಟೆವು.

ನೇತ್ರಾವತಿಯ ದಕ್ಷಿಣದ ವಿಸ್ತೃತ ದಂಡೆಯಂತೇ ಪಸರಿಸಿವೆ (ಆಸೇತು ಹಿಮಾಚಲ ಎಂದಂತೇ) ಆ-ತೊಕ್ಕೋಟು ಮುಡಿಪು ಗುಡ್ಡೆ ಸಾಲು. ನಾವು ಅದರ ನೆತ್ತಿ ಬಿಡದ ದಾರಿಯಲ್ಲಿ ಬಂದಿದ್ದೆವು. ಮರಳುವ ದಾರಿಯಲ್ಲಿ ವಿಸ್ತೃತ ನೇತ್ರಾವತಿ ಹೊಳೆಪಾತ್ರೆ ಅಥವಾ ಬಯಲನ್ನು ನೆಚ್ಚಿ, ಸಾಲೆತ್ತೂರು ಕವಲನ್ನು ಅನುಸರಿಸಿದೆವು. ಇದು ಮೊದಲೇ ಹೇಳಿದಂತೆ, ಸದ್ಯ ವಾಹನ ಸಂಚಾರಕ್ಕೆ ಬಂದಾಗಿದೆ. ಆದರೆ ನಾವು ಸೈಕಲ್ಲಿನ ಸರಳತೆಯನ್ನು ಬಳಸಿದೆವು. ಒಂದು ಹಿಮ್ಮುರಿ ತಿರುವಿನಲ್ಲಿ ಸ್ವಲ್ಪ ಸೈಕಲ್ ಎತ್ತಿ ಸಾಗಿಸಿದ್ದು ಬಿಟ್ಟರೆ, ವಿಶೇಷ ಏರಿಲ್ಲದ ನುಣ್ಣನೆ ದಾರಿಯಲ್ಲಿ ಸುಖವಾಗಿ ಸಾಲೆತ್ತೂರು ಸೇರಿದೆವು. ಅಲ್ಲಿನೊಂದು ಹೋಟೆಲಿಗೂ ನಮ್ಮ ಕಿರುಗಾಣಿಕೆ ಹಾಕಿ, ಮಂಚಿಕಟ್ಟೆಯತ್ತ ಕವಲಿದೆವು. ಇದೂ ಅದೇ ಸೌಮ್ಯದಲ್ಲಿ ನಮ್ಮನ್ನು ಕೊಣಾಜೆ – ಮೇಲ್ಕಾರು ದಾರಿಗೆ ಸೇರಿಸಿತು. ಅಲ್ಲೂ ನಂದಾವರದ ಕವಲು ಬಳಸಿ, ಪಾಣೆಮಂಗಳೂರು ಪೇಟೆ ಸುತ್ತಿ ನೇರ ನೇತ್ರಾವತಿಯ ಹಳೆಸಂಕವನ್ನೇ ಸೇರಿದೆವು. ಮತ್ತೆ ಗೊತ್ತಲ್ಲ, ನೂರೆಂಟು ಬಾರಿ ತುಳಿ-ಪರಿಚಯದ ಜೋಡುಮಾರ್ಗ – ಮಂಗಳೂರು ದಾರಿಗಾಗಿ ಹನ್ನೊಂದು ಗಂಟೆಯ ಸುಮಾರಿಗೆ ತಂಡ ಚದುರಿ, ಎಲ್ಲ ಮನೆ ಸೇರಿಕೊಂಡೆವು. ಪಾತೂರು ಸೂರ್ಯೇಶ್ವರನ ಪ್ರೀತ್ಯರ್ಥದ ನಮ್ಮ ಶತ ಕಿಮೀ ಸೈಕಲ್ ಸಾಧನೆಗೆ ಥಳಥಳಿಸುವ ನಿಜಸೂರ್ಯನೇ ವಿಜಯ ತಳಿಗೆ! ಮತ್ತೆ ಮುಖ್ಯ ಕಥಾವಾಹಿನಿಗೆ……

ಶಿವರಾತ್ರಿಯಂದು ನಮಗೆ ಮುಚ್ಚಿದ್ದ ಗರ್ಭಗುಡಿ ಇಂದು ತೆರೆದಿತ್ತು, ಪೂಜೆ ನಡೆದಿತ್ತು. ನಾವು ಹಾಗೆ ಹೊರಸುತ್ತು ಹಾಕಿದೆವು. ಬ್ರಹ್ಮಕಲಶದ ಪೂರಕ ಕ್ರಿಯೆಯಾಗಿ ನಡೆಯುವ ದೃಢಕಲಶವೆನ್ನುವ ಇನ್ನೊಂದೇ ಉತ್ಸವಕ್ಕೆ (೨೮-೩-೨೦೧೭) ದೇವಳ ಸಜ್ಜಾಗುತ್ತಿದ್ದಂತಿತ್ತು. ದೇವಳದ ಪುನರ್ನಿರ್ಮಾಣ ಕಾರ್ಯದಲ್ಲಿ ಸ್ವಯಂಸೇವಕನಾಗಿ ದುಡಿದಿದ್ದ ಮಹನೀಯರೊಬ್ಬರಂತು ತಾವಾಗಿಯೇ ನಮ್ಮನ್ನು ಆತ್ಮೀಯವಾಗಿ ವಿಚಾರಿಸಿಕೊಂಡರು. ದೇವಳದ ಒತ್ತಿನ ದೊಡ್ಡ ಜಮೀನ್ದಾರ, ಮುಡಿಪಿನಿಂದ ತೊಡಗಿ ಬಳ್ಳಾರಿಯರವರೆಗೆ ಹಲವು ಉದ್ದಿಮೆಗಳ ವೀರರೊಬ್ಬರು ಹೇಗೆ ಸದಾ ಮುಂದೆ ನಿಂತು ಎಲ್ಲವನ್ನು ನಡೆಸಿಕೊಡುತ್ತಾರೆ ಎಂದೂ ತಿಳಿಸಿದರು. ನಾವು ಪ್ರತಿಕ್ರಿಯಿಸುವ ಮುಜುಗರಕ್ಕಿಳಿಯದೆ ಹೊರಬಂದೆವು.

ದೇವಳದ ಅಂಗವಾಗಿಯೇ ಎದುರು ಗುಡ್ಡಕ್ಕೆ ದುರುದುಂಡಿ ಬಿಟ್ಟು ತಟ್ಟು ಮಾಡಿದ್ದನ್ನು ಹತ್ತಿನೋಡಿದೆವು. ಅಲ್ಲಿ ಅಂಚಿನಲ್ಲಿದ್ದ ಭಾರೀ ಟಾಂಕಿಗೂ ದೇವಳದ ಪುಷ್ಕರಣಿಗೂ ನಿಜ ಜಲವೂಡುವ ಒರತೆ, ಅರ್ಥಾತ್ ಗಂಗಾಸಾನ್ನಿಧ್ಯ, ಬೆಟ್ಟದ ಮೂಲೆಯಲ್ಲೆಲ್ಲೋ ಇದೆ ಎಂದೇ ಸ್ಥಳಪುರಾಣ ಹೇಳುವುದನ್ನು ನಾನು ಇದೇ ಫೇಸ್ ಬುಕ್ಕಿನ ದೇವಳದ ಪುಟದಲ್ಲಿ ಓದಿದ್ದೆ. ಅದನ್ನು ನೋಡುವ ಉತ್ಸಾಹದಲ್ಲಿ ಟಾಂಕಿಗೆ ಬರುವ ದಪ್ಪ ಕೊಳಾಯಿಯನ್ನು ಸ್ವಲ್ಪ ಮೇಲಿನವರೆಗೆ ಅನುಸರಿಸಿದ್ದೆವು. ಆ ಜಾಡು ತೀರಾ ಅಗಮ್ಯವಾದಲ್ಲಿ “ಇಂದಿನ ತುತ್ತಲ್ಲ” ಎಂದು ಬಿಟ್ಟು ಬೈಕಿಗೆ ಮರಳಿದೆವು. ಶಿವರಾತ್ರಿಯ ಸೈಕಲ್ ಸರ್ಕೀಟಿನ ದಾರಿಯನ್ನೇ ಅನುಸರಿಸಿ ಮುಂದಿನ ಲಕ್ಷ್ಯಸಾಧನೆಗಾಗಿ ಸಾಲೆತ್ತೂರು ಮಾರ್ಗ ಹಿಡಿದೆವು.

ಅಂದು ತೀವ್ರ ತಿರುವುಗಳಿಗೆ ಇಂಟರ್ಲಾಕ್ ಹಾಕುವ ಲೆಕ್ಕದಲ್ಲಿ ಬಂದಾಗಿದ್ದ ದಾರಿ, ಈಗ ನುಣ್ಣನೆ ಡಾಮರಿನೊಡನೆ ಸಂಚಾರ ಮುಕ್ತವಾಗಿದೆ. ಸಾಲೆತ್ತೂರು, ಮಂಚಿಕಟ್ಟೆಯಾದಮೇಲೆ ಬಲ ಹೊರಳಿ ಕಲ್ಲಡ್ಕ ಜಪಿಸಿದೆವು. ಆದರೆ ಕವಲು ದಾರಿಗಳ ಫಿತೂರಿಯಲ್ಲಿ, ಕಲ್ಲಡ್ಕಕ್ಕೂ ಒಂದು ಕಿಮೀ ಆಚೆ ವಿಟ್ಲ ದಾರಿ ಬಂದಾಗಲೇ ಗೊತ್ತು – ನಾನು ಸ್ವಲ್ಪ ತಪ್ಪಿದ್ದೆ. ಮತ್ತೆ ತಪ್ಪು ಕಾಣಿಕೆ ಒಪ್ಪಿಸುವವರಂತೆ ಕಲ್ಲಡ್ಕದ ಖ್ಯಾತ ರಿಂಜಿಂ ಕಾಫಿ ಕೇಂದ್ರಕ್ಕೆ (ಲಕ್ಷ್ಮೀಭವನ) ನುಗ್ಗಿದೆವು. ಆಚಾರವಿಲ್ಲದ ನಾಲಗೆ, ಕಾಫಿಗೆ ಪೀಠಿಕೆ ಎನ್ನುವಂತೆ `ಮೊಸಳೆ-ದೋಷ’ ಕೇಳಿತು. ಅದು `ಪರಿಹಾರ’ವಾಗುತ್ತಿದ್ದಂತೆ, ಕಾಫಿ ಸಾಂಗತ್ಯಕ್ಕೆಂದು ಗೋಳಿಬಜೆ ತರಿಸಿದ್ದೂ ಆಯ್ತು. ಗಾಜಿನ ಲೋಟದೊಳಗೆ ಬಿಳಿನೊರೆಯ ಕಿರೀಟ, ಕೆಳಗೆ ಸ್ಪಷ್ಟ ಕಡುಗಂದು ಕಷಾಯ, ಮತ್ತೂ ತಳಕ್ಕೆ ಗೀಟು ಹಾಕಿದಂತೆ ಬಿಳಿ ಹಾಲಿನ ಪದರಗಳು ಸಕ್ಕರೆ ಅಡಿಗಟ್ಟಿನಲ್ಲಿ ತಂಗಿದ್ದೇ ರಿಂಜಿಂ ಕಾಫಿಯ ವಿಶೇಷ. ಮೃದು ಗೋಳಿಬಜೆ ಹರಿದು, ಚಟ್ನಿಯಲ್ಲಿ ನುರಿದು ಚಪ್ಪರಿಸುತ್ತಿದ್ದಂತೆ, ಲೋಟಕ್ಕೆ ಚಮಚ ಬಿಟ್ಟು ಮುದದಿಂದ ಪಾಕವನ್ನು ಕಲಕಿ, ರಸಾನಂದ ಪಾನಿಗಳಾದೆವು.

ದಿನದ ತಿರುಗಾಟದ ಕೊನೆ ಭೇಟಿ ಎಂಬಂತೆ ಮಂಗಳೂರ ದಾರಿಯ ನರಹರಿ ಬೆಟ್ಟಕ್ಕೋಡಿತು ಬೈಕು. ಇಂದು ಬೆಳಿಗ್ಗೆ ಫೇಸ್ ಬುಕ್ ತೆರೆದಾಗ ಅದು ಯಾಂತ್ರಿಕವಾಗಿ ತೆರೆದಿಟ್ಟ, ನನ್ನ ಕಳೆದ ವರ್ಷದ ಇದೇ ದಿನದ ಸೈಕಲ್ ಸರ್ಕೀಟ್, ಇದೇ ನರಹರಿ ಬೆಟ್ಟಕ್ಕಿತ್ತು ಎನ್ನುವ ಒಂದು ಆಶ್ಚರ್ಯಕರ ಆಕಸ್ಮಿಕ ಕಂಡಿದ್ದೆ. ಕಳೆದ ವರ್ಷ, ಡಾಮರು ದಾರಿ ಮೆಟ್ಟಿಲ ಸಾಲನ್ನು ಸಂಧಿಸುವ ಸ್ಥಾನದಿಂದಲೇ ನಾನು ವಾಪಾಸಾಗಿದ್ದೆ. ಅಂದು `ಅಭಿವೃದ್ಧಿ ಪರಿಣತರು’ ಮೆಟ್ಟಿಲ ಸಾಲಿನ ಒತ್ತಿನಲ್ಲೂ ಡಾಮರನ್ನು ಇನ್ನೂ ಎತ್ತರಕ್ಕೇರಿಸುವ ಕೆಲಸ ನಡೆಸಿದ್ದುದನ್ನು ಕಂಡು ವಿಷಾದಿಸಿದ್ದೆ. ಇಂದು ಅದು ತೀವ್ರ ಏರಿನ ಸುಂದರ ಡಾಮರು ಮಾರ್ಗ. ಕೊನೆಯ ಸುಮಾರು ಐವತ್ತು ಮೆಟ್ಟಿಲಷ್ಟು ಉದ್ದ ಮಾತ್ರ (ಕಚ್ಚಾ ಮಾರ್ಗವಾಗಿದೆ) ಡಾಮರು ಕಾಣುವುದಷ್ಟೇ ಉಳಿದಿದೆ. ನಾವು ಬೈಕನ್ನು ಆ ಎತ್ತರದಲ್ಲೇ ಬಿಟ್ಟು ನಡೆದೆವು.

ಶಿಖರವಲಯದಲ್ಲಿನ ಪ್ರಾಕೃತಿಕ ಸ್ಥಿತಿಯಲ್ಲೇ ಏರುತಗ್ಗಾಗಿದ್ದ ಬಂಡೆ, ಮಣ್ಣು ಮತ್ತೆ ತೀರ್ಥಗಳೆಂದೇ ಜನಜನಿತವಾದ ಕೊರಕಲುಗಳಲ್ಲಿ ನಿಂತ ನೀರಿನ ಆವರಣಗಳೆಲ್ಲ ಕಾಂಕ್ರೀಟ್ ಸೋಪಾನ, ಚೌಕಟ್ಟು, ಕಬ್ಬಿಣದ ಕೈ ತಾಂಗು, ಬೇಲಿಗಳನ್ನೆಲ್ಲ ಪಡೆದು ಭಕ್ತಾದಿಗಳನ್ನು ಹೆಚ್ಚು ಆರ್ದ್ರಗೊಳಿಸಲು ಸಜ್ಜಾಗಿವೆ. ಇದನ್ನೆಲ್ಲ ಸಾಧ್ಯ ಮಾಡಿದ ದಾನಿ ಮಹಾನುಭಾವರುಗಳಲ್ಲಿ ಅಗ್ರ ಸ್ಥಾನದಲ್ಲಿ ಸ್ವತ: ಎ.ಜೆ ಶೆಟ್ಟಿಯವರ ಹೆಸರು ಕಂಡ ಮೇಲೆ ನನಗೆ ಹೇಳುವುದೇನೂ ಉಳಿದಿಲ್ಲ. ಅಷ್ಟಾಗಿಯೂ ಇಂದಿನ ಕಾಲಮಾನಕ್ಕೆ ದೇವಳ ಜಿಡ್ಡುಗಟ್ಟಿದಂತಿರುವುದು (ದೇವಂದ ಬೆಟ್ಟ, ಸೂರ್ಯೇಶ್ವರದ ವೈಭವಕ್ಕೆ ಹೋಲಿಸಿ), ಸೇವಾ ಕೋಣೆಗಳು ಹಾಳುಸುರಿಯುತ್ತಿರುವುದು, ಕಾಂಕ್ವುಡ್ಡಿನ ಬೇಲಿಗಳು ಬಿರಿದು ಸರಳು ಕಳಚುತ್ತಿರುವುದು, ಸಿಮೆಂಟಿನ ಶಿಲ್ಪಕಲಾ ವೈಭವಗಳೆಲ್ಲ (ಉದಾ: ಕೊಕ್ಕರೆ, ಗೋಮಾತೆ) ಬಡ್ಡುಮುಕ್ಕಾಗಿರುವುದು ಕಾಣುತ್ತಿದ್ದಂತೆ ಆಶ್ಚರ್ಯವೂ ತುಸು ವಿಷಾದವೂ ಆಯ್ತು. ಆದರೆ ದೇವಳದ ಇನ್ನೊಂದು ಮಗ್ಗುಲಲ್ಲಿ ತತ್ಕಾಲೀನ ಕಛೇರಿ ತೆರೆದ ಜೀರ್ಣೋದ್ಧಾರ ಸಮಿತಿ, ಕನಿಷ್ಠ ಐದು ಕೋಟಿಯ `ಅಭಿವೃದ್ಧಿ ಯೋಜನೆ’ಯ ಕರಪತ್ರ ಕೊಟ್ಟಾಗ ಭಕ್ತ್ಯೋದ್ದಿಮೆ ಜಾಗೃತವಿದೆ ಎಂದು ಸಣ್ಣ ನಗೆ ಬರದಿರಲಿಲ್ಲ. ಆದರೆ ಹಣ ಹಾಕುವವರು ಯಾರು, ಫಲಿತಾಂಶ ಏನು, ಸಾರ್ವಜನಿಕರು ಅವನ್ನು ಬಳಸುವ ಕ್ರಮ ಎಂಥದ್ದು ಯೋಚಿಸುವಾಗ ಭಯವಾಗುತ್ತದೆ. (ಈಗಲೂ ಇಲ್ಲಿ ಸಹಜವಾಗಿ ಇಲ್ಲದ ನೀರನ್ನೇ ಧಾರಾಳ ಬಳಸುತ್ತಾರೆ. ಆಸನಾದಿ ವ್ಯವಸ್ಥೆಗಳು ಉಳಿದುಕೊಂಡಿರುವ ರೀತಿ, ಪ್ರಾಕೃತಿಕ ದೃಶ್ಯಕ್ಕೆ ಇಣುಕಿದಲ್ಲೆಲ್ಲ ಕೊಳ್ಳಗಳಲ್ಲಿ ಕಾಣುವ ವೈವಿಧ್ಯಮಯ ಕಸದ ಕುಪ್ಪೆಗಳು ಸಣ್ಣ ಎರಡು ಉದಾಹರಣೆಗಳು!)

ಮೂರೂ ಶಿವಾಲಯಗಳು ಮೂಲದಲ್ಲಿ ಪ್ರಾಕೃತಿಕ ವೈಶಿಷ್ಟ್ಯವನ್ನೇ ಆಧರಿಸಿ ರೂಪುಗೊಂಡವು. ಆದರೆ ಅವು ಇಂದು ಕಾಣುತ್ತಿರುವ ಜೀರ್ಣೋದ್ಧಾರದ ಆಶಯಗಳು ಮಾತ್ರ ತೀರಾ ಪ್ರಾಕೃತಿಕ ವಿರೋಧದ್ದೇ. ಲಕ್ಷಾಂತರ ವರ್ಷಗಳಲ್ಲಿ ರೂಢಿಗೊಂಡ ಪ್ರಾಕೃತಿಕ ನಿಯಮಗಳನ್ನು ಧಿಕ್ಕರಿಸಿ, ಹೆಚ್ಚೆಂದರೆ ಒಂದೆರಡು ನೂರೇ ವರ್ಷದ, ಊಹಾಪೋಹಗಳನ್ನು ಪುರಸ್ಕರಿಸುವ, ಸೀಮಿತ ಮನುಷ್ಯ ಸೌಲಭ್ಯವನ್ನು ಹೇರುವ ಪ್ರಯತ್ನಗಳು. ಇದು ಸರಿಯಲ್ಲ ಎನ್ನುವ ವಿಷಾದವೊಂದನ್ನೇ ಹೊತ್ತುಕೊಂಡು ನಾವು ಮಧ್ಯಾಹ್ನದೂಟಕ್ಕೆ ಮಂಗಳೂರಿಗೆ ಮರಳಿದೆವು.