ಬೆಳಗ್ಗೆ ಪತ್ರಿಕೆ ನೋಡಿದ್ದೇ ಉಚ್ಚಿಲದತ್ತ ಸೈಕಲ್ಲೋಡಿಸಿದೆ (೨೩-೪-೧೮ ಸೈಕಲ್ ಸರ್ಕೀಟ್ ೪೦೧). ಭೂಕಂಪ, ಮಳೆ, ಚಂಡಮಾರುತಗಳ ಪ್ರಭಾವವಿಲ್ಲದೆಯೂ ಸಾಗರಬೋಗುಣಿ ಯಾಕೋ ತುಸು ಅಂಡು ಕುಸುಕಿತ್ತು. ಪರಿಣಾಮವಾಗಿ ಎರಡು ಆವರ್ತಗಳಲ್ಲಿ ತುಳುಕಿದ ಕಡಲು ಎಂದಿನಂತಲ್ಲದೆ ಈ ವಲಯದ ಮೀನುಗಾರಿಕಾ ದಾರಿಯವರೆಗೂ ನೆಲ ನೆಕ್ಕಿತ್ತು. ಆ ಅಗಾಧತೆಯ ಸ್ಪರ್ಷವೂ ಹುಲುಮಾನವ(ಅ?)ವ್ಯವಸ್ಥೆಗೆ ಕುಸಿಯುವ ಅನುಭವವನ್ನೇ ತರುತ್ತದೆ ಎನ್ನುವುದನ್ನು ಕೆಲವು ಕಡೆಗಳಲ್ಲಿ ಕಂಡೆ. ಬಟಪಾಡಿ ಭೂಶಿರದಲ್ಲಿ ನಾಗರಿಕ ಹಾಳಮೂಳ ಪೇರಿಸಿ ‘ನಾವು’ ಎತ್ತರಿಸಿದ ನೆಲಕ್ಕೆ ಏರಿಬಂದ ಅಲೆಗಳು, ಎಲ್ಲವನ್ನು ಚಂದಕ್ಕೆ ಮರಳ ಸಮಾಧಿಗೊಳಪಡಿಸಿದ್ದವು. ನಮ್ಮ ತ್ರಿವೇಣೀ ಸರೋವರ (ಉಚ್ಚಿಲ, ತಲಪಾಡಿ ಮತ್ತು ಕುಂಜತ್ತೂರು ಹೊಳೆಗಳ ಸಂಗಮ) ಸಮುದ್ರಕ್ಕೆ ತೆರೆದುಕೊಂಡಿರಲಿಲ್ಲ. ಆದರೆ ನಡುವೆ ಇದ್ದ ಮರಳದಂಡೆಯ ಹಸಿರು ಮತ್ತು ಕಸರಾಶಿಯನ್ನಷ್ಟೂ ಉಬ್ಬರದಲೆಗಳು ನಿವಾರಿಸಿ, ಒಪ್ಪಗೊಳಿಸಿತ್ತು. ಹಾಗೇ ಸರೋವರದ ಸಂಪತ್ತಿಗಷ್ಟು ಉಪ್ಪುನೀರು ಬೆರೆತದ್ದೂ ಇರಬಹುದು. ಅದು ಮೇಲ್ದಂಡೆಯ ಕೃಷಿ, ಜೀವನಕ್ಕೆಲ್ಲ ರಗಳೆ ಕೊಟ್ಟಿರಬಹುದು ಎಂದು ಬರಿದೇ ಊಹಿಸಿದೆ.

ಬಟಪಾಡಿಯಿಂದ ಸೋಮೇಶ್ವರದತ್ತ ಸ್ವಲ್ಪ ದೂರ ಮರಳ ಹಾಸಿನಲ್ಲೇ ಸೈಕಲ್ ನೂಕುತ್ತ ನಡೆದೆ. ಅಲೆಗಳ ಅಬ್ಬರ ಕಡಿಮೆಯಾಗಿದ್ದರೂ ಕೆಲವೇ ಗಂಟೆಗಳ ಮೊದಲು ಮಾರ್ಗದ ಪಡು ಅಂಚಿನವರೆಗೂ ‘ಕೀಟಲೆ’ ಮಾಡಿದ ಲಕ್ಷಣಗಳು ಧಾರಾಳ ಉಳಿದೇ ಇದ್ದವು. ಜನ ಮತ್ತೆ ಅಪರಾಹ್ನದ ಭರತದ ವೇಳೆ ಏನಾದೀತು ಎಂಬ ಆತಂಕದಲ್ಲೇ ಇದ್ದರು. ಜನ ವರ್ಷಾಂತರಗಳಲ್ಲಿ ಸ್ವಲ್ಪ ಸ್ವಲ್ಪೇ ಸೇರಿಸಿದ್ದ ಮಣ್ಣು, ಹಸಿರು, ಕಟ್ಟೆ, ಅಂಗಳ ಎಲ್ಲದರಲ್ಲೂ ಕಡಲು ಕೈಯಾಡಿಸಿ, ಕೆಸರೆಬ್ಬಿಸಿ, ಕಸಕಡ್ಡಿ ಕಟ್ಟೆ ಕಟ್ಟಿ, ಕೆಲವೆಡೆ ಇಂಗಿ, ತಗ್ಗುಗಳಲ್ಲಿ ತಂಗಿತ್ತು.

ಹಿಂದಿನ ಮಳೆಗಾಲಗಳಲ್ಲಿ ಕೆಲವೆಡೆಗಳಲ್ಲಷ್ಟೇ ಸರಕಾರ ಕಡಲಕೊರೆತದ ನಿರೋಧಕ್ಕೆಂಬಂತೆ ಹೇರಿದ್ದ ಬಂಡೆಗಲ್ಲುಗಳ ಗೋಡೆಯನ್ನು ಈ ಅಲೆಗಳು ಕ್ಷುಲ್ಲಕ ಮಾಡಿ, ಮನುಷ್ಯ ರಚನೆಗಳನ್ನೆಲ್ಲ ತಟ್ಟಿ, ತಡವಿ ನೋಡಿ ಹೋದದ್ದು ಸ್ಪಷ್ಟವಿತ್ತು. ಅದೃಷ್ಟಕ್ಕೆ ಭಾರೀ ನಷ್ಟವೋ ಜೀವನೋವೋ ಆಗಿರಲಿಲ್ಲ. ಮನೆಯೊಳೊಗೆ ಸೇರಿದ್ದ ನೀರನ್ನು ಹಿಂದಿನ ದಿನವೇ ಅಗ್ನಿಶಾಮಕದಳ ಬಂದು ಪಂಪ್ ಮಾಡಿ ನಿವಾರಿಸಿತಂತೆ.

ಒಂದು ಮನೆಯ ಬಾವಿ ಒಳಗಿಂದೊಳಗೇ ಎರಡು ರಿಂಗ್ ಕುಸಿದಿತ್ತು. ಹಾಗೇ ಬಿಟ್ಟರೆ ಅಂಚಿನ ಮಣ್ಣು ಮಗುಚಿ ಬಾವಿ ನಿಗಿದೇ ಹೋದೀತು ಎಂಬ ತುರ್ತಿಗೆ ಅವರು ಹೇಗೋ ಸ್ಪಂದಿಸಿದ್ದು ಕಾಣುತ್ತಿತ್ತು. ಹೊಸ ರಿಂಗ್ ತರಿಸಿ, ಹೇರಿ, ಹೊರ ಅಂಚಿಗೆ ಮರಳು ನಿಗಿದು ಮುಗಿಸಿದ್ದರಷ್ಟೆ. ಆದರೆ ಮನುಷ್ಯ ಉಪಯೋಗಕ್ಕೆ ಮಾತ್ರ ಇನ್ನೂ ಸಮಯ ಬೇಕು. ಆ ವಲಯದ ಸಿಹಿನೀರ ಬಾವಿಗಳೆಲ್ಲ ಉಪ್ಪಾಗಿದ್ದವು. ಕಡಲು ಶಾಂತವಾದ ಮೇಲೆ, ಜನ ಪ್ರತಿ ಬಾವಿಯ ಉಪ್ಪು ನೀರು ಖಾಲಿ ಮಾಡಿ ಹೊಸದೇ ಸಿಹಿನೀರು ಜಿನುಗಿ ತುಂಬುವುದನ್ನು ಕಾಯಬೇಕು. “ಅಲ್ಲಿವರೆಗೆ ಪಂಚಾಯತ್ ಟ್ಯಾಂಕರ್ ವ್ಯವಸ್ಥೆ ಮಾಡೀತು” ಎಂಬ ನನ್ನ ಆಶಯಕ್ಕೆ ತಿರಸ್ಕಾರದ ಮಾತೇ ಸಿಕ್ಕಿತು. “ನಮ್ಮ ಬಹುಕಾಲದ ಕೊಳಾಯಿ ಬೇಡಿಕೆಯನ್ನೇ ಗಣಿಸದ ಸರಕಾರ, ಈಗ – ಅದೂ ಚುನಾವಣಾ ಕಾಲದಲ್ಲಿ, ಒದಗುವುದು ಸುಳ್ಳು! ಒಟ್ಟಾರೆ ನಮ್ಮ ಗ್ರಾಚಾರ…..”

ಬಾವಿ ಇಣುಕಿದೆ. ಬಹುತೇಕ ಮೇಲಂಚಿನವರೆಗೂ ತುಂಬಿದ್ದ ನೀರು ಇನ್ನೂ ಸಮುದ್ರದ ಕಲ್ಲೋಲಕ್ಕೆ ಸ್ಪಂದಿಸುತ್ತಲೇ ಇತ್ತು. ಅದರ ಮೂಲವಾಸಿ ಕಪ್ಪೆ, ಮೀನು ಇನ್ನೂ ಬದುಕಿಯೇ ಇದ್ದದ್ದು ಜೀವಶಾಸ್ತ್ರಿಗಳ ಅಧ್ಯಯನಕ್ಕೆ ವಸ್ತುವಾಗಬಹುದೋ ಏನೋ. ಮನೆಯ ಮಣ್ಣಗೋಡೆ ಒಂದಡಿ ಎತ್ತರಕ್ಕೆ ನೀರಿನಲ್ಲಿ ನೆನೆದಿದ್ದರೂ ಅದೃಷ್ಟವಶಾತ್ ಗಟ್ಟಿಯುಳಿದಿತ್ತು. ತುಸು ಆಚೆ ಬೇರೊಂದು ಸಾಲುಮನೆಯ ಸುತ್ತಣ ತಗ್ಗಿನಲ್ಲಿ ಜಮಾಯಿಸಿದ್ದ ನೀರು ಖಾಲಿ ಮಾಡಲು ಚಾಲೂ ಮಾಡಿದ್ದ ಪಂಪ್ ಇನ್ನೂ ಕೃತಕೃತ್ಯವಾಗಿರಲಿಲ್ಲ.
ಒಂದೆಡೆ ಓಣಿಯೊಂದಕ್ಕೆ ಹೊಸದಾಗಿ ಕಾಂಕ್ರೀಟೀಕರಣ ಮುಗಿದಿತ್ತು. ಅದರ ಉದ್ದಕ್ಕೆ ಸೈಕಲ್ಲೋಡಿಸಿ ರೈಲ್ವೇ ಕೆಳಸೇತು ನೋಡಿ ಮರಳಿದೆ. ಆ ದಾರಿಯ ಪಕ್ಕದಲ್ಲಿದ್ದ ಮಳೆಗಾಲದ ತೋಡು, ಉಕ್ಕಿ ಬಂದ ಸಮುದ್ರದಿಂದ ಒಮ್ಮಿಂದೊಮ್ಮೆಗೆ ಭಾರೀ ಜಲಭಾಗ್ಯ ಕಂಡಿತ್ತು! ಅದರ ಉದ್ದಕ್ಕೆ ಜನ ‘ಸ್ವಚ್ಛ ಭಾರತ’ ಮಾಡಿ ಪೊದರ ಎಡೆ, ಜೊಂಡಿನ ಮರೆ ಎಂದೆಲ್ಲ ಎಸೆಯುತ್ತ ಬಂದ ಅಷ್ಟೂ ಕಸ ಕೊಚ್ಚೆ ಈಗ ಕೆನೆಗಟ್ಟಿ, ಮುಖ್ಯ ರಸ್ತೆಯ ಸೇತುವೆಗೆ ಬೂಚು ಹಾಕಿ, ಸೇಡು ತೀರಿಸುವಂತೆ ತುಂಬಿ ನಿಂತಿತ್ತು. ಆಚೀಚಿನ ಮನೆಯಂಗಳ, ಬಾವಿ, ಕಾಲ್ದಾರಿ ಎಲ್ಲ ಜಲಸಮಾಧಿ! ನಾನು ಸಣ್ಣದಾಗಿ “ಗ್ರಾಮ ಪಂಚಾಯತ್…..” ವಿಚಾರಿಸಲೆಳಸಿದ್ದೆ. ಅಲ್ಲಿನೋರ್ವ ವೃದ್ಧರು ಕೆಂಡವಾಗಿ ಉತ್ತರಿಸಿದರು, “ಇಲ್ಲ, ಯಾವ ಸರ್ಕಾರವೂ ಕೆಲಸ ಮಾಡುದಿಲ್ಲ ಸ್ವಾಮೀ. ನೋಡಿ, ಅಲ್ಲಿ ಸಮುದ್ರದಂಚಿನಲ್ಲಿ ಎರಡು ಜೆಸಿಬಿ ಯಾವ ಉಪಕಾರವಿಲ್ಲದ ಮರಳು ತೋಡಿ, ಬಂಡೆ ಗೋಡೆ ಕೆಲಸ ಮಾಡುತ್ತಲೇ ಇವೆ. ಇಲ್ಲಿ ಸೇತುವೆಯಾಚೆ ಮರಳು ಬಿಡಿಸಿ, ಈ ನೀರು ಹರಿದುಹೋಗುವಂತೆ ಮಾಡುವ ತುರ್ತು ಅವರ ಕಾರ್ಯವ್ಯಾಪ್ತಿಯಲ್ಲಿಲ್ಲ, ಹೇಳಿ ಮಾಡಿಸಬೇಕಾದವರಿಗೆ ತಿಳುವಳಿಕೆ ಇಲ್ಲ, ನಮ್ಮ ಗ್ರಾಚಾರ…..”

ಸೋಮೇಶ್ವರ ವಲಯದಲ್ಲಿ ಪ್ರಾಕೃತಿಕ ಬಂಡೆದಂಡೆ ಇರುವುದರಿಂದ ಉಬ್ಬರದಲೆಗಳು ಒಳನಾಡಿನವರಿಗೆ ಹೆಚ್ಚು ಆತಂಕ ತಂದಂತೆ ಕಾಣಲಿಲ್ಲ. ಉಳ್ಳಾಲದ ಅಳಿವೆಯ ಬಳಿ ಮಾತ್ರ ಅಲೆ ತಾಡನ ಸುಮಾರು ಕೆಲಸ ನಡೆಸಿತ್ತು. ಕೋಟೆಪುರದ ಕಡಲ ತಡೆಗೋಡೆ ಉದ್ದಕ್ಕೂ ಶಿಥಿಲವಾಗಿದೆ. ಸಮುದ್ರವೇ ಕಾಣದಂತಿದ್ದ ಎತ್ತರದ ಗೋಡೆ ಹಲವೆಡೆ ಬಯಲಾಗಿದೆ. ಅವನ್ನೆಲ್ಲ ಮೀರಿ ರಾಚಿದ ತೆರೆಗಳು ಆ ಮಾರ್ಗದುದ್ದಕ್ಕಿರುವ ಮೀನಿನ ಉತ್ಪನ್ನಗಳ ಕಾರ್ಖಾನೆಗಳ ಅಂಗಳದಲ್ಲೆಲ್ಲ ಹರಿದಾಡಿವೆ. ಇದು ಬರಲಿರುವ ಮಳೆಗಾಲದಲ್ಲಿ ಇನ್ನೂ ಹೆಚ್ಚಿನ ತನಿಖೆಗೆ ಬರುತ್ತೇನೆಂದು ಕಡಲು ಕೊಟ್ಟ ‘ಕೆಂಪು ಮೂಲೆಯ ಎಚ್ಚರಿಕೆ ಪತ್ರ’ವೇ ಸರಿ. ಫಲ್ಗುಣಿ-ನೇತ್ರಾವತಿ ಸಂಗಮ ಮತ್ತು ನೇರ ಸಮುದ್ರದ ಮುಖಾಮುಖಿಯ ಕಣದ ಗಡಿ ನಿರ್ಧರಿಸುವ ಕಲ್ಲು, ಕಾಂಕ್ರೀಟ್ ಅಚ್ಚುಗಳ (ಟೆಟ್ರಾಪೋಡ್) ಒಟ್ಟಣೆ ಬಹುಶಃ ಎಂದೂ ಮುಗಿಯದ ಕಾಮಗಾರಿ. (ಸದಾ ಸೋರುವ ಗಾಯವಿದ್ದರೆ ಇಲಾಜಿನ ವೆಚ್ಚ ಅಕ್ಷಯ!) ಅದರ ದುರ್ಬಲ ನಡುವಿನ ಬಳಿ ಎಂದಿನಂತೇ ಎರಡು ದುರುದುಂಡಿಗಳು ಗುರುಗುಟ್ಟುತ್ತ ವ್ಯಾಯಾಮ ನಡೆಸಿದ್ದವು. ಇಷ್ಟರಲ್ಲೇ ಕೆಂಡಾಮಂಡಲವಾಗಿದ್ದ ಸೂರ್ಯನ ತಾಪದಲ್ಲಿ ಅಲ್ಲಿವರೆಗೆ ಸೈಕಲ್ ನೂಕಿ, ನೋಡುವ ಸಾಹಸ ಮಾಡದೆ ಮನೆಗೆ ಮರಳಿದೆ.

ಕಡಲುಬ್ಬರದ ಘಟನೆ ಅತ್ತ ಗೋಕರ್ಣದವರೆಗೂ ನಡೆದಿತ್ತು. ಆದರೆ ಜನ ಹೆದರಿದಂತೆ ಅದು ಎರಡನೇ ದಿನಕ್ಕೆ ಮುಂದುವರಿಯಲಿಲ್ಲ. ನಡೆದಷ್ಟೇ ಸಂಗತಿಗೆ ಇನ್ನೂ ಸ್ವಲ್ಪ ಸಾಕ್ಷಿ ಸೇರಿಸಲು ಇನ್ನೊಂದು ಸಂಜೆ ಸೈಕಲ್ ಏರಿ (೨೬-೪-೧೮, ಸೈಕಲ್ ಸರ್ಕೀಟ್ – ೪೦೨) ಉಡುಪಿ ಹೆದ್ದಾರಿ ಹಿಡಿದೆ. ಕೂಳೂರು ಸಂಕದ ಎಡಮೂಲೆಯಲ್ಲಿ ಎಂಬಂತೆ, ಹೊಸದೇ ವಿಸ್ತಾರ ಕೆಮ್ಮಣ್ಣಿನ ದಾರಿ ಹೆದ್ದಾರಿಯನ್ನು ಸೇರಿತ್ತು. ಇದು ಅತ್ತ ಅಶೋಕಪುರ – ದಂಬೆಲ್ಲಿನಿಂದ ಫಲ್ಗುಣೀ ತೀರದಲ್ಲಿ ಬರುತ್ತಿದ್ದ ಹಳೇ ದಾರಿಯ ಉತ್ತಮೀಕರಣದ ಹೊಸಮುಖ ಮಾತ್ರ. ಇಲ್ಲಿ ಹೊಳೆಯಂಚನ್ನು ಕಾಪಾಡಿಕೊಂಡು ಬಂದಿದ್ದ ಕಾಂಡ್ಲಾವನನ್ನು ಈಗ ‘ಅಭಿವೃದ್ಧಿ’ ಪೂರ್ಣ ತಿಂದು ಮುಗಿಸಿತ್ತು. ಇನ್ನು ಮಳೆಗಾಲದಲ್ಲಿ ನೆರೆಯುಕ್ಕಿದರೆ ‘ದಾರಿ ಉಳಿಸುವ’ ಹೆಸರಿನಲ್ಲಿ ಇಲ್ಲೂ ಕಾಂಕ್ರೀಟ್ ಗೋಡೆ ಯೋಜನೆ ಹೊಸೆಯಬಹುದಲ್ಲ. ಬಸ್ಸು ಕಾಯುವವರಿಗೆ ಭಾರೀ ನೆರಳು ಕೊಡುತ್ತಿದ್ದ ಮರವನ್ನು ಕಡಿದುರುಳಿಸಿ, ಕೊಯ್ದು, ಕತ್ತರಿಸಿ, ಕೀಸಿ, ಬಡಿದು, ಅರೆ ಹುಗಿದು ‘ಬಸ್ ಶೆಲ್ಟರ್’ ಕಟ್ಟುವ ಚಿತ್ರ ನೆನಪಿಗೆ ಬಂತು 🙁

ಕೂಳೂರು ಸಂಕ ದಾಟಿದ ಮೇಲೆ ಬೆಂಗ್ರೆಯತ್ತ ಹೊರಳಿದೆ. ಆಯಿಲ್ ಜೆಟ್ಟಿಗಳ ಕೊನೆಯಲ್ಲಿ, ಅಂದರೆ ತಣ್ಣೀರುಬಾವಿಯ ಅತಿಥಿಗೃಹದ ಹಿಂದೆ, ಬಲು ಎತ್ತರಕ್ಕೆ ನಗರದ ಹಾಳುಮೂಳಿನ ಮಣ್ಣು ಹೇರುತ್ತಿದ್ದದ್ದನ್ನು ಹಿಂದೆಯೇ ಹೇಳಿದ್ದೆ. ನನ್ನ ಹುಡುಕುನೋಟವನ್ನು ಮೊದಲು ಅಲ್ಲಿ ಬೀರಿದೆ. ಆ ದಿಬ್ಬ ತುಂಬಾ ಜಗ್ಗಿತ್ತು, ಕೊರೆದುಹೋಗಿತ್ತು. ಇತ್ತ ನವಮಂಗಳೂರು ಬಂದರಿನ ತೆರೆಗಟ್ಟೆಯಿಂದ ಅತ್ತ ನೇತ್ರಾವತಿ ಅಳಿವೆಯಂಚಿನ ತಡೆಗೋಡೆಯವರೆಗೂ ಹಿಂದೆ ಕಾಣುತ್ತಿದ್ದ ವಿಸ್ತಾರ ಮರಳ ದಂಡೆ ಸಪುರವಾದ್ದಲ್ಲದೆ, ಜಗ್ಗಿದಂತೆಯೂ ಕಾಣಿಸಿತು. ಉಳ್ಳಾಲದಂಡೆಯಲ್ಲಿ ಮಾಡಿದಂತೆ ಇಲ್ಲೂ ಕಿಮೀಯುದ್ದಕ್ಕೆ ಕಾಂಕ್ರೀಟ್ ಅಚ್ಚು, ಬಂಡೆತುಂಡುಗಳನ್ನು ಒಟ್ಟಿ ನದಿಯ ಬಾಯಿಬಲಪಡಿಸಿದ್ದು ನೀವೆಲ್ಲ ಕಂಡೇ ಇದ್ದೀರಿ. (ಇದನ್ನೇ ಅಭಯ ಪಡ್ಡಾಯಿ ಸಿನಿಮಾದಲ್ಲಿ ‘ಮುಂಬೈ’ ಮಾಡಿಕೊಂಡಿದ್ದ) ಅದೂ ಈಗ ಭಾರೀ ಜಗ್ಗಿಹೋಗಿದೆ. ಅಷ್ಟು ಬಿಟ್ಟು, ಉಬ್ಬರದಲೆಗಳು ಎಲ್ಲೂ (ಮುಖ್ಯವಾಗಿ ಬೆಂಗರೆಯಲ್ಲಿ) ಒಳನಾಡಿಗೆ ಮಗುಚಲಿಲ್ಲವಂತೆ.

ಬೆಂಗ್ರೆಯ ಕುದುರಿನಲ್ಲಾದರೂ ವ್ಯತ್ಯಾಸಗಳು ಆಗಿರಬಹುದಲ್ಲ ಎಂದು ಅಲ್ಲೂ ಒಂದು ಸುತ್ತು ಹಾಕಿದೆ. ಇಲ್ಲ, ಅಲ್ಲೂ ಏನಾಗಿರಲಿಲ್ಲ. ಆಮೇಲೆ ಹೊಳೆಯಿತು, ಮಳೆಗಾಲದಲ್ಲಿ ತೊರೆ ನದಿಗಳಿಗೆ ಸ್ವಂತದ ನೀರಹೊರೆ ಇರುತ್ತದೆ. ಸಮುದ್ರ ಅದನ್ನಿಳಿಸಿಕೊಳ್ಳುವುದು ಬಿಟ್ಟು, ಭರಪೂರ ಗಾಳಿ, ಎದುರು ತೆರೆಗಳನ್ನಿಟ್ಟರೆ ಕಟ್ಟೆ ಕಟ್ಟಿದ್ದೇ ಪರಿಣಾಮವಾಗುತ್ತದೆ. ಸಹಜವಾಗಿ ಒಳನಾಡಿನಲ್ಲಿ ನೆರೆಯುಕ್ಕುತ್ತದೆ. ಆದರೆ ಈ ಬಾರಿ ಜಲಾನಯನ ಪ್ರದೇಶಗಳಲ್ಲಿ ಗಣನೀಯ ಮಳೆಯಾಗಿಲ್ಲ. ನದಿ ತೊರೆಗಳು ಬಹುತೇಕ ಬತ್ತಿಯೇ ಹೋಗಿವೆ. ಹಾಗಾಗಿ ಅಳಿವೆ ಮೂಲಕ ಒಳನಾಡಿನತ್ತ ಹರಿದ ಅಷ್ಟೂ ನೀರು ಸೊರಗಿದ ತೊರೆಪಾತ್ರೆಯನ್ನಷ್ಟೇ ಒಮ್ಮೆಗೆ ತುಂಬಿದವು, ಕಾಲಸಂದಂತೇ ತಗ್ಗಿದವು.

ಹೋದ ಲೆಕ್ಕ ಭರ್ತಿಯಾಗುವಂತೆ ಬೆಂಗ್ರೆಗೆ ಒಂದು ಸುತ್ತು ಹಾಕಿ, ಮನೆಯತ್ತ ಪೆಡಲುತ್ತಿದ್ದಂತೆ ನೆನಪಿನ ರೀಲು ಬಿಚ್ಚಿಕೊಂಡಿತು. ಮೊನ್ನೆ ‘ಪಡ್ಡಾಯಿ’ ಸಿನಿಮಾ ವೀಕ್ಷಣೆಗೆ ಉಚ್ಚಿಲದ ರವೀಂದ್ರನಾಥ್ ಕೂಡಾ ಬಂದಿದ್ದರು. ಇವರು ಈ ವಲಯದ ಕಡಲು, ಮೀನುಗಾರಿಕೆಯ ವಿಶ್ವಕೋಶದಂತೇ ಇರುವ ದಿನೇಶ್ ಉಚ್ಚಿಲ/ ಉದ್ಯಾವರ ಇವರ ಸೋದರಳಿಯ. ಈ ಉಬ್ಬರದ ಅಲೆಗಳ ಮಾತು ಬಂದಾಗ ರವಿ ವಿಷಾದದಲ್ಲೇ ಹೇಳಿದ್ದರು, “ಆಶ್ಚರ್ಯವೇನೂ ಇಲ್ಲ ಸಾರ್! ನನ್ನ ಬಾಲ್ಯದಲ್ಲಿ ಅಲೆಗಳು ಇನ್ನೂ ಪೂರ್ವಕ್ಕೆ, ಅಂದರೆ ಕೋಟೆ ವಿಷ್ಣು ದೇವಳ ದಿಬ್ಬಕ್ಕೇ ಬಡಿಯುತ್ತಿದ್ದವು. ಕಡಲು ಎಷ್ಟೋ ವರ್ಷಗಳ ಆವರ್ತದಲ್ಲಿ ಹಿಂದೆ, ಮುಂದೆ ಸರಿಯುವುದಿದೆ. ಹಾಗೆ ಅದು ಬಿಟ್ಟಂತೆ ಕಂಡ ನೆಲವನ್ನು ‘ನಮ್ಮದು’ ಮಾಡಿಕೊಂಡವರು, ಈಗ ‘ಬಿಟ್ಟುಕೊಡುವ’ ಸಂಕಟ ಅನುಭವಿಸಲೇಬೇಕು.” ಈ ಮಾತು ಅಭಿವೃದ್ಧಿಯ ಹೆಸರಿನಲ್ಲಿ, ಐಶರಾಮದ ಹೆಸರಿನಲ್ಲಿ ಫಲ್ಗುಣಿ ನದೀಪಾತ್ರವನ್ನೇ ಒತ್ತುವರಿ ಮಾಡುತ್ತಿರುವವರೂ ಕೇಳಿಸಿಕೊಂಡರೆ, ಭವಿಷ್ಯದಲ್ಲಿ ಇನ್ನಷ್ಟು ದುಃಖ ಕಡಿಮೆಯಾಗಲಾರದೇ?