(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ – ೫)

ಆರು ಗಂಟೆಯ ಯಕ್ಷಗಾನ, ನೂರು ಮಿನಿಟಿನ ಸಿನಿಮಾದೊಳಗೆ?!

‘ಪಡ್ಡಾಯಿ’ ಸಿನಿಮಾವನ್ನು ಪೂರ್ಣ ಆವರಿಸಿದ ಕಡಲು ಮತ್ತು ಮೀನುಗಾರಿಕೆ ಪ್ರಥಮದಲ್ಲೇ ಇದನ್ನು ಕರಾವಳಿಯ ಪ್ರತಿನಿಧಿ ಎಂದೇ ಸ್ಥಾಪಿಸುತ್ತದೆ. ಅದಲ್ಲದೆ ಪ್ರಾದೇಶಿಕತೆಯ ಹೆಚ್ಚಿನ ಮುದ್ರೆ ಒತ್ತಲು ಚಿತ್ರದಲ್ಲಿ ಬಳಸಿಕೊಂಡ ಇನ್ನೆರಡು ಬಹುಶಕ್ತ ಅಂಶಗಳು – ಭೂತಾರಾಧನೆ ಮತ್ತು ಯಕ್ಷಗಾನ. ಭೂತಾರಾಧನೆ ನೇರ ಕಥಾನಕದ ಭಾಗವಾಗಿಯೇ ಸೇರಿದೆ.

ಯಕ್ಷಗಾನ ಚಿತ್ರದ ಘಟನಾವಳಿಗಳಿಗೆ ಸಾಮಾಜಿಕ ಪ್ರಕ್ರಿಯೆಯಾಗಿಯೂ ಆ ಸಮಾಜದ ಸಾಂಸ್ಕೃತಿಕ ಚಟುವಟಿಕೆಯಾಗಿಯೂ ಪ್ರತ್ಯಕ್ಷ ದುಡಿಮೆ ಕೊಡುತ್ತದೆ. ಮುಂದುವರಿದು, ಪ್ರದರ್ಶಿತ ಯಕ್ಷ-ಪ್ರಸಂಗಗಳು ಚಿತ್ರ ಕಥೆಗೆ ಸಮಭುಜವಾಗಿ, ಮೌಲ್ಯಗಳ ಸಾರ್ವಕಾಲೀನತೆಯನ್ನು ಸಾರುತ್ತವೆ. ಇದು ಪರೋಕ್ಷವಾಗಿ ಚಿತ್ರಕ್ಕೆ ಕೊಡುವ ಅರ್ಥವ್ಯಾಪ್ತಿ ಬಹು ದೊಡ್ಡದು. ಈ ವಿಚಾರದಲ್ಲಿ ಚಿತ್ರೀಕರಣಕ್ಕೂ ಮೊದಲೇ ಮಂತ್ರಾಲೋಚನೆಗೆ ಗಟ್ಟಿಯಾಗಿ ಒದಗಿದವರು ಪೃಥ್ವೀರಾಜ್ ಕವತ್ತಾರು. (ನೋಡಿ: ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು) ಯಾವುದೇ ಪ್ರಸಂಗದ ತುಣುಕಿರಲಿ, ಸಮರ್ಥವಾಗಿ ರಂಗಾಭಿವ್ಯಕ್ತಿ ಕೊಡುವ ಸವಾಲ್ ಸ್ವೀಕರಿಸಿದವರು ಅನುಭವೀ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಹಿರಿಯ ಮೂರು ನಾಲ್ಕು ವೇಷಧಾರಿಗಳು. ಚೌಕಿಪೂಜೆ (ಯೋಜನೆಗೆ ಶುಭಹಾರೈಕೆ), ಮಹಾಭಾರತ ಯುದ್ಧನಾಂದಿಯ ಕೃಷ್ಣಾರ್ಜುನ ಸಂವಾದದ ಭಾಗ (ಮನಸ್ಸಿನ ದ್ವಂದ್ವಕ್ಕೆ ಪರಿಹಾರ), ಅಶ್ವತ್ಥಾಮ ನಡೆಸುವ ‘ರಕ್ತರಾತ್ರಿ’ಯ ಭಾಗ (ಕ್ರೌರ್ಯ), ಮತ್ತು ದುಶ್ಶಾಸನವಧೆಯ ಭೀಮನ ಆವೇಶದ ಭಾಗಗಳನ್ನು (ಮತ್ತೆ ಕ್ರೌರ್ಯ) ಚಿತ್ರಿಸಿಕೊಂಡಿದ್ದರು. ಪುರಾಣದಿಂದ (ಮಹಾಭಾರತ) ತೊಡಗಿ, ಇತಿಹಾಸವನ್ನು (ಮ್ಯಾಕ್ಬೆತ್) ಹಾಯ್ದು, ವರ್ತಮಾನದಲ್ಲೂ (ಪಡ್ಡಾಯಿ) ಮೆರೆಯುವ ಮನುಷ್ಯ ಸ್ವಭಾವಗಳು ದೇಶ ಕಾಲಾತೀತ ಎಂದು ಸಾರುವಲ್ಲಿ ಯಕ್ಷಗಾನದ ಕೊಡುಗೆ ಅನುಪಮ ಎಂದೂ ಪಡ್ಡಾಯಿ ಸಾರುವಂತಿದೆ.

ಒಟ್ಟು ಯಕ್ಷಗಾನದ ಚಿತ್ರೀಕರಣ ಎರಡೋ ಮೂರೋ ದಿನ ನಡೆದಿರಬೇಕು. ಅದರಲ್ಲಿ ಪ್ರಸಂಗ ತುಣುಕುಗಳ ಅಭಿನಯದ ಚಿತ್ರೀಕರಣ ನಡೆದ ಒಂದು ದಿನ ಮಾತ್ರ ನಾನು ಸಾಕ್ಷಿ ಹಾಕಿದ್ದೆ. ಅದು ಚಿತ್ರೀಕರಣದ ಅನುಕೂಲಕ್ಕೆ ತಕ್ಕಂತೆ ತುಂಡು ತುಂಡಾಗಿ ಹೆಚ್ಚು ಕಡಿಮೆ ಆರೇಳು ಗಂಟೆಗಳ ಕಾಲವೇ ನಡೆದಿತ್ತು. ಆದರೆ ಈಗ ಬೆಳ್ಳಿತೆರೆಯ ಮೇಲೆ ಪಡ್ಡಾಯಿಯ ಪ್ರದರ್ಶನಾವಧಿ ನೂರು ಮಿನಿಟಿನದು. ಅದರಲ್ಲಿ ಯಕ್ಷಗಾನ ದಕ್ಕಿಸಿಕೊಂಡ ಪ್ರದರ್ಶನಾವಕಾಶ ಅದೆಷ್ಟು ಸಂಕೀರ್ಣ ಮತ್ತು ಪರಿಣಾಮಕಾರಿ ಎಂಬುದನ್ನು ಚಿತ್ರ ನೋಡಿಯೇ ಅನುಭವಿಸಬೇಕು.

ಮತ್ಸ್ಯಗಂಧಿಗೆ ಯೋಜನಗಂಧಿತ್ವದ ಶಾಪ

ಮಹಾಭಾರತದ ಮಹಾಮಾತೆ ಸತ್ಯವತಿ ಕುಲವೃತ್ತಿಯಲ್ಲಿ ಮೀನವಾಸನೆಯವಳು (ಮತ್ಸ್ಯಗಂಧಿ). ಪರಾಶರ ಮುನಿಯ ಸಂಸರ್ಗದ ಆಕಸ್ಮಿಕದಿಂದ ಈಕೆ ಸುವಾಸನೆಯನ್ನು (ಯೋಜನಗಂಧಿ) ವರವಾಗಿ ಪಡೆಯುತ್ತಾಳೆ. ಇದು ಪರಿಣಾಮದಲ್ಲಿ ಆಕೆಯ ಜೀವನಶೈಲಿಯನ್ನು ಉನ್ನತ ಸ್ತರಕ್ಕೇರಿಸಿದಂತೆ ತೋರುವ ಶಾಪವಾಗುತ್ತದೆ. ಈ ವಾಸನಾಪಲ್ಲಟ ಮಹಾಭಾರತ ದುರಂತದ ಆದಿಬಿಂದುವೆಂದೇ ಹೇಳಿದರೆ ತಪ್ಪಾಗದು.

ಪುರಾಣ ಕಾಲಮಾನವನ್ನೇ ಮುಂದುವರಿಸಿದರೆ, ಯುಗ ಬದಲಿದ ಮೇಲೂ (ದ್ವಾಪರದಿಂದ ಕಲಿಗೆ) ಆಕಸ್ಮಿಕದ ವಾಸನಾಪಲ್ಲಟ, ವ್ಯಕ್ತಿ ಉನ್ನತಿಕೆಗೆ ತತ್ಕಾಲೀನ ಸೂಚನೆ ಮಾತ್ರ. ಪಡ್ಡಾಯಿಯಲ್ಲಿ ‘ಸಿರಿವಂತಿಕೆ’ಯ ವಾಸನೆಯ ಬೆನ್ನು ಹಿಡಿದ ಸುಗಂಧಿ (ಬಿಂದು ರಕ್ಷಿದಿ), ಸ್ವಂತ ಮನೋವಿಕಲ್ಪಗಳಲ್ಲಿ ಭವ್ಯ ಭವಿಷ್ಯವನ್ನೇ ಕಲ್ಪಿಸಿಕೊಳ್ಳುತ್ತ, ಅದನ್ನು ನಿಜವಾಗಿಸಲು ಪ್ರಯತ್ನಿಸುತ್ತ, (ಮಹಾಭಾರತದಂತೇ) ಸರ್ವನಾಶ ಕಾಣುವುದು ಒಂದು ಪ್ರಬಲ ಅಂತಃವಾಹಿನಿಯಾಗಿಯೇ ಮೂಡಿದೆ!

ಶೇಕ್ಸ್‍ಪಿಯರ್ ಮ್ಯಾಕ್ಬೆತ್ತಿನಲ್ಲಿ ರಂಗವಾಸ್ತವವನ್ನು ಮರೆಯದೆ, ‘ರಕ್ತದ ವಾಸನೆ’ ಮತ್ತು ‘ಅರೇಬಿಯಾದ ಸುಗಂಧದ್ರವ್ಯ’ಗಳ ಮಾತನ್ನಷ್ಟೇ ತರುತ್ತಾನೆ. ‘ಪಡ್ಡಾಯಿ’ಯಲ್ಲಿ ಸಿನಿಮಾವಾಸ್ತವದ ಬಲದಿಂದ ವಾಸನಾವೈವಿಧ್ಯ, ರಕ್ತಸಿಕ್ತ ಹಸ್ತದ ಭ್ರಮೆ ಕಾಣಿಸುವುದೂ ಸಾಧ್ಯವಾಗಿದೆ. ಇದು ‘ಪಡ್ಡಾಯಿ’ಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ.

ಅಯ್ಯೋ ತುಳು ನಂಗ್ ಬರಲ್ವಲ್ಲಾ… (‘ಪಡ್ಡಾಯಿ’ಗದು ಅಡ್ಡಿಯಲ್ಲಾ!)

‘ಪಡ್ಡಾಯಿ’ ಚಿತ್ರಕತೆಯ ಭಾಷಾಪರಿಷ್ಕರಣದ ಕುರಿತ ನನ್ನ ಟಿಪ್ಪಣಿ ನಿಮಗೆ ತಿಳಿದೇ ಇದೆ (ಇಲ್ಲದವರು ಈಗಲೂ ಓದಿಕೊಳ್ಳಬಹುದು: ಪಡ್ಡಾಯಿ, ಹೊಸ ತುಳು ಸಿನಿಮಾದುದ್ದಕ್ಕೆ…..). ಕಡಲಿನ ಬಹುತೇಕ ನಿರಂತರ ಮೊರೆತದಲ್ಲಿ ಮನುಷ್ಯ ಸದ್ದುಗಳಿಗೆ, ಮುಖ್ಯವಾಗಿ ಭಾಷೆಗೆ, ನಾವು ಭ್ರಮಿಸಿದ ಮಹತ್ತ್ವ ಮತ್ತೆ ಸಾಹಿತ್ಯಿಕ ಮಡಿಯೂ ಇಲ್ಲ. ಪಡ್ಡಾಯಿಯಲ್ಲಿ ಒಟ್ಟಾರೆ ಮಾತುಗಳು ತುಂಬಾ ಕಡಿಮೆಯೇ ಇವೆ. (ಮನಸೋರೆಯವರು ತುಂಬ ಚೆನ್ನಾಗಿ ಹೇಳಿದಂತೆ, ಇದು “ರೂಪಕಗಳ ಜುಗಲ್‍ಬಂಧಿ”) ಮಾತು ಇದ್ದಲ್ಲೂ ತುಳು ಬಾರದವರೂ ಸ್ವತಂತ್ರವಾಗಿ ಸನ್ನಿವೇಶ ಮತ್ತು ದೃಶ್ಯಕ್ಕೆ ಸುಂದರ ಅರ್ಥ ಕಟ್ಟುವಲ್ಲಿ ದೃಶ್ಯದ ಜತೆ ಬರುವ ಮುದ್ರಿತ ಇಂಗ್ಲಿಷ್ ಅನುವಾದ ನಿಸ್ಸಂದೇಹವಾಗಿ ಸಹಕರಿಸುತ್ತದೆ. ವರ್ಗೀಕರಣದ ಅನುಕೂಲಕ್ಕೆ ‘ಕಥಾಚಿತ್ರ’ ಎಂದರೂ ಒಳ್ಳೆಯ ಸಿನಿಮಾ ಬರಿಯ ಕತೆ ಹೇಳುವುದರಲ್ಲಿ ನಿಲ್ಲುವುದಿಲ್ಲ. ಇದನ್ನು ಸಮರ್ಥಿಸುವಂತೆ ಪಡ್ಡಾಯಿಯಲ್ಲಿ ಏನೂ ಮಾತಿಲ್ಲದ ಎರಡು ಪೋಷಕ ಪಾತ್ರಗಳು ಬರುವುದು ಗಮನೀಯ. ಪಡ್ಡಾಯಿಗೆ ಪ್ರೇರಕ ನಾಟಕವಾದ ಮಾಕ್ಬೆತ್‍ನಲ್ಲಿ ಇಲ್ಲದ ‘ರಾಣಿ’ (ವಾಣಿ ಪೆರಿಯೋಡಿ) ಇಲ್ಲಿ ಇದ್ದೂ ಮೂಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಆ ವಿಕಲಚೇತನದ ಮುಖಭಾವ ನಿಸ್ಸಂದೇಹವಾಗಿ ಪ್ರೇಕ್ಷಕನ ಅರ್ಥವಿಸ್ತರಣೆಗೆ ಬಹುದೊಡ್ಡ ಕೊಡುಗೆ.

ಮ್ಯಾಕ್ಬೆತ್ತಿನಲ್ಲಿ ಮಹತ್ತರ ಘಟನೆಗಳ ಮುನ್ನುಡಿಯುವ ಅಥವಾ ಅವಕ್ಕೆ ಪ್ರೇರಕ ಶಕ್ತಿಯಾಗಿಯೇ ಕಾಣಿಸುವ ಮೂವರು ಮಾಟಗಾತಿಯರಿದ್ದಾರೆ. ಆ ಬಾಹ್ಯ ಶಕ್ತಿ, ಪರೋಕ್ಷವಾಗಿ ಒಟ್ಟು ಕತೆಯನ್ನೇ ಗ್ರಹಿಸುತ್ತವೆ ಎಂದರೆ ತಪ್ಪಾಗದು. ಪಡ್ಡಾಯಿಯ ಅಲೌಕಿಕ ಶಕ್ತಿ (ದೈವಾರಾಧನೆಯ ಭಾಗವಾದ ಭೂತ) ಅಷ್ಟು ಅನ್ಯವಲ್ಲ; ಸಾಂಸ್ಕೃತಿಕ ಭಾಗವೇ ಆಗಿದೆ. ಹಾಗಾಗಿ ‘ಕತೆ’ಗೆ ಬೇಕಾದಲ್ಲಿ ದೈವದ ಕಣಿ ವಾಸ್ತವವಲ್ಲ, ಪಾತ್ರದ ಕಲ್ಪನೆ ಎನ್ನುವುದನ್ನು ಚಿತ್ರ ಸ್ಪಷ್ಟವಾಗಿ ಕಾಣಿಸುತ್ತದೆ. ವಾಸ್ತವದ ನೆಲೆಯಲ್ಲಿ ಘಟನೆಗಳನ್ನು ಗ್ರಹಿಸುವ ಕಣ್ಣಾಗಿ, ಘಟನಾಸರಣಿಯ ಭಾಗವಾಗಿಯೇ ಮೂಡಿ ಬಂದ ಪಾತ್ರ – ಐತ (ಪ್ರಭಾಕರ ಕಾಪೀಕಾಡ್). ಈತ ಮೂಕನಲ್ಲ, ಆದರೆ ಸಿನಿಮಾದುದ್ದಕ್ಕೆ ಇವನಿಗೆ ಮಾತೂ ಇಲ್ಲ. ಹೀಗೆ ಮಾತು ಮೀರಿದ ಧಾತು ಇರುವುದಕ್ಕೇ ಪಡ್ಡಾಯಿ ಭಾಷೆಯನ್ನು ಮೀರಿ ನಿಲ್ಲುತ್ತದೆ.

‘ಪಡ್ಡಾಯಿ’ ಚಿತ್ರದ ಹೊರಗೊಂದು ಮೋಜಿನ ‘ಪಾಲುಗಾರಿಕೆ’

‘ಪಡ್ಡಾಯಿ’ಯ ಸರ್ವಪ್ರಥಮ ಸಾರ್ವಜನಿಕ ಪ್ರದರ್ಶನ ನಡೆದದ್ದು (ಮೊದಲು ಬಲೆ ಬೀಸಿದ್ದು) ಬೆಂಗಳೂರು ಚಿತ್ರೋತ್ಸವದಲ್ಲಿ. ಅದಕ್ಕೋಸ್ಕರ ನಾನು ದೇವಕಿ ಬೆಂಗಳೂರಿಸಿದ್ದೆವು, ನೋಡಿ ಸಂತೋಷಪಟ್ಟೆವು. ಅಭಯನ ಹೆಂಡತಿ – ರಶ್ಮಿ, ಚಿತ್ರದ ಸಂಸ್ಕರಣದ ಸ್ಥಿತಿಯಲ್ಲಿ ಮನೆಯ ಗಣಕದ ಪರದೆಯ ಮೇಲೆ ಸಾಕಷ್ಟು ನೋಡಿದ್ದರೂ ದೊಡ್ಡ ಪರದೆಯ ಮೇಲೆ ನೋಡುವ ಮತ್ತು ಉದ್ದೇಶಿತ ಧ್ವನಿಯಲ್ಲಿ ಕಿವಿ ತುಂಬಿಕೊಳ್ಳುವ, ಎಲ್ಲಕ್ಕೂ ಮುಖ್ಯವಾಗಿ ಅಭಯನ ಸಾರ್ವಜನಿಕ ಸಂಭ್ರಮದಲ್ಲಿ ಜತೆಗೊಡುವ ಬಯಕೆ ಆತನ ಹೆಂಡತಿ ರಶ್ಮಿಗೆ ಧಾರಾಳ ಇತ್ತು. ಆದರೆ ಒಂದೂವರೆ ವರ್ಷದ ಕೂಸು ಆಭಾಳ ಚೇತನಕ್ಕೆ, ಎಚ್ಚರದಲ್ಲಿರುವಾಗ ಎರಡು ಮಿನಿಟೂ ತಣ್ಣಗೆ ಕೂರುವ ಅಭ್ಯಾಸವೇ ಇಲ್ಲ. ಹಾಗೆಂದು ಅಮ್ಮನ ಸಾಮೀಪ್ಯ ಹೆಚ್ಚು ಕಾಲ ಬಿಟ್ಟಿರುವುದೂ ಅದಕ್ಕೆ ಅಸಾಧ್ಯವೂ ಇತ್ತು. ಮತ್ತೆ ಬೆಂಗಳೂರಿನಲ್ಲಿ ಮನೆಯಿಂದ ಚಿತ್ರಮಂದಿರದ ಅಂತರ, ಚಿತ್ರೋತ್ಸವದ ಔಪಚಾರಿಕ ವಿಧಿಗಳ ನಿಭಾವಣೆಗೆ ಬೇಕಾದ ಐದಾರು ಗಂಟೆಗಳ ಕಾಲ, ನಮ್ಮಿಬ್ಬರಿಗೆ ಆಭಾಳನ್ನು ಮನೆಯಲ್ಲಿ ಸಂತೋಷದಲ್ಲಿ ಹಿಡಿದಿಡುವುದು ಕಷ್ಟವೇ ಇತ್ತು; ಪ್ರಯತ್ನಿಸಲೇ ಇಲ್ಲ. ಆದರೆ…. ಈಚೆಗೆ ಅಭಯನ ಕುಟುಂಬ ಮಂಗಳೂರಿಗೆ ಬಂದಿತ್ತು. ಮತ್ತು ಅದನ್ನು ಹೊಂದಿಸಿಕೊಂಡೇ (೨೩-೪-೧೮) ‘ಪಡ್ಡಾಯಿ’ಯ ಒಂದು ವಿಶೇಷ ಮತ್ತು ಉಚಿತ ಪ್ರದರ್ಶನವನ್ನು ಮಂಗಳೂರಿನ ಪತ್ರಕರ್ತರು ಮತ್ತು ಆಮಂತ್ರಿತ ಗಣ್ಯರಿಗಾಗಿ ಬಿಗ್ ಸಿನೆಮಾಸಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮೀನುಗಾರಿಕೆ ಭಾಷೆಯಲ್ಲಿ ಹೇಳುವುದಾದರೆ ಇದು ಸಿನಿಮಾದ ‘ಬಲೆ’ಗೆ ಬೀಳುತ್ತಿರುವ ಎರಡನೇ ಕೊಳ್ಳೆ. ಮುಂದುವರಿದಂತೆ ದಿನೇಶ ಉಚ್ಚಿಲರ (ನೋಡಿ: ಕಡಲ ಗುಳಿಗೆ ದಿನೇಶ ಉಚ್ಚಿಲ) ಮಾತೂ ನೆನಪಾಯ್ತು. “ಹಿಂದೆಲ್ಲ ಕಡಲಿಗೆ ಹೋಗುವಾಗ ಮೀನುಗಾರಿಕೆಗೆ ಜತೆಗೊಟ್ಟವರಿಗೆ ಸಂಬಳವಿರಲಿಲ್ಲ. ಬದಲು ಒಟ್ಟು ಹಿಡಿದ ಮೀನರಾಶಿಯಲ್ಲಿ ಪೂರ್ವ ನಿರ್ಧರಿತ ಕ್ರಮದಂತೆ ಪಾಲು ಕೊಟ್ಟರಾಯ್ತು. ದೋಣಿಗಿಷ್ಟು, ಬಲೆಗಿಷ್ಟು, ಡೀಸೆಲ್ ಮುಂತಾದ ಖರ್ಚುಗಳಿಗಿಷ್ಟು ಎಂಬಂತೆ ಪ್ರತಿ ವ್ಯಕ್ತಿಗೂ ಪಾಲು…..” ಅದನ್ನೇ ಪಡ್ಡಾಯಿ ವೀಕ್ಷಣೆಗೆ ಅನ್ವಯಿಸಿಕೊಂಡೆವು. ಚಿತ್ರ ಮಂದಿರದಲ್ಲಿ ಪ್ರದರ್ಶನಪೂರ್ವ ಸಂಭ್ರಮದ ಕಾಲವೆಲ್ಲ ನಾನು, ದೇವಕಿಯೂ ಥಿಯೇಟರಿನ ಆವರಣದಲ್ಲೇ ‘ಪುಳ್ಳಿ ಸುಧಾರಣೆ’ ನಡೆಸಿ, ರಶ್ಮಿಗೆ ‘ಸ್ವಾತಂತ್ರ್ಯ’ ಕಲ್ಪಿಸಿದ್ದೆವು. ಅನಂತರ ಪ್ರದರ್ಶನ ಅವಧಿಯ ನೂರು ಮಿನಿಟು, ಅದೂ ಕತ್ತಲಕೋಣೆಯಲ್ಲಿ ಆಭಾಳನ್ನು ಕೂರಿಸಿಕೊಳ್ಳುವ ಸಾಹಸ ಮಾಡದೇ ನಾನೂ ದೇವಕಿಯೂ ಮನೆಗೆ ಮರಳಿದೆವು. ಇಲ್ಲಿ ಚಿತ್ರ ಮುಗಿದ ಮೇಲೆ ಒಂದೇ ಕಿಮೀ ಅಂತರದಲ್ಲಿರುವ ನಮ್ಮ ಮನೆಗೆ ಮರಳುವುದು ರಶ್ಮಿಗೊಂದು ಸಮಸ್ಯೆಯೇ ಅಲ್ಲ. ಹೀಗೆ ಚಿತ್ರವೀಕ್ಷಣೆ ಎಂಬ ಮಾನಸಿಕ ‘ಕೊಳ್ಳೆ’ಯಲ್ಲಿ ರಶ್ಮಿ ಸಮಪಾಲು ದಕ್ಕಿಸಿಕೊಂಡದ್ದು ನಮಗೊಂದು ಖಾಸಗಿ ಮೋಜೂ ಆಗಿತ್ತು.

[ವಿ.ಸೂ: ಇಂದು ಸಂಜೆ ದಿಲ್ಲಿಯಲ್ಲಿ ‘ಪಡ್ಡಾಯಿ’ಗೆ ರಾಷ್ಟ್ರ ಪ್ರಶಸ್ತಿ ಪ್ರದಾನ. ಸ್ವೀಕರಿಸಲು ನಿನ್ನೆಯೇ ನಿರ್ಮಾಪಕನ ನೆಲೆಯಲ್ಲಿ ನಿತ್ಯಾನಂದ ಪೈ ಮತ್ತು ನಿರ್ದೇಶಕನ ನೆಲೆಯಲ್ಲಿ ಅಭಯಸಿಂಹ ಹೋಗಿದ್ದಾರೆ. ಪ್ರಾದೇಶಿಕದ ನೆಲೆಯಲ್ಲಿ ರಾಷ್ಟ್ರೀಯವನ್ನು ವ್ಯಾಪಿಸಿದ ಪಡ್ಡಾಯಿಗೂ ನನ್ನ ಪ್ರಸ್ತುತ ಬರಹದ ಶೀರ್ಷಿಕೆಗೆ ಅನ್ವಯಿಸುತ್ತದಲ್ಲವೇ?!]