ದಿನವಿಡೀ ಭೋರ್ಗುಟ್ಟುತ್ತಿತ್ತು ಮಳೆ, ಸಹಜವಾಗಿ ೭-೭-೧೮ರ ಸಂಜೆ ಡಾನ್ ಬಾಸ್ಕೋ ಸಭಾಂಗಣ ಪ್ರೇಕ್ಷಾವೃಂದದ ಕೊರತೆಯಲ್ಲಿ ಸೊರಗಿತ್ತು. ಆದರೇನು ಆ ಸಂಜೆಯ (ನಾಲ್ಕರಿಂದ ಸುಮಾರು ಎಂಟು ಗಂಟೆಯವರೆಗೆ) ಕಲಾಪದ ಪ್ರಧಾನ ಕಣ್ಮಣಿಯಾಗಿ, ಸಮ್ಮಾನಿತರಾಗಲಿದ್ದ, ಸುದೂರದ ಜಪಾನಿನ ಪ್ರೊ| ಸುಮಿಯೋ ಮೊರಿಜಿರಿ, ಸಪತ್ನೀಕರಾಗಿ ಸಕಾಲದಲ್ಲಿ ಬಂದಿದ್ದರು. ಅಧ್ಯಕ್ಷತೆ ವಹಿಸಲಿದ್ದ ಪ್ರೊ| ಬಿ.ಎ. ವಿವೇಕ ರೈ, ಸಮ್ಮಾನದ ನುಡಿಮಾಲೆ ಹೆಣೆಯುವ ಪ್ರೊ| ಪುರುಷೋತ್ತಮ ಬಿಳಿಮಲೆ ಮತ್ತು ಪ್ರೊ| ಚಿನ್ನಪ್ಪ ಗೌಡರೂ ಉತ್ಸುಕರಾಗಿಯೇ ಸೇರಿಕೊಂಡಿದ್ದರು. ಒಟ್ಟು ಕಲಾಪವನ್ನು ಶುದ್ಧ ಪ್ರೀತಿಯಿಂದ ಸಂಘಟಿಸಿದ ಕಲಾಗಂಗೋತ್ರಿ ಬಳಗ (ಸೋಮೇಶ್ವರ-ಉಚ್ಚಿಲ, ಮಂಗಳೂರು), ಕರೆಯೋಲೆಯ ಸಮಯ ನಿಷ್ಠೆ ಕಾಯ್ದುಕೊಂಡು, ಮೂರು ಹಂತದ ಕಲಾಪಕ್ಕಿಳಿದೇ ಬಿಟ್ಟಿತು.

ಸುಮಾರು ಎರಡು ದಶಕಗಳ ಕಾಲ ಯಕ್ಷಗಾನ, ದೈವಾರಾಧನೆಗಳನ್ನು ಅಧ್ಯಯನ ಮಾಡಿ, ಜಪಾನೀ ಭಾಷೆಯಲ್ಲಿ ಎರಡು ಉದ್ಗ್ರಂಥಗಳನ್ನೇ ಬರೆದು, ಪ್ರಕಟಿಸಿದ ಮೊರಿಜಿರಿಯವರ ಸಮ್ಮಾನಕ್ಕೆ ಸೂಕ್ತ ಪೂರ್ವರಂಗ ಎನ್ನುವಂತೇ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಬಹುತೇಕ ಹೆಮ್ಮಕ್ಕಳು ತೆಂಕುತಿಟ್ಟು ಯಕ್ಷಗಾನದ ಪೂರ್ವರಂಗವನ್ನೇ ಮೊದಲಲ್ಲಿ ಪ್ರಸ್ತುತಪಡಿಸಿದರು. ನಿಮಗೆಲ್ಲ ತಿಳಿದಂತೆ, ಇಡಿಯ ರಾತ್ರಿ ನಡೆಯುತ್ತಿದ್ದ ಸಾಂಪ್ರದಾಯಿಕ ಆಟಗಳಲ್ಲಿ, ಅಂದಂದಿಗೆ ಆಯ್ದುಕೊಂಡ ಕಥಾಭಾಗಗಳನ್ನು ಎತ್ತಿಕೊಳ್ಳುವ ಮುನ್ನ ಹೊಸ ನೆಲಕ್ಕೆ ಬಂದ ಕಲಾವಿದರನ್ನು ಜಾಗೃತಗೊಳಿಸುವ, ಪ್ರೇಕ್ಷಕರು ದೈನಂದಿನ ವೃತ್ತಿಯ ಜಂಝಡಗಳನ್ನು ಕಳಚಿಕೊಳ್ಳುವ ಮತ್ತು ಒಟ್ಟಾರೆ ಪರಿಸರ ಒಂದು ಇಚ್ಛಿತ ಮಾಯಾಲೋಕಕ್ಕೆ ಹದಗೊಳ್ಳುವ ಭಾಗ ಪೂರ್ವರಂಗ. ಇದರ ಅಸಂಖ್ಯ ಚುಟುಕು ಆಖ್ಯಾನಗಳಲ್ಲಿ ಮಕ್ಕಳ ಮೇಳ ಆಯ್ದ ಆರನ್ನು ಬಲಿಪ ಪ್ರಸಾದ ಭಾಗವತ ಮತ್ತು ಮದ್ದಳೆಗಾರ ರಾಜೇಶ್ ಕಟೀಲು ಅವರ ನಿರ್ದೇಶನದಲ್ಲಿ, ಬಹಳ ಸುಂದರವಾಗಿ ಪ್ರದರ್ಶಿಸಿದರು.

ಮೊದಲು ನಿತ್ಯದ ಅನಿವಾರ್ಯ ತುಣುಕು, ರಂಗದ ಮೇಲೆ ಮೇಳದ ದೇವರಿಗೆ ನೃತ್ಯಸೇವೆ. ಇದು ಬಾಲಗೋಪಾಲ (ಪ್ರೀತಿಕಾ ಮತ್ತು ಮೇಘಾ) ಮತ್ತು ಕೋಡಂಗಿಗಳ (ಭುವನ್ ಮತ್ತು ಸ್ವಸ್ತಿಕ್) ಸಮ್ಮಿಳನದ ಚೊಕ್ಕ ಕಲಾಪ. ಹಿಂಬಾಲಿಸಿತು ಇನ್ನೊಂದೇ ಆರಾಧನಾ ನಾಟ್ಯ – ಷಣ್ಮುಖ ಸುಬ್ರಾಯ (ನವ್ಯಾ).

ಇದರ ಬಣ್ಣಗಾರಿಕೆ ಹಿಂದೆ ನಾನು ಕಂಡಂತೆ ನಾಗನ ಪ್ರತೀಕವಾಗಿ ಇರದಿದ್ದರೂ ನಡೆಯ ಶಿಸ್ತು ಆಕರ್ಷಕವಾಗಿತ್ತು. ಮೂರನೆಯದಾಗಿ ಬಂದದ್ದು ಭಾವಲೋಕದ ಬಿಂಬ ಸದೇಹಿಯಾಗಿ ರಂಗದಲ್ಲಿ ಮೆರೆಯುವ ಚೋದ್ಯ – ಅರ್ಧ ನಾರೀಶ್ವರ (ಕೃತಿಕಾ). ಮೊದಲು ಈ ಪಾರ್ಶ್ವದಲ್ಲಿ ಶಿವನಾಗಿ ಅನಂತರ ಇನ್ನೊಂದು ಪಾರ್ಶ್ವದಲ್ಲಿ ಪಾರ್ವತಿಯಾಗಿ ಅರೆತೆರೆಮರೆಯಲ್ಲಿ ನಲಿದು ತೋರುವ ಪಾತ್ರಿ, ಕೊನೆಯಲ್ಲಿ ತೆರೆ ಕಳಚಿ ಪೂರ್ಣ ದರ್ಶನ ಕೊಡುವಾಗ ಬೆರಗು ಪಡದವರಿಲ್ಲ.

ಹಿಂಬಾಲಿಸಿದ್ದು, ನಾನಿದುವರೆಗೆ ನೋಡದ ತುಣುಕು – ಚಪ್ಪರಮಂಚ (ದುರ್ಗಾಶ್ರೀ). ಪುಟ್ಟ ಮಂಚವನ್ನೇ ಸೊಂಟದೆದುರು ಕಟ್ಟಿಕೊಂಡಂತೆ, ಒಂದು ಲೆಕ್ಕದಲ್ಲಿ ಬಯಲುಸೀಮೆಯ ಕೀಲುಕುದುರೆಯ ಕುಣಿತವನ್ನು ನೆನಪಿಸುವ ವೇಷವಿದು. ಚಂದಭಾಮದಲ್ಲಿ ಜೋಡಿ ಸ್ತ್ರೀವೇಷ (ಈಶ್ವರಿ ಶೆಟ್ಟಿ ಮತ್ತು ಸಾತ್ವಿಕಾ ಶರ್ಮ) ಮೋಹಕ ಸನ್ನಿವೇಶಗಳ ಭಾವಾಭಿನಯದಲ್ಲಿ ತೊಡಗಿಕೊಳ್ಳುವುದು ಸಾಕಷ್ಟು ಕಂಡದ್ದೇ ಇದೆ. ಇಲ್ಲಿನ ಜೋಡಿ ಅದನ್ನು ನಿಜ ಸಾಂಪ್ರದಾಯಿಕ ಶೈಲಿಯ ವೀರ ಕಸೆಯಲ್ಲೇ ಬಂದು ಹೆಚ್ಚಿನ ಕಳೆಗಟ್ಟಿಸಿದರು. ನಾನಿದುವರೆಗೆ ಕಾಣದ ಇನ್ನೊಂದು ತುಣುಕು – ರಂಗರಂಗಿ (ಅನುಷಾ ಮತ್ತು ಆಶಿತಾ). ಇಲ್ಲಿ ಬಂದ ಗಂಡು ಹೆಣ್ಣಿನ ಜೋಡಿ ಮೊದಲು ಸ್ವತಃ ರಾಗತಾಳಬದ್ಧವಾಗಿ ಹಾಡು, ಸಂಭಾಷಣೆಗಳೊಡನೆ ಸರಳವಾಗಿ ಕುಣಿದು ಕೊನೆಗೆ ಭಾಗವತರೊಡನೆ ಮೇಳೈಸುವ ಪರಿ ಚೆನ್ನಾಗಿತ್ತು. ಮೈಕಿನ ಅಂತರ, ಭವನದ ಕೊರತೆಗಳಲ್ಲಿ ಸಾಹಿತ್ಯ ಸ್ಪಷ್ಟವಾಗದಿದ್ದರೂ ವೈನೋದಿಕವಾಗಿ ಸಾಮಾಜಿಕ ಜಾಗೃತಿ ಮೂಡಿಸುವ ‘ಮಾಡು, ಮಾಣ್’ಗಳಂತೆ (Do’s & Donot’s) ಭಾಸವಾಯ್ತು.

ಒಟ್ಟಾರೆಯಲ್ಲಿ ತರಬೇತಿಯ ಪಕ್ವತೆ ಮತ್ತು ಎಳೆ ಹರಯದವರ ಉತ್ಸಾಹಗಳ ಸುಮಾರು ಒಂದೂವರೆ ಗಂಟೆಯ ತೆಂಕುತಿಟ್ಟಿನ ಪೂರ್ವರಂಗ ಪ್ರಾತ್ಯಕ್ಷಿಕೆ, ಮೂಡಾಯಿಯ ಕಗುರಾಪ್ರವೀಣನ (ಯಕ್ಷಗಾನಕ್ಕೆ ಸಂವಾದಿ ಜಪಾನೀ ಜಾನಪದ ಕಲೆ ಕಗುರಾ. ಹೆಚ್ಚಿನ ವಿವರಗಳಿಗೆ ನೋಡಿ: ಮೊರಿಜಿರಿ ಮತ್ತು ಹಯಾಚಿನ್ ಟಕೆ ಕಗುರ) ಸಭಾಪರ್ವಕ್ಕೆ ಸುಯೋಗ್ಯ ಪೂರ್ವರಂಗವನ್ನೇ ಒದಗಿಸಿತ್ತು.

ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಬರಿಯ ‘ಆಟಗಾರರ ಕೂಟ’ವಲ್ಲ. ಇದರ ಪರಂಪರೆಯೇ (ಅಮೃತ ಸೋಮೇಶ್ವರರಾದಿ) ಅನಗತ್ಯ ಪ್ರಚಾರ, ಕೃತ್ರಿಮ ತೋರಿಕೆಗಳನ್ನು ದೂರವಿಟ್ಟು, ಅಧ್ಯಯನಾತ್ಮಕ ಕಮ್ಮಟ, ತರಬೇತಿ, ಪ್ರಯೋಗ, ಪುಸ್ತಕ ಪ್ರಕಟಣೆ ಮತ್ತು ರಂಗಪ್ರದರ್ಶನಗಳ ಮೌನ ದುಡಿಮೆಯದ್ದು. ಈ ಆದರ್ಶವನ್ನು ತುಸು ಹೆಚ್ಚಾಗಿಯೇ ನಡೆಸುತ್ತ ಬಂದ ಕಾರ್ಯದರ್ಶಿ (ಕುಂಬಳೆ) ಕೆ. ಸದಾಶಿವ ಮಾಸ್ಟ್ರು, ಮೊರಿಜಿರಿ ಸಮ್ಮಾನದ ಸ್ವಾಗತ/ ಪ್ರಸ್ತಾವನೆಯನ್ನು ತುಂಬ ಆತ್ಮೀಯವಾಗಿ, ಕೆಲವೇ ಮಾತುಗಳಲ್ಲಿ ಬಿತ್ತರಿಸಿದರು. ದೊಡ್ಡ ದುಡ್ಡಿನ ಬಲವಿಲ್ಲದೆ, ಯಕ್ಷಪ್ರೀತಿಯುಳ್ಳ ಸದಸ್ಯರನ್ನೇ ನೆಚ್ಚಿ ಕಳೆದ ಸುಮಾರು ನಾಲ್ಕು ದಶಕಗಳಿಂದ ಬೆಳೆದು ಬಂದ ಕಲಾಗಂಗೋತ್ರಿಗೆ ಸ್ವಂತದ್ದೊಂದು ನೆಲೆ ಇರಲಿಲ್ಲ. ಆದರೇನು ಯಾರದೋ ಔದಾರ್ಯದ ನೆಲದಲ್ಲಿ, ಮಾಡಿಕೊಂಡ ಬಡಕಲು ವ್ಯವಸ್ಥೆಯಲ್ಲೂ ನಡೆಸಿದ ಕಲಾಪಗಳ ಪ್ರಭಾವಳಿ ದೊಡ್ಡದೇ ಇತ್ತು. ಸಹಜವಾಗಿ ಈ ವಲಯದ ಯಕ್ಷಗಾನ, ದೈವಾರಾಧನೆಗಳ ಅಧ್ಯಯನಕ್ಕಾಗಿಯೇ ಜಪಾನಿನಿಂದ ಬಂದಿದ್ದ ಮೊರಿಜಿರಿಯವರೂ ಇದರ ಭಾಗವೆನ್ನುವಂತೆ ಸೇರಿಹೋಗಿದ್ದರು. ಹಾಗಾಗಿಯೋ ಎಂಬಂತೆ, ಯಾರದೋ ಔದಾರ್ಯದ ನೆಲ ಮತ್ತು ಅಸ್ಥಿರ ಕಟ್ಟಡದಲ್ಲಿದ್ದ ಕಲಾಗಂಗೋತ್ರಿ, ಕಾಲಪ್ರಭಾವದಲ್ಲಿ ಎಲ್ಲ ಕಳೆದುಕೊಳ್ಳುವ ಸ್ಥಿತಿ ಬಂದಾಗ, ಆಶ್ಚರ್ಯಕರವಾಗಿ ಮೊರಿಜಿರಿ ಬಹುದೊಡ್ಡ ಸಹಾಯವನ್ನೇ ಮಾಡಿದ್ದರು. ಸಂಘ ಆ ನೆಲವನ್ನು ಖರೀದಿಸಿ, ಸ್ವಂತ ದೃಢ ಕಟ್ಟಡ ಕಟ್ಟಿಕೊಳ್ಳುವುದು ಸಾಧ್ಯವಾಗಿತ್ತು. ಮುಂದುವರಿದ ಕಾಲದಲ್ಲಿ, ಅದೇ ಕಟ್ಟಡದ ತಾರಸಿಯಲ್ಲೊಂದು ಸಭಾಭವನದ ಸೇರ್ಪಡೆಗೂ ಪರೋಕ್ಷವಾಗಿ ಮಹಾಬಲ ಒದಗಿಸಿದ್ದು ಮೊರಿಜಿರಿಯವರೇ! ಮೊರಿಜಿರಿಯವರು ಇದುವರೆಗೆ ತಾನು ಗಳಿಸಿದ ಅನುಭವಗಳ ಬಹ್ವಂಶವನ್ನು ಜಪಾನೀ ಭಾಷೆಯಲ್ಲಿ ಎರಡು ಹೆಬ್ಬೊತ್ತಗೆಗಿಳಿಸಿದ್ದಾರೆ. ಈ ಕೃತಕೃತ್ಯತೆ ಮತ್ತು ಏರುತ್ತಿರುವ ಪ್ರಾಯದ ಕಾರಣದಲ್ಲಿ, ಅವರೀಚೆಗೆ ವಿದೇಶೀ ಕಲಾಪಗಳಿಂದ ನಿವೃತ್ತಿ ಬಯಸಿದಂತಿದೆ. ಕಲಾಗಂಗೋತ್ರಿಗೆ ಅವರಿತ್ತ ಭೌತಿಕ ಸಹಾಯಕ್ಕೂ ಭಾರತೀಯ ಸಂಸ್ಕೃತಿಗೆ ಕೊಟ್ಟ ಮಹಾ ಆಯಾಮಕ್ಕೂ ಸಾಂಕೇತಿಕ ಸ್ಮರಣೆಯಾಗಿ ಸಮ್ಮಾನ ಆಯೋಜಿಸಿದ್ದನ್ನು ಸದಾಶಿವರು ನಿವೇದಿಸಿದರು.

ಮೊರಿಜಿರಿ ಅಭಿನಂದನಕಾರರಾಗಿ ನಿಂತ ಪುರುಷೋತ್ತಮ ಬಿಳಿಮಲೆ ಮೂಲತಃ ಸುಳ್ಯ ವಲಯದವರು, ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾದರೀ ಪ್ರವೃತ್ತಿಯಲ್ಲಿ ಇವರು ‘ಇನ್ನೊಂದು’ ಕನ್ನಡ ಅಧ್ಯಾಪಕನಾಗುಳಿಯುವುದರಲ್ಲಿ ಸುಖ ಕಾಣಲಿಲ್ಲ. ಹಾಗಾಗಿಯೇ ಇರಬೇಕು, ಸ್ನಾತಕೋತ್ತರ ಕಲಿಕೆಯ ನೆಪಕ್ಕೆ ಮಂಗಳೂರ ವಾಸದಲ್ಲಿದ್ದಾಗ ಒದಗಿದ್ದ ಕಲಾಗಂಗೋತ್ರಿ ಸಂಪರ್ಕವನ್ನು ಅವರೆಂದೂ ಕಳಚಿಕೊಳ್ಳಲಿಲ್ಲ. ಇವರ ಅಧ್ಯಾಪಕ ವೃತ್ತಿಜೀವನದ ಏರು ನಡೆ ನೆಹರೂ ಮೆಮೊರಿಯಲ್ ಕಾಲೇಜು, ಸುಳ್ಯ, ಸ್ನಾತಕೋತ್ತರ ಕೇಂದ್ರ, ಮಂಗಳಗಂಗೋತ್ರಿ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿಯವರೆಗೂ ಸಾಗಿತ್ತು. ಆ ಕಾಲಘಟ್ಟದಲ್ಲಿ ಇವರಿಗೂ ಮೊರಿಜಿರಿಯವರಿಗೂ ಬೆಳೆದ ಆತ್ಮೀಯತೆ, ಪರೋಕ್ಷವಾಗಿ ಈ ವಲಯದ ಯಕ್ಷಗಾನ/ ಭೂತಾರಾಧನೆಯನ್ನು, ಕಗುರೋ/ ಕಮಿಗಳ ಜಪಾನೀ ವಲಯಕ್ಕೇ ಮುಟ್ಟಿಸಿತು ಎಂದರೆ ತಪ್ಪಾಗದು. ಮೊರಿಜಿರಿಯವರ (ಜಪಾನೀ) ಆಮಂತ್ರಣದ ಮೇರೆಗೆ ಕಲಾಗಂಗೋತ್ರಿಯಿಂದ ಒಂದು ಪ್ರಾತಿನಿಧಿಕ ಯಕ್ಷ-ತಂಡವನ್ನೂ ಕಟ್ಟಿ ಪುರುಷೋತ್ತಮ್ ಜಪಾನಿಗೆ ಹೋಗಿ ಐದಾರು ಪ್ರದರ್ಶನಗಳನ್ನೂ ಕೊಟ್ಟು ಬಂದಿದ್ದಾರೆ. ಈ ಎಲ್ಲ ಆಪ್ತ ಒಡನಾಟಗಳ ಹಿತೋಷ್ಣದಲ್ಲಿ ನಮ್ಮನ್ನು ಮುಳುಗೇಳುವಂತೆ ಮಾಡಿತ್ತು ಬಿಳಿಮಲೆಯವರು ಮಾಡಿದ ಮೊರಿಜಿರಿ ಅಭಿನಂದನಾ ಭಾಷಣ. ಆ ಕೊನೆಯಲ್ಲಿ ಬೆರಗುವಟ್ಟ ನಮ್ಮಲ್ಲುಳಿದದ್ದು ಸುಮಿಯೋ ಮೊರಿಜಿರಿಯವರ ಅಧ್ಯಯನಶೀಲತೆ, ವಿದ್ವತ್ತು, ವಿನಯ, ಸಂಘಟನಾ ಚಾತುರ್ಯ, ಮನುಷ್ಯಪ್ರೀತಿ. ರಂಗ ಕಲೆಯ ಉಪನ್ಯಾಸಕನಾಗಿ ವೃತ್ತಿರಂಗಕ್ಕಿಳಿದಾತ, ಅಯಾಚಿತ ಪ್ರಯೋಗಕ್ಕಿಳಿದು, ಕ್ಷೇತ್ರಕಾರ್ಯ ಮತ್ತು ಕಾರ್ಯವ್ಯಾಪ್ತಿಯನ್ನು ಭಾರತದ ಈ ಮೂಲೆಯವರೆಗೂ ವಿಸ್ತರಿಸಿದ್ದು ಅಸಾಮಾನ್ಯ ಸಾಧನೆಯೇ ಸರಿ. ಆ ನಡೆಯಲ್ಲಿ ಸಂಪರ್ಕಕ್ಕೆ ಬಂದವನ್ನೆಲ್ಲ ಪರಸ್ಪರ ಪ್ರಯೋಜನಕ್ಕೊದಗುವಂತೇ ನಿರ್ವಹಿಸಿದ ಜಾಣ್ಮೆಗೆ ಈ ಸಮ್ಮಾನವೂ ಸಣ್ಣದೇ ಎನ್ನುವಂತೆ ತೋರಿತ್ತು.

ಚಿನ್ನಪ್ಪ ಗೌಡರು ಮಂಗಳಗಂಗೋತ್ರಿಯ ಸ್ನಾತಕೋತ್ತರ ಅಧ್ಯಾಪನದಿಂದ ಬಿಳಿಮಲೆಯವರ ಸಹೋದ್ಯೋಗಿ, ಆಪ್ತಗೆಳೆಯ. ಸಂಶೋಧನಾ ಕ್ಷೇತ್ರದಲ್ಲಿ ಭೂತಾರಾಧನೆ ಇವರ ವೈಶಿಷ್ಟ್ಯ. ಸಹಜವಾಗಿ ಇವರಲ್ಲೂ ಮೊರಿಜಿರಿಯವರ ಒಡನಾಟ, ಜಪಾನೀ ಓಡಾಟಗಳ ಅನುಭವ ಖಜಾನೆ ಸಮೃದ್ಧವೇ ಇತ್ತು. ಆದರೆ ಇಲ್ಲಿನ ಭೂತಾರಾಧನೆಗೆ ಸಂವಾದಿಯಾಗಬಲ್ಲ ಜಪಾನೀ ‘ಕಮಿ’ ಎಂಬ ಪ್ರೇತ-ಪ್ರೀತ್ಯಾತ್ಮಕ ಕಲಾಪಗಳನ್ನು ತುಲನೆ ಮಾಡಿ, ಜಪಾನೀ ಭಾಷೆಯಲ್ಲಿ ಉದ್ಗ್ರಂಥ ತಂದ ಮೊರಿಜಿರಿಯವರ ಅಸಾಧಾರಣ ಕೊಡುಗೆಯನ್ನು ವಿಶೇಷವಾಗಿ ಉಲ್ಲೇಖಿಸಿದರು.

ಚಿನ್ನಪ್ಪ ಗೌಡರು ಪ್ರಾಸಂಗಿಕವಾಗಿ ಮೊರಿಜಿರಿಯವರ ವೈಯಕ್ತಿಕ ಸಜ್ಜನಿಕೆ, ಅತಿಥಿ ಸತ್ಕಾರವನ್ನೂ ವಿಶೇಷವಾಗಿ ಸ್ಮರಿಸಿಕೊಂಡರು. ಇದಕ್ಕೆ ಪೂರಕವಾಗಿ ನನ್ನೊಂದು ಸಣ್ಣ ನೆನಪನ್ನು ಹೇಳದಿರಲಾರೆ. ಅದು ಮೊರಿಜಿರಿಯವರು ಹಂಪಿಯಲ್ಲಿದ್ದ ದಿನಗಳು (೧೯೯೦ರ ದಶಕ). ನಾನು ದೇವಕಿಯೂ ಹೀರೋಹೊಂಡಾ ಏರಿ, ಭಾರತ ಸುತ್ತಿ ಬರುತ್ತ, ಒಂದು ರಾತ್ರಿವಾಸಕ್ಕೆ ಪುರುಷೋತ್ತಮ ಬಿಳಿಮಲೆಯವರ ಗಂಡು ಬಿಡಾರ (ಅವರ ಪತ್ನಿ, ಪುತ್ರರು ಬೇಸಗೆ ರಜೆಗೆ ಊರಿಗೆ ಹೋಗಿದ್ದ ಸಮಯ) ಸೇರಿದ್ದೆವು. ‘ಮಂಗಳೂರಿನ ಪರಿಚಿತ ಪುಸ್ತಕ ವ್ಯಾಪಾರಿ’, ‘ತನ್ನ ದೇಶದ ಹೊಂಡಾ ಬೈಕಿನ ಸವಾರಿ’ಯಲ್ಲಿ ಬಂದಿದ್ದಾರೆನ್ನುವುದು ಮೊರಿಜಿರಿಯವರಿಗೆ ಸಾಕಾಯ್ತು. ಒತ್ತಾಯಿಸಿ ಮರು ಬೆಳಿಗ್ಗೆ ಅವರ ಗಂಡು ಬಿಡಾರದಲ್ಲಿ ನಮಗೆ ವಿಶಿಷ್ಟ ಉಪಾಹಾರ ಕೊಟ್ಟರು. ಉರಿಬಿಸಿಲಿನ ಮೂವತ್ಮೂರು ದಿನಗಳ ಪಯಣದಲ್ಲಿ ಮುಖಸುಟ್ಟ ದೇವಕಿಗೆ ಅವರ ದೇಶದ ಏನೋ ವಿಶಿಷ್ಟ ಮುಲಾಮಿನ ಬಾಟಲನ್ನೇ ಕಿರುಕಾಣಿಕೆಯಾಗಿಸಿದ್ದರು. ಚಿನ್ನಪ್ಪ ಗೌಡರಲ್ಲಿ ಇಂಥ ನೆನಪುಗಳು ಅಪಾರವೇ ಇದ್ದಿರಬೇಕು. ಆದರೆ ಸ್ಮರಣೆಗಳ ಸುಳಿಯಲ್ಲಿ ಸಭೆಯ ಸಮಯದ ಮಿತಿ ಮುಳುಗದ ಎಚ್ಚರವಹಿಸಿ ಮಾತು ಮುಗಿಸಿದ್ದರು. (ಬಿಳಿಮಲೆಯವರ ಹೆಚ್ಚಿನ ವಿವರಗಳ ಅಭಿನಂದನಾ ಭಾಷಣವನ್ನು ಹಿಂಬಾಲಿಸಿದ್ದಕ್ಕಾಗಿ ಚಿನ್ನಪ್ಪ ಗೌಡರೂ ಮತ್ತು ಅಧ್ಯಕ್ಷೀಯ ಮಾತಿನ ವಿವೇಕ ರೈಯವರು ಕಡಿಮೆ ಮಾತಾಡಿದ್ದರು.)

ಮೊರಿಜಿರಿ ತನ್ನ ಆಸಕ್ತಿಗಳಿಗೆ ಮಾತೃಭಾಷೆ ಜಪಾನಿಯೊಂದನ್ನುಳಿದು ಇತರತ್ರ ಮಾಹಿತಿ ಮತ್ತು ಭಾವಸಂವಹನಕ್ಕೆ ಶ್ರಮಿಸಿದಷ್ಟು ಭಾಷಾ ಪೋಷಣೆಗೆ ಗಮನ ಹರಿಸಿದಂತಿಲ್ಲ. ನನ್ನರಿವಿಗೆ ನಿಲುಕಿದಂತೆ ಅವರು ಕಥಕ್ಕಳಿ, ಥೈಯ್ಯಂಗಳ ಜಾಡರಸಿದಾಗ ಮಲಯಾಳ ಕಸರತ್ತು ನಡೆಸಿರಲೇಬೇಕು. ಈ ವಲಯಗಳ ಲೋಕವ್ಯವಾಹಾರದಲ್ಲಿ ಅವರು ಸದಾಶಿವ ಮಾಸ್ಟ್ರನ್ನು ಬಳಸಿಕೊಳ್ಳುತ್ತಿದ್ದದ್ದು ನಾನೇ ಸಾಕಷ್ಟು ಕಂಡಿದ್ದೇನೆ. ಹಾಗೆಂದು ಇವರ ಎಲ್ಲ ಓಡಾಟಕ್ಕೆ ಜತೆಗೊಡಲಾಗದ ಸ್ವಂತ ವೃತ್ತಿ ಜವಾಬ್ದಾರಿ – ಸರಕಾರೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲತ್ವ, ಸದಾಶಿವರಿಗೂ ಇತ್ತು. ಬಿಳಿಮಲೆಯವರು ಉಲ್ಲೇಖಿಸಿದ, ಕರ್ನಾಟಕ ಯಕ್ಷಗಾನ ನಾಟಕ ಸಭಾ ಅಥವಾ ಕಟೀಲು ಮೇಳಗಳ ಕಲಾವಿದರ ಜತೆಗೇ ದಿನಗಟ್ಟಳೆ ರಾತ್ರಿ ಹಗಲು ಲಾರಿ ಪಯಣ, ಮೇಳದ ಅಡುಗೆ, ದೇವಳಗಳ ಜಗುಲಿ ವಾಸವನ್ನೆಲ್ಲ ಮೊರಿಜಿರಿಯವರು ಸಹಜವಾಗಿ ಸ್ವೀಕರಿಸಿದ ಬಗೆ ಸಾಮಾನ್ಯವಲ್ಲ. ದೈವಾರಾಧನೆಯಲ್ಲಿ ಪಾತ್ರಿ ವಠಾರಕ್ಕೆ ಬರುವಲ್ಲಿಂದ ತಿರುಗಿ ತನ್ನ ಮನೆ ಮುಟ್ಟುವಲ್ಲಿಯವರೆಗೂ ಮೊರಿಜಿರಿ ಸ್ವಂತ ಆಹಾರ, ವಿಶ್ರಾಂತಿಗಳನ್ನು ಮರೆತು ಸುಧಾರಿಸಿದ್ದೂ ಸಣ್ಣದಲ್ಲ. ಅವರು ನನ್ನ ಅಂಗಡಿಯಲ್ಲಿ ಖರೀದಿಸುತ್ತಿದ್ದ ಪುಸ್ತಕಗಳ ವಿಷಯ ವೈವಿಧ್ಯಕ್ಕಂತೂ ಯಾರೂ ಬೆರಗಾಗಲೇಬೇಕು. ಈ ಎಲ್ಲ ಕೊಲಂಬಸ್-ಸಾಧನೆಗಳು ಎಲ್ಲೂ ಪ್ರದರ್ಶನಾಂಗಣದ ಕಲಾಪಗಳಾಗದಿರುವುದು ಮೊರಿಜಿರಿಯವರ ವಿನಯಕ್ಕೆ ಸಾಕ್ಷಿ. ಅದಕ್ಕೂ ಮಿಗಿಲಾಗಿ ಅವರ ಭಾಷಾತೀತ ವಿಷಯಗ್ರಹಣ ಸಾಮರ್ಥ್ಯಕ್ಕೆ ಪುರಾವೆಗಳು. ಹಾಗಾಗಿ ಕಲಾಗಂಗೋತ್ರಿಯ ಸಮ್ಮಾನಕ್ಕೆ ಅವರು ತುಂಡು ತುಂಡಾಗಿ ನಾಲ್ಕು ಇಂಗ್ಲಿಷ್ ನುಡಿಯಾಡಿದ್ದು ಯಾರಿಗೂ ಕೊರತೆ ಎನಿಸಲು ಸಾಧ್ಯವಿಲ್ಲ.

ಕನ್ನಡ ವಿವಿ ನಿಲಯದ ಕುಲಪತಿಯಾಗಿದ್ದವರ ಕ್ಷುದ್ರತನದಲ್ಲಿ ‘ಮೊರಿಜಿರಿ ಪ್ರಸಂಗ’ ಒಂದು ರಾಷ್ಟ್ರದ ನೈತಿಕತೆಗೇ ಕಪ್ಪು ಬೊಟ್ಟಾಗಬಹುದಾಗಿತ್ತು. ಆದರೆ ಅದನ್ನು ಅಂದು ಮಂವಿವಿನಿಲಯದ ಕನ್ನಡ ವಿಭಾಗ ಮುಖ್ಯಸ್ಥನ ನೆಲೆಯಲ್ಲಿ ಪ್ರೊ| ಬಿ.ಎ. ವಿವೇಕ ರೈಯವರು ಹೇಗೆ ಪಾರುಗಾಣಿಸಿದರು. ಮತ್ತದರ ಫಲವಾಗಿ ಈಚಿನ ಎರಡು ದಶಕಗಳಲ್ಲಿ ಎರಡು ದೇಶಗಳ ನಡುವಣ ಸಾಂಸ್ಕೃತಿಕ ವಿನಿಮಯ ಅದೆಷ್ಟು ಸಮೃದ್ಧವಾಗಿದೆ ಎನ್ನುವುದಕ್ಕೆ ಮೊರಿಜಿರಿಯವರ ಕೃತಿಗಳೇ ಸಾಕ್ಷಿ ಎಂದು ಬಿಳಿಮಲೆ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಹೀಗೆ ಮೊರಿಜಿರಿಯವರಿಗೆ ಸ್ಪಷ್ಟ ಅರಿವಿರದೇ ಅವರ ಇಲ್ಲಿನ ಸಂಶೋಧನಾ ಚಟುವಟಿಕೆಗಳಿಗೆ ಸಾಕ್ಷೀಪ್ರಜ್ಞೆಯಂತೇ ನಿಂತ ವಿವೇಕರೈಯವರೇ ಸಭಾಧ್ಯಕ್ಷತೆಯನ್ನು ವಹಿಸಿದ್ದು ಅರ್ಥಪೂರ್ಣವಾಗಿತ್ತು. ರೈಯವರ ಮಾತುಗಳೂ ಅಷ್ಟೇ ಔಚಿತ್ಯಪೂರ್ಣವಾಗಿತ್ತು. ಅವಿಭಕ್ತ ದಕ ಜಿಲ್ಲೆಯಲ್ಲಿ ಸರ್ವ ಪ್ರಥಮವಾಗಿ ಸಾಂಸ್ಕೃತಿಕ ಅಧ್ಯಯನವನ್ನು ಪ್ರೋತ್ಸಾಹಿಸಿ, ದಾಖಲಿಸಿ, ಅನ್ಯ ಭಾಷಿಕ ಮತ್ತು ದೇಶೀಯ ಸಾಂಸ್ಕೃತಿಕ ಅಧ್ಯಯನಗಳಿಗೆ ಮುಖಾಮುಖಿಯಾಗಿಸಿದ ಖ್ಯಾತಿ ಕುಶಿ ಹರಿದಾಸ ಭಟ್ಟರಿಗೆ ಸಲ್ಲುತ್ತದೆ. ಕುಶಿಯವರ ಕ್ರತು ಶಕ್ತಿಯಲ್ಲಿ ಅಂದು ಕೇವಲ ಪದವಿಪೂರ್ವದಿಂದ ಸ್ನಾತಕ ಪದವಿಯವರೆಗಷ್ಟೇ (ಪೀಯೂಸಿಯಿಂದ ಡಿಗ್ರಿವರೆಗೆ) ಶಿಕ್ಷಣ ಕೊಡಬಹುದಾಗಿದ್ದ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜ್ (ಎಂಜಿಎಂ), ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ರಂಗ ಕಲೆಗಳ ಕೇಂದ್ರ, ಯಕ್ಷಗಾನ ಕೇಂದ್ರಾದಿ ಸಂಸ್ಥೆಗಳ ಬಲದಲ್ಲಿ, ಕನಕ, ಪುರಂದರ, ಗಾಂಧಿ ಹೆಸರುಗಳ ನೆಪದಲ್ಲಿ ವಿವಿ ನಿಲಯಗಳು ನಾಚುವ ಉನ್ನತಿಯನ್ನು ಸಾಧಿಸಿದ್ದವು. ಹಾಗೆ ಬೆಳಗಿದ ಸ್ಥಳೀಯ ವಿದ್ವಾಂಸರ ಪಟ್ಟಿ ಬರೆದು ಮುಗಿಯದು. ಹಾಗೆಯೇ ಎದ್ದು ಕಾಣುವ ವಿದೇಶೀ ವಿದ್ವಾಂಸರುಗಳಾದ ಮಾರ್ಥಾ ಏಶ್ಟನ್, ಪೀಟರ್ ಕ್ಲಾಸ್, ಬ್ರೂಕ್ನರ್, ಕ್ಯಾಥರೀನ್ ಭಿಂಡರ್ ಆದಿ ವಿದೇಶೀ ವಿದ್ವಾಂಸರ ಸ್ವರ್ಣ ಮಾಲಿಕೆಯಲ್ಲೇ ಮೊರಿಜಿರಿಯವರನ್ನೂ ವಿವೇಕರೈಯವರು ಕಂಡುಕೊಂಡರು. ಒಂದು ಲೆಕ್ಕದಲ್ಲಿ ಕುಶಿಯವರ ಜ್ಯೋತಿಧಾರಕನಾಗಿಯೇ ಕಾಣಿಸಿದ ವಿವೇಕರೈಯವರ ಅಧ್ಯಕ್ಷೀಯ ನುಡಿಗಳು ಸಮ್ಮಾನಕ್ಕೆ ಹೆಚ್ಚಿನ ಕಳೆ ಕೊಟ್ಟಿತು. ರೈಯವರ ಮಾತುಗಳ ಮುಂದುವರಿಕೆಯಂತೇ ಮೊರಿಜಿರಿ ಸಮ್ಮಾನದ ಮೂರನೇ ಹಂತದ ಕಲಾಪಕ್ಕೆ ಅದೇ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದ ‘ವಾಲಿ ಮೋಕ್ಷ’ ಆಟದ ಪ್ರದರ್ಶನವಿತ್ತು.

ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಇಂದು ಬಡಗು ತಿಟ್ಟಿನ ಖಿಲವಾದ ರಂಗ ನಡೆಗಳ ಅಲಿಖಿತ ಕೋಶ, ಅವುಗಳ ಪುನರುತ್ಥಾನದ ಅಗ್ರಗಣ್ಯ ಪ್ರಯೋಗಪಟು, ಮತ್ತವುಗಳನ್ನು ಬಯಸಿ ಬಂದ ಯಾರಿಗೂ ಮುಕ್ತವಾಗಿ ಮೊಗೆದು ಕೊಡುತ್ತಲೇ ಇರುವ ಅದ್ವಿತೀಯ ಗುರು. ಸಹಜವಾಗಿ (ಬಿವಿ ಕಾರಂತರು ತನ್ನ ನಾಟಕಗಳ ಕುರಿತು ಹೇಳಿಕೊಂಡಂತೇ) ಸಂಜೀವರ ಪ್ರತಿಯೊಂದೂ ಪ್ರಯೋಗ, ಪ್ರದರ್ಶನವಲ್ಲ. ಅದಕ್ಕೆ ಒಪ್ಪುವಂತೆಯೇ, ‘ವಾಲಿಮೋಕ್ಷ’ಕ್ಕೆ ಬೆಂಬರಹವಾಗಿ ‘ಒಂದು ವಿನೂತನ ಪ್ರಯೋಗ’ ಎಂದೇ ಆಮಂತ್ರಣದಲ್ಲಿಯೂ ಉಲ್ಲೇಖವಿತ್ತು. ಕತೆ ಸಾಮಾನ್ಯವಾಗಿ ಎಲ್ಲರಿಗೆ ಅರಿವಿರುವಂತೆ, ವಾಲಿ ದುಂದುಭಿ, ಮಾಯಾವಿಯರನ್ನು ನಿಗ್ರಹಿಸುವಲ್ಲಿಂದ ತೊಡಗಿ, ವಾಲಿವಧೆಯಲ್ಲಿ ಮುಗಿಯುತ್ತದೆ. ಸಹಜವಾಗಿ ಸಂಜೀವರು ಕಥಾಜಾಲದ ವ್ಯಾಪ್ತಿಯನ್ನು (ರಾವಣ ಗರ್ವಭಂಗ….) ಕಿರಿದುಗೊಳಿಸಿ, ವಚೋವಿಲಾಸವನ್ನು (ಹನುಮ-ರಾಮ, ರಾಮ-ಸುಗ್ರೀವ, ತಾರಾ-ವಾಲಿ, ವಾಲಿ-ರಾಮಾದಿ ಸಂವಾದಗಳು ಒಂದೊಂದೂ ಸ್ವಾರಸ್ಯಕರವಾಗಿ ಗಂಟೆಗಟ್ಟಳೆ ನಡೆಯುವುದನ್ನು ನಾನು ಕೇಳಿದ್ದೇನೆ.) ಮಿತಿಗೊಳಿಸಿ, ರಂಗಕ್ರಿಯೆಗಳನ್ನು (ಮಾಯಾವೀ ವಧೆ, ಉಜ್ವಲಗೊಳಿಸಿದ್ದಾರೆ. ಪ್ರತಿ ಸನ್ನಿವೇಶದ ಅಭಿನಯ, ಸಮೂಹ ನೃತ್ಯದ ಶಿಸ್ತುಬದ್ಧ ಮತ್ತು ವೈವಿಧ್ಯಮಯ ನಡೆಗಳು ನಿಸ್ಸಂದೇಹವಾಗಿ ನಮಗೊಂದು ವಿನೂತನ ಪ್ರದರ್ಶನವನ್ನೇ ಕೊಟ್ಟಿತು. ಪ್ರೊ| ಸುಮಿಯೋ ಮೊರಿಜಿರಿಯವರ ಯಕ್ಷ-ಕಗುರಾ ತೌಲನಿಕ ಅಧ್ಯಯನಕ್ಕೆ ಸಮ-ಧರ್ಮೀಯ ಸಮ್ಮಾನದೊಡನೇ ಸಮಾರಂಭ ಮುಕ್ತಾಯವಾಗಿತ್ತು. ಜಾನಪದವೋ ಶಾಸ್ತ್ರೀಯವೋ – ಯಾವುದೇ ಕಲೆಗೆ, ಉಜ್ವಲ ಭವಿಷ್ಯವನ್ನು ಹಾರೈಸುವ ಪ್ರಯೋಗಗಳಿಗೆ ದಿಕ್ಸೂಚಿಯಾಗಿಯೂ ಬೆಳಗಿತ್ತು.