ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ ಪ್ರಾಥಮಿಕ ರಕ್ಷಣೆ ಮತ್ತು ಪೋಷಣೆಗೆ ಸ್ವಯಂಸೇವಕರು ತೊಡಗಿಸಿಕೊಂಡದ್ದು ಹೃದಸ್ಪರ್ಷಿಯಾಗಿತ್ತು. ಅದರಲ್ಲೂ ಮುಂದುವರಿದಂತೆ ನಿರಾಶ್ರಿತರ ಪೂರ್ವಸ್ಥಿತಿಸ್ಥಾಪನೆಯಲ್ಲೂ ಪ್ರಜಾಪ್ರತಿನಿಧಿಗಳು ಮತ್ತು ಸರಕಾರ ಬಹ್ವಂಶ ನಿಧಾನಿಗಳೂ ಅದಕ್ಷರೂ (ಭ್ರಷ್ಟತೆಯಿಂದಾಗಿ) ಆಗುವುದು ಇಂದು ನಮ್ಮ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಈ ಜನ, ಆಸ್ತಿಗಳ ಬಹುದೊಡ್ಡ ದುರಂತದಲ್ಲಿ ಆಡಳಿತ ದೊಡ್ಡ ಧ್ವನಿಯಲ್ಲಿ ದೂಷಿಸುವುದು ಪ್ರಕೃತಿಯನ್ನು! ಪ್ರಸ್ತುತ ಸನ್ನಿವೇಶದಲ್ಲಿ ಮೊದಲನೇ ಖಳಸ್ಥಾನದಲ್ಲಿ ನೀರಿಗಿದ್ದರೆ, ಎರಡನೇದು ನೆಲ. ಪ್ರಕೃತಿ ಎಲ್ಲಕ್ಕೂ ಅತೀತ; ಆರಾಧನೆಗೆ ಉಬ್ಬದು, ಅವಹೇಳನಕ್ಕೆ ಕುಗ್ಗದು, ಮೌನಿ. ಅಂಥ ಪ್ರಕೃತಿಯ ಮೇಲೆ, ನಿಜದಲ್ಲಿ ಎಲ್ಲ ಜೀವಾಜೀವಗಳ ಮೂಲಶಕ್ತಿಯ ಮೇಲೆ ತೀರ್ಪು ಕೊಡುವ ದಾರ್ಷ್ಟ್ಯ ನನ್ನದಲ್ಲ. ಆದರೆ ಅದರೊಡನೆ ಯಥಾಮಿತಿ ಮುಖಾಮುಖಿ ನಡೆಸಿ, ಸ್ವಲ್ಪವಾದರೂ ತಿಳಿದುಕೊಳ್ಳುವ ಹಂಬಲ ನನ್ನನ್ನು ಬಿಟ್ಟದ್ದಿಲ್ಲ. ಹಾಗಾಗಿ ನೀರು ಹಿಂಜರಿದದ್ದೇ (ಮಳೆ ಕಡಿಮೆಯಾದಾಗ), ನೆಲದ ಸಂದರ್ಶನಕ್ಕಾಗಿ, ಗೆಳೆಯ ಸುಂದರ ರಾಯರನ್ನು ಜತೆ ಮಾಡಿಕೊಂಡು ಮೊನ್ನೆ (೨೨-೮-೧೮) ಬೆಳಿಗ್ಗೆಯ ಮೊದಲ ಮಂಗಳೂರು – ಸುಬ್ರಹ್ಮಣ್ಯ ಬಸ್ಸೇರಿದೆ.

ನೇತ್ರಾವತಿಯನ್ನು ಜೋಡುಮಾರ್ಗ ಹಾಗೂ ಉಪ್ಪಿನಂಗಡಿ ಸೇತುವೆಯಡಿಗಳಲ್ಲಿ ಕಂಡೆ. ತುಸುವೇ ಭಿನ್ನ ರೂಪದ ದರ್ಶನ ಹೊಸಮಠ ಹಾಗೂ ಸುಬ್ರಹ್ಮಣ್ಯಗಳಲ್ಲೂ ಸಿಕ್ಕಿತು. ನೀರಿನ ಮೇರೆವರಿಯುವ ಉತ್ಸಾಹ ತಗ್ಗಿದ್ದರೂ ಕಲಂಕು ಬಣ್ಣ ಎಲ್ಲ ಸರಿಯಿಲ್ಲ ಎನ್ನುವುದನ್ನು ಇನ್ನೂ ಸಾರುತ್ತಿತ್ತು. ಈ ವಲಯದ ಘಾಟಿ ಮಾರ್ಗಗಳ ಲೆಕ್ಕದಲ್ಲಿ ದೊಡ್ಡ ಪಾತ್ರಧಾರಿ ಶಿರಾಡಿ, ಪೋಷಕವಾದ ಬಿಸಿಲೆ ಮತ್ತೆ ಸಂಪಾಜೆಗಳೆಲ್ಲ ಅನಿರ್ದಿಷ್ಟವಾಗಿ ಮುಚ್ಚಿಹೋಗಿವೆ. ರೈಲ್ವೇ ಮಾರ್ಗವೂ ಬಂದಾಗಿದೆ. ಉಳಿದೊಂದೇ ಸಮೀಪಸ್ಥ ಚಾರ್ಮಾಡಿ ಮಾರ್ಗವೂ ತೀರಾ ಅಸ್ಥಿರವಾಗಿದೆ. ಮಳೆ ಇನ್ನೂ ಬಿಟ್ಟಿಲ್ಲ. ಇವೆಲ್ಲದರ ಪರಿಣಾಮವೆನ್ನುವಂತೆ ಈ ವಲಯ ಪೂರ್ತಿ ಮುಖ್ಯವಾಗಿ ದೊಡ್ಡ ಪೇಟೆಗಳಾದ ಉಪ್ಪಿನಂಗಡಿ, ಸುಬ್ರಹ್ಮಣ್ಯ ಮತ್ತು ಮರುದಿನ ಕಂಡ ಸಕಲೇಶಪುರವೂ ಜನ, ವಹಿವಾಟು ಭಣಭಣವೆನ್ನುತ್ತಿದ್ದುವು. ಕುಮಾರಕೃಪ ಹೋಟೆಲಿನಲ್ಲಿ ಉಪಾಹಾರ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಸಿಕೊಂಡೆವು. ಸಾಮಾನ್ಯ ದಿನಗಳಲ್ಲಿ ಬಸ್ಸೇ ಹಿಡಿದು ಮುಂದುವರಿಯಬಹುದಾಗಿದ್ದ ದಾರಿಯಲ್ಲಂದು ಬಾಡಿಗೆಯ ರಿಕ್ಷಾ ಹಿಡಿದೆವು.

ಸುಬ್ರಹ್ಮಣ್ಯದಿಂದ ಮೊದಲ ಮೂರು ಕಿಮೀ ನಾವು ಬಂದದ್ದೇ ದಾರಿ. ಕುಳ್ಕುಂದದಲ್ಲಿ ಬಲದ ಕವಲು – ಬಿಸಿಲೆ ದಾರಿ. ಇಲ್ಲಿ ಮೊದಲ ಒಂದು ಕಿಮೀ ಕಳೆದದ್ದೇ ತೊಡಗುವ ದಟ್ಟಾರಣ್ಯದ ಮುಚ್ಚಿಗೆ ಮತ್ತೆ ಹರಿಯುವುದು ಸುಮಾರು ೨೩ ಕಿಮೀ ಕಳೆದ ಮೇಲೆ ಸಿಗುವ ಬಿಸಿಲೆ ಹಳ್ಳಿಯಲ್ಲೇ. ಆ ಉದ್ದಕ್ಕೂ ದಾರಿಯ ಎಡ ಮಗ್ಗುಲಿನಲ್ಲಿ ಬಿಸಿಲೆ ಕಾಯ್ದಿಟ್ಟ ಅರಣ್ಯ, ಬಲ ಮಗ್ಗುಲಿನಲ್ಲಿ ಪುಷ್ಪಗಿರಿ ವನಧಾಮ. ಒಟ್ಟಾರೆ ಯಾವುದೇ ಜನವಸತಿ ಅಥವಾ ಮನುಷ್ಯ ಚಟುವಟಿಕೆ ಇಲ್ಲದ ಅಪ್ಪಟ ವನ್ಯಪ್ರದೇಶ. ಕುಳ್ಕುಂದದಿಂದ ಸುಮಾರು ಆರೇಳು ಕಿಮೀಗೆ ದಾರಿ ದಕ ಜಿಲ್ಲಾವ್ಯಾಪ್ತಿಯನ್ನು ಮೀರಿ ಹಾಸನದಲ್ಲಿ ಮುಂದುವರಿಯುತ್ತದೆ. ದಕ ಜಿಲ್ಲೆಯದು ಒಳ್ಳೆಯ ಡಾಮರ್ ಮಾರ್ಗ. ಹಾಸನದ ಭಾಗ, ಕಳೆದ ಕೆಲವು ವರ್ಷಗಳಿಂದ, ಬಿಸಿಲಿನ ತಿಂಗಳುಗಳಲ್ಲಿ ಮಾತ್ರ, ಪೂರ್ಣ ವಾಹನ ಸಂಚಾರ ನಿಷೇಧಿಸಿಕೊಂಡು, ಕಂತು ಕಂತಿನಲ್ಲಿ ಕಾಂಕ್ರೀಟ್ ಹೊದಿಕೆ ಕಾಣುತ್ತಲೇ ಇದೆ. ಈಚೆಗೆ ಕೊನೆಯಲ್ಲೊಂದು ಐದು ಕಿಮೀ ಇನ್ನೂ ಉಳಿಸಿ, ಜುಲೈ ಕೊನೆಯಲ್ಲೆಲ್ಲೋ ತೆರೆದಿತ್ತಷ್ಟೆ. ಕುಳ್ಕುಂದದಿಂದ ಸುಮಾರು ಹತ್ತು ಕಿಮೀವರೆಗೂ ದಾರಿ ಎಡ ಮಗ್ಗುಲಿಗೆ ಎತ್ತರದ ಬೆಟ್ಟವನ್ನೇ ಇಟ್ಟುಕೊಂಡು ಸಮತಟ್ಟಿನಲ್ಲೇ ಓಡುತ್ತದೆ. ಮುಂದಿನದು ಘಾಟಿ ರಸ್ತೆ. ಆ ಸಂಧಿಸ್ಥಾನದಲ್ಲಿ ಏರುದಾರಿಗೆ ಶುಭ ಕೋರಲೋ ಅಥವಾ ಅತ್ತಣಿಂದ ಇಳಿದು ಬರುವವರ ಕೃತಜ್ಞತೆ ಸ್ವೀಕರಿಸಲೋ ಎಂಬಂತೆ ಜನಪದರು ಎಂದೋ ಕಂಡುಕೊಂಡ ಕಿರು ಆರಾಧನಾ ದೈವ – ಬೂದಿ ಚೌಡಿ. ವಾಸ್ತವದಲ್ಲಿ ಈ ಅಕ್ರಮ ರಚನೆಗೆ ಇಂದು ವಾರೀಸುದಾರರಿಲ್ಲ. ಹಾಗೆಂದು ಆ ತಾಣವನ್ನು ನಿವಾರಿಸಿ, ವನ್ಯವಿರೋಧೀ ಚಟುವಟಿಕೆಯನ್ನು ಕಡಿಮೆ ಮಾಡಬೇಕಾಗಿದ್ದ ಅರಣ್ಯ ಇಲಾಖೆ, ಅದನ್ನು ಬಲಪಡಿಸುತ್ತಿರುವುದೊಂದು ವಿಪರ್ಯಾಸ. ಇದಕ್ಕೆ ಸಹಕಾರವಾಗುವಂತೆ ಕುಳ್ಕುಂದದಲ್ಲಿದ್ದ ಅರಣ್ಯ ತನಿಖಾ ಠಾಣೆಯನ್ನೇ ಇಲಾಖೆ ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಬೂದಿಚೌಡಿಯ ಮಗ್ಗುಲಿಗೇ ತಂದಿರುವುದನ್ನು ಕಾಣುತ್ತೇವೆ. ನಮ್ಮನ್ನು ರಿಕ್ಷಾ ನಿರ್ವಿಘ್ನವಾಗಿ ಬೂದಿ ಚೌಡಿ ಮುಟ್ಟಿಸಿತು.

ಚೌಡಿಸ್ಥಾನದ ಬಲ ಮಗ್ಗುಲಿನಲ್ಲಿ ಅರಣ್ಯ ಇಲಾಖೆಯ ಸಣ್ಣ ವಸತಿ ಕಟ್ಟಡವಿದೆ. ಎಡ ಮಗ್ಗುಲಿನಲ್ಲಿ ವರ್ಷಪೂರ್ತಿ ಹರಿಯುತ್ತಿದ್ದ ಸಣ್ಣದೊಂದು ಬೆಟ್ಟದ ಝರಿ ಇತ್ತು. ದಾರಿ ಝರಿಯ ನೀರಿಗೊಂದು ಮೋರಿ ಕಟ್ಟಿಸಿಕೊಂಡು ಪಾತ್ರೆಯಲ್ಲೊಂದು ಪುಟ್ಟ ಸೇತುವೆ ಮತ್ತು ತೀವ್ರ ತಿರುವು ಕಾಣುತ್ತದೆ. ಚೌಡಿಯ ಭಕ್ತಾದಿಗಳು ಸೇತುವೆಯ ಮೇಲಂಚಿನಲ್ಲೊಂದು ಸಣ್ಣ ಕಟ್ಟೆ ಮಾಡಿದ್ದರು. ಹಾಗೆ ರೂಪುಗೊಂಡ ಪುಟ್ಟ ಕೊಳ, ಕಟ್ಟೆಯಂಚಿನಲ್ಲಿ ಹತ್ತಿಪ್ಪತ್ತಡಿ ಅಗಲಕ್ಕೆ ನಿತ್ಯ ನಿರ್ಮಲ ಜಲಧಾರೆ ಭಕ್ತಿ ಪರಿಸರಕ್ಕೂ ಕಳೆಗಟ್ಟಿಸುತ್ತಿತ್ತು. ಆದರೆ ಇಂದು ಅವೆಲ್ಲ ನಾಶವಾಗಿದೆ. ಮೊದಲೆಲ್ಲ ಮೇಲ್ದಂಡೆಯಲ್ಲಿ ಹತ್ತಿಪ್ಪತ್ತಡಿಯಷ್ಟೇ ನೀರ ಹರಿವಿನ ವಿಲಾಸ ಕಾಣಿಸುವಂತೆ ಹಸಿರು ಮುಚ್ಚಿಕೊಂಡಿರುತ್ತಿತ್ತು. ಇಂದು ಮಹಾಪ್ರವಾಹವೊಂದು ಸುಮಾರು ನೂರಿನ್ನೂರು ಅಡಿಯಾಚೆಯಿಂದಲೂ ಇಪ್ಪತ್ತು-ಮೂವತ್ತಡಿ ಅಗಲಕ್ಕೆ ಕಿರು ಹಸಿರನ್ನೆಲ್ಲ ತೊಳೆದು ಹಾಕಿದೆ. ಮತ್ತೂ ಭಯಂಕರವಾಗಿ ಅಸಂಖ್ಯ ಮರ ಬಂಡೆಗಳನ್ನು ಕೊಚ್ಚಿ ತಂದು, ದಾರಿಯಂಚಿನ ಕಟ್ಟೆಯನ್ನೂ ಸೇರಿಸಿಕೊಂಡು ಆಚಿನ ಕೊಳ್ಳಕ್ಕೆ ಹಾರಿಕೊಂಡಿದೆ. ಅದೆಷ್ಟೋ ವರ್ಷಗಳಿಂದ ಪಾಚಿ ಪೊದರುಗಳ ಸಾಂಗತ್ಯದಲ್ಲಿ ಸೌಮ್ಯ ತಪಸ್ವಿಗಳಂತಿದ್ದ ಬಂಡೆಗುಂಡುಗಳೆಲ್ಲ ಬೋಳಾಗಿ, ಗಡಬಡಿಸಿ ಉದ್ದಕ್ಕೂ ಎರಚಾಡಿ ಹೋಗಿದ್ದವು. ಹಾಗೆ ಬಂದ ಮರ. ಬಂಡೆ, ಮಣ್ಣು ಸೇತುವೆಯ ತಳದ ಕೊಳವೆಯ ಬಾಯಿ ಕಟ್ಟಿ ರಸ್ತೆಯನ್ನೆ ಅಡ್ಡ ಹಾಯ್ದು ಮುಂದುವರಿದದ್ದಕ್ಕೇ ಕೆಳ ಪಾತ್ರೆಯಲ್ಲೂ ಸಾಕಷ್ಟು ಮರ ಬಳ್ಳಿಗಳ ಅವಶೇಷಗಳು ಕಾಣುತ್ತಿದ್ದವು. ಸದ್ಯ ಮರ, ಕಲ್ಲುಗಳನ್ನು ಅತ್ತಿತ್ತ ನೂಕಿ, ಮೋರಿ ಬಿಡಿಸಿಟ್ಟಿದ್ದರು. ರಿಕ್ಷಾ ಚಾಲಕ ದಾರಿ ತೆರವಿದ್ದಷ್ಟೂ ಮುಂದಕ್ಕೆ ನಮ್ಮನ್ನು ಒಯ್ಯುವ ಉತ್ಸಾಹದಲ್ಲಿದ್ದ. ಆದರೆ ಮುಂದಿನ ಪ್ರಾಕೃತಿಕ ಸ್ಥಿತಿಯನ್ನು ವಿವರಗಳಲ್ಲಿ ನೋಡುವುದಕ್ಕಾಗಿ ಬಂದಿದ್ದ ನಾವು ಚಾರಣವನ್ನೇ ಆಯ್ದುಕೊಂಡೆವು.

ಬೂದಿ ಚೌಡಿಯ ಅರಣ್ಯ ಇಲಾಖೆಯ ಮನೆಗಳೆಲ್ಲ ಬೀಗದಲ್ಲಿದ್ದವು. ಅನಂತರ ತಿಳಿದುಬಂದಂತೆ ಅಲ್ಲಿನ ನೌಕರರೆಲ್ಲ ದಾರಿಯ ಉತ್ಪಾತವನ್ನು ಮೀರಿ, ಬಿಸಿಲೆಯಿಂದ ಇನ್ನೂ ಇತ್ತ ದಾಟುವ ಧೈರ್ಯ ತಳೆದಿರಲಿಲ್ಲ. ಅದಕ್ಕೂ ಮಿಗಿಲಾಗಿ ಗುಡಿಯಂಗಳಕ್ಕೆ ಬಡಿದ ನೆರೆ, ಇನ್ನೊಮ್ಮೆ ತಮ್ಮ ಬಿಡಾರಕ್ಕೆ ಬಡಿಯಬಾರದೆಂದಿಲ್ಲವಲ್ಲ. ಇಲ್ಲಿ ದಾರಿಯ ನವೀಕರಣದ ಯೋಜನೆಯಲ್ಲಿ ಗುಡಿ ಎದುರಿನ ತೀವ್ರ ತಿರುವಿನ ಬದಲು, ನೇರ ಹೊಸದೇ ಸೇತುವೆಗೆ ಕುಂದಗಳನ್ನು ನಿಲ್ಲಿಸಿದ್ದಾರೆ. ಅದು ಪೂರ್ಣಗೊಂಡಂದು ಸದ್ಯದ ಹಳೇ ಸೇತುವೆ ಸಾರ್ವಜನಿಕ ಬಳಕೆಯಿಂದ ಹೊರಗಾದರೂ ಗುಡಿಯ ಅಂಗಳ ವಿಸ್ತರಣೆಗೆ ಅವಕಾಶ ಒದಗಿಸೀತು. ಹಾಗಾಗಬಾರದು. ಸಪುರ ಕಂಡಿಯ ಆ ಸೇತುವೆಯನ್ನು ಬಿಚ್ಚಿ, ಝರಿಯನ್ನು ಪೂರ್ಣ ಪ್ರಾಕೃತಿಕ ಸಹಜತೆಗೆ ಬಿಡುವುದಾಗಬೇಕು. ಮುಂದುವರಿದು ಅಲ್ಲಿನ ನಿರುಪಯುಕ್ತ ಇಲಾಖಾ ವಸತಿಗೃಹಗಳನ್ನೂ ಬಿಚ್ಚಿ, ಅವಶ್ಯವಿದ್ದರೆ ಮೊದಲಿದ್ದಂತೆ ಕುಳ್ಕುಂದಕ್ಕೇ ವರ್ಗಾಯಿಸಬಹುದು. ಆಗ ಸಹಜವಾಗಿ ಅವಗಣನೆಗೀಡಾಗುವ (ಇಲಾಖಾ ನೌಕರರೇ ಇಲ್ಲಿನ ಪೂಜಾರಿಗಳು!), ಅನಧಿಕೃತ, ಬೂದಿ ಚೌಡಿ ಸ್ಥಾನವನ್ನೂ ಪೂರ್ಣ ಬರ್ಖಾಸ್ತುಗೊಳಿಸುವುದು ಸುಲಭವಾಗುತ್ತದೆ.

ಬೂದಿ ಚೌಡಿಯಿಂದ ಮುಂದೆ ಸುಮಾರು ಆರೇಳು ಕಿಮೀ ದೂರದವರೆಗೂ ಅಂದರೆ, ಅಡ್ಡಹೊಳೆ ಸೇತುವೆಯವರೆಗೂ ಹಿಂದೆಲ್ಲ ಬಲ ಕೊಳ್ಳದಿಂದ ನೀರ ಹರಿವಿನ ಸದ್ದು ಮಾತ್ರ ಕೇಳುತ್ತಿತ್ತು. ಆದರೆ ಈ ಸಲ ಒಂದೆರಡು ಕಡೆ ಹೊಳೆಯೇ ಕಾಣಿಸುತ್ತಿತ್ತು. ಬಹುಶಃ ಹೊಳೆಯ ಒಯ್ಲಿನಲ್ಲಿ ಇತ್ತಣ ದಂಡೆ ಹೆಚ್ಚೆ ಕೊರೆದು ಹೋಗಿರಬಹುದು. ಅಥವಾ ಪ್ರವಾಹದಲ್ಲಿ ಅಡ್ಡಾದಿಡ್ಡಿ ತೇಲಿಹೋಗಿರಬಹುದಾದ ಮಹಾಮರಗಳ ಕೊಂಬೆಗಳ ಸೆಳೆತಕ್ಕೆ ಇತ್ತಣ ಕುರುಚಲು ಕಾಡೆಲ್ಲಾ ಸವರಿ ಹೋಗಿರಲೂಬಹುದು.

‘ಬಿಸಿಲೆ ೧೭ ಕಿಮೀ’ ಕಲ್ಲಿಗೂ ತುಸು ಮೊದಲೇ ನಮ್ಮ ಚಾರಣ ಶುರುವಾಗಿತ್ತು. ಭಾರೀ ಬಂಡೆ, ಕೆಲವು ಲಾರಿ ತುಂಬುವಷ್ಟು ದರೆ ಜರಿದಿರುವುದನ್ನು ರಿಕ್ಷಾದಲ್ಲಿ ಬರುವಾಗಲೂ ಮುಂದೆ ಚಾರಣದುದ್ದಕ್ಕೂ ಹಲವೆಡೆಗಳಲ್ಲಿ ನಾವು ಕಂಡಿದ್ದೆವು. ಹಾಗೇ ಸಣ್ಣ – ದೊಡ್ಡ ಮರ ಅಡ್ಡ ಮಲಗಿರುವವೂ ಸಾಕಷ್ಟಿದ್ದುವು. ಚೌಡಿತಾಣದಿಂದ ಸುಮಾರು ಒಂದು ಕಿಮೀ ಮೇಲಿನವರೆಗೂ ಅವನ್ನೆಲ್ಲ ಕತ್ತರಿಸಿ, ಜೆಸಿಬಿಯಲ್ಲಿ ಅತ್ತ ಇತ್ತ ನೂಕಿ ದಾರಿ ಬಿಡಿಸುವ ಕಾಮಗಾರಿ ನಡೆಸಿದ್ದೂ ಆಗಿತ್ತು. ಕೆಲವೆಡೆ ಬಲ ಕೊಳ್ಳದಂಚು, ಅಲ್ಲಿನ ರಕ್ಷಣಾಬೇಲಿಯೋ, ಕಲ್ಲ ಸಾಲೋ ಆಚಿನ ನೆಲವೋ ಕುಸಿದಿರುವುದೂ ಕಂಡೆವು. ಒಂದೆಡೆಯಲ್ಲಿ ಸೇತುವೆ ಸಂಪರ್ಕಕ್ಕೆ ಕಟ್ಟಿದ್ದ ಕಲ್ಲಗೋಡೆಯೇ ಕೊಚ್ಚಿ ಹೋಗಿತ್ತು.

ಸೇತುವೆಯ ಅಡಿ ಭಾರೀ ಮಾಟೆಬಿದ್ದು ಅರೆವಾಸಿ ಸೇತುವೆ ಗಾಳಿಯಲ್ಲೇ ನಿಂತಂತಿತ್ತು. ಮತ್ತೊಂದೆಡೆ ಕೊಳ್ಳದ ಕೊರೆತ ತುಸು ಆಳದಲ್ಲೇ ಆಗಿರಬೇಕು. ಭದ್ರಬೇಲಿ, ಕಾಂಕ್ರೀಟ್ ಹಾಸು ತೋರಿಕೆಗೆ ಅಖಂಡವಾಗಿದ್ದರೂ ತುಸು ಜಗ್ಗಿ, ಬಿರುಕು ತಡೆಗೆಂದೇ ಮಾಡಿದ ಸಂದಿನ ಉದ್ದಕ್ಕೆ ಹಾಗೂ ಹೀಗೂ ಸೆರೆಬಿಟ್ಟು, ಮೈಸೂರು ಪಾಕಿನಂತ ಭಾರೀ ಹೋಳಾಗಿತ್ತು. ಒಂದು ಹಂತದಲ್ಲಿ ಕೊಳ್ಳದ ತುಯ್ತ ಹೆಚ್ಚಿದ್ದಕ್ಕೋ ಏನೋ ಬಿರುಕು ಕಾಂಕ್ರೀಟಿನ ಘನ ಎರಕದಲ್ಲೂ ಓರೆಕೋರೆಯಾಗಿ ಹಬ್ಬಿತ್ತು. ಅಂಥಲ್ಲೆಲ್ಲ ರಸ್ತೆಯ ಅಂಚಿಗೆ ಹೋಗುವುದು, ಕೊಳ್ಳ ಇಣುಕುವ ಸಾಹಸವನ್ನು ನಾವು ಮಾಡಲಿಲ್ಲ.

ಭಾರೀ ದರೆ ಜರಿದ ಸ್ಥಳಗಳನ್ನು ಬಿಟ್ಟು ಉದ್ದಕ್ಕೂ ಎಡ ಅಂಚಿನಲ್ಲಿ ಯಾರೋ ಚರಂಡಿ ಬಿಡಿಸಿದ್ದಂತಿತ್ತು. ಆದರೆ ನಿಜದಲ್ಲಿ ಅದು ಬೀಯೆಸ್ಸೆನ್ನೆಲ್ಲಿನವರ ಕೇಬಲ್ ಎಳೆದ ತಗ್ಗು ಜಗ್ಗಿ, ಹರಿನೀರು ಕೊರೆದು ಉಂಟಾದ ಚರಂಡಿ. ದಾರಿಗೆ ದಾರಿಯೇ ಕೊಚ್ಚಿ ಹೋದ ಹಂತಗಳಲ್ಲಿ ಈ ಕೆಂಪು ಕೇಬಲ್ಲುಗಳು ಹಲವೆಡೆಗಳಲ್ಲಿ ಪ್ರತ್ಯಕ್ಷವಾಗಿದ್ದವು. ಆಶ್ಚರ್ಯಕರವಾಗಿ ಇಲಾಖೆಯ ನೌಕರರು ಆಗಲೇ ಅವನ್ನೆಲ್ಲ ಇದ್ದಂತೆ ದುರಸ್ತಿ ಮಾಡಿ, ಅತ್ತ ದೃಢವಾಗಿ ನಿಂತ ಸಣ್ಣ ಪುಟ್ಟ ಮರಗಳಿಗೆ ಎಳೆದು ಕಟ್ಟಿಬಿಟ್ಟಿದ್ದರು. ಇನ್ನೂ ಮಳೆ ಬಿಡದ ದಿನಗಳಲ್ಲೇ ಅಲ್ಲಿನ ಅಸ್ಥಿರತೆಯ ಪರಿಣಾಮಗಳು ತೋರುತ್ತಿದ್ದಾಗಲೂ ಸಾರ್ವಜನಿಕವಾಗಿ ಗುರುತಿಸಲ್ಪಡುವ, ಸಮ್ಮಾನಗಳನ್ನು ದಕ್ಕಿಸಿಕೊಳ್ಳುವ ಮೋಹವಿಲ್ಲದೆ, ಕರ್ತವ್ಯ ನಿರ್ವಹಣೆ ಮಾಡಿದ ಆ ನೌಕರರು ಯಾವ ಗಡಿ ಕಾಯುವ ಯೋಧರಿಗೆ ಕಡಿಮೆಯವರಲ್ಲ ಎಂದೇ ನನ್ನ ಭಾವನೆ.

೧೫ನೇ ಕಿಲೋ ಕಲ್ಲಿಗೂ ಸುಮಾರು ನೂರಡಿ ಮೊದಲು ದಾರಿಗಡ್ಡ ಕಲ್ಲು, ಮಣ್ಣು, ಮರಗಿಡಬಳ್ಳಿಗಳನ್ನು ಕಲಸಿಕೊಂಡ ಒಂದು ಮಹಾ ಜಲ ಪ್ರವಾಹ ಹಾದು ಹೋದದ್ದು ಕಾಣಿಸುತ್ತದೆ. ಇದರ ಸ್ವರೂಪ ಬೂದಿ ಚೌಡಿಯ ಬಳಿ ಬಂದದ್ದಕ್ಕಿಂತಲೂ ತೀವ್ರ. ಇಲ್ಲಿ ನೆಲ ಹೆಚ್ಚು ಕಡಿದಾಗಿದೆ. ಅಂದಾಜು ಇನ್ನೂರು ಮೀಟರ್ ಎತ್ತರದಿಂದ ತೊಡಗಿದಂತೆ ಭಾರೀ ಅಗಲಕ್ಕೆ ಯಾವುದೇ ಮರವನ್ನೂ ಉಳಿಸದಂತೆ ಆಳಕ್ಕೆ ಭೂಮಿ ಕೊರೆಯುತ್ತ ಬಂದಿತ್ತು ಪ್ರವಾಹ. ಮೇಲ್ತುದಿ ಸಪುರಕ್ಕೆ ಕಾಣಿಸಿದರೂ ಅದು ದಾರಿ ಹಾಯುವಲ್ಲಿ ಸುಮಾರು ನೂರಡಿ ಅಗಲವನ್ನೇ ವ್ಯಾಪಿಸಿದ್ದಿರಬೇಕು. ಮೂಲದಲ್ಲಿ ಅಲ್ಲಿದ್ದ ಝರಿಪಾತ್ರೆಯ ಬಂಡೆ ಒಟ್ಟಣೆಯನ್ನು ಬಹಳ ಕೆಳಗಿನಿಂದಲೇ ಕೊರೆದೆಬ್ಬಿಸಿ ಹೊತ್ತು ತಂದು, ಮೋರಿಯನ್ನು ನಿಗಿದು, ದಾರಿಯನ್ನು ಹುಗಿದು, ಕೆಳಕೊಳ್ಳದಲ್ಲೂ ಕಣ್ಣೆಟುಕದಷ್ಟು ದೂರಕ್ಕೆ ಮುಂದುವರಿದಿತ್ತು. ನಾವು ಕಂಡಂತೆ ಇಂಥ ಮಹಾಕೊರೆತಗಳು ಈ ವಲಯದಲ್ಲಿ ಮೂರು ಆಗಿವೆ. ಅವುಗಳಲ್ಲಿ ಮೊದಲನೆಯದು ಮಾತ್ರ ರಸ್ತೆಯನ್ನು ಉಳಿಸಿಟ್ಟಿತ್ತು. ಅಡ್ಡಹೊಳೆ ಸೇತುವೆ ಕಳೆದ ಮೇಲೆ ಸಿಕ್ಕ ಇನ್ನೆರಡು ಮೋರಿಗಳನ್ನೂ ಸೇರಿಸಿ ರಸ್ತೆಯನ್ನೇ ಬಳಿದುಕೊಂಡು ಹೋಗಿದ್ದವು. ಎರಡನೆಯದು ಒಂದು ಹಿಮ್ಮುರಿ ತಿರುವಿನಷ್ಟೇ ರಸ್ತೆಯನ್ನು ಒಯ್ದಿದ್ದರೆ, ಮೂರನೆಯದ್ದು ನಿಖರವಾಗಿ ತಿಂದದ್ದೆಷ್ಟೆಂದು ಇಲಾಖೆಯ ಕಡತ ತೆಗೆದೇ ಹೇಳಬೇಕು. ಬಿಸಿಲೆ ಹಳ್ಳಿಗರು ಹೇಳುವಂತೆ ಅಲ್ಲಿ ಎರಡು ಹಿಮ್ಮುರಿ ತಿರುವಿದ್ದಿರಬೇಕು!

ಮುಕ್ಕಾಲುವಾಸಿ ಬಿಸಿಲೆ ದಾರಿಯ ಮೇಲಣ ವಲಯ ದಟ್ಟ ಕಾಡೇ ಇರುವುದರಿಂದ ಇಲ್ಲಿ ಅಸಂಖ್ಯ ಝರಿಗಳು ವರ್ಷಪೂರ್ತಿ ಹರಿಯುವುದನ್ನು ಕಾಣಬಹುದು. ಅದರಲ್ಲೂ ಮಳೆಗಾಲ ಬಂತೆಂದರೆ ಪ್ರತಿ ಏಣು, ಕಣಿವೆಯಲ್ಲೂ ವೈಶಿಷ್ಟ್ಯಮಯ ಜಲಧಾರೆಗಳು, ಅಸಂಖ್ಯ ಜಲಪಾತಗಳು. ನಾನು ಈ ದಾರಿಯ ವಿಕಾಸವನ್ನು ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ, ಅಂದರೆ ಪೂರ್ಣ ಮುಚ್ಚಿ ಅವಗಣನೆಗೀಡಾದಲ್ಲಿಂದ ಇಂದಿನ ಕಾಂಕ್ರಿಟೀಕರಣದವರೆಗೂ ನೋಡುತ್ತ ಬಂದಿದ್ದೇನೆ. ಮೊದಲು ಅರ್ಧ ದಾರಿಯಲ್ಲಿ ಸಿಗುವ ಅಡ್ಡಹೊಳೆಯೊಂದನ್ನುಳಿದು ಇತರೆಲ್ಲ ಪ್ರಧಾನ ಜಲಧಾರೆಗಳಿಗೂ ದಾರಿ ದಾಟುವಲ್ಲಿ ಮೋರಿಯ ಬಂಧನವೇ ಇರಲಿಲ್ಲ, ಆದರೆ ಒಮ್ಮೆ ಇದು ‘ಅಭಿವೃದ್ಧಿ’ಯ ಕಪಟನಾಟಕದ ಸೆಳವಿಗೆ ಬಿದ್ದ ಮೇಲೆ, ಅಡ್ಡಹೊಳೆಗೆ ಹೊಸ ಸೇತುವೆಯಿಂದ ಹಿಡಿದು ಎಲ್ಲ ತೊರೆಗಳಿಗೂ ಅಪರಿಪೂರ್ಣ ಮೋರಿಗಳೂ ವಕ್ಕರಿಸಿದವು. ಮರ, ಮಹಾಬಂಡೆ, ಕಡಿದಾದ ದರೆಗಳ ವ್ಯವಸ್ಥೆ ಯೋಚಿಸದೇ ನಡೆದ ಅಗಲೀಕರಣ, ಮಳೆನೀರಿಗಿಲ್ಲದ ಚರಂಡಿಗಳು, ತೋರಿಕೆಗಷ್ಟೇ ಮುಚ್ಚಿದ ಕೇಬಲ್ ಹಾಯ್ದ ಆಳ ಗಡಿಗಳು, ಕೆಳಗಿನಿಂದ ಬಲಕೊಡದೇ ದರೆಯ ಅಂಚಿನವರೆಗೂ ಹಬ್ಬಿದ ಕಾಂಕ್ರೀಟೀಕರಣಗಳೆಲ್ಲದರ ಮೊತ್ತವೆಂಬಂತೆ ಇಲ್ಲಿನ ಮೂರು ಭೂಕೊರೆತದ ಮಹಾಪ್ರವಾಹಗಳು ಕಾಣಿಸುತ್ತವೆ.

ಈ ವಲಯದ ಬೆಟ್ಟಗಳ ಬಹುಪಾಲು ಎತ್ತರವೆಲ್ಲ ಸಡಿಲವಾಗಿ ಗುಡ್ಡೆ ಹಾಕಿದ ಮಹಾಬಂಡೆಗುಂಡು ಮತ್ತು ಮಣ್ಣಿನ ಮಿಶ್ರಣ. ಇವು ಯುಗಾಂತರಗಳ ಮಳೆ, ಬಿಸಿಲು ಮತ್ತು ಹಸಿರಿನ (ಹುಲ್ಲು, ಗಿಡ, ಮರ, ಬಳ್ಳಿ…) ಸಂಯೋಗದಲ್ಲಿ ಜಗ್ಗಿ, ಕುಸಿದು ತಮ್ಮದೇ ಸಮತೋಲನದಲ್ಲಿ ಒಂದು ಸ್ಥಿರರೂಪವನ್ನು ಪಡೆದಿವೆ. ಅಂಥಲ್ಲಿ ಒಂದು ಮರ, ಒಂದು ಬಂಡೆ ಜರುಗಿದರೂ ಉಂಟಾಗುವ ಅಸ್ಥಿರತೆ, ಸರಣಿಯಲ್ಲಿ ಮುಂದುವರಿದು ಮಹಾರೂಪ ಧರಿಸುವುದು ಸಹಜವೇ ಇದೆ. ಉದಾಹರಣೆಗೆ ದಾರಿಯಂಚಿನ ಒಂದು ಮೋರಿ ಕಟ್ಟಿತೆನ್ನಿ. ಅಸಹಜವಾಗಿ ನಿಂತ ನೀರಿಗೆ ನೆಲ ಮಿದುವಾಗಿ ಒಂದು ಬಂಡೆಯೋ ದರೆಯೋ ಪುಟ್ಟದಾಗಿಯೇ ಮಗುಚುತ್ತದೆ. ಅವು ಉಂಟು ಮಾಡುವ ಶೂನ್ಯಕ್ಕೆ ಮತ್ತಷ್ಟು ನೆಲ, ಮರ ಸ್ಥಳಾಂತರಗೊಳ್ಳುತ್ತವೆ. ಮತ್ತೆ ಹಾಗೆ ಸಡಿಲ ಬಿದ್ದ ಎಡೆಗಳಲ್ಲಿನ ಮಣ್ಣು ಭೋರ್ಗರೆವ ನೀರಿಗೆ ತೊಳೆದು ಹೋಗ ತೊಡಗಿದ ಮೇಲೆ, ಪರಿಸ್ಥಿತಿ ದೊಡ್ಡ ವಿಕೋಪದಲ್ಲೇ ಕೊನೆಗಾಣುತ್ತದೆ. ಈ ಸರಣಿಕ್ರಿಯೆ ಪ್ರಾಕೃತಿಕವಾಗಿಯೂ ಆಗುವುದಿದೆ ಎನ್ನುವುದಕ್ಕೆ ಎರಡು ಉದಾಹರಣೆಗಳು ನಮಗೆ ಇದೇ ಬಿಸಿಲೆ ಚಾರಣದಲ್ಲೇ ಕಾಣ ಸಿಕ್ಕವು. ಒಂದು ಕುಮಾರಪರ್ವತದ ದುರ್ಗಮವಾದ ಉತ್ತರ ಮೈ, ಮತ್ತೊಂದು ಹದಿನಾರು ಗುಡ್ಡೆಯ ಪೂರ್ವಮೈ. ಇವೆರಡೂ ನಮಗೆ ಬಹಳ ದೂರದಲ್ಲಿದ್ದುವು ಮತ್ತು ಅವುಗಳ ಪರಿಸರದಲ್ಲಿ ನೇರ ಮನುಷ್ಯನ ಹಸ್ತಕ್ಷೇಪ ಇರಲಾರದು.

(ಮಹಾಪ್ರವಾಹದ ಪ್ರಚೋದನೆಗೆ ಸಣ್ಣ ಭೂಕಂಪವೂ ಕಾರಣವಿರಬಹುದು. ಸುಮಾರು ನಾಲ್ಕು ದಶಕಗಳ ಹಿಂದೆ ಸುಳ್ಯ ಸಮೀಪದ ಬೇಂಗಮಲೆಯಲ್ಲಿ ಇಂಥದ್ದೊಂದು ಭೌಗೋಳಿಕ ವಿಚಿತ್ರ ಜರುಗಿದ್ದನ್ನು ನಾನು ಖುದ್ದು ಹೋಗಿ ನೋಡಿ ಬಂದಿದ್ದೆ. ಜನಪದರು ಅಂಥವನ್ನು ‘ಕೊಪ್ಪರಿಗೆ ಹೋಯ್ತು’ ಎಂದೇ ಗುರುತಿಸಿಕೊಂಡದ್ದನ್ನೂ ನಾನಾಗ ತಿಳಿದುಕೊಂಡೆ. ಅದು ಜನವಸತಿ, ಕೃಷಿ ಚಟುವಟಿಕೆಗಳೇನೂ ಇರದ ಕಾಯ್ದಿಟ್ಟ ಅರಣ್ಯವಾದ್ದರಿಂದ ವಿಶೇಷ ಸುದ್ದಿಯಾಗಲಿಲ್ಲ. ನಾನು ವೈಯಕ್ತಿಕ ಉತ್ಸಾಹದಲ್ಲಿ ಅದರ ವಿವರಗಳನ್ನು ಅಂದಿನ ಜಿಲ್ಲಾ ಭೂವಿಜ್ಞಾನಿಯಲ್ಲಿ ಹೇಳಿದಾಗ, ಅವರು ಸ್ತರಭಂಗ ಎನ್ನುವ ಇನ್ನೊಂದೇ ವೈಜ್ಞಾನಿಕ ವಿಶ್ಲೇಷಣೆಯನ್ನೂ ಕೊಟ್ಟಿದ್ದರು, ಇಲ್ಲಿ ಬೇಡ.)

ಮಹಾಪ್ರವಾಹದಂಥ ಪ್ರಾಕೃತಿಕ ವಿರಳ ಸಂಗತಿ, ಇಂದು ಅಗಲೀಕೃತ ದಾರಿಯ ಉದ್ದಕ್ಕೂ ಕಾಣುವಂತಾಗಿವುದು ನಿಸ್ಸಂದೇಹವಾಗಿ ಮನುಷ್ಯ ಚಟುವಟಿಕೆಗಳ ಪರಿಣಾಮವೇ ಸರಿ. ಇದನ್ನು ಅಧ್ಯಯನ, ಸಂಶೋಧನಗಳಿಂದ ಮುಂಗಂಡು ಸ್ಪಷ್ಟವಾಗಿ ಹೇಳಿದ ಮಾಧವ ಗಾಡ್ಗೀಳ್, ರಾಜಕೀಯ ಧಣಿಗಳ ಒತ್ತಾಯಕ್ಕಾಗಿ ತೆಳುಗೊಳಿಸಿದ ಕಸ್ತೂರಿರಂಗನ್ ಅವರುಗಳನ್ನು ಇನ್ನೂ ಖಳನಾಯಕರ ನೆಲೆಯಲ್ಲಿ ಕಾಣುವುದು ಬಾಲಿಶ. ಸಣ್ಣ ಜಿಲ್ಲೆ, ಸಮಾನ ಹಕ್ಕು ಎಂಬಿತ್ಯಾದಿ ಅಪ್ರಾಕೃತಿಕ ನೆಲೆಗಳನ್ನು ಮುಂದಿಟ್ಟು, ರಾಜಕೀಯ ಒತ್ತಡ ತರುವವರು ಯಾರೇ ಇರಲಿ, ಭೌಗೋಳಿಕ ಪರಿಸ್ಥಿತಿಗನುಗುಣವಾಗಿ ನೀರು, ಫಲವಂತಿಕೆ, ಬೆಳೆ, ಜೀವವೈವಿಧ್ಯ ಮತ್ತು ಸಮೃದ್ಧಿ ಎನ್ನುವ ಪ್ರಾಥಮಿಕ ಪಾಠಗಳನ್ನು ಇನ್ನೊಮ್ಮೆ ಓದಿ ಮನನ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ನಿಸ್ಸಂದೇಹವಾಗಿ ಹೆಚ್ಚಿನ ಅನಾಹುತಗಳಿಗೆ ಈಡಾಗುವುದನ್ನು ಯಾರೂ ತಪ್ಪಿಸಲಾರರು.

ಕೇರಳ, ಕೊಡಗಿನ ಮಹಾಪ್ರವಾಹದ ಸಾಕಷ್ಟು ಕಥನಗಳನ್ನು ಓದಿ, ಚಿತ್ರ – ಚಲಚಿತ್ರಗಳನ್ನು ನೋಡಿದ್ದರೂ ಪ್ರತ್ಯಕ್ಷ ದರ್ಶನದ ಅನುಭವ ವಿಶಿಷ್ಟವೇ ಸರಿ. ಅದಕ್ಕಾಗಿ ನಮ್ಮ ಪ್ರಸ್ತುತ ಬಿಸಿಲೆ ಚಾರಣದ ಎರಡು ಘಟನೆಗಳನ್ನು ಮಾತ್ರ ತುಸು ವಿಸ್ತರಿಸುತ್ತೇನೆ. ಮೊದಲ ಮಹಾಪ್ರವಾಹದ ಅಂಚಿನಲ್ಲಿ ನಾವು ಎರಡು ಮೂರು ಮಿನಿಟು ನಿಂತದ್ದಿರಬಹುದು. ಹನಿಕಡಿಯದ ಮಳೆ ಮುಗಿದು ದಿನ ಎರಡು ಮೂರಾಗಿತ್ತು. ಅಂದಂತೂ ಸೂರ್ಯ ತೊಳಗಿಯೇ ಇದ್ದ. ಮಹಾಪ್ರವಾಹವೂ ಕಳೆದು ಐದಾರು ದಿನವೇ ಆಗಿತ್ತು. ತೊರೆ ತಾನೇ ಕಡಿದಿಕ್ಕಿದ ವಿಸ್ತಾರ ಪಾತ್ರೆಯಲ್ಲಿ ನಡುವಿನ ತಗ್ಗಿನಲ್ಲಿ ಹರಿದಿತ್ತು. ಅದರ ಕೆಂಬಣ್ಣ ಕಳೆಯದಿದ್ದರೂ ಗಾತ್ರ ಸಣ್ಣದಾಗಿಯೂ ಆಳ ಹೆಚ್ಚಿಲ್ಲದಂತೆಯೂ ಇತ್ತು. ನಾವಿಬ್ಬರೂ ಚಪ್ಪಲಿ ಮಣ್ಣಾಗಬಾರದು, ಜಾರಿಬೀಳಬಾರದು ಎಂಬೆಲ್ಲ ಎಚ್ಚರದಲ್ಲಿ, ನಮ್ಮದೇ ಆಯ್ಕೆಯಲ್ಲಿ, ಕೊಚ್ಚಿ ಬಂದಿದ್ದ ಕಲ್ಲೋ ಮರವೋ ಮೆಟ್ಟಿ ದಾಟ ತೊಡಗಿದೆವು. ನಾನು ನಾಲ್ಕೈದು ಹೆಜ್ಜೆ ಹಾಕಿದ ಮೇಲೆ ಕಲ್ಲು ಮರವೇನೂ ಕಾಣಿಸಲಿಲ್ಲ. ಸರಿ, ಸ್ವಲ್ಪ ಕೆಸರಾದರೆ ತೊಳೆದುಕೊಂಡ ಎಂದಷ್ಟೇ ಯೋಚಿಸಿ ಮುಂದೆ ಗಟ್ಟಿಯಾಗಿಯೇ ಕಾಣಿಸಿದ ಮಣ್ಣಿನ ಮೇಲೇ ಹೆಜ್ಜೆ ಊರಿದೆ. ಪುಸ್ಸೆಂದು ಮೀನಖಂಡದವರೆಗೂ ನನ್ನ ಹೆಜ್ಜೆ ಹೂತುಹೋಯ್ತು. ಎಲಾ ಎಂದು ಇನ್ನೊಂದು ಹೆಜ್ಜೆ ಊರಹೋದರೆ ಅದು ಮೊಣಕಾಲಾಳದ ಗೊಸರು. ಕೂಡಲೆ ನನ್ನ ತಪ್ಪಿನರಿವಾಗಿ, ಸುಂದರರಾಯರನ್ನು ಎಚ್ಚರಿಸಿದೆ. ಮತ್ತೆ ತಡ ಮಾಡದೆ, ಹೆಚ್ಚು ಹೊಡಚಾಡದೆ ಅವರ ಸಹಾಯ ಹಸ್ತವನ್ನು ಯಾಚಿಸಿದೆ. ರಾಯರು ನನ್ನಷ್ಟು ಆತುರಗಾರರಲ್ಲದ್ದಕ್ಕೆ ಇನ್ನೂ ಕಲ್ಲು, ಮರಗಳ ಗಟ್ಟಿ ನೆಲೆಯಲ್ಲೇ ಇದ್ದವರು ಧಾವಿಸಿದರು. ನನ್ನ ಅಂಚಿನ ಬಂಡೆಯ ಮೇಲೆ ನಿಂತು, ಕೈ ಕೊಟ್ಟು ಆಧರಿಸಿದರು. ಬಹಳ ಕಷ್ಟದಲ್ಲಿ ಪುಡಿಕಲ್ಲು, ಅಂಟು ಕೆಸರಿನ ಬಂಧನದಿಂದ ಕಾಲು, ಕಳಚಿಹೋದ ಚಪ್ಪಲಿಗಳನ್ನೆಳೆದು ತೆಗೆದು ಗಟ್ಟಿ ನೆಲೆಗೆ ಬರುವಾಗ ನನ್ನ ಮುಖದಲ್ಲಿ ನಗುವಿದ್ದರೂ ಒಳಗೊಳಗೇ ಹೆದರಿಹೋಗಿದ್ದೆ. ಕಂಪ, ಜವುಗು ಅಥವಾ ಇಂಗ್ಲಿಷಿನಲ್ಲಿ ಹೇಳುವಂತೆ ಕ್ವಿಕ್ ಸ್ಯಾಂಡ್ ಎನ್ನುವ ಸ್ಥಿತಿ ಅಲ್ಲಿನ ಕೆಸರಿನ ಹರಹಿನಲ್ಲಿತ್ತು. ದಿನದ ಬಿಸಿಲು ಮೇಲ್ಮೈಯನ್ನಷ್ಟೇ ಒಣಗಿಸಿ ಭ್ರಮೆ ಹುಟ್ಟಿಸುವಂತಿತ್ತು. ನನ್ನ ಅದೃಷ್ಟ ಖೊಟ್ಟಿಯಾಗಿದ್ದರೆ, ನಾನು ಇನ್ನಷ್ಟೂ ಆಳದ ಗೊಸರಹೊಂಡದಲ್ಲಿ ಸಿಕ್ಕಿಕೊಳ್ಳಬಹುದಿತ್ತು, ಖಾಯಂ ಕಳೆದೇ ಹೋಗಬಹುದಿತ್ತು! ಮತ್ತೆ ನಾವು ಬಹಳ ಎಚ್ಚರದಲ್ಲಿ ಕಾಂಕ್ರೀಟ್ ಹಾಸಿನ ಅಂಚನ್ನೇ ಆಯ್ದುಕೊಂಡು ಎದುರು ದಂಡೆಯ ಗಟ್ಟಿ ನೆಲ ಸೇರಿಕೊಂಡೆವು. ಮುಂದಿನ ಯಾವುದೇ ಕೆಸರಿನ ಹರಹುಗಳನ್ನು ಯಃಕಶ್ಚಿತ್‍ಗೊಳಿಸದ ಎಚ್ಚರವನ್ನೂ ಉಳಿಸಿಕೊಂಡೆವು.

ಮೊದಲೇ ಹೇಳಿದಂತೆ ಮೂರನೇ ಮಹಾಪ್ರವಾಹದ ಹರಹು ಬಹಳ ವಿಸ್ತಾರದ್ದು. ಸಾಲದ್ದಕ್ಕೆ ಅಲ್ಲಿ ಎರಡೂ ದಂಡೆಗಳಲ್ಲಿ ದೂರ ನೋಟಕ್ಕೆ ಸಿಕ್ಕಂತೆ ಕೆಸರಿನ ಹರಹೂ ದೊಡ್ಡದೇ ಇತ್ತು. ನಾವು ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ತೂಗಿ ಬಿಡುತ್ತ ನೀರನ್ನೇನೋ ಸಮೀಪಿಸಿದೆವು. ಇಲ್ಲಿ ನೀರಿನ ಮೊತ್ತ, ವೇಗ, ತಳದ ಸ್ಥಿರತೆ ವಿಶ್ವಾಸದಾಯಕವಾಗಿರಲಿಲ್ಲ. ತೊರೆಯ ನಡುವೆ ನಮಗೆ ಮೆಟ್ಟುಗಲ್ಲಾಗಿ ಒದಗುವ ಬಂಡೆಯೋ ಮರವನ್ನೋ ಅರಸಿ ತುಸು ಮೇಲೆ ನಡೆದಾಗ, ನನ್ನನ್ನು ಅಡ್ಡಬಿದ್ದ ಮಹಾಮರದ ಕಾಂಡವೊಂದು ಆಕರ್ಷಿಸಿತು.

ನಾನು ನಿಂತಲ್ಲಿ ಅದರ ತುಂಡಾದ ಬುಡವಿತ್ತು, ಎದುರು ದಂಡೆಯ ಕಿರು ಮರಗಳ ಬಂಧನದಲ್ಲಿ, ಅಂದರೆ ಸುಮಾರು ಐವತ್ತು ಅಡಿ ದೂರದಲ್ಲಿ, ಅದರ ಕೊಂಬೆರೆಂಬೆಗಳ ಮಹಾತಲೆ ಗಟ್ಟಿಯಾಗಿಯೇ ಸಿಲುಕಿಕೊಂಡಿತ್ತು. ಇಲ್ಲಿಂದಲ್ಲಿವರೆಗೂ ಸುಮಾರು ಒಂದೂವರೆ ಅಡಿ ವ್ಯಾಸದ ಉರುಟು, ಒರಟು, ನೇರ ಕಂಬವೇ ಅದು. ಮರ ಬಿದ್ದುಕೊಂಡಿದ್ದಂತೆ ಏರುಕೋನವೂ ನನಗೆ ಅನುಕೂಲಕರವಾಗಿಯೇ ಕಾಣಿಸಿತು. ಹಾಗೆಂದು ಯಾವುದೇ ಕೈತಾಂಗು ಇಲ್ಲದೇ ನಡೆದು ದಾಟುವ ಧೈರ್ಯ ನನ್ನದಲ್ಲ. ಬದಲಿಗೆ ಅದರ ಎರಡೂ ಬಗಲಿಗೆ ಕಾಲುಗಳನ್ನು ಇಳಿಬಿಟ್ಟು ಕುದುರೆ ಸವಾರಿಯಂತೇ ಕುಳಿತುಕೊಂಡೆ. ನನ್ನೆರಡು ಅಂಗೈಗಳನ್ನು ಹಿಮ್ಮುಖವಾಗಿ ಮರಕ್ಕಿಟ್ಟು ಅದುಮಿ, ಕುಂಡೆ ಮುಂದೆ ಸರಿಸಲು ತೊಡಗಿದೆ. ಒಂದೆರಡು ಮಿನಿಟಲ್ಲೇ ಹತ್ತಿಪ್ಪತ್ತು ಅಡಿ ಮುಂದುವರಿದೇ ಬಿಟ್ಟೆ.

ಸುಂದರ ರಾಯರು ತುಂಬ ತಾಳ್ಮೆವಂತ. ಗೊಸರು ನೆಲ, ರಭಸದ ಝರಿಗಳ ಸಂದಿಗ್ಧ ಪರಿಹರಿಸುವುದರಲ್ಲೇ ತಲ್ಲೀನರಾಗಿದ್ದರು. “ಹ್ವಾಯ್ ರಾಯ್ರೇ ಬಹಳ ಸುಲಭವಿದೆ ಬನ್ನಿ” ಎಂದು ಒತ್ತಾಯಿಸಿದೆ. ಆದರೆ ಅವರಿಗೆ ಎತ್ತರದ ಭೀತಿಯಂತೆ. ನಾನೇರಿದ್ದ ಬೋಳು ಕಾಂಡ ಮುಂದುವರಿಯುತ್ತ ನೆಲದಿಂದ ನಲ್ವತ್ತೈವತ್ತಡಿ ಎತ್ತರದಲ್ಲಿರುವುದನ್ನು ಅವರು ಮೊದಲೇ ಕಂಡುಕೊಂಡಿದ್ದರು. ಅವರು ನನ್ನ ಕರೆಯನ್ನು ನಿರಾಕರಿಸಿ, ಬಹಳ ಜಾಣ್ಮೆಯಿಂದ ಪುಟ್ಟ ಬಂಡೆ ಗುಂಡೊಂದರ ಆಧಾರದಲ್ಲಿ ತೊಡೆಮಟ್ಟದ ನೀರಿಗೇ ಕಾಲಿಳಿಸಿ, ಎದುರು ದಂಡೆ ಸೇರಿದರು. ಮತ್ತೆ ಅಷ್ಟೇ ಸಂಯಮದಲ್ಲಿ ಯಾವ್ಯಾವುದೋ ಮರ ಕಲ್ಲುಗಳ ಸರಣಿ ಹುಡುಕಿ, ಕೆಸರ ಹಾಸನ್ನೂ ಪಾರುಮಾಡಿ, ಎದುರಿನ ಸಹಜಾರಣ್ಯ ಸೇರಿಕೊಂಡರು.

ನನ್ನ ಪ್ರಗತಿ ಆರಂಭಿಕ ವೇಗವನ್ನು ಬೇಗನೆ ಕಳೆದುಕೊಂಡಿತು. ಕಾಂಡದ ನೇರಕ್ಕೆ ನಿಂತು ನೋಡಿದಾಗ ಕಾಣದ ಓರೆ ನನ್ನನ್ನೀಗ ಸತಾಯಿಸಿತ್ತು. ಹತ್ತು ಕೊಸರಾಟಕ್ಕೆ ಇಂಚಿನಷ್ಟೇ ಪ್ರಗತಿ. ಕಾಂಡ ಬಹುತೇಕ ಉರುಟೇ ಆದರೂ ಡುಬ್ಬದಂತೆ ಸಿಗುತ್ತಿದ್ದ ಸಣ್ಣ ಗಂಟುಗಳು ಹೆಚ್ಚೇ ಕಾಡಿದವು. ಏನೋ ಅಂಗೈ ಉರಿಯುತ್ತಿದೆ ಎಂದು ಗಮನಿಸಿದಾಗಲೇ ತಿಳಿಯಿತು ಎರಡೂ ಅಂಗೈಗಳಲ್ಲಿ ದೊಡ್ಡದಾಗಿ ಗುಳ್ಳೆ ಎದ್ದು, ಚರ್ಮ ಹರಿದೇ ಹೋಗಿತ್ತು. ಕಂಬದ ಏರುಕೋನ ಹೆಚ್ಚುತ್ತಿತ್ತೋ ನನ್ನ ನೂಕುವ ಶಕ್ತಿ ಕುಗ್ಗಿತ್ತೋ ತಿಳಿಯಲಿಲ್ಲ.

ಕುಮಾರ ಪರ್ವತದ ಮೈಯಲ್ಲಿನ ಕುಸಿತ ನಾನು ಪರ್ವತಾರೋಹಣದಲ್ಲಿ ದಪ್ಪ ಹಗ್ಗಗಳ ಮೇಲೆ ಡೆಡ್ ಮ್ಯಾನ್ಸ್ ಕ್ರಾಲ್ ಎಂಬ ನದಿ ಪಾರುಮಾಡುವ ತಂತ್ರವನ್ನು ಚೆನ್ನಾಗಿಯೇ ಅಭ್ಯಾಸ ಮಾಡಿದವ. ಹಾಗೇ ಇಲ್ಲೂ ಬೋರಲು ಬಿದ್ದು, ಪ್ರಯತ್ನಿಸಲು ಮರದ ದಪ್ಪ ಒಡ್ಡಿಕೊಡಲಿಲ್ಲ. ಒಟ್ಟಾರೆ ತೆವಳೋಣ ಅಥವಾ ನಾಲ್ಗಾಲು ಹಾಕೋಣ ಎಂದರೆ ಹಿಡಿತ ತಪ್ಪಿ, ಆಳದ ಬಂಡೆಗೋ ಕೆಸರಿಗೋ ಉರುಳಿ ಬೀಳುವ ಭಯ. ಅದುವರೆಗೆ ಎರಡೂ ಭುಜಗಳನ್ನಾಧರಿಸಿ ಹಿಂಜೋತುಬಿದ್ದ ಚೀಲ, ಇಲ್ಲಿ ಹೊರೆ ಎನ್ನಿಸಿತು. ನನ್ನೆಲ್ಲ ಮುಂಜಾರಿಕೆಯ ಮಿಸುಕಾಟವನ್ನೂ ಚೀಲ ಹಿಂತುಯ್ದು ಕ್ಷುಲ್ಲಕಗೊಳಿಸುತ್ತಿತ್ತು. ಒಂದು ಹಂತದಲ್ಲಿ ನನಗಿಂತಲೂ ಹೆಚ್ಚು ಆತಂಕಕ್ಕೊಳಗಾಗಿದ್ದ ರಾಯರು ನನಗೆ ಹಿಂದೆ ಸರಿಯುವ ಸೂಚನೆ ಕೊಟ್ಟದ್ದಿತ್ತು. ಅಲ್ಲಿನ ಪರಿಸ್ಥಿತಿಯಲ್ಲಿ ಅದು ಇನ್ನೂ ಹೆಚ್ಚಿನ ಅಪಾಯಕಾರಿಯಂತನ್ನಿಸಿತ್ತು. ಕೊನೆಗೆ ಉದ್ದಕ್ಕೆ ಮಲಗಿ, ತೆಂಗಿನ ಮರ ಹತ್ತುವವರಂತೆ, ಪಾದ ಮತ್ತು ಮೊಣಕಾಲುಗಳ ಅಪ್ಪುಗೆಯ ನೂಕಿನಲ್ಲಿ, ತೇಕುತ್ತ ಮುಂದುವರಿದೆ. ಗಂಟಲೊಣಗಿದರೂ ಬೆನ್ನಚೀಲದಲ್ಲಿದ್ದ ನೀರಂಡೆ ತೆಗೆಯಲಾಗದ ಸ್ಥಿತಿ. ಪಾದ, ಮೀನಖಂಡ ಸೆಟೆದುಕೊಳ್ಳುವುದನ್ನು ತಪ್ಪಿಸಲು, ಮುನ್ನುಗ್ಗುವ ಕಾಂಕ್ರಿಟೀಕರಣದಲ್ಲಿ ನಿರುಪಯುಕ್ತ ಕಲ್ಲಾದ ಸಿಮೆಂಟ್ ಚೀಲಗಳು ಪ್ರಯತ್ನಕ್ಕಿಂತ ಹೆಚ್ಚು ವಿರಮಿಸುತ್ತಲೇ ತೆವಳಿದೆ. ಕೊನೆಯ ಹಂತದಲ್ಲಿ ಕಾಂಡಕ್ಕೊಂದು ತುಂಡು ಮುಳ್ಳಬಳ್ಳಿ ತೊಡರಿಕೊಂಡಿತ್ತು. ಅದನ್ನು ಎಷ್ಟೇ ಹಗುರಕ್ಕೆ ಕಳಚಿದರೂ ಎರಡು ಬೆರಳ ತುದಿಯಲ್ಲಿ ರಕ್ತ ಜಿನುಗಿಸಿಯೇಬಿಟ್ಟಿತು. ಬಹುಶಃ ಅರ್ಧ ಗಂಟೆಯ ಸೆಣಸಾಟದ ಕೊನೆಯಲ್ಲಿ ಆ ಕೊನೆಯ ಗೆಲ್ಲೊಂದನ್ನು ಹಿಡಿದು, ಎದುರು ದಂಡೆಯಲ್ಲಿಳಿಯುವಾಗ ನನಗೆ ಹೊಸಜೀವವೇ ಬಂದಂತಾಗಿತ್ತು. ಮೊದಲ ಕೆಸರ ಕೊಸರಾಟದನಂತರ ನಾನು ಚಪ್ಪಲಿಗಳನ್ನು ಶುದ್ಧ ತೊರೆಯಲ್ಲಿ ತೊಳೆದು, ಬಗಲಿನಲ್ಲಿ ಜೋತು ಬಿಟ್ಟಿದ್ದೆ. ಇಲ್ಲವಾದರೆ ಅವಕ್ಕೆ ತಗುಲಿಕೊಂಡ ಒಂದೊಂದು ಮರಳ ಕಣವೂ ಕಾಲಿಗೆ ಗೀಚು ಗಾಯ ಮಾಡುವುದು ನಿಶ್ಚಿತವೇ ಇತ್ತು. ಕಾಂಕ್ರೀಟ್ ಮಾರ್ಗದಲ್ಲಿ ಬರಿಗಾಲು ನಡಿಗೆ ಸಮಸ್ಯೆಯಾಗಲಿಲ್ಲ. ವಾಹನಗಳ ಚಕ್ರ ಜಾರದಂತೆ ಅಡ್ಡಡ್ಡಕ್ಕೆಳೆದ ಗೀಟಿನ ಮೇಲೆ, ದಾರಿ ಮಗ್ಗುಲಿನ ಚರಂಡಿ ಮೀರಿ ಹರಿದು ಬರುತ್ತಿದ್ದ ನೀರ ತೆಳು ಜಾಲರಿಯನ್ನು ಮೆಟ್ಟಿ ತಚಪಚ ನಡೆಯುವುದು ನನಗೆ ಆಟದಂತೇ ಇತ್ತು. (ವಾಸ್ತವದಲ್ಲಿ ಅಲ್ಲಿನ ಪ್ರಾಕೃತಿಕ ಶುಭ್ರತೆಗೆ ಮಾರುಹೋಗಿ “ಮೊಮ್ಮಗಳು ಆಭಾಳನ್ನು ತಂದು ಇಲ್ಲಿ ಆಟಕ್ಕೆ ಬಿಡಬೇಕು” ಎಂದು ಎರಡು ಮೂರು ಸಲವಾದರೂ ನಾನು ರಾಯರ ತಲೆ ತಿಂದಿರಬೇಕು!) ಕೆಲವೊಮ್ಮೆ ಹರಿನೀರು ಎರಚಾಡಿದ್ದ ಸಣ್ಣ ಜಲ್ಲಿ ಚೂರುಗಳು, ಅಡ್ಡ ಬಿದ್ದ ಮರ ಪೊದರುಗಳಲ್ಲಡಗಿದ್ದ ಮುಳ್ಳಬಳ್ಳಿಗಳು ನನಗೆ ವಾಸ್ತವದರಿವು ಪೂರ್ಣ ತಪ್ಪದಂತೆ ನೋಡಿಕೊಂಡಿತು. ಕೊನೆಯ ಮಹಾಪ್ರವಾಹದ ಸ್ಥಳ ದಾಟಿದ ಮೇಲೆ, ತಿರುಗಿ ದಾರಿ ಸೇರಲು ನೂರಿನ್ನೂರಡಿ ಬೆತ್ತದ ಸರಿಗೆ, ಓಟೆಯ ಪೊದರುಗಳ ದಟ್ಟ ಹೆಣಿಗೆ ಬೇಧಿಸಬೇಕಾಯ್ತು. ಅಲ್ಲಂತೂ ನಾನು ಮುಳ್ಳು ಹಾಗೂ ಜಿಗಣೆಗಳ ಸಣ್ಣ ಸಾನ್ನಿಧ್ಯವನ್ನೂ ಅನುಭವಿಸಿದ್ದೆ.

ಕೊನೆಯ ನಾಲ್ಕೈದು ಕಿಮೀ ಬಾಕಿಯಿದ್ದಂತೆ ಕಾಂಕ್ರೀಟ್ ಹಾಸು ಮುಗಿದಿತ್ತು. ಅದನ್ನೇ ನೆಪ ಮಾಡಿ ನಾವು ಮೋರಿ ಕಟ್ಟೆಯೊಂದರ ಮೇಲೆ ಕುಳಿತು ಬುತ್ತಿಯೂಟ ಮುಗಿಸಿದೆವು. ಆ ವಲಯದಲ್ಲಿ ದರೆ ಕುಸಿತದ ಸೋಂಕಿಲ್ಲದ ಯಾವ ಹರಿನೀರೂ ಅಮೃತ. ಅದನ್ನೇ ಹೊಟ್ಟೆ ತುಂಬ ಕುಡಿದೆವು. (ಅಲ್ಲಿಗೆ ನಾವು ಹೊತ್ತೊಯ್ದ ನೀರು ಡಬ್ಬಲ್ ಫಿಲ್ಟರ್ರೇ ಇರಬಹುದು, ಆದರೆ ಇಟ್ಟುಕೊಂಡದ್ದು ಪ್ಲ್ಯಾಸ್ಟಿಕ್ ಅಂಡೆ!) ಅಲ್ಲೇ ನಮ್ಮೆಲ್ಲ ಕೆಸರನ್ನೂ ತೊಳೆದು, ಕಾಲ್ಚೀಲ ಸಹಿತ ಚಪ್ಪಲಿ ಹಾಕಿದ್ದರಿಂದ ಮುಂದಿನ ಚಾರಣವೂ ಸುಖಪ್ರದವಾಯ್ತು. ಅದಕ್ಕೂ ಮಿಗಿಲಾಗಿ…….

ಕುಮಾರ ಪರ್ವತದ ಮೈಯಲ್ಲಿನ ಕುಸಿತ

ಊಟ ಮುಗಿಸಿ ಹೊರಟವರಿಗೆ, ಇನ್ನೆಂಥ ಮಹಾಪ್ರವಾಹವನ್ನು ನಾವು ಉತ್ತರಿಸಬೇಕೋ ಎಂಬ ಸಂದೇಹ ಉಳಿಯದಂತೆ ಒಮ್ಮೆಲೇ ಎದುರಿನಿಂದ ವಾಹನಗಳು ಬರತೊಡಗಿದವು. ಬೀಯೆಸ್ಸೆನ್ನೆಲ್ಲಿನವರ ಮೂರು ವ್ಯಾನು, ಬಿಸಿಲೆಯ ಮಾಜೀ ಅಧ್ಯಕ್ಷ ಗಣೇಶನ ಕಾರಲ್ಲದೆ, ಯಾವ್ಯಾವುದೋ ಊರಿನ ಜನ ಬೆರಗಿನ ಕಣ್ಣರಳಿಸಿಕೊಂಡು, ಬಿಸಿಲೆಯ ದುರಂತ ತುಂಬಿಕೊಳ್ಳಲು ಕಾರು, ಬೈಕುಗಳಲ್ಲಿ ಒಂದೊಂದಾಗಿಯೇ ಬರತೊಡಗಿದ್ದರು.

ಹಾಗೆ ಮರಳುವವರಲ್ಲಿ ಒಂದು ಕಾರಿನಲ್ಲಿದ್ದ ಅಲ್ಲಿನ ಫಾರೆಸ್ಟರ್ ನಾಗರಾಜ್, ನಮ್ಮನ್ನೂ ಏರಿಸಿಕೊಂಡು ಕೊನೆಯ ನಾಲ್ಕು ಕಿಮೀ ನಡಿಗೆಯನ್ನು ಉಳಿಸಿಕೊಟ್ಟರು. ಬೆಳಿಗ್ಗೆ ಒಂಬತ್ತು ಗಂಟೆಗೆ ಚಾರಣಕ್ಕಿಳಿದಿದ್ದ ನಾವು ಮೂರು ಗಂಟೆಯ ಸುಮಾರಿಗೆ ಬಿಸಿಲೆ ತಲಪಿದ್ದೆವು. ಬಹುದೀರ್ಘ ಕಾಲದ ಮೇಲೆ ಸೂರ್ಯನನ್ನು ನಾವೇ ಹೊತ್ತು ತಂದೆವೋ ಎನ್ನುವ ಸಂಭ್ರಮದಲ್ಲೇ ತುಳಸಿ ಹೋಟೆಲಿನ ಯಜಮಾಂತಿ ಕಮಲಮ್ಮ ಸ್ವಾಗತಿಸಿದರು. ಅಲ್ಲಿ ಚಾ ಕುಡಿದು, ವಠಾರದ ಪುಟ್ಟ ಸುತ್ತು ಹಾಕಿದೆವು. ದೂರದಲ್ಲಿ ಕಾಣುತ್ತಿದ್ದ ಹದಿನಾರುಬೆಟ್ಟದ ಭೂ ಕುಸಿತದ ದೃಶ್ಯ, ದಾರಿ ಕಾಂಕ್ರಿಟೀಕರಣಕ್ಕೆ ನಲುಗಿದ ಲಿಂಗೇಗೌಡರ ವಠಾರ, ಬಿಸಿಲೆ ಹಳ್ಳಿಯ ಚಿಲ್ಲರೆ ‘ಅಭಿವೃದ್ಧಿ’ಯ ಮಾತುಗಳೆಲ್ಲ ಬಂದವು. ಅಷ್ಟರವರೆಗೆ ಮಲಗಿದ್ದ ಮಳೆರಾಯ ಎಚ್ಚತ್ತುಕೊಂಡ. ನಾವು ಮತ್ತೆ ಹೋಟೆಲ್ ಸೇರಿಕೊಂಡೆವು. ಭೋರ್ಗುಟ್ಟಿದ ಗಾಳಿಯೊಡನೆ ಮಳೆ ಜಡಿಯುತ್ತಿದ್ದಾಗ, ಅಲ್ಲಿಗೆ ಬಂದಿದ್ದ ಹಳ್ಳಿ ಬುದ್ಧಿವಂತನೊಬ್ಬನ ಭೂ ಕುಸಿತದ ವಿಶ್ಲೇಷಣೆ ನಮಗೆ ವಿಶೇಷ ರಂಜನೆಯನ್ನೇ ಕೊಟ್ಟಿತು. “ನನ್ನ ಜೀವಮಾನದಲ್ಲೇ (ಇನ್ನೂ ನಲ್ವತ್ತರ ಹರಯದವನು) ಕಾಣದಿದ್ದ ಈ ಭೂಕುಸಿತ ದೇವರದ್ದೇ ಲೀಲೆ. ಸರೀ ನಡುರಾತ್ರಿ ಒಂದು ಗಂಟೆಗೆ ಸಂಭವಿಸಿದ ಮಹಾಪ್ರವಾಹದ ಅಬ್ಬರ (ಇವನೇನು ಕಂಡು ಹೇಳಿದ್ದಲ್ಲ) ಹಳ್ಳಿಗರೇನಾದರೂ ಕೇಳಿದ್ದರೆ, ಎದೆಯೊಡೆದೇ ಸಾಯುತ್ತಿದ್ದರು. ಇದು ಪ್ರಳಯಾನೇ (ಬ್ರಹ್ಮಾಂಡ ಜ್ಯೋತಿಷಿ ಇವನ ತಲೆ ಮೆಟ್ಟಿರಬೇಕು). ಭೂಮಿಗೆ ಇನ್ನು ಹೆಚ್ಚು ದಿನವಿಲ್ಲ…..” ಕ್ಷಮಿಸಿ, ಬಗೆತರದಲ್ಲಿ, ಬಲು ಉದ್ದಕ್ಕೆ ಹರಿದ ಆತನ ಆಡುನುಡಿಯ ಚಂದವನ್ನು ನಾನು ಮರುಸೃಷ್ಟಿಸಲರಿಯೆ! ಟೀವಿಗಳ ಭವಿಷ್ಯವಾಚಕ ಪಿಶಾಚಗಳಿಗೇನೂ ಬಿಟ್ಟುಕೊಡದ ಈತನ ವಾಕ್ಪ್ರವಾಹಕ್ಕೆ ನಾವೇನೂ ಪ್ರತಿಯಾಡದೆ, ನಕ್ಕು ಅನುಭವಿಸಿದೆವು! ಇಗರ್ಜಿಯ ಆದೇಶದ ಮೇರೆಗೆ “ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ” ಎಂಬ ಹೇಳಿಕೆ ಕೊಟ್ಟ ಮಹಾವಿಜ್ಞಾನಿ, ಕೊನೆಯಲ್ಲಿ ಸ್ವಗತ ಎಂಬಂತೆ “ಆದರೂ ಭೂಮಿ ಸೂರ್ಯನ ಸುತ್ತುತ್ತದೆ” ಎಂದೇ ಹೇಳಿದ್ದನಂತೆ!

ಬಿಸಿಲೆ ಹಾಸನ ಜಿಲ್ಲೆಯ ಭಾಗವಾದ್ದರಿಂದ, ಹರದನಹಳ್ಳಿ ದೇವೇಗೌಡ ಕುಟುಂಬದ ಜಹಗೀರೆಂಬಂತೇ ಸಾಮಾನ್ಯರು ಭಾವಿಸುವುದು ತಪ್ಪಲ್ಲ! ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಕೊಡಗು ಕೇಂದ್ರಿತವಾದ ಪ್ರಾಕೃತಿಕ ವಿಕೋಪಗಳನ್ನು ಗಗನ ಸಮೀಕ್ಷೆ ಮಾಡುತ್ತಿರುವ ಸುದ್ದಿ ಕಾಣುತ್ತಿದ್ದೇವೆ. ಆದರೆ ಬಿಸಿಲೆಯಲ್ಲಿ, ನಾವು ಹೋದ ಹಿಂದಿನ ದಿನ ಸ್ವತಃ ಮಾಜೀ ಪ್ರಧಾನಿ ದೇವೇಗೌಡರೇ ಅಲ್ಲಿಗೆ ಬಂದು ಹೋದ ಬಗ್ಗೆ ಚರ್ಚೆ ನಡೆದಿತ್ತು. ಏಳೂವರೆಯ ಸಂಜೆಗೆ ವಾಹನಗಳ ಸಂತೆಯಲ್ಲಿ ಬಂದ ದೇವೇಗೌಡರು, ಹಿಮ್ಮುರಿ ತಿರುವುಗಳು ಕೊಚ್ಚಿ ಹೋದ ತಾಣದವರೆಗೂ ಹೋಗಿದ್ದರಂತೆ. ಕಾಡಿನ ದುರ್ಗಮತೆಯಲ್ಲಿ, ರಾತ್ರಿಯ ಕಾವಳದಲ್ಲಿ, ಪ್ರಾಯ ಸಂದ ಮನುಷ್ಯ ಅದೇನು ನೋಡಬಹುದಿತ್ತು ಎಂದು ಸಂದೇಹ ಯಾರಲ್ಲೂ ಬಂದಂತಿರಲಿಲ್ಲ. “….. ಅಲ್ಗೋಗಿ ಇಳ್ಯೋ ಹೊತ್ಗೇ ಮಳೆ ಹಿಡ್ಕಂತು. ಪಾಪ ಮತ್ ಹಂಗೇ ಕಾರೇರಿ ವಾಪಾಸ್ ಓದ್ರು…..” ಮರುದಿನ ಸಚಿವ ರೇವಣ್ಣ ಬರುತ್ತಾರೆ ಎಂದೂ ಹಳ್ಳಿಗರು ಸಣ್ಣ ಸಂಭ್ರಮದಲ್ಲಿದ್ದದ್ದು ನೋಡಿದಾಗ ನನಗೆ ನಿಜಕ್ಕೂ ಕನಿಕರವಾಯ್ತು. ಇದೇ ಪುಣ್ಯಾತ್ಮ ಹಿಂದಿನ ‘ಜನ್ಮ’ದಲ್ಲಿ (ಮಂತ್ರಿಯಾಗಿದ್ದಾಗ) ಬಿಸಿಲೆ ಬೀಟೀಸ್ಪಾಟಿನಿಂದ ಕುಮಾರ ಪರ್ವತದ ಶಿಖರಾಗ್ರಕ್ಕೆ ರೋಪ್‍ವೇ ಕುರಿತು ಬಲವಾಗಿಯೇ ಶಿಫಾರಸು ಮಾಡಿದ್ದು ನಾನಂತೂ ಮರೆಯಲಾರೆ! ಪ್ರಾಕೃತಿಕ ಸಂಪತ್ತನ್ನು ಸರಿಯಾಗಿ ಗುರುತಿಸಿ, ಉಳಿಸಿಕೊಳ್ಳುವ ಯೋಚನೆ ಬೆಳೆಸಲಾರದವರು, ಬಿಸಿಲೆ ದಾರಿಗೆ ಇನ್ನೇನು ಪರಿಹಾರ ಸೂಚಿಸುತ್ತಾರೋ ಎಂದು ನಮಗೆ ಅತೀವ ಭಯವೇ ಆಯ್ತು.

ಮಳೆಗಾಲಗಳ ಮಾಮೂಲಿನಂತೆ ಬಿಸಿಲೆ ಮೂರು ನಾಲ್ಕು ವಾರಗಳಿಂದ ವಿದ್ಯುಚ್ಛಕ್ತಿಯನ್ನು ಕಂಡೇ ಇರಲಿಲ್ಲ. ಈ ಸಲ ಹೆಚ್ಚುವರಿ ಸಂಕಟ – ಉಳಿದ ಏಕೈಕ ಸಂಪರ್ಕದಾರಿ, ಅಂದರೆ ಮುಂದಿನೂರು ವಣಗೂರು ಕೂಡುರಸ್ತೆಯ (ಇದೇ ಮುಂದೆ ಸಕಲೇಶಪುರಾದಿ ದೂರದೂರುಗಳಿಗೂ) ದಾರಿಯೂ ಭಾರೀ ಮರ, ದರೆ ಕುಸಿತದಲ್ಲಿ ಮುಚ್ಚಿಹೋಗಿತ್ತಂತೆ.
ಇಲಾಖೆಯವರು ಭಾರೀ ಕೆಲಸ ಮಾಡಿ, ಹಿಂದಿನ ದಿನವಷ್ಟೇ (ಸುಮಾರು ಹನ್ನೆರಡು ದಿನಗಳ ಮೇಲೆ) ತೆರವು ಗೊಳಿಸಿದ್ದರು. ಹಾಗೆ ಸಕಲೇಶಪುರದ ಬಸ್ಸಿನ ಸೇವೆ ಪುನರಾರಂಭಗೊಂಡದ್ದು ತಿಳಿಯಿತು. ನಮಗಾದರೋ ಆ ವಲಯದಲ್ಲಿ ಇನ್ನು ನೋಡುವುದೇನೂ ಉಳಿದಿರಲಿಲ್ಲ. ಹಾಗಾಗಿ ರಾತ್ರಿಗೆ ಸಕಲೇಶಪುರ ತಲಪುವ ಅಂದಾಜಿನಲ್ಲಿ, ದಿನದ ಕೊನೆಯ ಬಸ್ಸು ಹಿಡಿದೆವು. ಹಾಗೆ ಹೋಗುತ್ತಿದ್ದಂತೆ ಸಕಲೇಶಪುರದ ಸಮೀಪದ ರಕ್ಷಿದಿಯಲ್ಲಿದ್ದ ಗೆಳೆಯ ಪ್ರಸಾದರನ್ನು ಚರವಾಣಿಯಲ್ಲಿ ಸಂಪರ್ಕಿಸಿದೆ. ಪ್ರಸಾದ್ ವೃತ್ತಿತಃ ಕೃಷಿಕ. ಆದರೆ ಸಾಹಿತ್ಯ, ರಂಗಭೂಮಿ, ಪರಿಸರ ಎಂದು ಹತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿಸ್ವಾರ್ಥವಾಗಿ ತೊಡಗಿಕೊಂಡವರು. ಪ್ರಸಾದ್ ಬಳಿ ಮರುದಿನ ನಮಗೆ ಸಾಧ್ಯವಾದಷ್ಟು ಎತ್ತಿನಹೊಳೆ ಯೋಜನೆಯ ವಿಕಾರಗಳನ್ನು ನೋಡಿ, ಮಂಗಳೂರಿಗೆ ಮರಳಲು ಅನುಕೂಲವಾಗುವಂಥ ವ್ಯವಸ್ಥೆ ಮಾಡಲು ಕೇಳಿಕೊಂಡೆವು.

ಸಕಲೇಶಪುರವೂ ನಾನು ಮೊದಲೇ ಹೇಳಿದ ಉಪ್ಪಿನಂಗಡಿ, ಸುಬ್ರಹ್ಮಣ್ಯದಂತೆ ಶಿರಾಡಿ-ವಿರಹದಲ್ಲಿ ತುಂಬ ಬಡವಾಗಿದೆ. ನಮ್ಮ ಬೇಡಿಕೆಯಂತೇ ಪ್ರಸಾದ್ ಶಿಫಾರಸು ಮಾಡಿದ್ದ, ಸಾಮಾನ್ಯ ದರ್ಜೆಯ ಹೋಟೆಲ್ – ಗಂಧರ್ವಕ್ಕೇ ಹೋದೆವು. ಏಳ್ನೂರು ರೂಪಾಯಿಯ ಎರಡು ಮಂಚದ ಒಂದು ಕೋಣೆ ಏನೋ ಹಿಡಿದೆವು. ಆದರೆ ಅಲ್ಲಿನ ಹಾಸುಗೆ ಕೊಳಕು, (ನಮ್ಮ ಆವಶ್ಯಕತೆಯ ಭಾಗವಲ್ಲದಿದ್ದರೂ) ಟೀವೀ ಕಾಯಿಲಸ್ಥ. ಕುಡಿಯುವ ನೀರಂತೂ ನಾವಿರುವವರೆಗೂ ಬರಲೇ ಇಲ್ಲ. ಶೌಚಗೃಹದಲ್ಲಿ ನಲ್ಲಿಯೊಂದು ಹಾಳಾದ್ದಲ್ಲದೆ, ಬೆಳಿಗ್ಗೆ ಸ್ನಾನಕ್ಕೆ ಬಿಸಿನೀರು ಒದಗಿಸುವಲ್ಲೂ ಹೋಟೆಲ್ ವಿಳಂಬಿಸಿತು. ಈ ಕೊರತೆಗಳ ಕೊನೆಯಲ್ಲಿ, ಬೇಗ ಹೊರಡಲಾಗದ ನಮ್ಮ ಬೇಗುದಿಗೆ ಹೆಚ್ಚಿನ ಬಿಸಿ ಕೊಟ್ಟವ – ಸ್ವಾಗತಕಾರ. ನಾವು ಎಲ್ಲ ಸುಧಾರಿಸಿಕೊಂಡು, ಏಳೂವರೆಗೆ ಕೋಣೆ ಖಾಲಿ ಮಾಡಿದರೂ ಈತ ಪಟ್ಟು ಹಿಡಿದು ನಿದ್ರಿಸಿಯೇ ಇದ್ದ. ಅವನನ್ನು ಅಕ್ಷರಶಃ ಹಾಸುಗೆಯಿಂದ ಎಳೆದು ಹಾಕಿ, ಕೀಲಿಕೈ ಎಸೆದು, ಮುಂಗಡ ಕಿತ್ತುಕೊಂಡೆವು. ಕೊನೆಯಲ್ಲಿ ವಿಷಾದದಿಂದ “ಊರಿನವರು ಒಳ್ಳೇತನದಿಂದ ಕೊಟ್ಟ ಶಿಫಾರಸ್ಸಿಗೆ ನೀವೊಂದು ಅವಮಾನ” ಎಂದು ಆತನ ಮುಖಕ್ಕೆ ಹೇಳಿ ಹೊರಟೆವು.

ಕಾಂಕ್ರಿಟೀಕರಣದಲ್ಲಿ ನಿರುಪಯುಕ್ತ ಕಲ್ಲಾದ ಸಿಮೆಂಟ್ ಚೀಲಗಳು

ಸಕಲೇಶಪುರದಿಂದ ಮೂಡಿಗೆರೆ ಬಸ್ಸೇರಿದರೆ ಹತ್ತನೇ ಕಿಮೀ ರಕ್ಷಿದಿ. ಬಲ ಮಗ್ಗುಲಿನ ಬಾಣೆಯ ಮೇಲೆ ಪ್ರಸಾದ್ ಕಾರ್ಯಕ್ಷಮತೆಗೆ ಸಾಕ್ಷಿ – ಬೆಳ್ಳೇಕೆರೆ ಹಳ್ಳಿ ಥಿಯೇಟರ್, ತೋರುತ್ತಿತ್ತು. ಅದರ ವಿಕಾಸ ಮತ್ತು ಸಾಧನೆಗಳ ಕುರಿತು ಪ್ರಸಾದರೇ ಬರೆದು, ಪ್ರಸಿದ್ಧಿಸಿದ ಪುಸ್ತಕವನ್ನು ಹಿಂದೆ ನಾನು ಸಾಕಷ್ಟು ಮಾರಿದ ನೆನಪೂ ನನಗಿತ್ತು. ಅದರ ವಠಾರವನ್ನು, ಅದಕ್ಕೂ ಮಿಗಿಲಾಗಿ ಒಟ್ಟಾರೆ ಪ್ರಸಾದ್ ಕುಟುಂಬದ ಅಸಂಖ್ಯ ಸಾಧನೆಗಳನ್ನೂ ನೋಡಬೇಕೆಂದು ಕುತೂಹಲವೇನೋ ನಮಗಿಬ್ಬರಿಗೂ ಧಾರಾಳವಿತ್ತು. ಆದರೆ ಅಂದಿನ ಲಕ್ಷ್ಯ ಮತ್ತು ಸಮಯದ ಹೊಂದಾಣಿಕೆಗೆ ಹೆದರಿ, ಕಾದಿದ್ದ ಪ್ರಸಾದ್ ಜತೆ ತಣ್ಣಗೆ ಅವರ ಮನೆ ಸೇರಿಕೊಂಡೆವು. ಅಲ್ಲಿ ಶ್ರೀಮತಿ ರಾಧಾ (ಪ್ರಸಾದ್) ನಮ್ಮ ಬೆಳಗ್ಗಿನ ಉಪಾಹಾರವನ್ನು ಬಹಳ ಮುತುವರ್ಜಿಯಿಂದ ವ್ಯವಸ್ಥೆ ಮಾಡಿದ್ದರು. ಅನಂತರ ಅವರ ಪರಿಚಿತರೊಬ್ಬರು ವ್ಯವಸ್ಥೆ ಮಾಡಿದ್ದ ಬಾಡಿಗೆ ಜೀಪೇರಿ, ಮಧ್ಯಾಹ್ನದವರೆಗೂ ಸಾಧ್ಯವಿದ್ದೆಲ್ಲ ಎತ್ತಿನಹೊಳೆ ಯೋಜನಾವಲಯಗಳಲ್ಲಿ ಸುತ್ತಾಡಿದೆವು. ಪ್ರಸಾದ್ ಮತ್ತವರೊಬ್ಬ ಗೆಳೆಯ ನಮಗೆ ಜತೆಗೊಟ್ಟು ವೀಕ್ಷಣೆಯನ್ನು ಸುಲಭಗೊಳಿಸಿದರು. ಹಾರ್ಲೆ ಎಸ್ಟೇಟಿನ ದಾರಿಯುದ್ದಕ್ಕೂ (ಸುಮಾರು ಹದಿನೈದು ಕಿಮೀ) ಎತ್ತಿನಹೊಳೆಯ ನೀರು ಸಾಗಿಸಲು ತುಂಡು ತುಂಡಾಗಿ ಹೂತಿದ್ದ ರಾಕ್ಷಸ ಕೊಳವೆ ಸಾಲಿನ ಸಮಾಧಿ ಭಾರೀ ಜಗ್ಗಿತ್ತು. ಸಾಲದ್ದಕ್ಕೆ ಅದರ ಒತ್ತಿನ ಗುಡ್ಡೆ ಸಾಲು ಎರಡೆರಡು ಪದರಗಳಲ್ಲಿ ಜರಿದು ಬಿದ್ದಿತ್ತು. ಸಣ್ಣ ಹೊಳೆಯೊಂದನ್ನು ದಾಟುವಲ್ಲಿ ಭಾರೀ ಕುಂದ ಸಾಲಿನ ಮೇಲಿನ ಅರ್ಧ ಚಂದ್ರಾಕೃತಿಯ ಬಳೆಗಳು ಕೊಳವೆ ಹೊರಲು ವ್ಯರ್ಥ ಕಾದೇ ಮಣ್ಣು ಹಿಡಿದಂತಿತ್ತು. ಇನ್ನೆಲ್ಲೋ ಅದೇನು ಕಾರಣಕ್ಕೋ ಕೊಳವೆ ಮಣ್ಣ ಮೀರಿ ಮೇಲೆದ್ದು ನಿಂತು ಶೂನ್ಯ ಸಂಗ್ರಹಿಸುತ್ತಿತ್ತು. ಹೀಗೆ ಸಾತತ್ಯವಿಲ್ಲದೆ ಮತ್ತು ತೆರೆದ ಬಾಯಿಗೆ ತಡೆ ಏನೂ ಇಲ್ಲದೆ ಬಿಟ್ಟ ಭೂಗತ ಕೊಳವೆ ಸಾಲುಗಳು ನಿಜ ಕೆಲಸ ಬರುವ ಕಾಲಕ್ಕೆ ಬಾಳಿಕೆ ಬಂದಾವೇ, ಸಮರ್ಥವಾಗಿ ದುಡಿದಾವೇ?

ಮಾರನಹಳ್ಳಿಯಲ್ಲಿ ಹೆದ್ದಾರಿಯನ್ನು ಸೇರಿದೆವು. ಅಲ್ಲಿ ಶಿರಾಡಿಯತ್ತ ವಾಹನಗಳು ಬಲಹೊರಳದಂತೆ ತಡೆಗಟ್ಟೆ ಹಾಕಿದ್ದರು. ನಾವು ಸಕಲೇಶಪುರದತ್ತ ತಿರುಗಿ ತುಸು ಹೋಗಿ, ಪಶ್ಚಿಮ (ಬಲ) ಮಗ್ಗುಲಿನ ದಾರಿ ಹಿಡಿದೆವು. ಇದು ಮೊದಲಲ್ಲಿ ತೀರಾ ಜೀರ್ಣ ಸ್ಥಿತಿಯ ಪಕ್ಕಾ ಹಳ್ಳಿದಾರಿಯಾಗಿದ್ದಾಗಿನಿಂದ (ಎತ್ತಿನಹೊಳೆ ಯೋಜನಾ ನೆಪದಲ್ಲಿ) ನಾನು ಹಲವು ಬಾರಿ ಕಂಡು ಅನುಭವಿಸಿದ್ದೇನೆ. ಆದರೆ ಈಗ ಅವಕ್ಕೆಲ್ಲ ಭಿನ್ನವಾಗಿ ಸುವಿಸ್ತಾರಗೊಂಡು, ಕಾಂಕ್ರೀಟ್ ಹೊದಿಕೆಯನ್ನೇ ಕಂಡಿದೆ. ಪ್ರಸಾದ್ ಹೇಳಿದರು “ಯೋಜನೆಯ ದೂರಗಾಮೀ ಪರಿಣಾಮಗಳ ಕುರಿತು ಇಲ್ಲಿನ ಹಳ್ಳಿಗರು ಅಜ್ಞಾನಿಗಳು. ಆದರೆ ಈ ಕಂತ್ರಾಟುದಾರರು ತಮ್ಮ ಘನವಾಹನಗಳ ಅಗತ್ಯಕ್ಕಾಗಿ ಎಲ್ಲಿಂದೆಲ್ಲಿಗೂ ಹಾಕಿರುವ ಈ ಕಾಂಕ್ರೀಟ್ ರೋಡಿಗೆ ಮನಸೋತುಬಿಟ್ಟಿದ್ದಾರೆ. ತೆಳು ಜಲ್ಲಿ, ಡಾಮರ್ ಕಾಣಿಸಲಾಗದ ಗ್ರಾಮ ಪಂಚಾಯತ್ತಿಗಿಂತಲೂ ಮೂವತ್ತಡಿ ಅಗಲದ ಸಾರ್ವಕಾಲಿಕ ದಾರಿ ಕೊಟ್ಟ ಎತ್ತಿನಹೊಳೆ ಯೋಜನೆಯೇ ಗ್ರೇಟ್!!” ಮ್ಯಾಕ್ಬೆತ್ ನಾಟಕದ ಮಾತು ನೆನಪಾಗುತ್ತದೆ, “ದುಷ್ಟ ಶಕ್ತಿಗಳು ಸಣ್ಣ ಸಣ್ಣ ಆಮಿಷಗಳನ್ನು ಕೊಟ್ಟು ದೊಡ್ಡದರಲ್ಲಿ ನಮ್ಮನ್ನು ಬಲಿಹಾಕುತ್ತವೆ.”

ಹೆದ್ದಾರಿ ಬಿಟ್ಟು ಸುಮಾರು ಒಂದೂವರೆ ಕಿಮೀ ಅಂತರದಲ್ಲಿ ಅತ್ತಣ ಕೊಳ್ಳಕ್ಕಿಳಿಯುತ್ತದೆ ದಾರಿ. ಅಲ್ಲಿ ಅಡ್ಡ ಬರುವ ಎತ್ತಿನಹೊಳೆಯನ್ನು ತಾನೊಂದು ತಗ್ಗು ಸೇತುವೆಯಲ್ಲಿ ದಾಟುವಲ್ಲೇ ಮೇಲೆ ಸಾಕಷ್ಟು ಎತ್ತರದಲ್ಲಿ ರೈಲ್ವೇ ಹಳಿ ಸಾಗುವ ಸೇತುವೆಯನ್ನೂ ಅದು ಕಾಣಿಸುತ್ತದೆ. ನಾವು ಹಿಂದೆ ಕಂಡಂತೆ, ಯೋಜನಾ ಓಡಾಟದ ಭಾರೀ ವಾಹನ ಸಂಚಾರದಲ್ಲಿ ದಾರಿಯ ಸೇತುವೆ ಇನ್ನೇನು ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಅದಿಂದು ಪೂರ್ಣ ಹೊಸತೇ ಆಗಿತ್ತು. ಅಲ್ಲಿಂದ ಮುಂದೊಂದು ಭಾರೀ ಏರಿತ್ತು. ಎತ್ತಿನಹೊಳೆ ಬ್ರಹ್ಮರು ಏರನ್ನು ನಿವಾರಿಸುವಂತೆ ಹೊಳೆ ದಂಡೆಯಲ್ಲೇ ಅಕ್ರಮವಾಗಿ ಭಾರೀ ಮಣ್ಣು ತುಂಬಿ ದಾರಿ ಮಾಡಿದ್ದರು. ಅದು ಪ್ರಾಕೃತಿಕ ನ್ಯಾಯದಲ್ಲಿ ಇಂದು ಪೂರ್ಣ ತೊಳೆದುಹೋಗಿದೆ. ಬಹುಶಃ ಮತ್ತವರು ಸವಿನಯ ಹಳೆಯ ಕಠಿಣ ಜಾಡಿಗೇ ಕಾಂಕ್ರೀಟ್ ಹೊದೆಸಿರಬೇಕು. ಅದು ಕಳೆದು ಸ್ವಲ್ಪ ಮುಂದೆ, ಎಡಕ್ಕೊಂದು ಕವಲಿನಲ್ಲಿ (ಸುಮಾರು ಮೂರು ವರ್ಷಗಳ) ಹಿಂದೆ ನಾವು ಹೋದದ್ದಿತ್ತು. ಆ ಕಚ್ಚಾ ದಾರಿಯುದ್ದಕ್ಕೆ ಆಗಲೇ ತುಂಡು ತುಂಡಾಗಿ ಕೊಳವೆಸಾಲು ಹುಗಿದಿದ್ದರು ಮತ್ತು ಅವುಗಳಲ್ಲಿ ಆಗಲೇ ಕೆಲವು ಯಾವುದೋ ತೊರೆ ನೀರು ಸೇರಿಸಿಕೊಂಡು ಬೆಸುಗೆ ಸೋರುತ್ತಲೂ ಇತ್ತು! ಇಂದು ಆ ಕವಲು ಇನ್ನೂ ಕಚ್ಚಾ ಸ್ಥಿತಿಯಲ್ಲೇ ಇದ್ದುದರಿಂದ ನಾವು ಅತ್ತ ಹೋಗುವ ಸಾಹಸವನ್ನು ಮಾಡಲಿಲ್ಲ.

ಮುಂದೊಂದು ದೀರ್ಘ ಏರು ಕಳೆದು ಸಿಗುವ ಗುಡ್ಡೆಯ ಶಿಖರಕ್ಕೆ ರಸ್ತೆಯ ಕಾಂಕ್ರೀಟು ಹೊದಿಕೆ ಮುಗಿದಿತ್ತು. ಅಲ್ಲಿ ದಾರಿಯ ಎಡ-ಬಲಕ್ಕೆ ನೂರಾರು ಅಡಿ ಗುಡ್ಡ ಸಾಲಿನ ಎತ್ತರದಲ್ಲೇ ಕೊಳವೆ ಸಾಲನ್ನು ಹುಗಿದಿದ್ದರು. ಆದರದರ ಪರಿಣಾಮ ಗಾಬರಿ ಹುಟ್ಟಿಸುವಂತಿತ್ತು. ಕೊಳವೆಯ ಲೆಕ್ಕದಲ್ಲಿ ಹತ್ತು – ಹದಿನೈದಡಿ ಅಗಲದ ಚರಂಡಿ ಜಾಡು ಮಾಡುತ್ತಾ ಸಾಗಿದ ಕೊರೆಯಂತ್ರ, ಮಣ್ಣು ವಿಲೇವಾರಿ ಮಾಡಲು ಓಡಾಡಿದ ಲಾರಿಗಳೆಲ್ಲ ಸೇರಿ, ಕನಿಷ್ಠ ಐವತ್ತಡಿ ಅಗಲಕ್ಕೆ ಗುಡ್ಡೆ ಸಾಲನ್ನು ಕಣ್ಣೆಟಕುವವರೆಗೂ ಸೀಳಿ ಹಾಕಿದ್ದುವು. ಅದರ ಮೇಲೆ ಭೀಕರ ಮಳೆ, ಕುಸಿತಗಳೂ ಸೇರಿ ಹಸಿರಿನ ಸಿರಿ ಭಯಂಕರ ರಕ್ತಪಾತದಲ್ಲೇ ಮುಳುಗಿತ್ತೆಂದರೆ ಅತಿಶಯೋಕ್ತಿಯಾಗದು. ಆ ಗೊಸರ ಗೊಂದಲದಲ್ಲಿ ಹುಗಿದರೂ ಅಲ್ಲಿಲ್ಲಿ ಪ್ರಕಟವಾದ ಕೊಳವೆಗಳು ಪ್ರಸಾದ್ ಹೇಳುವಂತೆ “ಅಸಮರ್ಪಕವಾಗಿ ಹುಗಿದ ರಕ್ಕಸ ಶವದ ಮುರುಕು ಮೂಳೆಗಳು.” ಸನ್ನಿವೇಶದ ಗಾಂಭೀರ್ಯವನ್ನು ಹೆಚ್ಚು ಸ್ಪಷ್ಟಗೊಳಿಸುವಂತೆ ಅಲ್ಲೊಂದು ಸರಪಳಿಯ ಭಾರೀ ಎತ್ತುಗ ಅರ್ಧ ಹುಗಿದ ಸ್ಥಿತಿಯಲ್ಲಿ ಹಲವು ಕಾಲದಿಂದ ಅನಾಥವಾಗಿಯೇ ಬಿದ್ದುಕೊಂಡಿತ್ತು. ನಾವು ಮುಂದುವರಿಯುವ ಸಾಹಸ ಮಾಡದೆ ಹೆದ್ದಾರಿಗೆ ಮರಳಿದೆವು.

ಸಕಲೇಶಪುರದತ್ತ ಇನ್ನಷ್ಟು ಮುಂದುವರಿಯುತ್ತ, ಪೂರ್ವ ಕೊಳ್ಳದಲ್ಲಿ ಕೆಲಸ ನಡೆಸಿದ್ದ ಅಣೆಕಟ್ಟೆಯ ಪ್ರಗತಿಯ ಮೇಲೆ ಕಣ್ಣಿಟ್ಟೆವು. ಅಲ್ಲಿನ ಹಳ್ಳದ ಎದುರು ದಂಡೆಯ ಎತ್ತರದಲ್ಲಿ, ಅಂದರೆ ಬಹುತೇಕ ಹೆದ್ದಾರಿಗೆ ಸಮಾನಾಂತರದಲ್ಲಿ, ನಿರ್ಮಾಣ ಕಾಲದ ಘನವಾಹನಗಳಿಗಾಗಿ ಹೊಸದೇ ರಸ್ತೆ ಕಡಿದಿದ್ದರು. ನಮ್ಮಲ್ಲೆಲ್ಲಾ ನಡೆಯುವಂತೆ, ಹಾಗೆ ತೋಡಿದ ಮಣ್ಣನ್ನೆಲ್ಲ ಕೊಳ್ಳದಂಚಿಗೇ ತಳ್ಳಿಬಿಟ್ಟಿದ್ದರು. ಅದು ಬೇಸಗೆಯ ದಿನಗಳಲ್ಲಿ, ಕಣಿವೆಯ ತಳದಲ್ಲೆಲ್ಲೋ ಸಣ್ಣದಾಗಿ ಕಲಕಲಿಸುವ ತೊರೆಯ ಲೆಕ್ಕದಲ್ಲಿ ಆ ಮಣ್ಣು, ಕಲ್ಲು ಗಮನಾರ್ಹ ಸಂಗತಿ ಆಗಿರಲಾರದು. ಆದರೆ ಮಳೆಯೊಡನೆ ಭಾರೀ ಪರ್ವತ ಪ್ರದೇಶದ ನೀರೆಲ್ಲ ಇತ್ತ ನುಗ್ಗಿ ಬಂದಾಗ, ಪಾತ್ರೆ ಸಂಕೋಚವಾದಾಗ ಇಕ್ಕೆಲದ ದಂಡೆಯನ್ನು ಕೊರೆಯುವುದನ್ನು ಮರೆಯಲಾದೀತೇ? ಯಂತ್ರಗಳು ತಳ್ಳಿದ್ದ ಮಣ್ಣಿಗೆ ಮತ್ತಷ್ಟು ಹೊಸದರೆಯ ಮಣ್ಣನ್ನು ಸೇರಿಸಿಕೊಂಡೇ ತೊರೆ ಹರಿದದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆಚಿನ ದಂಡೆಯಲ್ಲಿ ಹಿಂದಿನ ಕೃಷಿಯ ಭಾಗವಾಗಿದ್ದ ತೆಂಗು, ಕಂಗಿನ ಮರಗಳೆಲ್ಲ ಇಂದು ಅಡ್ಡ ಮಲಗಿವೆ. ಮತ್ತಾ ಕಚ್ಚಾ ದಾರಿಯಾಚಿನ ದರೆಯೂ ಕೆಲವು ಪದರಗಳಲ್ಲಿ ಕುಸಿದದ್ದೂ ಕಾಣುತ್ತಿತ್ತು. ಮೊದಲಲ್ಲಿ ದಾರಿಗಾಗಿ ಮಾತ್ರ ನಡೆದಂತಿದ್ದ ದರೆ ಕಡಿತ, ಅಣೆಕಟ್ಟೆಯ ವಲಯದಲ್ಲಿ ವಿಪರೀತವಾಗಿದೆ. ಕಟ್ಟೆಯ ಹಿಂದೆ ನಿಲ್ಲುವ ನೀರನ್ನೂ ಮೀರಿ ನಿಲ್ಲುತ್ತಿರುವ ಪಂಪಿಂಗ್ ಅಟ್ಟಳಿಗೆ ತುಂಬ ಅಗಲಕ್ಕೂ ಇದೆ. ಅದರಿಂದ ಎತ್ತಿದ ನೀರು, ಹಿಮ್ಮೈಯ ಬೆಟ್ಟದೆತ್ತರಕ್ಕೆ ಹೋಗಲು ಕೊಳವೆ ಸಾಲಿಟ್ಟದ್ದೂ ಕಾಣುತ್ತದೆ. ಅದು ಆ ಗುಡ್ಡಸಾಲಿಗೆ ಉಂಟು ಮಾಡಿರಬಹುದಾದ ಶಿರೋಭಾರ ಸುಧಾರಿಸುವಂತೆ ಅಲ್ಲಿ ಸಾಕಷ್ಟು ತುಂಡು ಬಂಡೆಗಳನ್ನೂ ತುಂಬಿದ್ದು ನಾವಿದ್ದ ದೂರಕ್ಕೆ ಸ್ಪಷ್ಟವಾಗಿ ಕಾಣುತ್ತಿತ್ತು. ಈಗಲೇ ಹೀಗೆಲ್ಲ ತಿಣುಕಾಡುವ ವ್ಯವಸ್ಥೆ, ನಾಳೆ ಆ ಗಾತ್ರದ ನೀರಿನ ಭಾರ ಮತ್ತು ಪಂಪಿನ ಒತ್ತಡ ತಡೆದು ನಿಲ್ಲುವುದುಂಟೇ?

ಇನ್ನೂ ಕಳಶಪ್ರಾಯವಾದ ಆತಂಕವನ್ನು ತಿಳಿಯಲು ನೀವು ಈ ವಲಯದ ಗೂಗಲ್ ನಕ್ಷೆ ತೆರೆದು ನೋಡಿ. ಕೊಳವೆ ಸಾಲಿಗೂ ಪಶ್ಚಿಮಕ್ಕೆ ಸಮಾನಾಂತರದಲ್ಲಿ ಹಾಸನ ಮಂಗಳೂರು ರೈಲ್ವೇ ಹಳಿಗಳು ಹಾದು ಹೋಗಿವೆ. ಅವೂ ಸದ್ಯದಲ್ಲೇ ದ್ವಿಪಥಗೊಳ್ಳುವ ಘೋಷಣೆಯೂ ಆಗಿದೆ. ಅದರ ನಿರ್ಮಾಣ ಕಾಲದ ಒತ್ತಡ, ನಿರಂತರ ಕಂಪನ ಈ ಅಣೆಕಟ್ಟು ತಡೆಯಬಲ್ಲುದೇ? ಇವೆಲ್ಲದರ ಕೇಂದ್ರದಲ್ಲಿ ಮಳೆಗಾಲದ ಸೊಕ್ಕಿನ ನೀರನ್ನು ಹಿಡಿದಿಡುವ ಅಣೆಕಟ್ಟೆಯನ್ನು ಯೋಜಿಸಿದ ತಂತ್ರಜ್ಞರದು ನಿಜಕ್ಕೂ ಅಸಾಮಾನ್ಯಜ್ಞಾನವೇ ಸರಿ! ಅಲ್ಲಿ ನೀರು ತುಂಬಿದ ಕಾಲದಲ್ಲಿ, ಬಹುತೇಕ ನೇರ ನೂರಿನ್ನೂರಡಿ ಎತ್ತರದಲ್ಲಿರುವ ಇತ್ತಣ ರಾಷ್ಟ್ರೀಯ ಹೆದ್ದಾರಿ, ಮತ್ತಷ್ಟೇ ಎತ್ತರದ ಅತ್ತಣ ಕೊಳವೆ ಸಾಲು, ರೈಲ್ವೇ ಮಾರ್ಗಗಳೆಲ್ಲ ಉಸುಕಿನ ಮೇಲಿನ ರಚನೆಗಳಂತೆ ಜರಿದು, ಜಲಸಮಾಧಿ ಕಾಣುವುದು ನಿಶ್ಚಿತ. ನೇತ್ರಾವತಿಯ ಉದ್ದಕ್ಕೂ ಮಹಾನಾಶದ ಪ್ರವಾಹವಾಗುವುದನ್ನು (ಇಂದು ಇಡುಕ್ಕಿ, ಹಾರಂಗಿಗಳಲ್ಲಾದಂತೇ) ಯಾರೂ ತಪ್ಪಿಸಲಾರರು. ಇದೇ ಯೋಚನಾಲಹರಿಯನ್ನು ವರ್ತಮಾನಕ್ಕೇ ಅಳವಡಿಸಿ, ಹೆದ್ದಾರಿಗುಂಟ ಇನ್ನೂ ಸ್ವಲ್ಪ ವಿಸ್ತರಿಸುತ್ತೇನೆ.

ಬೆಂಗಳೂರು – ಮಂಗಳೂರನ್ನೂ ನೇರ ಸಂಪರ್ಕಿಸುವ ಶಿರಾಡಿ ಮಾರ್ಗ ನಿಸ್ಸಂದೇಹವಾಗಿ ಬಹಳ ದೊಡ್ಡದು ಮತ್ತು ಮುಖ್ಯವಾದದ್ದೇ ಹೌದು. ಅದನ್ನು ಸರಕಾರ ವರ್ಷಾವಧಿ ಕಟ್ಟಳೆಯೋ ಎನ್ನುವಂತೆ, ಈ ಸಲವೂ ಬಿಸಿಲ ದಿನಗಳಲ್ಲಿ ಬೇಗನೇ ಮುಚ್ಚಿ, ಮಳೆ ಶುರುವಾದ ಮೇಲೆ ಸಾಕಷ್ಟು ಸತಾಯಿಸಿಯೇ ಮುಕ್ತಗೊಳಿಸಿತ್ತು. ಆದರೀಗ ಕೆಲವೇ ದಿನಗಳಲ್ಲಿ ಮತ್ತೆ ಅದು ಪ್ರಾಕೃತಿಕ ಅವಘಡದ ಹೆಸರಿನಲ್ಲಿ ಅನಿರ್ದಿಷ್ಟ ಮುಚ್ಚಿಬಿಟ್ಟಿದ್ದಾರೆ. ಬಿಸಿಲೆ ಘಾಟಿ ನಾವೇ ನೋಡಿದ್ದೇವೆ, ಸಂಪಾಜೆಘಾಟಿಯ ಹಾನಿಗೆ ಎಷ್ಟೂ ಸಾಕ್ಷಿಗಳಿವೆ. ಅಲ್ಲೆಲ್ಲ ಸಮಸ್ಯೆ ನಿಜಕ್ಕೂ ಗಂಭೀರವೇ ಇದೆ. ಚಾರ್ಮಾಡಿ ತನ್ನ ಕಿಷ್ಕಿಂಧೆಯಲ್ಲಿ, ಹಲವು ದೊಡ್ಡ ತೇಪೆಗಳನ್ನು ಹೊತ್ತು, ಅಸಾಧ್ಯ ವಾಹನಸಂದಣಿಯಲ್ಲಿ ತೇಕುತ್ತಿರುವುದನ್ನು ಕಾಣುತ್ತೇವೆ. ಮತ್ತೆ ದೂರದೂರವಾಗುವುದರೊಡನೆ ಉಳಿದ ಕೆಲವೇ ಘಾಟಿಗಳೂ ಘನವಾಹನಗಳನ್ನು ತಾಳಲಾರೆವು ಎಂದು ದಿನಕ್ಕೊಂದು ಹುಯ್ಯಲು ಎಬ್ಬಿಸುತ್ತಲೂ ಇವೆ. ಆ ಮುನ್ನೆಲೆಯಲ್ಲಿ ಶಿರಾಡಿ ಹಾನಿ ನಗಣ್ಯ ಎಂದೇ ಕೇಳುತ್ತಿದ್ದೇವೆ. ಲಂಚ ಕೊಟ್ಟು ಹೊರೆಹೊತ್ತ ಲಾರಿಗಳೂ ಅವಘಡದ ಭಯವಿಲ್ಲದೇ ಶಿರಾಡಿಯಲ್ಲಿ ಓಡಾಡುತ್ತಿರುವ ನಿದರ್ಶನಗಳೂ ಒಮ್ಮೆ ನಮಗೆ ಈ ಭಾವವನ್ನು ಹುಟ್ಟಿಸದಿರದು. ಆದರೆ ಇದರಲ್ಲಿ ನಾನು ಕಂಡಂತೆ ಅರ್ಧ ಸತ್ಯವಿದೆ.

ಈ ಮೊದಲು ನಾನು ವಿವರಿಸಿದ ಎಲ್ಲ ಎತ್ತಿನಹೊಳೆ ಕಾಮಗಾರಿಯಲ್ಲೂ ನೀರಿನೊಡನೆ ಕರಗಿದ ಮಣ್ಣು ಶಿರಾಡಿ ಮಾರ್ಗದ ಒತ್ತಿನಲ್ಲೇ ಸಾಗುವ ಹೊಳೆಯಲ್ಲಿ (ಇದನ್ನು ಪ್ರಾದೇಶಿಕವಾಗಿ ಎತ್ತಿನ ಹಳ್ಳ, ಕೆಂಪೊಳೆ, ಗುಂಡ್ಯ ನದಿ… ಎಂದಿತ್ಯಾದಿ ಕುಮಾರಧಾರಾ ನದಿ ಸೇರುವವರೆಗೆ ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ) ತಂಗಿ, ಪಾತ್ರೆ ಎತ್ತರಿಸುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಹೂಳು ಅಷ್ಟಷ್ಟೇ ಮಳೆಗಾಲ್ದ ಪ್ರವಾಹವನ್ನು ಮೇಲಕ್ಕೇರಿಸಿ, ಮುಖ್ಯವಾಗಿ ಬಲ ಮಗ್ಗುಲ ಹೆದ್ದಾರಿಯ ಪಕ್ಕೆಯನ್ನೂ ಕೊರೆಯುತ್ತದೆ. ಅದಕ್ಕೆ ಸ್ಪಷ್ಟ ಪುರಾವೆ ಈಚಿನ ಅವಘಡದಲ್ಲೇ ನಾವು ಕೇಳುತ್ತಿದ್ದೇವೆ. ಹೆದ್ದಾರಿಯ ಆಯಕಟ್ಟಿನ ಜಾಗಗಳಲ್ಲಿ ಕಟ್ಟಿದ್ದ ‘ರಿಟೇನಿಂಗ್ ವಾಲ್’ಗಳೇ ಕುಸಿದು ಬಿದ್ದಿವೆ. ಕೆಲವೆಡೆಗಳಲ್ಲಿ ನೀರು ಹೆದ್ದಾರಿಯ ಮೇಲೇ ಹರಿದಿದೆ ಎಂದೂ ಕೇಳಿದ್ದೇನೆ. ಇದು ಸದ್ಯ ಮಾರ್ಗವನ್ನು ಕೊಚ್ಚೊ ಹಾಕದಿದ್ದರೂ ಅಂಚುಗಳಲ್ಲಿ ದುರ್ಬಲಗೊಳಿಸಿರುವುದು ನಿಜ. ಇಂಥಲ್ಲಿ ಘನವಾಹನಗಳನ್ನಷ್ಟೇ ನಿಷೇಧಿಸುವುದು ಸಾಧ್ಯವಾಗಬೇಕು. ಕೊರತೆಯನ್ನು ತುಂಬುವ ದೀರ್ಘ ಕಾಲೀನ ಕಾಮಗಾರಿಯ ವೇಳೆಯಲ್ಲೂ ಕಾಲಮಿತಿಯನ್ನಾದರೂ ಹೇರಿ ಲಘುವಾಹನ ಸಂಚಾರವನ್ನು ಮುಕ್ತವಾಗಿಸಬೇಕು.

ಇನ್ನೊಂದು ಮುಖದಲ್ಲಿ ನಮಗೆ ಕಾಣುವುದು ಕಂತ್ರಾಟು ದಂಧೆಯ ಅನೈತಿಕತೆ. ಸಾರ್ವಜನಿಕರನ್ನು ಭಯದಲ್ಲಿಟ್ಟು, ಶಿರಾಡಿಮಾರ್ಗವನ್ನು ಅನಿರ್ದಿಷ್ಟ ಕಾಲಕ್ಕೆ ಮುಚ್ಚುವುದು ಒಂದು ಲೆಕ್ಕದ ಬ್ಲ್ಯಾಕ್ ಮೇಲಿಂಗ್! ಇದು ಹೊಸದೇ ಅಧ್ವಾನಗಳಿಗೆ ಕಾರಣವಾಗಬಹುದಾದ ‘ಭೈರಾಪುರ – ಶಿಶಿಲ’ ಎಂಬ ಪೂರ್ಣ ಹೊಸತೇ ಘಾಟೀ ಮಾರ್ಗವನ್ನು ಕೈಗೆತ್ತಿಕೊಳ್ಳುವಲ್ಲಿ, ಜನಾಭಿಪ್ರಾಯವನ್ನು ಸುಂದರವಾಗಿ ರೂಪಿಸಿಬಿಡುವ ಅಪಾಯವಿದೆ. ಕೊಡಗು, ಬಿಸಿಲೆ, ಶಿರಾಡಿ ಎಂದು ಕುಸಿತಗಳ ಸರಣಿ ಸುದ್ದಿಯ ಎಡೆಯಲ್ಲೂ ಜನಪ್ರತಿನಿಧಿಗಳು ಈ ಹೊಸತೇ ಮಾರ್ಗದ ಸಾಧ್ಯತೆಯನ್ನು ಎತ್ತಿ ನುಡಿಯುತ್ತಿದ್ದಾರೆ. ಇನ್ನಷ್ಟು ಭೀಕರವಾದ ಜಪಾನೀ ಕಂತ್ರಾಟಿನ ಹದಿನೆಂಟು ಕಿಮೀ ದೀರ್ಘ ಸುರಂಗಮಾರ್ಗದ ಯೋಜನೆಯ ಜಪವನ್ನೂ ಮರೆತಿಲ್ಲ. ಪಶ್ಚಿಮ ಘಟ್ಟ ಈಗಾಗಲೇ ಪಡೆದಿರುವ ಮರಣಾಂತಿಕ ಗಾಯಗಳನ್ನು ಗುಣಪಡಿಸುವಲ್ಲೇ ಸೋಲುತ್ತಿರುವ ನಮ್ಮ ‘ರಾಜಕೀಯ ಇಚ್ಛಾಶಕ್ತಿ’ ಬದಲು ಇನ್ನಷ್ಟು ಹೊಸ ಪರಿಸರ, ಹೊಸದಾರಿ ಮಾಡುವುದಕ್ಕಿಳಿಯುವುದು ಖಂಡಿತವಾಗಿಯೂ ಪರಿಹಾರವಾಗದು.

ಮಂಜರಾಬಾದ್ ಕವಲಿನ ಬಳಿ ಇಳಿದಾರಿಯಲ್ಲಿ ಬಂದ ವಾಹನಗಳಿಗಷ್ಟೇ ತಡೆಗಟ್ಟೆ ಹಾಕಿ ಕುಳಿತಿದ್ದ ಪೋಲಿಸ್ ಪಡೆ ವಿರುದ್ಧ ದಿಕ್ಕಿನಿಂದ ಬಂದ ನಮ್ಮನ್ನು ನಿರ್ಯೋಚನೆಯಿಂದ ಹೋಗಗೊಟ್ಟರು. ಅರಮನೆ ಕವಲಿನ ಬಳಿ ನಾವೆಲ್ಲ ಒಂದು ಚಾ ಹಾಕಿದೆವು. ಮುಂದೆ ಹಾನುಬಾಳಿನಲ್ಲಿ ಎಕ್ಸ್‍ಪ್ರೆಸ್ ಬಸ್ಸುಗಳಿಗೆ ನಿಲುಗಡೆ ಇತ್ತು. ಹಾಗಾಗಿ ನಡುವೆ ರಕ್ಷಿದಿಯಲ್ಲಿ, ಗೆಳೆಯರಿಬ್ಬರನ್ನು ಕೃತಜ್ಞತಾಪೂರ್ವಕವಾಗಿ ಬೀಳ್ಕೊಂಡು ನಾವು ಹಾನುಬಾಳಿನಲ್ಲಿ ಜೀಪ್ ಸೇವೆ ಮುಗಿಸಿಕೊಂಡೆವು. ಅಲ್ಲಿನ ಪುಟ್ಟ ಹೋಟೆಲಿನಲ್ಲಿ ಅವಸರದ ಊಟ ಮುಗಿಸಿ, ಸಿಕ್ಕ ಬಸ್ಸೇರಿ ಮೂಡಿಗೆರೆ ಹ್ಯಾಂಡ್ ಪೋಸ್ಟಿನಲ್ಲಿಳಿದೆವು. ಅಲ್ಲೂ ಸ್ವಲ್ಪ ಕಾದು ಸಿಕ್ಕ ಮೈಸೂರು – ಮಂಗಳೂರು ಬಸ್ಸಿನಲ್ಲಿ ಸುಖಾಸೀನರಾದೆವು.

ಬೆನ್ನುಬೆನ್ನಿಗೆಂಬಂತೆ ಲಾರಿ, ಬಸ್ಸು, ಕಾರು, ದ್ವಿಚಕ್ರಿಗಳ ಅವಿರತ ಪ್ರವಾಹ ಚಾರ್ಮಾಡಿ ಮಾರ್ಗವನ್ನು ಎರಡೂ ದಿಕ್ಕುಗಳಿಂದ ನಡುಗಿಸುತ್ತಲೇ ಇದೆ. ಮೋಡ ಆಕಳಿಸುತ್ತಿದ್ದ ಕಣಿವೆ, ಕಣ್ಣಾಮುಚ್ಚಾಲೆ ಆಡುತ್ತಿದ್ದ ಏರುಕಲ್ಲಾದಿ ಶಿಖರಗಳು, ಕಲಕಲಿಸುವ ಜಲಧಾರೆ, ಕಣ್ತಣಿಸುವ ಹಸಿರು ಎಲ್ಲ ಮರೆತು ಬಹುಮಂದಿ ಮನದಲ್ಲೇ ಸಲ್ಲಿಸುತ್ತಿದ್ದ ಪ್ರಾರ್ಥನೆಯೊಂದೇ ಇಂದು ಆ ದಾರಿಯನ್ನು ಕಾಪಾಡಿರಬೇಕು! ಹಲವು ದರೆ ಕುಸಿತಗಳ ಮಣ್ಣನ್ನು ಅವಸರದಲ್ಲಿ ಇತ್ತ ಒತ್ತಿ, ಅತ್ತ ಕೊಳ್ಳಕ್ಕೆ ತಳ್ಳಿ, ದಾರಿ ಬಿಡಿಸಿದ್ದು ಕಾಣುತ್ತಿತ್ತು. ಹಲವೆಡೆಗಳಲ್ಲಿ ದುರ್ಬಲ ದಾರಿ ಅಂಚುಗಳಲ್ಲಿ ಕಲ್ಲು, ಕೋಲು ನಿಲ್ಲಿಸಿ, ಹಗ್ಗ ಕಟ್ಟಿ ಎಚ್ಚರಿಕೆ ಭಿತ್ತಿಪತ್ರಗಳನ್ನೂ ಹಚ್ಚಿದ್ದರು. ಸಂಚಾರೀಗೊಜ್ಜಿನಲ್ಲಿ (ಟ್ರಾಫಿಕ್ ಜ್ಯಾಂ!) ಸಿಕ್ಕ ನಮ್ಮ ಬಸ್ಸು, ಒಂಡೆರಡು ಕಡೆ ನಿಂತಾಗ ಪಕ್ಕದಲ್ಲೇ ಮರಳಚೀಲಗಳ ಪೇರಿಕೆಯಲ್ಲಿ ನಿಂತ ದರೆಯ ನೆರಳೇ ಬೀಳುತ್ತಿದ್ದಾಗ ಕೆಲವರಿಗಾದರೂ ಎದೆಬಡಿತ ನಗಾರಿ ಸದ್ದಾಗಿದ್ದರೆ ಆಶ್ಚರ್ಯವಿಲ್ಲ. ಲಾರಿಗಳಿಗೆ ಪ್ರವೇಶವಿಲ್ಲ, ಇಕ್ಕಟ್ಟಿನ ದಾರಿಯಲ್ಲಿ ವಾಹನ ನಿಲುಗಡೆ ತಪ್ಪು, ಆತುರದಲ್ಲಿ ಮುಂದೊತ್ತಬಾರದು ಎಂಬಿತ್ಯಾದಿ ಎಚ್ಚರಿಕೆಗಳನ್ನು ಮುರಿಯುವುದರಲ್ಲೇ ಕೆಲವರು ಸುಖಿಸಿದಂತಿತ್ತು. ನಮ್ಮ ಬಸ್ ಒಂದೆಡೆ ಮುಂದೋಡುವ ಅವಸರದಲ್ಲಿ ಎದುರಿನ ಲಾರಿಯ ಹಿಂಬದಿಗೆ ಟಕರಾಯಿಸಿಯೇಬಿಟ್ಟಿತ್ತು. ಅದೃಷ್ಟಕ್ಕೆ ಲಾರಿಯಂಚಿನಲ್ಲೇ ಬೆನ್ನುಹಾಕಿ ಕುಳಿತಿದ್ದೊಬ್ಬ ವ್ಯಕ್ತಿಗಾಗಲೀ, ನಮ್ಮ ಬಸ್ಸಿನ ಎದುರು ಮೂಲೆಯಲ್ಲಿದ್ದ ಪ್ರಯಾಣಿಕನಿಗಾಗಲೀ ಯಾವುದೇ ನೋವುಂಟಾಗಲಿಲ್ಲ. ಒಂದು ಮಿನಿಟು ಚಾಲಕರಿಬ್ಬರಿಗೂ ವಾದದ ಬಿಸಿ ಏನೋ ತಲೆಗೇರಿತ್ತು. ನಿಜದಲ್ಲಿ ಲಾರಿಗೇನೂ ನಷ್ಟವಾಗಿರಲಿಲ್ಲ. ಬಸ್ಸಿನ ಎಡ ಮೂಲೆ ತುಸು ಜಜ್ಜಿದಂತಾಗಿ, ಹಿನ್ನೋಟದ ಕನ್ನಡಿ ಮುರಿದು ಹೋಗಿತ್ತು. ತಪ್ಪು ತನ್ನದೇ ಎಂಬ ಸುಪ್ತ ಅರಿವು ನಮ್ಮ ಚಾಲಕನಿಗೆ ಇದ್ದುದಕ್ಕೆ, ಮತ್ತೆ ಎರಡೂ ದಿಕ್ಕಿನಲ್ಲಿ ಸಾಲುಗಟ್ಟತೊಡಗಿದ್ದ ಇತರ ವಾಹನಗಳ ಒತ್ತಾಯಕ್ಕೆ ವಾಗ್ವಾದ ಕೈ ಮಿಲಾಯಿಸಲಿಲ್ಲ. ಎಲ್ಲ ಮರೆತು ಪ್ರಯಾಣ ಮುಂದುವರಿಯಿತು, ಬಹಳ ನಿಧಾನವೇ ಆದರೂ ನಮ್ಮನ್ನು ಸುಕ್ಷೇಮ ಮನೆ ಸೇರಿಸಿತು.

(ಮುಗಿಯಿತು)

ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಕೆಲವು ಹಿಂದಿನ ಬರಹಗಳಿಗೆ ನೇರ ಸೇತು ಇಲ್ಲಿದೆ. ಆಸಕ್ತರು ಚಿಟಿಕೆ ಹೊಡೆದು ಓದಿಕೊಳ್ಳಬಹುದು.
ಬಿಸಿಲೆ ಕಾಡಿನ ಕೊನೆಯ ದಿನಗಳು
ಎತ್ತಿನಹೊಳೆ ಯೋಜನೆ ಇದುವರೆಗೆ
ಎತ್ತಿನಹೊಳೆಯಲ್ಲಿ ಸುಳ್ಳಿನ ಪ್ರವಾಹ
ವಿಶ್ವ (ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ
ಎತ್ತಿನಹೊಳೆ ಮತ್ತು ಸಂಶೋಧನೆ
ನೇತ್ರಾವತಿ ನದಿ ತಿರುವು – ರಾಷ್ಟ್ರೀಯ ಕಮ್ಮಟ
ಎತ್ತಿನಹೊಳೆ ಮತ್ತು ಸುಂದರರಾಯರು